Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Thursday, 19 May 2022

ಕಷ್ಟಗಳ ಸರಮಾಲೆಯಲ್ಲಿ ಬೆಳೆದ ಸ್ಪೂರ್ತಿ ಎಡೋರಾ ಆಲಿಸ್ ವೆಲ್ಟಿ


ಹಲವು ಮೊದಲುಗಳ ಎಡೋರಾ ಆಲಿಸ್ ವೆಲ್ಟಿ


              ಅಮೇರಿಕಾದ ಪ್ರಸಿದ್ದ ಕಥೆಗಾರ್ತಿ ಹಾಗೂ ಕಾದಂಬರಿಕಾರ್ತಿಯಾದ ಎಡೋರಾ ಆಲಿಸ್ ವೆಲ್ಟಿ ಜನಿಸಿದ್ದು ಮಿಸ್ಸಿಸಿಪ್ಪಿಯ ಕಾಕಸನ್‌ನಲ್ಲಿ ೧೩ ಎಪ್ರಿಲ್ ೧೯೦೯ ರಂದು. ದಕ್ಷಿಣ ಅಮೇರಿಕಾದ ಕುರಿತು ಗಾಢ ಅನುಭವಗಳನ್ನು ದಾಖಲಿಸಿದ ಎಡೋರಾ ಒಳ್ಳೆಯ ಫೋಟೊಗ್ರಾಫರ್ ಎಂದೂ ಹೆಸರು ಪಡೆದವರು. ತಂದೆ ಕ್ರಿಶ್ಚಿಯನ್ ವೆಬ್ ವೆಲ್ಟಿ ವಿಮಾ ಕಾರ್‍ಯನಿರ್ವಾಹಕ ಹಾಗೂ ಆಧುನಿಕ ತಂತ್ರಜ್ಞಾನ, ಯಂತ್ರಗಳು ಹಾಗೂ ಗ್ಯಾಜೆಟ್‌ಗಳ ಬಗ್ಗೆ ಅಪಾರ ಕುತೂಹಲವಿರುವ ವ್ಯಕಿ ಜೊತೆಗೆ ಒಳ್ಳೆಯ ಛಾಯಾಚಿತ್ರಕಾರ ಕೂಡ.  ತಾಯಿ ಮೇರಿ ಚೆಸ್ಟಿನಾ ವೆಲ್ಟಿ  'ತಮ್ಮ ಮನೆಯ ಯಾವುದೆ ಕೊಠಡಿ ದಿನದ ಯಾವುದೇ ಸಮಯದಲ್ಲಾದರೂ ಓದಲು ತೆರೆದುಕೊಳ್ಳುವಂತಿರಬೇಕು' ಎಂದು ನಂಬಿದ್ದ ಶಿಕ್ಷಕಿಯಾಗಿದ್ದರಿಂದ ಚಿಕ್ಕಂದಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡ ಎಡೋರಾ ತಂದೆಯ ಯಂತ್ರ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ರೂಪಕವಾಗಿಟ್ಟುಕೊಂಡು ಬರೆದ ಕಥೆಗಳು ಹೊಸ ಜಗತ್ತಿನ ತಲ್ಲಣಗಳಿಗೆ ಉತ್ತರದಂತಿವೆ.
                  ಜಾಕ್ಸನ್ ಹಾಗೂ ಮಿಸ್ಸಿಸಿಪ್ಪಿಯಲ್ಲಿ ವಿದ್ಯಾಭ್ಯಾಸ ಮಾಡಿದ ಎಡೋರಾ ವಿಸ್ಕೋನ್‌ಸಿನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ತಂದೆಯ ಸಲಹೆಯಂತೆ ಜಾಹಿರಾತು ವಿಷಯದಲ್ಲಿ ಕೋಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದುಕೊಂಡರು.  ೧೧೧೯, ಫೈನ್‌ಹರ್ಸ್ಟ್ ಬೀದಿಯಲ್ಲಿ  ಅರಮನೆಯಂತೆ ವಿನ್ಯಾಸಗೊಳಿಸಿದ ಮನೆಗೆ ತನ್ನ ವಾಸವನ್ನು ಬದಲಿಸಿದ ನಂತರ ಅದು ಅವರ ಖಾಯಂ ವಿಳಾಸವಾಗಿತ್ತು.
   ನ್ಯೂಯಾರ್ಕನಲ್ಲಿ ಕೆಲಸ ಹುಡುಕಲು ಪ್ರಯತ್ನಿಸಿದರೂ ೧೯೩೧ರಲ್ಲಿ ತಂದೆಯ ಅನಿರೀಕ್ಷಿತ ಸಾವಿನಿಂದಾಗಿ ಜಾಕ್ಸನ್‌ಗೆ ಹಿಂದುರಿಗಿದ ಎಡೋರಾ ಅಲ್ಲಿನ ರೇಡಿಯೋ ಸ್ಟೇಶನ್‌ನಲ್ಲಿ ಕೆಲಸ ಪ್ರಾರಂಭಿಸಿದರು. ಜೊತೆಗೆ ಸ್ಥಳಿಯ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯಲಾರಂಭಿಸಿದರು. ವರ್ಕ್ಸ ಪ್ರೊಗ್ರೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಪ್ರಚಾರಕಿಯಾಗಿ ಕೆಲಸಕ್ಕೆ ಸೇರಿದ್ದರಿಂದ ಆ ಕಂಪನಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳನ್ನು ಸಂಗ್ರಹಿಸಬೇಕಾಯಿತು, ಕೆಲವು ಮುಖ್ಯವಾದ ಜನರ ಸಂದರ್ಶನ ಮಾಡಬೇಕಾಗಿತ್ತು, ಫೋಟೋಗಳನ್ನೂ ತೆಗೆದುಕೊಳ್ಳಬೇಕಾಗಿತ್ತು. ಹೀಗಾಗಿ ದಕ್ಷಿಣ ಭಾಗದ ಸಮಗ್ರ ಪರಿಚಯ ಹಾಗೂ ಚಿತ್ರಣ ಅವರಿಗೆ ದೊರಕಿತ್ತು. ಇವೆಲ್ಲವೂ ಅವರ ಕಥೆಗಳಲ್ಲಿ ಚಿತ್ರಿತವಾಗಿವೆ. ಅದೇ ಸಮಯದಲ್ಲಿ ತನ್ನ ಸಮಕಾಲೀನ ಬರಹಗಾರರ ಕೂಟವನ್ನೂ ಆಯೋಜಿಸುತ್ತಿದ್ದಳು. 'ರಾತ್ರಿ ಅರಳುವ ಪಾಪಾಸುಕಳ್ಳಿ' ಎಂದು ಆಕೆ ಆ ಕೂಟವನ್ನು ಕರೆಯುತ್ತಿದ್ದಳು. ಮೂರು ವರ್ಷಗಳ ನಂತರ ಬರವಣಿಗೆಯಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಆಕೆ ತನ್ನ ಕೆಲಸವನ್ನು ಬಿಟ್ಟರು.  
  ೧೯೩೯ರಲ್ಲಿ ಅವರ ಮೊದಲ ಕಥೆ 'ದಿ ಡೆತ್ ಆಫ್ ಅ ಟ್ರಾವೆಲಿಂಗ್ ಸೇಲ್ಸ್‌ಮನ್' ಪ್ರಕಟವಾಯಿತು. ನಂತರ ಹಲವಾರು ಪತ್ರಿಕೆಗಳಲ್ಲಿ ಅವರ ಕಥೆಗಳು ಪ್ರಕಟಗೊಳ್ಳುತ್ತಲೆ ಹೋದವು. ಅವರ ಮೊದಲ ಕಥಾ ಸಂಕಲನ 'ಎ ಕರ್ಟನ್ ಆಫ್ ಗ್ರೀನ್' ಪ್ರಕಟವಾಗುವ ಸಮಯಕ್ಕಾಗಲೇ ದಕ್ಷಿಣದ ಪ್ರಭಾವಶಾಲಿ ಕಥೆಗಾರ್ತಿ ಎಂದು ಗುರುತಿಸಲ್ಪಟ್ಟಿದ್ದರು. ತನ್ನ ಪುಸ್ತಕಕ್ಕಾಗಿ ಪಡೆದ ಫೆಲೋಶಿಪ್‌ನಿಂದಾಗಿ ಇಂಗ್ಲೆಂಡ್, ಪ್ರಾನ್ಸ್, ಈರ್ಲಾಂಡ್, ಜರ್ಮನಿ ಮುಂತಾದ ದೇಶಗಳಿಗೆ ಪ್ರವಾಸಕ್ಕೆ ಹೋದರು. ಕಾಂಬ್ರಿಜ್ ಹಾಗೂ ಆಕ್ಸಫರ್ಡ ವಿಶ್ವವಿದ್ಯಾಲಯಗಳಲ್ಲಿ ಕೆಲಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದರು. ಪೀಟರ್‌ಹೌಸ್ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಅನುಮತಿ ಪಡೆದ ಮೊಟ್ಟಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. ಈ ನಡುವೆ ಅವರ ಹಲವಾರು ಪುಸ್ತಕಗಳು ಪ್ರಕಟಗೊಂಡವು. ೧೯೭೧ರಲ್ಲಿ ಅವರ ಫೋಟೋಗಳ ಸಂಗ್ರಹವನ್ನು  'ಒನ್ ಟೈಮ್, ಒನ್ ಪ್ಲೇಸ್' ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು.  ಹಾವರ್ಡ ವಿಶ್ವವಿದ್ಯಾಲಯದಲ್ಲೂ ಉಪನ್ಯಾಸ ನೀಡಿದ ಹೆಗ್ಗಳಿಕೆ ಇವರದ್ದು.  
ಅಮೇರಿಕಾದ ದಕ್ಷಿಣ ಭಾಗದ ನುಡಿಗಟ್ಟುಗಳನ್ನು ತನ್ನ ಕಾದಂಬರಿ ಹಾಗೂ ಕಥೆಗಳಲ್ಲಿ ಯಥೇಶ್ಚವಾಗಿ ಬಳಸಿರುವ ಎಡೋರಾ ದಕ್ಷಿಣ ಭಾಗದ ರೂಪಕಗಳು, ಋಊಢಿಗತ ಆಚರಣೆಗಳು, ಆಚಾರ ವಿಚಾರಗಳು.  ಕೌಟುಂಬಿಕ ಸಂಬಂಧಗಳಲ್ಲಿರುವ ದ್ವೇಷ- ಅಸೂಯೆ ಹಾಗೂ ಪ್ರೀತಿಯನ್ನು ಯಥಾವತ್ತಾಗಿ ಚಿತ್ರಿಸಿದರು. ಪ್ರಮುಖ ಕಥೆಗಾರ್ತಿ ಎಂದು ಗುರುತಿಸಲ್ಪಟ್ಟರು.   ೧೯೪೨ರಲ್ಲಿ ಪ್ರಕಟಗೊಂಡ ಅವರ ಕಾದಂಬರಿ ದಿ ರಾಬರ್ ಬ್ರೈಡ್‌ಗ್ರೂಮ್ ಯಕ್ಷಿಣಿ ಕಥೆಗಳಂತೆ ತೋರುತ್ತಿದ್ದು ಅಮೇರಿಕಾದ ದಕ್ಷಿಣ ಭಾಗದ ಮೊಟ್ಟಮೊದಲ ಫೇರಿಟೇಲ್ ಬರವಣಿಗೆ ಎಂದು ಗುರುತಿಸಲ್ಪಟ್ಟಿದ್ದರೂ ಆಳದಲ್ಲಿ ಅದೂ ಕೂಡ ಮನುಷ್ಯ ಸಂಬಂಧಗಳ ಕುರಿತು ಮಾತನಾಡುತ್ತದೆ.                                                                                                                                                          
ಇವರ 'ಆಪ್ಟಿಮಿಸ್ಟ್ಸ್ ಡಾಟರ್' ( ಆಶಾವಾದಿಯ ಮಗಳು) ಕಾದಂಬರಿಗೆ ೧೯೭೩ರಲ್ಲಿ ಖ್ಯಾತ ಪುಲಿಟ್ಚರ್ ಪ್ರಶಸ್ತಿ ಲಭಿಸಿದೆ. ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಪ್ರೀಡಮ್ ಹಾಗೂ ಆರ್ಡರ್ ಆಫ್ ದಿ ಸೌತ್, ಓ ಹೆನ್ರಿ ಅವಾರ್ಡನಲ್ಲಿ ಎರಡನೆ ಸ್ಥಾನ ಹೀಗೆ ಹಲವಾರು ಖ್ಯಾತ ಪ್ರಶಸ್ತಿಗಳು ಇವರ ಬರವಣಿಗೆಯನ್ನು ಅರಸಿ ಬಂದಿವೆ. ೧೯೮೩ರಲ್ಲಿ ಹಾವರ್ಡ ವಿಶ್ವವಿದ್ಯಾಲಯವು ಅವರ ಭಾಷಣಗಳ ಸರಣಿಗಳನ್ನು ಸೇರಿಸಿ 'ಒನ್ ರೈಟರ್‍ಸ್ ಬಿಗಿನಿಂಗ್' ಎಂಬ ಹೆಸರಿನಲ್ಲಿ ಪ್ರಕಟಿಸಿದ ಪುಸ್ತಕಕ್ಕೆ ೧೯೮೪ರಲ್ಲಿ ನಾನ್‌ಫಿಕ್ಷನ್ ವಿಭಾಗದಲ್ಲಿ ನ್ಯಾಷನಲ್ ಬುಕ್ ಅವಾರ್ಡ' ಲಭಿಸಿತು. ೧೯೯೨ರಲ್ಲಿ ಜೀವಮಾನದ ಸಣ್ಣಕಥೆಗಳ ಬರವಣಿಗೆಗಾಗಿ ರಿಯಾ ಅವಾರ್ಡ ದೊರಕಿದೆ. ಲೈಬ್ರರಿ ಆಫ್ ಅಮೇರಿಕಾವು ಬದುಕಿರುವ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದವರಲ್ಲಿ ಮೊದಲಿಗಳು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಮಿಸ್ಸಿಸಿಪ್ಪಿಯ  ಜಾಕ್ಸನ್‌ನಲ್ಲಿರುವ ಇವರ ಮನೆಯನ್ನು ರಾಷ್ಟೀಯ ಐತಿಹಾಸಿಕ ಸ್ಥಳ ಎಂದು ಗುರುತಿಸಲಾಗಿದ್ದು ಸಾರ್ವಜನಿಕಋ ಮುಕ್ತ ಪ್ರವೇಶಕ್ಕೆ ಚಿಲ್ಲಿನ ಸರಕಾರ ಅನುವು ಮಾಡಿಕೊಟ್ಟಿದೆ.


ಲೋಕಧ್ವನಿ-೩                                     

No comments:

Post a Comment