Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Wednesday 6 July 2022

ಹಲವು ವಿಶಿಷ್ಟಗಳ ಸಮ್ಮಿಳಿತ ಫ್ರಾನ್ಸಿಸ್ ಬರ್ನಿ


ಹಲವು ವಿಶಿಷ್ಟಗಳ ಸಮ್ಮಿಳಿತ ಫ್ರಾನ್ಸಿಸ್ ಬರ್ನಿ

 ೧೩ ಜೂನ್ ೧೭೫೨ ರಂದು ನಾರ್ಫೋಕ್‌ನಗರದ ಕಿಂಗ್ಸ್‌ನ ಲಿನ್ ಎಂಬಲ್ಲಿ ಬ್ರಿಟೀಷ್ ಸಂಗೀತದ ಇತಿಹಾಸಕಾರನಾಗಿದ್ಸ ಚಾರ್ಲ್ಸ್ ಬರ್ನಿ (೧೭೨೬-೧೮೧೪) ಮತ್ತು ಅವನ ಮೊದಲ ಪತ್ನಿ  ಡುಬಾಯಿಸ್ ಎನ್ನುವ ಫ್ರೆಂಚ್ ನಿರಾಶ್ರಿತರ ಮಗಳಾಗಿದ್ದ ಎಸ್ತರ್ ಸ್ಲೀಪ್ (೧೭೨೫-೧೭೬೨) ಎನ್ನುವವರ ಆರು ಮಕ್ಕಳಲ್ಲಿ ಮೂರನೆಯ ಮಗಳಾಗಿ ಜನಿಸಿದ ಫ್ರಾನ್ಸಿಸ್ ಬರ್ನಿ ತನ್ನ ಬಾಲ್ಯದಿಂದಲೇ ಅಂದರೆ ವರ್ಣಮಾಲೆಯನ್ನು ಕಲಿಯುವಷ್ಟು ಚಿಕ್ಕ ವಯಸ್ಸಿನಲ್ಲೇ ಓಡ್ಸ್, ನಾಟಕಗಳು, ಹಾಡುಗಳು, ಪ್ರಹಸನಗಳು ಮತ್ತು ಕವಿತೆಗಳನ್ನು ರಚಿಸುವಲ್ಲಿ ಆಸಕ್ತಿ ಹೊಂದಿದ್ದರು. ಆದರೆ ಕೆಲವು ವಿದ್ವಾಂಸರು ಹೇಳುವಂತೆ ಆಕೆ ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದರು. ಆದರೂ ಅದನ್ನು ಮೀರುವ ಪ್ರಯತ್ನವಾಗಿ ಫ್ರಾನ್ಸಿಸ್ ಬರ್ನಿ ಬರವಣಿಗೆಯನ್ನು ಪ್ರಾರಂಭಿಸಿದರು ಎನ್ನಲಾಗುತ್ತದೆ. ೧೭೬೭ರಲ್ಲಿ ಅವರ ತಂದೆ ಕಿಂಗ್ಸ್ ಲಿನ್ ವೈನ್‌ನ ಶ್ರೀಮಂತ ವ್ಯಾಪಾರಿಯ ವಿಧವೆ ಪತ್ನಿ ಎಲಿಜಬೆತ್ ಅಲೆನ್ ಅವರನ್ನು ಮದುವೆಯಾಗಲು ಮನೆ ಬಿಟ್ಟು ಓಡಿಹೋಗಿದ್ದರು. ಬಾಲ್ಯವು ವಿಕ್ಷಿಪ್ತತೆಯಿಂದ ಕೂಡಿದ್ದರೂ ಎರಡೂ ಕುಟುಂಬಗಳು ಒಂದಾದ ನಂತರ ಪರಿಸ್ಥಿತಿ ತಿಳಿಗೊಂಡಿತು. ಮನೆಯಲ್ಲಿ ಫ್ಯಾನ್ಸಿ ಎಂದು ಕರೆಯಿಸಿಕೊಳ್ಳುತ್ತಿದ್ದ ಫ್ರಾನ್ಸಿಸ್ ಬರ್ನಿ ಹುಡುಗಿಯರು ಬರೆಯುವುದು ಸರಿಯಲ್ಲ ಎಂದು ವಾದಿಸುತ್ತಿದ್ದ ಅವಳ ಚಿಕ್ಕಮ್ಮನ ಮಾತು ನಂಬಿ ತನ್ನ ೧೫ನೇ ವಯಸ್ಸಿನಲ್ಲಿ ತಾನು ಆವರೆಗೆ ಬರೆದದ್ದೆಲ್ಲವನ್ನೂ ಸುಟ್ಟು ಹಾಕುವ ಅನಿವಾರ್‍ಯತೆಗೆ ಸಿಲುಕಬೇಕಾಯಿತು. ಆದರೆ ಫ್ರಾನ್ಸಿಸ್ ಬರ್ನಿಗೆ ತನ್ನ ಬರೆಯುವ ಉತ್ಸಾಹ ಹಾಗೂ ಒಳ ತುಡಿತವನ್ನು ತಡೆಯಲಾಗಲಿಲ್ಲ. ಪುನಃ ೧೬ ನೇ ವಯಸ್ಸಿನಲ್ಲಿ ಬರೆಯಲು ಪ್ರಾರಂಭಿಸಿದ ಅವರು ಒಂದು ಡೈರಿಯ ರೂಪದಲ್ಲಿ ತನ್ನ ವೈಯಕ್ತಿಕ ವಿವರ ಹಾಗೂ ಮೂರನೆ ಜಾರ್ಜ್‌ನ ಆರಂಭಿಕ ಆಳ್ವಿಕೆಯಿಂದ ವಿಕ್ಟೋರಿಯನ್ ಯುಗದ ಉದಯದವರೆಗಿನ ಸಾರ್ವಜನಿಕ ಘಟನೆಗಳನ್ನು ಬರೆಯಲಾರಂಭಿಸಿದರು.


  ಫ್ರಾನ್ಸಿಸ್ ಬರ್ನಿ ತಮ್ಮ ಡೈರಿಯ ಮೊದಮೊದಲ ಭಾಗಗಳಲ್ಲಿ ತನ್ನ ತಂದೆಯ ಮೂಲಕ ಪರಿಚಯಗೊಂಡ ಡೇವಿಡ್ ಗ್ಯಾರಿಕ್, ಸರ್ ಜೋಶುವಾ ರೆನಾಲ್ಡ್ಸ್, ಜೇಮ್ಸ್ ಬೋಸ್ವೆಲ್, ಮತ್ತು ಸ್ಯಾಮ್ಯುಯೆಲ್ ಜಾನ್ಸನ್ ಮುಂತಾದ ಗಣ್ಯರ ಜೊತೆ ಕಳೆದಂತಹ ಅದ್ಭುತ ಸಮಯಗಳ ಕುರಿತು ಬರೆದಿದ್ದಾರೆ. ಫ್ರಾನ್ಸಿಸ್ ಇಪ್ಪತ್ತಾರು ವರ್ಷದವರಿದ್ದಾಗ ಅವರ ಮೊದಲ ಕಾದಂಬರಿ ಎವೆಲಿನಾ (೧೭೭೮) ಅವರ ಹೆಸರನ್ನು ಗೌಪ್ಯವಾಗಿರಿಸಿ ಪ್ರಕಟವಾಯಿತು. ಅವರ ಸಮುದಾಯದ ಹುಡುಗಿಯರು ಕಾದಂಬರಿಯನ್ನು ಓದುವುದು ಹಾಗೂ ಬರೆಯುವುದು ನಿಷಿದ್ಧವಾಗಿತ್ತು. ಹೀಗಾಗಿ ಈ ಕಾದಂಬರಿಯನ್ನು ಪ್ರಾನ್ಸಿಸ್ ಬರ್ನಿಯವರ ಕೈ ಬರಹದಲ್ಲಿ ಬರೆಯದೆ ರಹಸ್ಯವಾಗಿ ಬೇರೆಯವರ ಕೈಯ್ಯಲ್ಲಿ ಬರೆಸಲಾಗಿತ್ತು. ಏಕೆಂದರೆ ಅವರ ತಂದೆಯ ಬರವಣಿಗೆಯನ್ನು ಇವರೇ ಬರೆಯುತ್ತಿದ್ದುದರಿಂದ ಅವರ ಅಕ್ಷರಗಳು ಪ್ರಕಾಶಕರಿಗೆ ಪರಿಚಿತವಾಗಿತ್ತು. ಕೇವಲ ತನ್ನ ಸಹೋದರಿಯರಿಗೆ ಹಾಗೂ ಚಿಕ್ಕಮ್ಮನಿಗೆ ಮಾತ್ರ ನಿಜ ವಿಷಯ ತಿಳಿಸಿದ್ದ ಫ್ರಾನ್ಸಿಸ್ ಬರ್ನಿ ನಂತರ ತನ್ನ ತಂದೆಗೆ ಅಂಜುತ್ತ ತಿಳಿಸಿದ್ದಳು. ಎವೆಲಿನಾ ಕಾದಂಬರಿಯಿಂದ ಫ್ರಾನ್ಸಿಸ್ ಬರ್ನಿ ಇಂಗ್ಲಿಷ್‌ನಲ್ಲಿ ಹೊಸದೊಂದು ದಾರಿಯನ್ನೇ ಸೃಷ್ಟಿಸಿದಂತಾಗಿತ್ತು. ಇದರಲ್ಲಿ ಸಮಾಜದಲ್ಲಿನ ಮಹಿಳೆಯರನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸಂದರ್ಭಗಳಿಗೆ ತಕ್ಕಂತೆ ಚಿತ್ರಿಸಲಾಗಿದೆ. ಈ ಕಾದಂಬರಿಯ ವಿಶಿಷ್ಟ ನಿರೂಪಣೆ ಹಾಗೂ ವಿಡಂಬನಾತ್ಮಕ ಹಾಸ್ಯದಿಂದಾಗಿ ತಕ್ಷಣ ಜನಪ್ರೀಯತೆ ಗಳಿಸಿತು.  ಅವರ ಕಾಮಿಡಿ ಆಫ್ ಮ್ಯಾನರ್ಸ್ ಪ್ರಕಾರವು ಜೇನ್ ಆಸ್ಟೆನ್, ಮಾರಿಯಾ ಎಡ್ಜ್ವರ್ತ್ ಮತ್ತು ೧೯ ನೇ ಶತಮಾನದ ಇತರ ಬರಹಗಾರರಿಗೆ ಹೊಸದೊಂದು ಮಾರ್ಗವನ್ನು ತೋರಿಸಿತು. ಎವೆಲಿನಾ ಅವರ ಸಾಮಾಜಿಕ ವಿಡಂಬನೆ, ವಿಷಯ ವಸ್ತುವಿನಲ್ಲಿರುವ ನೈಜತೆ ಮತ್ತು ಬುದ್ಧಿವಂತಿಕೆಯು ಅದನ್ನು ಅದ್ಭುತ ಜನಪ್ರಿಯತೆ ಪಡೆಯಲು ಸಹಾಯಕವಾಯಿತು. ಮತ್ತು ಈ ಜನಪ್ರೀಯತೆಯಿಂದಾಗಿ ಎಲ್ಲೆಡೆ ಬರಹಗಾರ ಎಂದು  ಭಾವಿಸಲಾದ ಚಾರ್ಲ್ಸ್ ಬರ್ನಿ ಅವರ ಮಗಳಾದ ಫ್ರಾನ್ಸಿಸ್ ಬರ್ನಿಯವರ ಗುರುತನ್ನು ಊಹಿಸಲು ಲಂಡನ್ ಸಮಾಜಕ್ಕೆ ಕಾರಣವಾಯಿತು. 

 ಫ್ರಾನ್ಸಿಸ್‌ರನ್ನು ಸಾಹಿತ್ಯಿಕ ಮತ್ತು ಲಂಡನ್ನಿನ ಉನ್ನತ ಸಮಾಜವು ಲೇಖಕಿ ಎಂದು ಒಪ್ಪಿಕೊಂಡಿತಲ್ಲದೆ ಕಾದಂಬರಿಗಳನ್ನು ಬರೆಯುವ ಮೊದಲ ಮಹಿಳೆ ಎಂದು ಗೌರವಿಸಿತು.  ೧೭೮೨ ರಲ್ಲಿ ಪ್ರಕಟವಾದ ಆಕೆಯ ಎರಡನೇ ಕಾದಂಬರಿ 'ಸಿಸಿಲಿಯಾ' ಅವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿತು.
ಫ್ರಾನ್ಸಿಸ್‌ರವರ ಮೊದಲ ಹಾಸ್ಯ ನಾಟಕ 'ದಿ ವಿಟ್ಲಿಂಗ್ಸ್' ನ್ನು ರಿಚರ್ಡ್ ಶೆರಿಡನ್ ರಂಗಕ್ಕೆ ಅಳವಡಿಸಿ ನಿರ್ಮಿಸಲು ಒಪ್ಪಿಕೊಂಡಿದ್ದರೂ ಸಹ, ಆಕೆಯ ತಂದೆ ಮತ್ತು ಕುಟುಂಬದ ಆಪ್ತಸ್ನೇಹಿತ ಸ್ಯಾಮ್ಯುಯೆಲ್ ಕ್ರಿಸ್ಪ್ ಅದನ್ನು ಒಪ್ಪಿಕೊಳ್ಳಲಿಲ್ಲ. ಕಾದಂಬರಿಯ ಬರವಣಿಗೆಯು ಮಹಿಳೆಯರಿಗೆ ಸ್ವಲ್ಪಮಟ್ಟಿಗಾದರೂ ಗೌರವಾನ್ವಿತವೆಂದು ಪರಿಗಣಿಸಲ್ಪಟ್ಟಿದ್ದರೂ ರಂಗಭೂಮಿಗಾಗಿ ಬರೆಯುವುದು ಡಾ ಚಾರ್ಲ್ಸ್ ಬರ್ನಿ ಅವರ ಮಗಳ ಗೌರವಕ್ಕೆ ಚ್ಯುತಿ ತರುವಂತಹುದ್ದು ಎಂಬುದು ಅವರ ಅನಿಸಿಕೆಯಾಗಿತ್ತು. ಹೀಗಾಗಿ ಫ್ರಾನ್ಸಿಸ್ ಬರ್ನಿ ತನ್ನ ಜೀವಿತಾವಧಿಯಲ್ಲಿ ತಮ್ಮ ಒಂದೇ ಒಂದು ದುರಂತ ನಾಟಕವಾದ ಎಡ್ವಿ ಮತ್ತು ಎಲ್ಗಿವಾ ಎಂಬ ನಾಟಕದ ಪ್ರದರ್ಶನವನ್ನು ಕಾಣಲು ಸಾಧ್ಯವಾಯಿತು. ಆದರೆ ಅವರ ಉಳಿದ ನಾಟಕಗಳು ಪ್ರದರ್ಶನಗೊಳ್ಳಲು ೨೦ನೇ ಶತಮಾನದ ಅಂತ್ಯದವರೆಗೆ ಕಾಯಬೇಕಾಗಿದ್ದು ಮಾತ್ರ ಬೇಸರದ ಸಂಗತಿ. ನಂತರ ಅವುಗಳ ಬಗ್ಗೆ ವಿಮರ್ಶೆಗಳು ಕೂಡ ಪ್ರಕಟವಾದವು.  ಅವರ ಎರಡು ನಾಟಕಗಳನ್ನು ಹೊರತುಪಡಿಸಿ ಉಳಿದೆಲ್ಲವೂ ೧೯೯೫ರಲ್ಲಿ ಮೊದಲ ಸಲ ಪ್ರಕಟವಾದವು.

೧೭೭೫ರಲ್ಲಿ ಥಾಮಸ್ ಬಾರ್ಲೋ ಎಂಬ ವ್ಯಕ್ತಿಯೊಂದಿಗಿನ ಮದುವೆಯ ಪ್ರಸ್ತಾಪವನ್ನು ತಳ್ಳಿ ಹಾಕಿದರೂ ಅದು ಅವರ ಜರ್ನಲ್ ಆಂಡ್ ಲೆಟರ್‍ಸ್‌ನಲ್ಲಿ ತಮಾಷೆಯ ಭಾಗವಾಗಿ ಕಾಣಿಸಿಕೊಂಡಿದೆ. ಸಾಮ್ಯುಯೆಲ್ ಕ್ರಿಸ್ಪ್, ಡಾ. ಜಾನ್ಸನ್ ಹಾಗೂ ಜಾರ್ಜ ಓವನ್ ಎಂಬ ಪಾದ್ರಿ ಮುಂತಾದವರೊಂದಿಗಿನ ಪ್ರಣಯವಿದ್ದರೂ ಅದು ವೈವಾಹಿಕ ಸಂಬಂಧವಾಗಿ ಮುಂದುವರೆಯಲಿಲ್ಲ.
   ೧೭೮೬ರಿಂದ ೧೭೯೧ರವರೆಗಿನ ಐದು ವರ್ಷಗಳ ಕಾಲ ಮೂರನೆ ಜಾರ್ಜ್‌ರ ರಾಣಿ ಶಾರ್ಲೆಟ್‌ರ ಕೀಪರ್ ಆಫ್ ದಿ ರೋಬ್ಸ್ ಕೆಲಸಕ್ಕೆ ಸೇರಿಕೊಂಡಿದ್ದ ಫ್ರಾನ್ಸಿಸ್ ಬರ್ನಿಯವರ ಕಾದಂಬರಿ ಬರವಣಿಗೆಯು ಬಹುತೇಕ ನಿಂತು ಹೋಗುವಂತಾಗಿತ್ತಲ್ಲದೆ ಅತಿಯಾದ ಕೆಲಸದ ಒತ್ತಡದಿಂದ ಅನಾರೋಗ್ಯಕ್ಕೂ ತುತ್ತಾದರು. ಈ ಸಮಯದಲ್ಲಿ ಅವಳ ಡೈರಿಯಲ್ಲಿ ಮೂರನೆ ಜಾರ್ಜ್ ಎದುರಿಸುತ್ತಿರುವ ಬಿಕ್ಕಟ್ಟು ಸೇರಿದಂತೆ ರಾಜಮನೆತನದ ಅಂತರಂಗ ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬರೆದಿರುವುದನ್ನು ಕಾಣಬಹುದು. ಸರಿಸುಮಾರು ಇದೇ ಸಮಯಕ್ಕೆ ಹಲವಾರು ದುರಂತ ನಾಟಕಗಳನ್ನು ಬರೆಯಲು ಪ್ರಾರಂಭಿಸಿದರು. ಆದರೆ ನ್ಯಾಯಾಲಯದ ಒತ್ತಡದ ಜೀವನದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ೧೭೯೧ ರಲ್ಲಿ ರಾಣಿ ಶಾರ್ಲೆಟ್ ವಿಶೇಷ ಅನುಮತಿ ನೀಡಿ ಫ್ರಾನ್ಸಿಸ್ ಬರ್ನಿಯವರನ್ನು ಆ ಸ್ಥಾನದಿಂದ ಬಿಡುಗಡೆ ಗೊಳಿಸಿದರು.

ನ್ಯಾಯಾಲಯದ ಜೀವನದಿಂದ ಬಿಡುಗಡೆಯಾದ ನಂತರ, ಫ್ರಾನ್ಸಿಸ್ ಬರ್ನಿಯವರ ಆರೋಗ್ಯ ಸುಧಾರಿಸಿತು. ೧೭೮೯ರಲ್ಲಿ ಫ್ರೆಂಚ್ ಕ್ರಾಂತಿ ಪ್ರಾರಂಭವಾಯಿತು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಸಹಾನುಭೂತಿ ಹೊಂದಿದ್ದ ಇಂಗ್ಲೆಂಡಿನ ಅನೇಕ ಸಾಹಿತಿಗಳಲ್ಲಿ ಇವರೂ ಒಬ್ಬರಾಗಿದ್ದರು. ನಾರ್ಬರಿ ಪಾರ್ಕ್‌ನಲ್ಲಿ ಕೆಲವು ಕುಟುಂಬ ಸ್ನೇಹಿತರನ್ನು ಮತ್ತು ಅವಳ ಸಹೋದರಿ ಸುಸಾನ್‌ಳನ್ನು ಭೇಟಿ ಮಾಡಲುಹೋದಾಗ ಅಕ್ಟೋಬರ್ ೧೭೯೨ ರಲ್ಲಿ ಫ್ರೆಂಚ್‌ನಿಂದ ಹೊರದೂಡಲ್ಪಟ್ಟ ಒಂದು ವಲಸಿಗರ ಗುಂಪು ಹತ್ತಿರದ ಜುನಿಪರ್ ಹಾಲ್‌ನಲ್ಲಿ ವಾಸವಾಗಿದ್ದರು. ಅಲ್ಲಿದ್ದ ಫ್ರಾನ್ಸ್‌ನ ದೇಶಭ್ರಷ್ಟ ಸೈನಿಕನಾಗಿದ್ದ ಅಲೆಕ್ಸಾಂಡ್ರೆ-ಜೀನ್-ಬ್ಯಾಪ್ಟಿಸ್ಟ್ ಪಿಯೋಚಾರ್ಡ್ ಡಿ'ಅರ್ಬ್ಲೇ (೧೭೫೪-೧೮೧೮)ಯವರನ್ನು ಮೊದಲ ಭೇಟಿಯಲ್ಲಿಯೇ ಅವರ ವ್ಯಕ್ತಿತ್ವ ನಡತೆಯಿಂದಾಗಿ ಮೆಚ್ಚಿಕೊಂಡರು. ಆದರೆ ಡಿ'ಅರ್ಬ್ಲೇ ಅವರ ಉದಾರವಾದ ರಾಜಕೀಯ ಅಭಿಪ್ರಾಯ ಹಾಗೂ ದೇಶಭ್ರಷ್ಟರಾಗಿದ್ದರ ಕುರಿತು ಚಿಕ್ಕದೊಂದು ಸಂಶಯ ಫ್ರಾನ್ಸಿಸ್ ಬರ್ನಿಯವರಲ್ಲಿತ್ತು.  ಆದರೆ ಜುಲೈ ೨೮, ೧೭೯೩ ರಂದು ಮಿಕ್ಲೆಹ್ಯಾಮ್‌ನಲ್ಲಿರುವ ಸೇಂಟ್ ಮೈಕೆಲ್ಸ್ ಚರ್ಚ್‌ನಲ್ಲಿ ಸ್ನೇಹಿತರು ಮತ್ತು ಕುಟುಂಬದ ಕೆಲವೇ ಸದಸ್ಯರ ಎದುರಲ್ಲಿ ವಿವಾಹವಾದರು.  ಎರಡು ದಿನಗಳ ನಂತರ ರೋಮನ್ ಕ್ಯಾಥೋಲಿಕ್‌ರಾಗಿದ್ದ ಡಿ'ಅರ್ಬ್ಲೇಗಾಗಿ ಲಂಡನ್‌ನಿನ ಲಿಂಕನ್ಸ್ ಇನ್ ಫೀಲ್ಡ್‌ನಲ್ಲಿರುವ ಸಾರ್ಡಿನಿಯನ್ ಚಾಪೆಲ್‌ನಲ್ಲಿ ಮತ್ತೊಮ್ಮೆ ವಿವಾಹವಾಗಬೇಕಾಯಿತು.ಇಬ್ಬರ ಹೊಂದಾಣಿಕೆಯ ಜೀವನ ಅತ್ಯಂತ ಸಂತೋಷದಾಯಕವಾಗಿತ್ತು. ಇಬ್ಬರೂ ತಮ್ಮ ಜೀವನದುದ್ದಕ್ಕೂ ಅಪಾರವಾದ ಪ್ರೀತಿಯಿಂದ ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡುತ್ತ ಬದುಕಿದರು. ಅವರಿಬ್ಬರಿಗೂ ಅಲೆಕ್ಸಾಂಡರ್ ಚಾರ್ಲ್ಸ್ ಲೂಯಿಸ್ ಪಿಚರ್ಡ್ ಡಿ ಅರ್ಬ್ಲೇ (ಡಿಸೆಂಬರ್ ೧೮, ೧೭೯೪) ಎಂಬ ಮಗನಿದ್ದನು.
               ಮದುವೆಯ ನಂತರ, ಫ್ರಾನ್ಸಿಸ್ ತನ್ನ ಬರವಣಿಗೆಯ ವೃತ್ತಿಜೀವನವನ್ನು ಪುನರಾರಂಭಿಸಿದರು. ಮಗನ ಹುಟ್ಟುವುದಕ್ಕೆ ಮುಂಚೆಯೇ ಕ್ಯಾಮಿಲ್ಲಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.  ಅವರ ಪತಿ ಅಲ್ಲಿಯೇ ಬರಹಗಳನ್ನು ಪ್ರತಿ ಮಾಡಿಬರೆದುಕೊಡುವ ಕಾರ್ಯನಿರ್ವಹಿಸುತ್ತಿದ್ದರು. ಪತ್ರಿಕೆಯ ಅಂತಿಮ ಪ್ರತಿಯನ್ನು ಸಿದ್ಧ ಮಾಡಿಕೊಡುವ ಜವಾಬ್ಧಾರಿಯುತ ಕೆಲಸ ಅವರ ಕೈಯ್ಯಲ್ಲಿತ್ತು. ೧೭೯೬ರಲ್ಲಿ ಕ್ಯಾಮಿಲ್ಲಾವನ್ನು ಸಬ್ಸ್ಕ್ರಿಪ್ಶನ್ ಮೂಲಕ ಪ್ರಕಟಿಸಲಾಯಿತು. ೩೬ಪುಟದ ಚಂದಾ ಪಟ್ಟಿಯು ೧೮ ನೇ ಶತಮಾನದ ಉತ್ತರಾರ್ಧದ ಇಂಗ್ಲಿಷ್ ಸಮಾಜದ ಯಾರು ಪತ್ರಿಕೆಗಳನ್ನು ಓದುತ್ತಾರೆಂಬ ಚಿತ್ರಣವನ್ನು ನೀಡುತ್ತಿತ್ತು.  ಚಂದಾದಾರರಲ್ಲಿ ಮಿಸ್ ಜೆ. ಆಸ್ಟೆನ್, ಸ್ಟೀವೆಂಟನ್ ಕೂಡ ಇದ್ದರು.  ಈ ಸಾಹಿತ್ಯಿಕ ಕೆಲಸದಿಂದ ಬಂದ ಲಾಭದಿಂದ ಡಿ'ಆರ್ಬ್ಲೇಸ್ ತಮ್ಮ ಸ್ವಂತ ಮನೆಯನ್ನು ನಿರ್ಮಿಸಿಕೊಂಡರು. ಅದನ್ನು ಅವರು "ಕ್ಯಾಮಿಲ್ಲಾ ಕಾಟೇಜ್" ಎಂದು ಕರೆದರು.

        ೧೮೦೧ರಲ್ಲಿ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಕಳೆದುಹೋದ ಆಸ್ತಿಯನ್ನು ಮರುಪಡೆಯುವ ಆಸೆಯಿಂದ ಹಾಗೂ ನೆಪೋಲಿಯನ್ ಬೋನಾಪಾರ್ಟೆಯ ಸೈನ್ಯದಲ್ಲಿ ಕೆಲಸಕ್ಕೆ ಸೇರಲೆಂದು ಡಿ'ಅರ್ಬ್ಲೆ ತನ್ನ ಕುಟುಂಬವನ್ನು ಫ್ರಾನ್ಸ್‌ಗೆ ಸ್ಥಳಾಂತರಿಸಿದರು, ಆದರೆ ಆ ಸಮಯದಲ್ಲಿ ನಡೆಯುತ್ತಿದ್ದ ಇಂಗ್ಲೆಂಡ್ ಹಾಗೂ ಫ್ರಾನ್ಸಸ ಯುದ್ಧದಿಂದಾಗಿ ಹತ್ತು ವರ್ಷಗಳ ಕಾಲ ದೇಶಭ್ರಷ್ಟರಾಗಿರಬೇಕಾಯಿತು. ಅವರ ಕುಟುಂಬವು ಫ್ರಾನ್ಸ್‌ನಲ್ಲಿದ್ದಾಗಲೇ ಅಮಿಯನ್ಸ್ ಶಾಂತಿಯು ಕೊನೆಗೊಂಡಿತು.  ೧೮೧೦ರಲ್ಲಿ ಫ್ರಾನ್ಸಿಸ್ ತನ್ನ ಸ್ತನದ ಕ್ಯಾನ್ಸರ್‌ನ ಶಸ್ತ್ರಚಿಕಿತ್ಸೆಯನ್ನು ಅರಿವಳಿಕೆ ಇಲ್ಲದೆಯೇ ಕ್ರಾನಿಕಲ್ ಮಾಡುವ ಮೂಲಕ ವೈದ್ಯಕೀಯ ಇತಿಹಾಸವನ್ನು ನಿರ್ಮಿಸಿದಳು. ಕುಟುಂಬವು ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ ೧೮೧೪ರಲ್ಲಿ  ತನ್ನ ಕೊನೆಯ ನಾಲ್ಕನೇ ಕಾದಂಬರಿ ದಿ ವಾಂಡರರ್ ಅನ್ನು ಬರೆದರು. ಅದರ ಮಾರನೆಯ ವರ್ಷ ನೆಪೋಲಿಯನ್ ವಿರುದ್ಧ ಫ್ರೆಂಚ್ ರಾಯಲಿಸ್ಟ್‌ಗಳೊಂದಿಗೆ ಹೋರಾಡುತ್ತಿದ್ದ ತನ್ನ ಗಂಡನ ಜೊತೆಯೇ ಉಳಿದುಕೊಂಡರು. ನೆಪೋಲಿಯನ್ ವಾಟರ್ಲೂ ಕದನದಲ್ಲಿ ಗೆದ್ದಿದ್ದಾನೆ ಎಂಬ ವದಂತಿಗಳು ಹರಡಿದಾಗಲೂ ಬ್ರಸೆಲ್‌ನಿಂದ ಪಲಾಯನ ಮಾಡಲು ನಿರಾಕರಿಸಿದರು. ವಾರಗಟ್ಟಲೆ ಯುದ್ಧಭೂಮಿಯಿಂದ ಹೊರಹೋಗಲು ಸಾಧ್ಯವಿಲ್ಲದ ಇಂಗ್ಲಿಷ್ ಗಾಯಾಳುಗಳಿಗೆ ನರ್ಸ್ ಆಗಿ ಸಹಾಯ ಮಾಡಲು ಉಳಿದುಕೊಂಡರು.

          ೧೮೧೪ರಲ್ಲಿ ಅವರ ತಂದೆ ಮರಣ ಹೊಂದಿದರು. ನಂತರ ೧೮೧೮ರಲ್ಲಿ ಪತಿಯ ಮರಣದ ನಂತರ, ಫ್ರಾನ್ಸಿಸ್ ಬರ್ನಿ ಡಿ'ಅರ್ಬ್ಲೇ ಯಾವುದೇ ಕಾದಂಬರಿಯನ್ನು ಬರೆಯಲಿಲ್ಲ. ೧೮೩೨ರಲ್ಲಿ ಪ್ರಕಟವಾದ ಮೆಮೊಯಿರ್ಸ್ ಆಫ್ ಡಾಕ್ಟರ್ ಬರ್ನಿ, ಮತ್ತು ೧೮೪೦ ರಲ್ಲಿ ಅವರ ಮರಣದ ನಂತರ ಡೈರಿ ಆಂಡ್ ಲೆಟರ್ಸ್ ಆಫ್ ಮೇಡಮ್ ಡಿ ಆರ್ಬ್ಲೇ ಪ್ರಕಟವಾಯಿತು. 


 ೬ ಜನವರಿ ೧೮೪೦ರಂದು, ಎಂಬತ್ತೇಳನೇ ವಯಸ್ಸಿನಲ್ಲಿ, ಫ್ರಾನ್ಸಿಸ್ ಬರ್ನಿ, ಮೇಡಮ್ ಡಿ ಆರ್ಬ್ಲೇ, ಲಂಡನ್‌ನಲ್ಲಿ ನಿಧನರಾದರು. ಅವರ ಪತಿ ಮತ್ತು ಮಗನೊಂದಿಗೆ ಸೇಂಟ್ ಸ್ವಿಥಿನ್ಸ್, ವಾಲ್ಕಾಟ್, ಬಾತ್‌ನಲ್ಲಿ ಸಮಾಧಿ ಮಾಡಲಾಗಿದೆ.


     ೧೭೭೮ರಲ್ಲಿ ಎವಿಲಿಯಾ ೧೭೮೨ರಲ್ಲಿ ಸಿಸಿಲಿಯಾ, ೧೭೯೬ರಲ್ಲಿ ಕ್ಯಾಮಿಲ್ಲಾ ಮತ್ತು ೧೮೧೪ರಲ್ಲಿ ದಿ ವಾಂಡರರ್ ಹೀಗೆ ನಾಲ್ಕು ಕಾದಂಬರಿಗಳನ್ನು ಪ್ರಕಟಿಸಿದ ಇವರ ಬರವಣಿಗೆಯ ಶೈಲಿ ವಿಶಿಷ್ಟವಾದದ್ದು. ಇಂಗ್ಲೆಂಡಿನ ರಾಯಲ್ ಪ್ಯಾಮಿಲಿಯನ್ನು ಹತ್ತಿರದಿಂದ ಕಂಡಿದ್ದರಿಂದ ಇವರ ಕಾದಂಬರಿಗಳಲ್ಲಿ ಶ್ರೀಮಂತ ಕುಟುಂಬದ ಒಳತೋಟಿಗಳು, ಅವರ ಆಡಂಬರಗಳು, ಢಾಂಬಿಕ ಜೀವನ, ಮೇಲ್ವರ್ಗದ ಸ್ತ್ರೀಯರ ವೈಯಕ್ತಿಕ ಸಂಕಟಗಳು ಹಾಗು ದಾರುಣ ಸ್ಥಿತಿಗಳು ಅನಾವರಣಗೊಂಡಿವೆ.  ೧೯ನೇ ಶತಮಾನದ ಅಂತ್ಯ ಹಾಗೂ ೨೦ನೇ ಶತಮಾನದ ಆರಂಭದಲ್ಲಿ ಅವರ ಡೈರಿ ಆಂಡ್ ಲೆಟರ್ಸ್ ಆಫ್ ಮೇಡಂ ಡಿ ಆರ್ಬ್ಲೇಯ ಹಲವಾರು ಆವೃತ್ತಿಗಳು ಪ್ರಕಟವಾದವು. ೧೭೯೧ ರಿಂದ ೧೮೪೦ ರವರೆಗಿರುವ ಡಾ. ಹೆಮ್ಲೋ ಅವರ ೧೨-ಸಂಪುಟಗಳ ಜರ್ನಲ್ಸ್ ಆಂಡ್ ಲೆಟರ್ಸ್ ಆಫ್ ಫ್ಯಾನಿ ಬರ್ನಿ (ಮೇಡಮ್ ಡಿ'ಅರ್ಬ್ಲೇ)ಯ ಇಪ್ಪತೈದು ಸಂಪುಟಗಳು ಪ್ರಕಟಗೊಂಡು ಸಮಕಾಲೀನ ಇತಿಹಾಸಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದೆ.  ಫ್ರಾನ್ಸಿಸ್ ಬರ್ನಿಯವರ ಉಳಿದ ಜರ್ನಲ್‌ಗಳು ಪ್ರಸ್ತುತ ಎರಡು ಸರಣಿಗಳಲ್ಲಿ ಪ್ರಕಟಿಸಲಾಗಿದೆ. ಮೊದಲ ಆವೃತ್ತಿ ಜರ್ನಲ್ಸ್ ಆಂಡ್ ಲೆಟರ್ಸ್ ಆಫ್ ಫ್ಯಾನಿ ಬರ್ನಿ(೧೭೬೮-೧೭೮೩) ಲಾರ್ಸ್ ಟ್ರಾಯ್ಡ್‌ನ ಸಂಪಾದಕತ್ವದಲ್ಲಿ ಮತ್ತು ಕೋರ್ಟ್ ಜರ್ನಲ್ಸ್ ಆಂಡ್ ಲೆಟರ್ಸ್ (೧೭೮೬-೧೭೯೧) ಪೀಟರ್ ಸಬೋರ್ನ್ ಸಂಪಾದಕತ್ವದಲ್ಲಿ ಪ್ರಕಟಗೊಂಡಿದೆ. ಇವರ ಜರ್ನಲ್‌ನಲ್ಲಿ ಭಾರತದಲ್ಲಿ ವಾರನ್ ಹೇಸ್ಟಿಂಗ್ಸ್‌ನ ದುರ್ನಡತೆಗಾಗಿ ನಡೆದ ವಿಚಾರಣೆ ಸೇರಿದಂತೆ ಅನೇಕ ಪ್ರಮುಖವಾದ ರಾಜಕೀಯ ಘಟನೆಗಳ ಅಧಿಕೃತ ಉಲ್ಲೇಖವಿದೆ. ಫ್ರಾನ್ಸಿಸ್ ಬರ್ನಿಯವರ ಕಾದಂಬರಿಗಳು ಮತ್ತು ನಾಟಕಗಳು ವಿಮರ್ಶಾತ್ಮಕ ಮೆಚ್ಚುಗೆಯುನ್ನು ಪಡೆದಿವೆ. ಇದು ೧೮ನೇ ಶತಮಾನದ ಮಹಿಳಾ ಬರಹಗಾರರಲ್ಲಿ ಹೊಸ ಆಸಕ್ತಿಯನ್ನು ಹುಟ್ಟುಹಾಕಿತು. ಯುದ್ಧ, ಬರವಣಿಗೆ ಹಾಗೂ ಇಂಗ್ಲೆಂಡ್‌ನ ರಾಜ ಮನೆತನದ ನಿಕಟ ಒಡನಾಟದೊಂದಿಗಿದ್ದರೂ ನೆಪೋಲಿಯನ್ ಜೊತೆ ಕೆಲಸ ಮಾಡಿದ ಪತಿ ಈ ಎಲ್ಲವನ್ನು ನಿಭಾಯಿಸುತ್ತ, ಮಹಿಳೆಯರ ಸ್ಥಿತಿಗತಿಗಳನ್ನು ಜಗತ್ತಿಗೆ ತೆರೆದಿಡುತ್ತ, ಅರವಳಿಕೆ ಇಲ್ಲದೆ ಶಸ್ತ್ರಚಿಕೆತ್ಸೆಯನ್ನೂ ಮಾಡಿಸಿಕೊಂಡ ವಿಶಿಷ್ಟ ಮಹಿಳೆಯಾಗಿ ನಮ್ಮೆದುರಿಗಿದ್ದಾರೆ.


lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220708_4_6

ಶ್ರೀದೇವಿ ಕೆರೆಮನೆ

No comments:

Post a Comment