Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Saturday 17 December 2016

ಬಿಸಿ ಚಹಾ ೧೮/೧೨/೨೦೧೬

*ಬಿಸಿ ಚಹಾ*
ನಿನಗೆಂದು ತುಸು ಹೆಚ್ಚೇ
ಹಾಲು ಸಕ್ಕರೆ ಬೆರೆಸಿ
ಜೊತೆಗಿಷ್ಟು  ಪ್ರೀತಿಯನ್ನೂ ಸೇರಿಸಿ
ರುಚಿಯಾದ ಚಹಾ ತಯಾರಿಸಿ
ಅಲ್ಲೇ ಮೇಜಿನ ಮೇಲಿಟ್ಟಿದ್ದನ್ನು
ಕದ್ದು ಕುಡಿದವರಾದರೂ ಯಾರು?

ಕಳ್ಳ ಬೆಕ್ಕೇನೂ ಒಳ ಬಂದಂತಿಲ್ಲ
ಸಾಕಿದ ಟಾಮಿಗೂ ಒಳ ಪ್ರವೇಶವಿಲ್ಲ
ತಮ್ಮದೇ ಲೋಕದಲ್ಲಿ ಮೈಮರೆತಿರುವ
ಪಂಜರದೊಳಗಿನ ಜೋಡಿ ಹಕ್ಕಿಗಳು
ಈ ಲೋಕದ ಜಂಜಾಟಕ್ಕೆ ಬಂದಂತಿಲ್ಲ
ನಮ್ಮ ಏಕಾಂತವ ಹೀರಿದವರಾರು?

ನಿನಗೆಂದೇ ಮೂರು ಲೋಕವ ಹುಡುಕಿ
ಅಮರಾವತಿಯಿಂದ ತಂದ ಬೇರುಗಳ
ಬೆರೆಸಿ ಮಾಡಿದ ಚಹವೆಂಬ
ಸುಳಿವು ಹಿಡಿದಿರಬಹುದೇ ಅವರು?

ನನ್ನ ಪ್ರೀತಿಯ ಅಬ್ಬರಕ್ಕೆ
ಹೊಟ್ಟೆ ಉಬ್ಬರಿಸಿ ನರಳದಿರಲಿ
ಕುಡಿದ ಕ್ಷಣವೇ ಪ್ರೇಮದ ನಶೆಗೆ
ಜಾರಿ ಹೋಗಿರ ಬಹುದಾಗಿದ್ದರೂ
ಸುಖವಾಗಿರಲಿ ಕದ್ದವರು.
...ಸಿರಿ🌞   (18/12/2016)
*ಶ್ರೀದೇವಿ ಕೆರೆಮನೆ*

ಶುಭ ಮುಂಜಾವು

Friday 16 December 2016

ಬಿಸಿ ಚಹಾ 17/12/2016

*ಬಿಸಿಚಹಾ*
ಸರಿ ಬಿಡು,
ನಿನ್ನ ಮೌನ ಯಾತ್ರೆ
ಹೀಗೆಯೇ ಮುಂದುವರೆಯಲಿ
ನಾನು ಕಾಯುತ್ತೇನೆ
ಬಿಸಿ ಚಹಾದ ಲೋಟ ಹಿಡಿದು

ನನಗೆ ಗೊತ್ತಿದೆ
ಬಿಸಿ ಚಹಾದ ನೆಪದಲ್ಲಾದರೂ
ನೀನು ಬಂದೇ ಬರುತ್ತೀಯೆಂಬ ಸತ್ಯ

ಬಂದವನು ಎದುರು ಕುಳಿತು
ಮಾತನಾಡದೇ ಹಬೆಯನ್ನೇ
ದಿಟ್ಟಿಸುತ್ತ ನಿಟ್ಟುಸಿರಿಟ್ಟೆಯೆಂದರೆ
ನೀನು ಸಂಧಾನಕ್ಕೆ ಸಿದ್ಧವೆಂದೇ ಅರ್ಥ

ನಿನ್ನ ಹೆಗಲ ಮೇಲೆ ಹಗುರಾಗಿ
ನನ್ನ ಮೃದುವಾದ ಅಂಗೈ ಇರಿಸಿ
ಹಿಂಬದಿಯಿಂದ ನಿನ್ನ ಕೊರಳು ಬಳಸಿ
ನಾನು ಅನುಸಂಧಾನ ಮಾಡಿದರೆ ಅಲ್ಲಿಗೆ ಮೌನದ ಅಧ್ಯಾಯವೊಂದು
ಸುಖಾಂತ್ಯದ ತೆರೆ ಕಾಣುತ್ತದೆ

ತಾಸರ್ಧದ ನಂತರ ಕುಡಿದ
ತಂಪು ಚಹಾಕ್ಕೆ ಇಂದು
ಎಂದೂ ಕಾಣದ ಅದ್ಭುತ ಸ್ವಾದ
*ಸಿರಿ* 🌞 (17/12/2016)

ಶುಭ ಮುಂಜಾನೆ

Thursday 15 December 2016

ಬಿಸಿ ಚಹಾ 16/12/2016

*ಬಿಸಿ ಚಹಾ*

ನಿನ್ನ ಮೌನವನ್ನು ನಾನು
ತೀವೃವಾಗಿ ದ್ವೇಷಿಸುತ್ತೇನೆ
ಎಂಬುದು ನಿನಗೆ ಗೊತ್ತಿದ್ದರೂ
ಮೌನದ ಕೋಟೆಯ ಬಾಗಿಲು
ತೆರೆಯದ ನಿನಗಾಗಿ ಬಿಸಿ ಚಹಾದ
ಬಟ್ಟಲು ಹಿಡಿದು ಕಾದಿದ್ದೇನೆ.

ನೀನು ಕುಡಿವ ಮೊದಲೇ
ರುಚಿ ನೋಡುವ ನೆಪದಲ್ಲಿ
ಒಂದೇ ಒಂದು ಗುಟುಕು ಹೀರಿ
ತುಟಿ ಚುರ್ ಎನಿಸಿಕೊಂಡಿದ್ದೇನೆ

ಕುಡಿದು ಬಿಡು ಒಂದು ಗುಟುಕು
ನನ್ನ ತುಟಿಯ ಮಧುರತೆಯಾದರೂ
ನಿನ್ನ ಮೌನವನ್ನು ಕರಗಿಸಲಿ

ಹದವಾದ ಬಿಸಿಯ ಸ್ವಾದವನ್ನು
ಆಸ್ವಾದಿಸಿದ ನಂತರವಾದರೂ
ನಿನ್ನ ತುಟಿ ಉಸುರ ಬಹುದಾದ
ಸಿರಿ ಎಂಬ ನವಿರೇಳಿಸುವ ಶಬ್ಧಕ್ಕಾಗಿ
ತಲಬಾಗಿಲಲ್ಲೇ ಕಾದು ನಿಂತಿದ್ದೇನೆ

..ಸಿರಿ  🌞 (16/12/2016)

ಶುಭ ಮುಂಜಾವು

Wednesday 14 December 2016

ಬಿಸಿ ಚಹಾ 15/12/2016

*ಬಿಸಿ ಚಹಾ*

ನನ್ನೆದುರು ನೀನು
ನಿನ್ನ ನೋಡುತ ನಾನು
ನಡುವೆ ಹಾಸಿದ ಮೌನ
ದೀರ್ಘವಾಗದಿರಲಿ ಎಂಬಂತೆ
ಬಿಸಿ ಚಹಾದ ಕಪ್ಪಿಂದ
ಮೇಲೇರುತ್ತಿರುವ  ಹಬೆ
ಇಬ್ಬರ ಚಳಿಗೂ ಕಾವು ಕೊಟ್ಟು
ಮಾತಿನ ಮೊಟ್ಟೆ ಒಡೆದು
ಮರಿಯಾಗುವುದನ್ನೇ ನಿರೂಕಿಸುತ್ತಿದೆ .

ಬಿಸಿ ಚಹಾದ ಸ್ವಾದಕ್ಕೆ
ಮುರಿದ ಮನಸ್ಸನ್ನು
ಒಗ್ಗೂಡಿಸುವ ಅಲೌಕಿಕ ಶಕ್ತಿಯಿದೆ
.
.
..ಸಿರಿ 🌞

ಶುಭ ಮುಂಜಾವು (೧೫/೧೨/೨೦೧೬)

Tuesday 13 December 2016

ಬಿಸಿ ಚಹಾ 14/12/2016

*ಬಿಸಿ ಚಹಾ*

ಎಲ್ಲವನ್ನೂ ಬಿಡಿಸಿ ಹೇಳುವುದರಲ್ಲಿ
ಏನಿದೆ ಸೊಗಸು
ಹೇಳದೇ ಅರ್ಥೈಸಿ ಕೊಂಡರೆ ಮಾತ್ರ
ಅದರಲ್ಲಿದೆ ಸೊಬಗು

ಎಲ್ಲವನ್ನೂ ಮನಬಿಚ್ಚಿ
ಹೇಳಲಾಗದ ಚಡಪಡಿಕೆಗೆಂದೇ
ಹಾಲು ಸಕ್ಕರೆ ಬೆರೆಸಿ
ಬಿಸಿ ಬಿಸಿ ಚಹಾ ಕೈಗಿಟ್ಟಿದ್ದೇನೆ

ಅದರ ಸ್ವಾದವ ಆಸ್ವಾದಿಸುವ
ಸವಿ ಸಮಯದಲ್ಲಾದರೂ
ಅರ್ಥವಾದರೆ ಸಾಕು ನಿನಗೆ
ನಾನು ಉಸುರದೇ ಹೋದ
ಮನದೊಳಗಿನ ಕನವರಿಕೆ
.
.
.. ಸಿರಿ 🌞 (14/12/2016)

ಶುಭ ಮುಂಜಾವು

Connect kannada

http://connectkannada.com/2016/12/13/ಮುಚ್ಚಿ-ಬಿಡಿ-ಮೈಖಾನಾದ-ಬಾಗಿ/

Monday 12 December 2016

ಬಿಸಿ ಚಹಾ 13/12/2016

*ಬಿಸಿಚಹಾ*

ಅಂದು ಒಂದು ಕನಸಿತ್ತು
ಒಂದೇ ಒಂದು ಲೋಟ
ಬಿಸಿ ಚಹಾದ ಸ್ವಾದಕ್ಕೆ
ನಿನ್ನ ಉಸಿರಿನ ಸಾಂಗತ್ಯವಿರಲೆಂದು

ಇಂದೂ ಆ ಕನಸು
ನನಸಾಗದ ಕನವರಿಕೆಯಾಗಿ
ಅಂತರಂಗದ ಸುಳಿವ ಚೇತನವಾಗಿ
ಹಾಗೇ ಉಳಿದು ಬಿಟ್ಟಿದೆ

ಚಹಾದ ಸ್ವಾದಕ್ಕೆ
ನಿನ್ನುಸಿರಿನ ಗಮಲಿನ
ಬೆರಕೆಗಾಗಿ ಕಾಯುತ್ತಲೇ ಇದ್ದೇನೆ
.
.
..ಸಿರಿ 🌞 (೧೩/೧೨/೨೦೧೬)

ಶುಭ ಮುಂಜಾವು

#ಬಿಸಿ ಚಹಾ ೧೧/೧೨/೨೦೧೬

*ಬಿಸಿ ಚಹ*

ಈ ಬಿಸಿ ಚಹಾಕ್ಕೆ
ನಿನ್ನ ಹೆಪ್ಪುಗಟ್ಟಿದ ಮೌನವನ್ನೂ
ಮುರಿಯುವ ಶಕ್ತಿಯಿದೆ

ಒಂದೇ ಒಂದು ಗುಟುಕನ್ನು
ನನ್ನೊಡನೆ ಹೀರಿಬಿಡು
ನಿನ್ನೆದೆಯೊಳಗಿನ ಕೋಪ
ಅಸಮಧಾನವೆಲ್ಲ ಕರಗಿ,
ಬಿಸಿ ಚಹದಲ್ಲಿ ಲೀನವಾಗಲಿ

ಬಿಸಿ ಚಹದ ಹಬೆಯೊಡನೆ
ಪ್ರೀತಿಯ ನಶೆ ಉಕ್ಕೇರಲಿ
.
.
..ಸಿರಿ 🌞 (11/12/2016)

ಶುಭ ಮುಂಜಾವು

#ಬಿಸಿಚಹಾ ೧೦/೧೨/೨೦೧೬

ಬಿಸಿ ಚಹಾದ ಒಂದು ಗುಟುಕು
ನಿನ್ನ ನೆನಪಿನೊಂದಿಗೆ ಸಾಕು.

ರಾತ್ರಿಯ ಬಸವಳಿಕೆ
ಮುಂಜಾವಿನ ಕನವರಿಕೆ
ಎಲ್ಲವೂ ಮಟಾ ಮಾಯ

ಈಗಿರುವುದು ನಾನು
ಜೊತೆಗೆ ನನ್ನೊಳಗಿನ ನೀನು
ಕೈಯ್ಯಲ್ಲಿ ಬಿಸಿ ಚಹಾದ ಕಪ್ಪು
.
..ಸಿರಿ 🌞(10/12/2016)

ಶುಭ ಮುಂಜಾವು

#ಬಿಸಿಚಹಾ ೯/೧೨/೨೦೧೬

*ಬಿಸಿಚಹಾ*

ಯಾಕೋ ಇಂದಿನ ಚಹಾದ
ಸಿಹಿ ಎಂದಿಗಿಂತಲೂ ಹೆಚ್ಚಿದೆ
ಬಿಸಿಗೆ ಚುರುಗುಡುವ
ತುಟಿಯೂ ಮತ್ತೆ ಮತ್ತೆ
ಹೀರ ಬಯಸುತಿದೆ.

ಅರೇ...
ನೀನು ಕುಡಿದು ಬಿಟ್ಟ ಲೋಟದಲ್ಲೇ
ನಾನೂ ಚಹ ಸುರುವಿ ಕೊಂಡಿದ್ದೇನೆ
ನಿನ್ನ ತುಟಿಯ ಮಧುವಿನ ಜೊತೆ
ಚಹವೂ ನಶೆ ಏರಿಸುವಂತಿದೆ..
.
.
.. ಸಿರಿ 🌞 (೯/೧೨/೨೦೧೬)

ಶುಭ ಮುಂಜಾವು