ಗೋರಿ ಮೇಲಿನ ಹೂ ಗಜಲ್ ಸಂಕಲನದಲ್ಲಿ ಅಭಿಷೇಕ್ ಬಳೆ ಅವರು ಬದುಕಿನ ಬವಣೆಯನ್ನು ಕಡಿಮೆ ಮಾಡದ ಈ ಬಣ್ಣದ ಮಾತುಗಳಿಗೆ ಮರುಳಾಗದ ತನ್ನ ಜನರ ನೋವು ನಲಿವುಗಳನ್ನು ಬಿಚ್ಚಿಟ್ಟ ಬಗೆಯನ್ನು ಶ್ರೀ ದೇವಿ ಕೆರೆಮನೆ Newsroom9 ನಲ್ಲಿ ತಮ್ಮ “ತೀರದ ಧ್ಯಾನ” ಅಂಕಣ
https://newsroom9.com/poor-labourers-life-and-politicians-negligence/
ಜೀವನಪೂರ್ತಿ ಜೊತೆಗೆ ಹೆಜ್ಜೆಯಿಡುವ ಹುಸಿ ಭರವಸೆಯ ಮರೆತು
ದುಡಿದು ಬದುಕುವ ಜನರ ಪಾಡು ನಿಜಕ್ಕೂ ಶೋಚನೀಯ. ರೆಟ್ಟೆ ಮುರಿಯುವಷ್ಟು ದುಡಿದರೂ ಎರಡು ಹೊತ್ತಿನ ಹೊಟ್ಟೆ ತುಂಬುವುದಿಲ್ಲ. ಮಕ್ಕಳಿಗೆ ಮೈ ತುಂಬ ಬಟ್ಟೆ ಇಲ್ಲ. ವಿದ್ಯೆಯ ಸವಲತ್ತುಗಳಿಲ್ಲ. ಚಂದದ ಬದುಕಿಲ್ಲ.
ಶ್ರಮಿಕ ವರ್ಗ ಸುಖ ಜೀವನದ ಕನಸು ಕಾಣುತ್ತಲೇ ಇದೆ ಶತಮಾನಗಳಿಂದಲೂ. ಆದರೆ ಇಂದಿಗೂ ಆ ಕನಸು ಮರಿಚಿಕೆಯಾಗಿಯೇ ಉಳಿದಿದೆ. ಬೆಳಿಗ್ಗೆ ಎದ್ದರೆ ಇಂದಿನ ಮೂರು ಹೊತ್ತಿನ ಊಟಕ್ಕೇನು ಎಂದು ಯೋಚಿಸುವುದೇ ಆಗುತ್ತದೆಯೇ ಹೊರತು ಮುಂದಿನ ಭವಿಷ್ಯ ಏನು ಎಂದು ಯೋಚಿಸುವಷ್ಟು ಶಕ್ತಿ, ವ್ಯವಧಾನ ಇರುವುದಿಲ್ಲ. ಅಂತಹ ನನ್ನ ಜನಗಳ ಕುರಿತಾದ ಗಜಲ್ ಇಲ್ಲಿದೆ
ಚಿಮಣಿಯ ಬೆಳಕಿನಲ್ಲಿ ಅದೆಷ್ಟು ಕತ್ತಲ ರಾತ್ರಿಗಳ ಕಳೆದರು ನನ್ನ ಜನ
ಭರವಸೆಯು ಬೆಳಕಾಗಿ ಬರುವುದೆಂದು ದಿನವ ದೂಡಿದರು ನನ್ನ ಜನ
ಹಳ್ಳಿಗಳಲ್ಲಿ ಇರುವ ಬಡವರ ಮನೆಗೆ ಇಂದಿಗೂ ವಿದ್ಯುಶ್ಚಕ್ತಿ ಇಲ್ಲ. ಚಿಮಣಿ ಎಣ್ಣೆಯ ಹೊಗೆ ಕಾರುವ ರಾತ್ರಿ ಅವರ ಬದುಕಿನಲ್ಲಿ ಅದೆಷ್ಟೋ. ಚಿಮಣಿಯ ಬೆಳಕು ಎನ್ನುವುದು ಅದೆಷ್ಟು ಅರ್ಥಗಳನ್ನು ಧ್ವನಿಸುತ್ತದೆ ಎಂಬುದನ್ನು ಗಮನಿಸಬೇಕು. ಚಿಮಣಿ ದೀಪ ಎನ್ನುವುದು ಕವಿದ ಕಾರಿರುಳನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆಯೇ ಹೊರತು, ಕತ್ತಲನ್ನು ಓಡಿಸಿ ಸಂಪೂರ್ಣ ಬೆಳಕನ್ನು ನೀಡುವುದಿಲ್ಲ. ಅದೊಂದು ಹುಸಿ ಭರವಸೆಯ ಪ್ರತೀಕವೂ ಹೌದು. ಕತ್ತಲೆಯಲ್ಲಿದ್ದವರಿಗೆ ಬೆಳಕಿನಲ್ಲಿರುವ ಭ್ರಮೆಯನ್ನು ನೀಡುತ್ತದೆ. ಆದರೆ ಸುತ್ತಲೂ ಕಗ್ಗತ್ತಲೆ ತಾಂಡವವಾಡುತ್ತಿರುತ್ತದೆ. ಚಿಮಣಿಯ ಬೆಳಕು ತಾತ್ಕಾಲಿಕ ಪರಿಹಾರದ ಸಂಕೇತ. ಆ ಹೊತ್ತಿಗೆ ಅವಶ್ಯಕವಿರುವ ಬೆಳಕು ಸಿಗುತ್ತದೆ. ಆದರೆ ಸೀಮೆ ಎಣ್ಣೆ ತೀರಿದ ನಂತರ ದೀಪ ಕಮಟು ವಾಸನೆ ಬೀರಿ ಆರಿಹೋಗುತ್ತದೆ. ಮುಂದೆ ಮತ್ತೆ ಕತ್ತಲೆಯೇ ಗತಿ. ಹೀಗೆ ಬಡವರ ಬದುಕು ಚಿಮಣಿ ದೀಪವೇ. ಆ ಹೊತ್ತಿಗೆ ಒಂದಿಷ್ಟು ಬೆಳಕು. ನಂತರ ಮತ್ತದೆ ದಾರಿ ಕಾಣದ ಜೀವನ.
ಆದರೂ ಚಿಮಣಿ ದೀಪ ಭರವಸೆಯೂ ಹೌದು. ಕತ್ತಲಲ್ಲಿ ಕುಳಿತವನಿಗೆ ಮಿಂಚುಹುಳದ ಬೆಳಕು ಮಾರ್ಗದರ್ಶನ ಮಾಡಬಹುದಾದರೆ ಚಿಮಣಿ ನಿಜಕ್ಕೂ ದಾರಿ ತೋರುವ ಉಜ್ವಲತೆಯೆನಿಸುತ್ತದೆ. ಹೀಗೆ ಆಶಾದಾಯಕ ಮತ್ತು ತಾತ್ಕಾಲಿಕ ಹೀಗೆ ಎರಡೂ ಆಗಿ ತೋರುವ ಚಿಮಣಿಯಬೆಳಕಿನಲ್ಲಿ ನನ್ನ ಜನ ಜೀವನ ಸಾಗಿಸುತ್ತಾರೆ ಎಂದು ಗಜಲಕಾರ ಹೇಳಿದ್ದಾರೆ. ಅಂತಹ ಚಿಮಣಿ ಭರವಸೆಯ ಬೆಳಕು ನೀಡುವುದೆಂದು ಕಾಯುವ ತನ್ನ ಜನ ಕಾಯುತ್ತಿರುವುದನ್ನು ತೀರಾ ವಿಚಾರದಿಂದ ಗಜಲಕಾರ ಹೇಳುತ್ತಾರೆ.
ಕೇಳಿ ಬಿಡುತ್ತಿದ್ದರು ಐದು ವರ್ಷದ ಊಸರವಳ್ಳಿ ಆಶ್ವಾಸನೆಗಳ ಇವರು
ಯಾವುದಕ್ಕೂ ಸೊಪ್ಪು ಹಾಕದೆ ಎಂದಿನ ಬದುಕ ಬದುಕಿದರು ನನ್ನ ಜನ
ರಾಜಕಾರಣಿಗಳು ಊಸರವಳ್ಳಿಗಳು.ಮತದಾನಕ್ಕೆ ಮೊದಲು ಕೈ ಮುಗಿದು, ಅಣ್ಣ ಅಕ್ಕ ಎಂದು ಬಣ್ಣದ ಮಾತಾಡಿ ಸೋಗು ಹಾಕುವ ಇವರೇ ಚುನಾವಣೆಯಲ್ಲಿ ಆರಿಸಿ ಬಂದ ನಂತರ ಒಮ್ಮೆಯೂ ತಿರುಗಿ ನೋಡುವುದಿಲ್ಲ. ಮತ್ತೆ ಅವರ ಮುಖ ದರ್ಶನವಾಗಬೇಕೆಂದರೆ ಐದು ವರ್ಷಗಳ ಕಾಲ ಕಾಯಬೇಕು. ಚುನಾವಣೆಗೂ ಮುನ್ನ ನೀಡುವ ಹತ್ತಾರು ಆಶ್ವಾಸನೆಗಳು ಈಡೇರದ ಗಾಳಿ ಮಾತುಗಳು ಎಂದು ಗೊತ್ತಿದ್ದರೂ ನನ್ನ ಜನ ಅದನ್ನು ನಂಬಿ ಹಾಕಿದರು. ಆದರೆ ಆ ಗೋಸುಂಬೆಗಳು ತಮ್ಮ ನಿಜವಾದ ರೂಪ ತೋರಿ ಈ ಜನರನ್ನು ಮರೆತರು. ಇರಲಿ, ಮರೆತರೇನು? ಅದ್ಯಾವುದಕ್ಕೂ ನನ್ನ ಜನ ಹೆದರಲಾರರು. ತಮ್ಮ ಬದುಕಿನ ನಿರಂತರತೆ ಹಾಳಾಗದಂತೆ ಕಾಪಿಟ್ಟುಕೊಂಡರು. ಈ ಗೋಮುಖ ವ್ಯಾಘ್ರರ ಮುಖಕ್ಕೆ ಹೊಡೆದಂತೆ ಬದುಕಿದರು
ಬಣ್ಣ ಹಚ್ಚದ ನಾಲಿಗೆಯಿಂದ ಬಣ್ಣ ಬಣ್ಣದ ತರೇಹವಾರಿ ಮಾತುಗಳು
ಮಾತುಗಳಿಗಷ್ಟೆ ಬಣ್ಣ ನಮ್ಮ ಬವಣೆಯ ಬದುಕಿಗಲ್ಲ ಎಂದರು ನನ್ನ ಜನ
ಮುಖಕ್ಕೆ ಬಣ್ಣ ಹಚ್ಚಿ ರೂಪ ಬದಲಾಯಿಸುವುದು ಉಳ್ಳವರ ಸಹಜ ಗುಣ. ಆದರೆ ನನ್ನವರಿಗೆ ಯಾವ ಕೃತ್ರಿಮತೆಯ ಅರಿವೂ ಇಲ್ಲ. ಅಂತಹ ಮುಖಕ್ಕೆ ಬಣ್ಣ ತೊಟ್ಟವರು, ಬಣ್ಣ ಹಚ್ಚಲಾಗದ ನಾಲಿಗೆಯಿಂದ ಬಣ್ಣ ಬಣ್ಣದ ಮಾತನಾಡುತ್ತಾರೆ. ಮಾತಿನಲ್ಲೇ ಅರಮನೆ ಕಟ್ಟಿ ಆಕಾಶ ತೋರುತ್ತಾರೆ. ಮಾತಿನ ಸಾಮ್ರಾಜ್ಯದಲ್ಲಿ ಸ್ವರ್ಗ ಕಾಣಿಸುತ್ತಾರೆ. ಆದರೆ ನನ್ನ ಜನಗಳಿಗೆ ಈ ಬಣ್ಣದ ಮಾತುಗಳ ಅರಿವಿದೆ. ಬದುಕಿನ ಬವಣೆಯನ್ನು ಕಡಿಮೆ ಮಾಡದ ಈ ಬಣ್ಣದ ಮಾತುಗಳಿಗೆ ಮರುಳಾಗುವುದಿಲ್ಲ ನನ್ನ ಜನ ಎಂದು ಗಜಲಕಾರ ಹೆಮ್ಮೆ ಪಡುತ್ತಾರೆ
ಯಾರೇ ಬಂದು ಹೋದರು ಬದುಕು ಬದಲಾಗಲಿಲ್ಲ ಹೊಸದಾಗಿ
ಮತ್ತೆ ಹರಿದ ಬದುಕಿಗೆ ಅದೇ ಹಳೆಯ ಕಿತ್ತೊದ ತೇಪೆಯ ಹಾಕಿದರು ನನ್ನ ಜನ
ಬದುಕಿನ ಪಯಣದಲ್ಲಿ ಅದೆಷ್ಟೋ ಜನ ಜೊತೆಯಾಗುತ್ತಾರೆ. ಅದೆಷ್ಟೋ ಜನ ಜೊತೆಗೂಡಲಾಗದೇ ಕಳಚಿಕೊಳ್ಳುತ್ತಾರೆ. ಜೀವನಪರ್ಯಂತ ಜೊತೆಗಿರುತ್ತೇನೆಂದು ಮಾತುಕೊಟ್ಟವರೂ ಎಷ್ಟೋ ಸಲ ಕುಂಟು ನೆಪ ಹೂಡಿ ದೂರವಾಗುತ್ತಾರೆ. ಆದರೆ ಯಾರು ಬರಲಿ, ಯಾರು ದೂರವಾಗಲಿ ಬದುಕು ಬದಲಾಗುವುದಿಲ್ಲ. ತನ್ನ ಪಾಡಿಗೆ ತಾನು ಸಾಗುತ್ತಲೇ ಇರುತ್ತದೆ. ಯಾರು ಬಂದರೂ ಬದುಕು ಹೊಸದಾಗುವುದಿಲ್ಲ. ಯಾರು ದೂರವಾದರೂ ಮತ್ತೆ ಜೀವನ ಹೊಸದಾಗಿ ಪ್ರಾರಂಭವಾಗುವುದಿಲ್ಲ. ಆದರೆ ತನ್ನ ಜನ ಹರಿದು ಹೋದ ಬದುಕಿಗೆ ತೇಪೆ ಹಾಕಿ ಮತ್ತೆ ಅದೇ ಜೀವನೋತ್ಸಾಹದಿಂದ ಬದುಕಲು ತೊಡಗುತ್ತಾರೆ.
ಬೆಳಗುತ್ತಿವೆ ಇನ್ನು ಗುಡಿಸಲಲ್ಲಿ ದೀಪ ಹಚ್ಚಿಟ್ಟ ರಾತ್ರಿಗಳು
ಹೊಸ ಹಗಲಿಗೆ ಮತ್ತೊಂದು ಹೊಸ ಹಣತೆಗೆ ಬತ್ತಿ ತಿಕ್ಕಲು ಅಣಿಯಾದರು ನನ್ನ ಜನ
ಗುಡಿಸಲುಗಳಲ್ಲಿ ರಾತ್ರಿ ಹಚ್ಚಿಟ್ಟ ದೀಪ ಇನ್ನೂ ಬೆಳಕುನೀಡುತ್ತಿದೆ. ಇಡೀ ರಾತ್ರಿ ತನ್ನಕೈಲಾದಷ್ಟು ಬೆಳಕು ನೀಡಿದ ದೀಪ ಹಗಲಲ್ಲೂ ತನ್ನ ಕರ್ತವ್ಯ ಮರೆತಿಲ್ಲ ಮತ್ತೊಂದು ಹೊಸ ಹಗಲು ಬಂದಿದೆ. ಹೊಸ ಹಣತೆಗೆ ಮತ್ತೆ ಬತ್ತಿ ಮಾಡಿಟ್ಟು ಇರುಳನ್ನು ಬೆಳಗಿಸಿ ಬದುಕನ್ನುಹಸಲು ಮಾಡಿಕೊಳ್ಳಲು ತನ್ನ ಜನ ಹಿಂಜರಿಯುವುದಿಲ್ಲ ಎಂದು ಗಜಲಕಾರ ಹೆಮ್ಮೆ ಪಡುತ್ತಾರೆ.
ಗೋರಿ ಮೇಲಿನ ಹೂ ಸಂಕಲನದಲ್ಲಿ ಅಭಿಷೇಕ್ ಬಳೆ ಈ ಶೇರ್ ಗಳಮೂಲಕ ತನ್ನ ಜನರ ನೋವು ನಲಿವುಗಳನ್ನು ಬಿಚ್ಚಿಟ್ಟಿದ್ದಾರೆ. ಯಾವುದಕ್ಕೂ ಅಂಜದೇ ಬದುಕು ಸಾಗಿಸುವ ತನ್ನ ಜನಗಳ ಮಾನಸಿಕ ಸ್ಥೈರ್ಯದ ಬಗ್ಗೆ ಅವರಿಗೆ ಅಪಾರವಾದ ಹೆಮ್ಮೆ. ಅಂತೆಯೇ ಅವರ ಬವಣೆಯ ಬದುಕಿನ ಕುರಿತು ಕರುಣೆಯೂ.
ಇಲ್ಲಿ ನನ್ನ ಜನ ಎನ್ನುವುದು ರದೀಪ. ರು ಎಂಬುದು ರವೀಶ. ತನ್ನ ಜನರ ಕುರಿತಾದ ಈ ಮಾತುಗಳು ಎದೆ ತಟ್ಟುತ್ತವೆ.
ಶ್ರೀದೇವಿ ಕೆರೆಮನೆ