Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Wednesday 18 November 2020

ಗಜಲ್-ಹಣತೆ ಹಚ್ಚುತ್ತೇನೆ

ಗಜಲ್-ಹಣತೆ ಹಚ್ಚುತ್ತೇನೆ 

ನಮ್ಮ ನಡುವೆ ಆವರಿಸಿದ ಕತ್ತಲು ಕಳೆಯಲೆಂದು ಹಣತೆ ಹಚ್ಚುತ್ತೇನೆ 
ಮುಖ ತಿರುಗುವ ಮೊದಲೊಮ್ಮೆ ಪರಸ್ಪರ ನೋಡಲೆಂದು ಹಣತೆ ಹಚ್ಚುತ್ತೇನೆ 

ಗಳಿಗೆಗೊಮ್ಮೆ  ಮನಸು ಬದಲಿಸುವುದರಲ್ಲಿ ನಿನ್ನ ಮೀರಿಸಿದವರಿಲ್ಲ ಬಿಡು 
ಮಾತೊಳಗಿನ ಅಮರಾವತಿಯ ಭ್ರಮೆ ಕಳಚಲೆಂದು ಹಣತೆ ಹಚ್ಚುತ್ತೇನೆ 

ನಾನು ಬರುವ ಹಾದಿ ಬದಲಿಸಿ  ತಿರುವಿನಲ್ಲೇ ಮರೆಯಾಗುವ ಜಾಣ ನೀನು 
ಅಂಕುಡೊಂಕಿರದ  ದಾರಿ ಸರಿಯಾಗಿ ಕಾಣಲೆಂದು ಹಣತೆ ಹಚ್ಚುತ್ತೇನೆ 

ದೂರವಾಗುವುದೇನೊ  ನಿನ್ನಷ್ಟ, ನನ್ನ ಸಾವನ್ನೇಕೆ ಬಯಸುವೆ ಹೇಳು 
ಚಿತೆಗೆ ಕೊಳ್ಳಿಯಿಡಲು ಬೆಂಕಿ ಸುಲಭದಲಿ ಸಿಗಲೆಂದು ಹಣತೆ ಹಚ್ಚುತ್ತೇನೆ  

ಬೀದಿ ನಡುವೆ ನಿಂತು ಮದಿರೆಗೆ ನೀರು ಸೇರಿಸಿದ ಅಪವಾದ ಹೊರಿಸಬೇಡ  
ಶರಾಬಿನ ಕೆಂಬಣ್ಣವ ನೋಡಿ ನಶೆಯೇರಲೆಂದು ಹಣತೆ ಹಚ್ಚುತ್ತೇನೆ  

ಬಳಸಿ ಬಿಸಾಡುವ ಚಟಕೆ  ಇಡಲು ಹೊಸ ಹೆಸರನ್ನಾದರೂ ಏಕೆ ಹುಡುಕುವೆ 
ನಿನಗೆ ನೀನೇ ಮಾಡಿಕೊಂಡ ಮೋಸ  ತಿಳಿಯಲೆಂದು ಹಣತೆ ಹಚ್ಚುತ್ತೇನೆ 

ಏನೂ ಅರಿಯದ ಶತದಡ್ಡಿಯೆಂದು ಜಗಕೆ ಸಾಧಿಸಿ ತೋರಿಸಬೇಕಿಲ್ಲ 
ಬುದ್ಧಿವಂತನ ನಂಬಿದ ಮೂರ್ಖತೆಗೆ ಮರುಗಲೆಂದು ಹಣತೆ ಹಚ್ಚುತ್ತೇನೆ 

ಹೇಳಿಯೂ ಹೇಳದ, ಹೇಳದೆಯೂ ಸಾಧಿಸುವ ಗುಣ ಹೊಸತೇನಲ್ಲ ಶ್ರೀ 
ಮಾತು ಮರೆತರೂ ಪ್ರೀತಿಯ ತೊರೆ ಬತ್ತದಿರಲೆಂದು ಹಣತೆ ಹಚ್ಚುತ್ತೇನೆ