ತರಿದ ತಲೆಯೊಳಗಿನ ಭಾವ
ತಲಬಾಗಿಲ ಬಳಿ
ಕುತ್ತಿಗೆಗಿಟ್ಟ ತಲವಾರು ಹರಿಸಿದ
ರಕ್ತದ ಕೋಡಿಯಲ್ಲಿ ಬಿದ್ದವಳನ್ನು ದಾಟಿ
ಹೊರಟು ಹೋಗುವಾಗ
ಅರೆತೆರೆದ ಕಣ್ಣಂಚು
ನಿನ್ನ ಬೆನ್ನಿಗೇ ಅಂಟಿಕೊಂಡಿದ್ದು
ನಿನಗೆ ಅರಿವಾಗದಿದ್ದುದು ವಿಶೇಷವಲ್ಲ
ಒಮ್ಮೆಯಾದರೂ ತಿರುಗಿ ನೋಡಬಹುದೆಂದು
ಬಿಗಿಹಿಡಿದು ಕಾದಿದ್ದ ಉಸಿರು
ಒಮ್ಮೆಲೆ ಎಳೆದೆಳೆದು ತಿಣುಕುತ್ತ
ಕುಂದಿ ತೇಕುವಾಗಲೂ
ನೀನು ತಿರುಗಿ ನೋಡಲೇ ಇಲ್ಲ
ತಪ್ಪೇನೂ ಮಾಡಿರಲಿಲ್ಲ
ಪ್ರೀತಿಸಿದ್ದೇ ಅನೈತಿಕ ಎನ್ನುವವರ ನಾಡಿನಲ್ಲಿ
ಅದೊಂದೇ ಅಪರಾಧ ನನ್ನದು
ಬಾಗಿಲು ಬಡಿದ ಕೈಗಳಲ್ಲಿ
ನಂಬಿ ಬಿಚ್ಚಿಟ್ಟ ಗುಟ್ಟುಗಳೂ ಇದ್ದುದನ್ನು
ಮರೆಯುವುದಾದರೂ ಹೇಗೆ ಹೇಳು
ಅದೋ ನೀನು ಹೊರಟ ದಾರಿಗೆದುರಾಗಿ
ಸೂರ್ಯ ಮುಳುಗುತ್ತಿದ್ದಾನೆ
ಇಳಿಸಂಜೆಯ ಬಣ್ಣವನ್ನೆಲ್ಲ
ನನ್ನ ಸುತ್ತ ಹರಡಿ ಗಡಿಬಿಡಿಯಿಂದ
ಅವನ ಮುಖದಲ್ಲೇಕೆ ಹಸಿ ನೆತ್ತರ ವಾಸನೆಗೆ
ಹೇಸಿದ ಭಾವ ತುಂಬಿದೆ?
ಇತ್ತ ಆಗತಾನೆ ಮೂಡಿದ ಚಂದ್ರನಿಗೂ
ನನ್ನ ಕುತ್ತಿಗೆಯ ನರಗಳಿಂದುಕ್ಕಿದ
ಕೆಂಬಣ್ಣದ ಅಭಿಷೇಕವಾಗುತ್ತಿದೆ
ಅರ್ಧ ಮುಖ ಮುಚ್ಚಿ
ರಕ್ತ ಹೆಪ್ಪುಗಟ್ಟುತ್ತಿರುವುದನ್ನು
ನೋಡುತ್ತಿದ್ದಾನೆ ಭಯದಿಂದಲೇ
ಅದೋ, ಅದೆಷ್ಟು ದೂರ ಹೋಗುವೆ
ಒಮ್ಮೆಯೂ ಹಿಂದಿರುಗಿ ನೋಡದೇ
ನಿಶ್ಚೇತವಾಗಿ ಬಿದ್ದ ನನ್ನನ್ನು
ನಿನ್ನ ಕಣ್ಣಂಚಲ್ಲಿ ನೀರಿದೆಯೇ
ಎದೆಯೊಳಗೆ ಸಂತಾಪವಾದರೂ ಆಗಬಹುದೇ
ಇನಿತೂ ಅಲುಗಾಡದ ಸ್ಥಿತಿಯಲ್ಲಿ
ಏನೆಂದು ಗಮನಿಸಲಿ
ಹೋದ ಮರುದಿನದ ಮಧ್ಯಾಹ್ನವೇ
ಮಿಲನ ಮಹೋತ್ಸವದಲಿ ಮಿಂದೆದ್ದು
ಮತ್ತೆ ಹಳೆಯದಾದ ಹೊಸ ಬಾಳಿಗೆ
ಹೆಜ್ಜೆ ಜೋಡಿಸಿದವನಿಗೇನು ಗೊತ್ತಿದೆ
ತೇಕುತ್ತ ಉಸಿರೆಳೆದೂ
ಸಾಯಲಾಗದ ಬದುಕುವ ನರಕ?
ಎದೆಯ ಮೆತ್ತೆ, ಹೊಕ್ಕಳ ಶಂಖು
ಯೋನಿಯ ಆಳ ಹುಡುಕುವಾಗ
ರಕ್ತದ ಕೋಡಿ ಮರೆಯುವುದು ಲೋಕಾರೂಢಿ
ನಿಂತು ಹೋದ ನನ್ನ ಉಸಿರಿನಲೂ
ನಿನ್ನ ಮೋಸದ ದುರ್ಗಂಧ ಮೆತ್ತಿಕೊಂಡು
ಇರಿದು ಕೊಂದ ನಿನ್ನವರಿಗೆಲ್ಲ ಕ್ಷಮೆ ನೀಡದೇ
ಭಾರವಾದ ಎದೆಭಾವಗಳ ಹೊರಲಾರದೇ ಹೊತ್ತು
ಹೂವರಳಿದ ಸ್ವರ್ಗದ ಹಾದಿಯಲಿ
ಹೇಗೆ ಪಯಣಿಸಲಿ
ಜಗದ ಋಣಾನುಬಂಧ ಹರಿದು..
ಶ್ರೀದೇವಿ ಕೆರೆಮನೆ
ಆಳ ಹುಡುಕುವ ಗಂಡಸರಿಗೆಲ್ಲಿ ಗೊತ್ತಾಗಬೇಕು ಹೆಣ್ಣಿನ ಅಂತರಾಳ!!
ReplyDeleteಒಂದಲ್ಲ ಒಂದು ದಿನ ಜಗಜ ಜಂಜಡ ಹರಿದುಕೊಳ್ಳಲೇಬೇಕು
ReplyDeleteಚೆನ್ನಾಗಿದೆ ಕವಿತೆ...
ReplyDeleteಭಾವಪೂರ್ಣ ಕವನ. ತುಂಬ ಇಷ್ಟವಾಯಿತು 👌👌
ReplyDeleteಚೆನ್ನಾಗಿದೆ.....
ReplyDeleteಕವಿತೆ ಗಮನವನ್ನು ಸೆಳೆಯಿತು ಶ್ರೀದೇವಿ.
ReplyDeleteಬಿ. ಸಿ. ರಾಮಚಂದ್ರ ಶರ್ಮ, ಕೆ. ವಿ. ತಿರುಮಲೇಶ್ ಮುಂತಾದ ಹಿರಿಯರ ಕವಿತೆಗಳಂತೆ ನಿಮ್ಮ ಈ ಮಾದರಿಯ ಕವಿತೆಗಳು, ಗಂಭೀರ ಓದಿನ ಒತ್ತಡಕ್ಕೆ ಸಿಕ್ಕು ಹಿಂಡಿಹಿಪ್ಪೆಯಾಗುವ ಮೂಲಕ ಜೇನು ತೊಟ್ಡಿಕ್ಕಬಲ್ಲ ಒರಟು ಕಬ್ಬಿನ ಮಾದರಿಯ ಕವಿತೆಗಳು.ಚೆನ್ನಾಗಿದೆ ಶ್ರೀದೇವಿ. ದಿನನಿತ್ಯದ ಸಾಮಾನ್ಯ ಜೀವನಜಂಜಡವನ್ನೆ ಕಾವ್ಯಕಲೆಯಾಗಿ ಪರಿವರ್ತಿಸುವ ಸಾಮರ್ಥ್ಯ ನಿಮಗಿದೆ. ಬರೆಯಿರಿ. ಅಂದಹಾಗೆ ನೀವು ಬರೆದದ್ದರಲ್ಲಿ ಟೆನ್ ಪರ್ಸೆಂಟ್ ಮಾತ್ರ ನಾ ಓದದು. ಗೊತ್ತುಂಟಲ್ಲ...ರಾಬು
ReplyDeleteಈಗ ಹರಿನಾಥ ಬಾಬು ಕವಿತೆ ಓದಿದರು... ಅದರ ಮೇಲೇನೆ ಮಾತಾಡಿದರು... ಚೆನ್ನಾಗಿ ಬರೆದಿದ್ದೀರಿ ಸಿರಿ
ReplyDeleteಗಂಡು-ಹೆಣ್ಣಿನ ಅವಿಚ್ಛಿನ್ನ ಸಂಬಂಧಗಳಲ್ಲಿ ಮತ್ತೆ ಮತ್ತೆ ಏಳುವ ಪ್ರಶ್ನೆಗಳಿವು..
ReplyDeleteಚೆನ್ನಾಗಿದೆ
ReplyDeleteGood
ReplyDelete