Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Friday 17 June 2022

ಇಪ್ಪತ್ತನೆ ಶತಮಾನದ ಮೊದಲ ಸ್ತ್ರೀವಾದಿ ಲೇಖಕಿ- ಕೇಟ್ ಚಾಪಿನ್


ಇಪ್ಪತ್ತನೆ ಶತಮಾನದ ಮೊದಲ ಸ್ತ್ರೀವಾದಿ  ಲೇಖಕಿ- ಕೇಟ್  ಚಾಪಿನ್


ಅಮೇರಿಕಾನ್ ಆಂಗ್ಲ ಸಾಹಿತ್ಯದ ಅತ್ಯುತ್ತಮ ಸಣ್ಣ ಕಥೆಗಳ ಬರೆಹಗಾರ್ತಿ ಹಾಗೂ ಕಾದಂಬರಿಕಾರ್ತಿ ಎಂದು ಹೆಸರು ಮಾಡಿದ ಕೇಟ್ ಚಾಪಿನ್ ಇಪ್ಪತ್ತನೇ ಶತಮಾನದ ಕಾಥೋಲಿಕ್‌ನ ಸ್ರ್ತೀವಾದಿ ಲೇಖಕಿಯರಲ್ಲಿ ಅಗ್ರಮಾನ್ಯೆ ಎಂದು ವಿಮರ್ಶಕರಿಂದ ಗುರುತಿಸಿಕೊಂಡವಳು. 20ನೇ ಶತಮಾನದ  ಅಮೇರಿಕಾದ ಇಂಗ್ಲೀಷ್ ಸಾಹಿತ್ಯದಲ್ಲಿ ಇವಳ ಹೆಸರು ಮುಂಚೂಣಿಯಲ್ಲಿದೆ.
   ಅಮೇರಿಕಾದ ಮಿಸೋರಿಯ ಸೇಂಟ್ ಲೂಯಿಸ್‌ನಲ್ಲಿ 1851 ಫೆಬ್ರುವರಿ 8ರಂದು ಜನಿಸಿದ ಕೇಟ್ ಚಾಪಿನ್ ರವರ ಕೇಟ್ ತಂದೆ ಐರ್ಲೆಂಡ್‌ನ ಗಾಲ್ವೇಯಿಂದ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದ ಯಶಸ್ವಿ ಉದ್ಯಮಿಯಾಗಿದ್ದ ಥಾಮಸ್ ಓ'ಫ್ಲಾಹೆರ್ಟಿ ತಾಯಿ ಫ್ರೆಂಚ್ ಕೆನಡಾ ಮೂಲದ ಲೂಸಿಯಾನಾ ಕ್ರಿಯೋಲ್ ಅಥೆನೈಸ್ ಚಾರ್ಲೆವಿಲ್ಲೆ ಅವರ ಮಗಳಾದ ಎಲಿಜಾ ಫಾರಿಸ್. ಇವರು ಥಾಮಸ್ ರವರ ಎರಡನೇ ಪತ್ನಿ.  ಕೇಟ್ ತನ್ನ ತಂದೆ ಹಾಗೂ ತಾಯಿ ಐವರು ಮಕ್ಕಳಲ್ಲಿ ಮೂರನೆಯವಳಾಗಿದ್ದರೂ ಅವಳ ಸಹೋದರ ಸಹೋದರಿಯರು ಬಹಳ ಬೇಗನೆ ತೀರಿಕೊಂಡಿದ್ದರು. ಅಪ್ಪಟ ರೋಮನ್ ಕ್ಯಾಥೋಲಿಕ್ ಸಂಪ್ರದಾಯದಲ್ಲಿ ಬೆಳೆದ ಕೇಟ್ ಗೆ ಕಾಲ್ಪನಿಕ ಕಥೆಗಳೆಂದರೆ ಎಲ್ಲಿಲ್ಲದ ಆಸಕ್ತಿ. ಅದರಲ್ಲೂ ಧಾರ್ಮಿಕ ಕಥೆಗಳೆಂದರೆ ಹೆಚ್ಚು ಖುಷಿ.ಜೀಸಸ್ ನ  ಪವಾಡಗಳನ್ನು ಅತಿಯಾಗಿ ನಂಬುತ್ತಿದ್ದ ಕೇಟ್ ಆ ಕಾರಣಗಳಿಂದಲೇ ಈ ತರಹದ ರೋಚಕ ಕಥೆಗಳನ್ನು ಇಷ್ಟಪಡುತ್ತಿರಬಹುದು. ಇದರ ಜೊತೆಗೆ ಯಕ್ಷಿಣಿ ಕಾದಂಬರಿಗಳ ಆರಾಧಕಿಯಾಗಿದ್ದಳು.  ಐದನೇ ವಯಸ್ಸಿಗೇ ಆಕೆಯನ್ನು ಸೇಂಟ್ ಲೂಯಿಸ್ ನಲ್ಲಿರುವ ಸೇಕ್ರೆಡ್ ಹಾರ್ಟ್ ಅಕಾಡೆಮಿಗೆ ಕಳಿಸಲಾಯಿತು. ಸನ್ಯಾಸಿನಿಯಾಗುವ ಮೊದಲ ಹಂತದ ಶಿಕ್ಷಣವನ್ನು ಅಲ್ಲಿ ಪಡೆಯುತ್ತಿರುವಾಗಲೇ  ಅವಳ ತಂದೆ ಥಾಮಸ್ ಆಕಸ್ಮಿಕವಾಗಿ ನಿಧನ ಹೊಂದಿದರು. ಈ ಕಾರಣದಿಂದ ಅವಳನ್ನು ಮನೆಗೆ ವಾಪಸ್ ಕರೆಸಲಾಯಿತು . ಅಲ್ಲಿ ಆಕೆ ತನ್ನ ತಾಯಿ ಅಜ್ಜಿ ಹಾಗೂ ಮುತ್ತಜ್ಜಿ ಹೀಗೆ ಮೂರು ತಲೆಮಾರುಗಳ ಮರುಮದುವೆಯಾಗಲೊಪ್ಪದೆ ಆಧ್ಯಾತ್ಮಿಕ‌ ಜೀವನ ನಡೆಸುತ್ತಿರುವ ವಿಧವೆಯರೊಡನೆ ವಾಸಿಸತೊಡಗಿದಳು.  ಇದು ಕೇಟ್ ಇನ್ನಷ್ಟು ಈ ಪ್ರಪಂಚದ ಕುರಿತು ಯೋಚಿಸಲು  ಪ್ರೇರೇಪಿಸಿತು. ಇದೇ ಸಮಯದಲ್ಲಿ ಅವಳ ಮುತ್ತಜ್ಜಿ ವಿಕ್ಟೋರಿಯಾ ಚಾರ್ಲೆವಿಲ್ಲೆ ಸಮಾಜವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿದರು. ಗಾಸಿಪ್ ಗಳನ್ನು ಹೇಗೆ ಎದುರಿಸಬೇಕು ಹಾಗೂ ಈ ಸಮಾಜದ ಕಟ್ಟುಪಾಡುಗಳನ್ನು ಪಾಲಿಸುವುದನ್ನು ಹೇಳಿಕೊಟ್ಟಳು. ಇದರ ಜೊತೆಗೇ ಫ್ರೆಂಚ್ ಭಾಷೆ, ಸಂಗೀತ, ಇತಿಹಾಸ ಹೀಗೆ ಹಲವಾರು ವಿಷಯಗಳನ್ನು ಕಲಿತಳು. 
  ಎರಡು ವರ್ಷಗಳ ನಂತರ ಅಕಾಡೆಮಿಗೆ ಹಿಂದುರಿಗಿದ ಕೇಟ್ ಗೆ ಪದ್ಯ ಮತ್ತು ಗದ್ಯ ಎರಡರಲ್ಲೂ ಪ್ರಬುದ್ಧವಾಗಿ ಬರೆಯುತ್ತಿದ್ದ  ಪ್ರತಿಭಾನ್ವಿತ ಬರಹಗಾರ, ಓ'ಮಿಯಾರಾ ಗುರುವಾಗಿ ದೊರೆತರು. ತನ್ನ ವಿದ್ಯಾರ್ಥಿಗೆ ನಿಯಮಿತವಾಗಿ ಬರೆಯಲು, ತನ್ನ ಬರಹಗಳನ್ನು  ವಿಮರ್ಶಿಸಲು ಮತ್ತು ತನ್ನನ್ನು ತಾನು ಧೈರ್ಯದಿಂದ ನಡೆಸಿಕೊಳ್ಳಲು ಮಾರ್ಗದರ್ಶನ ನೀಡಿದರು.

ಜೂನ್ 8, 1870 ರಂದು ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ಆಸ್ಕರ್ ಚಾಪಿನ್ ಅವರನ್ನು ವಿವಾಹವಾದರು. ಆಸ್ಕರ್ ತನ್ನ ಸ್ವಂತ ವ್ಯವಹಾರ, ಉದ್ದಿಮೆ ನಡೆಸುತ್ತಿದ್ದರು. ಇವರಿಬ್ಬರ ದಾಂಪತ್ಯಕ್ಕೆ ಆರು ಮಕ್ಕಳು. ಆಸ್ಕರ್ ವ್ಯವಹಾರದಲ್ಲಿ ದಿವಾಳಿಯೆದ್ದು ಊರು ಬಿಡುವ ಸ್ಥಿತಿ ನಿರ್ಮಾಣವಾಗಿ ದಕ್ಷಿಣ ನಾಚಿಟೋಚೆಸ್ ಪ್ಯಾರಿಷ್‌ನಲ್ಲಿರುವ ಕ್ಲೌಟಿಯರ್‌ವಿಲ್ಲೆಗೆ ತಮ್ಮ ವಾಸವನ್ನು ಬದಲಾಯಿಸಬೇಕಾಯಿತು. ಆದರೆ ಕೌಂಟರ್ ವಿಲ್ಲೆಯ ವಾತಾವರಣ ಕೇಟ್ ನ ಬರವಣಿಗೆಗೆ ಹತ್ತು ಹಲವು ವಿಷಯಗಳನ್ನು ಒದಗಿಸಿತು. ಆದರೆ 1881ರಲ್ಲಿ ಆಸ್ಕರ್ ಮರಣ ಹೊಂದಿದಾಗ ಅವಳ ತಲೆಯ ಮೇಲೆ ಅಪಾರವಾದ ಸಾಲವಿತ್ತು.  ನಂತರ ಕೇಟ್ ತನ್ನೂರಿನ ಹಲವಾರು ಯುವಕರೊಂದಿಗೆ ಅದರಲ್ಲೂ ಒಬ್ಬ ವಿವಾಹಿತ ರೈತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಕುರಿತು ರೋಚಕ ಕಥೆಗಳಿವೆ. 

ಕೇಟ್ ನ ತಾಯಿ ತನ್ನ ಮಗಳಿಗೆ ಸೇಂಟ್ ಲೂಯಿಸ್ ಗೆ ಹಿಂದಿರುಗಲು ಹೇಳಿದಳು . ಆದರೆ ಇವಳ ದೊಡ್ಡ ಕುಟುಂಬದ ನಿರ್ವಹಣೆ ನೋಡಿಕೊಳ್ಳುತ್ತಿದ್ದ ತಾಯಿ ಎರಡೇ ವರ್ಷಗಳಲ್ಲಿ ನಿಧನರಾದರು. ಪತಿಯ ಮರಣ, ವ್ಯಾಪಾರದ ನಷ್ಟ, ಮಕ್ಕಳ ಸ್ವೇಚ್ಛಾಚಾರ ಹಾಗೂ ತಾಯಿಯ ಮರಣಗಳ ಆಘಾತದಿಂದ ಕೇಟ್ ಖಿನ್ನತೆಗೆ ಜಾರಿದಳು. 

          ಕೇಟ್ ನ ಕುಟುಂಬದ ಸ್ನೇಹಿತ, ಹಾಗೂ ವೃತ್ತಿಯಲ್ಲಿ ವೈದ್ಯನಾಗಿದ್ದ ಡಾ. ಫ್ರೆಡೆರಿಕ್ ಕೊಲ್ಬೆನ್ಹೇಯರ್ ಕೇಟ್ ಗೆ ಬರವಣಿಗೆಯನ್ನು ಪುನರಾರಂಭಿಸಲು ಸಲಹೆ ನೀಡಿದರು, ಇದು ಅವಳ ಖಿನ್ನತೆಗೆ ಚಿಕಿತ್ಸೆಯಾಗಬಹುದು ಎಂದು ನಂಬಿದ್ದರು. ಬರವಣಿಗೆಯು ಅವಳ ಅಸಾಧಾರಣ ಶಕ್ತಿಯ ಕೇಂದ್ರಬಿಂದು ಮತ್ತು ಆದಾಯದ ಮೂಲವಾಗಬಹುದು ಎಂದು ಅವರು ಆಶಿಸಿದ್ದರು.


1890 ರ ದಶಕದ ಆರಂಭದ ವೇಳೆಗೆ, ಕೇಟ್ ಅವರ ಸಣ್ಣ ಕಥೆಗಳು, ಲೇಖನಗಳು ಮತ್ತು ಅನುವಾದಗಳು ಸೇಂಟ್ ಲೂಯಿಸ್ ಪೋಸ್ಟ್-ಡಿಸ್ಪ್ಯಾಚ್ ಪತ್ರಿಕೆ ಸೇರಿದಂತೆ ನಿಯತಕಾಲಿಕಗಳಲ್ಲಿ ಮತ್ತು ವಿವಿಧ ಸಾಹಿತ್ಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು. ಜಾನಪದ ಕಥೆಗಳನ್ನು ಒಳಗೊಂಡ ಬರವಣಿಗೆಯ ಶೈಲಿ ಎಲ್ಲರನ್ನೂ ಆಕರ್ಷಿಸಿತು. ಆಡುಭಾಷೆಯಲ್ಲಿರುವ ಅವರ ಕೃತಿಗಳು ಮತ್ತು ದಕ್ಷಿಣ ಭಾಗದ ಜನರ ಜಾನಪದ ಶೈಲಿಯ ಜೀವನದ ನಿರೂಪಣೆಗಳು ಮತ್ತು ಇತರ ಅಂಶಗಳು ಅವರ ಬರವಣಿಗೆಯ ತಾಕತ್ತು. ಆದರೆ ಅವರು ಸ್ಥಳೀಯ ವಿಷಯವನ್ನು ತಮ್ಮ ಬರವಣಿಗೆಯಲ್ಲಿ ಗಣನೀಯವಾಗಿ ಬಳಸಿದ್ದರಿಂದ ಕೆಲವು ವಿಮರ್ಶಕರು ಪ್ರಾದೇಶಿಕ ಬರಹಗಾರರೆಂದು ಟೀಕಿಸಿದ್ದೂ ಇದೆ.  

1899 ರಲ್ಲಿ, ಅವರ ಬಹು ಚರ್ಚಿತ  ಎರಡನೇ ಕಾದಂಬರಿ, ದಿ ಅವೇಕನಿಂಗ್  ಪ್ರಕಟಗೊಂಡಿತು. ವಿಮರ್ಶಕರು ಕಾದಂಬರಿಯನ್ನು ಅಷ್ಟಾಗಿ ಇಷ್ಟಪಡಲಿಲ್ಲ. ಮೊದಮೊದಲ ವಿಮರ್ಶೆ ಹೆಚ್ಚಾಗಿ ನಕಾರಾತ್ಮಕವಾಗಿತ್ತು. ಈ ಕಾದಂಬರಿಯ ಪಾತ್ರಗಳ ನಡವಳಿಕೆ ಅದರಲ್ಲೂ  ವಿಶೇಷವಾಗಿ ಮಹಿಳೆಯರ ವರ್ತನೆ ಅಂದಿನ ಸಾಂಪ್ರದಾಯಿಕ ಸಮಾಜದ ವಿರೋಧವನ್ನು ಎದುರಿಸಬೇಕಾಯಿತು.  ಹೆಣ್ಣು ಮತ್ತು ಲೈಂಗಿಕತೆ, ಮಾತೃತ್ವ ಮತ್ತು ದಾಂಪತ್ಯ ದ್ರೋಹದ ಪಾತ್ರಗಳು ಕೇಟ್ ನ ವ್ಯಕ್ತಿತ್ವದ ದ್ಯೋತಕ ಎಂದು ವಿಮರ್ಶಕರು ವ್ಯಂಗ್ಯವಾಡಿದರು.  

ಆದರೆ ನಂತರ ಈ ಕಾದಂಬರಿ, ಅವರ ಜೀವಮಾನದ ಅತ್ಯುತ್ತಮ ಕೃತಿ ಎಂದು ಕರೆಯಿಸಿಕೊಂಡಿದ್ದೂ ಒಂದು ವಿಸ್ಮಯ.  ದಬ್ಬಾಳಿಕೆಯ ಸಮಾಜದಲ್ಲಿ ಸಿಕ್ಕಿಬಿದ್ದ ಮಹಿಳೆಯ ಕಥೆಯಾಗಿದೆ. ಹಲವಾರು ದಶಕಗಳ ಕಾಲ ಈ ಕಾದಂಬರಿಯ ಮರು ಮುದ್ರಣಕ್ಕೆ ವಿರೋಧವಿದ್ದಾಗಲೂ1970 ರ ದಶಕದಲ್ಲಿ ಪ್ರಾರಂಭವಾದ ಸಾಮಾಜಿಕ ಹೊಸ ಅಧ್ಯಯನಗಳು ಮತ್ತು ಮಹಿಳಾ ಬರಹಗಳ ಕುರಿತು  ಮೆಚ್ಚುಗೆಯ ಅಲೆ ಇರುವಾಗ ಈ ಕಾದಂವರಿಯನ್ನು ಮರು ಓದಿಗೆ ಒಳಪಡಿಸಿದಾಗ ಇದರ ಮಹತ್ವದ ಅರಿವಾಯಿತು. ಸ್ತ್ರೀ ಸ್ವಾತಂತ್ರ್ಯ ಹಾಗೂ ಮಹಿಳೆಯರ ಮನೋ ಇಚ್ಛೆಗೆ ಬೆಲೆ ನೀಡಬೇಕಾದ ಹಿನ್ನಲೆಯನ್ನಿಟ್ಟುಕೊಂಡು ಓದಿದಾಗ ಈ ಕಾದಂಬರಿಯ ಮಹತ್ತಿನ ಅರಿವಾಯಿತು. ನಂತರದ ದಿನಗಳಲ್ಲಿ ಈ ಕಾದಂಬರಿಯು ಹಲವಾರು ಸಲ  ಮರುಮುದ್ರಣಗೊಂಡು ಎಲ್ಲ ಕಡೆಗಳಲ್ಲೂ ಲಭ್ಯವಿರುವ ಕಾದಂಬರಿ ಎನ್ನುವ ಹೆಗ್ಗಳ೮ಕೆ ಪಡೆಯಿತು.  ಅಮೇರಿಕಾದ ಆರಂಭಿಕ ಸ್ತ್ರೀವಾದಿ ಕೃತಿಯಾಗಿ ಹಾಗೂ ಅದರ ಬರವಣಿಗೆಯ ಶೈಲಿ ಮತ್ತು ಗುಣಮಟ್ಟದ ಪ್ರಾಮುಖ್ಯತೆಗಾಗಿ ಇದು ಇಂದಿಗೂ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ.
ದಿ ಅವೇಕನಿಂಗ್‌  ಹುಟ್ಟುಹಾಕಿದ ಹಗರಣಗಳಿಂದ ಮತ್ತು ಹಾಗೂ ಅದು ಜನರ ಮನ್ನಣೆ ಗಳಿಸಿಲ್ಲವೆಂದು  ಕೇಟ್ ತೀವ್ರವಾಗಿ ನಿರುತ್ಸಾಹಗೊಂಡರು, ಆದರೂ ತನ್ನ ಬರವಣಿಗೆಯನ್ನು ಮುಂದುವರೆಸಿ ತನ್ನ ಆಸಕ್ತಿಯನ್ನು ಸಣ್ಣ ಕಥೆಯ ಕಡೆಗೆ ತಿರುಗಿಸಿದರು. 

1900 ರಲ್ಲಿ, "ದಿ ಜಂಟಲ್‌ಮ್ಯಾನ್ ಫ್ರಮ್ ನ್ಯೂ ಓರ್ಲಿಯನ್ಸ್" ಪ್ರಕಟಗೊಂಡಿತು. . ಅದೇ ವರ್ಷ  ಮಾರ್ಕ್ವಿಸ್ ಹೂಸ್ ಹೂ ನ ಮೊದಲ ಆವೃತ್ತಿಯಲ್ಲಿ  ಕೇಟ್ ಹೆಸರು ಸೇರ್ಪಡೆಗೊಂಡಿತು.   ಇಷ್ಟಾದರೂ ಅವಳು ತನ್ನ ಬರವಣಿಗೆಯಿಂದ ಎಂದಿಗೂ ಹೆಚ್ಚು ಹಣವನ್ನು ಗಳಿಸಲಿಲ್ಲ. 

ಆಗಸ್ಟ್ 20, 1904 ರಂದು ಸೇಂಟ್ ಲೂಯಿಸ್ ವರ್ಲ್ಡ್ ಫೇರ್ ಗೆ ಭೇಟಿ ನೀಡಿದಾಗ, ಕೇಟ್ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದರು. ಅವರು ಎರಡು ದಿನಗಳ ನಂತರ  ಅಂದರೆ ಅಗಷ್ಟ್ 22 ರಂದು ತಮ್ನ 54 ನೇ ವಯಸ್ಸಿನಲ್ಲಿ ನಿಧನರಾದರು. ಸೇಂಟ್ ಲೂಯಿಸ್‌ನಲ್ಲಿರುವ ಕ್ಯಾಲ್ವರಿ ಸ್ಮಶಾನದಲ್ಲಿ ಅವರ ಸಮಾಧಿಯನ್ನು ಕಾಣಬಹುದು. 

ಕೇಟ್ ರವರ ಪ್ರಮುಖ ಕೃತಿಗಳು ಬೇಯು ಫೋಕ್ (1894) ಮತ್ತು ಎ ನೈಟ್ ಇನ್ ಅಕಾಡಿ (1897) ಎಂಬ ಎರಡು ಸಣ್ಣ ಕಥಾ ಸಂಕಲನಗಳು ಮತ್ತು   ಅಟ್ ಫಾಲ್ಟ್ (1890) ಮತ್ತು ದಿ ಅವೇಕನಿಂಗ್ (1899) ಎಂಬ ಎರಡು ಕಾದಂಬರಿಗಳು ಪ್ರಮುಖವಾದವು. ಆಕೆಯ ಪ್ರಮುಖ ಸಣ್ಣ ಕಥೆಗಳಲ್ಲಿ "ದೇಸಿರೀಸ್ ಬೇಬಿ" (1893), "ದಿ ಸ್ಟೋರಿ ಆಫ್ ಆನ್ ಅವರ್" (1894) ಮತ್ತು "ದಿ ಸ್ಟಾರ್ಮ್" (1898) ಪ್ರಮುಖವಾದವು. 

1899 ರಲ್ಲಿ ಪ್ರಕಟವಾದ ಆಕೆಯ ಕಾದಂಬರಿ ದಿ ಅವೇಕನಿಂಗ್ ತನ್ನ ಕಾಲಕ್ಕಿಂತಲೂ ಮುಂದಿನ ವಸ್ತುವನ್ನು ಒಳಗೊಂಡಿದೆ.  ಸಮಕಾಲೀನ  ಸಾಹಿತ್ಯ ಪ್ರಪಂಚ ಕೇಟ್ ಬರೆದ ಈ ವಸ್ತು ವಿಷಯವನ್ನು ಒಪ್ಪಿಕೊಳ್ಳುವ ಹಂತವನ್ನಿನ್ನೂ ತಲುಪಿರಲಿಲ್ಲ. ಹೀಗಾಗಿ ಈ ಕಾದಂಬರಿ ನಕಾರಾತ್ಮಕ ವಿಮರ್ಶೆಗಳನ್ನು ಎದುರಿಸಬೇಕಾಯಿತು. ದಿ ಅವೇಕನಿಂಗ್‌ನಲ್ಲಿರುವ  ಸ್ತ್ರೀ ಪಾತ್ರಗಳು ಆ ಕಾಲದ ಸಾಮಾಜಿಕ  ಮಾನದಂಡಗಳನ್ನೆಲ್ಲ ಮೀರಿ ವರ್ತಿಸುತ್ತವೆ. ನಾಯಕ ತನ್ನ ಲೈಂಗಿಕ ಬಯಕೆಗಳನ್ನೂ ಮೀರಿ  ತಾಯ್ತನದ ಪಾವಿತ್ರ್ಯವನ್ನು ಪ್ರಶ್ನಿಸುತ್ತ ಹೆಣ್ಣಿನ ಮನದಾಳದ ಭಾವನೆಗಳಿಗೆ ಹೊಸ ಆಯಾಮ ಕೊಡುತ್ತಾನೆ.  

  ವಿವಾಹದಾಚಿಗಿನ ಸಂಬಂಧವನ್ನು ಈ ಕಾದಂಬರಿಯು ಹೆಣ್ಣಿನ ದೃಷ್ಟಿಕೋನದಿಂದ ಹೇಳುತ್ತ ಹೋಗುತ್ತದೆ.  ಮಹಿಳೆಯರ  ಆಯ್ಕೆಯ ಸ್ವಾತಂತ್ರ್ಯವನ್ನೂ ಇದು ಪ್ರತಿಪಾದಿಸುತ್ತದೆ.  
ಮಾರ್ಥಾ ಕಟ್ಟರ್ ಅವರ ಲೇಖನ, "ದಿ ಸರ್ಚ್ ಫಾರ್ ಎ ಫೆಮಿನೈನ್ ವಾಯ್ಸ್ ಇನ್ ದಿ ವರ್ಕ್ಸ್ ಆಫ್ ಕೇಟ್ ಚಾಪಿನ್",  ಕೇಟ್ ರವರ ಅನೇಕ ಕಥೆಗಳಲ್ಲಿನ ಸ್ತ್ರೀ ಪಾತ್ರಗಳನ್ನು ವಿಶ್ಲೇಷಿಸುತ್ತದೆ. ಮಹಿಳೆಯರ " ಗುಪ್ತವಾದ ಮತ್ತು ಇಲ್ಲಿಯವರೆಗೆ  ಕೇಳಿರದ ಲೈಂಗಿಕತೆ" ಎಂದು  ದಿ ಅವೇಕನಿಂಗ್‌ ನ ಎಡ್ನಾ ಪಾತ್ರವನ್ನು ಉಲ್ಲೇಖಿಸಿ ಹೇಳಲಾಗಿದೆ. ಕೇಟ್ ಅವರ ಬರವಣಿಗೆಯು ಅದರ ಲೈಂಗಿಕ ಗುರುತುಗಳು ಮತ್ತು ಸ್ತ್ರೀಯರ ಬಯಕೆಗಳ ಅಭಿವ್ಯಕ್ತಿ ಈ ಕಾದಂಬರಿಯಲ್ಲಿ ಆಘಾತ ಹುಟ್ಟಿಸುವಂತೆ ಚಿತ್ರಿಸಲಾಗಿದೆ 

ಆದರೆ ಇಂದಿಗೂ, ದಿ ಅವೇಕನಿಂಗ್  ಅಮೆರಿಕಾದಾದ್ಯಂತ ಇರುವ  ಸಾಹಿತ್ಯ ಕೋರ್ಸ್‌ಗಳಲ್ಲಿನ ಐದು ಪ್ರಮುಖ ಕಾದಂಬರಿಗಳಲ್ಲಿ ಒಂದಾಗಿದೆ ಎಂಬುದನ್ನು ಮರೆಯುವಂತಿಲ್ಲ

No comments:

Post a Comment