೧೭೨೯ರ ಜನವರಿ ೨೩ರಂದು ಇಂಗ್ಲೆಂಡಿನ ಇಫ್ಸ್ವಿಚ್ ಎಂಬಲ್ಲಿ ರೆವರೆಂಡ್ ವಿಲಿಯಂ ರೀವ್ ಹಾಗೂ ಹೆನ್ನಾ ಸ್ಮಿತೀಸ್‌ರವರ ಎಂಟು ಜನ ಮಕ್ಕಳಲ್ಲಿ ಹಿರಿಯ ಮಗಳಾಗಿ ಜನಿಸಿದ ಕ್ಲಾರಾ ರೀವ್‌ರವರ ತಂದೆ ಸೆಂಟ್ ನಿಕೋಲಸ್-೧ ರವರ ಆಪ್ತಬರಹಗಾರರ ವಲಯದಲ್ಲಿದ್ದರು. ಇವರ ತಾಯಿ ರಾಜ ಜಾರ್ಜ-೧ ರವರ ಆಸ್ಥಾನದಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದ ವಿಲಿಯಂ ಸ್ಮಿತಿಸ್‌ರವರ ಮಗಳು. ಹೀಗಾಗಿ ನೀಲಿ ರಕ್ತದ ನಂಟು ತೀರಾ ಹತ್ತಿರದಲ್ಲಿತ್ತು. ತಾನು ಏನೆಲ್ಲವನ್ನು ಕಲಿತಿದ್ದೇನೋ ಅದೆಲ್ಲವೂ ನನ್ನ ತಂದೆಯ ಕೊಡುಗೆ ಎಂದು ಸದಾ ತನ್ನ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದ ಕ್ಲಾರಾ ಚಿಕ್ಕ ವಯಸ್ಸಿನಲ್ಲಿಯೇ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಗಳು, ರಾಪಿನ್‌ರವರು ಬರೆದ ಇಂಗ್ಲೆಂಡಿನ ಇತಿಹಾಸ ,ಜಾನ್ ಟ್ರೆಂಚಾರ್ಡ ಹಾಗೂ ಥಾಮಸ್ ಗೊರ್ಡಾನ ಬರೆದಂತಹ ಕ್ಯಾಟೋಸ್ ಲೆಟರ್ಸ್, ಗ್ರೀಕ್ ಹಾಗೂ ರೋಮನ್‌ನ ಇತಿಹಾಸ, ಪ್ಲೂಟಾರ್ಕ್‌ನ ತತ್ವಶಾಸ್ತ್ರ ಮುಂತಾದವುಗಳ ಬಗ್ಗೆ ಓದಿ ತಿಳಿದುಕೊಂಡರು. ಇವು ಅವರ ಬರಹಕ್ಕೆ ಅತ್ಯುತ್ತಮ ತಳಹದಿಯನ್ನು ಒದಗಿಸಿತು. ಅಪ್ಪ ತನ್ನ ಎಲ್ಲ ಶಕ್ತಿಗಳ ಹಿಂದಿನ ಪ್ರೇರಣೆ ಎಂದು ಅವರು ನಂಬಿದ್ದರು. ತನ್ನ ನಿಲುವುಗಳನ್ನು ರೂಪಿಸಲು ಚಿಕ್ಕಂದಿನಲ್ಲಿ ತನ್ನ ತಂದೆ ತೆಗೆದುಕೊಂಡ ಮಾರ್ಗದ ಬಗ್ಗೆ ಆಕೆಗೆ ಒಂದಿಷ್ಟು ಹೆಮ್ಮೆ ಒಂದಿಷ್ಟು ಅಸಮಧಾನಗಳಿದ್ದವು. ತನ್ನ ವಯಸ್ಸಿನ ಮಕ್ಕಳು ಸಾಹಿತ್ಯದ ಬಗ್ಗೆ ತಿಳಿಯುವ ಮುನ್ನವೇ ತಾನು ಇವುಗಳನ್ನೆಲ್ಲ ಓದಿ ಅರಗಿಸಿಕೊಳ್ಳುವಂತೆ ಮಾಡಿದ್ದಕ್ಕಾಗಿ ಅಪ್ಪನಿಗೆ ಮನದಲ್ಲೇ ವಂದಿಸುತ್ತಿದ್ದರು.
೧೭೫೫ರಲ್ಲಿ ತಂದೆಯ ಸಾವಿನ ನಂತರ ಕ್ಲಾರಾ ಕೆಲಕಾಲ ತನ್ನ ಅಮ್ಮನೊಂದಿಗೆ ವಾಸಿಸುತ್ತಿದ್ದರು. ನಂತರ ಇಪ್ಸ್‌ವಿಚ್‌ನ ತಮ್ಮ ಸಂತದ ಮನೆಗೆ ಹೋಗಿ ಅಲ್ಲಿಯೇ ವಾಸಿಸಲಾರಂಭಿಸಿದರು. ಅವರ ನಂತರದ ಸಾಹಿತ್ಯ ಕೃಷಿ ಇಲ್ಲಿಂದಲೇ ಮುಂದುವರೆಯಿತು.
೧೭೬೯ರಲ್ಲಿ ಒರಿಜಿನಲ್ ಪೋಯೆಮ್ಸ್ ಎಂಬ ಪ್ರಥಮ ಸಂಕಲನವನ್ನು ಕ್ಲಾರಾ ಪ್ರಕಟಿಸಿದರಾದರೂ ಅದು ಅವರಿಗೆ ನಿರೀಕ್ಷಿಸಿದಷ್ಟು ಸಮಾಧಾನ ತಂದುಕೊಡಲಿಲ್ಲ. ೧೭೭೭ರಲ್ಲಿ ದಿ ಓಲ್ಡ್ ಇಂಗ್ಲೀಷ್ ಬ್ಯಾರನ್' ಎನ್ನುವ ಗೋಥಿಕ್ ಶೈಲಿಯ ಕಾದಂಬರಿಯನ್ನು ಬರೆದು ಪ್ರಕಟಿಸಿದರು. ಇದು ಕ್ಲಾರಾ ರೀವ್‌ರವರ ಅತ್ಯುತ್ತಮ ಕೃತಿ ಎಂದು ಪರಿಗಣಿಸಲ್ಪಟ್ಟಿದೆ. ೧೭೮೦ರಲ್ಲಿ ದಿ ಟೂ ಮಾಂಟರ್ಸ್, ೧೭೮೫ರಲ್ಲಿ ದಿ ಪ್ರೊಗ್ರೆಸ್ ಆಫ್ ರೋಮಾನ್ಸ್ ೧೭೯೧ರಲ್ಲಿ ದಿ ಸ್ಕೂಲ್ ಫಾರ್ ವೀಡೋಸ್, ೧೭೯೨ರಲ್ಲಿ ಪ್ಲಾನ್ಸ್ ಫಾರ್ ಎಜುಕೇಶನ್, ೧೭೯೩ರಲ್ಲಿ ಮೆಮೊರಿಸ್ ಆಫ್ ಸರ್ ರೋಜರ್ ಡಿ ಕ್ಲಾರೆಂಡಾನ್ ೧೭೯೯ರಲ್ಲಿ ಡೆಸ್ಟಿನೇಶನ್ ಎಂಬ ಕೃತಿಗಳು ಪ್ರಕಟಗೊಂಡು ಸಾಹಿತ್ಯಾಸಕ್ತರ ಗಮನವನ್ನು ಸೆಳೆಯಿತು. ಇವೆಲ್ಲದರ ನಡುವೆ ೧೭೭೨ರಲ್ಲಿ ಲ್ಯಾಟಿನ್ ಭಾಷೆಯಿಂದ ದಿ ಫಿನೋಲೆಕ್ಸ್ ಎಂಬ ಕಾದಂಬರಿಯನ್ನು ಇಂಗ್ಲೀಷ್‌ಗೆ ಭಾಷಾಂತರ ಕೂಡ ಮಾಡಿದ್ದರು. ಆದರೆ ಓದುಗರು ಈ ಪುಸ್ತಕಕ್ಕೆ ಅಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಸಾಹಿತಿಯಾಗಿ ತಾನು ಸೋಲೊಪ್ಪಿಕೊಳ್ಳಬೇಕಾಗಿದೆ ಎಂದು ಕ್ಲಾರ ಬೇಸರಗೊಂಡಿದ್ದರು. 'ಒಂದು ಅತ್ಯುತ್ತಮ ಕ್ರತಿಯನ್ನು ನಾನು ಓದುಗರಿಗೆ ನೀಡಿದೆ. ಆದರೆ ಅದು ಸರಿಯಾಗಿ ಸ್ವೀಕರಿಸಲ್ಪಡಲಿಲ್ಲ.' ಎಂದು ಆ ಪುಸ್ತಕದ ಬಗ್ಗೆ ಸದಾ ಹೇಳುತ್ತಿದ್ದರು. ಆದರೆ ದಿ ಓಲ್ಡ್ ಇಂಗ್ಲಿಷ್ ಬ್ಯಾರನ್ ನೀಡಿದ ಅಭೂತಪೂರ್ವ ಯಶಸ್ಸು ಉಳಿದವುಗಳನ್ನು ಹಿಂದೆ ಸರಿಸಿತು.
ದಿ ಓಲ್ಡ್ ಇಂಗ್ಲೀಷ್ ಬ್ಯಾರನ್ ಕಾದಂಬರಿಯನ್ನು ಮೊದಲು 'ದಿ ಚಾಂಪಿಯನ್ ಆಫ್ ವರ್ಚ್ಯು- ಎ ಗೋಥಿಕ್ ಸ್ಟೋರಿ' ಎಂದು ಹೆಸರಿಸಲಾಗಿತ್ತು. ಆದರೆ ಎರಡನೆ ಮುದ್ರಣದ ಸಮಯದಲ್ಲಿ ಹಾಗೂ ಅದರ ನಂತರದ ಮುದ್ರಣದಲ್ಲಿ ಈ ಕಾದಂಬರಿಯನ್ನು ದಿ ಓಲ್ಡ್ ಇಂಗ್ಲೀಷ್ ಬ್ಯಾರನ್ ಎಂದು ಹೊಸದಾಗಿ ಹೆಸರಿಡಲಾಯಿತು. ಅತ್ಯಂತ ಆಪ್ತತೆಯನ್ನು ನೀಡುವ ಹೆಸರದು. ಈ ಕಾದಂಬರಿ ನಂತರ ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳಿಗೆ ಭಾಷಾಂತರಗೊಂಡಿತು. ಇವರ ಪ್ರೊಗ್ರೆಸ್ ಆಫ್ ರೋಮಾನ್ಸ್ ಕೃತಿ ಕೂಡ ಆ ದಿನಗಳಲ್ಲಿ ಬಹುವಾಗಿ ಚರ್ಚಿತವಾಗಿದ್ದಂತಹ ಪುಸ್ತಕ. ಪ್ರಣಯದ ಇತಿಹಾಸವನ್ನು ಹುಡುಕುತ್ತ ಸಾಗುವ ವಸ್ತುವಿಷಯವನ್ನು ಹೊಂದಿದ ಈ ಗ್ರಂಥವು ವ್ಯಕ್ತಿಗಳ ಸಂಭಾಷಣೆಯ ಮುಖಾಂತರ ಮಹಿಳಾ ಬರಹಗಾರರ ಅಭಿವ್ಯಕ್ತಿಯನ್ನು ವಿಶ್ಲೇಷಿಸಲ್ಪಡುವಂತೆ ಚಿತ್ರಿಸಲಾಗಿದೆ.
ತನ್ನ ಮೂವತ್ಮೂರು ವರ್ಷಗಳ ಬರಹದ ಬದುಕಿನಲ್ಲಿ ಕ್ಲಾರಾ ರೀವ್ ಇಪ್ಪತ್ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದರು. ಆರಂಭದ ಕೆಲವು ಕೃತಿಗಳನ್ನು ಹೊರತುಪಡಿಸಿ ಅವರ ಬಹುತೇಕ ಕೃತಿಗಳು ಸಮಕಾಲೀನರಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದವು.
೧೮೦೭ರಲ್ಲಿ ಇಫ್ಸ್‌ವಿಚ್‌ನ ಮನೆಯಲ್ಲಿ ನಿಧನ ಹೊಂದಿದ ಕ್ಲಾರಾ ರೀವ್‌ರವರನ್ನು ಅವರ ಇಚ್ಛೆಯಂತೆ ಸೆಂಟ್ ಸ್ಟೀಫನ್ ಚರ್ಚಯಾರ್ಡ್‌ನಲ್ಲಿ ಆವರ ಸ್ನೇಹಿತ ರೆವರೆಂಡ್ ಡರ್ಬಿಯ ಪಕ್ಕದಲ್ಲಿ ಮಣ್ಣು ಮಾಡಲಾಯಿತು.
ಇಂದಿಗೂ ಕ್ಲಾರಾ ರೀವ್ ತಮ್ಮ ದೀ ಓಲ್ಡ್ ಇಂಗ್ಲೀಷ್ ಬ್ಯಾರನ್ ಮುಖಾಂತರ ಜೀವಂತವಾಗಿದ್ದಾರೆ. ಒಂದು ಕಾಲದಲ್ಲಿ ಈ ಕಾದಂಬರಿಯನ್ನು ಗೋಥಿಕ್ ಸಾಹಿತ್ಯದ ಮೊದಲ ಮೆಟ್ಟಿಲು ಎಂದು ಗುರುತಿಸಲಾಗುತ್ತಿದೆ. ಹಲವಾರು ಯುವ ಹಾಗೂ ಕ್ಲಾರಾ ನಂತರದ ಸಾಹಿತಿಗಳು ಇವರ ಈ ಪುಸ್ತಕದಿಂದ ಪ್ರಭಾವಿತರಾಗಿದ್ದನ್ನು ಕಾಣಬಹುದು. ಈ ಪುಸ್ತಕವು ವಿದ್ವಾಂಸರ, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ನಡುವೆ ಹೇಗೆ ಬಹು ಚರ್ಚಿತ ವಿಷಯವಾಗಿ ಅಭಿಪ್ರಾಯಗಳನ್ನು ಹೊರಗೆಡವುವಂತೆ ಮಾಡುತ್ತಿತ್ತೋ ಅಷ್ಟೇ ಜನಸಾಮಾನ್ಯರ ನಡುವಣ ಚರ್ಚೆಗೂ ಕಾರಣವಾಗಿತ್ತು. ೧೮ನೇ ಶತಮಾನದ ಉತ್ತರಾರ್ಧದಲ್ಲಿ ಬರೆಯಲಾರಂಭಿಸಿದ ಬಹುತೇಕ ಮಹಿಳಾ ಸಾಹಿತಿಗಳ ಮೇಲೆ ಗಣನೀಯ ಪ್ರಭಾವ ಬೀರಿದ ಈ ಪುಸ್ತಕದ ಕುರಿತು ಹಲವಾರು ವಿಮರ್ಶೆಗಳು ಪ್ರಕಟಗೊಂಡಿವೆ. ಹೆನ್ರಿಟ್ಟಾ ಮೋಸ್ಸೆ ಹಾಗೂ ಇತರ ಸಮಕಾಲೀನ ಲೇಖಕಿಯರು ಈ ಪುಸ್ತಕ ತಮ್ಮ ಮೇಲೆ ಬೀರಿದ ಪ್ರಭಾವಗಳ ಕುರಿತು ಹೇಳಿಕೊಂಡಿದ್ದಾರೆ. ಗೋಥಿಕ್ ಶೈಲಿಯನ್ನು ಕ್ಲಾರಾ ರೀವ್‌ರವರಂತೆ ನಿರ್ದಿಷ್ಟ ಚೌಕಟ್ಟಿಗೆ ಒಳಪಡಿಸಿ ಬರೆಯುವುದನ್ನು ಇವರೆಲ್ಲ ರೂಢಿಸಿಕೊಂಡರು. ಹೀಗಾಗಿ ಗೋಥಿಕ್ ಶೈಲಿಯ ಪ್ರವರ್ತಕಿ ಎಂದೇ ಇವರನ್ನು ಈಗಲೂ ಗುರುತಿಸಲಾಗುತ್ತಿದೆ.
ಗೋಥಿಕ್ ಸಾಹಿತ್ಯದ ಪ್ರವರ್ತಕಿಯಾಗಿ ಹಲವಾರು ಯುವ ಲೇಖಕರು ತನ್ನನ್ನು ಅನುಕರಿಸುವಂತೆ ಮಾಡಿದ್ದ ಕ್ಲಾರಾ ರೀವ್ ಪರಿಚಯ ಇಂದಿನ (03/06/2022) ಲೋಕಧ್ವನಿಯಲ್ಲಿ.
lokadhwani - http://lokadhwani.com/ArticlePage/APpage.php?edn=Main&articleid=LOKWNI_MAI_20220603_4_6
No comments:
Post a Comment