Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Friday 21 August 2020

ಜುಗ್ನು- ಗಿರೀಶ್ ಜಕಾಪುರೆ





 ಮಿನುಗುವ ಹರೆಯದ ಮಕ್ಕಳ ಕಥೆಗಳು- ಜುಗ್ನು
  ಪುಸ್ತಕದ ಹೆಸರು- ಜುಗ್ನು
ಲೇಖಕರು- ಗಿರೀಶ ಜಕಾಪುರೆ
ಪ್ರಕಾಶನ- ಅಭಿನವ
ಬೆಲೆ-೭೫/-
        
      ಮಕ್ಕಳಿಗಾಗಿ ಬರೆದ ಅದೆಷ್ಟೋ ಕಥೆಗಳನ್ನು ಓದಿದ್ದೇವೆ. ದೊಡ್ಡವರ ಕಥೆಗಳನ್ನಂತೂ ಲೆಕ್ಕವಿಲ್ಲದಷ್ಟು ಓದುತ್ತಲೇ ಇರುತ್ತೇವೆ. ಆದರೆ ಹರೆಯದ ಹೊಸ್ತಿಲಿನಲ್ಲಿ ನಿಂತಿರುವ ನವಜನಾಂಗದ ಕಥೆಗಳನ್ನು ಓದುತ್ತೇವೆಯೇ? ಖಂಡಿತಾ ಇಲ್ಲ. ಯಾಕೆಂದರೆ ನಮಗೆ ಗೊತ್ತಿರುವುದು ಮಕ್ಕಳ ಕಥೆಗಳು, ಅದೂ ಕೂಡ ದೊಡ್ಡವರೇ ಓದಬೇಕಾದಂತಹ ಕಥೆಗಳು. ಇನ್ನು ದೊಡ್ಡವರ ಕಥೆಗಳನ್ನಂತೂ ಬಿಡಿ. ತರೇಹವಾರಿ ವಿಷಯಗಳ, ಸೂರ್ಯನ ಕೆಳಗಿರುವ ಜಗತ್ತಿನ ಎಲ್ಲವನ್ನೂ ಒಳಗೊಂಡಂತಹ ಕಥೆಗಳು. ಅವುಗಳನ್ನಂತೂ ಬಾಯಿ ಚಪ್ಪರಿಸಿಕೊಂಡು ಓದಿರುತ್ತೇವೆ. ಆದರೆ ಅತ್ತ ದೊಡ್ಡವರೆಂದರೆ ದೊಡ್ಡವರೂ ಆಗಿರದ, ಇತ್ತ ಚಿಕ್ಕವರೆಂದು ಮಕ್ಕಳ ಸಾಲಿಗೂ ಸೇರಲಾರದ ಹರೆಯದ ಮಕ್ಕಳ ಕಥೆಗಳನ್ನು ನಾವೆಷ್ಟು ಓದಿದ್ದೇವೆ. ಹೀಗೆ ಕೇಳಿದರೆ ಅಂತಹ ಸಾಹಿತ್ಯ ಕನ್ನಡ ಸಾರಸ್ವತ ಲೋಕದಲ್ಲಿದೆಯೆ ಎಂಬ ಪ್ರಶ್ನೆಯಂತೂ ಖಂಡಿತಾ ಬರುತ್ತದೆ. ಹೌದು ಪ್ರಬುದ್ಧತೆಯ ಹೊಸ್ತಿಲಿನಲ್ಲಿರುವ ಹದಿಹರೆಯದವರಿಗಾಗಿ ಕಥಾ ಸಂಕಲನವೊಂದಿದೆ. ತಮ್ಮೆಲ್ಲ ಪುಸ್ತಕಗಳಲ್ಲೂ ಏನಾದರೊಂದು ಪ್ರಯೋಗಗಳನ್ನು ಮಾಡುತ್ತಲೇ ಎಲ್ಲರೂ ನಡೆವ ರಾಜಬೀದಿಯನ್ನು ಬಿಟ್ಟು  ಹೊಸತೇ ಆದ ಹಾದಿಯೊಂದನ್ನು ನಿರ್ಮಾಣಗೊಳಿಸುವ ಗಿರೀಶ ಜಕಾಪುರೆಯವರು ಬರೆದ ಜುಗ್ನು.
          ಮಕ್ಕಳ ಕಥೆಗಳು ಎಂದರೆ ಅದು ಸಾಮಾನ್ಯವಾಗಿ ಪ್ರಾಥಮಿಕ ಶಾಲಾ ಮಕ್ಕಳ ಹಂತದಲ್ಲಿರುತ್ತದೆ. ಅದು ಕೇವಲ ಬಾಲ್ಯದ ಚಿತ್ರಗಳು. ಸ್ನೇಹಿತರು, ಪ್ರಾಣಿಗಳು, ತುಂಟಾಟಗಳ ಆಗರ ಇದು. ಇತ್ತ ಹಿರಿಯರ ಕಥೆಗಳಂತೂ ತಲೆಯ ಮೇಲೆ ಹಾದು ಹೋಗುವಂತಿರುತ್ತದೆ. ಇತ್ತ ತೀರಾ ಪ್ರಾಥಮಿಕ ಶಾಲಾ ಮಕ್ಕಳ ಜೊತೆಗೆ ತಮ್ಮನ್ನು ತಾವು ಹೋಲಿಸಿಕೊಳ್ಳಲಾಗದೇ ತಾವು ದೊಡ್ಡವರಾಗಿದ್ದೇವೆ ಎಂದುಕೊಳ್ಳುವ, ಅತ್ತ ಹಿರಿಯರ ಪಾಲಿಗೆ 'ನೀನು ಇನ್ನೂ ಚಿಕ್ಕವನು' ಎಂದು ಪದೇಪದೇ ಹೇಳಿಸಿಕೊಳ್ಳುವ ನವಹರೆಯದ ಮಕ್ಕಳ ಮನಸ್ಥಿತಿ ಬೇರೆಯೇ ಇರುತ್ತದೆ. ಮನೋವಿಜ್ಞಾನಿಗಳ ಪ್ರಕಾರ ಇದೊಂದು ಸೂಕ್ಷ್ಮ ಸ್ಥಿತಿ. ದೇಹದಲ್ಲಿನ ಹಾರ್ಮೋನುಗಳು ಏರುಪೇರಾಗುತ್ತಿರುತ್ತದೆ. ಮಗುವಿನ ಮುಗ್ಧತೆ ಮಾಯವಾಗಿ ಆ ಜಾಗದಲ್ಲಿ ಲೈಂಗಿಕ ಕುತೂಹಲಗಳು ಮೂಡಿರುತ್ತದೆ. 'ತಾವೇನೂ ಕಡಿಮೆಯಿಲ್ಲ' ಎಂದು ಇಡೀ ಜಗತ್ತಿಗೆ ತೋರಿಸಿಕೊಳ್ಳಬೇಕು ಎನ್ನುವ ಒಳತುಡಿತವೊಂದು ಏನನ್ನಾದರೂ ಮಾಡುವಂತೆ ಒತ್ತಡ ಹೇರುತ್ತಿರುತ್ತದೆ. ಅತ್ತ ಹಿರಿಯರು ಅವರನ್ನು ಇನ್ನೂ ನೆತ್ತಿಯ ಮಾಸು ಆರದ ಕೂಸುಗಳು ಎಂಬಂತೆ ಭಾವಿಸುವುದನ್ನು ವಿರೋಧಿಸಿ ನಿಲ್ಲಬೇಕೆಂಬ ಆಸೆಯಿರುತ್ತದೆ. ಹೀಗಾಗಿ ಮಕ್ಕಳ ಸಾಹಿತ್ಯ ಬಾಲಸಾಹಿತ್ಯವಾಗಿ ಗೋಚರವಾದರೆ, ಹಿರಿಯರ ಕಥೆಗಳು ಜೀರ್ಣಿಸಿಕೊಳ್ಳಲಾಗದ ಕಬ್ಬಿಣದ ಕಡಲೆಗಳು. ಹೀಗಾಗಿ ಈಗಷ್ಟೇ ಹರೆಯದ ಹೊಸ್ತಿಲಿನ ಮೇಲೆ ಅಳುಕುತ್ತ ಕಾಲಿಡುತ್ತ, ತಮ್ಮ ಮುಗ್ಧ ಕಣ್ಣುಗಳಿಂದ ಜಗತ್ತಿನ ಹೊಸರೂಪವನ್ನು ಗಮನಿಸುತ್ತಿರುವ ಹದ ವಯಸ್ಕರಿಗೆ ಬೇಕಾದ ಕಥಾನಕ ಬೇರೆಯದ್ದೇ ಆಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಟೀ ಏಜ್ ಮಕ್ಕಳಿಗಾಗಿ ಬೇಕಷ್ಟು ಸಾಹಿತ್ಯ ಬರುತ್ತವೆ. ಆದರೆ ಕನ್ನಡದ ಮಟ್ಟಿಗೆ ಆ ಪ್ರಯತ್ನ ಆಗಿರಲೇ ಇಲ್ಲ. ಇದು ಮೊದಲ ಪ್ರಯತ್ನ ಎಂದೇ ಹೇಳಬೇಕು. ಏಕೆಂದರೆ ಇಲ್ಲಿ ಬರುವ ಯಾವ ಪಾತ್ರಗಳೂ ಪ್ರಾಥಮಿಕ ಹಂತದ ಎಳೆ ನಿಂಬೆಗಳಲ್ಲ. ಅತ್ತ ಕಾಲೇಜು ಓದುತ್ತಿರುವ ಯುವಕರೂ ಅಲ್ಲ. ಇದು ಪ್ರೌಢಶಾಲಾ ಹಂತದ ಮಕ್ಕಳೇ ನಾಯಕರಾಗಿರುವಂತಹ ಕಥೆ. ಇಲ್ಲಿನ ಹೆಚ್ಚಿನ ಕಥೆಗಳಲ್ಲಿ ರಘುವೇ ನಾಯಕ. ಮೊದಲ ಕಥೆಯಲ್ಲಿ ಊರಲ್ಲಿ ಬಂದಿರುವ ನಾಟಕದ ಕೊನೆಯ ದಿನದಂದು ಮೈಕೋದಲ್ಲಿ ಅನೌನ್ಸ್ ಮಾಡುವುದನ್ನು ಕೇಳಿ ತಾನು ನೋಡಲೇಬೇಕೆಂದು ಅಪ್ಪನ ಬಳಿ ಹಠ ಹಿಡಿದ ರಘು ಸಿಂಧೂರ ಲಕ್ಷ್ಮಣ ನಾಟಕವನ್ನು ನೋಡಲು ಹೋಗುತ್ತಾನೆ. ಅಲ್ಲಿಯ ಗವಿ, ನಾಯಿಯನ್ನು ನೋಡಿ ತನಗೂ ಅಂತಹುದ್ದೇ ಒಂದು ನಾಯಿ ಬೇಕು ಎಂದುಕೊಳ್ಳುವಾಗಲೇ ನಾಟಕ ನೋಡಲು ಹೋದಾಗ ತುಂಬು ಗರ್ಬಿಣಿಯಾಗಿದ್ದ ನಾಯಿಯೊಂದು ಹಸಿವಿನಿಂದ ನರುತ್ತಿರುವುದನ್ನು ಕಂಡು ಅಪ್ಪನ ಬಳಿ ತಿಂಡಿ ಬೇಕೆಂದು ಹಠ ಮಾಡಿ ತರಿಸಿಕೊಂಡು ನಾಯಿಗೆ ಹಾಕಿದ್ದು ನೆನಪಾಗುತ್ತದೆ. ಮಾರನೆಯ ದಿನ ದೇವಸ್ಥಾನದ ಪ್ರಸಾದವನ್ನೂ ಅದಕ್ಕೇ ಕೊಡುತ್ತಾನೆ. ಇವರು ಮಾಡಿದ್ದ ಗವಿಗೆ ಬಂದು ಮರಿ ಹಾಕಿದ ಆ ನಾಯಿಯನ್ನು ಕಂಡು ರಘು ಹಾಗೂ ಸ್ನೇಹಿತರು ಸಾರ್ಥಕತೆ ಅನುಭವಿಸುತ್ತಾರೆ. ಮುಂದಿನ ಕಥೆಯಲ್ಲಿ ರಘು ಸಾಕಿದ ಕುರಿ ಮರಿ ಬೀರಾನನ್ನು ಅವನ ತಂದೆ ದೀಪಾವಳಿ ಹಬ್ಬದ ಸಿಹಿ ತಿನಿಸಿಗೆ ಹಾಗೂ ಬಣ್ಣದ ಬಟ್ಟೆಗಳನ್ನು ತರೋದಕ್ಕಾಗಿ ಮಾರಿಬಿಡುತ್ತಾನೆ. ಆದರೆ ಪುಟ್ಟ ಕುರಿಮರಿಯನ್ನು ಮಾರಿ ತಂದಿರುವ ಹಣದಿಂದ ಖರೀದಿಸಿದ ತಿಂಡಿಯ ಬಗ್ಗೆ ರಘು ತಿರಸ್ಕಾರ ಭಾವ ತಾಳುತ್ತಾನೆ. ಶಾಲೆಗೂ ಹೋಗದೇ ಊದಾಸನಾಗುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ಬರುವ ಬಕ್ರಿದ್‌ಗಾಗಿ ರಘುನ ಗೆಳೆಯ ಅಹಮದ್‌ನ ತಂದೆ ಅದೇ ಕುರಿಮರಿಯನ್ನು ಖರೀದಿಸಿರುತ್ತಾರೆ. ಗೆಳೆಯರ ಒತ್ತಾಯಕ್ಕೆ ಮನೆಯಿಂದ ಹೊರಬಂದ ರಾಘು ತನ್ನ ಕುರಿಮರಿ ಬೀರಾನನ್ನು ಗೆಳೆಯನ ಮನೆಯಲ್ಲಿ ಕಂಡು ಎರಡೇ ದಿನಕ್ಕೆ ಬಕ್ರಿದ್‌ಗೆ ಬಲಿಯಾಗುವ ಸತ್ಯ ತಿಳಿದು ಮತ್ತಿಷ್ಟು ಕುಸಿಯುತ್ತಾನೆ. ಆದರೆ ಅಹಮ್ಮದ್ ಬಕ್ರಿದ್‌ನ ತ್ಯಾಗ ಬಲಿದಾನದ ಕಥೆಯನ್ನು ಅಬ್ಬೂನ ಬಾಯಿಯಿಂದಲೇ ಕೇಳಿ ಹಿಂದಿರುಗಿಸಲು ಒಪ್ಪಿಸುತ್ತಾನೆ. ಇಡೀ ಕಥೆ ಸಂಕಲನದ ಮೇರು ಕಥೆಯಾಗಿ ರೂಪುಗೊಂಡಿದೆ. ಇಲ್ಲಿ ಹಬ್ಬಕ್ಕಾಗಿ ಒಂದು ಜೊತೆ ಬಟ್ಟೆಯನ್ನೂ ಕೊಳ್ಳಲಾಗದ ರಘೂನ ಕುಟುಂಬದ ಬಡತನ ಅಸಹಾಯಕತೆಗಳ ಚಿತ್ರಣವಿದೆ. ಹಿಂದು ಹಾಗೂ ಮುಸ್ಲಿಂ ಎನ್ನದ ಅಹಮ್ಮದ್ ಹಾಗೂ ರಘುನ ಸ್ನೇಹ ಹಾಗೂ ಅಹಮ್ಮದ್‌ನ ತಂದೆಯ ಉದಾರತೆಯೂ ಇದೆ. 'ಸಿಹಿ ತಿಂದು ದೀಪಾವಳಿ ಆಚರಿಸಬೇಕು' ಎನ್ನುವ ಅಹಮ್ಮದ್‌ನ ತಂದೆಯ ಮಾತು ನಮ್ಮ ಕಣ್ಣಲ್ಲಿ ನೀರಾಡುವಂತೆ ಮಾಡುತ್ತದೆ. ಅಜ್ಜಿಯ ಊರು ಕಥೆಯಲ್ಲಿ ರಘುನ ಅಣ್ಣ ರಮೇಶ ಆಲ್ ಕರ್ನಾಟಕ ಪ್ರವಾಸಕ್ಕೆ ಹೊರಡಬಯಸುತ್ತಾನೆ. ಒಬ್ಬನನ್ನು ಪ್ರವಾಸಕ್ಕೆ ಕಳಿಸಲೇ ಹಣ ಹೊಂದಿಸಲಾಗದಿರುವಾಗ ಇತ್ತ ರಘು 'ಅಣ್ಣ ಪ್ರವಾಸ ಹೊರಟರೆ ತಾನೂ ಹೊರಡುವವನೇ' ಎಂದು ಹಠ ಹಿಡಿದುಬಿಡುತ್ತಾನೆ. ಆದರೆ ಅಣ್ಣ ರಮೇಶ ಹೊರಡುವ ಬೆಳಿಗ್ಗೆ ರಘುನನ್ನು ಅಜ್ಜಿಯ ಮನೆಯಲ್ಲಿ ಬಿಡುತ್ತಾನೆ. ಅಜ್ಜಿ ಮನೆಯ ದೊಡ್ಡ ವಾಡೆದಂತಹ ಮನೆ, ತೋಟದ ಹಸಿರು ರಘುನನ್ನು ಮೋಡಿ ಮಾಡುತ್ತದೆ. ಊರ ದೇವಸ್ಥಾನದ ಇತಿಹಾಸ, ಬಸವಣ್ಣನ ಗುಡ್ಡ ಹಾಗೂ ಅದರ ಹಿಂದಿರುವ ಶಿವಲಿಂಗದಂತಿರುವ ಬೆಟ್ಟ ಹಾಗೂ ಉರಿನ ಹತ್ತಾರು ವಿಷಯಗಳ ಬಗ್ಗೆ ಅಜ್ಜನಿಂದ ತಿಳಿದುಕೊಂಡ ರಘುವಿನ ಜ್ಞಾನದ ಹರವು ಅವನಿಗೆ ಅರಿವಾಗದಂತೆ ವಿಸ್ತಾರವಾಗುವ ಪರಿ ಇದೆ. ಅಜ್ಜನ ಸಂದೂಕವಂತೂ ಪೂರ್ವಜರ ಚಿತ್ರಗಳೆಲ್ಲ ಇರುವ ಮಾಯಾ ಪೆಟ್ಟಿಗೆ. ವಾರ ಬಿಟ್ಟು ಊರಿಗೆ ಹೋದರೆ ಅಣ್ಣ ರಮೇಶನ ಪ್ರವಾಸಕ್ಕಿಂತ ತನ್ನ ಅಜ್ಜಿ ಮನೆಯ ಪ್ರವಾಸ ಏನೂ ಕಡಿಮೆಯದ್ದಾಗಿರಲಿಲ್ಲ ಎಂಬ ಅರಿವು ಆತನಿಗೆ ಉಂಟಾಗುತ್ತದೆ. ಹೊರಸಿನ ಮೇಲೆ ಮಲಗಿ ನೋಡಿದ ಚುಕ್ಕಿ ಚಂದ್ರಮರು ಪ್ಲಾನೆಟೋರಿಯಮ್ ಚುಕ್ಕಿ ಚಂದ್ರಮರಿಗಿಂತ ಕಡಿಮೆ ಏನಿರಲಿಲ್ಲ. ಅಣ್ಣ ಜೋಗ ನೋಡಿದರೆ ತಮ್ಮ ತೋಟದ ಬಾವಿಯಲ್ಲಿ ಮನಸಾರೆ ಈಜಿದ್ದ, ಅಣ್ಣ ಬೇಲೂರು ಗುಡಿಗಳನ್ನು ನೋಡಿದರೆ ತಮ್ಮ ಪುರಾತನ ಗುಡಿಗಳನ್ನು ಕಂಡಿದ್ದ. ಕೊನೆಗೆ ಅಜ್ಜ ಅಜ್ಜಿಯರ ನೆನಪಿನಿಂದ ಅಳುವ ರಘವಿನಿಂದ ಬದುಕಿನಲ್ಲಿ ಹಿರಿಯರ ಪಾತ್ರವನ್ನು ಈ ಕಥೆ ಮನಮಟ್ಟುವಂತೆ ವಿವರಿಸುತ್ತದೆ. 
   ಸಂಕಲನದ ಮತ್ತೊಂದು ಮೇರು ಕತೆ ಕುಲ್ಪಿ ಹುಡುಗ. ಇದೀಗ ಚಲನಚಿತ್ರವಾಗುತ್ತಿರುವ ಕಥೆ ಇದು. ಒಂಬತ್ತನೆಯ ತರಗತಿಯ ಬಡ ಹುಡುಗನೊಬ್ಬ ರಜಾ ದಿನಗಳಲ್ಲಿ ಕುಲ್ಫಿ ಮಾರಿ ಹತ್ತನೆ ತರಗತಿಯ ಟ್ಯೂಷನ್‌ಗಾಗಿ ಹಣ ಹೊಂದಿಸಿಕೊಳ್ಳುವ ಪಡಿಪಾಟಲಿನ ಜೊತೆಗೆ ಅವನ ಮಾನವೀಯ ಗುಣಗಳನ್ನು ಅನಾವರಣಗೊಳಿಸುವ ರೂಪಕ ಚಿತ್ರಗಳನ್ನು ಇದು ಒಳಗೊಂಡಿದೆ. ವಯೋ ಸಹಜವಾದ ಕಾಮನೆಗಳ ಸರಕೂ ಇಲ್ಲಿದೆ. ಟ್ಯೂಷನ್ ಮುಗಿಸಿ ಕುಲ್ಫಿ ಮಾರಲು ಹೋಗುವ ವೆಂಕಟೇಶನಿಗೆ ಜಗತ್ತಿನ ಎಲ್ಲಾ ವ್ಯವಹಾರಗಳ ಪರಿಚಯ ವಾಸ್ತವದಲ್ಲೇ ಆಗುತ್ತದೆ. ದಿನಕ್ಕೊಂದು ಊರು, ಕಾಲೋನಿ, ತಾಂಡಾಗಳಿಗೆ ಹೋಗುವುದರಿಂದ ಸಾಮಾಜಿಕ ಜೀವನವೂ ಅರಿವಾಗುತ್ತದೆ. ಇಸ್ಪೀಟ್ ಆಟಕ್ಕೆ ಬೇಕಷ್ಟು ದುಡ್ಡು ಹಾಕಿ ಮಗ ಕುಲ್ಫಿಗಾಗಿ ಕೇಳುವ ಒಂದು ರೂಪಾಯಿಯನ್ನೂ ಕೊಡದೆ ಹೊಡೆಯುವ ಅಪ್ಪನನ್ನೂ ಕಾಣುತ್ತಾನೆ. ತಾಯಿಯನ್ನು ಮನೆಯಿಂದ ಹೊರಹಾಕುವ ಮಗನೂ ಕಾಣಸಿಗುತ್ತಾನೆ. ಬಿಸಲಲ್ಲಿ ಮಲಮಗಳನ್ನು ನಿಲ್ಲಿಸಿ ಕೆಲಸ ಮಾಡಿಸುವ ಚಿಕ್ಕಮ್ಮ ಕುಲ್ಫಿಕೊಂಡು ಆಕೆಗೆ ಕೊಡದೆ ತಿನ್ನುವ ಅಮಾನವೀಯತೆಯ ವಿರಾಟರೂಪದ ದರ್ಶನವಾಗುತ್ತದೆ. ಹನುಮಂತನಂತಹ ಬ್ರಹ್ಮಚಾರಿ ದೇವರ ಗುಡಿಯೊಳಗೆ ಗಂಡು ಹೆಣ್ಣಿನ ಪ್ರೇಮದಾಟವೂ ಕಾಣುತ್ತದೆ. ಪಂಕ್ಚರ್ ಆದ ಸೈಕಲ್ಲು, ಕರಗಿ ಹೋದ ಕುಲ್ಫಿ ಅವನನ್ನು ಅಣುಕಿಸುವಂತೆ ಕಾಣುತ್ತದೆಯಾದರೂ ಜೀವನದ ಬಹುದೊಡ್ಡ ಪಾಠವಾದ ಮಾನವೀಯತೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಮನೆಯಿಂದ ಹೊರಹಾಕಿಸಿಕೊಂಡ ಮುದುಕಿಗೆ ಕರಗಿದ ಕುಲ್ಫಿ ತುಂಡುಗಳನ್ನು ನೀಡುತ್ತಾನೆ, ಅಪ್ಪನಿಂದ ಹೊಡೆತ ತಿಂದ ಪುಟ್ಟ ಹುಡುಗ ಬೇಡ ಎನ್ನುತ್ತಲೇ ಇವನು ನೀಡಿದ ಕರಗಿದ ಕುಲ್ಫಿ ತಿಂದು ಖುಷಿಗೊಳ್ಳುತ್ತಾನೆ. ಮಲತಾಯಿಯ ಬಳಿ ಬೇಡಿದರೂ ಸಿಗದ ಕುಲ್ಫಿ ತಿಂದು ಅವನದ್ದೇ ವಯಸ್ಸಿನ ಹುಡುಗಿಯ ತುಟಿಗೆ ರಂಗು ಮೆತ್ತಿಕೊಳ್ಳುತ್ತದೆ. ಬಿಂಕದ ನಗೆಯಿಂದ ತನ್ನನ್ನೇ ಹಿಂಬಾಲಿಸುತ್ತಿರುವ ಅವಳ ಕಣ್ಣು ಹಾಗೂ ಕೆಂಪು ತುಟಿಗಳಲ್ಲಿನ ನಗೆಯನ್ನು ಗ್ರಹಿಸುತ್ತ ಅಲ್ಲಿಂದ ಹೊರಡುತ್ತಾನೆ. ಹದಿಮೂರು- ಹದಿನಾಲ್ಕನೇ ವರ್ಷಕ್ಕೆ ಸಹಜವಾದ ಭಾವವೊಂದು ಇಲ್ಲಿ ನವಿರಾಗಿ ನಿರೂಪಿತವಾಗಿದೆ. ಆದರೆ ಕುಲ್ಫಿ ಮಾರಾಟ ಮಾಡುವ ಅಹ್ಮದ್ ಮುತ್ಯಾ ಮಾತ್ರ ಕರಗಿದ ಕುಲ್ಫಿ, ಪಂಕ್ಚರ್ ಆದ ಸೈಕಲ್ಲಿನ ಕಥೆಯ ಕಡೆಗೆ ಗಮನ ನೀಡದೆ  ಅಂದಿನ ಲೆಕ್ಕ ಚುಕ್ತಾ ಮಾಡಿಯೇ ಮನೆಗೆ ಹೋಗಲು ಹೇಳುತ್ತಾನೆ. ಆದರೆ ಅದೇ ದಾರಿಯಿಂದ ಬಂದ ಅವನ ಟ್ಯೂಷನ್ ಸರ್ ಇವನನ್ನು ನೋಡಿ, ಇವನ ಸ್ವಾವಲಂಭನೆಗೆ ಖುಷಿಪಟ್ಟು ಹಣ ಪಡೆಯದೇ ಟ್ಯೂಷನ್‌ಗೆ ಸೇರಿಸಿಕೊಳ್ಳುತ್ತಾರೆ. 
    ಪರೀಕ್ಷೆ ಕಟ್ಟಲು ಕೊನೆಯ ದಿನವೆಂದು ಗೊತ್ತಿದ್ದೂ ಮನೆಯಲ್ಲಿ ಬಿಂಗ್ರಿ ಖರೀದಿಸಲು ಹಠ ಮಾಡುತ್ತಿದ್ದ ತಮ್ಮನನ್ನು ನೆನಪಿಸಿಕೊಂಡು ಬುಗುರಿಯನ್ನು ಕೊಂಡುಕೊಂಡ ಹುಡುಗನೊಬ್ಬನ ಕಥೆ 'ಬಿಂಗ್ರಿ' ಕತೆಯಲ್ಲಿ ಮನಮುಟ್ಟುವಂತೆ ನಿರೂಪಿತವಾಗಿದೆ. ಹೊಲದಲ್ಲಿ ಎಲೆ ಬಿಡಿಸುವ ಕೆಲಸ ಮಾಡಿ ಪರೀಕ್ಷೆಯ ಫೀಸು ತುಂಬಬೇಕೆಂದುಕೊಂಡ. ಆದರೆ ಅಲ್ಲೂ ಹಣ ಸಕಾಲಕ್ಕೆ ಸಿಗದೆ ಅಪ್ಪನನ್ನು ಶಾಲೆಗೆ ಕರೆಯಿಸಲಾಯಿತು. ಮಗನ ಪರೀಕ್ಷೆಯ ಫೀಸ್‌ಗೆಂದು ಕೊಟ್ಟ ಹಣ ತುಂಬದಿರುವುದು, ಕಳೆದು ಹೋಯ್ತೆಂದು ಹೇಳಿದ್ದೂ, ತೋಟದ ಕೆಲಸದ ಹಣ ತಂದುಕೊಡುವುದೂ ಎಲ್ಲವೂ ಅಪ್ಪನನ್ನೂ ಚಿಂತೆಗೀಡುಮಾಡುತ್ತದೆ. ಅಂತೂ ಪರೀಕ್ಷೆಗೆಂದು ಮಗ ತರಗತಿಯ ಒಳಗೆ ಹೋದ ನಂತರ ಬಂದ ಅಪ್ಪ ಮಗನ ಪಾಠಿಚೀಲ ಸುರುವಿದರೆ ಅದರಲ್ಲಿ ಚಂದದ ಬಿಂಗ್ರಿಯೊಂದು ಕೆಲಗೆ ಬಿದ್ದು ಸುತ್ತಲಾರಂಭಿಸುತ್ತದೆ. ಅದೆಷ್ಟೋ ಸಲ ಬುಗುರಿಗಾಗಿ ಹಠ ಮಾಡಿ ಅವ್ವನಿಂದ ಹೊಡೆಸಿಕೊಂಡಿದ ತಮ್ಮ ಕೃಷ್ಣ ಬಿಂಗ್ರಿ ಎತ್ತಿಕೊಂಡು ಆಡಲಾರಂಭಿಸಿದರೆ ಮಗ ತಮ್ಮನಿಗಾಗಿ ತಾನು ಹೊಡೆತ ತಿಂದು ಕೂಲಿ ಮಾಡಿದ ನೆನಪಿನಲ್ಲಿ ಅಪ್ಪ ಕೊರಗುತ್ತಾನೆ. ಈ ಕಥೆಯು ಮಕ್ಕಳ ಮನಸ್ಸನ್ನು  ಸೂಕ್ಷ್ಮವಾಗಿ ವಿವರಿಸುತ್ತದೆ. ಮನೆಯಲ್ಲಿ  ಬಿಂಗ್ರಿಗಾಗಿ ಅಳುತ್ತ ತಾಯಿಯಿಂದ ಹೊಡೆತ ತಿನ್ನುವ ತಮ್ಮಗಾಗಿ ತನ್ನ ಪರೀಕ್ಷೆಯ ಫೀಸನ್ನೇ ಕೊಟ್ಟ ಅಣ್ಣನ ಪಾತ್ರ ಖಂಡಿತವಾಗಿ ಹರೆಯದ ಮನಸ್ಸನ್ನು ಕಲಕುವುದರಲ್ಲಿ ಸಂಶಯವಿಲ್ಲ.
ಜುಗ್ನು ಎಂದರೆ ಮಿಂಚುಹುಳು. ಆದರೆ ಇಲ್ಲಿ ಜುಗ್ನು ಎನ್ನುವ ಯಾವುದಕ್ಕೂ ಬಗ್ಗದೇ ತನ್ನ ಹಠದಲ್ಲಿ, ತುಂಟತನದಲ್ಲಿ ಎಲ್ಲವನ್ನೂ ಹಾಳುಗೆಡವುತ್ತಿದ್ದ ರಿಮಾಂಡ್‌ಹೋಮ್ ಸೇರಿದ್ದ ಬಾಲಾಪರಾಧಿಯೊಬ್ಬನನ್ನು ಒಳ್ಳೆಯವನನ್ನಾಗಿ ಪರಿವರ್ತಿಸಿದ ಕಥೆಯನ್ನು ಹೇಳುತ್ತದೆ. ಕರುಣಾಲಯದ ರಾಮಾನಂದ ತೀರ್ಥರು ಯಾವುದಕ್ಕೂ ಬಗ್ಗದ, ಶಿಸ್ತಿನ ಬೋಧನೆ ಕೇಳಿದ ದಿನವೇ ವಸ್ತುಗಳನ್ನು ಚೆಲಲ್ಲಾಪಿಲ್ಲಿಯಾಗಿಸುವ, ಶಾಂತಿಯ ಪಾಠ ನಡೆಯುವಾಗ ಕಿರುಚಿ ಉಳಿದ ಹುಡುಗರಿಗೆ ಕೆಟ್ಟ ಭಾಷೆಯಲ್ಲಿ ಬೈಯ್ಯುವ, ಕ್ರೀಡೆಗಳಲ್ಲಿ ಅಡ್ಡಗಾಲಾಗುವ, ಬಾಲ್ಯದಿಂದಲೇ ಹೆಣ್ಣು ಹೆಂಡದ ರುಚಿ ಹತ್ತಿ ಹುಂಬನಂತಾದ ಜುಗ್ನುವನ್ನು ಬದಲಾಯಿಸಿದ್ದು ಕೇವಲ ಪ್ರೀತಿಯಿಂದ.  ಎಲ್ಲವನ್ನೂ ಹಾಳುಗೆಡವುತ್ತಿದ್ದ ಜುಗ್ನುವಿಗೆ ಜ್ವರ ಬಂದಾಗ ಆಶ್ರಮದವರೆಲ್ಲ ಅವನಿಗೆ ಯಾಶಕ್ತಿ ಸೇವೆ ಮಾಡಿ ಗುಣವಾಗಲು ಸಹಕರಿಸಿದರು. ತಾನಷ್ಟೇ ಕಷ್ಟ ಕೊಟ್ಟರೂ ಸಹಿಸಿಕೊಂಡು ತನ್ನ ಆರೈಕೆ ಮಾಡಿದವರನ್ನು ಕಂಡು ಜುಗ್ನು  ಬದಲಾದ. ಇಲ್ಲಿಯೂ ಕೂಡ ಕಥೆಗಾರರು ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಲ್ಲ ಪಾಠವನ್ನು ಹೇಳಿದ್ದಾರೆ. ಎಲ್ಲಿಯೂ ಬೋಧನೆ ಎಂದೆನಿಸದ ಕಥೆ ಉತ್ತಮ ಮನಃಪರಿವರ್ತಕ. 
ವಿಕ್ಕಿ ಮತ್ತು ರಾಬಿನ್ ಹುಡ್ ಒಂದು ವಿಶಿಷ್ಟವಾದ ಕಥೆ. ಹಳ್ಳಿಯಿಂದ ಪೇಟೆಗೆ ಕಲಿಯಲೆಂದು ಬಂದ ವಿಕ್ಕಿ ತನ್ನ ಚಿಕ್ಕಪ್ಪನ ಮನೆಯಲ್ಲಿರುತ್ತಾನೆ. ಆದರೆ ಆತ ಬಂದಿರುವುದು ಚಿಕ್ಕಮ್ಮನಿಗೆ ಎಳ್ಳಷ್ಟೂ ಇಷ್ಟವಿಲ್ಲ. ಹಳ್ಳಿಯಿಂದ ಬಂದವನು ಎಂಬ ಕಾರಣಕ್ಕೆ ಚಿಕ್ಕಮ್ಮನಿಗೆ ಆತನ ಬಗ್ಗೆ ಅದೆಷ್ಟು ತಾತ್ಸಾರ ಇತ್ತೋ ಅಷ್ಟೇ ತಾತ್ಸಾರ ಅವನ ತರಗತಿಯ ಮಕ್ಕಳಿಗೂ ಇತ್ತು. ಆದರೆ ವಿಕ್ಕಿಯ ಅತ್ಯುತ್ತಮ ಗೆಳೆಯ ರಾಬಿನ ಮಾತ್ರ ವಿಕ್ಕಿಯನ್ನು ಎಲ್ಲ ಕಷ್ಟದಿಂದ ಪಾರು ಮಾಡಿ ಅವನು ಪುನಃ ಹಳ್ಳಿ ಸೇರುವಂತೆ ಮಾಡುತ್ತಾನೆ. 

    ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಬಹಳಷ್ಟು ಮಕ್ಕಳಲ್ಲಿ ಇರುತ್ತದೆ. ಕೆಲವರು ಮೂರ್‍ನಾಲ್ಕು ವರ್ಷಕ್ಕೇ ಹಾಸಿಗೆ ಒದ್ದೆ ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಇನ್ನು ಕೆಲವರು ಹೈಸ್ಕೂಲಿಗೆ ಬಂದರೂ ಒದ್ದೆ ಮಾಡಿಕೊಳ್ಳುತ್ತಾರೆ. ಮನಃಶಾಸ್ತ್ರದ ಪ್ರಕಾರ ಯಾರು ಅಭದ್ರತೆಯಿಂದ ತೊಳಲುತ್ತಾರೋ ಅವರು ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಹೆಚ್ಚು. ಮನದಲ್ಲಿನ ಆತಂಕ ಇದಕ್ಕೆ ಕಾರಣವಾಗಬಹುದು. ಆದರೆ ಅದಕ್ಕೆ ಕಾರಣವನ್ನು ಹುಡುಕಲು ಹೋಗದೇ ಹಿರಿಯರು ನೀಡುವ ಶಿಕ್ಷೆ ಮಾತ್ರ ಕೆಲವೊಮ್ಮೆ ಭೀಕರವಾಗಿರುತ್ತದೆ. ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡರೆ ಶಾಲೆಗೆ ಬಂದು ಹೇಳುತ್ತೇನೆ ಎಂದು ತಂದೆ ಹೆದರಿಸಿದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳೂ ಇದ್ದಾರೆ. ಇನ್ನು ಕೆಲವೆಡೆ ವೈದ್ಯರ ಬಳಿ ಕರೆದುಕೊಂಡು ಹೋಗದೇ ಮಾಟ ಮಂತ್ರ ಮಾಡಿಸಿ ತಾಯತ ಕಟ್ಟಿಸುತ್ತಾರೆ. ಇನ್ನು ಕೆಲವು ಹಿರಿಯರು ಕಾಲು ತೊಡೆಯ ಮೇಲೆ ಕಾದ ಕಬ್ಬಿಣದ ಪಟ್ಟಿಯಿಂದ ಬರೆ ಹಾಕಿ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಚಿಕ್ಕಪ್ಪನ ಮನೆಯಲ್ಲಿರುವ ವಿಕ್ಕಿ ಹಾಸಿಗೆ ಒದ್ದೆ ಮಾಡಿಕೊಂಡಿದ್ದರಿಂದ ಚಿಕ್ಕಮ್ಮ ತೊಡೆಗೆ ಬರೆ ಎಳೆದು ನಡೆಯಲಾಗದಂತೆ ಮಾಡಿಬಿಟ್ಟಿದ್ದಳು. ಅದೇ ಶಾಲೆಗೆ ಹೋಗುವ ತನ್ನ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡಿದ್ದರೂ ವಿಕ್ಕಿ ಮಾತ್ರ ನಡೆದೇ ಬರಬೇಕಿತ್ತು. ಅವನ ಧಾರುಣ ಕತೆ ಕೇಳಿದ ರಾಬಿನ್ ಜಗಳ ತೆಗೆದು ಶಾಲೆಯಿಂದ ಹೊರಹಾಕಿಸುವಂತೆ ಮಾಡುತ್ತಾನೆ. ಶಾಲೆಯ ಮುಖ್ಯೋಪಾಧ್ಯಾಯರ ಬಳಿ ಮಾತನಾಡಿ ಪುನಃ ಶಾಲೆ ಸೇರಿಸಿಕೊಳ್ಳದಂತೆ ಪರಿಸ್ಥಿತಿ ವಿವರಿಸುತ್ತಾನೆ. ಕಥೆಯಲ್ಲಿನ ವಿವರಣೆಗಳು ಮನಮುಟ್ಟುವಂತಿದೆ. ಇಲ್ಲಿ ಬರುವ ಚಿಕ್ಕಪ್ಪ ಚಿಕ್ಕಮ್ಮರ ಪ್ರೇಮ ಪ್ರಸಂಗಗಳು, ಅಶ್ಲೀಲ ಚಲನಚಿತ್ರದ ಪೋಸ್ಟರ್‌ಗಳನ್ನು ನೋಡುತ್ತ ನಿಲ್ಲುವುದು ಎಲ್ಲವೂ ಆ ವಯಸ್ಸಿನ ಸಹಜವಾದ ಭಾವಗಳು. ಕಥೆಯಲ್ಲಿ ಎಲ್ಲೂ ಈ ಭಾವಗಳು ಮಕ್ಕಳ ಮಟ್ಟ ಮೀರಿ ಮುಂದೆ ಹೋಗದೆ ಅವರ ಕುತೂಹಲವನ್ನಷ್ಟೇ ಹೇಳಿ ಸಂಯಮವನ್ನು ತೋರುತ್ತದೆ. ಹೀಗಾಗಿಯೇ ನಾನು ಮೊದಲೇ ಹೇಳಿದಂತೆ ಕಥೆ ಮಕ್ಕಳ ಕಥೆಯಲ್ಲ. ಆಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ ನವಯುವಕರ ಕಥೆ, ಅವರ ವಯೋ ಸಹಜ ಕುತೂಹಲ ಇಲ್ಲಿ ಸಹಜವಾಗಿಯೇ ನಿರೂಪಿತವಾಗಿದೆ.
ಸೂರ್ಯ ಶಿಕಾರಿ ಕತೆಯಲ್ಲಿ ರಘು ಪುನಃ ಅಜ್ಜಿಯ ಮನೆಗೆ ಹೋಗಿದ್ದಾನೆ. ಅಲ್ಲಿ ಅಜ್ಜಿಗೆ ಕಥೆ ಹೇಳೆಂದು ದಂಬಾಲು ಬೀಳುತ್ತಾನೆ. ಅಜ್ಜಿ ರಘು ಎಂಬ ಹೆಸರಿನ ಹುಡುಗನದ್ದೇ ಕತೆ ಹೇಳುತ್ತಾಳೆ. ಕಥೆಯಲ್ಲಿ ಸುಂಟರಗಾಳಿಯೊಂದು ಸೂರ್ಯನನ್ನು ಮರೆಮಾಡಿ ಬಿಟ್ಟಿತ್ತು. ಅದನ್ನು ಬಿಡಿಸಿಕೊಂಡು ಬರಲು ಕಥೆಯೊಳಗಿನ ರಘು ಸೂರ್ಯನ ಕುದುರೆಯೊಂದಿಗೆ ಹೊರಡುತ್ತಾನೆ. ಏಳು ದಿನ ಏಳು ರಾತ್ರಿಯ ಪಯಣದ ನಂತರ ರೈತನೊಬ್ಬ ಖುರುಪು ಕೊಟ್ಟು ತುರುಬಿನೊಳಗೆ ತತ್ವ ಇದೆ ಎನ್ನುತ್ತಾನೆ. ನಂತರ ಮುಂದೆ ರಾಕ್ಷಸರೊಂದಿಗೆ ಅದೇ ಖುರುಪಿಂದ ಹೊರಾಡಿ, ಗಿಡ್ಡಗಿಡ್ಡ ಮನುಷ್ಯರ ಬಲೆಯೊಳಗಿಂದ ಬಿಡಿಸಿಕೊಂಡು ಅವ್ವ ಕೊಟ್ಟ ಕೊನೆಯ ರೊಟ್ಟಿಯನ್ನು ಸಮುದ್ರದೊಳಗೆ ಹಾಕಿ ಮೀನು ತೋರಿಸಿದ ದಾರಿಯಲ್ಲಿ ನಡೆದು ರಾಕ್ಷಸರ ತುರುಬು ಕೊಯ್ದು, ಪಂಜರದೊಳಗಿರುವ ಸೂರ್‍ಯನನ್ನು ಬಿಡಿಸಿ ತರುವ ಫ್ಯಾಂಟಿಸಿ ಕಥೆ ಇದು. 
   ರೈಟ್ ಬಂಡಿ ಕೂಡ ಇಂತಹುದ್ದೇ ಕಲ್ಪನಾಲೋಕದ ಕಥೆ. ಊರೆಲ್ಲ ಬರಗಾಲ ಬಿದ್ದುಹೋಗಿರುತ್ತದೆ. ರಘು ಬರಗಾಲಕ್ಕೇನು ಪರಿಹಾರ ಎಂದು ಯೋಚಿಸುವಾಗ ಮರದ ಬೊಡ್ಡೆಯೊಂದು ತನ್ನ ಮರದ ಕಟ್ಟಿಗೆಯೊಂದನ್ನು ತೆಗೆದುಕೊಂಡು ಹೋಗಿ ಚಂದದ ಬಂಡಿಯೊಂದನ್ನು ಮಾಡಲು ಹೇಳುತ್ತದೆ. ಅದರೊಳಗೆ ಕುಳಿತು ರೈಟ್ ಬಂಡಿ ಎಂದು ಮುತ್ತಿನ ಮನೆಯೊಳಗೆ ಹೋಗಿ ಅಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿ ಮೊಳಕೆಯೊಡೆದ ಬೀಜಗಳನ್ನು ತರುತ್ತಾನೆ. ಅಲ್ಲಿಂದ ಮೂರು ಗುಡ್ಡದಾಚೆ ಬತ್ತಲಾರದ ಕೊಳಕ್ಕೆ ಹೋಗಿ ಅಲ್ಲಿಯೂ ಕೇಳಿದ ಪ್ರಶ್ನೆಗೆ ಉತ್ತರಿಸಿ ಖಾಲಿ ಆಗಲಾರದ ಬಿಂದಿಗೆಯಲ್ಲಿ ನೀರು ತರುತ್ತಾನೆ. ಕಳ್ಳರನ್ನು ಹಿಡಿದುಕೊಂಡ ಬಂಡಿ, ಮರಗಳ್ಳರನ್ನೂ ಹಿಡಿದುಕೊಂಡು ಅವರಿಂದಲೇ ಗಿಡ ನೆಡುವಂತೆ ಮಾಡುತ್ತದೆ. ನಂತರ ಮಾರನೆಯ ದಿನ ಬರಪೂರ ಮಳೆ ಸುರಿಯುತ್ತದೆ. ಇದೂ ಕೂಡ ಎಷ್ಟು ಚಂದದ ಪರಿಸರದ ಪಾಠವನ್ನು ಹೇಳುವಂತಹ ಕಥೆ. ಇಂತಹುದ್ದೊಂದು ಕಲ್ಪನೆಯೇ ಅದೆಷ್ಟು ಸುಂದರ.

ಚಂದಮಾಮ ಓದುವ ಕಾಲದಲ್ಲಿ ಓದಿದ ಯಕ್ಷಿಣಿಯರ, ಏಳು ಸುತ್ತಿನ ಕೋಟೆಯ ರಾಕ್ಷಸರ ಕಥೆಗಳನ್ನು ನೆನಪಿಸುವಂತಿದೆ. ಪ್ಯಾಂಟಿಸಿ ಕಥೆಗಳಿಗೆ ಅವುಗಳದ್ದೇ ಆದ ವೈಶಿಷ್ಟ್ಯಗಳಿವೆ. ಹರೆಯದ ಹೈಸ್ಕೂಲು ಮಕ್ಕಳಿಗೆ ಇಷ್ಟವಾಗುವ ಇಂತಹ ಫ್ಯಾಂಟಿಸಿ ಕತೆಗಳು ಪಾಶ್ಚಾತ್ಯ ಸಾಹಿತ್ಯದಲ್ಲಿ ಪುಂಖಾನುಪುಂಖವಾಗಿ ಕಾಣಿಸಿಕೊಳ್ಳುತ್ತವೆ. ಹ್ಯಾರಿ ಪಾಟರ್‌ನಂತಹ ಇಂತಹ ಫ್ಯಾಂಟಿಸಿ ಕತೆಗಳು ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿ ದಾಖಲೆ ಸೃಷ್ಟಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ನಮ್ಮ ಚಂದಮಾಮದಲ್ಲೂ ವಿಕ್ರಮ ಬೇತಾಳನ ಕಥೆಗಳು ಇಂತಹುದ್ದೇ ಕಥಾಹಂದರವನ್ನೇ ಹೊಂದಿದ್ದವು. ನಮ್ಮ ಅಜ್ಜ ಅಜ್ಜಿಯರು ಹೇಳುವ ಯಕ್ಷಿಣಿಯರು, ಮುದಿ ಮಂತ್ರವಾದಿಗಳ ಕಥೆಗಳಲ್ಲಿ ಇಂತಹುದ್ದೇ ಪ್ಯಾಂಟಸಿಯನ್ನು ಕಾಣಬಹುದು. ಕಥೆಗಾರ ಗಿರೀಶ ತಮ್ಮ ಕಥೆಗಳಲ್ಲಿ ಫ್ಯಾಂಟಸಿಯನ್ನು ಅತ್ಯಂತ ಸಹಜವಾಗಿ ಬಳಸಿ ಗೆದ್ದಿದ್ದಾರೆ. 
                 ಇವತ್ತಿಗೂ ನಾವು ಹದಿಹರೆಯದವರಿಗಾಗಿ ಸಾಹಿತ್ಯವನ್ನು ರಚಿಸಲು ಹಿಂದೇಟು ಹಾಕುತ್ತಿದ್ದೇವೆ. ಉಳಿದ ಭಾಷೆಗಳ ಸಾಹಿತ್ಯಲೋಕ ಹರೆಯದ ಹೊಸ್ತಿಲಿನಲ್ಲಿರುವವರಿಗಾಗಿಯೇ ಪ್ರತ್ಯೇಕವಾಗಿ ಬರೆದಂತೆ ನಾವು ಅದನ್ನು ಮುಕ್ತವಾಗಿ ಬರೆಯುತ್ತಿಲ್ಲ. ಹದಿಹರೆಯದ ಸಾಹಿತ್ಯವೆಂದರೆ ಅದು ಪೀತ ಸಾಹಿತ್ಯ ಎಂಬ ಹೆಸರನ್ನು ಪಡೆದುಕೊಂಡುಬಿಟ್ಟಿದೆ. ಅದರ ಬದಲಾಗಿ ಯೌವ್ವನದ ಬಾಗಿಲಲ್ಲಿ ನಿಂತಿರುವವರಿಗಾಗಿ ಉತ್ತಮ ನೀತಿಯನ್ನು ಬೋಧಿಸಿಯೂ ಬೋಧಿಸದಂತ, ಮೌಲ್ಯಗಳನ್ನು ಹೇಳದಂತೆಯೂ ಹೇಳುವ, ವಯೋಸಹಜ ಭಾವನೆಗಳನ್ನು, ಕಾಮನೆಗಳನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳಬಹುದು ಎಂಬುದನ್ನು ಸೂಕ್ಷ್ಮವಾಗಿ ಹೇಳುವಂತಹ ಸಾಹಿತ್ಯವನ್ನು ರಚಿಸಲೇ ಬೇಕಾದ ಅನಿವಾರ್ಯತೆಯಿದೆ. ಕನ್ನಡ ಸಾಹಿತ್ಯ ಈ ನಿಟ್ಟಿನಲ್ಲಿ ದೃಷ್ಟಿಹರಿಸುವುದು ಇಂದಿನ ಅತ್ಯಗತ್ಯ.



shreedevi keremane 

Saturday 8 August 2020

ಮೌನದ ಮಹಾ ಕೋಟೆಯೊಳಗೆ

https://youtu.be/G5tsmF4jSGY

SURIKADALU

https://youtu.be/1AgIRxBLJtE

ಶಬ್ಧಭಾರವಿಲ್ಲದ ಮನದ ಮಾತುಗಳು

*ಶಾಂತಿ ಬೀಜಗಳ ಜತನ* 
*ಡಾ. ಪ್ರಕಾಶ ಗ.ಖಾಡೆ* ಅವರ ಕವನ ಸಂಕಲನದ ವಿಮರ್ಶೆ
ಯಾಜಿ ಪ್ರಕಾಶನ,ಹೊಸಪೇಟೆ (ಬಳ್ಳಾರಿ)
ಬೆಲೆ-೧೨೦

ಜಗತ್ತು ವಿಚಿತ್ರ ಸಂದಿಗ್ಧತೆಯಲ್ಲಿದೆ. ಯಾರನ್ನು ನಂಬುವುದೋ, ಯಾರನ್ನು ಮಿತ್ರರೆನ್ನುವುದೋ ಎನ್ನುವ ದ್ವಂದ್ವ ಎಲ್ಲರನ್ನೂ ಕಾಡುತ್ತಿರುವ ಈ ಹೊತ್ತಿನಲ್ಲಿ ಆತ್ಮೀಯ ಮಿತ್ರರೂ ಶತ್ರುಗಳಾಗಿಬಿಡುವ ವಿಕಲ್ಪತೆಯ ದಿನಗಳಿವು. ನಾವು ಮನುಷ್ಯರೋ ಅಥವಾ ಮನುಷ್ಯ ರೂಪದಲ್ಲಿರುವ ಆತ್ಮ ಸತ್ತ ದೇಹಗಳೋ ಎಂಬ ಅನುಮಾನ ನಮ್ಮನ್ನೇ ಕಾಡುತ್ತಿರುವ ಈ ವಿಚಿತ್ರ ಸನ್ನಿವೇಶದಲ್ಲಿ ಹಿರಿಯ ಕವಿ ಪ್ರಕಾಶ ಖಾಡೆಯವರು ಮಾನವಿಯತೆಯನ್ನು ಹುಡುಕುತ್ತ ಹೊರಡುತ್ತಾರೆ.
ಏನೂ ಬೇಡವೆಂದು
ಮನುಷ್ಯ ನಾಗಬೇಕೆಂದಿದ್ದೇನೆ

ಮನುಷ್ಯತ್ವ ಹುಡುಕಿ ನಿಮ್ಮೊಂದಿಗೆ
ಮುಖಾಮುಖಿಯಾಗಿದ್ದೇನೆ

ಎನ್ನುವ ಮೊದಲ ಕವಿತೆಯ ಸಾಲುಗಳನ್ನು ಓದುತ್ತಲೆ ಮನಸ್ಸು ಅಲ್ಲಿಯೇ ನಿಂತುಬಿಡುತ್ತದೆ.
ಪ್ರಕಾಶ ಖಾಡೆಯವರ ಈ ಸಾಲುಗಳು ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುವಂತೆ ಮಾಡುತ್ತದೆ. ಕೊರೋನಾ ಕಾಲಘಟ್ಟದಲ್ಲಿ  ಮಾನವೀಯತೆಯನ್ನು ಎಲ್ಲಿ ಹುಡುಕುತ್ತೀರಿ? ಒಂದು ಸಾವಿಗೆ ನ್ಯಾಯ ಕೊಡಿಸಲೂ ಕೂಡ ಈ ಕಾಲಘಟ್ಟ ಸಹಕರಿಸುತ್ತಿಲ್ಲ. ಯಾರೋ ಸತ್ತ ಸುದ್ದಿಗೆ ಸ್ಪಂದಿಸುವ ಮೊದಲು ಸತ್ತವನು ಹೇಗೆ ಸತ್ತ? ಕೊರೋನಾ ಬಂದಿತ್ತಾ? ಹಾಗೇನಾದರೂ ಇದ್ದರೆ ಅಂತ್ಯ ಸಂಸ್ಕಾರಕ್ಕೆ ಹೋಗುವುದೇ ಎನ್ನುವ ಪ್ರಶ್ನೆಯೇ ಮೊದಲು ಉತ್ಪನ್ನವಾಗುವುದು. ಕಾಲ ಹೀಗಿರುವಾಗ ಮಾನವೀಯತೆಯನ್ನು ಹುಡುಕಿ ಹೊರಡುವುದಾದರೂ ಎಲ್ಲಿಗೆ. ಇಂತಹ ದುರಿತ ಕಾಲದಲ್ಲೂ ಮಾನವೀಯತೆಯನ್ನು ಹುಡುಕುವ ಪ್ರಕಾಶ ಖಾಡೆಯವರ ಮಾನವೀಯ ಹುಡುಕಾಟ ಇಂದು ಎಲ್ಲರ ಹುಡುಕಾಟ ಆಗಬೇಕಾದ ಅವಶ್ಯಕತೆಯಾಗಿದೆ.  ನಮ್ಮ ಜೊತೆಗಿದ್ದವರನ್ನು ಮರೆತು ಬಿಡುತ್ತಿದ್ದೇವೆ. ಹೊಳೆ ದಾಟಿದ ನಂತರ ಅಂಬಿಗನ ಹಂಗಾದರೂ ಏಕೆ ಬೇಕು ಎಂಬಂತೆ ವರ್ತಿಸುವುದು ಎಲ್ಲರಿಗೂ ರೂಢಿಯಾಗುತ್ತಿದೆ. ಹೀಗಾಗಿ ನಮ್ಮ ಜೊತೆಗಿದ್ದವರನ್ನು ಎಷ್ಟು ಸುಲಭವಾಗಿ ಮರೆತುಬಿಡುತ್ತಿದ್ದೇವೆ ಎಂದರೆ ನಮ್ಮನ್ನು ಪ್ರೀತಿಸುವವರನ್ನು ಸುಲಭವಾಗಿ ದೂರ ಮಾಡಿಕೊಳ್ಳುತ್ತೇವೆ. ಮತ್ತೊಂದು ಮೈತ್ರಿಯನ್ನು ರಚಿಸಿಕೊಳ್ಳುತ್ತೇವೆ. ಅದು ವೈಯಕ್ತಿಕ ಪ್ರೀತಿಯೇ ಇರಬಹುದು. ರಾಜತಾಂತ್ರಿಕ ಕಾರಣಗಳೇ ಇರಬಹುದು. ಯಾವುದೂ ಸ್ಥಿರವಲ್ಲ. ಇಂದು ಸ್ನೇಹಿತನಂತೆ ವರ್ತಿಸುವ ದೇಶವೊಂದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಶತ್ರು ದೇಶವಾಗಿಬಿಡಬಹುದು. ಅನಾದಿ ಕಾಲದಿಂದಲೂ ಭಾರತದ ನೆರಳಾಗಿದ್ದ ನೇಪಾಳ ಕೂಡ ನಮ್ಮ ದೇಶದ ಭಾಗಗಳನ್ನು ತನ್ನದೆಂದು ಒತ್ತುವರಿ ಮಾಡಿಕೊಂಡ ಹಾಗೆ.


     ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ತಮ್ಮ ಪ್ರೀತಿಯ ವಿಷಯವನ್ನು ಹೇಳಿಕೊಳ್ಳುತ್ತಿದ್ದರು. ನಾನು ತಮಾಷೆಗೆ ‘ಅವಳನ್ನು ಎಷ್ಟು ಪ್ರೀತಿಸುತ್ತೀರಿ?’ ಎಂದು ಕೇಳಿದ್ದೆ. ಗೊತ್ತು, ಹಾಗೆ ಪ್ರೇಮವನ್ನು ಪ್ರಮಾಣಿಸಲಾಗುವುದಿಲ್ಲ ಎಂಬುದು. ಆದರೆ ಅವರು ಹೇಳಿದ ಮಾತು ನಿಜಕ್ಕೂ ನನ್ನನ್ನು ತಲ್ಲಣಗೊಳಿಸಿತ್ತು. ‘ಇವೆಲ್ಲ ಇಂದಿದ್ದು ನಾಳೆ ಮರೆಯಾಗುವಂತಹುದ್ದು. ನಿಜ ಜೀವನದಲ್ಲಿ ಇಂತಹ ಪ್ರೇಮಗಳು ಕೊನೆಯವರೆಗೆ ಮುಂದುವರೆಯುವಂತಹುದ್ದಲ್ಲ’ ಎಂದಿದ್ದರು. ನಾನು ದಂಗಾಗಿದ್ದೆ. ಒಂದು ಪ್ರೀತಿಯನ್ನು ಉಸಿರಿರುವವರೆಗೆ ಕಾಪಿಡುವ ನಾವು ಅದೆಷ್ಟು ಬೇಗ ಪ್ರೀತಿಯನ್ನು ದಿನನಿತ್ಯ  ಬದಲಾಯಿಸುವ ಉಡುಪಿಗೆ ಸಮನಾಗಿಸಿಕೊಂಡು ಬಿಟ್ಟೆವು ಎಂಬುದು ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಇಂದು ಧರಿಸಿದ ಮೇಲುಡುಪನ್ನು ನಾಳೆಯೂ ಧರಿಸುತ್ತೇವೆ. ಆದರೆ ಪ್ರೀತಿ ಎಂಬುದು ಒಳ ಉಡುಪಿನಂತಾಗಿದೆ. ಒಳ ಉಡುಪನ್ನು ಇಂದು ಧರಿಸಿದರೆ ಕಡ್ಡಾಯವಾಗಿ ಮರುದಿನ ಬದಲಾಯಿಸುತ್ತೇವೆ. ಹಾಗಿದ್ದರೆ ನಾವು ಜೊತೆಗಿರಬೇಕೆಂದರೆ ಜೊತೆಜೊತೆಯಾಗಿ ಇಟ್ಟ ಹೆಜ್ಜೆಗಳಿಗೆ ಕಡ್ಡಾಯವಾಗಿ ಒಂದು ಸಾಕ್ಷಿಯನ್ನು ಹುಡುಕಿಕೊಳ್ಳಬೇಕೆ?
ಜೊತೆಗೆ ಬಂದವರ ನೆನಪುಗಳಿಗೆ
ಸವೆದ ದಾರಿಯಷ್ಟೇ ಸಾಕ್ಷಿ
ಎನ್ನುವ ಕವಿಗೆ ಅರಿವಿದೆ, ಸವೆದ ದಾರಿಗಳಾದರೂ ಅದೆಷ್ಟು ದಿನ ತನ್ನ ಸಾಕ್ಷಿಯನ್ನು ಉಳಿಸೀತು? ಧೂಳು ಹಾರಿ ನಡೆದ ಹೆಜ್ಜೆಯ ಗುರುತಿನ ಸಾಕ್ಷಿಯನ್ನು ಅಳಿಸಿಬಿಡಲು ಅದೆಷ್ಟು ಸಮಯ ಬೇಕು?
ಪುಟ್ಟ ಹೃದಯದಲ್ಲಿ
ಒಂದಿಷ್ಟು ಜಾಗ ಖಾತ್ರಿ ಮಾಡಿಕೊಳ್ಳಬೇಕು
ಬದುಕಿನ ಸಾಕ್ಷಿಗೆ
ಕಡಲ ದಂಡೆಯಲ್ಲಿ ಬೆಳೆದವಳು ನಾನು. ನಡೆಯುವ ಹೆಜ್ಜೆ ಮೂಡುವ ಮುನ್ನವೇ ಅಲೆಯ ಮೃದು ಚುಂಬನಕ್ಕೂ ಹೆಜ್ಜೆ ಗುರುತು ಕರಗಿಬಿಡುವ ಮರ್ಮದ ಅರಿವಿದೆ. ಹೀಗಾಗಿ ಕವಿ ಹೇಳುವ ಜೊತೆಗಿದ್ದುದಕ್ಕೆ  ಸವೆದ ಹಾದಿಗಾಗಿ ಹೊಸ ಸಾಕ್ಷಿಯನ್ನು ಹುಡುಕಲೇ ಬೇಕಾದ ಅನಿವಾರ್‍ಯತೆಯಿದೆ.
ದಾರಿಗೆ ಮುಳ್ಳನ್ನು
ಹೂವ ತಂದವರೇ ಹಚ್ಚಿದ್ದಾರೆ
ನಮಗೆ ಹೂವು ನೀಡುವ ನಾಟಕವಾಡುತ್ತಲೇ ನಮ್ಮ ದಾರಿಗೆ ಮುಳ್ಳನ್ನಿಡುವ ಗೋಮುಖ ವ್ಯಾಘ್ರಗಳ ಸಂಖ್ಯೆ ಈಗ ಹೆಚ್ಚಿದೆ. ಜೊತೆಗಿರುತ್ತಲೇ ಮಗ್ಗುಲಿಗೆ ಚೂರಿ ಹಾಕುವ, ಬೆಣ್ಣೆಯಂತಹ ಮಾತನಾಡುತ್ತಲೇ ಊಟಕ್ಕೆ ವಿಷವಿಕ್ಕುವವರ ನಡುವೆ ನಾವೀಗ ಬದುಕಬೇಕಿದೆ.
ಹಿಂದೆ ಮಾತನಾಡುವವರ ನಾಲಿಗೆ
ಹರದಾರಿ ಚಾಚಲಿ ಬಿಡಿ
ನಮ್ಮ ಶಾಂತ ಮನಸ್ಸು ವಿಚಲಿತವಾಗದಿರಲಿ
ಎನ್ನುತ್ತಾರೆ ಕವಿ. ಯಾವ ಸ್ನೇಹವೂ ಅರ್ಥ ಉಳಿಸಿಕೊಳ್ಳದ ಈ ತುರ್ತು ಸ್ಥಿತಿಯಲ್ಲಿ ನಮ್ಮ ಬೆನ್ನ ಹಿಂದೆ ಆಡಿಕೊಳ್ಳುವವರ ದೊಡ್ಡ ದಂಡೆ ಇರುತ್ತದೆ.  ಕೆಟ್ಟ ಕೆಲಸ ಮಾಡಿದರೆ ಅದು ಸಹಜವೇ. ಆದರೆ ಒಳ್ಳೆಯ ಕೆಲಸಕ್ಕೂ ಕುರುಬುವವರಿಗೇನೂ ಕಡಿಮೆಯಿಲ್ಲ. ಪ್ರತಿಯೊಂದು ಯಶಸ್ವಿ ಹೆಜ್ಜೆಗೂ ಬೆನ್ನ ಹಿಂದೊಂದು ಹಿತಶತ್ರುಗಳ ಗುಂಪೇ ತಯಾರಾಗುತ್ತದೆ. ಇಡುವ ಪ್ರತಿ ಹೆಜ್ಜೆಗೂ ಒಂದು ಕುಹಕ ಸಿದ್ಧವಾಗಿರುತ್ತದೆ. ಹೀಗಾಗಿ ಕವಿ ಬೆನ್ನಿರಿಯುವವರ ಕುರಿತೂ ನಮ್ಮ ಮನಸ್ಸು ಶಾಂತವಾಗಿರಬೇಕೆಂದು ಬಯಸುತ್ತಾರೆ. ಹಾಗೊಂದುವೇಳೆ ನಮ್ಮ ಮನದ ಹತೋಟಿಯನ್ನು ನಾವೇ ಕಳೆದುಕೊಂಡು ಬಿಟ್ಟರೆ ಬುದುಕು ಮೂರಾಬಟ್ಟೆಯಾಗುವುದು ನಮ್ಮದೇ.



ಏಕೆಂದರೆ,
ಎಲೆ ಉದುರಿಸಿಕೊಂಡು
ಬೋಳಾಗುವ ಮರಗಳಿಗೂ
ಬರಡಾಗುವ ನೋವು
ಇದ್ದೇ ಇರುತ್ತದೆ. ಅಂದರೆ ಕಳೆದುಕೊಂಡ ಎಲೆಗಳ ಜಾಗದಲ್ಲೊಂದು ಕಲೆ ಮರದಲ್ಲಿ ಸಾಶ್ವತವಾಗಿ ಉಳಿದುಬಿಡುವಂತೆ ಸಂಬಂಧದ ಕುರುಹುಗಳೂ ಶಾಶ್ವತವಾಗಿ ಉಳಿಯಲೇ ಬೇಕಿದೆ. ತೆಂಗಿನ ಮರದ ಗರಿ/ ಹೆಡೆ ಬಿದ್ದಾಗ ಮರದ ಕಾಂಡದಲ್ಲಿ ಅದರದ್ದೊಂದು ಗುರುತು ಹಾಗೆಯೇ ಉಳಿದು ಮರದ ಬೆಳವಣಿಗೆಯ ಸಾಕ್ಷಿ ಹೇಳುತ್ತದೆ. ಹೀಗಿರುವಾಗ ಜೀವನದಲ್ಲಿ ಹಿಂದೆ ಬಿಟ್ಟು ಹೋದ ಪ್ರೀತಿಗೊಂದು ಸಾಕ್ಷಿ ಬೇಡವೇ? ಹಾಗೆಂದು ಸಾಕ್ಷಿ ಕೇಳಿದರೆ ಮಾತುಗಳು ಹಾಗೇ ಉಳಿಯಬಹುದೇ? ಈಗ ಆಡಿದ ಮಾತನ್ನು ಇನ್ನೊಂದು ಕ್ಷಣದಲ್ಲೇ ತಿರುಗಿಸಿ ಹಾಗೆ ಹೇಳಿದ್ದು ನಾನಲ್ಲ ಎಂದು ಬಿಡುವಾಗ ಆಡುವ ಮಾತುಗಳಿಗೆ ಬೆಲೆಯೆಲ್ಲಿದೆ. ಹಾಗೆಂದೇ ಕವಿ


ಎಷ್ಟೊಂದು ಮಾತುಗಳು
ತೂಕ ಕಳೆದುಕೊಂಡಿವೆ ಇಲ್ಲಿ
ಎನ್ನುತ್ತಾರೆ. ಜೀವನದಲ್ಲಿ ಮಾತಿಗೆ ಬೆಲೆಯಿಲ್ಲ ಎಂದಾದರೆ ಮುಂದೆ ಅವರ ಮಾತಿಗೆ ಬೆಲೆ ಕೊಡುವವರಾದರೂ ಯಾರು? ಇಲ್ಲ. ಜೀವನದಲ್ಲಿ ಒಮ್ಮೆ ಕೊಟ್ಟ ಮಾತಿಗೆ ತಪ್ಪಿದರೆ ಮುಂದೆ ಯಾರೂ ಕೂಡ ನಂಬದಂತಹ ಸ್ಥಿತಿ ತಲುಪಿಬಿಡುತ್ತೇವೆ. ಆದರೆ ಕವಿ ಆಶಾವಾದಿ. ಹೀಗಾಗಿ ಬದುಕಿನ ತುಂಬ ಕನಸುಗಳನ್ನು ಉತ್ತು ಬೆಳೆಯುವ ಮಹದಾಸೆ ಇಟ್ಟುಕೊಂಡಿರುವವರು. ಕನಸುಗಳಿಲ್ಲದ ಜಾಗದಲ್ಲಿ ಒಂದು ಕ್ಷಣವೂ ಇರಲಾಗದು. ಕನಸುಗಳಿದ್ದರೆ ಆಕಾಶ ಕೂಡ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಸೂರ್‍ಯ ಕೂಡ ಇನ್ನಷ್ಟು ಪ್ರಕಾಶಮಾನವಾಗುತ್ತಾನೆ. ಕನಸಿನ ಶಕ್ತಿಯೇ ಅಂತಹದ್ದು.


ಕಿತ್ತಷ್ಟು ಬೆಳೆವ ಕಸಕ್ಕೆ
ಹೇಳದೆ ಬರುವ ಕನಸಿಗೆ
ತೆರೆದಷ್ಟು ಆಕಾಶ, ಉಳಿದಷ್ಟು ಪ್ರಕಾಶ
ಎನ್ನುವ ಕವಿಸಾಲುಗಳಲ್ಲಿ ನಿಜ ಜೀವನದ ಅನುಭವವೇ ಮೇಳೈಸಿದೆ. ಇಷ್ಟಾದರೂ ಕವಿಗೆ ಅರಿವಿದೆ. ಯಾರ ಮನಸ್ಸಿನಲ್ಲಿ ಅಪಾರವಾದ ನೋವಿರುತ್ತದೆಯೋ ಅವರು ತಮ್ಮ ನೋವನ್ನು ಮರೆಮಾಚಲು ಸದಾ ನಗುತ್ತ, ಇತರರನ್ನೂ ನಗಿಸುತ್ತಿರುತ್ತಾರಂತೆ. ನಗೆ ಮಾಂತ್ರಿಕ ಚಾರ್ಲಿ ಚಾಪ್ಲಿನ್‌ನ ಬದುಕು ನೋವಿನಿಂದ ಕೂಡಿದ್ದು. ಬಡತನದ ಬೇಗೆಯಲ್ಲೂ ಆತ ತಾನೂ ನಗುತ್ತ, ಉಳಿದವರನ್ನೂ ನಗಿಸುತ್ತಿದ್ದ. ‘ನಾನು ಸದಾ ಮಳೆಯಲ್ಲಿ ನೆನಯಲು ಇಷ್ಟಪಡುತ್ತೇನೆ. ಏಕೆಂದರೆ ನನ್ನ ಕಣ್ಣೀರು ಆಗ ಜಗದ ಕಣ್ಣಿಗೆ ನನ್ನ ಕಣ್ಣೀರು ಕಾಣಿಸುವುದಿಲ್ಲ ಎಂದ ಆತನ ಮಾತು ಸದಾ ನನ್ನನ್ನು ಕಾಡುತ್ತಿರುತ್ತದೆ. ಕವಿ ಕೂಡ ಇದೇ ಮಾತನ್ನು ಹೇಳುತ್ತಾರೆ.


ನನಗೆ ಕೋಪಿಸಿಕೊಂಡವರ ನೋಡಬೇಕಿತ್ತು
ಮುಗುಳ್ನಗುವವರ ಬಳಿಹೋದೆ
ಕೋಪಗೊಂಡವರ ಮುಖದಲ್ಲಿ ಮುಗುಳ್ನಗುವಿದೆ. ಹಾಗೆ ನೋಡಿದರೆ ನಮ್ಮ ಮೇಲೆ ಕೋಪಿಸಿಕೊಂಡವರೂ ಅದನ್ನು ಮರೆಮಾಚಲು ಮುಗುಳ್ನಗುತ್ತಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.  ಆದರೂ ಯಾವ ಮುಗುಳ್ನಗುವೂ ನಮ್ಮ ನಡುವಿನ ಬೇಲಿಯನ್ನು ಕಿತ್ತೆಸೆಯಲಾಗುತ್ತಿಲ್ಲ. ಮನುಷ್ಯ, ಮನುಷ್ಯನ ನಡುವೆ ಕಟ್ಟಿಕೊಂಡಿರುವ ಮನದ ಬೇಲಿಯನ್ನು ಕಿತ್ತೆಸೆಯದೇ ಐಕ್ಯತೆ ಸಾಧಿಸುವುದಾದರೂ ಹೇಗೆ? ಯಾವ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರ ಮೇಲೊಬ್ಬರು ಕೋಪಿಸಿಕೊಂಡು ಮನಸ್ಸನ್ನು ಕಲ್ಲಾಗಿಸಿಕೊಳ್ಳುತ್ತಿದ್ದೇವೆ. ಅದೇ ಕಲ್ಲುಗಳನ್ನು ಒಂದರ ಮೇಲೊಂದನ್ನು ಪೇರಿಸಿ ಭದ್ರವಾದ ಗೋಡೆ ಕಟ್ಟುತ್ತೇವೆ. ಪ್ರೀತಿ, ಅಂತಃಕರಣದ ಬೆಳಕಿನ ಕಿರಣ ನಮ್ಮ ಹೃದಯವನ್ನು ತಾಗದಂತೆ ಬಂದೋಬಸ್ತು ಮಾಡಿಕೊಂಡಿದ್ದೇವೆ.


ಎಷ್ಟೊಂದು ಬೇಲಿಗಳು
ತಲೆ ಎತ್ತಿವೆ ಇಲ್ಲಿ


ಎನ್ನುವ ಕವಿ ನಮ್ಮ ಗುರಿ ತಲುಪುವ ಪೈಪೋಟಿಯಲ್ಲಿ ಏಟು ತಿಮದವರ ಆರ್ತನಾದವನ್ನು ಕೇಳಿ ಮರುಗುವ ಸೂಕ್ಷ್ಮತೆಯನ್ನು ಮರೆಯುತ್ತಿರುವುದರ ಕುರಿತು ಹೇಳಿದ್ದಾರೆ. ಚಿಕ್ಕ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ನಾಯಿಗೆ ಕಲ್ಲೆಸೆಯುತ್ತಾರೆ. ಕಲ್ಲೇನಾದರೂ ಕಾಲಿಗೆ ತಾಗಿದರೆ ಕುಯ್ಯೋ ಮರ್ರೋ ಎನ್ನುವ ಅದರ ರೋಧನೆ ಕೇಳಿಬಿಟ್ಟರೆ ಮಕ್ಕಳಿಗೆ ಮತ್ತೂ ಕಲ್ಲು ಹೊಡೆಯುವ ಉಮ್ಮೇದಿ ಹೆಚ್ಚುತ್ತದೆ. ಒಬ್ಬನಿದ್ದವನು ನಾಲ್ಕಾಗುತ್ತಾರೆ, ಹತ್ತಾಗುತ್ತಾರೆ. ನಾಯಿಯ ನೋವಿನ ಆಕ್ರಂದನ ಹೆಚ್ಚಿದಷ್ಟೂ ಪೈಶಾಚಿಕ ಸಂತೋಷ ಸಿಕ್ಕಂತೆ ಬಲ ಬರುತ್ತದೆ. ಚಿಕ್ಕ ಮಕ್ಕಳಲ್ಲಿಯೇ ಈ ಮನೋಭಾವವನ್ನು ಕಾಣುವಾಗ ಕಲ್ಲು ಹೊಡೆದು ನಮ್ಮವರನ್ನೇ ಗಾಯಗೊಳಿಸಿ ಅಳಿಸಲು ದೊಡ್ಡವರಾದವರು ಹಿಂದೆಮುಂದೆ ನೋಡಿಯಾರೆ?


ಎಸೆದ ಕಲ್ಲಿಗೆ
ಗುರಿಯಷ್ಟೇ ಗೊತ್ತು
ಪೆಟ್ಟು ತಿಂದವರ ಆರ್ತನಾದ ಕೇಳದು



ಆದರೆ ಕವಿ ಇಡೀ ಸಂಕಲನದಲ್ಲಿ ಎಲ್ಲಿಯೂ ದ್ವೇಷ ತಿರಿಸಿಕೊಳ್ಳುವ ಮಾತನಾಡುವುದಿಲ್ಲ. ಎಲ್ಲಿಯೂ ಹೊಡಿ ಬಡಿಯ ಶಬ್ಧಗಳಿಲ್ಲ. ತೀರಾ ಸರಳವಾದ ಮಾತುಗಳಲ್ಲಿ, ನಯವಾಗಿಯೇ ಹೇಳಬೇಕಾದುದನ್ನು ಹೇಳಿ ತಣ್ಣಗೆ ಕುಳಿತುಬಿಡುತ್ತಾರೆ. ಉದ್ವೇಗದ ಹೇಲಿಕೆಗಳಿಲ್ಲ, ಆದ ಅಪಮಾನಕ್ಕೆ ಸೇಡು ತಿರಿಸಿಕೊಳ್ಳಬೇಕೆಂಬ ವಾಂಛೆಯಿಲ್ಲ. ಎಲ್ಲವರೂ ತನ್ನವರು ಎನ್ನುವ ಸಹಜ ಪ್ರೀತಿಯ ಕವನಗಳಿವು. ಅಪಮಾನಗಳನ್ನು ನುಂಗಿ ಪ್ರೀತಿಯನ್ನೇ ಹಂಚುವ ಶುದ್ಧ ಹೃದಯದ ಭಾವಗಳಿವು.
ನಾವು ಆದ ಅಪಮಾನ
ಉಂಡ ನೋವು ಮರೆತು
ಪ್ರೀತಿ ಹಂಚಿಕೊಳ್ಳುತ್ತೇವೆ
ಅವರೋ ಉರಿವ ಬೆಂಕಿಗೆ ಎಣ್ಣಿ ಸುರಿಯುತ್ತಾರೆ
ಹೀಗೆ ಅವಮಾನವನ್ನು ಮರೆತು ಪ್ರೀತಿಯನ್ನೇ ಬೊಗಸೆಯಲ್ಲಿಟ್ಟುಕೊಂಡು ನೀಡಿದರೂ ಅದನ್ನು ಸ್ವೀಕರಿಸಲೂ ಒಂದು ಅರ್ಹತೆ ಬೇಕಲ್ಲ.? ಪ್ರೀತಿಯ ಮೇಲೆ ಸುಡು ಸುಡು ಎಣ್ಣೆ ಸುರಿದು ತಮಾಷೆ ನೋಡುವ ಮನಸ್ಥಿತಿ ಇಲ್ಲಿದೆ. ಹೊತ್ತುರಿಯುವ ದ್ವೇಷಕ್ಕೆ ಎಣ್ಣೆ ಸುರಿದು ಪ್ರಜ್ವಲಿಸುವಂತೆ ಮಾಡಬಲ್ಲರೇ ಹೊರತೂ ಶತ್ರುತ್ವವನ್ನು ಅಳಿಸಿ ಪ್ರೀತಿಯ ಹೂವನ್ನು ಅರಳಿಸುವ ಪ್ರಯತ್ನ ಮಾಡುವವರು ಸಿಕ್ಕಾರಾದರೂ ಎಲ್ಲಿ?
ನಾನು ಸುಳ್ಳುಗಳ ಸೂಡು Pಟ್ಟಿಟ್ಟು
ಸತ್ಯದ ಬೆನ್ನು ಹತ್ತಿದೆ
ಆದರೂ ದ್ವಂದ್ವಗಳು
ವಿಜೃಂಭಿಸಿ ಹೋದವು
ಬದುಕು ನಮ್ಮನ್ನು ಹೈರಾಣಾಗಿಸುತ್ತಿದೆ. ಸುಳ್ಳಿನ ಸುಡನ್ನು Pಟ್ಟಿಟ್ಟು ಸತ್ಯದ ಬೆನ್ನು ಹತ್ತುತ್ತಿದ್ದರೂ ವಿಜೃಂಭಿಸುವ ಕಟು ವಾಸ್ತವವೂ ಕೆಲವೊಮ್ಮೆ ಸತ್ಯದ ಮುಖವಾಡದಲ್ಲಿ ಅಡಗಿದ ಸುಳ್ಳುಗಳಾಗಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ನಾವೇನಾಗಬೇಕೆಂದು ಬಯಸಿದ್ದೆವೋ ಅದನ್ನು ಸಾಧಿಸುವುದಕ್ಕಾಗಿ ಸತ್ಯ ಸುಳ್ಳುಗಳನ್ನು ಒಂದಾಗಿಸುತ್ತಿದ್ದೇವೆ. ಮತಮತದಲ್ಲಿ, ಜಾತಿಜಾತಿಯಲ್ಲಿ ದ್ವೇಶದ ಬೀಜಗಳನ್ನು ಬಿತ್ತಾಗಿದ್ದು ಅದೀಗ ಮೊಳಕೆಯೊಡೆಯುತ್ತಿದೆ.



ನಿಮ್ಮ ಮನಸಲಷ್ಟು ಜಾಗ ಕೊಡಿ
ಶಾಂತಿ ಬೀಜಗಳ ಊರಿ ಸಂಭ್ರಮಿಸುವೆ
ಎನ್ನುವ ಕವಿಯ ಮಾತುಗಳಲ್ಲಿರುವ ನಿಜಾಯತಿಯನ್ನು ಗುರುತಿಸಬೇಕು. ಶಾಂತಿ ಬೀಜಗಳು ಚಿಗುರೊಡೆಸಲು ಕವಿ ಕಾತರರರಾಗಿದ್ದಾರೆ. ಇಂದಿನ ತುರ್ತು ಅಗತ್ಯವೂ ಅದೇ ಆಗಿದೆ.



ತೂರಿಬಿಟ್ಟಿ ಕನಸುಗಳ ಕಟ್ಟಲಾದರೂ
ಹರಿದ ಸೂತ್ರಗಳಿಗೆ
ಜಗದ ಬಂಧುತ್ವವೇ ಬೆಸುಗೆಯಾಗಲಿ
ಜಗವು ಪ್ರೀತಿ ಎನ್ನುವ ಬಂಧನದಲ್ಲಿ ಬಂಧಿಯಾಗಲಿ ಹರಿದು ಹೋದ ಸೂತ್ರ ಒಗ್ಗೂಡಲಿ, ದೇಶ, ಮನಸ್ಸುಗಳಲ್ಲವೂ ಸುಭದ್ರವಾಗಲಿ.
ವಿಶ್ವಭ್ರಾತ್ರತ್ವದ ನೆಲೆಯಲ್ಲಿ ಪ್ರಕಾಶ ಖಾಡೆಯವರ ಕವನಗಳನ್ನಿಟ್ಟು ನೋಡಬೇಕು. ಇಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಕವಿತೆಗಳ ಸರಳತೆ ಮತ್ತು ಅದನ್ನು ವ್ಯಕ್ತಪಡಿಸಿರುವ ರೀತಿ. ಎಲ್ಲಿಯೂ ಶಬ್ಧಭಾರದಿಂದ ಕವಿತೆ ಕುಗ್ಗಿ ಹೋಗಿಲ್ಲ. ದೊಡ್ಡದೊಡ್ಡ ರೂಪಕಗಳಿಂದ ನುಲುಗಿಲ್ಲ. ಪಂಡಿತರನ್ನು ಮೆಚ್ಚಿಸಲೇಬೇಕೆಂಬ ಘನಂಧಾರಿ ಉದ್ದೇಶವೂ ಅವರಿಗಿಲ್ಲ. ಆನು ಒಲಿದಂತೆ ಹಾಡುವೆ ಎಂಬ ಭಾವವಿದೆ. ಆದರೆ ಇಡೀ ಸಂಕಲನವಾಗಿ ಓದಿದಾಗ ಭಾವಗಳು ಮತ್ತೆ ಮತ್ತೆ ಪುನರಾವರ್ತನೆಯಾದಮತೆ ತೋರುವ ಅಪಾಯವನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಮೊದಲ ಕವನದ ಭಾವವೇ ಮುಂದುವರೆಯುತ್ತ ಹೋದಂತೆ ಕೆಲವೊಮ್ಮೆ ಭಾಸವಾಗಿ ಖಂಡಕಾವ್ಯವನ್ನು ಓದುತ್ತಿರುವ ಏಕತಾನತೆಯನ್ನು ನೀಡಿಬಿಡುವ ಅಪಾಯವೂ ಇದೆ. ಆದರೂ ಸರಳ ಹಾಗೂ ಸುಮದರ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ.

*ಶ್ರೀದೇವಿ ಕೆರೆಮನೆ*