Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Thursday 7 July 2022

ಸಾವಿರ ಬಣ್ಣಗಳ ವಿಸ್ಮಯ

ಸಾವಿರ ಬಣ್ಣಗಳ ವಿಸ್ಮಯ 

ನಿನ್ನ ನಗು ಚಂದ ಎನ್ನುತ್ತಾನೆ 
ಬಿರಿದ ತುಟಿಗಳ ಗಮನಿಸುತ್ತ 
ನಿನ್ನ ಹಲ್ಲೂ ಕೂಡ ಎಂದು 
ಕೇಳಿಯೂ ಕೇಳಿಸದಂತೆ 

ನಕ್ಕಾಗಲೆಲ್ಲ ಆತ 
ತಪ್ಪದೆ ಹೇಳುವ ಮಾತಿದು 
ಸರಿಯಾಗಿ ಕೇಳದ ಅರ್ಧ ಗೊಣಗುಟ್ಟುವ 
ಇನ್ನರ್ಧ ಕ್ಷೀಣ ದನಿಯಲ್ಲಿ 
ಅಥವಾ ಮಾತು ತುಟಿ ಮೀರದಂತೆ 
ಒಳಗೊಳಗೆ ಬೊಬ್ಬಿರಿದು 
ಕೇಳಿಸಿದರೆ ಇಡಿ ಜಗತ್ತು 
ನೋಡಬೇಕಿತ್ತು ತಿರುತಿರುಗಿ ಎನ್ನುವ ಹಾಗೆ 

ಕೇಳಬೇಡಿ ನನ್ನನ್ನು 
ಮನದೊಳಗೆ ಆಡಿದ ಮಾತು 
ಕೇಳಿಸಿದ್ದಾದರೂ ಹೇಗೆ 
ಎಂಬ ಮೂರ್ಖ ಪ್ರಶ್ನೆ 

ಕಣ್ಣಾಲಿಗಳ ಅಗಲಿಸಿ 
ಕಂಡೂ ಕಾಣದಂತೆ ತುಟಿಯರಳಿಸಿ 
ಎದೆಯ ಮೇಲಿಟ್ಟು ಅಂಗೈ 
ಮನಸ ಸಮಾಧಾನಿಸುವಂತೆ 
ನವಿರಾಗಿ ತನ್ನನ್ನೆ ತಾನು ನೇವರಿಸಿಕೊಳ್ಳುತ್ತ 
ಮರುಕ್ಷಣವೆ ಕಣ್ಣೊಳಗೆ 
ಇಣುಕಿಣುಕಿ ಮರೆಯಾಗುವ ನಾಚಿಕೆ
ಕಂಡಾಗಲೆಲ್ಲ ಆತ ಹೇಳಿದ್ದೇನೆಂಬುದು 
ಹೇಳದೆಯೂ ಅರ್ಥವಾಗಿಬಿಡುತ್ತದೆ. 

ಆದರೂ ಸೋಗು ಹಾಕುತ್ತೇನೆ 
ಏನೂ ಅರಿವಾಗದಂತೆ 
ಓರೆಗಣ್ಣಲ್ಲಿ ನಸುನಾಚುವ ಮುಖವನ್ನೇ
ನೋಡುತ್ತೇನೆ ಕದ್ದೂ ಕದ್ದು 

ಕೆಲವೊಮ್ಮೆ ಎಲ್ಲ ಹಳವಂಡಗಳ ಮೀರಿ 
ತುಟಿಯೆರಡಾಗಿ ಧ್ವನಿ ಹೊರಬಂದು 
ನನ್ನವರೆಗೂ ತಲುಪಿದಾಗ 
ನಟಿಸುತ್ತೇನೆ ಕೋಪಿಸಿದಂತೆ  ಮೊದಮೊದಲು 
ಕಾಣಲಿಲ್ಲವೆ ತುಟಿಯ ಕೆಳಗಿನ ಮಚ್ಚೆ 
ಚಂದವಿಲ್ಲವೆ ಅದು? 
ರೇಗುತ್ತೇನೆ ಕಣ್ಣು ಅರಳಿಸಿ 
ಕಟ್ಟೆ ಮೀರಿ ಪ್ರವಾಹವಾಗುವ 
ನಗುವನ್ನು ತಡೆಯಲೆತ್ನಿಸುತ್ತ 

ಸುಮ್ಮನೆ ನೇವರಿಸಬೇಕೆಂದು 
ಅರಿವಾಗದೆ ಮೇಲೆದ್ದ ಕೈಯ್ಯನ್ನು 
ಬಲವಂತವಾಗಿ ಕಟ್ಟಿ ಹಾಕಿದ್ದು 
ಅರಿಯಲಾರದಷ್ಟು ದಡ್ಡಿಯೇನಲ್ಲ ಬಿಡು 
ಚಂದ ಎಂದರೇನು ಬಂತು
ಲೋಕದ ಗಮನವನ್ನೆಲ್ಲ
ತನ್ನತ್ತ ಸೆಳೆವ ಹಾಲು ಬಿಳುಪಲ್ಲದ  
ನಸುಗಂದು ಕೆನ್ನೆಯ ಮೇಲೆ 
ಸೆಳೆವ ಕಡುಗಪ್ಪು ಮಚ್ಚೆಯ
ಕಂಡಾಗಲೆಲ್ಲ ತುಟಿಯೂರಬೇಕೆನ್ನಿಸುವ 
ಬಯಕೆಯ ಹೇಳುವುದು ಹೇಗೆ 
ಹೇಳದೆ ಮನದಾಳದಲಿ ಹುಗಿದು 
ಗೋರಿಕಟ್ಟಿದ ಕ್ಷಣಗಳ 
ಮರೆಯುವುದಾದರೂ ಹೇಗೆ
ಎಂದೆಲ್ಲ ಮತ್ತೆ ನೀ ಕನವರಿಸುವುದು
ಅರ್ಥ ಮಾಡಿಕೊಳ್ಳಬಹುದು 
ನಿನ್ನ ಕಣ್ಣ ಕದಲಿಕೆಯಿಂದಲೆ  

ಈಗ ನಾನೇ ಸುಮ್ಮನಾಗುತ್ತೇನೆ 
ಅತಿ ಸರ್ವತ್ರ ವರ್ಜ್ಯತೆ ಎಂಬುದನ್ನು 
ಕಂಠಪಾಠ ಹಾಕಿಸಿ 
ಎಲ್ಲವನ್ನೂ ನಿಗ್ರಹಿಸಿಸುವುದನ್ನು 
ಹೇಳಿಕೊಡಲಾಗಿದೆ ಬ್ರೂಣದಿಂದಲೆ 

ಮಾತಿಗೀಗ ಯಾವ ಕೆಲಸವೂ ಇಲ್ಲ 
ಮೌನದೊಳಗೆ ಸಾವಿರ ಚಿಟ್ಟೆಗಳ ಚಿತ್ತಾರ 
ಅರಳಿ ಕಾಮನಬಿಲ್ಲಾಗುವ 
ವಿಸ್ಮಯಕೆ ಪದಗಳ ಹಂಗಿಲ್ಲ 
(ಇಲ್ಲಿನ ಫೋಟೋಗಳು ನಟಿ, ಗೆಳತಿ ಅಕ್ಷತಾ ಪಾಂಡವಪುರ ಅವರದ್ದು)

6 comments:

  1. ಓದಿದೆ. ಕವಿತೆ ಭಾವನೆಗಳನ್ನು ಚೆನ್ನಾಗಿ ಅಭಿವ್ಯಕ್ತಿ ಮಾಡಿದೆ. ಧನ್ಯವಾದಗಳು ಶ್ರೀದೇವಿ.....

    ರಾಬು

    ReplyDelete
  2. 👍Photo mattu kavana Bisi chahadaste Sogasagide 👍👏👏👏👏

    ReplyDelete
  3. ಅಭಿನಂದನೆಗಳು
    ಬಹಳ ಚೆನ್ನಾಗಿದೆ. ಒಂದು ಸುಂದರ ಕಲ್ಪನೆಯ ಒಳಕ್ಕೆ ಕರೆದೊಯ್ಯುತ್ಕತವೆ ಈ ವಿತೆಯ ಸಾಲುಗಳು. ಕವಿ ಹೃದಯ ಅರ್ಥಮಾಡಿಕೊಳ್ಳುವುದು ಕಷ್ಟ. ಅದರಲ್ಲೂ ಕವಿ ಕಲ್ಪನೆಯ ಪರಿಧಿ ದಾಟಿ ಅದರಾಚೆಯ ಜೀವನ ಅರ್ಥ ಮಾಡಿಕೊಳ್ಳುವುದು ಇನ್ನೂ ಕಷ್ಟ.
    ಇತ್ತೀಚಿಗೆ ಕವಿಯೊಬ್ಬರ ಕವನ ಸಂಕಲನಕ್ಕೆ ಒಂದಿಷ್ಟು ಚಿತ್ರಗಳನ್ನು ಮಾಡುವಾಗ ಅಬ್ಬಬ್ಬಾ ಅನಿಸಿತ್ತು. ಕಾರಣ ಒಂದೊಂದು ಕವನವನ್ನೂ ಹತ್ತು ಬಾರಿ ಓದಿಕೊಂಡು ಬರೆದಿದ್ದೇನೆ. ಭಾಷೆಯೊಳಗಿನ ಭಾವ ಅರ್ಥಮಾಡಿಕೊಳ್ಳುವುದೇ ಸವಾಲೆನಿಸಿತು.

    ಕವನ ಆಪ್ತವೆನಿಸಿತು. ಶುಭವಾಗಲಿ. ಇನ್ನಷ್ಟು ಕವನಗಳು ಭುವಿಗಿಳಿದು ಬರಲಿ.

    ReplyDelete
  4. ಚೆಂದವೋ ಚೆಂದ ನಿಮ್ಮ ಕವಿತೆ

    ReplyDelete