Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Saturday 23 March 2024

ಮಹಾಜನಗಳ ನಡುವೆ

ಮಹಾಜನಗಳ ನಡುವೆ

ಜಾರಿದ ಸೆರಗಿನ ಕಡೆ ಗಮನಿಸದೆ
ತರಾತುರಿಯಲ್ಲಿ ಹೊರಟ ಅವಳಿಗೆ 
ಮಾಡಿ ಮುಗಿಸಬೇಕಾದ ಕೆಲಸದ ಗಡಿಬಿಡಿ
 ಹೋಗದಿದ್ದರೆ ಹೇಳಿದ ಸಮಯಕ್ಕೆ 
ಕೈ ತಪ್ಪುವ ಭೀತಿ ಎದೆಯೊಳಗೆ
ಕೊಡುವ ಸಣ್ಣ ಪಗಾರದಲ್ಲಿ 
ಮತ್ತೊಂದಿಷ್ಟು ಸಣ್ಣ ಮೊಬಲಗು
ಐದು ಹತ್ತು ರೂಪಾಯಿಯೇ ಆದರೂ
ಅದೇ ಕೈ ಹಿಡಿಯುವುದು ತಿಂಗಳ ಕೊನೆಗೆ 

ಬರ್ತೀಯಾ? ತಾಸಿಗೆ ಇನ್ನೂರು
ಇಬ್ಬರಿದ್ದೇವೆ ಕೊಡುತ್ತೇನೆ ನಾನೂರು 
ಹಠಾತ್ತನೆ ಎದುರು ನಿಂತು ಕೇಳಿದ ಪ್ರಶ್ನೆ
ತನಗೇ ಎಂಬುದು ಅರ್ಥವಾಗಲೂ 
ಬೇಕಾಯಿತು ಅವಳಿಗೆ ಒಂದಿಷ್ಟು ನಿಮಿಷ  
ಬೆಪ್ಪಾಗಿ ನಿಂತವಳಿಗೆ ಮುನ್ನೂರಾದರೆ? 
ಮತ್ತೆ ಎದೆ ನಡುಗಿಸುವ ಪ್ರಶ್ನೆ 
ನಾನು ಅಂಥವಳಲ್ಲ ದನಿಯಲ್ಲಿ ಬಲವಿಲ್ಲ
ಜಾರಿದ ಸೆರಗಿನವಳು ಇನ್ನೇನಾಗಿರಲು ಸಾಧ್ಯ
ಎದೆಯೊಳಗೆ ಬಂದೂಕಿನ ಮೊನೆ ಮುರಿದ ಸದ್ದು
ನಿನ್ನ ಹೆಂಡತಿಯನ್ನೂ ಕರೆದು ತಾ
ಇಬ್ಬರೂ ಸೇರಿಯೇ ಬೀದಿಯಲ್ಲಿ 
ಮೆರವಣಿಗೆ ಹೊರಡುತ್ತೇವೆ ಸೆರಗು ಜಾರಿಸಿ
ಎದೆಯೊಳಗಿನ ಮಾತು ತುಟಿ ಮೀರಿ 
ಇನ್ನೊಂದು ಹೆಣ್ಣು ಜೀವ ನೋಯದಿರಲೆಂಬಂತೆ 
ಅವಡುಗಚ್ಚಿ ಕಣ್ಣೊಳಗೆ ತುಳುಕಿಸಿದಳು ನಗು  
ನಗು ಕಂಡವನೊಳಗೆ ಆತುರ ಮೈ ತುಂಬ 
ನಡೆ ನಿನ್ನ‌ ಮನೆಗೇ ಹೋಗೋಣ
ಎಂದವನ ತಡೆಯುತ್ತ ಹೇಳಿದಳು ತಣ್ಣಗೆ 
ಬೇಡ, ನಿನ್ನ ಮನೆಯೇ ಆದೀತು
ಇರಬಹುದು ಅಲ್ಲಿ ನಿನ್ನಪ್ಪ, ಅಜ್ಜನೂ 
ಕೊಡಬಹುದು ಅವರೂ ಮುನ್ನೂರು 
ನಿನ್ನ ಪುಟ್ಟ ಮಗನೂ ಇದ್ದರೆ ಒಳ್ಳೆಯದು
ಅವನೂ ಕೊಡುವ ಹಣ ಸೇರಿದರೆ  
ಸಿಗುವ ಆದಾಯದಿಂದ ಕೊಡಬಹುದು 
ನಿನ್ನವ್ವ ಹೆಂಡತಿಗೆ ಸೀರೆಯ ಉಡುಗೊರೆ
ಉಟ್ಟು ನಗಬಹುದು ಮೊಗವರಳಿಸಿ 
ಮಾತು ಮುಗಿಯುವ ಮುನ್ನವೇ 
ಹೊರಟವರ ತಡೆದು ಕೇಳಿದಳು ಸುತ್ತ ನೆರೆದವರ
ಬರಬೇಕೆ ನಿಮ್ಮಲ್ಲಿ ಯಾರ ಮನೆಗಾದರೂ
ತಗ್ಗಿಸಿದ ತಲೆಯೆತ್ತುವ ನೈತಿಕತೆಯೆಲ್ಲಿ 
ಸುಸಂಸ್ಕೃತರೆನಿಸಿಕೊಳ್ಳುತ್ತ ತಮಾಷೆ ನೋಡಿದ
ಮಹಾಜನಗಳ ಮಹಾ ಆಸ್ಥಾನದಲ್ಲಿ


Saturday 16 March 2024

ಚಿತಾಗ್ನಿಯಲ್ಲಿನ ಕೊರಡು

ಚಿತಾಗ್ನಿಯಲ್ಲಿನ ಕೊರಡು

ಆತ ಒಮ್ಮೆಯೂ ಹಿಂದಿರುಗಿ ನೋಡದೆ 
ಹೊರಟು ಹೋಗಿ ಅವನದ್ದೇ ಲೋಕದಲ್ಲಿ 
ತಲ್ಲೀನವಾಗಿ ಹಳೆಯದನ್ನೆಲ್ಲ ಮರೆತಿರುವಾಗಲೂ
ಹಿಂದಿರುಗಿ ಬಂದೇ ಬರುತ್ತಾನೆಂದು
ಅವನು ಹೋದ ಹಾದಿಗೆ ಕಣ್ಣು ಕೀಲಿಸಿ
ಕಲ್ಲಾಗಿ ಕಾಯುತ್ತಾಳೆ ಅಹಲ್ಯೆಯಂತೆ 
ಅವನೆಂದೂ ಹಿಂದಿರುಗಲಾರ
ಸ್ಪರ್ಶಿಸಿ ಮತ್ತೆಂದೂ ತನ್ನ ಹೆಣ್ಣಾಗಿಸಲಾರ
ಎಂಬ ಸತ್ಯ ಅರಿವಾಗುವಾಗುವಷ್ಟರಲ್ಲಿ 
ಅವಳು ತಲೆ ನೆರೆತ, ಬಾಗಿದ ಬೆನ್ನಿನ ಮುದುಕಿ 
ಅವನ ಬಣ್ಣಬಣ್ಣದ ಮಾತಿಗೆ ಅರಳಿ
ಕನಲಿ, ನಲುಗಿ ಸುರಿವ ಜೇನಿನಂತಹ
ಪ್ರೇಮವನ್ನು ಎದೆಯ ತುಂಬ ತುಂಬಿಕೊಂಡು
ವ್ಯಭಿಚಾರಿಯ ಪಟ್ಟ ಹೊರುವ ಹೆಣ್ಣುಗಳಿಗೆ
ಲೋಕದ ಅಪವಾದ ನಿಂದನೆಗಳನ್ನಷ್ಟೇ ಅಲ್ಲ
ಬೈಗುಳ, ಸಿಡುಕು, ತಿರಸ್ಕಾರಗಳನ್ನೆಲ್ಲ 
ವಿನಾಕಾರಣ ಎದೆಗೆಳೆದುಕೊಳ್ಳುವ ಹುಚ್ಚು 

ತಿರಸ್ಕರಿಸಿದಷ್ಟೂ ಸ್ವಾಭಿಮಾನವ ಮುಡಿಪಿಟ್ಟು
ಬಾಚಿ, ತಬ್ಬಿ, ಆದರಸುತ್ತ 
ಮಾಗಿ, ಬಳಲಿ, ಬೆಂಡಾಗಿ ಮುರಿಯುತ್ತ
ಬೂದಿ ತೀಡಿದ ನಿಗಿನಿಗಿ ಕೆಂಡ 
ಅವಳ ಒಳಹೊರಗನ್ನೆಲ್ಲ ದಹಿಸುವುದು 
ಜಗದ ಕಣ್ಣಿಗೆ ದೇಹ ದಹಿಸುವ ಚಿತಾಗ್ನಿ
ಅವಳಂತೂ ಉರಿದು ಬೂದಿಯಾಗುವ ಕೊರಡು

ಶ್ರೀದೇವಿ ಕೆರೆಮನೆ

Tuesday 12 March 2024

ಹೇಳಿ ಹೋಗು



ಹೇಳಿ ಹೋಗು 

ನಿನ್ನನ್ನು ಮಾತನಾಡಿಸುವ 
ನನ್ನೆಲ್ಲ ತರೆಹವಾರಿ ಪ್ರಯತ್ನಗಳು
ಮಕಾಡೆ ಬಿದ್ದು ವಿಫಲವಾದ ನಂತರ 
ನಾನೂ ಸಹ ಮೌನವಾಗಿ 
ನಿನ್ನಿಂದ ದೂರ ಹೊರಟುಬಿಡುವ 
ಗಟ್ಟಿ ನಿರ್ಧಾರ ಮಾಡಿದ್ದೇನೆ

ಹೀಗೆ ಬಂದು ಹಾಗೆ ಹೋಗುವ
ನಿನ್ನ ಬಾಳ ಪಯಣದಲ್ಲಿ 
ಹೆಸರಿಲ್ಲದ ಒಂದು ಸಣ್ಣ 
ನಿಲ್ದಾಣ ನಾನಾಗಿದ್ದಕ್ಕೆ 
ಸಮಾಧಾನ ಪಡುವುದೋ 
ವಿಷಾದಿಸುವುದೋ ಎಂಬುದು
ಅರ್ಥವಾಗದೆ ದಿಗ್ಭ್ರಾಂತಳಾಗಿರುವಾಗ 
ಒಮ್ಮೆಯೂ ಹಿಂದಿರುಗಿ ನೋಡದೆ 
ನೀ ನಡೆದು ಹೋದ ಹಾದಿಯ 
ಬದಿಯ ಕಲ್ಲುಬಂಡೆಯಾಗಿದ್ದೇನೆ
ವಿದಾಯದ ಕಣ್ಣೀರನ್ನು ಒಳಗೊಳಗೇ ನುಂಗಿ

ಹೊರಟು ಹೋಗುವ ಮುನ್ನ 
ಒಂದೇ ಒಂದು ಮಾತು ಹೇಳಿ ಬಿಡು
ಅಲೆಗಳೇ ಇಲ್ಲದ ನನ್ನ ಬಾಳಲ್ಲಿ
ನೀನು ಬಂದು ತಂಪು ಸುರಿದಿದ್ದೇಕೆ
ಈಗ ಕಾರಣವೇ ಹೇಳದೆ 
ಹೊರಟು ಹೋಗುತ್ತಿರುವುದಾದರೂ ಏಕೆ?

...ಶ್ರೀದೇವಿ ಕೆರೆಮನೆ

Wednesday 24 January 2024

ಜೊತೆಗಿರು

ಜೊತೆಗಿರು 

ಹೇಳುತ್ತೇನೆ ಮತ್ತೆ ಮತ್ತೆ ಜೊತೆಗಿರು
ಸಂತೆಯ ನಡುವೆಯೂ ಒಂಟಿ ಎನಿಸಿದಾಗ 
ಸುತ್ತೆಲ್ಲ ಗೆಳತಿಯರು 
ಯಾರಿಗೂ ಕೇಳದಂತೆ  ಪಿಸುಮಾತಲ್ಲಿ 
ತಮ್ಮ ಸಂಸಾರದ ಗುಟ್ಟುಗಳ ಬಿಚ್ಚಿಟ್ಟು 
ಕಿಸಿಕಿಸಿ ನಗುವಾಗ 
ಗುಟುಕರಿಸುವಾಗ ಹಳೆಯ ಗೆಳೆಯರೆಲ್ಲ ಸೇರಿ‌ 
ಕೇ ಕೇ ಹಾಕುತ್ತ ಬೈಟೂ ಚಹಾ  
ಕಿಬ್ಬೊಟ್ಟೆಯಲಿ ನೋವು ಅಲೆಅಲೆಯಾಗಿ ಉಕ್ಕಿ 
ತಿಂಗಳ ಮಾಮೂಲನ್ನು ವಸೂಲು ಮಾಡುವ 
ತಾಳಲಾಗದ ನೋವನ್ನು ಅವಡುಗಚ್ಚಿ 
ಒಮ್ಮೆ ನಿನ್ನ ಮಡಿಲಲ್ಲಿ ತಲೆಯಿಟ್ಟು 
ಸಂತೈಸಿಕೊಳ್ಳ ಬೇಕೆನಿಸಿದಾಗ 
ಕೆಲಸದ ನಡುವೆ ಹಿಂಬದಿಯ ಸೊಂಟ ಬಳಸಿ 
ಪಿಸುಮಾತು ಕಿವಿಯಂಚಲಿ 
ಬಿಸಿಯಾಗಿ ಕೇಳಿದಂತಾದಾಗ 
ಹೆಚ್ಚಿದ ತರಕಾರಿಯ ಜೊತೆ 
ಬೆರಳೂ ತರಿದು, 
ರಕ್ತ  ತುದಿಯಿಂದ ಬೆರಳಗುಂಟ ಧಾರೆಯಾದಾಗ 
ಮೀನು ಮುಳ್ಳು ಸರಕ್ಕನೆ ನುಗ್ಗಿ 
ಉಸಿರು ನಿಂತು ಹೋದಂತಾದಾಗ  
ಬಿಸಿ ಎಣ್ಣೆಯ ಕಾವಲಿಗೆ ಕೈ ತಾಗಿ 
ಚುರುಕ್ ಎಂದಾಗ 
ಮನದಲ್ಲೇ ನಿನ್ನ ನೆನೆಸುತ್ತ 
ನನಗೆ ನಾನೇ ಹೇಳಿಕೊಳ್ಳುವ ಜಪದಂತೆ 
ಜೊತೆಗಿರು ಎನ್ನುತ್ತೇನೆ 
ಇತ್ತೀಚಿಗಂತೂ ಜೊತೆಗಿರು ಎನ್ನುವ ಮಾತು 
ನನಗೆ ನಾನೇ ಪಠಿಸುತ್ತೇನೆ 
ಕೇಳುವುದು ಕ್ಲೀಷೆಯಾಗುವಂತೆ  
ವಿಷ್ಣು ಸಹಸ್ರ ನಾಮ, 
ಲಕ್ಷ್ಮಿ  ಸಹಸ್ರ ನಾಮದಂತೆ‌
ಜೊತೆಗಿರು ಎಂಬುದು ಆರಾಧನೆಗೊಳಪಡುತ್ತದೆ
ನಿನ್ನ ಹೆಸರಾಗಿ 
ಮನದೊಳಗೆ ಪ್ರತಿಷ್ಟಾಪನೆಗೊಂಡು  
ಇಷ್ಟಾದರೂ ಇಲ್ಲ ನನಗೆ 
 ನಾನು ಜೊತೆಗಿರು ಎಂದುಕೊಳ್ಳುವುದು 
ನಿನ್ನ ಕಿವಿಗೆ ತಲುಪಿಯೇ ಬಿಡುತ್ತದೆ 
ಎನ್ನುವ ಯಾವ ನಂಬಿಕೆಯೂ 
ಆದರೂ ಮೈದುಂಬಿ ಸುಖಿಸುತ್ತದೆ 
ಹಾಗೆಂದಾಗ ನೀನು ಜೊತೆಗಿರುವ 
ಅಮೂರ್ತ ಅನುಭವ 
ಕೆಲವೊಮ್ಮೆ  ನಾನು ಜೊತೆಗಿರು ಎಂದಾಗ
ನಿನ್ನ ಕಿವಿಗೆ ತಲುಪಿ 
ಇದ್ದೇನಲ್ಲ ಸದಾ ಜೊತೆಗೆ 
ಯಾಕೆ ಮತ್ತೆ ಮತ್ತೆ ಅದೇ ಮಾತು 
ನೀನು ಮಾತು ಮುಗಿಸಿ ಬಿಡುವುದೂ 
ಹೊಸ ವಿಷಯವೇನೂ ಅಲ್ಲ ನನಗೆ 
ಇಷ್ಟಾಗಿಯೂ ಹೆಚ್ಚಿನ ಸಲ 
ಜೊತೆಗಿರು ಎಂಬ ನನ್ನ ಗೋಗರೆತದ ದನಿ 
ನಿನ್ನ ಮೆದುಳು ತಲುಪಿ 
ಪ್ರತಿಕ್ರಿಯೆ ಬಂದೇ ಬರುತ್ತದೆಂಬ ನಂಬಿಕೆಯೇನಿಲ್ಲ  
ಆದರೂ ಹೇಳುತ್ತೇನೆ 
ಹೇಳುತ್ತಲೇ ಇರುತ್ತೇನೆ 
ಹೇಳುತ್ತ ಹೇಳುತ್ತಲೇ ಉಸಿರು ನಿಲ್ಲಿಸುತ್ತೇನೆ 
ಜೊತೆಗಿರು, ಕೊನೆಯ ಉಸಿರಿರುವವರೆಗೆ  
.....ಶ್ರೀದೇವಿ ಕೆರೆಮನೆ

ಆಗುವುದೆಲ್ಲ ಒಳ್ಳೆಯದಕ್ಕೆ

ಆಗುವುದೆಲ್ಲ ಒಳ್ಳೆಯದಕ್ಕೆ

ಈ ಭಾವುಕ ಕ್ಷಣದಲ್ಲಿ
ನೀನು ಜೊತೆಗಿರದಿದ್ದುದು ಒಳ್ಳೆಯದಾಯಿತು
ಇಹದ ಪರಿವೆಯೇ ಇಲ್ಲದೇ ಮೈ ಮರೆತು 
ಪೂರ್ಣವಾಗಿ ನಿನಗೊಪ್ಪಿಸಿಕೊಂಡು 
ಬಿಡುವ ಅನಾಹುತವೊಂದು 
ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು. 


ಅದೆಷ್ಟು ಮಾತು, ಅದೆಂತಹ ಲಲ್ಲೆ
ಮಾತು ಮಾತಿಗೂ ಎದೆಯಾಳದಿಂದ
ಬಿಸಿ ನೀರಿನ ಬುಗ್ಗೆಯೊಂದು
ಒಮ್ಮೆಲೆ ಚಿಮ್ಮಿ ಬೆಚ್ಚಗಾದಂತೆ 
ದೇಹದ ಕಣಕಣವೂ ಹಂಬಲಿಸಿ 
ಎದೆಯೊಳಗೆ ಹರಿಯುವ 
ಜುಳು ಜುಳು ನದಿಗೆ 
ಪ್ರವಾಹ ಬಂದು ಉಕ್ಕೇರಿದಂತೆ
ಸುಪಾ ಆಣೆಕಟ್ಟಿನ ಹಿನ್ನೀರಿನಂತೆ
ಸದಾ ಒದ್ದೆ ಒದ್ದೆಯಾಗಿರುವ 
ಮನದಂಗಳದ ತುಂಬೆಲ್ಲ 
ನಿನ್ನದೇ ಹೆಜ್ಜೆಗುರುತು

ಈ ಚಂಚಲಗೊಂಡ ಸ್ಥಿತಿಯಲ್ಲಿ 
ನೀನು ಸನಿಹ ಬರದಿದ್ದುದು ಸರಿಯಾಗಿತ್ತು
ಹಸಿಯಾದ ಎದೆಯ ಮೆತ್ತೆಗೆ
ಮೂಡುವ ನಿನ್ನ ಉಗುರಿನ ಗುರುತಿಗೆ
ನಾನು ಹೊಸತಾದ ಕಾರಣ ಹುಡುಕಲು
ಸುಳ್ಳಿನ ಕಣಜದ ಮೊರೆ ಹೋಗಬೇಕಿತ್ತು  

ಹದವಾದ ಭೂಮಿಗೆ ಬೀಜ ಬಿತ್ತುವಂತಿರುವ
ಈ ನಾಜೂಕಾದ ಗಳಿಗೆಯಲ್ಲಿ
ನಿನ್ನ ಮೈಯ್ಯ ವಾಸನೆ ಆಘ್ರಾಣಿಸಲು 
ಆಗದಿದ್ದುದು ಸಮಂಜವೇ ಆಗಿತ್ತು
ಕುತ್ತಿಗೆಯ ತಿರುವಿನಲ್ಲಿ ಮೂಡುವ
ಹಲ್ಲಿನ ಗುರುತಿಗೆ ಸಬೂಬು ಹೇಳಬೇಕಿತ್ತು
ಶಂಖುತೀರ್ಥದ ಹೊಕ್ಕಳ ಆಳದಲ್ಲಿ
ನಿನ್ನ ಬೆರಳ ತುದಿಯ ನಾಜೂಕು
ಸ್ಪರ್ಶದಿಂದೇಳುವ ಪ್ರಚಂಡ ಅಲೆಗೆ
ಎಲ್ಲ ಮರೆತು ಸುಖವಾಗಿ ಪವಡಿಸಿರುವ 
ಕಡಲೆಂಬ ಕಡಲೂ ಬೆಚ್ಚಿ ಬೀಳುತ್ತಿತ್ತು
ಆಗುವುದೆಲ್ಲ ಒಳ್ಳೆಯದಕ್ಕೇ ಬಿಡು
ಸಕಲವೂ ಕ್ಷೇಮ ಎಂದಾದಾಗ
ಸವುಡು ಸಿಕ್ಕರೆ ಮತ್ತೆಲ್ಲಾದರೂ ಭೇಟಿಯಾಗೋಣ
ಎರಡು ಮಾತು ಚಿಕ್ಕದೊಂದು ನಗುವಿನೊಂದಿಗೆ

ಶ್ರೀದೇವಿ ಕೆರೆಮನೆ

Wednesday 12 July 2023

ಶುಚಿಯಾಗಿರಲು ಶುಚಿ ಬೇಕು

 ಶುಚಿಯಾಗಿರಲು ಶುಚಿ ಬೇಕು

ಟೀಚರ್... ಒಬ್ಬಳು ಅಂಜುತ್ತ ಶಿಕ್ಷಕರ ಕೊಠಡಿಯೊಳಕ್ಕೆ ಬಂದು ಕರೆದಳು. ಯಾವುದೋ ಕೆಲಸದಲ್ಲಿದ್ದವಳು ಹೂಂ ಅಂದೆ. ಮತ್ತೊಮ್ಮೆ ಟೀಚರ್ ಎಂದವಳ ಧ್ವನಿ ಮತ್ತೂ ಚಿಕ್ಕದಾಗಿತ್ತು. ಈಗ ತಲೆ ಎತ್ತಿ ಏನಾಯ್ತು ಎಂದೆ? 
'ಟೀಚರ್ ಒಂದು ನಿಮಿಷ ಹೊರಗೆ ಬನ್ನಿ' ಎಂದವಳ ಧ್ವನಿಯಲ್ಲಿ ಬೇಡಿಕೆ. 
ಏಯ್ ಹೋಗೆ. ಬರೆಯೋದು ಗುಡ್ಡದಷ್ಟಿದೆ. ಅದರಲ್ಲೂ ನಾಳೆ ಡಯಟ್ ನವರು ಬರ್ತಾರಂತೆ. ಇಲ್ಲೇ ಹೇಳು.' ನಾನು ಗಡಿಬಿಡಿ ಮಾಡಿದೆ. ಹಿರಿಯ ಅಧಿಕಾರಿಗಳು ಬಂದರೆ ಹೇಗಾದರೂ ಸುಧಾರಿಸಬಹುದು. ಆದರೆ ಇತ್ತೀಚೆಗೆ ಡಯಟ್ ನಿಂದ ಬರುವ ಅಧಿಕಾರಿಗಳು ನಮ್ಮ ತಪ್ಪು ಹುಡುಕಿ ಬೈಯ್ದು, ಬರೆದು ಹೋಗುವುದರಲ್ಲೇ ಖುಷಿಕಾಣುತ್ತಾರೆ ಎಂಬ ಶಿಕ್ಷಕರ ಗುಮಾನಿ  ನಿಜ ಎಂದುಕೊಳ್ಳು ಹಂತ ತಲುಪಿರುವಾಗ, ಕಾಗದಪತ್ರಗಳೆಂದರೆ ಮೈಲು ದೂರ ಓಡುವ ನಾನು ಸುಮ್ಮನೆ ಬೈಸಿಕೊಳ್ಳುವ ಭಯದಿಂದ ಎಲ್ಲವನ್ನೂ ಜೋಡಿಸಿ ಇಟ್ಟುಕೊಳ್ಳುತ್ತಿದ್ದೆ. 

ಮತ್ತೊಮ್ಮೆ ಟೀಚರ್ ಎಂದು ಗೋಗರೆಯುವಂತೆ ಕರೆದಳು ಹುಡುಗಿ. 
'ಅತಿಯಾಯ್ತು ನಿನ್ನ ಕಾಟ. ಏನು ಅಂತ ಬೇಗ ಹೇಳು.' ಎನ್ನುತ್ತ ಅವಳ ಜೊತೆ ಶಿಕ್ಷಕರ ಕೊಠಡಿಯಿಂದ ಹೊರಗೆ ಬಂದೆ. 
'ಅದೇನು ಗುಟ್ಟು? ನಿಮ್ಮ ಕ್ಲಾಸ್ ಟೀಚರ್ ಗೇ ಹೇಳಬೇಕಾ? ನಮಗೆಲ್ಲ ಕೇಳಬಾರದಾ?' ಉಳಿದ ಶಿಕ್ಷಕರು ತಮಾಷೆ ಮಾಡಿದರೂ ಹುಡುಗಿ ನನಗಿಂತ ಮೊದಲು ಹೊರಗೆ ಹೋಗಿ ಮೂಲೆಗೆ ಹೋಗಿ ನಿಂತಳು. ಏನಾಯ್ತು ಎಂದು ನಾನು ಕೇಳುವುದಕ್ಕೂ ಮೊದಲೇ 'ಟೀಚರ್ ಇವಳಿಗೆ ಡೇಟ್ ಆಯ್ತಂತೆ.' ಅಲ್ಲೇ ಮುದುಡಿ ನಿಂತಿದ್ದ ಹುಡುಗಿಯನ್ನು ತೋರಿಸಿದಳು. 'ಅಯ್ಯೋ ದೇವರೇ, ಮೊದಲೇ ಗೊತ್ತಾಗಲಿಲ್ವಾ? ಪ್ಯಾಡ್ ಇಟ್ಕೋಬೇಕಿತ್ತು ತಾನೆ?' ನಾನು ಗಡಿಬಿಡಿಯಿಂದ ಕೇಳಿದೆ. 'ಟೀಚರ್ ಅವಳಿಗೆ ಮೊದಲನೇ ಸಲ ಆಗಿದೆ. ಏನಾಯ್ತು ಅಂತ ಗೊತ್ತೇ ಆಗಲಿಲ್ಲ ಅವಳಿಗೆ. ಅವಳ ಯುನಿಫಾರ್ಮ ಕೆಂಪಾಗಿದೆ.' ನನ್ನನ್ನು ಕರೆಯಲು ಬಂದವಳೇ ಹೇಳಿದಳು.  'ಈಗೇನು ಮಾಡುವುದು? ಮನೆಗೆ ಹೋಗ್ತೀಯಾ? ಮನೆಯವರಿಗೆ ಫೋನ್ ಮಾಡಲೇ?' ಎಂದೆ. ಹುಡುಗಿಯ ಕಣ್ಣಲ್ಲಿ ನೀರು.
'ಮನೆಲಿ ಅಮ್ಮ ಇಲ್ಲ ಟೀಚರ್. ಮೀನು ಕೊಯ್ಲಿಕ್ಕೆ ಹೋಗಿದ್ದಾಳೆ.' ಸಣ್ಣ ಧ್ವನಿಯಲ್ಲಿ ಪಿಸುಗುಟ್ಟಿದಳು. 'ಹಾಗಾದರೆ ಮನೆಯಲ್ಲಿ ಯಾರಿದ್ದಾರೆ?' 
'ಯಾರೂ ಇಲ್ಲ ಟೀಚರ್.' ಅವಳ ಧ್ವನಿ ಕಿವಿಗೇ ಕೇಳದಷ್ಟು ಸಣ್ಣದಾಗಿತ್ತು. 
ಶಿಕ್ಷಕರ ಕೋಣೆಯೊಳಗೆ ಒಳಗೆ ಬಂದು 'ಯಾರ ಬಳಿ ಶುಚಿ ಇದೆ? ಒಂದು ಪ್ಯಾಡ್ ಕೊಡಿ.' ಎಂದರೆ ಯಾರ ಬಳಿಯಲ್ಲೂ ಇರಲಿಲ್ಲ. 'ಶುಚಿ ಬರದೇ ಮೂರು ವರ್ಷ ಆಯ್ತಲ್ಲ. ಹೇಗೋ ಮೊನ್ನೆಯವರೆಗೂ ಒಂದು ಪ್ಯಾಡ್ ಇತ್ತು. ನಿಮ್ಮದೇ ಕ್ಲಾಸಿನ ಹುಡುಗಿ ಮೊನ್ನೆ ತೆಗೆದುಕೊಂಡು ಹೋದಳಲ್ಲ?' ಹಿರಿಯ ಶಿಕ್ಷಕಿಯೊಬ್ಬರು ಹೇಳಿದರು. 
'ಟೀಚರ್ ಎಂ ಸಿ ಆಗದೆ. ಪ್ಯಾಡ್ ಬೇಕು.' ಮೊನ್ನೆ ಶಿಕ್ಷಕರ ಕೋಣೆಯಲ್ಲಿ ದೊಡ್ಡದಾಗಿ ಹೇಳಿ ಬೈಸಿಕೊಂಡಿದ್ದ ಹುಡುಗಿಯ ನೆನಪಾಯಿತು. ನಮಗೆಲ್ಲ ಮಾಸಿಕ ಸ್ರಾವ ಎಂದರೆ ಅದು ಮುಚ್ಚಿಡಬೇಕಾದ ವಿಷಯ. ಅದೇನೋ ಮಾಡಬಾರದ ಪಾಪ ಮಾಡಿದಂತೆ. ಆ ಹೆಸರನ್ನು ಗಂಡಸರಿಗೆ ಕೇಳುವಂತೆ ಹೇಳುವಂತಿಲ್ಲ ಎಂಬ ಅಲಿಖಿತ ನಿಯಮವನ್ನು ನಮ್ಮ ಮೇಲೆ ನಾವೇ ಹೇರಿಕೊಂಡಂತೆ ವರ್ತಿಸುತ್ತೇವೆ. ಹೀಗಾಗಿ ಆ ಹುಡುಗಿ ಜೋರಾಗಿ ಹೇಳಿ ಮಾಡಬಾರದ್ದನ್ನು ಮಾಡಿದ ಬಜಾರಿಯಾಗಿ ಬಿಟ್ಟಿದ್ದಳು ಶಿಕ್ಷಕರ ಕಣ್ಣಲ್ಲಿ. ಆ ದಿನ ಅವಳು ಕೊನೆಯದಾಗಿ ಇದ್ದ ಪ್ಯಾಡ್ ತೆಗೆದುಕೊಂಡು ಹೋದ ನಂತರ ಕೊಡಲು ಮತ್ತೇನೂ ಇರಲಿಲ್ಲ. 
ನಾಲ್ಕೈದು ವರ್ಷಗಳ ಹಿಂದೆ ಶಾಲೆಗಳಿಗೆ ನಿಯಮಿತವಾಗಿ ಶುಚಿ‌ ಸರಬರಾಜಾಗುತ್ತಿತ್ತು.  ನಿಜಕ್ಕೂ ಇದು ನಮ್ಮಂತಹ ಬಡ ಮಕ್ಕಳು ಬರುವ ಶಾಲಡಗಳಲ್ಲಿ ವರದಾನವೇ ಆಗಿತ್ತು. ಮಕ್ಕಳಿಗೆ ಸಮಾನವಾಗಿ ಹಂಚಿ ಹೆಚ್ಚು ಉಳಿದಿದ್ದರೆ ಶಿಕ್ಷಕರು ಇಟ್ಟುಕೊಳ್ಳುತ್ತಿದ್ದೆವು. ಅಕಸ್ಮಾತ್ ಮಕ್ಕಳು ಸಿದ್ಧವಾಗಿ ಬಂದಿರದಿದ್ದರೆ ಅಥವಾ ಶಿಕ್ಷಕಿಯರೇ ಮುಂಜಾಗ್ರತೆ ವಹಿಸದಿದ್ದರೆ ಅವು ಉಪಯೋಗಕ್ಕೆ ಬರುತ್ತಿದ್ದವು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಾಗಲೂ ಹೆಚ್ಚು ಬರುತ್ತಿದ್ದುದರಿಂದ ಶಾಲೆಯ ಸ್ಟೋರ್ ರೂಂನಲ್ಲಿ ಒಂದಿಷ್ಟು ಪ್ಯಾಕ್ ಗಳು ಇದ್ದವು. ಆಗೀಗ ಬೇಕು ಎಂದು ಕೇಳುವ ಮಕ್ಕಳಿಗೆ ಇವು ಪ್ರಯೋಜನಕ್ಕಾಗುತ್ತಿದ್ದವು. 

ಆದರೆ ನಂತರದ ದಿನಗಳಲ್ಲಿ ಹೆಣ್ಣುಮಕ್ಕಳ ಸಬಲಿಕರಣ ಬರಿ ಬಾಯಿಮಾತಾಗಿ, ಕಾಗದ ಪತ್ರಗಳ ಮೇಲಿನ ಅಂಕಿ ಅಂಶಗಳಾಗಿ ಉಳಿದಿದ್ದರಿಂದ ಇವುಗಳ ಸರಬರಾಜು ನಿಂತೇ ಹೋಯಿತು. 
ಇವಳಿಗೆ ಇದು ಮೊದಲ ಸ್ರಾವ. ಹೀಗಾಗಿ ಅವಳಿಗೆ ಏನೆಂದರೆ ಏನೂ ಗೊತ್ತಿರಲಿಲ್ಲವೆಂದರೂ ನಾವು ಚಿಕ್ಕವರಾಗಿದ್ದಷ್ಟು ಅಮಾಯಕಿಯಲ್ಲ. ಪ್ಯಾಡ್ ಧರಿಸುವುದು ಗೊತ್ತಿರದಿದ್ದರೂ ಋತುಸ್ರಾವ ಆಗುತ್ತದೆ ಎಂಬ ವಿಷಯವಾದರೂ ಇವಳಿಗೆ ಗೊತ್ತು. 'ಅಯ್ಯೋ ರಕ್ತ ಬರ್ತಿದೆ ಅಮ್ಮ. ನಾನು ಸತ್ತೇ ಹೋಗ್ತೇನೇನೋ?' ಎಂದು ಅದೇ ಶಾಲೆಯ ಶಿಕ್ಷಕಿಯಾಗಿದ್ದ ಅಮ್ಮನ ಬಳಿ ಗೋಳೋ ಎಂದು ಅತ್ತಿದ್ದೆ ನಾನು. ಅಮ್ಮ ಗಡಿಬಿಡಿಯಲ್ಲಿ ರಜೆ ಹಾಕಿ ನನ್ನನ್ನು ಮನೆಗೆ ಕರೆತಂದು ನಿಧಾನವಾಗಿ ಹೇಳಿದ್ದರು. ಈಗಿನಂತೆ ನ್ಯಾಪಿಗಳು ಇರಲಿಲ್ವಾದ್ದರಿಂದ ಬಟ್ಟೆ ಬಳಸು, ತೊಳಿ, ಯಾರೂ ಕಾಣದಂತೆ ಒಣಗಿಸು ಎಂಬ ಕಿರಿಕಿರಿಗೆ ರೋಸಿ ಹೋಗಿತ್ತು. ಆದರೆ ಈ ಹುಡುಗಿ ತಾನಾಗಿಯೇ ಎಂ ಸಿ ಆಯ್ತು ಎಂದು ಗೆಳತಿಯರ ಬಳಿ ಹೇಳಿದ್ದಳು. 
    ಅಂತೂ ಒಬ್ಬ ಶಿಕ್ಷಕಿ ತಮಗಾಗಿ ಎಂದು ಮನೆಯಿಂದ ತಂದುಕೊಂಡಿದ್ದ ಪ್ಯಾಡ್ ಕೊಟ್ಟು ಅವಳಿಗೆ ನ್ಯಾಪಿ ಧರಿಸುವುದನ್ನು ಹೇಳಿಕೊಟ್ಟು ಮೀನು ಮಾರಲು ಹೋಗಿದ್ದ ಅಮ್ಮನಿಗೆ ಫೋನ್ ಮಾಡಿದಾಗ ತನ್ನ ಬುಟ್ಟಿಯನ್ನು ಬೇರೆಯವರಿಗೆ ಮಾರಲು ತಿಳಿಸಿ ಓಡೋಡಿ ಬಂದಿದ್ದಳು. 
    ಮಹಿಳಾ ಸಬಲಿಕರಣದ ಹತ್ತು ಹಲವು ಕಾರ್ಯಕ್ರಮಗಳು, ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವ ಈ ಸಮಯದಲ್ಲಿ ಮಕ್ಕಳಿಗಾಗಿ ಪುನಃ ಶುಚಿ ಸರಬರಾಜು ಮಾಡುವತ್ತ ಸರಕಾರ ಗಮನವಹಿಸುತ್ತದೆಂಬ ಭರವಸೆಯಿದೆ.

ಶ್ರೀದೇವಿ ಕೆರೆಮನೆ

Thursday 10 November 2022

ಬದುಕಿದ ರೀತಿಯನ್ನೇ ಸಾಹಿತ್ಯವನ್ನಾಗಿಸಿ ಗೆದ್ದ ಜೇನ್ ಬೌಲ್ಸ್



ಜೀವನದ ದ್ವಿಲಿಂಗ ಆಸಕ್ತಿಯನ್ನೇ ಸಾಹಿತ್ಯವನ್ನಾಗಿಸಿ ಗೆದ್ದ ಜೇನ್ ಬೌಲ್ಸ್

ಫೆಬ್ರವರಿ ೨೨, ೧೯೧೭ರಂದು ನ್ಯೂಯಾರ್ಕ್ ನಗರದಲ್ಲಿ ಯಹೂದಿ ಕುಟುಂಬದಲ್ಲಿ ಜನಿಸಿದ  ಜೇನ್ ಅವರ ತಂದೆ ಸಿಡ್ನಿ ಔರ್ ಮತ್ತು ತಾಯಿ ಕ್ಲೇರ್ ಸ್ಟೇಜರ್. ಬಾಲ್ಯವನ್ನು ನ್ಯೂಯಾರ್ಕ್‌ನ ವುಡ್ಮೇರ್ನ್‌ನ ಲಾಂಗ್ ಐಲ್ಯಾಂಡ್‌ನಲ್ಲಿ ಕಳೆದ ಜೇನ್ ಹುಟ್ಟಿನಿಂದಲೇ ಮೊಣಕಾಲಿನಲ್ಲಿ ಸಮಸ್ಯೆಯನ್ನು ಹೊಂದಿದ್ದಳು. ನಂತರ  ಹದಿಹರೆಯದಲ್ಲಿ ಒಮ್ಮೆ ಕುದುರೆಯಿಂದ ಬಿದ್ದಿದ್ದರಿಂದ  ಮೊಣಕಾಲು ಮುರಿದುಹೋಯಿತು.  ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತರ ಅವರಿ ಕ್ಷಯ ಹಾಗೂ ಸಂಧಿವಾತ ಉಂಟಾಯಿತು. ಹೀಗಾಗಿ ಅವರ ತಾಯಿ ಚಿಕಿತ್ಸೆಗಾಗಿ ಸ್ವಿಟ್ಜರ್ಲೆಂಡ್‌ಗೆ ಕರೆದೊಯ್ದರು, ಅಲ್ಲಿ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸಮ ಮುಂದುವರೆಸಿದ ಜೇನ್  ನಂತರ ನ್ಯೂಯಾರ್ಕ್‌ನ ಜೂಲಿಯಾ ರಿಚ್ಮಂಡ್ ಹೈಸ್ಕೂಲ್ ಮತ್ತು ಮ್ಯಾಸಚೂಸೆಟ್ಸ್‌ನ ಗ್ರೀನ್ಫೀಲ್ಡ್‌ನಲ್ಲಿರುವ ಹುಡುಗಿಯರಿಗಾಗಿ ಸ್ಟೋನ್ಲೀಗ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು.

ಬಾಲ್ಯದಿಂದಲೂ ಇದ್ದ ಮೊಣಕಾಲಿನ ತೊಂದರೆ ಹಾಗೂ ಮೊಣಕಾಲಿನ ಮುರಿತದಿಂದಾಗಿ ಜೀವನದಲ್ಲಿ ತೀವ್ರ ಅಭದ್ರತೆಯೊಂದಿಗೆ ಬಳಲಿದ ಜೇನ್ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ನಾಯಿಗಳು, ಶಾರ್ಕ್‌ಗಳು, ಪರ್ವತಗಳು, ಕಾಡುಗಳು ಮತ್ತು ಎಲಿವೇಟರ್ಗಳ ಪಾರವಾದ ಭಯವನ್ನು ಬೆಳೆಸಿಕೊಂಡಿದ್ದ ಜೇನ್ ಜೀವಂತವಾಗಿ ಸುಟ್ಟು ಹೋಗುವ ಭಯವನ್ನು ಹೊಂದಿದ್ದರು. ೧೯೩೦ರ ದಶಕದ ಮಧ್ಯಭಾಗದಲ್ಲಿ ನ್ಯೂಯಾಕ್‌ಗೆ ಮರಳಿದ ನಂತರ ಗ್ರೀನ್ವಿಚ್ ವಿಲೇಜ್‌ಲ್ಲಿರುವ ಬೌದ್ಧಿಕ ಬೊಹೆಮಿಯಾದೆಡೆಗೆ ಆಕರ್ಷಿತರಾದರು.

        ಜೇನ್ ಅಪಾರವಾದ ಶ್ರೀಮಂತ ಜೀವನ ಪ್ರೀತಿಯನ್ನು ಹೊಂದಿದ್ದರು. ೧೯೩೭ರಲ್ಲಿ ಎರಿಕಾ ಮಾನ್‌ರವರು ಜೇನ್‌ರವರಿಗೆ ಸಂಯೋಜಕ ಮತ್ತು ಬರಹಗಾರ ಪಾಲ್ ಬೌಲ್ಸ್ ಅವರನ್ನು ಪರಿಚಯಿಸಿದರು. ೧೯೩೮ರಲ್ಲಿ ಪಾಲ್ ಬೌಲ್ಸ್‌ರವರನ್ನು ವಿವಾಹವಾಗಿ ಜೇನ್ ಔರ್‌ನಿಂದ ಜೇನ್ ಬೌಲ್ಸ್ ಆದರು. ಮಧ್ಯ ಅಮೇರಿಕಾಕ್ಕೆ ಮಧುಚಂದ್ರಕ್ಕೆ ಹೋದರು. ಅವರು ಹೋಗಿದ್ದ ಮಧುಚಂದ್ರದ ಸ್ಥಳವು ಅವರ ಕಾದಂಬರಿ ಟು ಸೀರಿಯಸ್ ಲೇಡೀಸ್ಗೆ ಸ್ಫೂರ್ತಿ ನೀಡಿತು. ಪ್ಯಾರಿಸ್‌ನಲ್ಲಿ ಒಟ್ಟಿಗೆ ಪ್ರಯಾಣಿಸುವಾಗ ಲೆಸ್ಬಿಯನ್ ಬಾರ್‌ಗಳಿಗೆ ಭೇಟಿ ನಿಡುತ್ತಿದ್ದರು. ಮದುವೆಯ ನಂತರ ಸುಮಾರು ಒಂದೂವರೆ ವರ್ಷಗಳ ಕಾಲ  ಅವರಿಬ್ಬರ ವೈವಾಹಿಕ ಜೀವನ ಸುಂದರವಾಗಿತ್ತಲ್ಲದೆ ಉತ್ತಮ ಲೈಂಗಿಕ ಜೀವನ ನಡೆಸಿದರು. ಆರಂಭಿಕ ವರ್ಷಗಳ ನಂತರ, ಜೇನ್ ಮತ್ತು ಪಾಲ್ ಪ್ಲಾಟೋನಿಕ್ ಸಹಚರರಾಗಿದ್ದರು. ಅವರಿಬ್ಬರೂ ದ್ವಿಲಿಂಗಿಗಳಾಗಿದ್ದರು. ಅದರಲ್ಲೂ ಮುಖ್ಯವಾಗಿ ಇಬ್ಬರೂ ತಮ್ಮ ಮದುವೆಯ ಹೊರಗೆ ಲೈಂಗಿಕತೆಯನ್ನು ಪಡೆಯಲು ಆದ್ಯತೆ ನೀಡಿದರು.

 ನಂತರ ಜೇನ್ ಮತ್ತು ಪಾಲ್ ಮೆಕ್ಸಿಕೋಗೆ ಹೋದಾಗ ಅಲ್ಲಿ ಜೇನ್  ಹೆಲ್ವೆಟಿಯಾ ಪರ್ಕಿನ್ಸ್ ಅವರನ್ನು ಭೇಟಿಯಾದರು,  ಅವರಿಬ್ಬರೂ ಲೆಸ್ಬಿಯನ್ ಪ್ರೇಮಿಗಳಾಗಿದ್ದರೆಂದು ಅವರ ಜೀವನ ಚರಿತ್ರೆಕಾರರು ಉಲ್ಲೇಖಿಸಿದ್ದಾರೆ.


    ೧೯೪೩ ರಲ್ಲಿ, ಅವರ ಕಾದಂಬರಿ ಟು ಸೀರಿಯಸ್ ಲೇಡೀಸ್ ಪ್ರಕಟವಾಯಿತು. ಟೂ ಸಿರಿಯಸ್ ಲೇಡಿಸ್ ಕೃತಿಯು ಇಬ್ಬರು ಮಹಿಳೆಯರ ಕುರಿತಾದ ಕೃತಿ. ಒಬ್ಬಳು ಕೆಟ್ಟ ಕೆಲಸ ಮಾಡುವ ಹಾಗೂ ಕ್ರೂರಿಯಾದರೆ ಇನ್ನೊಬ್ಬಳು ಸದ್ಗುಣ ಸಂಪನ್ನೆ. ಜೀವನದಲ್ಲಿ ಕೇವಲ ಎರಡು ಸಲ ಭೇಟಿಯಾಗಿರುವ ಈ ಇಬ್ಬರು ಮಹಿಳೆಯರ ಕಥೆಗಳು ಇಬ್ಬರ ಜೀವನ ಪ್ರತ್ಯೇಕವಾಗಿಯೇ ಮುಂದುವರೆಯುವ ಈ ಸಂಕಲನ ಅದರ ನಿರೂಪಣೆಗಾಗಿ ಹೊಗಳಿಸಿ ಕೊಂಡಿದೆ. ದಿ ಲೋಬ್ಸ್ಟರ್ ಬೌಲ್ ಎಂಬ ರೆಸ್ಟೋರೆಂಟ್ನಲ್ಲಿ ಸಂಭವಿಸುತ್ತದೆ.  ಇಲ್ಲಿ ಲೇಖಕಿ ಆಹಾರವನ್ನು ರೂಪಕ ಚಿತ್ರಣವನ್ನಾಗಿ ಬಳಸಿದ್ದಾರೆ. ಬೌಲ್ಸ್ ತಮ್ಮ ತಾಯಿಯೊಂದಿಗೆ ಹೊಂದಿದ್ದ ಸಂಕೀರ್ಣ ಸಂಬಂಧವು ಈ ಕಥಾವಸ್ತುವಿಗೆ ಸ್ಫೂರ್ತಿಯಾಗಿರಬಹುದು ಎಂದು ಜೀವನಚರಿತ್ರೆಕಾರರು ಅಭಿಪ್ರಾಯ ಪಟ್ಟಿದ್ದಾರೆ.



 ೧೯೪೭ರವರೆಗೆ ಜೇನ್ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದರೆ ಪಾಲ್ ಮೊರಾಕೊದ ಟ್ಯಾಂಜಿಯರ್‌ಗೆ ತೆರಳಿದರು ; ಜೇನ್ ೧೯೪೮ರಲ್ಲಿ ಪೌಲ್‌ರವರನ್ನು ಸೇರಿಕೊಂಡರು. ಮೊರಾಕೊದಲ್ಲಿದ್ದಾಗ, ಜೇನ್ ಚೆರಿಫಾ ಎಂಬ ಮೊರೊಕನ್ ಮಹಿಳೆಯೊಂದಿಗೆ ತೀವ್ರವಾದ ಮತ್ತು ಸಂಕೀರ್ಣವಾದ ಸಂಬಂಧವನ್ನು ಹೊಂದಿದ್ದರು. ಅವರು ಟಾರ್ಚ್ ಗಾಯಕ ಲಿಬ್ಬಿ ಹಾಲ್ಮನ್‌ರೊಂದಿಗೂ ನಿಕಟ ಸಂಬಂಧವನ್ನು ಹೊಂದಿದ್ದರು, ವಿಚಿತ್ರವೆಂದರೆ  ಲಿಬ್ಬಿ ಹಾಲ್ಮನ್ ರವರು ಜೇನ್ ಮತ್ತು ಪಾಲ್ ಇಬ್ಬರ ಕಡೆಗೂ ಆಕರ್ಷಿತರಾಗಿದ್ದರು, ಆದರೆ ಪಾಲ್ ಈ ಸಂಬಂಧದ ಬಗ್ಗೆ ಹೆಚ್ಚೇನೂ ಆಸಕ್ತಿ ಹೊಂದಿರದ ಕಾರಣ ಪ್ರತಿಕ್ರಿಯಿಸಲಿಲ್ಲ.

ಜೇನ್ ಬೌಲ್ಸ್ ೧೯೫೩ರಲ್ಲಿ ಸಮ್ಮರ್ ಹೌಸ್ ನಾಟಕವನ್ನು ಬರೆದರು. ಇದು ಬ್ರಾಡ್ವೇನಲ್ಲಿ ಪ್ರದರ್ಶನಗೊಂಡಿತು. ಟೆನ್ನೆಸ್ಸೀ ವಿಲಿಯಮ್ಸ್ , ಟ್ರೂಮನ್ ಕಾಪೋಟ್ ಮತ್ತು ಜಾನ್ ಆಶ್ಬೆರಿ ಮುಂತಾದ ಬಹಳಷ್ಟು ಖ್ಯಾತನಾಮ ಬರಹಗಾರರು ಇವರ ಸಾಹಿತ್ಯಿಕ ಅಭಿವ್ಯಕ್ತಿಯನ್ನು ತುಂಬು ಮನಸ್ಸಿನಿಂದ ಹೊಗಳಿದರು.
ವಿಲಕ್ಷಣವಾದ ಕಥಾವಸ್ತು ಹೊಂದಿರುವ ಈ ನಾಟಕವು ಅತಿಯಾಗಿ ಆಡುವ ತಾಯಿ ಮತ್ತು ಸೌಮ್ಯ ಮಗಳು ಮತ್ತು ಸೌಮ್ಯವಾದ ತಾಯಿ ಮತ್ತು ಅತಿಯಾಗಿ ವರ್ತಿಸುವ ಮಗಳ ಹೋಲಿಕೆಯಾಗಿದೆ.  ಕಥಾವಸ್ತುವು ಪಾತ್ರದ ಪರಸ್ಪರ ಸಂಭಾಷಣೆಯಿಂದ ಮುಂದುವರೆಯುತ್ತದೆ ಹೊರತು ಕ್ರಿಯೆಯಿಂದಲ್ಲ. ನಾಟಕವು  ಓ ಎಸ್. ಗೆರ್ಟುಡ್ ಈಸ್ಟ್ಮನ್ ಕ್ಯುವಾಸ್ ಅವರ ಸ್ವಗತದೊಂದಿಗೆ ಪ್ರಾರಂಭವಾಗುತ್ತದೆ, ದಕ್ಷಿಣ ಕ್ಯಾಲಿಫೋರ್ನಿಯಾದ ಓರ್ವ ವಿಧವೆ ಶ್ರೀಮಂತ ಮೆಕ್ಸಿಕನ್ ಒಬ್ಬನನ್ನು ಮದುವೆಯಾಗುತ್ತಾಳೆ. ಆತ ಹಾಡು ಮತ್ತು ನೃತ್ಯದ ಒಡನಾಡಿಯಾಗಿದ್ದವನಾದರೂ ಆ ಶ್ರೀಮಂತ ವಿಧವೆಯ ಮಗಳ ಮೇಲೆ ದಬ್ಬಾಳಿಕೆ ನಡೆಸುತ್ತಾನೆ.  ಹೀಗಾಗಿ ವಿಧವೆ ಶ್ರೀಮತಿ ಕಾನ್ಸ್ಟೇಬಲ್ ಮತ್ತು ಅವಳ ದೈಹಿಕ ಅಸಾಮರ್ಥ್ಯ ಮಗಳು ಇಬ್ಬರೂ ಅಸ್ಥಿರ ಭಾವನೆ ಅನುಭವಿಸುವ ಕಥಾನಕವನ್ನು ಇದು ಹೊಂದಿದೆ. ಮಿಸ್ ಕ್ಯುವಾಸ್ ಒಬ್ಬ ಸೂಟರ್ ಅನ್ನು ಹೊಂದಿದ್ದರೂ ಅದು ಅವಳ ತಾಯಿಗೆ ಹೆಚ್ಚು ಕಾಡುತ್ತಿರವಹುದೆಂದು ಅವಳು ಭಾವಿಸುತ್ತಾಳೆ. ಹೀಗಾಗಿ ಇದು ಮೊದಲು ಹೇಳಿದ ಒ ಎಸ್. ಕ್ಯುವಾಸ್ ಮತ್ತು ಅವರ ಹೊಸ ಪತಿ ಮೌನವಾಗಿ ಪತ್ರಿಕೆ ಓದುವುದರ ಮುಖಾಂತರ ಅವರ ಕಾರ್‍ಯವನ್ನು ಮುಚ್ಚಿ ಹಾಕುವಂತೆ ಚಿತ್ರಿಸಲಾಗಿದೆ.


         ಸಮ್ಮರ್ ಹೌಸ್ನಲ್ಲಿ ಅವರ ಏಕೈಕ ಪೂರ್ಣ ಪ್ರಮಾಣದ ಹಾಗೂ ದೀರ್ಘಾವಧಿಯ ನಾಟಕವಾಗಿತ್ತು. ಇದನ್ನು ಮೊದಲು ೧೯೫೧ರಲ್ಲಿ ಪೆನ್ಸಿಲ್ವೇನಿಯಾದ ಮೊಯ್ಲಾನ್‌ನಲ್ಲಿರುವ ಹೆಡ್ಗೆರೋ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗಿತ್ತು. ನಾಟಕವು ಪಾಲ್ ಬೌಲ್ಸ್ ಅವರ ಸಂಗೀತದೊಂದಿಗೆ ೨೯ ಡಿಸೆಂಬರ್ ೧೯೫೩ರಂದು ಬ್ರಾಡ್ವೇ ದಿ ಪ್ಲೇಹೌಸ್ ಥಿಯೇಟರ್‌ನಲ್ಲಿ ಪ್ರದರ್ಶನ ಗೊಂಡಿತು. ಅಲ್ಲಿ ಅದು ಮಿಶ್ರ ವಿಮರ್ಶೆಗಳೊಂದಿಗೆ ಮತ್ತು ಕಡಿಮೆ ಪ್ರೇಕ್ಷಕರೊಂದಿಗೆ ಎರಡು ತಿಂಗಳ ಕಾಲ ನಡೆಯಿತು. ೧೯೬೩ರ ಸುಮಾರಿಗೆ, ನಾಟಕವನ್ನು ಪುನರುಜ್ಜೀವನಗೊಳಿಸಲಾಯಿತು.  ನಾಟಕವು ೧೯೯೩ರಲ್ಲಿ ವಿವಿಯನ್ ಬ್ಯೂಮಾಂಟ್ ಥಿಯೇಟರ್‌ನಲ್ಲಿ ಫಿಲಿಪ್ ಗ್ಲಾಸ್‌ರವರ ಪ್ರಾಸಂಗಿಕ ಸಂಗೀತದೊಂದಿಗೆ ಪುನಃ ಪ್ರದರ್ಶನ ಕಂಡಿತು. ಈ ಪುನರುಜ್ಜೀವನವು ನಾಟಕದ ಅತ್ಯುತ್ತಮ ನಿರ್ದೇಶಕ, ರಂಗಸಜ್ಜಿಕೆ ಮತ್ತು ಪೋಷಕ ನಟಿಗಾಗಿ ೧೯೯೪ ರ ಡ್ರಾಮಾ ಡೆಸ್ಕ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಪಡೆಯಿತು.

ಒಟ್ಟೂ ಏಳು ಕಥಾ ಸಂಕಲನ ಪ್ರಕಟಿಸಿರುವ ಜೇನ್ ಬರಹಗಳಿಗೆ ಅವರ ಜೀವನವೇ ಸ್ಪೂರ್ತಿ. ಅವರ ಕಲೆಕ್ಟೆಡ್ ವರ್ಕ್ಸ್ ಅನ್ನು 1966ರಲ್ಲಿ ಪ್ರಕಟಿಸಲಾಯಿತು. ಅವರ ಮರಣದ ನಂತರ ಅದನ್ನು ವಿಸ್ತರಿಸಿ ಮೈ ಸಿಸ್ಟರ್ಸ್ ಹ್ಯಾಂಡ್ ಇನ್ ಮೈನ್ (1978) ಎಂದು ಪ್ರಕಟಿಸಲಾಯಿತು.

 ತೀವ್ರ ಮದ್ಯವ್ಯಸನಿಯಾಗಿದ್ದ ಬೌಲ್ಸ್, ೧೯೫೭ರಲ್ಲಿ ತಮ್ಮ ೪೦ನೇ ವಯಸ್ಸಿನಲ್ಲಿ ಪಾರ್ಶ್ವವಾಯುವಿಗೆ ಒಳಗಾದರು. ಪಾರ್ಶ್ವವಾಯು ಅವರ ದೃಷ್ಟಿ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿತು, ಆದರೆ ಅವರು ತಮ್ಮ ಆರೋಗ್ಯ ಸಮಸ್ಯೆಗಳನ್ನು ತಳ್ಳಿಹಾಕಿ ಬರೆಯುವುದನ್ನು ಮುಂದುವರೆಸಿದರು. ಇಂಗ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಕಾಯಿಲೆಗೆ ವಿವಿಧ ಚಿಕಿತ್ಸೆಗಳನ್ನು ಪಡೆದುಕೊಂಡರಾದರೂ ಇದರ ಹೊರತಾಗಿಯೂ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು,ನಂತರ ಕೊನೆಯಲ್ಲಿ ಅವರನ್ನು ಸ್ಪೇನ್‌ನ ಮಲಗಾದಲ್ಲಿನ ಚಿಕಿತ್ಸಾಲಯಕ್ಕೆ ಸೇರಿಸಲಾಯಿತು. ಅಲ್ಲಿ ಅವರು ೧೯೭೩ರಲ್ಲಿ ತಮ್ಮ ೫೬ನೇ ವಯಸ್ಸಿನಲ್ಲಿ ನಿಧನರಾದರು.

   ಪಾಲ್ ಬೌಲ್ಸ್‌ರವರ ಅರೆ-ಆತ್ಮಚರಿತ್ರೆ ಆಧರಿಸಿದ ಕಾದಂಬರಿ ದಿ ಶೆಲ್ಟರಿಂಗ್ ಸ್ಕೈನಲ್ಲಿ , ಪೋರ್ಟ್ ಮತ್ತು ಕಿಟ್ ಮೊರೆಸ್ಬಿ ಪಾತ್ರಗಳು ಪಾಲ್ ಬೌಲ್ಸ್ ಮತ್ತು ಅವರ ಹೆಂಡತಿ ಜೇನ್ ಬೌಲ್ಸ್‌ರವರನ್ನು ಆಧರಿಸಿವೆ. ಕಾದಂಬರಿಯು ಚಲನಚಿತ್ರವಾದಾಗ ಜೇನ್ ಪಾತ್ರವನ್ನು ಡೆಬ್ರಾ ವಿಂಗರ್ ಕಿಟ್ ನಿರ್ವಹಿಸಿದರು.
ಸಾಂಸಾರಿಕ ಜೀವನದಲ್ಲಿದ್ದೂ ಗಂಡ ಹೆಂಡತಿ ಇಬ್ಬರೂ ದ್ವಿಲಿಂಗಿಗಳಾಗಿ ಹೊರಗಿನವರೊಂದಿಗೆ ಸಂಬಂಧ ಬೆಳೆಸಲು ಉತ್ಸುಕರಾಗಿದ್ದಾಗಿಯೂ ತಮ್ಮ ವೈವಾಹಿಕ ಸಂಬಂಧವನ್ನು ಕೊನೆಯವರೆಗೂ ಕಾಪಾಡಿಕೊಂಡ ವಿಲಕ್ಷಣ ಸಾಹಿತ್ಯಿಕ ದಂಪತಿಗಳಾಗಿ ಇವರಿಬ್ಬರೂ ಸದಾ ಸಾಹಿತ್ಯ ಪ್ರೇಮಿಗಳಲ್ಲಿ ನೆನಪಿನಲ್ಲಿ ಉಳಿಯುತ್ತಾರೆ. ತಮ್ಮದೇ ವೈಯಕ್ತಿಕ ಜೀವನದ ಅನುಭವಗಳನ್ನು ಕಾದಂಬರಿ ನಾಟಕಗಳ ಮುಖಾಂತರ ಓದುಗರಿಗೆ ಕಟ್ಟಿಕೊಟ್ಟು ದಟ್ಟವಾದ ಅನುಭವವನ್ನು ಉಣಬಡಿಸಿದ ಖ್ಯಾತಿ ಜೇನ್ ಹೆಸರಿಗಿದೆ.


https://lokadhwani.com/ArticlePage/APpage.php?edn=Main&articleid=LOKWNI_MAI_20221111_4_6