Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Saturday 1 January 2022

ಜಗವನ್ನು ಅನಾವರಣಗೊಳಿಸುವ ಜಂಗಮ




 ಅನಾವರಣಗೊಳಿಸುವ ಜಂಗಮ


ಈ ಜಗತ್ತಿನಲ್ಲಿ ಚಿತ್ರ ವಿಚಿತ್ರ ಜನರಿದ್ದಾರೆ. ಪ್ರತೊಯೊಬ್ಬರ ಭಾವನೆಯೂ ಬೇರೆಬೇರೆ. ಜನರು ಯಾವ ವಿಷಯಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆಂದು ಹೇಳಲು ಸಾಧ್ಯವಿಲ್ಲ. ಬದುಕಿನ‌ ಸುದೀರ್ಘ ಓಟದಲ್ಲಿ ಯಾರಿಗೆ ಯಾವುದು ಇಷ್ಟವೆಂದು ಹೇಳಲಾಗುವುದಿಲ್ಲ. ತಿರುವುಗಳಿಂದ ಕೂಡಿರುವ ಈ ಜೀವನದಲ್ಲಿ ಯಾವ ತಿರುವು ಎಲ್ಲಿ ತಲುಪಿಸುತ್ತದೆಂದು ಹೇಳಲಾಗದು. 

ಇಲ್ಲಿ ಸತ್ಯವನ್ನ ಅತೀ ಸಸ್ತದಲ್ಲಿ ಕೊಳ್ಳಲಾಗುತಿದೆ ಜಂಗಮಾ 
ಸುಳ್ಳನ್ನ ದುಬಾರಿ ಬೆಲೆಯಲ್ಲಿ ಮಾರಲಾಗುತಿದೆ ಜಂಗಮಾ


ಈ ಥಳುಕಿನ ಪ್ರಪಂಚದಲ್ಲಿ ಸತ್ಯಕ್ಕೆ ಬೆಲೆಯೇ ಇಲ್ಲ. ಹಾದಿಬೀದಿಯ ವಸ್ತು ಅದು. ಸತ್ಯ ಹೇಳಿದವರನ್ನು ಗೇಲಿ ಮಾಡಲಾಗುತ್ತದೆ. ಹರಿಶ್ಚಂದ್ರನ ಹೆಸರಿಟ್ಟು ಛೇಡಿಸಲಾಗುವ ಈ ಸಮಾಜದಲ್ಲಿ  ಸತ್ಯ ತುಂಬ ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ ಸುಳ್ಳು ಹಾಗಲ್ಲ. ಅದರ ಬೆಲೆ ಹೆಚ್ಚು. 

         ಎಲ್ಲರಿಗೂ ಗೊತ್ತಿದೆ. ಸತ್ಯ ಹೇಳಿ ಪಡೆದುಕೊಳ್ಳಲಾಗದ್ದನ್ನು ಸುಳ್ಳು ಹೇಳಿ  ದಕ್ಕಿಸಿಕೊಳ್ಳಬಹುದು. ಸುಳ್ಳನ್ನೇ ಉಸಿರಾಡುತ್ತಿರುವ ಜನ ನಮ್ಮನ್ನು ಸುಳ್ಳಿನ ಭ್ರಮೆಯಲ್ಲಿ  ಸಿಲುಕಿಸಿ ಸುಳ್ಳನ್ನೇ ಸತ್ಯವೆಂದು ಹೇಳಿ ನಮ್ಮನ್ನು ನಂಬಿಸುತ್ತಿದ್ದರೆ ನಾವು ಅದನ್ನು ಕಣ್ಣು ಮುಚ್ಚಿ ನಂಬುತ್ತಿದ್ದೇವೆ. ನಾವು ಸ್ವಾತಂತ್ರ್ಯ ಪಡೆದುಕೊಂಡಿದ್ದು ೨೦೧೪ ರಲ್ಲಿ ಎಂದರೂ ಇರಬಹುದೇನೋ ಎಂದು ಮೂಕ ಬಸವನಂತೆ ತಲೆ ಆಡಿಸುತ್ತೇವೆ. ಕೆಲವು ವರ್ಷಗಳ ನಂತರ ಆ ಸುಳ್ಳು ಸತ್ಯವೆಂದು ಎಲ್ಲೆಡೆಗೆ ಬಿಂಬಿಸಲ್ಪಡುತ್ತದೆ. ನಾವು ಆ ಸುಳ್ಳಿಗೆ ಜಯಕಾರ ಹಾಕುತ್ತೇವೆ. ಗಜಲಕಾರ ಇಲ್ಲಿ ಅಡಗಿಸಿಟ್ಟ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. 

ಸದಾ ಬೆಳಕ ಉಂಡವನಿಗೆ ಕತ್ತಲು ಭಯಾನಕವೇ ಹೌದು 
ನೋಡು ಹೊಟ್ಟೆ ತುಂಬಿದವರಿಂದ ಹಸಿವನ್ನ ಹರಾಜಿಗಿಡಲಾಗುತಿದೆ ಜಂಗಮಾ


ಜಗತ್ತಿನ ತುಂಬ ಕತ್ತಲು ತುಂಬಿದೆ ಎಂದರೆ ನಂಬುವವರಾದರೂ ಯಾರು? ನಾವೀಗ ಸುಳ್ಳಿನ ಬೆಳಕಿನಲ್ಲಿ ಜಗತ್ತನ್ನು ಝಗಮಗಿಸುತ್ತಿದ್ದೇವೆ.  
ಸುಳ್ಳನ್ನು ವಿಜೃಂಭಿಸಿ ಸತ್ಯದ ಸಮಾಧಿ ಮಾಡುತ್ತಿದ್ದೇವೆ. ಸುಳ್ಳಿನ ಬೆಳಕಿನಲ್ಲಿ ನಿಜವನ್ನು ಕತ್ತಲಾಗಿಸಿರುವ ಈ ಜಗತ್ತಿನಲ್ಲೀಗ  ಸತ್ಯ ಭಯಾನಕವೆನಿಸುತ್ತದೆ. 
ಇದನ್ನು ಇನ್ನೊಂದು ರೀತಿಯಲ್ಲಿ ಕೂಡ ಗೃಹಿಸಬಹುದು. ಬೆಳಕಿನಲ್ಲಿ ಸದಾ ಬೀಗುವ ಶ್ರೇಷ್ಠತೆಯ ವ್ಯಸನ ತುಂಬಿರುವವರಿಗೆ ಬಡವರ ಮನೆಯ ಕತ್ತಲು ಸಹ್ಯವಾಗುವುದಿಲ್ಲ.  ತಾವೇ ಹೆಚ್ಚು ಎಂದುಕೊಂಡಿರುವ ಅರಮನೆಯಂತಹ ಬಂಗಲೆಯಲ್ಲಿ ಇರುವ ಸಮಾಜದ ಶ್ರೇಣಿಕೃತ ವ್ಯವಸ್ಥೆಯ ವಾರಸುದಾರರಿಗೆ  ತಳಸ್ತರದ ಜನರು ಕತ್ತಲಗೂಡಿನಲ್ಲಿ ಇರುವಂತೆ ಭಾಸವಾಗುತ್ತದೆ.  ಹೀಗಾಗಿಯೇ ಬಡವರನ್ನು ಅಸಹಾಯಕರನ್ನು ಆಡಿಕೊಂಡು ನಗುತ್ತಾರೆ. 
ಜಗದ ಹೊಟ್ಟೆ ತುಂಬಿದವರ ವರ್ತನೆಯೇ ಹೀಗೆ. ಅವರಿಗೆ ಬಡವರ ಹಸಿವೆಯೂ ಒಂದು ಬಂಡವಾಳ. ಹಸಿದವರ ಹೊಟ್ಟೆಯನ್ನು ತಮ್ಮ ಜಾಹಿರಾತುಗಳಲ್ಲಿ ಪ್ರದರ್ಶಿಸಿ ಹಣ ಗೆಬರುವ ಹುನ್ನಾರ ಮಾಡುತ್ತಾರೆ.  ಹಸಿದ ಹೊಟ್ಟೆಯನ್ನು ಜಗದೆದುರಿಗೆ ಇಟ್ಟು  ಹರಾಜು ಕೂಗಲಾಗುತ್ತದೆ. 

ಮರ್ಯಾದಾ ಹತ್ಯೆಯ ನೆಪದಲ್ಲಿ ಅಮಾಯಕರ ಬಲಿಯಾಗುತಿದೆ 
ಪ್ರತಿಷ್ಠೆಯ ಪಹರೆಯ ಪ್ರೀತಿಯನ್ನು ದಹಿಸಲಾಗುತಿದೆ ಜಂಗಮಾ


ಪ್ರೀತಿಯೆಂದರೆ ಸರ್ವವನ್ನೂ ಜೊತೆಗೂಡಿಸುವ ಶಕ್ತಿ. ಯಾರು ಪ್ರೀತಿಯಲ್ಲಿರುತ್ತಾರೋ ಅವರು ಜಗತ್ತನ್ನು ಸುಂದರವಾಗಿಯೇ ಕಾಣುತ್ತಾರೆ. ಬದುಕಿನ ಕಷ್ಟಗಳು ಅವರೆದುರಿಗೆ ತಲೆ ಬಾಗುತ್ತವೆ. ಜಗತ್ತನ್ನು ಗೆಲ್ಲಬೇಕೆಂದರೆ ಅದು  ಯುದ್ಧದಿಂದಲ್ಲ, ಪ್ರೀತಿಯಿಂದ ಮಾತ್ರ ಸಾಧ್ಯ ಎಂದು ನಮ್ಮ ಹಿಂದಿನ ಹಲವಾರು ತತ್ವಜ್ಞಾನಿಗಳು ಹೇಳಿದ್ದಾರೆ. ಆದರೆ ಎಲ್ಲರ ಮನಸ್ಸನ್ನು ಗೆಲ್ಲಲೆಂದೇ  ಇರುವ ಪ್ರೀತಿಯನ್ನು ದ್ವೇಷಿಸುವವರಿದ್ದಾರೆ. ತನ್ನ ಮಗಳು/ಅಕ್ಕ/ತಂಗಿ ಯಾರನ್ನಾದರೂ ಪ್ರೇಮಿಸಿದ್ದರೆ ಖುಷಿಯಿಂದ ವಿವಾಹ ಮಾಡಿಕೊಡುವ ಮಾತು ಬಿಡಿ, ಅವರೇ ವಿವಾಹವಾದರೂ ಜಾತಿ ಧರ್ಮದ ಹೆಸರಿನಲ್ಲಿ, ಸಂಸ್ಕೃತಿ, ಸಂಪ್ರದಾಯ ಕುಲಾಚಾರಗಳನ್ನು ರಕ್ಷಿಸುವ  ನೆಪದಲ್ಲಿ  ಅವರನ್ನು ಕೊಲೆಗೈಯ್ಯಲಾಗುತ್ತದೆ. ಇದಕ್ಕೆ ಮರ್ಯಾದಾ ಹತ್ಯೆ ಎನ್ನುವ ದೊಡ್ಡ ಹೆಸರೊಂದನ್ನು ಹೇಳಲಾಗುತ್ತದೆ.  ಜಾತಿ, ಧರ್ಮಗಳನ್ನು ಮೀರಿ ಪ್ಋಮಿಸುವ ಮಗಳನ್ನು ತಂದೆ- ತಾಯಿಯರೇ ಸೇರಿ ಹತ್ಯೆಗೈದ ಅದೆಷ್ಟೋ ಉದಾಹರಣೆಗಳು  ನಮ್ಮ ಕಣ್ಣೆದುರಿಗೇ ಇವೆ.  ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ ಸಿರಿವಂತ ಹಾಗೂ ಬಡವರ ನಡುವೆ ಯಾವ ಪ್ರೇಮವೂ ಉದ್ಭವಿಸುವಂತಿಲ್ಲ.  ಹಾಗೊಂದು ವೇಳೆ ಸಮಾಜದ ಮೇಲು ಕೀಳುಗಳನ್ನು ಮೀರಿ ಪ್ರೇಮವಾದರೆ ಪ್ರತಿಷ್ಟೆಯ ಹೆಸರಿನಲ್ಲಿ ಆ ಪ್ರೇಮಿಗಳನ್ನು ಬಲಿ ತೆಗೆದುಕೊಳ್ಳಲಾಗುತ್ತದೆ. ಜಗವನ್ನೆಲ್ಲ ಬೆಸೆಯುವ ಪ್ರೇಮವೇ ಉಸಿರು ನಿಲ್ಲಿಸುವಂತಾಗುವ ಚೋದ್ಯವನ್ನು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ? 


ಮರೆಮಾಚುವುದಕ್ಕೂ ಬಚ್ಚಿಡುವುದಕ್ಕೂ ಏನೂ ಉಳಿದಿಲ್ಲ ಬಿಡು 
ಮನುಜನ ನೋವಿಗೆ ನಗುವಿನಿಂದ ಹಂಗಿಸಲಾಗುತಿದೆ ಜಂಗಮಾ

ಮನದೊಳಗೆ ಯಾವುದೇ ಕಲ್ಮಶವನ್ನಿಟ್ಟುಕೊಳ್ಳಬಾರದೆಂದು ನಮ್ಮ ಹಿಂದಿನ‌ ಶರಣರು ಮನಸ್ಸು ಬಚ್ವಿಡುವ ಕತ್ತಲ ಕೂಪವಾಗಬಾರದು ಎನ್ನುತ್ತಿದ್ದರು. ಈ ಕಾರಣಕ್ಕಾಗಿಯೇ ಬದುಕು ತೆರೆದ ಪುಸ್ತಕವಾಗಬೇಕು ಎಂಬುದನ್ನು ಮತ್ತೆ ಮತ್ತೆ ಪುನರುಚ್ಚರಿಸುತ್ತಿದ್ದರು. ಮುಚ್ಚಿಟ್ಟುಕೊಳ್ಳುವುದನ್ನು ಪಾಪ ಎಂದೇ ಭಾವಿಸಿದ ಕಾಲವೊಂದಿತ್ತು. 

ಆದರೆ ಈಗ ಜಗತ್ತು ಸಂಪೂರ್ಣವಾಗಿ ಪಾರದರ್ಶಕವಾಗಿಬಿಟ್ಟಿದೆ. ಮನೆಯೊಳಗೆ ಕುಳಿತುಕೊಂಡೇ ಇನ್ನೊಬ್ಬರ ಮನೆಯನ್ನು ಇಣುಕಬಹುದು. ಅವರ ಮನೆಯ ವರಾಂಡ ಹಾದು ಅಡುಗೆ ಮನೆಯಲ್ಲಿನ ವಿವಿಧ ಖಾದ್ಯಗಳನ್ನು ಕಂಡು, ಮಲಗುವ ಕೋಣೆಯನ್ನೂ ಪ್ರವೇಶಿಸಬಹುದು.  ಆಧುನಿಕ ತಂತ್ರಜ್ಞಾನಗಳು ಈಗ ಯಾವುದನ್ನೂ ಗುಟ್ಟಾಗಿ ಇಡಲು ಬಿಡುತ್ತಿಲ್ಲ.  ಎಲ್ಲವನ್ನೂ ಖುಲ್ಲಂಖುಲ್ಲಾ ತೆರೆದಿಟ್ಟಿದೆ. ಯಾರು ಬೇಕಾದರೂ ಯಾರದ್ದಾದರೂ ವೈಯಕ್ತಿಕ ಮಾಹಿತಿಯನ್ನು ಅಂಗೈಯ್ಯೊಳಗೇ ಸ್ಪಷ್ಟವಾಗಿ ನೋಡಬಹುದು.  ಯಾರದ್ದೋ ನೋವನ್ನು ಕಂಡು ನಾವು ಕುಳಿತಲ್ಲಿಯೇ ಸುಖಿಸಬಹುದಾದಷ್ಟು ಕ್ರೂರತೆಯನ್ನು ನಮ್ಮದಾಗಿಸಿಕೊಂಡಿದ್ದೇವೆ.  ಪರರ ನೋವಿಗೆ ಮಿಡಿಯುವ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದೇವೆ. ಪಕ್ಕದ ಮನೆ ಹೊತ್ತಿ ಉರಿಯುವಾಗ ಪುಗಟ್ಟೇ ದೀಪಾವಳಿ ಆಚರಿಸಿದ ಸಂಭ್ರಮವಾಗುವ ಈ ಕಾಲಕ್ಕೆ  ನಗು ಮತ್ತು ಅಳು ಎರಡೂ ಭಾರವಾದವುಗಳೇ. ಎಲ್ಲ ಭಾವಗಳನ್ನು ಕಳೆದುಕೊಂಡು ನಿರ್ಭಾವುಕರಾಗಿ ನಿರ್ವೀರ್ಯರಾಗಿರುವ ಈ ಹೊತ್ತಿನಲ್ಲಿ ಯಾರನ್ನು ಇದಕ್ಕೆಲ್ಲ ಹೊಣೆಯಾಗಿಸುವುದು?  


ಭವಿಷ್ಯವನ್ನ ಭಯದ ಘೋರ ಕೆನ್ನಾಲಿಗೆಗಳು ದಹಿಸುತಿವೆ ಹೈ.ತೋ 
ಉರಿ ಧಹಿಸಲು ಗಾಳಿಯ ಜೊತೆ ಗೆಳೆತನ ಮಾಡಲಾಗುತಿದೆ ಜಂಗಮಾ

ಇಂದಿನ ಸಮಾಜವನ್ನು ನೋಡಿದರೆ ಧರೆ ಹೊತ್ತಿ ಉರಿದೊಡೆ ಎನ್ನುವ ವಚನ ನೆನಪಾಗುತ್ತದೆ. ಇಡಿ ಭೂಮಿಯೇ ಹೊತ್ತಿ ಉರಿದರೆ ನಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲಿ ಹೋಗಲಾದೀತು? ನಾವು ನಮ್ಮ ವರ್ತಮಾನವನ್ನು ಕಲುಷಿತಗೊಳಿಸಿದ್ದೇವೆ. ವರ್ತಮಾನವನ್ನು ಹಾಳುಗೆಡವಿದ ಮೇಲೆ ಭವಿಷ್ಯದ ಬಗ್ಗೆ ಯೋಚಿಸುವುದಾದರೂ ಏನು?  ಒಮ್ಮೆ ಅರೆಕ್ಷಣ ಕಣ್ಣು ಮುಚ್ಚಿ ಭವಿಷ್ಯದ ಕುರಿತಾಗಿ ಯೋಚಿಸಿದರೂ ಸಾಕು ಎದೆಯೊಳಗೆ ದಿಗಿಲು ಆವರಿಸಿಕೊಳ್ಳುತ್ತದೆ. ಭವಿಷ್ಯವನ್ನು ಅರಿಯದ ಭಯದ ಕೂಪಕ್ಕೆ ನಮ್ಮ ಕೈಯ್ಯಾರೆ ನೂಕಿದ್ದೇವೆ. ಅದು ಹೇಗೆಂದರೆ ಬೆಂಕಿ ಆರಿಸಲು ಇನ್ನಷ್ಟು ತುಪ್ಪ ಸುರಿದಂತೆ.‌ ಆದ ಗಾಯಕ್ಕೆ ಉಪ್ಪು ಖಾರದಪುಡಿ ಇಟ್ಟು ಪಟ್ಟಿ ಕಟ್ಟಿದಂತೆ. ಬೆಂಕಿ ಹೊತ್ತಿ ಉರಿಯುವಾಗ ಜೋರಾದ ಗಾಳಿ ಬೀಸಿದರೆ ಕೆನ್ನಾಲಿಗೆ ಅಷ್ಟ ದಿಕ್ಕು ಗಳಿಗೂ ವ್ಯಾಪಿಸುತ್ತದೆ. ಹೀಗಾಗಿ ಅಕಸ್ಮಾತ್ ಬೆಂಕಿ ಹೊತ್ತಿಕೊಂಡರೆ ಗಾಳಿ ಬೀಸದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಆದರೆ ನಾವೀಗ ಬೆಂಕಿ ಆರಿಸಲು ಗಾಳಿಯನ್ನೇ ಆಹ್ವಾನಿಸುತ್ತಿದ್ದೇವೆ. ಸಣ್ಣ ಸೊಡರಿನ ದೀಪ, ಮೇಣದಬತ್ತಿಗಳು ಬೀಸುಗಾಳಿಗೆ ಆರಿದಂತೆ ಕೆನ್ನಾಲಿಗೆಯೂ ಶಾಂತವಾಗಬಹುದೆಂದು ನಂಬುವವನು ಶತಮೂರ್ಖ ಎನ್ನುತ್ತಾರೆ ಗಜಲಕಾರ. 

ಈ ಗಜಲ್ ನ್ನು ಅಬ್ದುಲ್ ಹೈತೋರವರ ಆತ್ಮ ಧ್ಯಾನದ ನಾದ ಎನ್ನುವ ಗಜಲ್ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಇಲ್ಲಿ ಹೈತೋ ಎನ್ನುವುದು ಇವರ ತಖಲ್ಲೂಸ. 
ಜಂಗಮ ಎಂಬುದು ಹಲವು ಹೊಳಹುಗಳಿಂದ ಕೂಡಿರುವ ಶಬ್ಧ. ಯಾವ ಶಬ್ಧದೊಂದಿಗೆ ಜೋಡಿಸುತ್ತೇವೆಯೋ ಆ ಶಬ್ಧದೊಂದಿಗೆ ಬೆರೆತು ತನ್ನದೇ ಆದ ವಿಶಿಷ್ಟಾರ್ಥವನ್ನು ನೀಡುವ ಗುಣವನ್ನು ಹೊಂದಿದೆ. ಗಜಲಕಾರ ಜಂಗಮ ಎನ್ನುವ ರದೀಫ್ ಬಳಿಸಿ ಇಡೀ ಗಜಲ್ ನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದ್ದಾರೆ. ಹಲವು ಆಯಾಮಗಳನ್ನು ಹಿಡಿದಿಡುವ ಈ ಗಜಲ್ ನಮ್ಮ ನಡುವಣ ಚಿತ್ರಣವನ್ನೇ ಅಕ್ಷರ ರೂಪದಲ್ಲಿ ಕಟ್ಟಿಕೊಡುತ್ತದೆ. ಪ್ರತಿ ಮಿಸ್ರಾವೂ ಒಂದೊಂದು ಚಿತ್ರಣವನ್ನು ಕಣ್ಣೆದುರು ತೆರೆದಿಟ್ಟು ಓದುಗ ಸಹೃದಯರನ್ನು ಮಂತ್ರಮುಗ್ಧಗೊಳಿಸುತ್ತದೆ. 

ಶ್ರೀದೇವಿ ಕೆರೆಮನೆ