Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Wednesday, 8 June 2022

ನಮ್ಮೊಳಗಿನ ಮಗುತನವ ಮತ್ತೆ ತುಂಬಿಸಿಕೊಳ್ಳಲು

ನಮ್ಮೊಳಗಿನ ಮಗುತನವ ಮತ್ತೆ ತುಂಬಿಸಿಕೊಳ್ಳಲು
ಅಂಕಣ ಸಿರಿಸಂಪತ್ತು- ಈ ನಗರವಾಣಿ ಪತ್ರಿಕೆ

ಪುಸ್ತಕ- ನಾವು ಭಾರತೀಯರು
ಲೇ- ಮೌಲಾಲಿ ಕೆ. ಅಲಗೂರ


 ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಹಿರಿಯರ ಸಾಹಿತ್ಯವನ್ನು ಬರೆದಂತೆ ಕ್ಲಿಷ್ಟ ಪದಗಳನ್ನು ಬರೆದು ಸಾಹಿತ್ಯ ರಚನೆ ಮಾಡಿದೆವು ಎನ್ನುವಂತಿಲ್ಲ. ಇಲ್ಲಿ ಮಕ್ಕಳೇ ಮೊದಲ ಓದುಗರಾದ್ದರಿಂದ ಅವರ ಮಟ್ಟಕ್ಕೆ ಇಳಿದು ಸಾಹಿತ್ಯವನ್ನು ರಚಿಸಬೇಕಾಗುತ್ತದೆ. ಆದರೆ ಮಕ್ಕಳ ಮಟ್ಟಕ್ಕೆ ಇಳಿದು ಬರೆಯುವುದು ಓದುವುದು, ವ್ಯವಹರಿಸುವುದು ಸುಲಭದ ಮಾತಲ್ಲ. ಬೆಳೆಯುತ್ತ ಹೋದಂತೆ ನಾವು ನಮ್ಮ ಎಳೆತನವನ್ನೆಲ್ಲ ಕಳೆದುಕೊಂಡು ಬಿಡುತ್ತೇವೆ. ಮನದೊಳಗಿನ ಮುಗ್ಧತೆ ಮಾಯವಾಗಿ ಯಾವ ವಿಷಯದ ಬಗೆಗೂ ಕುತೂಹಲ ತೋರದೆ ಮುಗುಂ ಆಗಿ ಇದ್ದು ಬಿಡುವುದನ್ನೆ ಪ್ರೌಢತೆ ಎಂದು ತಿಳಿದುಕೊಂಡು ಮುಖವನ್ನು ಬಿಮ್ಮಿಸಿಕೊಳ್ಳುವ ಈ ಕಾಲದಲ್ಲಿ ಮಕ್ಕಳ ಸಾಹಿತ್ಯದ ಓದು ಅತಿ ಅವಶ್ಯಕ. ಅಂತಹುದ್ದೊಂದು ಆಸಕ್ತಿಕರವಾದ ಓದಿಗೆ ನಿಲುಕುವುದು ಮೌಲಾಲಿ ಕೆ ಅಲಗೂರರವರು ಬರೆದಿರುವ 'ನಾವು ಭಾರತೀಯರು' ಎನ್ನುವ ಶಿಶುಗೀತೆಗಳ ಸಂಕಲನ.
     ಮಕ್ಕಳ ಸಾಹಿತ್ಯವನ್ನು ರಚಿಸುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯಿದೆ. ಅದಕ್ಕೆ ಕಾರಣವೇನೆಂದರೆ ಬೆಳೆದಂತೆಲ್ಲ ನಾವು ನಮ್ಮ ಮಗುತನವನ್ನು ಕಳೆದುಕೊಳ್ಳುವುದು. ಆದರೆ ಮಕ್ಕಳ ಕವಿತೆಗಳನ್ನು ಓದುವುದು ಅಥವಾ ಬರೆಯುವುದರಿಂದ ನಾವು ಮತ್ತೆ ಬಾಲ್ಯದ ನೆನಪುಗಳಿಗೆ ಜಾರಬಹುದು. ಅಷ್ಟೇ ಅಲ್ಲ, ನಮ್ಮೊಳಗಿರುವ ಮಗುವನ್ನು ಪುನಃ ಮುನ್ನಲೆಗೆ ತಂದುಕೊಳ್ಳಬಹುದು. ನಮ್ಮೊಳಗೆ ಇರುವ ಮಗುತನವನ್ನು ಎಚ್ಚರಿಸುವುದೆಂದರೆ ನಾವು ನಮ್ಮೆಲ್ಲ ಕೆಡಕುಗಳನ್ನು ಮರೆತು ಸರ್ವರನ್ನೂ ನಮ್ಮವರನ್ನಾಗಿಸಿಕೊಳ್ಳುವುದು. ಮಕ್ಕಳಿರುವಾಗ ಯಾರಿಗೂ ಇವರು ಅನ್ಯರು, ಪರರು ಎನ್ನುವ ಬೇಧಭಾವ ಬರುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಒಳ್ಳೆಯ ಗುಣವಿರುತ್ತದೆ.  ಆದರೆ ಮಗು ಬೆಳೆದಂತೆ ಈ ಸಮಾಜ ಅದರೊಳಗೆ ಕೆಡಕುಗಳನ್ನು ತುಂಬಲು ಪ್ರೇರೇಪಿಸತೊಡಗುತ್ತದೆ. ಹೀಗಾಗಿಯೆ ಮಗುವಾಗಿಯೆ ಉಳಿಯಲು ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ.

ಶ್ರೇಷ್ಠ ಜೀವಿ ಮಾನವ ನಿನಗೇಕೆ
ಅಸಮಾನತೆಯ ಬೇರು
ದೀನ ಹೀನ ಹಂಗು ತೊರೆದು
ಒಗ್ಗಟ್ಟು ಸಾರು

ಎನ್ನುತ್ತ ಎಲ್ಲರನ್ನು ಒಂದಾಗಿಸಿಕೊಳ್ಳುತ್ತಾರೆ. ಮಾನವ ಎಲ್ಲ ಪ್ರಾಣಿಗಳಿಗಿಂತ ಶ್ರೇಷ್ಠ ಎನ್ನಿಸಿಕೊಂಡಿದ್ದಾನೆ. ಬುದ್ಧಿಯನ್ನು ಬಳಸಬಲ್ಲ, ಅವಕಾಶಗಳನ್ನು ತನ್ನೆಡೆಗೆ ತಿರುಗಿಸಿಕೊಳ್ಳ ಬಲ್ಲ, ಪ್ರಕೃತಿಯನ್ನೇ ತನಗೆ ಬೇಕಾದಂತೆ ರೂಢಿಸಿಕೊಳ್ಳಬಲ್ಲ ಛಾತಿಯುಳ್ಳ ಪ್ರಾಣಿ. ಆದರೆ ತಮ್ಮ ತಮ್ಮೊಳಗೆ ಅಸಮಾನತೆಯನ್ನು ಹುಟ್ಟು ಹಾಕಿಕೊಂಡು ಎಲ್ಲರನ್ನು ದ್ವೇಷಿಸುತ್ತ ಬದುಕುತ್ತಿದ್ದಾನೆ. ಬಡವರನ್ನು ದೀನರನ್ನು ಕಂಡರೆ ಹೀಯಾಳಿಸಿ ಅವರನ್ನು ಮುಟ್ಟಿಸಿಕೊಳ್ಳದವರು ಎಂಬಂತೆ ಕಾಣುತ್ತಾನೆ. ಆದರೆ ಇದೆಲ್ಲವನ್ನು ತೊರೆದು ಒಗ್ಗಟ್ಟು ಸಾರಬೇಕಾದ ಅಗತ್ಯವನ್ನು ಕವಿ ಒತ್ತಿ ಹೇಳುತ್ತಾರೆ.
    ಇಂದಿನ ಭಾರತದ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ. ಎಲ್ಲೆಲ್ಲೂ ನಿರುದ್ಯೋಗ. ಕೋಮುವಾದ, ಜಾತಿ ಜಾತಿಗಳ ನಡುವೆ ವೈಷಮ್ಯ, ತಮ್ಮ ತಮ್ಮ ಧರ್ಮಗಳ ಶ್ರೇಷ್ಠತೆಯನ್ನು ಹೇಳುತ್ತ ಉಳಿದ ಧರ್ಮಗಳು ಕೀಳು ಎಂದು ಬಿಂಬಿಸುತ್ತ, ಬೇರೆ ಧರ್ಮದವರು ಕಂಡರೆ ಕತ್ತಿ ಮಸೆಯುವುದನ್ನು ಕಂಡಾಗ ಮಕ್ಕಳು ಮುಂದೆ ಇರಬೇಕಾದ ಈ ನೆಲದ ಕಲುಷಿತತೆಯ ಬಗ್ಗೆ ಆತಂಕವಾಗುತ್ತದೆ. ಹೀಗಾಗಿಯೇ
ಭವ್ಯ ಭಾರತ ಇದುವೇ
ಧರೆಯ ಮುತ್ತಿನ ಮುಕುಟ
ಎಲ್ಲಾ ಜನಾಂಗಿಯರನ್ನು  ಹೊತ್ತ
ಸಹಬಾಳ್ವೆಯ ತೋಟ
ಎನ್ನುತ್ತ ಕವಿ ಭಾರತ ಹೇಗಿರಬೇಕು ಎಂಬುದನ್ನು ಸೂಚಿಸುತ್ತಾರೆ. ಸಂಕಲನದ ಮೊದಲಿನ ಕವಿತೆಗಳು ಸೌಹಾರ್ದತೆ, ಸಹಬಾಳ್ವೆಯ ಕುರಿತಾಗಿದೆ.ಕೋಮುದ್ವೇಷವನ್ನು ಬಿಟ್ಟು ಎಲ್ಲರೂ ಸಹೋದರರಂತೆ ಬಾಳುವ ಕವಿಯ ಕನಸು ಈ ಕವನಗಳಲ್ಲಿ ಪ್ರತಿಫಲಿತವಾಗುತ್ತದೆ.  


ಮತ ಪಥಗಳು ಬೇಡ ನಮಗೆ
ನಾವೆಲ್ಲ ಭಾರತೀಯರು
ಹಿಂದು ಮುಸ್ಲಿಂ ಕ್ರೈಸ್ತ ಬೌದ್ಧ
ಇಲ್ಲಿ ಸಕಲರೂ ಸಮಾನರು

ಮಕ್ಕಳಿರುವಾಗ ಎಲ್ಲರನ್ನು ಸಮಾನವಾಗಿ ನೋಡುವುದನ್ನು ಕಲಿಸದೆ ಹೋದರೆ ಮುಂದೆ ಆ ಮಗು ಮನುಷ್ಯನಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ತಾನೇ ಶ್ರೇಷ್ಠ ಎಂದು ಮೆರೆದವರ್‍ಯಾರೂ ಜನಮಾನಸದಲ್ಲಿ ಉಳಿಯುವುದಿಲ್ಲ. ಎಲ್ಲರೊಂದಿಗೆ ಹೊಂದಿಕೊಂಡು ಪ್ರೀತಿಯಿಂದ ಬದುಕಿದರೆ ಮಾತ್ರ ಒಂದಿಷ್ಟಾದರೂ ಗೌರವ ದೊರೆಯುತ್ತದೆ ಎಂಬುಯದನ್ನು ಮಗುವಿಗೆ ಚಿಕ್ಕಂದಿನಿಂದಲೇ ಹೇಳಿಕೊಡಬೇಕಾಗಿದೆ.  ದ್ವೇಷಿಸುವ ಮನಸ್ಸು ಸದಾ ಯಾರನ್ನಾದರೂ ದ್ವೇಷಿಸುತ್ತಲೇ ಇರುತ್ತದೆ. ಕೊನೆಗೆ ದ್ವೇಷಿಸಲು ಯಾರೂ ಸಿಗದಿರುವಾಗ ತನ್ನನ್ನೇ ತಾನು ದ್ವೇಷಿಸಿಕೊಳ್ಳುತ್ತದೆ. ಜನರನ್ನು ಪೀಡಿಸಿ ತಾವು ಮಾತ್ರ ಶ್ರೇಷ್ಠ ಎಂದು ಮೆರೆದವರ ಅಂತ್ಯವನ್ನು ನಾವೆಲ್ಲ ಕಂಡಿದ್ದೇವೆ. ಹಿಟ್ಲರ್‌ನಂತಹ ಹಿಟ್ಲರ್‌ನೇ ಕೊನೆಗೆ ಬದುಕು ನಿಭಾಯಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ನಿದಶ್ನ ಇತಿಹಾಸದ ಪುಟಗಳಲ್ಲಿದೆ. ಇತಿಹಾಸವನ್ನು ಎಷ್ಟೇ ತಿರುಚಿದರೂ, ಬದಲಾಯಿಸಲು ಪ್ರಯತ್ನಿಸಿದರೂ ಅದು ಪುನರಾವರ್ತನೆಯಾಗುತ್ತ ಮತ್ತೆ ಮತ್ತೆ ನಮಗೆ ಪಾಠ ಕಲಿಸುತ್ತದೆ. ಹೀಗಾಗಿಯೆ ಮಕ್ಕಳಿಗೆ ಒಳ್ಳೆಯದನ್ನೇ ಹೇಳಿಕೊಡಬೇಕಾಗಿದೆ. ಪ್ರೀತಿಯನ್ನು ಹಂಚಿ ಪ್ರೀತಿಯಿಂದ ಬಾಳುವುದನ್ನು ಕಲಿಸಬೇಕಿದೆ. ಇಲ್ಲಿ ಮಗು

ಮನುಜ ಮತದ ಮಂತ್ರ ಬಿತ್ತೋಣ
ಜಾತಿಯ ಗೂಡನು ಕಿತ್ತೆಸೆಯೋಣ
ದೇವನೊಬ್ಬನೇ ಎನ್ನೋಣ
ಕೂಡಿ ನಲಿಯುತ ಬಾಳೋಣ

ಎನ್ನುತ್ತದೆ. ಭವ್ಯಭಾರತದ ಕನಸು ಒಡೆದು ದೂರವಾಗುವುದರಲ್ಲಿಲ್ಲ. ಒಗ್ಗಟ್ಟಿನಲ್ಲಿದೆ ಎಂಬ ಸತ್ಯದ ಅರಿವು ಎಲ್ಲ ಮಕ್ಕಳಿಗೂ ಆಗಬೇಕಿದೆ.
   ಸೈನಿಕರನ್ನು ನೆನಪಿಸಿಕೊಳ್ಳುವ ಸೈನಿಕರಿಗೆ ಸಲಾಂ, ಸ್ನೇಹದ ಮಹತ್ವ ಹೇಳುವ ಸ್ನೇಹಿತರು ಮುಂತಾದ ಕವನಗಳು ತಮ್ಮ ಸರಳತೆಯಿಂದಲೇ ಗಮನ ಸೆಳೆಯುತ್ತವೆ. ಹೋಳಿ, ದೀಪಾವಳಿ, ಸಂಕ್ರಾಂತಿ, ಯುಗಾದಿ, ಜಾತ್ರೆ ಮುಂತಾದ ಹಬ್ಬಗಳ ಕುರಿತು ಬರೆದಿರುವ ಕವನಗಳು ತುಂಬ ಆಸಕ್ತಿದಾಯಕವಾಗಿದ್ದು ಮಕ್ಕಳನ್ನು ಸೆಳೆಯುವುದರಲ್ಲಿ ಅಚ್ಚರಿಯೇನಿಲ್ಲ.

ಅಪ್ಪ ಅಮ್ಮನನ್ನು ಪ್ರತ್ಯಕ್ಷ ದೇವರು ಎನ್ನುತ್ತೇವೆ. ನಮ್ಮ ಜೀವನದಲ್ಲಿ ಇವರಿಬ್ಬರ ಪಾತ್ರ ಹಿರಿದು. ತಮ್ಮೆಲ್ಲ ಶಕ್ತಿಯನ್ನು ಮಕ್ಕಳ ಏಳಿಗೆಗಾಗಿ ಮೀಸಲಿಡುವ ಅಪ್ಪ-ಅಮ್ಮ ಮಕ್ಕಳ ಉನ್ನತಿಯಲ್ಲಿಯೇ ಸಮತೋಷ ಕಾಣುತ್ತಾರೆ. ಮಕ್ಕಳ ಏಳಿಗೆಗಾಗಿ ತಾವು ಮೇಲೇರುವ ಅವಕಾಶ ತಪ್ಪಿಸಿಕೊಂಡವರು ಇದ್ದಾರೆ. ಮಕ್ಕಳ ಬದುಕು ಹಸನಾದರೆ ಸಾಕು ಎನ್ನುವ ತಂದೆತಾಯಿಗಳು ನಿಜಕ್ಕೂ ಸಮಾಜದ ದೊಡ್ಡ ಆಸ್ತಿ. ಯಾಕೆಂದರೆ ಅವರು ಈ ಸಮಾಜಕ್ಕೆ, ದೇಶಕ್ಕೆ ಒಂದು ಭವ್ಯ ಭವಿಷತ್‌ನನು ನಿರ್ಮಿಸಿ ಕೊಟ್ಟವರು.  ಸಂಕಲನದಲ್ಲಿ ಅಪ್ಪ ಅಮ್ಮ ಹಾಗೂ ಶಿಕ್ಷಕರ ಕುರಿತಾಗಿ ಇರುವ ಕವನಗಳು ಮನಸ್ಸನ್ನು ಸೆಳೆಯುತ್ತವೆ.
   ಅಮ್ಮನ ಪ್ರೀತಿಯಲ್ಲಿ ಅಪ್ಪನ ಬಲವನ್ನು ಎಷ್ಟೋ ಮಕ್ಕಳು ಮರೆತು ಬಿಡುತ್ತಾರೆ. ಅಮ್ಮ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಜೋಪಾನವಾಗಿಟ್ಟುಕೊಂಡು, ಅಪಾರವಾದ ಹೆರಿಗೆ ಬೇನೆಯನ್ನು ಎದುರಿಸಿ ಮಗುವಿಗೆ ಜನ್ಮ ನೀಡುತ್ತಾಲೆ. ತನ್ನ ರಕ್ತ ಮಾಂಸವನ್ನು ಹಂಚಿಕೊಂಡು ಹುಟ್ಟಿದ ಮಗುವಿಗೆ ತನ್ನ ಎದೆಹಾಲೆಂಬ ಅಮೃತ ನೀಡುತ್ತಾಳೆ. ಆದರೆ ಅಪ್ಪ ಅಮ್ಮನ ಪ್ರೀತಿಯ ಎದುರು ಮಂಕಾದಂತೆ ಕಂಡರೂ ಅವನ ಹೊಣೆಗಾರಿಕೆ ಕಡಿಮೆಯದ್ದೇನಲ್ಲ. ಮಕ್ಕಳ ಭವಿಷ್ಯ ಅಪ್ಪನ ಹೆಗಲೇರಿದ ಜವಬ್ಧಾರಿ. ಹೀಗಾಗಿ ಮಕ್ಕಳನ್ನು ಹೆಗಲಮೇಲೆ ಕುಳ್ಳಿರಿಸಿಕೊಳ್ಳುವುದಷ್ಟೇ ಅಲ್ಲ ಅವರ ಜೀವನವನ್ನು ನೇರ್ಪುಗೊಳಿಸುತ್ತಾನೆ. ಹೀಗಾಗಿ ಕವಿ ಅಪ್ಪನನ್ನು ಕುರಿತು,

ಬದುಕಿಗೆ ನೂರಾರು ತೊಂದರೆ
ಬಂದರು, ಆಗಲಿಲ್ಲ ಬೇಜಾರು
ಹಾಕಲಿಲ್ಲ ಕಣ್ಣೀರು, ಅಪ್ಪನಿಗಿಂತ
ಬೇರಿಲ್ಲ ಮತ್ತೊಬ್ಬ ಆಪ್ತರು

ಎನ್ನುತ್ತಾರೆ. ಮಕ್ಕಳ ಬದುಕಿಗಾಗಿ ನೂರಾರು ಕಷ್ಟಗಳನ್ನು ಸಹಿಸಿಕೊಳ್ಳುವ ಅಪ್ಪ, ಅಮ್ಮನಷ್ಟೇ ಆಪ್ತರು. ಆದರೆ ಅಮ್ಮ ಎಂದಿದ್ದರೂ ಅಮ್ಮನೆ.ಅಮ್ಮನ ಸ್ಥಾನ ಯಾರಿಂದಲೂ ತುಂಬಲಾಗದು. ತನ್ನ ನೋವು, ದುಃಖ, ಅನಾರೋಗ್ಯಗಳನ್ನು ಬದಿಗೊತ್ತಿ ಮಗುವಿನ ಬದುಕು ತನ್ನ ಬದುಕು ಎಂಬ ತಾದ್ಯಾತ್ಮದಿಂದ ಜೀವಿಸುತ್ತಾಳೆ. 

ನಮ್ಮ ಏಳಿಗೆಗೆ ಮುಂದೆ ನಿಂತು ಸೌಖ್ಯ ಅಸೌಖ್ಯದಲಿ ಬೆರೆತು
ಮಗು ಅಳಲು ತಾನತ್ತು, ನಕ್ಕಾಗ
ವ್ಯಥೆಯನ್ನು ಮರೆತಳು

ಮಕ್ಕಳ ಜೀವನದಲ್ಲಿ ತಂದೆ ತಾಯಿಗಳ ನಂತರದ ಸ್ಥಾನ ಏನಿದ್ದರು ಗುರುವಿನದ್ದು. ಕೆಲವೊಮ್ಮೆ ತಂದೆತಾಯಿಗಳಿಗಿಂತ ಶಿಕ್ಷಕರೇ ನಿರ್ಣಾಯಕ ಸ್ಥಾನ ವಹಿಸಿದ್ದೂ ಇದೆ. ಸಂವಿಧಾನ ಶಿಲ್ಪಿ ಅಂಬೇಡ್ಕರರ ಜೀವನವನ್ನು ನೋಡಿದರೆ ಗುರುವಿನ ಹಿರಿಮೆಯ ಅರಿವಾಗುತ್ತದೆ. ಹೀಗಾಗಿ ಕವಿ ಗುರುವನ್ನು ಅವರ ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ.

ಪಾಠ ಮಾಡುತ, ಆಟವ ಆಡಿಸುತ
ನಕ್ಕು ನಗಿಸುವ ಹಸನ್ಮುಖ
ತಪ್ಪನ್ನು ಮನ್ನಿಸಿ, ಪ್ರೀತಿಯ ಹಂಚಿ
ಮಕ್ಕಳ ಬದುಕಿನ ಪ್ರೇರಕ

ಎನ್ನುತ್ತ ಗುರುವಿನ ಪ್ರೇರಕ ಶಕ್ತಿಯನ್ನು ಹೊಗಳಿದ್ದಾರೆ.
         ಗಾಂಧಿತಾತ ರಾಷ್ಟ್ರಪಿತ,ಸಂಗೊಳ್ಳಿ ರಾಯಣ್ಣ, ಸಾವಿತ್ರಿಭಾಯಿ ಫುಲೆ, ಡಾ. ಎ.ಪಿ.ಜೆ ಅಬ್ಧುಲ್ ಕಲಾಂಭಾವೈಕ್ಯತೆಯಜ್ಜ ಸುತಾರ ಮುಂತಾದವರ ಜೀವನ ಚರಿತ್ರೆಗಳನ್ನು ಸರಳವಾಗಿ ಹೇಳಿ ಮಕ್ಕಳಿಗೆ ಈ ವ್ಯಕ್ತಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರೇರಣೆ ನೀಡಿದ್ದಾರಲ್ಲದೆ ಇವರ ಮಾನವತಾ ಸಮದೇಶಗಳನ್ನು ತಿಳಿದುಕೊಳ್ಳಲು ಉತ್ತೇಜಿಸಿದ್ದಾರೆ.

ಮತದಾನ ಜಾಗ್ರತಿ, ಸ್ವಾತಂತ್ರ್ಯೋತ್ಸವ, ಗಣರಾಜ್ಯ ದಿನಾಚರಣೆಯ ಕುರಿತೂ ಸುಂದರವಾಗಿ ಮನಮುಟ್ಟುವಂತೆ ಬರೆದಿದ್ದಾರೆ.
ಕನ್ನಡ ಉಳಿಸು,  ಸುಂದರ ಕರುನಾಡು ಕವನಗಳಿವೆ
ಕನ್ನಡಕ್ಕಾಗಿ ಬದುಕೋಣ ಕವನದಲ್ಲಿ

ಕುವೆಂಪು ಸಾಹಿತ್ಯ ಅರಿಯೋಣ
ಕನ್ನಡ ಡಿಂಡಿಮ ಬಾರಿಸೋಣ
ನಿತ್ಯೋತ್ಸವ ಗೀತೆ ಹಾಡೋಣ
ಸವಿಗನ್ನಡ ಉತ್ಸವ ಆಚರಿಸೋಣ

 ಎನ್ನುತ್ತ ಕನ್ನಡ ನುಡಿಯ ಕುರಿತು ಮಕ್ಕಳು ಸದಾ ಗೌರವ ಭಾವ ಹೊಂದಿರಬೇಕೆಂದು ಆಶಿಸುತ್ತಾರೆ. ರಾಷ್ಟ್ರಕವಿ ಕುವೆಂಪುರವರ ಆದರ್ಶ ಹಾಗೂ ಕನ್ನಡಪ್ರೇಮ, ನಿಸಾರ ಅಹಮದ್‌ರ ನಿತ್ಯೋತ್ಸವದ ಕುರಿತು ಸೂಕ್ಷ್ಮವಾಗಿ ಹೇಳುತ್ತ ಇನ್ನೂ ಹೆಚ್ಚು ಅರಿತುಕೊಳ್ಳಲು ದಾರಿತೋರಿದ್ದಾರೆ.
   ಮಕ್ಕಳ ಕವಿತೆಗಳನ್ನು ಬರೆಯುವಾಗ ನಾವು ನೆನಪಿಟ್ಟುಕೊಳ್ಳಬೇಕಾದ ಇನ್ನೊಂದು ಪ್ರಮುಖವಾದ ಅಂಶವೆಂದರೆ ಕೇವಲ ಮಕ್ಕಳ ಮಟ್ಟಕ್ಕೆ ಇಳಿದು, ಸರಳ ಪದಪ್ರಯೋಗದಿಂದ ಬರೆಯುವುದಷ್ಟೇ ಅಲ್ಲ, ಅದರಲ್ಲಿ ಗೇಯತೆಯೂ ಇರಬೇಕು. ಇಲ್ಲಿನ ಕೆಲವು ಕವಿತೆಗಳನ್ನು ಹಾಡುಗಬ್ಬದಂತೆ ಬರೆದಿದ್ದರೂ ಹೆಚ್ಚಿನ ಕವಿತೆಗಳು ಹಾಡಿಗೆ ಒಗ್ಗುವಂತಿದ್ದರೆ ಎಷ್ಟು ಚೆನ್ನ. ವೃತ್ತಿಯಿಂದ ಪೋಲಿಸ್ ಆಗಿರುವ ಮೌಲಾಲಿಯವರ ಲೇಖನಿಯಿಂದ ಇನ್ನಷ್ಟು ಹಾಡುಗಬ್ಬ ಮಕ್ಕಳ ಕವಿತೆಗಳು ಮೂಡಿ ಬರಲಿ.

No comments:

Post a Comment