ಹೊಸಹರಿವಿನ ಕವಿತೆಗಳ ಜೊತೆಗೆ
ಹುಲ್ಲಿಗೆ ಹುಟ್ಟಿದ ಬೀದಿ
ಸೈಫ್ ಜಾನ್ಸೆ ಕೊಟ್ಟೂರು
ಬೆಲೆ- ೧೦೦
ಕವಿತೆಯೆಂದರೆ ನವಿರು ಪಲುಕಿನ ಹಾಗೆ, ಭಾವ ಪ್ರದೀಪನಗೊಳಿಸಬೇಕು ಎನ್ನುವ ಸಿದ್ಧ ಮಾದರಿಯನ್ನು ಹೊರತುಪಡಿಸಿ ಹೊಸತೇ ಆದ ಕಟ್ಟುವಿಕೆ ಇತ್ತೀಚೆಗೆ ಕನ್ನಡದಲ್ಲಿ ಕಾಣಿಸಿಕೊಂಡಿದೆ. ಹಾಗೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಅನಿಸಿದ್ದನ್ನು ನೇರಾನೇರಾ ಬರೆಯುವ ಹವಣಿಕೆಯಲ್ಲಿದ್ದಂತೆ ತೋರುವ ಹುಲ್ಲಿಗೆ ಹುಟ್ಟಿದ ಬೀದಿ ಸಂಕಲನದ ಕವನಗಳು ಇಂತಹ ವಿಕ್ಷಿಪ್ತತೆಗೊಂದು ಮಾದರಿಯಾಗಿ ನಿಲ್ಲುತ್ತದೆ.
ದಾನದ ಹೆಸರಿನಿಂದ ಸಿಗುವ ಪಾರದರ್ಶಕ
ಬಟ್ಟೆಗಳಿಂದ ಗುಪ್ತಾಂಗಗಳನ್ನು ಅಪಮಾನಗೊಳಿಸದಿರಿ
ಈ ಸಾಲುಗಳು ಇದಕ್ಕೊಂದು ಚಂದದ ನಿದರ್ಶನವಾಗಿ ನಮ್ಮೆದುರಿಗೆ ನಿಲ್ಲುತ್ತವೆ. ಮೊದಲ ಕವನ ದಮನಿತರಿಗಾಗಿ ಡಿಕ್ಲೇಶನ್‌ಗಳು ಇಂತಹ ಹಲವಾರು ಸಾಲುಗಳನ್ನು ತನ್ನೊಳಗೆ ಇಟ್ಟುಕೊಂಡು ಕವನಕ್ಕೊಂದು ಹೊಸ ಸ್ವರೂಪವನ್ನು ನೀಡಲು ಯಶಸ್ವಿಯಾಗಿದೆ. ದಮನಿತರ ನೋವುಗಳನ್ನು ತನ್ನೆದೆಯಾಳದಲ್ಲಿ ಚುಚ್ಚುವ ಮುಳ್ಳುಗಳೆಂದೇ ಭಾವಿಸಿರುವ ಕವಿ ಕಾರುವ ಅಷ್ಟೂ ವಿಷವನ್ನು ಜೀರ್ಣಿಸುವಷ್ಟು ಕರಳುಗಳನ್ನು ಗಟ್ಟಿಗೊಳಿಸಬೇಕೆಂದು ತನ್ನ ಶೋಷಿತ ಸಂಗಾತಿಗಳಿಗೆ ಕರೆ ನೀಡುವ ಜೊತೆಜೊತೆಗೇ ಅಸಹನೆಯ ಕಡ್ಡಿಗಳನ್ನೇ ಕಸಬರಿಗೆಯಂತೆ ಕಟ್ಟಿ ಬಯಲನ್ನು ಸ್ವಚ್ಛಗೊಳಿಸುವ ಸಲಹೆ ನೀಡುತ್ತಾರೆ. ನಮ್ಮ ಸಮಾಜವೇ ಹಾಗೆ, ಶೋಷಿತರನ್ನು ರೊಚ್ಚಿಗೆಬ್ಬಿಸಿ ಅವರ ನೋವಿನ ಕಿಚ್ಚಿನಲ್ಲಿ ಆಹಾರ ಬೇಯಿಸಿಕೊಳ್ಳುವ ಹುನ್ನಾರ ಮಾಡುತ್ತದೆ. ಹೀಗಾಗಿಯೇ ದಮನಿತರ ಹೆಜ್ಜೆಯ ಲಯಗಳು ತಪ್ಪಿ ಹೋಗುತ್ತವೆ ಎನ್ನುತ್ತಾರೆ.
ಲಯ ತಪ್ಪಿದ ಹೆಜ್ಜೆಗಳ
ಹುಡುಕಾಟಕ್ಕಿಳಿದ ನಾವು
ಜರಡಿಯಲಿ ಪೋಣಿಸಿ ಸೋಸುತ್ತೇವೆ
ಅವರಂಗಿಯ ತೊಟ್ಟು ಹೇಳುವುದಾದರೆ
ಅದು ನೈತಿಕ ಅನೈತಿಕತೆಗಳ ಕವಲುಗಳಲ್ಲ.
ಎನ್ನುವ ಸಾಲುಗಳಲ್ಲಿ ಕಾಣದ ಆಳದ ನೋವಿದೆ. ಹೆಜ್ಜೆಯ ಲಯವಿಲ್ಲದೇ ಅವರ ಅಂಗಿಯನ್ನು ತೊಟ್ಟುಕೊಂಡು ನೈತಿಕ ಅನೈತಿಕತೆಗಳನ್ನು ಜರಡಿಯಲ್ಲಿ ಸೋಸಿ ಹುಡುಕುವ ಸಂಕಟದ ಕುರಿತಾಗಿ ಇಲ್ಲಿ ಮಾತುಗಳಿವೆ. ನಾವು ನಮ್ಮ ದಾರಿಯಲ್ಲಿ ನಡೆಯುವುದಕ್ಕಿಂತ ಅನ್ಯರ ಮನೆಯ ಬಾಗಿಲನ್ನು ಇಣುಕುವುದೇ ಹೆಚ್ಚು. ಯಾವುದು ನೈತಿಕ? ಯಾವುದು ಅನೈತಿಕ? ಅದನ್ನು ಒರೆ ಹಚ್ಚಿ ನೋಡುವ ಅಳತೆಗೋಲಾದರೂ ಎಲ್ಲಿದೆ ಹೇಳಿ? ಆದರೂ ನಾವು ನಮ್ಮದೇ ಗೆರೆಗಳನ್ನೆಳೆದು ನಮ್ಮನ್ನೇ ನಾವು ಮಿತಿಗೊಳಿಸಿಕೊಂಡಿದ್ದೇವೆ. ಸಾಮಾಜಿಕವಾಗಿ ದೂರ ಇಟ್ಟೂ ಇಟ್ಟೂ ಧಮನಿತರ ಮೈಯ್ಯಲ್ಲಿಯೇ ಅಂತರ ಕಾಯ್ದುಕೊಳ್ಳುವ ಗುಣವನ್ನು ಬೆಳೆಸಿಬಿಟ್ಟಿದ್ದೇವೆ. ನಗುವುದಕ್ಕೂ ನಿರ್ಬಂಧ ಹೇರಿಕೊಂಡಿದ್ದೇವೆ. ಅತ್ಯುತ್ತಮ ಎನ್ನುಬಹುದಾದದ್ದನ್ನು ಯಾವುದನ್ನೂ ಮಾಡಲಾಗದ ಸ್ಥಿತಿ ತಂದುಕೊಂಡಿದ್ದೇವೆ. ಮುಕ್ತವಾಗಿ ಭಾವನೆಗಳನ್ನು ಹೇಳಿಕೊಳ್ಳುವುದಕ್ಕೂ ಆಗದ ಸ್ಥಿತಿಯಿದೆ ಈಗ. ಹೀಗಾಗಿಯೇ
ನಾವು ನಗಲೇಬೇಕು
ನಗುವಾಗಲೆಲ್ಲಾ ಮೈಮರೆಯಬೇಕು
ಬಿಗಿದ ಹುಬ್ಬುಗಳು ಸಡಿಲಗೊಳ್ಳುವಂತೆ ಎಚ್ಚರವಹಿಸಬೇಕು
ಎನ್ನುತ್ತಲೇ ಮನದುಂಬಿ ನಗಬೇಕಾದ ಅನಿವಾರ್‍ಯತೆಯನ್ನು ಹಾಗೂ ನಗುವುದನ್ನೂ ನಿರ್ಬಂಧಗೊಳಿಸುವ ಶೋಷಕರ ಹುನ್ನಾರದ ಬಗ್ಗೆಯೂ ಮಾತನಾಡುತ್ತಾರೆ.
ನಗುವಾಗಲೆಲ್ಲ ಭಟ್ಟಿಯ ನೀರಾಗುತ್ತೇವೆ
ಯಾರದೋ ಪಾಪದ ಪಾತ್ರಗಳಿಗೆ
ಕಾಲು ಒತ್ತೆ ಇಟ್ಟ ಅನಾಥ ಪ್ರಜ್ಞೆಯಿಂದ ನರಳುತ್ತೇವೆ
ಆದರೂ ನಗಬೇಕು
ನಗುವಿನ ನೆಪಗಳಿಗೆ ಒಂದು ಸಾಕ್ಷಿ ಉಳಿಸಲು
ಎನ್ನುವ ಮಾತುಗಳಲ್ಲಿ ಹೆಪ್ಪುಗಟ್ಟಿದ ನೋವನ್ನು ಕಾಣಬೇಕು. ನಗುವನ್ನೂ ಕೂಡ ಅಡವಿಟ್ಟ ಬದುಕಿಗೆ ನಕ್ಕಿದ್ದೇವೆ ಅಥವಾ ನಗಲಿಲ್ಲ ಎಂದು ಹೇಳಲೂ ಸಾಕ್ಷ್ಯ ಒದಗಿಸಬೇಕಾದ ಅನಿವಾರ್‍ಯತೆಯಿದೆ. ಪುಸ್ತಕದ ಬಹುತೇಕ ಕವಿತೆಗಳು ಶೋಷಿತರ ಅಸಹಾಯಕತೆಯನ್ನು ಬಿಂಬಿಸುತ್ತಲೇ ಶೋಷಕರ ಕುರಿತಾದ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಾಗೆಂದು ಸಂಕಲನದಲ್ಲಿ ಪ್ರೇಮಕ್ಕೆ, ವಿರಹಕ್ಕೆ ಜಾಗ ಇಲ್ಲ ಎಂದು ಯೋಚಿಸಬೇಕಾಗಿಲ್ಲ.
ಬದುಕಿನ ಅರೆಸುಟ್ಟ ಸ್ಥಿತಿಯನ್ನು ತಡೆಯಲಾಗುತ್ತಿಲ್ಲ
ಇನ್ನೂ ನಿನ್ನೊಂದಿಗೆ ಮಾತ್ರ ಉಳಿದುಬಿಡುವ
ಛಲವಾದರೂ ಯಾವುದು?
ಕೂಡುವಿಕೆಯ ಒಡಂಬಡಿಕೆ
ನನ್ನ ನಿನ್ನ ಹುಟ್ಟು ಆವುಗಳ ಲಾಡಿಯಂತಿದೆ
ಎನ್ನುವ ಸಾಲುಗಳು ಅದೆಂತಹ ವಿರಹದ ತೀವ್ರತೆಯನ್ನು ಉಣಬಡಿಸುತ್ತವೆಯೆಂದರೆ ದೂರವಾದ ಪ್ರೇಮಿಯಿಂದಾಗಿ ಬದುಕು ಅರ್ಧಮರ್ಧ ಸುಟ್ಟು ಹೋದ ಬಗೆಯನ್ನು ವಿವರಿಸುತ್ತದೆ. ಪ್ರೇಮ ಕೈ ತಪ್ಪಿ ಹೋಗಿದೆ. ಪ್ರೇಮಿ ದೂರವಾಗಿಯೂ ಆಗಿದೆ. ಆದರೂ ಮತ್ತದೇ ಪ್ರೇಮಿಯೊಂದಿಗೆ ಇರಬೇಕೆನ್ನುವ ಮನಸ್ಥಿತಿಯನ್ನು ಕಳಚಿಕೊಳ್ಳಲಾಗುತ್ತಿಲ್ಲ. ಮೊದಲ ಪ್ರೇಮದ ತೀವ್ರತೆಯೇ ಹಾಗೆ. ಬಿಟ್ಟೇನೆಂದರು ಬಿಡದ ಮಾಯೆ ಅದು. ಮತ್ತೆ ಮತ್ತೆ ತನ್ನೆಡೆಗೆ ಸೆಳೆದುಕೊಳ್ಳುವ ಸುಳಿ. ಅದು ಮುಗಿದ ಪ್ರೇಮ ಎನ್ನಿಸಿದರೂ ಮನದೊಳಗೆ ಕಲ್ಲುಸಕ್ಕರೆಯ ಸಿಹಿಯನ್ನು ಒಸರಿಸುವ ಸಾಮರ್ಥ್ಯ ಹೊಂದಿರುವಂತಹುದ್ದು.
ಸಂಕಲನವನ್ನು ಬೆಂಕಿಯ ಕುಲುಮೆಯಲ್ಲಿ ಕುದಿಸಿ, ಬಿಸಿಯಿರುವಾಗಲೇ ತಂದು ಎದುರಿಗಿಟ್ಟ ಮಾಂಸದ ಅಡುಗೆಯಂತಿದೆ. ಅಷ್ಟು ಖಾರ ಮತ್ತು ಅಷ್ಟೊಂದು ಸ್ಪೈಸಿ. ಇದನ್ನು ನಾನು ಸಿಯಾದ ಪಾಯಸದ ಅಡುಗೆಗೆ ಅಥವಾ ಉಳ್ಳವರ ಮೃಷ್ಟಾನ್ನ ಭೋಜನಕ್ಕೆ ಎಂದೂ ಹೋಲಿಸಲಾರೆ. ಇದು ಕುದಿ ಮಡಿಕೆಯಲ್ಲಿನ ಮಾಂಸದ ಕುದಿಲಾ. ಹೀಗಾಗಿಯೇ ಕವಿತೆಯ ಒಳಗಿನ ತಲ್ಲಣಗಳಿಗೆ ಭೂಮಿಯ ಆಸರೆ ಇರದು.
ಹುಗಿದಿಟ್ಟ ತಲ್ಲಣಗಳಿಗೆ
ಕುಲುಮೆಯಾಗದಿರಲಿ ಭೂಮಿ
ಎನ್ನುತ್ತಾರೆ ಕವಿ. ನಮ್ಮೆಲ್ಲ ತಲ್ಲಣಗಳನ್ನು ನಾವು ಎದೆಯಲ್ಲಿಯೇ ಅಡಗಿಸಿಟ್ಟುಕೊಳ್ಳಬೇಕೆ ಹೊರತೂ ಭೂಮಿಯನ್ನು ಹೊಣೆಯಾಗಿಸಬಾರದು. ಹೀಗಾಗಿಯೇ ಕವಿಗೆ ಬದುಕಿನ ವ್ಯತಿರಿಕ್ತತೆಯ ಅರಿವಿದೆ. ಶೋಷಿತರ ಕುರಿತಾಗಿ ಕವಿಯ ಹೃದಯದಲ್ಲಿರುವ ದಯೆ ಮತ್ತು ಶೋಷಣೆಯ ವಿರುದ್ಧವಾದ ಮಾತನ್ನು ತೀಕ್ಷ್ಣವಾಗಿ ಹೇಳುತ್ತಾರೆ.
ಭೂಮಿಯ ಕಟ್ಟಕಡೆಯ ಹುಲ್ಲು ಕಡ್ಡಿಗೂ
ಪ್ರತಿರೋಧದ ಪುಟ್ಟ ಗುರಾಣಿ ಇದ್ದಿದ್ದರೆ
ಉಣ್ಣುವ ಬಾಯಿಂದಲೇ ಹೇಲುವ
ಕುಚೋದ್ಯ ತಪ್ಪಿಸಬಹುದಿತ್ತು
ಎಂದು ಸಮಾಜದ ತಾರತಮ್ಯವನ್ನು ವಿರೋಧಿಸುತ್ತ ಬಲಾಢ್ಯರ ಕುತಂತ್ರವನ್ನು ಧಿಕ್ಕರಿಸುತ್ತಾರೆ. ಇದು ಕೇವಲ ಅನಾದಿಕಾಲದ ಧೋರಣೆಯಲ್ಲ. ಇದು ಈಗಿನ ಧೋರಣೆಯೂ ಹೌದು. ಶೋಷಿತರು ಈಗಲೂ ಶೋಷಣೆಗೆ ಒಳಗಾಗುತ್ತಿದ್ದಾರೆ
ಸಮುದ್ರದ ಮರ್ಜಿ ಹಿಡಿದು
ಜೀವಿಸಿರುವ ನಡುಗಡ್ಡೆಗಳಿಗೆ
ಹಣೆ ಬರಹದೆದುರು ಈಜುವ
ಎದೆಗಾರಿಕೆ ಎಲ್ಲಿಯದು
ದೇಶವೆಂದರೆ ಸುಟ್ಟ ಇಟ್ಟಿಗೆಯ ತುಣುಕುಗಳಲ್ಲ
ದೇಶಪ್ರೇಮವೆಂದರೆ ಈಗ ನಾವು ತಿಳಿದಿರುವಂತಹ ಯುದ್ಧೋನ್ಮಾದವಲ್ಲ. ಹಾಗೆಂದು ನಮ್ಮನ್ನು ನಾವು ಅಡವಿಟ್ಟುಕೊಳ್ಳುವ ಹೇಡಿತನವೂ ಅಲ್ಲ. ಒಂದು ಮನೆಯನ್ನು ಕೇವಲ ಕಲ್ಲು ಮಣ್ಣಿನಿಂದ ನಿರ್ಮಿಸಲಾಗುವುದಿಲ್ಲ. ಹಾಗೆ ನಿರ್ಮಿಸಿದರೆ ಅದು ಕೇವಲ ಕಟ್ಟಡವಾಗುತ್ತದೆಯೇ ಹೊರತೂ ಅದು ಸಂತಸದ ಗೂಡಾಗುವುದಿಲ್ಲ. ಅಂತೆಯೇ ಒಂದು ದೇಶವೂ ಅಷ್ಟೆ. ಇಟ್ಟಿಗೆಯಿಂದ ಕೂಡಿದ ದೊಡ್ಡ ದೊಡ್ಡ ಕಟ್ಟಡಗಳು ಅದರ ಸಮೃದ್ಧಿಯ ಲಕ್ಷಣವಲ್ಲ. ಪರಸ್ಪರ ಸಹಕಾರದಿಂದ ಕುಡಿದ ಮಾನವೀಯತೆಯ ಗುಣ ಹೊಂದಿದ ಜನರು ಒಂದು ದೇಶದ ಆಸ್ತಿ. ಸಮುದ್ರದ ನಡುಗಡ್ಡೆಗಳು ದೂರದಿಂದ ನೋಡುವವರಿಗೆ ಸಮುದ್ರದ ಅಲೆಗೆ ಸಿಕ್ಕಿ ಅಲುಗಾಡಿದಂತೆ ಕಾಣುತ್ತವೆಯೇ ಹೊರತೂ ಅವು ವಾಸ್ತವದಲ್ಲಿ ಸ್ಥಿರವಾಗಿರುತ್ತವೆ. ಅದಕ್ಕೆಂದೇ ಕವಿ ಹುಲ್ಲುಕಡ್ಡಿ ಹಾಗು ನಡುಗಡ್ಡೆಯ ಉಪಮೆಯನ್ನು ಧಾರಾಳವಾಗಿ ಬಳಸುತ್ತಾರೆ.
ಈ ಎಲ್ಲ ಉಪಮೆ, ರೂಪಕಗಳ ಹೊರತಾಗಿಯೂ ಕವಿತೆಗಳಲ್ಲಿ ಬಹುವಾಗಿ ಇಣುಕುವ ಆಕ್ರೋಶ ಕೆಲವೊಮ್ಮೆ ಕವನದ ಓಘಕ್ಕೆ ತಡೆಯೊಡ್ಡುತ್ತದೆ. ಹೇಳಬೇಕಾದುದನ್ನು ಕವಿತೆಯ ಧರ್ಮ ಮೀರಿಯಾದರೂ ಹೇಳಿಯೇ ಬಿಡಬೇಕೆನ್ನುವ ಧಾವಂತದಿಂದಾಗಿ ಕೆಲವೊಮ್ಮೆ ಕಾವ್ಯದ ಲಯವು ಲಯವಾಗಿ ಗದ್ಯದ ಸುಲಲಿತೆ ಮೂಡುತ್ತದೆ. ಹರಿತ ಮಾತುಗಳಿಂದಾದರೂ ತಿವಿದು ಜಗತ್ತನ್ನು ಎಚ್ಚರಗೊಳಿಸಬೇಕೆಂಬ ಧಾವಂತ ಇಲ್ಲಿ ಎದ್ದು ಕಾಣುವ ಅಂಶ. ಇದು ಕವಿತೆಗೆ ಶಕ್ತಿಯನ್ನು ನೀಡಿದಂತೆ ಮಿತಿಯೂ ಆಗಿದೆ ಎಂಬುದನ್ನು ಗಮನಿಸಬೇಕು. ಹೇಳಬೇಕಾದುದನ್ನು ನವಿರಾದ ರೂಪಕಗಳ ಮೂಲಕವೂ ಹೇಳುವುದೂ ಒಂದು ಕಲೆ ಎಂಬುದನ್ನು ತುಸು ನೆನಪಿನಲ್ಲಿಟ್ಟುಕೊಂಡರೆ ಇಲ್ಲಿಯ ಕವಿತೆಗಳು ಇನ್ನಷ್ಟು ಆತ್ಮೀಯವಾಗಿ ಎದೆಗಿಳಿಯುತ್ತಿತ್ತೇನೋ ಅನ್ನಿಸದೇ ಇರದು.
ಇಷ್ಟಾದರೂ ಈ ಎಲ್ಲ ದುರಿತಗಳ ನಡುವೆಯೂ ಕವಿ ಪ್ರೇಮವನ್ನೇ ನೆಚ್ಚಿಕೊಳ್ಳುವುದು ಪ್ರಸ್ತುತ ಮುಖ್ಯವೆನಿಸುತ್ತದೆ. ಮನುಷ್ಯನೊಬ್ಬನಿಗೆ ಮನುಷ್ಯನ ಮೇಲಿರುವ ಪ್ರೇಮ ಹಾಗೂ ತನ್ನ ಸಹ ಜೀವಿಗಳ ಮೇಲಿರುವ ಪ್ರೇಮದಿಂದಾಗಿಯೇ ಈ ಪ್ರಪಂಚ ಇನ್ನೂ ನಿಂತಿದೆ. ಅಂತೆಯೇ ಪ್ರೇಮ ಕವಿತೆಗಳೂ ಕೂಡ ಸೋತರೂ ಗೆಲ್ಲುವ ಜಿದ್ದಿನಿಂದ ತಲೆಯೆತ್ತಿ ನಾಶವಾಗುವ ಭಯವನ್ನು ಮೆಟ್ಟಿ ತಲೆ ಎತ್ತಿ ನಿಂತಿದೆ.
ಜಗದ ಪ್ರೇಮ ಕವಿತೆಗಳಿಗೆ ಸಾವಿನ ಭಯವಿಲ್ಲ
ಅದಕ್ಕೆ ಸೋತು ಗೆಲ್ಲುವ ಉಮೇದು
ಕನ್ನಡ ಕಾವ್ಯ ಲೋಕದಲ್ಲಿ ಹೊಸ ನೀರಿನ ನದಿ ಪ್ರವಾಹದೋಪಾದಿಯಲ್ಲಿ ಹರಿಯುತ್ತಿದೆಕೀಗಾಗಲೆ ಹಲವಾರು ಕವಿಗಳು ತಮ್ಮ ಅಸಂಗತ ಕಾವ್ಯಗಳ ಮೂಲಕ ಈ ಹೊಸ ನೀರಿಗೆ ಮತ್ತೊಂದು ಹರವನ್ನು ತೋರಿಸಿಕೊಟ್ಟಿದ್ದಾರೆ. ಅಂತಹ ಅಸಂಗತ ಕವಿಗಳ ಸಾಲಿನಲ್ಲಿ ಸೈಫ ಕೂಡ ಒಂದು ಗುರುತರವಾದ ಸ್ಥಾನ ಪಡೆದಿದ್ದಾರೆ. ಕವಿತೆಗಳ ಹರಿವಿಗೆ ಹೊಸ ಹೊಸ ದಾರಿಗಳು ಗೋಚರವಾಗಲಿ.
ಶ್ರಿದೇವಿ ಕೆರೆಮನೆ
No comments:
Post a Comment