Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Wednesday 13 July 2022

ಎಲಿಜಬೆತ್ ಗ್ಯಾಸ್ಕೆಲ್





ಎಲಿಜಬೆತ್ ಗ್ಯಾಸ್ಕೆಲ್

  ೨೯ಸೆಪ್ಟೆಂಬರ್ ೧೮೧೦ರಂದು ಲಂಡನ್‌ನ  ಚೆಲ್ಸಿಯಾದ ಲಿಂಡ್ಸೆರೋನಲ್ಲಿ ಜನಿಸಿದ ಎಲಿಜಬೆತ್ ಗ್ಯಾಸ್ಕೆಲ್ ವಿಕ್ಟೋರಿಯನ್ ಅವಧಿಯ ಜನಪ್ರಿಯ ಮತ್ತು ವಿಮರ್ಶಾತ್ಮಕವಾಗಿ ಅತ್ಯಂತ ಮೆಚ್ಚುಗೆ ಪಡೆದ ಇಂಗ್ಲಿಷ್ ಬರಹಗಾರ್ತಿ.  ಆರು ಕಾದಂಬರಿಗಳು, ಷಾರ್ಲೆಟ್ ಬ್ರಾಂಟೆ ಅವರ ಅಧಿಕೃತ ಜೀವನಚರಿತ್ರೆ, ಹಲವಾರು ಕಾದಂಬರಿಯಂತಹ ಫಿಕ್ಷನ್‌ಗಳು, ಸುಮಾರು ಮೂವತ್ತು ಸಣ್ಣ ಕಥೆಗಳು ಮತ್ತು ಹಲವಾರು ರೇಖಾಚಿತ್ರಗಳನ್ನು ಬರೆದ ಇವರು ಶ್ರೀಮತಿ ಗ್ಯಾಸ್ಕೆಲ್, ಲಿಲಿ, ಕಾಟನ್ ಮ್ಯಾಥರ್ ಮಿಲ್ಸ್ ಮುಂತಾದ ಹೆಸರುಗಳಿಂದಲೂ ಗುರುತಿಸಲ್ಪಟ್ಟಿದ್ದರು.  
         ತಂದೆ  ಬರ್ವಿಕ್ ಅಪಾನ್ ಟ್ವೀಡ್‌ನ ಯುನಿಟೇರಿಯನ್ ಹಾಗೂ ಲಂಕಾಶೈರ್‌ನ ಫೇಲ್‌ವರ್ತ್‌ನಲ್ಲಿ ಮಂತ್ರಿ, ರೈತ, ಬರಹಗಾರ, ಶಿಕ್ಷಕ, ಖಜಾನೆಯ ದಾಖಲೆಗಳ ಸುವ್ಯವಸ್ಥಿತವಾಗಿ ಜೋಡಿಸುವವರಾಗಿದ್ದ ವಿಲಿಯಂ ಸ್ಟೀವನ್ಸನ್. ತಾಯಿ ಲಂಕಾಶೈರ್ ಹಾಗೂ ಚೆಶೈರ್‌ನ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಎಲಿಜಬೆತ್ ಹಾಲೆಂಡ್. ಎಂಟು ಜನ ಮಕ್ಕಳಲ್ಲಿ ಬದುಕುಳಿದ ಇಬ್ಬರು ಎಲಿಜಬೆತ್ ಹಾಗೂ ಸಹೋದರ ಜಾನ್. ಕೊನೆಯ ಮಗಳು ಹುಟ್ಟಿದ ಹದಿಮೂರು ತಿಂಗಳಲ್ಲೇ ತೀರಿಕೊಂಡಾಗ ಆಘಾತಗೊಂಡ ತಾಯಿ ತಂದೆಯಿಂದ ದೂರವಾಗಿದ್ದಳು. ನಂತರ ಅವಳ ಹೆರಿಗೆ ಮಾಡಿದ್ದ ವೈದ್ಯೆ ಕ್ಯಾಥರಿನ್ ಥಾಮ್ಸನ್ ಅವರನ್ನು ೧೮೧೪ರಲ್ಲಿ ಅವಳಿಗೆ ನಾಲ್ಕು ವರ್ಷಗಳಾಗಿದ್ದಾಗ ತಂದೆ ಮರುಮದುವೆಯಾದರು. ಆಸಕ್ತಿದಾಯಕ ವಿಷಯವೆಂದರೆ ಇವರ ತಂದೆ ವಿಲಿಯಂ ಹಾಗೂ ಸಹೋದರ ಜಾನ್ ಇಬ್ಬರಿಗೂ ಭಾರತಕ್ಕೆ ತೆರಳಿ ಅಧಿಕಾರಿಯಾಗುವ ಅಥವಾ ವ್ಯಾಪಾರಿಯಾಗಿ ಲಾಭಗಳಿಸುವ ಬಹುದೊಡ್ಡ ಆಸೆಯಿತ್ತು. ತಂದೆ ಭಾರತದ ಗವರ್ನರ್ ಜನರಲ್ ಆಗಬೇಕಿದ್ದ ಅರ್ಲ್ ಆಫ್ ಲಾಡರ್‌ಡೇಲ್‌ಗೆ ಕಾರ್‍ಯದರ್ಶಿಯಾಗಿ ನೇಮಕಗೊಂಡಿದ್ದರೂ ಅವಕಾಶ ಸಿಕ್ಕಲಿಲ್ಲ. ನೌಕಾಪಡೆಯಲ್ಲಿ ಕೆಲಸ ಮಾಡಲು ಬಯಸಿದ್ದ ಸಹೋದರನಿಗೆ ಸೈನ್ಯ ಸೇರಲು ಆಗದೆ ಈಸ್ಟ್ ಇಂಡಿಯಾ ಕಂಪನಿಯ ಮರ್ಚಂಟ್ ನೇವಿ ವಿಭಾಗ ಸೇರಿದ. ೧೮೨೭ರಲ್ಲಿ ಭಾರತದ ದಂಡಯಾತ್ರೆಗೆ ಹೊರಟಿದ್ದ ಹಡಗಿನಲ್ಲಿದ್ದವನು ನಿಗೂಢವಾಗಿ ಕಣ್ಮರೆಯಾಗಿದ್ದ. ತನಗಿಂತ ಹದಿಮೂರು ವರ್ಷ ದೊಡ್ಡವನಾಗಿದ್ದ ಅಣ್ಣನಿಗೆ ಪತ್ರ ಬರೆಯುತ್ತಿದ್ದ ಎಲಿಜಬೆತ್‌ಳ ಬರವಣಿಗೆಗಾಗಿ ಜರ್ನಲ್ ಇಟ್ಟುಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದ ಆತನ ನಿಗೂಡ ಕಣ್ಮರೆಯನ್ನು ತನ್ನ ಹಲವಾರು ಕಥೆ ಕಾದಂಬರಿಗಳಲ್ಲಿ ಕಳೆದುಹೋದ ಅಥವಾ ಸತ್ತ ಎಂದು ತಿಳಿದುಕೊಂಡ ಪಾತ್ರ ಪುನಃ ಮರಳಿ ಬಂದದ್ದನ್ನು ರೂಪಕವಾಗಿ ಬಳಸಿ ಸಮಾಧಾನಗೊಂಡಿದ್ದನ್ನು ಕಾಣಬಹುದು. ಸಹೋದರನ ಮರಣದ ನಂತರ ಪಾರ್ಶ್ವವಾಯುವಿಗೆ ಒಳಗಾಗಿದ್ದ ತಂದೆಯನ್ನು ಸಮಾಧಾನಪಡಿಸಲು ಹೋಗಿದ್ದ ಎಲಿಜಬೆತ್ ನಂತರ ಇಪ್ಪತ್ತೈದು ವರ್ಷಗಳ ಕಾಲ ತಂದೆ ಹಾಗೂ ಮಲತಾಯಿಯನ್ನು ಭೇಟಿಮಾಡಲಿಲ್ಲ. ಕೌಟುಂಬಿಕ ಹಾಗೂ ತಂದೆ-ತಾಯಿ ಜೊತೆಗಿಲ್ಲದ ನೋವು ಅವರ ಬರವಣಿಗೆಯನ್ನಷ್ಟೇ ಅಲ್ಲದೆ ಮುಂದಿನ ಜೀವನವನ್ನೂ ಬದಲಾಯಿಸಿತು.  

      ಬಾಲ್ಯದಲ್ಲಿ ಚೆಷೈರ್‌ನ ನಟ್ಸ್‌ಫೋರ್ಡ್‌ನಲ್ಲಿ ತಾಯಿಯ ತಂಗಿ ಹನ್ನಾ ಹಾಲೆಂಡ್ ಲಂಬ್ ಜೊತೆ ವಾಸಿಸಬೇಕಾಯಿತು. ಚಿಕ್ಕಮ್ಮನನ್ನು ತಾಯಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಎಲಿಜಬೆತ್ ಅದನ್ನು ಕೆಲವೆಡೆ ಹೇಳಿಕೊಂಡಿದ್ದಾರೆ.  ತಾಯಿಯ ಹಾಲೆಂಡ್ ಕುಟುಂಬದ ಜೊತೆ ಬಾಲ್ಯ, ನಂತರ ಬೋರ್ಡಿಂಗ್ ಶಾಲೆಯಲ್ಲಿ ಐದು ವರ್ಷಗಳನ್ನು ಕಳೆದು ೩೦ಅಗಸ್ಟ್೧೮೩೨ರಂದು ೨೨ನೇ ವಯಸ್ಸಿನಲ್ಲಿ ಯುನಿಟೇರಿಯನ್‌ನಲ್ಲಿ ಮಂತ್ರಿಯಾಗಿದ್ದ ವಿಲಿಯಂ ಗ್ಯಾಸ್ಕೆಲ್‌ರನ್ನು  ನಟ್ಸ್‌ಫೋರ್ಡ್‌ನಲ್ಲಿ ಮದುವೆಯಾಗಿ ಮ್ಯಾಂಚೆಸ್ಟರ್‌ನಲ್ಲಿ ನೆಲೆಸುವವರೆಗೂ ಲಂಡನ್, ನ್ಯೂಕ್ಯಾಸಲ್, ಎಡಿನ್‌ಬರ್ಗ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ತನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರನ್ನು ಭೇಟಿ ಮಾಡಿದರು. ಈ ಮದುವೆಯು ಮುಂದಿನ ಮೂವತ್ಮೂರು ವರ್ಷಗಳ ಕಾಲ ತಾಯಿಯಿಲ್ಲದ ಯುವತಿಗೆ ತನ್ನದೆ ಆದ ಕುಟುಂಬ, ಪರರ ಸೇವೆಯಲ್ಲಿನ ಸಾರ್ಥಕ್ಯಭಾವ ಹಾಗೂ ಬರವಣಿಗೆ ಮುಂತಾದ ತುಂಬ ಇಷ್ಟಪಡುವ ಉಡುಗೊರೆಯನ್ನು ನೀಡಿತು. ಮದುವೆಯ ಆರಂಭಿಕ ವರ್ಷಗಳಲ್ಲಿ ಮ್ಯಾಂಚೆಸ್ಟರ್‌ನ ಕಾರ್ಮಿಕ ವರ್ಗದ ಜೊತೆ ಕೈಗಾರಿಕೆ, ಶೈಕ್ಷಣಿಕ ಯೋಜನೆಗಳಲ್ಲಿ ಪತಿಯೊಂದಿಗೆ ಕೆಲಸ ಮಾಡಿದರು. ಅವರಿಗೆ ಆರು ಮಕ್ಕಳು. ೧೮೩೩ರಲ್ಲಿ ಮೊದಲ ಮಗಳು ತೀರಿಕೊಂಡಳು. ನಂತರ ೧೮೩೫ರಲ್ಲಿ ಮಗಳು ಮರಿಯಾನ್ನೆಯ ಬೆಳವಣಿಗೆಯನ್ನು ದಾಖಲಿಸಲು ಡೈರಿ ಬರೆಯತೊಡಗಿದರು. ನಂತರ ಮರಿಯಾನ್ನೆ ಹಾಗೂ ಅವಳ ತಂಗಿ ಮೆಟಾ ಇಬ್ಬರ ಬಾಲ್ಯದ ಆಟಪಾಠ, ಅವರ ಸಂಬಂಧಗಳ ಕುರಿತು, ತಾಯಿಯಾಗಿ ತಾನು ಮಾಡಬೇಕಾದ ಕರ್ತವ್ಯ, ಮೌಲ್ಯಗಳು, ನಂಬಿಕೆ ಹಾಗೂ ಇತರ ವಿಷಯಗಳ ಕುರಿತು ಡೈರಿಯಲ್ಲಿ ಬರೆಯತೊಡಗಿದರು. ೧೮೩೬ರಲ್ಲಿ ಗಂಡನೊಂದಿಗೆ ಸೇರಿ ಕವಿತೆಗಳನ್ನು ಬರೆದರಾದರೂ ಅವರು ಸ್ವತಂತ್ರವಾಗಿ ಪ್ರಕಟಿಸಿದ ಕೃತಿ 'ಎ ಲೇಡಿ'. ೧೮೪೦ರಲ್ಲಿ 'ದಿ ರೂರಲ್ ಲೈಫ್ ಆಫ್ ಇಂಗ್ಲೆಂಡ್' ಪ್ರಕಟವಾಯಿತು. ನಂತರ 'ನೋಟ್ಸ್ ಆನ್ ಚೆಷೈರ್ ಕಸ್ಟಮ್ಸ್' ಎರಡನೆ ಸಂಪುಟವಾಗಿ ಪ್ರಕಟವಾಯಿತು.
   ಮದುವೆಯಾದ ಹೊಸತರಲ್ಲಿ ತನ್ನ ಗಂಡನ ಜೊತೆ ಭಾನುವಾರದ ರಜಾ ದಿನಗಳಲ್ಲಿ ಶಾಲೆಗಳನ್ನು ಮತ್ತು ಸಂಜೆ ತರಗತಿಗಳನ್ನು ನಡೆಸುತ್ತಿದ್ದರು.  ಮೆಕ್ಯಾನಿಕ್ಸ್ ಇನ್ಸ್ಟಿಟ್ಯೂಟ್ ಫಾರ್ ವರ್ಕಿಂಗ್-ಕ್ಲಾಸ್ ಮೆನ್‌ನ ಸಂಜೆ ಶಾಲೆಯಲ್ಲಿ ವಿಲಿಯಂ ನೀಡಿದ ಉಪನ್ಯಾಸಗಳ ಸರಣಿಗಾಗಿ ವರ್ಡ್ಸ್‌ವರ್ತ್, ಬೈರಾನ್, ಕ್ರ್ಯಾಬ್, ಡ್ರೈಡನ್ ಮತ್ತು ಪೋಪ್ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಎಲಿಜಬೆತ್  ಮ್ಯಾಂಚೆಸ್ಟರ್‌ನಲ್ಲಿ ತನ್ನ ಜೀವನದುದ್ದಕ್ಕೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.  ಜೈಲುಗಳಿಗೆ ಮತ್ತು ಕಾರ್ಖಾನೆಗಳಿಗೆ ಭೇಟಿ ನೀಡುತ್ತಿದ್ದರು.  ವಿದೇಶದ ಮೋಹಕ್ಕೆ ಒಳಗಾಗಿ ಮೋಸಹೋದ ಯುವತಿಯರಿಗೆ ಸಹಾಯ ಮಾಡುವುದು, ತನ್ನ ಮನೆಯಲ್ಲಿ ಬಡವರಿಗೆ ತರಗತಿಗಳನ್ನು ನಡೆಸುವುದು ಅವರ ಹವ್ಯಾಸವಾಗಿತ್ತು.  ಕೋರಲ್ ಲ್ಯಾನ್ಸ್‌ಬರಿ ವರದಿಯಲ್ಲಿ, "ಅವಳ ಪಾಲಿಗೆ ಕೊಳೆಗೇರಿಗಳು ದೂರದಿಂದ ಕಾಣುವ ವಿಚಿತ್ರ ಮತ್ತು ಅನ್ಯಲೋಕವಾಗಿರಲಿಲ್ಲ. ಬದಲಾಗಿ ಬಡತನವನ್ನು ನೋಡುವ ಮತ್ತು ಅನುಭವಿಸುವ ನಿರಾಶಾದಾಯಕ ದರಿದ್ರತೆಯ ಪರಿಚಿತ ಸ್ಥಳಗಳಾಗಿದ್ದವು." ಎಂದು ಹೇಳಲಾಗಿದೆ.
       ಎರಡನೆಯ ಮಗಳು ಮೆಟೊ ಜನಿಸಿದ ಸಂದರ್ಭದಲ್ಲಿ ಅವಳ ಚಿಕ್ಕಮ್ಮ ಅನಾರೋಗ್ಯದಿಂದ ತೀರಿಕೊಂಡರು. ಹೀಗಾಗಿ ಖಿನ್ನತೆಗೊಳಗಾದ ಎಲಿಜಬೆತ್ ಗ್ಯಾಸ್ಕೆಲ್ ಬರವಣಿಗೆಯಲ್ಲಿ ಸಾಂತ್ವನ ಮತ್ತು ಸಮಾಧಾನವನ್ನು ಕಂಡುಕೊಂಡರಲ್ಲದೆ ವಿಲಿಯಂನ ಸಂಶೋಧನೆಗೆ ಸಹಾಯ ಮಾಡುತ್ತ "ದ ಪೊಯೆಟ್ಸ್ ಅಂಡ್ ಪೊಯೆಟ್ರಿ ಆಫ್ ಹಂಬಲ್ ಲೈಫ್" ಕುರಿತು ಉಪನ್ಯಾಸಗಳ ಸರಣಿಯನ್ನು ಬರೆದರು.
     ೧೮೪೧ರಲ್ಲಿ ಕೈಗೊಂಡ ಬೆಲ್ಜಿಯಂ ಹಾಗೂ ಜರ್ಮನಿಯ ಪ್ರವಾಸ ಇವರ ಸಣ್ಣಕಥೆಗಳ ಬರವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿತು. ಮೂರನೇ ಮಗಳು ಫ್ಲಾರೆನ್ಸ್ ಎಲಿಜಬೆತ್ ಗ್ಯಾಸ್ಕೆಲ್ ೧೮೪೨ ರಲ್ಲಿ ಜನಿಸಿದ ಎರಡು ವರ್ಷಗಳ ನಂತರ ಅಂದರೆ ೧೮೪೪ರಲ್ಲಿ ಅವರ ಮೊದಲ ಮಗ ವಿಲಿಯಂನ ಜನನವಾಯಿತಾದರೂ ಹತ್ತುತಿಂಗಳ ನಂತರ ಸ್ಕಾರ್ಲೆಟ್ ಜ್ವರದಿಂದ ಸಾವಿಗೀಡಾದ. ಅವರ ಆಘಾತವನ್ನು ಕಂಡ ಪತಿ ಅವರು  ತನ್ನ ಚಿಕ್ಕಮ್ಮ ಲುಂಬ್‌ನ ಮರಣದ ನಂತರ ಅವಳು ಅನುಭವಿಸಿದಂತಹ ಖಿನ್ನತೆಗೆ ಹೆದರಿ ಬರವಣಿಗೆ ಮಾತ್ರ ಅವಳನ್ನು ಸಮಾಧಾನ ನೀಡುವ ಸಾಮರ್ಥ್ಯವನ್ನು ಹೊಂದಿದೆಯೆಂದು ಅರಿತು ದೊಡ್ಡದೊಡ್ಡ ಪುಸ್ತಕವನ್ನು ಬರೆಯಲು ಸೂಚಿಸಿದನು. ಆದ್ದರಿಂದ, ೧೮೪೫ರಲ್ಲಿ ಅವರು ಮೇರಿ ಬಾರ್ಟನ್ ಅನ್ನು ಬರೆಯಲು ಪ್ರಾರಂಭಿಸಿದರು, ಅದು ಎಲಿಜಬೆತ್ ಗ್ಯಾಸ್ಕೆಲ್‌ರನ್ನು ಆಂಗ್ಲ ಸಾಹಿತ್ಯಿಕ ವಲಯದಲ್ಲಿ ಪ್ರಸಿದ್ಧಿಪಡೆಯುವಂತೆ ಮಾಡಿತು.
ಮೇರಿ ಬಾರ್ಟನ್: ಎ ಟೇಲ್ ಆಫ್ ಮ್ಯಾಂಚೆಸ್ಟರ್ ಲೈಫ್, ಇದನ್ನು ಎಲಿಜಬೆತ್ ಅವರು ಕಾದಂಬರಿ ಎನ್ನುವುದಕ್ಕಿಂತ ಹೆಚ್ಚಾಗಿ "ದುರಂತ ಕವಿತೆ"ಯೆಂದು ವಿವರಿಸಿದರು. ಅವರ ವೈಯಕ್ತಿಕ ದುಃಖ ಮತ್ತು ಮ್ಯಾಂಚೆಸ್ಟರ್‌ನ ದುಡಿಯುವ ಬಡವರ ದುಃಖಗಳ ಬಗ್ಗೆ ಅನುಭವಿಸಿದ ಸಹಾನುಭೂತಿ ಎರಡರಿಂದಲೂ ವಿಷಯವನ್ನು ಆಯ್ದುಕೊಂಡು ಬರೆದ ಕಾದಂಬರಿಯಾಗಿದೆ. ಇದು ತೀವ್ರವಾದ ಹಸಿವು ಮತ್ತು ಚಾರ್ಟಿಸ್ಟ್ ಮತ್ತು ಟ್ರೇಡ್‌ಯೂನಿಯನ್ ಚಳುವಳಿಗಳ ಕುರಿತು ಹೇಳುತ್ತದೆ. ಬೆಂಜಮಿನ್ ಡಿಸ್ರೇಲಿ, ಥಾಮಸ್ ಕಾರ್ಲೈಲ್, ಚಾರ್ಲ್ಸ್ ಕಿಂಗ್ಸ್ಲಿ, ಷಾರ್ಲೊಟ್ ಬ್ರಾಂಟೆ, ಚಾರ್ಲ್ಸ್ ಡಿಕನ್ಸ್, ಮತ್ತು ಮ್ಯಾಥ್ಯೂ ಅರ್ನಾಲ್ಡ್ ಅವರ ಬರಹಗಳಲ್ಲಿ ಕಂಡುಬರುವಂತೆ ಯಜಮಾನರು ಮತ್ತು ಸಾಮಾನ್ಯರ, ಶ್ರೀಮಂತರು ಮತ್ತು ಬಡವರ ಪ್ರತ್ಯೇಕ ಪ್ರಪಂಚದ ಕುರಿತು ಹೇಳಲಾಗಿದೆ.  ಈ ಕಾದಂಬರಿಯು ವಿವಾದವನ್ನು ಹುಟ್ಟುಹಾಕಿತು. ಏಕೆಂದರೆ ಈ ಕಾದಂಬರಿಯ ನಾಯಕ ಜಾನ್ ಬಾರ್ಟನ್ ಹಸಿವು, ಅನ್ಯಾಯಕ್ಕೆ ಒಳಗಾಗಿ ಹತಾಶೆಯಿಂದ ಕಾರ್ಖಾನೆಯ ಮಾಲೀಕನ ಮಗನನ್ನು ಕೊಲ್ಲುತ್ತಾನೆ. ಈ ಚಿತ್ರಣ ಪ್ರಭುತ್ವವನ್ನು ಕೆರಳಿಸಿತು. ೧೮೪೮ರಲ್ಲಿ ಅನಾಮಧೇಯವಾಗಿ ಪ್ರಕಟವಾದ ಈ ಕಾದಂಬರಿಯು ಅದರ ವಿಷಯದ ಸಮಯೋಚಿತತೆಯಿಂದಾಗಿ ಮಾತ್ರವಲ್ಲದೆ ಅದರ ಕಥೆಯ ಶಕ್ತಿ, ಅದರ ಪಾತ್ರಗಳು ಮತ್ತು ನಗರ ಜೀವನದ ಎದ್ದುಕಾಣುವ ಪ್ರಚೋದನೆಯಿಂದಾಗಿ ಉತ್ತಮ ಯಶಸ್ಸನ್ನು ಕಂಡಿತು. ಆದರೆ ಬಹಳ ಬೇಗ ಕಾದಂಬರಿಕಾರ್ತಿ ಯಾರೆಂಬುದು ಎಲ್ಲರಿಗೂ ತಿಳಿಯಿತಲ್ಲದೆ ೧೮೪೯ರಲ್ಲಿ ಲಂಡನ್‌ಗೆ ಭೇಟಿ ನೀಡಿದಾಗ, ಸಾಹಿತ್ಯಿಕ ಸಂಸ್ಥೆಯು ಅವರನ್ನು ಪ್ರಸಿದ್ಧ ವ್ಯಕ್ತಿ ಎಂದು ಪರಿಗಣಿಸಿತು. ಥಾಮಸ್ ಕಾರ್ಲೈಲ್, ಸ್ಯಾಮ್ಯುಯೆಲ್ ರೋಜರ್ಸ್ ಮತ್ತು ಚಾರ್ಲ್ಸ್ ಡಿಕನ್ಸ್ ಅವರಂತಹ ಬರಹಗಾರರನ್ನು ಭೇಟಿಯಾಗುವ ಅವಕಾಶ ನೀಡಿತು.

 ೧೮೪೭ರಲ್ಲಿ  ಕಾಟನ್ ಮ್ಯಾಥರ್‌ಮಿಲ್ಸ್ ಎಂಬ ಗುಪ್ತಹೆಸರಿನಿಂದ ಬರೆದ 'ಲಿಬ್ಬೆ ಮಾರ್ಷಸ್ ತ್ರೀ ಎರಾಸ್' ಕಥೆ ಹೋವಿಟ್ಸ್ ಜರ್ನಲ್‌ನಲ್ಲಿ ಪ್ರಕಟವಾಯಿತು. 'ದಿ ಸೆಕ್ಸ್ಟನ್ಸ್ ಹೀರೋ' ಕಥೆಯನ್ನು ಪ್ರಕಟಿಸುವಾಗಲೂ ಇದೇ ಗುಪ್ತ ಹೆಸರಿನಿಂದ ಬರೆದಿದ್ದರು. 
ಆದರೆ 'ಕ್ರಿಸ್‌ಮಸ್ ಸ್ಟಾರ್ಮ್ಸ ಆಂಡ್ ಸನ್‌ಶೈನ್' ಕಥೆಯ ನಂತರ ತನ್ನ ಗುಪ್ತನಾಮವನ್ನು ಬಿಟ್ಟುಬಿಟ್ಟರು.

            ೧೮೫೦ರಲ್ಲಿ ಡಿಕನ್ಸ್‌ಗೆ ಪತ್ರ ಬರೆದು ವೈಶ್ಯಾವಾಟಿಕೆ ಮಾಡುತ್ತಿರುವ ಆರೋಪದ ಹಿನ್ನಲೆಯಲ್ಲಿ ಜೈಲಿನಲ್ಲಿರುವ ಪ್ಲಾಸಿ ಎಂಬ ಯುವತಿಗೆ ಸಹಾಯ ಮಾಡಬೇಕೆಂದು ಕೇಳಿದರು. ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಅವಕಾಶವಿಲ್ಲದ ಯುವತಿಯರಿಗೆ ಸಹಾಯ ಮಾಡಲು ಡಿಕನ್ಸ್ ಆಸಕ್ತಿ ಹೊಂದಿದ್ದಾರೆಂದು ತಿಳಿದು ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದರು. ಈ ಯುವತಿಯ ಕಥೆಯು ೧೮೫೩ರಲ್ಲಿ ಪ್ರಕಟವಾದ ರೂತ್ ಎಂಬ ಕಾದಂಬರಿ ಬರೆಯಲು ಪ್ರೇರೇಪಿಸಿತು, ಇದು ವಿಕ್ಟೋರಿಯನ್ ಯುಗದ "ಪತನಗೊಂಡ ಮಹಿಳೆ"ಯ ದುಃಸ್ಥಿತಿಗಾಗಿ ಲೇಖಕರು ಸೃಷ್ಟಿಸುವ ಸಹಾನುಭೂತಿಯಿಂದಾಗಿ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿತು. ಮ್ಯಾಂಚೆಸ್ಟರ್‌ನ  ನೆರೆಹೊರೆಯವರೂ ಸಹ ಅವರ ಈ ದೃಷ್ಟಿಕೋನವನ್ನು ಒಪ್ಪಿಕೊಳ್ಳಲಿಲ್ಲ.  ಆದಾಗ್ಯೂ ಸಾಹಿತ್ಯಿಕ ಮತ್ತು ಧಾರ್ಮಿಕ ಮುಖಂಡರು ಸಾಮಾಜಿಕ ಸಮಸ್ಯೆಯ ಆಯ್ಕೆ ಮತ್ತು ಪರಿಹಾರದಲ್ಲಿ ಗ್ಯಾಸ್ಕೆಲ್ ತೋರಿದ ಧೈರ್ಯವನ್ನು ಶ್ಲಾಘಿಸುವ ಮೂಲಕ ಸಾಮಾಜಿಕ ಸಹಾನುಭೂತಿಯ ಅಲೆಯನ್ನು ಅವರ ಪರವಾಗಿ ತಿರುಗಿಸಿದರು.
೧೮೫೦ರಲ್ಲಿ, ಡಿಕನ್ಸ್ ತನ್ನ ಹೊಸ ಸಾಪ್ತಾಹಿಕ, ಹೌಸ್‌ಹೋಲ್ಡ್ ವರ್ಡ್ಸ್‌ಗೆ ಬರವಣಿಗೆ ನೀಡುವಂತೆ ಗ್ಯಾಸ್ಕೆಲ್‌ಗೆ ಆಹ್ವಾನ ನೀಡಿದ್ದರು. ಆಹ್ವಾನವನ್ನು ಒಪ್ಪಿಕೊಂಡ ಎಲಿಜಬೆತ್ ಮ್ಯಾಂಚೆಸ್ಟರ್ ಜೀವನವನ್ನು ಆಧರಿಸಿದ "ಲಿಜ್ಜೀಲೀ" ಕಳುಹಿಸಿದರು. ನಿಯಮಿತವಾಗಲ್ಲದಿದ್ದರೂ ೧೮೫೧ರಿಂದ ೧೮೫೩ರವರೆಗೆ ಕಳುಹಿಸಿದ ರೇಖಾಚಿತ್ರಗಳ ಸರಣಿಯಿಂದ ಓದುಗರು ಪ್ರಭಾವಿತರಾದರು. ಅದು ಅವರ ಅತ್ಯಂತ ಪ್ರೀತಿಯ ಪುಸ್ತಕ 'ಕ್ರಾನ್‌ಫೋರ್ಡ್'.


 ಕ್ರ್ಯಾನ್‌ಫೋರ್ಡ್ ಕಾದಂಬರಿಯು ಮೇರಿ ಬಾರ್ಟನ್ ಮತ್ತು ರೂತ್‌ಗಿಂತ ಸಂಪೂರ್ಣವಾಗಿ ವಿಭಿನ್ನವಾದ ಟಿಪ್ಪಣಿಯನ್ನು ಹೊಂದಿದೆ. ಮೊದಲಿನ ಕಾದಂಬರಿಗಳಂತೆ ನಗರದ ಸಾಮಾಜಿಕ ಸಮಸ್ಯೆಗಳ ಬದಲು ಕ್ರ್ಯಾನ್‌ಫೋರ್ಡ್ ಗ್ರಾಮೀಣ ಭಾಗದ ನಿಧಾನಗತಿಯ ಜೀವನಶೈಲಿಯನ್ನು ಹೊಂದಿದೆ.  ಮೇರಿ ಬಾರ್ಟನ್‌ನ ದುರಂತ ಮತ್ತು ರುತ್‌ನ ಪಾಥೋಸ್ ಹಾಸ್ಯ ಮತ್ತು ಸೌಮ್ಯವಾದ ವಿಡಂಬನೆ ಇದರಲ್ಲಿಲ್ಲ. ಹಳ್ಳಿಯನ್ನು ಆಳುವ ವಿಲಕ್ಷಣ ವಯಸ್ಸಾದ ಮಹಿಳೆಯರು  ಅವರ ಸದೃಢ ಆರ್ಥಿಕತೆ ಮತ್ತು ಸೌಹಾರ್ದಯುತ ಸಾಮಾಜಿಕ ಜೀವನದ ಕುರಿತು ಈ ಕಾದಂಬರಿ ಹೇಳುತ್ತದೆ. 
ಹೌಸ್‌ಹೋಲ್ಡ್ ವರ್ಡ್ಸ್‌ನಲ್ಲಿ ಕ್ರ್ಯಾನ್‌ಫೋರ್ಡ್‌ನ  ಯಶಸ್ಸಿನ ಕಾರಣದಿಂದ ಡಿಕನ್ಸ್ ಮತ್ತೊಂದು ಕೃತಿ ಬರೆಯಲು ಹೇಳಿದಾಗ ಸ್ವಲ್ಪ ಹಿಂಜರಿಕೆಯೊಂದಿಗೆ ಧಾರಾವಾಹಿಯನ್ನು ಬರೆಯಲು ಒಪ್ಪಿಕೊಂಡರು. 
ನಾರ್ತ್ ಆಂಡ್ ಸೌತ್ ಎಂಬ ಈ ಕಾದಂಬರಿಯಲ್ಲಿ ಮೇರಿ ಬಾರ್ಟನ್‌ನ "ಮಾಸ್ಟರ್ಸ್ ಮತ್ತು ಮೆನ್" ಥೀಮ್‌ಗೆ ಗ್ಯಾಸ್ಕೆಲ್ ಹಿಂತಿರುಗುತ್ತಾರೆ, ನಾರ್ತ್ ಆಂಡ್ ಸೌತ್ ಕಂತುಗಳನ್ನು ಬರೆಯುವಾಗ ಅವರು ಅನುಭವಿಸಿದ ಒತ್ತಡದಿಂದಾಗಿ ೧೮೫೫ರವರೆಗೆ ಮತ್ತೊಂದು ಪ್ರಮುಖ ಬರವಣಿಗೆಯ  ಉತ್ಸಾಹತೋರಲಿಲ್ಲ.  


 ಅಕಾಲಿಕ ಗರ್ಭಧಾರಣೆಯ ತೊಡಕುಗಳ ಪರಿಣಾಮದಿಂದ ಷಾರ್ಲೊಟ್ ಬ್ರಾಂಟೆಯ ತೀರಿಕೊಂಡಾಗ ಆಘಾತಕ್ಕೊಳಗಾಗಿದ್ದ  ಎಲಿಜಬೆತ್ ಗ್ಯಾಸ್ಕೆಲ್ 'ಲೈಫ್ ಆಫ್ ಷಾರ್ಲೆಟ್ ಬ್ರಾಂಟೆ' ಬರೆದರು. ಲ್ಯಾನ್ಸ್‌ಬರಿಯ ಪ್ರಕಾರ, ಇದು "ಹತ್ತೊಂಬತ್ತನೇ ಶತಮಾನದ ಅತ್ಯುತ್ತಮ ಜೀವನಚರಿತ್ರೆ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅತ್ಯುತ್ತಮವಾದ ಜೀವನಚರಿತ್ರೆ ಎಂದು ಗುರುತಿಸಲ್ಪಟ್ಟಿದೆ." ೧೮೫೭ರಲ್ಲಿ ಇದು ಪ್ರಕಟವಾಯಿತು.

   ನೆಪೋಲಿಯನ್‌ನ ಯುದ್ಧಗಳ ಸಮಯದಲ್ಲಿ ಯಾರ್ಕ್‌ಷೈರ್ ಮೀನುಗಾರಿಕಾ ಹಳ್ಳಿಯಲ್ಲಿ ಇಂಗ್ಲೆಂಡಿನ ಕರಾವಳಿಯ ಹಳ್ಳಿಗಳಿಂದ ಜನರನ್ನು ಅಪಹರಿಸಿ ಸೇವೆಗೆ ಒಳಪಡಿಸಿದ್ದನ್ನು 'ಸಿಲ್ವಿಯಾಸ್ ಲವರ್ಸ್' ಎಂಬ ಐತಿಹಾಸಿಕ ಕಾದಂಬರಿಯಲ್ಲಿ ಹೇಳಿದ್ದಾರೆ.  ನೌಕಾಪಡೆಯಲ್ಲಿ. ತನ್ನ ಪ್ರೀತಿಯನ್ನು ಪ್ರತಿಸ್ಪರ್ಧಿಯೊಂದಿಗೆ ಮದುವೆಯಾದುದನ್ನು ಕಂಡುಕೊಳ್ಳಲು ವರ್ಷಗಳ ನಂತರ ಕಣ್ಮರೆಯಾಗುವ ಹಾರ್ಪೂನರ್ ಈ ಕಥೆಯಲ್ಲಿ ಗ್ಯಾಸ್ಕೆಲ್ ಯಾರ್ಕ್‌ಷೈರ್ ಕರಾವಳಿಯ ದುರಂತ ಕಥಾವಸ್ತುವನ್ನು ಹೇಳುತ್ತಾರೆ.


೧೮೬೪ರಿಂದ ೧೮೬೬ರವರೆಗೆ ಕಾರ್ನ್‌ಹಿಲ್ ಮ್ಯಾಗಜೀನ್‌ನಲ್ಲಿ ಪ್ರಕಟವಾದ 'ಕಸಿನ್ ಫಿಲ್ಲಿಸ್' ಮತ್ತು 'ಅನ್‌ಫಿನಿಷ್ ವೈವ್ಸ್ ಆಂಡ್ ಡಾಟರ್ಸ್' ಗ್ಯಾಸ್ಕೆಲ್ ಅವರ ಶ್ರೇಷ್ಠ ಸಾಧನೆ ಎಂದು ಹೆಚ್ಚಿನ ವಿಮರ್ಶಕರು ಒಪ್ಪುತ್ತಾರೆ.  
ಈ ಎರಡೂ ಕೃತಿಗಳು ಅವರ ಬಾಲ್ಯದ ಹಳ್ಳಿಯ ನೆನಪುಗಳಿಗೆ ಹಿಂತಿರುಗುತ್ತವೆ. 'ಕಸಿನ್ ಫಿಲ್ಲಿಸ್' ಒಂದು ಸಿದ್ದಾಂತಬದ್ಧ ಕಾದಂಬರಿ, ಸಮಯ ಮತ್ತು ಸಂಪ್ರದಾಯದಲ್ಲಿ ಬೇರೂರಿರುವ ಕೃಷಿಯ ಜೀವನ ವಿಧಾನದ ನಡುವಿನ ಪರಿವರ್ತನೆಯ ಕ್ಷಣದಲ್ಲಿ ಯುವತಿ ಮತ್ತು ಕುಟುಂಬವನದ್ಧಿದು ವಿವರಿಸುತ್ತದೆ. ಹೊಸ ಜಗತ್ತಿನಲ್ಲಿ ತನ್ನ ಅದೃಷ್ಟವನ್ನು ಹುಡುಕುವ ಯುವ ರೈಲ್ರೋಡ್ ಇಂಜಿನಿಯರ್ ತನ್ನ ಹಳೆಯ-ಪ್ರಪಂಚದ ಹಳ್ಳಿಯಲ್ಲಿ ಬಿಟ್ಟುಹೋದ ಫಿಲ್ಲಿಸ್ ಕಥೆಯ ಮೂಲಕ ದುರಂತ ಮತ್ತು ನಾಸ್ಟಾಲ್ಜಿಯಾ ಎರಡರಲ್ಲೂ ಒಂದು ಸೂಕ್ಷ್ಮ ಮನಸ್ಥಿತಿಯನ್ನು ಸೃಷ್ಟಿಸಿದೆ.
     ವೈವ್ಸ್ ಅಂಡ್ ಡಾಟರ್ಸ್, ಗ್ಯಾಸ್ಕೆಲ್ ಅವರ ಜೀವನದ ಕಾದಂಬರಿ, ಮಾಲಿ ಗಿಬ್ಸನ್ ಅವರ ತಾಯಿಯಿಲ್ಲದ ಬಾಲ್ಯದ  ಕಥೆಯಲ್ಲಿ ಗ್ಯಾಸ್ಕೆಲ್ ಅವರ ಸಂಪೂರ್ಣ ಅನುಭವಗಳು ಮತ್ತು ಕುಟುಂಬ ಸಂಬಂಧಗಳ ಸ್ವರೂಪದ ಪ್ರತಿಬಿಂಬಗಳನ್ನು ಪ್ರತಿಬಿಂಬಿಸುತ್ತದೆ, ಅವಳ ಪ್ರೀತಿಯ ತಂದೆ ನಿಷ್ಪ್ರಯೋಜಕ ಮರುಮದುವೆ, ಮಲತಾಯಿಯೊಂದಿಗಿನಸರಿಯಿರದ ಸಂಬಂಧ, ವೈಯಕ್ತಿಕ ಮೌಲ್ಯ, ಪ್ರೀತಿ ಮತ್ತು ಸಹಿಷ್ಣುತೆಯ ಮೌಲ್ಯವನ್ನು ಹೇಳುತ್ತದೆ. ಕಥಾವಸ್ತುವು ಗ್ಯಾಸ್ಕೆಲ್ ಅವರ ಪ್ರೌಢ ಪ್ರತಿಭೆಯನ್ನು ಜಗತ್ತಿಗೆ ತೆರೆದಿಟ್ಟಿದೆ.
 ೧೮೬೫ರಲ್ಲಿ ನಿಧನರಾದ ಎಲಿಜಬೆತ್ ಗ್ಯಾಸ್ಕೆಲ್ ತನ್ನ ಹೆಣ್ಣುಮಕ್ಕಳು ಬೆಳೆದು ಸಂತೋಷವಾಗಿರುವುದನ್ನು ಕಂಡರು. ಯುರೋಪಿನಾದ್ಯಂತ ಪ್ರಯಾಣಿಸುತ್ತ ತಾನು ಪ್ರೀತಿಸಿದ ಮತ್ತು ಮೆಚ್ಚಿದ ಜನರೊಂದಿಗೆ ನಿರಂತರ ಸ್ನೇಹವನ್ನು ಹೊಂದಿದ್ದರು. ಮ್ಯಾಂಚೆಸ್ಟರ್‌ನ ದುಡಿಯುವ ಜನರಿಂದ ಅಪಾರವಾಗಿ ಪ್ರೀತಿಸಲ್ಪಟ್ಟರು. ೧೯ನೇ ಶತಮಾನವನ್ನು ಇಂಗ್ಲಿಷ್ ಕಾದಂಬರಿಯ ಮಹಾನ್ ಅವಧಿಯನ್ನಾಗಿ ಮಾಡುವಲ್ಲಿ ಚಾರ್ಲ್ ಡಿಕನ್ಸ್, ಜಾರ್ಜ್‌ಎಲಿಯಟ್ ಮತ್ತು ಷಾರ್ಲೆಟ್ ಬ್ರಾಂಟೆ ಅವರ ವಿಶಿಷ್ಟ ಗುಂಪಿಗೆ ಸೇರಿದ ಲೇಖಕಿ ಎಂದು ಗೌರವಿಸಲ್ಪಟ್ಟರು.
ಕುಟುಂಬ ಸಂಬಂಧಗಳು ಎಲಿಜಬೆತ್ ಗ್ಯಾಸ್ಕೆಲ್ ಅವರ ಬರವಣಿಗೆಯ ಕೇಂದ್ರವಾಗಿದೆ;  ಕುಟುಂಬ ಸಂಬಂಧಗಳ ಸಂಕೀರ್ಣ ಮತ್ತು ಸೂಕ್ಷ್ಮ ಸ್ವಭಾವದ ಬಗ್ಗೆ ಗ್ಯಾಸ್ಕೆಲ್‌ರವರ ಕಾಳಜಿ ಅಥವಾ ಕೊರತೆಯನ್ನು ಅವರ ಸ್ವಂತ ಬಾಲ್ಯದಲ್ಲಿ ಗುರುತಿಸಬಹುದು. ಷಾರ್ಲೆಟ್ ಬ್ರಾಂಟೆ ಅಥವಾ ಜಾರ್ಜ್ ಎಲಿಯಟ್ (ಮೇರಿ ಆನ್ನೆ ಇವಾನ್ಸ್ )ಯಂತೆ ಗ್ಯಾಸ್ಕೆಲ್ ಜೀವನೋಪಾಯಕ್ಕಾಗಿ ಬರವಣಿಗೆಯ ಮೇಲೆ ಅವಲಭಿತರಾಗಿರಲಿಲ್ಲ. ಅವರಲ್ಲಿ ವೃತ್ತಿಪರತೆಯ ಪ್ರಜ್ಞೆಯಿತ್ತು.  ತಾಯಿಯ ಪ್ರೀತಿಯ ಕೊರತೆಯಿಂದ ಬಾಲ್ಯದಲ್ಲಿ ಅನುಭವಿಸಿದ ತನ್ನ ಜೀವನವನ್ನು ನೆನಪಿಸಿಕೊಳ್ಳುತ್ತಿದ್ದ ಅವರು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಿದ ನಂತರವೇ ತನ್ನ ಬರವಣಿಗೆಯನ್ನು ಕೈಗೆತ್ತಿಕೊಂಡರು.  ಆಂಗಸ್ ಈಸನ್ ಪ್ರಕಾರ, ಅವರ ಕೊನೆಯ ಮಗು ಜೂಲಿಯಾ ಬ್ರಾಡ್‌ಫೋರ್ಡ್ ಗ್ಯಾಸ್ಕೆಲ್ ೧೮೪೬ರಲ್ಲಿ ಜನಿಸಿದ ನಂತರ, ಎಲಿಜಬೆತ್ ಸಂಜೆಯ ಸಮಯದಲ್ಲಿ, ಎಲ್ಲಾ ಮನೆಯ-ಕುಟುಂಬದ ಕರ್ತವ್ಯಗಳನ್ನು ಮಾಡಿ ಮುಗಿಸಿದ ನಂತರ ಅಥವಾ ರಜಾದಿನಗಳಲ್ಲಿ ಅಥವಾ ಕುಟುಂಬದ ಅನುಪಸ್ಥಿತಿಯಲ್ಲಿ ಹೀಗೆ ಅವಕಾಶ ಸಿಕ್ಕಾಗಲೆಲ್ಲಾ ಬರೆದರು.
ತನಗೆ ತಿಳಿಯದ ಕೈಗಾರಿಕೆಗಳ ಬಗ್ಗೆ ಬರೆದು ಪ್ರಸಿದ್ಧಿ ಹೊಂದಲು ಬಯಸುತ್ತಿರುವ ಲೇಖಕಿ ಎಂದು ಆಗಿನ ವಿಮರ್ಶಕರ ಕಟುಪದಗಳ ಜೊತೆಗೆ ಕಾರ್ಮಿಕರನ್ನು ಓಲೈಸುವ ಮತ್ತು ಹೆಣ್ಣುಮಕ್ಕಳನ್ನು ವೈಭವಿಕರಿಸುವ ಬರಹಗಾರ್ತಿ ಎಂಬ ಆಪಾದನೆಗೂ ಒಳಗಾಗಬೇಕಾಯಿತು.ಆದರೆ ನಂತರದ ವರ್ಷಗಳಲ್ಲಿ ಬಡವರ ಕುರಿತಾದ ನೈಜ ಕಾಳಜಿಯನ್ನು ಬಿಂಬಿಸುವ ಇವರ ಕಾದಂಬರಿಗಳು ವಿಮರ್ಶಕರಷ್ಟೇ ಅಲ್ಲದೆ ದೊಡ್ಡ ಪ್ರಮಾಣದ ಓದುಗರ ಮೆಚ್ಚುಗೆಯನ್ನು ಗಳಿಸಲು ಯಶಸ್ವಿಯಾಯಿತಲ್ಲದೆ ಹಲವಾರು ಕೃತಿಗಳು ಬಿಬಿಸಿಯಲ್ಲಿ ಪ್ರಸಾರಗೊಂಡು ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿದವು..
ಎಲಿಜಬೆತ್ ಗಾಸ್ಕೆಲ್ ಕೃತಿಗಳು-

Novels

Mary Barton (1848)
Cranford (1851–53)
Ruth (1853)
North and South (1854–55)
My Lady Ludlow (1858)
A Dark Night's Work (1863)
Sylvia's Lovers (1863)
Wives and Daughters: An Everyday Story (1864–66)

Novellas and collections

The Moorland Cottage (1850)
Mr. Harrison's Confessions (1851)
The Old Nurse's Story (1852)
Lizzie Leigh (1855)
Round the Sofa (1859)
Lois the Witch (1859; 1861)
Cousin Phillis (1864)
The Grey Woman and Other Tales (1865)

Short stories

"Libbie Marsh's Three Eras" (1847)
"The Sexton's Hero" (1847)
"Christmas Storms and Sunshine" (1848)
"Hand and Heart" (1849)
"Martha Preston" (1850)
"The Well of Pen-Morfa" (1850)
"The Heart of John Middleton" (1850)
"Disappearances" (1851)
"Bessy's Troubles at Home" (1852)
"The Old Nurse's Story" (1852)
"Cumberland Sheep-Shearers" (1853)
"Morton Hall" (1853)
"Traits and Stories of the Huguenots" (1853)
"My French Master" (1853)
"The Squire's Story" (1853)
"Company Manners" (1854)
"Half a Life-time Ago" (1855)
"The Poor Clare" (1856)
"The Doom of the Griffiths" (1858)
"An Incident at Niagara Falls" (1858)
"The Sin of a Father" (1858), later republished as "Right at Last"
"The Manchester Marriage" (1858)[35]
"The Haunted House" (1859)[36]
"The Ghost in the Garden Room" (1859), later "The Crooked Branch"
"The Half Brothers" (1859)
"Curious If True" (1860)
"The Grey Woman" (1861)
"Six weeks at Heppenheim" (1862)[37]
"The Cage at Cranford" (1863)[37]
"How the First Floor Went to Crowley Castle" (1863), republished as "Crowley Castle"[37]
"A Parson's Holiday" (1865)


Non-fiction

"Notes on Cheshire Customs" (1840)
An Accursed Race (1855)
The Life of Charlotte Brontë (1857)
"French Life" (1864)
"A Column of Gossip from Paris" (1865)


Poetry

Sketches Among the Poor (with William Gaskell; 1837)
Temperance Rhymes (1839)

No comments:

Post a Comment