Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Thursday 21 July 2022

೧೨ ಐರಿಶ್ ಇತಿಹಾಸದಲ್ಲಿ ಸ್ಥಾನ ಪಡೆದ ನಾಟಕಕಾರ್ತಿ- ಅಗಸ್ಟಾ ಗ್ರೇಗರಿ



೧೨ ಐರಿಶ್ ಇತಿಹಾಸದಲ್ಲಿ ಸ್ಥಾನ ಪಡೆದ ನಾಟಕಕಾರ್ತಿ- ಅಗಸ್ಟಾ ಗ್ರೇಗರಿ


                 ಐರಿಶ್ ನಾಟಕಕಾರ್ತಿ, ಜಾನಪದ ತಜ್ಞೆ ಮತ್ತು ರಂಗಭೂಮಿ ನಿರ್ವಾಹಕಿಯಾಗಿದ್ದ ಇಸಾಬೆಲ್ಲಾ ಆಗಸ್ಟಾ ಗ್ರೆಗೊರಿ ಆಂಗ್ಲೋ-ಐರಿಶ್ ಕುಟುಂಬದ ಪರ್ಸ್ಸೆಯ ಕಿರಿಯ ಮಗಳಾಗಿ, ಗಾಲ್ವೇ ಕೌಂಟಿಯ ರಾಕ್ಸ್ಬರೋದಲ್ಲಿ ೧೫ ಮಾರ್ಚ ೧೮೫೨ರಂದು ಜನಿಸಿದರು. ತಂದೆ ಡಡ್ಲೆ ಪರ್ಸೆ, ತಾಯಿ ಫ್ರಾನ್ಸಿಸ್ ಬ್ಯಾರಿ, ವಿಸ್ಕೌಂಟ್ ಗ್ವಿಲಾಮೋರ್ಗೆ ಸಂಬಂಧಿಸಿದವಳು. ಅವರ ಕುಟುಂಬದ ಮನೆ, ರಾಕ್ಸ್ಬರೋದಲ್ಲಿ ೬,೦೦೦-ಎಕರೆಯ (೨೪ ಕಿಮೀ) ಎಸ್ಟೇಟ್ ಆಗಿದ್ದು ಸುಮಾರು ಇನ್ನೂರು ವರ್ಷಗಳ ಇತಿಹಾಸ ಹೊಂದಿತ್ತು. ಇದು ಗೋರ್ಟ್ ಮತ್ತು ಲೌರಿಯಾದ ನಡುವೆ ಇದ್ದು ಐರಿಶ್ ಅಂತರ್ಯುದ್ಧದ ಸಮಯದಲ್ಲಿ ಅದರ ಮುಖ್ಯ ಮನೆ ಸುಟ್ಟುಹೋದ ಬಗ್ಗೆ ದಾಖಲೆಗಳಿವೆ. ಇಂಗ್ಲೀಷ್ ಮೂಲದ ಪರ್ಸೆ ಮನೆತನ ಪ್ರಾಟೆಸ್ಟಂಟ್ ಭೂಮಾಲಿಕತ್ವ ಹೊಂದಿದ ಕುಟುಂಬವಾಗಿತ್ತು. ಹತ್ತೊಂಬತ್ತನೆಯ ಶತಮಾನದ ಅಂತ್ಯದವರೆಗೂ ಗ್ವಾಲೆಯ ಸ್ಥಳಿಯ ಆಡಳಿತದ ಮೇಲೆ ಹಿಡಿತ ಹೊಂದಿದ್ದ ಈ ಕುಟುಂಬವು ಐರಿಶ್ ರಾಜ್ಯಾಡಳಿತದಲ್ಲೂ ಪ್ರಮುಖ ಪಾತ್ರ ವಹಿಸುತ್ತಿತ್ತು. ತಾಯಿಯ ಅಜ್ಜಿಯಂದಿರು ಐರಿಶ್ ಹಾಗೂ ನಾರ್ಮನ್ ಮೂಲದ ಬ್ಯಾರಿ ಮತ್ತು ಓಗ್ರಾಡಿಸ್‌ನ ಪ್ರತಿಷ್ಟಿತ ಕುಟುಂಬದವರು. ಹಿಂದೆ ರಾಜ್ಯಾಡಳಿತವು ಕಾಥೋಲಿಕ್‌ರ ಮೇಲೆ ವಿಧಿಸಿದ್ದ ದಂಡನೆ, ಕರ ಹಾಗೂ ಇನ್ನಿತರ ಹೊರೆಗಳಿಂದ ತಪ್ಪಿಸಿಕೊಳ್ಳಲು ಪ್ರೊಟೆಸ್ಟಂಟ್ ಆಗಿ ಮತಾಂತರಗೊಂಡವರು. ಅಗಸ್ಟಾರವರ ತಂದೆ ಡಡ್ಲೆಗೆ ಮೊದಲ ಪತ್ನಿಯಲ್ಲಿ ಮೂರು ಮಕ್ಕಳೂ ಹಾಗೂ ಎರಡನೆ ಪತ್ನಿ ಪ್ರಾನ್ಸಿಸ್ ಬ್ಯಾರಿಯಲ್ಲಿ ಹದಿಮೂರು ಮಕ್ಕಳಿದ್ದರು. ಮನೆಯಲ್ಲಿಯೇ ಶಿಕ್ಷಣ ಪಡೆದ ಅಗಸ್ಟಾರವರ ಮೇಲೆ ಸ್ಥಳೀಯ ಇತಿಹಾಸ ಮತ್ತು ದಂತಕಥೆಗಳ ಕಣಜದಂತಿದ್ದ ಕುಟುಂಬದ ನರ್ಸ್ ಹಾಗೂ ಸೇವಕಿಯಾಗಿದ್ದ ಮೇರಿ ಶೆರಿಡನ್ ಪ್ರಭಾವ ಅಪಾರವಾಗಿತ್ತು. ಇದಲ್ಲದೆ ಸ್ಥಳಿಯ  ಕ್ಯಾಥೋಲಿಕ್‌ರ ಹಾಗೂ ಐರಿಶ್ ಮಾತನಾಡುವವರ ಸಂಪರ್ಕವೂ ಹೆಚ್ಚಾಗಿದ್ದುದು  ಅಗಸ್ಟಾರವರ ಭವಿಷ್ಯದ ಬರವಣಿಗೆಯ ಜೀವನದ ಮೇಲೆ ಪ್ರಭಾವ ಬೀರಿತು. ಬ್ರಿಟಿಷ್ ಆಳ್ವಿಕೆಯೊಂದಿಗೆ ನಿಕಟ ಸಂಪರ್ಕದಲ್ಲಿರುವ ವರ್ಗದ ಅವರು ಅದರ ವಿರುದ್ಧ ತಿರುಗಿಬಿದ್ದರು.  ಸಾಂಸ್ಕೃತಿಕ ರಾಷ್ಟ್ರೀಯತೆಯ ಈ ಪರಿವರ್ತನೆಗೆ ಅವರ ಬರಹಗಳು ಸಾಕ್ಷಿಯಾಗಿದೆ, ಅವರ ಜೀವಿತಾವಧಿಯಲ್ಲಿ ಐರ್ಲೆಂಡ್‌ನಲ್ಲಿ ಸಂಭವಿಸಿದ ಅನೇಕ ರಾಜಕೀಯ ಹೋರಾಟಗಳನ್ನು ಇವರು ತಮ್ಮ ಬರವಣಿಗೆಯಲ್ಲಿ ನಮೂದಿಸಿದ್ದನ್ನು ಕಾಣಬಹುದು.

            ಸುಮಾರು ನಲವತ್ತು ನಾಟಕಗಳನ್ನು ಬರೆದ ಅಗಸ್ಟಾ ರೈತರ ಪರವಾದ ರಚನೆಗಳನ್ನು ಮತ್ತು ಐರಿಶ್ ಜನಪದ ಕಥೆಗಳನ್ನು ಲಘು ಹಾಸ್ಯದೊಂದಿಗೆ ಹೇಳಿದ್ದಾರೆ.  ಐರಿಶ್ ಸಾಹಿತ್ಯ ಪುನರುಜ್ಜೀವನದ ಕೆಲಸಕ್ಕಾಗಿ ಇಂದಿಗೂ ನೆನಪಿಸಿಕೊಳ್ಳಲಾಗುವ ಇವರು ವಿಲಿಯಂ ಬಟ್ಲರ್. ಯೀಟ್ಸ್ ಮತ್ತು ಎಡ್ವರ್ಡ್ ಮಾರ್ಟಿನ್ ಅವರೊಂದಿಗೆ ಐರಿಶ್ ಲಿಟರರಿ ಥಿಯೇಟರ್ ಮತ್ತು ಅಬ್ಬೆ ಥಿಯೇಟರ್ ಸ್ಥಾಪಿಸಿ ಎರಡೂ ಕಂಪನಿಗಳಿಗೆ ಹಲವಾರು ಕಿರು ಕೃತಿಗಳನ್ನು ಬರೆದರು. ಐರಿಶ್ ಪುರಾಣದಿಂದ ತೆಗೆದುಕೊಳ್ಳಲಾದ ಅನೇಕ ಕಥೆಗಳನ್ನು ತಮ್ಮ ನಾಟಕ ಹಾಗೂ ಇತರ ಕಥೆಗಳಲ್ಲಿ ರೂಪಕದಂತೆ ಬಳಸಿಕೊಂಡ ಇವರ ಬರವಣಿಗೆಯ ತಾಕತ್ತು ಬಹುದೊಡ್ಡದು.
        ಗೋರ್ಟ್ ಬಳಿಯ ಕೂಲ್ ಪಾರ್ಕ್‌ನಲ್ಲಿ ಎಸ್ಟೇಟ್ ಹೊಂದಿರುವ ಸರ್ ವಿಲಿಯಂ ಹೆನ್ರಿ ಗ್ರೆಗೊರಿ ಎಂಬ ತನಗಿಂತ ೩೫ ವರ್ಷ ಹಿರಿಯರಾಗಿದ್ದ ವಿಧುರನನ್ನು ೪ ಮಾರ್ಚ್ ೧೮೮೦ ರಂದು ಡಬ್ಲಿನ್‌ನ ಸೇಂಟ್ ಮಥಿಯಾಸ್ ಚರ್ಚ್‌ನಲ್ಲಿ ವಿವಾಹವಾದರು. ಸಾಹಿತ್ಯಿಕ ಮತ್ತು ಕಲಾತ್ಮಕ ಆಸಕ್ತಿಗಳನ್ನು ಹೊಂದಿರುವ ಸುಶಿಕ್ಷಿತ ವ್ಯಕ್ತಿಯಾಗಿದ್ದ ಮತ್ತು ಕೂಲ್ ಪಾರ್ಕ್‌ನಲ್ಲಿರುವ ಮನೆಯಲ್ಲಿ ದೊಡ್ಡ ಗ್ರಂಥಾಲಯ ಮತ್ತು ಅಪಾರವಾದ ಕಲಾ ಸಂಗ್ರಹವನ್ನು ಹೊಂದಿದ್ದ ಸರ್ ವಿಲಿಯಂ ಅವರು ಸಿಲೋನ್ (ಈಗಿನ ಶ್ರೀಲಂಕಾ) ಗವರ್ನರ್ ಹುದ್ದೆಯಿಂದ ನಿವೃತ್ತರಾಗಿದ್ದರು. ಈ ಹಿಂದೆ ಕೌಂಟಿ ಗಾಲ್ವೇಗೆ ಸಂಸತ್ ಸದಸ್ಯರಾಗಿ ಹಲವಾರು ಬಾರಿ ಸೇವೆ ಸಲ್ಲಿಸಿದ್ದರು.  ಅವರ ಲಂಡನ್‌ನಲ್ಲಿರುವ ಮನೆಯಲ್ಲಿ ರಾಬರ್ಟ್ ಬ್ರೌನಿಂಗ್, ಲಾರ್ಡ್ ಟೆನ್ನಿಸನ್, ಜಾನ್ ಎವೆರೆಟ್ ಮಿಲೈಸ್ ಮತ್ತು ಹೆನ್ರಿ ಜೇಮ್ಸ್ ಸೇರಿದಂತೆ ಆ ಕಾಲದ ಅನೇಕ ಪ್ರಮುಖ ಸಾಹಿತ್ಯ ಮತ್ತು ಕಲಾತ್ಮಕ ವ್ಯಕ್ತಿಗಳು ಪ್ರತಿವಾರ ಸೇರುತ್ತಿದ್ದರು. ಅವರ ಒಬ್ಬನೆ ಮಗ ೧೮೮೧ರಲ್ಲಿ ಜನಿಸಿದ ರಾಬರ್ಟ್ ಗ್ರೆಗೊರಿ ಮೊದಲ ವಿಶ್ವಯುದ್ಧದಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿರುವಾಗ ನಿಧನರಾದರು. ಈ ಘಟನೆಯು ಡಬ್ಲ್ಯೂ. ಬಿ. ಯೀಟ್ಸ್ ಅವರಿಂದ "ಆನ್ ಐರಿಶ್ ಏರ್ಮ್ಯಾನ್ ಫಾರ್ಸೀಸ್ ಹಿಸ್ ಡೆತ್", "ಇನ್ ಮೆಮೋರಿ ಆಫ್ ಮೇಜರ್ ರಾಬರ್ಟ್ ಗ್ರೆಗೊರಿ"  ಮತ್ತು 'ಶೇಫರ್ಡ್ ಆಂಡ್ ಗೋಥರ್ಡ್' ಎಂಬ ಕವನಗಳನ್ನು ಬರೆಯಲು ಸ್ಪೂರ್ತಿ ನೀಡಿತು.      

              ಗ್ರೆಗೊರಿಸ್ ದಂಪತಿಗಳು ಸಿಲೋನ್, ಭಾರತ, ಸ್ಪೇನ್, ಇಟಲಿ ಮತ್ತು ಈಜಿಪ್ತ ಮುಂತಾದ ಕಡೆ ಪ್ರವಾಸ ಕೈಗೊಂಡಿದ್ದರು.  ೧೮೮೨-೮೩ರಲ್ಲಿ ಈಜಿಪ್ತ್ ಪ್ರವಾಸದಲ್ಲಿದ್ದಾಗ ಇಂಗ್ಲಿಷ್ ಕವಿ ವಿಲ್ಫ್ರಿಡ್ ಸ್ಕ್ಯಾವೆನ್ ಬ್ಲಂಟ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು. ಈ ಕುರಿತು ಲೇಡಿ ಗ್ರೆಗೊರಿ ತಪ್ಪಿತಸ್ಥ ಭಾವನೆಯನ್ನೂ ಹೊಂದಿದ್ದರು. ಈ ಸಮಯದಲ್ಲಿ 'ಎ ವುಮನ್ಸ್ ಸಾನೆಟ್ಸ್' ಎಂಬ ಹನ್ನೆರಡು ಪ್ರೇಮ ಕವನಗಳ ಸರಣಿಯನ್ನು ಬರೆದು ಬ್ಲಂಟ್‌ರವರಿಗೆ ಅರ್ಪಿಸಿದರು. ನಂತರ ೧೮೯೨ರಲ್ಲಿ ಬ್ಲಂಟ್‌ರವರು ಅಗಸ್ಟಾ ಗ್ರೆಗರಿಯವರ ಒಪ್ಪಿಗೆ ಪಡೆದು ಆ ಕವನಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ತನ್ನ ಹೆಸರಿನಲ್ಲಿ ವಿಲಿಯಂ ಮೋರಿಸ್‌ನವರ ಕೆಲ್ಮ್‌ಸ್ಕಾಟ್‌ನ ಆವೃತ್ತಿಗಳಲ್ಲಿ ಪ್ರಕಟಿಸಿದರು. ಆದರೆ ಅಚ್ಚರಿಯ ವಿಷಯವೆಂದರೆ ಆ ಸಮಯದಲ್ಲಿ ಬ್ಲಂಟ್‌ರವರ ಪ್ರೇಯಸಿಯಾಗಿದ್ದ ಮೋರಿಸ್‌ರವರ ಪತ್ನಿ ಜೇನ್ 'ಅತ್ಯಂತ ಸುಂದರವಾದ ಹಾಗೂ ಸರಾಗವಾಗಿ ಓದಿಸಿಕೊಂಡು ಹೋಗುವ ಯಾವುದೇ ಹಿಂಜರಿಕೆಯಿಲ್ಲದೆ ಬರೆದಂತಹ ಕವಿತೆಗಳು' ಎಂದು ಹೊಗಳಿದರು. ಬ್ಲಂಟ್ ಹಾಗೂ ಅಗಸ್ಟಾ ಗ್ರೆಗೋರಿ ೧೯೨೨ರಲ್ಲಿ ಬ್ಲಂಟ್ ಸಾಯುವವರೆಗೂ ಸ್ನೇಹಿತರಾಗಿಯೇ ಉಳಿದುಕೊಂಡಿದ್ದರು.

         ಅವರ ನಿಜವಾದ ಹೆಸರಿನಲ್ಲಿ ಪ್ರಕಟಗೊಂಡ ಮೊದಲ ಕೃತಿ ಅರಬಿ ಅಂಡ್ ಹಿಸ್ ಹೌಸ್ಹೋಲ್ಡ್ (೧೮೮೨). ಮೂಲತಃ ಇದೊಂದು ಖೇಡಿವ್‌ನ ದಬ್ಬಾಳಿಕೆಯ ಆಡಳಿತ ಮತ್ತು ಈಜಿಪ್ಟ್‌ನ ಮೇಲೆ ಯುರೋಪಿಯನ್ ಪ್ರಾಬಲ್ಯದ ವಿರುದ್ಧ ಈಜಿಪ್ಟ್ ರಾಷ್ಟ್ರೀಯತಾವಾದಿ ಹಮ್ಮಿಕೊಂಡ ಉರಾಬಿ ದಂಗೆ ಎಂದು ಕರೆಯಲ್ಪಡುವ ಚಳುವಳಿಯ ನಾಯಕ ಅಹ್ಮದ್ ಒರಾಬಿ ಪಾಷಾ ಅವರನ್ನು ಬೆಂಬಲಿಸಲು ೧೮೭೯ರಲ್ಲಿ 'ದಿ ಟೈಮ್ಸ್'ಗೆ ಬರೆದ ಕರಪತ್ರ. ನಂತರ ಅವರು ಈ ಕಿರುಪುಸ್ತಕದ ಬಗ್ಗೆ 'ತನ್ನೊಳಗೆ ಯಾವುದೋ ರಾಜಕೀಯ ಆಕ್ರೋಶ ಅಥವಾ ಶಕ್ತಿ ಹುಟ್ಟಿತ್ತಾದರೂ ಅದು ತನ್ನ ಹಾದಿಯನ್ನು ಚಲಾಯಿಸಿರಬಹುದು ಅಥವಾ ತನ್ನಷ್ಟಕ್ಕೆ ತಾನೇ ಸವೆದು ಹೋಗಿರಬಹುದು' ಎಂದು ಹೇಳುತ್ತಾರೆ.  ಏಕೆಂದರೆ ೧೮೯೩ ರಲ್ಲಿ ಅವರು 'ಎ ಫ್ಯಾಂಟಮ್ಸ್ ಪಿಲ್ಗ್ರಿಮೇಜ್' ಅಥವಾ 'ಹೋಮ್ ರೂಯಿನ್' ಅನ್ನು ಪ್ರಕಟಿಸಿದರು. ವಾಸ್ತವದಲ್ಲಿ ಇದೊಂದು ವಿಲಿಯಂ ಇವಾರ್ಟ್ ಗ್ಲಾಡ್‌ಸ್ಟೋನ್‌ರವರ ಪ್ರಸ್ತಾವಿತ ಎರಡನೇ ಹೋಮ್ ರೂಲ್ ಆಕ್ಟ್ ವಿರುದ್ಧ ರಾಷ್ಟ್ರೀಯತಾವಾದಿ-ವಿರೋಧಿ ಕರಪತ್ರವಾಗಿರುವುದನ್ನು ಗಮನಿಸಬೇಕು.

    ಮದುವೆಯ ನಂತರವೂ ಗದ್ಯ ಬರೆಯುವುದನ್ನು ಮುಂದುವರೆಸಿದ ಅವರು ೧೮೮೩ರ ಚಳಿಗಾಲದಲ್ಲಿ, ಅವರ ಪತಿ ಸಿಲೋನ್ನಲ್ಲಿದ್ದಾಗ, ತಮ್ಮ ಬಾಲ್ಯದ ಮನೆಯ ನೆನಪುಗಳ ಸರಣಿಯನ್ನು 'ಆನ್ ಎಮಿಗ್ರಂಟ್ಸ್ ನೋಟ್ಬುಕ್' ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸುವ ಉದ್ದೇಶದಿಂದ ಬರವಣಿಗೆಯನ್ನು ಮುಂದುವರೆಸಿದರಾದರೂ ಈ ಯೋಜನೆಯನ್ನು ನಂತರ ಕೈಬಿಟ್ಟರು. ೧೮೮೭ರಲ್ಲಿ 'ಓವರ್ ದಿ ರಿವರ್' ಎಂಬ ಕರಪತ್ರಗಳ ಸರಣಿಯನ್ನು ಬರೆದು, ದಕ್ಷಿಣ ಲಂಡನ್‌ನ ಸೌತ್‌ವಾರ್ಕ್‌ನಲ್ಲಿರುವ ಸೇಂಟ್ ಸ್ಟೀಫನ್ಸ್ ಪ್ಯಾರಿಷ್‌ಗೆ ಹಣಕ್ಕಾಗಿ ಮನವಿ ಮಾಡಿದರು.  ಅವರು ೧೮೯೦-೧೮೯೧ರಲ್ಲಿ ಹಲವಾರು ಸಣ್ಣ ಕಥೆಗಳನ್ನು ಬರೆದಿದ್ದರೂ ಇವು ಪ್ರಕಟವಾಗಲಿಲ್ಲ.  ಈ ಅವಧಿಯ ಅವರು ಬರೆದ ಹಲವಾರು ಅಪ್ರಕಟಿತ ಕವಿತೆಗಳೂ ಇವೆ.
            ಮಾರ್ಚ್ ೧೮೯೨ ರಲ್ಲಿ ಸರ್ ವಿಲಿಯಂ ಗ್ರೆಗೊರಿ ನಿಧನರಾದಾಗ, ಲೇಡಿ ಗ್ರೆಗೊರಿ ಶೋಕದಲ್ಲಿ ಮುಳುಗಿ ಕೂಲ್ ಪಾರ್ಕ್‌ಗೆ ಮರಳಿದರು. ಅಲ್ಲಿ ತನ್ನ ಗಂಡನ ಆತ್ಮಕಥೆಯನ್ನು ಸಂಪಾದಿಸಿ ೧೮೯೪ರಲ್ಲಿ ಪ್ರಕಟಿಸಿದರು. "ನಾನು ಮದುವೆಯಾಗದಿದ್ದರೆ, ತೀಕ್ಷ್ಣವಾಗಿ ಸಂಭಾಷಿಸುವ ವಾಕ್ಯಗಳ ಸಂಪತ್ತನ್ನು ನಾನು ಕಲಿಯಬೇಕಿರಲ್ಲ; ನಾನು ವಿಧವೆಯಾಗದಿದ್ದರೆ ಮನಸ್ಸಿಲ್ಲಿ  ನಿರ್ಲಿಪ್ತತೆಯನ್ನು ಕಂಡುಕೊಳ್ಳಬೇಕಾಗಿರಲಿಲ್ಲ.  ಪಾತ್ರದ ಒಳನೋಟಕ್ಕೆ ಅಗತ್ಯವಿರುವ ವರಾಮವನ್ನು ನೀಡಬಹುದಿತ್ತು. ಬೇಕನ್ ಹೇಳುವಂತೆ ಅದನ್ನು ವ್ಯಕ್ತಪಡಿಸಲು ಮತ್ತು ಅರ್ಥೈಸಿಕೊಳ್ಳಲು ಒಂಟಿತನವು ನನ್ನನ್ನು ಶ್ರೀಮಂತಗೊಳಿಸಿದೆ' ಎನ್ನುವ ಮಾತುಗಳ ಅವರ ಮನದಾಳವನ್ನು ತೆರೆದಿಡುತ್ತವೆ.
        ೧೮೯೩ರಲ್ಲಿ ಅರಾನ್ ದ್ವೀಪಗಳಲ್ಲಿನ ಇನಿಶೀರ್‌ಗೆ ಮಾಡಿದ ಪ್ರವಾಸವು ಲೇಡಿ ಗ್ರೆಗೊರಿಯವರನ್ನು ಐರಿಷ್ ಭಾಷೆಯಲ್ಲಿ ಮತ್ತು ಅವರು ವಾಸಿಸುತ್ತಿದ್ದ ಪ್ರದೇಶದ ಜಾನಪದದಲ್ಲಿ ಆಸಕ್ತಿಯನ್ನು ಪುನರ್‌ಎಚ್ಚರಿಸಿತು. ಕೂಲ್‌ನಲ್ಲಿರುವ ಶಾಲೆಯಲ್ಲಿ ಐರಿಶ್ ಪಾಠಗಳನ್ನು ಕಲಿಸುವ ವ್ಯವಸ್ಥೆ ಮಾಡಿದರು. ತನ್ನ ಮನೆಯ ಸುತ್ತಲಿನ ಪ್ರದೇಶದಿಂದ, ವಿಶೇಷವಾಗಿ ಗಾರ್ಟ್ ವರ್ಕ್ ಹೌಸ್‌ನ ನಿವಾಸಿಗಳಿಂದ ಕಥೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಅವಳು ನೇಮಿಸಿಕೊಂಡ ಬೋಧಕರಲ್ಲಿ ಒಬ್ಬರಾದ ನಾರ್ಮಾ ಬೋರ್ತ್ವಿಕ್‌ರವರು ಕೂಲ್‌ಗೆ ಹಲವಾರು ಬಾರಿ ಭೇಟಿ ನೀಡುತ್ತಿದ್ದರು. ಇದರಿಂದಾಗಿ 'ಎ ಬುಕ್ ಆಫ್ ಸೇಂಟ್ಸ್ ಅಂಡ್ ವಂಡರ್ಸ್' (೧೯೦೬), 'ದಿ ಕಿಲ್ಟಾರ್ಟನ್ ಹಿಸ್ಟರಿ ಬುಕ್' (೧೯೦೯) ಮತ್ತು 'ದಿ ಕಿಲ್ಟಾರ್ಟನ್ ವಂಡರ್ ಬುಕ್' (೧೯೧೦) ಸೇರಿದಂತೆ ಹಲವಾರು ಜಾನಪದ ವಸ್ತುಗಳ ಸಂಪುಟಗಳ ಪ್ರಕಟಣೆ ಸಾಧ್ಯವಾಯಿತು. ಐರಿಶ್ ಪುರಾಣಗಳ "ಕಿಲ್ಟಾರ್ಟನೀಸ್" ಆವೃತ್ತಿಗಳ ಹಲವಾರು ಸಂಗ್ರಹಗಳನ್ನು ರಚಿಸಿದರು. ಅದರಲ್ಲಿ 'ಕುಚುಲೇನ್ ಆಫ್ ಮುಯಿರ್ತೆಮ್ನೆ (೧೯೦೨) ಮತ್ತು ಗಾಡ್ಸ್ ಅಂಡ್ ಫೈಟಿಂಗ್ ಮೆನ್ (೧೯೦೩).  ("ಕಿಲ್ಟಾರ್ಟನೀಸ್" ಎಂಬುದು ಕಿಲ್ಟಾರ್ಟ್‌ನ್‌ನಲ್ಲಿ ಮಾತನಾಡುವ ಉಪಭಾಷೆಯನ್ನು ಆಧರಿಸಿ ಇಂಗ್ಲೀಷ್‌ಗೆ ಗೇಲಿಕ್ ಸಿಂಟ್ಯಾಕ್ಸ್‌ನೊಂದಿಗೆ ಲೇಡಿ ಗ್ರೆಗೊರಿ ನೀಡಿದ ಶಬ್ಧ. 'ಕುಚುಲೇನ್ ಆಫ್ ಮುಯಿರ್ತೆಮ್ನೆ'ಗೆ ಬರೆದ ಮುನ್ನುಡಿಯಲ್ಲಿ ಯೀಟ್ಸ್‌ರವರು "ಈ ಪುಸ್ತಕವು ನನ್ನ ಕಾಲದಲ್ಲಿ ಐರ್ಲೆಂಡ್‌ನಿಂದ ಹೊರಬಂದ ಅತ್ಯುತ್ತಮ ಪುಸ್ತಕ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.  

   ೧೮೯೪ರ ಅಂತ್ಯದ ವೇಳೆಗೆ ತನ್ನ ಪತಿಯ ಆತ್ಮಚರಿತ್ರೆಯ ಸಂಪಾದನೆಗೆ ಬಂದ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡ ಲೇಡಿ ಗ್ರೆಗೊರಿ ತನ್ನ ಗಮನವನ್ನು ಮತ್ತೊಂದು ಸಂಪಾದಕೀಯ ಯೋಜನೆಯತ್ತ ತಿರುಗಿಸಿದರು. ಸರ್ ವಿಲಿಯಂ ಗ್ರೆಗೊರಿಯವರ ಅಜ್ಜನ ಪತ್ರವ್ಯವಹಾರದಿಂದ ಮಿಸ್ಟರ್ ಗ್ರೆಗೊರಿಸ್ ಲೆಟರ್-ಬಾಕ್ಸ್ ೧೮೧೩-೩೦ (೧೮೯೮) ಎಂದು ಪ್ರಕಟಿಸಲು ನಿರ್ಧರಿಸಿದರು.  ಇದು ಆ ಅವಧಿಯ ಐರಿಶ್ ಇತಿಹಾಸವನ್ನು ಸಂಶೋಧಿಸುವಂತೆ ಮಾಡಿತು.  ಈ ಕೆಲಸದಿಂದಾದ ಒಂದು ಪರಿಣಾಮವೇನೆಂದರೆ ಇದು ಅವರ ರಾಜಕೀಯ ಮನಸ್ಥತಿಯಲ್ಲಿ ಬದಲಾವಣೆಯನ್ನು ತಂದಿತು. ಹಿಂದಿನ ಹೋಮ್ ರೂಲ್‌ನಲ್ಲಿನ "ಮೃದು" ಯೂನಿಯನಿಸಂನಿಂದ ಐರಿಶ್ ರಾಷ್ಟ್ರೀಯತೆ ಮತ್ತು ರಿಪಬ್ಲಿಕನಿಸಂನ ಕುರಿತು ಖಚಿತವಾದ ಬೆಂಬಲಕ್ಕೆ ಕಾರಣವಾಯಿತು. ಮತ್ತು ನಂತರ ಇದನ್ನು 'ಇಂಗ್ಲೆಂಡ್‌ನ ಕುರಿತಾದ ಇಷ್ಟವಿಲ್ಲದಿರುವಿಕೆ ಮತ್ತು ಅಪನಂಬಿಕೆ" ಎಂದು ವಿವರಿಸಿದರು.

        ಎಡ್ವರ್ಡ್ ಮಾರ್ಟಿನ್‌ರವರು ಲೇಡಿ ಗ್ರೆಗೊರಿಯವರ ನೆರೆಯವರಾಗಿದ್ದರು. ೧೮೯೬ ರಲ್ಲಿ ಅವರ ಮನೆ ತುಲ್ಲಿರಾ ಕ್ಯಾಸಲ್‌ಗೆ ಭೇಟಿ ನೀಡಿದಾಗ ಅಲ್ಲಿ ಡಬ್ಲ್ಯೂ.ಬಿ.ಯೀಟ್ಸ್‌ರನ್ನು ಮೊದಲ ಸಲ ಭೇಟಿಯಾದರು.  ನಂತರದ ಮುಂದಿನ ಒಂದು ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿಈ ಮೂವರ ನಡುವಿನ ಚರ್ಚೆಗಳು ೧೮೯೯ ರಲ್ಲಿ ಐರಿಶ್ ಲಿಟರರಿ ಥಿಯೇಟರ್ ಸ್ಥಾಪನೆಗೆ ಕಾರಣವಾಯಿತು. ಲೇಡಿ ಗ್ರೆಗೊರಿ ಅದಕ್ಕಾಗಿ ನಿಧಿಸಂಗ್ರಹವನ್ನು ಕೈಗೊಂಡರು, ಇದರ ಮೊದಲ ಕಾರ್ಯಕ್ರಮವು ಮಾರ್ಟಿನ್ ಅವರ 'ದಿ ಹೀದರ್ ಫೀಲ್ಡ್' ಮತ್ತು ಯೀಟ್ಸ್‌ರವರ 'ದಿ ಕೌಂಟೆಸ್ ಕ್ಯಾಥ್ಲೀನ್' ಅನ್ನು ಒಳಗೊಂಡಿತ್ತು.
        ಐರಿಶ್ ಲಿಟರರಿ ಥಿಯೇಟರ್ ಪ್ರಾಜೆಕ್ಟ್ ೧೯೦೧ ರವರೆಗೆ ಮುಂದುವರೆಯಿತು, ನಂತರ ಹಣದ ಕೊರತೆಯಿಂದಾಗಿ ಅದು ನಿಂತುಹೋಯಿತು.  ೧೯೦೪ರಲ್ಲಿ ಲೇಡಿ ಗ್ರೆಗೊರಿ, ಮಾರ್ಟಿನ್, ಯೀಟ್ಸ್, ಜಾನ್ ಮಿಲ್ಲಿಂಗ್ಟನ್ ಸೈಂಗ್,  ಆನ್ನಿ ಹಾರ್ನಿಮನ್, ವಿಲಿಯಂ ಮತ್ತು ಫ್ರಾಂಕ್ ಫೇ ಒಟ್ಟಾಗಿ ಐರಿಶ್ ನ್ಯಾಷನಲ್ ಥಿಯೇಟರ್ ಸೊಸೈಟಿಯನ್ನು ರಚಿಸಿದರು. ಇದರ ಮೊದಲ ಪ್ರದರ್ಶನಗಳು ಮೋಲ್ಸ್ವರ್ತ್ ಹಾಲ್ ಎಂಬ ಕಟ್ಟಡದಲ್ಲಿ ನಡೆದವು.  ಲೋವರ್ ಅಬ್ಬೆ ಸ್ಟ್ರೀಟ್‌ಲ್ಲಿರುವ ಹೈಬರ್ನಿಯನ್ ಥಿಯೇಟರ್ ಆಫ್ ವೆರೈಟೀಸ್ ಮತ್ತು ಮಾರ್ಲ್ಬರೋ ಸ್ಟ್ರೀಟ್‌ಲ್ಲಿರುವ ಪಕ್ಕದ ಕಟ್ಟಡವು ಲಭ್ಯವಾದಾಗ, ಹಾರ್ನಿಮನ್ ಮತ್ತು ವಿಲಿಯಂ ಫೇ ಅವರು ಸಮಾಜದ ಅಗತ್ಯತೆಗಳನ್ನು ಪೂರೈಸಲು ಆ ಕಟ್ಟಡವನ್ನು ಖರೀದಿಸಿ ನಾಟಕಗಳ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಲು ಒಪ್ಪಿಕೊಂಡರು.

     ೧೧ ಮೇ ೧೯೦೪ ರಂದು, ಕಟ್ಟಡದ ಬಳಕೆಯ ಹಾರ್ನಿಮನ್ ಪ್ರಸ್ತಾಪವನ್ನು ಸಮಾಜವು ಔಪಚಾರಿಕವಾಗಿ ಒಪ್ಪಿಕೊಂಡಿತು. ಹಾರ್ನಿಮನ್ ಐರ್ಲೆಂಡ್‌ನಲ್ಲಿ ನೆಲೆಸಿರಲಿಲ್ಲವಾದ್ದರಿಂದ, ಅಗತ್ಯವಿರುವ ರಾಯಲ್ ಲೆಟರ್ಸ್ ಪೇಟೆಂಟ್‌ನ್ನು ಲೇಡಿ ಗ್ರೆಗೊರಿ ಹೆಸರಿನಲ್ಲಿ ನೀಡಲಾಯಿತು. ಅವರದೇ ನಾಟಕಗಳಲ್ಲಿ ಒಂದಾದ 'ಸ್ಪ್ರೆಡಿಂಗ್ ದ ನ್ಯೂಸ್'ಅನ್ನು ೨೭ ಡಿಸೆಂಬರ್ ೧೯೦೪ ರ ರಾತ್ರಿ ಪ್ರದರ್ಶಿಸಲಾಯಿತು.  ೧೯೦೭ರ ಜನವರಿಯಲ್ಲಿ ಸೈಂಗೆಯವರ 'ದ ಪ್ಲೇಬಾಯ್ ಆಫ್ ದಿ ವೆಸ್ಟರ್ನ್‌ವರ್ಲ್ಡ್' ಪ್ರದರ್ಶನಗೊಂಡಾಗ ರೈತರ ಕುರಿತಾಗಿ ಇರುವ ಹಾಸ್ಯವನ್ನು ವಿರೋಧಿಸಿ ಪ್ರೇಕ್ಷಕರು ದಂಗೆಯೆದ್ದರು. ಇದರಿಂದಾಗಿ ಉಳಿದ ಪ್ರದರ್ಶನಗಳನ್ನು ಡಂಬ್ಶೋನಲ್ಲಿ ಪ್ರದರ್ಶಿಸಲಾಯಿತು.  ಲೇಡಿ ಗ್ರೆಗೊರಿ ಯೀಟ್ಸ್ ಮಾಡಿದಂತೆ ನಾಟಕದ ಬಗ್ಗೆ ಹೆಚ್ಚು ಯೋಚಿಸಲಿಲ್ಲ, ಆದರೆ ಸೈಂಗೆಯವರನ್ನು ತಾತ್ವಿಕವಾಗಿ ಬೆಂಬಲಿಸಿದರು.  ಗಲಭೆಗಳ ಬಗ್ಗೆ ಯೀಟ್ಸ್‌ಗೆ ಬರೆದ ಪತ್ರದಲ್ಲಿ "ಇದು ಹಲ್ಲುಜ್ಜುವ ಬ್ರಷ್ ಅನ್ನು ಬಳಸುವವರು ಮತ್ತು ಬಳಸದವರ ನಡುವಿನ ಹಳೆಯ ಯುದ್ಧವಾಗಿದೆ."ಎಂದು ಹೇಳಿ ತಮ್ಮ ದೃಷ್ಟಿಕೋನವನ್ನು ತೋರಿದ್ದಾರೆ.

           ಲೇಡಿ ಗ್ರೆಗೊರಿ ಅವರು ೧೯೨೮ ರಲ್ಲಿ ಅನಾರೋಗ್ಯದಿಂದ ನಿವೃತ್ತರಾಗುವವರೆಗೂ ರಂಗಭೂಮಿಯ ಸಕ್ರಿಯ ನಿರ್ದೇಶಕರಾಗಿದ್ದರು. ಈ ಸಮಯದಲ್ಲಿ ಅವರು ೧೯ ಕ್ಕೂ ಹೆಚ್ಚು ನಾಟಕಗಳನ್ನು ಬರೆದರು, ಮುಖ್ಯವಾಗಿ ಅಬ್ಬೆಯಲ್ಲಿ ಪ್ರದರ್ಶಿಸುವುದಕ್ಕೆಂದೇ ಹಲವಾರು ನಾಟಕಗಳನ್ನು ಬರೆದರು.  ಇವುಗಳಲ್ಲಿ ಹೆಚ್ಚಿನವುಗಳನ್ನು ಕೂಲ್ ಪಾರ್ಕ್‌ನ ಸುತ್ತ ಮಾತನಾಡುವ ಹೈಬರ್ನೋ-ಇಂಗ್ಲಿಷ್ ಉಪಭಾಷೆಯಲ್ಲಿ ಬರೆಯಲಾಗಿದೆ, ಇದು ಕಿಲ್ಟಾರ್ಟನ್‌ನ ಹತ್ತಿರದ ಹಳ್ಳಿಯಿಂದ ಕಿಲ್ಟಾರ್ಟಾನೀಸ್ ಎಂದು ವ್ಯಾಪಕವಾಗಿ ಪ್ರಸಿದ್ಧವಾಯಿತು.  ಅವರ ನಾಟಕಗಳು ಅಬ್ಬೆಯಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡರೂ ಅವರ ಜನಪ್ರಿಯತೆಯು ಕುಸಿಯಿತು.  ಐರಿಶ್ ಬರಹಗಾರ ಆಲಿವರ್ ಸೇಂಟ್ ಜಾನ್ ಗೊಗಾರ್ಟಿ  "ಅವಳ ನಾಟಕಗಳ ನಿರಂತರ ಪ್ರಸ್ತುತಿಯು ಅಬ್ಬೆಯನ್ನು ಬಹುತೇಕ ಹಾಳುಮಾಡಿತು".ಎಂದು ವ್ಯಾಖ್ಯಾನಿಸಿದ್ದಾರೆ.  
 
        ಅವರು ಅಬ್ಬೆ ಮಂಡಳಿಯಿಂದ ನಿವೃತ್ತರಾದಾಗ ಗಾಲ್ವೆಯಲ್ಲಿ ವಾಸಿಸತೊಡಗಿದರು.  ಕೂಲ್ ಪಾರ್ಕ್‌ನಲ್ಲಿರುವ ಮನೆ ಮತ್ತು ಡೆಮೆಸ್ನೆಯನ್ನು ೧೯೨೭ ರಲ್ಲಿ ಐರಿಶ್ ಫಾರೆಸ್ಟ್ರಿ ಕಮಿಷನ್‌ಗೆ ಮಾರಾಟ ಮಾಡಲಾಗಿತ್ತು. ಅವರ ಗಾಲ್ವೇ ಮನೆಯು ಐರಿಶ್ ಸಾಹಿತ್ಯ ಪುನರುಜ್ಜೀವನಕ್ಕೆ ಸಂಬಂಧಿಸಿದ ಬರಹಗಾರರಿಗೆ ದೀರ್ಘಕಾಲ ಕೇಂದ್ರಬಿಂದುವಾಗಿತ್ತು ಮತ್ತು ಇದು ಅವರ ನಿವೃತ್ತಿಯ ನಂತರವೂ ಮುಂದುವರೆಯಿತು.  ಮನೆಯ ಮೈದಾನದಲ್ಲಿದ್ದ ಮರದ ಮೇಲೆ, ಸೈಂಗ್, ಯೀಟ್ಸ್ ಮತ್ತು ಅವರ ಕಲಾವಿದ ಸಹೋದರ ಜಾಕ್, ಜಾರ್ಜ್ ಮೂರ್, ಸೀಯಾನ್ ಒ'ಕೇಸಿ, ಜಾರ್ಜ್ ಬರ್ನಾರ್ಡ್ ಶಾ, ಕ್ಯಾಥರೀನ್ ಟೈನಾನ್ ಮತ್ತು ವಯಲೆಟ್ ಮಾರ್ಟಿನ್ ಅವರ ಕೆತ್ತಿದ ಮೊದಲಕ್ಷರಗಳನ್ನು ಕಾಣಬಹುದು.  ಯೀಟ್ಸ್ ಮನೆ ಮತ್ತು ಮೈದಾನದ ಬಗ್ಗೆ ಇವರು  'ದಿ ವೈಲ್ಡ್ ಸ್ವಾನ್ಸ್ ಅಟ್ ಕೂಲ್', 'ಐ ವಾಕ್ಡ್ ಅಮಾಂಗ್‌ತಹೆ ಸೆವೆನ್ ವುಡ್ಸ್ ಆಫ್ ಕೂಲ್', 'ಇನ್ ದಿ ಸೆವೆನ್ ವುಡ್ಸ್', 'ಕೂಲ್ ಪಾರ್ಕ್, ೧೯೨೯' ಮತ್ತು 'ಕೂಲ್  ಪಾರ್ಕ್ ಮತ್ತು ಬ್ಯಾಲಿಲೀ, ೧೯೩೧' ಎಂಬ ಐದು ಕವನಗಳನ್ನು ಬರೆದಿದ್ದಾರೆ.
           ೧೯೩೨ ರಲ್ಲಿ 'ಶ್ರೇಷ್ಠ ಐರಿಶ್ ಮಹಿಳೆ' ಎಂದು ಹೊಗಳಿಸಿಕೊಂಡ ಲೇಡಿ ಗ್ರೆಗೋರಿ  ಸ್ತನ ಕ್ಯಾನ್ಸರ್‌ನಿಂದ ೮೦ನೆ ವಯಸ್ಸಿನಲ್ಲಿ ತಮ್ಮ ಮನೆಯಲ್ಲಿ ನಿಧನರಾದರು. ಅವರ ಮರಣದ ಮೂರು ತಿಂಗಳ ನಂತರ ಕೂಲ್ ಪಾರ್ಕ್‌ನ ಎಲ್ಲ ವಸ್ತುಗಳನ್ನು ಹರಾಜು ಮಾಡಲಾಯಿತು ಮತ್ತು ೧೯೪೧ರಲ್ಲಿ ಮನೆಯನ್ನು ಕೆಡವಲಾಯಿತು.
       ಮರಣದ ನಂತರವೂ ಅವರ ನಾಟಕಗಳು ಆಗಾಗ್ಗೆ ಪ್ರದರ್ಶನಗೊಂಡಿವೆ. ಅವರ ರೈತ ಹಾಸ್ಯಗಳು ಮತ್ತು ಜಾನಪದವನ್ನು ಆಧರಿಸಿದ ಕಲ್ಪನೆಗಳು ಮತ್ತು ಅಬ್ಬೆ ಥಿಯೇಟರ್‌ಗಾಗಿ ಅವರ ಕೆಲಸಗಳು ೧೯ ನೇ ಶತಮಾನದ ಉತ್ತರಾರ್ಧದಲ್ಲಿ ಐರಿಶ್ ಸಾಹಿತ್ಯಿಕ ಪುನರುಜ್ಜೀವನದಲ್ಲಿ ಗಣನೀಯ ಪಾತ್ರವನ್ನು ವಹಿಸಿದವು ಎಂಬುದು ಬಹುಮುಖ್ಯವಾದುದು. ಅವರ ಡೈರಿ ಹಾಗೂ ಜರ್ನಲ್‌ನ ಬರಹಗಳು ೨೦ನೇ ಶತಮಾನದ ಮೊದಲ ಮೂರು ದಶಕಗಳಲ್ಲಿ ಐರಿಶ್ ಸಾಹಿತ್ಯಿಕ ಇತಿಹಾಸದ ಬಗ್ಗೆ ಶ್ರೀಮಂತ ಮಾಹಿತಿಯ ಮೂಲವನ್ನು ಒದಗಿಸುವ ಆಕರಗಳು ಎಂದು ಪರಿಗಣಿಸಲ್ಪಟ್ಟಿದೆ.
          ಅವಳ ಕುಚುಲೇನ್ ಆಫ್ ಮುಯಿರ್ತೆಮ್ನೆ ಅಲ್ಸ್ಟರ್ ಸೈಕಲ್ ಕಥೆಗಳಾದ ಡೀಡ್ರೆ, ಕುಚುಲೇನ್, ಮತ್ತು ಟೈನ್ ಬೋ ಕುಯಿಲ್ಂಜ್ ಕಥೆಗಳ ಉತ್ತಮ ಪುನರಾವರ್ತನೆ ಎಂದು ಈಗಲೂ ಪರಿಗಣಿಸಲಾಗಿದೆ.  ಥಾಮಸ್ ಕಿನ್ಸೆಲ್ಲಾ  'ಲೇಡಿ ಗ್ರೆಗೋರಿಯ ಕ್ಯುಚುಲೇಲ್ ಆಫ್ ಮುಯಿರ್ತೆಮ್ನೆ, ಕೇವಲ ಒಂದು ಪ್ಯಾರಾಫ್ರೇಸ್, ಅಲ್ಸ್ಟರ್ ಕಥೆಗಳ ಅತ್ಯುತ್ತಮ ಕಲ್ಪನೆಯನ್ನು ನೀಡಿತು ಎಂಬ ದೃಢವಿಶ್ವಾಸವನ್ನು ನಾನು ಹೊಂದಿದ್ದೇನೆ' ಎಂದಿದ್ದಾರೆ.  ಆದಾಗ್ಯೂ ಅವರ  ಆವೃತ್ತಿಯಲ್ಲಿನ ಕಥೆಯ ಕೆಲವು ಅಂಶಗಳನ್ನು ಬಿಟ್ಟುಬಿಟ್ಟಿದೆ.  ವಿಕ್ಟೋರಿಯನ್ ಕುರಿತಾದ ವಿರೋಧಿ ಸಂವೇದನೆಗಳನ್ನು ಹೇಳುವುದರಿಂದ ರಾಜತ್ವವನ್ನು ವಿರೋಧಿಸಿದ ಅಪರಾಧ ಮಾಡುವುದನ್ನು ತಪ್ಪಿಸಲು ಹೀಗೆ ಮಾಡಿರಬಹುದೆಂದು ಊಹಿಸಲಾಗಿದೆ, ಇವರ ಕೃತಿಗಳು ಐರಿಶ್‌ಗಾಗಿ ಗೌರವಯುತ ಪುರಾಣವನ್ನು ಪ್ರಸ್ತುತಪಡಿಸುವ ಪ್ರಯತ್ನವೆಂಬುದನ್ನು ಅಲ್ಲಗಳೆಯುವಂತಿಲ್ಲ. ವಿಮರ್ಶಕರು ಅವರ ಕೃತಿಗಳಲ್ಲಿನ ಬೌಡ್ಲರೈಸೇಷನ್‌ಗಳನ್ನು ಹೆಚ್ಚು ಆಕ್ರಮಣಕಾರಿಯಾಗಿ ಎಂದು ಪರಿಗಣಿಸುತ್ತಾರೆ. ಲೈಂಗಿಕತೆಯ ಮುಕ್ತ ಅಭಿವ್ಯಕ್ತಿ ಎಂದೂ ಹೇಳಿದ್ದಾರೆ. ಸ್ಟ್ಯಾಂಡಿಶ್ ಒ'ಗ್ರಾಡಿಯಲ್ಲಿ ತನ್ನ ಸಮಕಾಲೀನ ಪುರುಷರಿಗಿಂತ ಮುಕ್ತವಾಗಿ ಮಾತನಾಡಿದ್ದನ್ನು ಕಾಣಬಹುದು.
           ನವೆಂಬರ್ ೨೦೨೦ಕ್ಕಿಂತ ಮೊದಲು ಡಬ್ಲಿನ್‌ನ  ಟ್ರಿನಿಟಿ ಕಾಲೇಜ್ ಲೈಬ್ರರಿಯ ನಲವತ್ತು ಬಸ್ಟ್‌ಗಳು ಈ ಹಿಂದೆ ಪುರುಷರನ್ನು ಮಾತ್ರ ಪ್ರತಿನಿಧಿಸುತ್ತಿದ್ದವು. ಇದೀಗ ನಾಲ್ಕು ಹೆಚ್ಚುವರಿ ಮಹಿಳೆಯರ ಬಸ್ಟ್‌ಗಳನ್ನು ನಿಯೋಜಿಸುತ್ತಿದೆ. ಅವುಗಳಲ್ಲಿ ಒಂದು 'ಬುದ್ಧಿವಂತ ವ್ಯಕ್ತಿಯಂತೆ ಯೋಚಿಸುವುದು, ಆದರೆ ಸಾಮಾನ್ಯ ಜನರಂತೆ ತನ್ನನ್ನು ತಾನು ವ್ಯಕ್ತಪಡಿಸುವುದು.' ಎನ್ನುವ ಅರಿಸ್ಟಾಟಲ್‌ನ ಮಾತನ್ನು ಧ್ಯೇಯವಾಕ್ಯದಂತೆ ಪಾಲಿಸಿದ ಲೇಡಿ ಗ್ರೆಗೊರಿ ಅವರ ಬಸ್ಟ್ ಎಂದು ಘೋಷಿಸಿರುವುದು ಹೆಮ್ಮೆಯ ವಿಷಯ.  
lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220722_4_4




 

1 comment:

  1. ನಿರಂತರವಾಗಿ ಓದಿಸುತ್ತಿರಿ ಅದ್ಭುತವಾದ ಲೇಖನಗಳನ್ನ ಕೊಡುವ ನಿಮಗೆ ಧನ್ಯವಾದಗಳು

    ReplyDelete