೧೮ನೇ ಶತಮಾನದ ಇಂಗ್ಲೀಷ್ ಗೋಥಿಕ್ ಸಾಹಿತ್ಯದ ಕೆಲವೇ ಕೆಲವು ಪ್ರಮುಖ ಸಾಹಿತಿಗಳಲ್ಲಿ ಮುಂಚೂಣಿಯಲ್ಲಿರುವ ಕಾದಂಬರಿಕಾರ್ತಿ ಆನ್ ರಾಡ್‌ಕ್ಲಿಪ್ ೯ ಜುಲೈ ೧೭೬೪ ರಲ್ಲಿ ಲಂಡನ್‌ನಲ್ಲಿ ಜನಿಸಿದರು. ವ್ಯಾಪಾರಿಯಾಗಿದ್ದ ತಂದೆ ವಿಲಿಯಂ ವಾರ್ಡ್ ಹಾಗೂ ತಾಯಿ ಆನ್ ವಾರ್ಡ್‌ರವರ ಒಬ್ಬಳೆ ಮಗಳಾಗಿದ್ದ ಆನ್ ರಾಡ್‌ಕ್ಲಿಪ್ ಬರೆದದ್ದು ೨೦ ಕ್ಕೂ ಹೆಚ್ಚಿನ ಕೃತಿಗಳು. ತನ್ನ ೨೩ನೇ ವಯಸ್ಸಿನಲ್ಲಿ ಅಂದರೆ ೧೭೮೭ರಲ್ಲಿ ವಿಲಿಯಂ ರಾಡ್‌ಕ್ಲಿಪ್‌ರನ್ನು ವಿವಾಹವಾದ ಆನ್‌ರವರ ವೈಯುಕ್ತಿಕ ಜೀವನದ ಬಗ್ಗೆ ಹೆಚ್ಚಿಗೆ ಏನೂ ತಿಳಿದುಬಂದಿಲ್ಲ. ೧೭೯೦ ರ ದಶಕದಲ್ಲಿ ಮತ್ತು ೧೯ ನೇ ಶತಮಾನದ ಮೊದಲಾರ್ಧದಲ್ಲಿ ರಾಡ್‌ಕ್ಲಿಫ್ ಅವರ ದೊಡ್ಡ ಜನಪ್ರಿಯತೆಯ ಹೊರತಾಗಿಯೂ, ಅವರ ಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ಸ್ವಲ್ಪವೇ ತಿಳಿದಿದೆ; ರಾಡ್‌ಕ್ಲಿಫ್‌ನ ಮರಣದ ಸುಮಾರು ೫೦ ವರ್ಷಗಳ ನಂತರ ಕವಿ ಕ್ರಿಸ್ಟಿನಾ ರೊಸೆಟ್ಟಿ ಜೀವನಚರಿತ್ರೆಯನ್ನು ಬರೆಯಲು ಪ್ರಯತ್ನಿಸಿದಾಗ ಯಾವುದೇ ಅಧಿಕೃತ ಮಾಹಿತಿ ಇಲ್ಲದೆ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ರಾಡ್‌ಕ್ಲಿಫ್‌ನ ಮರಣದ ಸಮಯದಲ್ಲಿ ಎಡಿನ್‌ಬರ್ಗ್ ರಿವ್ಯೂ ರೆಕಾರ್ಡ್‌ನಲ್ಲಿ "ಲೇಖಕಿಯು ತನ್ನನ್ನು ವೇವರ್ಲಿ ಲೇಖಕರಂತೆ ಅಜ್ಞಾತವಾಗಿ ಇಟ್ಟುಕೊಂಡಿದ್ದಳು; ಶೀರ್ಷಿಕೆ ಪುಟದಲ್ಲಿ ಅವಳ ಹೆಸರನ್ನು ಹೊರತುಪಡಿಸಿ ಬೇರೇನೂ ತಿಳಿದಿರಲಿಲ್ಲ. ಅವಳು ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಅಥವಾ ಬೆರೆಯಲಿಲ್ಲ ಖಾಸಗಿ ಬದುಕನ್ನು ಹೆಚ್ಚು ಗೌಪ್ಯವಾಗಿಟ್ಟಿದ್ದಳು., ಆದರೆ ತನ್ನ ಒಂಟಿಯಾದ ಸ್ವರಗಳನ್ನು ಹಾಡುವ ಸುಂದರವಾದ ಹಕ್ಕಿಯಂತೆ ತನ್ನನ್ನು ತಾನು ಸಾಮಾಜಿಕ ಜೀವನದಿಂದ ದೂರವಿಟ್ಟುಕೊಂಡಿದ್ದಳು.' ಎಂದು ನಮೂದಿಸಲಾಗಿದೆ. ಹೀಗಾಗಿ ಬಾಲ್ಯ ಯೌವನದ ಕುರಿತು ಹೆಚ್ಚಿಗೆ ಮಾಹಿತಿಗಳು ಲಭ್ಯವಿಲ್ಲದಿದ್ದುದರಿಂದ ಆರ್ಥಿಕವಾಗಿ ಸದೃಢವಾದ ಕೌಟುಂಬಿಕ ಹಿನ್ನಲೆಯಿಂದ ಬಂದಂತಹ ಇವರ ಶಿಕ್ಷಣ ಮನೆಯಲ್ಲಿಯೇ ನಡೆದಿರಬಹುದು ಎಂದು ಊಹಿಸಲಾಗಿದೆ.
ಲಾರ್ಡ್ ಬೈರನ್, ಸಾಮ್ಯುಯೆಲ್ ಟೇಲರ್, ಕೋಲ್ರಿಡ್ಜ್, ಕ್ರಿಸ್ಟೀನಾ ರೋಸೆಟ್ಟಿ ಮುಂತಾದ ಅದ್ಭುತ ಲೇಖಕರ ಅಭಿಮಾನದ ದೇವತೆಯಾಗಿ ಕಂಗೊಳಿಸಿ ಅವರನ್ನು ಹಿಂಬಾಲಕರನ್ನಾಗಿ ಪಡೆದುಕೊಂಡ ಆನ್ ಸರಿಸುಮಾರು ಒಂದು ತಲೆಮಾರಿನ ಲೇಖಕರನ್ನು ತನ್ನ ಪ್ರಭಾವಲಯದೊಳಗೆ ಸೆಳೆದುಕೊಂಡಂತಹ ಬರವಣಿಗೆಯ ಶಕ್ತಿಯನ್ನು ಹೊಂದಿದ್ದರು. ರೋಮ್ಯಾಂಟಿಸಿಸಂ ಲೇಖಕರಲ್ಲಿ ಇವರ ಪ್ರಭಾವಕ್ಕೆ ಒಳಗಾಗದ ಬರಹಗಾರರು ಇಲ್ಲವೇ ಇಲ್ಲ ಎಂಬಷ್ಟು ವಿರಳ.
ಅದರಲ್ಲೂ ಗೋಥಿಕ್ ಸಾಹಿತ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ ಬರೆಹಗಾರರಲ್ಲಿ ಇವರು ಅಗ್ರಗಣ್ಯರು. ತನ್ನ ಮರಣದ ನಂತರವೂ ಸುಮಾರು ಇಪ್ಪತ್ತು ವರ್ಷಗಳ ಕಾಲ ತನ್ನ ಮುಂದಿನ ತಲೆಮಾರಿನ ಯುವ ಬರಹಗಾರರನ್ನು ಪ್ರಚೋದಿಸಿದಂತಹ ಬರಹಗಾರ್ತಿ ಇವರು. ೧೭೯೦ರ ದಶಕದಲ್ಲಿ ಒಡೆದು ಹೋದ ದೊಡ್ಡ ದೊಡ್ಡ ಮಧ್ಯಕಾಲೀನ ಗೋಥಿಕ್ ಶೈಲಿಯ ಕಟ್ಟಡಗಳನ್ನು ತಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡು ಆ ಕಟ್ಟಡಗಳ ಭಗ್ನಾವಶೇಷಗಳನ್ನು ಕಾದಂಬರಿಯಲ್ಲಿ ಭಯ ಹುಟ್ಟಿಸಲು ಪ್ರಚೋದನಾತ್ಮಕವಾಗಿ ಬಳಸಿ ಬರೆಯುವಂತಹ ಸಾಹಿತ್ಯ ಕೃತಿಗಳನ್ನು ಗೋಥಿಕ್ ಸಾಹಿತ್ಯ ಎಂದು ಕರೆಯಲಾಗುತ್ತದೆ.
ಕಾದಂಬರಿಗಳಲ್ಲಿನ ಭಯ ಹುಟ್ಟಿಸುವ ಅಂಶಗಳು ಹಾಗೂ ಕುತೂಹಲ ಕೆರಳಿಸುವ ಘಟನೆಗಳು ಆನ್ ರಾಡ್‌ಕ್ಲಿಪ್‌ರವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತು. ಅದರಲ್ಲೂ ಗೋಥಿಕ್ ಶೈಲಿಯ ಈ ಕಾದಂಬರಿಗಳಲ್ಲಿ ಬರುವ ರೋಚಕ ವಿವರಣೆಗಳು ಆ ಕಾಲದ ಓದುಗರನ್ನು ಖುರ್ಚಿಯ ತುದಿಯಲ್ಲಿ ಕುಳಿತು ಓದುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದವು. ಭಯ ಹುಟ್ಟಿಸುವ ಸಂವೇದನೆಗಳ ಜೊತೆ ಜೊತೆಗೆ ಬರುವ ಪ್ರಣಯ ಪ್ರಸಂಗಗಳು ಕಾದಂಬರಿಯನ್ನು ಒಮ್ಮೆ ಓದಲು ಕೈಗೆತ್ತಿಕೊಂಡರೆ ಕೆಳಗೆ ಇಡದಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದವು
ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಇಂಗ್ಲೆಂಡಿನಿಂದ ಹೊರಗೆ ಅಂದರೆ ಹಾಲೆಂಡ್ ಹಾಗೂ ಜರ್ಮನಿಗೆ ಪ್ರವಾಸ ಹೋಗಿದ್ದ ಆನ್ ರಾಡ್‌ಕ್ಲಿಪ್ ಕಾದಂಬರಿಗಳಲ್ಲಿ ಬರುವ ಸ್ಥಳ ವಿವರಣೆ ಮಾತ್ರ ಅತ್ಯದ್ಭುತವಾದದ್ದು. ತನ್ನ ಸಹವರ್ತಿಗಳಿಂದ ಪ್ರಯಾಣದ ವಿವರಣೆಗಳನ್ನು ಕೇಳಿ ತಿಳಿದುಕೊಂಡು ಅದನ್ನು ತಮ್ಮ ಕಾದಂಬರಿಗಳಲ್ಲಿ ಅಚ್ಚುಕಟ್ಟಾಗಿ ಬರೆಯುತ್ತಿದ್ದರು.
ಸಂಗೀತ ಮತ್ತು ಕಲೆಯ ಬಗ್ಗೆ ಜ್ಞಾನವನ್ನು ಹೊಂದಿದ್ದ ಆನ್ನಿ ರಾಡ್‌ಕ್ಲಿಪ್ ಕೃತಿಗಳು ಪೂರ್ವ-ರೊಮ್ಯಾಂಟಿಕ್ ಇಂಗ್ಲಿಷ್ ಕವಿಗಳ ಸಾಹಿತ್ಯದೊಂದಿಗೆ ಮತ್ತು ಷೇಕ್ಸ್ಪಿಯರ್‌ನ ನಾಟಕಗಳು ಮತ್ತು ಕವಿತೆಗಳೊಂದಿಗೆ ಬಹಳಷ್ಟು ಹೋಲಿಕೆಯಿದೆ.
ಅವರ ಆರಂಭಿಕ ಬೆಳವಣಿಗೆಯ ಮೇಲೆ ಗಮನಾರ್ಹ ಪ್ರಭಾವ ಬೀರಿದ ವ್ಯಕ್ತಿ, ಥಾಮಸ್ ಬೆಂಟ್ಲಿ, ಅನೇಕ ವಿಷಯಗಳ ಕುರಿತು ಆಸಕ್ತಿ ಹೊಂದಿದ ವ್ಯಕ್ತಿ. ರಾಡ್‌ಕ್ಲಿಫ್‌ನ ಚಿಕ್ಕಮ್ಮ, ಹನ್ನಾ ಓಟ್ಸ್‌ರ ಗಂಡ. ಬೆಂಟ್ಲಿ ತನ್ನ ಸಾಹಿತ್ಯ ಮತ್ತು ವೈಜ್ಞಾನಿಕ ಜಗತ್ತಿನ ಅನೇಕ ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದರು. ಆ ಸಮಯದಲ್ಲಿ ಇನ್ನೂ ಚಿಕ್ಕವರಾಗಿದ್ದ, ರಾಡ್‌ಕ್ಲಿಫ್‌ರನ್ನು ಉತ್ತೇಜಿಸುತ್ತ ಅವರ ಬರವಣಿಗೆಯನ್ನು ಪ್ರೋತ್ಸಾಹಿಸಿದರು. ಆದರೂ ಅವರ ಕಾದಂಬರಿಗಳು ಪೂರ್ಣಪ್ರಮಾಣದಲ್ಲಿ ಪ್ರಗತಿ ಕಂಡಿದ್ದು ಮದುವೆಯಾದ ನಂತರವೇ.
ಅವರ ಮೊದಲ ಕಾದಂಬರಿ, 'ದ ಕ್ಯಾಸಲ್ಸ್ ಆಫ್ ಅಥ್ಲಿನ್ ಮತ್ತು ಡನ್‌ಬೇನ್' ಅವರ ಮದುವೆಯಾದ ಎರಡು ವರ್ಷಗಳ ನಂತರ ಪ್ರಕಟಗೊಂಡಿತು.
ಸಂಗೀತ ಮತ್ತು ಕಲೆಯ ಬಗ್ಗೆ ಜ್ಞಾನವನ್ನು ಹೊಂದಿದ್ದ ಆನ್ನಿ ರಾಡ್‌ಕ್ಲಿಪ್ ಕೃತಿಗಳು ಪೂರ್ವ-ರೊಮ್ಯಾಂಟಿಕ್ ಇಂಗ್ಲಿಷ್ ಕವಿಗಳ ಸಾಹಿತ್ಯದೊಂದಿಗೆ ಮತ್ತು ಷೇಕ್ಸ್ಪಿಯರ್‌ನ ನಾಟಕಗಳು ಮತ್ತು ಕವಿತೆಗಳೊಂದಿಗೆ ಬಹಳಷ್ಟು ಹೋಲಿಕೆಯಿದೆ.
ಅವರ ಆರಂಭಿಕ ಬೆಳವಣಿಗೆಯ ಮೇಲೆ ಗಮನಾರ್ಹ ಪ್ರಭಾವ ಬೀರಿದ ವ್ಯಕ್ತಿ, ಥಾಮಸ್ ಬೆಂಟ್ಲಿ, ಅನೇಕ ವಿಷಯಗಳ ಕುರಿತು ಆಸಕ್ತಿ ಹೊಂದಿದ ವ್ಯಕ್ತಿ. ರಾಡ್‌ಕ್ಲಿಫ್‌ನ ಚಿಕ್ಕಮ್ಮ, ಹನ್ನಾ ಓಟ್ಸ್‌ರ ಗಂಡ. ಬೆಂಟ್ಲಿ ತನ್ನ ಸಾಹಿತ್ಯ ಮತ್ತು ವೈಜ್ಞಾನಿಕ ಜಗತ್ತಿನ ಅನೇಕ ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದರು. ಆ ಸಮಯದಲ್ಲಿ ಇನ್ನೂ ಚಿಕ್ಕವರಾಗಿದ್ದ, ರಾಡ್‌ಕ್ಲಿಫ್‌ರನ್ನು ಉತ್ತೇಜಿಸುತ್ತ ಅವರ ಬರವಣಿಗೆಯನ್ನು ಪ್ರೋತ್ಸಾಹಿಸಿದರು. ಆದರೂ ಅವರ ಕಾದಂಬರಿಗಳು ಪೂರ್ಣಪ್ರಮಾಣದಲ್ಲಿ ಪ್ರಗತಿ ಕಂಡಿದ್ದು ಮದುವೆಯಾದ ನಂತರವೇ.
ಅವರ ಮೊದಲ ಕಾದಂಬರಿ, 'ದ ಕ್ಯಾಸಲ್ಸ್ ಆಫ್ ಅಥ್ಲಿನ್ ಮತ್ತು ಡನ್‌ಬೇನ್' ಅವರ ಮದುವೆಯಾದ ಎರಡು ವರ್ಷಗಳ ನಂತರ ಪ್ರಕಟಗೊಂಡಿತು.
ಒಂದು ವರ್ಷದೊಳಗೆ, 'ಎ ಸಿಸಿಲಿಯನ್ ರೊಮ್ಯಾನ್ಸ್' ಮತ್ತು ಒಂದು ವರ್ಷದ ನಂತರ 'ದಿ ರೊಮ್ಯಾನ್ಸ್ ಆಫ್ ದಿ ಫಾರೆಸ್ಟ್' ಅನ್ನು ಪ್ರಕಟಿಸಿದರು. ಆದರೆ ಈ ಮೊದಲ ಮೂರು ಕಾದಂಬರಿಗಳು ಅವರ ಹೆಸರಿಲ್ಲದೆ ಅನಾಮಧೇಯವಾಗಿ ಪ್ರಕಟವಾದವು.
ಆದರೆ 'ದಿ ರೊಮ್ಯಾನ್ಸ್ ಆಫ್ ದಿ ಫಾರೆಸ್ಟ್' ಕೃತಿಯ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿದಾಗ ರಾಡ್‌ಕ್ಲಿಫ್ ತನ್ನ ಹೆಸರನ್ನು ಶೀರ್ಷಿಕೆ ಪುಟದಲ್ಲಿ ನಮೂದಿಸಿ ಸಾಹಿತ್ಯ ಲೋಕಕ್ಕೆ ತನ್ನನ್ನ ಅನಾವರಣಗೊಳಿಸಿ ಕೊಂಡರು. ೧೭೯೪ ರಲ್ಲಿ ಪ್ರಕಟವಾದ ಅವರ ನಾಲ್ಕನೇ ಕಾದಂಬರಿ, 'ದಿ ಮಿಸ್ಟರೀಸ್ ಆಫ್ ಉಡಾಲ್ಫೋ' ಬ್ರಿಟನ್‌ನಲ್ಲಿ ಮಾತ್ರವಲ್ಲದೆ ಇಡೀ ಯುರೋಪಿನಾದ್ಯಂತ ಅವಳನ್ನು ಪರಿಚಯಿಸಿ ಅಪಾರ ಕೀರ್ತಿ ತಂದುಕೊಟ್ಟಿತು. ಆ ಸಮಯದಲ್ಲಿ ಅವರು ಅತ್ಯಂತ ಜನಪ್ರಿಯ ಬರಹಗಾರರೆನಿಸಿಕೊಂಡಿದ್ದರು.
ಈ ಕಾದಂಬರಿಯು ಅನಾಥ ಎಮಿಲಿ ಸೇಂಟ್ ಆಬರ್ಟ್ ಹೇಗೆ ರಕ್ಷಕರಿಂದ ಕ್ರೌರ್ಯಕ್ಕೆ ಒಳಗಾಗುತ್ತಾಳೆ, ಅವಳ ಅದೃಷ್ಟವನ್ನು ಕಳೆದುಕೊಳ್ಳುವ ಬೆದರಿಕೆಯನ್ನು ಒಡ್ಡಲಾಗುತ್ತದೆ, ಬೇಧಿಸಲಾಗದ ಕೋಟೆಗಳಲ್ಲಿ ಬಂಧಿತಳಾಗಿದ್ದರೂ ಅಂತಿಮವಾಗಿ ಬಿಡುಗಡೆಗೊಂಡು ತನ್ನ ಪ್ರೇಮಿಯೊಂದಿಗೆ ಒಂದಾಗುವ ನಡುವಣ ಅವಧಿಯಲ್ಲಿ ವಿಚಿತ್ರವಾದ ಮತ್ತು ಭಯಾನಕ ಘಟನೆಗಳು ಉಡಾಲ್ಫೋದ ಒಂಟಿ ಕೋಟೆಯ ಗೀಳುಹಿಡಿದ ವಾತಾವರಣದಲ್ಲಿ ನಡೆಯುವುದನ್ನು ಚಿತ್ರಿಸುತ್ತದೆ.
ಅದೇ ವರ್ಷ, ಆನ್ನಿ ರಾಡ್‌ಕ್ಲಿಫ್ ತನ್ನ ಪತಿಯೊಂದಿಗೆ ಹಾಲೆಂಡ್ ಮತ್ತು ಜರ್ಮನಿಯ ಮೂಲಕ ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರವಾಸಕ್ಕೆ ಹೊರಟರಾದರೂ ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗಲು ಅವರಿಂದ ಸಾಧ್ಯವಾಗಲಿಲ್ಲ. ಗಡಿ ಪೋಸ್ಟ್‌ನಲ್ಲಿರುವ ಗ್ಯಾರಿಸನ್‌ನ ಆಸ್ಟ್ರಿಯನ್ ಕಮಾಂಡರ್ ಆನ್ನಿಯವರನ್ನು ಬ್ರಿಟೀಷ್ ಎಂದು ಒಪ್ಪಿಕೊಳ್ಳದಿರುವುದರಿಂದ ಸ್ವಿಡ್ಜರ್ ಲ್ಯಾಂಡ್ ಒಳಗೆ ಪ್ರವೇಶವನ್ನು ನಿರಾಕರಿಸಲಾಯಿತು. ಆದಾಗಿಯೂ ಈ ಪ್ರವಾಸ ಅವರ ಬರವಣಿಗೆಯ ಮೇಲೆ ಅಪಾರ ಪರಿಣಾಮವನ್ನುಂಟುಮಾಡಿತು. ರಾಟರ್‌ಡ್ಯಾಮ್, ಡೆಲ್ಫ್ಟ್ ಮತ್ತು ಹಾಲೆಂಡ್‌ನ ಇತರ ಪ್ರಮುಖ ಪಟ್ಟಣಗಳಿಗೆ ಭೇಟಿ ನೀಡಿ ಅಲ್ಲಿನ ಡಚ್ ರ ಶುಚಿತ್ವದಿಂದ ಪ್ರಭಾವಿತರಾದರು. ಆದರೆ ಜರ್ಮನಿಯ ವಿಭಿನ್ನ ಚಿತ್ರಣ ಅವರ ಮನಸ್ಸನ್ನು ಘಾಸಿಗೊಳಿಸಿತು. ಭಿಕ್ಷೆ ಬೇಡಲು ಬರಿಗಾಲಿನಿಂದ ಓಡುವ ಮಕ್ಕಳು, ಕೃಷಿ ಮಾಡದೆ ಪಾಳು ಬಿದ್ದ ಭೂಮಿ, ಪ್ರಯಾಣಿಸುತ್ತಿದ್ದಾಗ ಆಗಾಗ ಎದುರಾಗುತ್ತಿದ್ದ ಗಾಯಗೊಂಡ ಸೈನಿಕರು, ಹತಾಶ ಫ್ರೆಂಚ್ ಯುದ್ಧಕೈದಿಗಳ ಗುಂಪುಗಳು ಅವರನ್ನು ವಿಚಲಿತಗೊಳಿಸಿತು.
ಪ್ರಯಾಣದ ಉದ್ದಕ್ಕೂ ಜರ್ನಲ್‌ನಲ್ಲಿ ಸಾಕಷ್ಟು ಟಿಪ್ಪಣಿಗಳನ್ನು ಮಾಡಿಕೊಂಡಿದ್ದ ಅವರು ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ 'ಎ ಜರ್ನಿ ಮೇಡ್ ಇನ್ ದಿ ಸಮ್ಮರ್ ಆಫ್ ೧೭೯೪'ನ್ನು ಅದರ ಮರುವರ್ಷ ಪ್ರಕಟಿಸಿದರು.
ಇದಾದ ಎರಡು ವರ್ಷಗಳ ನಂತರ ಅವರ ಸಾಹಿತ್ಯಿಕ ಜೀವನದ ಅತಿ ಮುಖ್ಯವಾದ ಕಾದಂಬರಿಯಾದ 'ದಿ ಇಟಾಲಿಯನ್' ಪ್ರಕಟವಾಯಿತು.
ಈ ಕಾದಂಬರಿಯ ಸಂಭಾಷಣೆ ಮತ್ತು ಕಥಾವಸ್ತುವಿನ ರಚನೆಯು ಅದ್ಭುತವಾಗಿದೆ.ಇದರ ಖಳನಾಯಕ, ಷೆಡೋನಿ, ಬೃಹತ್ ಮೈಕಟ್ಟು ಹೊಂದಿದ ಪಾಪಿಷ್ಟ. ಮಾನಸಿಕ ಒಳನೋಟದಿಂದ ರಚಿಸಲಾದ ಈ ಕಾದಂಬರಿ ಭಯಾನಕ ಅನುಭವಗಳನ್ನು ನೀಡುತ್ತದೆ.
ಮುಂದಿನ ಎಂಟು ವರ್ಷಗಳಲ್ಲಿ ಆರು ಪುಸ್ತಕಗಳನ್ನು ಪ್ರಕಟಿಸಿದ ಆನ್ನಿ ಆನ್ನಿ ರಾಡ್‌ಕ್ಲಿಪ್ ೩೩ ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಪುಸ್ತಕ ಪ್ರಕಟಣೆಯನ್ನು ನಿಲ್ಲಿಸಿದರು.
೧೮೧೬ ರಲ್ಲಿ ಸ್ಲಿಮ್ ಕವನಗಳನ್ನು ಬರೆದರು. ಕೊನೆಯ ಕಾದಂಬರಿ 'ಗ್ಯಾಸ್ಟನ್ ಡಿ ಬ್ಲಾಂಡೆವಿಲ್ಲೆ' ಅವರ ಮರಣದ ನಂತರ ಮೂರು ವರ್ಷಗಳವರೆಗೂ ಪ್ರಕಟವಾಗಲಿಲ್ಲ.
ಅವರು ಪುಸ್ತಕ ಪ್ರಕಟಣೆಯನ್ನು ಏಕೆ ನಿಲ್ಲಿಸಿದರು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. 'ಇಟಾಲಿಯನ್ ಬಗ್ಗೆ ಪ್ರತಿಕೂಲ ಕಾಮೆಂಟ್‌ಗಳಿಂದ ಅಸಮಾಧಾನಗೊಂಡಿರಬಹುದು ಎಂಬುದು ಒಂದು ಊಹೆಯಾದರೂ ಟೀಕೆಗಳಿಗೆ ಹೆಚ್ಚು ಸಂವೇದನಾಶೀಲರಾಗಿದ್ದರೆಂಬುಂದು ಸತ್ಯವಾದ ವಿಷಯ. ಬ್ಲೂಸ್ಟಾಕಿಂಗ್ ಎಲಿಜಬೆತ್ ಕಾರ್ಟರ್ ಬರೆದ ಪತ್ರದಲ್ಲಿ ಅವರ ಬಗ್ಗೆ ಮುಗ್ಧವಾಗಿ ಬರೆದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು, ಜೋನ್ನಾ ಬೈಲ್ಲಿಯ ಅತ್ಯಂತ ಯಶಸ್ವಿ 'ಪ್ಲೇಸ್ ಆನ್ ದಿ ಪ್ಯಾಶನ್ಸ್'ನಲ್ಲಿ ತನ್ನ ಕುರಿತಾದ ತಪ್ಪಾದ ಆರೋಪಗಳಿಗೆ ತುಂಬಾ ಅಸಮಾಧಾನಗೊಂಡಿದ್ದನ್ನು ಗಮನಿಸಿದರೆ ಈ ಹೇಳಿಕೆ ನಿಜವಿರಬಹುದು ಎನ್ನಿಸುತ್ತದೆ. ಕೆಲವು ವಿಮರ್ಶಕರು 'ಇಟಾಲಿಯನ್' ಅನ್ನು 'ದ ಮಿಸ್ಟರೀಸ್ ಆಫ್ ಉಡಾಲ್ಫೋ'ಗೆ ಹೋಲಿಸಿ ಋಉಣಾತ್ಮಕವಾಗಿ ಬರೆದಿದ್ದರೂ ಅದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಇದಲ್ಲದೆ ಇವರ ಕಾದಂಬರಿಗಳ ಅಪಾರ ಜನಪ್ರೀಯತೆಯಿಂದಾಗಿ ಹಲವಾರು ಲೇಖಕರು ಅವರನ್ನು ಅನುಕರಿಸಲು ಪ್ರಯತ್ನಿಸಿ ಕೀಳು ದರ್ಜೆಯ ಸಾಹಿತ್ಯವನ್ನು ರಚಿಸುತ್ತಿದ್ದುದೂ ಅವರ ಬೇಸರಕ್ಕೆ ಕಾರಣವಾಗಿತ್ತು. ಬಹುಮುಖ್ಯವಾಗಿ ಅವರ ಸಂಸಾರದ ಆರ್ಥಿಕ ಸ್ಥಿತಿ ಸುಧಾರಿಸಿ ಇವರ ಕಾದಂಬರಿಗಳಿಂದ ಬರುವ ಹಣದ ಮೇಲೆ ಅವಲಂಭಿತವಾಗಿರಬೇಕಾಗಿರಲಿಲ್ಲ. ಮಕ್ಕಳೂ ಇಲ್ಲದ್ದರಿಂದ ಭವಿಷ್ಯಕ್ಕಾಗಿ ಹಣ ಕೂಡಿಡುವ ಅನಿವಾರ್‍ಯತೆ ಇರಲಿಲ್ಲ. ಹೀಗಾಗಿ ತನ್ನ ಬರವಣಿಗೆಗಳನ್ನು ಪ್ರಕಾಶಕರಿಗೆ ನೀಡುವುದನ್ನು ನಿಲ್ಲಿಸಿರಬಹುದು.
ಆ ಕಾಲದ ಇತರ ಮಹಿಳಾ ಬರಹಗಾರರಿಗಿಂತ ಭಿನ್ನವಾಗಿ ರಾಡ್‌ಕ್ಲಿಫ್ ಯಶಸ್ಸು ಕಂಡರು. ತನ್ನ ಬರವಣಿಗೆ ಹಾಗು ಹೆಣ್ಣು ಎಂಬ ಕಾರಣಕ್ಕೆ ತೋರುವ ತಿರಸ್ಕಾರ ಎಲ್ಲವನ್ನೂ ಸಮನ್ವಯಗೊಳಿಸಿದ ಆನಿ ರಾಡ್‌ಕ್ಲಿಪ್‌ಗೆ ಗಂಡನ ಅಪಾರ ಬೆಂಬಲವಿತ್ತು. ೧೭೯೦ ರ ದಶಕದಲ್ಲಿ ಮಹಿಳೆಯರು ಹಿಂದಿಗಿಂತಲೂ ಸಾಹಿತಿಗಳೆಂದು ಸಮಾಜದಿಂದ ಅಂಗೀಕರಿಸಲ್ಪಟ್ಟಿದ್ದರೂ, ಅವರ ಕೃತಿಗಳನ್ನು, ವಿಶೇಷವಾಗಿ ಕಾಲ್ಪನಿಕ ಬರಹಗಳನ್ನು ಪುರುಷ ವಿಮರ್ಶಕರು ಕಾಮದ ದೃಷ್ಟಿಯಿಂದ ನೋಡುತ್ತ ಅವಹೇಳನದಿಂದ ಪರಿಗಣಿಸುವುದು ನಿಂತಿರಲಿಲ್ಲ. ಮಹಿಳೆಯರು ಬರೆದು ಹಣ ಮಾಡುವುದನ್ನು ಕೀಳು ಎಂದು ಪರಿಗಣಿಸಲ್ಪಟ್ಟಿದ್ದರಿಂದ ಆಕೆಯ ಪತಿ ತನ್ನ ಒತ್ತಾಸೆಯಿಂದಲೆ ಅವರು ಬರೆಯುತ್ತಿರುವುದು ಎಂಬ ಹೇಳಿಕೆ ನೀಡಿದ್ದರು. ಹೀಗಾಗಿ ತನ್ನನ್ನು ಲೇಖಕಿ ಎಂದು ಕರೆಯುವುದನ್ನು ಆನ್ನಿ ಒಪ್ಪುತ್ತಿರಲಿಲ್ಲ.
ವಿಶೇಷವೆಂದರೆ ಆನ್ನಿ ರಾಡ್‌ಕ್ಲಿಪ್‌ರನ್ನು ಎಲ್ಲಿಯೂ ಮಿಸೆಸ್ ರಾಡ್‌ಕ್ಲಿಪ್ ಎಂದು ಸಂಬೋಧಿಸುತ್ತಿರಲಿಲ್ಲ. ಹಾಗೆ ಸಂಬೋಧಿಸುವುದನ್ನು ಅವರು ಇಷ್ಟ ಪಡುತ್ತಿರಲಿಲ್ಲ. ಆದರೆ ಅವರ ಪತಿ ವಿಲಿಯಂರನ್ನು ಕೆಲವೆಡೆ ಮಿಸ್ಟರ್ ರಾಡ್‌ಕ್ಲಿಪ್ ಎಂದು ಉಲ್ಲೇಖಿಸಲಾಗಿದೆ. ಸ್ತ್ರೀವಾದವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಾಣದಿದ್ದರೂ ತನ್ನ ಅಸ್ಮಿತೆಯ ಕುರಿತಾದ ಸ್ಪಷ್ಟ ಚಿತ್ರಣ ಇವರಗಿದ್ದುದನ್ನು ಒಪ್ಪಿಕೊಳ್ಳಲೇ ಬೇಕು
ಮದುವೆಯ ಆರಂಭಿಕ ದಿನಗಳಲ್ಲಿ ರಾಡ್‌ಕ್ಲಿಫ್‌ನ ಗಳಿಕೆಯು ಅತ್ಯಲ್ಪವಾಗಿರಲಿಲ್ಲ, ಇದು ಕುಟುಂಬದ ಆರ್ಥಿಕತೆಗೆ ಒಳ್ಳೆಯ ಕೊಡುಗೆಯನ್ನು ನೀಡುತ್ತಿತ್ತು. 'ದಿ ಮಿಸ್ಟರೀಸ್ ಆಫ್ ಉಡಾಲ್ಫೋ'ಗೆ ೫೦೦ ಪೌಂಡ್ ಮತ್ತು 'ಇಟಾಲಿಯನ್'ಗಾಗಿ ೬೦೦ ಫೌಂಡ್ ಅನ್ನು ಪಡೆದಿದ್ದರೆಂದು ಹೇಳಲಾಗುತ್ತಿದು ಅದು ಆ ಕಾಲದ ಅತಿ ಹೆಚ್ಚಿನ ಮೊತ್ತವಾಗಿತ್ತು. (೨೦ ವರ್ಷಗಳ ನಂತರ ನಾರ್ತಂಗರ್ ಅಬ್ಬೆಗಾಗಿ ಜೇನ್ ಆಸ್ಟೆನ್ ಕೇವಲ ಹತ್ತು ಗಿನಿಗಳನ್ನು ಪಡೆದಿದ್ದರು.) ೧೭೯೭ ರ ಬೇಸಿಗೆಯಲ್ಲಿ, ರಾಡ್‌ಕ್ಲಿಫ್ ಚಿಕ್ಕಮ್ಮ ಎಲಿಜಬೆತ್ ಮರಣಹೊಂದಿದ ನಂತರ ಅವರ ಆಸ್ತಿ ಆನ್ನಿಯವರ ಪಾಲಾಯಿತು. ಒಂದು ವರ್ಷದ ನಂತರ ತಂದೆಯ ಮರಣದಿಂದಾಗಿ ಸ್ವಂತ ಊರಾದ ಲೀಸೆಸ್ಟರ್‌ನ ಹೊರಗಿರುವ ಜಮೀನು ಇವರ ಹೆಸರಿಗೆ ಬಂದಿತು. ೧೮೦೦ರಲ್ಲಿ ತಾಯಿಯ ಮರಣದ ನಂತರ ಗಣನೀಯ ಆಸ್ತಿ ಇವರಿಗೆ ದೊರಕಿತು.
ತನ್ನ ಉಳಿದ ಜೀವಿತಾವಧಿಯಲ್ಲಿ ರಾಡ್‌ಕ್ಲಿಫ್ ಕವನ ಬರೆಯುವುದನ್ನು ಮುಂದುವರೆಸಿದರು. ಐತಿಹಾಸಿಕ ಪ್ರಣಯ ಕೃತಿ 'ಗ್ಯಾಸ್ಟನ್ ಡಿ ಬ್ಲಾಂಡೆವಿಲ್ಲೆ' ಬರೆದರು, ಇದು ಅವರ ಕೆಲವು ಕವಿತೆಗಳು ಮತ್ತು ೧೮೨೬ ರಲ್ಲಿ ಅವರ ನಿಯತಕಾಲಿಕಗಳ ಬರವಣಿಗೆಗಳೊಂದಿಗೆ ಪ್ರಕಟಿಸಲ್ಪಟ್ಟಿತು
ಕಾದಂಬರಿಗಳಿಗಾಗಿ ಕಲ್ಪನೆ ಮಿತಿಮೀರಿದ ಕಾರಣದಿಂದ ದಿಗ್ಭ್ರಮೆಗೊಂಡ ಮನಸ್ಥಿತಿಯಿಂದ ಬಳಲಿದ್ದ ಕುರಿತೂ ಊಹಾಪೋಹಗಳಿವೆ. ಡರ್ಬಿಶೈರ್‌ನ ಹ್ಯಾಡನ್ ಹಾಲ್‌ನಲ್ಲಿ ತಪ್ಪು ತಿಳುವಳಿಕೆಯಿಂದ ಬಂಧಿಸಲ್ಪಟ್ಟಿದ್ದಳೆಂಬ ಕಥೆಗಳೂ ಇವೆ. ಈ ಎಲ್ಲದರ ಕಾರಣಗಳಿಂದಾಗಿ ಅವರ ಕೊನೆಯ ಜೀವನ ಸಂತೋಷದಿಂದ ಕೂಡಿರಲಿಲ್ಲ. ಹಲವಾರು ವರ್ಷಗಳವರೆಗೆ, ಆಸ್ತಮಾದಿಂದ ಹಾಗೂ ಪದೇಪದೇ ಕಾಣಿಸಿಕೊಂಡ ಎದೆಯ ಸೋಂಕಿನಿಂದ ಬಳಲುತ್ತಿದ್ದರು.
೧೮೨೨ ರ ಶರತ್ಕಾಲದಲ್ಲಿ, ರಾಡ್‌ಕ್ಲಿಫ್ ಮತ್ತು ಅವಳ ಪತಿ ಸಮುದ್ರದ ಗಾಳಿಯು ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಪರಿಹಾರ ನೀಡುತ್ತದೆ ಎಂಬ ಭರವಸೆಯಲ್ಲಿ ರಾಮ್ಸ್‌ಗೇಟ್‌ನ ರೆಸಾರ್ಟ್‌ನಲ್ಲಿ ಉಳಿದುಕೊಂಡರು.ಆದರೆ ೯ ಜನವರಿ, ೧೮೨೩ರಂದು ಅವರ ಉಸಿರಾಟದ ತೊಂದರೆ ಹೆಚ್ಚಾಯಿತು. ತಿಂಗಳ ನಂತರ ೭ ಫೆಬ್ರುವರಿ ೧೮೨೩ರಂದು ನಿದ್ರೆಯಲ್ಲಿ ಶಾಂತಿವಾಗಿ ಮರಣಹೊಂದಿದರು. ಲಂಡನ್ ಹ್ಯಾನೋವರ್ ಸ್ಕ್ವೇರ್‌ನ ಸೇಂಟ್ ಜಾರ್ಜ್ ಚರ್ಚ್‌ಗೆ ಸೇರಿದ ಬೇಸ್‌ವಾಟರ್ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.
ರಾಡ್‌ಕ್ಲಿಫ್‌ನ ಕಾದಂಬರಿಗಳು ೧೯ನೇ ಶತಮಾನದವರೆಗೂ ಹೆಚ್ಚು ಜನಪ್ರಿಯವಾಗಿದ್ದವು. ಹಲವಾರು ಕಾದಂಬರಿಗಳು ನಾಟಕಕ್ಕೆ ಅಳವಡಿಸಲ್ಪಟ್ಟವು. ಮತ್ತು ಬ್ರಿಟಿಷ್ ಲೈಬ್ರರಿ ಕ್ಯಾಟಲಾಗ್‌ನಲ್ಲಿ ಉಲ್ಲೇಖಿಸಲಾದ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್ ಮತ್ತು ಇಟಾಲಿಯನ್ ಆವೃತ್ತಿಗಳು ಯುರೋಪಿನಾದ್ಯಂತ ಈ ಪುಸ್ತಕಗಳು ಓದಲ್ಪಟ್ಟಿವೆ ಎಂಬುದಕ್ಕೆ ಸಾಕ್ಷಿಯಾಗಿವೆ. 'ದಿ ಮಿಸ್ಟರೀಸ್ ಆಫ್ ಉಡಾಲ್ಫೊ'ದಂತಹ ಅತ್ಯಂತ ಯಶಸ್ವಿ ಕಾದಂಬರಿಗಳು ಹಲವಾರು ಆವೃತ್ತಿಗಳಲ್ಲಿ ಪ್ರಕಟಗೊಂಡವು ಮತ್ತು ಆಕೆಯ ಜೀವಿತಾವಧಿಯಲ್ಲಿ ಪ್ರಕಟವಾದ ಎಲ್ಲವನ್ನೂ ಇತ್ತೀಚಿನ ವರ್ಷಗಳಲ್ಲಿ ಮರುಮುದ್ರಿಸಲಾಗಿದೆ.
ರಾಡ್‌ಕ್ಲಿಫ್ ಒಂದು ಶತಮಾನದ ಕೊನೆಯಲ್ಲಿ ಬರೆಯುತ್ತಿದ್ದರು, ಈ ಸಮಯದಲ್ಲಿ ಮಹಿಳಾ ಬರಹಗಾರರು ಹಾಗೂ ಓದುಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎಲ್ಲಾ ಮಹಿಳಾ ಬರಹಗಾರರಲ್ಲಿ, ರಾಡ್‌ಕ್ಲಿಫ್ ಬಹುಶಃ ಹೆಚ್ಚು ಜನಪ್ರಿಯರಾಗಿದ್ದರು. ಇ.ಬಿ. ಮರ್ರಿ 'ತನ್ನ ಹಿಂದಿನ ಯಾವುದೇ ಕಾದಂಬರಿಕಾರ-ಪುರುಷ ಅಥವಾ ಮಹಿಳೆ-ಇದುವರೆಗೆ ಅನುಭವಿಸದ ಜನಪ್ರಿಯತೆಯನ್ನು ಇವರು ಅನುಭವಿಸಿದ್ದಾರೆ.' ಎಂದು ಎಂದು ಸೂಚಿಸುತ್ತದೆ. ಗೋಥಿಕ್ ಸಾಹಿತ್ಯ ಪ್ರಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ ಇವರನ್ನು ನಂತರದ ಪ್ರಸಿದ್ಧ ಬರಹಗಾರರು-ವಾಲ್ಟರ್ ಸ್ಕಾಟ್, ಜೇನ್ ಆಸ್ಟೆನ್ ಮತ್ತು, ನಂತರ ಚಾರ್ಲ್ಸ್ ಡಿಕನ್ಸ್ ಮತ್ತು ಬ್ರಾಂಟೆ ಸಹೋದರಿಯರು ತಮ್ಮ ಪತ್ರಗಳು ಮತ್ತು ಕಾದಂಬರಿಗಳಲ್ಲಿ ಕಂಡುಬರುವ ಇವರ ಕೃತಿಗಳ ಕುರಿತಾದ ಅನೇಕ ಪ್ರಸ್ತಾಪಗಳಲ್ಲಿ ನೆನಪಿಸಿಕೊಂಡು ತಮ್ಮ ಋಣಭಾರವನ್ನು ಒಪ್ಪಿಸಿದ್ದಾರೆ.
lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220729_4_6
No comments:
Post a Comment