Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Thursday, 11 August 2022

ಸಾಹಿತ್ಯ ಮತ್ತು ವೈಯಕ್ತಿಕ ಬದುಕನ್ನು ರೋಚಕವಾಗಿಸಿದ ಮೊದಲ ಸ್ತ್ರೀವಾದಿ- ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್

ಸಾಹಿತ್ಯ ಮತ್ತು ವೈಯಕ್ತಿಕ ಬದುಕನ್ನು ರೋಚಕವಾಗಿಸಿದ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್

                 ಎಲಿಜಬೆತ್ ಡಿಕ್ಸನ್ ಮತ್ತು ಎಡ್ವರ್ಡ್ ಜಾನ್ ವೋಲ್ಸ್‌ಟೋನ್‌ಕ್ರಾಫ್ಟ್‌ರ ಏಳು ಮಕ್ಕಳಲ್ಲಿ  ಎರಡನೆಯವಳಾಗಿ ಲಂಡನ್‌ನ ಸ್ಪಿಟಲ್‌ಫೀಲ್ಡ್ಸ್‌ನಲ್ಲಿ ೨೭ ಏಪ್ರಿಲ್ ೧೭೫೯ ರಂದು ಜನಿಸಿದ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್ ಇಂಗ್ಲಿಷ್ ಲೇಖಕಿ, ತತ್ವಜ್ಞಾನಿ ಮತ್ತು ಮಹಿಳಾ ಹಕ್ಕುಗಳ ವಕೀಲರಾಗಿದ್ದರು.  ೨೦ ನೇ ಶತಮಾನದ ಅಂತ್ಯದವರೆಗೆ, ಆ ಸಮಯದಲ್ಲಿ ಅಸಾಂಪ್ರದಾಯಿಕ ಎನ್ನಿಸುವಂತಹ ಹಲವಾರು ವೈಯಕ್ತಿಕ ಸಂಬಂಧಗಳನ್ನು ಹೊಂದಿದ್ದ  ವೋಲ್‌ಸ್ಟೋನ್‌ಕ್ರಾಫ್ಟ್  ಜೀವನವು ಅವರ ಬರವಣಿಗೆಗಿಂತ ಹೆಚ್ಚಿನ ಗಮನ ಪಡೆದಿತ್ತು.  ಅವರು ಮಗುವಾಗಿದ್ದಾಗ ಕುಟುಂಬವು ನಿಶ್ಚಿತ ಆದಾಯವನ್ನು ಹೊಂದಿದ್ದರೂ ಅವರ ತಂದೆ ಅನವಶ್ಯಕ ಯೋಜನೆಗಳಲ್ಲಿ ತೊಡಗಿ ದುಂದುವೆಚ್ಛ ಮಾಡಿದುದರ ಪರಿಣಾಮವಾಗಿ, ಕುಟುಂಬವು ಆರ್ಥಿಕವಾಗಿ ಅಸ್ಥಿರವಾಯಿತು. ಹೀಗಾಗಿ ವೋಲ್‌ಸ್ಟೋನ್‌ಕ್ರಾಫ್ಟ್ ಯೌವನದಲ್ಲಿ ಬೇರೆಬೇರೆ ಕಡೆಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದರು. ಕುಟುಂಬದ ಆರ್ಥಿಕ ಪರಿಸ್ಥಿತಿಯು ಅಂತಿಮವಾಗಿ ಎಷ್ಟು ಘೋರವಾಯಿತೆಂದರೆ ವೋಲ್‌ಸ್ಟೋನ್‌ಕ್ರಾಫ್ಟ್‌ನ ತಂದೆ ಆಕೆ ಪ್ರೌಢಾವಸ್ಥೆಯಲ್ಲಿ ಆನುವಂಶಿಕವಾಗಿ ಪಡೆಯಬಹುದಾದ ಹಣವನ್ನು ತಿರುಗಿಸುವಂತೆ ಒತ್ತಾಯಿಸಿದರು.  ಇದಲ್ಲದೆ, ಅವರು ಕ್ರೂರವಾಗಿ ಹಾಗೂ ಹಿಂಸಾತ್ಮಕ ನಡೆದುಕೊಳ್ಳುವ ವ್ಯಕ್ತಿಯಾಗಿದ್ದು, ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಹೊಡೆಯುತ್ತಿದ್ದರಿಂದ ವೋಲ್‌ಸ್ಟೋನ್‌ಕ್ರಾಫ್ಟ್ ತಮ್ಮ  ತಾಯಿ ಮಲಗುವ ಕೋಣೆಯ ಬಾಗಿಲಿನ ಹೊರಗೆ ಅವಳನ್ನು ರಕ್ಷಿಸಲು ಮಲಗುತ್ತಿದ್ದರು. ಮುಂದೆ ಕೂಡ ವೋಲ್‌ಸ್ಟೋನ್‌ಕ್ರಾಫ್ಟ್ ತನ್ನ ಜೀವನದುದ್ದಕ್ಕೂ ಸಹೋದರಿಯರಾದ ಎವೆರಿನಾ ಮತ್ತು ಎಲಿಜಾಗೆ ಇದೇ ರೀತಿ ತಾಯಿಯ ಪಾತ್ರವನ್ನು ನಿರ್ವಹಿಸಬೇಕಾಯಿತು. ೧೭೮೪ರಲ್ಲಿ ತನ್ನ ಅಕ್ಕ ಎಲಿಜಾ ಹೆರಿಗೆಯ ಸಮಯದಲ್ಲಿ ಖಿನ್ನತೆಯಿಂದ ಬಳಲುತ್ತಿದ್ದಾಗ ಅವಳನ್ನು ಗಂಡ ಹಾಗು ಮಗುವನ್ನು ಬಿಟ್ಟು ಬರವಂತೆ ಧೈರ್‍ಯ ತುಂಬಿದ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್ ಆಗಿನಿಂದಲೇ ಮಹಿಳಾ ಸಮಾನತೆ ಮತ್ತು ಹಕ್ಕುಗಳಿಗಾಗಿ ಹೋರಾಡುವ ಗುಣವನ್ನು ಬೆಳೆಸಿಕೊಂಡಿದ್ದನ್ನು ಕಾಣಬಹುದು. ಆದರೆ ದುರದೃಷ್ಟವಶಾತ್ ಅಕ್ಕ ಎಲಿಜಾ ಜೀವನಪರ್‍ಯಂತ ನೋವನ್ನನುಭವಿಸುವಂತಾಯಿತು.
    ಎರಡು ಅತಿಮುಖ್ಯವಾದ ಸ್ನೇಹ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್‌ರವರ ಜೀವನವನ್ನು ರೂಪಿಸಿತ್ತು. ಮೊದಲನೆಯದ್ದು ಬೆವರ್ಲಿಯಲ್ಲಿ ಜೇನ್ ಆರ್ಡೆನ್ ಜೊತೆಗಿನ ಸ್ನೇಹ.  ಇಬ್ಬರೂ ಆಗಾಗ್ಗೆ ಒಟ್ಟಿಗೆ ಪುಸ್ತಕಗಳನ್ನು ಓದುತ್ತಿದ್ದರು. ಆರ್ಡೆನ್ ಅವರ ತಂದೆ ವಿಜ್ಞಾನಿ ಹಾಗೂ ತತ್ವಜ್ಞಾನಿಯಾಗಿದ್ದರು. ಆರ್ಡೆನ್ ಮನೆಯ ಬೌದ್ಧಿಕ ವಾತಾವರಣ ಇವರಿಗೆ ತುಂಬ ಇಷ್ಟವಾಗಿತ್ತು. ಆರ್ಡೆನ್ ಅವರೊಂದಿಗಿನ ಸ್ನೇಹವನ್ನು ಬಹಳವಾಗಿ ಗೌರವಿಸಿದರು. ಎರಡನೆಯ  ಮುಖ್ಯವಾದ ಸ್ನೇಹಿತೆಯೆಂದರೆ ಫ್ಯಾನಿ (ಫ್ರಾನ್ಸ್) ಬ್ಲಡ್. ತನ್ನ ಮನಸ್ಸನ್ನು ತೆರೆದಿಡಲು ಸಹಾಯಮಾಡಿದ ವ್ಯಕ್ತಿ ಎಂಬ ಶ್ರೇಯಸ್ಸನ್ನು ವೊಲ್‌ಸ್ಟೋನ್‌ಕ್ರಾಫ್ಟ್ ಬ್ಲಡ್‌ರವರಿಗೆ ನೀಡಿದ್ದಾರೆ.

ನಿಂತ ನೀರಂತೆ ಸ್ಥಬ್ಧವಾಗಿರುವ ತಮ್ಮ ಮನೆಯ ವಾತಾವರಣದಿಂದ ಅತೃಪ್ತಿ ಹೊಂದಿದ್ದ ವೊಲ್‌ಸ್ಟೋನ್‌ಕ್ರಾಫ್ಟ್ ೧೭೭೮ರಲ್ಲಿ ಬಾತ್‌ನಲ್ಲಿನ ಸಾರಾ ಡಾಸನ್ ಎಂಬ ಸಿಡುಕಿನ ವಿಧವೆಗೆ ಸಹಾಯಕಿಯಾಗಿ ಕೆಲಸ ಮಾಡಲು ಹೋದರಾದರೂ ಹೊಂದಿಕೊಳ್ಳಲು ಬಹಳ ಕಷ್ಟಪಟ್ಟರು.  ೧೭೮೦ರಲ್ಲಿ ಮರಣಶಯ್ಯೆಯಲ್ಲಿರುವ ತನ್ನ ತಾಯಿಯನ್ನು ನೋಡಿಕೊಳ್ಳಲು ಮನೆಗೆ ಹಿಂದಿರುಗಿದರು. ತಾಯಿಯ ಮರಣದ ನಂತರ ಡಾಸನ್‌ನ ಮನೆಗೆ ಹಿಂದಿರುಗುವ ಬದಲು, ಬ್ಲಡ್‌ಳೊಂದಿಗೆ ವಾಸಿಸಲು ಪ್ರಾರಂಭಿಸಿದರು. ವೊಲ್‌ಸ್ಟೋನ್‌ಕ್ರಾಫ್ಟ್‌ಗಿಂತ ಸ್ತ್ರೀಯರ ಕುರಿತಾದ ಸಾಂಪ್ರದಾಯಿಕ ಮೌಲ್ಯಗಳಲ್ಲಿ ಹೆಚ್ಚು ನಂಬಿಕೆಯಿರುವ ಬ್ಲಡ್ ಜೀವಮಾನದುದ್ದಕ್ಕೂ ಅವರ ಆತ್ಮೀಯ ಸ್ನೇಹಿತೆಯರಾಗಿದ್ದರು.
     ಜೀವನೋಪಾಯಕ್ಕಾಗಿ, ವೋಲ್‌ಸ್ಟೋನ್‌ಕ್ರಾಫ್ಟ್, ಆಕೆಯ ಸಹೋದರಿಯರು ಮತ್ತು ಬ್ಲಡ್ ನ್ಯೂವಿಂಗ್‌ಟನ್ ಗ್ರೀನ್‌ನಲ್ಲಿ ಶಾಲೆಯನ್ನು ಸ್ಥಾಪಿಸಿದರು, ಆದರೆ ಅಷ್ಟರಲ್ಲೇ ಬ್ಲಡ್ ಮದುವೆಯಾಗಿ ಸದಾ ರೋಗಗ್ರಸ್ತವಾಗಿದ್ದ ತನ್ನ ಆರೋಗ್ಯ ಸುಧಾರಿಸಬಹುದೆಂಬ  ಆಶಾಭಾವನೆಯಿಂದ ಪತಿ ಹಗ್ ಸ್ಕೈಸ್‌ನೊಂದಿಗೆ ಲಿಸ್ಬನ್ ಪೋರ್ಚುಗಲ್‌ಗೆ ತೆರಳಿದಳು, ಗರ್ಭಿಣಿಯಾದಾಗ ಫ್ಯಾನ್ಸಿ ಬ್ಲಡ್ ಆರೋಗ್ಯವು ಮತ್ತಷ್ಟು ಹದಗೆಟ್ಟಿತು. ೧೭೮೫ರಲ್ಲಿ ವೋಲ್‌ಸ್ಟೋನ್‌ಕ್ರಾಫ್ಟ್ ಶಾಲೆಯನ್ನು ಬಿಟ್ಟು ಅವಳನ್ನು ಶುಶ್ರೂಷೆ ಮಾಡಲು ಹೋದರಾದರೂ ಯಾವ ಪ್ರಯೋಜನವೂ ಆಗಲಿಲ್ಲ. ಜೊತೆಗೆ ಶಾಲೆಯನ್ನು ತ್ಯಜಿಸಿದ್ದರಿಂದ ಅದೂ ವಿಫಲಗೊಂಡಿತು.  ಆತ್ಮೀಯ ಗೆಳತಿ ಬ್ಲಡ್‌ರವರ ಸಾವು ವೋಲ್ಸ್ಟೋನ್ಕ್ರಾಫ್ಟ್‌ರನ್ನು ಖಿನ್ನತೆಗೆ ದೂಡಿತು. ಅವರ ಮೊದಲ ಕಾದಂಬರಿ, 'ಮೇರಿ: ಎ ಫಿಕ್ಷನ್' (೧೭೮೮)ಗೆ ಬ್ಲಡ್‌ರವರ ಜೀವನವೇ ಸ್ಫೂರ್ತಿ
ಬ್ಲಡ್ ಮರಣದ ನಂತರ ೧೭೮೫ರಲ್ಲಿ ವೊಲ್ಸ್‌ಟೋನ್‌ಕ್ರಾಫ್ಟ್‌ನ ಸ್ನೇಹಿತರು ಐರ್ಲೆಂಡ್‌ನಲ್ಲಿನ ಆಂಗ್ಲೋ-ಐರಿಶ್ ಕಿಂಗ್ಸ್‌ಬರೋ ಕುಟುಂಬದ ಹೆಣ್ಣುಮಕ್ಕಳನ್ನು ನೋಡಿಕೊಳ್ಳುವ ಕೆಲಸ ಪಡೆಯಲು ಸಹಾಯ ಮಾಡಿದರು.  ಲೇಡಿ ಕಿಂಗ್ಸ್‌ಬರೋ ಜೊತೆಗೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದರೂ ಮಕ್ಕಳು ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಸ್ಪೂರ್ತಿದಾಯಕ ಶಿಕ್ಕಕಿ ಎಂದು ಒಪ್ಪಿಕೊಂಡಿದ್ದರು. ಮಾರ್ಗರೆಟ್ ಕಿಂಗ್ ಎನ್ನುವ ಆ ಮನೆಯ ಹುಡುಗಿಯೊಬ್ಬಳು 'ತಾನು ಎಲ್ಲ ಮೂಢನಂಬಿಕೆಗಳಿಂದ ತನ್ನ ಮನಸ್ಸನ್ನು ಮುಕ್ತಗೊಳಿಸಿಕೊಳ್ಳಲು ವೋಲ್‌ಸ್ಟೋನ್‌ಕ್ರಾಫ್ಟ್ ಸಹಾಯ ಅಗಾಧವಾದದ್ದು' ಎಂದು ನಂತರ ಸ್ಮರಿಸಿಕೊಂಡಿದ್ದನ್ನು ಗಮನಿಸಬಹುದು. ಇಲ್ಲಿನ ಅನುಭವಗಳು ಅವರ ಏಕೈಕ ಮಕ್ಕಳ ಪುಸ್ತಕ, 'ಒರಿಜಿನಲ್ ಸ್ಟೋರೀಸ್ ಫ್ರಂ ರಿಯಲ್ ಲೈಫ್' (೧೭೮೮) ಪ್ರಕಟಗೊಳ್ಳಲು ಪ್ರೇರಣೆಯಾಯಿತು.                  
                            ಒಂದು ವರ್ಷ ಗವರ್ನೆಸ್ ಆಗಿದ್ದು ಲೇಖಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ವೋಲ್‌ಸ್ಟೋನ್‌ಕ್ರಾಫ್ಟ್‌ರವರಿಗೆ ಇದು ಆಮೂಲಾಗ್ರ ಆಯ್ಕೆಯಾಗಿತ್ತು, ಏಕೆಂದರೆ ಆ ಸಮಯದಲ್ಲಿ ಕೆಲವು ಮಹಿಳೆಯರು ಬರೆಯುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.  ೧೭೮೭ರಲ್ಲಿ ಸಹೋದರಿ ಎವೆರಿನಾಗೆ ಬರೆದಂತೆ ತಮ್ಮನ್ನು 'ಹೊಸ ಕುಲದ ಮೊದಲನೆಯವಳು' ಎಂದು ಬಿಂಬಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಮಾಡಿದರು. ಲಂಡನ್‌ಗೆ ತೆರಳಿ ಪ್ರಕಾಶಕ ಜೋಸೆಫ್ ಜಾನ್ಸನ್‌ರ ಸಹಾಯ ಪಡೆದು ಕೆಲಸ ದೊರಕಿಸಿಕೊಂಡರು. ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನು ಕಲಿತು ಭಾಷಾಂತರಿಸುವ ಕೆಲಸ ಮಾಡಿದರು. ಮುಖ್ಯವಾಗಿ ಜಾಕ್ವೆಸ್ ನೆಕರ್‌ರವರ ಧಾರ್ಮಿಕ ಅಭಿಪ್ರಾಯಗಳು ಮತ್ತು ಅಲೌಕಿಕತೆಗಳ ಬಗ್ಗೆ ಮಕ್ಕಳಿಗಾಗಿ ಕ್ರಿಶ್ಚಿಯನ್ ಗಾಥಿಲ್ಫ್ ಸಾಲ್ಜ್‌ಮನ್ ಅವರು ಬರೆದದ್ದನ್ನು ಭಾಷಾಂತರಿಸಿದರು. ಜಾನ್ಸನ್ ಅವರ ನಿಯತಕಾಲಿಕೆಗೆ ವಿಶ್ಲೇಷಣಾತ್ಮಕ ವಿಮರ್ಶೆಗಳನ್ನು, ಕಾದಂಬರಿಗಳ ಮೇಲೆ ಪ್ರಾಥಮಿಕವಾಗಿ ಅಭಿಪ್ರಾಯಗಳನ್ನು ಬರೆದಿದ್ದಾರೆ.  ವೋಲ್‌ಸ್ಟೋನ್‌ಕ್ರಾಫ್ಟ್‌ರ ಬೌದ್ಧಿಕಲೋಕವು ಈ ಸಮಯದಲ್ಲಿ ಅವರು ತನ್ನ ವಿಮರ್ಶೆಗಳಿಗಾಗಿ ಮಾಡಿದ ಓದುವಿಕೆಯಿಂದ ಮಾತ್ರವಲ್ಲದೆ ಅವರ ಸ್ನೇಹಿತರ ಬಳಗದಿಂದಲೂ ವಿಸ್ತರಿಸಿತು. ಜಾನ್ಸನ್‌ರವರ ಪ್ರಸಿದ್ಧ ಔತಣಕೂಟಗಳಲ್ಲಿ ಭಾಗವಹಿಸಿದರು. ಅಲ್ಲಿ ಮೂಲಭೂತವಾದ ಕರಪತ್ರಕಾರ ಥಾಮಸ್ ಪೈನ್ ಮತ್ತು ತತ್ವಜ್ಞಾನಿ ವಿಲಿಯಂ ಗಾಡ್ವಿನ್‌ರನ್ನು ಭೇಟಿಯಾದರು.  
     
     ಮೊದಲ ಬಾರಿಗೆ ಗಾಡ್ವಿನ್ ಮತ್ತು ವೋಲ್ಸ್ಟೋನ್ಕ್ರಾಫ್ಟ್ ಭೇಟಿಯಾದಾಗ, ಅವರು ಪರಸ್ಪರರ ಬಗ್ಗೆ ಅತೀವವಾಗಿ ನಿರಾಶೆಗೊಂಡರು.  ಗಾಡ್ವಿನ್‌ರವರು ಪೈನ್‌ರವರ ಭಾಷಣವನ್ನು ಕೇಳಲು ಬಂದಿದ್ದಾಗ ವೋಲ್‌ಸ್ಟೋನ್‌ಕ್ರಾಫ್ಟ್ ರಾತ್ರಿಯಿಡೀ ಅವರು ಹೇಳಿದ ಎಲ್ಲಾ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತ ವಾಗ್ಧಾಳಿ ನಡೆಸಿದರು.  ಆದರೆ ಜಾನ್ಸನ್‌ರನ್ನು ಸ್ನೇಹಿತನಿಗಿಂತ ಹೆಚ್ಚಾಗಿ ಪರಿಭಾವಿಸುತ್ತಿದ್ದ ವೋಲ್‌ಸ್ಟೋನ್‌ಕ್ರಾಫ್ಟ್ ತಮ್ಮ ಪತ್ರಗಳಲ್ಲಿ ಜಾನ್ಸನ್‌ರನ್ನು ತಂದೆ ಮತ್ತು ಸಹೋದರ ಎಂದು ವಿವರಿಸಿದ್ದಾರೆ.
              ಲಂಡನ್‌ನಲ್ಲಿ, ಸೌತ್‌ವಾರ್ಕ್‌ನಲ್ಲಿರುವ ಡಾಲ್ಬೆನ್ ಸ್ಟ್ರೀಟ್‌ನಲ್ಲಿ ವೋಲ್ಸ್‌ಟೋನ್‌ಕ್ರಾಫ್ಟ್ ವಾಸಿಸುತ್ತಿದ್ದ ವೋಲ್‌ಸ್ಟೋನ್‌ಕ್ರಾಫ್ಟ್  ಈಗಾಗಲೇ ಮದುವೆಯಾಗಿದ್ದ ಕಲಾವಿದ ಹೆನ್ರಿ ಫುಸೆಲಿಯೊಂದಿಗೆ ಸಂಬಂಧ ಬೆಳೆಸಿದರು.
 'ಅವನ ಪ್ರತಿಭೆ, ಅವನ ಆತ್ಮದ ಭವ್ಯತೆ, ಗ್ರಹಿಕೆಯ ತ್ವರಿತತೆ ಮತ್ತು ಸುಂದರ ಸಹಾನುಭೂತಿ'ಯಿಂದ ಪುಳಕಿತಳಾಗಿದ್ದೆ' ಎಂದು ಬರೆದುಕೊಂಡಿದ್ದಾರೆ. ಫುಸೆಲಿ ಮತ್ತು ಅವನ ಹೆಂಡತಿಯೊಂದಿಗೆ ಪ್ಲ್ಯಾಟೋನಿಕ್ ಜೀವನ ವ್ಯವಸ್ಥೆಯನ್ನು ಪ್ರಸ್ತಾಪಿಸಿದಳು. (ಕಾಮ ರಹಿತವಾದ ಪ್ರೇಮದ ಜೀವನ) ಆದರೆ ಫುಸೆಲಿಯ ಹೆಂಡತಿ ಗಾಬರಿಗೊಂಡಳು ಮತ್ತು ಪುಸೆಲಿ ವೋಲ್ಸ್‌ಟೋನ್‌ಕ್ರಾಫ್ಟ್‌ರೊಂದಿಗಿನ ಸಂಬಂಧವನ್ನು ಮುರಿದುಕೊಂಡನು.  ಫುಸೆಲಿಯ ನಿರಾಕರಣೆಯಿಂದಾದ ಅವಮಾನದಿಂದ ತಪ್ಪಿಸಿಕೊಳ್ಳಲು ವೊಲ್‌ಸ್ಟೋನ್‌ಕ್ರಾಫ್ಟ್ ಆಗಷ್ಟೇ ಬರೆದು ಮುಗಿಸಿದ 'ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ಮೆನ್' (೧೭೯೦)ನಲ್ಲಿ ತಾವೇ ಉತ್ಪ್ರೇಕ್ಷಿಸಿದ ಕ್ರಾಂತಿಕಾರಿ ಘಟನೆಗಳಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ತೆರಳಲು ನಿರ್ಧರಿಸಿದರು. 
 ವಿಗ್ ಎಂಪಿ ಎಡ್ಮಂಡ್ ಬರ್ಕ್ ಅವರ 'ದಿ ರೆವಲ್ಯೂಷನ್ ಇನ್ ಫ್ರಾನ್ಸ್' (೧೭೯೦) ಪುಸ್ತಕದ ರಾಜಕೀಯ ಹಾಗೂ ಸಂಪ್ರದಾಯವಾದಿ ಟೀಕೆಗೆ ಪ್ರತಿಕ್ರಿಯೆಯಾಗಿ 'ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ಮೆನ್' ಪುಸ್ತಕವನ್ನು ಬರೆದಿದ್ದಾರೆ. ಅದು ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ರಾತ್ರೋರಾತ್ರಿ ಪ್ರಸಿದ್ಧಿಗೊಳಿಸಿತು.  'ರಿಫ್ಲೆಕ್ಷನ್ಸ್ ಆನ್ ದಿ ರೆವಲ್ಯೂಷನ್ ಇನ್ ಫ್ರಾನ್ಸ್' ೧ ನವೆಂಬರ್ ೧೭೯೦ರಂದು ಪ್ರಕಟಿಸವಾಗಿದ್ದು 'ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ಮೆನ್, ಇನ್ ಎ ಲೆಟರ್ ಟು ದಿ ರೈಟ್ ಆನರೆಬಲ್ ಎಡ್ಮಂಡ್ ಬರ್ಕ್' ಅನಾಮಧೇಯವಾಗಿ ೨೯ ನವೆಂಬರ್ ೧೭೯೦ ರಂದು ಪ್ರಕಟವಾಯಿತು. ಆದರೆ 'ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ಮೆನ್'ನ ಎರಡನೇ ಆವೃತ್ತಿಯನ್ನು ಡಿಸೆಂಬರ್ ೧೮ ರಂದು ಪ್ರಕಟಿಸಿದಾಗ  ಪ್ರಕಾಶಕರು ವೋಲ್‌ಸ್ಟೋನ್‌ಕ್ರಾಫ್ಟ್ ಇದರ ಲೇಖಕಿ ಎಂದು ಬಹಿರಂಗಪಡಿಸಿದರು.


                 ಇದರಲ್ಲಿ ಮಹಿಳೆಯರು ಸ್ವಾಭಾವಿಕವಾಗಿ ಪುರುಷರಿಗಿಂತ ಕೀಳಲ್ಲ, ಆದರೆ ಅವರು ಶಿಕ್ಷಣದ ಕೊರತೆಯಿಂದಾಗಿ ಮಾತ್ರ ಹಾಗೆ ಕಾಣಿಸಿಕೊಳ್ಳುತ್ತಾರೆ ಎಂದು ವಾದಿಸುತ್ತಾರೆ.  ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ತರ್ಕಬದ್ಧ ಜೀವಿಗಳಾಗಿ ಪರಿಗಣಿಸಬೇಕು. ಹಾಗೂ ಕಾರ್‍ಯಕಾರಣದ ಆಧಾರದ ಮೇಲೆ ಸ್ಥಾಪಿತವಾದ ಸಾಮಾಜಿಕ ಕ್ರಮವನ್ನು ಕಲ್ಪಿಸಿಕೊಳ್ಳಬೇಕೆಂದು ಅವರು ಸೂಚಿಸುತ್ತಾರೆ. ಮಹಿಳೆಯರ ಕೊರತೆಯ ಶಿಕ್ಷಣವು ಅವರ ಮೇಲೆ ಇರಿಸಿರುವ ಮಿತಿಗಳಿಂದಾಗಿದೆ. ಸೌಂದರ್ಯವು ಹೆಣ್ಣಿನ ರಾಜದಂಡ ಎಂದು ಅವರ ಶೈಶವಾವಸ್ಥೆಯಿಂದಲೇ ಕಲಿಸಲ್ಪಟ್ಟಿದೆ, ಮನಸ್ಸು ದೇಹಕ್ಕೆ ತನ್ನನ್ನು ತಾನೇ ರೂಪಿಸಿಕೊಳ್ಳುತ್ತದೆ ಮತ್ತು ಅದೇ ಪಂಜರದ ಸುತ್ತಲೂ ತಿರುಗುತ್ತದೆ, ಅದರ ಸೆರೆಮನೆಯನ್ನು ಅಲಂಕರಿಸಲು ಮಾತ್ರ ಪ್ರಯತ್ನಿಸುತ್ತದೆ.' ಎಂದಿದ್ದಾರೆ.  'ಸೌಂದರ್ಯ ಮತ್ತು ಬಾಹ್ಯ ಸಾಧನೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ಬಿಟ್ಟರೆ ಮಹಿಳೆಯರು ಹೆಚ್ಚಿನದನ್ನು ಸಾಧಿಸಬಹುದು ಎಂದು ಈ ಪುಸ್ತಕದಲ್ಲಿ ಪ್ರತಿಪಾದಿಸುತ್ತಾರೆ. ಹನ್ನೆರಡನೇ ಅಧ್ಯಾಯದಲ್ಲಿ, "ರಾಷ್ಟ್ರೀಯ ಶಿಕ್ಷಣದಲ್ಲಿ", ಎಲ್ಲಾ ಮಕ್ಕಳನ್ನು "ದೇಶದ ಶಾಲೆಗೆ" ಕಳುಹಿಸಬೇಕು ಮತ್ತು ಮನೆಯಲ್ಲಿ ಸ್ವಲ್ಪ ಶಿಕ್ಷಣವನ್ನು ನೀಡಬೇಕು ಎಂದು ವಾದಿಸುತ್ತಾರೆ ಪುರುಷರು ಮತ್ತು ಮಹಿಳೆಯರು "ಒಂದೇ ಮಾದರಿಯ ಶಿಕ್ಷಣ ಪಡೆಯಬೇಕು" ಎಂದು ವಾದಿಸುತ್ತಾರೆ.
       ವೋಲ್‌ಸ್ಟೋನ್‌ಕ್ರಾಫ್ಟ್ ಫ್ರೆಂಚ್ ಕ್ರಾಂತಿಯನ್ನು 'ಇದುವರೆಗೆ ನಮ್ಮ ಭೂಮಂಡಲವನ್ನು  ಪಡೆದಿರುವುದಕ್ಕಿಂತ ಹೆಚ್ಚಿನ ಸದ್ಗುಣ ಮತ್ತು ಸಂತೋಷವನ್ನು ಪಡೆಯಲು ಅದ್ಭುತವಾದ ಅವಕಾಶ' ಎಂದು ಕರೆದರು. ಥರ್ಡ್ ಎಸ್ಟೇಟ್ ಅನ್ನು ಯಾವುದೇ ಖಾತೆಯಿಲ್ಲದ ವ್ಯಕ್ತಿಗಳೆಂದು ಬರ್ಕ್ ವಜಾಗೊಳಿಸುವುದರ ವಿರುದ್ಧ, 'ಈ ವಿಳಾಸವಿಲ್ಲದ ಜನಸಮೂಹವು ಮಾನವನ ಹೃದಯ ಮತ್ತು ಶಾಸನದ ಬಗ್ಗೆ ಹೆಚ್ಚು ತಿಳಿದಿದೆ.' ಎಂದು ವೋಲ್‌ಸ್ಟೋನ್‌ಕ್ರಾಫ್ಟ್ ಬರೆದರು. ೫-೬ ಅಕ್ಟೋಬರ್ ೧೭೮೯ರ ಘಟನೆಗಳ ಬಗ್ಗೆ, ಕೋಪಗೊಂಡ ಗೃಹಿಣಿಯರು ವರ್ಸೈಲ್ಸ್‌ನಿಂದ ಪ್ಯಾರಿಸ್‌ಗೆ ಮೆರವಣಿಗೆ ನಡೆಸಿ ರಾಜಮನೆತನಕ್ಕೆ ಮುತ್ತಿಗೆ ಹಾಕಿದಾಗ ಬರ್ಕ್ 'ರಾಣಿ ಮೇರಿ ಆಂಟೊನೆಟ್ ನರಕದಂತಹ ನೀಚ ಹಾಗೂ ಉಗ್ರರಾದ ಸ್ತ್ರೀಯರಿಂದ ಸುತ್ತುವರೆಯಲ್ಪಟ್ಟ ಪ್ರಾಚೀನ ಆಡಳಿತದ ಸಂಸ್ಕರಿಸಿದ ಸೊಬಗಿನ ಸಂಕೇತ' ಎಂದು ಹೊಗಳಿದರು, ಅದರೆ ವೋಲ್‌ಸ್ಟೋನ್‌ಕ್ರಾಫ್ಟ್ ವ್ಯತಿರಿಕ್ತವಾಗಿ ಅದೇ ಘಟನೆಯನ್ನು  'ಬಹುಶಃ ನೀವು [ಬರ್ಕ್] ಸ್ತ್ರೀಯರು ಎಂದರೆ ತರಕಾರಿ ಅಥವಾ ಮೀನುಗಳನ್ನು ಮಾರಾಟ ಮಾಡುವ ಮೂಲಕ ಜೀವನೋಪಾಯವನ್ನು ಗಳಿಸಿದ ಮಹಿಳೆಯರು, ಅವರು ಎಂದಿಗೂ ಶಿಕ್ಷಣದ ಪ್ರಯೋಜನಗಳನ್ನು ಹೊಂದಿಲ್ಲದವರು ಎಂದು ಭಾವಿಸಿರಬಹುದು.' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
               ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ದೇವತಾಶಾಸ್ತ್ರಜ್ಞ ಮತ್ತು ವಿವಾದಾತ್ಮಕ ಜೋಸೆಫ್ ಪ್ರೀಸ್ಟ್ಲಿ ಮತ್ತು ಪೈನ್‌ನಂತಹ ಪ್ರಮುಖರೊಂದಿಗೆ ಹೋಲಿಸಲಾಯಿತು, ಅವರ 'ರೈಟ್ಸ್ ಆಫ್ ಮ್ಯಾನ್' (೧೭೯೧) ಬರ್ಕ್‌ಗೆ ನೀಡಿದ ಪ್ರತಿಕ್ರಿಯೆಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ.  ಆವರ ಅತ್ಯಂತ ಪ್ರಸಿದ್ಧವಾದ ಮತ್ತು ಪ್ರಭಾವಶಾಲಿ ಕೃತಿ 'ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್' (೧೭೯೨)ನಲ್ಲಿ ರೈಟ್ಸ್ ಆಫ್ ಮ್ಯಾನ್‌ನಲ್ಲಿ ಅವರು ವಿವರಿಸಿದ ವಿಚಾರಗಳನ್ನು ಮುಂದುವರಿಸಿದರು.  ವೊಲ್‌ಸ್ಟೋನ್‌ಕ್ರಾಫ್ಟ್‌ನ ಖ್ಯಾತಿಯು 'ಇಂಗ್ಲಿಷ್ ಕಡ್ಗಾಲುವೆ' ತುಂಬ ಹರಡಿತು, ಫ್ರೆಂಚ್ ರಾಜನೀತಿಜ್ಞ ಚಾರ್ಲ್ಸ್ ಮೌರಿಸ್ ಡೆ ಟ್ಯಾಲಿರಾಂಡ್-ಪೆರಿಗೋರ್ಡ್ ೧೭೯೨ರಲ್ಲಿ ಲಂಡನ್‌ಗೆ ಭೇಟಿ ನೀಡಿದಾಗ ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಭೇಟಿ ಮಾಡಿದರು, ಆ ಸಮಯದಲ್ಲಿ ಅವರು ಫ್ರೆಂಚ್ ಹುಡುಗರಿಗೆ ನೀಡುತ್ತಿರುವ ಶಿಕ್ಷಣದ ಹಕ್ಕನ್ನು ಫ್ರೆಂಚ್ ಹುಡುಗಿಯರಿಗೂ ನೀಡಬೇಕೆಂದು ಕೇಳಿಕೊಂಡರು.
            ವೋಲ್‌ಸ್ಟೋನ್‌ಕ್ರಾಫ್ಟ್ ಡಿಸೆಂಬರ್ ೧೭೯೨ರಲ್ಲಿ ಹದಿನಾರನೆ ಲೂಯಿಸ್ ಗಿಲ್ಲೋಟಿನ್‌ಗೆ (ಒಂದೇ ಸಲಕ್ಕೆ ಇಪ್ಪತ್ತು-ಇಪ್ಪತ್ತೈದು ಜನರ ತಲೆಗಳನ್ನು ಕತ್ತರಿಸುವ ಹರಿತವಾದ ಯಂತ್ರ) ಬಲಿಯಾಗುವ ಸುಮಾರು ಒಂದು ತಿಂಗಳ ಮೊದಲು ಪ್ಯಾರಿಸ್‌ಗೆ ಹೊರಟರು.  ಅವರು ಪ್ಯಾರಿಸ್‌ಗೆ ಹೊರಟಾಗ ಬ್ರಿಟನ್ ಮತ್ತು ಫ್ರಾನ್ಸ್ ಯುದ್ಧದ ಅಂಚಿನಲ್ಲಿದ್ದರಿಂದ ಅನೇಕರು ಹೋಗದಂತೆ ಸಲಹೆ ನೀಡಿದರು. ಫ್ರಾನ್ಸ್ ಗೊಂದಲದಲ್ಲಿತ್ತು.  ಅವರು ಹೆಲೆನ್ ಮರಿಯಾ ವಿಲಿಯಮ್ಸ್ ಅವರಂತಹ ಇತರ ಬ್ರಿಟಿಷ್‌ರನ್ನು ಹುಡುಕಿದರು. ನಂತರ ನಗರದಲ್ಲಿದ್ದ ವಲಸಿಗರ ಜೊತೆ ಸೇರಿಕೊಂಡರು.  ಪ್ಯಾರಿಸ್‌ನಲ್ಲಿದ್ದ ಸಮಯದಲ್ಲಿ, ವೋಲ್‌ಸ್ಟೋನ್‌ಕ್ರಾಫ್ಟ್ ಉಗ್ರ ಮೂಲಭೂತವಾದಿಗಳಾಗಿದ್ದ ಜಾಕೋಬಿನ್‌ಗಳಿಗಿಂತ ಹೆಚ್ಚಾಗಿ ಮಧ್ಯಮ ಗಿರೊಂಡಿನ್‌ಗಳೊಂದಿಗೆ ಸಂಬಂಧ ಹೊಂದಿದ್ದರು.  
 
              ಫೆಬ್ರವರಿ ೧೭೯೩ರಲ್ಲಿ ಫ್ರಾನ್ಸ್ ಬ್ರಿಟನ್ ಮೇಲೆ ಯುದ್ಧ ಘೋಷಿಸಿತು. ವೋಲ್ಸ್ಟೋನ್ಕ್ರಾಫ್ಟ್ ಫ್ರಾನ್ಸ್ ತೊರೆದು ಸ್ವಿಟ್ಜರ್ಲೆಂಡ್ ಹೋಗಲು ಪ್ರಯತ್ನಿಸಿದರಾದರೂ ಅನುಮತಿ ನಿರಾಕರಿಸಲಾಯಿತು. ಮಾರ್ಚ್‌ನಲ್ಲಿ, ಜಾಕೋಬಿನ್ ಪ್ರಾಬಲ್ಯದ ಸಾರ್ವಜನಿಕ ಸುರಕ್ಷತಾ ಸಮಿತಿಯು ಅಧಿಕಾರಕ್ಕೆ ಬಂದಿತು, 'ಸಂಪೂರ್ಣ ಯುದ್ಧ'ಕ್ಕೆ ಫ್ರಾನ್ಸ್ ಅನ್ನು ಸಜ್ಜುಗೊಳಿಸುವ ಉದ್ದೇಶದಿಂದ ನಿರಂಕುಶ ಆಡಳಿತವನ್ನು ಸ್ಥಾಪಿಸಿತು.

ಫ್ರಾನ್ಸ್‌ನಲ್ಲಿ ವಿದೇಶಿಯರಿಗೆ ಜೀವನವು ತುಂಬಾ ಕಷ್ಟಕರವಾಗಿತ್ತು. ಅವರನ್ನು ಪೋಲೀಸ್ ಕಣ್ಗಾವಲಿನಲ್ಲಿ ಇರಿಸಲಾಯಿತು. ವಾಸಿಸಲು ಪರವಾನಗಿಯನ್ನು ಪಡೆಯಲು ಗಣರಾಜ್ಯದ ಕುರಿತು ಅವರ ನಿಷ್ಠೆಗೆ ಸಾಕ್ಷಿಯಾಗುವ ಆರು ಲಿಖಿತ ಹೇಳಿಕೆಗಳನ್ನು ಫ್ರೆಂಚ್‌ನಲ್ಲಿ ನೀಡಬೇಕಾಗಿತ್ತು.  ನಂತರ, ೧೨ ಏಪ್ರಿಲ್ ೧೭೯೩ರಂದು, ಎಲ್ಲಾ ವಿದೇಶಿಯರು ಫ್ರಾನ್ಸ್‌ನಿಂದ ಹೊರಹೋಗುವುದನ್ನು ನಿಷೇಧಿಸಲಾಯಿತು. ಕ್ರಾಂತಿಯ ಬಗ್ಗೆ ಅವರ ಸಹಾನುಭೂತಿಯ ಹೊರತಾಗಿಯೂ, ವೋಲ್‌ಸ್ಟೋನ್‌ಕ್ರಾಫ್ಟ್‌ನ ಜೀವನವು ಕಷ್ಟಕರವಾಗಿ ಪರಿಣಮಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಗಿರೊಂಡಿನ್ಸ್ ಜಾಕೋಬಿನ್ಸ್‌ಗೆ ಸೋತಿದ್ದರು. ವೋಲ್‌ಸ್ಟೋನ್‌ಕ್ರಾಫ್ಟ್‌ರ ಕೆಲವು ಫ್ರೆಂಚ್ ಸ್ನೇಹಿತರು ಗಿಲ್ಲೊಟಿನ್‌ನಲ್ಲಿ ತಮ್ಮ ತಲೆಯನ್ನು ಕಳೆದುಕೊಂಡರು.

             ಮಹಿಳೆಯ ಹಕ್ಕುಗಳನ್ನು ಬರೆದ ನಂತರ, ವೋಲ್‌ಸ್ಟೋನ್‌ಕ್ರಾಫ್ಟ್ ತಮ್ಮ ಆಲೋಚನೆಗಳನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದರು ಮತ್ತು ಫ್ರೆಂಚ್ ಕ್ರಾಂತಿಯ ಬೌದ್ಧಿಕ ವಾತಾವರಣದಲ್ಲಿ ಪ್ರಾಯೋಗಿಕ ರೋಮ್ಯಾಂಟಿಕ್ ಬಾಂಧವ್ಯವನ್ನು ಹೊಂದಲು ಪ್ರಯತ್ನಿಸಿದರು. ಅದೇ ಸಮಯಕ್ಕೆ ಗಿಲ್ಬರ್ಟ್ ಇಮ್ಲೇ ಎಂಬ ಅಮೇರಿಕನ್ ಸಾಹಸಿಯನ್ನು ಭೇಟಿಯಾಗಿ ಪ್ರೇಮಿಸತೊಡಗಿದರು. 

ಆದರೆ ಅವರಲ್ಲಿ ಮದುವೆಯಾಗುವ ಉದ್ದೇಶ ಇರಲಿಲ್ಲ. ಇದು 'ಗೌರವಾನ್ವಿತ' ಬ್ರಿಟಿಷ್ ಮಹಿಳೆಯ ಸ್ವೀಕಾರಾರ್ಹವಲ್ಲದ ನಡವಳಿಕೆ ಎಂದು ಪರಿಗಣಿಸಲ್ಪಟ್ಟಿತು. ಪುರುಷನ ಆದರ್ಶೀಕರಣವನ್ನು ಪ್ರೀತಿಸುತ್ತಿದ್ದ ವೋಲ್‌ಸ್ಟೋನ್‌ಕ್ರಾಫ್ಟ್ ತಮ್ಮ 'ದಿ ರೈಟ್ಸ್ ಆಫ್ ವುಮೆನ್'ನಲ್ಲಿ ಸಂಬಂಧಗಳಲ್ಲಿ ಲೈಂಗಿಕ ಅಂಶವನ್ನು ತಿರಸ್ಕರಿಸಿದ್ದರೂ  ಇಮ್ಲೇ ತಮ್ಮಲ್ಲಿ ಲೈಂಗಿಕ ಆಸಕ್ತಿಯನ್ನು ಉದ್ದೀಪನಗೊಳಿಸಿದ್ದಾನೆ ಎಂದು ವೊಲ್ಸ್ಟೋನ್ಕ್ರಾಫ್ಟ್ ಹೇಳಿದ್ದರು.
           ವೋಲ್‌ಸ್ಟೋನ್‌ಕ್ರಾಫ್ಟ್ ಫ್ರಾನ್ಸ್‌ನಲ್ಲಿ ತಾನು ನೋಡಿದ ಸಂಗತಿಯಿಂದ ಸ್ವಲ್ಪ ಮಟ್ಟಿಗೆ ಭ್ರಮನಿರಸನಗೊಂಡರು. ಜಾಕೋಬಿನ್ಸ್ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಹಾಗೂ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯಿಂದಾಗಿ ಮನನೊಂದಿದ್ದರು. ೧೬ ಅಕ್ಟೋಬರ್ ೧೭೯೩ರಂದು, ಮೇರಿ ಅಂಟೋನೆಟ್‌ರನ್ನು ತನ್ನ ಮಗನೊಂದಿಗೆ ಸಂಭೋಗದಲ್ಲಿ ತೊಡಗಿದ್ದ ಆರೋಪ ಹೊರೆಸಿ ಗಿಲ್ಲೊಟಿನ್ ಮಾಡಲಾಯಿತು. ವೋಲ್‌ಸ್ಟೋನ್‌ಕ್ರಾಫ್ಟ್ ಮಾಜಿ ರಾಣಿಯನ್ನು ಇಷ್ಟಪಡದಿದ್ದರೂ, ಜಾಕೋಬಿನ್‌ಗಳು ಮೇರಿ ಆಂಟೊನೆಟ್‌ಳ ಆಪಾದಿತ ವಿಕೃತ ಲೈಂಗಿಕ ಕ್ರಿಯೆಗಳನ್ನು ಫ್ರೆಂಚ್ ಜನರು ಅವಳನ್ನು ದ್ವೇಷಿಸಲು ಸೃಷ್ಟಿಸಲಾಗಿದೆ ಎಂದು ಚಿಂತೆಗೀಡಾದರು.
        ೩೧ ಅಕ್ಟೋಬರ್ ೧೭೯೩ ರಂದು ಹೆಚ್ಚಿನ ಗಿರೊಂಡಿನ್ ನಾಯಕರನ್ನು ಗಿಲ್ಲಟಿನ್ ಮಾಡಲಾಯಿತು;  ಇಮ್ಲೇ ವೋಲ್‌ಸ್ಟೋನ್‌ಕ್ರಾಫ್ಟ್‌ರಿಗೆ ಸುದ್ದಿ ಮುಟ್ಟಿಸಿದಾಗ, ಅವರು ಮೂರ್ಛೆ ಹೋದರು. ಈ ಹೊತ್ತಿಗೆ, ಇಮ್ಲೇ ಅವರು ಫ್ರಾನ್ಸ್‌ನ ಬ್ರಿಟಿಷರ ದಿಗ್ಬಂಧನದ ಲಾಭವನ್ನು ಪಡೆದರು, ನಿರಂತರವಾಗಿ ಬೆಳೆಯುತ್ತಿರುವ ಹಣದುಬ್ಬರದಿಂದಾಗಿ ಅಮೆರಿಕದಿಂದ ಆಹಾರ ಮತ್ತು ಸಾಬೂನು ತರಲು ಮತ್ತು ಬ್ರಿಟಿಷ್ ರಾಯಲ್ ನೇವಿ ಸರಕುಗಳನ್ನು ತರಲು ಹಡಗುಗಳನ್ನು ಬಾಡಿಗೆಗೆ ನೀಡುವ ಮೂಲಕ  ಹಣವನ್ನು ಹೊಂದಿರುವ ಫ್ರೆಂಚ್ ಜನರಿಗೆ ಪ್ರೀಮಿಯಂನಲ್ಲಿ ಮಾರಾಟ ಮಾಡಿ ಇಮ್ಲೇ ಜಾಕೋಬಿನ್‌ಗಳ ಗೌರವ ಮತ್ತು ಬೆಂಬಲವನ್ನು ಗಳಿಸಿದರು, ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಬಂಧನದಿಂದ ರಕ್ಷಿಸಲು, ಪ್ಯಾರಿಸ್‌ನಲ್ಲಿರುವ ರಾಯಭಾರ ಕಚೇರಿಗೆ ಇಮ್ಲೇ ತಾನು ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಮದುವೆಯಾದವನೆಂದು ಸುಳ್ಳು ಹೇಳಿಕೆಯನ್ನು ನೀಡಿದನು. ಆದರೆ ವೋಲ್‌ಸ್ಟೋನ್‌ಕ್ರಾಫ್ಟ್‌ರ  ಸ್ನೇಹಿತರಲ್ಲಿ ಕೆಲವರು ಅದೃಷ್ಟವಂತರಾಗಿರಲಿಲ್ಲ;  ಥಾಮಸ್ ಪೈನ್‌ನಂತಹ ಅನೇಕರನ್ನು ಬಂಧಿಸಲಾಯಿತು ಮತ್ತು ಕೆಲವರನ್ನು ಗಿಲ್ಲಟಿನ್‌ಗೆ ಒಳಪಡಿಸಲಾಯಿತು.  
               ಅದೇ ಸಮಯದಲ್ಲಿ ವೊಲ್‌ಸ್ಟೋನ್‌ಕ್ರಾಫ್ಟ್ ಇಮ್ಲೇಯಿಂದ ಗರ್ಭಿಣಿಯಾದರು, ಮತ್ತು ೧೪ ಮೇ ೧೭೯೪ರಂದು  ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು, ತನ್ನ ಅತ್ಯಂತ ಪ್ರೀತಿಯ ಗೆಳತಿ ಫ್ಯಾನಿ ಹೆಸರನ್ನು ಇಟ್ಟು ಸಮಾಧಾನಗೊಂಡ ವೊಲ್‌ಸ್ಟೋನ್‌ಕ್ರಾಫ್ಟ್ ಮಗಳನ್ನು ತಂದೆಯ ಪ್ರತಿರೂಪ ಎಂದು ಹೇಳಿದ್ದಾರೆ.  ಫ್ರೆಂಚ್ ಕ್ರಾಂತಿಯ ಹೆಚ್ಚುತ್ತಿರುವ ತುಮುಲಗಳ ಹೊರತಾಗಿಯೂ  ಉತ್ಸಾಹದಿಂದ ಬರೆಯುವುದನ್ನು ಮುಂದುವರೆಸಿದ ವೊಲ್‌ಸ್ಟೋನ್‌ಕ್ರಾಫ್ಟ್  ಉತ್ತರ ಫ್ರಾನ್ಸ್‌ನ ಲೆ ಹಾವ್ರೆಯಲ್ಲಿದ್ದಾಗ,  'ಎನ್ ಹಿಸ್ಟೋರಿಕಲ್ ಆಂಡ್ ಮಾರಲ್ ವ್ಯೂ ಆಫ್ ದಿ ಫ್ರೆಂಚ್ ರಿವಲ್ಯೂಷನ್' ಬರೆದು ಡಿಸೆಂಬರ್ ೧೭೯೪ರಲ್ಲಿ ಲಂಡನ್‌ನಲ್ಲಿ ಪ್ರಕಟಿಸಿದರು.   ಇಮ್ಲೇ ದೇಶೀಯ ಮನಸ್ಸಿನ ಮತ್ತು ತಾಯಿಯಾದ ವೊಲ್‌ಸ್ಟೋನ್‌ಕ್ರಾಫ್ಟ್  ಬಗ್ಗೆ ಅತೃಪ್ತಿ ತೋರಲಾರಂಭಿಸಿ ಬೇಗ ಹಿಂದಿರುಗುವ ಆಶ್ವಾಸನೆ ನೀಡಿ ಹೊರಟು ಹೋದನು. ಆತ ಬೇರೆ ಹೆಂಗಸಿನೊಂದಿಗೆ ಸಂಬಂಧ ಹೊಂದಿರಬಹುದೆಂಬ ಅರಿವಾದರೂ ವೊಲ್‌ಸ್ಟೋನ್‌ಕ್ರಾಫ್ಟ್ ಅವನಿಗಾಗಿ ಕಾಯುವುದನ್ನು ಮುಂದುವರಿಸಿದರು.  ತನ್ನ ಮಗುವಿಗೆ ನ್ಯಾಯಸಮ್ಮತತೆಯನ್ನು ಕೊಡಿಸುವ ಸಲುವಾಗಿ ತನ್ನ ಸಹೋದರಿಯರಿಗೂ ತನ್ನನ್ನು 'ಶ್ರೀಮತಿ ಇಮ್ಲೇ' ಎಂದು ಕರೆಯಲು ಹೇಳುತ್ತಿದ್ದರು.
ವೋಲ್‌ಸ್ಟೋನ್‌ಕ್ರಾಫ್ಟ್ ಇತಿಹಾಸಕಾರರಾಗಿ ತರಬೇತಿ ಪಡೆಯದಿದ್ದರೂ ಫ್ರಾನ್ಸ್‌ನಲ್ಲಿ ಸಾಮಾನ್ಯ ಜನರು ಕ್ರಾಂತಿಗೆ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ವಿವರಿಲು ಎಲ್ಲಾ ರೀತಿಯ ನಿಯತಕಾಲಿಕೆಗಳು, ಪತ್ರಗಳು ಮತ್ತು ದಾಖಲೆಗಳನ್ನು ಬಳಸಿದರು.  ಬ್ರಿಟನ್‌ನಲ್ಲಿ 'ಉನ್ಮಾದದ' ಕ್ರಾಂತಿ-ವಿರೋಧಿ ಮನಸ್ಥಿತಿ ಎಂದು ಫರ್ನಿಸ್ ಕರೆದದ್ದನ್ನು ಎದುರಿಸಲು ಅವರು ಪ್ರಯತ್ನಿಸುತ್ತಿದ್ದರು. ಇಡೀ ಫ್ರೆಂಚ್ ರಾಷ್ಟ್ರದ ಹುಚ್ಚು ಹಿಡಿದಿದೆ ಎಂದು ಕ್ರಾಂತಿಯನ್ನು ಚಿತ್ರಿಸುವುದನ್ನು ವಿರೋಧಿಸಿ  ವೋಲ್‌ಸ್ಟೋನ್‌ಕ್ರಾಫ್ಟ್  'ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳಿಂದ ಕ್ರಾಂತಿಯು ಹುಟ್ಟಿಕೊಂಡಿತು' ಎಂದು ವಾದಿಸಿದರು,
       ಇಮ್ಲೇಯನ್ನು ಹುಡುಕುತ್ತಾ, ವೊಲ್ಸ್ಟೋನ್ಕ್ರಾಫ್ಟ್ ಏಪ್ರಿಲ್ ೧೭೯೫ರಲ್ಲಿ ಲಂಡನ್‌ಗೆ ಮರಳಿದರು, ಆದರೆ ಅವನು ಅವರನ್ನು ತಿರಸ್ಕರಿಸಿದನು.  ಮೇ ೧೭೯೫ರಲ್ಲಿ  ಆತ್ಮಹತ್ಯೆಗೆ ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಇಮ್ಲೇಯನ್ನು ಮರಳಿ ಗೆಲ್ಲುವ ಕೊನೆಯ ಪ್ರಯತ್ನದಲ್ಲಿ ವೋಲ್‌ಸ್ಟೋನ್‌ಕ್ರಾಫ್ಟ್ ತನ್ನ ಪುಟ್ಟ ಮಗಳು ಮತ್ತು ಸೇವಕಿಯೊಂದಿಗೆ  ಅಪಾಯಕಾರಿ ಪ್ರವಾಸವನ್ನು ಕೈಗೊಂಡರು. ತಮ್ಮ ಪ್ರಯಾಣ ಮತ್ತು ಆಲೋಚನೆಗಳನ್ನು ಇಮ್ಲೇಗೆ ಬರೆದ ಪತ್ರಗಳಲ್ಲಿ ವಿವರಿಸಿದರು. ಅಂತಿಮವಾಗಿ ೧೭೯೬ರಲ್ಲಿ ಸ್ವೀಡನ್, ನಾರ್ವೆ ಮತ್ತು ಡೆನ್ಮಾರ್ಕ್‌ನಲ್ಲಿ ಸಣ್ಣ ನಿವಾಸದಲ್ಲಿ ಬರೆದ ಪತ್ರಗಳು ಎಂದು ಪ್ರಕಟಿಸಲ್ಪಟ್ಟವು. 
ಸ್ವೀಡನ್, ನಾರ್ವೆ ಮತ್ತು ಡೆನ್ಮಾರ್ಕ್‌ನಲ್ಲಿ ಬರೆದ ಪತ್ರಗಳು ಆ ದಶಕದಲ್ಲಿ ವೋಲ್ಸ್‌ಟೋನ್‌ಕ್ರಾಫ್ಟ್‌ರ ಅತ್ಯಂತ ಜನಪ್ರಿಯ ಪುಸ್ತಕವಾಗಿತ್ತು.  ಇದು ಉತ್ತಮವಾಗಿ ಮಾರಾಟವಾಯಿತಲ್ಲದೆ ಹೆಚ್ಚಿನ ವಿಮರ್ಶಕರಿಂದ ಧನಾತ್ಮಕವಾಗಿ ವಿಮರ್ಶಿಸಲ್ಪಟ್ಟಿತು.

 ಇಂಗ್ಲೆಂಡಿಗೆ ಹಿಂದಿರುಗಿದಾಗ ಇಮ್ಲೇಯೊಂದಿಗಿನ  ಸಂಬಂಧವು ಕೊನೆಗೊಂಡಿತು ಎಂಬುದು ಸಂಪೂರ್ಣ ಅರಿವಿಗೆ ಬಂದಾಗ ಎರಡನೇ ಬಾರಿಗೆ ಆತ್ಮಹತ್ಯೆಗೆ ಪ್ರಯತ್ನಿಸಿ ಇಮ್ಲೇಗೆ ಒಂದು ಟಿಪ್ಪಣಿಯನ್ನು ಬರೆದಿಟ್ಟರಾದರೂ ಆತ್ಮಹತ್ಯೆಯ ಪ್ರಯತ್ನವನ್ನು ಯಾರೋ ನೋಡಿದವರು ಇವರನ್ನು ಪುನಃ ರಕ್ಷಿಸಿದರು.
                ಕ್ರಮೇಣ ವೋಲ್‌ಸ್ಟೋನ್‌ಕ್ರಾಫ್ಟ್ ತನ್ನ ಸಾಹಿತ್ಯಿಕ ಜೀವನಕ್ಕೆ ಮರಳಿದಳು, ಜೋಸೆಫ್ ಜಾನ್ಸನ್‌ನ ವಲಯದೊಂದಿಗೆ ಮತ್ತೆ ತೊಡಗಿಸಿಕೊಂಡರು. ಮೇರಿ ಹೇಸ್, ಎಲಿಜಬೆತ್ ಇಂಚ್ಬಾಲ್ಡ್ ಮತ್ತು ವಿಲಿಯಂ ಗಾಡ್ವಿನ್ ಅವರೊಂದಿಗೆ ಕೆಲಸ ಪ್ರಾರಂಭಿಸಿದರು. ಗಾಡ್ವಿನ್ ಮತ್ತು ವೋಲ್‌ಸ್ಟೋನ್‌ಕ್ರಾಫ್ಟ್‌ರ  ಪ್ರಣಯವು ನಿಧಾನವಾಗಿ ಪ್ರಾರಂಭವಾಯಿತು, ಆದರೆ ಅದು ಅಂತಿಮವಾಗಿ ಉತ್ಕಟ ಪ್ರೇಮ ಸಂಬಂಧವಾಯಿತು. 

         ಗಾಡ್ವಿನ್ ಅವರು ಸ್ವೀಡನ್, ನಾರ್ವೆ ಮತ್ತು ಡೆನ್ಮಾರ್ಕ್‌ನಲ್ಲಿ ಬರೆದ ಪತ್ರಗಳನ್ನು ಓದಿದ್ದರು. "ಒಬ್ಬ ಮನುಷ್ಯನನ್ನು ಅದರ ಲೇಖಕರನ್ನು ಪ್ರೀತಿಸುವಂತೆ ಮಾಡಲು  ಪುಸ್ತಕವಿದ್ದರೆ, ಅದು ನನಗೆ ಈ ಪುಸ್ತಕವಾಗಿ ಕಾಣುತ್ತದೆ. ಅವಳು ತನ್ನ ದುಃಖದ ಬಗ್ಗೆ ಮಾತನಾಡುತ್ತಾಳೆ,  ನಮ್ಮಲ್ಲಿ ವಿಷಣ್ಣತೆಯನ್ನು ತುಂಬುವ ರೀತಿಯಲ್ಲಿ ಮತ್ತು ಮೃದುತ್ವದಲ್ಲಿ ನಮ್ಮನ್ನು ಕರಗಿಸುವ ರೀತಿಯಲ್ಲಿ, ಅದೇ ಸಮಯದಲ್ಲಿ ಅವಳು ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾದ ಪ್ರತಿಭೆಯನ್ನು ಪ್ರದರ್ಶಿಸುತ್ತಾಳೆ." ಎಂದಿದ್ದಾರೆ.  ವೋಲ್‌ಸ್ಟೋನ್‌ಕ್ರಾಫ್ಟ್ ಪುನಃ ಗರ್ಭಿಣಿಯಾದಾಗ, ತಮ್ಮ ಮಗು ನ್ಯಾಯಸಮ್ಮತವಾಗಲು ಅವರು ಮದುವೆಯಾಗಲು ನಿರ್ಧರಿಸಿದರು. ಆ ಮದುವೆಯು ವೋಲ್‌ಸ್ಟೋನ್‌ಕ್ರಾಫ್ಟ್ ಇಮ್ಲೇಯನ್ನು ಎಂದಿಗೂ ಮದುವೆಯಾಗಿಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿತು. ೨೯ ಮಾರ್ಚ್ ೧೭೯೭ರಂದು ಮದುವೆಯಾದ ನಂತರ, ಗಾಡ್ವಿನ್ ಮತ್ತು ವೋಲ್‌ಸ್ಟೋನ್‌ಕ್ರಾಫ್ಟ್ ೨೯ ದಿ ಪಾಲಿಗಾನ್, ಸೋಮರ್ಸ್ ಟೌನ್‌ಗೆ ತೆರಳಿದರು. ಗಾಡ್ವಿನ್ ಚಾಲ್ಟನ್ ಸ್ಟ್ರೀಟ್‌ನಲ್ಲಿರುವ ೧೭ ಎವೆಶ್ಯಾಮ್ ಕಟ್ಟಡಗಳಲ್ಲಿ ೨೦ ಬಾಗಿಲುಗಳ ದೂರದಲ್ಲಿರುವ ಅಪಾರ್ಟ್ಮೆಂಟ್‌ನ್ನು ಅಧ್ಯಯನಕ್ಕಾಗಿ ಬಾಡಿಗೆಗೆ ಪಡೆದರು, ಇದರಿಂದಾಗಿ ಅವರಿಬ್ಬರೂ ಇನ್ನೂ ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಆಗಾಗ್ಗೆ ಪತ್ರದ ಮೂಲಕ ಸಂವಹನ ನಡೆಸುತ್ತಿದ್ದರು. ಅವರ ಸಂಬಂಧವು ಸಂಕ್ಷಿಪ್ತವಾಗಿದ್ದರೂ ಸಂತೋಷ ಮತ್ತು ಸ್ಥಿರವಾಗಿತ್ತು.
           ೩೦ ಆಗಸ್ಟ್ ೧೭೯೭ರಂದು, ವೋಲ್‌ಸ್ಟೋನ್‌ಕ್ರಾಫ್ಟ್ ತಮ್ಮ ಎರಡನೇ ಮಗಳು ಮೇರಿಗೆ ಜನ್ಮ ನೀಡಿದರು.  ಪ್ರಸವವು ಆರಂಭದಲ್ಲಿ ಸರಿಯಾಗಿದ್ದಂತೆ ತೋರಿದರೂ, ಜನನದ ಸಮಯದಲ್ಲಿ ಸೋಂಕಿಗೆ ಒಳಗಾಗಿ ಹಲವಾರು ದಿನಗಳ ಸಂಕಟದ ನಂತರ, ವೋಲ್‌ಸ್ಟೋನ್‌ಕ್ರಾಫ್ಟ್ ಸೆಪ್ಟೆಂಬರ್ ೧೦ ರಂದು ಸೆಪ್ಟಿಸೆಮಿಯಾನಿಂದ ಮರಣಹೊಂದಿದರು.
   ಈ ಘಟನೆಯಿಂದಾಗಿ ಗಾಡ್ವಿನ್ ಕುಸಿದು ಹೋದರು.  ಅವರು ತಮ್ಮ ಸ್ನೇಹಿತ ಥಾಮಸ್ ಹಾಲ್‌ಕ್ರಾಫ್ಟ್‌ಗೆ "ಪ್ರಪಂಚದಲ್ಲಿ ಅವಳಿಗೆ ಸಮಾನವಾಗಿ ಅಸ್ತಿತ್ವದಲ್ಲಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ. ಅನುಭವದಿಂದ ನಾವು ಒಬ್ಬರನ್ನೊಬ್ಬರು ಸಂತೋಷಪಡಿಸಲು ರೂಪುಗೊಂಡಿದ್ದೇವೆ ಎಂದು ನನಗೆ ತಿಳಿದಿದೆ. ನಾನು ಈಗ ಏನನ್ನಾದರೂ ಮಾಡಬಹುದೆಂಬ ಕನಿಷ್ಠ ನಿರೀಕ್ಷೆಯೂ ಇಲ್ಲ' ಎಂದು ಬರೆದರು.  ಅವರನ್ನು ಸೇಂಟ್ ಪ್ಯಾನ್‌ಕ್ರಾಸ್ ಓಲ್ಡ್ ಚರ್ಚ್‌ನ ಚರ್ಚ್‌ಯಾರ್ಡ್‌ನಲ್ಲಿ ಸಮಾಧಿ ಮಾಡಲಾಯಿತು, ಸಮಾಧಿಯಲ್ಲಿ "ಮೇರಿ ವೋಲ್ಸ್‌ಟೋನ್‌ಕ್ರಾಫ್ಟ್ ಗಾಡ್ವಿನ್, ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್‌ನ ಲೇಖಕಿ: ಜನನ ೨೭ ಏಪ್ರಿಲ್ ೧೭೫೯: ೧೦ ಸೆಪ್ಟೆಂಬರ್ ೧೭೯೭ ರಂದು ನಿಧನರಾದರು." ಎಂದು ಕೆತ್ತಲಾಗಿದೆ.  

ಜನವರಿ ೧೭೯೮ರಲ್ಲಿ ಗಾಡ್ವಿನ್ ತನ್ನ 'ಮೆಮೊಯಿರ್ಸ್ ಆಫ್ ದಿ ಆಥರ್ ಆಫ್ ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್' ಅನ್ನು ಪ್ರಕಟಿಸಿದರು. 
 ಗಾಡ್ವಿನ್ ತನ್ನ ಹೆಂಡತಿಯನ್ನು ಪ್ರೀತಿ, ಸಹಾನುಭೂತಿ ಮತ್ತು ಪ್ರಾಮಾಣಿಕತೆಯಿಂದ ಚಿತ್ರಿಸುತ್ತಿದ್ದಾನೆ ಎಂದು ಭಾವಿಸಿದರೂ, ವೋಲ್‌ಸ್ಟೋನ್‌ಕ್ರಾಫ್ಟ್‌ರ  ನ್ಯಾಯಸಮ್ಮತವಲ್ಲದ ಮಕ್ಕಳು, ಪ್ರೇಮ ವ್ಯವಹಾರಗಳು ಮತ್ತು ಆತ್ಮಹತ್ಯಾ ಪ್ರಯತ್ನಗಳನ್ನು ಬಹಿರಂಗಪಡಿಸುತ್ತಾನೆ ಎಂದು ಅನೇಕ ಓದುಗರು ಆಘಾತಕ್ಕೊಳಗಾಗಿದ್ದರು. ರೊಮ್ಯಾಂಟಿಕ್ ಕವಿ ರಾಬರ್ಟ್ ಸೌಥಿ ಅವನು "ತನ್ನ ಸತ್ತ ಹೆಂಡತಿಯನ್ನು ಬೆತ್ತಲೆಯಾಗಿ ತೋರಿಸಿದ್ದಾನೆ" ಎಂದು ಆರೋಪಿಸಿದ್ದಾರೆ ಮತ್ತು 'ದ ಅನ್‌ಸೆಕ್ಸ್‌ಡ್ ಫೀಮೇಲ್ಸ್'ನಂತಹ ಕೆಟ್ಟ ವಿಡಂಬನೆಗಳನ್ನು ಪ್ರಕಟಿಸಿದ್ದರಿಂದ ವೋಲ್‌ಸ್ಟೋನ್‌ಕ್ರಾಫ್ಟ್‌ರವರ ವ್ಯಕ್ತಿತ್ವವನ್ನು ಮಸುಕು ಮಾಡಲಾಯಿತು ಎಂಬುದು ಅಷ್ಟೇ ಸತ್ಯ.  ಬ್ರಿಟಿಷ್ ಕವಿ ರಾಬರ್ಟ್ ಬ್ರೌನಿಂಗ್ ಅವರ "ವೋಲ್ಸ್‌ಟೋನ್‌ಕ್ರಾಫ್ಟ್ ಮತ್ತು ಫುಸೆಲಿ" ಮತ್ತು ವಿಲಿಯಂ ರೋಸ್ಕೋ ಅವರ ಸಾಲುಗಳನ್ನು ಒಳಗೊಂಡಿರುವ ಕವಿತೆಗಳಿಗೆ ಕಾರಣವಾಯಿತು:
          ಗಾಡ್ವಿನ್‌ರ ಮೆಮೊಯಿರ್ಸ್‌ನ ಅಜಾಗರುಕತೆಯ ವಿನಾಶಕಾರಿ ಪರಿಣಾಮದ ನಂತರ, ವೊಲ್ಸ್‌ಟೋನ್‌ಕ್ರಾಫ್ಟ್ ಖ್ಯಾತಿಯು ಸುಮಾರು ಒಂದು ಶತಮಾನದವರೆಗೆ ಚಿಂದಿಯಾಯಿತು. ನಂತರ ಬೆಲಿಂಡಾದಲ್ಲಿ (೧೮೦೧) 'ಫ್ರೀಕಿಶ್' ಹ್ಯಾರಿಯೆಟ್ ಫ್ರೀಕ್ ಮಾದರಿಯನ್ನು ರೂಪಿಸಿದ ಮಾರಿಯಾ ಎಡ್ಜ್‌ವರ್ತ್‌ನಂತಹ ಬರಹಗಾರರು ಪುನಃ ಇವರನ್ನು ಇತಿಹಾಸದ ಪುಟಗಳಿಂದ ಹೊರತೆಗೆದರು.  

ವಿದ್ವಾಂಸ ವರ್ಜೀನಿಯಾ ಸಪಿರೊ ಹೇಳುವಂತೆ ಹತ್ತೊಂಬತ್ತನೇ ಶತಮಾನದಲ್ಲಿ ವೊಲ್ಸ್‌ಟೋನ್‌ಕ್ರಾಫ್ಟ್‌ನ ಕೃತಿಗಳನ್ನು ಓದಿದ ಕೆಲವರು 'ಆಕೆಯ ಆಕ್ರಮಣಕಾರರು ಯಾವುದೇ ಸ್ವಾಭಿಮಾನಿ ಮಹಿಳೆಯ ಬರಹವನ್ನು ಓದಿರಲಿಕ್ಕಿಲ್ಲ' ಎಂದು ಹೇಳಿದ್ದಾರೆ.  ವೊಲ್‌ಸ್ಟೋನ್‌ಕ್ರಾಫ್ಟ್‌ಡಿ ಮಕ್ಕಳ ಕಥೆಗಳನ್ನು ೧೮೭೦ ರಲ್ಲಿ ಚಾರ್ಲೆಟ್ ಮೇರಿ ಯೋಂಗ್ ಅವರು ಅಳವಡಿಸಿಕೊಂಡರು.
               ಮಹಿಳೆಯರಿಗೆ ರಾಜಕೀಯ ಧ್ವನಿಯನ್ನು ನೀಡುವ ಚಳುವಳಿಯ ಉದಯದೊಂದಿಗೆ ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಪುನಃ ಹೊರ ಜಗತ್ತಿಗೆ ಪರಿಚಯಿಸಲಾಯಿತು. ವಾಲ್ಸ್‌ಟೋನ್‌ಕ್ರಾಫ್ಟ್‌ರ 'ಲೆಟರ್ಸ್ ಟು ಇಮ್ಲೇ' ಪ್ರಕಟಣೆಯೊಂದಿಗೆ, ಚಾರ್ಲ್ಸ್ ಕೆಗನ್ ಪಾಲ್, ಆತ್ಮಚರಿತ್ರೆಯೊಂದಿಗೆ ಎಲಿಜಬೆತ್ ರಾಬಿನ್ಸ್ ಪೆನ್ನೆಲ್ ಅವರನ್ನು ತೆರೆದಿಟ್ಟರು.  ಇದು ೧೮೮೪ ರಲ್ಲಿ ರಾಬರ್ಟ್ಸ್ ಬ್ರದರ್ಸ್ ಪ್ರಸಿದ್ಧ ಮಹಿಳೆಯರ ಮೇಲೆ ಸರಣಿಯ ಭಾಗವಾಗಿ ಪ್ರಕಟಗೊಂಡಿತು
 ಆಧುನಿಕ ಸ್ತ್ರೀವಾದಿ ಚಳವಳಿಯ ಆಗಮನದೊಂದಿಗೆ, ವರ್ಜೀನಿಯಾ ವೂಲ್ಫ್ ಮತ್ತು ಎಮ್ಮಾ ಗೋಲ್ಡ್‌ಮನ್‌ರಂತೆ ರಾಜಕೀಯವಾಗಿ ಪರಸ್ಪರ ಭಿನ್ನವಾಗಿರುವ ಮಹಿಳೆಯರು  ಕೂಡ ವೊಲ್ಸ್‌ಟೋನ್‌ಕ್ರಾಫ್ಟ್‌ರ ಜೀವನ ಕಥೆಯನ್ನು ಸ್ವೀಕರಿಸಿದರು.  ೧೯೨೯ರ ಹೊತ್ತಿಗೆ ವೂಲ್ಫ್ ವೋಲ್‌ಸ್ಟೋನ್‌ಕ್ರಾಫ್ಟ್‌ರ ಬರವಣಿಗೆ, ವಾದಗಳು ಮತ್ತು 'ಜೀವನದಲ್ಲಿನ ಪ್ರಯೋಗಗಳು' ಅಮರ ಎಂದು ವಿವರಿಸಿದರು.  'ಅವಳು ಜೀವಂತವಾಗಿದ್ದಾಳೆ ಮತ್ತು ಕ್ರಿಯಾಶೀಲಳಾಗಿದ್ದಾಳೆ, ಅವಳು ವಾದಿಸುತ್ತಾಳೆ ಮತ್ತು ಪ್ರಯೋಗಗಳನ್ನು ಮಾಡುತ್ತಾಳೆ, ನಾವು ಅವಳ ಧ್ವನಿಯನ್ನು ಕೇಳುತ್ತೇವೆ ಮತ್ತು ಈಗ ಜೀವಂತವಾಗಿರುವವರ ನಡುವೆ ಅವಳ ಪ್ರಭಾವವನ್ನು ಗುರುತಿಸುತ್ತೇವೆ' ಎಂದು ಹೊಗಳಿದರು.  ಆದಾಗ್ಯೂ, ಇತರರು ವೋಲ್‌ಸ್ಟೋನ್‌ಕ್ರಾಫ್ಟ್‌ನ ಜೀವನಶೈಲಿಯನ್ನು ಟೀಕಿಸುವುದನ್ನು ಮುಂದುವರೆಸಿದರು
         ವೋಲ್‌ಸ್ಟೋನ್‌ಕ್ರಾಫ್ಟ್‌ನ ಕೆಲಸವು ಅಕಾಡೆಮಿಯ ಹೊರಗಿನ ಸ್ತ್ರೀವಾದದ ಮೇಲೂ ಪರಿಣಾಮ ಬೀರಿದೆ.  ಅಯಾನ್ ಹಿರ್ಸಿ ಅಲಿ, ರಾಜಕೀಯ ಬರಹಗಾರ ಮತ್ತು ಮಾಜಿ ಮುಸ್ಲಿಂ, ಇಸ್ಲಾಂ ಧರ್ಮ  ನಿರ್ದಿಷ್ಟವಾಗಿ ಮಹಿಳೆಯರಿಗೆ ಸಂಬಂಧಿಸಿದಂತೆ ಅದರ ನಿರ್ದೇಶನಗಳನ್ನು ಟೀಕಿಸುತ್ತಾರೆ, ತನ್ನ ಆತ್ಮಚರಿತ್ರೆ ಇನ್ಫಿಡೆಲ್‌ನಲ್ಲಿ ಮಹಿಳೆಯ ಹಕ್ಕುಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಅವರು ಪ್ರವರ್ತಕ ಸ್ತ್ರೀವಾದಿ ಚಿಂತಕಿ ಮೇರಿ ವೋಲ್ಸ್‌ಟೋನ್‌ಕ್ರಾಫ್ಟ್‌ರ 'ಪುರುಷರಂತೆ ತರ್ಕಿಸುವ ಸಾಮರ್ಥ್ಯ ಅವರಿಗೂ ಇದೆ ಮತ್ತು ಅದೇ ಹಕ್ಕುಗಳಿಗೆ ಅರ್ಹರು ಎಂದು ಮಹಿಳೆಯರಿಗೆ ಹೇಳಿದ ಮಾತುಗಳಿಂದಾಗಿ ಸ್ಫೂರ್ತಿ ಪಡೆದಿರುವುದಾಗಿ ಬರೆದಿದ್ದಾರೆ. ಬ್ರಿಟಿಷ್ ಬರಹಗಾರ್ತಿ ಕೈಟ್ಲಿನ್ ಮೊರನ್ ಪ್ರಸಿದ್ಧ ಕೃತಿಯಾದ 'ಹೌ ಟು ಬಿ ಎ ವುಮನ್'ದ ಲೇಖಕಿ, ನ್ಯೂಯಾರ್ಕ್‌ಗೆ ತನ್ನನ್ನು 'ಹಾಫ್ ವೋಲ್‌ಸ್ಟೋನ್‌ಕ್ರಾಫ್ಟ್' ಎಂದಿದ್ದಲ್ಲದೆ  'ಅವಳು ಹೆಚ್ಚು ಸ್ಫೂರ್ತಿ ನೀಡಿದ್ದಾಳೆ' ಎಂದಿದ್ದಾರೆ.  ನೊಬೆಲ್ ಪ್ರಶಸ್ತಿ ವಿಜೇತ, ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ಏಷ್ಯಾದ ಕಾಣೆಯಾದ ಮಹಿಳೆಯರನ್ನು ಮೊದಲು ಗುರುತಿಸಿದ ದಾರ್ಶನಿಕ ಅಮರ್ತ್ಯ ಸೇನ್ 'ದಿ ಐಡಿಯಾ ಆಫ್ ಜಸ್ಟಿಸ್'ನಲ್ಲಿ ರಾಜಕೀಯ ತತ್ವಜ್ಞಾನಿಯಾಗಿ ವೊಲ್ಸ್‌ಟೋನ್‌ಕ್ರಾಫ್ಟ್‌ರನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾರೆ.

 ವೋಲ್‌ಸ್ಟೋನ್‌ಕ್ರಾಫ್ಟ್ ಗೌರವಾರ್ಥವಾಗಿ ಹಲವಾರು ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಮ್ಯಾಗಿ ಹ್ಯಾಂಬ್ಲಿಂಗ್‌ನಿಂದ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್‌ಗಾಗಿ ಒಂದು ಸ್ಮರಣಾರ್ಥ ಶಿಲ್ಪವನ್ನು ೧೦ ನವೆಂಬರ್ ೨೦೨೦ರಂದು ಅನಾವರಣಗೊಳಿಸಲಾಯಿತು.  
 ನವೆಂಬರ್ ೨೦೨೦ ರಲ್ಲಿ, ಟ್ರಿನಿಟಿ ಕಾಲೇಜ್ ಡಬ್ಲಿನ್ ಗ್ರಂಥಾಲಯವು ಈ ಹಿಂದೆ ನಲವತ್ತು ಬಸ್ಟ್‌ಗಳನ್ನು ಹೊಂದಿತ್ತು, ಅವರೆಲ್ಲರೂ ಪುರುಷರಾಗಿದ್ದರು ನಂತರ ನಾಲ್ಕು ಹೊಸ ಮಹಿಳೆಯರ ಬಸ್ಟ್‌ಗಳನ್ನು ನಿಯೋಜಿಸಿದ್ದರಲ್ಲಿ ಅವರಲ್ಲಿ ಒಬ್ಬರು ವೋಲ್‌ಸ್ಟೋನ್‌ಕ್ರಾಫ್ಟ್  ಎಂಬುದು ಹೆಮ್ಮೆಯ ವಿಷಯ.
                ಇಂದು ಜಗತ್ತಿನಾದ್ಯಂತ ವೋಲ್‌ಸ್ಟೋನ್‌ಕ್ರಾಫ್ಟ್‌ರನ್ನು ಸ್ಥಾಪಕ ಸ್ತ್ರೀವಾದಿ ತತ್ವಜ್ಞಾನಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ, ಮತ್ತು ಸ್ತ್ರೀವಾದಿಗಳು ಆಗಾಗ್ಗೆ ಅವರ ಜೀವನ ಮತ್ತು ಅವರ ಕೃತಿಗಳೆರಡನ್ನೂ ಪ್ರಮುಖ ಪ್ರಭಾವಗಳಾಗಿ ಉಲ್ಲೇಖಿಸುತ್ತಾರೆ.

           ೧೮೫೧ ರಲ್ಲಿ, ವೋಲ್‌ಸ್ಟೋನ್‌ಕ್ರಾಫ್ಟ್‌ನ ಅವಶೇಷಗಳನ್ನು ಆಕೆಯ ಮೊಮ್ಮಗ ಪರ್ಸಿ ಫ್ಲಾರೆನ್ಸ್ ಶೆಲ್ಲಿ ಅವರು ಬೋರ್ನ್‌ಮೌತ್‌ನ ಸೇಂಟ್ ಪೀಟರ್ಸ್ ಚರ್ಚ್‌ನಲ್ಲಿರುವ ಅವರ ಕುಟುಂಬದ ಸಮಾಧಿಗೆ ಸ್ಥಳಾಂತರಿಸಿದರು.
lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220812_4_4
lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220819_4_2


No comments:

Post a Comment