ಸ್ತ್ರೀಯರ ವೈಯಕ್ತಿಕ ಸ್ವಾತಂತ್ರ್ಯದ ಕನ್ನಡಿ ಎಮಿಲಿ ಬ್ರಾಂಟೆ
ವುದರಿಂಗ್ ಹೈಟ್ಸ್ ಎಂಬ ತನ್ನ ಏಕೈಕ ಕಾದಂಬರಿಯ ಮೂಲಕ ಇಂಗ್ಲೀಷ್ ಸಾಹಿತ್ಯ ಪ್ರಪಂಚದ ಗಮನವನ್ನು ತನ್ನೆಡೆಗೆ ಸೆಳೆದುಕೊಂಡ ಎಮಿಲಿ ಬ್ರಾಂಟೆ ಅತಿ ಹೆಚ್ಚು ಬರವಣಿಗೆಯನ್ನು ಮಾಡಿದವರಲ್ಲ. ಆದರೆ ಬರೆದ ಕೆಲವೆ ಕವನಗಳು ಹಾಗೂ ಕಾದಂಬರಿಯ ಮೂಲಕ ಸಾಹಿತ್ಯ ಪ್ರೇಮಿಗಳ ಹೃದಯದಲ್ಲಿ ನೆಲೆನಿಂತವಳು.
೩೦ ಜುಲೈ ೧೮೧೮ರಲ್ಲಿ ಯಾರ್ಕ್‌ಷೈರ್‌ನ ಥಾರ್ನ್‌ಟನ್‌ನಲ್ಲಿ ಜನಿಸಿದ ಎಮಿಲಿಯ ತಂದೆ ರೆವರೆಂಡ್ ಪ್ಯಾಟ್ರಿಕ್ ಬ್ರಾಂಟೆ ಹಾಗೂ ತಾಯಿ ಮಾರಿಯಾ ಬ್ರಾನ್‌ವೆಲ್ ಬ್ರಾಂಟೆ. ಈ ದಂಪತಿಗಳ ಆರು ಜನ ಮಕ್ಕಳಲ್ಲಿ ಇವಳು ಐದನೆಯವಳು. ತಂದೆ ತಾಯಿ ಇಬ್ಬರೂ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದವರು. ಉದ್ಯೋಗದ ನಿಮಿತ್ತ ಹಾವರ್ತ್‌ಗೆ ಸ್ಥಳಾಂತರಗೊಂಡಿದ್ದರಿಂದ ಬ್ರಾಂಟೆ ಕುಟುಂಬದ ಮಕ್ಕಳಿಗೆ ಅಲ್ಲಿ ಸಾಹಿತ್ಯಿಕ ವಾತಾವರಣ ದೊರಕಿದ್ದರಿಂದ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅನುಕೂಲವಾಯಿತಾದರೂ ಎಮಿಲಿ ಕೇವಲ ಮೂರು ವರ್ಷದವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಳ್ಳಬೇಕಾಗಿ ಬಂದುದು ಅವಳ ಪಾಲಿಗೆ ಎಂದೂ ತುಂಬಿಕೊಡಲಾಗದ ನಷ್ಟವೇ ಆಗಿತ್ತು. ತಾಯಿ ತೀರಿಕೊಂಡ ಆ ಸಂದರ್ಭದಲ್ಲಿ ಎಮಿಲಿಯ ಸಹೋದರ ಸಹೋದರಿಯರೆಲ್ಲ ಎಂಟು ವರ್ಷದ ಒಳಗಿನ ಮಕ್ಕಳಾಗಿದ್ದರು. ನಂತರ ಅಮ್ಮನ ಸಹೋದರಿ ಅಂದರೆ ಚಿಕ್ಕಮ್ಮ ಎಲಿಜಬೆತ್ ಈ ಮಕ್ಕಳನ್ನು ನೋಡಿಕೊಳ್ಳತೊಡಗಿದರು.
ಅಕ್ಕಂದಿರಾದ ಮರಿಯಾ, ಎಲಿಜಬೆತ್ ಹಾಗೂ ಷಾರ್ಲೆಟ್‌ರನ್ನು ಕೋವನ್ ಬ್ರಿಡ್ಜ್‌ನಲ್ಲಿರುವ ಫಾದ್ರಿ ಡಾಟರ್ಸ್ ಎಂಬ ಶಾಲೆಗೆ ಕಳುಹಿಸಲಾಗಿತ್ತು. ಎರಡು ವರ್ಷಗಳ ನಂತರ ಎಮಿಲಿಯನ್ನೂ ಅದೇ ಶಾಲೆಗೆ ಸೇರಿಸಲಾಯಿತು. ಆದರೆ ಟೈಫಾಯಿಡ್ ಇಡೀ ಶಾಲೆಯನ್ನು ಆಕ್ರಮಿಸಿ ಹಿರಿಯ ಇಬ್ಬರು ಅಕ್ಕಂದಿರನ್ನು ಎಮಿಲಿ ಕಳೆದುಕೊಳ್ಳುವಂತಾಯಿತು. ಉಳಿದಿಬ್ಬರು ಮಕ್ಕಳನ್ನು ತಂದೆ ತಕ್ಷಣ ಆ ಶಾಲೆಯಿಂದ ಮನೆಗೆ ಕರೆದುಕೊಂಡು ಬಂದರಾದರೂ ಆ ಶಾಲೆಯಲ್ಲಿ ಅನುಭವಿಸಿದ್ದ ನಿಂದನೆ ಅವಮಾನಗಳು ಪುಟ್ಟ ಎಮಿಲಿಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿತು. ಅದರ ನಂತರ ತಂದೆ ಪ್ಯಾಟ್ರಿಕ್ ತನ್ನ ಉಳಿದ ಮೂವರ ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿಗೆ ಮನೆಯಲ್ಲಿಯೇ ಶಿಕ್ಷಣ ನೀಡಲಾರಂಭಿಸಿದರು. ಹೀಗೆ ಪೂರ್ತಿಯಾಗಿ ಮನೆಯವಾತಾವರಣಕ್ಕೆ ಅಂಟಿಕೊಂಡ ಎಮಿಲಿ ತುಂಬ ನಾಚಿಕೆಯ ಸ್ವಭಾವದವಳಾಗಿದ್ದರೂ ತನ್ನ ಸಹೋದರಿಯರು ಹಾಗೂ ಸಹೋದರನ ಬಳಿ ತೀರಾ ಆಪ್ತವಾಗಿದ್ದಳು. ಸದಾ ಬೀದಿ ನಾಯಿಗಳನ್ನು ಪಾಲಿಸುತ್ತ ಪ್ರಾಣಿಪ್ರೇಮಿ ಎಂಬ ಅಡ್ಡ ಹೆಸರಿನಿಂದ ಕರೆಯಿಸಿಕೊಳ್ಳುತ್ತ ಖುಷಿಯಾಗಿದ್ದಳು. ಔಪಚಾರಿಕ ಶಿಕ್ಷಣವಿಲ್ಲದಿದ್ದಾಗಿಯೂ ಎಮಿಲಿ ಹಾಗೂ ಅವಳ ಒಡಹುಟ್ಟಿದವರು ವಾಲ್ಟರ್ ಸ್ಕಾಟ್, ಬೈರನ್, ಶೆಲ್ಲಿ ಬ್ಲ್ಯಾಕ್ವುಡ್ ಮುಂತಾದ ಒಳ್ಳೆಯ ಸಾಹಿತಿಗಳ ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ತರಿಸಿಕೊಂಡು ಓದುತ್ತಿದ್ದರು.
ಎಮಿಲಿಯ ಸಾಹಿತ್ಯ ಪಯಣವು ಅವಳ ಸಹೋದರ ಬ್ರಾನ್‌ವೆಲ್‌ಗೆ ಉಡುಗೊರೆಯಾಗಿ ಬಂದ ಸೈನಿಕರ ಗೊಂಬೆಗಳಿರುವ ಪೆಟ್ಟಿಗೆಗಳೊಂದಿಗೆ ಪ್ರಾರಂಭವಾಯಿತು. ಸಾಕಷ್ಟು ಕಲ್ಪನೆಗಳಿಂದ ಕೂಡಿದ ಗೊಂಡಾಲ್ ಕಥೆಗಳನ್ನು ಎಮಿಲಿ ಹಾಗೂ ಅವಳ ಸಹೋದರಿ ಆನ್ನಿ ಸೇರಿ ಬರೆಯಲು ಪ್ರಾರಂಭಿಸಿದರು. ಆದರೆ ಆ ಸರಣಿಯ ಕಥೆಗಳು ಹಾಗೂ ಕವನಗಳನ್ನು ಜೋಪಾನವಾಗಿಟ್ಟುಕೊಳ್ಳದೆ ಹೋಗಿದ್ದರಿಂದ ಅವು ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಲಭ್ಯವಿಲ್ಲ.
ಒಂದು ಶಾಲೆಯನ್ನು ಪ್ರಾರಂಭಿಸುವಷ್ಟು ಶಿಕ್ಷಣವನ್ನಾದರೂ ಪಡೆಯಬೇಕೆಂದು ಯೋಚಿಸಿದ್ದ ಎಮಿಲಿ ತನ್ನ ಹದಿನೇಳನೆ ವಯಸ್ಸಿನಲ್ಲಿ ತನ್ನ ಅಕ್ಕ ಷರ್ಲೆಟ್ ಶಿಕ್ಷಕಿಯಾಗಿದ್ದ ಶಾಲೆಗೆ ಸೇರಿದ್ದಳಾದರೂ ಆಕೆಗೆ ಅಲ್ಲಿ ಉಳಿಯಲಾಗಲಿಲ್ಲ. 'ಅತಿಯಾದ ಸ್ವಾತಂತ್ರ್ಯಪ್ರೇಮಿಯಾಗಿದ್ದ ಎಮಿಲಿಗೆ ಶಾಲೆಯ ಕಟ್ಟುನಿಟ್ಟಾದ ದಿನಚರಿಯಿಂದ ಉಸಿರುಕಟ್ಟಿದಂತಾಯ್ತು' ಎಂದು ಅಕ್ಕ ಷಾರ್ಲೆಟ್ ಹೇಳುತ್ತಾಳೆ. ತನ್ನ ಇಪ್ಪತ್ತನೆಯ ವಯಸ್ಸಿಗೆ ಶಾಲೆಯೊಂದನ್ನು ತೆರೆದಳಾದರೂ ಹದಿನೇಳು ತಾಸುಗಳ ಅತಿಯಾದ ಕೆಲಸದ ಒತ್ತಡದಿಂದ ಅದನ್ನು ಮುಚ್ಚಬೇಕಾಯಿತು. ನಂತರ ಬೆಲ್ಜಿಯಮ್‌ನ ಬ್ರುಸ್ಸೆಲ್ಸ್‌ಗೆ ಹೋದ ಅಕ್ಕತಂಗಿಯರು ಅಲ್ಲಿ ಹೆಣ್ಣುಮಕ್ಕಳ ಶಾಲೆಯೊಂದಕ್ಕೆ ಸೇರಿಕೊಂಡು ಫ್ರೆಂಚ್ ಹಾಗೂ ಜರ್ಮನ್ ಭಾಷೆಯನ್ನು ಅತ್ಯಂತ ಶೃದ್ಧೆಯಿಂದ ಕಲಿತುಕೊಂಡರು. ಅದೆ ಸಮಯದಲ್ಲಿ ಎಮಿಲಿ ಫ್ರೆಂಚ್ ಭಾಷೆಯಲ್ಲಿ ರಚಿಸಿದ ಏಳು ಲೇಖನಗಳು ದೊರಕಿವೆ.
ಚಿಕ್ಕಮ್ಮನ ನಿಧನದಿಂದಾಗಿ ಹಾವರ್ಥಗೆ ಹಿಂದಿರುಗಿದ ಎಮಿಲಿ ೧೯೮೪ರಲ್ಲಿ ಅಲ್ಲಿಯವರೆಗೆ ತಾನು ಬರೆದಿದ್ದ ಕವನಗಳನ್ನೆಲ್ಲ ಪುನಃ ಎರಡು ನೋಟ್‌ಬುಕ್‌ಗಳಲ್ಲಿ ಬರೆದು ಒಂದಕ್ಕೆ ಗೊಂಡಾಲ್ ಕವನಗಳು' ಎಂದು ಹೆಸರಿಸಿದಳು. ಅಕ್ಕ ಷಾರ್ಲೆಟ್ ಈ ನೋಟ್‌ಬುಕ್ ಓದಿ ಅದನ್ನು ಪ್ರಕಟಿಸಲು ಹೇಳಿದಾಗ ತನ್ನ ವೈಯಕ್ತಿಕತೆಗೆ ಧಕ್ಕೆ ಬಂದಿತೆಂದು ಅವಳು ಅದನ್ನು ವಿರೋಧಿಸಿದಳು. ಅದೇ ಸಮಯದಲ್ಲಿ ತಂಗಿ ಆನ್ನಿ ಕೂಡ ಗೊಂಡಾಲ್ ಕುರಿತು ಕಥೆ ಕವಿತೆಗಳನ್ನು ಬರೆದಿದ್ದು ತಿಳಿದು ತಮ್ಮ ಕಥೆ ಕವಿತೆಗಳನ್ನು ಪರಸ್ಪರ ಓದಿ ಅದನ್ನು ಪ್ರಕಟಿಸಲು ಒಪ್ಪಿಕೊಂಡರು. ೧೮೪೬ರಲ್ಲಿ ಷಾರ್ಲೆಟ್, ಎಮಿಲಿ ಹಾಗೂ ಆನ್ನಿ ತಮ್ಮ ಕವನಗಳನ್ನು ಕರಿಯರ್ ಬೆಲ್ (ಷಾರ್ಲೆಟ್), ಎಲ್ಲಿಸ್ ಬೆಲ್ (ಎಮಿಲಿ) ಹಾಗೂ ಆಕ್ಷನ್ ಬೆಲ್ (ಆನ್ನಿ) ಹೆಸರಿನಿಂದ ಪ್ರಕಟಿಸಿದರು. ಕ್ರಿಶ್ಚಿಯನ್ ಹೆಸರಿನಿಂದ ಹಾಗೂ ಪುರುಷರ ಹೆಸರಿನಿಂದ ಕೆರೆಯಿಸಿಕೊಳ್ಳುವುದು ಒಳ್ಳೆಯದು ಎಂಬ ನಂಬಿಕೆ ಇವರಲ್ಲಿತ್ತು. ಆ ಕವನ ಸಂಕಲನದಲ್ಲಿ ಷಾರ್ಲೆಟ್‌ನ ಹತ್ತೊಂಬತ್ತು ಕವನಗಳು ಹಾಗೂ ಎಮಿಲಿ ಮತ್ತು ಆನ್ನಿಯ ತಲಾ ಇಪ್ಪತ್ತೊಂದು ಕವನಗಳಿದ್ದವು. ಸಂಕಲನ ಪ್ರಕಟವಾದ ಕೆಲವು ತಿಂಗಳುಗಳಾದರೂ ಕೇವಲ ಎರಡು ಸಂಕಲನಗಳು ಮಾತ್ರ ಮಾರಾಟವಾಗಿದ್ದಾಗಿ ತಿಳಿದಾಗಲೂ ಅವರು ಬೇಸರಿಸಿಕೊಳ್ಳಲಿಲ್ಲ. ಯಾಕೆಂದರೆ ಅದರಲ್ಲಿ ಒಬ್ಬರು ಓದುಗರು ಇವರ ಆಟೋಗ್ರಾಫ್ ಕೇಳುವಷ್ಟು ಈ ಕವನಗಳಿಂದ ಪ್ರಭಾವಿತರಾಗಿದ್ದರು. ಆದರೆ ನಂತರ ಬಂದ ವಿಮಶಗಳಲ್ಲಿ ಎಲ್ಲಿಸ್ ಬೆಲ್ ಅಂದರೆ ಎಮಿಲಿಯ ಕವನಗಳ ಬಗ್ಗೆ ಅತ್ಯುತಮ ಮಾತುಗಳಿದ್ದವು.
೧೮೪೭ರಲ್ಲಿ ಲಂಡನ್‌ನಲ್ಲಿ ವುದರಿಂಗ್ ಹೈಟ್ಸ್ ಪ್ರಕಟವಾಯಿತು ಮೂರು ಅಧ್ಯಾಯಗಳಿರುವ ಈ ಕಾದಂಬರಿಯ ಮೊದಲೆರಡು ಅಧ್ಯಾಯಗಳನ್ನು ಎಮಿಲಿಯೂ, ಮತ್ತೊಂದನ್ನು ಆನ್ನಿಯೂ ಬರೆದಿರಬಹುದೆಂದು ತಿಳಿಯಲಾಗಿದೆ. ೧೮೫೦ರವರೆಗೂ ತಮ್ಮ ನಿಜವಾದ ಹೆಸರನ್ನು ಬಚ್ಚಿಟ್ಟುಕೊಂಡಿದ್ದರಿಂದ ಈ ಕಾದಂಬರಿ ಕೂಡ ಎಲ್ಲಿಸ್ ಹಾಗೂ ಆಕ್ಷನ್ ಬೆಲ್ಲಿ ಹೆಸರಿನಲ್ಲಿಯೇ ಇದೆ. ಆದರೆ ಈ ಕಾದಂಬರಿಯ ವಿನ್ಯಾಸದಲ್ಲಿದ ಹೊಸತನ ವಿಮರ್ಶಕರನ್ನು ಬಹುವಾಗಿ ಸೆಳೆಯಿತು.
೧೯ ಡಿಸೆಂಬರ್ ೧೮೪೮ರಲ್ಲಿ ತೀವ್ರ ಅನಾರೋಗ್ಯದಿಂದ ತೀರಿಕೊಂಡ ಎಮಿಲಿ ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಬಲವಾಗಿ ಪ್ರತಿಪಾದಿಸಿದ ಮಹಿಳೆಯ ದನಿಯಾಗಿ ಸದಾ ನೆನಪಿನಲ್ಲಿರುತ್ತಾಳ. ಸ್ವತಃ ತನ್ನ ಅಕ್ಕ ಷಾರ್ಲೆಟ್ ತನ್ನ ಕವನಗಳ ಕಟ್ಟನ್ನು ನೋಡಿದ್ದಕ್ಕಾಗಿ ಬೇಸರಗೊಂಡ ಎಮಿಲಿ ಬರೆದ ನೋ ಕೌವರ್ಡ ಸೋಲ್ ಈಸ್ ಮೈನ್' ಸ್ತ್ರೀಯರ ಸ್ವಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಕವನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
ತನ್ನ ಕುಟುಂಬದ ಸದಸ್ಯರ ಹೊರತಾಗಿ ಹೊರಗಿನ ಯಾವ ಸ್ನೇಹಿತರನ್ನು ಹೊಂದಿರದ ಎಮಿಲಿಗೆ ಅವಳ ತಂಗಿ ಆನ್ನಿ ಮಾತ್ರ ಅತ್ಯುತ್ತಮ ಸ್ನೇಹಿತೆಯಾಗಿದ್ದಳು. ಹೀಗಾಗಿ ಷಾರ್ಲೆಟ್ ಅವಳ ಕುರಿತು ನೀಡಿದ ಮಾಹಿತಿಗಳೆಷ್ಟೋ ಅಷ್ಟೇ ಈಗ ಪ್ರಪಂಚಕ್ಕೆ ಗೊತ್ತಿರುವ ಅಧಿಕೃತ ಮಾಹಿತಿ.
ಲೋಕಧ್ವನಿ -೪ ಶ್ರೀದೇವಿ ಕೆರೆಮನೆ