Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Saturday 23 March 2024

ಮಹಾಜನಗಳ ನಡುವೆ

ಮಹಾಜನಗಳ ನಡುವೆ

ಜಾರಿದ ಸೆರಗಿನ ಕಡೆ ಗಮನಿಸದೆ
ತರಾತುರಿಯಲ್ಲಿ ಹೊರಟ ಅವಳಿಗೆ 
ಮಾಡಿ ಮುಗಿಸಬೇಕಾದ ಕೆಲಸದ ಗಡಿಬಿಡಿ
 ಹೋಗದಿದ್ದರೆ ಹೇಳಿದ ಸಮಯಕ್ಕೆ 
ಕೈ ತಪ್ಪುವ ಭೀತಿ ಎದೆಯೊಳಗೆ
ಕೊಡುವ ಸಣ್ಣ ಪಗಾರದಲ್ಲಿ 
ಮತ್ತೊಂದಿಷ್ಟು ಸಣ್ಣ ಮೊಬಲಗು
ಐದು ಹತ್ತು ರೂಪಾಯಿಯೇ ಆದರೂ
ಅದೇ ಕೈ ಹಿಡಿಯುವುದು ತಿಂಗಳ ಕೊನೆಗೆ 

ಬರ್ತೀಯಾ? ತಾಸಿಗೆ ಇನ್ನೂರು
ಇಬ್ಬರಿದ್ದೇವೆ ಕೊಡುತ್ತೇನೆ ನಾನೂರು 
ಹಠಾತ್ತನೆ ಎದುರು ನಿಂತು ಕೇಳಿದ ಪ್ರಶ್ನೆ
ತನಗೇ ಎಂಬುದು ಅರ್ಥವಾಗಲೂ 
ಬೇಕಾಯಿತು ಅವಳಿಗೆ ಒಂದಿಷ್ಟು ನಿಮಿಷ  
ಬೆಪ್ಪಾಗಿ ನಿಂತವಳಿಗೆ ಮುನ್ನೂರಾದರೆ? 
ಮತ್ತೆ ಎದೆ ನಡುಗಿಸುವ ಪ್ರಶ್ನೆ 
ನಾನು ಅಂಥವಳಲ್ಲ ದನಿಯಲ್ಲಿ ಬಲವಿಲ್ಲ
ಜಾರಿದ ಸೆರಗಿನವಳು ಇನ್ನೇನಾಗಿರಲು ಸಾಧ್ಯ
ಎದೆಯೊಳಗೆ ಬಂದೂಕಿನ ಮೊನೆ ಮುರಿದ ಸದ್ದು
ನಿನ್ನ ಹೆಂಡತಿಯನ್ನೂ ಕರೆದು ತಾ
ಇಬ್ಬರೂ ಸೇರಿಯೇ ಬೀದಿಯಲ್ಲಿ 
ಮೆರವಣಿಗೆ ಹೊರಡುತ್ತೇವೆ ಸೆರಗು ಜಾರಿಸಿ
ಎದೆಯೊಳಗಿನ ಮಾತು ತುಟಿ ಮೀರಿ 
ಇನ್ನೊಂದು ಹೆಣ್ಣು ಜೀವ ನೋಯದಿರಲೆಂಬಂತೆ 
ಅವಡುಗಚ್ಚಿ ಕಣ್ಣೊಳಗೆ ತುಳುಕಿಸಿದಳು ನಗು  
ನಗು ಕಂಡವನೊಳಗೆ ಆತುರ ಮೈ ತುಂಬ 
ನಡೆ ನಿನ್ನ‌ ಮನೆಗೇ ಹೋಗೋಣ
ಎಂದವನ ತಡೆಯುತ್ತ ಹೇಳಿದಳು ತಣ್ಣಗೆ 
ಬೇಡ, ನಿನ್ನ ಮನೆಯೇ ಆದೀತು
ಇರಬಹುದು ಅಲ್ಲಿ ನಿನ್ನಪ್ಪ, ಅಜ್ಜನೂ 
ಕೊಡಬಹುದು ಅವರೂ ಮುನ್ನೂರು 
ನಿನ್ನ ಪುಟ್ಟ ಮಗನೂ ಇದ್ದರೆ ಒಳ್ಳೆಯದು
ಅವನೂ ಕೊಡುವ ಹಣ ಸೇರಿದರೆ  
ಸಿಗುವ ಆದಾಯದಿಂದ ಕೊಡಬಹುದು 
ನಿನ್ನವ್ವ ಹೆಂಡತಿಗೆ ಸೀರೆಯ ಉಡುಗೊರೆ
ಉಟ್ಟು ನಗಬಹುದು ಮೊಗವರಳಿಸಿ 
ಮಾತು ಮುಗಿಯುವ ಮುನ್ನವೇ 
ಹೊರಟವರ ತಡೆದು ಕೇಳಿದಳು ಸುತ್ತ ನೆರೆದವರ
ಬರಬೇಕೆ ನಿಮ್ಮಲ್ಲಿ ಯಾರ ಮನೆಗಾದರೂ
ತಗ್ಗಿಸಿದ ತಲೆಯೆತ್ತುವ ನೈತಿಕತೆಯೆಲ್ಲಿ 
ಸುಸಂಸ್ಕೃತರೆನಿಸಿಕೊಳ್ಳುತ್ತ ತಮಾಷೆ ನೋಡಿದ
ಮಹಾಜನಗಳ ಮಹಾ ಆಸ್ಥಾನದಲ್ಲಿ


Saturday 16 March 2024

ಚಿತಾಗ್ನಿಯಲ್ಲಿನ ಕೊರಡು

ಚಿತಾಗ್ನಿಯಲ್ಲಿನ ಕೊರಡು

ಆತ ಒಮ್ಮೆಯೂ ಹಿಂದಿರುಗಿ ನೋಡದೆ 
ಹೊರಟು ಹೋಗಿ ಅವನದ್ದೇ ಲೋಕದಲ್ಲಿ 
ತಲ್ಲೀನವಾಗಿ ಹಳೆಯದನ್ನೆಲ್ಲ ಮರೆತಿರುವಾಗಲೂ
ಹಿಂದಿರುಗಿ ಬಂದೇ ಬರುತ್ತಾನೆಂದು
ಅವನು ಹೋದ ಹಾದಿಗೆ ಕಣ್ಣು ಕೀಲಿಸಿ
ಕಲ್ಲಾಗಿ ಕಾಯುತ್ತಾಳೆ ಅಹಲ್ಯೆಯಂತೆ 
ಅವನೆಂದೂ ಹಿಂದಿರುಗಲಾರ
ಸ್ಪರ್ಶಿಸಿ ಮತ್ತೆಂದೂ ತನ್ನ ಹೆಣ್ಣಾಗಿಸಲಾರ
ಎಂಬ ಸತ್ಯ ಅರಿವಾಗುವಾಗುವಷ್ಟರಲ್ಲಿ 
ಅವಳು ತಲೆ ನೆರೆತ, ಬಾಗಿದ ಬೆನ್ನಿನ ಮುದುಕಿ 
ಅವನ ಬಣ್ಣಬಣ್ಣದ ಮಾತಿಗೆ ಅರಳಿ
ಕನಲಿ, ನಲುಗಿ ಸುರಿವ ಜೇನಿನಂತಹ
ಪ್ರೇಮವನ್ನು ಎದೆಯ ತುಂಬ ತುಂಬಿಕೊಂಡು
ವ್ಯಭಿಚಾರಿಯ ಪಟ್ಟ ಹೊರುವ ಹೆಣ್ಣುಗಳಿಗೆ
ಲೋಕದ ಅಪವಾದ ನಿಂದನೆಗಳನ್ನಷ್ಟೇ ಅಲ್ಲ
ಬೈಗುಳ, ಸಿಡುಕು, ತಿರಸ್ಕಾರಗಳನ್ನೆಲ್ಲ 
ವಿನಾಕಾರಣ ಎದೆಗೆಳೆದುಕೊಳ್ಳುವ ಹುಚ್ಚು 

ತಿರಸ್ಕರಿಸಿದಷ್ಟೂ ಸ್ವಾಭಿಮಾನವ ಮುಡಿಪಿಟ್ಟು
ಬಾಚಿ, ತಬ್ಬಿ, ಆದರಸುತ್ತ 
ಮಾಗಿ, ಬಳಲಿ, ಬೆಂಡಾಗಿ ಮುರಿಯುತ್ತ
ಬೂದಿ ತೀಡಿದ ನಿಗಿನಿಗಿ ಕೆಂಡ 
ಅವಳ ಒಳಹೊರಗನ್ನೆಲ್ಲ ದಹಿಸುವುದು 
ಜಗದ ಕಣ್ಣಿಗೆ ದೇಹ ದಹಿಸುವ ಚಿತಾಗ್ನಿ
ಅವಳಂತೂ ಉರಿದು ಬೂದಿಯಾಗುವ ಕೊರಡು

ಶ್ರೀದೇವಿ ಕೆರೆಮನೆ

Tuesday 12 March 2024

ಹೇಳಿ ಹೋಗು



ಹೇಳಿ ಹೋಗು 

ನಿನ್ನನ್ನು ಮಾತನಾಡಿಸುವ 
ನನ್ನೆಲ್ಲ ತರೆಹವಾರಿ ಪ್ರಯತ್ನಗಳು
ಮಕಾಡೆ ಬಿದ್ದು ವಿಫಲವಾದ ನಂತರ 
ನಾನೂ ಸಹ ಮೌನವಾಗಿ 
ನಿನ್ನಿಂದ ದೂರ ಹೊರಟುಬಿಡುವ 
ಗಟ್ಟಿ ನಿರ್ಧಾರ ಮಾಡಿದ್ದೇನೆ

ಹೀಗೆ ಬಂದು ಹಾಗೆ ಹೋಗುವ
ನಿನ್ನ ಬಾಳ ಪಯಣದಲ್ಲಿ 
ಹೆಸರಿಲ್ಲದ ಒಂದು ಸಣ್ಣ 
ನಿಲ್ದಾಣ ನಾನಾಗಿದ್ದಕ್ಕೆ 
ಸಮಾಧಾನ ಪಡುವುದೋ 
ವಿಷಾದಿಸುವುದೋ ಎಂಬುದು
ಅರ್ಥವಾಗದೆ ದಿಗ್ಭ್ರಾಂತಳಾಗಿರುವಾಗ 
ಒಮ್ಮೆಯೂ ಹಿಂದಿರುಗಿ ನೋಡದೆ 
ನೀ ನಡೆದು ಹೋದ ಹಾದಿಯ 
ಬದಿಯ ಕಲ್ಲುಬಂಡೆಯಾಗಿದ್ದೇನೆ
ವಿದಾಯದ ಕಣ್ಣೀರನ್ನು ಒಳಗೊಳಗೇ ನುಂಗಿ

ಹೊರಟು ಹೋಗುವ ಮುನ್ನ 
ಒಂದೇ ಒಂದು ಮಾತು ಹೇಳಿ ಬಿಡು
ಅಲೆಗಳೇ ಇಲ್ಲದ ನನ್ನ ಬಾಳಲ್ಲಿ
ನೀನು ಬಂದು ತಂಪು ಸುರಿದಿದ್ದೇಕೆ
ಈಗ ಕಾರಣವೇ ಹೇಳದೆ 
ಹೊರಟು ಹೋಗುತ್ತಿರುವುದಾದರೂ ಏಕೆ?

...ಶ್ರೀದೇವಿ ಕೆರೆಮನೆ

Wednesday 24 January 2024

ಜೊತೆಗಿರು

ಜೊತೆಗಿರು 

ಹೇಳುತ್ತೇನೆ ಮತ್ತೆ ಮತ್ತೆ ಜೊತೆಗಿರು
ಸಂತೆಯ ನಡುವೆಯೂ ಒಂಟಿ ಎನಿಸಿದಾಗ 
ಸುತ್ತೆಲ್ಲ ಗೆಳತಿಯರು 
ಯಾರಿಗೂ ಕೇಳದಂತೆ  ಪಿಸುಮಾತಲ್ಲಿ 
ತಮ್ಮ ಸಂಸಾರದ ಗುಟ್ಟುಗಳ ಬಿಚ್ಚಿಟ್ಟು 
ಕಿಸಿಕಿಸಿ ನಗುವಾಗ 
ಗುಟುಕರಿಸುವಾಗ ಹಳೆಯ ಗೆಳೆಯರೆಲ್ಲ ಸೇರಿ‌ 
ಕೇ ಕೇ ಹಾಕುತ್ತ ಬೈಟೂ ಚಹಾ  
ಕಿಬ್ಬೊಟ್ಟೆಯಲಿ ನೋವು ಅಲೆಅಲೆಯಾಗಿ ಉಕ್ಕಿ 
ತಿಂಗಳ ಮಾಮೂಲನ್ನು ವಸೂಲು ಮಾಡುವ 
ತಾಳಲಾಗದ ನೋವನ್ನು ಅವಡುಗಚ್ಚಿ 
ಒಮ್ಮೆ ನಿನ್ನ ಮಡಿಲಲ್ಲಿ ತಲೆಯಿಟ್ಟು 
ಸಂತೈಸಿಕೊಳ್ಳ ಬೇಕೆನಿಸಿದಾಗ 
ಕೆಲಸದ ನಡುವೆ ಹಿಂಬದಿಯ ಸೊಂಟ ಬಳಸಿ 
ಪಿಸುಮಾತು ಕಿವಿಯಂಚಲಿ 
ಬಿಸಿಯಾಗಿ ಕೇಳಿದಂತಾದಾಗ 
ಹೆಚ್ಚಿದ ತರಕಾರಿಯ ಜೊತೆ 
ಬೆರಳೂ ತರಿದು, 
ರಕ್ತ  ತುದಿಯಿಂದ ಬೆರಳಗುಂಟ ಧಾರೆಯಾದಾಗ 
ಮೀನು ಮುಳ್ಳು ಸರಕ್ಕನೆ ನುಗ್ಗಿ 
ಉಸಿರು ನಿಂತು ಹೋದಂತಾದಾಗ  
ಬಿಸಿ ಎಣ್ಣೆಯ ಕಾವಲಿಗೆ ಕೈ ತಾಗಿ 
ಚುರುಕ್ ಎಂದಾಗ 
ಮನದಲ್ಲೇ ನಿನ್ನ ನೆನೆಸುತ್ತ 
ನನಗೆ ನಾನೇ ಹೇಳಿಕೊಳ್ಳುವ ಜಪದಂತೆ 
ಜೊತೆಗಿರು ಎನ್ನುತ್ತೇನೆ 
ಇತ್ತೀಚಿಗಂತೂ ಜೊತೆಗಿರು ಎನ್ನುವ ಮಾತು 
ನನಗೆ ನಾನೇ ಪಠಿಸುತ್ತೇನೆ 
ಕೇಳುವುದು ಕ್ಲೀಷೆಯಾಗುವಂತೆ  
ವಿಷ್ಣು ಸಹಸ್ರ ನಾಮ, 
ಲಕ್ಷ್ಮಿ  ಸಹಸ್ರ ನಾಮದಂತೆ‌
ಜೊತೆಗಿರು ಎಂಬುದು ಆರಾಧನೆಗೊಳಪಡುತ್ತದೆ
ನಿನ್ನ ಹೆಸರಾಗಿ 
ಮನದೊಳಗೆ ಪ್ರತಿಷ್ಟಾಪನೆಗೊಂಡು  
ಇಷ್ಟಾದರೂ ಇಲ್ಲ ನನಗೆ 
 ನಾನು ಜೊತೆಗಿರು ಎಂದುಕೊಳ್ಳುವುದು 
ನಿನ್ನ ಕಿವಿಗೆ ತಲುಪಿಯೇ ಬಿಡುತ್ತದೆ 
ಎನ್ನುವ ಯಾವ ನಂಬಿಕೆಯೂ 
ಆದರೂ ಮೈದುಂಬಿ ಸುಖಿಸುತ್ತದೆ 
ಹಾಗೆಂದಾಗ ನೀನು ಜೊತೆಗಿರುವ 
ಅಮೂರ್ತ ಅನುಭವ 
ಕೆಲವೊಮ್ಮೆ  ನಾನು ಜೊತೆಗಿರು ಎಂದಾಗ
ನಿನ್ನ ಕಿವಿಗೆ ತಲುಪಿ 
ಇದ್ದೇನಲ್ಲ ಸದಾ ಜೊತೆಗೆ 
ಯಾಕೆ ಮತ್ತೆ ಮತ್ತೆ ಅದೇ ಮಾತು 
ನೀನು ಮಾತು ಮುಗಿಸಿ ಬಿಡುವುದೂ 
ಹೊಸ ವಿಷಯವೇನೂ ಅಲ್ಲ ನನಗೆ 
ಇಷ್ಟಾಗಿಯೂ ಹೆಚ್ಚಿನ ಸಲ 
ಜೊತೆಗಿರು ಎಂಬ ನನ್ನ ಗೋಗರೆತದ ದನಿ 
ನಿನ್ನ ಮೆದುಳು ತಲುಪಿ 
ಪ್ರತಿಕ್ರಿಯೆ ಬಂದೇ ಬರುತ್ತದೆಂಬ ನಂಬಿಕೆಯೇನಿಲ್ಲ  
ಆದರೂ ಹೇಳುತ್ತೇನೆ 
ಹೇಳುತ್ತಲೇ ಇರುತ್ತೇನೆ 
ಹೇಳುತ್ತ ಹೇಳುತ್ತಲೇ ಉಸಿರು ನಿಲ್ಲಿಸುತ್ತೇನೆ 
ಜೊತೆಗಿರು, ಕೊನೆಯ ಉಸಿರಿರುವವರೆಗೆ  
.....ಶ್ರೀದೇವಿ ಕೆರೆಮನೆ

ಆಗುವುದೆಲ್ಲ ಒಳ್ಳೆಯದಕ್ಕೆ

ಆಗುವುದೆಲ್ಲ ಒಳ್ಳೆಯದಕ್ಕೆ

ಈ ಭಾವುಕ ಕ್ಷಣದಲ್ಲಿ
ನೀನು ಜೊತೆಗಿರದಿದ್ದುದು ಒಳ್ಳೆಯದಾಯಿತು
ಇಹದ ಪರಿವೆಯೇ ಇಲ್ಲದೇ ಮೈ ಮರೆತು 
ಪೂರ್ಣವಾಗಿ ನಿನಗೊಪ್ಪಿಸಿಕೊಂಡು 
ಬಿಡುವ ಅನಾಹುತವೊಂದು 
ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು. 


ಅದೆಷ್ಟು ಮಾತು, ಅದೆಂತಹ ಲಲ್ಲೆ
ಮಾತು ಮಾತಿಗೂ ಎದೆಯಾಳದಿಂದ
ಬಿಸಿ ನೀರಿನ ಬುಗ್ಗೆಯೊಂದು
ಒಮ್ಮೆಲೆ ಚಿಮ್ಮಿ ಬೆಚ್ಚಗಾದಂತೆ 
ದೇಹದ ಕಣಕಣವೂ ಹಂಬಲಿಸಿ 
ಎದೆಯೊಳಗೆ ಹರಿಯುವ 
ಜುಳು ಜುಳು ನದಿಗೆ 
ಪ್ರವಾಹ ಬಂದು ಉಕ್ಕೇರಿದಂತೆ
ಸುಪಾ ಆಣೆಕಟ್ಟಿನ ಹಿನ್ನೀರಿನಂತೆ
ಸದಾ ಒದ್ದೆ ಒದ್ದೆಯಾಗಿರುವ 
ಮನದಂಗಳದ ತುಂಬೆಲ್ಲ 
ನಿನ್ನದೇ ಹೆಜ್ಜೆಗುರುತು

ಈ ಚಂಚಲಗೊಂಡ ಸ್ಥಿತಿಯಲ್ಲಿ 
ನೀನು ಸನಿಹ ಬರದಿದ್ದುದು ಸರಿಯಾಗಿತ್ತು
ಹಸಿಯಾದ ಎದೆಯ ಮೆತ್ತೆಗೆ
ಮೂಡುವ ನಿನ್ನ ಉಗುರಿನ ಗುರುತಿಗೆ
ನಾನು ಹೊಸತಾದ ಕಾರಣ ಹುಡುಕಲು
ಸುಳ್ಳಿನ ಕಣಜದ ಮೊರೆ ಹೋಗಬೇಕಿತ್ತು  

ಹದವಾದ ಭೂಮಿಗೆ ಬೀಜ ಬಿತ್ತುವಂತಿರುವ
ಈ ನಾಜೂಕಾದ ಗಳಿಗೆಯಲ್ಲಿ
ನಿನ್ನ ಮೈಯ್ಯ ವಾಸನೆ ಆಘ್ರಾಣಿಸಲು 
ಆಗದಿದ್ದುದು ಸಮಂಜವೇ ಆಗಿತ್ತು
ಕುತ್ತಿಗೆಯ ತಿರುವಿನಲ್ಲಿ ಮೂಡುವ
ಹಲ್ಲಿನ ಗುರುತಿಗೆ ಸಬೂಬು ಹೇಳಬೇಕಿತ್ತು
ಶಂಖುತೀರ್ಥದ ಹೊಕ್ಕಳ ಆಳದಲ್ಲಿ
ನಿನ್ನ ಬೆರಳ ತುದಿಯ ನಾಜೂಕು
ಸ್ಪರ್ಶದಿಂದೇಳುವ ಪ್ರಚಂಡ ಅಲೆಗೆ
ಎಲ್ಲ ಮರೆತು ಸುಖವಾಗಿ ಪವಡಿಸಿರುವ 
ಕಡಲೆಂಬ ಕಡಲೂ ಬೆಚ್ಚಿ ಬೀಳುತ್ತಿತ್ತು
ಆಗುವುದೆಲ್ಲ ಒಳ್ಳೆಯದಕ್ಕೇ ಬಿಡು
ಸಕಲವೂ ಕ್ಷೇಮ ಎಂದಾದಾಗ
ಸವುಡು ಸಿಕ್ಕರೆ ಮತ್ತೆಲ್ಲಾದರೂ ಭೇಟಿಯಾಗೋಣ
ಎರಡು ಮಾತು ಚಿಕ್ಕದೊಂದು ನಗುವಿನೊಂದಿಗೆ

ಶ್ರೀದೇವಿ ಕೆರೆಮನೆ