Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Wednesday 24 January 2024

ಜೊತೆಗಿರು

ಜೊತೆಗಿರು 

ಹೇಳುತ್ತೇನೆ ಮತ್ತೆ ಮತ್ತೆ ಜೊತೆಗಿರು
ಸಂತೆಯ ನಡುವೆಯೂ ಒಂಟಿ ಎನಿಸಿದಾಗ 
ಸುತ್ತೆಲ್ಲ ಗೆಳತಿಯರು 
ಯಾರಿಗೂ ಕೇಳದಂತೆ  ಪಿಸುಮಾತಲ್ಲಿ 
ತಮ್ಮ ಸಂಸಾರದ ಗುಟ್ಟುಗಳ ಬಿಚ್ಚಿಟ್ಟು 
ಕಿಸಿಕಿಸಿ ನಗುವಾಗ 
ಗುಟುಕರಿಸುವಾಗ ಹಳೆಯ ಗೆಳೆಯರೆಲ್ಲ ಸೇರಿ‌ 
ಕೇ ಕೇ ಹಾಕುತ್ತ ಬೈಟೂ ಚಹಾ  
ಕಿಬ್ಬೊಟ್ಟೆಯಲಿ ನೋವು ಅಲೆಅಲೆಯಾಗಿ ಉಕ್ಕಿ 
ತಿಂಗಳ ಮಾಮೂಲನ್ನು ವಸೂಲು ಮಾಡುವ 
ತಾಳಲಾಗದ ನೋವನ್ನು ಅವಡುಗಚ್ಚಿ 
ಒಮ್ಮೆ ನಿನ್ನ ಮಡಿಲಲ್ಲಿ ತಲೆಯಿಟ್ಟು 
ಸಂತೈಸಿಕೊಳ್ಳ ಬೇಕೆನಿಸಿದಾಗ 
ಕೆಲಸದ ನಡುವೆ ಹಿಂಬದಿಯ ಸೊಂಟ ಬಳಸಿ 
ಪಿಸುಮಾತು ಕಿವಿಯಂಚಲಿ 
ಬಿಸಿಯಾಗಿ ಕೇಳಿದಂತಾದಾಗ 
ಹೆಚ್ಚಿದ ತರಕಾರಿಯ ಜೊತೆ 
ಬೆರಳೂ ತರಿದು, 
ರಕ್ತ  ತುದಿಯಿಂದ ಬೆರಳಗುಂಟ ಧಾರೆಯಾದಾಗ 
ಮೀನು ಮುಳ್ಳು ಸರಕ್ಕನೆ ನುಗ್ಗಿ 
ಉಸಿರು ನಿಂತು ಹೋದಂತಾದಾಗ  
ಬಿಸಿ ಎಣ್ಣೆಯ ಕಾವಲಿಗೆ ಕೈ ತಾಗಿ 
ಚುರುಕ್ ಎಂದಾಗ 
ಮನದಲ್ಲೇ ನಿನ್ನ ನೆನೆಸುತ್ತ 
ನನಗೆ ನಾನೇ ಹೇಳಿಕೊಳ್ಳುವ ಜಪದಂತೆ 
ಜೊತೆಗಿರು ಎನ್ನುತ್ತೇನೆ 
ಇತ್ತೀಚಿಗಂತೂ ಜೊತೆಗಿರು ಎನ್ನುವ ಮಾತು 
ನನಗೆ ನಾನೇ ಪಠಿಸುತ್ತೇನೆ 
ಕೇಳುವುದು ಕ್ಲೀಷೆಯಾಗುವಂತೆ  
ವಿಷ್ಣು ಸಹಸ್ರ ನಾಮ, 
ಲಕ್ಷ್ಮಿ  ಸಹಸ್ರ ನಾಮದಂತೆ‌
ಜೊತೆಗಿರು ಎಂಬುದು ಆರಾಧನೆಗೊಳಪಡುತ್ತದೆ
ನಿನ್ನ ಹೆಸರಾಗಿ 
ಮನದೊಳಗೆ ಪ್ರತಿಷ್ಟಾಪನೆಗೊಂಡು  
ಇಷ್ಟಾದರೂ ಇಲ್ಲ ನನಗೆ 
 ನಾನು ಜೊತೆಗಿರು ಎಂದುಕೊಳ್ಳುವುದು 
ನಿನ್ನ ಕಿವಿಗೆ ತಲುಪಿಯೇ ಬಿಡುತ್ತದೆ 
ಎನ್ನುವ ಯಾವ ನಂಬಿಕೆಯೂ 
ಆದರೂ ಮೈದುಂಬಿ ಸುಖಿಸುತ್ತದೆ 
ಹಾಗೆಂದಾಗ ನೀನು ಜೊತೆಗಿರುವ 
ಅಮೂರ್ತ ಅನುಭವ 
ಕೆಲವೊಮ್ಮೆ  ನಾನು ಜೊತೆಗಿರು ಎಂದಾಗ
ನಿನ್ನ ಕಿವಿಗೆ ತಲುಪಿ 
ಇದ್ದೇನಲ್ಲ ಸದಾ ಜೊತೆಗೆ 
ಯಾಕೆ ಮತ್ತೆ ಮತ್ತೆ ಅದೇ ಮಾತು 
ನೀನು ಮಾತು ಮುಗಿಸಿ ಬಿಡುವುದೂ 
ಹೊಸ ವಿಷಯವೇನೂ ಅಲ್ಲ ನನಗೆ 
ಇಷ್ಟಾಗಿಯೂ ಹೆಚ್ಚಿನ ಸಲ 
ಜೊತೆಗಿರು ಎಂಬ ನನ್ನ ಗೋಗರೆತದ ದನಿ 
ನಿನ್ನ ಮೆದುಳು ತಲುಪಿ 
ಪ್ರತಿಕ್ರಿಯೆ ಬಂದೇ ಬರುತ್ತದೆಂಬ ನಂಬಿಕೆಯೇನಿಲ್ಲ  
ಆದರೂ ಹೇಳುತ್ತೇನೆ 
ಹೇಳುತ್ತಲೇ ಇರುತ್ತೇನೆ 
ಹೇಳುತ್ತ ಹೇಳುತ್ತಲೇ ಉಸಿರು ನಿಲ್ಲಿಸುತ್ತೇನೆ 
ಜೊತೆಗಿರು, ಕೊನೆಯ ಉಸಿರಿರುವವರೆಗೆ  
.....ಶ್ರೀದೇವಿ ಕೆರೆಮನೆ

ಆಗುವುದೆಲ್ಲ ಒಳ್ಳೆಯದಕ್ಕೆ

ಆಗುವುದೆಲ್ಲ ಒಳ್ಳೆಯದಕ್ಕೆ

ಈ ಭಾವುಕ ಕ್ಷಣದಲ್ಲಿ
ನೀನು ಜೊತೆಗಿರದಿದ್ದುದು ಒಳ್ಳೆಯದಾಯಿತು
ಇಹದ ಪರಿವೆಯೇ ಇಲ್ಲದೇ ಮೈ ಮರೆತು 
ಪೂರ್ಣವಾಗಿ ನಿನಗೊಪ್ಪಿಸಿಕೊಂಡು 
ಬಿಡುವ ಅನಾಹುತವೊಂದು 
ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು. 


ಅದೆಷ್ಟು ಮಾತು, ಅದೆಂತಹ ಲಲ್ಲೆ
ಮಾತು ಮಾತಿಗೂ ಎದೆಯಾಳದಿಂದ
ಬಿಸಿ ನೀರಿನ ಬುಗ್ಗೆಯೊಂದು
ಒಮ್ಮೆಲೆ ಚಿಮ್ಮಿ ಬೆಚ್ಚಗಾದಂತೆ 
ದೇಹದ ಕಣಕಣವೂ ಹಂಬಲಿಸಿ 
ಎದೆಯೊಳಗೆ ಹರಿಯುವ 
ಜುಳು ಜುಳು ನದಿಗೆ 
ಪ್ರವಾಹ ಬಂದು ಉಕ್ಕೇರಿದಂತೆ
ಸುಪಾ ಆಣೆಕಟ್ಟಿನ ಹಿನ್ನೀರಿನಂತೆ
ಸದಾ ಒದ್ದೆ ಒದ್ದೆಯಾಗಿರುವ 
ಮನದಂಗಳದ ತುಂಬೆಲ್ಲ 
ನಿನ್ನದೇ ಹೆಜ್ಜೆಗುರುತು

ಈ ಚಂಚಲಗೊಂಡ ಸ್ಥಿತಿಯಲ್ಲಿ 
ನೀನು ಸನಿಹ ಬರದಿದ್ದುದು ಸರಿಯಾಗಿತ್ತು
ಹಸಿಯಾದ ಎದೆಯ ಮೆತ್ತೆಗೆ
ಮೂಡುವ ನಿನ್ನ ಉಗುರಿನ ಗುರುತಿಗೆ
ನಾನು ಹೊಸತಾದ ಕಾರಣ ಹುಡುಕಲು
ಸುಳ್ಳಿನ ಕಣಜದ ಮೊರೆ ಹೋಗಬೇಕಿತ್ತು  

ಹದವಾದ ಭೂಮಿಗೆ ಬೀಜ ಬಿತ್ತುವಂತಿರುವ
ಈ ನಾಜೂಕಾದ ಗಳಿಗೆಯಲ್ಲಿ
ನಿನ್ನ ಮೈಯ್ಯ ವಾಸನೆ ಆಘ್ರಾಣಿಸಲು 
ಆಗದಿದ್ದುದು ಸಮಂಜವೇ ಆಗಿತ್ತು
ಕುತ್ತಿಗೆಯ ತಿರುವಿನಲ್ಲಿ ಮೂಡುವ
ಹಲ್ಲಿನ ಗುರುತಿಗೆ ಸಬೂಬು ಹೇಳಬೇಕಿತ್ತು
ಶಂಖುತೀರ್ಥದ ಹೊಕ್ಕಳ ಆಳದಲ್ಲಿ
ನಿನ್ನ ಬೆರಳ ತುದಿಯ ನಾಜೂಕು
ಸ್ಪರ್ಶದಿಂದೇಳುವ ಪ್ರಚಂಡ ಅಲೆಗೆ
ಎಲ್ಲ ಮರೆತು ಸುಖವಾಗಿ ಪವಡಿಸಿರುವ 
ಕಡಲೆಂಬ ಕಡಲೂ ಬೆಚ್ಚಿ ಬೀಳುತ್ತಿತ್ತು
ಆಗುವುದೆಲ್ಲ ಒಳ್ಳೆಯದಕ್ಕೇ ಬಿಡು
ಸಕಲವೂ ಕ್ಷೇಮ ಎಂದಾದಾಗ
ಸವುಡು ಸಿಕ್ಕರೆ ಮತ್ತೆಲ್ಲಾದರೂ ಭೇಟಿಯಾಗೋಣ
ಎರಡು ಮಾತು ಚಿಕ್ಕದೊಂದು ನಗುವಿನೊಂದಿಗೆ

ಶ್ರೀದೇವಿ ಕೆರೆಮನೆ