Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Friday, 10 June 2022

ಕವಿತೆಯ ಮೂಲಕ ಬಾಲಕಾರ್ಮಿಕ ನಿಷೇಧದ ಕಾನೂನಿಗೆ ಸಹಕರಿಸಿದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್




 ಕವಿತೆಯ ಮೂಲಕ ಬಾಲಕಾರ್ಮಿಕ ನಿಷೇಧದ ಕಾನೂನಿಗೆ ಸಹಕರಿಸಿದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್

 

        ವಿಕ್ಟೋರಿಯನ್ ಯುಗದ ಪ್ರಸಿದ್ಧ ಕವಿಯತ್ರಿಯಾದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ತನ್ನ ಹನ್ನೊಂದನೆ ವಯಸ್ಸಿನಲ್ಲಿಯೇ ಕವನ ಬರೆಯಲು ಪ್ರಾರಂಭಿಸಿ ಬ್ರಿಟನ್ ಹಾಗೂ ಅಮೇರಿಕಾಗಳಲ್ಲಿ ಪ್ರಸಿದ್ಧಿ ಹೊಂದಿದ್ದರು. ಎಡ್ವರ್ಡ್ ಬ್ಯಾರೆಟ್ ಮೌಲ್ಟನ್ ಹಾಗೂ ಮೇರಿ ಗ್ರಹಾಂ ಕ್ಲರ್ಕ್‌ನ ಹನ್ನೆರಡು ಜನ ಮಕ್ಕಳಲ್ಲಿ ಹಿರಿಯವಳಾಗಿ ೧೮೦೬ ಮಾರ್ಚ ೬ರಂದು ಇಂಗ್ಲೆಂಡಿನ ಕೌಂಟಿ ಡರ್ಹಾಮ್‌ನ ಕೆಲ್ಲೋ ಗ್ರಾಮದ ಕಾಕ್ಸ್‌ಹೋ ಹಾಲ್‌ನಲ್ಲಿ ಜನಿಸಿದರು. ಹನ್ನೆರಡೂ ಮಕ್ಕಳಿಗೆ ಒಂದೊಂದು ಅಡ್ಡಹೆಸರಿನಿಂದ ತಂದೆ ತಾಯಿ ಕರೆಯುತ್ತಿದ್ದರು. ಎಲಿಜಬೆತ್ ತಂದೆ ತಾಯಿಯರ ಪಾಲಿಗೆ ಮುದ್ದಿನ 'ಬಾ' ಆಗಿದ್ದರು. ಬಾಲ್ಯದಿಂದಲೇ ವಿಶಿಷ್ಟ ಮಗುವಾಗಿದ್ದ ಎಲಿಜಬೆತ್ ನಾಲ್ಕನೆ ವಯಸ್ಸಿಗೇ ಕವನಗಳನ್ನು ಬರೆಯಲು ಪ್ರಾರಂಭಿಸಿದರು. ಆರನೆ ವಯಸ್ಸಿನಲ್ಲಿ ದೊಡ್ಡದೊಡ್ಡ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಎಂಟನೆ ವಯಸ್ಸಿನಲ್ಲಿಯೇ ಅಲೆಕ್ಸಾಂಡರ್ ಪೋಪ್ ಇಂಗ್ಲೀಷ್‌ಗೆ ಭಾಷಾಂತರಿಸಿದ ಹೊಮೆರಿಕ್ ಪೋಯೆಮ್‌ಗಳನ್ನು ಇಷ್ಟಪಟ್ಟು ಓದುತ್ತಿದ್ದರು. ಹತ್ತನೆ ವಯಸ್ಸಿನಲ್ಲಿ ಗ್ರೀಕ್ ಭಾಷೆಯನ್ನು ಕಲಿತರು. ಹನ್ನೊಂದನೆ ವಯಸ್ಸಿಗೆ ತನ್ನನ್ನು ತುಂಬ ಪ್ರಭಾವಿಸಿದ ಹೋಮೆರಿಕ್ ಕವಿತೆಗಳ ರೀತಿಯಲ್ಲಿ ಎಪಿಕ್‌ಗಳನ್ನು ಬರೆಯಲಾರಂಭಿಸಿದರು. ಹದಿನೈದನೆ ವಯಸ್ಸಿನಿಂದ ಜೀವನಪರ್ಯಂತ ತಲೆನೋವು ಹಾಗೂ ಬೆನ್ನು ಮೂಳೆಯ ನೋವನ್ನು ಅನುಭವಿಸಿದ ಎಲಿಜಬೆತ್‌ಗೆ ಸದಾ ಆರೋಗ್ಯ ಕೈ ಕೊಡುತ್ತಲೇ ಇತ್ತು. ಹೀಗಾಗಿ ಸದಾ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎಲಿಜಬೆತ್ ನೋವು ನಿವಾರಕ ಔಷಧವನ್ನು ಅತಿಯಾಗಿ ಸೇವಿಸಿದ್ದರಿಂದಾಗಿ ಅದರ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಯಿತು. ನಂತರದ ದಿನಗಳಲ್ಲಿ ಶ್ವಾಸಕೋಶದ ತೊಂದರೆಗೆ ಒಳಗಾದಳು. ಬಹುಶಃ ಅದು ಕ್ಷಯರೋಗವಿದ್ದರೂ ಇರಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರೂ ನಿಖರವಾಗಿ ಹೇಳಿರಲಿಲ್ಲ.

          ಅನಾರೋಗ್ಯದ ಕಾರಣದಿಂದಾಗಿ ಎಲಿಜಬೆತ್ ಮನೆಯಲ್ಲಿಯೇ ಶಿಕ್ಷಣವನ್ನು ಪಡೆಯಬೇಕಾಯಿತು. ಮನೆಯ ಪಾಠಶಾಲೆಯಲ್ಲಿಯೇ ಹಲವಾರು ಭಾಷೆಗಳನ್ನು ಅಭ್ಯಸಿಸಿದರು. ಹನ್ನೊಂದನೆ ವಯಸ್ಸಿನಲ್ಲಿ ಹೊಮೆರಿಕ್ ಎಪಿಕ್ ಶೈಲಿಯಲ್ಲಿ 'ದಿ ಬ್ಯಾಟಲ್ ಆಫ್ ಮ್ಯಾರಾಥಾನ್- ಎ ಪೋಯೆಮ್' ಕೃತಿಯನ್ನು ಬರೆದಳಾದರೂ ಅದು ಪ್ರಕಟವಾಗಿದ್ದು ೧೮೨೦ರಲ್ಲಿ. ಅವಳ ತಾಯಿಎಲಿಜಬೆತ್ ಬಿ ಬ್ಯಾರೆಟ್ ಎಂಬ ಹೆಸರಿನಿಂದ ಪ್ರಕಟಿಸಿದರು. ತನ್ನ ಮಗಳು ಕವನ ಬರೆಯುವುದನ್ನು ತುಂಬ ಹೆಮ್ಮೆಯಿಂದ ಹೇಲಿಕೊಳ್ಳುತ್ತಿದ್ದ ತಂದೆ ಅವರನ್ನು 'ಪೋಯೆಟ್ ಲಾರೆಟ್ ಆಫ್ ಹೋಪ್ ಎಂಡ್' ಎಂದೇ ಕರೆಯುತ್ತಿದ್ದರು. 

          ೧೬೫೫ರಿಂದಲೂ ಜಮೈಕಾದಲ್ಲಿ ಆಫ್ರಿಕನ್ ಗುಲಾಮರನ್ನು ಹೊಂದಿದ್ದ ಭೂಮಾಲಿಕರಾಗಿದ್ದ ಬ್ಯಾರೆಟ್ ಕುಟುಂಬ ಬಹುದೊಡ್ಡ ಆಸ್ತಿಯನ್ನು ಹೊಂದಿತ್ತು. ಎಲಿಜಬೆತ್ ತಂದೆ ಎಡ್ವರ್ಡ್ ಬ್ಯಾರೆಟ್ ಹತ್ತು ಸಾವಿರ ಎಕರೆಗಳಷ್ಟು ಭೂಮಿಯನ್ನು ಹೊಂದಿದ್ದ. ಎಲಿಜಬೆತ್ ತಾಯಿಯ ಅಜ್ಜ ಕೂಡ ಸಕ್ಕರೆ ಕಂಪನಿ, ಗಿರಣಿ ಹಾಗೂ ಮುಖ್ಯವಾಗಿ ಜಮೈಕಾ ಹಾಗೂ ನ್ಯೂಕ್ಯಾಸಲ್ ನಡುವೆ ಗಾಜಿನ ಸಾಮಾನುಗಳ ಮಾರಾಟಕ್ಕಾಗಿ ಹಡಗುಗಳನ್ನು ಹೊಂದಿದ ಶ್ರೀಮಂತನಾಗಿದ್ದ. ತಾಯಿ ಮೇರಿ ಗ್ರಹಂ ಕ್ಲರ್ಕ್ ಕೂಡ ವೆಸ್ಟ್ ಇಂಡಿಸ್‌ನಲ್ಲಿ ಹಲವಾರು ತೋಟಗಳನ್ನು ಹೊಂದಿದ್ದರು. ಆದರೆ ಎಲಿಜಬೆತ್ ತಂದೆ ಎಡ್ವರ್ಡ್ ತಮ್ಮ ಮಕ್ಕಳನ್ನು ಇಂಗ್ಲೆಂಡಿನಲ್ಲಿ ಬೆಳೆಸಲು ಆಶಿಸಿದ್ದರಿಂದ ಅವರೆಲ್ಲರೂ ಅಲ್ಲಿಗೆ ಸ್ಥಳಾಂತರಗೊಂಡರು. ಅತ್ಯಂತ ಶ್ರೀಮಂತ ಮನೆತನದಲ್ಲಿ ಜನಿಸಿದ್ದರೂ ಎಲಿಜಬೆತ್ ತನ್ನ ಕುಟುಂಬದ ಸದಸ್ಯರ ಹಾಗೂ ಸಹೋದರ ಸಹೋದರಿಯರ ದರ್ಪ ಅಹಂಕಾರಗಳಿಂದ ಹೊರತಾಗಿ ಯಾವತ್ತೂ ಪುಸ್ತಕದಲ್ಲಿ ಮುಳುಗಿರುತ್ತಿದ್ದರು. ಕುಟುಂಬವು ಪಾಲಿಸುತ್ತಿದ್ದ ಗುಲಾಮಿ ಪದ್ದತಿ ಹಾಗೂ ಮಕ್ಕಳನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವ ರೀತಿ ಅವರಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಕುಟುಂಬವು ದೌಲತ್ತಿನಲ್ಲಿ ಮೆರೆಯುತ್ತಿದ್ದಾಗ ಇವರ ಮಹತ್ವಾಕಾಂಕ್ಷೆಯ ಹಾಗೂ ೧೯೦೦ರಲ್ಲಿ ಇಪ್ಪತ್ತೂ ಹೆಚ್ಚು ಸಲ ಪುನರ್‌ಮುದ್ರಣವನ್ನು ಕಂಡ ಆಕೆಯ ಕೃತಿ ಅರೋರಾ ಲೀ ೧೮೫೬ರಲ್ಲಿ ಪ್ರಕಟಗೊಂಡಿದ್ದು ಆಕೆಯ ಸೂಕ್ಷ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ.

   ಸ್ವತಃ ಭೂಮಾಲಿಕ ಕುಟುಂಬದ ಎಲಿಜಬೆತ್  ಗುಲಾಮಿ ಪದ್ದತಿಯನ್ನು ತೀವ್ರವಾಗಿ ವಿರೋಧಿಸುತ್ತ ಗುಲಾಮಿಗಿರಿಯ ವಿರುದ್ಧ ವ್ಯಾಪಕ ಪ್ರಚಾರ ಮಾಡಿದರು. ಬಾಲಕಾರ್ಮಿಕ ಪದ್ದತಿಯನ್ನು ತೀಕ್ಷ್ಣವಾಗಿ ವಿರೋಧಿಸುತ್ತ ಬಾಲಕಾರ್ಮಿಕ ಶಾಸನದ ಸುಧಾರಣೆಗಾಗಿ ಹಲವಾರು ಕೆಲಸಗಳನ್ನು ಹಮ್ಮಿಕೊಂಡರು. ೧೮೪೨ರಲ್ಲಿ ಪ್ರಕಟವಾದ 'ದಿ ಕ್ರೈಂ ಆಫ್ ದಿ ಚಿಲ್ಡ್ರನ್' ಎಂಬ ಕವಿತೆಯಲ್ಲಿ ಬಾಲಕಾರ್ಮಿಕರ ಸ್ಥಿತಿಯನ್ನು ಮನಮುಟ್ಟುವಂತೆ ವಿವರಿಸಿ ಅದನ್ನು ವಿರೋಧಿಸಿದರು. ಈ ಕವಿತೆಯು ಲಾರ್ಡ್ ಶಾಫ್ಟ್ಸ್‌ಬರಿಯ ಹತ್ತು ಗಂಟೆಗಳ ಕಾಲ ಚರ್ಚಿತಗೊಂಡ ಮಸೂದೆಗೆ ಬೆಂಬಲ ಹೆಚ್ಚಾಗುವಂತೆ ಮಾಡಿತಲ್ಲದೆ ಬಾಲ ಕಾರ್ಮಿಕ ನೀತಿಗೆ ಸುಧಾರಣೆಯನ್ನು ತರಲು ಸಹಕಾರಿಯಾಯಿತು.  'ದಿ ಕ್ರೈ ಆಫ್ ದಿ ಚಿಲ್ಡ್ರನ್' ಎಂಬ ಚಲನಚಿತ್ರ ಕೂಡ ಇವರ ಕೃತಿ ಆಧರಿಸಿ ಹೊರಬಂದಿದೆ.

       ೧೮೩೮ರಲ್ಲಿ ತನ್ನ ಮೊದಲ ಪ್ರೌಢಕವನಗಳ ಸಂಕಲನವನ್ನು ಪ್ರಕಟಿಸಿದ ಎಲಿಜಬೆತ್‌ರನ್ನು ೧೮೪೦ ರಲ್ಲಿ ಜಾನ್ ಕೆನ್ಯಾನ್ ಎಂಬ ಅವರ ಸಂಬಂಧಿಯೋರ್ವ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ. ೧೮೪೧ರಿಂದ ೧೮೪೪ರವರೆಗೆ ಅವರ ಸಾಹಿತ್ಯದ ಉತ್ಕೃಷ್ಟ ಕಾಲ. ಈ ಸಮಯದಲ್ಲಿ ಅವರು ತಮ್ಮ ಜೀವಿತಾವಧಿಯ ಅತ್ಯುತ್ತಮ ಕವಿತೆಗಳನ್ನು, ಗಧ್ಯಗಳನ್ನು ಹಾಗೂ ಅನುವಾದಗಳನ್ನು ಬರೆದರು. ೧೮೪೪ರಲ್ಲಿ ಅವರಿಗೆ ಹೆಸರು ತಂದುಕೊಟ್ಟ ಕವನಗಳ ಸಂಪುಟ ಪ್ರಕಟಗೊಂಡಿತು. ಈ ಸಂಕಲನವು ರಾಬರ್ಟ ಬ್ರೌನಿಂಗ್‌ರನ್ನು ಬಹುವಾಗಿ ಆಕರ್ಷಿಸಿತು. 'ಹೃದಯಾಂತರಾಳದಿಂದ ನಾನು ನಿಮ್ಮನ್ನು ಹಾಗೂ ನಿಮ್ಮ ಕವನಗಳನ್ನು ಪ್ರೀತಿಸುತ್ತೇನೆ' ಎಂಬ ಬ್ರೌನಿಂಗ್‌ರ ಪ್ರೇಮ ನಿವೇದನೆಯನ್ನು ಎಲಿಜಬೆತ್ ಒಪ್ಪಿಕೊಂಡರು.

          ಶ್ರೀಮಂತ ತಂದೆಗೆ ತಾನು ರಾಬರ್ಟ್ ಬ್ರೌನಿಂಗ್‌ರನ್ನು ಪ್ರೀತಿಸಿದ್ದು ಹಾಗೂ ಮದುವೆಯಾಗಲು ಬಯಸಿದ್ದು ಇಷ್ಟವಾಗುವುದಿಲ್ಲವೆಂಬುದು ಎಲಿಜಬೆತ್‌ರಿಗೆ ತಿಳಿದಿತ್ತು. ಹೀಗಾಗಿ ರಹಸ್ಯವಾಗಿ ರಾಬರ್ಟ್ ಬ್ರೌನಿಂಗ್‌ರನ್ನು ವಿವಾಹವಾದರು. ವಿವಾಹದ ನಂತರವೂ ಎಲಿಜಬೆತ್‌ರ ತಂದೆ ತಮ್ಮ ಮಗಳ ಪ್ರೀತಿಯನ್ನು ಹಾಗೂ ಮದುವೆಯನ್ನು ಒಪ್ಪಿಕೊಳ್ಳಲಿಲ್ಲ. ೧೮೪೬ರಲ್ಲಿ ಎಲಿಜಬೆತ್ ಹಾಗೂ ರಾಬರ್ಟ್ ಇಟಲಿಗೆ ತೆರಳಿ ಕೊನೆಯವರೆಗೂ ಅಲ್ಲಿಯೇ ಉಳಿದುಬಿಟ್ಟರು. ಇವರ ದಾಂಪತ್ಯದ ಕುರುಹಾಗಿ 'ಪೆನ್' ಎಂದು ಮುದ್ದಿನಿಂದ ಕರೆಯಿಸಿಕೊಳ್ಳುವ  ರಾಬರ್ಟ ವೈಡ್‌ಮನ್ ಬ್ಯಾರೆಟ್ ಬ್ರೌನಿಂಗ್ ಎಂಬ ಅದ್ಭುತ ಚಿತ್ರಕಾರನಾದ ಮಗನಿದ್ದನು. ಆಮ್‌ಸ್ಟ್ರಾಂಗ್ ಬ್ರೌನಿಂಗ್ ಲೈಬ್ರರಿಯಲ್ಲಿ ಇಂದಿಗೂ ಅವರ ಚಿತ್ರಗಳ ಅತಿದೊಡ್ಡ ಸಂಗ್ರಹವಿದೆ.

      ಮದುವೆಯ ನಂತರ ಎಲಿಜಬೆತ್ ಹಾಗೂ ರಾಬರ್ಟ್‌ರ ಬರವಣಿಗೆಗಳಲ್ಲಿ ಅಗಾಧ ಬದಲಾವಣೆಗಳನ್ನು ಕಾಣಬಹುದೆಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಪರಸ್ಪರ ಪೂರಕವಾಗಿ ತಮ್ಮ ಜೀವಮಾನದ ಶ್ರೇಷ್ಠ ಕೃತಿಗಳನ್ನು ಇವರಿಬ್ಬರೂ ರಚಿಸಿದರು. ಪತಿಯ ಒತ್ತಾಸೆಯ ಮೇರೆಗೆ ತಾನು ತುಂಬ ಇಷ್ಟಪಡುವ ಸಾನೆಟ್‌ಗಳನ್ನೊಳಗೊಂಡ ಎರಡನೆ ಸಂಕಲನವನ್ನು ಎಲಿಜಬೆತ್ ಪ್ರಕಟಿಸಿದರು.

೧೮೬೧ ಜೂನ್ ೨೯ರಂದು ಪ್ಲಾರೆನ್ಸಸನಲ್ಲಿ ಎಲಿಜಬೆತ್

       ವಿಕ್ಟೋರಿಯನ್ ಯುಗದಲ್ಲಿ ವರ್ಡ್‌ವರ್ತ್‌ನ ನಿಧನದ ನಂತರ ಟೆನ್ನಿಸನ್‌ಗೆ ಪ್ರತಿಸ್ಪರ್ಧಿಯಂತೆ ಬರವಣಿಗೆಯಲ್ಲಿ ತೊಡಗಿಸಿಕೊಂಡ ಎಲಿಜಬೆತ್ ಅಮೇರಿಕಾದ ಖ್ಯಾತ ಕವಿಗಳಾದ ಎಡ್ಗರ್ ಅಲೆನ್ ಪೋ ಹಾಗೂ ಎಮಿಲಿ ಡಿಕನ್‌ಸನ್ ಮುಂತಾದ ಹಲವಾರು ಯುವ ಬರಹಗಾರರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. 'ನಾನು ನಿನ್ನನ್ನು ಹೇಗೆ ಪ್ರೀತಿಸುತ್ತೇನೆ' ಎಂಬ ಕವಿತೆಯ ಮೂಲಕ ಇಂದಿಗೂ ಸಾಹಿತ್ಯ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಜಾಗವನ್ನು ಪಡೆದಿದ್ದಾರೆ 


ನಾನು ನಿನ್ನನ್ನು ಹೇಗೆ ಪ್ರೀತಿಸುತ್ತೇನೆ?

ನನಗೆ ಆ ದಾರಿಗಳನ್ನು ಎಣಿಸಲು ಬಿಡು

ನಾನು ನಿನ್ನನ್ನು ಅತೀವ ಆಳದಿಂದ

ಅಷ್ಟೇ ವಿಸ್ತಾರವಾಗಿ ಮಹೋನ್ನತವಾಗಿ ಪ್ರೀತಿಸುತ್ತೇನೆ

ನನ್ನ ಅಸ್ತಿತ್ವದ ಕೊನೆಯವರೆಗೆ,

ಆದರ್ಶದ ಅನುಗ್ರಹ ಇರುವವರೆಗೆ

ನನ್ನ ಭಾವನೆಗಳು ನಿನ್ನನ್ನು ತಲುಪುವಂತೆ

ಆತ್ಮದ ಸಾಂಗತ್ಯವಿರುವಂತೆ

ಸೂರ್‍ಯನ ಪ್ರಖರತೆ ಹಾಗೂ ಮೋಂಬತ್ತಿಯ ಪ್ರಶಾಂತತೆಯಂತೆ

ಪ್ರತಿದಿನವೂ ಗಾಢವಾಗಿ ನಿನ್ನನ್ನು ಪ್ರೀತಿಸುತ್ತೇನೆ

 

ಲೋಕಧ್ವನಿ-ಕೆರೆದಂಡೆ-೬  ಶ್ರೀದೇವಿ ಕೆರೆಮನೆ 

No comments:

Post a Comment