*ಶಾಂತಿ ಬೀಜಗಳ ಜತನ*
*ಡಾ. ಪ್ರಕಾಶ ಗ.ಖಾಡೆ* ಅವರ ಕವನ ಸಂಕಲನದ ವಿಮರ್ಶೆ
ಯಾಜಿ ಪ್ರಕಾಶನ,ಹೊಸಪೇಟೆ (ಬಳ್ಳಾರಿ)
ಬೆಲೆ-೧೨೦
ಜಗತ್ತು ವಿಚಿತ್ರ ಸಂದಿಗ್ಧತೆಯಲ್ಲಿದೆ. ಯಾರನ್ನು ನಂಬುವುದೋ, ಯಾರನ್ನು ಮಿತ್ರರೆನ್ನುವುದೋ ಎನ್ನುವ ದ್ವಂದ್ವ ಎಲ್ಲರನ್ನೂ ಕಾಡುತ್ತಿರುವ ಈ ಹೊತ್ತಿನಲ್ಲಿ ಆತ್ಮೀಯ ಮಿತ್ರರೂ ಶತ್ರುಗಳಾಗಿಬಿಡುವ ವಿಕಲ್ಪತೆಯ ದಿನಗಳಿವು. ನಾವು ಮನುಷ್ಯರೋ ಅಥವಾ ಮನುಷ್ಯ ರೂಪದಲ್ಲಿರುವ ಆತ್ಮ ಸತ್ತ ದೇಹಗಳೋ ಎಂಬ ಅನುಮಾನ ನಮ್ಮನ್ನೇ ಕಾಡುತ್ತಿರುವ ಈ ವಿಚಿತ್ರ ಸನ್ನಿವೇಶದಲ್ಲಿ ಹಿರಿಯ ಕವಿ ಪ್ರಕಾಶ ಖಾಡೆಯವರು ಮಾನವಿಯತೆಯನ್ನು ಹುಡುಕುತ್ತ ಹೊರಡುತ್ತಾರೆ.
ಏನೂ ಬೇಡವೆಂದು
ಮನುಷ್ಯ ನಾಗಬೇಕೆಂದಿದ್ದೇನೆ
ಮನುಷ್ಯತ್ವ ಹುಡುಕಿ ನಿಮ್ಮೊಂದಿಗೆ
ಮುಖಾಮುಖಿಯಾಗಿದ್ದೇನೆ
ಎನ್ನುವ ಮೊದಲ ಕವಿತೆಯ ಸಾಲುಗಳನ್ನು ಓದುತ್ತಲೆ ಮನಸ್ಸು ಅಲ್ಲಿಯೇ ನಿಂತುಬಿಡುತ್ತದೆ.
ಪ್ರಕಾಶ ಖಾಡೆಯವರ ಈ ಸಾಲುಗಳು ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುವಂತೆ ಮಾಡುತ್ತದೆ. ಕೊರೋನಾ ಕಾಲಘಟ್ಟದಲ್ಲಿ ಮಾನವೀಯತೆಯನ್ನು ಎಲ್ಲಿ ಹುಡುಕುತ್ತೀರಿ? ಒಂದು ಸಾವಿಗೆ ನ್ಯಾಯ ಕೊಡಿಸಲೂ ಕೂಡ ಈ ಕಾಲಘಟ್ಟ ಸಹಕರಿಸುತ್ತಿಲ್ಲ. ಯಾರೋ ಸತ್ತ ಸುದ್ದಿಗೆ ಸ್ಪಂದಿಸುವ ಮೊದಲು ಸತ್ತವನು ಹೇಗೆ ಸತ್ತ? ಕೊರೋನಾ ಬಂದಿತ್ತಾ? ಹಾಗೇನಾದರೂ ಇದ್ದರೆ ಅಂತ್ಯ ಸಂಸ್ಕಾರಕ್ಕೆ ಹೋಗುವುದೇ ಎನ್ನುವ ಪ್ರಶ್ನೆಯೇ ಮೊದಲು ಉತ್ಪನ್ನವಾಗುವುದು. ಕಾಲ ಹೀಗಿರುವಾಗ ಮಾನವೀಯತೆಯನ್ನು ಹುಡುಕಿ ಹೊರಡುವುದಾದರೂ ಎಲ್ಲಿಗೆ. ಇಂತಹ ದುರಿತ ಕಾಲದಲ್ಲೂ ಮಾನವೀಯತೆಯನ್ನು ಹುಡುಕುವ ಪ್ರಕಾಶ ಖಾಡೆಯವರ ಮಾನವೀಯ ಹುಡುಕಾಟ ಇಂದು ಎಲ್ಲರ ಹುಡುಕಾಟ ಆಗಬೇಕಾದ ಅವಶ್ಯಕತೆಯಾಗಿದೆ. ನಮ್ಮ ಜೊತೆಗಿದ್ದವರನ್ನು ಮರೆತು ಬಿಡುತ್ತಿದ್ದೇವೆ. ಹೊಳೆ ದಾಟಿದ ನಂತರ ಅಂಬಿಗನ ಹಂಗಾದರೂ ಏಕೆ ಬೇಕು ಎಂಬಂತೆ ವರ್ತಿಸುವುದು ಎಲ್ಲರಿಗೂ ರೂಢಿಯಾಗುತ್ತಿದೆ. ಹೀಗಾಗಿ ನಮ್ಮ ಜೊತೆಗಿದ್ದವರನ್ನು ಎಷ್ಟು ಸುಲಭವಾಗಿ ಮರೆತುಬಿಡುತ್ತಿದ್ದೇವೆ ಎಂದರೆ ನಮ್ಮನ್ನು ಪ್ರೀತಿಸುವವರನ್ನು ಸುಲಭವಾಗಿ ದೂರ ಮಾಡಿಕೊಳ್ಳುತ್ತೇವೆ. ಮತ್ತೊಂದು ಮೈತ್ರಿಯನ್ನು ರಚಿಸಿಕೊಳ್ಳುತ್ತೇವೆ. ಅದು ವೈಯಕ್ತಿಕ ಪ್ರೀತಿಯೇ ಇರಬಹುದು. ರಾಜತಾಂತ್ರಿಕ ಕಾರಣಗಳೇ ಇರಬಹುದು. ಯಾವುದೂ ಸ್ಥಿರವಲ್ಲ. ಇಂದು ಸ್ನೇಹಿತನಂತೆ ವರ್ತಿಸುವ ದೇಶವೊಂದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಶತ್ರು ದೇಶವಾಗಿಬಿಡಬಹುದು. ಅನಾದಿ ಕಾಲದಿಂದಲೂ ಭಾರತದ ನೆರಳಾಗಿದ್ದ ನೇಪಾಳ ಕೂಡ ನಮ್ಮ ದೇಶದ ಭಾಗಗಳನ್ನು ತನ್ನದೆಂದು ಒತ್ತುವರಿ ಮಾಡಿಕೊಂಡ ಹಾಗೆ.
ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ತಮ್ಮ ಪ್ರೀತಿಯ ವಿಷಯವನ್ನು ಹೇಳಿಕೊಳ್ಳುತ್ತಿದ್ದರು. ನಾನು ತಮಾಷೆಗೆ ‘ಅವಳನ್ನು ಎಷ್ಟು ಪ್ರೀತಿಸುತ್ತೀರಿ?’ ಎಂದು ಕೇಳಿದ್ದೆ. ಗೊತ್ತು, ಹಾಗೆ ಪ್ರೇಮವನ್ನು ಪ್ರಮಾಣಿಸಲಾಗುವುದಿಲ್ಲ ಎಂಬುದು. ಆದರೆ ಅವರು ಹೇಳಿದ ಮಾತು ನಿಜಕ್ಕೂ ನನ್ನನ್ನು ತಲ್ಲಣಗೊಳಿಸಿತ್ತು. ‘ಇವೆಲ್ಲ ಇಂದಿದ್ದು ನಾಳೆ ಮರೆಯಾಗುವಂತಹುದ್ದು. ನಿಜ ಜೀವನದಲ್ಲಿ ಇಂತಹ ಪ್ರೇಮಗಳು ಕೊನೆಯವರೆಗೆ ಮುಂದುವರೆಯುವಂತಹುದ್ದಲ್ಲ’ ಎಂದಿದ್ದರು. ನಾನು ದಂಗಾಗಿದ್ದೆ. ಒಂದು ಪ್ರೀತಿಯನ್ನು ಉಸಿರಿರುವವರೆಗೆ ಕಾಪಿಡುವ ನಾವು ಅದೆಷ್ಟು ಬೇಗ ಪ್ರೀತಿಯನ್ನು ದಿನನಿತ್ಯ ಬದಲಾಯಿಸುವ ಉಡುಪಿಗೆ ಸಮನಾಗಿಸಿಕೊಂಡು ಬಿಟ್ಟೆವು ಎಂಬುದು ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಇಂದು ಧರಿಸಿದ ಮೇಲುಡುಪನ್ನು ನಾಳೆಯೂ ಧರಿಸುತ್ತೇವೆ. ಆದರೆ ಪ್ರೀತಿ ಎಂಬುದು ಒಳ ಉಡುಪಿನಂತಾಗಿದೆ. ಒಳ ಉಡುಪನ್ನು ಇಂದು ಧರಿಸಿದರೆ ಕಡ್ಡಾಯವಾಗಿ ಮರುದಿನ ಬದಲಾಯಿಸುತ್ತೇವೆ. ಹಾಗಿದ್ದರೆ ನಾವು ಜೊತೆಗಿರಬೇಕೆಂದರೆ ಜೊತೆಜೊತೆಯಾಗಿ ಇಟ್ಟ ಹೆಜ್ಜೆಗಳಿಗೆ ಕಡ್ಡಾಯವಾಗಿ ಒಂದು ಸಾಕ್ಷಿಯನ್ನು ಹುಡುಕಿಕೊಳ್ಳಬೇಕೆ?
ಜೊತೆಗೆ ಬಂದವರ ನೆನಪುಗಳಿಗೆ
ಸವೆದ ದಾರಿಯಷ್ಟೇ ಸಾಕ್ಷಿ
ಎನ್ನುವ ಕವಿಗೆ ಅರಿವಿದೆ, ಸವೆದ ದಾರಿಗಳಾದರೂ ಅದೆಷ್ಟು ದಿನ ತನ್ನ ಸಾಕ್ಷಿಯನ್ನು ಉಳಿಸೀತು? ಧೂಳು ಹಾರಿ ನಡೆದ ಹೆಜ್ಜೆಯ ಗುರುತಿನ ಸಾಕ್ಷಿಯನ್ನು ಅಳಿಸಿಬಿಡಲು ಅದೆಷ್ಟು ಸಮಯ ಬೇಕು?
ಪುಟ್ಟ ಹೃದಯದಲ್ಲಿ
ಒಂದಿಷ್ಟು ಜಾಗ ಖಾತ್ರಿ ಮಾಡಿಕೊಳ್ಳಬೇಕು
ಬದುಕಿನ ಸಾಕ್ಷಿಗೆ
ಕಡಲ ದಂಡೆಯಲ್ಲಿ ಬೆಳೆದವಳು ನಾನು. ನಡೆಯುವ ಹೆಜ್ಜೆ ಮೂಡುವ ಮುನ್ನವೇ ಅಲೆಯ ಮೃದು ಚುಂಬನಕ್ಕೂ ಹೆಜ್ಜೆ ಗುರುತು ಕರಗಿಬಿಡುವ ಮರ್ಮದ ಅರಿವಿದೆ. ಹೀಗಾಗಿ ಕವಿ ಹೇಳುವ ಜೊತೆಗಿದ್ದುದಕ್ಕೆ ಸವೆದ ಹಾದಿಗಾಗಿ ಹೊಸ ಸಾಕ್ಷಿಯನ್ನು ಹುಡುಕಲೇ ಬೇಕಾದ ಅನಿವಾರ್‍ಯತೆಯಿದೆ.
ದಾರಿಗೆ ಮುಳ್ಳನ್ನು
ಹೂವ ತಂದವರೇ ಹಚ್ಚಿದ್ದಾರೆ
ನಮಗೆ ಹೂವು ನೀಡುವ ನಾಟಕವಾಡುತ್ತಲೇ ನಮ್ಮ ದಾರಿಗೆ ಮುಳ್ಳನ್ನಿಡುವ ಗೋಮುಖ ವ್ಯಾಘ್ರಗಳ ಸಂಖ್ಯೆ ಈಗ ಹೆಚ್ಚಿದೆ. ಜೊತೆಗಿರುತ್ತಲೇ ಮಗ್ಗುಲಿಗೆ ಚೂರಿ ಹಾಕುವ, ಬೆಣ್ಣೆಯಂತಹ ಮಾತನಾಡುತ್ತಲೇ ಊಟಕ್ಕೆ ವಿಷವಿಕ್ಕುವವರ ನಡುವೆ ನಾವೀಗ ಬದುಕಬೇಕಿದೆ.
ಹಿಂದೆ ಮಾತನಾಡುವವರ ನಾಲಿಗೆ
ಹರದಾರಿ ಚಾಚಲಿ ಬಿಡಿ
ನಮ್ಮ ಶಾಂತ ಮನಸ್ಸು ವಿಚಲಿತವಾಗದಿರಲಿ
ಎನ್ನುತ್ತಾರೆ ಕವಿ. ಯಾವ ಸ್ನೇಹವೂ ಅರ್ಥ ಉಳಿಸಿಕೊಳ್ಳದ ಈ ತುರ್ತು ಸ್ಥಿತಿಯಲ್ಲಿ ನಮ್ಮ ಬೆನ್ನ ಹಿಂದೆ ಆಡಿಕೊಳ್ಳುವವರ ದೊಡ್ಡ ದಂಡೆ ಇರುತ್ತದೆ. ಕೆಟ್ಟ ಕೆಲಸ ಮಾಡಿದರೆ ಅದು ಸಹಜವೇ. ಆದರೆ ಒಳ್ಳೆಯ ಕೆಲಸಕ್ಕೂ ಕುರುಬುವವರಿಗೇನೂ ಕಡಿಮೆಯಿಲ್ಲ. ಪ್ರತಿಯೊಂದು ಯಶಸ್ವಿ ಹೆಜ್ಜೆಗೂ ಬೆನ್ನ ಹಿಂದೊಂದು ಹಿತಶತ್ರುಗಳ ಗುಂಪೇ ತಯಾರಾಗುತ್ತದೆ. ಇಡುವ ಪ್ರತಿ ಹೆಜ್ಜೆಗೂ ಒಂದು ಕುಹಕ ಸಿದ್ಧವಾಗಿರುತ್ತದೆ. ಹೀಗಾಗಿ ಕವಿ ಬೆನ್ನಿರಿಯುವವರ ಕುರಿತೂ ನಮ್ಮ ಮನಸ್ಸು ಶಾಂತವಾಗಿರಬೇಕೆಂದು ಬಯಸುತ್ತಾರೆ. ಹಾಗೊಂದುವೇಳೆ ನಮ್ಮ ಮನದ ಹತೋಟಿಯನ್ನು ನಾವೇ ಕಳೆದುಕೊಂಡು ಬಿಟ್ಟರೆ ಬುದುಕು ಮೂರಾಬಟ್ಟೆಯಾಗುವುದು ನಮ್ಮದೇ.
ಏಕೆಂದರೆ,
ಎಲೆ ಉದುರಿಸಿಕೊಂಡು
ಬೋಳಾಗುವ ಮರಗಳಿಗೂ
ಬರಡಾಗುವ ನೋವು
ಇದ್ದೇ ಇರುತ್ತದೆ. ಅಂದರೆ ಕಳೆದುಕೊಂಡ ಎಲೆಗಳ ಜಾಗದಲ್ಲೊಂದು ಕಲೆ ಮರದಲ್ಲಿ ಸಾಶ್ವತವಾಗಿ ಉಳಿದುಬಿಡುವಂತೆ ಸಂಬಂಧದ ಕುರುಹುಗಳೂ ಶಾಶ್ವತವಾಗಿ ಉಳಿಯಲೇ ಬೇಕಿದೆ. ತೆಂಗಿನ ಮರದ ಗರಿ/ ಹೆಡೆ ಬಿದ್ದಾಗ ಮರದ ಕಾಂಡದಲ್ಲಿ ಅದರದ್ದೊಂದು ಗುರುತು ಹಾಗೆಯೇ ಉಳಿದು ಮರದ ಬೆಳವಣಿಗೆಯ ಸಾಕ್ಷಿ ಹೇಳುತ್ತದೆ. ಹೀಗಿರುವಾಗ ಜೀವನದಲ್ಲಿ ಹಿಂದೆ ಬಿಟ್ಟು ಹೋದ ಪ್ರೀತಿಗೊಂದು ಸಾಕ್ಷಿ ಬೇಡವೇ? ಹಾಗೆಂದು ಸಾಕ್ಷಿ ಕೇಳಿದರೆ ಮಾತುಗಳು ಹಾಗೇ ಉಳಿಯಬಹುದೇ? ಈಗ ಆಡಿದ ಮಾತನ್ನು ಇನ್ನೊಂದು ಕ್ಷಣದಲ್ಲೇ ತಿರುಗಿಸಿ ಹಾಗೆ ಹೇಳಿದ್ದು ನಾನಲ್ಲ ಎಂದು ಬಿಡುವಾಗ ಆಡುವ ಮಾತುಗಳಿಗೆ ಬೆಲೆಯೆಲ್ಲಿದೆ. ಹಾಗೆಂದೇ ಕವಿ
ಎಷ್ಟೊಂದು ಮಾತುಗಳು
ತೂಕ ಕಳೆದುಕೊಂಡಿವೆ ಇಲ್ಲಿ
ಎನ್ನುತ್ತಾರೆ. ಜೀವನದಲ್ಲಿ ಮಾತಿಗೆ ಬೆಲೆಯಿಲ್ಲ ಎಂದಾದರೆ ಮುಂದೆ ಅವರ ಮಾತಿಗೆ ಬೆಲೆ ಕೊಡುವವರಾದರೂ ಯಾರು? ಇಲ್ಲ. ಜೀವನದಲ್ಲಿ ಒಮ್ಮೆ ಕೊಟ್ಟ ಮಾತಿಗೆ ತಪ್ಪಿದರೆ ಮುಂದೆ ಯಾರೂ ಕೂಡ ನಂಬದಂತಹ ಸ್ಥಿತಿ ತಲುಪಿಬಿಡುತ್ತೇವೆ. ಆದರೆ ಕವಿ ಆಶಾವಾದಿ. ಹೀಗಾಗಿ ಬದುಕಿನ ತುಂಬ ಕನಸುಗಳನ್ನು ಉತ್ತು ಬೆಳೆಯುವ ಮಹದಾಸೆ ಇಟ್ಟುಕೊಂಡಿರುವವರು. ಕನಸುಗಳಿಲ್ಲದ ಜಾಗದಲ್ಲಿ ಒಂದು ಕ್ಷಣವೂ ಇರಲಾಗದು. ಕನಸುಗಳಿದ್ದರೆ ಆಕಾಶ ಕೂಡ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಸೂರ್‍ಯ ಕೂಡ ಇನ್ನಷ್ಟು ಪ್ರಕಾಶಮಾನವಾಗುತ್ತಾನೆ. ಕನಸಿನ ಶಕ್ತಿಯೇ ಅಂತಹದ್ದು.
ಕಿತ್ತಷ್ಟು ಬೆಳೆವ ಕಸಕ್ಕೆ
ಹೇಳದೆ ಬರುವ ಕನಸಿಗೆ
ತೆರೆದಷ್ಟು ಆಕಾಶ, ಉಳಿದಷ್ಟು ಪ್ರಕಾಶ
ಎನ್ನುವ ಕವಿಸಾಲುಗಳಲ್ಲಿ ನಿಜ ಜೀವನದ ಅನುಭವವೇ ಮೇಳೈಸಿದೆ. ಇಷ್ಟಾದರೂ ಕವಿಗೆ ಅರಿವಿದೆ. ಯಾರ ಮನಸ್ಸಿನಲ್ಲಿ ಅಪಾರವಾದ ನೋವಿರುತ್ತದೆಯೋ ಅವರು ತಮ್ಮ ನೋವನ್ನು ಮರೆಮಾಚಲು ಸದಾ ನಗುತ್ತ, ಇತರರನ್ನೂ ನಗಿಸುತ್ತಿರುತ್ತಾರಂತೆ. ನಗೆ ಮಾಂತ್ರಿಕ ಚಾರ್ಲಿ ಚಾಪ್ಲಿನ್‌ನ ಬದುಕು ನೋವಿನಿಂದ ಕೂಡಿದ್ದು. ಬಡತನದ ಬೇಗೆಯಲ್ಲೂ ಆತ ತಾನೂ ನಗುತ್ತ, ಉಳಿದವರನ್ನೂ ನಗಿಸುತ್ತಿದ್ದ. ‘ನಾನು ಸದಾ ಮಳೆಯಲ್ಲಿ ನೆನಯಲು ಇಷ್ಟಪಡುತ್ತೇನೆ. ಏಕೆಂದರೆ ನನ್ನ ಕಣ್ಣೀರು ಆಗ ಜಗದ ಕಣ್ಣಿಗೆ ನನ್ನ ಕಣ್ಣೀರು ಕಾಣಿಸುವುದಿಲ್ಲ ಎಂದ ಆತನ ಮಾತು ಸದಾ ನನ್ನನ್ನು ಕಾಡುತ್ತಿರುತ್ತದೆ. ಕವಿ ಕೂಡ ಇದೇ ಮಾತನ್ನು ಹೇಳುತ್ತಾರೆ.
ನನಗೆ ಕೋಪಿಸಿಕೊಂಡವರ ನೋಡಬೇಕಿತ್ತು
ಮುಗುಳ್ನಗುವವರ ಬಳಿಹೋದೆ
ಕೋಪಗೊಂಡವರ ಮುಖದಲ್ಲಿ ಮುಗುಳ್ನಗುವಿದೆ. ಹಾಗೆ ನೋಡಿದರೆ ನಮ್ಮ ಮೇಲೆ ಕೋಪಿಸಿಕೊಂಡವರೂ ಅದನ್ನು ಮರೆಮಾಚಲು ಮುಗುಳ್ನಗುತ್ತಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಆದರೂ ಯಾವ ಮುಗುಳ್ನಗುವೂ ನಮ್ಮ ನಡುವಿನ ಬೇಲಿಯನ್ನು ಕಿತ್ತೆಸೆಯಲಾಗುತ್ತಿಲ್ಲ. ಮನುಷ್ಯ, ಮನುಷ್ಯನ ನಡುವೆ ಕಟ್ಟಿಕೊಂಡಿರುವ ಮನದ ಬೇಲಿಯನ್ನು ಕಿತ್ತೆಸೆಯದೇ ಐಕ್ಯತೆ ಸಾಧಿಸುವುದಾದರೂ ಹೇಗೆ? ಯಾವ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರ ಮೇಲೊಬ್ಬರು ಕೋಪಿಸಿಕೊಂಡು ಮನಸ್ಸನ್ನು ಕಲ್ಲಾಗಿಸಿಕೊಳ್ಳುತ್ತಿದ್ದೇವೆ. ಅದೇ ಕಲ್ಲುಗಳನ್ನು ಒಂದರ ಮೇಲೊಂದನ್ನು ಪೇರಿಸಿ ಭದ್ರವಾದ ಗೋಡೆ ಕಟ್ಟುತ್ತೇವೆ. ಪ್ರೀತಿ, ಅಂತಃಕರಣದ ಬೆಳಕಿನ ಕಿರಣ ನಮ್ಮ ಹೃದಯವನ್ನು ತಾಗದಂತೆ ಬಂದೋಬಸ್ತು ಮಾಡಿಕೊಂಡಿದ್ದೇವೆ.
ಎಷ್ಟೊಂದು ಬೇಲಿಗಳು
ತಲೆ ಎತ್ತಿವೆ ಇಲ್ಲಿ
ಎನ್ನುವ ಕವಿ ನಮ್ಮ ಗುರಿ ತಲುಪುವ ಪೈಪೋಟಿಯಲ್ಲಿ ಏಟು ತಿಮದವರ ಆರ್ತನಾದವನ್ನು ಕೇಳಿ ಮರುಗುವ ಸೂಕ್ಷ್ಮತೆಯನ್ನು ಮರೆಯುತ್ತಿರುವುದರ ಕುರಿತು ಹೇಳಿದ್ದಾರೆ. ಚಿಕ್ಕ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ನಾಯಿಗೆ ಕಲ್ಲೆಸೆಯುತ್ತಾರೆ. ಕಲ್ಲೇನಾದರೂ ಕಾಲಿಗೆ ತಾಗಿದರೆ ಕುಯ್ಯೋ ಮರ್ರೋ ಎನ್ನುವ ಅದರ ರೋಧನೆ ಕೇಳಿಬಿಟ್ಟರೆ ಮಕ್ಕಳಿಗೆ ಮತ್ತೂ ಕಲ್ಲು ಹೊಡೆಯುವ ಉಮ್ಮೇದಿ ಹೆಚ್ಚುತ್ತದೆ. ಒಬ್ಬನಿದ್ದವನು ನಾಲ್ಕಾಗುತ್ತಾರೆ, ಹತ್ತಾಗುತ್ತಾರೆ. ನಾಯಿಯ ನೋವಿನ ಆಕ್ರಂದನ ಹೆಚ್ಚಿದಷ್ಟೂ ಪೈಶಾಚಿಕ ಸಂತೋಷ ಸಿಕ್ಕಂತೆ ಬಲ ಬರುತ್ತದೆ. ಚಿಕ್ಕ ಮಕ್ಕಳಲ್ಲಿಯೇ ಈ ಮನೋಭಾವವನ್ನು ಕಾಣುವಾಗ ಕಲ್ಲು ಹೊಡೆದು ನಮ್ಮವರನ್ನೇ ಗಾಯಗೊಳಿಸಿ ಅಳಿಸಲು ದೊಡ್ಡವರಾದವರು ಹಿಂದೆಮುಂದೆ ನೋಡಿಯಾರೆ?
ಎಸೆದ ಕಲ್ಲಿಗೆ
ಗುರಿಯಷ್ಟೇ ಗೊತ್ತು
ಪೆಟ್ಟು ತಿಂದವರ ಆರ್ತನಾದ ಕೇಳದು
ಆದರೆ ಕವಿ ಇಡೀ ಸಂಕಲನದಲ್ಲಿ ಎಲ್ಲಿಯೂ ದ್ವೇಷ ತಿರಿಸಿಕೊಳ್ಳುವ ಮಾತನಾಡುವುದಿಲ್ಲ. ಎಲ್ಲಿಯೂ ಹೊಡಿ ಬಡಿಯ ಶಬ್ಧಗಳಿಲ್ಲ. ತೀರಾ ಸರಳವಾದ ಮಾತುಗಳಲ್ಲಿ, ನಯವಾಗಿಯೇ ಹೇಳಬೇಕಾದುದನ್ನು ಹೇಳಿ ತಣ್ಣಗೆ ಕುಳಿತುಬಿಡುತ್ತಾರೆ. ಉದ್ವೇಗದ ಹೇಲಿಕೆಗಳಿಲ್ಲ, ಆದ ಅಪಮಾನಕ್ಕೆ ಸೇಡು ತಿರಿಸಿಕೊಳ್ಳಬೇಕೆಂಬ ವಾಂಛೆಯಿಲ್ಲ. ಎಲ್ಲವರೂ ತನ್ನವರು ಎನ್ನುವ ಸಹಜ ಪ್ರೀತಿಯ ಕವನಗಳಿವು. ಅಪಮಾನಗಳನ್ನು ನುಂಗಿ ಪ್ರೀತಿಯನ್ನೇ ಹಂಚುವ ಶುದ್ಧ ಹೃದಯದ ಭಾವಗಳಿವು.
ನಾವು ಆದ ಅಪಮಾನ
ಉಂಡ ನೋವು ಮರೆತು
ಪ್ರೀತಿ ಹಂಚಿಕೊಳ್ಳುತ್ತೇವೆ
ಅವರೋ ಉರಿವ ಬೆಂಕಿಗೆ ಎಣ್ಣಿ ಸುರಿಯುತ್ತಾರೆ
ಹೀಗೆ ಅವಮಾನವನ್ನು ಮರೆತು ಪ್ರೀತಿಯನ್ನೇ ಬೊಗಸೆಯಲ್ಲಿಟ್ಟುಕೊಂಡು ನೀಡಿದರೂ ಅದನ್ನು ಸ್ವೀಕರಿಸಲೂ ಒಂದು ಅರ್ಹತೆ ಬೇಕಲ್ಲ.? ಪ್ರೀತಿಯ ಮೇಲೆ ಸುಡು ಸುಡು ಎಣ್ಣೆ ಸುರಿದು ತಮಾಷೆ ನೋಡುವ ಮನಸ್ಥಿತಿ ಇಲ್ಲಿದೆ. ಹೊತ್ತುರಿಯುವ ದ್ವೇಷಕ್ಕೆ ಎಣ್ಣೆ ಸುರಿದು ಪ್ರಜ್ವಲಿಸುವಂತೆ ಮಾಡಬಲ್ಲರೇ ಹೊರತೂ ಶತ್ರುತ್ವವನ್ನು ಅಳಿಸಿ ಪ್ರೀತಿಯ ಹೂವನ್ನು ಅರಳಿಸುವ ಪ್ರಯತ್ನ ಮಾಡುವವರು ಸಿಕ್ಕಾರಾದರೂ ಎಲ್ಲಿ?
ನಾನು ಸುಳ್ಳುಗಳ ಸೂಡು Pಟ್ಟಿಟ್ಟು
ಸತ್ಯದ ಬೆನ್ನು ಹತ್ತಿದೆ
ಆದರೂ ದ್ವಂದ್ವಗಳು
ವಿಜೃಂಭಿಸಿ ಹೋದವು
ಬದುಕು ನಮ್ಮನ್ನು ಹೈರಾಣಾಗಿಸುತ್ತಿದೆ. ಸುಳ್ಳಿನ ಸುಡನ್ನು Pಟ್ಟಿಟ್ಟು ಸತ್ಯದ ಬೆನ್ನು ಹತ್ತುತ್ತಿದ್ದರೂ ವಿಜೃಂಭಿಸುವ ಕಟು ವಾಸ್ತವವೂ ಕೆಲವೊಮ್ಮೆ ಸತ್ಯದ ಮುಖವಾಡದಲ್ಲಿ ಅಡಗಿದ ಸುಳ್ಳುಗಳಾಗಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ನಾವೇನಾಗಬೇಕೆಂದು ಬಯಸಿದ್ದೆವೋ ಅದನ್ನು ಸಾಧಿಸುವುದಕ್ಕಾಗಿ ಸತ್ಯ ಸುಳ್ಳುಗಳನ್ನು ಒಂದಾಗಿಸುತ್ತಿದ್ದೇವೆ. ಮತಮತದಲ್ಲಿ, ಜಾತಿಜಾತಿಯಲ್ಲಿ ದ್ವೇಶದ ಬೀಜಗಳನ್ನು ಬಿತ್ತಾಗಿದ್ದು ಅದೀಗ ಮೊಳಕೆಯೊಡೆಯುತ್ತಿದೆ.
ನಿಮ್ಮ ಮನಸಲಷ್ಟು ಜಾಗ ಕೊಡಿ
ಶಾಂತಿ ಬೀಜಗಳ ಊರಿ ಸಂಭ್ರಮಿಸುವೆ
ಎನ್ನುವ ಕವಿಯ ಮಾತುಗಳಲ್ಲಿರುವ ನಿಜಾಯತಿಯನ್ನು ಗುರುತಿಸಬೇಕು. ಶಾಂತಿ ಬೀಜಗಳು ಚಿಗುರೊಡೆಸಲು ಕವಿ ಕಾತರರರಾಗಿದ್ದಾರೆ. ಇಂದಿನ ತುರ್ತು ಅಗತ್ಯವೂ ಅದೇ ಆಗಿದೆ.
ತೂರಿಬಿಟ್ಟಿ ಕನಸುಗಳ ಕಟ್ಟಲಾದರೂ
ಹರಿದ ಸೂತ್ರಗಳಿಗೆ
ಜಗದ ಬಂಧುತ್ವವೇ ಬೆಸುಗೆಯಾಗಲಿ
ಜಗವು ಪ್ರೀತಿ ಎನ್ನುವ ಬಂಧನದಲ್ಲಿ ಬಂಧಿಯಾಗಲಿ ಹರಿದು ಹೋದ ಸೂತ್ರ ಒಗ್ಗೂಡಲಿ, ದೇಶ, ಮನಸ್ಸುಗಳಲ್ಲವೂ ಸುಭದ್ರವಾಗಲಿ.
ವಿಶ್ವಭ್ರಾತ್ರತ್ವದ ನೆಲೆಯಲ್ಲಿ ಪ್ರಕಾಶ ಖಾಡೆಯವರ ಕವನಗಳನ್ನಿಟ್ಟು ನೋಡಬೇಕು. ಇಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಕವಿತೆಗಳ ಸರಳತೆ ಮತ್ತು ಅದನ್ನು ವ್ಯಕ್ತಪಡಿಸಿರುವ ರೀತಿ. ಎಲ್ಲಿಯೂ ಶಬ್ಧಭಾರದಿಂದ ಕವಿತೆ ಕುಗ್ಗಿ ಹೋಗಿಲ್ಲ. ದೊಡ್ಡದೊಡ್ಡ ರೂಪಕಗಳಿಂದ ನುಲುಗಿಲ್ಲ. ಪಂಡಿತರನ್ನು ಮೆಚ್ಚಿಸಲೇಬೇಕೆಂಬ ಘನಂಧಾರಿ ಉದ್ದೇಶವೂ ಅವರಿಗಿಲ್ಲ. ಆನು ಒಲಿದಂತೆ ಹಾಡುವೆ ಎಂಬ ಭಾವವಿದೆ. ಆದರೆ ಇಡೀ ಸಂಕಲನವಾಗಿ ಓದಿದಾಗ ಭಾವಗಳು ಮತ್ತೆ ಮತ್ತೆ ಪುನರಾವರ್ತನೆಯಾದಮತೆ ತೋರುವ ಅಪಾಯವನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಮೊದಲ ಕವನದ ಭಾವವೇ ಮುಂದುವರೆಯುತ್ತ ಹೋದಂತೆ ಕೆಲವೊಮ್ಮೆ ಭಾಸವಾಗಿ ಖಂಡಕಾವ್ಯವನ್ನು ಓದುತ್ತಿರುವ ಏಕತಾನತೆಯನ್ನು ನೀಡಿಬಿಡುವ ಅಪಾಯವೂ ಇದೆ. ಆದರೂ ಸರಳ ಹಾಗೂ ಸುಮದರ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ.
*ಶ್ರೀದೇವಿ ಕೆರೆಮನೆ*
No comments:
Post a Comment