Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Friday, 17 June 2022

ಇಪ್ಪತ್ತನೆ ಶತಮಾನದ ಮೊದಲ ಸ್ತ್ರೀವಾದಿ ಲೇಖಕಿ- ಕೇಟ್ ಚಾಪಿನ್


ಇಪ್ಪತ್ತನೆ ಶತಮಾನದ ಮೊದಲ ಸ್ತ್ರೀವಾದಿ  ಲೇಖಕಿ- ಕೇಟ್  ಚಾಪಿನ್


ಅಮೇರಿಕಾನ್ ಆಂಗ್ಲ ಸಾಹಿತ್ಯದ ಅತ್ಯುತ್ತಮ ಸಣ್ಣ ಕಥೆಗಳ ಬರೆಹಗಾರ್ತಿ ಹಾಗೂ ಕಾದಂಬರಿಕಾರ್ತಿ ಎಂದು ಹೆಸರು ಮಾಡಿದ ಕೇಟ್ ಚಾಪಿನ್ ಇಪ್ಪತ್ತನೇ ಶತಮಾನದ ಕಾಥೋಲಿಕ್‌ನ ಸ್ರ್ತೀವಾದಿ ಲೇಖಕಿಯರಲ್ಲಿ ಅಗ್ರಮಾನ್ಯೆ ಎಂದು ವಿಮರ್ಶಕರಿಂದ ಗುರುತಿಸಿಕೊಂಡವಳು. 20ನೇ ಶತಮಾನದ  ಅಮೇರಿಕಾದ ಇಂಗ್ಲೀಷ್ ಸಾಹಿತ್ಯದಲ್ಲಿ ಇವಳ ಹೆಸರು ಮುಂಚೂಣಿಯಲ್ಲಿದೆ.
   ಅಮೇರಿಕಾದ ಮಿಸೋರಿಯ ಸೇಂಟ್ ಲೂಯಿಸ್‌ನಲ್ಲಿ 1851 ಫೆಬ್ರುವರಿ 8ರಂದು ಜನಿಸಿದ ಕೇಟ್ ಚಾಪಿನ್ ರವರ ಕೇಟ್ ತಂದೆ ಐರ್ಲೆಂಡ್‌ನ ಗಾಲ್ವೇಯಿಂದ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದ ಯಶಸ್ವಿ ಉದ್ಯಮಿಯಾಗಿದ್ದ ಥಾಮಸ್ ಓ'ಫ್ಲಾಹೆರ್ಟಿ ತಾಯಿ ಫ್ರೆಂಚ್ ಕೆನಡಾ ಮೂಲದ ಲೂಸಿಯಾನಾ ಕ್ರಿಯೋಲ್ ಅಥೆನೈಸ್ ಚಾರ್ಲೆವಿಲ್ಲೆ ಅವರ ಮಗಳಾದ ಎಲಿಜಾ ಫಾರಿಸ್. ಇವರು ಥಾಮಸ್ ರವರ ಎರಡನೇ ಪತ್ನಿ.  ಕೇಟ್ ತನ್ನ ತಂದೆ ಹಾಗೂ ತಾಯಿ ಐವರು ಮಕ್ಕಳಲ್ಲಿ ಮೂರನೆಯವಳಾಗಿದ್ದರೂ ಅವಳ ಸಹೋದರ ಸಹೋದರಿಯರು ಬಹಳ ಬೇಗನೆ ತೀರಿಕೊಂಡಿದ್ದರು. ಅಪ್ಪಟ ರೋಮನ್ ಕ್ಯಾಥೋಲಿಕ್ ಸಂಪ್ರದಾಯದಲ್ಲಿ ಬೆಳೆದ ಕೇಟ್ ಗೆ ಕಾಲ್ಪನಿಕ ಕಥೆಗಳೆಂದರೆ ಎಲ್ಲಿಲ್ಲದ ಆಸಕ್ತಿ. ಅದರಲ್ಲೂ ಧಾರ್ಮಿಕ ಕಥೆಗಳೆಂದರೆ ಹೆಚ್ಚು ಖುಷಿ.ಜೀಸಸ್ ನ  ಪವಾಡಗಳನ್ನು ಅತಿಯಾಗಿ ನಂಬುತ್ತಿದ್ದ ಕೇಟ್ ಆ ಕಾರಣಗಳಿಂದಲೇ ಈ ತರಹದ ರೋಚಕ ಕಥೆಗಳನ್ನು ಇಷ್ಟಪಡುತ್ತಿರಬಹುದು. ಇದರ ಜೊತೆಗೆ ಯಕ್ಷಿಣಿ ಕಾದಂಬರಿಗಳ ಆರಾಧಕಿಯಾಗಿದ್ದಳು.  ಐದನೇ ವಯಸ್ಸಿಗೇ ಆಕೆಯನ್ನು ಸೇಂಟ್ ಲೂಯಿಸ್ ನಲ್ಲಿರುವ ಸೇಕ್ರೆಡ್ ಹಾರ್ಟ್ ಅಕಾಡೆಮಿಗೆ ಕಳಿಸಲಾಯಿತು. ಸನ್ಯಾಸಿನಿಯಾಗುವ ಮೊದಲ ಹಂತದ ಶಿಕ್ಷಣವನ್ನು ಅಲ್ಲಿ ಪಡೆಯುತ್ತಿರುವಾಗಲೇ  ಅವಳ ತಂದೆ ಥಾಮಸ್ ಆಕಸ್ಮಿಕವಾಗಿ ನಿಧನ ಹೊಂದಿದರು. ಈ ಕಾರಣದಿಂದ ಅವಳನ್ನು ಮನೆಗೆ ವಾಪಸ್ ಕರೆಸಲಾಯಿತು . ಅಲ್ಲಿ ಆಕೆ ತನ್ನ ತಾಯಿ ಅಜ್ಜಿ ಹಾಗೂ ಮುತ್ತಜ್ಜಿ ಹೀಗೆ ಮೂರು ತಲೆಮಾರುಗಳ ಮರುಮದುವೆಯಾಗಲೊಪ್ಪದೆ ಆಧ್ಯಾತ್ಮಿಕ‌ ಜೀವನ ನಡೆಸುತ್ತಿರುವ ವಿಧವೆಯರೊಡನೆ ವಾಸಿಸತೊಡಗಿದಳು.  ಇದು ಕೇಟ್ ಇನ್ನಷ್ಟು ಈ ಪ್ರಪಂಚದ ಕುರಿತು ಯೋಚಿಸಲು  ಪ್ರೇರೇಪಿಸಿತು. ಇದೇ ಸಮಯದಲ್ಲಿ ಅವಳ ಮುತ್ತಜ್ಜಿ ವಿಕ್ಟೋರಿಯಾ ಚಾರ್ಲೆವಿಲ್ಲೆ ಸಮಾಜವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿದರು. ಗಾಸಿಪ್ ಗಳನ್ನು ಹೇಗೆ ಎದುರಿಸಬೇಕು ಹಾಗೂ ಈ ಸಮಾಜದ ಕಟ್ಟುಪಾಡುಗಳನ್ನು ಪಾಲಿಸುವುದನ್ನು ಹೇಳಿಕೊಟ್ಟಳು. ಇದರ ಜೊತೆಗೇ ಫ್ರೆಂಚ್ ಭಾಷೆ, ಸಂಗೀತ, ಇತಿಹಾಸ ಹೀಗೆ ಹಲವಾರು ವಿಷಯಗಳನ್ನು ಕಲಿತಳು. 
  ಎರಡು ವರ್ಷಗಳ ನಂತರ ಅಕಾಡೆಮಿಗೆ ಹಿಂದುರಿಗಿದ ಕೇಟ್ ಗೆ ಪದ್ಯ ಮತ್ತು ಗದ್ಯ ಎರಡರಲ್ಲೂ ಪ್ರಬುದ್ಧವಾಗಿ ಬರೆಯುತ್ತಿದ್ದ  ಪ್ರತಿಭಾನ್ವಿತ ಬರಹಗಾರ, ಓ'ಮಿಯಾರಾ ಗುರುವಾಗಿ ದೊರೆತರು. ತನ್ನ ವಿದ್ಯಾರ್ಥಿಗೆ ನಿಯಮಿತವಾಗಿ ಬರೆಯಲು, ತನ್ನ ಬರಹಗಳನ್ನು  ವಿಮರ್ಶಿಸಲು ಮತ್ತು ತನ್ನನ್ನು ತಾನು ಧೈರ್ಯದಿಂದ ನಡೆಸಿಕೊಳ್ಳಲು ಮಾರ್ಗದರ್ಶನ ನೀಡಿದರು.

ಜೂನ್ 8, 1870 ರಂದು ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ಆಸ್ಕರ್ ಚಾಪಿನ್ ಅವರನ್ನು ವಿವಾಹವಾದರು. ಆಸ್ಕರ್ ತನ್ನ ಸ್ವಂತ ವ್ಯವಹಾರ, ಉದ್ದಿಮೆ ನಡೆಸುತ್ತಿದ್ದರು. ಇವರಿಬ್ಬರ ದಾಂಪತ್ಯಕ್ಕೆ ಆರು ಮಕ್ಕಳು. ಆಸ್ಕರ್ ವ್ಯವಹಾರದಲ್ಲಿ ದಿವಾಳಿಯೆದ್ದು ಊರು ಬಿಡುವ ಸ್ಥಿತಿ ನಿರ್ಮಾಣವಾಗಿ ದಕ್ಷಿಣ ನಾಚಿಟೋಚೆಸ್ ಪ್ಯಾರಿಷ್‌ನಲ್ಲಿರುವ ಕ್ಲೌಟಿಯರ್‌ವಿಲ್ಲೆಗೆ ತಮ್ಮ ವಾಸವನ್ನು ಬದಲಾಯಿಸಬೇಕಾಯಿತು. ಆದರೆ ಕೌಂಟರ್ ವಿಲ್ಲೆಯ ವಾತಾವರಣ ಕೇಟ್ ನ ಬರವಣಿಗೆಗೆ ಹತ್ತು ಹಲವು ವಿಷಯಗಳನ್ನು ಒದಗಿಸಿತು. ಆದರೆ 1881ರಲ್ಲಿ ಆಸ್ಕರ್ ಮರಣ ಹೊಂದಿದಾಗ ಅವಳ ತಲೆಯ ಮೇಲೆ ಅಪಾರವಾದ ಸಾಲವಿತ್ತು.  ನಂತರ ಕೇಟ್ ತನ್ನೂರಿನ ಹಲವಾರು ಯುವಕರೊಂದಿಗೆ ಅದರಲ್ಲೂ ಒಬ್ಬ ವಿವಾಹಿತ ರೈತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಕುರಿತು ರೋಚಕ ಕಥೆಗಳಿವೆ. 

ಕೇಟ್ ನ ತಾಯಿ ತನ್ನ ಮಗಳಿಗೆ ಸೇಂಟ್ ಲೂಯಿಸ್ ಗೆ ಹಿಂದಿರುಗಲು ಹೇಳಿದಳು . ಆದರೆ ಇವಳ ದೊಡ್ಡ ಕುಟುಂಬದ ನಿರ್ವಹಣೆ ನೋಡಿಕೊಳ್ಳುತ್ತಿದ್ದ ತಾಯಿ ಎರಡೇ ವರ್ಷಗಳಲ್ಲಿ ನಿಧನರಾದರು. ಪತಿಯ ಮರಣ, ವ್ಯಾಪಾರದ ನಷ್ಟ, ಮಕ್ಕಳ ಸ್ವೇಚ್ಛಾಚಾರ ಹಾಗೂ ತಾಯಿಯ ಮರಣಗಳ ಆಘಾತದಿಂದ ಕೇಟ್ ಖಿನ್ನತೆಗೆ ಜಾರಿದಳು. 

          ಕೇಟ್ ನ ಕುಟುಂಬದ ಸ್ನೇಹಿತ, ಹಾಗೂ ವೃತ್ತಿಯಲ್ಲಿ ವೈದ್ಯನಾಗಿದ್ದ ಡಾ. ಫ್ರೆಡೆರಿಕ್ ಕೊಲ್ಬೆನ್ಹೇಯರ್ ಕೇಟ್ ಗೆ ಬರವಣಿಗೆಯನ್ನು ಪುನರಾರಂಭಿಸಲು ಸಲಹೆ ನೀಡಿದರು, ಇದು ಅವಳ ಖಿನ್ನತೆಗೆ ಚಿಕಿತ್ಸೆಯಾಗಬಹುದು ಎಂದು ನಂಬಿದ್ದರು. ಬರವಣಿಗೆಯು ಅವಳ ಅಸಾಧಾರಣ ಶಕ್ತಿಯ ಕೇಂದ್ರಬಿಂದು ಮತ್ತು ಆದಾಯದ ಮೂಲವಾಗಬಹುದು ಎಂದು ಅವರು ಆಶಿಸಿದ್ದರು.


1890 ರ ದಶಕದ ಆರಂಭದ ವೇಳೆಗೆ, ಕೇಟ್ ಅವರ ಸಣ್ಣ ಕಥೆಗಳು, ಲೇಖನಗಳು ಮತ್ತು ಅನುವಾದಗಳು ಸೇಂಟ್ ಲೂಯಿಸ್ ಪೋಸ್ಟ್-ಡಿಸ್ಪ್ಯಾಚ್ ಪತ್ರಿಕೆ ಸೇರಿದಂತೆ ನಿಯತಕಾಲಿಕಗಳಲ್ಲಿ ಮತ್ತು ವಿವಿಧ ಸಾಹಿತ್ಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು. ಜಾನಪದ ಕಥೆಗಳನ್ನು ಒಳಗೊಂಡ ಬರವಣಿಗೆಯ ಶೈಲಿ ಎಲ್ಲರನ್ನೂ ಆಕರ್ಷಿಸಿತು. ಆಡುಭಾಷೆಯಲ್ಲಿರುವ ಅವರ ಕೃತಿಗಳು ಮತ್ತು ದಕ್ಷಿಣ ಭಾಗದ ಜನರ ಜಾನಪದ ಶೈಲಿಯ ಜೀವನದ ನಿರೂಪಣೆಗಳು ಮತ್ತು ಇತರ ಅಂಶಗಳು ಅವರ ಬರವಣಿಗೆಯ ತಾಕತ್ತು. ಆದರೆ ಅವರು ಸ್ಥಳೀಯ ವಿಷಯವನ್ನು ತಮ್ಮ ಬರವಣಿಗೆಯಲ್ಲಿ ಗಣನೀಯವಾಗಿ ಬಳಸಿದ್ದರಿಂದ ಕೆಲವು ವಿಮರ್ಶಕರು ಪ್ರಾದೇಶಿಕ ಬರಹಗಾರರೆಂದು ಟೀಕಿಸಿದ್ದೂ ಇದೆ.  

1899 ರಲ್ಲಿ, ಅವರ ಬಹು ಚರ್ಚಿತ  ಎರಡನೇ ಕಾದಂಬರಿ, ದಿ ಅವೇಕನಿಂಗ್  ಪ್ರಕಟಗೊಂಡಿತು. ವಿಮರ್ಶಕರು ಕಾದಂಬರಿಯನ್ನು ಅಷ್ಟಾಗಿ ಇಷ್ಟಪಡಲಿಲ್ಲ. ಮೊದಮೊದಲ ವಿಮರ್ಶೆ ಹೆಚ್ಚಾಗಿ ನಕಾರಾತ್ಮಕವಾಗಿತ್ತು. ಈ ಕಾದಂಬರಿಯ ಪಾತ್ರಗಳ ನಡವಳಿಕೆ ಅದರಲ್ಲೂ  ವಿಶೇಷವಾಗಿ ಮಹಿಳೆಯರ ವರ್ತನೆ ಅಂದಿನ ಸಾಂಪ್ರದಾಯಿಕ ಸಮಾಜದ ವಿರೋಧವನ್ನು ಎದುರಿಸಬೇಕಾಯಿತು.  ಹೆಣ್ಣು ಮತ್ತು ಲೈಂಗಿಕತೆ, ಮಾತೃತ್ವ ಮತ್ತು ದಾಂಪತ್ಯ ದ್ರೋಹದ ಪಾತ್ರಗಳು ಕೇಟ್ ನ ವ್ಯಕ್ತಿತ್ವದ ದ್ಯೋತಕ ಎಂದು ವಿಮರ್ಶಕರು ವ್ಯಂಗ್ಯವಾಡಿದರು.  

ಆದರೆ ನಂತರ ಈ ಕಾದಂಬರಿ, ಅವರ ಜೀವಮಾನದ ಅತ್ಯುತ್ತಮ ಕೃತಿ ಎಂದು ಕರೆಯಿಸಿಕೊಂಡಿದ್ದೂ ಒಂದು ವಿಸ್ಮಯ.  ದಬ್ಬಾಳಿಕೆಯ ಸಮಾಜದಲ್ಲಿ ಸಿಕ್ಕಿಬಿದ್ದ ಮಹಿಳೆಯ ಕಥೆಯಾಗಿದೆ. ಹಲವಾರು ದಶಕಗಳ ಕಾಲ ಈ ಕಾದಂಬರಿಯ ಮರು ಮುದ್ರಣಕ್ಕೆ ವಿರೋಧವಿದ್ದಾಗಲೂ1970 ರ ದಶಕದಲ್ಲಿ ಪ್ರಾರಂಭವಾದ ಸಾಮಾಜಿಕ ಹೊಸ ಅಧ್ಯಯನಗಳು ಮತ್ತು ಮಹಿಳಾ ಬರಹಗಳ ಕುರಿತು  ಮೆಚ್ಚುಗೆಯ ಅಲೆ ಇರುವಾಗ ಈ ಕಾದಂವರಿಯನ್ನು ಮರು ಓದಿಗೆ ಒಳಪಡಿಸಿದಾಗ ಇದರ ಮಹತ್ವದ ಅರಿವಾಯಿತು. ಸ್ತ್ರೀ ಸ್ವಾತಂತ್ರ್ಯ ಹಾಗೂ ಮಹಿಳೆಯರ ಮನೋ ಇಚ್ಛೆಗೆ ಬೆಲೆ ನೀಡಬೇಕಾದ ಹಿನ್ನಲೆಯನ್ನಿಟ್ಟುಕೊಂಡು ಓದಿದಾಗ ಈ ಕಾದಂಬರಿಯ ಮಹತ್ತಿನ ಅರಿವಾಯಿತು. ನಂತರದ ದಿನಗಳಲ್ಲಿ ಈ ಕಾದಂಬರಿಯು ಹಲವಾರು ಸಲ  ಮರುಮುದ್ರಣಗೊಂಡು ಎಲ್ಲ ಕಡೆಗಳಲ್ಲೂ ಲಭ್ಯವಿರುವ ಕಾದಂಬರಿ ಎನ್ನುವ ಹೆಗ್ಗಳ೮ಕೆ ಪಡೆಯಿತು.  ಅಮೇರಿಕಾದ ಆರಂಭಿಕ ಸ್ತ್ರೀವಾದಿ ಕೃತಿಯಾಗಿ ಹಾಗೂ ಅದರ ಬರವಣಿಗೆಯ ಶೈಲಿ ಮತ್ತು ಗುಣಮಟ್ಟದ ಪ್ರಾಮುಖ್ಯತೆಗಾಗಿ ಇದು ಇಂದಿಗೂ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ.
ದಿ ಅವೇಕನಿಂಗ್‌  ಹುಟ್ಟುಹಾಕಿದ ಹಗರಣಗಳಿಂದ ಮತ್ತು ಹಾಗೂ ಅದು ಜನರ ಮನ್ನಣೆ ಗಳಿಸಿಲ್ಲವೆಂದು  ಕೇಟ್ ತೀವ್ರವಾಗಿ ನಿರುತ್ಸಾಹಗೊಂಡರು, ಆದರೂ ತನ್ನ ಬರವಣಿಗೆಯನ್ನು ಮುಂದುವರೆಸಿ ತನ್ನ ಆಸಕ್ತಿಯನ್ನು ಸಣ್ಣ ಕಥೆಯ ಕಡೆಗೆ ತಿರುಗಿಸಿದರು. 

1900 ರಲ್ಲಿ, "ದಿ ಜಂಟಲ್‌ಮ್ಯಾನ್ ಫ್ರಮ್ ನ್ಯೂ ಓರ್ಲಿಯನ್ಸ್" ಪ್ರಕಟಗೊಂಡಿತು. . ಅದೇ ವರ್ಷ  ಮಾರ್ಕ್ವಿಸ್ ಹೂಸ್ ಹೂ ನ ಮೊದಲ ಆವೃತ್ತಿಯಲ್ಲಿ  ಕೇಟ್ ಹೆಸರು ಸೇರ್ಪಡೆಗೊಂಡಿತು.   ಇಷ್ಟಾದರೂ ಅವಳು ತನ್ನ ಬರವಣಿಗೆಯಿಂದ ಎಂದಿಗೂ ಹೆಚ್ಚು ಹಣವನ್ನು ಗಳಿಸಲಿಲ್ಲ. 

ಆಗಸ್ಟ್ 20, 1904 ರಂದು ಸೇಂಟ್ ಲೂಯಿಸ್ ವರ್ಲ್ಡ್ ಫೇರ್ ಗೆ ಭೇಟಿ ನೀಡಿದಾಗ, ಕೇಟ್ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದರು. ಅವರು ಎರಡು ದಿನಗಳ ನಂತರ  ಅಂದರೆ ಅಗಷ್ಟ್ 22 ರಂದು ತಮ್ನ 54 ನೇ ವಯಸ್ಸಿನಲ್ಲಿ ನಿಧನರಾದರು. ಸೇಂಟ್ ಲೂಯಿಸ್‌ನಲ್ಲಿರುವ ಕ್ಯಾಲ್ವರಿ ಸ್ಮಶಾನದಲ್ಲಿ ಅವರ ಸಮಾಧಿಯನ್ನು ಕಾಣಬಹುದು. 

ಕೇಟ್ ರವರ ಪ್ರಮುಖ ಕೃತಿಗಳು ಬೇಯು ಫೋಕ್ (1894) ಮತ್ತು ಎ ನೈಟ್ ಇನ್ ಅಕಾಡಿ (1897) ಎಂಬ ಎರಡು ಸಣ್ಣ ಕಥಾ ಸಂಕಲನಗಳು ಮತ್ತು   ಅಟ್ ಫಾಲ್ಟ್ (1890) ಮತ್ತು ದಿ ಅವೇಕನಿಂಗ್ (1899) ಎಂಬ ಎರಡು ಕಾದಂಬರಿಗಳು ಪ್ರಮುಖವಾದವು. ಆಕೆಯ ಪ್ರಮುಖ ಸಣ್ಣ ಕಥೆಗಳಲ್ಲಿ "ದೇಸಿರೀಸ್ ಬೇಬಿ" (1893), "ದಿ ಸ್ಟೋರಿ ಆಫ್ ಆನ್ ಅವರ್" (1894) ಮತ್ತು "ದಿ ಸ್ಟಾರ್ಮ್" (1898) ಪ್ರಮುಖವಾದವು. 

1899 ರಲ್ಲಿ ಪ್ರಕಟವಾದ ಆಕೆಯ ಕಾದಂಬರಿ ದಿ ಅವೇಕನಿಂಗ್ ತನ್ನ ಕಾಲಕ್ಕಿಂತಲೂ ಮುಂದಿನ ವಸ್ತುವನ್ನು ಒಳಗೊಂಡಿದೆ.  ಸಮಕಾಲೀನ  ಸಾಹಿತ್ಯ ಪ್ರಪಂಚ ಕೇಟ್ ಬರೆದ ಈ ವಸ್ತು ವಿಷಯವನ್ನು ಒಪ್ಪಿಕೊಳ್ಳುವ ಹಂತವನ್ನಿನ್ನೂ ತಲುಪಿರಲಿಲ್ಲ. ಹೀಗಾಗಿ ಈ ಕಾದಂಬರಿ ನಕಾರಾತ್ಮಕ ವಿಮರ್ಶೆಗಳನ್ನು ಎದುರಿಸಬೇಕಾಯಿತು. ದಿ ಅವೇಕನಿಂಗ್‌ನಲ್ಲಿರುವ  ಸ್ತ್ರೀ ಪಾತ್ರಗಳು ಆ ಕಾಲದ ಸಾಮಾಜಿಕ  ಮಾನದಂಡಗಳನ್ನೆಲ್ಲ ಮೀರಿ ವರ್ತಿಸುತ್ತವೆ. ನಾಯಕ ತನ್ನ ಲೈಂಗಿಕ ಬಯಕೆಗಳನ್ನೂ ಮೀರಿ  ತಾಯ್ತನದ ಪಾವಿತ್ರ್ಯವನ್ನು ಪ್ರಶ್ನಿಸುತ್ತ ಹೆಣ್ಣಿನ ಮನದಾಳದ ಭಾವನೆಗಳಿಗೆ ಹೊಸ ಆಯಾಮ ಕೊಡುತ್ತಾನೆ.  

  ವಿವಾಹದಾಚಿಗಿನ ಸಂಬಂಧವನ್ನು ಈ ಕಾದಂಬರಿಯು ಹೆಣ್ಣಿನ ದೃಷ್ಟಿಕೋನದಿಂದ ಹೇಳುತ್ತ ಹೋಗುತ್ತದೆ.  ಮಹಿಳೆಯರ  ಆಯ್ಕೆಯ ಸ್ವಾತಂತ್ರ್ಯವನ್ನೂ ಇದು ಪ್ರತಿಪಾದಿಸುತ್ತದೆ.  
ಮಾರ್ಥಾ ಕಟ್ಟರ್ ಅವರ ಲೇಖನ, "ದಿ ಸರ್ಚ್ ಫಾರ್ ಎ ಫೆಮಿನೈನ್ ವಾಯ್ಸ್ ಇನ್ ದಿ ವರ್ಕ್ಸ್ ಆಫ್ ಕೇಟ್ ಚಾಪಿನ್",  ಕೇಟ್ ರವರ ಅನೇಕ ಕಥೆಗಳಲ್ಲಿನ ಸ್ತ್ರೀ ಪಾತ್ರಗಳನ್ನು ವಿಶ್ಲೇಷಿಸುತ್ತದೆ. ಮಹಿಳೆಯರ " ಗುಪ್ತವಾದ ಮತ್ತು ಇಲ್ಲಿಯವರೆಗೆ  ಕೇಳಿರದ ಲೈಂಗಿಕತೆ" ಎಂದು  ದಿ ಅವೇಕನಿಂಗ್‌ ನ ಎಡ್ನಾ ಪಾತ್ರವನ್ನು ಉಲ್ಲೇಖಿಸಿ ಹೇಳಲಾಗಿದೆ. ಕೇಟ್ ಅವರ ಬರವಣಿಗೆಯು ಅದರ ಲೈಂಗಿಕ ಗುರುತುಗಳು ಮತ್ತು ಸ್ತ್ರೀಯರ ಬಯಕೆಗಳ ಅಭಿವ್ಯಕ್ತಿ ಈ ಕಾದಂಬರಿಯಲ್ಲಿ ಆಘಾತ ಹುಟ್ಟಿಸುವಂತೆ ಚಿತ್ರಿಸಲಾಗಿದೆ 

ಆದರೆ ಇಂದಿಗೂ, ದಿ ಅವೇಕನಿಂಗ್  ಅಮೆರಿಕಾದಾದ್ಯಂತ ಇರುವ  ಸಾಹಿತ್ಯ ಕೋರ್ಸ್‌ಗಳಲ್ಲಿನ ಐದು ಪ್ರಮುಖ ಕಾದಂಬರಿಗಳಲ್ಲಿ ಒಂದಾಗಿದೆ ಎಂಬುದನ್ನು ಮರೆಯುವಂತಿಲ್ಲ

Friday, 10 June 2022

ಕವಿತೆಯ ಮೂಲಕ ಬಾಲಕಾರ್ಮಿಕ ನಿಷೇಧದ ಕಾನೂನಿಗೆ ಸಹಕರಿಸಿದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್




 ಕವಿತೆಯ ಮೂಲಕ ಬಾಲಕಾರ್ಮಿಕ ನಿಷೇಧದ ಕಾನೂನಿಗೆ ಸಹಕರಿಸಿದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್

 

        ವಿಕ್ಟೋರಿಯನ್ ಯುಗದ ಪ್ರಸಿದ್ಧ ಕವಿಯತ್ರಿಯಾದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ತನ್ನ ಹನ್ನೊಂದನೆ ವಯಸ್ಸಿನಲ್ಲಿಯೇ ಕವನ ಬರೆಯಲು ಪ್ರಾರಂಭಿಸಿ ಬ್ರಿಟನ್ ಹಾಗೂ ಅಮೇರಿಕಾಗಳಲ್ಲಿ ಪ್ರಸಿದ್ಧಿ ಹೊಂದಿದ್ದರು. ಎಡ್ವರ್ಡ್ ಬ್ಯಾರೆಟ್ ಮೌಲ್ಟನ್ ಹಾಗೂ ಮೇರಿ ಗ್ರಹಾಂ ಕ್ಲರ್ಕ್‌ನ ಹನ್ನೆರಡು ಜನ ಮಕ್ಕಳಲ್ಲಿ ಹಿರಿಯವಳಾಗಿ ೧೮೦೬ ಮಾರ್ಚ ೬ರಂದು ಇಂಗ್ಲೆಂಡಿನ ಕೌಂಟಿ ಡರ್ಹಾಮ್‌ನ ಕೆಲ್ಲೋ ಗ್ರಾಮದ ಕಾಕ್ಸ್‌ಹೋ ಹಾಲ್‌ನಲ್ಲಿ ಜನಿಸಿದರು. ಹನ್ನೆರಡೂ ಮಕ್ಕಳಿಗೆ ಒಂದೊಂದು ಅಡ್ಡಹೆಸರಿನಿಂದ ತಂದೆ ತಾಯಿ ಕರೆಯುತ್ತಿದ್ದರು. ಎಲಿಜಬೆತ್ ತಂದೆ ತಾಯಿಯರ ಪಾಲಿಗೆ ಮುದ್ದಿನ 'ಬಾ' ಆಗಿದ್ದರು. ಬಾಲ್ಯದಿಂದಲೇ ವಿಶಿಷ್ಟ ಮಗುವಾಗಿದ್ದ ಎಲಿಜಬೆತ್ ನಾಲ್ಕನೆ ವಯಸ್ಸಿಗೇ ಕವನಗಳನ್ನು ಬರೆಯಲು ಪ್ರಾರಂಭಿಸಿದರು. ಆರನೆ ವಯಸ್ಸಿನಲ್ಲಿ ದೊಡ್ಡದೊಡ್ಡ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಎಂಟನೆ ವಯಸ್ಸಿನಲ್ಲಿಯೇ ಅಲೆಕ್ಸಾಂಡರ್ ಪೋಪ್ ಇಂಗ್ಲೀಷ್‌ಗೆ ಭಾಷಾಂತರಿಸಿದ ಹೊಮೆರಿಕ್ ಪೋಯೆಮ್‌ಗಳನ್ನು ಇಷ್ಟಪಟ್ಟು ಓದುತ್ತಿದ್ದರು. ಹತ್ತನೆ ವಯಸ್ಸಿನಲ್ಲಿ ಗ್ರೀಕ್ ಭಾಷೆಯನ್ನು ಕಲಿತರು. ಹನ್ನೊಂದನೆ ವಯಸ್ಸಿಗೆ ತನ್ನನ್ನು ತುಂಬ ಪ್ರಭಾವಿಸಿದ ಹೋಮೆರಿಕ್ ಕವಿತೆಗಳ ರೀತಿಯಲ್ಲಿ ಎಪಿಕ್‌ಗಳನ್ನು ಬರೆಯಲಾರಂಭಿಸಿದರು. ಹದಿನೈದನೆ ವಯಸ್ಸಿನಿಂದ ಜೀವನಪರ್ಯಂತ ತಲೆನೋವು ಹಾಗೂ ಬೆನ್ನು ಮೂಳೆಯ ನೋವನ್ನು ಅನುಭವಿಸಿದ ಎಲಿಜಬೆತ್‌ಗೆ ಸದಾ ಆರೋಗ್ಯ ಕೈ ಕೊಡುತ್ತಲೇ ಇತ್ತು. ಹೀಗಾಗಿ ಸದಾ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎಲಿಜಬೆತ್ ನೋವು ನಿವಾರಕ ಔಷಧವನ್ನು ಅತಿಯಾಗಿ ಸೇವಿಸಿದ್ದರಿಂದಾಗಿ ಅದರ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಯಿತು. ನಂತರದ ದಿನಗಳಲ್ಲಿ ಶ್ವಾಸಕೋಶದ ತೊಂದರೆಗೆ ಒಳಗಾದಳು. ಬಹುಶಃ ಅದು ಕ್ಷಯರೋಗವಿದ್ದರೂ ಇರಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರೂ ನಿಖರವಾಗಿ ಹೇಳಿರಲಿಲ್ಲ.

          ಅನಾರೋಗ್ಯದ ಕಾರಣದಿಂದಾಗಿ ಎಲಿಜಬೆತ್ ಮನೆಯಲ್ಲಿಯೇ ಶಿಕ್ಷಣವನ್ನು ಪಡೆಯಬೇಕಾಯಿತು. ಮನೆಯ ಪಾಠಶಾಲೆಯಲ್ಲಿಯೇ ಹಲವಾರು ಭಾಷೆಗಳನ್ನು ಅಭ್ಯಸಿಸಿದರು. ಹನ್ನೊಂದನೆ ವಯಸ್ಸಿನಲ್ಲಿ ಹೊಮೆರಿಕ್ ಎಪಿಕ್ ಶೈಲಿಯಲ್ಲಿ 'ದಿ ಬ್ಯಾಟಲ್ ಆಫ್ ಮ್ಯಾರಾಥಾನ್- ಎ ಪೋಯೆಮ್' ಕೃತಿಯನ್ನು ಬರೆದಳಾದರೂ ಅದು ಪ್ರಕಟವಾಗಿದ್ದು ೧೮೨೦ರಲ್ಲಿ. ಅವಳ ತಾಯಿಎಲಿಜಬೆತ್ ಬಿ ಬ್ಯಾರೆಟ್ ಎಂಬ ಹೆಸರಿನಿಂದ ಪ್ರಕಟಿಸಿದರು. ತನ್ನ ಮಗಳು ಕವನ ಬರೆಯುವುದನ್ನು ತುಂಬ ಹೆಮ್ಮೆಯಿಂದ ಹೇಲಿಕೊಳ್ಳುತ್ತಿದ್ದ ತಂದೆ ಅವರನ್ನು 'ಪೋಯೆಟ್ ಲಾರೆಟ್ ಆಫ್ ಹೋಪ್ ಎಂಡ್' ಎಂದೇ ಕರೆಯುತ್ತಿದ್ದರು. 

          ೧೬೫೫ರಿಂದಲೂ ಜಮೈಕಾದಲ್ಲಿ ಆಫ್ರಿಕನ್ ಗುಲಾಮರನ್ನು ಹೊಂದಿದ್ದ ಭೂಮಾಲಿಕರಾಗಿದ್ದ ಬ್ಯಾರೆಟ್ ಕುಟುಂಬ ಬಹುದೊಡ್ಡ ಆಸ್ತಿಯನ್ನು ಹೊಂದಿತ್ತು. ಎಲಿಜಬೆತ್ ತಂದೆ ಎಡ್ವರ್ಡ್ ಬ್ಯಾರೆಟ್ ಹತ್ತು ಸಾವಿರ ಎಕರೆಗಳಷ್ಟು ಭೂಮಿಯನ್ನು ಹೊಂದಿದ್ದ. ಎಲಿಜಬೆತ್ ತಾಯಿಯ ಅಜ್ಜ ಕೂಡ ಸಕ್ಕರೆ ಕಂಪನಿ, ಗಿರಣಿ ಹಾಗೂ ಮುಖ್ಯವಾಗಿ ಜಮೈಕಾ ಹಾಗೂ ನ್ಯೂಕ್ಯಾಸಲ್ ನಡುವೆ ಗಾಜಿನ ಸಾಮಾನುಗಳ ಮಾರಾಟಕ್ಕಾಗಿ ಹಡಗುಗಳನ್ನು ಹೊಂದಿದ ಶ್ರೀಮಂತನಾಗಿದ್ದ. ತಾಯಿ ಮೇರಿ ಗ್ರಹಂ ಕ್ಲರ್ಕ್ ಕೂಡ ವೆಸ್ಟ್ ಇಂಡಿಸ್‌ನಲ್ಲಿ ಹಲವಾರು ತೋಟಗಳನ್ನು ಹೊಂದಿದ್ದರು. ಆದರೆ ಎಲಿಜಬೆತ್ ತಂದೆ ಎಡ್ವರ್ಡ್ ತಮ್ಮ ಮಕ್ಕಳನ್ನು ಇಂಗ್ಲೆಂಡಿನಲ್ಲಿ ಬೆಳೆಸಲು ಆಶಿಸಿದ್ದರಿಂದ ಅವರೆಲ್ಲರೂ ಅಲ್ಲಿಗೆ ಸ್ಥಳಾಂತರಗೊಂಡರು. ಅತ್ಯಂತ ಶ್ರೀಮಂತ ಮನೆತನದಲ್ಲಿ ಜನಿಸಿದ್ದರೂ ಎಲಿಜಬೆತ್ ತನ್ನ ಕುಟುಂಬದ ಸದಸ್ಯರ ಹಾಗೂ ಸಹೋದರ ಸಹೋದರಿಯರ ದರ್ಪ ಅಹಂಕಾರಗಳಿಂದ ಹೊರತಾಗಿ ಯಾವತ್ತೂ ಪುಸ್ತಕದಲ್ಲಿ ಮುಳುಗಿರುತ್ತಿದ್ದರು. ಕುಟುಂಬವು ಪಾಲಿಸುತ್ತಿದ್ದ ಗುಲಾಮಿ ಪದ್ದತಿ ಹಾಗೂ ಮಕ್ಕಳನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವ ರೀತಿ ಅವರಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಕುಟುಂಬವು ದೌಲತ್ತಿನಲ್ಲಿ ಮೆರೆಯುತ್ತಿದ್ದಾಗ ಇವರ ಮಹತ್ವಾಕಾಂಕ್ಷೆಯ ಹಾಗೂ ೧೯೦೦ರಲ್ಲಿ ಇಪ್ಪತ್ತೂ ಹೆಚ್ಚು ಸಲ ಪುನರ್‌ಮುದ್ರಣವನ್ನು ಕಂಡ ಆಕೆಯ ಕೃತಿ ಅರೋರಾ ಲೀ ೧೮೫೬ರಲ್ಲಿ ಪ್ರಕಟಗೊಂಡಿದ್ದು ಆಕೆಯ ಸೂಕ್ಷ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ.

   ಸ್ವತಃ ಭೂಮಾಲಿಕ ಕುಟುಂಬದ ಎಲಿಜಬೆತ್  ಗುಲಾಮಿ ಪದ್ದತಿಯನ್ನು ತೀವ್ರವಾಗಿ ವಿರೋಧಿಸುತ್ತ ಗುಲಾಮಿಗಿರಿಯ ವಿರುದ್ಧ ವ್ಯಾಪಕ ಪ್ರಚಾರ ಮಾಡಿದರು. ಬಾಲಕಾರ್ಮಿಕ ಪದ್ದತಿಯನ್ನು ತೀಕ್ಷ್ಣವಾಗಿ ವಿರೋಧಿಸುತ್ತ ಬಾಲಕಾರ್ಮಿಕ ಶಾಸನದ ಸುಧಾರಣೆಗಾಗಿ ಹಲವಾರು ಕೆಲಸಗಳನ್ನು ಹಮ್ಮಿಕೊಂಡರು. ೧೮೪೨ರಲ್ಲಿ ಪ್ರಕಟವಾದ 'ದಿ ಕ್ರೈಂ ಆಫ್ ದಿ ಚಿಲ್ಡ್ರನ್' ಎಂಬ ಕವಿತೆಯಲ್ಲಿ ಬಾಲಕಾರ್ಮಿಕರ ಸ್ಥಿತಿಯನ್ನು ಮನಮುಟ್ಟುವಂತೆ ವಿವರಿಸಿ ಅದನ್ನು ವಿರೋಧಿಸಿದರು. ಈ ಕವಿತೆಯು ಲಾರ್ಡ್ ಶಾಫ್ಟ್ಸ್‌ಬರಿಯ ಹತ್ತು ಗಂಟೆಗಳ ಕಾಲ ಚರ್ಚಿತಗೊಂಡ ಮಸೂದೆಗೆ ಬೆಂಬಲ ಹೆಚ್ಚಾಗುವಂತೆ ಮಾಡಿತಲ್ಲದೆ ಬಾಲ ಕಾರ್ಮಿಕ ನೀತಿಗೆ ಸುಧಾರಣೆಯನ್ನು ತರಲು ಸಹಕಾರಿಯಾಯಿತು.  'ದಿ ಕ್ರೈ ಆಫ್ ದಿ ಚಿಲ್ಡ್ರನ್' ಎಂಬ ಚಲನಚಿತ್ರ ಕೂಡ ಇವರ ಕೃತಿ ಆಧರಿಸಿ ಹೊರಬಂದಿದೆ.

       ೧೮೩೮ರಲ್ಲಿ ತನ್ನ ಮೊದಲ ಪ್ರೌಢಕವನಗಳ ಸಂಕಲನವನ್ನು ಪ್ರಕಟಿಸಿದ ಎಲಿಜಬೆತ್‌ರನ್ನು ೧೮೪೦ ರಲ್ಲಿ ಜಾನ್ ಕೆನ್ಯಾನ್ ಎಂಬ ಅವರ ಸಂಬಂಧಿಯೋರ್ವ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ. ೧೮೪೧ರಿಂದ ೧೮೪೪ರವರೆಗೆ ಅವರ ಸಾಹಿತ್ಯದ ಉತ್ಕೃಷ್ಟ ಕಾಲ. ಈ ಸಮಯದಲ್ಲಿ ಅವರು ತಮ್ಮ ಜೀವಿತಾವಧಿಯ ಅತ್ಯುತ್ತಮ ಕವಿತೆಗಳನ್ನು, ಗಧ್ಯಗಳನ್ನು ಹಾಗೂ ಅನುವಾದಗಳನ್ನು ಬರೆದರು. ೧೮೪೪ರಲ್ಲಿ ಅವರಿಗೆ ಹೆಸರು ತಂದುಕೊಟ್ಟ ಕವನಗಳ ಸಂಪುಟ ಪ್ರಕಟಗೊಂಡಿತು. ಈ ಸಂಕಲನವು ರಾಬರ್ಟ ಬ್ರೌನಿಂಗ್‌ರನ್ನು ಬಹುವಾಗಿ ಆಕರ್ಷಿಸಿತು. 'ಹೃದಯಾಂತರಾಳದಿಂದ ನಾನು ನಿಮ್ಮನ್ನು ಹಾಗೂ ನಿಮ್ಮ ಕವನಗಳನ್ನು ಪ್ರೀತಿಸುತ್ತೇನೆ' ಎಂಬ ಬ್ರೌನಿಂಗ್‌ರ ಪ್ರೇಮ ನಿವೇದನೆಯನ್ನು ಎಲಿಜಬೆತ್ ಒಪ್ಪಿಕೊಂಡರು.

          ಶ್ರೀಮಂತ ತಂದೆಗೆ ತಾನು ರಾಬರ್ಟ್ ಬ್ರೌನಿಂಗ್‌ರನ್ನು ಪ್ರೀತಿಸಿದ್ದು ಹಾಗೂ ಮದುವೆಯಾಗಲು ಬಯಸಿದ್ದು ಇಷ್ಟವಾಗುವುದಿಲ್ಲವೆಂಬುದು ಎಲಿಜಬೆತ್‌ರಿಗೆ ತಿಳಿದಿತ್ತು. ಹೀಗಾಗಿ ರಹಸ್ಯವಾಗಿ ರಾಬರ್ಟ್ ಬ್ರೌನಿಂಗ್‌ರನ್ನು ವಿವಾಹವಾದರು. ವಿವಾಹದ ನಂತರವೂ ಎಲಿಜಬೆತ್‌ರ ತಂದೆ ತಮ್ಮ ಮಗಳ ಪ್ರೀತಿಯನ್ನು ಹಾಗೂ ಮದುವೆಯನ್ನು ಒಪ್ಪಿಕೊಳ್ಳಲಿಲ್ಲ. ೧೮೪೬ರಲ್ಲಿ ಎಲಿಜಬೆತ್ ಹಾಗೂ ರಾಬರ್ಟ್ ಇಟಲಿಗೆ ತೆರಳಿ ಕೊನೆಯವರೆಗೂ ಅಲ್ಲಿಯೇ ಉಳಿದುಬಿಟ್ಟರು. ಇವರ ದಾಂಪತ್ಯದ ಕುರುಹಾಗಿ 'ಪೆನ್' ಎಂದು ಮುದ್ದಿನಿಂದ ಕರೆಯಿಸಿಕೊಳ್ಳುವ  ರಾಬರ್ಟ ವೈಡ್‌ಮನ್ ಬ್ಯಾರೆಟ್ ಬ್ರೌನಿಂಗ್ ಎಂಬ ಅದ್ಭುತ ಚಿತ್ರಕಾರನಾದ ಮಗನಿದ್ದನು. ಆಮ್‌ಸ್ಟ್ರಾಂಗ್ ಬ್ರೌನಿಂಗ್ ಲೈಬ್ರರಿಯಲ್ಲಿ ಇಂದಿಗೂ ಅವರ ಚಿತ್ರಗಳ ಅತಿದೊಡ್ಡ ಸಂಗ್ರಹವಿದೆ.

      ಮದುವೆಯ ನಂತರ ಎಲಿಜಬೆತ್ ಹಾಗೂ ರಾಬರ್ಟ್‌ರ ಬರವಣಿಗೆಗಳಲ್ಲಿ ಅಗಾಧ ಬದಲಾವಣೆಗಳನ್ನು ಕಾಣಬಹುದೆಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಪರಸ್ಪರ ಪೂರಕವಾಗಿ ತಮ್ಮ ಜೀವಮಾನದ ಶ್ರೇಷ್ಠ ಕೃತಿಗಳನ್ನು ಇವರಿಬ್ಬರೂ ರಚಿಸಿದರು. ಪತಿಯ ಒತ್ತಾಸೆಯ ಮೇರೆಗೆ ತಾನು ತುಂಬ ಇಷ್ಟಪಡುವ ಸಾನೆಟ್‌ಗಳನ್ನೊಳಗೊಂಡ ಎರಡನೆ ಸಂಕಲನವನ್ನು ಎಲಿಜಬೆತ್ ಪ್ರಕಟಿಸಿದರು.

೧೮೬೧ ಜೂನ್ ೨೯ರಂದು ಪ್ಲಾರೆನ್ಸಸನಲ್ಲಿ ಎಲಿಜಬೆತ್

       ವಿಕ್ಟೋರಿಯನ್ ಯುಗದಲ್ಲಿ ವರ್ಡ್‌ವರ್ತ್‌ನ ನಿಧನದ ನಂತರ ಟೆನ್ನಿಸನ್‌ಗೆ ಪ್ರತಿಸ್ಪರ್ಧಿಯಂತೆ ಬರವಣಿಗೆಯಲ್ಲಿ ತೊಡಗಿಸಿಕೊಂಡ ಎಲಿಜಬೆತ್ ಅಮೇರಿಕಾದ ಖ್ಯಾತ ಕವಿಗಳಾದ ಎಡ್ಗರ್ ಅಲೆನ್ ಪೋ ಹಾಗೂ ಎಮಿಲಿ ಡಿಕನ್‌ಸನ್ ಮುಂತಾದ ಹಲವಾರು ಯುವ ಬರಹಗಾರರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. 'ನಾನು ನಿನ್ನನ್ನು ಹೇಗೆ ಪ್ರೀತಿಸುತ್ತೇನೆ' ಎಂಬ ಕವಿತೆಯ ಮೂಲಕ ಇಂದಿಗೂ ಸಾಹಿತ್ಯ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಜಾಗವನ್ನು ಪಡೆದಿದ್ದಾರೆ 


ನಾನು ನಿನ್ನನ್ನು ಹೇಗೆ ಪ್ರೀತಿಸುತ್ತೇನೆ?

ನನಗೆ ಆ ದಾರಿಗಳನ್ನು ಎಣಿಸಲು ಬಿಡು

ನಾನು ನಿನ್ನನ್ನು ಅತೀವ ಆಳದಿಂದ

ಅಷ್ಟೇ ವಿಸ್ತಾರವಾಗಿ ಮಹೋನ್ನತವಾಗಿ ಪ್ರೀತಿಸುತ್ತೇನೆ

ನನ್ನ ಅಸ್ತಿತ್ವದ ಕೊನೆಯವರೆಗೆ,

ಆದರ್ಶದ ಅನುಗ್ರಹ ಇರುವವರೆಗೆ

ನನ್ನ ಭಾವನೆಗಳು ನಿನ್ನನ್ನು ತಲುಪುವಂತೆ

ಆತ್ಮದ ಸಾಂಗತ್ಯವಿರುವಂತೆ

ಸೂರ್‍ಯನ ಪ್ರಖರತೆ ಹಾಗೂ ಮೋಂಬತ್ತಿಯ ಪ್ರಶಾಂತತೆಯಂತೆ

ಪ್ರತಿದಿನವೂ ಗಾಢವಾಗಿ ನಿನ್ನನ್ನು ಪ್ರೀತಿಸುತ್ತೇನೆ

 

ಲೋಕಧ್ವನಿ-ಕೆರೆದಂಡೆ-೬  ಶ್ರೀದೇವಿ ಕೆರೆಮನೆ 

Wednesday, 8 June 2022

ನಮ್ಮೊಳಗಿನ ಮಗುತನವ ಮತ್ತೆ ತುಂಬಿಸಿಕೊಳ್ಳಲು

ನಮ್ಮೊಳಗಿನ ಮಗುತನವ ಮತ್ತೆ ತುಂಬಿಸಿಕೊಳ್ಳಲು
ಅಂಕಣ ಸಿರಿಸಂಪತ್ತು- ಈ ನಗರವಾಣಿ ಪತ್ರಿಕೆ

ಪುಸ್ತಕ- ನಾವು ಭಾರತೀಯರು
ಲೇ- ಮೌಲಾಲಿ ಕೆ. ಅಲಗೂರ


 ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಹಿರಿಯರ ಸಾಹಿತ್ಯವನ್ನು ಬರೆದಂತೆ ಕ್ಲಿಷ್ಟ ಪದಗಳನ್ನು ಬರೆದು ಸಾಹಿತ್ಯ ರಚನೆ ಮಾಡಿದೆವು ಎನ್ನುವಂತಿಲ್ಲ. ಇಲ್ಲಿ ಮಕ್ಕಳೇ ಮೊದಲ ಓದುಗರಾದ್ದರಿಂದ ಅವರ ಮಟ್ಟಕ್ಕೆ ಇಳಿದು ಸಾಹಿತ್ಯವನ್ನು ರಚಿಸಬೇಕಾಗುತ್ತದೆ. ಆದರೆ ಮಕ್ಕಳ ಮಟ್ಟಕ್ಕೆ ಇಳಿದು ಬರೆಯುವುದು ಓದುವುದು, ವ್ಯವಹರಿಸುವುದು ಸುಲಭದ ಮಾತಲ್ಲ. ಬೆಳೆಯುತ್ತ ಹೋದಂತೆ ನಾವು ನಮ್ಮ ಎಳೆತನವನ್ನೆಲ್ಲ ಕಳೆದುಕೊಂಡು ಬಿಡುತ್ತೇವೆ. ಮನದೊಳಗಿನ ಮುಗ್ಧತೆ ಮಾಯವಾಗಿ ಯಾವ ವಿಷಯದ ಬಗೆಗೂ ಕುತೂಹಲ ತೋರದೆ ಮುಗುಂ ಆಗಿ ಇದ್ದು ಬಿಡುವುದನ್ನೆ ಪ್ರೌಢತೆ ಎಂದು ತಿಳಿದುಕೊಂಡು ಮುಖವನ್ನು ಬಿಮ್ಮಿಸಿಕೊಳ್ಳುವ ಈ ಕಾಲದಲ್ಲಿ ಮಕ್ಕಳ ಸಾಹಿತ್ಯದ ಓದು ಅತಿ ಅವಶ್ಯಕ. ಅಂತಹುದ್ದೊಂದು ಆಸಕ್ತಿಕರವಾದ ಓದಿಗೆ ನಿಲುಕುವುದು ಮೌಲಾಲಿ ಕೆ ಅಲಗೂರರವರು ಬರೆದಿರುವ 'ನಾವು ಭಾರತೀಯರು' ಎನ್ನುವ ಶಿಶುಗೀತೆಗಳ ಸಂಕಲನ.
     ಮಕ್ಕಳ ಸಾಹಿತ್ಯವನ್ನು ರಚಿಸುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯಿದೆ. ಅದಕ್ಕೆ ಕಾರಣವೇನೆಂದರೆ ಬೆಳೆದಂತೆಲ್ಲ ನಾವು ನಮ್ಮ ಮಗುತನವನ್ನು ಕಳೆದುಕೊಳ್ಳುವುದು. ಆದರೆ ಮಕ್ಕಳ ಕವಿತೆಗಳನ್ನು ಓದುವುದು ಅಥವಾ ಬರೆಯುವುದರಿಂದ ನಾವು ಮತ್ತೆ ಬಾಲ್ಯದ ನೆನಪುಗಳಿಗೆ ಜಾರಬಹುದು. ಅಷ್ಟೇ ಅಲ್ಲ, ನಮ್ಮೊಳಗಿರುವ ಮಗುವನ್ನು ಪುನಃ ಮುನ್ನಲೆಗೆ ತಂದುಕೊಳ್ಳಬಹುದು. ನಮ್ಮೊಳಗೆ ಇರುವ ಮಗುತನವನ್ನು ಎಚ್ಚರಿಸುವುದೆಂದರೆ ನಾವು ನಮ್ಮೆಲ್ಲ ಕೆಡಕುಗಳನ್ನು ಮರೆತು ಸರ್ವರನ್ನೂ ನಮ್ಮವರನ್ನಾಗಿಸಿಕೊಳ್ಳುವುದು. ಮಕ್ಕಳಿರುವಾಗ ಯಾರಿಗೂ ಇವರು ಅನ್ಯರು, ಪರರು ಎನ್ನುವ ಬೇಧಭಾವ ಬರುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಒಳ್ಳೆಯ ಗುಣವಿರುತ್ತದೆ.  ಆದರೆ ಮಗು ಬೆಳೆದಂತೆ ಈ ಸಮಾಜ ಅದರೊಳಗೆ ಕೆಡಕುಗಳನ್ನು ತುಂಬಲು ಪ್ರೇರೇಪಿಸತೊಡಗುತ್ತದೆ. ಹೀಗಾಗಿಯೆ ಮಗುವಾಗಿಯೆ ಉಳಿಯಲು ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ.

ಶ್ರೇಷ್ಠ ಜೀವಿ ಮಾನವ ನಿನಗೇಕೆ
ಅಸಮಾನತೆಯ ಬೇರು
ದೀನ ಹೀನ ಹಂಗು ತೊರೆದು
ಒಗ್ಗಟ್ಟು ಸಾರು

ಎನ್ನುತ್ತ ಎಲ್ಲರನ್ನು ಒಂದಾಗಿಸಿಕೊಳ್ಳುತ್ತಾರೆ. ಮಾನವ ಎಲ್ಲ ಪ್ರಾಣಿಗಳಿಗಿಂತ ಶ್ರೇಷ್ಠ ಎನ್ನಿಸಿಕೊಂಡಿದ್ದಾನೆ. ಬುದ್ಧಿಯನ್ನು ಬಳಸಬಲ್ಲ, ಅವಕಾಶಗಳನ್ನು ತನ್ನೆಡೆಗೆ ತಿರುಗಿಸಿಕೊಳ್ಳ ಬಲ್ಲ, ಪ್ರಕೃತಿಯನ್ನೇ ತನಗೆ ಬೇಕಾದಂತೆ ರೂಢಿಸಿಕೊಳ್ಳಬಲ್ಲ ಛಾತಿಯುಳ್ಳ ಪ್ರಾಣಿ. ಆದರೆ ತಮ್ಮ ತಮ್ಮೊಳಗೆ ಅಸಮಾನತೆಯನ್ನು ಹುಟ್ಟು ಹಾಕಿಕೊಂಡು ಎಲ್ಲರನ್ನು ದ್ವೇಷಿಸುತ್ತ ಬದುಕುತ್ತಿದ್ದಾನೆ. ಬಡವರನ್ನು ದೀನರನ್ನು ಕಂಡರೆ ಹೀಯಾಳಿಸಿ ಅವರನ್ನು ಮುಟ್ಟಿಸಿಕೊಳ್ಳದವರು ಎಂಬಂತೆ ಕಾಣುತ್ತಾನೆ. ಆದರೆ ಇದೆಲ್ಲವನ್ನು ತೊರೆದು ಒಗ್ಗಟ್ಟು ಸಾರಬೇಕಾದ ಅಗತ್ಯವನ್ನು ಕವಿ ಒತ್ತಿ ಹೇಳುತ್ತಾರೆ.
    ಇಂದಿನ ಭಾರತದ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ. ಎಲ್ಲೆಲ್ಲೂ ನಿರುದ್ಯೋಗ. ಕೋಮುವಾದ, ಜಾತಿ ಜಾತಿಗಳ ನಡುವೆ ವೈಷಮ್ಯ, ತಮ್ಮ ತಮ್ಮ ಧರ್ಮಗಳ ಶ್ರೇಷ್ಠತೆಯನ್ನು ಹೇಳುತ್ತ ಉಳಿದ ಧರ್ಮಗಳು ಕೀಳು ಎಂದು ಬಿಂಬಿಸುತ್ತ, ಬೇರೆ ಧರ್ಮದವರು ಕಂಡರೆ ಕತ್ತಿ ಮಸೆಯುವುದನ್ನು ಕಂಡಾಗ ಮಕ್ಕಳು ಮುಂದೆ ಇರಬೇಕಾದ ಈ ನೆಲದ ಕಲುಷಿತತೆಯ ಬಗ್ಗೆ ಆತಂಕವಾಗುತ್ತದೆ. ಹೀಗಾಗಿಯೇ
ಭವ್ಯ ಭಾರತ ಇದುವೇ
ಧರೆಯ ಮುತ್ತಿನ ಮುಕುಟ
ಎಲ್ಲಾ ಜನಾಂಗಿಯರನ್ನು  ಹೊತ್ತ
ಸಹಬಾಳ್ವೆಯ ತೋಟ
ಎನ್ನುತ್ತ ಕವಿ ಭಾರತ ಹೇಗಿರಬೇಕು ಎಂಬುದನ್ನು ಸೂಚಿಸುತ್ತಾರೆ. ಸಂಕಲನದ ಮೊದಲಿನ ಕವಿತೆಗಳು ಸೌಹಾರ್ದತೆ, ಸಹಬಾಳ್ವೆಯ ಕುರಿತಾಗಿದೆ.ಕೋಮುದ್ವೇಷವನ್ನು ಬಿಟ್ಟು ಎಲ್ಲರೂ ಸಹೋದರರಂತೆ ಬಾಳುವ ಕವಿಯ ಕನಸು ಈ ಕವನಗಳಲ್ಲಿ ಪ್ರತಿಫಲಿತವಾಗುತ್ತದೆ.  


ಮತ ಪಥಗಳು ಬೇಡ ನಮಗೆ
ನಾವೆಲ್ಲ ಭಾರತೀಯರು
ಹಿಂದು ಮುಸ್ಲಿಂ ಕ್ರೈಸ್ತ ಬೌದ್ಧ
ಇಲ್ಲಿ ಸಕಲರೂ ಸಮಾನರು

ಮಕ್ಕಳಿರುವಾಗ ಎಲ್ಲರನ್ನು ಸಮಾನವಾಗಿ ನೋಡುವುದನ್ನು ಕಲಿಸದೆ ಹೋದರೆ ಮುಂದೆ ಆ ಮಗು ಮನುಷ್ಯನಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ತಾನೇ ಶ್ರೇಷ್ಠ ಎಂದು ಮೆರೆದವರ್‍ಯಾರೂ ಜನಮಾನಸದಲ್ಲಿ ಉಳಿಯುವುದಿಲ್ಲ. ಎಲ್ಲರೊಂದಿಗೆ ಹೊಂದಿಕೊಂಡು ಪ್ರೀತಿಯಿಂದ ಬದುಕಿದರೆ ಮಾತ್ರ ಒಂದಿಷ್ಟಾದರೂ ಗೌರವ ದೊರೆಯುತ್ತದೆ ಎಂಬುಯದನ್ನು ಮಗುವಿಗೆ ಚಿಕ್ಕಂದಿನಿಂದಲೇ ಹೇಳಿಕೊಡಬೇಕಾಗಿದೆ.  ದ್ವೇಷಿಸುವ ಮನಸ್ಸು ಸದಾ ಯಾರನ್ನಾದರೂ ದ್ವೇಷಿಸುತ್ತಲೇ ಇರುತ್ತದೆ. ಕೊನೆಗೆ ದ್ವೇಷಿಸಲು ಯಾರೂ ಸಿಗದಿರುವಾಗ ತನ್ನನ್ನೇ ತಾನು ದ್ವೇಷಿಸಿಕೊಳ್ಳುತ್ತದೆ. ಜನರನ್ನು ಪೀಡಿಸಿ ತಾವು ಮಾತ್ರ ಶ್ರೇಷ್ಠ ಎಂದು ಮೆರೆದವರ ಅಂತ್ಯವನ್ನು ನಾವೆಲ್ಲ ಕಂಡಿದ್ದೇವೆ. ಹಿಟ್ಲರ್‌ನಂತಹ ಹಿಟ್ಲರ್‌ನೇ ಕೊನೆಗೆ ಬದುಕು ನಿಭಾಯಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ನಿದಶ್ನ ಇತಿಹಾಸದ ಪುಟಗಳಲ್ಲಿದೆ. ಇತಿಹಾಸವನ್ನು ಎಷ್ಟೇ ತಿರುಚಿದರೂ, ಬದಲಾಯಿಸಲು ಪ್ರಯತ್ನಿಸಿದರೂ ಅದು ಪುನರಾವರ್ತನೆಯಾಗುತ್ತ ಮತ್ತೆ ಮತ್ತೆ ನಮಗೆ ಪಾಠ ಕಲಿಸುತ್ತದೆ. ಹೀಗಾಗಿಯೆ ಮಕ್ಕಳಿಗೆ ಒಳ್ಳೆಯದನ್ನೇ ಹೇಳಿಕೊಡಬೇಕಾಗಿದೆ. ಪ್ರೀತಿಯನ್ನು ಹಂಚಿ ಪ್ರೀತಿಯಿಂದ ಬಾಳುವುದನ್ನು ಕಲಿಸಬೇಕಿದೆ. ಇಲ್ಲಿ ಮಗು

ಮನುಜ ಮತದ ಮಂತ್ರ ಬಿತ್ತೋಣ
ಜಾತಿಯ ಗೂಡನು ಕಿತ್ತೆಸೆಯೋಣ
ದೇವನೊಬ್ಬನೇ ಎನ್ನೋಣ
ಕೂಡಿ ನಲಿಯುತ ಬಾಳೋಣ

ಎನ್ನುತ್ತದೆ. ಭವ್ಯಭಾರತದ ಕನಸು ಒಡೆದು ದೂರವಾಗುವುದರಲ್ಲಿಲ್ಲ. ಒಗ್ಗಟ್ಟಿನಲ್ಲಿದೆ ಎಂಬ ಸತ್ಯದ ಅರಿವು ಎಲ್ಲ ಮಕ್ಕಳಿಗೂ ಆಗಬೇಕಿದೆ.
   ಸೈನಿಕರನ್ನು ನೆನಪಿಸಿಕೊಳ್ಳುವ ಸೈನಿಕರಿಗೆ ಸಲಾಂ, ಸ್ನೇಹದ ಮಹತ್ವ ಹೇಳುವ ಸ್ನೇಹಿತರು ಮುಂತಾದ ಕವನಗಳು ತಮ್ಮ ಸರಳತೆಯಿಂದಲೇ ಗಮನ ಸೆಳೆಯುತ್ತವೆ. ಹೋಳಿ, ದೀಪಾವಳಿ, ಸಂಕ್ರಾಂತಿ, ಯುಗಾದಿ, ಜಾತ್ರೆ ಮುಂತಾದ ಹಬ್ಬಗಳ ಕುರಿತು ಬರೆದಿರುವ ಕವನಗಳು ತುಂಬ ಆಸಕ್ತಿದಾಯಕವಾಗಿದ್ದು ಮಕ್ಕಳನ್ನು ಸೆಳೆಯುವುದರಲ್ಲಿ ಅಚ್ಚರಿಯೇನಿಲ್ಲ.

ಅಪ್ಪ ಅಮ್ಮನನ್ನು ಪ್ರತ್ಯಕ್ಷ ದೇವರು ಎನ್ನುತ್ತೇವೆ. ನಮ್ಮ ಜೀವನದಲ್ಲಿ ಇವರಿಬ್ಬರ ಪಾತ್ರ ಹಿರಿದು. ತಮ್ಮೆಲ್ಲ ಶಕ್ತಿಯನ್ನು ಮಕ್ಕಳ ಏಳಿಗೆಗಾಗಿ ಮೀಸಲಿಡುವ ಅಪ್ಪ-ಅಮ್ಮ ಮಕ್ಕಳ ಉನ್ನತಿಯಲ್ಲಿಯೇ ಸಮತೋಷ ಕಾಣುತ್ತಾರೆ. ಮಕ್ಕಳ ಏಳಿಗೆಗಾಗಿ ತಾವು ಮೇಲೇರುವ ಅವಕಾಶ ತಪ್ಪಿಸಿಕೊಂಡವರು ಇದ್ದಾರೆ. ಮಕ್ಕಳ ಬದುಕು ಹಸನಾದರೆ ಸಾಕು ಎನ್ನುವ ತಂದೆತಾಯಿಗಳು ನಿಜಕ್ಕೂ ಸಮಾಜದ ದೊಡ್ಡ ಆಸ್ತಿ. ಯಾಕೆಂದರೆ ಅವರು ಈ ಸಮಾಜಕ್ಕೆ, ದೇಶಕ್ಕೆ ಒಂದು ಭವ್ಯ ಭವಿಷತ್‌ನನು ನಿರ್ಮಿಸಿ ಕೊಟ್ಟವರು.  ಸಂಕಲನದಲ್ಲಿ ಅಪ್ಪ ಅಮ್ಮ ಹಾಗೂ ಶಿಕ್ಷಕರ ಕುರಿತಾಗಿ ಇರುವ ಕವನಗಳು ಮನಸ್ಸನ್ನು ಸೆಳೆಯುತ್ತವೆ.
   ಅಮ್ಮನ ಪ್ರೀತಿಯಲ್ಲಿ ಅಪ್ಪನ ಬಲವನ್ನು ಎಷ್ಟೋ ಮಕ್ಕಳು ಮರೆತು ಬಿಡುತ್ತಾರೆ. ಅಮ್ಮ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಜೋಪಾನವಾಗಿಟ್ಟುಕೊಂಡು, ಅಪಾರವಾದ ಹೆರಿಗೆ ಬೇನೆಯನ್ನು ಎದುರಿಸಿ ಮಗುವಿಗೆ ಜನ್ಮ ನೀಡುತ್ತಾಲೆ. ತನ್ನ ರಕ್ತ ಮಾಂಸವನ್ನು ಹಂಚಿಕೊಂಡು ಹುಟ್ಟಿದ ಮಗುವಿಗೆ ತನ್ನ ಎದೆಹಾಲೆಂಬ ಅಮೃತ ನೀಡುತ್ತಾಳೆ. ಆದರೆ ಅಪ್ಪ ಅಮ್ಮನ ಪ್ರೀತಿಯ ಎದುರು ಮಂಕಾದಂತೆ ಕಂಡರೂ ಅವನ ಹೊಣೆಗಾರಿಕೆ ಕಡಿಮೆಯದ್ದೇನಲ್ಲ. ಮಕ್ಕಳ ಭವಿಷ್ಯ ಅಪ್ಪನ ಹೆಗಲೇರಿದ ಜವಬ್ಧಾರಿ. ಹೀಗಾಗಿ ಮಕ್ಕಳನ್ನು ಹೆಗಲಮೇಲೆ ಕುಳ್ಳಿರಿಸಿಕೊಳ್ಳುವುದಷ್ಟೇ ಅಲ್ಲ ಅವರ ಜೀವನವನ್ನು ನೇರ್ಪುಗೊಳಿಸುತ್ತಾನೆ. ಹೀಗಾಗಿ ಕವಿ ಅಪ್ಪನನ್ನು ಕುರಿತು,

ಬದುಕಿಗೆ ನೂರಾರು ತೊಂದರೆ
ಬಂದರು, ಆಗಲಿಲ್ಲ ಬೇಜಾರು
ಹಾಕಲಿಲ್ಲ ಕಣ್ಣೀರು, ಅಪ್ಪನಿಗಿಂತ
ಬೇರಿಲ್ಲ ಮತ್ತೊಬ್ಬ ಆಪ್ತರು

ಎನ್ನುತ್ತಾರೆ. ಮಕ್ಕಳ ಬದುಕಿಗಾಗಿ ನೂರಾರು ಕಷ್ಟಗಳನ್ನು ಸಹಿಸಿಕೊಳ್ಳುವ ಅಪ್ಪ, ಅಮ್ಮನಷ್ಟೇ ಆಪ್ತರು. ಆದರೆ ಅಮ್ಮ ಎಂದಿದ್ದರೂ ಅಮ್ಮನೆ.ಅಮ್ಮನ ಸ್ಥಾನ ಯಾರಿಂದಲೂ ತುಂಬಲಾಗದು. ತನ್ನ ನೋವು, ದುಃಖ, ಅನಾರೋಗ್ಯಗಳನ್ನು ಬದಿಗೊತ್ತಿ ಮಗುವಿನ ಬದುಕು ತನ್ನ ಬದುಕು ಎಂಬ ತಾದ್ಯಾತ್ಮದಿಂದ ಜೀವಿಸುತ್ತಾಳೆ. 

ನಮ್ಮ ಏಳಿಗೆಗೆ ಮುಂದೆ ನಿಂತು ಸೌಖ್ಯ ಅಸೌಖ್ಯದಲಿ ಬೆರೆತು
ಮಗು ಅಳಲು ತಾನತ್ತು, ನಕ್ಕಾಗ
ವ್ಯಥೆಯನ್ನು ಮರೆತಳು

ಮಕ್ಕಳ ಜೀವನದಲ್ಲಿ ತಂದೆ ತಾಯಿಗಳ ನಂತರದ ಸ್ಥಾನ ಏನಿದ್ದರು ಗುರುವಿನದ್ದು. ಕೆಲವೊಮ್ಮೆ ತಂದೆತಾಯಿಗಳಿಗಿಂತ ಶಿಕ್ಷಕರೇ ನಿರ್ಣಾಯಕ ಸ್ಥಾನ ವಹಿಸಿದ್ದೂ ಇದೆ. ಸಂವಿಧಾನ ಶಿಲ್ಪಿ ಅಂಬೇಡ್ಕರರ ಜೀವನವನ್ನು ನೋಡಿದರೆ ಗುರುವಿನ ಹಿರಿಮೆಯ ಅರಿವಾಗುತ್ತದೆ. ಹೀಗಾಗಿ ಕವಿ ಗುರುವನ್ನು ಅವರ ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ.

ಪಾಠ ಮಾಡುತ, ಆಟವ ಆಡಿಸುತ
ನಕ್ಕು ನಗಿಸುವ ಹಸನ್ಮುಖ
ತಪ್ಪನ್ನು ಮನ್ನಿಸಿ, ಪ್ರೀತಿಯ ಹಂಚಿ
ಮಕ್ಕಳ ಬದುಕಿನ ಪ್ರೇರಕ

ಎನ್ನುತ್ತ ಗುರುವಿನ ಪ್ರೇರಕ ಶಕ್ತಿಯನ್ನು ಹೊಗಳಿದ್ದಾರೆ.
         ಗಾಂಧಿತಾತ ರಾಷ್ಟ್ರಪಿತ,ಸಂಗೊಳ್ಳಿ ರಾಯಣ್ಣ, ಸಾವಿತ್ರಿಭಾಯಿ ಫುಲೆ, ಡಾ. ಎ.ಪಿ.ಜೆ ಅಬ್ಧುಲ್ ಕಲಾಂಭಾವೈಕ್ಯತೆಯಜ್ಜ ಸುತಾರ ಮುಂತಾದವರ ಜೀವನ ಚರಿತ್ರೆಗಳನ್ನು ಸರಳವಾಗಿ ಹೇಳಿ ಮಕ್ಕಳಿಗೆ ಈ ವ್ಯಕ್ತಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರೇರಣೆ ನೀಡಿದ್ದಾರಲ್ಲದೆ ಇವರ ಮಾನವತಾ ಸಮದೇಶಗಳನ್ನು ತಿಳಿದುಕೊಳ್ಳಲು ಉತ್ತೇಜಿಸಿದ್ದಾರೆ.

ಮತದಾನ ಜಾಗ್ರತಿ, ಸ್ವಾತಂತ್ರ್ಯೋತ್ಸವ, ಗಣರಾಜ್ಯ ದಿನಾಚರಣೆಯ ಕುರಿತೂ ಸುಂದರವಾಗಿ ಮನಮುಟ್ಟುವಂತೆ ಬರೆದಿದ್ದಾರೆ.
ಕನ್ನಡ ಉಳಿಸು,  ಸುಂದರ ಕರುನಾಡು ಕವನಗಳಿವೆ
ಕನ್ನಡಕ್ಕಾಗಿ ಬದುಕೋಣ ಕವನದಲ್ಲಿ

ಕುವೆಂಪು ಸಾಹಿತ್ಯ ಅರಿಯೋಣ
ಕನ್ನಡ ಡಿಂಡಿಮ ಬಾರಿಸೋಣ
ನಿತ್ಯೋತ್ಸವ ಗೀತೆ ಹಾಡೋಣ
ಸವಿಗನ್ನಡ ಉತ್ಸವ ಆಚರಿಸೋಣ

 ಎನ್ನುತ್ತ ಕನ್ನಡ ನುಡಿಯ ಕುರಿತು ಮಕ್ಕಳು ಸದಾ ಗೌರವ ಭಾವ ಹೊಂದಿರಬೇಕೆಂದು ಆಶಿಸುತ್ತಾರೆ. ರಾಷ್ಟ್ರಕವಿ ಕುವೆಂಪುರವರ ಆದರ್ಶ ಹಾಗೂ ಕನ್ನಡಪ್ರೇಮ, ನಿಸಾರ ಅಹಮದ್‌ರ ನಿತ್ಯೋತ್ಸವದ ಕುರಿತು ಸೂಕ್ಷ್ಮವಾಗಿ ಹೇಳುತ್ತ ಇನ್ನೂ ಹೆಚ್ಚು ಅರಿತುಕೊಳ್ಳಲು ದಾರಿತೋರಿದ್ದಾರೆ.
   ಮಕ್ಕಳ ಕವಿತೆಗಳನ್ನು ಬರೆಯುವಾಗ ನಾವು ನೆನಪಿಟ್ಟುಕೊಳ್ಳಬೇಕಾದ ಇನ್ನೊಂದು ಪ್ರಮುಖವಾದ ಅಂಶವೆಂದರೆ ಕೇವಲ ಮಕ್ಕಳ ಮಟ್ಟಕ್ಕೆ ಇಳಿದು, ಸರಳ ಪದಪ್ರಯೋಗದಿಂದ ಬರೆಯುವುದಷ್ಟೇ ಅಲ್ಲ, ಅದರಲ್ಲಿ ಗೇಯತೆಯೂ ಇರಬೇಕು. ಇಲ್ಲಿನ ಕೆಲವು ಕವಿತೆಗಳನ್ನು ಹಾಡುಗಬ್ಬದಂತೆ ಬರೆದಿದ್ದರೂ ಹೆಚ್ಚಿನ ಕವಿತೆಗಳು ಹಾಡಿಗೆ ಒಗ್ಗುವಂತಿದ್ದರೆ ಎಷ್ಟು ಚೆನ್ನ. ವೃತ್ತಿಯಿಂದ ಪೋಲಿಸ್ ಆಗಿರುವ ಮೌಲಾಲಿಯವರ ಲೇಖನಿಯಿಂದ ಇನ್ನಷ್ಟು ಹಾಡುಗಬ್ಬ ಮಕ್ಕಳ ಕವಿತೆಗಳು ಮೂಡಿ ಬರಲಿ.

Thursday, 2 June 2022

ಗೋಥಿಕ್ ಸಾಹಿತ್ಯದ ಪ್ರವರ್ತಕಿ- ಕ್ಲಾರಾ ರೀವ್


ಗೋಥಿಕ್ ಸಾಹಿತ್ಯದ ಪ್ರವರ್ತಕಿ- ಕ್ಲಾರಾ ರೀವ್
೧೭೨೯ರ ಜನವರಿ ೨೩ರಂದು ಇಂಗ್ಲೆಂಡಿನ ಇಫ್ಸ್ವಿಚ್ ಎಂಬಲ್ಲಿ ರೆವರೆಂಡ್ ವಿಲಿಯಂ ರೀವ್ ಹಾಗೂ ಹೆನ್ನಾ ಸ್ಮಿತೀಸ್‌ರವರ ಎಂಟು ಜನ ಮಕ್ಕಳಲ್ಲಿ ಹಿರಿಯ ಮಗಳಾಗಿ ಜನಿಸಿದ ಕ್ಲಾರಾ ರೀವ್‌ರವರ ತಂದೆ ಸೆಂಟ್ ನಿಕೋಲಸ್-೧ ರವರ ಆಪ್ತಬರಹಗಾರರ ವಲಯದಲ್ಲಿದ್ದರು. ಇವರ ತಾಯಿ ರಾಜ ಜಾರ್ಜ-೧ ರವರ ಆಸ್ಥಾನದಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದ ವಿಲಿಯಂ ಸ್ಮಿತಿಸ್‌ರವರ ಮಗಳು. ಹೀಗಾಗಿ ನೀಲಿ ರಕ್ತದ ನಂಟು ತೀರಾ ಹತ್ತಿರದಲ್ಲಿತ್ತು. ತಾನು ಏನೆಲ್ಲವನ್ನು ಕಲಿತಿದ್ದೇನೋ ಅದೆಲ್ಲವೂ ನನ್ನ ತಂದೆಯ ಕೊಡುಗೆ ಎಂದು ಸದಾ ತನ್ನ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದ ಕ್ಲಾರಾ ಚಿಕ್ಕ ವಯಸ್ಸಿನಲ್ಲಿಯೇ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಗಳು, ರಾಪಿನ್‌ರವರು ಬರೆದ ಇಂಗ್ಲೆಂಡಿನ ಇತಿಹಾಸ ,ಜಾನ್ ಟ್ರೆಂಚಾರ್ಡ ಹಾಗೂ ಥಾಮಸ್ ಗೊರ್ಡಾನ ಬರೆದಂತಹ ಕ್ಯಾಟೋಸ್ ಲೆಟರ್ಸ್, ಗ್ರೀಕ್ ಹಾಗೂ ರೋಮನ್‌ನ ಇತಿಹಾಸ, ಪ್ಲೂಟಾರ್ಕ್‌ನ ತತ್ವಶಾಸ್ತ್ರ ಮುಂತಾದವುಗಳ ಬಗ್ಗೆ ಓದಿ ತಿಳಿದುಕೊಂಡರು. ಇವು ಅವರ ಬರಹಕ್ಕೆ ಅತ್ಯುತ್ತಮ ತಳಹದಿಯನ್ನು ಒದಗಿಸಿತು. ಅಪ್ಪ ತನ್ನ ಎಲ್ಲ ಶಕ್ತಿಗಳ ಹಿಂದಿನ ಪ್ರೇರಣೆ ಎಂದು ಅವರು ನಂಬಿದ್ದರು. ತನ್ನ ನಿಲುವುಗಳನ್ನು ರೂಪಿಸಲು ಚಿಕ್ಕಂದಿನಲ್ಲಿ ತನ್ನ ತಂದೆ ತೆಗೆದುಕೊಂಡ ಮಾರ್ಗದ ಬಗ್ಗೆ ಆಕೆಗೆ ಒಂದಿಷ್ಟು ಹೆಮ್ಮೆ ಒಂದಿಷ್ಟು ಅಸಮಧಾನಗಳಿದ್ದವು. ತನ್ನ ವಯಸ್ಸಿನ ಮಕ್ಕಳು ಸಾಹಿತ್ಯದ ಬಗ್ಗೆ ತಿಳಿಯುವ ಮುನ್ನವೇ  ತಾನು ಇವುಗಳನ್ನೆಲ್ಲ ಓದಿ ಅರಗಿಸಿಕೊಳ್ಳುವಂತೆ ಮಾಡಿದ್ದಕ್ಕಾಗಿ ಅಪ್ಪನಿಗೆ ಮನದಲ್ಲೇ ವಂದಿಸುತ್ತಿದ್ದರು.
  ೧೭೫೫ರಲ್ಲಿ ತಂದೆಯ ಸಾವಿನ ನಂತರ ಕ್ಲಾರಾ ಕೆಲಕಾಲ ತನ್ನ ಅಮ್ಮನೊಂದಿಗೆ ವಾಸಿಸುತ್ತಿದ್ದರು. ನಂತರ ಇಪ್ಸ್‌ವಿಚ್‌ನ ತಮ್ಮ ಸಂತದ ಮನೆಗೆ ಹೋಗಿ ಅಲ್ಲಿಯೇ ವಾಸಿಸಲಾರಂಭಿಸಿದರು. ಅವರ ನಂತರದ ಸಾಹಿತ್ಯ ಕೃಷಿ ಇಲ್ಲಿಂದಲೇ ಮುಂದುವರೆಯಿತು.
೧೭೬೯ರಲ್ಲಿ ಒರಿಜಿನಲ್ ಪೋಯೆಮ್ಸ್ ಎಂಬ ಪ್ರಥಮ ಸಂಕಲನವನ್ನು ಕ್ಲಾರಾ ಪ್ರಕಟಿಸಿದರಾದರೂ ಅದು ಅವರಿಗೆ ನಿರೀಕ್ಷಿಸಿದಷ್ಟು ಸಮಾಧಾನ ತಂದುಕೊಡಲಿಲ್ಲ. ೧೭೭೭ರಲ್ಲಿ ದಿ ಓಲ್ಡ್ ಇಂಗ್ಲೀಷ್ ಬ್ಯಾರನ್' ಎನ್ನುವ ಗೋಥಿಕ್ ಶೈಲಿಯ ಕಾದಂಬರಿಯನ್ನು ಬರೆದು ಪ್ರಕಟಿಸಿದರು.  ಇದು ಕ್ಲಾರಾ ರೀವ್‌ರವರ ಅತ್ಯುತ್ತಮ ಕೃತಿ ಎಂದು ಪರಿಗಣಿಸಲ್ಪಟ್ಟಿದೆ. ೧೭೮೦ರಲ್ಲಿ ದಿ ಟೂ ಮಾಂಟರ್ಸ್, ೧೭೮೫ರಲ್ಲಿ ದಿ ಪ್ರೊಗ್ರೆಸ್ ಆಫ್ ರೋಮಾನ್ಸ್ ೧೭೯೧ರಲ್ಲಿ ದಿ ಸ್ಕೂಲ್ ಫಾರ್ ವೀಡೋಸ್, ೧೭೯೨ರಲ್ಲಿ ಪ್ಲಾನ್ಸ್ ಫಾರ್ ಎಜುಕೇಶನ್, ೧೭೯೩ರಲ್ಲಿ ಮೆಮೊರಿಸ್ ಆಫ್ ಸರ್ ರೋಜರ್ ಡಿ ಕ್ಲಾರೆಂಡಾನ್ ೧೭೯೯ರಲ್ಲಿ ಡೆಸ್ಟಿನೇಶನ್ ಎಂಬ ಕೃತಿಗಳು ಪ್ರಕಟಗೊಂಡು ಸಾಹಿತ್ಯಾಸಕ್ತರ ಗಮನವನ್ನು ಸೆಳೆಯಿತು. ಇವೆಲ್ಲದರ ನಡುವೆ ೧೭೭೨ರಲ್ಲಿ ಲ್ಯಾಟಿನ್ ಭಾಷೆಯಿಂದ ದಿ ಫಿನೋಲೆಕ್ಸ್ ಎಂಬ ಕಾದಂಬರಿಯನ್ನು ಇಂಗ್ಲೀಷ್‌ಗೆ ಭಾಷಾಂತರ ಕೂಡ ಮಾಡಿದ್ದರು. ಆದರೆ ಓದುಗರು ಈ ಪುಸ್ತಕಕ್ಕೆ ಅಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಸಾಹಿತಿಯಾಗಿ ತಾನು ಸೋಲೊಪ್ಪಿಕೊಳ್ಳಬೇಕಾಗಿದೆ ಎಂದು ಕ್ಲಾರ ಬೇಸರಗೊಂಡಿದ್ದರು. 'ಒಂದು ಅತ್ಯುತ್ತಮ ಕ್ರತಿಯನ್ನು ನಾನು ಓದುಗರಿಗೆ ನೀಡಿದೆ. ಆದರೆ ಅದು ಸರಿಯಾಗಿ ಸ್ವೀಕರಿಸಲ್ಪಡಲಿಲ್ಲ.' ಎಂದು ಆ ಪುಸ್ತಕದ ಬಗ್ಗೆ ಸದಾ ಹೇಳುತ್ತಿದ್ದರು. ಆದರೆ ದಿ ಓಲ್ಡ್ ಇಂಗ್ಲಿಷ್ ಬ್ಯಾರನ್ ನೀಡಿದ ಅಭೂತಪೂರ್ವ ಯಶಸ್ಸು ಉಳಿದವುಗಳನ್ನು ಹಿಂದೆ ಸರಿಸಿತು.

  ದಿ ಓಲ್ಡ್ ಇಂಗ್ಲೀಷ್ ಬ್ಯಾರನ್ ಕಾದಂಬರಿಯನ್ನು ಮೊದಲು 'ದಿ ಚಾಂಪಿಯನ್ ಆಫ್ ವರ್ಚ್ಯು- ಎ ಗೋಥಿಕ್ ಸ್ಟೋರಿ' ಎಂದು ಹೆಸರಿಸಲಾಗಿತ್ತು. ಆದರೆ ಎರಡನೆ ಮುದ್ರಣದ ಸಮಯದಲ್ಲಿ ಹಾಗೂ ಅದರ ನಂತರದ ಮುದ್ರಣದಲ್ಲಿ ಈ ಕಾದಂಬರಿಯನ್ನು ದಿ ಓಲ್ಡ್ ಇಂಗ್ಲೀಷ್ ಬ್ಯಾರನ್ ಎಂದು ಹೊಸದಾಗಿ ಹೆಸರಿಡಲಾಯಿತು. ಅತ್ಯಂತ ಆಪ್ತತೆಯನ್ನು ನೀಡುವ ಹೆಸರದು. ಈ ಕಾದಂಬರಿ ನಂತರ ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳಿಗೆ ಭಾಷಾಂತರಗೊಂಡಿತು. ಇವರ ಪ್ರೊಗ್ರೆಸ್ ಆಫ್ ರೋಮಾನ್ಸ್ ಕೃತಿ ಕೂಡ ಆ ದಿನಗಳಲ್ಲಿ ಬಹುವಾಗಿ ಚರ್ಚಿತವಾಗಿದ್ದಂತಹ ಪುಸ್ತಕ. ಪ್ರಣಯದ ಇತಿಹಾಸವನ್ನು ಹುಡುಕುತ್ತ ಸಾಗುವ ವಸ್ತುವಿಷಯವನ್ನು ಹೊಂದಿದ ಈ ಗ್ರಂಥವು ವ್ಯಕ್ತಿಗಳ ಸಂಭಾಷಣೆಯ ಮುಖಾಂತರ ಮಹಿಳಾ ಬರಹಗಾರರ ಅಭಿವ್ಯಕ್ತಿಯನ್ನು ವಿಶ್ಲೇಷಿಸಲ್ಪಡುವಂತೆ ಚಿತ್ರಿಸಲಾಗಿದೆ.
  ತನ್ನ ಮೂವತ್ಮೂರು ವರ್ಷಗಳ ಬರಹದ ಬದುಕಿನಲ್ಲಿ ಕ್ಲಾರಾ ರೀವ್ ಇಪ್ಪತ್ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದರು. ಆರಂಭದ ಕೆಲವು ಕೃತಿಗಳನ್ನು ಹೊರತುಪಡಿಸಿ ಅವರ ಬಹುತೇಕ ಕೃತಿಗಳು ಸಮಕಾಲೀನರಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದವು.
೧೮೦೭ರಲ್ಲಿ ಇಫ್ಸ್‌ವಿಚ್‌ನ ಮನೆಯಲ್ಲಿ ನಿಧನ ಹೊಂದಿದ ಕ್ಲಾರಾ ರೀವ್‌ರವರನ್ನು ಅವರ ಇಚ್ಛೆಯಂತೆ ಸೆಂಟ್ ಸ್ಟೀಫನ್ ಚರ್ಚಯಾರ್ಡ್‌ನಲ್ಲಿ ಆವರ ಸ್ನೇಹಿತ ರೆವರೆಂಡ್ ಡರ್ಬಿಯ ಪಕ್ಕದಲ್ಲಿ ಮಣ್ಣು ಮಾಡಲಾಯಿತು.
    ಇಂದಿಗೂ ಕ್ಲಾರಾ ರೀವ್ ತಮ್ಮ ದೀ ಓಲ್ಡ್ ಇಂಗ್ಲೀಷ್ ಬ್ಯಾರನ್ ಮುಖಾಂತರ ಜೀವಂತವಾಗಿದ್ದಾರೆ. ಒಂದು ಕಾಲದಲ್ಲಿ ಈ ಕಾದಂಬರಿಯನ್ನು ಗೋಥಿಕ್ ಸಾಹಿತ್ಯದ ಮೊದಲ ಮೆಟ್ಟಿಲು ಎಂದು ಗುರುತಿಸಲಾಗುತ್ತಿದೆ. ಹಲವಾರು ಯುವ ಹಾಗೂ ಕ್ಲಾರಾ ನಂತರದ ಸಾಹಿತಿಗಳು ಇವರ ಈ ಪುಸ್ತಕದಿಂದ ಪ್ರಭಾವಿತರಾಗಿದ್ದನ್ನು ಕಾಣಬಹುದು. ಈ ಪುಸ್ತಕವು ವಿದ್ವಾಂಸರ, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ನಡುವೆ ಹೇಗೆ ಬಹು ಚರ್ಚಿತ ವಿಷಯವಾಗಿ ಅಭಿಪ್ರಾಯಗಳನ್ನು ಹೊರಗೆಡವುವಂತೆ ಮಾಡುತ್ತಿತ್ತೋ ಅಷ್ಟೇ ಜನಸಾಮಾನ್ಯರ ನಡುವಣ ಚರ್ಚೆಗೂ ಕಾರಣವಾಗಿತ್ತು. ೧೮ನೇ ಶತಮಾನದ ಉತ್ತರಾರ್ಧದಲ್ಲಿ ಬರೆಯಲಾರಂಭಿಸಿದ ಬಹುತೇಕ ಮಹಿಳಾ ಸಾಹಿತಿಗಳ ಮೇಲೆ ಗಣನೀಯ ಪ್ರಭಾವ ಬೀರಿದ ಈ ಪುಸ್ತಕದ ಕುರಿತು ಹಲವಾರು ವಿಮರ್ಶೆಗಳು ಪ್ರಕಟಗೊಂಡಿವೆ. ಹೆನ್ರಿಟ್ಟಾ ಮೋಸ್ಸೆ ಹಾಗೂ ಇತರ ಸಮಕಾಲೀನ ಲೇಖಕಿಯರು ಈ ಪುಸ್ತಕ ತಮ್ಮ ಮೇಲೆ ಬೀರಿದ ಪ್ರಭಾವಗಳ ಕುರಿತು ಹೇಳಿಕೊಂಡಿದ್ದಾರೆ. ಗೋಥಿಕ್ ಶೈಲಿಯನ್ನು ಕ್ಲಾರಾ ರೀವ್‌ರವರಂತೆ ನಿರ್ದಿಷ್ಟ ಚೌಕಟ್ಟಿಗೆ ಒಳಪಡಿಸಿ ಬರೆಯುವುದನ್ನು ಇವರೆಲ್ಲ ರೂಢಿಸಿಕೊಂಡರು. ಹೀಗಾಗಿ ಗೋಥಿಕ್ ಶೈಲಿಯ ಪ್ರವರ್ತಕಿ ಎಂದೇ ಇವರನ್ನು ಈಗಲೂ ಗುರುತಿಸಲಾಗುತ್ತಿದೆ. 

ಗೋಥಿಕ್ ಸಾಹಿತ್ಯದ ಪ್ರವರ್ತಕಿಯಾಗಿ ಹಲವಾರು ಯುವ ಲೇಖಕರು ತನ್ನನ್ನು ಅನುಕರಿಸುವಂತೆ ಮಾಡಿದ್ದ ಕ್ಲಾರಾ ರೀವ್ ಪರಿಚಯ ಇಂದಿನ (03/06/2022) ಲೋಕಧ್ವನಿಯಲ್ಲಿ. 



lokadhwani - http://lokadhwani.com/ArticlePage/APpage.php?edn=Main&articleid=LOKWNI_MAI_20220603_4_6

Friday, 27 May 2022

ಸ್ತ್ರೀಯರ ವೈಯಕ್ತಿಕ ಸ್ವಾತಂತ್ರ್ಯದ ಕನ್ನಡಿ ಎಮಿಲಿ ಬ್ರಾಂಟೆ- ಕೆರೆದಂಡೆ- ಲೋಕಧ್ವನಿ


ಸ್ತ್ರೀಯರ ವೈಯಕ್ತಿಕ ಸ್ವಾತಂತ್ರ್ಯದ ಕನ್ನಡಿ ಎಮಿಲಿ ಬ್ರಾಂಟೆ


ವುದರಿಂಗ್ ಹೈಟ್ಸ್ ಎಂಬ ತನ್ನ ಏಕೈಕ ಕಾದಂಬರಿಯ ಮೂಲಕ ಇಂಗ್ಲೀಷ್ ಸಾಹಿತ್ಯ ಪ್ರಪಂಚದ ಗಮನವನ್ನು ತನ್ನೆಡೆಗೆ ಸೆಳೆದುಕೊಂಡ ಎಮಿಲಿ ಬ್ರಾಂಟೆ ಅತಿ ಹೆಚ್ಚು ಬರವಣಿಗೆಯನ್ನು ಮಾಡಿದವರಲ್ಲ. ಆದರೆ ಬರೆದ ಕೆಲವೆ ಕವನಗಳು ಹಾಗೂ ಕಾದಂಬರಿಯ ಮೂಲಕ ಸಾಹಿತ್ಯ ಪ್ರೇಮಿಗಳ ಹೃದಯದಲ್ಲಿ ನೆಲೆನಿಂತವಳು.
೩೦ ಜುಲೈ ೧೮೧೮ರಲ್ಲಿ ಯಾರ್ಕ್‌ಷೈರ್‌ನ ಥಾರ್ನ್‌ಟನ್‌ನಲ್ಲಿ ಜನಿಸಿದ ಎಮಿಲಿಯ ತಂದೆ ರೆವರೆಂಡ್ ಪ್ಯಾಟ್ರಿಕ್ ಬ್ರಾಂಟೆ ಹಾಗೂ ತಾಯಿ ಮಾರಿಯಾ ಬ್ರಾನ್‌ವೆಲ್ ಬ್ರಾಂಟೆ. ಈ ದಂಪತಿಗಳ ಆರು ಜನ ಮಕ್ಕಳಲ್ಲಿ ಇವಳು ಐದನೆಯವಳು. ತಂದೆ ತಾಯಿ ಇಬ್ಬರೂ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದವರು. ಉದ್ಯೋಗದ ನಿಮಿತ್ತ ಹಾವರ್ತ್‌ಗೆ ಸ್ಥಳಾಂತರಗೊಂಡಿದ್ದರಿಂದ ಬ್ರಾಂಟೆ ಕುಟುಂಬದ ಮಕ್ಕಳಿಗೆ ಅಲ್ಲಿ ಸಾಹಿತ್ಯಿಕ ವಾತಾವರಣ ದೊರಕಿದ್ದರಿಂದ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅನುಕೂಲವಾಯಿತಾದರೂ ಎಮಿಲಿ ಕೇವಲ ಮೂರು ವರ್ಷದವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಳ್ಳಬೇಕಾಗಿ ಬಂದುದು ಅವಳ ಪಾಲಿಗೆ ಎಂದೂ ತುಂಬಿಕೊಡಲಾಗದ ನಷ್ಟವೇ ಆಗಿತ್ತು. ತಾಯಿ ತೀರಿಕೊಂಡ ಆ ಸಂದರ್ಭದಲ್ಲಿ ಎಮಿಲಿಯ ಸಹೋದರ ಸಹೋದರಿಯರೆಲ್ಲ ಎಂಟು ವರ್ಷದ ಒಳಗಿನ ಮಕ್ಕಳಾಗಿದ್ದರು. ನಂತರ ಅಮ್ಮನ ಸಹೋದರಿ ಅಂದರೆ ಚಿಕ್ಕಮ್ಮ ಎಲಿಜಬೆತ್ ಈ ಮಕ್ಕಳನ್ನು ನೋಡಿಕೊಳ್ಳತೊಡಗಿದರು.
   ಅಕ್ಕಂದಿರಾದ ಮರಿಯಾ, ಎಲಿಜಬೆತ್ ಹಾಗೂ  ಷಾರ್ಲೆಟ್‌ರನ್ನು ಕೋವನ್ ಬ್ರಿಡ್ಜ್‌ನಲ್ಲಿರುವ ಫಾದ್ರಿ ಡಾಟರ್ಸ್ ಎಂಬ ಶಾಲೆಗೆ ಕಳುಹಿಸಲಾಗಿತ್ತು. ಎರಡು ವರ್ಷಗಳ ನಂತರ ಎಮಿಲಿಯನ್ನೂ ಅದೇ  ಶಾಲೆಗೆ ಸೇರಿಸಲಾಯಿತು. ಆದರೆ ಟೈಫಾಯಿಡ್ ಇಡೀ ಶಾಲೆಯನ್ನು ಆಕ್ರಮಿಸಿ ಹಿರಿಯ ಇಬ್ಬರು ಅಕ್ಕಂದಿರನ್ನು ಎಮಿಲಿ ಕಳೆದುಕೊಳ್ಳುವಂತಾಯಿತು. ಉಳಿದಿಬ್ಬರು ಮಕ್ಕಳನ್ನು ತಂದೆ ತಕ್ಷಣ ಆ ಶಾಲೆಯಿಂದ ಮನೆಗೆ ಕರೆದುಕೊಂಡು ಬಂದರಾದರೂ ಆ ಶಾಲೆಯಲ್ಲಿ ಅನುಭವಿಸಿದ್ದ ನಿಂದನೆ ಅವಮಾನಗಳು ಪುಟ್ಟ ಎಮಿಲಿಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿತು. ಅದರ ನಂತರ ತಂದೆ ಪ್ಯಾಟ್ರಿಕ್ ತನ್ನ ಉಳಿದ ಮೂವರ ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿಗೆ ಮನೆಯಲ್ಲಿಯೇ ಶಿಕ್ಷಣ ನೀಡಲಾರಂಭಿಸಿದರು. ಹೀಗೆ ಪೂರ್ತಿಯಾಗಿ ಮನೆಯವಾತಾವರಣಕ್ಕೆ ಅಂಟಿಕೊಂಡ ಎಮಿಲಿ ತುಂಬ ನಾಚಿಕೆಯ ಸ್ವಭಾವದವಳಾಗಿದ್ದರೂ ತನ್ನ ಸಹೋದರಿಯರು ಹಾಗೂ ಸಹೋದರನ ಬಳಿ ತೀರಾ ಆಪ್ತವಾಗಿದ್ದಳು. ಸದಾ ಬೀದಿ ನಾಯಿಗಳನ್ನು ಪಾಲಿಸುತ್ತ ಪ್ರಾಣಿಪ್ರೇಮಿ ಎಂಬ ಅಡ್ಡ ಹೆಸರಿನಿಂದ ಕರೆಯಿಸಿಕೊಳ್ಳುತ್ತ ಖುಷಿಯಾಗಿದ್ದಳು. ಔಪಚಾರಿಕ ಶಿಕ್ಷಣವಿಲ್ಲದಿದ್ದಾಗಿಯೂ ಎಮಿಲಿ ಹಾಗೂ ಅವಳ ಒಡಹುಟ್ಟಿದವರು ವಾಲ್ಟರ್ ಸ್ಕಾಟ್, ಬೈರನ್, ಶೆಲ್ಲಿ ಬ್ಲ್ಯಾಕ್ವುಡ್ ಮುಂತಾದ ಒಳ್ಳೆಯ ಸಾಹಿತಿಗಳ  ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ತರಿಸಿಕೊಂಡು ಓದುತ್ತಿದ್ದರು.
ಎಮಿಲಿಯ ಸಾಹಿತ್ಯ ಪಯಣವು ಅವಳ ಸಹೋದರ ಬ್ರಾನ್‌ವೆಲ್‌ಗೆ ಉಡುಗೊರೆಯಾಗಿ ಬಂದ ಸೈನಿಕರ ಗೊಂಬೆಗಳಿರುವ ಪೆಟ್ಟಿಗೆಗಳೊಂದಿಗೆ ಪ್ರಾರಂಭವಾಯಿತು. ಸಾಕಷ್ಟು ಕಲ್ಪನೆಗಳಿಂದ ಕೂಡಿದ ಗೊಂಡಾಲ್ ಕಥೆಗಳನ್ನು ಎಮಿಲಿ ಹಾಗೂ ಅವಳ ಸಹೋದರಿ ಆನ್ನಿ ಸೇರಿ ಬರೆಯಲು ಪ್ರಾರಂಭಿಸಿದರು. ಆದರೆ ಆ ಸರಣಿಯ ಕಥೆಗಳು ಹಾಗೂ ಕವನಗಳನ್ನು ಜೋಪಾನವಾಗಿಟ್ಟುಕೊಳ್ಳದೆ ಹೋಗಿದ್ದರಿಂದ ಅವು ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಲಭ್ಯವಿಲ್ಲ.
ಒಂದು ಶಾಲೆಯನ್ನು ಪ್ರಾರಂಭಿಸುವಷ್ಟು ಶಿಕ್ಷಣವನ್ನಾದರೂ ಪಡೆಯಬೇಕೆಂದು ಯೋಚಿಸಿದ್ದ ಎಮಿಲಿ ತನ್ನ ಹದಿನೇಳನೆ ವಯಸ್ಸಿನಲ್ಲಿ ತನ್ನ ಅಕ್ಕ ಷರ್ಲೆಟ್ ಶಿಕ್ಷಕಿಯಾಗಿದ್ದ ಶಾಲೆಗೆ ಸೇರಿದ್ದಳಾದರೂ ಆಕೆಗೆ ಅಲ್ಲಿ ಉಳಿಯಲಾಗಲಿಲ್ಲ. 'ಅತಿಯಾದ ಸ್ವಾತಂತ್ರ್ಯಪ್ರೇಮಿಯಾಗಿದ್ದ ಎಮಿಲಿಗೆ ಶಾಲೆಯ ಕಟ್ಟುನಿಟ್ಟಾದ ದಿನಚರಿಯಿಂದ ಉಸಿರುಕಟ್ಟಿದಂತಾಯ್ತು' ಎಂದು ಅಕ್ಕ ಷಾರ್ಲೆಟ್ ಹೇಳುತ್ತಾಳೆ. ತನ್ನ ಇಪ್ಪತ್ತನೆಯ ವಯಸ್ಸಿಗೆ ಶಾಲೆಯೊಂದನ್ನು ತೆರೆದಳಾದರೂ ಹದಿನೇಳು ತಾಸುಗಳ  ಅತಿಯಾದ ಕೆಲಸದ ಒತ್ತಡದಿಂದ ಅದನ್ನು ಮುಚ್ಚಬೇಕಾಯಿತು. ನಂತರ ಬೆಲ್ಜಿಯಮ್‌ನ ಬ್ರುಸ್ಸೆಲ್ಸ್‌ಗೆ ಹೋದ ಅಕ್ಕತಂಗಿಯರು ಅಲ್ಲಿ ಹೆಣ್ಣುಮಕ್ಕಳ ಶಾಲೆಯೊಂದಕ್ಕೆ ಸೇರಿಕೊಂಡು ಫ್ರೆಂಚ್ ಹಾಗೂ ಜರ್ಮನ್ ಭಾಷೆಯನ್ನು ಅತ್ಯಂತ ಶೃದ್ಧೆಯಿಂದ ಕಲಿತುಕೊಂಡರು. ಅದೆ ಸಮಯದಲ್ಲಿ ಎಮಿಲಿ ಫ್ರೆಂಚ್ ಭಾಷೆಯಲ್ಲಿ ರಚಿಸಿದ ಏಳು ಲೇಖನಗಳು ದೊರಕಿವೆ.
       ಚಿಕ್ಕಮ್ಮನ ನಿಧನದಿಂದಾಗಿ ಹಾವರ್ಥಗೆ ಹಿಂದಿರುಗಿದ ಎಮಿಲಿ ೧೯೮೪ರಲ್ಲಿ ಅಲ್ಲಿಯವರೆಗೆ ತಾನು ಬರೆದಿದ್ದ ಕವನಗಳನ್ನೆಲ್ಲ ಪುನಃ ಎರಡು ನೋಟ್‌ಬುಕ್‌ಗಳಲ್ಲಿ ಬರೆದು ಒಂದಕ್ಕೆ ಗೊಂಡಾಲ್ ಕವನಗಳು' ಎಂದು ಹೆಸರಿಸಿದಳು. ಅಕ್ಕ ಷಾರ್ಲೆಟ್ ಈ ನೋಟ್‌ಬುಕ್ ಓದಿ ಅದನ್ನು ಪ್ರಕಟಿಸಲು ಹೇಳಿದಾಗ ತನ್ನ ವೈಯಕ್ತಿಕತೆಗೆ ಧಕ್ಕೆ ಬಂದಿತೆಂದು ಅವಳು ಅದನ್ನು ವಿರೋಧಿಸಿದಳು. ಅದೇ ಸಮಯದಲ್ಲಿ ತಂಗಿ ಆನ್ನಿ ಕೂಡ ಗೊಂಡಾಲ್ ಕುರಿತು ಕಥೆ ಕವಿತೆಗಳನ್ನು ಬರೆದಿದ್ದು ತಿಳಿದು ತಮ್ಮ ಕಥೆ ಕವಿತೆಗಳನ್ನು ಪರಸ್ಪರ ಓದಿ ಅದನ್ನು ಪ್ರಕಟಿಸಲು ಒಪ್ಪಿಕೊಂಡರು. ೧೮೪೬ರಲ್ಲಿ ಷಾರ್ಲೆಟ್, ಎಮಿಲಿ ಹಾಗೂ ಆನ್ನಿ ತಮ್ಮ ಕವನಗಳನ್ನು ಕರಿಯರ್ ಬೆಲ್ (ಷಾರ್ಲೆಟ್), ಎಲ್ಲಿಸ್ ಬೆಲ್ (ಎಮಿಲಿ) ಹಾಗೂ ಆಕ್ಷನ್ ಬೆಲ್ (ಆನ್ನಿ) ಹೆಸರಿನಿಂದ ಪ್ರಕಟಿಸಿದರು. ಕ್ರಿಶ್ಚಿಯನ್ ಹೆಸರಿನಿಂದ ಹಾಗೂ ಪುರುಷರ ಹೆಸರಿನಿಂದ ಕೆರೆಯಿಸಿಕೊಳ್ಳುವುದು ಒಳ್ಳೆಯದು ಎಂಬ ನಂಬಿಕೆ ಇವರಲ್ಲಿತ್ತು. ಆ ಕವನ ಸಂಕಲನದಲ್ಲಿ ಷಾರ್ಲೆಟ್‌ನ ಹತ್ತೊಂಬತ್ತು ಕವನಗಳು ಹಾಗೂ ಎಮಿಲಿ ಮತ್ತು ಆನ್ನಿಯ ತಲಾ ಇಪ್ಪತ್ತೊಂದು ಕವನಗಳಿದ್ದವು. ಸಂಕಲನ ಪ್ರಕಟವಾದ ಕೆಲವು ತಿಂಗಳುಗಳಾದರೂ ಕೇವಲ ಎರಡು ಸಂಕಲನಗಳು ಮಾತ್ರ ಮಾರಾಟವಾಗಿದ್ದಾಗಿ ತಿಳಿದಾಗಲೂ ಅವರು ಬೇಸರಿಸಿಕೊಳ್ಳಲಿಲ್ಲ. ಯಾಕೆಂದರೆ ಅದರಲ್ಲಿ ಒಬ್ಬರು ಓದುಗರು ಇವರ ಆಟೋಗ್ರಾಫ್ ಕೇಳುವಷ್ಟು ಈ ಕವನಗಳಿಂದ ಪ್ರಭಾವಿತರಾಗಿದ್ದರು.  ಆದರೆ ನಂತರ ಬಂದ ವಿಮಶಗಳಲ್ಲಿ ಎಲ್ಲಿಸ್ ಬೆಲ್ ಅಂದರೆ ಎಮಿಲಿಯ ಕವನಗಳ ಬಗ್ಗೆ ಅತ್ಯುತಮ ಮಾತುಗಳಿದ್ದವು.


        ೧೮೪೭ರಲ್ಲಿ ಲಂಡನ್‌ನಲ್ಲಿ  ವುದರಿಂಗ್ ಹೈಟ್ಸ್ ಪ್ರಕಟವಾಯಿತು ಮೂರು ಅಧ್ಯಾಯಗಳಿರುವ ಈ ಕಾದಂಬರಿಯ ಮೊದಲೆರಡು ಅಧ್ಯಾಯಗಳನ್ನು ಎಮಿಲಿಯೂ, ಮತ್ತೊಂದನ್ನು ಆನ್ನಿಯೂ ಬರೆದಿರಬಹುದೆಂದು ತಿಳಿಯಲಾಗಿದೆ. ೧೮೫೦ರವರೆಗೂ ತಮ್ಮ ನಿಜವಾದ ಹೆಸರನ್ನು ಬಚ್ಚಿಟ್ಟುಕೊಂಡಿದ್ದರಿಂದ ಈ ಕಾದಂಬರಿ ಕೂಡ ಎಲ್ಲಿಸ್ ಹಾಗೂ ಆಕ್ಷನ್ ಬೆಲ್ಲಿ ಹೆಸರಿನಲ್ಲಿಯೇ ಇದೆ. ಆದರೆ ಈ ಕಾದಂಬರಿಯ ವಿನ್ಯಾಸದಲ್ಲಿದ ಹೊಸತನ ವಿಮರ್ಶಕರನ್ನು ಬಹುವಾಗಿ ಸೆಳೆಯಿತು.
೧೯ ಡಿಸೆಂಬರ್ ೧೮೪೮ರಲ್ಲಿ ತೀವ್ರ ಅನಾರೋಗ್ಯದಿಂದ ತೀರಿಕೊಂಡ ಎಮಿಲಿ ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಬಲವಾಗಿ ಪ್ರತಿಪಾದಿಸಿದ ಮಹಿಳೆಯ ದನಿಯಾಗಿ ಸದಾ ನೆನಪಿನಲ್ಲಿರುತ್ತಾಳ. ಸ್ವತಃ ತನ್ನ ಅಕ್ಕ ಷಾರ್ಲೆಟ್ ತನ್ನ ಕವನಗಳ ಕಟ್ಟನ್ನು ನೋಡಿದ್ದಕ್ಕಾಗಿ ಬೇಸರಗೊಂಡ ಎಮಿಲಿ ಬರೆದ ನೋ ಕೌವರ್ಡ ಸೋಲ್ ಈಸ್ ಮೈನ್' ಸ್ತ್ರೀಯರ ಸ್ವಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಕವನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
ತನ್ನ ಕುಟುಂಬದ ಸದಸ್ಯರ ಹೊರತಾಗಿ ಹೊರಗಿನ ಯಾವ ಸ್ನೇಹಿತರನ್ನು ಹೊಂದಿರದ ಎಮಿಲಿಗೆ ಅವಳ ತಂಗಿ ಆನ್ನಿ ಮಾತ್ರ ಅತ್ಯುತ್ತಮ ಸ್ನೇಹಿತೆಯಾಗಿದ್ದಳು. ಹೀಗಾಗಿ ಷಾರ್ಲೆಟ್ ಅವಳ ಕುರಿತು ನೀಡಿದ ಮಾಹಿತಿಗಳೆಷ್ಟೋ ಅಷ್ಟೇ ಈಗ ಪ್ರಪಂಚಕ್ಕೆ ಗೊತ್ತಿರುವ ಅಧಿಕೃತ ಮಾಹಿತಿ.
ಲೋಕಧ್ವನಿ -೪                    ಶ್ರೀದೇವಿ ಕೆರೆಮನೆ


lokadhwani - http://lokadhwani.com/ArticlePage/APpage.php?edn=Main&articleid=LOKWNI_MAI_20220527_4_7

Thursday, 19 May 2022

ಕಷ್ಟಗಳ ಸರಮಾಲೆಯಲ್ಲಿ ಬೆಳೆದ ಸ್ಪೂರ್ತಿ ಎಡೋರಾ ಆಲಿಸ್ ವೆಲ್ಟಿ


ಹಲವು ಮೊದಲುಗಳ ಎಡೋರಾ ಆಲಿಸ್ ವೆಲ್ಟಿ


              ಅಮೇರಿಕಾದ ಪ್ರಸಿದ್ದ ಕಥೆಗಾರ್ತಿ ಹಾಗೂ ಕಾದಂಬರಿಕಾರ್ತಿಯಾದ ಎಡೋರಾ ಆಲಿಸ್ ವೆಲ್ಟಿ ಜನಿಸಿದ್ದು ಮಿಸ್ಸಿಸಿಪ್ಪಿಯ ಕಾಕಸನ್‌ನಲ್ಲಿ ೧೩ ಎಪ್ರಿಲ್ ೧೯೦೯ ರಂದು. ದಕ್ಷಿಣ ಅಮೇರಿಕಾದ ಕುರಿತು ಗಾಢ ಅನುಭವಗಳನ್ನು ದಾಖಲಿಸಿದ ಎಡೋರಾ ಒಳ್ಳೆಯ ಫೋಟೊಗ್ರಾಫರ್ ಎಂದೂ ಹೆಸರು ಪಡೆದವರು. ತಂದೆ ಕ್ರಿಶ್ಚಿಯನ್ ವೆಬ್ ವೆಲ್ಟಿ ವಿಮಾ ಕಾರ್‍ಯನಿರ್ವಾಹಕ ಹಾಗೂ ಆಧುನಿಕ ತಂತ್ರಜ್ಞಾನ, ಯಂತ್ರಗಳು ಹಾಗೂ ಗ್ಯಾಜೆಟ್‌ಗಳ ಬಗ್ಗೆ ಅಪಾರ ಕುತೂಹಲವಿರುವ ವ್ಯಕಿ ಜೊತೆಗೆ ಒಳ್ಳೆಯ ಛಾಯಾಚಿತ್ರಕಾರ ಕೂಡ.  ತಾಯಿ ಮೇರಿ ಚೆಸ್ಟಿನಾ ವೆಲ್ಟಿ  'ತಮ್ಮ ಮನೆಯ ಯಾವುದೆ ಕೊಠಡಿ ದಿನದ ಯಾವುದೇ ಸಮಯದಲ್ಲಾದರೂ ಓದಲು ತೆರೆದುಕೊಳ್ಳುವಂತಿರಬೇಕು' ಎಂದು ನಂಬಿದ್ದ ಶಿಕ್ಷಕಿಯಾಗಿದ್ದರಿಂದ ಚಿಕ್ಕಂದಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡ ಎಡೋರಾ ತಂದೆಯ ಯಂತ್ರ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ರೂಪಕವಾಗಿಟ್ಟುಕೊಂಡು ಬರೆದ ಕಥೆಗಳು ಹೊಸ ಜಗತ್ತಿನ ತಲ್ಲಣಗಳಿಗೆ ಉತ್ತರದಂತಿವೆ.
                  ಜಾಕ್ಸನ್ ಹಾಗೂ ಮಿಸ್ಸಿಸಿಪ್ಪಿಯಲ್ಲಿ ವಿದ್ಯಾಭ್ಯಾಸ ಮಾಡಿದ ಎಡೋರಾ ವಿಸ್ಕೋನ್‌ಸಿನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ತಂದೆಯ ಸಲಹೆಯಂತೆ ಜಾಹಿರಾತು ವಿಷಯದಲ್ಲಿ ಕೋಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದುಕೊಂಡರು.  ೧೧೧೯, ಫೈನ್‌ಹರ್ಸ್ಟ್ ಬೀದಿಯಲ್ಲಿ  ಅರಮನೆಯಂತೆ ವಿನ್ಯಾಸಗೊಳಿಸಿದ ಮನೆಗೆ ತನ್ನ ವಾಸವನ್ನು ಬದಲಿಸಿದ ನಂತರ ಅದು ಅವರ ಖಾಯಂ ವಿಳಾಸವಾಗಿತ್ತು.
   ನ್ಯೂಯಾರ್ಕನಲ್ಲಿ ಕೆಲಸ ಹುಡುಕಲು ಪ್ರಯತ್ನಿಸಿದರೂ ೧೯೩೧ರಲ್ಲಿ ತಂದೆಯ ಅನಿರೀಕ್ಷಿತ ಸಾವಿನಿಂದಾಗಿ ಜಾಕ್ಸನ್‌ಗೆ ಹಿಂದುರಿಗಿದ ಎಡೋರಾ ಅಲ್ಲಿನ ರೇಡಿಯೋ ಸ್ಟೇಶನ್‌ನಲ್ಲಿ ಕೆಲಸ ಪ್ರಾರಂಭಿಸಿದರು. ಜೊತೆಗೆ ಸ್ಥಳಿಯ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯಲಾರಂಭಿಸಿದರು. ವರ್ಕ್ಸ ಪ್ರೊಗ್ರೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಪ್ರಚಾರಕಿಯಾಗಿ ಕೆಲಸಕ್ಕೆ ಸೇರಿದ್ದರಿಂದ ಆ ಕಂಪನಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳನ್ನು ಸಂಗ್ರಹಿಸಬೇಕಾಯಿತು, ಕೆಲವು ಮುಖ್ಯವಾದ ಜನರ ಸಂದರ್ಶನ ಮಾಡಬೇಕಾಗಿತ್ತು, ಫೋಟೋಗಳನ್ನೂ ತೆಗೆದುಕೊಳ್ಳಬೇಕಾಗಿತ್ತು. ಹೀಗಾಗಿ ದಕ್ಷಿಣ ಭಾಗದ ಸಮಗ್ರ ಪರಿಚಯ ಹಾಗೂ ಚಿತ್ರಣ ಅವರಿಗೆ ದೊರಕಿತ್ತು. ಇವೆಲ್ಲವೂ ಅವರ ಕಥೆಗಳಲ್ಲಿ ಚಿತ್ರಿತವಾಗಿವೆ. ಅದೇ ಸಮಯದಲ್ಲಿ ತನ್ನ ಸಮಕಾಲೀನ ಬರಹಗಾರರ ಕೂಟವನ್ನೂ ಆಯೋಜಿಸುತ್ತಿದ್ದಳು. 'ರಾತ್ರಿ ಅರಳುವ ಪಾಪಾಸುಕಳ್ಳಿ' ಎಂದು ಆಕೆ ಆ ಕೂಟವನ್ನು ಕರೆಯುತ್ತಿದ್ದಳು. ಮೂರು ವರ್ಷಗಳ ನಂತರ ಬರವಣಿಗೆಯಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಆಕೆ ತನ್ನ ಕೆಲಸವನ್ನು ಬಿಟ್ಟರು.  
  ೧೯೩೯ರಲ್ಲಿ ಅವರ ಮೊದಲ ಕಥೆ 'ದಿ ಡೆತ್ ಆಫ್ ಅ ಟ್ರಾವೆಲಿಂಗ್ ಸೇಲ್ಸ್‌ಮನ್' ಪ್ರಕಟವಾಯಿತು. ನಂತರ ಹಲವಾರು ಪತ್ರಿಕೆಗಳಲ್ಲಿ ಅವರ ಕಥೆಗಳು ಪ್ರಕಟಗೊಳ್ಳುತ್ತಲೆ ಹೋದವು. ಅವರ ಮೊದಲ ಕಥಾ ಸಂಕಲನ 'ಎ ಕರ್ಟನ್ ಆಫ್ ಗ್ರೀನ್' ಪ್ರಕಟವಾಗುವ ಸಮಯಕ್ಕಾಗಲೇ ದಕ್ಷಿಣದ ಪ್ರಭಾವಶಾಲಿ ಕಥೆಗಾರ್ತಿ ಎಂದು ಗುರುತಿಸಲ್ಪಟ್ಟಿದ್ದರು. ತನ್ನ ಪುಸ್ತಕಕ್ಕಾಗಿ ಪಡೆದ ಫೆಲೋಶಿಪ್‌ನಿಂದಾಗಿ ಇಂಗ್ಲೆಂಡ್, ಪ್ರಾನ್ಸ್, ಈರ್ಲಾಂಡ್, ಜರ್ಮನಿ ಮುಂತಾದ ದೇಶಗಳಿಗೆ ಪ್ರವಾಸಕ್ಕೆ ಹೋದರು. ಕಾಂಬ್ರಿಜ್ ಹಾಗೂ ಆಕ್ಸಫರ್ಡ ವಿಶ್ವವಿದ್ಯಾಲಯಗಳಲ್ಲಿ ಕೆಲಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದರು. ಪೀಟರ್‌ಹೌಸ್ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಅನುಮತಿ ಪಡೆದ ಮೊಟ್ಟಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. ಈ ನಡುವೆ ಅವರ ಹಲವಾರು ಪುಸ್ತಕಗಳು ಪ್ರಕಟಗೊಂಡವು. ೧೯೭೧ರಲ್ಲಿ ಅವರ ಫೋಟೋಗಳ ಸಂಗ್ರಹವನ್ನು  'ಒನ್ ಟೈಮ್, ಒನ್ ಪ್ಲೇಸ್' ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು.  ಹಾವರ್ಡ ವಿಶ್ವವಿದ್ಯಾಲಯದಲ್ಲೂ ಉಪನ್ಯಾಸ ನೀಡಿದ ಹೆಗ್ಗಳಿಕೆ ಇವರದ್ದು.  
ಅಮೇರಿಕಾದ ದಕ್ಷಿಣ ಭಾಗದ ನುಡಿಗಟ್ಟುಗಳನ್ನು ತನ್ನ ಕಾದಂಬರಿ ಹಾಗೂ ಕಥೆಗಳಲ್ಲಿ ಯಥೇಶ್ಚವಾಗಿ ಬಳಸಿರುವ ಎಡೋರಾ ದಕ್ಷಿಣ ಭಾಗದ ರೂಪಕಗಳು, ಋಊಢಿಗತ ಆಚರಣೆಗಳು, ಆಚಾರ ವಿಚಾರಗಳು.  ಕೌಟುಂಬಿಕ ಸಂಬಂಧಗಳಲ್ಲಿರುವ ದ್ವೇಷ- ಅಸೂಯೆ ಹಾಗೂ ಪ್ರೀತಿಯನ್ನು ಯಥಾವತ್ತಾಗಿ ಚಿತ್ರಿಸಿದರು. ಪ್ರಮುಖ ಕಥೆಗಾರ್ತಿ ಎಂದು ಗುರುತಿಸಲ್ಪಟ್ಟರು.   ೧೯೪೨ರಲ್ಲಿ ಪ್ರಕಟಗೊಂಡ ಅವರ ಕಾದಂಬರಿ ದಿ ರಾಬರ್ ಬ್ರೈಡ್‌ಗ್ರೂಮ್ ಯಕ್ಷಿಣಿ ಕಥೆಗಳಂತೆ ತೋರುತ್ತಿದ್ದು ಅಮೇರಿಕಾದ ದಕ್ಷಿಣ ಭಾಗದ ಮೊಟ್ಟಮೊದಲ ಫೇರಿಟೇಲ್ ಬರವಣಿಗೆ ಎಂದು ಗುರುತಿಸಲ್ಪಟ್ಟಿದ್ದರೂ ಆಳದಲ್ಲಿ ಅದೂ ಕೂಡ ಮನುಷ್ಯ ಸಂಬಂಧಗಳ ಕುರಿತು ಮಾತನಾಡುತ್ತದೆ.                                                                                                                                                          
ಇವರ 'ಆಪ್ಟಿಮಿಸ್ಟ್ಸ್ ಡಾಟರ್' ( ಆಶಾವಾದಿಯ ಮಗಳು) ಕಾದಂಬರಿಗೆ ೧೯೭೩ರಲ್ಲಿ ಖ್ಯಾತ ಪುಲಿಟ್ಚರ್ ಪ್ರಶಸ್ತಿ ಲಭಿಸಿದೆ. ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಪ್ರೀಡಮ್ ಹಾಗೂ ಆರ್ಡರ್ ಆಫ್ ದಿ ಸೌತ್, ಓ ಹೆನ್ರಿ ಅವಾರ್ಡನಲ್ಲಿ ಎರಡನೆ ಸ್ಥಾನ ಹೀಗೆ ಹಲವಾರು ಖ್ಯಾತ ಪ್ರಶಸ್ತಿಗಳು ಇವರ ಬರವಣಿಗೆಯನ್ನು ಅರಸಿ ಬಂದಿವೆ. ೧೯೮೩ರಲ್ಲಿ ಹಾವರ್ಡ ವಿಶ್ವವಿದ್ಯಾಲಯವು ಅವರ ಭಾಷಣಗಳ ಸರಣಿಗಳನ್ನು ಸೇರಿಸಿ 'ಒನ್ ರೈಟರ್‍ಸ್ ಬಿಗಿನಿಂಗ್' ಎಂಬ ಹೆಸರಿನಲ್ಲಿ ಪ್ರಕಟಿಸಿದ ಪುಸ್ತಕಕ್ಕೆ ೧೯೮೪ರಲ್ಲಿ ನಾನ್‌ಫಿಕ್ಷನ್ ವಿಭಾಗದಲ್ಲಿ ನ್ಯಾಷನಲ್ ಬುಕ್ ಅವಾರ್ಡ' ಲಭಿಸಿತು. ೧೯೯೨ರಲ್ಲಿ ಜೀವಮಾನದ ಸಣ್ಣಕಥೆಗಳ ಬರವಣಿಗೆಗಾಗಿ ರಿಯಾ ಅವಾರ್ಡ ದೊರಕಿದೆ. ಲೈಬ್ರರಿ ಆಫ್ ಅಮೇರಿಕಾವು ಬದುಕಿರುವ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದವರಲ್ಲಿ ಮೊದಲಿಗಳು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಮಿಸ್ಸಿಸಿಪ್ಪಿಯ  ಜಾಕ್ಸನ್‌ನಲ್ಲಿರುವ ಇವರ ಮನೆಯನ್ನು ರಾಷ್ಟೀಯ ಐತಿಹಾಸಿಕ ಸ್ಥಳ ಎಂದು ಗುರುತಿಸಲಾಗಿದ್ದು ಸಾರ್ವಜನಿಕಋ ಮುಕ್ತ ಪ್ರವೇಶಕ್ಕೆ ಚಿಲ್ಲಿನ ಸರಕಾರ ಅನುವು ಮಾಡಿಕೊಟ್ಟಿದೆ.


ಲೋಕಧ್ವನಿ-೩                                     

Saturday, 16 April 2022

ಆಹಾರಕ್ಕೆ ಅವಹೇಳನವೇಕೆ?



ಆಹಾರಕ್ಕೆ ಅವಹೇಳನವೇಕೆ?

(ಮುಖಗಳು ಅಂಕಣದಿಂದ - https://unikannada.com/why-insult-food/
ಶ್ರೀದೇವಿ ಕೆರೆಮನೆ ಅವರು ಬರೆಯುವ "ಮುಖಗಳು" ಅಂಕಣದಿಂದ... 
ಬೋಟಿಗೆ ಹೋಗಿ ಮೀನು ಹಿಡಿದುಕೊಂಡು ಬರುವ ಮೀನುಗಾರ ಗಂಡಸರಿಗೂ ತಮ್ಮ ಕುಟುಂಬಕ್ಕೊಂದು ಆರ್ಥಿಕ ನೆಲೆ ಒದಗಿಸುತ್ತಿರುವ, ತಮ್ಮ ಉದ್ಯೋಗವೇ ಆಗಿರುವ ಮೀನುಗಾರಿಕೆಯ ಕಸುಬು ಕೀಳು ಎಂಬಂತೆ … ಪೂರ್ಣ ಓದಿಗೆ ಲಿಂಕ್ ಕ್ಲಿಕ್ ಮಾಡಿ 
https://unikannada.com/why-insult-food/)




                                ಟೀಚರ ಊಟ ಆಯ್ತಾ? ಏನು ಸಾರು ಮಧ್ಯಾಹ್ನ ಊಟದ ನಂತg ಶಾಲೆಯಲ್ಲಿ ಹುಡುಗಿಯೊಬ್ಬಳು ಕೇಳಿದ ಪ್ರಶ್ನೆ ಇದು. ನೀವಂತೂ ಮೀನು ತಂದು ಕೊಡೋದಿಲ್ಲ ಹೀಗಾಗಿ ನಾನೇ ಮೀನು ಸಾರು ಮಾಡಿಕೊಂಡು ಬಂದಿದ್ದೇನೆ. ನಾನು ತಮಾಷೆ ಮಾಡಿದೆ. ಇವತ್ತೂ ಮೀನು ತಿಂತೀರಾ ಟೀಚರ್? ನಾನೇನೋ ಕೊಲೆ ಮಾಡ್ತಿದ್ದೀನಿ ಅನ್ನುವ ಹಾಗೆ ಪಕ್ಕದ ಹುಡುಗಿ ದೊಡ್ಡ ದೊಡ್ಡ ಕಣ್ಣು ತೆರೆದು ಕೇಳುವಾಗ ನನಗೆ ಅಚ್ಚರಿ. ಯಾಕೆ? ಇವತ್ತು ಮೀನು ತಿನ್ನಬಾರದೆಂಬ ಕಾನೂನು ರಚಿಸಿದ್ದಾರಾ? ನನಗೆ ಗೊತ್ತೇ ಆಗಲಿಲ್ವಲ್ಲ? ನಾನು ಮತ್ತಿಷ್ಟು ತಮಾಷೆ ಮಾಡಿದೆ. ಟೀಚರ್ ಇವತ್ತು ಸಂಕಷ್ಟಿ. ಇವತ್ತು ಮೀನು ತಿನ್ನಬಾರದು. ಮೊದಲು ಪ್ರಶ್ನೆ ಕೇಳಿದವಳು ನನಗೆ ಏನನ್ನೋ ಹೇಳಿಕೊಡುವಂತೆ ಸಮಾಧಾನಿಸಿ ಹೇಳಿದಳು. ಸಂಕಷ್ಟಿ ದಿವಸ ಮೀನು ತನ್ನನ್ನು ತಿನ್ನ ಬೇಡ ಅಂತಾ ನಿಮಗೇನಾದರೂ ಹೇಳಿದೆಯಾ? ನಾನು ಪುನಃ ಪ್ರಶ್ನಿಸಿದೆ. ಆಕೆ ಮಾತನಾಡಲಿಲ್ಲ. ಉಳಿದ ಮಕ್ಕಳೂ ಮುಖ ಮುಖ ನೋಡಿಕೊಂಡು ಸುಮ್ಮನಾದವು. 'ಈ ಟೀಚರ್‌ಗೆ ಏನು ಹೇಳಿದರೂ ಅಷ್ಟೆ' ಎಂಬ ಮುಖಭಾವದಲ್ಲಿ.


     ನಮ್ಮ ಶಾಲೆಯ ಸುತ್ತಮುತ್ತ ವಾಸಿಸುವವರೆಲ್ಲ ಮೀನುಗಾರರೇ. ಏಷ್ಯಾದ ಅತಿ ದೊಡ್ಡ ನೌಕಾನೆಲೆ ಎಂಬ ಹೆಗ್ಗಳಿಕೆಯನ್ನಿಟ್ಟುಕೊಂಡ ಸೀ ಬರ್ಡ ನಿರಾಶ್ರಿತರ ಏರಿಯಾದಿಂದ ಬಂದಂತವರು. ಇವರೆಲ್ಲ ಮೀನುಗಾರ ಜನಾಂಗದವರೇ. ಒಂದಿಷ್ಟು ಒಳಜಾತಿಗಳಿರಬಹುದು. ಹರಿಕಂತ್ರ, ಅಂಬಿಗ, ಖಾರ್ವಿ, ಗಾಬಿತ್ ಮುಂತಾದ ಮೀನುಗಾರ ಜನಾಂಗಗಳ ಮೀನುಗಾರರನ್ನು ಅವರ ಊರುUಳಲ್ಲಿ ಸೀ ಬರ್ಡ ನೌಕಾ ನೆಲೆಯನ್ನು ಸ್ಥಾಪಿಸುವುದಕ್ಕಾಗಿ ವಶಪಡಿಸಿಕೊಂಡ ನಂತರ ಅವರನ್ನೆಲ್ಲ ಅಂಕೋಲಾ ಹಾಗೂ ಕಾರವಾರ ತಾಲೂಕಿನ ನಾಲ್ಕಾರು ಕಡೆ ಹರಿದು ಹಂಚಲಾಯಿತು. ಹಾಗೆ ಒಂದಿಷ್ಟು ಜನ ಬಂದಿದ್ದು ಈ ಚಿತ್ತಾಕುಲ ಸೀ ಬರ್ಡ ನಿರಾಶ್ರಿತರ ಕಾಲೋನಿಗಳಿಗೆ. ಹೀಗಾಗಿ ಎಲ್ಲವೂ ಮೀನುಗಾರ ಕುಟುಂಬಗಳೇ. ಆದರೆ ಈ ಮೀನುಗಾರರಲ್ಲಿ ಇತ್ತೀಚೆಗೆ ಇವತ್ತು ಸೋಮವಾರ ಮೀನು ತಿನ್ನಬಾರದು, ಶುಕ್ರವಾರ ಮೀನು ತಿನ್ನುವುದು ನಿಶಿದ್ಧ, ಶನಿವಾರ ತಿಂದರೆ ತಿರುಪತಿ ತಿಮ್ಮಪ್ಪನಿಗೆ ಸಿಟ್ಟು ಬರುತ್ತದೆ ಎಂಬೆಲ್ಲ ನಂಬಿಕೆಗಳು ಬಲಿಯುತ್ತಿವೆ. ದಿನದಿಂದ ದಿನಕ್ಕೆ ಈ ನಂಬಿಕೆಗಳು ವ್ಯಾಪಕವಾಗುತ್ತ ಸಾಗಿದೆ.
      ಸೋಮವಾರ ಅದೇನೋ ಸಮುದ್ರ ಹುಟ್ಟಿದ ದಿನ ಎಂಬ ನಂಬಿಕೆ ಮೀನುಗಾರರಲ್ಲಿದೆ. ಹೀಗಾಗಿ ಆ ದಿನ ಮೀನು ಹಿಡಿಯಲು ಹೋಗುವುದೂ ಕಡಿಮೆಯೇ. ಮೀನುಗಾರರಲ್ಲೇ ಕಟ್ಟಾ ಸಂಪ್ರದಾಯವಾದಿಗಳು ಸೋಮವಾರ ಕಡಲ ದೇವತೆಯ ನಂಬಿಕೆಯಿಂದ ಮೀನು ತಿತ್ತದಿರುವುದು ಲಾಗಾಯಿತ್ತಿನಿಂದಲೂ ನಡೆದುಕೊಂಡು ಬಂದಿದೆ. ಹಾಗಂತ ಈ ಸೋಮವಾgವನ್ನು ಖಂಡಿತವಾಗಿ ಯಾವುದೇ ಶಿಷ್ಟ ದೇವತೆಗಳ ಹೆಸರಿನಲ್ಲ ಮೀನನ್ನು ವರ್ಜಿಸಿದ್ದಲ್ಲ. ಅದೊಂದು ಕಡಲಿಗೆ ಕಡಲ ಮಕ್ಕಳ ಗೌರವ ಎಂಬಂತೆ ನಡೆದುಕೊಂಡು ಬಂದಿದ್ದು.
                  ಬೋಟಿಗೆ ಹೋಗಿ ಮೀನು ಹಿಡಿದುಕೊಂಡು ಬರು ಮೀನುಗಾರ ಗಂಡಸರಿಗೂ ತಮ್ಮ ಕುಟುಂಬಕ್ಕೊಂದು ಆರ್ಥಿಕ ನೆಲೆ ಒದಗಿಸುತ್ತಿರುವ, ತಮ್ಮ ಉದ್ಯೋಗವೇ ಆಗಿರುವ ಮೀನುಗಾರಿಕೆಯ ಕಸುಬು ಕೀಳು ಎಂಬಂತೆ ಭಾಸವಾಗುತ್ತಿದೆ. ನಾಮಂತೂ ಬರೀ ಮೀನ್ ಹಿಡ್ಕುಂಡೇ ಜೀವ್ನ ಮಾಡಾಯ್ತ. ನಮ್ಮ ಮಕ್ಳಿಗೇ ಈ ಧಂದಿ ಬ್ಯಾಡಾ.. ಅವ್ರಿಗೆ ಬೇರೇನಾರೂ ಮಾಡೂಕೆ ಹೇಳ್‌ಬೇಕ್. ಒಂದ್ ಅಂಗ್ಡಿ ಹಾಕಂಡ್ ಕುಂತ್ರೂ ಸಾಕಾಗೇದ್. ಎನ್ನುವ ಅಪ್ಪ ಕೂಡ ವಾರದಲ್ಲಿ ಎರಡು ದಿನ ಶಿಷ್ಟ ದೇವತೆಯ ಹೆಸರಿನಲ್ಲಿ ಮೀನು ಬಿಡುತ್ತಾನೆ. ಇತ್ತ ಗಂಡ ತಂದ ಮೀನನ್ನು ಮಾರಾಟಕ್ಕೆ ಒಯ್ಯುವ ಹೆಂಡತಿಯೂ ವಾರಕ್ಕೆ ನಾಲ್ಕು ದಿನ ವಾರದ ಹೆಸರಿನಲ್ಲಿ ತಮ್ಮ ಸಹಜ ಆಹಾರವನ್ನು ಕೀಳೆಂಬಂತೆ ನೋಡುತ್ತಿದ್ದಾಳೆ. ನಮ್ಮ ಹಣಿಬರಾ ನೋಡ್ ಬಾಯೆ, ನಂಗೆ ಇಂದೆ ಸೋಮಾರ, ಹಂಗಂದ್ಕುಂಡೆ ಮೀನ್ ಮುಟ್ದೇ ಇರೂಕಾಗೂದೇ? ಮೀನ್ ಮಾರೂಕೆ ಹೋಗ್ಲೇ ಬೇಕ್. ಹಿಂಗೆ ಮೀನ್ ಮುಟ್ಕಂಡೆ ವಾರ ಮಾಡದ್ರೆ ಆ ಧರ್ಮಸ್ಥಳ ಮಂಜುನಾಥ ಸಿಟ್ಟ ಮಾಡ್ಕಂಬೂದೆಲ್ಲ:? ನಮ್ಗಂತೂ ಶುದ್ಧಾಚಾರದ ವಾರ ಮಾಡೂಕೂ ಆಗೂದೆಲ್ಲ. ಅದ್ಕೂ ಕೇಳ್ಕಾ ಬರಬೇಕ್ ಮೊನ್ನೆ ನಮ್ಮ ಶಾಲೆಗೆ ಬಂದ ಮೀನು ಮಾರಲು ಹೋದ ಒಬ್ಬ ತಾಯಿಯ ಕಳವಳದ ಹೇಳಿಕೆ. ತಮ್ಮದೇ ಉದ್ಯೋಗವಾದ ಮೀನು ಮಾರುವುದನ್ನು ಕೀಳೆಂಬಂತೆ ನೋಡುವ ಅಸಂಜಸತೆಯನ್ನು ಇವರಿಗೆ ಕಲಿಸಿದವರಾರು? ದೇವರನ್ನು ಆರಾಧಿಸ ಬೇಕೆಂದರೆ ಮನಸ್ಸು ಶುದ್ಧವಾಗಿದ್ದರೆ ಸಾಲದು, ಮೀನು ಕೋಳಿ ಮುಟ್ಟದೇ, ತಿನ್ನದೇ ದೇಹವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದನ್ನು ಇವರಿಗೆ ಹೇಳಿಕೊಟ್ಟವರಾರು?
                    ಹೀಗೆ ಒಂದು ಸಮಾಜದ ಆಹಾರ ಪದ್ದತಿಯನ್ನೇ ಕೆಟ್ಟದ್ದು ಎಂದು ಬಿಂಬಿಸುವ ಪ್ರಯತ್ನದಿಂದಾಗಿ ಆಗುತ್ತಿರುವ ಅವಘಡಗಳು ಒಂದೆರಡಲ್ಲ. ಇತ್ತೀಚೆಗೆ ಶಾಲೆಗೆ ಬರುವ ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚಾಗಿ ವಿದ್ಯಾರ್ಥಿನಿಯರು ತಮ್ಮ ತಂದೆ ಮೀನುಗಾರ ಎಂದೋ ಅಥವಾ ತಾಯಿ ಮೀನು ಮಾರಲು ಹೋಗುತ್ತಾಳೆ ಎಂಬುದನ್ನು ಹೇಳಿಕೊಳ್ಳಲೂ ಮುಜುಗರಪಟ್ಟುಕೊಳ್ಳುತ್ತಿರುವುದು ನಿಜಕ್ಕೂ ಆತಂಕದಾಯಕವಾಗಿ ಕಾಣಿಸುತ್ತಿದೆ.

                 ಒಬ್ಬಳು ಹುಡುಗಿ ಮನೆಯಲ್ಲಿ ಸತ್ಯ ನಾರಾಯಣ ವೃತವಿದೆ ಎಂದು ಎರಡು ದಿನದ ರಜೆ ಕೇಳಲು ಬಂದಿದ್ದಳು. ಪೂಜೆ ಮಾಡೊದು ನಿನ್ನ ತಂದೆ ತಾಯಿ ತಾನೇ? ನಿನಗೇಕೆ ಎರಡು ದಿನಗಳ ರಜೆ? ಆ ದಿನ ಮಧ್ಯಾಹ್ನ ಬೇಕಿದ್ದರೆ ಅರ್ಧ ದಿನ ಹೋಗು. ನಾನು ಮಾಮುಲಾಗಿ ಹೇಳಿದೆ. ಒಮ್ಮೆಲೆ ಬೆಚ್ಚಿ ಬಿದ್ದವಳಂತೆ ಆಕೆ ಗಲ್ಲ ಗಲ್ಲ ಬಡಿದುಕೊಂಡಳು. ಟೀಚರ್, ಸತ್ಯನಾರಾಯಣ ತುಂಬಾ ಶಕ್ತಿ ಇರೋ ದೇವರು. ಹಾಗೆಲ್ಲ ಹೇಳಬಾರದು ಎಂಬಂತೆ ಮಾತನಾಡಿದಳು. ಅಂತೂ ಅತ್ತೂ ಕರೆದ ಅವಳಿಗೆ ಅದೊಂದು ದಿನ ಮಾತ್ರ ಶಾಲೆಗೆ ಬರದಿರಲು ಒಪ್ಪಿಗೆ ನೀಡಿದೆ. ಪೂಜೆ ಮುಗಿಸಿ ಬಂದ ಮಾರನೆಯ ದಿನ ಪ್ರಸಾದ ಕೊಡಲು ಬಂದಾಗ ಮಧ್ಯಾಹ್ನ ಊಟ ಮುಗಿದಿತ್ತು. ಆಕೆಗೋ ಮೀನು ತಿಂದ ಟೀಚರ್‌ಗಳಿಗೆ ಪ್ರಸಾದ ಕೊಡಲು ಹಿಂಜರಿಕೆ. ಅದಕ್ಕೆ ತಕ್ಕಂತೆ ಕೆಲವು ಟೀಚರ್‌ಗಳೂ ಮಡಿವಂತಿಕೆ ತೋರಿಸಿ ಆಕೆಯ ಕೈಯ್ಯಿಂದಲೇ ಪೇಪರ್‌ನಲ್ಲಿ ಪೊಟ್ಟಣ ಕಟ್ಟಿಸಿ ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದರು. ಇದು ಬೇಕಿದ್ರೆ ಜಾಸ್ತಿ ಕೊಡು. ತಿನ್ನೋಕೆ ತುಂಬಾ ಚೆನ್ನಾಗಿರುತ್ತೆ. ನಾನು ಮಾಮೂಲಿನಂತೆ ಹೇಳಿದ್ದೆ. ಆಗಲೂ ಆಕೆಯ ಮುಖದಲ್ಲೊಂದು ಭಯ. ಅದಾದ ಒಂದು ವಾರz ನಂತರ ನಾನು ಅನಾರೋಗ್ಯ ಎಂದು ಎರಡು ದಿನ ಶಾಲೆಗೆ ಹೋಗಿರಲಿಲ್ಲ. ನನ್ನ ಅನಾರೋಗ್ಯದ ವಿಷಯ ತಿಳಿದ ಆಕೆ ಟೀಚರ್ ಆ ದಿನ ಸತ್ಯನಾರಾಯಣನ ಪ್ರಸಾದಕ್ಕೆ ಹಾಗೆ ಹೇಳಬಾರದಿತ್ತು. ಅದಕ್ಕೇ ಆರಾಂ ಇಲ್ವೇನೋ... ಎಂದು ಸ್ನೇಹಿತರ ಬಳಿ ಹೇಳಿಕೊಂಡು ಅಲವತ್ತುಕೊಂಡಿದ್ದನ್ನು ಬೇರೆ ಹುಡುಗಿಯರ ಸಾಭಿನಯಪೂವಕವಾಗಿ ವಿವರಿಸಿದ್ದರು. ದೇವರ ಹೆಸರಿನಲ್ಲಿ ಈ ಮಕ್ಕಳ ಮನಸ್ಸಿನಲ್ಲಿ ಈ ರೀತಿಯ ಭಯವನ್ನು ಹುಟ್ಟು ಹಾಕಿದವರಾರು? ಮೀನು ಎಂಬುದು ಕೆಟ್ಟದ್ದು. ಅದನ್ನು ತಿಂದರೆ ದೇವರಿಗೆ ನಮಸ್ಕರಿಸಲೂ ಯೋಗ್ಯರಲ್ಲ ಎಂಬ ಮನಸ್ಥಿತಿಯನ್ನು ಮಕ್ಕಳಲ್ಲಿ ಮತ್ತು ಈ ಮುಗ್ಧ ಮೀನುಗಾರರ ಮನಸ್ಸಿನಲ್ಲಿ ಹುಟ್ಟು ಹಾಕಿ ಕ್ಷೆಬೆಗೊಳಗಾಗುವಂತೆ ಮಾಡುವುದು ಅದೆಷ್ಟು ಸರಿ?
ಇತ್ತೀಚಿನ ದಿನಗಳಲ್ಲಿ ಆಹಾರದ ಕುರಿತಾದ ರಾಜಕೀಯ ತಾರಕಕ್ಕೇರಿದೆ. ಒಂದು ಪ್ರಕಾರದ ಆಹಾರ ಮಾತ್ರ ಸರ್ವಶ್ರೇಷ್ಠ ಇನ್ನೊಂದು ಕನಿಷ್ಟ ಎಂದು ಬಿಂಬಿಸುವ ಹುನ್ನಾರಗಳು ಎಡಬಿಡದೆ ನಡೆಯುತ್ತಿವೆ. ಸಾಮಾಜಿಕ ದ್ರುವಿಕರಣ ಮತ್ತೆ ಪ್ರಾರಂಭವಾಗಿದೆ. ಒಂದು ಜಾತಿ ಅಥವಾ ಜನಾಂಗ ತಾನು ಶ್ರೇಷ್ಠ ಎನ್ನಿಸಿಕೊಳ್ಳಬೇಕಾದರೆ ಉಳಿದ ಜಾತಿಯ ಭಾಷೆ ಸಂಸ್ಕೃತಿ ಹಾಗೂ ಆಚರಣೆಗಳನ್ನು ಕೀಳು ಎಂದು ಸಾಬೀತು ಮಾಡಬೇಕಾಗುತ್ತದೆ. ಹಾಗಾದಾಗ ತನ್ನ ಜಾತಿ, ತನ್ನ ಸಂಸ್ಕೃತಿ ಹಾಗೂ ತನ್ನ ಆಹಾರ ಪದ್ದತಿಯ ಕುರಿತು ಕೀಳರಿಮೆಯಿಂದ ಬಳಲುವವರು ಸುಲಭವಾಗಿ ತಮ್ಮ ಮೇಲಿನ ಹಕ್ಕನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಗುಲಾಮರಾಗುತ್ತಾರೆ. ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದ ರೂಢಿ ಇದು. ಬ್ರಿಟೀಷರು ಬರುವ ಮುನ್ನ ಭಾರತದಲ್ಲಿದ್ದ ರೂಢಿಯೂ ಅದೇ ಆಗಿತ್ತು. ಭಾರತಕ್ಕೆ ಬಂದ ಬ್ರಿಟೀಷರು ಅನುಸರಿಸಿದ್ದೂ ಅದೇ ಮಾರ್ಗವನ್ನು. ಈಗ ಭಾರತೀಯರು ಪುನಃ ಅದನ್ನೇ ಸಾಧಿಸಿ ಉಳಿದವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿರುವುದು ಕಣ್ಣಿಗೆ ಢಾಳಾಗಿಯೇ ಕಾಣುತ್ತಿದೆ.




           ಒಂದು ಸಮಾಜದ ಆಹಾರ ಪದ್ದತಿಯನ್ನು ಟೀಕಿಸುತ್ತ, ಅವರು ಮಾಂಸಾಹಾರಿಗಳಾಗಿರುವುದೇ ಪಾಪದ ಕೆಲಸ ಎಂಬಂತೆ ಬಿಂಬಿಸುತ್ತ ಇಡೀ ಸಮಾಜದ ನೈತಿಕ ಸ್ಥೈರ್‍ಯವನ್ನು ಹಾಳುಗೆಡವುವ ಪ್ರಯತ್ನ ಮಾಡುತ್ತ ತಮ್ಮ ಪುರೋಗಾಮಿ ವಿಚಾರಗಳ ಅನುಷ್ಟಾನಕ್ಕೆ ಈ ಮುಗ್ಧರನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಕೈಗಳ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ, ಅದನ್ನು ತೀವೃವಾಗಿ ವಿರೋಧಿಸಿ ತಮ್ಮತನವನ್ನು ಪ್ರಭಲಗೊಳಿಸುವ ನಿಟ್ಟಿನಲ್ಲಿ ಇವರಿಗೆ ಮನದಟ್ಟು ಮಾಡಿಸುವ ಅಗತ್ಯವಿದೆ.