ಶತಶತಮಾನಗಳೇ ಕಳೆದು ಹೋಗಿವೆ. ಇಪ್ಪತ್ತೊಂದನೇ ಶತಮಾನದ ಮಧ್ಯ ಭಾಗದಲ್ಲಿದ್ದೇವೆ. ಜಗತ್ತು ನಿಬ್ಬೆರಗಾಗುವ ಸಾಧನೆ ಮಾಡಿದೆ. ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದೆ. ಅದರಲ್ಲಿ ಹೆಣ್ಣಿನ ಪಾಲು ಕಡಿಮೆಯೇನಲ್ಲ. ಕೆಲವೊಮ್ಮೆ ಗಂಡಿಗಿಂತ ಹೆಚ್ಚೇ ಇದೆ. ಆದರೂ ಈ ಕ್ಷಣಕ್ಕೂ ಹೆಣ್ಣಿಗೆ ಇದ್ದುದನ್ನು ಇದ್ದಂತೆ ಹೇಳುವ ಧೈರ್ಯ ಮಾತ್ರ ಬಂದಿಲ್ಲ. ಎಲ್ಲೋ ಕೆಲವೊಮ್ಮೆ ಹೆಣ್ಣು ದನಿ ಎತ್ತಿದ್ದನ್ನು ನೋಡಬಹುದು. ವ್ಯಂಗ್ಯ ಚಿತ್ರಗಳಲ್ಲಿ ಗಂಡಿನ ಜುಟ್ಟು ಹಿಡಿದ ಹೆಂಡತಿಯನ್ನು ಕಾಣಬಹುದೇ ಹೊರತೂ ವಾಸ್ತವದಲ್ಲಿ ಸನ್ನಿವೇಶ ವ್ಯತಿರಿಕ್ತವಾಗಿಯೇ ಇದೆ. ಎಲ್ಲೋ ಕೆಲವು ಅಧಿಕಾರದಲ್ಲಿರುವ ಅಥವಾ ಉನ್ನತ ಹುದ್ದೆಯಲ್ಲಿರುವ ಮಹಿಳೆಯರು ತಾವು ಅಂದುಕೊಂಡಿದ್ದನ್ನು ಹೇಳಬಹುದೇ ಹೊರತೂ ಮಧ್ಯಮ ವರ್ಗದ ಮಹಿಳೆಯರಿಗೆ ಯಾವ ಕಾಲಕ್ಕೂ ಅದು ಸಾಧ್ಯವಿಲ್ಲದ ಮಾತು. ಕೆಲವೊಮ್ಮೆ ಅಂತಹ ಉನ್ನತ ಹುದ್ದೆಯಲ್ಲಿರುವ, ದೊಡ್ಡ ಅಧಿಕಾರಿಯಾಗಿರುವ ಮಹಿಳೆಯೂ ಕೂಡ ಕೆಲವೊಮ್ಮೆ ಮನೆಯಲ್ಲಿ ಅಸಹಾಯಕಳಾಗಬೇಕಾದುದನ್ನು ನೋಡಿದ್ದೇವೆ.
ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದ ಮಹಿಳೆಯರ ಸ್ಥಿತಿಯನ್ನು ಕೇಳುವುದೇ ಬೇಡ. ಮನೆಯೊಳಗಿನ ಒದ್ದಾಟ ಹೇಳುವಂತಿಲ್ಲ. ತನ್ನದೇ ಆದ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಬಹುತೇಕ ಯಾವ ಭಾರತೀಯ ಹೆಣ್ಣಿಗೂ ಇದುವರೆಗೂ ದಕ್ಕಿದೆಯೆಂದು ಎದೆ ತಟ್ಟಿ ಹೇಳುವಂತಿಲ್ಲ. ಹೀಗಾಗಿಯೇ ಗಜಲಕಾರ್ತಿ ಬರೆಯುತ್ತಾರೆ
ಇದ್ದುದನ್ನು ಇದ್ದಂತೆ ಬರೆಯುವ ಧೈರ್ಯ ನನಗಿಲ್ಲ
ಲಕ್ಷ್ಮಣರೇಖೆಯ ದಾಟಿ ಬರುವ ಧೈರ್ಯ ನನಗಿಲ್ಲ
ನಮ್ಮ ಸಾಮಾಜಿಕ ವ್ಯವಸ್ಥೆಯೇ ಹಾಗಿದೆ. ಗಂಡು ಇದ್ದದ್ದನ್ನು ಇದ್ದಂತೆ ಹೇಳಿದರೆ ಅವನು ನೇರಾನೇರ ಮಾತಿನವನು. ತುಂಬಾ ಖಡಕ್ ಎಂದು ಹೊಗಳಿಸಿಕೊಂಡರೆ ಹೆಣ್ಣೊಬ್ಬಳು ಇದ್ದದ್ದನ್ನು ಇದ್ದಂತೆ ಹೇಳಿದರೆ ಆಕೆ ಘಟವಾಣಿ ಎನ್ನಿಸಿಕೊಳ್ಳುತ್ತಾಳೆ. ಬಜಾರಿ ಎಂಬ ಹಣೆಪಟ್ಟಿ ಅಂಟಿಸಲು ಒಂದು ದೊಡ್ಡ ಪಡೆಯೇ ಸಿದ್ಧವಾಗಿ ನಿಂತಿರುತ್ತದೆ. ಅದು ಮನೆಯ ಒಳಗೆ ಹೊರಗೆ ಎಂಬ ಬೇಧವಿಲ್ಲದೆ. ಈ ಎಲ್ಲಾ ಸಾಮಾಜಿಕ, ಸಾಂಸಾರಿಕ ಕಟ್ಟುಪಾಡುಗಳ ಲಕ್ಷ್ಮಣ ರೇಖೆಯನ್ನು ದಾಟುವುದು ಅಷ್ಟೊಂದು ಸುಲಭದ ಮಾತಲ್ಲ. ಹೇಳಿದ್ದನ್ನು ಕೇಳದ ಸೀತಾ ಮಾತೆ ಲಕ್ಷ್ಮಣ ರೇಖೆಯನ್ನು ದಾಟಿ ಬಂದಿದ್ದಕ್ಕಾಗಿಯೇ ಅಷ್ಟೆಲ್ಲ ಕಷ್ಟ ಅನುಭವಿಸ ಬೇಕಾಯಿತು ಎನ್ನುವ ಸಿದ್ಧ ವಾಕ್ಯವನ್ನು ಎದುರಿಗಿಟ್ಟು ಸಂಪ್ರದಾಯ ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣಿನ ಧೈರ್ಯವನ್ನು ಕುಗ್ಗಿಸುವ ಕೆಲಸ ಇಂದು ನಿನ್ನೆಯದ್ದೇನಲ್ಲ. ಹೆಣ್ಣೆಂದರೆ ಕೇವಲ ನಾಲ್ಕು ಗೋಡೆಯ ನಡುವಣ ಆಡಿಸಿದಂತೆ ಆಡುವ ಗೊಂಬೆ ಮಾತ್ರವಾಗಿಯೇ ಇರಬೇಕು ಎಂಬ ಕಟ್ಟುಪಾಡುಗಳನ್ನು ಹುಟ್ಟುವಾಗಲೇ ಹೆಣ್ಣಿಗೂ ಅರೆದು ಕುಡಿಸಿ, ಗಂಡಿಗೆ ಹಾಗೆ ನೋಡಿಕೊಳ್ಳುವ ಯಜಮಾನಿಕೆಯನ್ನು ಕೊಟ್ಟುಬಿಟ್ಟಿರುತ್ತದೆ ಈ ಸಮಾಜ. ಹೀಗಾಗಿ ಮಾನಸಿಕವಾಗಿಯೇ ಈ ಲಕ್ಷ್ಮಣ ರೇಖೆಯನ್ನು ತನ್ನ ಗಡಿ ಎಂದು ಒಪ್ಪಿಕೊಂಡುಬಿಟ್ಟಿರುವ ಹೆಣ್ಣು ಾ ಮಿತಿಯನ್ನು ಮೀರುವ ಧೈರ್ಯವನ್ನು ತೋರುವುದು ಬಹಳ ಅಪರೂಪ.
ಗಂಡ ಕೊಡುವ ಹಿಂಸೆಯನು ಹೊರಗೆಡಹುವ ಹಾಗಿಲ್ಲ
ಅವನೆದುರು ನಿಂತು ಹೋರಾಡುವ ಧೈರ್ಯ ನನಗಿಲ್ಲ
ಸಂಸಾರ ಎಂದರೆ ಅದೊಂದು ಯಾರೂ ಹೊರಗಿನವರು ತಿಳಿಯಬಾರದ ಗುಟ್ಟು ಎಂದುಕೊಂಡಿರುವವರೇ ಹೆಚ್ಚು. ಹೀಗಾಗಿ ಸಾಂಸಾರಿಕ ಹಿಂಸೆಯು ಬಹುತೇಕವಾಗಿ ಬೆಳಕಿಗೆ ಬರುವುದೇ ಇಲ್ಲ. ಗಂಡ ಹೊಡೆದ, ಗಂಡ ಸಿಗರೇಟಿನಿಂದ ಸುಟ್ಟ ಎಂಬುದೆಲ್ಲವೂ ಸಹಜ ಎಂದೇ ಹೆಣ್ಣು ಸ್ವೀಕರಿಸಬೇಕಾದ ಸ್ಥಿತಿಯನ್ನು ಈ ಸಮಾಜ ಮೊದಲೇ ನಿರ್ಧರಿಸಿ ಬಿಟ್ಟಿದೆ. ಗಂಡ ಬೈಯ್ಯದೇ ಇನ್ನಾರು ಬೈಯ್ಯಲು ಸಾಧ್ಯ ಎನ್ನುವುದನ್ನು ತೀರಾ ಸಹಜ ಎಂಬಂತೆ ಅತ್ಯಂತ ತಿಳುವಳಿಕೆಯುಳ್ಳವರೇ ತಮ್ಮ ಮಾತಿನ ಮಧ್ಯೆ ತಮಗೆ ತಿಳಿಯದಂತೆ ಆಡುತ್ತಿರುವುದನ್ನು ಕಾಣುತ್ತೇವೆ. ಹಾಗಾದರೆ ಹೆಂಡತಿ ಬೈಯ್ದರೆ ಅದನ್ನು ತೀರಾ ಸಹಜ ಎಂದೇಕೆ ನಮ್ಮ ಸಮಾಜ ಒಪ್ಪಿಕೊಳ್ಳುವುದಿಲ್ಲ? ಏಕೆಂದರೆ ಹೆಂಡತಿ ಯಾವಾಗಿದ್ದರೂ ಆಕೆ ಎರಡನೆ ದರ್ಜೆಯ ಪ್ರಜೆ. ಅವಳು ಬೈಯ್ಯಿಸಿಕೊಳ್ಳಲು ಹಾಗು ಹೊಡೆಯಿಸಿಕೊಳ್ಳಲು ಅರ್ಹಳೆ ಹೊರತು ಆಕೆಗೆ ಹಾಗೆ ಮಾಡಲು ಯಾವುದೇ ಅಧಿಕಾರವಿಲ್ಲ. ಗಂಡ ತನಗೆ ಹಿಂಸೆ ಮಾಡುತ್ತಾನೆಂದು ಎಲ್ಲಿಯೂ ಬಾಯಿ ಬಿಟ್ಟು ಹೇಳುವಂತಿಲ್ಲ. ಯಾಕೆಂದರೆ ಸಂಸಾರದ ಗುಟ್ಟು ರಟ್ಟು ಮಾಡಿದರೆ ವ್ಯಾದಿಯನ್ನು ಬಹಿರಂಗಗೊಳಿಸಿಕೊಂಡಂತೆ ಎಂಬುದನ್ನೂ ನಮ್ಮ ಹಿಂದಿನವರು ಗಾದೆ ಮಾತಿನಂತೆ ಬಳಸಿ ಹೆಣ್ಣಿನ ಬಾಯಿಗೆ ಬೀಗ ಹಾಕಿಬಿಟ್ಟಿದ್ದಾರೆ. ಹೀಗಾಗಿ ಹಿಂಸಿಸುವ ಗಂಡನನ್ನು ಎದುರಿಸಿ ನಿಲ್ಲುವ ಧೈರ್ಯವನ್ನು ಯಾವ ಹೆಣ್ಣೂ ತೋರುವುದಿ್ಲ. ಒಂದು ವೇಳೆ ಗಂಡನನನ್ನು ಎದುರಿಸಿ ನಿಂತು ಆತ ದೂರವಾದರೆ ಹೆಣ್ಣನ್ನೇ ಗಂಡ ಬಿಟ್ಟವಳು ಎಂದು ದೂಷಿಸುತ್ತಾರೆಯೇ ಹೊರತು ಗಂಡಸನ್ನು ಹೆಂಡತಿ ಬಿಟ್ಟವನು ಎಂದು ತಮಾಷೆಗೂ ಹೇಳುವುದಿಲ್ಲ. ಗಂಡು ಹೆಂಡತಿಯಿಂದ ದೂರವಾಗಿ ತನ್ನದೇ ಆದ ಮತ್ತೊಮದು ಸಂಸಾರವನ್ನು ಕಟ್ಟಿಕೊಳ್ಳಬಹುದು. ಆದರೆ ಗಂಡನಿಂದ ದೂರವಾದ ಸ್ತ್ರೀಯೊಬ್ಬಳು ಮತ್ತೊಂದು ಸಂಸಾರ ಕಟ್ಟಿಕೊಳ್ಳಬೇಕೆಂದರೆ ಅವಳಿಗೆ ಮೊದಲೇ ಆತನೊಂದಿಗೆ ಸಂಬಂಧವಿತ್ತು ಎಂಬ ಆರೋಪವನ್ನು ಸುಲಭವಾಗಿ ಹೊರೆಸಿ ಅವಳನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ವಿಕೃತಿ ಮೆರೆಯುತ್ತದೆ ಸಮಾಜ.
ಅತ್ತೆ ಮಾವಂದಿರ ನಿಂದನೆ ಹಿಂಸೆಯಾಗುತ್ತದೆ.
ಎಲ್ಲವನು ತೊರೆದು ಹೋಗುವ ಧೈರ್ಯ ನನಗಿಲ್ಲ
ಸಂಸಾರವೆಂದರೆ ಗಂಡನೊಬ್ಬನೇ ಅಲ್ಲ. ಜೊತೆಗೆ ಅತ್ತೆ ಮಾವ ಇರುತ್ತಾರೆ. ಅಚ್ಚರಿಯೆನ್ನಿಸಬಹುದು, ಇಂದಿಗೂ ನಮ್ಮ ಹಳ್ಳಿಗಳಲ್ಲಿ ಅತ್ತೆ ಮಾವಂದಿರ, ನಾದಿನಿ ಮೈದುನರ ಕಾಟ ತಪ್ಪಿಲ್ಲ. ಹೊಸದಾಗಿ ಮದುವೆಯಾಗಿ ಬಂದ ಸೊಸೆಯನ್ನು ಹತ್ತಾರು ಕೆಲಸ ಹೇಳಿ ವಿವಶಗೊಳಿಸುವ ಆ ಮೂಲಕ ಅವಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ರೂಢಿ ಇದೆ. ಹತ್ತಾರು ಕೆಲಸಗಳನ್ನು ಏಕಕಾಲದಲ್ಲಿ ನಿಭಾಯಿಸಬೇಕಾದ ಹೊಣೆ ಹೊರೆಸಿ ಅವಳು ಕೆಲಸದಲ್ಲಿ ತಪ್ಪಿದರೆ ನಿಂದಿಸಿ, ದೂಷಿಸಿ, ಅವಳ ತವರು ಮನೆಯನ್ನೂ ಹೀಯಾಳಿಸಿ ಅವಮಾನ ಮಾಡುವ ಪರಿಪಾಟವನ್ನು ಇಂದಿಗೂ ಕಾಣುತ್ತಿದ್ದೇವೆ. ಆದರೆ ಹೀಗಾಗಿದೆ ಎಂದು ಈ ಎಲ್ಲವನ್ನು ತೊರೆದು ಹೋಗುವ ಧೈರ್ಯ ಹೆಣ್ಣಿಗಿದೆಯೇ? ಖಂಡಿತಾ ಇಲ್ಲ. ಏಕೆಂದರೆ ಅವಳು ಗಂಡನ ಮನೆ ಬಿಟ್ಟು ತವರು ಸೇರಿದರೆ ತಮಗೆ ಅವಮಾನ ಎಂದು ಸ್ವತಃ ತಾಯಿಯ ಮನೆಯವರೂ ಯೋಚಿಸುತ್ತಾರೆ. ಹೀಗಾಗಿ ಎಷ್ಟೇ ಕಷ್ಟವಾದರೂ ತರಿ, ತುಟಿ ಬಿಗಿ ಹಿಡಿದು ಗಂಡನ ಮನೆಯನ್ನೇ ನೆಚ್ಚಿ ಬಾಳುವೆ ಮಾಡಬೇಕು ಎಂದು ಸ್ವತಃ ತಾಯಿಯೇ ಮಗಳಿಗೆ ಪಾಠ ಹೇಳಿಕೊಡುತ್ತಾಳೆ. ಹೆಣ್ಣೊಬ್ಬಳು ಹುಟ್ಟಿದರೆ ಸಾಕು, ಹುಟ್ಟುತ್ತಲೇ ಅವಳಿಗೆ ಗಂಡನ ಮನೆಯಲ್ಲಿ ಹೇಗಿರಬೇಕು ಎನ್ನುವ ಪಾಠವನ್ನು ಬೋಧಿಸಲು ಈ ಸಮಾಜ ಸ್ವಂತ ತಾಯಿಯನ್ನೇ ದಾಳವನ್ನಾಗಿ ಬಳಸಿಕೊಂಡಿರುತ್ತದೆ. ಹೀಗಾಗಿ ಯಾವ ಹೆಣ್ಣೂ ತಕ್ಷಣಕ್ಕೆ ಮದುವೆ ಎನ್ನುವ ಬಂಧನವನ್ನು ಕಿತ್ತೆಸೆಯುವ ಧೈರ್ಯ ಮಾಡುವುದಿಲ್ಲ.
ಎಷ್ಟು ದುಡಿದರೂ ಪ್ರೀತಿಯ ಮಾತನಾಡುವವರಿಲ್ಲ
ಸಂಕಟಗಳಿಂದ ಮುಕ್ತಿ ಪಡೆವ ಧೈರ್ಯ ನನಗಿಲ್ಲ
ಅತ್ತೆ ಮನೆಯೆಂದರೆ ಅದು ಅತ್ತೆ ಮನೆಯೇ. ಅದರಲ್ಲೂ ಮನೆ ತುಂಬ ಜನರಿದ್ದರಂತೂ ಅದೊಂದು ಸಾಕ್ಷಾತ್ ನರಕ. ಅಡುಗೆ ಮಾಡಬೇಕು, ಕಸ ಮುಸುರೆ ಬಳಿಯಬೇಕು, ಮನೆಯನ್ನು ಒರೆಸಿ ಗುಡಿಸಿ ಸ್ವಚ್ಛವಾಗಿಡಬೇಕು, ಮನೆಯವರೆಲ್ಲರ ಬಟ್ಟೆ ತೊಳೆಯಬೇಕು ಈ ಎಲ್ಲ ಮನೆಕೆಲಸದ ಹೊರೆಯ ಜೊತೆ ಮನೆಯವರು ಹೇಳಿದ ಹೆಚ್ಚುವರಿ ಕೆಲಸಗಳನ್ನೂ ನಗುನಗುತ್ತಲೇ ಮಾಡಬೇಕು. ಎಲ್ಲಾದರೂ ಸುಸ್ತು ಸಂಕಟ ಎಂದಳೋ ಆಳಿಗೊಂದು ಕಲ್ಲು ಎಂಬಂತೆ ಮಾತನ್ನೆಸೆದು ಮನಸ್ಸನ್ನು ಗಾಯಗೊಳಿಸಲು ಹಿಂದೆಮುಂದೆ ನೋಡುವುದಿಲ್ಲ.ಎಷ್ಟು ಕೆಲಸ ಮಾಡಿದರೂ ಒಂದೇ ಒಂದು ಪ್ರೀತಿಯ ಮಾತು ಕೇಳುವುದಿಲ್ಲ. ಆದರೂ ಹೆಣ್ಣು ಈ ಎಲ್ಲ ಸಂಕಟಗಳಿಂದ ಮುಕ್ತವಾಗುವ ಧೈರ್ಯ ತೋರುವುದಿಲ್ಲ. ಬದಲಾಗಿ ತನ್ನ ಅದೃಷ್ಟ ಇದು, ತನ್ನ ಹಣೆಬರೆಹವೇ ಚೆನ್ನಾಗಿಲ್ಲ ಎಂದು ಅನುಸರಿಸಿಕೊಂಡು ಹೋಗುತ್ತಾಳೆ.
ಗಂಡ ಕುಡಿದು ತೂರಾಡಿದರೂ ಕೇಳುವಂತಿಲ್ಲ
ಹೀಗೇಕಾಯಿತೆಂದು ಕೇಳುವ ಧೈರ್ಯ ನನಗಿಲ್ಲ
ಗಂಡ ಕುಡಿದರೂ ಸರಿ, ಬಡಿದರೂ ಸರಿ, ಹೆಣ್ಣಾದವಳು ಅವನ ಮರ್ಜಿಯನ್ನು ಅನುಸರಿಸಿಕೊಂಡು ಹೋಗಬೇಕಾದುದು ಪಾತಿವೃತ್ಯದ ಮೊದಲ ಹೆಜ್ಜೆ ಎಂದೇ ಬೋಧಿಸುವ ಈ ಸಮಾಜದಲ್ಲಿ ತೂರಾಡುತ್ತ ಮನೆಗೆ ಬಂದವನಿಗೆ ಯಾಕೆ ಹೀಗೆ ಮಾಡುತ್ತಿ ಎಂದು ಕೇಳಲು ಸಾಧ್ಯವೇ? ಕುಡಿದು ಬಿದ್ದವನನ್ನು ಹುಡುಕುತ್ತ ಚರಂಡಿ, ಮೋರಿ ಹುಡುಕುತ್ತ, ಊರಿನ ಎಲ್ಲಾ ಸರಾಯಿ ಅಂಗಡಿಯ ಬಾಗಿಲನ್ನು ಎಡತಾಕುವ ಹೆಣ್ಣುಗಳನ್ನೂ ನೋಡಿದ್ದೇವೆ. ಆದರೆ ಹಾಗೆ ಹುಡುಕಾಡಿ ಜೋಲಿ ಹೊಡಿಯುವವನನ್ನು ಮನೆಗೆ ಕರೆದುಕೊಂಡು ಹೋಗಿ, ಊಟ ಮಾಡಿಸಿ, ಬೆಚ್ಚಗೆ ಹೊದೆಸಿ ಮಲಗಿಸುವ ಇವರು ಯಾಕೆ ಹೀಗೆ ಮಾಡುತ್ತೀರಿ ಎಂದು ಒಂದು ಮಾತು ಕೇಳಿದರೆ ಸಾಕು ಜಗತ್ಪ್ರಳಯವೇ ಆಗಿ ಬಿಡುತ್ತದೆ. ಅವಳು ಗಂಡನಿಗೆ ಎದುರು ಮಾತನಾಡುವ ಬಜಾರಿ ಎನ್ನಿಸಿಕೊಂಡುಬಿಡುತ್ತಾಳೆ. ಹೀಗಾಗಿ ಕುಡಿದು ಬರುವ ಗಂಡನನ್ನು ಯಾಕೆ ಹೀಗೆ ಮಾಡುತ್ತೀರಿ ಎಂದು ಕೇಳುವ ಧೈರ್ಯವನ್ನೂ ತೋರಿಸಲು ಹೆಣ್ಣು ಅಸಮರ್ಥಳು.
ಹೊಟ್ಟೆಯೊಳಗಿನ ಮಾತನ್ನು ಉಸಿರೊಡೆಯುವಂತಿಲ್ಲ
ಸೆರಗೊಳಗಿನ ಕಿಚ್ಚನ್ನು ಬಿಚ್ಚುವ ಧೈರ್ಯ ನನಗಿಲ್ಲ
ಸಂಸಾರವೆಂದರೆ ಅದೊಂದು ಬಿಸಿ ತುಪ್ಪದ ಹಾಗೆ ಆಡುವಂತಿಲ್ಲ ಅನುಭವಿಸುವಂತಿಲ್ಲ. ಹೊಟ್ಟೆಯೊಳಗಿನ ಸಾವಿರ ಮಾತುಗಳನ್ನು ಹೊರಗೆ ಆಡಿ ತೋರಿಸುವಂತಿಲ್ಲ. ಆದರೆ ಹಾಗೇ ಹೊಟ್ಟೆಯೊಳಗಿಟ್ಟುಕೊಂಡು ನರಳುವಂತೆಯೂ ಇಲ್ಲ. ಸಂಸಾರದ ಗುಟ್ಟುಗಳೆಂದರೆ ಸೆರಗೊಳಗಿನ ಕಿಚ್ಚಿದ್ದಂತೆ. ಅದನ್ನು ಬಿಚ್ಚಿ ತೋರಿಸುವ ಧೈರ್ಯವನ್ನು ಯಾವ ಹೆಣ್ಣೂ ಮಾಡುವುದಿಲ್ಲ.
ಹಿರಿಯ ಲೇಖಕಿ ವಿದ್ಯಾವತಿ ಅಂಕಲಗಿಯವರ ಗಜಲ್ ಇದು. ಧೈರ್ಯ ನನಗಿಲ್ಲ ಎನ್ನುವ ರಧೀಫನ್ನು ಬಳಸಿಕೊಂಡು ಹೆಣ್ಣಿನ ಸ್ಥೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೆಣ್ಣಿನ ಬದುಕಿನ ವಾಸ್ತವತೆಗೆ ಕನ್ನಡಿ ಹಿಡಿದಿರುವ ಈ ಗಜಲ್ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ಹೆಣ್ಣು ಹಾಗೂ ಗಂಡನ್ನು ಸಂಸಾರದ ಎರಡು ಚಕ್ರಗಳಿದ್ದಂತೆ ಎನ್ನುತ್ತಲೇ ಒಂದು ಚಕ್ರವನ್ನು ದುರ್ಬಲಗೊಳಿಸಿ ಸಂಸಾರದ ಬಂಡಿ ಎಳೆಯಲಿ ಎಂದು ಬಯಸುವ ಪುರುಷಾಹಂಕಾರವನ್ನು ಅನಾವರಣಗೊಳಿಸಿ ಬೆತ್ತಲುಮಾಡಿದ್ದಾರೆ. ಬರೆಯುವ, ಬರುವ, ಹೋರಾಡುವ, ಹೋಗುವ, ಪಡೆವ, ಕೇಳುವ, ಬಿಚ್ಚುವ ಎನ್ನುವ ಕಾಫಿಯಾದಲ್ಲಿ ವ ಎನ್ನುವ ಅಕ್ಷರವನ್ನು ರವೀಶ್ ಆಗಿ ಬಳಸಲಾಗಿದೆ. ಗಜಲಕಾರ್ತಿ ಇಲ್ಲಿ ತಖಲ್ಲೂಸ್ ನ್ನು ಬಳಸಿಲ್ಲ.
ಹೆಣ್ಣಿನ ಸ್ಥಿತಿಯನ್ನು ಪ್ರಸ್ತುತ ಪಡಿಸುವ ಗಜಲ್ ಓದುಗರಿಗೆ ಬಹಳ ಸಮಯ ಕಾಡುವುದರಲ್ಲಿ ಅನುಮಾನವಿಲ್ಲ.
ನಿಂದೆಯಾ ಇದು.. ಬರೆ ಬರೆ..
ReplyDeleteಬರಿ ಬರಿ..
ReplyDeleteನೂರಕ್ಕೆ ನೂರು ಸತ್ಯ ಬರೆದುತೊರಿಸಿದೀರಿ ನನಗೆ ತುಂಬಾ ಇಷ್ಟವಾಯಿತು ಧನ್ಯವಾದಗಳು ನಿಮಗೆ
ReplyDeleteಅತ್ಯುತ್ತಮ ಕವನಗಳನ್ನು ರಚನೆ ಮಾಡಿದ್ದೀರಿ. ಧನ್ಯವಾದಗಳು...
ReplyDelete