Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Wednesday, 29 June 2022

ಹೊಸತನದ ಪರಿಭಾಷೆ ನೀಡುವ ಕವನಗಳು

 ಹೊಸತನದ ಪರಿಭಾಷೆ ನೀಡುವ ಕವನಗಳು 

   ಕವಿತೆ  ಹೇಗೆ ಹುಟ್ಟುತ್ತದೆ? ಕವಿತೆ ಸೃಷ್ಟಿಯಾಗಲು ಇರಬೇಕಾದ ಪೂರಕ ವಾತಾವರಣ ಯಾವುದು? ಕವಿತೆ ಬರೆಯಬೇಕೆಂದುಕೊಂಡರೆ ಲಿಪಿಕಾರನ ಮನಸ್ಸಿನಲ್ಲಿ ಮೂಡಬೇಕಾದ ಭಾವಗಳು ಯಾವವು? 
   ಇಂತಹುದ್ದೊಂದು ಪ್ರಶ್ನೆಗೆ ಚಿಕ್ಕದೊಂದು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ ಡಾ. ಪ್ರಭಾಕರ ನಾಯಕ. ತಮ್ಮ 'ಜೀವಮಂಡಲ' ಎನ್ನುವ ಕವನ ಸಂಕಲನದಲ್ಲಿ. 

ಕವಿತೆ ಎಂದಿಗು 
ಪುಕ್ಕಟೆ ಹುಟ್ಟುವುದಿಲ್ಲ 
ಅದು ತೀಟೆಯ ಕುರುಹಾಗಿ 
ಅಲೆಗಳ ಸೃಷ್ಟಿಸುವುದಿಲ್ಲ 

ಎನ್ನುತ್ತ ಚೊಚ್ಚಲ ಕವನ ಸಂಕಲನದ ಮೊದಲ ಕವನವೇ ಗಮನ ಸೆಳೆಯುತ್ತದೆ. 
 ಮೊದಲ ಕವಿತೆಯೇ ಕವಿತೆ ಹೇಗೆ ಹುಟ್ಟುತ್ತದೆ ಎಂಬುದನ್ನು ಅವರು ಹೇಳುವ ರೀತಿಗೆ ಕವಿತೆಯ ಹಲವಾರು ಆಯಾಮಗಳು ಕಣ್ಣೆದುರಿಗೆ ಹಾದುಹೋಗುತ್ತವೆ. 
ಕೊಳಚೆ ಹೂಗಳ ಮಾಂಸ ಪಕಳೆಯ
ಹಕ್ಕುದಾರಿಕೆಯನು ದಿಕ್ಕರಿಸಿ
ಕವಿತೆಯು ಸಿಡಿಲಾಗಿ ಹುಟ್ಟುತ್ತದೆ  
ಎಂದು ಹೇಳುತ್ತ ಕವಿತೆ ಸಿಡಿಲಾಗಬೇಕಾದ ಅವಶ್ಯಕತೆಯನ್ನು ತಿಳಿಸುತ್ತಾರೆ. 

ಕವನ ಸಂಕಲನದ ಪ್ರೌಢತೆ ಅದನ್ನು ಆಯ್ದುಕೊಂಡು ವಸ್ತುಗಳು ನಿರ್ಧರಿಸುತ್ತವೆ. ಅಂಕೋಲಾದ ಜಿ ಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿರುವ ಡಾ. ಪ್ರಭಾಕರ ನಾಯಕ ತುಂಬ ಶಿಸ್ತಿನ ಮನುಷ್ಯ ಎಂದು ಹೆಸರು ಮಾಡಿದ್ದವರು. ವಿದ್ಯಾರ್ಥಿಗಳು ಅವರನ್ನು ಕಂಡರೆ ಅಲ್ಲಲ್ಲೇ ಸರಿದು ಹೋಗುತ್ತಿದ್ದ ಮಾತುಗಳಿವೆ. ಅವರ ಗೌರವಪೂರ್ಣ ವ್ಯಕ್ತಿತ್ವ ಹಾಗೂ ಘನತೆ ಇದಕ್ಕೆ ಕಾರಣ. ಹೀಗಾಗಿಯೇ ಕವಿತೆಗಳೂ ತೀರಾ ಪ್ರೌಢತೆಯಿಂದ ಕೂಡಿವೆ. ಎಲ್ಲಿಯೂ ಎಳಸುತನದ ಮಾತಾಗಲಿ ಭಾವವಾಗಲಿ ಇಲ್ಲ. ಚೊಚ್ಚಲ ಸಂಕಲನದಲ್ಲಿ ಬಹುವಾಗಿ ಕಂಡುಬರುವ ಪ್ರೀತಿ ಪ್ರೇಮ ಜೊತೆಗೆ ವಿರಹದ ಕವನಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ವಿಷಯದ ಆಯ್ಕೆಯಲ್ಲಿಯೇ ಡಾ. ನಾಯಕ ಪ್ರಬುದ್ಧತೆ ತೋರಿದ್ದಾರೆ. 

ಪಟ್ಟ ಭದ್ರರ ಅನಿಯಂತ್ರಿತ 
ಒಡೆತನ ದಬ್ಬಾಳಿಕೆಗೆ ಜರ್ಜರಿತವಾಗಿ 
ಅವರ ಪಾದದಡಿ 
ಮೂಕವಾಗಿ ಕೊಳೆತು ಹೋದವರ 
ದೇವಭೂಮಿಯ ಕಡ್ಡಾಯದ 
ತೆರೆದ ಸ್ತನಗಳ ಮೆರವಣಿಗೆಯಲಿ 
ಒಳಗೊಳಗೆ ಸುಟ್ಟು ಶೂನ್ಯವಾದವರ 
ಚರಿತೆಯೊಳು ತಂದುಬಿಡಿ (ಚರಿತೆಗೊಂದು ಹೊಸ ಜೀವ ಕೊಡಿ)
ಈ ಕವನ ಅಂತಹುದ್ದೊಂದು ಬಿಗಿತನಕ್ಕೆ ಉದಾಹರಣೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಾವು ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದೇವೆ. ದೇವರನಾಡು ಎಂದು ಕರೆಯಿಸಿಕೊಳ್ಳುವ ಕೇರಳದ ತಿರವಾಂಕೂರ ಪ್ರಾಂತ್ಯದಲ್ಲಿ ಮೊಲೆಕರಂಬು ಎಂಬ ಊರಿದೆ. ಅಲ್ಲಿ ಮೇಲ್ವರ್ಗದ ನಂಬೂದರಿಗಳು ಮುಲಕರಂ ಎನ್ನುವ ಸ್ತನ ತೆರಿಗೆಯನ್ನು ವಿಧಿಸುತ್ತಿದ್ದರು.   ಕೆಳವರ್ಗದ ಮಹಿಳೆಯರು ತಮ್ಮ ಸ್ತನಗಳನ್ನು ಮುಚ್ಚಿಕೊಳ್ಳಲು ಮೇಲ್ವರ್ಗದ ಅಧಿಕಾರಿಗಳಿಗೆ ತೆರಿಗೆ ನೀಡಬೇಕಿತ್ತು. ಸ್ತನಗಳ ಗಾತ್ರ ನೋಡಿ ತೆರಿಗೆ ವಿಧಿಸುವ ಪರಿಪಾಟವೂ ಇತ್ತು. ಹೀಗಾಗಿ ಹೆತ್ತ ತಾಯಿ ತನ್ನ ಹದಿಹರೆಯದ ಆಗತಾನೆ ಮೊಗ್ಗೊಡೆಯುವ ಮಗಳ ಸ್ತನದ ಗಾತ್ರ ಕುಗ್ಗಿಸಲೆಂದು ಅವೈಜ್ಞಾನಿಕವಾಗಿ ಪ್ರಯತ್ನಪಡುತ್ತಿದ್ದರಂತೆ. ಈ ಕಾರಣಕ್ಕಾಗಿ ಅದೆಷ್ಟೋ ಕಂದಮ್ಮಗಳ ಪ್ರಾಣಕ್ಕೆ ಹೆತ್ತ ತಾಯಿಯರೇ ಎರವಾದದ್ದೂ ಇದೆ. ಅಂತಹ ಒಂದು ಊರಲ್ಲಿ ಸ್ತನ ತೆರಿಗೆಯನ್ನು ವಿರೋಧಿಸಿ ಹೊಸದಾಗಿ ಮದುವೆಯಾಗಿ ಬಂದ  ಕನಸುಗಣ್ಣಿನ ಕೆಳವರ್ಗದ ಹೆಣ್ಣಾದ ನಾಂಗೇಲಿ ಎನ್ನುವವಳು ತನ್ನ ಸ್ತನಗಳನ್ನು ಕತ್ತರಿಸಿ ತೆರಿಗೆ ನೀಡಿದ ಆಘಾತಕಾರಿ ಚರಿತ್ರೆಯಿದೆ. ಈ ಸಾಲುಗಳು ಅಂತ ಇತಿಹಾಸವನ್ನು ಕಣ್ಣೆದುರಿಗೆ ಹಾಯುವಂತೆ ಮಾಡುತ್ತವೆ. 

 

ಇನ್ನ ಸ್ವಪ್ರಚಾರ ಬಹಳ ಜನ ರೂಢಿ. ಏನೂ ಮಾಡದ ಕತ್ತೆಗೂ ವಯಸ್ಸಾಗುತ್ತದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ  ಪತ್ರಿಕೆಗಳಲ್ಲಿ ಫೋಟೋ ಹಾಕಿಸಿ ಸನ್ಮಾನ ಮಾಡಿಸಿಕೊಳ್ಳಯವುದು ಅದೆಷ್ಟು ಸರಿ? ಕೆಲವರಂತೂ ತಾವೇ ಹಣ ಕೊಟ್ಟು  ಬೇರೆಯವರ ಹೆಸರಿನಲ್ಲಿ ಪ್ರಕಟಣೆ ನೀಡುವುದನ್ನು ಕಾಣಬಹುದು.  ಅಂಥವರ ಮರ್ಮಕ್ಕೆ ತಾಗುವಂತೆ ಈ ಕವನವಿದೆ. 

ನಮ್ಮ ಶ್ರಾದ್ಧವನ್ನು 
ನಾವೇ ಮಾಡಿಕೊಳ್ಳುವುದೆಂದರೆ
ಐವತ್ತು ಅರವತ್ತು ಎಪ್ಪತ್ತು 
ಹೀಗೆ ವರ್ಷದ ಘಟ್ಟ ತಲುಪಿದಾಗೆಲ್ಲ 
ನಾವೇ ಚಿತ್ರಿಸಿಕೊಟ್ಟ ನಮ್ಮ 
ಕ್ಷೀರಾಭಿಷೇಕದ ಹೆಸರಿನಲ್ಲಿ ಪ್ರಕಟಿಸಿ 
ಬಹುಪರಾಕ ಹಾಕಿಸಿಕೊಳ್ಳುವುದು  (ಸ್ವಯಂ ಶ್ರಾದ್ಧ)
ಇದರ ಮುಂದಿನ ಸಾಲುಗಳೂ ವಿಡಂಬನಾತ್ಮಕವಾಗಿದ್ದು ನಮ್ಮನ್ನು ಒರೆಗೆ ಹಚ್ಚುತ್ತವೆ. 

 ಬರೆ ಎಂಬ ಕಥನ ಕವನ ಅತಿ ಹೆಚ್ಚು ಗಮನಸೆಳೆಯುವ ಕವನ. ಕುಡುಕ ಕರಿಗೌಡನ ಮನೆಗೆ ಬೆಂಕಿಬಿದ್ದಿದೆ. ಒಣಮೀನನ್ನಾದರೂ ಸುಟ್ಟು ಗಂಜಿ ಉಂಡರಾಯಿತೆಂದುಕೊಂಡ ತಾಯಿಯ ನಿರ್ಲಕ್ಷ ಅವಘಡಕ್ಕೆ ಕಾರಣ. ಎಲ್ಲವೂ ಸುಟ್ಟು ಬೂದಿಯಾಗಿದೆ. ಎಂಟನೆ ತರಗತಿ ಓದುತ್ತಿದ್ದ ಮಗನ ಪುಸ್ತಕಗಳೂ ಸಹ ಕರಕಲಾಗಿವೆ. ಸರಕಾರ ಒಂದಿಷ್ಟು ಪರಿಹಾರ ನೀಡಿದೆ. ಆದರೆ ಪ್ರತಿದಿನ ಹತಾನು ದುಡಿದಿದ್ದನ್ನು ಹೆಂಡದಂಗಡಿಗೆ ಹಾಕಿ ಹೆಂಡತಿಯ ದುಡಿಮೆಯಲ್ಲಿ ಬದುಕುವ ಕರಿಗೌಡ ಪರಿಹಾರದ ಹಣವನ್ನೂ ಎತ್ತಿಕೊಂಡು ಹೋಗಿ ಪಾಗಾರಕ್ಕೆ ಡಿಕ್ಕಿ ಹೊಡೆಯುವಷ್ಟು ಕುಡಿದಿದ್ದಾನೆ. ತೆಂಗಿನ ಗರಿ ಹೊದಿಸಿದ ಮಾಡಲ್ಲಿ ಈಗ ಮತ್ತದೆ ಬಡತನದ ಬದುಕು. ಎಲ್ಲಕ್ಕಿಂತ ಹೆಚ್ಚಾಗಿ ಶಾಲೆಗೆ ಹೋಗುವ ಹದಿನೈದರ ಬಾಲಕ ಉಪ್ಪಿನಾಗರದಲ್ಲಿ ಉರಿಬಿಸಿಲಿನಲ್ಲಿ ಕೆಲಸಕ್ಕೆ ಹೋಗುವಂತಾದ ಚಿತ್ರಣ ಎದೆ ಕಲಕುತ್ತದೆ. ಕಥನಕಾವ್ಯದ ಮತ್ತಿಷ್ಟು ಅಂಶಗಳನ್ನು ಒಳಗೊಂಡಿದ್ದರೆ ಈ ಕವನ ಅತ್ಯುತ್ತಮ ಎನ್ನಿಸುವ ಕವನಗಳ ಸಾಲಿನಲ್ಲಿ ಸೇರಿಬಿಡುತ್ತಿತ್ತು. ಅದೇ ಸಾಲಿಗೆ ಬುಲ್ ಬುಲ್ ತರಂಗ ಎಂಬ ಕವನವೂ ಸೇರಿಕೊಳ್ಳುತ್ತದೆ. ಸ್ಕೂಟರ್ ನಲ್ಲಿ ಗೂಡು ಕಟ್ಟಿದ ಬುಲ್ ಬುಲ್ ಹಕ್ಕಿಯ ಸಂಸಾರದ ಚಿತ್ರಣ ಕೊಡುವ ಈ ಕವನದ ಆರಂಭ ಅದ್ಭುತವಾಗಿದೆ. ರೂಪಕಗಳ ಅಳವಡಿಕೆ ಇನ್ನಷ್ಟು ಹೆಚ್ಚಿದ್ದರೆ ಇದೂ ಕೂಡ ಒಂದು ಒಳ್ಳೆಯ ಕಾವ್ಯವಾಗುತ್ತಿತ್ತು.

ಇಡಿ ಸಂಕಲನದಲ್ಲಿ ಅಲ್ಲಲ್ಲಿ ಮಿಂಚು ಹೊಡೆದಂತೆ ನಮ್ಮನ್ನು ಥಟ್ಟನೆ ಆವರಿಸಿಬಿಡುವ ಸಾಲು ಗುಚ್ಛಗಳನ್ನು ಕಾಣಬಹುದು. ಉದಾಹರಣೆಗೆ, 

ನಾಟಿ ಮಾಡಿದ ಸಸಿಗಳ ಪಾಡು 
ಜಲದೊಳಗಿನ ದುರ್ಯೋಧನ  (ನಿರ್ಯಾಣ)

ಈ ಸಾಲುಗಳನ್ನೇ ಗಮನಿಸಿ. ಪ್ರವಾಹದ ನೀರಲ್ಲಿ ಮುಳುಗಿದ ಸಸಿಗಳನ್ನು ಕವಿ ಅಂತ್ಯಕಾಲದಲ್ಲಿ ಜಲಸ್ಥಂಭನ ವಿದ್ಯೆಯಿಂದ ಸರೋವರದಲ್ಲಿ ಕುಳಿತ ದುರ್ಯೋಧನನಿಗೆ ಹೋಲಿಸುತ್ತಾರೆ. ಸರೋವರದಲ್ಲಿ ಮುಳುಗಿದ ದುರ್ಯೋದಸನ ಹೇಗೆ ಮೇಲೆ ಬಂದು ಪ್ರಾಣತ್ಯಾಗ ಮಾಡಿದನೋ ಈ ನಾಟಿ ಮಾಡಿದ ಸಸಿಗಳೂ ಕೂಡ ಪ್ರವಾಹದ ನೀರು ಇಳಿದು ಮೇಲೆ ಕಾಣಿಸಿದಾಗ ಕೊಳೆತು ಸತ್ತುಹೋಗುತ್ತವೆ. ಇಂತಹ ಸಾಲುಗಳು ಸಂಕಲನದ ತುಂಬ ಯಥೇಶ್ಚವಾಗಿ ಸಿಗುತ್ತವೆ. ಹಾಗೂ ಕವನದ ಓದನ್ನು ಇನ್ನಷ್ಟು ಮುದಗೊಳಿಸುತ್ತವೆ.

ಹೇಗೋ ಕಸರತ್ತು ಮಾಡಿ 
ಪರದೆಯ ಒಳಹೊಕ್ಕ ಸೊಳ್ಳೆ 
ಹೊರಬರಲಾರದೆ 
ಒದ್ದಾಡಿದರು ಒಳಗಿದ್ದ 
ಅಮಾಯಕನ ರಕ್ತ 
ಹೀರುವುದನ್ನು ಮಾತ್ರ 
ಮರೆಯಲಿಲ್ಲ

ಡಾ. ನಾಯಕ ಬಳಸುವ ರೂಪಕಗಳನ್ನು ಗಮನಿಸಬೇಕು. ಇಲ್ಲಿ ಸೊಳ್ಳೆಯನ್ನು ರೂಪಕವಾಗಿಟ್ಟುಕೊಂಡು ಸಮಾಜದ ಎಲ್ಲ ಅನಿಷ್ಟತೆಯನ್ನು ತೆರೆದಿಡುತ್ತಾರೆ. ರಕ್ತ ಹೀರುವ ಈ ವ್ಯವಸ್ಥೆಯನ್ನು ಮೊನಚಾಗಿ ತಿವಿಯುತ್ತಾರೆ. 

ಅತ್ಯುತ್ತಮ ಕವಿತೆ ಹೇಳಿರಬೇಕು ಎಂದು ಯಾರಾದರೂ ಕೇಳಿದರೆ ಏನು ಉತ್ತರ ಕೊಡಬಹುದು? ಒಳ್ಳೆಯ ಕವಿತೆ ಎನ್ನಲು ಮಾನದಂಡ ಯಾವುದು? ಗಣಗಳು, ಮಾತ್ರೆಗಳು ಎಲ್ಲವನ್ನೂ ಲೆಕ್ಕಾಚಾರ ಹಾಕಿ ನಿಯಮಬದ್ಧವಾಗಿ ಬರೆದರೆ ಅದು ಒಳ್ಳೆಯ ಕವಿತೆಯೆ? ಅಥವಾ ವಿಷಯವನ್ನು ಹೇರಳವಾಗಿ ನೀಡಿ ಗದ್ಯವನ್ನು ತುಂಡರಿಸಿದಂತೆ ಬರೆದರೆ ಅದು ಉತ್ತಮ ಕವಿತೆ ಆಗಬಹುದೇ? ಇದಕ್ಕೆ ನಿರ್ದಿಷ್ಟ ಉತ್ತರವನ್ನು ಯಾರಾದರೂ ಹೇಳಲು ಸಾಧ್ಯವೆ ಎನ್ನುವ ನನ್ನ ಪ್ರಾರಂಭದ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಈ ಸಂಕಲನವಿದೆ. ಹೊಸತನದ ರೂಪಕಗಳು ಹಾಗೂ ಕವನದ  ಪರಿಭಾಷೆಗಳು ನಮ್ಮನ್ನು ನಿಂತು ಮತ್ತೊಮ್ಮೆ ಓದುವಂತೆ ಒತ್ತಾಯಿಸುತ್ತವೆ. 

ಕವಿತೆ ಸುಮ್ಮನೆ 
ಹುಟ್ಟುವುದಿಲ್ಲ
ಅದೊಂದು ಅಮೂರ್ತ ಪ್ರಭೆ 
ಕಾವ್ಯ ಪರಾಗದ ಪಲ್ಲಕ್ಕಿಯಲಿ 
ಪವಡಿಸುವ ಭಾಗ್ಯ 
ಎಲ್ಲರಿಗೂ ಸಿಕ್ಕುವುದಿಲ್ಲ. 
ಡಾ. ಪ್ರಭಾಕರ ನಾಯಕರಿಗೆ ಈ ಭಾಗ್ಯ ಸಿಕ್ಕಿದೆ. ಕಾವ್ಯಕಟ್ಟುವ ಕುಸುರಿಯಲ್ಲಿ ಅವರು ಇನ್ನಷ್ಟು ತೊಡಗಿಸಿಕೊಳ್ಳಲಿ. 

ಶ್ರೀದೇವಿ ಕೆರೆಮನೆ

No comments:

Post a Comment