Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Tuesday, 5 July 2022

ನಿಜ ಬದುಕಿನ ಜಂಜಾಟ

ನಿಜ ಬದುಕಿನ ಜಂಜಾಟ

ಅರ್ಥವಾಗುತ್ತಿದೆ ಈಗೀಗ  ಇಷ್ಟಿಷ್ಟೇ 
ಸುಖವೆಂದರೆ ಏನೆಂಬುದು 
ನಿಧಾನವಾಗಿ ಈರುಳ್ಳಿಯ ಸಿಪ್ಪೆ ಸುಲಿದು 
ಪದರ ಬಿಡಿಸಿದ ಹಾಗೆ 

ಏಳುಸುತ್ತಿನ ಕೋಟೆಯೊಳಗೆ ಬಂಧಿಯಾದ 
ಏಳು ಮಲ್ಲಿಗೆ ತೂಕದ 
ಬಳುಕಾಡುವ ರಾಜಕುಮಾರಿಯನ್ನು 
ಅದೆಲ್ಲಿಂದಲೋ ಕುದುರೆಯೇರಿ 
ಬಂದ ಸುಂದರಾಂಗ
ಕಾವಲಿಗಿದ್ದ ರಕ್ಕಸನನ್ನು ಕೊಂದು 
ಒಲಿಸಿ ವಿವಾಹವಾದ ನಂತರ 
ತಪ್ಪದೆ ಹೇಳುತ್ತೇವಲ್ಲ 
ಬದುಕಿದರು ಇಬ್ಬರೂ ಸುಖವಾಗಿ 
ನೂರು ವರ್ಷಗಳ ಕಾಲ 
ಎಂಬ ಸುಳ್ಳಿನ 
ಕಥೆ ಕಟ್ಟಿದಂತಲ್ಲ ಎನ್ನುವುದು 

ಶುರುವಾಗುತ್ತದೆ ಅನಂತ ಕೋಟಿ 
ಕಷ್ಟ ಕಾರ್ಪಣ್ಯಗಳೆಲ್ಲ 
ಮದುವೆಯಾಗಿ, ಮೊದಲ ಹಸಿಬಿಸಿಯ
ಕಾವುಗಟ್ಟಿ ಹುರಿಗೊಂಡದ ದೇಹದ 
ಮೈ ಬಿಸಿಯೆಲ್ಲ ಇಳಿದು 
ತುಸು ವಿರಮಿಸಿ 
ಆಚೀಚೆ ನೋಡ ತೊಡಗಿದ ಮೇಲೆ 

ಕನಸಿನ ಕನ್ಯೆಯಲ್ಲ ಈಕೆ 
ಮೊದಲು ಕನವರಿಸಿ ಕಾತರಿಸಿದಂತಿಲ್ಲ 
ಮೈ ಬಣ್ಣ ತುಸು ಕಪ್ಪು 
ಮೊಂಡು ಮೂಗು, ದೊಡ್ಡ ಹಣೆ 
ಇದ್ದುದರಲ್ಲಿ  ಪರವಾಗಿಲ್ಲ 
ನೀಳವಾದ ಕಡುಗಪ್ಪು ಕೂದಲು 
ತನ್ನಂತಹ ಅಚ್ಚ ಬಿಳುಪಿನ ಗಂಡಿಗೆ 
ತಕ್ಕವಳಲ್ಲ ಎಂಬ ಹಳಹಳಿಕೆ 

ಅವಳಿಗೂ ಅವಳದ್ದೇ ಕೊರಗು 
ಗಂಡಸು ಚಂದವಿದ್ದರಷ್ಟೇ ಸಾಕೆ? 
ಬೇಡವೆ ಸಂಸಾರ ಸಾಗಿಸಲು 
ಕೈ ತುಂಬ ಸಂಬಳ? 
ಚಂದ ನೋಡಿ ಬಣ್ಣಗೆಟ್ಟ ಆತಂಕ ಇವಳಿಗೆ 

ಒಬ್ಬರಿಗೊಬ್ಬರು ಹಾಗೆ ಹೀಗೆಂದು 
ಹೀಗಳೆದು ಬೈಯ್ದಾಡಿಕೊಳ್ಳುವ
ನಡುವಿನ ಚಿಕ್ಕ ಸಮಯದಲ್ಲೇ 
ತೀರಿಸಿಕೊಂಡ  ದೇಹದ ಕಾವಿಗೆ 
ಹುಟ್ಟಿದ ಮಗು 

ಅರ್ಥವಾಗಿದೆ ಈಗ ಸುಖವೇನೆಂಬುದು 
ಜಗಳವಾಡದೆ ತುಸು ಸಮಾಧಾನದಲಿ 
ಕಳೆದರೆ ಒಂದು ದಿನ 
ಜಗದ ನಿಜದ ಸುಖ ಎನ್ನುವ ಸತ್ಯ




8 comments:

  1. ಅಥ೯ ಕಳೆದುಕೊಳ್ಳುತ್ತಿರುವ ಸಂಬಂಧಗಳ ಬಗ್ಗೆ ಸುಂದರ ವಿಶ್ಲೇಷಣೆ......

    ReplyDelete
  2. ಅಥ೯ ಕಳೆದುಕೊಳ್ಳುತ್ತಿರು ಸಂಬಂಧಗಳ ಬಗ್ಗೆ ಸುಂದರ ವಿಶ್ಲೇಷಣೆ...........ಅಥ೯ವತ್ತಾದ ಶಬ್ಗಗಳ ಮೂಲಕ

    ReplyDelete
  3. ಸುಖಕ್ಕೊಂದು ಸಮಾಧಾನಕರ ವ್ಯಾಖ್ಯೆ! ಸುಂದರ ಕವನ,

    ReplyDelete
  4. ಇಷ್ಟವಾಯಿತು

    ReplyDelete
  5. ಇಷ್ಟವಾಯಿತು ಕವಿತೆ

    ReplyDelete