Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Saturday 16 April 2022

ಆಹಾರಕ್ಕೆ ಅವಹೇಳನವೇಕೆ?



ಆಹಾರಕ್ಕೆ ಅವಹೇಳನವೇಕೆ?

(ಮುಖಗಳು ಅಂಕಣದಿಂದ - https://unikannada.com/why-insult-food/
ಶ್ರೀದೇವಿ ಕೆರೆಮನೆ ಅವರು ಬರೆಯುವ "ಮುಖಗಳು" ಅಂಕಣದಿಂದ... 
ಬೋಟಿಗೆ ಹೋಗಿ ಮೀನು ಹಿಡಿದುಕೊಂಡು ಬರುವ ಮೀನುಗಾರ ಗಂಡಸರಿಗೂ ತಮ್ಮ ಕುಟುಂಬಕ್ಕೊಂದು ಆರ್ಥಿಕ ನೆಲೆ ಒದಗಿಸುತ್ತಿರುವ, ತಮ್ಮ ಉದ್ಯೋಗವೇ ಆಗಿರುವ ಮೀನುಗಾರಿಕೆಯ ಕಸುಬು ಕೀಳು ಎಂಬಂತೆ … ಪೂರ್ಣ ಓದಿಗೆ ಲಿಂಕ್ ಕ್ಲಿಕ್ ಮಾಡಿ 
https://unikannada.com/why-insult-food/)




                                ಟೀಚರ ಊಟ ಆಯ್ತಾ? ಏನು ಸಾರು ಮಧ್ಯಾಹ್ನ ಊಟದ ನಂತg ಶಾಲೆಯಲ್ಲಿ ಹುಡುಗಿಯೊಬ್ಬಳು ಕೇಳಿದ ಪ್ರಶ್ನೆ ಇದು. ನೀವಂತೂ ಮೀನು ತಂದು ಕೊಡೋದಿಲ್ಲ ಹೀಗಾಗಿ ನಾನೇ ಮೀನು ಸಾರು ಮಾಡಿಕೊಂಡು ಬಂದಿದ್ದೇನೆ. ನಾನು ತಮಾಷೆ ಮಾಡಿದೆ. ಇವತ್ತೂ ಮೀನು ತಿಂತೀರಾ ಟೀಚರ್? ನಾನೇನೋ ಕೊಲೆ ಮಾಡ್ತಿದ್ದೀನಿ ಅನ್ನುವ ಹಾಗೆ ಪಕ್ಕದ ಹುಡುಗಿ ದೊಡ್ಡ ದೊಡ್ಡ ಕಣ್ಣು ತೆರೆದು ಕೇಳುವಾಗ ನನಗೆ ಅಚ್ಚರಿ. ಯಾಕೆ? ಇವತ್ತು ಮೀನು ತಿನ್ನಬಾರದೆಂಬ ಕಾನೂನು ರಚಿಸಿದ್ದಾರಾ? ನನಗೆ ಗೊತ್ತೇ ಆಗಲಿಲ್ವಲ್ಲ? ನಾನು ಮತ್ತಿಷ್ಟು ತಮಾಷೆ ಮಾಡಿದೆ. ಟೀಚರ್ ಇವತ್ತು ಸಂಕಷ್ಟಿ. ಇವತ್ತು ಮೀನು ತಿನ್ನಬಾರದು. ಮೊದಲು ಪ್ರಶ್ನೆ ಕೇಳಿದವಳು ನನಗೆ ಏನನ್ನೋ ಹೇಳಿಕೊಡುವಂತೆ ಸಮಾಧಾನಿಸಿ ಹೇಳಿದಳು. ಸಂಕಷ್ಟಿ ದಿವಸ ಮೀನು ತನ್ನನ್ನು ತಿನ್ನ ಬೇಡ ಅಂತಾ ನಿಮಗೇನಾದರೂ ಹೇಳಿದೆಯಾ? ನಾನು ಪುನಃ ಪ್ರಶ್ನಿಸಿದೆ. ಆಕೆ ಮಾತನಾಡಲಿಲ್ಲ. ಉಳಿದ ಮಕ್ಕಳೂ ಮುಖ ಮುಖ ನೋಡಿಕೊಂಡು ಸುಮ್ಮನಾದವು. 'ಈ ಟೀಚರ್‌ಗೆ ಏನು ಹೇಳಿದರೂ ಅಷ್ಟೆ' ಎಂಬ ಮುಖಭಾವದಲ್ಲಿ.


     ನಮ್ಮ ಶಾಲೆಯ ಸುತ್ತಮುತ್ತ ವಾಸಿಸುವವರೆಲ್ಲ ಮೀನುಗಾರರೇ. ಏಷ್ಯಾದ ಅತಿ ದೊಡ್ಡ ನೌಕಾನೆಲೆ ಎಂಬ ಹೆಗ್ಗಳಿಕೆಯನ್ನಿಟ್ಟುಕೊಂಡ ಸೀ ಬರ್ಡ ನಿರಾಶ್ರಿತರ ಏರಿಯಾದಿಂದ ಬಂದಂತವರು. ಇವರೆಲ್ಲ ಮೀನುಗಾರ ಜನಾಂಗದವರೇ. ಒಂದಿಷ್ಟು ಒಳಜಾತಿಗಳಿರಬಹುದು. ಹರಿಕಂತ್ರ, ಅಂಬಿಗ, ಖಾರ್ವಿ, ಗಾಬಿತ್ ಮುಂತಾದ ಮೀನುಗಾರ ಜನಾಂಗಗಳ ಮೀನುಗಾರರನ್ನು ಅವರ ಊರುUಳಲ್ಲಿ ಸೀ ಬರ್ಡ ನೌಕಾ ನೆಲೆಯನ್ನು ಸ್ಥಾಪಿಸುವುದಕ್ಕಾಗಿ ವಶಪಡಿಸಿಕೊಂಡ ನಂತರ ಅವರನ್ನೆಲ್ಲ ಅಂಕೋಲಾ ಹಾಗೂ ಕಾರವಾರ ತಾಲೂಕಿನ ನಾಲ್ಕಾರು ಕಡೆ ಹರಿದು ಹಂಚಲಾಯಿತು. ಹಾಗೆ ಒಂದಿಷ್ಟು ಜನ ಬಂದಿದ್ದು ಈ ಚಿತ್ತಾಕುಲ ಸೀ ಬರ್ಡ ನಿರಾಶ್ರಿತರ ಕಾಲೋನಿಗಳಿಗೆ. ಹೀಗಾಗಿ ಎಲ್ಲವೂ ಮೀನುಗಾರ ಕುಟುಂಬಗಳೇ. ಆದರೆ ಈ ಮೀನುಗಾರರಲ್ಲಿ ಇತ್ತೀಚೆಗೆ ಇವತ್ತು ಸೋಮವಾರ ಮೀನು ತಿನ್ನಬಾರದು, ಶುಕ್ರವಾರ ಮೀನು ತಿನ್ನುವುದು ನಿಶಿದ್ಧ, ಶನಿವಾರ ತಿಂದರೆ ತಿರುಪತಿ ತಿಮ್ಮಪ್ಪನಿಗೆ ಸಿಟ್ಟು ಬರುತ್ತದೆ ಎಂಬೆಲ್ಲ ನಂಬಿಕೆಗಳು ಬಲಿಯುತ್ತಿವೆ. ದಿನದಿಂದ ದಿನಕ್ಕೆ ಈ ನಂಬಿಕೆಗಳು ವ್ಯಾಪಕವಾಗುತ್ತ ಸಾಗಿದೆ.
      ಸೋಮವಾರ ಅದೇನೋ ಸಮುದ್ರ ಹುಟ್ಟಿದ ದಿನ ಎಂಬ ನಂಬಿಕೆ ಮೀನುಗಾರರಲ್ಲಿದೆ. ಹೀಗಾಗಿ ಆ ದಿನ ಮೀನು ಹಿಡಿಯಲು ಹೋಗುವುದೂ ಕಡಿಮೆಯೇ. ಮೀನುಗಾರರಲ್ಲೇ ಕಟ್ಟಾ ಸಂಪ್ರದಾಯವಾದಿಗಳು ಸೋಮವಾರ ಕಡಲ ದೇವತೆಯ ನಂಬಿಕೆಯಿಂದ ಮೀನು ತಿತ್ತದಿರುವುದು ಲಾಗಾಯಿತ್ತಿನಿಂದಲೂ ನಡೆದುಕೊಂಡು ಬಂದಿದೆ. ಹಾಗಂತ ಈ ಸೋಮವಾgವನ್ನು ಖಂಡಿತವಾಗಿ ಯಾವುದೇ ಶಿಷ್ಟ ದೇವತೆಗಳ ಹೆಸರಿನಲ್ಲ ಮೀನನ್ನು ವರ್ಜಿಸಿದ್ದಲ್ಲ. ಅದೊಂದು ಕಡಲಿಗೆ ಕಡಲ ಮಕ್ಕಳ ಗೌರವ ಎಂಬಂತೆ ನಡೆದುಕೊಂಡು ಬಂದಿದ್ದು.
                  ಬೋಟಿಗೆ ಹೋಗಿ ಮೀನು ಹಿಡಿದುಕೊಂಡು ಬರು ಮೀನುಗಾರ ಗಂಡಸರಿಗೂ ತಮ್ಮ ಕುಟುಂಬಕ್ಕೊಂದು ಆರ್ಥಿಕ ನೆಲೆ ಒದಗಿಸುತ್ತಿರುವ, ತಮ್ಮ ಉದ್ಯೋಗವೇ ಆಗಿರುವ ಮೀನುಗಾರಿಕೆಯ ಕಸುಬು ಕೀಳು ಎಂಬಂತೆ ಭಾಸವಾಗುತ್ತಿದೆ. ನಾಮಂತೂ ಬರೀ ಮೀನ್ ಹಿಡ್ಕುಂಡೇ ಜೀವ್ನ ಮಾಡಾಯ್ತ. ನಮ್ಮ ಮಕ್ಳಿಗೇ ಈ ಧಂದಿ ಬ್ಯಾಡಾ.. ಅವ್ರಿಗೆ ಬೇರೇನಾರೂ ಮಾಡೂಕೆ ಹೇಳ್‌ಬೇಕ್. ಒಂದ್ ಅಂಗ್ಡಿ ಹಾಕಂಡ್ ಕುಂತ್ರೂ ಸಾಕಾಗೇದ್. ಎನ್ನುವ ಅಪ್ಪ ಕೂಡ ವಾರದಲ್ಲಿ ಎರಡು ದಿನ ಶಿಷ್ಟ ದೇವತೆಯ ಹೆಸರಿನಲ್ಲಿ ಮೀನು ಬಿಡುತ್ತಾನೆ. ಇತ್ತ ಗಂಡ ತಂದ ಮೀನನ್ನು ಮಾರಾಟಕ್ಕೆ ಒಯ್ಯುವ ಹೆಂಡತಿಯೂ ವಾರಕ್ಕೆ ನಾಲ್ಕು ದಿನ ವಾರದ ಹೆಸರಿನಲ್ಲಿ ತಮ್ಮ ಸಹಜ ಆಹಾರವನ್ನು ಕೀಳೆಂಬಂತೆ ನೋಡುತ್ತಿದ್ದಾಳೆ. ನಮ್ಮ ಹಣಿಬರಾ ನೋಡ್ ಬಾಯೆ, ನಂಗೆ ಇಂದೆ ಸೋಮಾರ, ಹಂಗಂದ್ಕುಂಡೆ ಮೀನ್ ಮುಟ್ದೇ ಇರೂಕಾಗೂದೇ? ಮೀನ್ ಮಾರೂಕೆ ಹೋಗ್ಲೇ ಬೇಕ್. ಹಿಂಗೆ ಮೀನ್ ಮುಟ್ಕಂಡೆ ವಾರ ಮಾಡದ್ರೆ ಆ ಧರ್ಮಸ್ಥಳ ಮಂಜುನಾಥ ಸಿಟ್ಟ ಮಾಡ್ಕಂಬೂದೆಲ್ಲ:? ನಮ್ಗಂತೂ ಶುದ್ಧಾಚಾರದ ವಾರ ಮಾಡೂಕೂ ಆಗೂದೆಲ್ಲ. ಅದ್ಕೂ ಕೇಳ್ಕಾ ಬರಬೇಕ್ ಮೊನ್ನೆ ನಮ್ಮ ಶಾಲೆಗೆ ಬಂದ ಮೀನು ಮಾರಲು ಹೋದ ಒಬ್ಬ ತಾಯಿಯ ಕಳವಳದ ಹೇಳಿಕೆ. ತಮ್ಮದೇ ಉದ್ಯೋಗವಾದ ಮೀನು ಮಾರುವುದನ್ನು ಕೀಳೆಂಬಂತೆ ನೋಡುವ ಅಸಂಜಸತೆಯನ್ನು ಇವರಿಗೆ ಕಲಿಸಿದವರಾರು? ದೇವರನ್ನು ಆರಾಧಿಸ ಬೇಕೆಂದರೆ ಮನಸ್ಸು ಶುದ್ಧವಾಗಿದ್ದರೆ ಸಾಲದು, ಮೀನು ಕೋಳಿ ಮುಟ್ಟದೇ, ತಿನ್ನದೇ ದೇಹವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದನ್ನು ಇವರಿಗೆ ಹೇಳಿಕೊಟ್ಟವರಾರು?
                    ಹೀಗೆ ಒಂದು ಸಮಾಜದ ಆಹಾರ ಪದ್ದತಿಯನ್ನೇ ಕೆಟ್ಟದ್ದು ಎಂದು ಬಿಂಬಿಸುವ ಪ್ರಯತ್ನದಿಂದಾಗಿ ಆಗುತ್ತಿರುವ ಅವಘಡಗಳು ಒಂದೆರಡಲ್ಲ. ಇತ್ತೀಚೆಗೆ ಶಾಲೆಗೆ ಬರುವ ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚಾಗಿ ವಿದ್ಯಾರ್ಥಿನಿಯರು ತಮ್ಮ ತಂದೆ ಮೀನುಗಾರ ಎಂದೋ ಅಥವಾ ತಾಯಿ ಮೀನು ಮಾರಲು ಹೋಗುತ್ತಾಳೆ ಎಂಬುದನ್ನು ಹೇಳಿಕೊಳ್ಳಲೂ ಮುಜುಗರಪಟ್ಟುಕೊಳ್ಳುತ್ತಿರುವುದು ನಿಜಕ್ಕೂ ಆತಂಕದಾಯಕವಾಗಿ ಕಾಣಿಸುತ್ತಿದೆ.

                 ಒಬ್ಬಳು ಹುಡುಗಿ ಮನೆಯಲ್ಲಿ ಸತ್ಯ ನಾರಾಯಣ ವೃತವಿದೆ ಎಂದು ಎರಡು ದಿನದ ರಜೆ ಕೇಳಲು ಬಂದಿದ್ದಳು. ಪೂಜೆ ಮಾಡೊದು ನಿನ್ನ ತಂದೆ ತಾಯಿ ತಾನೇ? ನಿನಗೇಕೆ ಎರಡು ದಿನಗಳ ರಜೆ? ಆ ದಿನ ಮಧ್ಯಾಹ್ನ ಬೇಕಿದ್ದರೆ ಅರ್ಧ ದಿನ ಹೋಗು. ನಾನು ಮಾಮುಲಾಗಿ ಹೇಳಿದೆ. ಒಮ್ಮೆಲೆ ಬೆಚ್ಚಿ ಬಿದ್ದವಳಂತೆ ಆಕೆ ಗಲ್ಲ ಗಲ್ಲ ಬಡಿದುಕೊಂಡಳು. ಟೀಚರ್, ಸತ್ಯನಾರಾಯಣ ತುಂಬಾ ಶಕ್ತಿ ಇರೋ ದೇವರು. ಹಾಗೆಲ್ಲ ಹೇಳಬಾರದು ಎಂಬಂತೆ ಮಾತನಾಡಿದಳು. ಅಂತೂ ಅತ್ತೂ ಕರೆದ ಅವಳಿಗೆ ಅದೊಂದು ದಿನ ಮಾತ್ರ ಶಾಲೆಗೆ ಬರದಿರಲು ಒಪ್ಪಿಗೆ ನೀಡಿದೆ. ಪೂಜೆ ಮುಗಿಸಿ ಬಂದ ಮಾರನೆಯ ದಿನ ಪ್ರಸಾದ ಕೊಡಲು ಬಂದಾಗ ಮಧ್ಯಾಹ್ನ ಊಟ ಮುಗಿದಿತ್ತು. ಆಕೆಗೋ ಮೀನು ತಿಂದ ಟೀಚರ್‌ಗಳಿಗೆ ಪ್ರಸಾದ ಕೊಡಲು ಹಿಂಜರಿಕೆ. ಅದಕ್ಕೆ ತಕ್ಕಂತೆ ಕೆಲವು ಟೀಚರ್‌ಗಳೂ ಮಡಿವಂತಿಕೆ ತೋರಿಸಿ ಆಕೆಯ ಕೈಯ್ಯಿಂದಲೇ ಪೇಪರ್‌ನಲ್ಲಿ ಪೊಟ್ಟಣ ಕಟ್ಟಿಸಿ ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದರು. ಇದು ಬೇಕಿದ್ರೆ ಜಾಸ್ತಿ ಕೊಡು. ತಿನ್ನೋಕೆ ತುಂಬಾ ಚೆನ್ನಾಗಿರುತ್ತೆ. ನಾನು ಮಾಮೂಲಿನಂತೆ ಹೇಳಿದ್ದೆ. ಆಗಲೂ ಆಕೆಯ ಮುಖದಲ್ಲೊಂದು ಭಯ. ಅದಾದ ಒಂದು ವಾರz ನಂತರ ನಾನು ಅನಾರೋಗ್ಯ ಎಂದು ಎರಡು ದಿನ ಶಾಲೆಗೆ ಹೋಗಿರಲಿಲ್ಲ. ನನ್ನ ಅನಾರೋಗ್ಯದ ವಿಷಯ ತಿಳಿದ ಆಕೆ ಟೀಚರ್ ಆ ದಿನ ಸತ್ಯನಾರಾಯಣನ ಪ್ರಸಾದಕ್ಕೆ ಹಾಗೆ ಹೇಳಬಾರದಿತ್ತು. ಅದಕ್ಕೇ ಆರಾಂ ಇಲ್ವೇನೋ... ಎಂದು ಸ್ನೇಹಿತರ ಬಳಿ ಹೇಳಿಕೊಂಡು ಅಲವತ್ತುಕೊಂಡಿದ್ದನ್ನು ಬೇರೆ ಹುಡುಗಿಯರ ಸಾಭಿನಯಪೂವಕವಾಗಿ ವಿವರಿಸಿದ್ದರು. ದೇವರ ಹೆಸರಿನಲ್ಲಿ ಈ ಮಕ್ಕಳ ಮನಸ್ಸಿನಲ್ಲಿ ಈ ರೀತಿಯ ಭಯವನ್ನು ಹುಟ್ಟು ಹಾಕಿದವರಾರು? ಮೀನು ಎಂಬುದು ಕೆಟ್ಟದ್ದು. ಅದನ್ನು ತಿಂದರೆ ದೇವರಿಗೆ ನಮಸ್ಕರಿಸಲೂ ಯೋಗ್ಯರಲ್ಲ ಎಂಬ ಮನಸ್ಥಿತಿಯನ್ನು ಮಕ್ಕಳಲ್ಲಿ ಮತ್ತು ಈ ಮುಗ್ಧ ಮೀನುಗಾರರ ಮನಸ್ಸಿನಲ್ಲಿ ಹುಟ್ಟು ಹಾಕಿ ಕ್ಷೆಬೆಗೊಳಗಾಗುವಂತೆ ಮಾಡುವುದು ಅದೆಷ್ಟು ಸರಿ?
ಇತ್ತೀಚಿನ ದಿನಗಳಲ್ಲಿ ಆಹಾರದ ಕುರಿತಾದ ರಾಜಕೀಯ ತಾರಕಕ್ಕೇರಿದೆ. ಒಂದು ಪ್ರಕಾರದ ಆಹಾರ ಮಾತ್ರ ಸರ್ವಶ್ರೇಷ್ಠ ಇನ್ನೊಂದು ಕನಿಷ್ಟ ಎಂದು ಬಿಂಬಿಸುವ ಹುನ್ನಾರಗಳು ಎಡಬಿಡದೆ ನಡೆಯುತ್ತಿವೆ. ಸಾಮಾಜಿಕ ದ್ರುವಿಕರಣ ಮತ್ತೆ ಪ್ರಾರಂಭವಾಗಿದೆ. ಒಂದು ಜಾತಿ ಅಥವಾ ಜನಾಂಗ ತಾನು ಶ್ರೇಷ್ಠ ಎನ್ನಿಸಿಕೊಳ್ಳಬೇಕಾದರೆ ಉಳಿದ ಜಾತಿಯ ಭಾಷೆ ಸಂಸ್ಕೃತಿ ಹಾಗೂ ಆಚರಣೆಗಳನ್ನು ಕೀಳು ಎಂದು ಸಾಬೀತು ಮಾಡಬೇಕಾಗುತ್ತದೆ. ಹಾಗಾದಾಗ ತನ್ನ ಜಾತಿ, ತನ್ನ ಸಂಸ್ಕೃತಿ ಹಾಗೂ ತನ್ನ ಆಹಾರ ಪದ್ದತಿಯ ಕುರಿತು ಕೀಳರಿಮೆಯಿಂದ ಬಳಲುವವರು ಸುಲಭವಾಗಿ ತಮ್ಮ ಮೇಲಿನ ಹಕ್ಕನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಗುಲಾಮರಾಗುತ್ತಾರೆ. ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದ ರೂಢಿ ಇದು. ಬ್ರಿಟೀಷರು ಬರುವ ಮುನ್ನ ಭಾರತದಲ್ಲಿದ್ದ ರೂಢಿಯೂ ಅದೇ ಆಗಿತ್ತು. ಭಾರತಕ್ಕೆ ಬಂದ ಬ್ರಿಟೀಷರು ಅನುಸರಿಸಿದ್ದೂ ಅದೇ ಮಾರ್ಗವನ್ನು. ಈಗ ಭಾರತೀಯರು ಪುನಃ ಅದನ್ನೇ ಸಾಧಿಸಿ ಉಳಿದವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿರುವುದು ಕಣ್ಣಿಗೆ ಢಾಳಾಗಿಯೇ ಕಾಣುತ್ತಿದೆ.




           ಒಂದು ಸಮಾಜದ ಆಹಾರ ಪದ್ದತಿಯನ್ನು ಟೀಕಿಸುತ್ತ, ಅವರು ಮಾಂಸಾಹಾರಿಗಳಾಗಿರುವುದೇ ಪಾಪದ ಕೆಲಸ ಎಂಬಂತೆ ಬಿಂಬಿಸುತ್ತ ಇಡೀ ಸಮಾಜದ ನೈತಿಕ ಸ್ಥೈರ್‍ಯವನ್ನು ಹಾಳುಗೆಡವುವ ಪ್ರಯತ್ನ ಮಾಡುತ್ತ ತಮ್ಮ ಪುರೋಗಾಮಿ ವಿಚಾರಗಳ ಅನುಷ್ಟಾನಕ್ಕೆ ಈ ಮುಗ್ಧರನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಕೈಗಳ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ, ಅದನ್ನು ತೀವೃವಾಗಿ ವಿರೋಧಿಸಿ ತಮ್ಮತನವನ್ನು ಪ್ರಭಲಗೊಳಿಸುವ ನಿಟ್ಟಿನಲ್ಲಿ ಇವರಿಗೆ ಮನದಟ್ಟು ಮಾಡಿಸುವ ಅಗತ್ಯವಿದೆ.