ಜಾರಿಣಿಯ ಹೆಸರು ಹೊತ್ತು
ಹೇಳಬಹುದಿತ್ತು ಒಂದು ಮಾತು
ಹೀಗೆ ದೇಶಾಂತರ ಹೋಗುವ ಮುನ್ನ
ಹಿಂಬಾಲಿಸುತ್ತಿರಲಿಲ್ಲ ಹೇಳಿದರೆ
ಹಠ ಹಿಡಿಯುತ್ತಿರಲಿಲ್ಲ ಬರುವೆನೆಂದು
ತೊಡಿಸುತ್ತಿರಲಿಲ್ಲ ಕೈಕಾಲಿಗೆ ಚಿನ್ನದ ಬೇಡಿ
ಎದೆಯ ಮೇಲೆ ಅಂಗೈ ಇಟ್ಟು
ಗೋಗರೆಯುತ್ತಿರಲಿಲ್ಲ ಹೋಗಬೇಡವೆಂದು
ಛೇಡಿಸುತ್ತಿರಲಿಲ್ಲ ಖಾಲಿ ಬೀಳುವ
ಜೋಡಿ ಮಂಚದ ನಲುಗದ ಹಾಸಿಗೆ ತೋರಿಸಿ
ಕಟ್ಟಿಹಾಕಿ ನಿಲ್ಲಿಸಲು ಸಾಧ್ಯವಿಲ್ಲ
ಹೊರಡಲು ಮನಸು ಮಾಡಿದ ಗಂಡಸನ್ನು
ಹೆದರಿಸಿ ಬೆದರಿಸುವ ಮಾತು ಬಿಡು
ಪ್ರೇಮಿಸುವವಳ ಅದಮ್ಯ ಪ್ರೀತಿ
ಮುಪ್ಪಡರಿದ ತಾಯಿಯ ವಾತ್ಸಲ್ಯ
ಯಾವುದೆಂದರೆ ಯಾವುದೂ
ತಡೆಯಲಿಲ್ಲ ಸಿದ್ಧಿ ಪಡೆಯಲೆಂದು
ಮಧ್ಯರಾತ್ರಿ ಹೊರಟವನ
ಯಶೋಧರಳ ಪ್ರೀತಿ, ರಾಹುಲನ ಮಮತೆ
ಮಾಯಾ ದೇವಿಯ ಕನವರಿಕೆ
ಸತ್ಯಭಾಮೆ, ರುಕ್ಮಿಣಿಯರ ತೆಕ್ಕೆಯಲ್ಲಿ
ಕಾಡಲಿಲ್ಲ ಕಾದು ಬಸವಳಿದ ರಾಧೆ ನೆನಪು
ದಿಗ್ವಿಜಯದ ರಣಭೂಮಿಯಲ್ಲಿ
ಶಂಖ ಊದಿ ಗೀತೆಯನ್ನು ಉಪದೇಶಿಸುವಾಗ
ನೆನಪಾಗಲಿಲ್ಲ ರಾಧೆಯ ಜೊತೆಗೆ
ಸತ್ಯಭಾಮೆ, ರುಕ್ಮಿಣಿ, ಜಾಂಬವತಿ
ಮತ್ತೂ ಹದಿನಾರು ಸಾವಿರ ಕನ್ಯೆಯರು
ತಾನೇ ತಾನಾಗಿ ಕಾಡಿಗೆ ಹೊರಡಲು ನಿರ್ಧರಿಸಿದ ಪುರುಷೋತ್ತಮನ ಬೆನ್ನತ್ತದಿದ್ದರೆ
ಮಾತೆಯಾಗುತ್ತಿರಲಿಲ್ಲ ಜನಕ ಪುತ್ರಿ ಸೀತೆ
ಯಾರ ಹಂಗಿಗೂ ಒಳಪಡದ ಗಂಡಸು
ಕಾಲ, ದೇಶ, ಜಾತಿ ಧರ್ಮವನ್ನೆಲ್ಲ ಮೀರಿ
ಉಳಿಯಬಹುದು ಬರಿ ಗಂಡಸಾಗಿ
ಕಟ್ಟಿಡಲಾಗಿದೆ ಗಂಡಸಿನ ನೆರಳಾಗಲೊಲ್ಲದ
ಹೆಣ್ಣಿಗೆ ಎಲ್ಲ ಕಾಲದಲ್ಲೂ ಜಾರಿಣಿಯ ಪಟ್ಟ
ಹುಟ್ಟನ್ನೇ ಜರಿಯುವ ಮಾಯೆಯ ಪಾತ್ರ
No comments:
Post a Comment