Sirikadalu
Tuesday, 22 June 2021
ಉಸಿರುಗಟ್ಟುವ ಕೋಶದ ರಚನೆಯಲ್ಲಿ
Sunday, 13 June 2021
ಇದ್ದುದನ್ನು ಇದ್ದಂತೆ ಹೇಳುವ ಧೈರ್ಯ ಹೆಣ್ಣಿಗೆ ಯಾವಾಗ ಬರುತ್ತದೆ?
ಶತಶತಮಾನಗಳೇ ಕಳೆದು ಹೋಗಿವೆ. ಇಪ್ಪತ್ತೊಂದನೇ ಶತಮಾನದ ಮಧ್ಯ ಭಾಗದಲ್ಲಿದ್ದೇವೆ. ಜಗತ್ತು ನಿಬ್ಬೆರಗಾಗುವ ಸಾಧನೆ ಮಾಡಿದೆ. ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದೆ. ಅದರಲ್ಲಿ ಹೆಣ್ಣಿನ ಪಾಲು ಕಡಿಮೆಯೇನಲ್ಲ. ಕೆಲವೊಮ್ಮೆ ಗಂಡಿಗಿಂತ ಹೆಚ್ಚೇ ಇದೆ. ಆದರೂ ಈ ಕ್ಷಣಕ್ಕೂ ಹೆಣ್ಣಿಗೆ ಇದ್ದುದನ್ನು ಇದ್ದಂತೆ ಹೇಳುವ ಧೈರ್ಯ ಮಾತ್ರ ಬಂದಿಲ್ಲ. ಎಲ್ಲೋ ಕೆಲವೊಮ್ಮೆ ಹೆಣ್ಣು ದನಿ ಎತ್ತಿದ್ದನ್ನು ನೋಡಬಹುದು. ವ್ಯಂಗ್ಯ ಚಿತ್ರಗಳಲ್ಲಿ ಗಂಡಿನ ಜುಟ್ಟು ಹಿಡಿದ ಹೆಂಡತಿಯನ್ನು ಕಾಣಬಹುದೇ ಹೊರತೂ ವಾಸ್ತವದಲ್ಲಿ ಸನ್ನಿವೇಶ ವ್ಯತಿರಿಕ್ತವಾಗಿಯೇ ಇದೆ. ಎಲ್ಲೋ ಕೆಲವು ಅಧಿಕಾರದಲ್ಲಿರುವ ಅಥವಾ ಉನ್ನತ ಹುದ್ದೆಯಲ್ಲಿರುವ ಮಹಿಳೆಯರು ತಾವು ಅಂದುಕೊಂಡಿದ್ದನ್ನು ಹೇಳಬಹುದೇ ಹೊರತೂ ಮಧ್ಯಮ ವರ್ಗದ ಮಹಿಳೆಯರಿಗೆ ಯಾವ ಕಾಲಕ್ಕೂ ಅದು ಸಾಧ್ಯವಿಲ್ಲದ ಮಾತು. ಕೆಲವೊಮ್ಮೆ ಅಂತಹ ಉನ್ನತ ಹುದ್ದೆಯಲ್ಲಿರುವ, ದೊಡ್ಡ ಅಧಿಕಾರಿಯಾಗಿರುವ ಮಹಿಳೆಯೂ ಕೂಡ ಕೆಲವೊಮ್ಮೆ ಮನೆಯಲ್ಲಿ ಅಸಹಾಯಕಳಾಗಬೇಕಾದುದನ್ನು ನೋಡಿದ್ದೇವೆ.
ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದ ಮಹಿಳೆಯರ ಸ್ಥಿತಿಯನ್ನು ಕೇಳುವುದೇ ಬೇಡ. ಮನೆಯೊಳಗಿನ ಒದ್ದಾಟ ಹೇಳುವಂತಿಲ್ಲ. ತನ್ನದೇ ಆದ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಬಹುತೇಕ ಯಾವ ಭಾರತೀಯ ಹೆಣ್ಣಿಗೂ ಇದುವರೆಗೂ ದಕ್ಕಿದೆಯೆಂದು ಎದೆ ತಟ್ಟಿ ಹೇಳುವಂತಿಲ್ಲ. ಹೀಗಾಗಿಯೇ ಗಜಲಕಾರ್ತಿ ಬರೆಯುತ್ತಾರೆ
ಇದ್ದುದನ್ನು ಇದ್ದಂತೆ ಬರೆಯುವ ಧೈರ್ಯ ನನಗಿಲ್ಲ
ಲಕ್ಷ್ಮಣರೇಖೆಯ ದಾಟಿ ಬರುವ ಧೈರ್ಯ ನನಗಿಲ್ಲ
ನಮ್ಮ ಸಾಮಾಜಿಕ ವ್ಯವಸ್ಥೆಯೇ ಹಾಗಿದೆ. ಗಂಡು ಇದ್ದದ್ದನ್ನು ಇದ್ದಂತೆ ಹೇಳಿದರೆ ಅವನು ನೇರಾನೇರ ಮಾತಿನವನು. ತುಂಬಾ ಖಡಕ್ ಎಂದು ಹೊಗಳಿಸಿಕೊಂಡರೆ ಹೆಣ್ಣೊಬ್ಬಳು ಇದ್ದದ್ದನ್ನು ಇದ್ದಂತೆ ಹೇಳಿದರೆ ಆಕೆ ಘಟವಾಣಿ ಎನ್ನಿಸಿಕೊಳ್ಳುತ್ತಾಳೆ. ಬಜಾರಿ ಎಂಬ ಹಣೆಪಟ್ಟಿ ಅಂಟಿಸಲು ಒಂದು ದೊಡ್ಡ ಪಡೆಯೇ ಸಿದ್ಧವಾಗಿ ನಿಂತಿರುತ್ತದೆ. ಅದು ಮನೆಯ ಒಳಗೆ ಹೊರಗೆ ಎಂಬ ಬೇಧವಿಲ್ಲದೆ. ಈ ಎಲ್ಲಾ ಸಾಮಾಜಿಕ, ಸಾಂಸಾರಿಕ ಕಟ್ಟುಪಾಡುಗಳ ಲಕ್ಷ್ಮಣ ರೇಖೆಯನ್ನು ದಾಟುವುದು ಅಷ್ಟೊಂದು ಸುಲಭದ ಮಾತಲ್ಲ. ಹೇಳಿದ್ದನ್ನು ಕೇಳದ ಸೀತಾ ಮಾತೆ ಲಕ್ಷ್ಮಣ ರೇಖೆಯನ್ನು ದಾಟಿ ಬಂದಿದ್ದಕ್ಕಾಗಿಯೇ ಅಷ್ಟೆಲ್ಲ ಕಷ್ಟ ಅನುಭವಿಸ ಬೇಕಾಯಿತು ಎನ್ನುವ ಸಿದ್ಧ ವಾಕ್ಯವನ್ನು ಎದುರಿಗಿಟ್ಟು ಸಂಪ್ರದಾಯ ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣಿನ ಧೈರ್ಯವನ್ನು ಕುಗ್ಗಿಸುವ ಕೆಲಸ ಇಂದು ನಿನ್ನೆಯದ್ದೇನಲ್ಲ. ಹೆಣ್ಣೆಂದರೆ ಕೇವಲ ನಾಲ್ಕು ಗೋಡೆಯ ನಡುವಣ ಆಡಿಸಿದಂತೆ ಆಡುವ ಗೊಂಬೆ ಮಾತ್ರವಾಗಿಯೇ ಇರಬೇಕು ಎಂಬ ಕಟ್ಟುಪಾಡುಗಳನ್ನು ಹುಟ್ಟುವಾಗಲೇ ಹೆಣ್ಣಿಗೂ ಅರೆದು ಕುಡಿಸಿ, ಗಂಡಿಗೆ ಹಾಗೆ ನೋಡಿಕೊಳ್ಳುವ ಯಜಮಾನಿಕೆಯನ್ನು ಕೊಟ್ಟುಬಿಟ್ಟಿರುತ್ತದೆ ಈ ಸಮಾಜ. ಹೀಗಾಗಿ ಮಾನಸಿಕವಾಗಿಯೇ ಈ ಲಕ್ಷ್ಮಣ ರೇಖೆಯನ್ನು ತನ್ನ ಗಡಿ ಎಂದು ಒಪ್ಪಿಕೊಂಡುಬಿಟ್ಟಿರುವ ಹೆಣ್ಣು ಾ ಮಿತಿಯನ್ನು ಮೀರುವ ಧೈರ್ಯವನ್ನು ತೋರುವುದು ಬಹಳ ಅಪರೂಪ.
ಗಂಡ ಕೊಡುವ ಹಿಂಸೆಯನು ಹೊರಗೆಡಹುವ ಹಾಗಿಲ್ಲ
ಅವನೆದುರು ನಿಂತು ಹೋರಾಡುವ ಧೈರ್ಯ ನನಗಿಲ್ಲ
ಸಂಸಾರ ಎಂದರೆ ಅದೊಂದು ಯಾರೂ ಹೊರಗಿನವರು ತಿಳಿಯಬಾರದ ಗುಟ್ಟು ಎಂದುಕೊಂಡಿರುವವರೇ ಹೆಚ್ಚು. ಹೀಗಾಗಿ ಸಾಂಸಾರಿಕ ಹಿಂಸೆಯು ಬಹುತೇಕವಾಗಿ ಬೆಳಕಿಗೆ ಬರುವುದೇ ಇಲ್ಲ. ಗಂಡ ಹೊಡೆದ, ಗಂಡ ಸಿಗರೇಟಿನಿಂದ ಸುಟ್ಟ ಎಂಬುದೆಲ್ಲವೂ ಸಹಜ ಎಂದೇ ಹೆಣ್ಣು ಸ್ವೀಕರಿಸಬೇಕಾದ ಸ್ಥಿತಿಯನ್ನು ಈ ಸಮಾಜ ಮೊದಲೇ ನಿರ್ಧರಿಸಿ ಬಿಟ್ಟಿದೆ. ಗಂಡ ಬೈಯ್ಯದೇ ಇನ್ನಾರು ಬೈಯ್ಯಲು ಸಾಧ್ಯ ಎನ್ನುವುದನ್ನು ತೀರಾ ಸಹಜ ಎಂಬಂತೆ ಅತ್ಯಂತ ತಿಳುವಳಿಕೆಯುಳ್ಳವರೇ ತಮ್ಮ ಮಾತಿನ ಮಧ್ಯೆ ತಮಗೆ ತಿಳಿಯದಂತೆ ಆಡುತ್ತಿರುವುದನ್ನು ಕಾಣುತ್ತೇವೆ. ಹಾಗಾದರೆ ಹೆಂಡತಿ ಬೈಯ್ದರೆ ಅದನ್ನು ತೀರಾ ಸಹಜ ಎಂದೇಕೆ ನಮ್ಮ ಸಮಾಜ ಒಪ್ಪಿಕೊಳ್ಳುವುದಿಲ್ಲ? ಏಕೆಂದರೆ ಹೆಂಡತಿ ಯಾವಾಗಿದ್ದರೂ ಆಕೆ ಎರಡನೆ ದರ್ಜೆಯ ಪ್ರಜೆ. ಅವಳು ಬೈಯ್ಯಿಸಿಕೊಳ್ಳಲು ಹಾಗು ಹೊಡೆಯಿಸಿಕೊಳ್ಳಲು ಅರ್ಹಳೆ ಹೊರತು ಆಕೆಗೆ ಹಾಗೆ ಮಾಡಲು ಯಾವುದೇ ಅಧಿಕಾರವಿಲ್ಲ. ಗಂಡ ತನಗೆ ಹಿಂಸೆ ಮಾಡುತ್ತಾನೆಂದು ಎಲ್ಲಿಯೂ ಬಾಯಿ ಬಿಟ್ಟು ಹೇಳುವಂತಿಲ್ಲ. ಯಾಕೆಂದರೆ ಸಂಸಾರದ ಗುಟ್ಟು ರಟ್ಟು ಮಾಡಿದರೆ ವ್ಯಾದಿಯನ್ನು ಬಹಿರಂಗಗೊಳಿಸಿಕೊಂಡಂತೆ ಎಂಬುದನ್ನೂ ನಮ್ಮ ಹಿಂದಿನವರು ಗಾದೆ ಮಾತಿನಂತೆ ಬಳಸಿ ಹೆಣ್ಣಿನ ಬಾಯಿಗೆ ಬೀಗ ಹಾಕಿಬಿಟ್ಟಿದ್ದಾರೆ. ಹೀಗಾಗಿ ಹಿಂಸಿಸುವ ಗಂಡನನ್ನು ಎದುರಿಸಿ ನಿಲ್ಲುವ ಧೈರ್ಯವನ್ನು ಯಾವ ಹೆಣ್ಣೂ ತೋರುವುದಿ್ಲ. ಒಂದು ವೇಳೆ ಗಂಡನನನ್ನು ಎದುರಿಸಿ ನಿಂತು ಆತ ದೂರವಾದರೆ ಹೆಣ್ಣನ್ನೇ ಗಂಡ ಬಿಟ್ಟವಳು ಎಂದು ದೂಷಿಸುತ್ತಾರೆಯೇ ಹೊರತು ಗಂಡಸನ್ನು ಹೆಂಡತಿ ಬಿಟ್ಟವನು ಎಂದು ತಮಾಷೆಗೂ ಹೇಳುವುದಿಲ್ಲ. ಗಂಡು ಹೆಂಡತಿಯಿಂದ ದೂರವಾಗಿ ತನ್ನದೇ ಆದ ಮತ್ತೊಮದು ಸಂಸಾರವನ್ನು ಕಟ್ಟಿಕೊಳ್ಳಬಹುದು. ಆದರೆ ಗಂಡನಿಂದ ದೂರವಾದ ಸ್ತ್ರೀಯೊಬ್ಬಳು ಮತ್ತೊಂದು ಸಂಸಾರ ಕಟ್ಟಿಕೊಳ್ಳಬೇಕೆಂದರೆ ಅವಳಿಗೆ ಮೊದಲೇ ಆತನೊಂದಿಗೆ ಸಂಬಂಧವಿತ್ತು ಎಂಬ ಆರೋಪವನ್ನು ಸುಲಭವಾಗಿ ಹೊರೆಸಿ ಅವಳನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ವಿಕೃತಿ ಮೆರೆಯುತ್ತದೆ ಸಮಾಜ.
ಅತ್ತೆ ಮಾವಂದಿರ ನಿಂದನೆ ಹಿಂಸೆಯಾಗುತ್ತದೆ.
ಎಲ್ಲವನು ತೊರೆದು ಹೋಗುವ ಧೈರ್ಯ ನನಗಿಲ್ಲ
ಸಂಸಾರವೆಂದರೆ ಗಂಡನೊಬ್ಬನೇ ಅಲ್ಲ. ಜೊತೆಗೆ ಅತ್ತೆ ಮಾವ ಇರುತ್ತಾರೆ. ಅಚ್ಚರಿಯೆನ್ನಿಸಬಹುದು, ಇಂದಿಗೂ ನಮ್ಮ ಹಳ್ಳಿಗಳಲ್ಲಿ ಅತ್ತೆ ಮಾವಂದಿರ, ನಾದಿನಿ ಮೈದುನರ ಕಾಟ ತಪ್ಪಿಲ್ಲ. ಹೊಸದಾಗಿ ಮದುವೆಯಾಗಿ ಬಂದ ಸೊಸೆಯನ್ನು ಹತ್ತಾರು ಕೆಲಸ ಹೇಳಿ ವಿವಶಗೊಳಿಸುವ ಆ ಮೂಲಕ ಅವಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ರೂಢಿ ಇದೆ. ಹತ್ತಾರು ಕೆಲಸಗಳನ್ನು ಏಕಕಾಲದಲ್ಲಿ ನಿಭಾಯಿಸಬೇಕಾದ ಹೊಣೆ ಹೊರೆಸಿ ಅವಳು ಕೆಲಸದಲ್ಲಿ ತಪ್ಪಿದರೆ ನಿಂದಿಸಿ, ದೂಷಿಸಿ, ಅವಳ ತವರು ಮನೆಯನ್ನೂ ಹೀಯಾಳಿಸಿ ಅವಮಾನ ಮಾಡುವ ಪರಿಪಾಟವನ್ನು ಇಂದಿಗೂ ಕಾಣುತ್ತಿದ್ದೇವೆ. ಆದರೆ ಹೀಗಾಗಿದೆ ಎಂದು ಈ ಎಲ್ಲವನ್ನು ತೊರೆದು ಹೋಗುವ ಧೈರ್ಯ ಹೆಣ್ಣಿಗಿದೆಯೇ? ಖಂಡಿತಾ ಇಲ್ಲ. ಏಕೆಂದರೆ ಅವಳು ಗಂಡನ ಮನೆ ಬಿಟ್ಟು ತವರು ಸೇರಿದರೆ ತಮಗೆ ಅವಮಾನ ಎಂದು ಸ್ವತಃ ತಾಯಿಯ ಮನೆಯವರೂ ಯೋಚಿಸುತ್ತಾರೆ. ಹೀಗಾಗಿ ಎಷ್ಟೇ ಕಷ್ಟವಾದರೂ ತರಿ, ತುಟಿ ಬಿಗಿ ಹಿಡಿದು ಗಂಡನ ಮನೆಯನ್ನೇ ನೆಚ್ಚಿ ಬಾಳುವೆ ಮಾಡಬೇಕು ಎಂದು ಸ್ವತಃ ತಾಯಿಯೇ ಮಗಳಿಗೆ ಪಾಠ ಹೇಳಿಕೊಡುತ್ತಾಳೆ. ಹೆಣ್ಣೊಬ್ಬಳು ಹುಟ್ಟಿದರೆ ಸಾಕು, ಹುಟ್ಟುತ್ತಲೇ ಅವಳಿಗೆ ಗಂಡನ ಮನೆಯಲ್ಲಿ ಹೇಗಿರಬೇಕು ಎನ್ನುವ ಪಾಠವನ್ನು ಬೋಧಿಸಲು ಈ ಸಮಾಜ ಸ್ವಂತ ತಾಯಿಯನ್ನೇ ದಾಳವನ್ನಾಗಿ ಬಳಸಿಕೊಂಡಿರುತ್ತದೆ. ಹೀಗಾಗಿ ಯಾವ ಹೆಣ್ಣೂ ತಕ್ಷಣಕ್ಕೆ ಮದುವೆ ಎನ್ನುವ ಬಂಧನವನ್ನು ಕಿತ್ತೆಸೆಯುವ ಧೈರ್ಯ ಮಾಡುವುದಿಲ್ಲ.
ಎಷ್ಟು ದುಡಿದರೂ ಪ್ರೀತಿಯ ಮಾತನಾಡುವವರಿಲ್ಲ
ಸಂಕಟಗಳಿಂದ ಮುಕ್ತಿ ಪಡೆವ ಧೈರ್ಯ ನನಗಿಲ್ಲ
ಅತ್ತೆ ಮನೆಯೆಂದರೆ ಅದು ಅತ್ತೆ ಮನೆಯೇ. ಅದರಲ್ಲೂ ಮನೆ ತುಂಬ ಜನರಿದ್ದರಂತೂ ಅದೊಂದು ಸಾಕ್ಷಾತ್ ನರಕ. ಅಡುಗೆ ಮಾಡಬೇಕು, ಕಸ ಮುಸುರೆ ಬಳಿಯಬೇಕು, ಮನೆಯನ್ನು ಒರೆಸಿ ಗುಡಿಸಿ ಸ್ವಚ್ಛವಾಗಿಡಬೇಕು, ಮನೆಯವರೆಲ್ಲರ ಬಟ್ಟೆ ತೊಳೆಯಬೇಕು ಈ ಎಲ್ಲ ಮನೆಕೆಲಸದ ಹೊರೆಯ ಜೊತೆ ಮನೆಯವರು ಹೇಳಿದ ಹೆಚ್ಚುವರಿ ಕೆಲಸಗಳನ್ನೂ ನಗುನಗುತ್ತಲೇ ಮಾಡಬೇಕು. ಎಲ್ಲಾದರೂ ಸುಸ್ತು ಸಂಕಟ ಎಂದಳೋ ಆಳಿಗೊಂದು ಕಲ್ಲು ಎಂಬಂತೆ ಮಾತನ್ನೆಸೆದು ಮನಸ್ಸನ್ನು ಗಾಯಗೊಳಿಸಲು ಹಿಂದೆಮುಂದೆ ನೋಡುವುದಿಲ್ಲ.ಎಷ್ಟು ಕೆಲಸ ಮಾಡಿದರೂ ಒಂದೇ ಒಂದು ಪ್ರೀತಿಯ ಮಾತು ಕೇಳುವುದಿಲ್ಲ. ಆದರೂ ಹೆಣ್ಣು ಈ ಎಲ್ಲ ಸಂಕಟಗಳಿಂದ ಮುಕ್ತವಾಗುವ ಧೈರ್ಯ ತೋರುವುದಿಲ್ಲ. ಬದಲಾಗಿ ತನ್ನ ಅದೃಷ್ಟ ಇದು, ತನ್ನ ಹಣೆಬರೆಹವೇ ಚೆನ್ನಾಗಿಲ್ಲ ಎಂದು ಅನುಸರಿಸಿಕೊಂಡು ಹೋಗುತ್ತಾಳೆ.
ಗಂಡ ಕುಡಿದು ತೂರಾಡಿದರೂ ಕೇಳುವಂತಿಲ್ಲ
ಹೀಗೇಕಾಯಿತೆಂದು ಕೇಳುವ ಧೈರ್ಯ ನನಗಿಲ್ಲ
ಗಂಡ ಕುಡಿದರೂ ಸರಿ, ಬಡಿದರೂ ಸರಿ, ಹೆಣ್ಣಾದವಳು ಅವನ ಮರ್ಜಿಯನ್ನು ಅನುಸರಿಸಿಕೊಂಡು ಹೋಗಬೇಕಾದುದು ಪಾತಿವೃತ್ಯದ ಮೊದಲ ಹೆಜ್ಜೆ ಎಂದೇ ಬೋಧಿಸುವ ಈ ಸಮಾಜದಲ್ಲಿ ತೂರಾಡುತ್ತ ಮನೆಗೆ ಬಂದವನಿಗೆ ಯಾಕೆ ಹೀಗೆ ಮಾಡುತ್ತಿ ಎಂದು ಕೇಳಲು ಸಾಧ್ಯವೇ? ಕುಡಿದು ಬಿದ್ದವನನ್ನು ಹುಡುಕುತ್ತ ಚರಂಡಿ, ಮೋರಿ ಹುಡುಕುತ್ತ, ಊರಿನ ಎಲ್ಲಾ ಸರಾಯಿ ಅಂಗಡಿಯ ಬಾಗಿಲನ್ನು ಎಡತಾಕುವ ಹೆಣ್ಣುಗಳನ್ನೂ ನೋಡಿದ್ದೇವೆ. ಆದರೆ ಹಾಗೆ ಹುಡುಕಾಡಿ ಜೋಲಿ ಹೊಡಿಯುವವನನ್ನು ಮನೆಗೆ ಕರೆದುಕೊಂಡು ಹೋಗಿ, ಊಟ ಮಾಡಿಸಿ, ಬೆಚ್ಚಗೆ ಹೊದೆಸಿ ಮಲಗಿಸುವ ಇವರು ಯಾಕೆ ಹೀಗೆ ಮಾಡುತ್ತೀರಿ ಎಂದು ಒಂದು ಮಾತು ಕೇಳಿದರೆ ಸಾಕು ಜಗತ್ಪ್ರಳಯವೇ ಆಗಿ ಬಿಡುತ್ತದೆ. ಅವಳು ಗಂಡನಿಗೆ ಎದುರು ಮಾತನಾಡುವ ಬಜಾರಿ ಎನ್ನಿಸಿಕೊಂಡುಬಿಡುತ್ತಾಳೆ. ಹೀಗಾಗಿ ಕುಡಿದು ಬರುವ ಗಂಡನನ್ನು ಯಾಕೆ ಹೀಗೆ ಮಾಡುತ್ತೀರಿ ಎಂದು ಕೇಳುವ ಧೈರ್ಯವನ್ನೂ ತೋರಿಸಲು ಹೆಣ್ಣು ಅಸಮರ್ಥಳು.
ಹೊಟ್ಟೆಯೊಳಗಿನ ಮಾತನ್ನು ಉಸಿರೊಡೆಯುವಂತಿಲ್ಲ
ಸೆರಗೊಳಗಿನ ಕಿಚ್ಚನ್ನು ಬಿಚ್ಚುವ ಧೈರ್ಯ ನನಗಿಲ್ಲ
ಸಂಸಾರವೆಂದರೆ ಅದೊಂದು ಬಿಸಿ ತುಪ್ಪದ ಹಾಗೆ ಆಡುವಂತಿಲ್ಲ ಅನುಭವಿಸುವಂತಿಲ್ಲ. ಹೊಟ್ಟೆಯೊಳಗಿನ ಸಾವಿರ ಮಾತುಗಳನ್ನು ಹೊರಗೆ ಆಡಿ ತೋರಿಸುವಂತಿಲ್ಲ. ಆದರೆ ಹಾಗೇ ಹೊಟ್ಟೆಯೊಳಗಿಟ್ಟುಕೊಂಡು ನರಳುವಂತೆಯೂ ಇಲ್ಲ. ಸಂಸಾರದ ಗುಟ್ಟುಗಳೆಂದರೆ ಸೆರಗೊಳಗಿನ ಕಿಚ್ಚಿದ್ದಂತೆ. ಅದನ್ನು ಬಿಚ್ಚಿ ತೋರಿಸುವ ಧೈರ್ಯವನ್ನು ಯಾವ ಹೆಣ್ಣೂ ಮಾಡುವುದಿಲ್ಲ.
ಹಿರಿಯ ಲೇಖಕಿ ವಿದ್ಯಾವತಿ ಅಂಕಲಗಿಯವರ ಗಜಲ್ ಇದು. ಧೈರ್ಯ ನನಗಿಲ್ಲ ಎನ್ನುವ ರಧೀಫನ್ನು ಬಳಸಿಕೊಂಡು ಹೆಣ್ಣಿನ ಸ್ಥೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೆಣ್ಣಿನ ಬದುಕಿನ ವಾಸ್ತವತೆಗೆ ಕನ್ನಡಿ ಹಿಡಿದಿರುವ ಈ ಗಜಲ್ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ಹೆಣ್ಣು ಹಾಗೂ ಗಂಡನ್ನು ಸಂಸಾರದ ಎರಡು ಚಕ್ರಗಳಿದ್ದಂತೆ ಎನ್ನುತ್ತಲೇ ಒಂದು ಚಕ್ರವನ್ನು ದುರ್ಬಲಗೊಳಿಸಿ ಸಂಸಾರದ ಬಂಡಿ ಎಳೆಯಲಿ ಎಂದು ಬಯಸುವ ಪುರುಷಾಹಂಕಾರವನ್ನು ಅನಾವರಣಗೊಳಿಸಿ ಬೆತ್ತಲುಮಾಡಿದ್ದಾರೆ. ಬರೆಯುವ, ಬರುವ, ಹೋರಾಡುವ, ಹೋಗುವ, ಪಡೆವ, ಕೇಳುವ, ಬಿಚ್ಚುವ ಎನ್ನುವ ಕಾಫಿಯಾದಲ್ಲಿ ವ ಎನ್ನುವ ಅಕ್ಷರವನ್ನು ರವೀಶ್ ಆಗಿ ಬಳಸಲಾಗಿದೆ. ಗಜಲಕಾರ್ತಿ ಇಲ್ಲಿ ತಖಲ್ಲೂಸ್ ನ್ನು ಬಳಸಿಲ್ಲ.
ಹೆಣ್ಣಿನ ಸ್ಥಿತಿಯನ್ನು ಪ್ರಸ್ತುತ ಪಡಿಸುವ ಗಜಲ್ ಓದುಗರಿಗೆ ಬಹಳ ಸಮಯ ಕಾಡುವುದರಲ್ಲಿ ಅನುಮಾನವಿಲ್ಲ.
Friday, 4 June 2021
ಸಿರಿಕಡಲು - ಬುಕ್ ಬ್ರಹ್ಮ -ಶ್ರೀದೇವಿ ಕೆರೆಮನೆ ಲೇಖನ - ಪುಸ್ತಕ ವಿಮರ್ಶೆ-ಚೆಕ್ ಪೋಸ್ಟ್- ರಾಜು ಗಡ್ಡಿ
ಲೇ- ರಾಜು ಗಡ್ಡಿ
ಬೆಲೆ- 150/-
ರಾಜುಗಡ್ಡಿಯವರ ಚೆಕ್ ಪೋಸ್ಟ್ ಕುರಿತು ಬುಕ್ ಬ್ರಹ್ಮದ ನನ್ನ ಸಿರಿಕಡಲು ಸರಣಿ ಬರೆಹದಲ್ಲಿದೆ. ಓದಿ. ಅಭಿಪ್ರಾಯ ತಿಳಿಸಿ
ಅದರ ಲಿಂಕ್ ಇಲ್ಲಿದೆ
https://www.bookbrahma.com/news/checkpost-trucknondige-saguva-balyada-nenapu
ಕನ್ನಡ ಸಾಹಿತ್ಯದಲ್ಲಿ ಟ್ರಕ್ ದಂಧೆಯ ಬಗ್ಗೆ ನಾನು ಓದಿದ್ದು ತುಂಬಾ ಕಡಿಮೆ. ಕಡಿಮೆ ಏನು ಬಂತು? ನಾನಂತೂ ಓದಿಯೇ ಇರಲಿಲ್ಲ. ಇದೇ ಮೊದಲ ಕಾದಂಬರಿ ಎನ್ನಬಹುದು. ಹಾಗೆ ನೋಡಿದರೆ ಪಾಶ್ಚಾತ್ಯ ಸಾಹಿತ್ಯದಲ್ಲಿ ರಚಿತವಾದಂತಹ ಬಹಳಷ್ಟು ಉದ್ಯೋಗ, ದಂಧೆಯ ಬಗ್ಗೆ ಕನ್ನಡ ಸಾಹಿತ್ಯ ಮುಗುಮ್ಮಾಗಿಯೇ ಉಳಿದು ಬಿಟ್ಟಿದೆ. ಸಾಹತ್ಯ ರಚನೆಗಾಗಯೇ ಅನೇಕ ಪಾಪದ, ವ್ಯಭಿಚಾರದ ಕೆಲಸಗಳನ್ನು ಮಾಡಿ ಸ್ವತಃ ಅನುಭವ ಪಡೆಯುತ್ತಿದ್ದ ಪಾಶ್ಚಾತ್ಯ ಲೇಖಕರಂತಹ ಬರಹಗಾರರು ಕನ್ನಡದಲ್ಲಷ್ಟೇ ಏಕೆ ಭಾರತೀಯ ಸಾಹಿತ್ಯ ಲೋಕದಲ್ಲೇ ಇಲ್ಲ. ಭಾರತೀಯರು ರಾಜ ಮಹಲಿನ ಕೋಶದ ಮೇಲೆ ಅದರಲ್ಲೂ ಕೂಲಿ ಕಾರ್ಮಿಕರ, ಶ್ರಮಿಕರ ಕೆಲಸಗಳ ಬಗ್ಗೆ ನಾವು ಬಹಳ ಮಡಿವಂತಿಕೆ ತೋರಿಸಿದ್ದೇವೆ. ನನ್ನ ದೃಷ್ಟಿಗೆ ನಿಲುಕಿದ ಮೊಟ್ಟಮೊದಲ ಟ್ರಕ್ ದಂಧೆಯ ಬರವಣಿಗೆ ಇದು.
ಕೆಲವು ವರ್ಷಗಳ ಹಿಂದೆ ನಾವು ಉತ್ತರ ಕನ್ನಡ ಜಿಲ್ಲೆಯವರು, ಅದರಲ್ಲೂ ಅಂಕೋಲೆಯವರು ಟ್ರಕ್ ನೋಡಿದರೆ ಸಾಕು ಶಾಪ ಹಾಕುತ್ತಿದ್ದೆವು. ಬಳ್ಳಾರಿಯ ಅದಿರನ್ನು ಬೇಲೆಕೇರಿ ಹಾಗೂ ಕಾರವಾರ ಬಂದರಿನಿಂದ ರಪ್ತು ಮಾಡಲಾಗುತ್ತಿತ್ತು. ನಂತರ ಕಾರವಾರ ಬಂದರಿನಲ್ಲಿ ಅದಿರು ವಹಿವಾಟನ್ನು ನಿಲ್ಲಿಸಿ ಕೇವಲ ಬೇಲೆಕೇರಿ ಬಂದರಿನಲ್ಲಿ ಮಾತ್ರ ವ್ಯವಹರಿಸುವಂತಾಯ್ತು. ಆಗಂತೂ ಅಂಕೋಲೆ ಹಾಗೂ ಇಡೀ ಉತ್ತರ ಕನ್ನಡ ಜಿಲ್ಲೆಯ ಧಾರಣ ಶಕ್ತಿಯನ್ನು ಮೀರಿ ಟ್ರಕ್ ಓಡಾಟ ನಡೆಯುತ್ತಿತ್ತು. ಹುಬ್ಬಳ್ಳಿಯಿಂದ ಯಲ್ಲಾಪುರ ಮಾರ್ಗವಾಗಿ ಅರಬೈಲ್ ಘಾಟ ದಾಟಿ ಬರಬೇಕಿದ್ದ ಟ್ರಕ್ ಗಳು ಘಾಟ್ ನಲ್ಲಿ ಅಪಘಾತಕ್ಕೀಡಾಗಿ ಅಂಕೋಲಾ ಹುಬ್ಬಳ್ಳಿ ರಸ್ತೆಯನ್ನೇ ಬಂದು ಮಾಡಿಬಿಡುತ್ತಿದ್ದವು. ಅರ್ಜೆಂಟ್ ಹುಬ್ಬಳ್ಳಿಗೆ ಹೋಗಬೇಕಾದವರು ಒದ್ದಾಡುವಂತಾಗುತ್ತಿತ್ತು. ಈ ಅದಿರು ಟ್ರಕ್ ಓಡಾಟದಿಂದ ಪ್ರಾಣ ಕಳೆದುಕೊಂಡ ಬೈಕ್ ಸವಾರರ ಕಾರು ಸವಾರರ ಲೆಕ್ಕ ಸಾವಿರದ ಗಟಿ ದಾಟಿದೆ. ಟ್ರಕ್ ಎಂದರೆ ಯಮದೂತ ಎಂದೆ ಭಾವಿಸಿ ಭಯಪಡುತ್ತಿದ್ದ ನನಗೆ ಅರಬೈಲ್ ಘಾಟ್ ನ ವಿವರಣೆಯನ್ನೂ ಒಳಗೊಂಡ ಚೆಕ್ ಪೋಸ್ಟ್ ಕಾದಂಬರಿಯ ಓದು ವಿಚಿತ್ರ ಕುತೂಹಲ ಹುಟ್ಟಿಸಿದ್ದು ಸುಳ್ಳಲ್ಲ.
ಬಹುಶಃ ನಾನಾಗ ಹತ್ತನೆಯ ತರಗತಿ. ಸಂಜೆಯ ಹೊತ್ತು ಒಂದು ಸುತ್ತು ಪಕ್ಕದ ಮನೆಯ ಕ್ಲಾಸ್ ಮೇಟ್ ಭಾರತಿ ಶಾನಭಾಗ್ ಜೊತೆ ವಾಕ್ ಹೋಗುತ್ತಿದ್ದೆ. ಹೈಸ್ಕೂಲಿನ ಮಾತುಗಳು ಬಹಳಷ್ಟು ಇರುತ್ತಿದ್ದವು. ಗೆಳತಿಯರ ಬಗ್ಗೆ, ಅವರ ಪ್ರೇಮದ ಬಗ್ಗೆ, ಕ್ಲಾಸಿನ ಹುಡುಗರ ಬಗ್ಗೆ ತಡೆಯೇ ಇಲ್ಲದೇ ಮಾತನಾಡುತ್ತ ರಸ್ತೆಯ ಮೇಲೆ ಒಂದಿಷ್ಟು ದೂರ ಹೋಗಿ, ರಸ್ತೆ ಪಕ್ಕದ ಸಂಕದ ಮೇಲೆ ಸ್ವಲ್ಪ ಹೊತ್ತು ಕುಳಿತು ಹಿಂದಿರುಗುತ್ತಿದ್ದೆವು. ರಸ್ತೆಯ ಮೇಲೆ ಓಡಾಡುವ ವಾಹನಗಳನ್ನು ಗಮನಿಸುವುದೂ ಒಂದು ರೀತಿಯಲ್ಲಿ ತಮಾಷೆ ಎನ್ನಿಸುತ್ತಿತ್ತು. ಅದರಲ್ಲೂ ಟ್ರಕ್ ಬಂದರೆ ಒಂದು ರೀತಿಯ ಒಳನಡುಕ, ಜೊತೆಗೆ ಚೇಷ್ಟೆ ಮಾಡುವುದರಲ್ಲಿ ಟ್ರಕ್ ಡ್ರೈವರ್ ಗಳು ಎತ್ತಿದ ಕೈಯಾದ್ದರಿಂದ ತಮಾಷೆ ಕೂಡ. ಜೋರಾಗಿ ಹೋಗುವ ಟ್ರಾವೆಲ್ಸ್ ನವರು ಕೂಡ ಕೆಲವೊಮ್ಮೆ ಚೇಷ್ಟೇ ಮಾಡುವುದಿರುತ್ತಿತ್ತು. ಎದುರು ಬರುತ್ತಿರುವ ಟ್ರಕ್ ನ ಒಂದೇ ಬದಿಯ ಲೈಟ್ ಆನ್ ಆಗಿ ಆಫ್ ಆದರೆ ಅದು ಕಣ್ಣು ಹೊಡೆದಂತೆ ಎಂದು ಹೇಳಿಕೊಟ್ಟವಳೂ ಅವಳೇ. ಯಾಕೆಂದರೆ ಅವರದ್ದೊಂದು ಅಂಗಡಿ ಇತ್ತು. ಕಿರಾಣಿ ಸಾಮಾನಿನ ಜೊತೆ ಚಹಾ ಕೂಡ ಕೊಡುತ್ತಿದ್ದರು. ಹೀಗಾಗಿ ಬಹಳಷ್ಟು ವಾಹನಗಳು ಅಲ್ಲಿ ನಿಲ್ಲುತ್ತಿದ್ದುದರಿಂದ ಈ ವಾಹನಗಳ ಬಗ್ಗೆ ಹಾಗೂ ವಾಹನ ಚಾಲಕರ ಬಗ್ಗೆ ಅವಳಿಗೆ ಅದೆಷ್ಟೋ ವಿಷಯಗಳು ಗೊತ್ತಿರುತ್ತಿದ್ದವು. ಶಿಕ್ಷಕರ ಮಗಳಾದ ನನಗೆ ಅದೊಂದು ಅಪರಿಚಿತವಾದ ಹೊಸತೇ ಆದ ಲೋಕ. ಹೀಗಾಗಿ ಟ್ರಕ್ ನವರು ಮತ್ತು ಟ್ರಾವೆಲ್ಸ್ ನವರು ಒಂದು ಬದಿಯ ಲೈಟ್ ಹಾಕಿದರೆ ಬಿದ್ದು ಬಿದ್ದು ನಗುತ್ತಿದ್ದೆವು.
ಅಂತಹುದ್ದೇ ಒಂದು ದಿನ. ಸಂಕದ ಮೇಲೆ ಕುಳಿತು ಯಾವುದೋ ಮಾತಲ್ಲಿ ಮಗ್ನರಾಗಿದ್ದೆವು. ಒಂದು ಮಿನಿ ಟ್ರಕ್ ನಮ್ಮೆದುರಿಗೆ ಬಂದಿದ್ದು ಸಡನ್ ಆಗಿ ಬ್ರೆಕ್ ಹಾಕಿ ಕ್ರೀಚ್ ಎಂದು ಶಬ್ಧ ಮಾಡುತ್ತ ನಿಂತಿತು. ಡ್ರೈವರ್ ಕಿಟಕಿಯಿಂದ ಮುಖ ಹೊರಹಾಕಿ ಏನೋ ಹೇಳಿದ. ನಾನು ಗಡಗಡ ನಡುಗಲು ಆರಂಭಿಸಿದೆ. ಪಕ್ಕದಲ್ಲಿ ಕುಳಿತ ಗೆಳತಿ ಎಲ್ಲಿ ಎಂದು ನೋಡಿದರೆ ಎಲ್ಲಿಯೂ ಕಾಣುತ್ತಿಲ್ಲ. ಅತ್ತಿತ್ತ ದೃಷ್ಟಿ ಹಾಯಿಸಿದರೆ ನಾವು ನಡೆದು ಬರುವಾಗ ಮುರಿದುಕೊಂಡ ರಸ್ತೆಯ ಪಕ್ಕದ ಗಿಡವೊಂದರ ಟೊಂಗೆಯನ್ನು ಆ ಟ್ರಕ್ ನ ಹಿಂಬದಿಗೆ ಸಿಕ್ಕಿಸುವುದರಲ್ಲಿ ಮಗ್ನಳಾಗಿದ್ದಳು. ಇತ್ತ ಟ್ರಕ್ ಡ್ರೈವರ್ ನ ಪ್ರೇಮಾಲಾಪನೆಗೆ ಸಿಟ್ಟು, ಅತ್ತ ಅವಳ ಕೆಲಸ ನೋಡಿ ನಗು ಎರಡೂ ಏಕಕಾಲದಲ್ಲಿ ಅನುಭವಿಸುತ್ತ ನಾನು ತಲೆತಗ್ಗಿಸಿ ನಿಂತಿದ್ದೆ. ಅಂತೂ ಹೇಳಬೇಕಾದುದನ್ನೆಲ್ಲ ಬಾಯಿಪಾಠ ಹಾಕಿಕೊಂಡಂತೆ ಹೇಳಿ ಕೊನೆಗೆ ‘ಮೆರಾ ಸಪ್ನೊಂಕಿ ರಾಣಿ ತೂ ಆಯೆಗಿ ಕಬ್...’ ಎನ್ನುತ್ತ ಟ್ರಕ್ ಹೊರಟಾಗ ಭಯ ಹಾಗು ನಗುವಿನ ನಡುವಿನ ನಾನು ಅವಳನ್ನು ದರದರನೆ ಎಳೆದುಕೊಂಡು ಮನೆ ಸೇರಿದ್ದೆ. ನಂತರ ಅವಳೆಷ್ಟೇ ಹೇಳಿದರೂ ಕುಮಟಾ ಶಿರಸಿಯ ಆ ರಾಜ್ಯ ಹೆದ್ದಾರಿ ಬಿಟ್ಟು ಕಾಡಿನ ದಾರಿ ಆರಿಸಿಕೊಂಡಿದ್ದೆ. ಇಡೀ ಕಾದಂಬರಿ ಓದುವಾಗ ನನಗೆ ಪದೆ ಪದೆ ನೆನಪಾದ ಘಟನೆ ಇದು.
ಟ್ರಕ್ ಡ್ರೈವರ್ ಹಾಗೂ ಕ್ಲೀನರ್ ಗಳ ಬಗ್ಗೆ ರಂಜನೀಯವಾದ ಕಥೆಗಳನ್ನಷ್ಟೇ ಕೇಳಿದ್ದ ನನಗೆ ಈ ಕಾದಂಬರಿಯ ಓದು ಹೊಸತೇ ಆದ ಅನುಭವ ನೀಡಿತು. ಪದೇ ಪದೇ ಹಾಳಾಗುವ ಟ್ರಕ್ ಗಳು, ಸೋರುವ ಇಂಜಿನ್ ಗಳು, ಕೈಕೊಡುವ ಬಿಡಿ ಭಾಗಗಳು ಎಲ್ಲವೂ ಒಬ್ಬ ಟ್ರಕ್ ಡ್ರೈವರ್ ನನ್ನ ಯಾವ ಪರಿ ಕಂಗೆಡಿಸಬಹುದು ಎಂಬುದನ್ನು ಸ್ವತಃ ಅನುಭವಿಸಿ ಬರೆದಿದ್ದಾರೆ ರಾಜು ಗಡ್ಡಿ. ಇಲ್ಲಿನ ಕಥೆಯ ಬಹುತೇಕ ಅನುಭವ ಸ್ವತಃ ಅವರದ್ದೇ. ಎಲ್ಲೋ ಕೆಲವಷ್ಟನ್ನು ಕಾಲ್ಪನಿಕವಾಗಿ ಕಾದಂಬರಿಯಾಗಿಸುವ ದೃಷ್ಟಿಯಿಂದ ಸೇರಿಸಿರಬಹುದೇನೋ. ಆದರೆ ಅವರೇ ಹೇಳುವಂತೆ ಇದೊಂದು ಅವರ ಆತ್ಮಕಥೆಯ ತುಣುಕು. ಈಗ ಕೆ ಇ ಬಿ ಯಲ್ಲಿ ನೌಕರರಾಗಿರುವ ರಾಜು ಆಟೊಮೊಬೈಲ್ ಡಿಪ್ಲೋಮಾ ಮುಗಿಸಿದ್ದರಿಂದ ಟ್ರಕ್ ನಿಭಾಯಿಸಬಲ್ಲೆ ಎಂಬ ಹುಂಬು ಧೈರ್ಯಕ್ಕೆ ಸಿಲುಕಿ ಟ್ರಕ್ ಕೊಂಡು ಸ್ವತಃ ಡ್ರೈವರ್ ನಾಗಿಯೂ ಕೆಲಸ ಮಾಡಿದ ಮೂರ್ನಾಲ್ಕು ವಷಱದ ಅನುಭವಗಳ ಸಾರ ಇಲ್ಲಿದೆ.
ಆಟೊಮೊಬೈಲ್ ಡಿಪ್ಲೋಮಾ ಓದುವಾಗ ತನ್ನ ಜೊತೆಗೇ ಓದುತ್ತ ಕಡಿಮೆ ಅಂಕ ಗಳಿಸುತ್ತ ಎಲ್ಲದಕ್ಕೂ ಇವರನ್ನೇ ಆಶ್ರಯಿಸುತ್ತಿದ್ದ ಸ್ನೇಹಿತನೊಬ್ಬ ನಂತರ ಆರ್ ಟಿ ಓ ಆದ ನಂತರ ತೋರುವ ದರ್ಪ, ದೌಲತ್ತುಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ತಾನು ಪಡೆದ ಸಹಾಯ ಮರೆತು ಯಾವುದೋ ಡಾಕ್ಯುಮೆಂಟ್ ಹೆಸರು ಹೇಳಿ ಸಾವಿರಗಟ್ಟಲೆ ಲಂಚ ಪಡೆವ ಕುಟಿಲತೆಯನ್ನು ಎತ್ತಿ ಹಿಡಿದಿದ್ದಾರೆ. ಜಾತಿಯ ಆಧಾರದಿಂದ ದೊಡ್ಡ ಹುದ್ದೆಗೇರಿದ ಪ್ರಸ್ತಾಪ ಮುಜುಗರ ಹುಟ್ಟಿಸುತ್ತದೆಯಾದರೂ ಒಳ್ಳೆಯ ಅಂಕ ಪಡೆದೂ ತನ್ನ ಓದಿಗೆ ತಕ್ಕುನಾದ ನೌಕರಿ ಸಿಗದ ಅಸಮಧಾನ ಈ ಸಾಲುಗಳಂತೆಯೇ ಅಲ್ಲಲ್ಲಿ ಇಣುಕಿ ಹಾಕುತ್ತದೆ. ಜಿಲ್ಲೆಯ ಗಡಿಯಲ್ಲಿಯೇ ಕಾದು ಹಣ ಪೀಕುವ ಇನ್ನೊಬ್ಬ ಆರ್ ಟಿ ಓ ಕುರಿತಾದ ಸುದೀರ್ಘ ವಿವರಣೆಯೂ ಇಲ್ಲಿದೆ. ಕಾರ್ ನ್ನು ಸರಿಯಾಗಿ ರಿವರ್ಸ್ ಹಾಕಿ ನಿಲ್ಲಿಸಲು ಬರದ ನನಗೆ ‘ನಿನಗ್ಯಾರು ಲೈಸನ್ಸ್ ಕೊಟ್ಟಿದ್ದು? ನಾನಾದರೆ ಕೊಡ್ತಾ ಇರಲಿಲ್ಲ.’ ಎಂದ ಆರ್ ಟಿ ಓ ಹುದ್ದೆಯಿಂದ ನಿವೃತ್ತರಾದ ನನ್ನ ಕಸಿನ್ ಒಬ್ಬರು ಕೆಲವು ದಿನಗಳ ಹಿಂದೆ ಕಿಚಾಯಿಸಿದ್ದು ನೆನಪಿಗೆ ಬಂತು. ‘ಅದಕ್ಕೇ ಲೈಸೆನ್ಸ್ ಮಾಡಿಸುವಾಗ ನಿನಗೆ ಫೋನ್ ಮಾಡಿರಲಿಲ್ಲ’ ಎಂದು ನಾನೂ ನಕ್ಕಿದ್ದೆ.
ನಾನು ಹೈಸ್ಕೂಲ್ ನಲ್ಲಿರುವಾಗ ನನ್ನ ಸ್ನೇಹಿತೆಯೊಬ್ಬಳು ದೂರದಿಂದ ಬರುತ್ತಿದ್ದಳು. ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದ್ದರಿಂದ ಆ ರಸ್ತೆಯಲ್ಲಿ ಬರುವ ಯಾವುದಾದರೂ ವಾಹನಗಳಿಗೆ ಕೈ ತೋರಿಸಿ ಶಾಲೆಗೆ ಬರುತ್ತಿದ್ದರು. ಆಗ ಕಾಲ ಇಷ್ಟೊಂದು ಕೆಟ್ಟಿರಲಿಲ್ಲ. ಶಾಲೆಯ ಯುನಿಫಾರ್ಮ್ ನೋಡಿ ಓದುವ ಮಕ್ಕಳು ಎಂದು ಖುಷಿಯಿಂದಲೇ ಹೆಚ್ಚಿನವರು ಶಾಲೆಯ ಬಳಿ ಬಿಟ್ಟು ಹೋಗುತ್ತಿದ್ದರು. ಮಕ್ಕಳ ಕಳ್ಳರು ಇರುತ್ತಾರೆ ಎನ್ನುವ ಅಂಜಿಕೆಯೊಂದು ಬಿಟ್ಟರೆ ಈಗಿನಂತೆ ಹುಡುಗಿಯರು ಯಾರೋ ಅಪರಿಚಿತರ ಜೊತೆ ಬಂದರೆ ಅನಾಹುತವಾಗಬಹುದು ಎಂಬ ಭಯ ಇರಲಿಲ್ಲ. ಒಂದು ದಿನ ನನ್ನ ಗೆಳತಿ ಹೀಗೆ ಒಂದು ಟ್ರಕ್ ಗೆ ಕೈ ಮಾಡಿ ಹತ್ತಿದ್ದಾಳೆ. ಶಿರಸಿ ಕುಮಟಾ ರಸ್ತೆಯಲ್ಲಿ ಒಂದು ಕಾಲದಲ್ಲಿ ಎಲ್ಲ ವಾಹನಗಳೂ ನಿಂತು ಚಹಾ ಕುಡಿದು ಹೋಗುತ್ತಿದ್ದ ಅಂಗಡಿ ಅವಳ ಅಪ್ಪನದ್ದು. ಹೀಗಾಗಿ ಅವಳಿಗೆ ಅಂತಹ ಯಾವ ಭಯವೂ ಇರಲಿಲ್ಲ. ಆದರೆ ಸ್ವಲ್ಪ ದೂರ ಬರುವಷ್ಟರಲ್ಲಿ ಟ್ರಕ್ ಡ್ರೈವರ್ ಅವಳ ಬಳಿ ಮಾತಾಡಿ ಅವಳು ಯಾರ ಮಗಳು ಎಂದು ತಿಳಿದುಕೊಂಡಿದ್ದಾನೆ. ಟ್ರಕ್ ನಿಲ್ಲಿಸಿ ಹಣ ಕೊಡು ಎಂದು ಒಂದೇ ಸಮ ಒತ್ತಾಯಿಸಿದ್ದಾನೆ. ಕಾರಣವೇನೆಂದರೆ ಹಿಂದೊಮ್ಮೆ ಅವಳ ಅಪ್ಪನ ಅಂಗಡಿಯಲ್ಲಿ ಚಹಾ ಕುಡಿದಿದ್ದ ಆತ ನೂರು ರೂಪಾಯಿಯ ಚಿಲ್ಲರೆ ಬಿಟ್ಟು ಹೋಗಿದ್ದನಂತೆ. ಈಗ ಅವಳು ಆ ಹಣ ಕೊಟ್ಟರೆ ಮಾತ್ರ ಶಾಲೆಗೆ ಬಿಡುತ್ತೇನೆ, ಇಲ್ಲವಾದರೆ ಟ್ರಕ್ ಇಲ್ಲಿಯೇ ನಿಲ್ಲಿಸಿಬಿಡುತ್ತೇನೆ ಎಂದು ರೋಪ್ ಹಾಕಿದ್ದಾನೆ. ಬಸ್ ಗೆ ಬಂದರೆ ವರ್ಷ ಪೂರ್ತಿ ಪಾಸ್ ಇರುತ್ತದೆ. ಹೀಗೆ ಬೇರೆ ಯಾವುದೋ ವಾಹನಕ್ಕೆ ಬಂದರೆ ಅಲ್ಲಿಯವರೆಗೆ ಶಾಲೆಯ ಮಕ್ಕಳಿಂದ ಹಣ ತೆಗೆದುಕೊಂಡ ಇತಿಹಾಸವೇ ಇಲ್ಲ. ಹಾಗಿರುವಾಗ ಐದು ರೂಪಾಯಿಗಿಂತ ಹೆಚ್ಚಿನ ಹಣ ಯಾವ ವಿದ್ಯಾರ್ಥಿಯ ಬಳಿಯೂ ಇರುತ್ತಿರಲಿಲ್ಲ. ಹಾಗಿರುವಾಹ ನೂರು ರೂಪಾಯಿನ ಚಿಲ್ಲರೆ ಕೊಡು ಅಂದರೆ ಅವಳಾದರೂ ಹೇಗೆ ಕೊಟ್ಟಾಳು? ಮತ್ತೊಂದು ಸಲ ಂಗಡಿಗೆ ಹೋದಾಗಲೂ ನಿಮ್ಮಪ್ಪ ಹಣದ ನೆನಪು ಮಾಡಲಿಲ್ಲ. ೀಗ ನನಗೆ ನೆನಪಾಗಿದೆ. ಹಣ ಕೊಟ್ಟು ಬಿಡು ಎಂದು ಒರಾತೆ ತೆಗೆದಿದ್ದಾನೆ. ಅಂತೂ ಕಾಡಿ ಬೇಡಿ, ಅಪ್ಪನ ಬಳಿ ಹಣ ಕೊಡಿಸುವ ವಾಗ್ಧಾನ ಮಾಡಿ ಅವಳು ಶಾಲೆಗೆ ಬರುವಷ್ಟರಲ್ಲಿ ಒಂದು ಅವಧಿ ಮುಗಿದೇ ಹೋಗಿತ್ತು. ಆ ಘಟನೆಯನ್ನು ಅವಳು ವಿವರಿಸುವಾಗ ಅವಳ ಕಣ್ಣು ಧ್ವನಿಯಲ್ಲಿದ್ದ ಹೆದರಿಕೆ ನನಗೆ ಎಷ್ಟು ತಾಗಿತ್ತೆಂದರೆ ನಾನೂ ಅಕ್ಷರಶಃ ನಡುಗಿ ಹೋಗಿದ್ದೆ. ಯಾಕೋ ಮೂಡುಬಿದೆರೆಯಲ್ಲಿ ಓದುತ್ತಿದ್ದ ಕರಿಯಪ್ಪ ಆರ್ ಟಿ ಓ ನ ಮಗಳಿಗೆ ಧಮಕಿ ಹಾಕಿದ ಪ್ರಸಂಗ ಓದುವಾಗ ಇದೆಲ್ಲ ನೆನಪಾಗಿ ಮತ್ತೊಮ್ಮೆ ಭಯ ಒತ್ತರಿಸಿ ಬಂತು.
ಟ್ರಕ್ ನ ವ್ಯವಹಾರ, ರಿಪೇರಿ ಮುಂತಾದುವುಗಳೆಲ್ಲ ಕೆಲವೆಡೆ ಪೇಜುಗಟ್ಟಲೆ ಆಕ್ರಮಿಸಿ ಅಲ್ಲಲ್ಲಿ ಡಾಕ್ಯುಮೆಂಟರಿ ಓದಿದಂತಾಗಿ ನೀರಸ ಎನ್ನಿಸಿದರೂ ಇಡೀ ಕಾದಂಬರಿಯನ್ನು ಓದುವಾಗ ಅದರ ಎಲ್ಲಾ ಪುಟಗಳೂ ರೋಚಕವಾಗಿಯೇ ಇರಬೇಕಿಲ್ಲ ಎಂಬುದನ್ನೂ ಗಮನಿಸಬೇಕಾಗುತ್ತದೆ. ಪ್ರಸಿದ್ದರ ಕಾದಂಬರಿಯ ಮಧ್ಯೆ ಕೂಡ ಬೇಸವೆನಿಸಿ ಪುಟ ತಿರುವುದನ್ನು ಅಲ್ಲಗಳೆಯಲಾಗದು. ಕನ್ನಡ ಕಾದಂಬರಿ ಲೋಕಕ್ಕೆ ಒಂದು ಹೊಸತೇ ಆದ ವಿಷಯವನ್ನು ಎದುರಿಗಿಟ್ಟು ಕುತೂಹಲಕರವಾದ ಓದನ್ನು ಹಾಕಿಕೊಟ್ಟ ಚೆಕ್ ಪೋಸ್ಟ್ ನ್ನು ಖಂಡಿತವಾಗಿಯೂ ಓದಿ ಆನಂದಿಸಬಹುದು. ಪುಸ್ತಕ ಪ್ರಿಯರಿಗೆ, ಹೊಸ ವಿಷಯವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ ನಿರಾಸೆ ಮಾಡದ ಪುಸ್ತಕ ಇದು ಎಂದು ಧೈರ್ಯವಾಗಿ ಹೇಳಬಹುದು.