ಟೀಚರ್... ಒಬ್ಬಳು ಅಂಜುತ್ತ ಶಿಕ್ಷಕರ ಕೊಠಡಿಯೊಳಕ್ಕೆ ಬಂದು ಕರೆದಳು. ಯಾವುದೋ ಕೆಲಸದಲ್ಲಿದ್ದವಳು ಹೂಂ ಅಂದೆ. ಮತ್ತೊಮ್ಮೆ ಟೀಚರ್ ಎಂದವಳ ಧ್ವನಿ ಮತ್ತೂ ಚಿಕ್ಕದಾಗಿತ್ತು. ಈಗ ತಲೆ ಎತ್ತಿ ಏನಾಯ್ತು ಎಂದೆ?
'ಟೀಚರ್ ಒಂದು ನಿಮಿಷ ಹೊರಗೆ ಬನ್ನಿ' ಎಂದವಳ ಧ್ವನಿಯಲ್ಲಿ ಬೇಡಿಕೆ.
ಏಯ್ ಹೋಗೆ. ಬರೆಯೋದು ಗುಡ್ಡದಷ್ಟಿದೆ. ಅದರಲ್ಲೂ ನಾಳೆ ಡಯಟ್ ನವರು ಬರ್ತಾರಂತೆ. ಇಲ್ಲೇ ಹೇಳು.' ನಾನು ಗಡಿಬಿಡಿ ಮಾಡಿದೆ. ಹಿರಿಯ ಅಧಿಕಾರಿಗಳು ಬಂದರೆ ಹೇಗಾದರೂ ಸುಧಾರಿಸಬಹುದು. ಆದರೆ ಇತ್ತೀಚೆಗೆ ಡಯಟ್ ನಿಂದ ಬರುವ ಅಧಿಕಾರಿಗಳು ನಮ್ಮ ತಪ್ಪು ಹುಡುಕಿ ಬೈಯ್ದು, ಬರೆದು ಹೋಗುವುದರಲ್ಲೇ ಖುಷಿಕಾಣುತ್ತಾರೆ ಎಂಬ ಶಿಕ್ಷಕರ ಗುಮಾನಿ ನಿಜ ಎಂದುಕೊಳ್ಳು ಹಂತ ತಲುಪಿರುವಾಗ, ಕಾಗದಪತ್ರಗಳೆಂದರೆ ಮೈಲು ದೂರ ಓಡುವ ನಾನು ಸುಮ್ಮನೆ ಬೈಸಿಕೊಳ್ಳುವ ಭಯದಿಂದ ಎಲ್ಲವನ್ನೂ ಜೋಡಿಸಿ ಇಟ್ಟುಕೊಳ್ಳುತ್ತಿದ್ದೆ.
ಮತ್ತೊಮ್ಮೆ ಟೀಚರ್ ಎಂದು ಗೋಗರೆಯುವಂತೆ ಕರೆದಳು ಹುಡುಗಿ.
'ಅತಿಯಾಯ್ತು ನಿನ್ನ ಕಾಟ. ಏನು ಅಂತ ಬೇಗ ಹೇಳು.' ಎನ್ನುತ್ತ ಅವಳ ಜೊತೆ ಶಿಕ್ಷಕರ ಕೊಠಡಿಯಿಂದ ಹೊರಗೆ ಬಂದೆ.
'ಅದೇನು ಗುಟ್ಟು? ನಿಮ್ಮ ಕ್ಲಾಸ್ ಟೀಚರ್ ಗೇ ಹೇಳಬೇಕಾ? ನಮಗೆಲ್ಲ ಕೇಳಬಾರದಾ?' ಉಳಿದ ಶಿಕ್ಷಕರು ತಮಾಷೆ ಮಾಡಿದರೂ ಹುಡುಗಿ ನನಗಿಂತ ಮೊದಲು ಹೊರಗೆ ಹೋಗಿ ಮೂಲೆಗೆ ಹೋಗಿ ನಿಂತಳು. ಏನಾಯ್ತು ಎಂದು ನಾನು ಕೇಳುವುದಕ್ಕೂ ಮೊದಲೇ 'ಟೀಚರ್ ಇವಳಿಗೆ ಡೇಟ್ ಆಯ್ತಂತೆ.' ಅಲ್ಲೇ ಮುದುಡಿ ನಿಂತಿದ್ದ ಹುಡುಗಿಯನ್ನು ತೋರಿಸಿದಳು. 'ಅಯ್ಯೋ ದೇವರೇ, ಮೊದಲೇ ಗೊತ್ತಾಗಲಿಲ್ವಾ? ಪ್ಯಾಡ್ ಇಟ್ಕೋಬೇಕಿತ್ತು ತಾನೆ?' ನಾನು ಗಡಿಬಿಡಿಯಿಂದ ಕೇಳಿದೆ. 'ಟೀಚರ್ ಅವಳಿಗೆ ಮೊದಲನೇ ಸಲ ಆಗಿದೆ. ಏನಾಯ್ತು ಅಂತ ಗೊತ್ತೇ ಆಗಲಿಲ್ಲ ಅವಳಿಗೆ. ಅವಳ ಯುನಿಫಾರ್ಮ ಕೆಂಪಾಗಿದೆ.' ನನ್ನನ್ನು ಕರೆಯಲು ಬಂದವಳೇ ಹೇಳಿದಳು. 'ಈಗೇನು ಮಾಡುವುದು? ಮನೆಗೆ ಹೋಗ್ತೀಯಾ? ಮನೆಯವರಿಗೆ ಫೋನ್ ಮಾಡಲೇ?' ಎಂದೆ. ಹುಡುಗಿಯ ಕಣ್ಣಲ್ಲಿ ನೀರು.
'ಮನೆಲಿ ಅಮ್ಮ ಇಲ್ಲ ಟೀಚರ್. ಮೀನು ಕೊಯ್ಲಿಕ್ಕೆ ಹೋಗಿದ್ದಾಳೆ.' ಸಣ್ಣ ಧ್ವನಿಯಲ್ಲಿ ಪಿಸುಗುಟ್ಟಿದಳು. 'ಹಾಗಾದರೆ ಮನೆಯಲ್ಲಿ ಯಾರಿದ್ದಾರೆ?'
'ಯಾರೂ ಇಲ್ಲ ಟೀಚರ್.' ಅವಳ ಧ್ವನಿ ಕಿವಿಗೇ ಕೇಳದಷ್ಟು ಸಣ್ಣದಾಗಿತ್ತು.
ಶಿಕ್ಷಕರ ಕೋಣೆಯೊಳಗೆ ಒಳಗೆ ಬಂದು 'ಯಾರ ಬಳಿ ಶುಚಿ ಇದೆ? ಒಂದು ಪ್ಯಾಡ್ ಕೊಡಿ.' ಎಂದರೆ ಯಾರ ಬಳಿಯಲ್ಲೂ ಇರಲಿಲ್ಲ. 'ಶುಚಿ ಬರದೇ ಮೂರು ವರ್ಷ ಆಯ್ತಲ್ಲ. ಹೇಗೋ ಮೊನ್ನೆಯವರೆಗೂ ಒಂದು ಪ್ಯಾಡ್ ಇತ್ತು. ನಿಮ್ಮದೇ ಕ್ಲಾಸಿನ ಹುಡುಗಿ ಮೊನ್ನೆ ತೆಗೆದುಕೊಂಡು ಹೋದಳಲ್ಲ?' ಹಿರಿಯ ಶಿಕ್ಷಕಿಯೊಬ್ಬರು ಹೇಳಿದರು.
'ಟೀಚರ್ ಎಂ ಸಿ ಆಗದೆ. ಪ್ಯಾಡ್ ಬೇಕು.' ಮೊನ್ನೆ ಶಿಕ್ಷಕರ ಕೋಣೆಯಲ್ಲಿ ದೊಡ್ಡದಾಗಿ ಹೇಳಿ ಬೈಸಿಕೊಂಡಿದ್ದ ಹುಡುಗಿಯ ನೆನಪಾಯಿತು. ನಮಗೆಲ್ಲ ಮಾಸಿಕ ಸ್ರಾವ ಎಂದರೆ ಅದು ಮುಚ್ಚಿಡಬೇಕಾದ ವಿಷಯ. ಅದೇನೋ ಮಾಡಬಾರದ ಪಾಪ ಮಾಡಿದಂತೆ. ಆ ಹೆಸರನ್ನು ಗಂಡಸರಿಗೆ ಕೇಳುವಂತೆ ಹೇಳುವಂತಿಲ್ಲ ಎಂಬ ಅಲಿಖಿತ ನಿಯಮವನ್ನು ನಮ್ಮ ಮೇಲೆ ನಾವೇ ಹೇರಿಕೊಂಡಂತೆ ವರ್ತಿಸುತ್ತೇವೆ. ಹೀಗಾಗಿ ಆ ಹುಡುಗಿ ಜೋರಾಗಿ ಹೇಳಿ ಮಾಡಬಾರದ್ದನ್ನು ಮಾಡಿದ ಬಜಾರಿಯಾಗಿ ಬಿಟ್ಟಿದ್ದಳು ಶಿಕ್ಷಕರ ಕಣ್ಣಲ್ಲಿ. ಆ ದಿನ ಅವಳು ಕೊನೆಯದಾಗಿ ಇದ್ದ ಪ್ಯಾಡ್ ತೆಗೆದುಕೊಂಡು ಹೋದ ನಂತರ ಕೊಡಲು ಮತ್ತೇನೂ ಇರಲಿಲ್ಲ.
ನಾಲ್ಕೈದು ವರ್ಷಗಳ ಹಿಂದೆ ಶಾಲೆಗಳಿಗೆ ನಿಯಮಿತವಾಗಿ ಶುಚಿ ಸರಬರಾಜಾಗುತ್ತಿತ್ತು. ನಿಜಕ್ಕೂ ಇದು ನಮ್ಮಂತಹ ಬಡ ಮಕ್ಕಳು ಬರುವ ಶಾಲಡಗಳಲ್ಲಿ ವರದಾನವೇ ಆಗಿತ್ತು. ಮಕ್ಕಳಿಗೆ ಸಮಾನವಾಗಿ ಹಂಚಿ ಹೆಚ್ಚು ಉಳಿದಿದ್ದರೆ ಶಿಕ್ಷಕರು ಇಟ್ಟುಕೊಳ್ಳುತ್ತಿದ್ದೆವು. ಅಕಸ್ಮಾತ್ ಮಕ್ಕಳು ಸಿದ್ಧವಾಗಿ ಬಂದಿರದಿದ್ದರೆ ಅಥವಾ ಶಿಕ್ಷಕಿಯರೇ ಮುಂಜಾಗ್ರತೆ ವಹಿಸದಿದ್ದರೆ ಅವು ಉಪಯೋಗಕ್ಕೆ ಬರುತ್ತಿದ್ದವು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಾಗಲೂ ಹೆಚ್ಚು ಬರುತ್ತಿದ್ದುದರಿಂದ ಶಾಲೆಯ ಸ್ಟೋರ್ ರೂಂನಲ್ಲಿ ಒಂದಿಷ್ಟು ಪ್ಯಾಕ್ ಗಳು ಇದ್ದವು. ಆಗೀಗ ಬೇಕು ಎಂದು ಕೇಳುವ ಮಕ್ಕಳಿಗೆ ಇವು ಪ್ರಯೋಜನಕ್ಕಾಗುತ್ತಿದ್ದವು.
ಆದರೆ ನಂತರದ ದಿನಗಳಲ್ಲಿ ಹೆಣ್ಣುಮಕ್ಕಳ ಸಬಲಿಕರಣ ಬರಿ ಬಾಯಿಮಾತಾಗಿ, ಕಾಗದ ಪತ್ರಗಳ ಮೇಲಿನ ಅಂಕಿ ಅಂಶಗಳಾಗಿ ಉಳಿದಿದ್ದರಿಂದ ಇವುಗಳ ಸರಬರಾಜು ನಿಂತೇ ಹೋಯಿತು.
ಇವಳಿಗೆ ಇದು ಮೊದಲ ಸ್ರಾವ. ಹೀಗಾಗಿ ಅವಳಿಗೆ ಏನೆಂದರೆ ಏನೂ ಗೊತ್ತಿರಲಿಲ್ಲವೆಂದರೂ ನಾವು ಚಿಕ್ಕವರಾಗಿದ್ದಷ್ಟು ಅಮಾಯಕಿಯಲ್ಲ. ಪ್ಯಾಡ್ ಧರಿಸುವುದು ಗೊತ್ತಿರದಿದ್ದರೂ ಋತುಸ್ರಾವ ಆಗುತ್ತದೆ ಎಂಬ ವಿಷಯವಾದರೂ ಇವಳಿಗೆ ಗೊತ್ತು. 'ಅಯ್ಯೋ ರಕ್ತ ಬರ್ತಿದೆ ಅಮ್ಮ. ನಾನು ಸತ್ತೇ ಹೋಗ್ತೇನೇನೋ?' ಎಂದು ಅದೇ ಶಾಲೆಯ ಶಿಕ್ಷಕಿಯಾಗಿದ್ದ ಅಮ್ಮನ ಬಳಿ ಗೋಳೋ ಎಂದು ಅತ್ತಿದ್ದೆ ನಾನು. ಅಮ್ಮ ಗಡಿಬಿಡಿಯಲ್ಲಿ ರಜೆ ಹಾಕಿ ನನ್ನನ್ನು ಮನೆಗೆ ಕರೆತಂದು ನಿಧಾನವಾಗಿ ಹೇಳಿದ್ದರು. ಈಗಿನಂತೆ ನ್ಯಾಪಿಗಳು ಇರಲಿಲ್ವಾದ್ದರಿಂದ ಬಟ್ಟೆ ಬಳಸು, ತೊಳಿ, ಯಾರೂ ಕಾಣದಂತೆ ಒಣಗಿಸು ಎಂಬ ಕಿರಿಕಿರಿಗೆ ರೋಸಿ ಹೋಗಿತ್ತು. ಆದರೆ ಈ ಹುಡುಗಿ ತಾನಾಗಿಯೇ ಎಂ ಸಿ ಆಯ್ತು ಎಂದು ಗೆಳತಿಯರ ಬಳಿ ಹೇಳಿದ್ದಳು.
ಅಂತೂ ಒಬ್ಬ ಶಿಕ್ಷಕಿ ತಮಗಾಗಿ ಎಂದು ಮನೆಯಿಂದ ತಂದುಕೊಂಡಿದ್ದ ಪ್ಯಾಡ್ ಕೊಟ್ಟು ಅವಳಿಗೆ ನ್ಯಾಪಿ ಧರಿಸುವುದನ್ನು ಹೇಳಿಕೊಟ್ಟು ಮೀನು ಮಾರಲು ಹೋಗಿದ್ದ ಅಮ್ಮನಿಗೆ ಫೋನ್ ಮಾಡಿದಾಗ ತನ್ನ ಬುಟ್ಟಿಯನ್ನು ಬೇರೆಯವರಿಗೆ ಮಾರಲು ತಿಳಿಸಿ ಓಡೋಡಿ ಬಂದಿದ್ದಳು.
ಮಹಿಳಾ ಸಬಲಿಕರಣದ ಹತ್ತು ಹಲವು ಕಾರ್ಯಕ್ರಮಗಳು, ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವ ಈ ಸಮಯದಲ್ಲಿ ಮಕ್ಕಳಿಗಾಗಿ ಪುನಃ ಶುಚಿ ಸರಬರಾಜು ಮಾಡುವತ್ತ ಸರಕಾರ ಗಮನವಹಿಸುತ್ತದೆಂಬ ಭರವಸೆಯಿದೆ.
ಶ್ರೀದೇವಿ ಕೆರೆಮನೆ