Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Friday 1 July 2022

ನಿಗೂಢ ಬರೆಹಗಾರ್ತಿ ಮೇರಿ ಡೇವಿಸ್

ನಿಗೂಢ ಬರೆಹಗಾರ್ತಿ ಮೇರಿ ಡೇವಿಸ್


     ಬಾಲ್ಯದಲ್ಲಿ ತಂದೆ ತಾಯಿ ಇಟ್ಟಿದ್ದ ಹೆಸರೂ ಸಹ ತಿಳಿದಿಲ್ಲದ ಮೇರಿ ಡೇವಿಸ್‌ನಷ್ಟು ನಿಗೂಢ ಬರಹಗಾರ್ತಿ ಆಂಗ್ಲ ಸಾಹಿತ್ಯದಲ್ಲಿ ಇನ್ನೊಬ್ಬರು ದೊರಕಲಾರರು. ಒಮ್ಮೆ ಜೀವನ ಚರಿತ್ರೆಯ ಮೇಲೆ ಸುಮ್ಮನೆ ಕಣ್ಣಾಡಿಸಿದರೂ ಸಾಕು, ರಾಶಿ ರಾಶಿ ಮಾಹಿತಿಗಳನ್ನು ಒದಗಿಸಿಬಿಡುವ ಇಂಗ್ಲೀಷ್ ಸಾಹಿತಿಗಳಲ್ಲಿ ಮೇರಿ ಡೇವಿಸ್ ವಿಶಿಷ್ಟವಾಗಿ ನಿಲ್ಲುವುದು ಮೊದಲನೆಯದಾಗಿ ಈ ಕಾರಣಕ್ಕೆ.  ಅವರ ಗಂಡ  ಪೀಟರ್ ಡೇವಿಸ್. ಆತ ಡಬ್ಲಿನ್ ಚರ್ಚ್ ಆಫ್ ಐರ್ಲೆಂಡ್‌ನ ಪಾದ್ರಿಯಾಗಿದ್ದ. ಕೆಲವೊಮ್ಮೆ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಒಮ್ಮೊಮ್ಮೆ ಶಾಲೆಯ ಶಿಕ್ಷಕನಾಗಿಯೂ ಕೆಲಸ ಮಾಡುತ್ತಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಆತ ಇಂಗ್ಲೀಷ್ ಸಾಹಿತ್ಯದ ಪ್ರಖ್ಯಾತ ಲೇಖಕ ಜೊನಾಥನ್ ಸ್ವಿಫ್ಟ್‌ರವರ ಸ್ನೇಹಿತ ಮತ್ತು ಸಂವಹನಕಾರನಾಗಿದ್ದ. ಮೇರಿಯ ಹೆಸರು ಆಂಗ್ಲ ಸಾಹಿತ್ಯದಲ್ಲಿ ದಾಖಲಾಗಲು  ಇದು ಮುಖ್ಯ ಕಾರಣ.

    ಮೇರಿ ೧೬೭೪ ರಲ್ಲಿ ಐರ್ಲೆಂಡಿನಲ್ಲಿ ಜನಿಸಿದಳೆಂಬುದು ತಿಳಿದಿದ್ದರೂ ಅವರ ಜನ್ಮಸ್ಥಳದ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಕೆಲವರು ಆಕೆ ಜನಿಸಿದ್ದು ಇಂಗ್ಲೆಂಡಿನಲ್ಲಿ ಎಂದು ಹೇಳುತ್ತಾರಾದರೂ ತನ್ನ ' ದಿ ಮೇರಿ ವಾಂಡರರ್ ಕೃತಿಯಲ್ಲಿ ತನ್ನ ಐರಿಶ್ ಜನ್ಮದ ಕುರಿತು ಕೆಲವು ಅಸ್ಪಷ್ಟ ಮಾತುಗಳನ್ನು ಹಂಚಿಕೊಂಡಿದಾರೆ. ೧೬೯೮ರಲ್ಲಿ ಅವರ ಪತಿ ತೀರಿಕೊಂಡಾಗ ಮೇರಿ ಡೆವಿಸ್ ಅಕ್ಷರಶಃ ಕುಸಿದು ಹೋಗುತ್ತಾರ. ಯಾಕೆಂದರೆ ಅದಕ್ಕೂ ಮೊದಲೇ ಇನ್ನೂ ಬಾಲ್ಯಾವಸ್ಥೆಯನ್ನೂ ದಾಟದಿದ್ದ ವರ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಅಕಾಲ ಮೃತ್ಯುವಿಗೀಡಾಗಿದ್ದರು. ಇದರ ಹೊರತಾಗಿ ಅವರ ಕುರಿತಾದ  ಯಾವ ವೈಯಕ್ತಿಕ ಮಾಹಿತಿಯೂ ಅಧಿಕೃತವಾಗಿ ಲಭ್ಯವಿಲ್ಲ. ಆದರೆ ಕುಟುಂಬದ ಬಗ್ಗೆ ಏನೇನೂ ತಿಳಿದಿಲ್ಲವಾದರೂ ಅವರ ಸ್ನೇಹ ಬಳಗ ಬಹು ದೊಡ್ಡದಾಗಿತ್ತು. ಸರ್  ಜಾನ್ ಜೆಫ್ರಿಸನ್ ಅವರ ಮಗಳಾದ ಮಾರ್ಗರೇಟ್ ವಾಕರ್, ಐರ್ಲೆಂಡಿನ ಕೋರ್ಟ ಆಫ್ ಕಾಮನ್ ಪ್ಲೀಸ್‌ನ್ ನ್ಯಾಯಾಧೀಶರು, ಹಾಗೂ ಅನೇಕ ಸಮಾಜಿಕ ಕಾರ್‍ಯಕರ್ತರು ಅವರ ಆತ್ಮೀಯರಾಗಿದ್ದರು.
        ಮೇರಿ ಡೇವಿಸ್ ಬರೆಯಲು ಪ್ರಾರಂಭಿಸಿದ್ದು ಅವರ ಪತಿ ತೀರಿಕೊಂಡ ನಂತರ. ಪತಿಯ ಮರಣದಿಂದಾಗಿ ಲಂಡನ್ ನಗರವನ್ನು ತ್ಯಜಿಸಿದ ಮೇರಿ ಡೆವಿಸ್ ೧೭೦೦ರಲ್ಲಿ ಪುನಃ ಲಂಡನ್‌ಗೆ ಹಿಂದಿರುಗಿದರು. ೧೭೦೪ರಲ್ಲಿ ತನ್ನ ಪ್ರಥಮ ಪುಸ್ತಕವಾದ 'ದಿ ಅಮೋರ್ಸ್ ಆಫ್ ಅಲ್ಸಿಪ್ಪಸ್ ಆಂಡ್ ಲೂಸಿಪ್ಪಿ'ಯನ್ನು ಪ್ರಕಟಿಸಿದರು.  ಈ ಪುಸ್ತಕವನ್ನು ಸ್ನೇಹಿತೆಯಾಗಿದ್ದ ಮಾರ್ಗರೇಟ್ ವಾಕರ್‌ರವರಿಗೆ ಅರ್ಪಿಸಿದ್ದಾರೆ. ಇದು ೧೭೨೫ರಲ್ಲಿ 'ದಿ ಲೇಡಿಸ್ ಟೇಲ್ ಎಂಬ ಹೆಸರಿನಲ್ಲಿ ಮರುಮುದ್ರಣಗೊಂಡಿತು. ಮತ್ತೊಂದು ಪುಸ್ತಕ 'ದಿ ಪ್ಯುಗಿಟಿವ್' ೧೭೦೫ರಲ್ಲಿ ಪ್ರಕಟವಾಯಿತು. ಇದನ್ನು ಜೊನಾಥನ್ ಸ್ವಿಫ್ಟ್‌ರವರ ಪ್ರೇಯಸಿ ಸ್ಟೆಲ್ಲಾರವವರಿಗೆ ಅರ್ಪಿಸಲಾಗಿದೆ. ಇದೂ ಕೂಡ ೧೭೨೫ರಲ್ಲಿ 'ದಿ ಮೇರಿ ವಾಂಡರರ್' ಎಂದು ಪುನರ್ ಮುದ್ರಣಗೊಂಡಿತು. ಕೆಲವು ಕಾಲ ಯಾರ್ಕನಲ್ಲಿ ನೆಲೆಸಿದ್ದ ಮೇರಿ  ೧೭೧೬ರಲ್ಲಿ ತಮ್ಮ ನಾಟಕಗಳ ನಿರ್ಮಾಣಕ್ಕಾಗಿ ಲಂಡನ್‌ಗೆ ಹಿಂದಿರುಗಿದರು. ಮೂರು ರಾತ್ರಿಗಳ ಕಾಲ ಭರ್ಜರಿ ಪ್ರದರ್ಶನ ಕಂಡ ಅವರ ನಾಟಕವು ಬರಹಗಾರ್ತಿಗೆ ಲಾಭವನ್ನು ತಂದುಕೊಟ್ಟಿತು. ಹೀಗಾಗಿ ಅವರು ಪಟ್ಟಣದ ಹೆಸರುವಾಸಿ ಲೇಖಕಿಯಾಗಬೇಕೆಂಬ ಬಯಕೆಯಿಂದ ಇನ್ನಷ್ಟು ದಿನಗಳ ಕಾಲ ಲಂಡನ್‌ನ್ನಿನಲ್ಲಿಯೆ ಉಳಿಯಬೇಕೆಂದುಕೊಂಡರು.  ಬಹುಶಃ ಅದೇ ಸಮಯದಲ್ಲಿ ಅವರು 'ಪ್ಯಾಮಿಲಿಯರ್ ಲೆಟರ್‍ಸ್ ಬಿಟ್ವುಕ್ಸ್ ಎ ಜಂಟಲ್‌ಮ್ಯಾನ್ ಆಂಡ ಎ ಲೇಡಿ' ಎನ್ನುವ ಸಂಕಲನವನ್ನು ಬರೆದರಾದರೂ ಅದನ್ನು ಪ್ರಕಟಿಸಲಾಗಲಿಲ್ಲ. ೧೭೨೫ರ ಸುಮಾರಿಗೆ 'ದಿ ವರ್ಕ್ಸ' ಎನ್ನುವ ಕೃತಿಯೊಟ್ಟಿಗೆ ಇದು ಪ್ರಕಟವಾಯಿತು. ಯಶಸ್ವಿ ಹಾಗೂ ಪ್ರಸಿದ್ಧಿ ಪಡೆದ ಬರಹಗಾರ್ತಿಯಾಗಬೇಕೆಂಬ ಅವರ ಆಸೆ ಈಡೇರುವ ಲಕ್ಷಣಗಳಿರಲಿಲ್ಲ. ೧೭೧೮ ಹೊತ್ತಿಗೆ ಕಡಿಮೆಯಾಗುತ್ತ ಬಂದ ಭರವಸೆಯಿಂದಾಗಿ ಭ್ರಮನಿರಸನಗೊಂಡಿದ್ದರು. 'ತನ್ನ ನಾಟಕಗಳು ಡ್ರೂರಿಲೇನ್ ಥಿಯೇಟರ್‌ನಲ್ಲಿ ಪ್ರದರ್ಶನ ಗೊಳ್ಳಬೇಕಾಗಿತ್ತು' ಎನ್ನುವ ನಿರಾಸೆಯ ಮಾತುಗಳಲ್ಲಿ ಈ ಛಾಯೆಯನ್ನು ಕಾಣಬಹುದು. ಹೀಗಾಗಿ ನಿರಾಸೆಯಿಂದ ಕೆಂಬ್ರಿಡ್ಜ್‌ಗೆ ತೆರಳಿದ ಅವರು ಅಲ್ಲಿ ಕಾಫಿ ಹೌಸ್ ಒಂದನ್ನು ಪ್ರಾರಂಭಿಸಿದರು. ಕೇಂಬ್ರಿಡ್ಜ್‌ನ ಸೇಂಟ್ ಜಾನ್ಸ್ ಕಾಲೇಜಿನ ವಿದ್ಯಾರ್ಥಿಗಳಿಂದಾಗಿ ಕಾಫಿ ಹೌಸ್ ಚೆನ್ನಾಗಿ ನಡೆಯುತ್ತಿತ್ತು. ತಮ್ಮ ಒಂದು ಪುಸ್ತಕದ ಮೊದಲ ಮಾತುಗಳಲ್ಲಿ ಈ ವಿದ್ಯಾರ್ಥಿಗಳ ಸಹಾಯಕ್ಕಾಗಿ ಕೃತಜ್ಞತೆಯನ್ನು ತಿಳಿಸಿದ್ದಾರೆ.



          ಕೇಂಬ್ರಿಡ್ಜ್‌ನಲ್ಲಿ ಹೆಚ್ಚು ಹೆಚ್ಚು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ಸಾಹಿತ್ಯಿಕ ಜೀವನದಲ್ಲಿ ಅವರಿಗೆ ಹೆಸರು ತಂದುಕೊಟ್ಟಿದ್ದು ಈ ಕಾದಂಬರಿಗಳು. 'ದಿ ರಿಫಾರ್ಮ್ಡ್ ಕಾಕ್ವೆಟ್' ಇಂತಹ ಆರಂಭಿಕವಾಗಿ ಯಶಸ್ಸನ್ನು ತಂದುಕೊಟ್ಟ ಕಾದಂಬರಿಗಳಲ್ಲಿ ಒಂದು. ಅವರ ಕಾದಂಬರಿಗಳು ಸರಳವಾದ ಶಬ್ಧಗಳಿಂದ ಕುಡಿದ್ದರೂ ಶೈಕ್ಷಣಿಕ ಮಹತ್ವವುಳ್ಳದ್ದು. ಇಂಗ್ಲೀಷ್ ಸಾಹಿತ್ಯದಲ್ಲಿ ವಿಶಿಷ್ಟ ಮಹತ್ವ ಪಡೆದ ಎಪಿಸ್ಟಾಲರಿ ಕಾದಂಬರಿಗಳ ಶೈಲಿಯಲ್ಲಿ ಬರೆದ ಇವರ ಎಲ್ಲ ಕಾದಂಬರಿಗಳು ಆ ಕಾಲದ ಜನಪ್ರಿಯ ಕಾದಂಬರಿಗಳೆನಿಸಿದವು. ಆದರೂ ಆ ಶೈಲಿ ಆಗಷ್ಟೇ ಸಾಹಿತ್ಯ ಲೋಕಕ್ಕೆ ಪರಿಚಯಿಸಲ್ಪಟ್ಟ ಶೈಲಿಯಾಗಿದ್ದರಿಂದ ಒಂದಿಷ್ಟು ಕಟು ವಿಮರ್ಶೆಗಳನ್ನೂ ಕೇಳಬೇಕಾಯಿತು. ಇವರ ನಂತರ ಸಾಮ್ಯುಯೆಲ್ ರಿಚರ್ಡಸನ್ ಈ ಎಲಿಸ್ಟಾಲರಿ ಕಾದಂಬರಿಗಳನ್ನು ಬರೆದು ಅದನ್ನು ಆಂಗ್ಲ ಸಾಹಿತ್ಯದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದ್ದನ್ನು ಕಾಣಬಹುದು.
    ಮೊನಚಾದ ಆದರೆ ಅಷ್ಟೇ ಹಠಮಾರಿತನದಿಂದ ಕೂಡಿದ ಬರವಣಿಗೆಯ ಶೈಲಿ ಇವರದ್ದು. ತಮ್ಮ ಕಾದಂಬರಿಗಳ ಪಾತ್ರಗಳನ್ನು ಅತ್ಯಂತ ತೀಕ್ಷ್ಣ ಸ್ವಭಾವದಾಗಿದ್ದರೂ ವಿಚಿತ್ರವಾದ ವಿಡಂಬನೆಯಿಂದ ಕೂಡಿರುವಂತೆ ಚಿತ್ರಿಸುತ್ತಿದ್ದರು. ಅವರ ಸ್ತ್ರೀ ಪಾತ್ರಗಳು ಯಾವುದನ್ನೂ ಸಿಗ್ಗಿಲ್ಲದೆ ಹೇಳಿಬಿಡುವ ಪಾತ್ರಗಳಾಗಿದ್ದವು.  ತಮ್ಮ ಕಾದಂಬರಿಗಳಲ್ಲಿ ಅತಿಯಾದ ಕಾಮ, ಕುಡಿತ ಹಾಗೂ ಮಾದಕದ್ರವ್ಯಗಳ ಬಳಕೆಗಳ ಕುರಿತು ಬರೆಯುತ್ತಿದ್ದುದರಿಂದ 'ಡಿಬೌಚ್ಡ್ ವುಮನೈಸರ್' ಎಂಬ ಕುಖ್ಯಾತಿಗೆ ಪಾತ್ರರಾಗಬೇಕಾಯಿತು. 'ಸಂಬಂಧಗಳ ಕುರಿತು ಸೂಕ್ಷ್ಮ ಗ್ರಹಿಕೆಗಳಿಲ್ಲದ ಬರಹಗಾರ್ತಿ' ಎಂಬ ಅವಹೇಳನಕ್ಕೂ ತುತ್ತಾಗಬೇಕಾಯಿತು. ಈ ಕಾರಣಕ್ಕೋಸ್ಕರವೇ ೧೭೩೧ರಲ್ಲಿ ದಿ ಗ್ರಬ್ ಸ್ಟೇಟ್ ಜರ್ನಲ್‌ನಲ್ಲಿ 'ಬೌಡಿ' ಎಂದು ಓದುಗರ ತೀಕ್ಷ್ಣವಾದ ಪ್ರತಿಕ್ರಿಯೆಗೆ ಒಳಗಾಗಬೇಕಾಯಿತು. ಬೌಡಿ ಎಂದರೆ ಲೈಂಗಿಕ ಸಂಬಂಧಗಳನ್ನು ಅಥವಾ ಕಾಮದ ವಿಷಯಗಳನ್ನು ಹಾಸ್ಯದ ರೂಪದಲ್ಲಿ ಅಥವಾ ಹಾಸ್ಯಾಸ್ಪದವಾಗಿ ಚಿತ್ರಿಸುವ ವ್ಯಕ್ತಿ ಎಂದರ್ಥ. ಆದರೂ ಈ ವಿಷಯವಾಗಿ ಒಂದಿಷ್ಟೂ ತಲೆಕೆಡಿಸಿಕೊಳ್ಳದ ಮೇರಿ ಡೇವಿಸ್ ಈ ದಾಳಿಗೂ ತುಂಬ ಉತ್ಸಾಹದಿಂದಲೇ ಪ್ರತಿಕ್ರಿಯಿದ್ದರು.
       ೧೭೨೫ರಲ್ಲಿ 'ದಿ ವರ್ಕ್ಸ್ ಆಪ್ ಮಿಸೆಸ್ ಡೇವಿಸ್' ಎಂಬ ಅವರ ಸಮಗ್ರ ಸಂಕಲನ ಪ್ರಕಟಗೊಂಡಿತು. ೧೭೨೭ರಲ್ಲಿ 'ದಿ ಎನ್‌ಕಂಪ್ಲಿಷ್ಡ್ ರೇಕ್' ಅಥವಾ 'ಮೊಡರ್ನ್ ಫೈನ್ ಜೆಂಟಲ್‌ಮನ್' ೧೭೩೨ರಲ್ಲಿ 'ದಿ ಕಸಿನ್ಸ್' ಪ್ರಕಟಗೊಂಡಿತು. ಇವೆಲ್ಲದರ ನಡುವೆ ೧೭೨೫ರಲ್ಲಿ 'ದಿ ಮಾಡರ್ನ್ ಪೋಯೆಟ್' ಎನ್ನುವ ಕವನ ಸಂಕಲನವೂ ಹೊರಬಂತು.
೫ ಜುಲೈ ೧೭೩೨ರಂದು ನಿಧನ ಹೊಂದುವವರೆಗೂ ಮೇರಿ ಡೇವಿಸ್ ಕ್ರಾಂಬ್ರಿಡ್ಜ್‌ನಲ್ಲಿಯೇ ನೆಲೆಸಿದ್ದರು. ಕ್ಯಾಂಬ್ರಿಡ್ಜ್‌ನ ಹೋಲಿ ಸೆಫಲ್ಟರ್ ಚರ್ಚನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
 

  ಸಿಯೋಭನ್ ಕಿಲ್‌ಫೀದರ್ ಇವರನ್ನು 'ರಾಷ್ಟ್ರೀಯ ಮತ್ತು ಲೈಂಗಿಕ ಗುರುತುಗಳನ್ನು ಅನ್ವೇಷಿಸಲು ಇಂಗ್ಲಿಷ್‌ನಲ್ಲಿ ಬರೆಯುವ ಮೊದಲ ಐರಿಶ್ ಮಹಿಳೆ' ಎಂದು ಗುರುತಿಸಿದ್ದಾರೆ. ನೇರವಾದ ಹಾಗೂ ತೀಕ್ಷ್ಣವಾದ ಬರವಣಿಗೆ ಇವರ ಶೈಲಿ. ಉದಾಹರಣೆಗೆ, ದಿ ಅಕಾಂಪ್ಲಿಶ್"ಡಿ ರೇಕ್‌ನಲ್ಲಿನ ಮುಖ್ಯ ಪಾತ್ರವಾದ ಸರ್ ಜಾನ್ ಗ್ಯಾಲಿಯಾರ್ಡ್‌ಎಂಬ ಒಬ್ಬಳು ಭ್ರಷ್ಟ ಮಹಿಳೆಯನ್ನು ಸ್ವಲ್ಪವೂ ಮೃದುವಾದ ಮಾತುಗಳಿಲ್ಲದಂತೆ ವ್ಯಂಗ್ಯವಾಗಿ ಚಿತ್ರಿಸಿದ್ದಾರೆ. ತನ್ನ ಐವತ್ತನೆಯ ವಯಸ್ಸಿನಲ್ಲಿ  ಬರೆಯುವುದನ್ನು ಮುಂದುವರಿಸಲು ಆರ್ಥಿಕ ಮತ್ತು ಮಾನಸಿಕ ಸಂಪನ್ಮೂಲಗಳ ಕೊರತೆ ಇದ್ದಾಗಲೂ ಆಕೆ ಎದೆಗುಂದಲಿಲ್ಲ. ಅಲ್ಲದೆ ಆ ಸಮಯದಲ್ಲಿ ವೃತ್ತಿಪರ  ಲೇಖಕಿಯರಿಗೆ ಒಂದು ರೀತಿಯ ಸಾಮಾಜಿಕ ವಿರೋಧಗಳೂ ಇದ್ದವು. ಅದರಲ್ಲೂ ಮಹಿಳೆಯರ ಲೈಂಗಿಕ ಜೀವನವನ್ನು ತೀಕ್ಷ್ಣ ಮಾತುಗಳಿಂದ ವಿಂಡಂಬನಾತ್ಮಕವಾಗಿ ಬರೆಯುವ ಮೇರಿ ಡೇವಿಸ್‌ಗೆ ಹೆಚ್ಚಿನ ಪ್ರತಿರೋಧಗಳು ಎದುರಾದವು. ಆದರೂ ಹಠ ಹಿಡಿದು ಬರೆದ ಮೇರಿ ಡೇವಿಸ್ ಇಂದು ಆಂಗ್ಲ ಸಾಹಿತ್ಯದಲ್ಲಿ ಒಂದು ಗಟ್ಟಿಯಾದ ಸ್ಥಾನವನ್ನು ದೊರಕಿಸಿಕೊಂಡಿದ್ದಾರೆ.  
                         ಶ್ರೀದೇವಿ ಕೆರೆಮನೆ


No comments:

Post a Comment