ಮಿನುಗುವ ಹರೆಯದ ಮಕ್ಕಳ ಕಥೆಗಳು- ಜುಗ್ನು
ಪುಸ್ತಕದ ಹೆಸರು- ಜುಗ್ನು
ಲೇಖಕರು- ಗಿರೀಶ ಜಕಾಪುರೆ
ಪ್ರಕಾಶನ- ಅಭಿನವ
ಬೆಲೆ-೭೫/-
ಮಕ್ಕಳಿಗಾಗಿ ಬರೆದ ಅದೆಷ್ಟೋ ಕಥೆಗಳನ್ನು ಓದಿದ್ದೇವೆ. ದೊಡ್ಡವರ ಕಥೆಗಳನ್ನಂತೂ ಲೆಕ್ಕವಿಲ್ಲದಷ್ಟು ಓದುತ್ತಲೇ ಇರುತ್ತೇವೆ. ಆದರೆ ಹರೆಯದ ಹೊಸ್ತಿಲಿನಲ್ಲಿ ನಿಂತಿರುವ ನವಜನಾಂಗದ ಕಥೆಗಳನ್ನು ಓದುತ್ತೇವೆಯೇ? ಖಂಡಿತಾ ಇಲ್ಲ. ಯಾಕೆಂದರೆ ನಮಗೆ ಗೊತ್ತಿರುವುದು ಮಕ್ಕಳ ಕಥೆಗಳು, ಅದೂ ಕೂಡ ದೊಡ್ಡವರೇ ಓದಬೇಕಾದಂತಹ ಕಥೆಗಳು. ಇನ್ನು ದೊಡ್ಡವರ ಕಥೆಗಳನ್ನಂತೂ ಬಿಡಿ. ತರೇಹವಾರಿ ವಿಷಯಗಳ, ಸೂರ್ಯನ ಕೆಳಗಿರುವ ಜಗತ್ತಿನ ಎಲ್ಲವನ್ನೂ ಒಳಗೊಂಡಂತಹ ಕಥೆಗಳು. ಅವುಗಳನ್ನಂತೂ ಬಾಯಿ ಚಪ್ಪರಿಸಿಕೊಂಡು ಓದಿರುತ್ತೇವೆ. ಆದರೆ ಅತ್ತ ದೊಡ್ಡವರೆಂದರೆ ದೊಡ್ಡವರೂ ಆಗಿರದ, ಇತ್ತ ಚಿಕ್ಕವರೆಂದು ಮಕ್ಕಳ ಸಾಲಿಗೂ ಸೇರಲಾರದ ಹರೆಯದ ಮಕ್ಕಳ ಕಥೆಗಳನ್ನು ನಾವೆಷ್ಟು ಓದಿದ್ದೇವೆ. ಹೀಗೆ ಕೇಳಿದರೆ ಅಂತಹ ಸಾಹಿತ್ಯ ಕನ್ನಡ ಸಾರಸ್ವತ ಲೋಕದಲ್ಲಿದೆಯೆ ಎಂಬ ಪ್ರಶ್ನೆಯಂತೂ ಖಂಡಿತಾ ಬರುತ್ತದೆ. ಹೌದು ಪ್ರಬುದ್ಧತೆಯ ಹೊಸ್ತಿಲಿನಲ್ಲಿರುವ ಹದಿಹರೆಯದವರಿಗಾಗಿ ಕಥಾ ಸಂಕಲನವೊಂದಿದೆ. ತಮ್ಮೆಲ್ಲ ಪುಸ್ತಕಗಳಲ್ಲೂ ಏನಾದರೊಂದು ಪ್ರಯೋಗಗಳನ್ನು ಮಾಡುತ್ತಲೇ ಎಲ್ಲರೂ ನಡೆವ ರಾಜಬೀದಿಯನ್ನು ಬಿಟ್ಟು ಹೊಸತೇ ಆದ ಹಾದಿಯೊಂದನ್ನು ನಿರ್ಮಾಣಗೊಳಿಸುವ ಗಿರೀಶ ಜಕಾಪುರೆಯವರು ಬರೆದ ಜುಗ್ನು.
ಮಕ್ಕಳ ಕಥೆಗಳು ಎಂದರೆ ಅದು ಸಾಮಾನ್ಯವಾಗಿ ಪ್ರಾಥಮಿಕ ಶಾಲಾ ಮಕ್ಕಳ ಹಂತದಲ್ಲಿರುತ್ತದೆ. ಅದು ಕೇವಲ ಬಾಲ್ಯದ ಚಿತ್ರಗಳು. ಸ್ನೇಹಿತರು, ಪ್ರಾಣಿಗಳು, ತುಂಟಾಟಗಳ ಆಗರ ಇದು. ಇತ್ತ ಹಿರಿಯರ ಕಥೆಗಳಂತೂ ತಲೆಯ ಮೇಲೆ ಹಾದು ಹೋಗುವಂತಿರುತ್ತದೆ. ಇತ್ತ ತೀರಾ ಪ್ರಾಥಮಿಕ ಶಾಲಾ ಮಕ್ಕಳ ಜೊತೆಗೆ ತಮ್ಮನ್ನು ತಾವು ಹೋಲಿಸಿಕೊಳ್ಳಲಾಗದೇ ತಾವು ದೊಡ್ಡವರಾಗಿದ್ದೇವೆ ಎಂದುಕೊಳ್ಳುವ, ಅತ್ತ ಹಿರಿಯರ ಪಾಲಿಗೆ 'ನೀನು ಇನ್ನೂ ಚಿಕ್ಕವನು' ಎಂದು ಪದೇಪದೇ ಹೇಳಿಸಿಕೊಳ್ಳುವ ನವಹರೆಯದ ಮಕ್ಕಳ ಮನಸ್ಥಿತಿ ಬೇರೆಯೇ ಇರುತ್ತದೆ. ಮನೋವಿಜ್ಞಾನಿಗಳ ಪ್ರಕಾರ ಇದೊಂದು ಸೂಕ್ಷ್ಮ ಸ್ಥಿತಿ. ದೇಹದಲ್ಲಿನ ಹಾರ್ಮೋನುಗಳು ಏರುಪೇರಾಗುತ್ತಿರುತ್ತದೆ. ಮಗುವಿನ ಮುಗ್ಧತೆ ಮಾಯವಾಗಿ ಆ ಜಾಗದಲ್ಲಿ ಲೈಂಗಿಕ ಕುತೂಹಲಗಳು ಮೂಡಿರುತ್ತದೆ. 'ತಾವೇನೂ ಕಡಿಮೆಯಿಲ್ಲ' ಎಂದು ಇಡೀ ಜಗತ್ತಿಗೆ ತೋರಿಸಿಕೊಳ್ಳಬೇಕು ಎನ್ನುವ ಒಳತುಡಿತವೊಂದು ಏನನ್ನಾದರೂ ಮಾಡುವಂತೆ ಒತ್ತಡ ಹೇರುತ್ತಿರುತ್ತದೆ. ಅತ್ತ ಹಿರಿಯರು ಅವರನ್ನು ಇನ್ನೂ ನೆತ್ತಿಯ ಮಾಸು ಆರದ ಕೂಸುಗಳು ಎಂಬಂತೆ ಭಾವಿಸುವುದನ್ನು ವಿರೋಧಿಸಿ ನಿಲ್ಲಬೇಕೆಂಬ ಆಸೆಯಿರುತ್ತದೆ. ಹೀಗಾಗಿ ಮಕ್ಕಳ ಸಾಹಿತ್ಯ ಬಾಲಸಾಹಿತ್ಯವಾಗಿ ಗೋಚರವಾದರೆ, ಹಿರಿಯರ ಕಥೆಗಳು ಜೀರ್ಣಿಸಿಕೊಳ್ಳಲಾಗದ ಕಬ್ಬಿಣದ ಕಡಲೆಗಳು. ಹೀಗಾಗಿ ಈಗಷ್ಟೇ ಹರೆಯದ ಹೊಸ್ತಿಲಿನ ಮೇಲೆ ಅಳುಕುತ್ತ ಕಾಲಿಡುತ್ತ, ತಮ್ಮ ಮುಗ್ಧ ಕಣ್ಣುಗಳಿಂದ ಜಗತ್ತಿನ ಹೊಸರೂಪವನ್ನು ಗಮನಿಸುತ್ತಿರುವ ಹದ ವಯಸ್ಕರಿಗೆ ಬೇಕಾದ ಕಥಾನಕ ಬೇರೆಯದ್ದೇ ಆಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಟೀ ಏಜ್ ಮಕ್ಕಳಿಗಾಗಿ ಬೇಕಷ್ಟು ಸಾಹಿತ್ಯ ಬರುತ್ತವೆ. ಆದರೆ ಕನ್ನಡದ ಮಟ್ಟಿಗೆ ಆ ಪ್ರಯತ್ನ ಆಗಿರಲೇ ಇಲ್ಲ. ಇದು ಮೊದಲ ಪ್ರಯತ್ನ ಎಂದೇ ಹೇಳಬೇಕು. ಏಕೆಂದರೆ ಇಲ್ಲಿ ಬರುವ ಯಾವ ಪಾತ್ರಗಳೂ ಪ್ರಾಥಮಿಕ ಹಂತದ ಎಳೆ ನಿಂಬೆಗಳಲ್ಲ. ಅತ್ತ ಕಾಲೇಜು ಓದುತ್ತಿರುವ ಯುವಕರೂ ಅಲ್ಲ. ಇದು ಪ್ರೌಢಶಾಲಾ ಹಂತದ ಮಕ್ಕಳೇ ನಾಯಕರಾಗಿರುವಂತಹ ಕಥೆ. ಇಲ್ಲಿನ ಹೆಚ್ಚಿನ ಕಥೆಗಳಲ್ಲಿ ರಘುವೇ ನಾಯಕ. ಮೊದಲ ಕಥೆಯಲ್ಲಿ ಊರಲ್ಲಿ ಬಂದಿರುವ ನಾಟಕದ ಕೊನೆಯ ದಿನದಂದು ಮೈಕೋದಲ್ಲಿ ಅನೌನ್ಸ್ ಮಾಡುವುದನ್ನು ಕೇಳಿ ತಾನು ನೋಡಲೇಬೇಕೆಂದು ಅಪ್ಪನ ಬಳಿ ಹಠ ಹಿಡಿದ ರಘು ಸಿಂಧೂರ ಲಕ್ಷ್ಮಣ ನಾಟಕವನ್ನು ನೋಡಲು ಹೋಗುತ್ತಾನೆ. ಅಲ್ಲಿಯ ಗವಿ, ನಾಯಿಯನ್ನು ನೋಡಿ ತನಗೂ ಅಂತಹುದ್ದೇ ಒಂದು ನಾಯಿ ಬೇಕು ಎಂದುಕೊಳ್ಳುವಾಗಲೇ ನಾಟಕ ನೋಡಲು ಹೋದಾಗ ತುಂಬು ಗರ್ಬಿಣಿಯಾಗಿದ್ದ ನಾಯಿಯೊಂದು ಹಸಿವಿನಿಂದ ನರುತ್ತಿರುವುದನ್ನು ಕಂಡು ಅಪ್ಪನ ಬಳಿ ತಿಂಡಿ ಬೇಕೆಂದು ಹಠ ಮಾಡಿ ತರಿಸಿಕೊಂಡು ನಾಯಿಗೆ ಹಾಕಿದ್ದು ನೆನಪಾಗುತ್ತದೆ. ಮಾರನೆಯ ದಿನ ದೇವಸ್ಥಾನದ ಪ್ರಸಾದವನ್ನೂ ಅದಕ್ಕೇ ಕೊಡುತ್ತಾನೆ. ಇವರು ಮಾಡಿದ್ದ ಗವಿಗೆ ಬಂದು ಮರಿ ಹಾಕಿದ ಆ ನಾಯಿಯನ್ನು ಕಂಡು ರಘು ಹಾಗೂ ಸ್ನೇಹಿತರು ಸಾರ್ಥಕತೆ ಅನುಭವಿಸುತ್ತಾರೆ. ಮುಂದಿನ ಕಥೆಯಲ್ಲಿ ರಘು ಸಾಕಿದ ಕುರಿ ಮರಿ ಬೀರಾನನ್ನು ಅವನ ತಂದೆ ದೀಪಾವಳಿ ಹಬ್ಬದ ಸಿಹಿ ತಿನಿಸಿಗೆ ಹಾಗೂ ಬಣ್ಣದ ಬಟ್ಟೆಗಳನ್ನು ತರೋದಕ್ಕಾಗಿ ಮಾರಿಬಿಡುತ್ತಾನೆ. ಆದರೆ ಪುಟ್ಟ ಕುರಿಮರಿಯನ್ನು ಮಾರಿ ತಂದಿರುವ ಹಣದಿಂದ ಖರೀದಿಸಿದ ತಿಂಡಿಯ ಬಗ್ಗೆ ರಘು ತಿರಸ್ಕಾರ ಭಾವ ತಾಳುತ್ತಾನೆ. ಶಾಲೆಗೂ ಹೋಗದೇ ಊದಾಸನಾಗುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ಬರುವ ಬಕ್ರಿದ್‌ಗಾಗಿ ರಘುನ ಗೆಳೆಯ ಅಹಮದ್‌ನ ತಂದೆ ಅದೇ ಕುರಿಮರಿಯನ್ನು ಖರೀದಿಸಿರುತ್ತಾರೆ. ಗೆಳೆಯರ ಒತ್ತಾಯಕ್ಕೆ ಮನೆಯಿಂದ ಹೊರಬಂದ ರಾಘು ತನ್ನ ಕುರಿಮರಿ ಬೀರಾನನ್ನು ಗೆಳೆಯನ ಮನೆಯಲ್ಲಿ ಕಂಡು ಎರಡೇ ದಿನಕ್ಕೆ ಬಕ್ರಿದ್‌ಗೆ ಬಲಿಯಾಗುವ ಸತ್ಯ ತಿಳಿದು ಮತ್ತಿಷ್ಟು ಕುಸಿಯುತ್ತಾನೆ. ಆದರೆ ಅಹಮ್ಮದ್ ಬಕ್ರಿದ್‌ನ ತ್ಯಾಗ ಬಲಿದಾನದ ಕಥೆಯನ್ನು ಅಬ್ಬೂನ ಬಾಯಿಯಿಂದಲೇ ಕೇಳಿ ಹಿಂದಿರುಗಿಸಲು ಒಪ್ಪಿಸುತ್ತಾನೆ. ಇಡೀ ಕಥೆ ಸಂಕಲನದ ಮೇರು ಕಥೆಯಾಗಿ ರೂಪುಗೊಂಡಿದೆ. ಇಲ್ಲಿ ಹಬ್ಬಕ್ಕಾಗಿ ಒಂದು ಜೊತೆ ಬಟ್ಟೆಯನ್ನೂ ಕೊಳ್ಳಲಾಗದ ರಘೂನ ಕುಟುಂಬದ ಬಡತನ ಅಸಹಾಯಕತೆಗಳ ಚಿತ್ರಣವಿದೆ. ಹಿಂದು ಹಾಗೂ ಮುಸ್ಲಿಂ ಎನ್ನದ ಅಹಮ್ಮದ್ ಹಾಗೂ ರಘುನ ಸ್ನೇಹ ಹಾಗೂ ಅಹಮ್ಮದ್‌ನ ತಂದೆಯ ಉದಾರತೆಯೂ ಇದೆ. 'ಸಿಹಿ ತಿಂದು ದೀಪಾವಳಿ ಆಚರಿಸಬೇಕು' ಎನ್ನುವ ಅಹಮ್ಮದ್‌ನ ತಂದೆಯ ಮಾತು ನಮ್ಮ ಕಣ್ಣಲ್ಲಿ ನೀರಾಡುವಂತೆ ಮಾಡುತ್ತದೆ. ಅಜ್ಜಿಯ ಊರು ಕಥೆಯಲ್ಲಿ ರಘುನ ಅಣ್ಣ ರಮೇಶ ಆಲ್ ಕರ್ನಾಟಕ ಪ್ರವಾಸಕ್ಕೆ ಹೊರಡಬಯಸುತ್ತಾನೆ. ಒಬ್ಬನನ್ನು ಪ್ರವಾಸಕ್ಕೆ ಕಳಿಸಲೇ ಹಣ ಹೊಂದಿಸಲಾಗದಿರುವಾಗ ಇತ್ತ ರಘು 'ಅಣ್ಣ ಪ್ರವಾಸ ಹೊರಟರೆ ತಾನೂ ಹೊರಡುವವನೇ' ಎಂದು ಹಠ ಹಿಡಿದುಬಿಡುತ್ತಾನೆ. ಆದರೆ ಅಣ್ಣ ರಮೇಶ ಹೊರಡುವ ಬೆಳಿಗ್ಗೆ ರಘುನನ್ನು ಅಜ್ಜಿಯ ಮನೆಯಲ್ಲಿ ಬಿಡುತ್ತಾನೆ. ಅಜ್ಜಿ ಮನೆಯ ದೊಡ್ಡ ವಾಡೆದಂತಹ ಮನೆ, ತೋಟದ ಹಸಿರು ರಘುನನ್ನು ಮೋಡಿ ಮಾಡುತ್ತದೆ. ಊರ ದೇವಸ್ಥಾನದ ಇತಿಹಾಸ, ಬಸವಣ್ಣನ ಗುಡ್ಡ ಹಾಗೂ ಅದರ ಹಿಂದಿರುವ ಶಿವಲಿಂಗದಂತಿರುವ ಬೆಟ್ಟ ಹಾಗೂ ಉರಿನ ಹತ್ತಾರು ವಿಷಯಗಳ ಬಗ್ಗೆ ಅಜ್ಜನಿಂದ ತಿಳಿದುಕೊಂಡ ರಘುವಿನ ಜ್ಞಾನದ ಹರವು ಅವನಿಗೆ ಅರಿವಾಗದಂತೆ ವಿಸ್ತಾರವಾಗುವ ಪರಿ ಇದೆ. ಅಜ್ಜನ ಸಂದೂಕವಂತೂ ಪೂರ್ವಜರ ಚಿತ್ರಗಳೆಲ್ಲ ಇರುವ ಮಾಯಾ ಪೆಟ್ಟಿಗೆ. ವಾರ ಬಿಟ್ಟು ಊರಿಗೆ ಹೋದರೆ ಅಣ್ಣ ರಮೇಶನ ಪ್ರವಾಸಕ್ಕಿಂತ ತನ್ನ ಅಜ್ಜಿ ಮನೆಯ ಪ್ರವಾಸ ಏನೂ ಕಡಿಮೆಯದ್ದಾಗಿರಲಿಲ್ಲ ಎಂಬ ಅರಿವು ಆತನಿಗೆ ಉಂಟಾಗುತ್ತದೆ. ಹೊರಸಿನ ಮೇಲೆ ಮಲಗಿ ನೋಡಿದ ಚುಕ್ಕಿ ಚಂದ್ರಮರು ಪ್ಲಾನೆಟೋರಿಯಮ್ ಚುಕ್ಕಿ ಚಂದ್ರಮರಿಗಿಂತ ಕಡಿಮೆ ಏನಿರಲಿಲ್ಲ. ಅಣ್ಣ ಜೋಗ ನೋಡಿದರೆ ತಮ್ಮ ತೋಟದ ಬಾವಿಯಲ್ಲಿ ಮನಸಾರೆ ಈಜಿದ್ದ, ಅಣ್ಣ ಬೇಲೂರು ಗುಡಿಗಳನ್ನು ನೋಡಿದರೆ ತಮ್ಮ ಪುರಾತನ ಗುಡಿಗಳನ್ನು ಕಂಡಿದ್ದ. ಕೊನೆಗೆ ಅಜ್ಜ ಅಜ್ಜಿಯರ ನೆನಪಿನಿಂದ ಅಳುವ ರಘವಿನಿಂದ ಬದುಕಿನಲ್ಲಿ ಹಿರಿಯರ ಪಾತ್ರವನ್ನು ಈ ಕಥೆ ಮನಮಟ್ಟುವಂತೆ ವಿವರಿಸುತ್ತದೆ.
ಸಂಕಲನದ ಮತ್ತೊಂದು ಮೇರು ಕತೆ ಕುಲ್ಪಿ ಹುಡುಗ. ಇದೀಗ ಚಲನಚಿತ್ರವಾಗುತ್ತಿರುವ ಕಥೆ ಇದು. ಒಂಬತ್ತನೆಯ ತರಗತಿಯ ಬಡ ಹುಡುಗನೊಬ್ಬ ರಜಾ ದಿನಗಳಲ್ಲಿ ಕುಲ್ಫಿ ಮಾರಿ ಹತ್ತನೆ ತರಗತಿಯ ಟ್ಯೂಷನ್‌ಗಾಗಿ ಹಣ ಹೊಂದಿಸಿಕೊಳ್ಳುವ ಪಡಿಪಾಟಲಿನ ಜೊತೆಗೆ ಅವನ ಮಾನವೀಯ ಗುಣಗಳನ್ನು ಅನಾವರಣಗೊಳಿಸುವ ರೂಪಕ ಚಿತ್ರಗಳನ್ನು ಇದು ಒಳಗೊಂಡಿದೆ. ವಯೋ ಸಹಜವಾದ ಕಾಮನೆಗಳ ಸರಕೂ ಇಲ್ಲಿದೆ. ಟ್ಯೂಷನ್ ಮುಗಿಸಿ ಕುಲ್ಫಿ ಮಾರಲು ಹೋಗುವ ವೆಂಕಟೇಶನಿಗೆ ಜಗತ್ತಿನ ಎಲ್ಲಾ ವ್ಯವಹಾರಗಳ ಪರಿಚಯ ವಾಸ್ತವದಲ್ಲೇ ಆಗುತ್ತದೆ. ದಿನಕ್ಕೊಂದು ಊರು, ಕಾಲೋನಿ, ತಾಂಡಾಗಳಿಗೆ ಹೋಗುವುದರಿಂದ ಸಾಮಾಜಿಕ ಜೀವನವೂ ಅರಿವಾಗುತ್ತದೆ. ಇಸ್ಪೀಟ್ ಆಟಕ್ಕೆ ಬೇಕಷ್ಟು ದುಡ್ಡು ಹಾಕಿ ಮಗ ಕುಲ್ಫಿಗಾಗಿ ಕೇಳುವ ಒಂದು ರೂಪಾಯಿಯನ್ನೂ ಕೊಡದೆ ಹೊಡೆಯುವ ಅಪ್ಪನನ್ನೂ ಕಾಣುತ್ತಾನೆ. ತಾಯಿಯನ್ನು ಮನೆಯಿಂದ ಹೊರಹಾಕುವ ಮಗನೂ ಕಾಣಸಿಗುತ್ತಾನೆ. ಬಿಸಲಲ್ಲಿ ಮಲಮಗಳನ್ನು ನಿಲ್ಲಿಸಿ ಕೆಲಸ ಮಾಡಿಸುವ ಚಿಕ್ಕಮ್ಮ ಕುಲ್ಫಿಕೊಂಡು ಆಕೆಗೆ ಕೊಡದೆ ತಿನ್ನುವ ಅಮಾನವೀಯತೆಯ ವಿರಾಟರೂಪದ ದರ್ಶನವಾಗುತ್ತದೆ. ಹನುಮಂತನಂತಹ ಬ್ರಹ್ಮಚಾರಿ ದೇವರ ಗುಡಿಯೊಳಗೆ ಗಂಡು ಹೆಣ್ಣಿನ ಪ್ರೇಮದಾಟವೂ ಕಾಣುತ್ತದೆ. ಪಂಕ್ಚರ್ ಆದ ಸೈಕಲ್ಲು, ಕರಗಿ ಹೋದ ಕುಲ್ಫಿ ಅವನನ್ನು ಅಣುಕಿಸುವಂತೆ ಕಾಣುತ್ತದೆಯಾದರೂ ಜೀವನದ ಬಹುದೊಡ್ಡ ಪಾಠವಾದ ಮಾನವೀಯತೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಮನೆಯಿಂದ ಹೊರಹಾಕಿಸಿಕೊಂಡ ಮುದುಕಿಗೆ ಕರಗಿದ ಕುಲ್ಫಿ ತುಂಡುಗಳನ್ನು ನೀಡುತ್ತಾನೆ, ಅಪ್ಪನಿಂದ ಹೊಡೆತ ತಿಂದ ಪುಟ್ಟ ಹುಡುಗ ಬೇಡ ಎನ್ನುತ್ತಲೇ ಇವನು ನೀಡಿದ ಕರಗಿದ ಕುಲ್ಫಿ ತಿಂದು ಖುಷಿಗೊಳ್ಳುತ್ತಾನೆ. ಮಲತಾಯಿಯ ಬಳಿ ಬೇಡಿದರೂ ಸಿಗದ ಕುಲ್ಫಿ ತಿಂದು ಅವನದ್ದೇ ವಯಸ್ಸಿನ ಹುಡುಗಿಯ ತುಟಿಗೆ ರಂಗು ಮೆತ್ತಿಕೊಳ್ಳುತ್ತದೆ. ಬಿಂಕದ ನಗೆಯಿಂದ ತನ್ನನ್ನೇ ಹಿಂಬಾಲಿಸುತ್ತಿರುವ ಅವಳ ಕಣ್ಣು ಹಾಗೂ ಕೆಂಪು ತುಟಿಗಳಲ್ಲಿನ ನಗೆಯನ್ನು ಗ್ರಹಿಸುತ್ತ ಅಲ್ಲಿಂದ ಹೊರಡುತ್ತಾನೆ. ಹದಿಮೂರು- ಹದಿನಾಲ್ಕನೇ ವರ್ಷಕ್ಕೆ ಸಹಜವಾದ ಭಾವವೊಂದು ಇಲ್ಲಿ ನವಿರಾಗಿ ನಿರೂಪಿತವಾಗಿದೆ. ಆದರೆ ಕುಲ್ಫಿ ಮಾರಾಟ ಮಾಡುವ ಅಹ್ಮದ್ ಮುತ್ಯಾ ಮಾತ್ರ ಕರಗಿದ ಕುಲ್ಫಿ, ಪಂಕ್ಚರ್ ಆದ ಸೈಕಲ್ಲಿನ ಕಥೆಯ ಕಡೆಗೆ ಗಮನ ನೀಡದೆ ಅಂದಿನ ಲೆಕ್ಕ ಚುಕ್ತಾ ಮಾಡಿಯೇ ಮನೆಗೆ ಹೋಗಲು ಹೇಳುತ್ತಾನೆ. ಆದರೆ ಅದೇ ದಾರಿಯಿಂದ ಬಂದ ಅವನ ಟ್ಯೂಷನ್ ಸರ್ ಇವನನ್ನು ನೋಡಿ, ಇವನ ಸ್ವಾವಲಂಭನೆಗೆ ಖುಷಿಪಟ್ಟು ಹಣ ಪಡೆಯದೇ ಟ್ಯೂಷನ್‌ಗೆ ಸೇರಿಸಿಕೊಳ್ಳುತ್ತಾರೆ.
ಪರೀಕ್ಷೆ ಕಟ್ಟಲು ಕೊನೆಯ ದಿನವೆಂದು ಗೊತ್ತಿದ್ದೂ ಮನೆಯಲ್ಲಿ ಬಿಂಗ್ರಿ ಖರೀದಿಸಲು ಹಠ ಮಾಡುತ್ತಿದ್ದ ತಮ್ಮನನ್ನು ನೆನಪಿಸಿಕೊಂಡು ಬುಗುರಿಯನ್ನು ಕೊಂಡುಕೊಂಡ ಹುಡುಗನೊಬ್ಬನ ಕಥೆ 'ಬಿಂಗ್ರಿ' ಕತೆಯಲ್ಲಿ ಮನಮುಟ್ಟುವಂತೆ ನಿರೂಪಿತವಾಗಿದೆ. ಹೊಲದಲ್ಲಿ ಎಲೆ ಬಿಡಿಸುವ ಕೆಲಸ ಮಾಡಿ ಪರೀಕ್ಷೆಯ ಫೀಸು ತುಂಬಬೇಕೆಂದುಕೊಂಡ. ಆದರೆ ಅಲ್ಲೂ ಹಣ ಸಕಾಲಕ್ಕೆ ಸಿಗದೆ ಅಪ್ಪನನ್ನು ಶಾಲೆಗೆ ಕರೆಯಿಸಲಾಯಿತು. ಮಗನ ಪರೀಕ್ಷೆಯ ಫೀಸ್‌ಗೆಂದು ಕೊಟ್ಟ ಹಣ ತುಂಬದಿರುವುದು, ಕಳೆದು ಹೋಯ್ತೆಂದು ಹೇಳಿದ್ದೂ, ತೋಟದ ಕೆಲಸದ ಹಣ ತಂದುಕೊಡುವುದೂ ಎಲ್ಲವೂ ಅಪ್ಪನನ್ನೂ ಚಿಂತೆಗೀಡುಮಾಡುತ್ತದೆ. ಅಂತೂ ಪರೀಕ್ಷೆಗೆಂದು ಮಗ ತರಗತಿಯ ಒಳಗೆ ಹೋದ ನಂತರ ಬಂದ ಅಪ್ಪ ಮಗನ ಪಾಠಿಚೀಲ ಸುರುವಿದರೆ ಅದರಲ್ಲಿ ಚಂದದ ಬಿಂಗ್ರಿಯೊಂದು ಕೆಲಗೆ ಬಿದ್ದು ಸುತ್ತಲಾರಂಭಿಸುತ್ತದೆ. ಅದೆಷ್ಟೋ ಸಲ ಬುಗುರಿಗಾಗಿ ಹಠ ಮಾಡಿ ಅವ್ವನಿಂದ ಹೊಡೆಸಿಕೊಂಡಿದ ತಮ್ಮ ಕೃಷ್ಣ ಬಿಂಗ್ರಿ ಎತ್ತಿಕೊಂಡು ಆಡಲಾರಂಭಿಸಿದರೆ ಮಗ ತಮ್ಮನಿಗಾಗಿ ತಾನು ಹೊಡೆತ ತಿಂದು ಕೂಲಿ ಮಾಡಿದ ನೆನಪಿನಲ್ಲಿ ಅಪ್ಪ ಕೊರಗುತ್ತಾನೆ. ಈ ಕಥೆಯು ಮಕ್ಕಳ ಮನಸ್ಸನ್ನು ಸೂಕ್ಷ್ಮವಾಗಿ ವಿವರಿಸುತ್ತದೆ. ಮನೆಯಲ್ಲಿ ಬಿಂಗ್ರಿಗಾಗಿ ಅಳುತ್ತ ತಾಯಿಯಿಂದ ಹೊಡೆತ ತಿನ್ನುವ ತಮ್ಮಗಾಗಿ ತನ್ನ ಪರೀಕ್ಷೆಯ ಫೀಸನ್ನೇ ಕೊಟ್ಟ ಅಣ್ಣನ ಪಾತ್ರ ಖಂಡಿತವಾಗಿ ಹರೆಯದ ಮನಸ್ಸನ್ನು ಕಲಕುವುದರಲ್ಲಿ ಸಂಶಯವಿಲ್ಲ.
ಜುಗ್ನು ಎಂದರೆ ಮಿಂಚುಹುಳು. ಆದರೆ ಇಲ್ಲಿ ಜುಗ್ನು ಎನ್ನುವ ಯಾವುದಕ್ಕೂ ಬಗ್ಗದೇ ತನ್ನ ಹಠದಲ್ಲಿ, ತುಂಟತನದಲ್ಲಿ ಎಲ್ಲವನ್ನೂ ಹಾಳುಗೆಡವುತ್ತಿದ್ದ ರಿಮಾಂಡ್‌ಹೋಮ್ ಸೇರಿದ್ದ ಬಾಲಾಪರಾಧಿಯೊಬ್ಬನನ್ನು ಒಳ್ಳೆಯವನನ್ನಾಗಿ ಪರಿವರ್ತಿಸಿದ ಕಥೆಯನ್ನು ಹೇಳುತ್ತದೆ. ಕರುಣಾಲಯದ ರಾಮಾನಂದ ತೀರ್ಥರು ಯಾವುದಕ್ಕೂ ಬಗ್ಗದ, ಶಿಸ್ತಿನ ಬೋಧನೆ ಕೇಳಿದ ದಿನವೇ ವಸ್ತುಗಳನ್ನು ಚೆಲಲ್ಲಾಪಿಲ್ಲಿಯಾಗಿಸುವ, ಶಾಂತಿಯ ಪಾಠ ನಡೆಯುವಾಗ ಕಿರುಚಿ ಉಳಿದ ಹುಡುಗರಿಗೆ ಕೆಟ್ಟ ಭಾಷೆಯಲ್ಲಿ ಬೈಯ್ಯುವ, ಕ್ರೀಡೆಗಳಲ್ಲಿ ಅಡ್ಡಗಾಲಾಗುವ, ಬಾಲ್ಯದಿಂದಲೇ ಹೆಣ್ಣು ಹೆಂಡದ ರುಚಿ ಹತ್ತಿ ಹುಂಬನಂತಾದ ಜುಗ್ನುವನ್ನು ಬದಲಾಯಿಸಿದ್ದು ಕೇವಲ ಪ್ರೀತಿಯಿಂದ. ಎಲ್ಲವನ್ನೂ ಹಾಳುಗೆಡವುತ್ತಿದ್ದ ಜುಗ್ನುವಿಗೆ ಜ್ವರ ಬಂದಾಗ ಆಶ್ರಮದವರೆಲ್ಲ ಅವನಿಗೆ ಯಾಶಕ್ತಿ ಸೇವೆ ಮಾಡಿ ಗುಣವಾಗಲು ಸಹಕರಿಸಿದರು. ತಾನಷ್ಟೇ ಕಷ್ಟ ಕೊಟ್ಟರೂ ಸಹಿಸಿಕೊಂಡು ತನ್ನ ಆರೈಕೆ ಮಾಡಿದವರನ್ನು ಕಂಡು ಜುಗ್ನು ಬದಲಾದ. ಇಲ್ಲಿಯೂ ಕೂಡ ಕಥೆಗಾರರು ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಲ್ಲ ಪಾಠವನ್ನು ಹೇಳಿದ್ದಾರೆ. ಎಲ್ಲಿಯೂ ಬೋಧನೆ ಎಂದೆನಿಸದ ಕಥೆ ಉತ್ತಮ ಮನಃಪರಿವರ್ತಕ.
ವಿಕ್ಕಿ ಮತ್ತು ರಾಬಿನ್ ಹುಡ್ ಒಂದು ವಿಶಿಷ್ಟವಾದ ಕಥೆ. ಹಳ್ಳಿಯಿಂದ ಪೇಟೆಗೆ ಕಲಿಯಲೆಂದು ಬಂದ ವಿಕ್ಕಿ ತನ್ನ ಚಿಕ್ಕಪ್ಪನ ಮನೆಯಲ್ಲಿರುತ್ತಾನೆ. ಆದರೆ ಆತ ಬಂದಿರುವುದು ಚಿಕ್ಕಮ್ಮನಿಗೆ ಎಳ್ಳಷ್ಟೂ ಇಷ್ಟವಿಲ್ಲ. ಹಳ್ಳಿಯಿಂದ ಬಂದವನು ಎಂಬ ಕಾರಣಕ್ಕೆ ಚಿಕ್ಕಮ್ಮನಿಗೆ ಆತನ ಬಗ್ಗೆ ಅದೆಷ್ಟು ತಾತ್ಸಾರ ಇತ್ತೋ ಅಷ್ಟೇ ತಾತ್ಸಾರ ಅವನ ತರಗತಿಯ ಮಕ್ಕಳಿಗೂ ಇತ್ತು. ಆದರೆ ವಿಕ್ಕಿಯ ಅತ್ಯುತ್ತಮ ಗೆಳೆಯ ರಾಬಿನ ಮಾತ್ರ ವಿಕ್ಕಿಯನ್ನು ಎಲ್ಲ ಕಷ್ಟದಿಂದ ಪಾರು ಮಾಡಿ ಅವನು ಪುನಃ ಹಳ್ಳಿ ಸೇರುವಂತೆ ಮಾಡುತ್ತಾನೆ.

ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಬಹಳಷ್ಟು ಮಕ್ಕಳಲ್ಲಿ ಇರುತ್ತದೆ. ಕೆಲವರು ಮೂರ್‍ನಾಲ್ಕು ವರ್ಷಕ್ಕೇ ಹಾಸಿಗೆ ಒದ್ದೆ ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಇನ್ನು ಕೆಲವರು ಹೈಸ್ಕೂಲಿಗೆ ಬಂದರೂ ಒದ್ದೆ ಮಾಡಿಕೊಳ್ಳುತ್ತಾರೆ. ಮನಃಶಾಸ್ತ್ರದ ಪ್ರಕಾರ ಯಾರು ಅಭದ್ರತೆಯಿಂದ ತೊಳಲುತ್ತಾರೋ ಅವರು ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಹೆಚ್ಚು. ಮನದಲ್ಲಿನ ಆತಂಕ ಇದಕ್ಕೆ ಕಾರಣವಾಗಬಹುದು. ಆದರೆ ಅದಕ್ಕೆ ಕಾರಣವನ್ನು ಹುಡುಕಲು ಹೋಗದೇ ಹಿರಿಯರು ನೀಡುವ ಶಿಕ್ಷೆ ಮಾತ್ರ ಕೆಲವೊಮ್ಮೆ ಭೀಕರವಾಗಿರುತ್ತದೆ. ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡರೆ ಶಾಲೆಗೆ ಬಂದು ಹೇಳುತ್ತೇನೆ ಎಂದು ತಂದೆ ಹೆದರಿಸಿದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳೂ ಇದ್ದಾರೆ. ಇನ್ನು ಕೆಲವೆಡೆ ವೈದ್ಯರ ಬಳಿ ಕರೆದುಕೊಂಡು ಹೋಗದೇ ಮಾಟ ಮಂತ್ರ ಮಾಡಿಸಿ ತಾಯತ ಕಟ್ಟಿಸುತ್ತಾರೆ. ಇನ್ನು ಕೆಲವು ಹಿರಿಯರು ಕಾಲು ತೊಡೆಯ ಮೇಲೆ ಕಾದ ಕಬ್ಬಿಣದ ಪಟ್ಟಿಯಿಂದ ಬರೆ ಹಾಕಿ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಚಿಕ್ಕಪ್ಪನ ಮನೆಯಲ್ಲಿರುವ ವಿಕ್ಕಿ ಹಾಸಿಗೆ ಒದ್ದೆ ಮಾಡಿಕೊಂಡಿದ್ದರಿಂದ ಚಿಕ್ಕಮ್ಮ ತೊಡೆಗೆ ಬರೆ ಎಳೆದು ನಡೆಯಲಾಗದಂತೆ ಮಾಡಿಬಿಟ್ಟಿದ್ದಳು. ಅದೇ ಶಾಲೆಗೆ ಹೋಗುವ ತನ್ನ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡಿದ್ದರೂ ವಿಕ್ಕಿ ಮಾತ್ರ ನಡೆದೇ ಬರಬೇಕಿತ್ತು. ಅವನ ಧಾರುಣ ಕತೆ ಕೇಳಿದ ರಾಬಿನ್ ಜಗಳ ತೆಗೆದು ಶಾಲೆಯಿಂದ ಹೊರಹಾಕಿಸುವಂತೆ ಮಾಡುತ್ತಾನೆ. ಶಾಲೆಯ ಮುಖ್ಯೋಪಾಧ್ಯಾಯರ ಬಳಿ ಮಾತನಾಡಿ ಪುನಃ ಶಾಲೆ ಸೇರಿಸಿಕೊಳ್ಳದಂತೆ ಪರಿಸ್ಥಿತಿ ವಿವರಿಸುತ್ತಾನೆ. ಕಥೆಯಲ್ಲಿನ ವಿವರಣೆಗಳು ಮನಮುಟ್ಟುವಂತಿದೆ. ಇಲ್ಲಿ ಬರುವ ಚಿಕ್ಕಪ್ಪ ಚಿಕ್ಕಮ್ಮರ ಪ್ರೇಮ ಪ್ರಸಂಗಗಳು, ಅಶ್ಲೀಲ ಚಲನಚಿತ್ರದ ಪೋಸ್ಟರ್‌ಗಳನ್ನು ನೋಡುತ್ತ ನಿಲ್ಲುವುದು ಎಲ್ಲವೂ ಆ ವಯಸ್ಸಿನ ಸಹಜವಾದ ಭಾವಗಳು. ಕಥೆಯಲ್ಲಿ ಎಲ್ಲೂ ಈ ಭಾವಗಳು ಮಕ್ಕಳ ಮಟ್ಟ ಮೀರಿ ಮುಂದೆ ಹೋಗದೆ ಅವರ ಕುತೂಹಲವನ್ನಷ್ಟೇ ಹೇಳಿ ಸಂಯಮವನ್ನು ತೋರುತ್ತದೆ. ಹೀಗಾಗಿಯೇ ನಾನು ಮೊದಲೇ ಹೇಳಿದಂತೆ ಕಥೆ ಮಕ್ಕಳ ಕಥೆಯಲ್ಲ. ಆಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ ನವಯುವಕರ ಕಥೆ, ಅವರ ವಯೋ ಸಹಜ ಕುತೂಹಲ ಇಲ್ಲಿ ಸಹಜವಾಗಿಯೇ ನಿರೂಪಿತವಾಗಿದೆ.
ಸೂರ್ಯ ಶಿಕಾರಿ ಕತೆಯಲ್ಲಿ ರಘು ಪುನಃ ಅಜ್ಜಿಯ ಮನೆಗೆ ಹೋಗಿದ್ದಾನೆ. ಅಲ್ಲಿ ಅಜ್ಜಿಗೆ ಕಥೆ ಹೇಳೆಂದು ದಂಬಾಲು ಬೀಳುತ್ತಾನೆ. ಅಜ್ಜಿ ರಘು ಎಂಬ ಹೆಸರಿನ ಹುಡುಗನದ್ದೇ ಕತೆ ಹೇಳುತ್ತಾಳೆ. ಕಥೆಯಲ್ಲಿ ಸುಂಟರಗಾಳಿಯೊಂದು ಸೂರ್ಯನನ್ನು ಮರೆಮಾಡಿ ಬಿಟ್ಟಿತ್ತು. ಅದನ್ನು ಬಿಡಿಸಿಕೊಂಡು ಬರಲು ಕಥೆಯೊಳಗಿನ ರಘು ಸೂರ್ಯನ ಕುದುರೆಯೊಂದಿಗೆ ಹೊರಡುತ್ತಾನೆ. ಏಳು ದಿನ ಏಳು ರಾತ್ರಿಯ ಪಯಣದ ನಂತರ ರೈತನೊಬ್ಬ ಖುರುಪು ಕೊಟ್ಟು ತುರುಬಿನೊಳಗೆ ತತ್ವ ಇದೆ ಎನ್ನುತ್ತಾನೆ. ನಂತರ ಮುಂದೆ ರಾಕ್ಷಸರೊಂದಿಗೆ ಅದೇ ಖುರುಪಿಂದ ಹೊರಾಡಿ, ಗಿಡ್ಡಗಿಡ್ಡ ಮನುಷ್ಯರ ಬಲೆಯೊಳಗಿಂದ ಬಿಡಿಸಿಕೊಂಡು ಅವ್ವ ಕೊಟ್ಟ ಕೊನೆಯ ರೊಟ್ಟಿಯನ್ನು ಸಮುದ್ರದೊಳಗೆ ಹಾಕಿ ಮೀನು ತೋರಿಸಿದ ದಾರಿಯಲ್ಲಿ ನಡೆದು ರಾಕ್ಷಸರ ತುರುಬು ಕೊಯ್ದು, ಪಂಜರದೊಳಗಿರುವ ಸೂರ್‍ಯನನ್ನು ಬಿಡಿಸಿ ತರುವ ಫ್ಯಾಂಟಿಸಿ ಕಥೆ ಇದು.
ರೈಟ್ ಬಂಡಿ ಕೂಡ ಇಂತಹುದ್ದೇ ಕಲ್ಪನಾಲೋಕದ ಕಥೆ. ಊರೆಲ್ಲ ಬರಗಾಲ ಬಿದ್ದುಹೋಗಿರುತ್ತದೆ. ರಘು ಬರಗಾಲಕ್ಕೇನು ಪರಿಹಾರ ಎಂದು ಯೋಚಿಸುವಾಗ ಮರದ ಬೊಡ್ಡೆಯೊಂದು ತನ್ನ ಮರದ ಕಟ್ಟಿಗೆಯೊಂದನ್ನು ತೆಗೆದುಕೊಂಡು ಹೋಗಿ ಚಂದದ ಬಂಡಿಯೊಂದನ್ನು ಮಾಡಲು ಹೇಳುತ್ತದೆ. ಅದರೊಳಗೆ ಕುಳಿತು ರೈಟ್ ಬಂಡಿ ಎಂದು ಮುತ್ತಿನ ಮನೆಯೊಳಗೆ ಹೋಗಿ ಅಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿ ಮೊಳಕೆಯೊಡೆದ ಬೀಜಗಳನ್ನು ತರುತ್ತಾನೆ. ಅಲ್ಲಿಂದ ಮೂರು ಗುಡ್ಡದಾಚೆ ಬತ್ತಲಾರದ ಕೊಳಕ್ಕೆ ಹೋಗಿ ಅಲ್ಲಿಯೂ ಕೇಳಿದ ಪ್ರಶ್ನೆಗೆ ಉತ್ತರಿಸಿ ಖಾಲಿ ಆಗಲಾರದ ಬಿಂದಿಗೆಯಲ್ಲಿ ನೀರು ತರುತ್ತಾನೆ. ಕಳ್ಳರನ್ನು ಹಿಡಿದುಕೊಂಡ ಬಂಡಿ, ಮರಗಳ್ಳರನ್ನೂ ಹಿಡಿದುಕೊಂಡು ಅವರಿಂದಲೇ ಗಿಡ ನೆಡುವಂತೆ ಮಾಡುತ್ತದೆ. ನಂತರ ಮಾರನೆಯ ದಿನ ಬರಪೂರ ಮಳೆ ಸುರಿಯುತ್ತದೆ. ಇದೂ ಕೂಡ ಎಷ್ಟು ಚಂದದ ಪರಿಸರದ ಪಾಠವನ್ನು ಹೇಳುವಂತಹ ಕಥೆ. ಇಂತಹುದ್ದೊಂದು ಕಲ್ಪನೆಯೇ ಅದೆಷ್ಟು ಸುಂದರ.
ಚಂದಮಾಮ ಓದುವ ಕಾಲದಲ್ಲಿ ಓದಿದ ಯಕ್ಷಿಣಿಯರ, ಏಳು ಸುತ್ತಿನ ಕೋಟೆಯ ರಾಕ್ಷಸರ ಕಥೆಗಳನ್ನು ನೆನಪಿಸುವಂತಿದೆ. ಪ್ಯಾಂಟಿಸಿ ಕಥೆಗಳಿಗೆ ಅವುಗಳದ್ದೇ ಆದ ವೈಶಿಷ್ಟ್ಯಗಳಿವೆ. ಹರೆಯದ ಹೈಸ್ಕೂಲು ಮಕ್ಕಳಿಗೆ ಇಷ್ಟವಾಗುವ ಇಂತಹ ಫ್ಯಾಂಟಿಸಿ ಕತೆಗಳು ಪಾಶ್ಚಾತ್ಯ ಸಾಹಿತ್ಯದಲ್ಲಿ ಪುಂಖಾನುಪುಂಖವಾಗಿ ಕಾಣಿಸಿಕೊಳ್ಳುತ್ತವೆ. ಹ್ಯಾರಿ ಪಾಟರ್‌ನಂತಹ ಇಂತಹ ಫ್ಯಾಂಟಿಸಿ ಕತೆಗಳು ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿ ದಾಖಲೆ ಸೃಷ್ಟಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ನಮ್ಮ ಚಂದಮಾಮದಲ್ಲೂ ವಿಕ್ರಮ ಬೇತಾಳನ ಕಥೆಗಳು ಇಂತಹುದ್ದೇ ಕಥಾಹಂದರವನ್ನೇ ಹೊಂದಿದ್ದವು. ನಮ್ಮ ಅಜ್ಜ ಅಜ್ಜಿಯರು ಹೇಳುವ ಯಕ್ಷಿಣಿಯರು, ಮುದಿ ಮಂತ್ರವಾದಿಗಳ ಕಥೆಗಳಲ್ಲಿ ಇಂತಹುದ್ದೇ ಪ್ಯಾಂಟಸಿಯನ್ನು ಕಾಣಬಹುದು. ಕಥೆಗಾರ ಗಿರೀಶ ತಮ್ಮ ಕಥೆಗಳಲ್ಲಿ ಫ್ಯಾಂಟಸಿಯನ್ನು ಅತ್ಯಂತ ಸಹಜವಾಗಿ ಬಳಸಿ ಗೆದ್ದಿದ್ದಾರೆ.
ಇವತ್ತಿಗೂ ನಾವು ಹದಿಹರೆಯದವರಿಗಾಗಿ ಸಾಹಿತ್ಯವನ್ನು ರಚಿಸಲು ಹಿಂದೇಟು ಹಾಕುತ್ತಿದ್ದೇವೆ. ಉಳಿದ ಭಾಷೆಗಳ ಸಾಹಿತ್ಯಲೋಕ ಹರೆಯದ ಹೊಸ್ತಿಲಿನಲ್ಲಿರುವವರಿಗಾಗಿಯೇ ಪ್ರತ್ಯೇಕವಾಗಿ ಬರೆದಂತೆ ನಾವು ಅದನ್ನು ಮುಕ್ತವಾಗಿ ಬರೆಯುತ್ತಿಲ್ಲ. ಹದಿಹರೆಯದ ಸಾಹಿತ್ಯವೆಂದರೆ ಅದು ಪೀತ ಸಾಹಿತ್ಯ ಎಂಬ ಹೆಸರನ್ನು ಪಡೆದುಕೊಂಡುಬಿಟ್ಟಿದೆ. ಅದರ ಬದಲಾಗಿ ಯೌವ್ವನದ ಬಾಗಿಲಲ್ಲಿ ನಿಂತಿರುವವರಿಗಾಗಿ ಉತ್ತಮ ನೀತಿಯನ್ನು ಬೋಧಿಸಿಯೂ ಬೋಧಿಸದಂತ, ಮೌಲ್ಯಗಳನ್ನು ಹೇಳದಂತೆಯೂ ಹೇಳುವ, ವಯೋಸಹಜ ಭಾವನೆಗಳನ್ನು, ಕಾಮನೆಗಳನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳಬಹುದು ಎಂಬುದನ್ನು ಸೂಕ್ಷ್ಮವಾಗಿ ಹೇಳುವಂತಹ ಸಾಹಿತ್ಯವನ್ನು ರಚಿಸಲೇ ಬೇಕಾದ ಅನಿವಾರ್ಯತೆಯಿದೆ. ಕನ್ನಡ ಸಾಹಿತ್ಯ ಈ ನಿಟ್ಟಿನಲ್ಲಿ ದೃಷ್ಟಿಹರಿಸುವುದು ಇಂದಿನ ಅತ್ಯಗತ್ಯ.
shreedevi keremane