Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Thursday 4 August 2022

ಮತ ಚಲಾಯಿಸಲು ನೊಂದಾಯಿಸಿದ ಮೊದಲ ಮಹಿಳೆ ಲೂಯಿಸಾ ಮೇ ಆಲ್ಕಾಟ್


ಮತ ಚಲಾಯಿಸಲು ನೊಂದಾಯಿಸಿದ ಮೊದಲ ಮಹಿಳೆ ಲೂಯಿಸಾ ಮೇ ಆಲ್ಕಾಟ್

        ನವೆಂಬರ್ ೨೯, ೧೮೩೨ರಂದು ಪೆನ್ಸಿಲ್ವೇನಿಯಾದ ಜರ್ಮನ್‌ಟೌನ್‌ನಲ್ಲಿ ಜನಿಸಿದ  ಲೂಯಿಸಾ ಮೇ ಆಲ್ಕಾಟ್ ಮಹಿಳಾ ಪಾತ್ರಗಳನ್ನು ಬಲಿಷ್ಠವಾಗಿ ಚಿತ್ರಿಸಿ ತನ್ಮೂಲಕ ಸಮಾಜದಲ್ಲಿ ಒಂದು ಬಲಿಷ್ಟ ಸ್ತ್ರೀವಾದಿ ಜನಾಂಗ ರೂಪಿಸಲು ಶ್ರಮಿಸಿದವರಲ್ಲಿ ಅಗ್ರಗಣ್ಯರು. ಇವರು ಮುಖ್ಯವಾಗಿ ಮಕ್ಕಳ ಬರಹಗಾರ್ತಿ ಎಂದು ಗುರುತಿಸಿಕೊಂಡಿದ್ದರೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದದ್ದು ಅವರ ಕಾದಂಬರಿಗಳಿಂದಾಗಿ.  ಆರರಿಂದ ಅರವತ್ತು ವರ್ಷಗಳವರೆಗೆ ಯಾರು ಬೇಕಾದರೂ ಓದಬಹುದಾದ ಪುಸ್ತಕಗಳು ಎಂದು ವಿಮರ್ಶಾವಲಯದಲ್ಲಿ ಮೆಚ್ಚುಗೆ ಗಳಿಸಿದ ಲಿಟ್ಲ ವುಮನ್ ಅವರನ್ನು ಸರ್ವಕಾಲಿಕ ಶ್ರೇಷ್ಠ ಬರಹಗಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿತು.
               ಆಲ್ಕಾಟ್ ಅವರ ಪೋಷಕರು ೧೯ ನೇ ಶತಮಾನದ ಅತೀಂದ್ರಿಯ ಚಳುವಳಿಯ ಒಂದು ಭಾಗವಾಗಿದ್ದರು, ಇದು ಆ ಕಾಲದ ಒಂದು ಜನಪ್ರಿಯ ಧಾರ್ಮಿಕ ಚಳುವಳಿಯಾಗಿದೆ.  ಅವರ ಧಾರ್ಮಿಕ ಮತ್ತು ರಾಜಕೀಯ ನಂಬಿಕೆಗಳು ಬಾಲ್ಯದಲ್ಲಿ ಆಲ್ಕಾಟ್‌ಗೆ ಆಳವಾದ ಸ್ಫೂರ್ತಿ ನೀಡಿತು.  ಅವರ ತಂದೆ ಬ್ರಾನ್ಸನ್ ಆಲ್ಕಾಟ್ ಜನಪ್ರಿಯ ಅತೀಂದ್ರಿಯವಾದಿಯಷ್ಟೇ ಅಲ್ಲ ಒಳ್ಳೆಯ ಶಿಕ್ಷಣತಜ್ಞರಾಗಿದ್ದರು, ಅವರು ಮಕ್ಕಳು ಕಲಿಯುವುದನ್ನು ಆನಂದಿಸಬೇಕು ಎಂದು ನಂಬಿದ್ದರು.  ಆದ್ದರಿಂದ, ಚಿಕ್ಕ ವಯಸ್ಸಿನಲ್ಲಿ, ಆಲ್ಕಾಟ್‌ರವರನ್ನು ಸ್ವಚ್ಛೆಯಿಂದ ಓದಲು ಮತ್ತು ಬರೆಯಲು ಪ್ರೇರೇಪಿಸಿದರು.  ಅಲ್ಕಾಟ್‌ರವರ ಶಿಕ್ಷಣವು ಹೆಚ್ಚಾಗಿ ಅವರ ತಂದೆಯ ನಿರ್ದೇಶನದಲ್ಲಿ, ಬೋಸ್ಟನ್‌ನಲ್ಲಿರುವ ಅವರ ಹೊಸದಾದ ಟೆಂಪಲ್ ಸ್ಕೂಲ್‌ನಲ್ಲಿ ಮತ್ತು ಮನೆಯಲ್ಲಿ ನಡೆದಿದ್ದರೂ ನಂತರ ಪ್ರಸಿದ್ಧ ತತ್ವಜ್ಞಾನಿ ಹೆನ್ರಿ ಡೇವಿಡ್ ಥೋರೋ ಮತ್ತು ಜನಪ್ರಿಯ ಲೇಖಕರಾದ ರಾಲ್ಫ್ ವಾಲ್ಡೋ ಎಮರ್ಸನ್ ಮತ್ತು ನಥಾನಿಯಲ್ ಹಾಥಾರ್ನ್ ಅವರ ಅಡಿಯಲ್ಲಿ ಅಧ್ಯಯನ ಮಾಡಿದರು.  
              ಅವರ ಲಿಟಲ್ ವುಮೆನ್ ಕಾದಂಬರಿಯಂತೆ ಆಲ್ಕಾಟ್‌ರವರು ನಾಲ್ಕು ಹೆಣ್ಣುಮಕ್ಕಳಲ್ಲಿ ಒಬ್ಬಳು ಮತ್ತು ಅವಳು ತನ್ನ ಜೀವನದುದ್ದಕ್ಕೂ ತನ್ನ ಸಹೋದರಿಯರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಹೆಚ್ಚಿನ ಜವಬ್ಧಾರಿ ವಹಿಸಿಕೊಳ್ಳದ ಆಲಸಿ ತಂದೆ ತನ್ನ ದುಡಿಮೆಯಿಂದ ತಮ್ಮನ್ನೆಲ್ಲ ಸಾಕಲು ಸಾಧ್ಯವಿಲ್ಲ ಎಂಬುದು ಅಲ್ಕಾಟ್‌ರವರಿಗೆ ಚಿಕ್ಕ ವಯಸ್ಸಿನಲ್ಲಿಯೆ ಅರಿವಾಗಿಬಿಟ್ಟಿತ್ತು. ಅನೇಕ ಅಲ ಆಲ್ಕಾಟ್ ಕುಟುಂಬವು ಹಣಕಾಸಿನ ತೊಂದರೆಗಳಿಂದ ಬಳಲುತ್ತಿದ್ದುದರಿಂದ ಅವರಿಗೆ ಅನಿಯಮಿತವಾಗಿ ಶಾಲೆಗೆ ಹೋಗುವುದು ಸಾಧ್ಯವಿರಲಿಲ್ಲ ಕುಟುಂಬದ ಹಣಕಾಸಿನ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡಲು ಚಿಕ್ಕ ವಯಸ್ಸಿನಿಂದಲೆ ಅನೇಕ ಉದ್ಯೋಗಗಳನ್ನು ಮಾಡಬೇಕಾಯಿತು. ಶಿಕ್ಷಕಿಯಾಗಿ, ಲಾಂಡ್ರಿಯಲ್ಲಿ ಬಟ್ಟೆ ತೊಳೆಯುವವರಾಗಿ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಕುಟುಂಬದ ಬೆನ್ನೆಲುಬಾಗಿ ನಿಂತರು. ತಮ್ಮ ಕುಟುಂಬದ ಬೆಂಬಲಕ್ಕಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಕೊನೆಯವರೆಗೂ ಕುಟುಂಬಕ್ಕಾಗಿ ಬಾಳಿದ ಅಪರೂಪದ ಬರಹಗಾರ್ತಿ ಇವರು.
1850 ರ ದಶಕವು ಆಲ್ಕಾಟ್ಸ್‌ಗೆ ಕಷ್ಟಕರ ಸಮಯವಾಗಿತ್ತು. 1854 ರಲ್ಲಿ ಲೂಯಿಸಾ ಬೋಸ್ಟನ್ ಥಿಯೇಟರ್‌ನ ಕೆಲಸದಲ್ಲಿ ಸಮಾಧಾನ ಪಡೆಯುತ್ತಿದ್ದರು.  ಅಲ್ಲಿ  'ದಿ ರೈವಲ್ ಪ್ರೈಮಾ ಡೊನ್ನಾಸ್' ಎಂಬ ನಾಟಕವನ್ನು ಬರೆದರು, ನಂತರ ಯಾರು ಪಾತ್ರವನ್ನು ನಿರ್ವಹಿಸಬೇಕು ಎಂಬ ಬಗ್ಗೆ ನಟಿಯರ ನಡುವೆ ಜಗಳ ಹುಟ್ಟಿಕೊಂಡಿದ್ದರಿಂದಾಗಿ ಅದನ್ನು ಸುಟ್ಟುಹಾಕಿದರು. 1857ರಲ್ಲಿ ಒಂದು ಹಂತದಲ್ಲಿ, ಕೆಲಸ ಹುಡುಕಲು ಸಾಧ್ಯವಾಗದೆ ಹತಾಶೆಯಿಂದ ಆಲ್ಕಾಟ್ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಸಹ ಆಲೋಚಿಸಿದ್ದರು.  ಆ ಸಮಯದಲ್ಲಿ ಅವರು ಎಲಿಜಬೆತ್ ಗ್ಯಾಸ್ಕೆಲ್ ಅವರ ಶಾರ್ಲೊಟ್ ಬ್ರಾಂಟೆ ಅವರ ಜೀವನ ಚರಿತ್ರೆಯನ್ನು ಓದಿ  ಅದರಿಂದ ಸ್ಪೂರ್ತಿ ಪಡೆದರು ಮತ್ತು ಜೀವನ ನಡೆಸಲು ಬೇಕಾದ ಅನೇಕ ಅವಕಾಶಗಳು ತೆರೆದುಕೊಂಡಿರುವುದನ್ನು ಅರಿತುಕೊಂಡು ಹೊಸ ಹುಮ್ಮಸ್ಸಿನಲ್ಲಿ ಜೀವಿಸಲು ಪ್ರಾರಂಭಿಸಿದರು. 

               ಆಲ್ಕಾಟ್ ಮೊದಲಿಗೆ ಪಾಟ್‌ಬಾಯ್ಲರ್ ಆಗಿ ಬರೆಯಲು ಪ್ರಾರಂಭಿಸಿದರು. ಪಾಟ್‌ಬಾಯ್ಲರ್ ಎಂದರೆ ತಕ್ಷಣ ಹಣವನ್ನು ಗಳಿಸುವುದಕ್ಕಾಗಿ ಬರೆಯುವ ಬರೆಹಗಳು. ಅವರ ಮೊದಲ ಕವಿತೆ, "ಸನ್ ಲೈಟ್" ಪತ್ರಿಕೆಯಲ್ಲಿ ಪ್ರಕಟವಾಯಿತು.  
ಅವರ ಮೊದಲ ಪುಸ್ತಕ, ಸಣ್ಣ ಕಥೆಗಳ ಸಂಕಲನ,'ಫ್ಲವರ್ ಪ್ಯಾಬಲ್ಸ್' ೧೮೫೪ ರಲ್ಲಿ ಪ್ರಕಟವಾಯಿತು. ಇದು ರಾಲ್ಫ ವಾಲ್ಡೋ ಎಮರ್‍ಸನ್‌ರವರ ಮಗಳಾದ ಎಲೆನ್ ಎಮರ್‍ಸನ್‌ಗೋಸ್ಕರ ಬರೆದ ಕಥೆಗಳಾಗಿದ್ದವು.  ಈ ಸಮಯದಲ್ಲಿ ಅವರು ಬರೆದ ಸಣ್ಣ ಕಥೆಗಳನ್ನು ಎ ಎಂ  ಬರ್ನಾರ್ಡ್ ಎನ್ನುವ ಹೆಸರಿನಿಂದ ಪ್ರಕಟಿಸಿದರು. ಇವು ರೋಮಾಂಚಕ ಕಲ್ಪನೆಯ ಹಿಂಸಾತ್ಮಕ ಕಥೆಗಳು. 

ಇವುಗಳ ನಂತರದ ಕೃತಿಗಳು ಮಹಿಳೆಯರನ್ನು ಶಕ್ತಿಶಾಲಿ, ಸ್ವಾವಲಂಬಿ ಮತ್ತು ಕಲ್ಪನಾಭರಿತವಾಗಿ ಚಿತ್ರಿಸಿವೆ.  ೧೮೬೧ರಲ್ಲಿ ಪ್ರಾರಂಭವಾದ ಅಮೇರಿಕನ್ ಸಿವಿಲ್ ವಾರ್‌ನಲ್ಲಿ ಸ್ವಯಂಸೇವಕ  ದಾದಿಯಾಗಿ ಸೇವೆ ಸಲ್ಲಿಸಿದರು, ಆದರೆ ಆಸ್ಪತ್ರೆಯ ಅನಾರೋಗ್ಯಕರ ವಾತಾವರಣದಿಂದಾಗಿ ಅವರಿಗೆ ಟೈಫಾಯಿಡ್ ಜ್ವರ ಬಂದಿದ್ದರಿಂದ ಮನೆಗೆ ಕಳುಹಿಸಲಾಯಿತು.  ಈ ಜ್ವರದ ಅಡ್ಡಪರಿಣಾಮವನ್ನು ಅವರು ಜೀವನದ ಕೊನೆಯವರೆಗೂ ಅನುಭವಿಸಬೇಕಾಯಿತು. ಈ ಸಮಯದಲ್ಲಿ ಬರೆದುಕೊಂಡ ಟಿಪ್ಪಣಿಗಳು ಮತ್ತು ಪತ್ರಗಳು  ಹಾಸ್ಪಿಟಲ್ ಸ್ಕೆಚ್ಸ್ (೧೮೬೩) ಎಂಬ ಪುಸ್ತಕ ರೂಪದಲ್ಲಿ ಪ್ರಕಟವಾಗಿ  ಖ್ಯಾತಿಯ ಮೊದಲ ರುಚಿಯನ್ನು ತೋರಿಸಿತು.

         ಆಲ್ಕಾಟ್‌ರವರ ಕಥೆಗಳು 'ದಿ ಅಟ್ಲಾಂಟಿಕ್' ಮಾಸಿಕದಲ್ಲಿ ಪ್ರಕಟವಾಗಲು ಪ್ರಾರಂಭಿಸಿದವು, ಆದರೆ ಕುಟುಂಬದ ಅಗತ್ಯಗಳು ಹೆಚ್ಚಾಗಿದ್ದವು. ಈ ಸಮಯದಲ್ಲಿ, ಆಲ್ಕಾಟ್‌ರ ಪ್ರಕಾಶಕರೊಬ್ಬರು ಯುವತಿಯರಿಗಾಗಿ ಕಾದಂಬರಿಯನ್ನು ಬರೆಯುವಂತೆ ಕೇಳಿಕೊಂಡರು.ಅದಕ್ಕಾಗಿ ಅವರು ತಮ್ಮ ಸಹೋದರಿಯರೊಂದಿಗೆ ತಮ್ಮ ಬಾಲ್ಯದ ಬಗ್ಗೆ ಬರೆಯಲಾರಂಭಿಸಿದರು.  ೧೮೬೮ರಲ್ಲಿ, ಆಲ್ಕಾಟ್ ತಮ್ಮ ಅತ್ಯಂತ ಜನಪ್ರಿಯ ಕೃತಿಯಾದ ಲಿಟಲ್ ವುಮೆನ್ ಅನ್ನು ಪ್ರಕಟಿಸಿದರು. 

 ಕಾದಂಬರಿಯನ್ನು ಸಣ್ಣ ಕಥೆಗಳ ರೂಪದಲ್ಲಿ ಸರಣಿಯಾಗಿ ಪ್ರಕಟಿಸಲಾಗಿತ್ತು, ಆದರೆ ಅಂತಿಮವಾಗಿ ಒಂದು ಪುಸ್ತಕವಾಗಿ ಸಂಕಲಿಸಲಾಯಿತು. ಬಾಲ್ಯದ ನೆನಪುಗಳ ಆಧಾರದ ಮೇಲೆ ಬರೆದ ಈ ಕೃತಿ ತಕ್ಷಣದಲ್ಲಿ ಜನಪ್ರಿಯಗೊಂಡು ಯಶಸ್ವಿಯಾಯಿತು. ಲಿಟಲ್ ವುಮೆನ್ ಸಾಧಾರಣ ಕುಟುಂಬದವರಾದರೂ ಆಶಾವಾದಿ ದೃಷ್ಟಿಕೋನ ಹೊಂದಿದ ನ್ಯೂ ಇಂಗ್ಲೆಂಡ್ ಕುಟುಂಬದ ಸಾಹಸಗಳನ್ನು ವಿವರಿಸುತ್ತದೆ.  ಪುಸ್ತಕವು ನಾಲ್ಕು ಸಹೋದರಿಯರ (ಮೆಗ್, ಜೋ, ಬೆತ್ ಮತ್ತು ಆಮಿ ಮಾರ್ಚ್) ವಿಭಿನ್ನ ವ್ಯಕ್ತಿತ್ವಗಳನ್ನು ಮತ್ತು ಅದೃಷ್ಟವನ್ನು ಗುರುತಿಸುತ್ತದೆ, ಅವರು ಬಾಲ್ಯದಿಂದ ಅನುಭವಿಸಿದ ನೋವು ಸಂಕಟಗಳನ್ನು,  ಅವರ ಉದ್ಯೋಗ, ಸಾಮಾಜಿಕ ಸಂಬಂಧಗಳನ್ನು ಮತ್ತು ಮದುವೆಯ ವಿಪತ್ತುಗಳನ್ನು ವಿವರಿಸುತ್ತದೆ. 
           ಚಿಕ್ಕ ವಯಸ್ಸಿನ ಮಹಿಳೆಯರ ಕುಟುಂಬ ಜೀವನದ ವಾಸ್ತವಿಕ ಚಿತ್ರಣ ಹಾಗೂ ಅವರ ಹೋರಾಟದ ಬದುಕಿನ ಕುರಿತು ಇರುವುದರಿಂದ ಯುವ ಓದುಗರು ಈ ಪುಸ್ತಕವನ್ನು ತಮ್ಮ ಸ್ಥಿತಿಗತಿಗಳಿಗೆ ಹೋಲಿಸಿಕೊಂಡು ಓದುತ್ತ ಆಪ್ತವಾಗಿಸಿಕೊಂಡಿದ್ದರಿಂದ ಬಹುಬೇಗ ಒಳ್ಳೆಯ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.  ೧೮೬೯ ರಲ್ಲಿ ಆಲ್ಕಾಟ್ ತನ್ನ ಜರ್ನಲ್‌ನಲ್ಲಿ  "ಎಲ್ಲಾ ಸಾಲಗಳನ್ನು ಪಾವತಿಸಿದೆ. ದೇವರಿಗೆ ಧನ್ಯವಾದಗಳು!" ಎಂದು ಬರೆದುಕೊಳ್ಳುವಷ್ಟು ಹಣವನ್ನು ಈ ಪುಸ್ತಕದಿಂದ ಪಡೆದುಕೊಂಡರು.
               ಲಿಟಲ್ ವುಮೆನ್ ಬಹುಬೇಗ ಯಶಸ್ಸನ್ನು ಕಂಡಿತು ಮತ್ತು  ಆಲ್ಕಾಟ್‌ರನ್ನು ೧೯ ಮತ್ತು ೨೦ನೇ ಶತಮಾನದ ಮುಂಚೂಣಿ ಕಾದಂಬರಿಕಾರರಲ್ಲಿ ಒಬ್ಬರನ್ನಾಗಿ ಮಾಡಿತು.  ೧೮೭೦ ರಲ್ಲಿ, ಈ ಯಶಸ್ವಿ ಪುಸ್ತಕದೊಂದಿಗೆ, ಆಲ್ಕಾಟ್ ತನ್ನ ಸಹೋದರಿ ಮೇ ಜೊತೆ ಯುರೋಪ್‌ಗೆ ತೆರಳಿದರು.

 ಕ್ಲಾಸಿಕ್ ಲಿಟಲ್ ಮೆನ್: ಲೈಫ್ ಅಟ್ ಪ್ಲಮ್‌ಫೀಲ್ಡ್ ವಿತ್ ಜೋಸ್ ಬಾಯ್ಸ್ (೧೮೭೧) ಮತ್ತು ಜೋಸ್ ಬಾಯ್ಸ್ ಆಂಡ್ ಹೌ ದೆ ಟರ್ನ್ಡ್ ಔಟ್ (೧೮೮೬) ಎನ್ನುವ ಎರಡು ಮುಂದುವರಿದ ಆವೃತ್ತಿಗಳನ್ನು ಪ್ರಕಟಿಸಿದರು.
          ಅದೇ ಸಮಯದಲ್ಲಿ ಅವರು ಮಹಿಳಾ ಮತದಾರರ ಚಳವಳಿಗೆ ಸೇರಿದರು.  ಅವರ ಜೀವನದುದ್ದಕ್ಕೂ, ಅವರು ಮಹಿಳಾ ಹಕ್ಕುಗಳನ್ನು ಉತ್ತೇಜಿಸುವ ಹಲವಾರು ಪ್ರಕಟಣೆಗಳನ್ನು ನೀಡಿದರು.  ಮ್ಯಾಸಚೂಸೆಟ್ಸ್‌ನ ಕಾನ್‌ಕಾರ್ಡ್‌ನಲ್ಲಿ ಶಾಲಾ ಮಂಡಳಿಯ ಚುನಾವಣೆಯಲ್ಲಿ ಮತ ಚಲಾಯಿಸಲು ನೋಂದಾಯಿಸಿದ ಮೊದಲ ಮಹಿಳೆ ಎನ್ನುವ ಶ್ರೇಯಸ್ಸು ಇವರಿಗಿದೆ.
         ಆಲ್ಕಾಟ್ ತನ್ನ ಆರಂಭಿಕ ಅನುಭವಗಳಿಂದ ಇತರ ದೇಶೀಯ ನಿರೂಪಣೆಗಳನ್ನು ಸಹ ಬರೆದಿದ್ದಾರೆ. ಆನ್ ಓಲ್ಡ್ ಫ್ಯಾಶನ್ಡ್ ಗರ್ಲ್ (೧೮೭೦);  ಆಂಟ್ ಜೋಸ್ ಸ್ಕ್ರ್ಯಾಪ್ ಬ್ಯಾಗ್‌ನ ಆರು ಸಂಪುಟಗಳು  (೧೮೭೨-೮೨); 
 ಏಟ್ ಕಸಿನ್ಸ್ (೧೮೭೫);  ಮತ್ತು ರೋಸ್ ಇನ್ ಬ್ಲೂಮ್ (೧೮೭೬) (ಏಟ್ ಕಸಿನ್ಸ್ ಎರಡನೆ ಸಂಪುಟ) ಪ್ರಮುಖವಾದವು.
 ೧೮೭೦ರಲ್ಲಿ ಮಾಡಿದ ಯುರೋಪಿಯನ್ ಪ್ರವಾಸ ಮತ್ತು ನ್ಯೂಯಾರ್ಕ್‌ಗೆ ಕೆಲವು ಚಿಕ್ಕ ಪ್ರವಾಸಗಳನ್ನು ಹೊರತುಪಡಿಸಿ, ಸುದೀರ್ಘ ಅನಾರೋಗ್ಯದ ನಂತರ ೧೮೭೭ ರಲ್ಲಿ ನಿಧನರಾದ ತನ್ನ ತಾಯಿ ಮತ್ತು ಅಸಹಾಯಕ ತಂದೆಯನ್ನು ನೋಡಿಕೊಳ್ಳುತ್ತ ಅವರು ತಮ್ಮ ಜೀವನದ ಕೊನೆಯ ಎರಡು ದಶಕಗಳನ್ನು ಬೋಸ್ಟನ್ ಮತ್ತು ಕಾನ್ಕಾರ್ಡ್‌ನಲ್ಲಿ ಕಳೆದರು, ಆಲ್ಕಾಟ್ ಎಂದಿಗೂ ಮದುವೆಯಾಗಲಿಲ್ಲ ಅಥವಾ ಮಕ್ಕಳನ್ನು ಹೊಂದಿರಲಿಲ್ಲ, ಆದಾಗ್ಯೂ, ಅವರ ಸಹೋದರಿ ಮೇ ಮರಣಹೊಂದಿದಾಗ ಅವರ ಮಗಳಾದ ಲೂಯಿಸಾ ಮೇ ನೀರಿಕರ್‌ರನ್ನು ದತ್ತು ತೆಗೆದುಕೊಂಡರು.  ಹಾಗೆ ನೋಡಿದರೆ ಅವರ ಆರೋಗ್ಯ, ಎಂದಿಗೂ ಸದೃಢವಾಗಿರಲಿಲ್ಲ, ತಮ್ಮ ಜೀವನದುದ್ದಕ್ಕೂ ಅನಾರೋಗ್ಯದಿಂದ ಬಳಲುತ್ತಿದ್ದರು.  ಅಂತರ್ಯುದ್ಧದ ಸಮಯದಲ್ಲಿ ನರ್ಸ್ ಆಗಿ ಕೆಲಸ ಮಾಡುವಾಗ ಟೈಫಾಯಿಡ್ ಸೋಂಕಿಗೆ ಒಳಗಾದಾಗ ಸೇವಿಸಿದ ಪಾದರಸ ಯುಕ್ತ ಔಷಧ ತಮ್ಮ ಕಳಪೆ ಆರೋಗ್ಯಕ್ಕೆ  ಕಾರಣವೆಂದು ಹೇಳುತ್ತಿದ್ದರು. ವಿಪರ್‍ಯಾಸವೆಂದರೆ ತನ್ನ ತಂದೆಯ ಮರಣದ ಎರಡು ದಿನಗಳ ನಂತರ ಅಂದರೆ ೬ ಮಾರ್ಚ್ ೧೮೮೮ ರಲ್ಲಿ ತಮ್ಮ ೫೬ ನೇ ವರ್ಷದಲ್ಲಿ ಅಲ್ಕಾಟ್  ಬೋಸ್ಟನ್‌ನಲ್ಲಿ ನಿಧನರಾದರು.
       ಯುವ ಓದುಗರ ವಲಯದಲ್ಲಿ ಆಲ್ಕಾಟ್ ಅವರ ಪುಸ್ತಕಗಳು ಹೆಚ್ಚು ಜನಪ್ರಿಯವಾಗಿವೆ. ೨೦ ನೇ ಶತಮಾನದ ಕೊನೆಯಲ್ಲಿ ಅವರ ಅಷ್ಟೇನೂ ಪ್ರಸಿದ್ಧಿ ಪಡೆಯದ ಕಾದಂಬರಿಗಳ ಮರುಪ್ರಕಟಣೆಯು ಹೊಸ ವಿಮರ್ಶಾತ್ಮಕ ಆಸಕ್ತಿಯನ್ನು ಹುಟ್ಟುಹಾಕಿತು. ೧೮೭೭ರಲ್ಲಿ ಗುಪ್ತನಾಮದಲ್ಲಿ ಪ್ರಕಟವಾದ ಎ ಮಾಡರ್ನ್ ಮೆಫಿಸ್ಟೋಫೆಲಿಸ್ ೧೯೮೭ರಲ್ಲಿ ಮರುಪ್ರಕಟಿಸಲ್ಪಟ್ಟಿತು, ಇದು ಗೋಥಿಕ್ ಕಾದಂಬರಿಯಾಗಿದ್ದು, ತನಗೆ ಪ್ರಲೋಭನೆಯೊಡ್ಡುವ ಅತಿಮಾನುಷ ಶಕ್ತಿಯೊಂದಿಗೆ ಚೌಕಾಶಿಮಾಡುವ ಕವಿಯ ಕುರಿತಾದ ಕಥಾವಸ್ತುವನ್ನು ಹೊಂದಿದೆ. ವರ್ಕ್:-   ಎ ಸ್ಟೋರಿ ಆಫ್ ಎಕ್ಸ್‌ಪೀರಿಯೆನ್ಸ್ (೧೮೭೩), ಆಲ್ಕಾಟ್‌ರ ನಿಜ ಜೀವನದ ಹೋರಾಟಗಳನ್ನು ಆಧರಿಸಿ ಕಥಾವಸ್ತು ಅಂದರೆ ಬಡ ಹುಡುಗಿಯೊಬ್ಬಳು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ ತನ್ನನ್ನು ತಾನು ಬೆಂಬಲಿಸಲು ಪ್ರಯತ್ನಿಸುವ ಕಥೆಯನ್ನು ಹೇಳುತ್ತದೆ.  
ಆಲ್ಕಾಟ್ ೧೮೬೩ರಿಂದ ೧೮೬೯ರ ನಡುವೆ ಗುಪ್ತನಾಮದಲ್ಲಿ ಪ್ರಕಟಿಸಿದ ಗೋಥಿಕ್ ಕಥೆಗಳು ಮತ್ತು ಥ್ರಿಲ್ಲರ್ ಕಥೆಗಳನ್ನು ಸಂಗ್ರಹಿಸಿ ಬಿಹೈಂಡ್ ಎ ಮಾಸ್ಕ್ (೧೯೭೫) ಮತ್ತು ಪ್ಲಾಟ್ಸ್ ಆಂಡ್ ಕೌಂಟರ್‌ಪ್ಲಾಟ್ಸ್ (೧೯೭೬) ಎಂದು ಮರುಪ್ರಕಟಿಸಲಾಗಿದೆ. 
ಇದರ ಜೊತೆಗೆ ೧೮೬೬ ರಲ್ಲಿ ಬರೆದ ಅಪ್ರಕಟಿತ ಚೇಸ್ ಎ ಲಾಂಗ್ ಫೇಟಲ್ ಗೋಥಿಕ್ ಕಾದಂಬರಿಯನ್ನು ೧೯೯೫ ಪ್ರಕಟವಾಯಿತು.
                     
   ಇವರ ಎಲ್ಲ ಕಾದಂಬರಿಗಳು ಓದುಗರಿಗೆ ಬುದ್ಧಿವಂತ ಹಾಗೂ ಸ್ವಾವಲಂಭಿಯಾದ ಕಥಾನಾಯಕಿಯನ್ನು ಪರಿಚಯಿಸಿತು. ಹೀಗಾಗಿ ಅಮೇರಿಕಾದ ಕಾದಂಬರಿ ಕ್ಷೇತ್ರವು ಹೊಸದೊಂದು ದಾರಿಯಲ್ಲಿ ನಡೆಯಲು ಈ ಕಾದಂಬರಿಗಳು ಮುನ್ನುಡಿಯನ್ನು ಬರೆದವು.

lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220805_4_7

No comments:

Post a Comment