Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Friday, 24 June 2022

ಖಾಸಗಿ ವಿಷಯಗಳನ್ನೇ ಕಾದಂಬರಿಯ ವಸ್ತುವಾಗಿಸಿದ ಎಲಿಜಬೆತ್ ವಾನ್ ಅರ್ನಿಮ್

ಖಾಸಗಿ ವಿಷಯಗಳನ್ನೇ ಕಾದಂಬರಿಯ ವಸ್ತುವಾಗಿಸಿದ ಎಲಿಜಬೆತ್ ವಾನ್ ಅರ್ನಿಮ್


ಮೇರಿ ಆನೆಟ್ ಬ್ಯೂಚಾಂಪ್ ಎಂಬ ಹೆಸರು ಹೇಳಿದರೆ ಯಾರೂ ಗುರುತಿಸದಿದ್ದರೂ ಎಲಿಜಬೆತ್ ವಾನ್ ಆರ್ನಿಮ್ ಎಂದರೆ ಒಂದುಕ್ಷಣ ಇಂಗ್ಲೀಷ್ ಸಾಹಿತ್ಯದ ಅಧ್ಯಯನಿಗಳು ಕಣ್ಣರಳಿಸದೆ ಇರಲಾರರು. ಆಸ್ಟ್ರೇಲಿಯಾದಲ್ಲಿ ಹುಟ್ಟಿ ಜರ್ಮನ್ ಶ್ರೀಮಂತರನ್ನು ವಿವಾಹವಾಗಿ ಇಂಗ್ಲೀಷ್ ಸಾಹಿತ್ಯದಲ್ಲಿ ಹೆಸರು ಮಾಡಿದ ಎಲಿಜಬೆತ್ ವಾನ್ ಅರ್ನಿಮ್‌ರವರ ಸಾಹಿತ್ಯದ ಬದುಕು ಹಾಗೂ ವೈಯಕ್ತಿಕ ಬದುಕು ಎರಡೂ ವಿಶಿಷ್ಟ ವೈಚಿತ್ರ್ಯಗಳಿಂದ ಕೂಡಿದೆ. ತನ್ನ ಮೊದಮೊದಲ ಬರವಣಿಗೆಯನ್ನು ಜರ್ಮನ್‌ಲ್ಲಿ ಪ್ರಾರಂಭಿಸಿದ ಎಲಿಜಬೆತ್ ವಾನ್ ಆರ್ನಿಮ್ ಜನಿಸಿದ್ದು 31ಆಗಸ್ಟ್ 1866 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. ನಿರ್ದಿಷ್ಟವಾದ ಸ್ಥಳದ ಹೆಸರು ಗೊಂದಲದಲ್ಲಿದೆಯಾದರೂ ಆ ಸಮಯದಲ್ಲಿ ಅವಳ ಕುಟುಂಬವು ಸಿಡ್ನಿಯ ಕಿರಿಬಿಲ್ಲಿ ಪಾಯಿಂಟ್‌ನಲ್ಲಿರುವ ಪ್ರತಿಷ್ಠಿತ ಮನೆಯೊಂದರಲ್ಲಿ ವಾಸಿಸುತ್ತಿದ್ದರಿಂದ ಅದನ್ನೇ ಆಕೆಯ ಜನ್ಮಸ್ಥಳ ಎಂದು ಊಹಿಸಲಾಗಿದೆ. ಆಕೆಯ ತಂದೆ ಹೆನ್ರಿ ಹೆರಾನ್  ಬ್ಯೂಚಾಂಪ್ ಆಸ್ಟ್ರೇಲಿಯಾಕ್ಕೆ ವಲಸೆ ಹೋದ ಲಂಡನ್‌ನ ಒಬ್ಬ ಸುಸಂಸ್ಕೃತ ಮನೆತನದಲ್ಲಿ ಜನಿಸಿದ ವ್ಯಕ್ತಿ. ಸಿಡ್ನಿಯಲ್ಲಿ ಹಡಗು ವ್ಯಾಪಾರಿಯಾಗಿ ಅಪಾರ ಸಂಪತ್ತನ್ನು ಗಳಿಸಿದ ಹೆನ್ರಿ ಆಸ್ಟ್ರೇಲಿಯಾದಲ್ಲಿಯೇ ಹುಟ್ಟಿ ಬೆಳೆದ ಬ್ರಿಟಿಷ್ ಮೂಲದ ಎಲಿಜಬೆತ್ ವೈಸ್ ಲಾಸ್ಸೆಟರ್ ಎಂಬ ಯುವತಿಯನ್ನು ವಿವಾಹವಾದರು. ಇವರ ಒಟ್ಟೂ ಆರು ಮಕ್ಕಳಲ್ಲಿ  ಎಲಿಜಬೆತ್ ವಾನ್ ಆರ್ನಿಮ್ ಕಿರಿಯವಳು. ಆಕೆಗೆ ಮೂರು ವರ್ಷ ವಯಸ್ಸಾದಾಗ ಅವಳ ತಂದೆ ತಾಯಿ ಸಿಡ್ನಿಯನ್ನು ಬಿಟ್ಟು ಲಂಡನ್‌ನಲ್ಲಿ ವಾಸಿಸಲು ತೀರ್ಮಾನಿಸಿದರು. ಇಂಗ್ಲೆಂಡ್‌ನ ಸಂಸ್ಕೃತಿ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳು ಸಂಸ್ಕಾರವಂತರಾಗುತ್ತಾರೆಂಬ ನಂಬಿಕೆ ಅವರದ್ದಾಗಿತ್ತು.  ಹೀಗಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನಲ್ಲಿ ಇದ್ದ ಹೆನ್ರಿಯವರ ಇಬ್ಬರು ಸಹೋದರರಲ್ಲಿ ಒಬ್ಬರಾದ ಆರ್ಥರ್‌ರವರ ಮಗ ಹೆರಾಲ್ಡ್‌ಗೆ ತಮ್ಮ ಎಲ್ಲ ವ್ಯವಹಾರವನ್ನು ಒಪ್ಪಿಸಿ ತಮ್ಮ ನಾಲ್ವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಲಂಡನ್ನಿಗೆ ಪ್ರಯಾಣ ಬೆಳಿಸಿದರು. ಆ ಸಮಯದಲ್ಲಿ ಕುಟುಂಬದವರಿಂದ 'ಮೇ' ಎಂದು ಕರೆಯಿಸಿಕೊಳ್ಳುತ್ತಿದ್ದ ಎಲಿಜಬೆತ್‌ಗೆ ಕೇವಲ ಮೂರು ವರ್ಷ ವಯಸ್ಸು. ಆಸ್ಟ್ರೇಲಿಯಾದಲ್ಲಿ ಇವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಹೆರಾಲ್ಡ್‌ರವರ ಮಗಳು ಕ್ಯಾಥರಿನ್ ಬ್ಯೂಚಾಂಪ್ ಮುಂದೆ ಕ್ಯಾಥರಿನ್ ಮ್ಯಾನ್ಸ್‌ಫೀಲ್ಡ್ ಎಂದು ಇಂಗ್ಲಿಷ್ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ ಲೇಖಕಿ.  ಮೇರಿ ಆರ್ನೆಟ್ ಬ್ಯೂಚಾಂಪ್ ಹೆಸರಿನ ಇವರು ಕುಟುಂಬದ ಮುದ್ದಿನ ಮೇ,  ನಂತರ ಎಲಿಜಬೆತ್ ವಾನ್ ಅರ್ನಿಮ್ ಎಂದು ಗುರುತಿಸಿಕೊಳ್ಳುವವರೆಗಿನ ಪಯಣ ಒಂದು ರೋಚಕ ಹಾದಿಯ ನಡಿಗೆ.

ಕೆಲವು ವರ್ಷ ಸ್ವಿಟ್ಜರ್ಲೆಂಡ್‌‌ನಲ್ಲಿ ಕಳೆದ ಬ್ಯೂಚಾಂಪ್ ಕುಟುಂಬ ನಂತರ ಇಂಗ್ಲೆಂಡಿಗೆ ಹಿಂದಿರುಗಿತಾದರೂ ಸ್ವಿಟ್ಜರ್ಲೆಂಡ್‌‌ನ ಮೋಹಕ ವಾತಾವರಣ ಎಳೆಯ ಮೇ ಮೇಲೆ ಅಗಾಧ ಪರಿಣಾಮ ಬೀರಿತು. ಅದು ಕೊನೆಯವರೆಗೂ ಆಕೆಯ ಸಾಹಿತ್ಯದ ಮೇಲೆ ತನ್ನ ಪ್ರಭಾವ ಬೀರಿತು. ಶಾಲೆಯಲ್ಲಿ ಬುದ್ಧಿವಂತ ಮಗು ಎನ್ನಿಸಿಕೊಂಡಿದ್ದ ಮೇ ಗೆ ಸಂಗೀತದಲ್ಲಿ ಎಲ್ಲಿಲ್ಲದ ಆಸಕ್ತಿ. ಹೀಗಾಗಿ ರಾಯಲ್   ಕಾಲೇಜ್ ಆಫ್ ಮ್ಯೂಸಿಕ್ನಲ್ಲಿ ಅಧ್ಯಯನ ನಡೆಸಿದಳು. ಅಲ್ಲಿಯ ಶಿಕ್ಷಕ ಸರ್ ವಾಲ್ಟರ ಪ್ಯಾರೆಟ್ ಇವರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದನ್ನು ಎಲಿಜಬೆತ್ ನಂತರ ಹೇಳಿಕೊಂಡಿದ್ದಾರೆ. 

ಇಪ್ಪತ್ತೆರಡು ವರ್ಷದ ಮಗಳು ಇನ್ನೂ ವೈವಾಹಿಕ ಬಂಧನಕ್ಕೆ ಸಿಲುಕದ ಕುರಿತು ಹೆತ್ತವರು ಚಿಂತಿಸುತ್ತ ಯುರೋಪ ಪ್ರವಾಸವನ್ನು ಹಮ್ಮಿಕೊಂಡಿದ್ದಾಗ ರೋಮ್ ನಲ್ಲಿ ಮೇರಿ ಆನೆಟ್ ಬ್ಯೂಚಾಂಪ್ ಆಗಷ್ಟೇ ಹೆಂಡತಿಯನ್ನು ಕಳೆದುಕೊಂಡಿದ್ದ ಪ್ರಶ್ಯಾ ದೇಶದ ಗ್ರಾಫ್ ಹೆನ್ನಿಂಗ್ ವಾನ್ಅಅರ್ನಿಮ್-ಶ್ಲಾಜೆಂಟಿನ್ ಎಂಬ ಶ್ರೀಮಂತ ಕುಟುಂಬದ ವಿದುರನನ್ನು ಭೇಟಿಯಾದರು.  ಪ್ರತಿಭಾನ್ವಿತಳಾದ ಹಾಗೂ ಉತ್ಸಾಹಭರಿತ ಸುಂದರಿಯಿಂದ ಆಕರ್ಷಿತನಾಗಿದ್ದಷ್ಟೇ ಅಲ್ಲ ಅವಳ ಸಂಗೀತ ವಾದ್ಯಗಳ ನುಡಿಸುವಿಕೆಗೆ ಆತ ಮನಸೋತರು. ಅದಾದ ಎರಡು ವರ್ಷಗಳ ನಂತರ, ಫೆಬ್ರವರಿ 1891 ರಲ್ಲಿ ಇವರಿಬ್ಬರೂ ಲಂಡನ್ನಲ್ಲಿ ವಿವಾಹವಾದರು.  ಹೀಗಾಗಿ ಮೇರಿ ಆನೆಟ್ ಬ್ಯೂಚಾಂಪ್ ಮೇರಿ ಗ್ರ್ಯಾಫಿನ್ ವಾನ್ ಆರ್ನಿಮ್ ಆದರು.  ಜರ್ಮನ್ ಮತ್ತು ಫ್ರೆಂಚ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಮೇರಿ ಹಾಗೂ ಅವಳ ಗಂಡ  ಬರ್ಲಿನ್‌ನಲ್ಲಿ ಶ್ರೀಮಂತ ಜೀವನ ಪ್ರಾರಂಭಿಸಿದರು.  ಬಹುಬೇಗನೆ ಅವರಿಬ್ಬರಿಗೆ  ಮೂರು ಹೆಣ್ಣುಮಕ್ಕಳು ಜನಿಸಿದರು.  

 1896 ರ ರಲ್ಲಿ ನಾಸೆನ್‌ಹೈಡ್‌ನಲ್ಲಿರುವ ಕೌಂಟ್ ವಾನ್ ಅರ್ನಿಮ್‌ನ ಕಂಟ್ರಿ ಎಸ್ಟೇಟ್‌ಗೆ ಭೇಟಿ ನೀಡಿದಾಗ ಅವರ ಭವಿಷ್ಯವು ಶಾಶ್ವತವಾಗಿ ಬದಲಾಯಿತು. ಅವರು ಕುಟುಂಬದೊಂದಿಗೆ ಅಲ್ಲಿ ವಾಸಿಸಲು ತಕ್ಷಣವೇ ನಿರ್ಧರಿಸಿದರು.  ತನ್ನ ಕನಸಿನ  ಜರ್ಮನ್ ಗಾರ್ಡನ್‌ಗೆ ಅವರು ಬಂದಿದ್ದರು

 ಈ ಸಂದರ್ಭದಲ್ಲಿ ಅವರು ತನ್ನ ಮೊದಲ ಕಾದಂಬರಿ 'ಎಲಿಜಬೆತ್ ಆಂಡ್ ಹರ್ ಜರ್ಮನ್ ಗಾರ್ಡನ್' ಅನ್ನು ಬರೆದರು.  ಇದನ್ನು 1898 ರಲ್ಲಿ ಮ್ಯಾಕ್‌ಮಿಲನ್ ಸಂಸ್ಥೆಯಿಂದ ಪ್ರಕಟಿಸಿತು. ಮತ್ತು  ಆಕಾಲದಲ್ಲಿ ಅತ್ಯಂತ ವೇಗವಾಗಿ ಮಾರಾಟಗೊಂಡ  ಬೆಸ್ಟ್ ಸೆಲ್ಲರ್ ಪುಸ್ತಕವಾಗಿತ್ತು. ಈ ಪುಸ್ತಕ ಅವರ ಅದೃಷ್ಟದ ಬಾಗಿಲನ್ನು ತೆರೆಯಿತು. 
ಇದು  ಅವರ ಕುಟುಂಬದ ಎಸ್ಟೇಟ್‌ನಲ್ಲಿ ಉದ್ಯಾನವನ್ನು ರಚಿಸಲು ನಾಯಕಿ ಎಲಿಜಬೆತ್‌ನ ಹೋರಾಟಗಳು ಮತ್ತು ಜರ್ಮನ್ ನ ಶ್ರೀಮಂತ ಜಂಕರ್ ಸಮಾಜದಲ್ಲಿ ಅದು ವಿಫಲಗೊಳ್ಳುವುದನ್ನು ವಿವರಿಸುತ್ತದೆ. ಈ ಕಾದಂಬರಿಯಲ್ಲಿ ಅವರು ತನ್ನ ಗಂಡನನ್ನು "ದಿ ಮ್ಯಾನ್ ಆಫ್ ಕ್ರೋತ್" ಎಂಬ ಕಾಲ್ಪನಿಕ ಪಾತ್ರಕ್ಕೆ ಹೋಲಿಸಿದರು. 1899 ರ ಹೊತ್ತಿಗೆ ಆ ಕಾದಂಬರಿ ಇಪ್ಪತ್ತಕ್ಕೂ ಹೆಚ್ಚುಸಲ ಮರು ಮುದ್ರಣಗೊಂಡಿತು. 
ದಿ ಸೋಲಿಟರಿ ಸಮ್ಮರ್ (1899). ದಿ ಬೆನೆಫಾಕ್ಟ್ರೆಸ್ (1902), ದಿ ಅಡ್ವೆಂಚರ್ಸ್ ಆಫ್ ಎಲಿಜಬೆತ್ ಆನ್ ರುಗೆನ್ (1904), ವೆರಾ (1921), ಮತ್ತು ಲವ್ (1925) ನಂತಹ ಇತರ ಕೃತಿಗಳು ಸಹ ಅವರ ಅರೆ-ಆತ್ಮಚರಿತ್ರೆಯವುಗಳಾಗಿವೆ.

ನಂತರದ  ವರ್ಷಗಳಲ್ಲಿ  ಹೆಚ್ಚು ಹೆಚ್ಚು ಯಶಸ್ವಿ ಕಾದಂಬರಿಗಳನ್ನು ಬರೆದ ಮೇರಿ 'ಎಲಿಜಬೆತ್' ಆಗಿ, ಅವರು ಅಂತರರಾಷ್ಟ್ರೀಯ ಸಾಹಿತ್ಯಿಕ ಖ್ಯಾತಿಯನ್ನು ಗಳಿಸಿದರು. ಯಾಕೆಂದರೆ  ಅವರ ಕೃತಿಗಳಲ್ಲಿ ಸಾಮಾನ್ಯವಾಗಿ 'ಎಲಿಜಬೆತ್ ಮತ್ತು ಅವರ ಜರ್ಮನ್ ಗಾರ್ಡನ್  ಬರೆದ ಲೇಖಕರು' ಎಂದು ಉಲ್ಲೇಖಿಸುತ್ತಿದ್ದುದರಿಂದ ಎಲಿಜಬೆತ್‌ ಎಂಬುದು ಅವರ ಓದುಗರ ವಲಯವಷ್ಟೇ ಅಲ್ಲ ಅವಳ ಸ್ನೇಹಿತರು ಹಾಗೂ ಕುಟುಂಬದಲ್ಲಿಯೂ ಪ್ರಚಲಿತಗೊಂಡ ಹೆಸರಾಯಿತು. ನಂತರ ಕ್ರಿಸ್ಟಿನ್ ಎಂಬ ಕಾದಂಬರಿಗಾಗಿ 'ಆಲಿಸ್ ಚೋಲ್ಮಾಂಡೆಲಿ' ಎಂಬ ಗುಪ್ತನಾಮವನ್ನು ಬಳಸಿದರೂ  'ಎಲಿಜಬೆತ್' ಹೆಚ್ಚಿನವರಿಗೆ ತಿಳಿದಿರುವ ಹೆಸರಾಯಿತು.  ಹೀಗಾಗಿ ಮೇರಿ ಎಂಬ ಹೆಸರು ಹಿನ್ನಲೆಗೆ ಸರಿದು ಎಲಿಜಬೆತ್ ಆಗಿ  ಪ್ರಸಿದ್ದಿ ಪಡೆದರು. 


 ಅವರ ಅತ್ಯಂತ ಜನಪ್ರಿಯವಾದ ಕಾದಂಬರಿ  'ದಿ ಎನ್‌ಚ್ಯಾಂಟೆಡ್ ಏಪ್ರಿಲ್ (1922)', ಇದನ್ನು 1935 ರಲ್ಲಿ ಹ್ಯಾರಿ ಬ್ಯೂಮಾಂಟ್ ಮತ್ತು 1992ರಲ್ಲಿ ಮೈಕ್ ನೆವೆಲ್ ಚಲನಚಿತ್ರ ಮಾಡಿದರು. ಅವರ ಇತರ ಕಾದಂಬರಿಗಳನ್ನು ಸಹ ನಾಟಕಕ್ಕೆ ಅಥವಾ ಚಲನಚಿತ್ರಕ್ಕೆ ಬಳಸಿಕೊಳ್ಳಲಾಗಿದೆ;  ಎಲ್ಲವೂ ಗಮನಾರ್ಹ ಕೃತಿಗಳೇ ಆಗಿದ್ದರೂ ವೆರಾ (1921) ಮತ್ತು ಶ್ರೀ ಸ್ಕೆಫಿಂಗ್ಟನ್ (1940). ಹೆಚ್ಚು ಪ್ರಸಿದ್ದಿ ಪಡೆದಿವೆ. 
1910 ರಲ್ಲಿ ಅವರ ಪತಿ ಕೌಂಟ್ ವಾನ್ ಅರ್ನಿಮ್ ಅವರ ಮರಣದ ನಂತರ, ಅವರು ಮತ್ತು ಅವರ ಐದು ಮಕ್ಕಳು ಪ್ರಶ್ಯವನ್ನು ತೊರೆದರು. ಪದೇಪದೇ ಬೇರೆಬೇರೆ ದೇಶಗಳಿಗೆ ಹೋಗಿ ಉಳಿಯುತ್ತಿದ್ದ ಎಲಿಜಬೆತ್ ಗೆ ಸ್ವಾಭಾವಿಕವಾಗಿಯೇ  ಅನೇಕ ಸಾಹಿತ್ಯಿಕ ಮತ್ತು ಬೌದ್ಧಿಕ ವ್ಯಕ್ತಿಗಳ ಸ್ನೇಹವಿತ್ತು.  ಒಂದನೆ ವರ್ಡ್ ವಾರ್ ಗಿಂತ ಮೊದಲು ಎಚ್ ಜಿ ವೆಲ್ಸ್ ರವರೊಂದಿಗೆ ಸಂಬಂಧ ಪ್ರಾರಂಭವಾಗಿ ಅವರೊಂದಿಗೆ ಅವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರಾದರೂ ಆ ಸಂಬಂಧಕ್ಕೆ ಮದುವೆಯ ಯೋಗವಿರಲಿಲ್ಲ.  ಆದರೂ ಅವರಿಬ್ಬರೂ ಆಜೀವ ಸ್ನೇಹಿತರಾಗಿ ಉಳಿದರು.   

 1914 ರಲ್ಲಿ ಯುದ್ಧ ಪ್ರಾರಂಭವಾದ ನಂತರ, ಮೇರಿ ಆನೆಟ್ (ಎಲಿಜಬೆತ್) ವಾನ್ ಅರ್ನಿಮ್  ಬ್ರಿಟಿಷ್ ಪ್ರಜೆಯಾಗಬೇಕಾಯಿತು.  1916 ರಲ್ಲಿ, ಅವರು ಬರ್ಟ್ರಾಂಡ್ ರಸ್ಸೆಲ್ ಅವರ ಹಿರಿಯ ಸಹೋದರ ಅರ್ಲ್ ಫ್ರಾನ್ಸಿಸ್ ರಸ್ಸೆಲ್ ಅವರನ್ನು ವಿವಾಹವಾಗಿ  ಕೌಂಟೆಸ್ ರಸ್ಸೆಲ್ ಆದರು. ಆದರೆ ಅದೊಂದು  ದುರಂತದ ಮದುವೆ. ದಂಪತಿಗಳು ಮೂರು ವರ್ಷಗಳ ನಂತರ ಬೇರ್ಪಟ್ಟರು.  ಆದಾಗ್ಯೂ ಅವರು ಎಂದಿಗೂ ವಿಚ್ಛೇದನ ಪಡೆಯಲಿಲ್ಲ ಹೀಗಾಗಿ ಎಲಿಜಬೆತ್ ರನ್ನು ಎಲಿಜಬೆತ್ ಕೌಂಟೆಸ್ ರಸ್ಸೆಲ್ ಎಂದೂ ಕರೆಯಲಾಗುತ್ತಿತ್ತು.  ಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ತನ್ನ 16 ನೇ ವಯಸ್ಸಿನ ಕಿರಿಯ ಮಗಳು ಫೆಲಿಸಿಟಾಸ್ ಸೇರಿದಂತೆ ಹಲವಾರು ಸ್ನೇಹಿತರನ್ನು ಮತ್ತು ಕುಟುಂಬ ಸದಸ್ಯರನ್ನು ಕಳೆದುಕೊಳ್ಳಬೇಕಾಯಿತು. 

 1920 ರಲ್ಲಿ 'ಎಲಿಜಬೆತ್' ತನ್ನ ಮನೆಗೆ ಮರಳಿದರು. ಆಗಲೇ ಅವರಿಗೆ  ಆರೋಗ್ಯದ ಕಾರಣಗಳಿಗಾಗಿ ಮೊಂಟಾನಾದಲ್ಲಿ ತಂಗಿದ್ದ ತನ್ನ ಕಿರಿಯ ಸೋದರಸಂಬಂಧಿ  ಇಂಗ್ಲೀಷ್ ನ ಖ್ಯಾತ ಬರಹಗಾರ್ತಿ ಕ್ಯಾಥರೀನ್ ಮ್ಯಾನ್ಸ್‌ಫೀಲ್ಡ್ (1888 - 1923) ಜೊತೆ ಕಾಲ ಕಳೆಯಲು ಅವಕಾಶ ದೊರಕಿತು.

ಅದೇ ಸಂದರ್ಭದಲ್ಲಿ ಎಲಿಜಬೆತ್ ನ ಮನೆಯೊಳಗಿರುವ ವಿಶಾಲವಾದ ಪುಸ್ತಕ ಸಂಗ್ರಹ ನೋಡಲು ಪದೇ ಪದೇ ಬರುತ್ತಿದ್ದ  ಚಾಲೆಟ್ ಸೊಲೈಲ್ ನ ಯುವಕ  ಅಲೆಕ್ಸಾಂಡರ್ ಸ್ಟುವರ್ಟ್ ಫ್ರೆರೆ-ರೀವ್ಸ್ ರವರ ಪರಿಚಯ ಪ್ರಣಯಕ್ಕೆ ತಿರುಗಿತು. ಚಿಕ್ಕ ವಯಸ್ಸಿನ ಯುವಕನೊಂದಿಗಿನ ಸಂಬಂಧದ ಕುರಿತು ತೀವ್ರವಾದ ಚರ್ಚೆ ಕೂಡ ಆಗ ನಡೆದಿತ್ತು.  ನಂತರದ ದಿನಗಳಲ್ಲಿ ಫ್ರೆರೆ-ರೀವ್ಸ್ ಹೈನ್‌ಮನ್‌ನ ಅಧ್ಯಕ್ಷರಾದರು.



 1930 ರಲ್ಲಿ, ಬೆಚ್ಚಗಿನ ವಾತಾವರಣವನ್ನು ಬಯಸಿ,  ಫ್ರಾನ್ಸ್‌ನ ಮೌಗಿನ್ಸ್‌ನಲ್ಲಿರುವ ಮಾಸ್ ಡೆಸ್ ರೋಸಸ್‌ನಲ್ಲಿ ಮನೆ ಮಾಡಿಕೊಂಡ ಎಲಿಜಬೆತ್  ಒಂಬತ್ತು ವರ್ಷಗಳ ಕಾಲ ಅಲ್ಲಿ ಸುಂದರವಾದ ಹೂದೋಟ ಮಾಡಿಕೊಂಡು ನಾಯಿಗಳನ್ನು ಸಾಕಿಕೊಂಡು ಉಳಿದರು.  ಅವರ ಪುಸ್ತಕಗಳ ಸಂಗ್ರಹವನ್ನು ಕೂಡ ಮಾಸ್ ಡೆಸ್ ರೋಸಸ್‌ಗೆ ವರ್ಗಾಯಿಸಲಾಯಿತು.

  1939 ರಲ್ಲಿ ಯುದ್ಧದ ಬೆದರಿಕೆಯ ಕಾರಣದಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ಪಲಾಯನ ಮಾಡುವಂತೆ ಸರಕಾರ ಒತ್ತಾಯಿಸಿತು, ಅಲ್ಲಿ ಅವಳ ಇಬ್ಬರು ಪುತ್ರಿಯರು ಮತ್ತು ಮಗ ವಾಸಿಸುತ್ತಿದ್ದರು. ಆದರೆ ಅವಳ ಮೂರನೇ ಮಗಳು ಜರ್ಮನಿಯಲ್ಲಿ ಉಳಿಯಬೇಕಾಗಿತ್ತು.


ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದಾಗ ಅವರ  ಕೊನೆಯ ಕಾದಂಬರಿ, 'ಮಿಸ್ಟರ್ ಸ್ಕೆಫಿಂಗ್‌ಟನ್‌'  ಪ್ರಕಟಗೊಂಡಿತು. ಇದು ಅವರನ್ನು ಅಮೇರಿಕನ್ ಸಾಹಿತ್ಯ ಪ್ರಿಯರಲ್ಲಿ  ಜನಪ್ರಿಯಗೊಳಿಸಿತು.  

 ಅವರು 1941 ರಲ್ಲಿ ದಕ್ಷಿಣ ಕೆರೊಲಿನಾದಲ್ಲಿ ಮರಣಹೊಂದಿದರು. ಎರಡನೆಯ ಮಹಾಯುದ್ಧದ ಅಂತ್ಯದ ನಂತರ ಅವರ ಚಿತಾಭಸ್ಮವನ್ನು ಅವರ ಇಚ್ಛೆಗೆ ಅನುಗುಣವಾಗಿ ಅವರ ಸಹೋದರ ಸರ್ ಸಿಡ್ನಿ ಬ್ಯೂಚಾಂಪ್‌ ಚಿತಾಭಸ್ಮದ ಜೊತೆ  ಇಂಗ್ಲೆಂಡಿನ ಬಂಕಿಂಗ್ ಹ್ಯಾಮ್ ಶೈರ್ ನಲ್ಲಿರುವ  ಟೈಲರ್ ಗ್ರೀನ್ ನ ಸೇಂಟ್ ಮಾರ್ಗರೇಟ್ ಚರ್ಚ್ ನ ಚರ್ಚ್ ಯಾರ್ಡ್‌ನಲ್ಲಿ ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂಡು ಹೋದರು.  


  ಈಗ  ಕ್ಯಾಲಿಪೋರ್ನಿಯಾದ ಸಾನ್ ಮರಿನೋದ ಹಂಟಿಂಗ್ಟನ್ ಲೈಬ್ರರಿಯಲ್ಲಿ ಅವರ ಪುಸ್ತಕಗಳ ಕೆಲವು ಪ್ರತಿಗಳನ್ನು ಹಾಗೂ ಇನ್ನೂ ಕೆಲವು ಪುಸ್ತಕಗಳನ್ನು ಫ್ರಾನ್ಸ್ ನ ಟೌಲನ್ ವಿಶ್ವವಿದ್ಯಾನಿಲಯದ ಲೈಬ್ರರಿ ಸಂಗ್ರಹಗಳಲ್ಲಿ ಇರಿಸಲಾಗಿದೆ,

 
 1921 ರಲ್ಲಿ ಬರೆದ ಕಾದಂಬರಿ ವೆರಾ, ಅರ್ಲ್ ರಸ್ಸೆಲ್‌ನೊಂದಿಗಿನ ಅವಳ ವೈಪರಿತ್ಯ ವಿವಾಹ ಸಂಬಂಧದ ಮೇಲೆ ಚಿತ್ರಿಸಿದ ಡಾರ್ಕ್ ಟ್ರಾಜಿ-ಕಾಮಿಡಿ ವಿಮರ್ಶಾತ್ಮಕವಾಗಿ  ಅತಿ ಹೆಚ್ಚು ಮೆಚ್ಚುಗೆ ಪಡೆದ ಕೃತಿಯಾಗಿದೆ, ಇದನ್ನು ಜಾನ್ ಮಿಡಲ್‌ಟನ್ ಮರ್ರಿ "ಜೇನ್ ಆಸ್ಟೆನ್‌ನ ವುಥರಿಂಗ್ ಹೈಟ್ಸ್" ಗೆ ಹೋಲಿಸಿದ್ದಾರೆ.

  1922 ರಲ್ಲಿ ಬರೆದ  ದಿ ಎನ್‌ಚ್ಯಾಂಟೆಡ್ ಏಪ್ರಿಲ್,  ಅವರ ಕಾದಂಬರಿಗಳಲ್ಲಿ ಅತ್ಯಂತ ಉಲ್ಲಾಸದಾಯಕ ಕೃತಿ.  ಇದನ್ನು ಪದೇ ಪದೇ ನಾಟಕಗಳಿಗೆ ಮತ್ತು ಸಿನೆಮಾಕ್ಕೆ ಅಳವಡಿಸಿಕೊಳ್ಳಲಾಗಿದೆ: 1925 ರಲ್ಲಿ ಬ್ರಾಡ್‌ವೇ ನಾಟಕವಾಗಿ, 1935 ರ ಅಮೇರಿಕನ್ ಚಲನಚಿತ್ರ, 1992 ರಲ್ಲಿ ಅಕಾಡೆಮಿ ಪ್ರಶಸ್ತಿ-ನಾಮನಿರ್ದೇಶಿತ ಚಲನಚಿತ್ರ, ಟೋನಿ ಪ್ರಶಸ್ತಿ  2003 ರಲ್ಲಿ ನಾಮನಿರ್ದೇಶನಗೊಂಡ ರಂಗ ನಾಟಕ, 2010 ರಲ್ಲಿ ಸಂಗೀತ ನಾಟಕ, ಮತ್ತು 2015 ರಲ್ಲಿ BBC ರೇಡಿಯೋ 4 ನಲ್ಲಿ ಧಾರಾವಾಹಿ ಹೀಗೆ ಬಹಳಷ್ಟು ಪ್ರಸಿದ್ದಿ ಪಡೆದ ಹಾಗೂ ಪ್ರಶಸ್ತಿಗಳನ್ನು ಬಾಚಿಕೊಂಡ ಕಾದಂಬರಿ ಇದು. 

1940 ರಲ್ಲಿ ಬರೆದ ಮಿಸ್ಟರ್ ಸ್ಕೆಫಿಂಗ್ಟನ್ ಹಾಗೂ 1944 ರಲ್ಲಿ ಬರೆದ ವಾರ್ನರ್ ಬ್ರದರ್ಸ್ ಕಾದಂಬರಿಗಳು ಅಕಾಡೆಮಿ ಪ್ರಶಸ್ತಿಪಡೆದು ಚಲನಚಿತ್ರಗಳಾಗಿವೆ.  ತನ್ನ ಕಾದಂಬರಿಗಳಷ್ಟೇ ಪ್ರಣಯ ಹಾಗೂ ವಿವಾಹದ ವಿಷಯದಲ್ಲಿ ಚರ್ಚೆಗೆ ಒಳಪಡುತ್ತಿದ್ದ ಎಲಿಜಬೆತ್ ಸಾಹಿತ್ಯಪ್ರಿಯರ ಹಾಗೂ ಮಹಿಳಾ ಸ್ವಾತಂತ್ರ್ಯಪ್ರಿಯರ ಅಚ್ಚುಮೆಚ್ಚಿನ ಲೇಖಕಿ. 

 







   
 

No comments:

Post a Comment