Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Tuesday 16 August 2022

ಮೌನದಿಂದಲೆ_ಅಂತರಾತ್ಮವನ್ನು_ಕಾಡುವ_ಕವಿತೆಯ_ರೂಪಕಗಳು

ಮೌನದಿಂದಲೆ ಅಂತರಾತ್ಮವನ್ನು ಕಾಡುವ ಕವಿತೆಯ ರೂಪಕಗಳು

 ಕೃತಿ:  ಮೌನದ ಮಹಾ ಕೋಟೆಯೊಳಗೆ (ಕವನಸಂಕಲನ )

ಲೇಖಕರು:  ಶ್ರೀಮತಿ ಶ್ರೀದೇವಿ ಕೆರಮನೆ 

ಪ್ರಕಾಶಕರು:  ಶ್ರೀ ರಾಘವೇಂದ್ರ ಪ್ರಕಾಶನ ಅಂಕೋಲಾ

 ಬೆಲೆ:  ನೂರ ಇಪ್ಪತ್ತು ರೂಪಾಯಿಗಳು 

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹಾಗೆಯೇ  ಹೆಣ್ಣು ಬರೆಯಲು ಕುಳಿತರೆ ಇಡೀ ಬದುಕನ್ನೇ ಕಾವ್ಯವಾಗಿಸಬಲ್ಲಳು, ಕವಿತೆಯನ್ನಾಗಿಸಿ ಪದಕಟ್ಟಿ ಹಾಡಬಲ್ಲಳು ಕೂಡ, ತನ್ನ ಮನದ ಮಾತುಗಳಿಂದ ವೇದನೆಯ ಬರಹಗಳಿಂದ, ವಿರಹದ ಬೇಗೆಯ ಪದಗಳಿಂದ ಆತ್ಮೀಯ ಮಾತುಗಳಿಂದ ಹಲವಾರು ಹೃದಯಗಳನ್ನು ಗೆಲ್ಲಲೂಬಹುದು ಕಾಡಬಹುದು ಕೂಡ, ಇಂತಹ ಕಾಡುವ ಬರಹಗಳಿಂದಲೇ ಕನ್ನಡ ಸಾಹಿತ್ಯಲೋಕದಲ್ಲಿ ಅಜರಾಮರವಾಗಿ ಉಳಿಯುವಂತಹ ಹಲವಾರು ವಿಶಿಷ್ಟವಾದ ಪ್ರತಿಭೆಗಳ ಸಾಲಿನಲ್ಲಿ ಬಹುಮುಖ ಪ್ರತಿಭೆಯಾಗಿ  ಮುಂಚೂಣಿಯ ಸ್ಥ‍ಾನದಲ್ಲಿ ನಿಲ್ಲುವಂತಹ ಕವಿಯತ್ರಿ ಶ್ರೀಮತಿ ಶ್ರೀದೇವಿ ಕೆರಮನೆಯವರು.
 ಲೇಖಕಿಯಾಗಿ, ಕಥೆಗಾರ್ತಿಯಾಗಿ, ಗಜಲ್ ಗಾರ್ತಿಯಾಗಿ ಅಂಕಣಕಾರ್ತಿಯಾಗಿ, ಭಾಷಣಕಾರ್ತಿಯಾಗಿ ಬಹುಮುಖ್ಯವಾಗಿ ಅಸಮಾನತೆಯ ವಿರುದ್ಧ ಮಹಿಳೆಯರ ಶೋಷಣೆಯ ವಿರುದ್ಧ ಮೌಡ್ಯದ ಸಂಕೋಲೆಗಳ ವಿರುದ್ಧ ತನ್ನ ಬರಹಗಳಿಂದಲೇ ಸಣ್ಣದಾಗಿ ಹೋರಾಟದ ಧ್ವನಿ ಎತ್ತುತ್ತಿರುವ ಹೋರಾಟಗಾರ್ತಿಯಾಗಿಯೂ ನೆಲೆ ಕಂಡುಕೊಳ್ಳುತ್ತಿರುವ ಕವಿಯತ್ರಿ ಶ್ರೀಮತಿ ಶ್ರೀದೇವಿ ಕೆರಮನೆ.

ತನ್ನ ಪ್ರಬುದ್ಧ ಬರಹಗಳಿಂದಲೇ ಹೆಸರು ಗಳಿಸಿ, ರಾಜ್ಯದ ವಿವಿಧ ಮೂಲೆಗಳಿಂದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗುತ್ತಿರುವುದು ಸಂತೋಷದಾಯಕ ವಿಷಯ  ಮತ್ತು ಇತ್ತೀಚೆಗೆ ಅವರು ಪ್ರಾರಂಭಿಸಿರುವ ವಿದೇಶದ ಕವಿಯತ್ರಿ ಮಹಿಳಾ ಹೋರಾಟಗಾರರ ಪರಿಚಯ ಮಾಲಿಕೆಯು, ಹಲವಾರು ಓದುಗರ ಜ್ಞಾನಾರ್ಜನೆಗೆ ಸಹಾಯಕವಾಗಿದೆ.

 ಶ್ರೀದೇವಿ ಕೆರೆಮನೆಯವರು ಮುಖಪುಟದಲ್ಲಿ ನನಗೆ ಪರಿಚಯವಾದವರು. ಗಜಲ್ ಕಾವ್ಯ ಏನೆಂಬುದೇ ಗೊತ್ತಿಲ್ಲದ ಸಮಯದಲ್ಲಿ ಮೊದಲ ಬಾರಿಗೆ ನನ್ನ ದನಿಗೆ ನಿನ್ನ ದನಿಯು   ಎಂಬ ಅವರ ಗಜಲ್ ಜುಗಲ್ ಬಂದಿ ಗಜಲ್ ಕೃತಿಯನ್ನು  ಓದಿದವನು ನಾನು. ಅವರ ಬರಹಗಳು ಮುಖಪುಟದಲ್ಲಿ ಓದಲು ಸಿಗದೇ ಹೋದರೂ ಕೂಡ, ಅವರ ಬರಹಗಳನ್ನು ಗಜಲ್ ಗಳನ್ನು  ಓದಲೇ ಬೇಕೆಂಬ ಆಸೆಯಿಂದ ಬಹಳಷ್ಟು ಪುಸ್ತಕದ ಅಂಗಡಿಗಳಲ್ಲಿ ಅವರ ಪುಸ್ತಕಗಳನು ತಡಕಾಡಿ ಸಿಗದೇ ಬೇಸರ ಪಟ್ಟವನು. ನಾನು ಅವರ ಕೆಲವು ಗಜಲ್ ಗಳನ್ನು  ಓದಿದ್ದೆ, ಅವರ ಕವಿತೆಯನ್ನು ಓದುವ, ಅವರು ಬರೆಯುವ ಶೈಲಿಯಲನ್ನು ಕಾಣಬೇಕು ಎಂಬುದು ನನ್ನ ತುಡಿತವಾಗಿತ್ತು.

ಶ್ರೀದೇವಿ ಕೆರೆಮನೆಯವರು ಕವಿತೆಗಳನ್ನು, ಗಜಲ್ ಗಳನ್ನು ಬರೆಯುತ್ತಾ ಕುಳಿತುಕೊಳ್ಳದೆ ರಾಜ್ಯದ ವಿವಿಧ ಮೂಲೆ ಮೂಲೆಗಳಿಗೂ ಸಂಚರಿಸಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇತ್ತೀಚೆಗೆ ಸಾಹಿತ್ಯಲೋಕವನ್ನು ಪ್ರವೇಶ ಮಾಡುತ್ತಿರುವಂತಹ ಹೊಸ ಕವಿಗಳಿಗೆ ಕವಿತೆ ಬರೆಯುವ ರೀತಿ, ಕವಿತೆಯನ್ನು ಓದುವ ರೀತಿ, ಸದ್ಯದ ಪರಿಸ್ಥಿತಿಗೆ ತಕ್ಕಂತೆ ಕವಿತೆಯನ್ನು ಹೇಗೆ ರಚನೆ ಮಾಡಬೇಕು. ಬರಹಗಾರರು ಹೇಗೆ ಬರಹದಲ್ಲಿ  ತನ್ನನ್ನು ತಾನು ತೊಡಗಿಸಿಕೊಂಡು ತನ್ಮಯರಾಗಬೇಕು ಎಂಬೆಲ್ಲ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಾ ಕಲಿಸುತ್ತಾ, ಕಲಿಯುತ್ತಾ ತನ್ನ ಬದುಕಿನ ಬಹಳಷ್ಟು ಸಮಯವನ್ನು ಸಾಹಿತ್ಯದ ಬೆಳವಣಿಗೆಗಾಗಿ ಮೀಸಲಿಟ್ಟಿದ್ದಾರೆ.

  ಅವರ ಮತ್ತೊಂದು ಇಷ್ಟವಾಗುವ ಗುಣ ಎಂದರೆ ಎಲ್ಲರೊಂದಿಗೂ ಯಾವುದೇ ಭೇದ ಭಾವ ತೋರದೆ  ಬೆರೆಯುವ ಗುಣ. ನವ್ಯಸಾಹಿತ್ಯದ ಬಹುಮುಖ ಪ್ರತಿಭೆಯಾಗಿ ರೂಪಗೊಳ್ಳುತ್ತಿರುವ, ಹಲವಾರು ಪುಸ್ತಕಗಳನ್ನು ಹೊರತಂದು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರೂ ಕೂಡ, ಅವರ ಸರಳತೆ ಹಮ್ಮು ಬಿಮ್ಮು ಇಲ್ಲದ ಅವರ ಆತ್ಮೀಯ ಮಾತುಗಾರಿಕೆ, ಯುವ ಬರಹಗಾರರಿಗೆ ಅವರು ಕೊಡುವ ಪ್ರೋತ್ಸಾಹ ಪ್ರತಿಯೊಬ್ಬರನ್ನು ಕೂಡ ಬೆರಗುಗೊಳಿಸುತ್ತದೆ.

ಕೋಲಾರದ ಆದಿಮಾ ಕೇಂದ್ರದಲ್ಲಿ ಕಳೆದ ತಿಂಗಳು ಕಾವ್ಯಯಾನವೆಂಬ ಕಾರ್ಯಕ್ರಮ ಆಯೋಜನೆಗೊಂಡಿತ್ತು ಆಹ್ವಾನ ಪತ್ರಿಕೆಯಲ್ಲಿ ಶ್ರೀಮತಿ ಶ್ರೀದೇವಿ ಕೆರೆಮನೆ ಅವರು ಕವಿಗೋಷ್ಠಿಯ ಅನುಸಂಧಾನಕಾರರಾಗಿ ಬರುವುದನ್ನು ನೋಡಿ, ನಾನು ಅವರಿಗೆ ಮೆಸೇಜ್ ಮಾಡಿದ್ದೆ. ಮೇಡಂ ನಿಮ್ಮ ಕವಿತೆಗಳ ಕವನಸಂಕಲನ ಪುಸ್ತಕ ಬೇಕಾಗಿತ್ತು. ಕೋಲಾರಕ್ಕೆ ಬಂದಾಗ ದಯವಿಟ್ಟು ತನ್ನಿ ಅಂತ. ಅದಕ್ಕೆ ಅವರು ಖಂಡಿತವಾಗಿಯೂ ತರುವೆ ಅಂತ ಮರು ಉತ್ತರವನ್ನು ಕೂಡ ಮಾಡಿದ್ದರು. ನಾನು ಅವರು ದೊಡ್ಡ ಕವಿಗಳು ಎಲ್ಲೋ ಮರೆತು ಹೋಗುತ್ತಾರೆ ಅಂತ ಸುಮ್ಮನಾಗಿದ್ದೆ, ಆದರೆ ಕಾರ್ಯಕ್ರಮದಲ್ಲಿ ಅವರನ್ನ ಭೇಟಿ ಮಾಡಿ, ಮಾತನಾಡಿಸಿದಾಗ ಅವರ ಎರಡು ಪುಸ್ತಕಗಳನ್ನು ನನಗೆ ಬಳುವಳಿಯಾಗಿ ಕೊಟ್ಟರು. ಒಂದು ಗಜಲ್ ಸಂಕಲನ ಮತ್ತೊಂದು ಕವನ ಸಂಕಲನ. ಗಜಲ್ ಪುಸ್ತಕವನ್ನು ಪಕ್ಕಕ್ಕೆ ಇಟ್ಟು, ಅವರ ಕವನ ಸಂಕಲನ ಓದಲು ಪ್ರಾರಂಭಿಸೋಣ ಅಂತ ಓದಲಾರಂಭಿಸಿದೆ. ಕವನಸಂಕಲನ ಓದಲು ನನಗೆ ದಿನಗಳು ಬೇಕಾಗಲಿಲ್ಲ. ಏಕೆಂದರೆ ಆ ಕವನಸಂಕಲನದ ಕವಿತೆಗಳು ಒಂದು ಕ್ಷಣವೂ ನನ್ನನ್ನು ಎಲ್ಲಿಯೂ ಕೂಡ ನಿಲ್ಲಿಸದೇ ತಡವರಿಸದೇ ಓದಿಸಿಕೊಂಡವು. ಕೆಲವು ಪದ್ಯಗಳನ್ನು ಓದಿದಾಗ ಭಾವುಕನಾದೆ ಕೂಡ, ಕೆಲವು ಕವಿತೆಗಳನ್ನು ಜೋರಾಗಿ ಓದಿ ಪತ್ನಿಗೆ ಕೂಡ ಅವುಗಳ ಅಥ೯ವನ್ನು ತಿಳಿಸಿದಾಗ, ಸಾಹಿತ್ಯದ ಗಂಧ ಗಾಳಿಯೂ ಗೊತ್ತಿಲ್ಲದೆ ಹಿಂದಿ ಧಾರಾವಾಹಿಗಳಲ್ಲಿ ಮುಳುಗಿ ಹೋಗುತ್ತಿದ್ದ ಅವಳು ಈಗ ಮೌನದ ಮಹಾ ಕೋಟೆಯನ್ನು ಓದಲು ಪ್ರಾರಂಭಿಸಿದ್ದಾಳೆ. ಈ ಕವನ ಸಂಕಲನದ ಪ್ರತಿಯೊಂದು ಕವಿತೆಯೂ ಕೂಡ ಕಾಡುತ್ತದೆ, ಎಚ್ಚರಿಸುತ್ತದೆ, ಭಾವನಾತ್ಮಕ ಸಂಬಂಧವನ್ನು ಬೆಳೆಸುವ ಮತ್ತು ಶೋಷಣೆಯ ವಿರುದ್ಧ ಮಾತಾಡುತ್ತದೆ.

 ನಾನು ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಶ್ರೀಮತಿ ಶ್ರೀದೇವಿ ಕೆರೆಮನೆಯವರ ಕವನ ಸಂಕಲನವಾದ ಮೌನದ ಮಹಾ ಕೋಟೆಯೊಳಗೆ ಎಂಬ ಕವನ ಸಂಕಲನವನ್ನು ಪರಿಚಯ  ಮಾಡಲಿಕ್ಕಾಗಿಯೇ. ಈ ಕವನಸಂಕಲನದ ವಿಮರ್ಶೆ ಮಾಡಲು ನಾನು ಅರ್ಹನಾಗಿಲ್ಲದಿದ್ದರೂ ಕೂಡ, ನನ್ನನ್ನು ಬಹಳಷ್ಟು ಕಾಡಿದ ಆ ಕವಿತೆಗಳ ಬಗ್ಗೆ ನಾನು ಹೇಳಲೇಬೇಕು.

ಮೌನದ ಮಾಹಾ ಕೋಟೆಯೊಳಗಿನ ಕವಿತೆಗಳನ್ನು ಪರಿಚಯಿಸುವುದಕ್ಕಿಂತ ಮುಂಚೆ ಶ್ರೀಮತಿ ಶ್ರೀದೇವಿ ಕೆರೆಮನೆಯವರ ಪರಿಚಯವನ್ನ ಮಾಡಲು ಇಚ್ಚಿಸುವೆ. ಅವರ ಹೆಸರು ಪರಿಚಯ ಬರಹಗಳು ಬಹಳಷ್ಟು ಓದುಗರಿಗೆ ಗೊತ್ತಿದ್ದರು ಕೂಡ, ಅವರ ಪರಿಚಯ ಇನ್ನೊಮ್ಮೆ ತಿಳಿಸಲು ಪ್ರಯತ್ನ ಪಡುವೆ.

ಶ್ರೀದೇವಿ ಕೆರೆಮನೆಯವರು ಅಂಕೋಲಾದವರು, ಪ್ರಸ್ತುತ ಕಾರವಾರದ ನಿವಾಸಿ. ವೃತ್ತಿಯಲ್ಲಿ ಇಂಗ್ಲಿಷ್ ಅಧ್ಯಾಪಕಿ, ಪ್ರಸ್ತುತ ಕಾರವಾರದ ಸರ್ಕಾರಿ ಪ್ರೌಢಶಾಲೆ ಚಿತ್ತಾಕುಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂವೇದನಾಶೀಲ ಬರಹಗಾರ್ತಿಯಾದ ಶ್ರೀಮತಿ ಶ್ರೀದೇವಿ ಕೆರೆಮನೆಯವರು ಕಥೆ, ಕವನ, ಅಂಕಣ ಹಲವಾರು ಚಿಂತನ ಬರಹಗಳನ್ನು ನಾಡಿನ ಎಲ್ಲಾ ನಿಯತ ಕಾಲಿಕೆಗಳಲ್ಲಿ ನಿರಂತರವಾಗಿ ಬರೆಯುತ್ತಲೇ ಬಂದಿದ್ದಾರೆ.

 ಶ್ರೀದೇವಿ ಕೆರೆಮನೆಯವರು ಪ್ರಕಟಿತ ಕವನ ಸಂಕಲನಗಳು ನಾನು ಗೆಲ್ಲುತ್ತೇನೆ, ಮೌನದ ಮಹಾ ಕೋಟೆಯೊಳಗೆ, ಗೆಜ್ಜೆ ಕಟ್ಟಿದ ಕಾಲಲ್ಲಿ, ನಗುವಿಗೊಂದು ಧನ್ಯವಾದ, ಮೈಮುಚ್ಚಲೊಂದು ತುಂಡು ಬಟ್ಟೆ. ಅಂಕಣ ಬರಹಗಳು ಪ್ರೀತಿಯೆಂದರೆ ಇದೇನಾ, ಹೆಣ್ತನದ ಆಚೆ ಈಚೆ, ಉರಿವ ಉಡಿ, ಮನದಾಳದ ಮಾತು, ವರ್ತಮಾನದ ಉಯ್ಯಾಲೆ, ಅಲೆಯೊಳಗಿನ ಮೌನ ಗಜಲ್ ಸಂಕಲನ, ನನ್ನ ಧ್ವನಿಗೆ ನಿನ್ನ ಧ್ವನಿಯು ಗಝಲ್ ಜುಗಲ್ ಬಂಧಿ ಸಂಕಲನ, ತೀರದ ಧ್ಯಾನ ಗಜಲ್ ವಿಶ್ಲೇಷಣೆ, ಬಿಕ್ಕೆ ಹಣ್ಣು ಮತ್ತು ಚಿತ್ತ ಚಿತ್ತಾರ  ಕಥಾಸಂಕಲನ, ಗೂಡುಕಟ್ಟುವ ಸಂಭ್ರಮದಲಿ ಮತ್ತು ಕಾಡುವ ಗರ್ಭ ಪ್ರಬಂಧ ಸಂಕಲನಗಳು, ಕಡಲು ಕಾನನದ ನಡುವೆ, ಸಮಕಾಲೀನ ಬರಹಗಳ ಸಂಕಲನ ಮುಂತಾದವು.

ಶ್ರೀಮತಿ ಶ್ರೀದೇವಿ ಕೆರೆಮನೆಯವರು ಪಡೆದ ಪ್ರಶಸ್ತಿಗಳು ಶ್ರೀವಿಜಯಲಕ್ಷ್ಮೀ ಪ್ರಶಸ್ತಿ, ಸಾರಾ ಅಬೂಬ್ಕರ್ ಪ್ರಶಸ್ತಿ, ಸುಮನಾ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ,
ವಾಂಗನ ಶಾಸ್ತ್ರೀ ಕಥಾಪ್ರಶಸ್ತಿ, ಅಮ್ಮ ಪ್ರಶಸ್ತಿ , ಎಂ ಕೆ ಇಂದಿರಾ ಪ್ರಶಸ್ತಿ,  ಅಂತಾರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ, ಹೇಮರಾಜ್ ದತ್ತಿ ಪ್ರಶಸ್ತಿ, ಅಡ್ವೈಸರ್ ಪತ್ರಿಕಾ ಪ್ರಶಸ್ತಿ, ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರಶಸ್ತಿ, ಬೇಂದ್ರೆಯವರ ಗ್ರಂಥ ಪುರಸ್ಕಾರ, ಶ್ರೀಗಂಧದ ಹಾರ ಪ್ರಶಸ್ತಿ, ಜನ್ನ ಕಾವ್ಯ ಪ್ರಶಸ್ತಿ, ಬಿ ಎಂ ಶ್ರೀಯವರ ಕಾವ್ಯ ಪ್ರಶಸ್ತಿ, ಅವ್ವ ಪ್ರಶಸ್ತಿ, ಸಿಂಗಪುರ ಕಥಾ ಪ್ರಶಸ್ತಿ, ಮೊದಲಾದವು.

ಮೌನದ ಮಹಾ ಗೋಡೆಯೊಳಗಿನ ಕವನಸಂಕಲನದ ಒಳ ಪುಟಗಳನ್ನು ತೆರೆಯುತ್ತಾ ಹೋದಂತೆ, ಇಲ್ಲಿನ ಕವಿತೆಯ ಸಾಲುಗಳಲ್ಲಿ ಮಾನವೀಯತೆಯ ಕಳಕಳಿಯಿದೆ. ಶೋಷಣೆಯ ವಿರುದ್ಧದ ಧ್ವನಿ ಇದೆ, ತಾಯೊಡಲ ಮಮತೆಯಿದೆ, ಆರಾಧನೆಯಿದೆ, ಆಲಾಪನೆ ಇದೆ, ಅನುರಾಗವಿದೆ ಮುಖ್ಯವಾಗಿ ಓದುಗರನ್ನು ಸೆಳೆಯುವ ಅಪರೂಪದ ಪದ ಮಾಲಿಕೆಯಿದೆ. 

ಈ ಕವನ ಸಂಕಲನವನ್ನು ಕವಿಯತ್ರಿ ತನ್ನ ಪ್ರೀತಿಯ ಅಕ್ಕನಿಗೆ ಅರ್ಪಿಸಿದ್ದಾರೆ. ಈ ಕವನಸಂಕಲನಕ್ಕೆ ಮುನ್ನುಡಿ ಬರೆದವರು ಕೆ ಪಿ ಬಸವರಾಜು.ತಮ್ಮ ಸುಧೀರ್ಘವಾದ ಮಾತುಗಳಲ್ಲಿ  ಈ ಕವನಸಂಕಲನದ ಕವಿತೆಗಳ ಅರ್ಥ ಮತ್ತು  ಕವನಸಂಕಲನದ ಒಳ ಅಂತರಂಗವನ್ನೆ ತೆರೆದಿಟ್ಟಿದ್ದಾರೆ. ಮತ್ತು ಶ್ಯಾಮಸುಂದರ ಬಿದರಕುಂದಿ ಅವರು ಬೆನ್ನುಡಿಯನ್ನ ಬರೆದು ಹಾರೈಸಿದ್ದಾರೆ.

 ಈ ಮೌನದ ಮಹಾ ಕೋಟೆಯೊಳಗೆ ಕವನ ಸಂಕಲನದಲ್ಲಿ ನಲವತ್ತು ಕವಿತೆಗಳಿವೆ. ಪ್ರತಿಯೊಂದು ಕವಿತೆಯೂ ಕೂಡ ಒಂದೊಂದು ಆಶಯವನ್ನು ಹೊಂದಿದೆ ಆ ಕವಿತೆಯ  ಪದಗಳು ಸಾಲುಗಳು ಓದುಗನ ಮನಸ್ಸನ್ನು ಹಿಡಿದು ಒಂದೆಡೆ ನಿಲ್ಲಿಸುತ್ತವೆ. ನಾನು ಇಲ್ಲಿ ನನ್ನ ಗಮನವನ್ನು ಒಂದು ಕ್ಷಣಕಾಲ ಸೆಳೆದ ಹಲವು ಕವಿತೆಗಳನ್ನು ಪರಿಚಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ. 

ಹುಟ್ಟು ಸಾವು ಎಲ್ಲದಕು
ಈ ಜಗತ್ತು ಸಾಕ್ಷಿ ಕೇಳುತ್ತಿರುವಾಗ
ನಾನು ಪ್ರೀತಿಸಿದ್ದಕ್ಕೆ ಸಾಕ್ಷಿ ಕೇಳಿದ್ದರಲ್ಲಿ
 ನಿನ್ನ ತಪ್ಪೇನೂ ಇಲ್ಲ ಬಿಡು... 

ಈ ಕವಿತೆಯಲ್ಲಿ ಕವಿಯತ್ರಿ ಒಬ್ಬ ದೇವದಾಸಿಯ ಮಹಿಳೆಯ ಪ್ರೀತಿಯ ಒಳಾಂತರಂಗ ಹೊಕ್ಕಿ ಅವಳು ಪ್ರೀತಿಸಿದ ಬಗೆಯನ್ನ ಅವಳು ಅನುಭವಿಸಿದ ನೋವಿನ ಸಂಕಟವನ್ನ ಮತ್ತು ಒಬ್ಬ ಗಂಡಸು ಆಕೆಯನ್ನು ಪ್ರೀತಿಸಿ ಉಪಯೋಗಿಸಿಕೊಂಡು ಯಾವುದೇ ಸಾಕ್ಷ್ಯಗಳು ಸಿಗದ ಹಾಗೇ ಮಾಡುವ ರೀತಿಯನ್ನು ಬಹು ಮಾರ್ಮಿಕವಾಗಿ ಈ ಸಾಲುಗಳಲ್ಲಿ ರೂಪಿಸಿದ್ದಾರೆ.

ಅಷ್ಟಕ್ಕೂ ನಿನ್ನಲ್ಲಿ ಸಾಕ್ಷಿ ಕೊಟ್ಟೆ ನನಗೆ?
ಒಂದು ಹನಿಯೂ ಮೈಗೆ ತಾಕದಂತೆ 
ನಾಜೂಕಾಗಿ ಒರೆಸಿ ಎಸೆವಾಗ
 ವೀರ್ಯವು ಸಾಕ್ಷಿಯಾಗಬಹುದೆಂಬ 
ಗುಮಾನಿಯಿತ್ತೆ ನಿನಗೆ?
 ನಾನದನ್ನು ರಸಿಕತೆ ಎಂದುಕೊಂಡಿದ್ದೆ....

 ಎಂತಹ ಅದ್ಭುತ ಸಾಲುಗಳು ಈ ಸಾಲುಗಳನ್ನು  ಓದುತ್ತಿದ್ದರೆ ಮೈ ರೋಮಾಂಚನವಾಗುವುದು ಹಾಗೆಯೇ ಒಂದು ಹೆಣ್ಣನ್ನು ತನ್ನ ಬಯಕೆಗಳ ಈಡೇರಿಕೆಗಾಗಿ ಬಳಸಿಕೊಂಡು ಅವಳಿಗೆ  ಯಾವುದೇ ಸಾಕ್ಷ್ಯಗಳು ಸಿಗದಂತೆ ಮಾಡುವ ಗಂಡಸಿನ ಹುನ್ನಾರದ ಮನಸ್ಥಿತಿಯನ್ನ ಕುರಿತು ಕೂಡ ಒಮ್ಮೆ ಬೇಸರ ತರಿಸುತ್ತದೆ. 

ಆಗದೇ ಆಗದು ಎನ್ನುವುದಾದರೆ
 ಅದನ್ನಾದರೂ ಬಾಯಿಬಿಟ್ಟು ಹೇಳಿಬಿಡು
 ನೀನೇ ಕಟ್ಟಿದ ಗೆಜ್ಜೆಯ ಬಿಚ್ಚಿ 
ಮಾರುತ್ತೇನೆ, ಎರಡು ಹೊತ್ತಿನ ತುತ್ತಿಗೆ ದಾರಿಯಾದೀತು..

 ನಿನಗೆ ಹುಟ್ಟಿದ ಮಗು ಒಂದು ತುತ್ತು ಗುಟುಕಿಗಾಗಿ ಬಾಯ್ತೆರೆದು ಚಿತ್ಕಾರ ಮಾಡುತ್ತಿದೆ. ನೀನು ಕೈಗಿಷ್ಟು ದುಡ್ಡು ಕೊಟ್ಟರೆ ಅದರ ಹೊಟ್ಟೆಯ ಹಸಿವನ್ನಾದರೂ ತೀರಿಸುತ್ತೇನೆ ಅದು ಕೂಡ ಆಗುವುದಿಲ್ಲಾ ಅಂತಾ ನೀನು ಬಾಯಿ ಬಿಟ್ಟಾದರೂ ಹೇಳು, ನೀನು ಕಾಲಿಗೆ ಕಟ್ಟಿದ ಗಜ್ಜೆಯನ್ನು ಬಿಚ್ಚಿ ಮಾರುತ್ತೇನೆ. ಅದರಿಂದ ಬರುವ ಹಣವು ಒಂದೆರಡು ದಿನ ಹಸಿವನ್ನಾದರೂ ತಣಿಸಬಹುದು ಎಂದು ಸಾರುವ ಈ ಸಾಲುಗಳನ್ನು ಓದಿದ ಮನುಷ್ಯತ್ವ ಇರುವ ಮನುಜನನ್ನು ಖಂಡಿತವಾಗಿಯೂ ಒಮ್ಮೆ ಭಾವುಕನಾಗುತ್ತಾನೆ.

ಬದುಕಿನಲ್ಲಿ ಎಲ್ಲವೂ ಇದೆ 
ಆದರೂ ನೀನು
 ಬೇಕೆಂಬ ಹಳಹಳಿಕೆ, ನಿನ್ನ ನೆನಪಾದಾಗಲೆಲ್ಲಾ
 ಕೃಷ್ಣನು ನೆನಪಾಗುತ್ತಾನೆ ...

ಈ ಕವಿತೆಯಲ್ಲಿ ತನ್ನಂತರಂಗದ ಒಡೆಯನಾಗಿ ಪ್ರೀತಿಸಿದ ಜೀವವನ್ನು ಕೃಷ್ಣನಿಗೆ ಹೋಲಿಸಿ, ನಿನ್ನ ನೆನಪಾದಾಗಲೆಲ್ಲ ಕೃಷ್ಣನ ನೆನಪಾಗುತ್ತಾನೆ. ಕೃಷ್ಣ ನೆನಪಾಗುವುದು ನೂರಾರ ಹೆಣ್ಣುಗಳೊಂದಿಗೆ ಸುಖಿಸಿದ್ದಕ್ಕಲ್ಲ, ಬೇರೊಬ್ಬನ ಹೆಂಡತಿ ಎಂಬ ವಾಸ್ತವದ ಅರಿವಿದ್ದರೂ ಕೂಡ ರಾಧೆಯನ್ನು ಪ್ರೀತಿಸಿದ್ದಕ್ಕಾಗಿ, ಆದರೆ ನೀನು ನೆನಪಾಗುತ್ತೀಯ ನಿಜ ಆದರೆ ನಾನು ಪ್ರಸ್ತುತ ಪರಿಸ್ಥಿತಿಯಲ್ಲಿ ರಾಧೆಯಾಗಲಾರೆ  ಈ ಬಂಧನವನು ಕಳಚಿ ನಿನ್ನೆಡೆಗೆ ನಾನು ಬರಲಾರೆ ಎಂದು ಬದುಕಿನ ಅನಿವಾರ್ಯತೆಯನ್ನು ಕವಿಯತ್ರಿ ಬಹಳಷ್ಟು ಸೊಗಸಾಗಿ ಈ ಕವಿತೆಯನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

 ಈ ಮಾಯಾಲೋಕ ಅಂದರೆ ಮೊಬೈಲ್ ಯುಗ, ಮೊಬೈಲ್ನ ತಾಂತ್ರಿಕತೆಯು ಬದಲಾವಣೆಗೆ 3ಜಿ ಮೊಬೈಲ್ ಸಂಪರ್ಕ ಬಂದ ಮೇಲೆ ಸ್ನೇಹ ಪ್ರೀತಿಗಳು ಹೇಗೆ ಅಂಕುರವಾಗುತ್ತದೆ. ಈ ಮೊಬೈಲ್ ಮೋಹದಿಂದ, ಮನುಷ್ಯ ತನ್ನೊಳಗಿನ ಅಂತಃಕರಣವನ್ನ ಕಳೆದುಕೊಂಡು, ನಿದ್ದೆ ಆಹಾರ ಇಲ್ಲದೆ ಹೇಗೆ ಹಲುಬುತ್ತಾನೆ. ಎಂಬುದನ್ನು ಕವಿಯತ್ರಿ ಒಂದು ವಾಟ್ಸಪ್ ಸಂದೇಶವನ್ನೇ/ಚಿತ್ರಪಟನ್ನೆ ಕವಿತೆಯನ್ನಾಗಿ ಕಟ್ಟುತ್ತಾರೆ.  ಒಂದು ಗಂಡು ಹೆಣ್ಣು 3ಜಿ ತರಂಗಗಳ ಮೂಲಕ ಹರಿದುಬರುವ ಚಿತ್ರಗಳನ್ನ ನೋಡಿ ಹೇಗೆ ತನ್ನ ಮನದಾಳದ ತಾಪವನ್ನು ಇಂಗಿಸಿಕೊಳ್ಳುತ್ತಾರೆ ಎಂಬುದನ್ನು  ಚಿತ್ರಿಸುತ್ತಾ ಸಾಗುತ್ತಾರೆ.

ಕೆಲವೇ ನಿಮಿಷಗಳ ಹಿಂದೆ 
ವ್ಯಾಟ್ಸ್ ಆಪ್ ನಲ್ಲಿ 
ಆಕೆಯ ಅರೆನಗ್ನತೆಯನ್ನು ಆಸ್ವಾದಿಸಿದ್ದಾನೆ 
ಅದೇ ವ್ಯಾಟ್ಸ್ ಆಪ್ ನಲ್ಲಿ 
ಆತ ಕಳುಹಿಸಿದ 
 ಆತನ ಬೆತ್ತಲೆಯ ಫೋಟೋಕ್ಕೆ ಮುತ್ತಿಟ್ಟ 
ಆಕೆಗೆ, ಅದು ನಿದ್ದೆಯಿಲ್ಲದ
 ಸುಧೀರ್ಘ ರಾತ್ರಿ .....

ಹೀಗೆ ಪ್ರತಿಯೊಂದು ಕವಿತೆಯೂ ಕೂಡ ವಾಸ್ತವ ಜಗತ್ತನ್ನು ಅರಿತು ಇಲ್ಲಿ ನಡೆಯುವ ನೈಜ ಘಟನೆಗಳನ್ನೇ ತನ್ನ ಕವಿತೆಯ ಸಾಲುಗಳಲ್ಲಿ  ರೂಪಕವನ್ನಾಗಿ ಬಳಸಿದ್ದಾರೆ ಕವಿಯತ್ರಿ. ಆದರೆ ಇಲ್ಲಿನ ಯಾವುದೇ ಕವಿತೆಯಲ್ಲೂ  ಕೂಡ ಕಲ್ಪನೆಗೆ ಅವಕಾಶ ಕೊಡದೆ ಕವಿತೆಯನ್ನು ಬರೆದಿರುವುದು ಬಹಳಷ್ಟು ವಿಶಿಷ್ಟವಾಗಿದೆ. ಇಂತಹ ಬರಹವನ್ನು ಓದುಗ ಓದಲೇಬೇಕಾಗಿದೆ.

ನೀನು ಇಷ್ಟಪಟ್ಟೆ ಎಂದು 
ಕಹಿಬೇವು ಲೇಪಿಸಿ 
ಮಗುವಿನ ಹಾಲು ಬಿಡಿಸಿದೆ
ಹಾಲು ಕಟ್ಟಿದ ಮೊಲೆಗೀಗ
 ಬಾಪು ಬಂದಿದೆ.... 

ಎದೆಯ ಭಾವಗಳೆಲ್ಲಾ ಬತ್ತಿ ಹೋಗಿದೆ ಗೆಳೆಯ 
ಬಿಳಿ ಗುಲಾಬಿ ಗಿಡದ ಮುಳ್ಳಿಗೆ 
ರಾತ್ರಿ ಹಿಡಿ ಎದೆಗೊತ್ತಿ 
ನಿಂತು, ವಿರಹ ಗೀತೆ ಹಾಡಿದ ಪಾರಿವಾಳ
 ಗಿಡದ ಬುಡದಲ್ಲಿ ಸತ್ತು ಬಿದ್ದಿವೆ .....

ಆ ಬುದ್ಧ ಅದೆಷ್ಟು ಸ್ಥಿತಿಪ್ರಜ್ಞ 
ಗೊತ್ತಿದ್ದು ಗೊತ್ತಿದ್ದು ಮನೆಬಿಟ್ಟ 
ಪ್ರೀತಿಯ ಹೆಂಡತಿ ಮುದ್ದಿನ ಮಗ 
ಎಲ್ಲವನ್ನೂ ಬಿಟ್ಟು ಮಧ್ಯರಾತ್ರಿಯೇ 
ಕಾಡಿಗೆ ನಡೆದ: ಪಡೆದ ನಿರ್ವಾಣ ....

ಹೀಗೆ ಸಾಗುವ ಕವಿತೆಗಳ ರೂಪಕಗಳನ್ನು ಓದುಗನ ಮನವನ್ನು ಕಾಡಿ ತಲ್ಲಣಿಸುತ್ತದೆ. ಈ ಎಲ್ಲಾ  ಕವಿತೆಗಳಲ್ಲು ತನ್ನೊಳಗಿನ ಬದುಕು ಭಾವನೆಗಳನ್ನು ತುಂಬಿ ಬರೆದಿದ್ದಾರೆ.
ಕವಿತೆಗಳಲ್ಲಿ ನೆಲ್ಸನ್ ಮಂಡೆಲ ಬಂದು ಹೋಗಿದ್ದಾರೆ. ಅಂಬೇಡ್ಕರ್  ಅವರನ್ನು ನೆನೆಯುತ್ತಾರೆ, ಕದವಿಲ್ಲದ ಮನೆಯ ನಿಷೇಧಗಳಿವೆ, ಮೌನದ ಮಾಹಾ ಕೋಟೆಯೊಳಗೆ ಮೌನವಿದೆ. ಕಣ್ಣೀರು ಕೂಡ ಮಾರಲ್ಪಡುತ್ತದೆ, ಬಿಕರಿಯಾಗದ ಕನಸುಗಳಿಗಿವೆ
ಈ ಕವನಸಂಕಲನದ ಕವಿತೆಗಳನ್ನು ಅಸ್ವಾದಿಸಲು ಮೌನದ ಮಾಹಾಕೋಟೆಯೊಳಗೆ ನಾವು ಪ್ರವೇಶ ಮಾಡಲೇ ಬೇಕಾಗಿದೆ.
 
ಇತ್ತೀಚೆಗೆ ಕಥೆ ಕವನ ಬರೆಯುತ್ತಿರುವಂತಹ ನವ್ಯ ಕವಿಗಳು ಬರಹಗಾರರು ಇಂತಹ ಒಂದು ಕೃತಿಯನ್ನು ಓದಲೇಬೇಕಾಗಿದೆ.  ಬರಹವನ್ನು ಪ್ರೀತಿಸುವ ಆರಾಧಿಸುವ ಮನಸ್ಸುಗಳು ಒಮ್ಮೆಯಾದರೂ ಈ ಪುಸ್ತಕದ ಸಾಲುಗಳನ್ನು ತಡಕಾಡಲೇ ಬೇಕಾಗಿದೆ.

ಬಹಳಷ್ಟು ಉತ್ತಮವಾದ ಕೃತಿಗಳನ್ನು  ಕನ್ನಡದ ಸಾಹಿತ್ಯ  ಲೋಕಕ್ಕೆ ಅರ್ಪಿಸುತ್ತಿರುವ ಶ್ರೀಮತಿ ಶ್ರೀದೇವಿ ಕೆರೆಮನೆ ಮೇಡಮ್ ರವರನ್ನು ಅಭಿನಂದಿಸುತ್ತಾ, ಇಂತಹ ಹಲವಾರು ಕೃತಿಗಳು ಕನ್ನಡ ಸಾಹಿತ್ಯ ಲೋಕವನ್ನು ಸೇರಲಿ, ನಿಮಗೆ ಗೌರವ ಪುರಸ್ಕಾರಗಳು ಇನ್ನಷ್ಟು  ನಿಮಗೆ ಲಭಿಸಲಿ ಎಂದು ಆಶಿಸುವೆ    
ನಾರಾಯಣಸ್ವಾಮಿ ಮಾಸ್ತಿ

No comments:

Post a Comment