Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Monday 26 September 2022

ಮಹಿಳಾ ವಿರೋಧಿ ಇಂಗ್ಲಿಷ್ ಕಾನೂನನ್ನು ವ್ಯಂಗ್ಯವಾಡಿದ ಕಾದಂಬರಿಕಾರ್ತಿ ಆನ್ನಿ ಬ್ರಾಂಟೆ


ಮೊದಲ ಸ್ತ್ರೀವಾದಿ ಕಾದಂಬರಿಕಾರ್ತಿಯರಲ್ಲಿ ಒಬ್ಬರಾದ ಅನ್ನಿ ಬ್ರಾಂಟೆ

      ಯಾರ್ಕ್‌ಷೈರ್‌ನ ಹಾರ್ಟ್ಸ್‌ಹೆಡ್‌ನಲ್ಲಿರುವ ಸೇಂಟ್ ಪೀಟರ್ಸ್ ಚರ್ಚ್‌ನ ವಿಕಾರ್ ಆಗಿದ್ದ, ಬ್ರಾಡ್‌ಫೋರ್ಡ್ ಬಳಿಯ ವುಡ್‌ಹೌಸ್ ಗ್ರೋವ್ ಸ್ಕೂಲ್‌ನಲ್ಲಿ ಕ್ಲಾಸಿಕ್ಸ್‌ನಲ್ಲಿ ಪರೀಕ್ಷಕರಾಗಿ ನೇಮಕಗೊಂಡು ನಂತರ ಚರ್ಚ್ ಆಫ್ ಇಂಗ್ಲೆಂಡ್‌ನಲ್ಲಿ ಬಡ ಐರಿಶ್ ಪಾದ್ರಿಯಾಗಿದ್ದ ಪ್ಯಾಟ್ರಿಕ್ ಬ್ರಾಂಟೆ ಮತ್ತು ಬೆಳ್ಳಿಯ ಅಕ್ಕಸಾಲಿಗನಾಗಿದ್ದು ಕಿರಾಣಿ ಮತ್ತು ಚಹಾ ವ್ಯಾಪಾರಿ ಥಾಮಸ್ ಬ್ರಾನ್‌ವೆಲ್ ಅವರ ಮಗಳಾಗಿದ್ದ ಮರಿಯಾ ಬ್ರಾನ್‌ವೆಲ್‌ರ ಆರು ಜನ ಮಕ್ಕಳಲ್ಲಿ ಕೊನೆಯವರಾಗಿ ಆನ್ನಿ ಬ್ರಾಂಟೆ ೧೭ ಜನವರಿ ೧೮೨೦ರಂದು ಬ್ರಾಡ್‌ಫೋರ್ಡ್‌ನ ಹೊರವಲಯದಲ್ಲಿ ಜನಿಸಿದರು. ಆ ಸಮಯದಲ್ಲಿ ಅವರ ತಂದೆ ಪ್ಯಾಟ್ರಿಕ್ ಅಲ್ಲಿ ಕ್ಯುರೇಟ್ ಆಗಿದ್ದರು. ೨೫ ಮಾರ್ಚ್ ೧೮೨೦ರಂದು ಆನ್ನಿಯವರಿಗೆ ಅಲ್ಲಿಯೇ ಬ್ಯಾಪ್ಟೈಜ್ (ದೀಕ್ಷಾಸ್ನಾನ) ಮಾಡಲಾಯಿತು. ಏಪ್ರಿಲ್ ೧೮೨೦ರಲ್ಲಿ ಇವರ ಕುಟುಂಬವು ಐದು ಕೋಣೆಗಳ ಹಾವರ್ತ್ ಪಾರ್ಸನೇಜ್‌ಗೆ ಸ್ಥಳಾಂತರಗೊಂಡಿತು.
    ಇವರ ಹಿರಿಯಕ್ಕ ಮಾರಿಯಾ (೧೮೧೪-೧೮೨೫) ಎರಡನೆಯ ಅಕ್ಕ ಎಲಿಜಬೆತ್ (೧೮೧೫-೧೮೨೫), ಮೂರನೆಯ ಅಕ್ಕ ಷಾರ್ಲೆಟ್ (೧೮೧೬-೧೮೫೫), ಅಣ್ಣ ಪ್ಯಾಟ್ರಿಕ್ ಬ್ರಾನ್‌ವೆಲ್ (೧೮೧೭-೧೮೪೮), ನಾಲ್ಕನೆಯ ಅಕ್ಕ ಹಾಗೂ ಆನ್ನಿಯವರೊಂದಿಗೆ ಹೆಚ್ಚಿನ ಭಾವನಾತ್ಮಕ ನಂಟನ್ನು ಹೊಂದಿದ್ದು ಅವರ ಜೊತೆ ಕವನ ಹಾಗೂ ಕಾದಂಬರಿಯ ಬರವಣಿಗೆಯನ್ನು ಹಂಚಿಕೊಂಡು ಅವಳಿಗಳೆಂದೇ ಗುರುತಿಸಿಕೊಂಡ ಎಮಿಲಿ (೧೮೧೮-೧೮೪೮) ಇವರ ಕುಟುಂಬವಾಗಿತ್ತು.
ಅನ್ನಿ ಕೇವಲ ಒಂದು ವರ್ಷದವಳಿದ್ದಾಗ ಅವರ ತಾಯಿ ಮಾರಿಯಾ ಗರ್ಭಾಶಯದ ಕ್ಯಾನ್ಸರ್‌ನಿಂದಾಗಿ ೧೫ ಸೆಪ್ಟೆಂಬರ್ ೧೮೨೧ರಂದು ನಿಧನರಾದರು. ತಂದೆ ಪ್ಯಾಟ್ರಿಕ್ ಮರುಮದುವೆಯಾಗಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಮಾರಿಯಾರವರ ಸಹೋದರಿ ಎಲಿಜಬೆತ್ ಬ್ರಾನ್‌ವೆಲ್ (೧೭೭೬-೧೮೪೨) ತನ್ನ ಅಕ್ಕನ ಮಕ್ಕಳನ್ನು ನೋಡಿಕೊಳ್ಳುವುದು ತನ್ನ ಕರ್ತವ್ಯ ಎಂಬಂತೆ ಇವರನ್ನು ನೋಡಿಕೊಂಡರು. ಹಿರಿ ಅಕ್ಕಂದಿರು ಚಿಕ್ಕಮ್ಮನೊಂದಿಗೆ ಅನ್ಯೋನ್ಯತೆ ಸಾಧಿಸದಿದ್ದರೂ ಹಸುಗೂಸಾಗಿದ್ದ ಆನ್ನಿ ಚಿಕ್ಕಮ್ಮನೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಚಿಕ್ಕಮ್ಮನಿಗೆ ಕೂಡ ಪುಟ್ಟ ಮಗುವಾಗಿದ್ದ ಆನ್ನಿ ಎಂದರೆ ಅತ್ಯಂತ ಪ್ರೀತಿಯಾಗಿತ್ತು. ಅನ್ನಿಯ ವ್ಯಕ್ತಿತ್ವ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ಅವರ ಚಿಕ್ಕಮ್ಮನ ಪ್ರಭಾವ ಹೆಚ್ಚಿದೆ.

೧೮೨೪ರ ಬೇಸಿಗೆಯಲ್ಲಿ ತಂದೆ ಅವರ ಅಕ್ಕಂದಿರಾದ ಮರಿಯಾ, ಎಲಿಜಬೆತ್, ಷಾರ್ಲೆಟ್ ಮತ್ತು ಎಮಿಲಿಯನ್ನು ವೆಸ್ಟ್ ಯಾರ್ಕ್‌ಷೈರ್‌ನ ಕ್ರಾಫ್ಟನ್‌ನಲ್ಲಿರುವ ಕ್ರಾಫ್ಟನ್ ಹಾಲ್‌ಗೆ ನಂತರ ಲಂಕಾಷೈರ್‌ನ ಕೋವನ್ ಬ್ರಿಡ್ಜ್‌ನಲ್ಲಿರುವ ಪಾದ್ರಿ ಡಾಟರ್ಸ್ ಸ್ಕೂಲ್‌ಗೆ ಕಳುಹಿಸಿದರು. ಆದರೆ ಅಲ್ಲಿ ಮಾರಿಯಾ ಮತ್ತು ಎಲಿಜಬೆತ್ ಟೈಫಾಯಿಡ್‌ನಿಂದಾಗಿ ಮರಣಹೊಂದಿದರು. ಹೀಗಾಗಿ  ಷಾರ್ಲೆಟ್ ಮತ್ತು ಎಮಿಲಿಯನ್ನು ತಕ್ಷಣ ಮನೆಗೆ ಕರೆತರಲಾಯಿತು.ಈ ಅನಿರೀಕ್ಷಿತ ಸಾವುಗಳು ಕುಟುಂವನ್ನು ತುಂಬಾ ಯಾತನೆಗೊಳಿಸಿದವು. ಮುಂದಿನ ಐದು ವರ್ಷಗಳ ಕಾಲ ಮಕ್ಕಳಿಗೆ ಮನೆಯಲ್ಲಿಯೇ ಶಿಕ್ಷಣ ಕೊಡಿಸಲಾಯಿತು. ಮಕ್ಕಳು ಪಾರ್ಸನೇಜ್‌ನ ಹೊರಗಿನ ಇತರರೊಂದಿಗೆ ಬೆರೆಯಲು ಸ್ವಲ್ಪ ಪ್ರಯತ್ನ ಮಾಡಿದರಾದರೂ ತಾವೇ ಒಬ್ಬರನ್ನೊಬ್ಬರು ತುಂಬಾ ಅವಲಂಬಿಸಿದ್ದರು. ಹಾವರ್ತ್‌ನ ಸುತ್ತಲಿನ ಮಂಕಾದ ಮೂರ್‌ಗಳು ಅವರ ಆಟದ ಮೈದಾನವಾಯಿತು.
ತಮ್ಮ ಜೀವನದ ಬಹುಭಾಗವನ್ನು ಯಾರ್ಕ್‌ಷೈರ್ ಮೂರ್ಸ್‌ನಲ್ಲಿರುವ ಹಾವರ್ತ್‌ನ ಪ್ಯಾರಿಷ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಇವರು ೧೮೩೬ ಮತ್ತು ೧೮೩೭ರ ನಡುವೆ ಮಿರ್‌ಫೀಲ್ಡ್‌ನಲ್ಲಿದ್ದ ಬೋರ್ಡಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು.

ಚಿಕ್ಕವರಿರುವಾಗ ಅನ್ನಿಯವರಿಗೆ ಸಂಗೀತ ಮತ್ತು ರೇಖಾಚಿತ್ರಗಳನ್ನು ಬಿಡಿಸುವುದು ಇಷ್ಟವಾಗಿತ್ತು. ಅವರ ಚಿಕ್ಕಮ್ಮ ಹುಡುಗಿಯರಿಗೆ ಮನೆಯನ್ನು ಹೇಗೆ ನಡೆಸಬೇಕೆಂದು ಕಲಿಸಲು ಪ್ರಯತ್ನಿಸಿದರು, ಆದರೆ ಆ ಹುಡುಗಿಯರು ಸಾಹಿತ್ಯದ ಕಡೆಗೆ ಹೆಚ್ಚು ಒಲವು ತೋರಿದರು. ತಮ್ಮ ತಂದೆಯ ಸುಸಜ್ಜಿತ ಗ್ರಂಥಾಲಯದಿಂದ ಬೈಬಲ್, ಹೋಮರ್, ವರ್ಜಿಲ್, ಶೇಕ್ಸ್‌ಪಿಯರ್, ಮಿಲ್ಟನ್, ಬೈರಾನ್, ಸ್ಕಾಟ್ ಮುಂತಾದವರ ಕೃತಿಗಳನ್ನು ಓದಿದರು. ಈ ಓದು ಅವರ ಕಲ್ಪನೆಗಳನ್ನು ಹೆಚ್ಚಿಸಿತು. ಅದೇ ಸಮಯದಲ್ಲಿ ಅವರ ತಂದೆ ಸಹೋದರ ಬ್ರಾನ್‌ವೆಲ್‌ಗೆ ಜೂನ್ ೧೮೨೬ರಲ್ಲಿ ಆಟಿಕೆ ಸೈನಿಕರ ಗೊಂಬೆಗಳನು ಉಡುಗೊರೆಯಾಗಿ ನೀಡಿದರು. ಈ ಗೊಂಬೆಗಳ ಬಗೆಗಿನ ಕಲ್ಪನೆಗಳಿಂದ ಸೃಜನಶೀಲತೆ ಹೆಚ್ಚಾಯಿತು. ಅವರು ಸೈನಿಕರಿಗೆ ಹೆಸರುಗಳನ್ನು ನೀಡಿದರು. ಇದು ಅವರ ಕಾಲ್ಪನಿಕ ಪ್ರಪಂಚದ ಸೃಷ್ಟಿಗೆ ಕಾರಣವಾಯಿತು.  
೧೮೩೧ ರ ಸುಮಾರಿಗೆ ಅನ್ನಿಯವರಿಗೆ ಹನ್ನೊಂದು ವರ್ಷವಾಗಿದ್ದಾಗ, ಅವರು ಮತ್ತು ಎಮಿಲಿ ಇಬ್ಬರೂ ಷಾರ್ಲೆಟ್ ಮತ್ತು ಬ್ರಾನ್‌ವೆಲ್‌ನಿಂದ ಬೇರ್ಪಟ್ಟು ತಮ್ಮದೇ ಆದ ಕಾಲ್ಪನಿಕ ಪ್ರಪಂಚದ 'ಗೊಂಡಾಲ್" ಅನ್ನು ರಚಿಸಿದರು. ಅದೇ ಸಮಯದಲ್ಲಿ ಷಾರ್ಲೆಟ್ ರೋ ಹೆಡ್ ಶಾಲೆಗೆ ಸೇರಿದ್ದರಿಂದ ಆನ್ನಿ ಎಮಿಲಿಯವರ ಜೊತೆ ಹೆಚ್ಚು ಆಪ್ತವಾದರು. ನಂತರ ತಮ್ಮ ಹದಿನೈದನೆ ವಯಸ್ಸಿಗೆ ರೋ ಹೆಡ್ ಸ್ಕೂಲ್‌ನಲ್ಲಿ ಅಕ್ಕ ಷಾರ್ಲೆಟ್‌ರವರ ವಿದ್ಯಾರ್ಥಿಯಾಗಿ ಸೇರಿಕೊಂಡರಾದರೂ ಎಮಿಲಿಯವರೊಂದಿಗೆ ಇರುವ ಆತ್ಮೀಯತೆ ಷಾರ್ಲೆಟ್‌ರೊಂದಿಗೆ ಬರಲಿಲ್ಲ. ಅಲ್ಲದೆ ಅನಾರೋಗ್ಯದ ನಿಮಿತ್ತ ಬಹುಬೇಗ ಮನೆಗೆ ವಾಪಸ್ಸಾಗಬೇಕಾಯಿತು.

ಶಾಲೆಯನ್ನು ಬಿಟ್ಟ ನಂತರ ಅನೇಕ ಕಡೆ ಕೆಲಸ ಮಾಡಿದರು ಕೆಲವು ಮನೆಗಳಲ್ಲಿ ಮಕ್ಕಳ ಮೇಲ್ವಿಚಾರಕಿಯಾಗಿ ಕೆಲಸ ಮಾಡಬೇಕಾಯಿತು. ಅವರ ತಂದೆಗೆ ಯಾವುದೇ ಖಾಸಗಿ ಆದಾಯ ಇರಲಿಲ್ಲ. ತಂದೆಯ ಮರಣದ ನಂತರ ಏಪ್ರಿಲ್ ೧೮೩೯ರಲ್ಲಿ ಮಿರ್‌ಫೀಲ್ಡ್ ಬಳಿಯ ಬ್ಲೇಕ್‌ಹಾಲ್‌ನಲ್ಲಿ ಇಂಗ್‌ಹ್ಯಾಮ್ ಕುಟುಂಬಕ್ಕೆ ಮೇಲ್ವಿಚಾರಕರಾಗಿ ಅನ್ನಿ ಕೆಲಸ ಪ್ರಾರಂಭಿಸಿದರು. ಅವರ ಉಸ್ತುವಾರಿಯಲ್ಲಿರುವ ಮಕ್ಕಳು ಹಾಳಾಗಿದ್ದರು ಮತ್ತು ಅವಿಧೇಯರಾಗಿದ್ದರು. ಅನ್ನಿಯವರಿಗೆ ಮಕ್ಕಳನ್ನು ನಿಯಂತ್ರಿಸಲು ಬಹಳ ಕಷ್ಟವಾಯಿತು ಮತ್ತು ಅವರನ್ನು ಶಿಕ್ಷಿಸಲು ಆಕೆಗೆ ಅವಕಾಶವಿರಲಿಲ್ಲ, ಮಕ್ಕಳ ವರ್ತನೆಯ ಬಗ್ಗೆ ದೂರು ನೀಡಿದಾಗಲೂ ಅವರಿಗೆ ಯಾವುದೇ ಬೆಂಬಲ ಸಿಗಲಿಲ್ಲ ಮತ್ತು ಇವರನ್ನೇ ಅಸಮರ್ಥ ಎಂದು ಟೀಕಿಸಲಾಯಿತು. ಇಂಗ್‌ಹ್ಯಾಮ್‌ಗಳು ತಮ್ಮ ಮಕ್ಕಳ ಪ್ರಗತಿಯಿಂದ ಅತೃಪ್ತರಾಗಿದ್ದರು ಮತ್ತು ಅನ್ನಿಯನ್ನು ವಜಾಗೊಳಿಸಿದರು. ೧೮೩೯ರಲ್ಲಿ ಕ್ರಿಸ್ಮಸ್ ಸಮಯದಲ್ಲಿ ಮನೆಗೆ ಮರಳಿದ ಆನ್ನಿ ತಮ್ಮ ಗೊಂಡಾಲ್  ಬರವಣಿಗೆಯನ್ನು ಗುಟ್ಟಾಗಿ ಮುಂದುವರೆಸಿದರು. ಬ್ಲೇಕ್ ಹಾಲ್‌ನಲ್ಲಿ ಅನ್ನಿಯವರು ತುಂಬಾ ಕಷ್ಟದಲ್ಲಿ ಸಮಯ ಕಳೆದದ್ದನ್ನು ತಮ್ಮ ಕಾದಂಬರಿ ಆಗ್ನೆಸ್ ಗ್ರೇನಲ್ಲಿ ವಿವರವಾಗಿ ಚಿತ್ರಿಸಿದ್ದಾರೆ.


ಅನ್ನಿ ಹಾವರ್ತ್‌ಗೆ ಹಿಂದಿರುಗಿದಾಗ ತಮ್ಮ ತಂದೆಯ ಹೊಸ ಕ್ಯುರೇಟ್ ವಿಲಿಯಂ ವೇಟ್‌ಮ್ಯಾನ್ (೧೮೧೪-೧೮೪೨) ರನ್ನು ಭೇಟಿಯಾದರು. ೨೫ ವರ್ಷದ ವಿಲಿಯಂ ವೇಟ್‌ಮ್ಯಾನ್ ಡರ್ಹಾಮ್ ವಿಶ್ವವಿದ್ಯಾಲಯದಿಂದ ದೇವತಾಶಾಸ್ತ್ರದಲ್ಲಿ ಎರಡು ವರ್ಷ ಓದಿ ಬೋಧನೆಗೆ ಪರವಾನಗಿಯನ್ನು ಪಡೆದಿದ್ದರು. ಅವರೊಂದಿಗೆ ಅನ್ನಿಯ ಪರಿಚಯವು ಹಲವಾರು ಕವನಗಳನ್ನು ಬರೆಯುವುದಕ್ಕೆ ಸ್ಪುರ್ತಿಯಾಯಿತು. ಆದರೆ ಅವರಿಬ್ಬರ ನಡುವೆ ಪ್ರೇಮವಿತ್ತೆಂಬುದು ಎಲ್ಲಿಯೂ ನಿಖರವಾಗಿ ದಾಖಲಾಗಿಲ್ಲವಾದರೂ  
ಆಗ್ನೆಸ್‌ನಲ್ಲಿ ಗ್ರೇ ಕಥಾ ನಾಯಕಿ ಆಗ್ನೆಸ್‌ಗೆ ಕ್ಯುರೇಟ್‌ನಲ್ಲಿರುವ ಆಸಕ್ತಿಯನ್ನು ಗಮನಿಸಿ ವಿಮರ್ಷಕರು ಅದು ಪ್ರೇಮವಿರಬಹುದು ಎಂದು ಊಹಿಸಿದ್ದಾರೆ. ಆಗ್ನೆಸ್ ಗ್ರೇನಲ್ಲಿ ಬರುವ ಕ್ಯುರೆಟ್ ಕೂಡ ವೆಟ್‌ಮ್ಯಾನ್‌ನಂತೆ ಹಾಸ್ಯ ಪ್ರವೃತ್ತಿಯ, ದಯೆಯುಳ್ಳ ಮನುಷ್ಯನಾಗಿದ್ದುದು ಇದನ್ನು ಪುಷ್ಠಿಕರಿಸುತ್ತದೆಯಾದರೂ ಅಧಿಕೃತ ದಾಖಲೆಗಳಿಲ್ಲ. ಆದರೂ  ಅದೇ ವರ್ಷ ವೇಟ್‌ಮ್ಯಾನ್ ಕಾಲರಾದಿಂದ ನಿಧನರಾದಾಗ ಅನ್ನಿ ತಮ್ಮ ಕವನದಲ್ಲಿ ಅವರ ಸಾವಿಗಾಗಿ ದುಃಖವನ್ನು ವ್ಯಕ್ತಪಡಿಸಿ 'ಪ್ರಿಯ, ನಾನು ನಿನಗಾಗಿ ದುಃಖಿಸುವುದಿಲ್ಲ.' ಎಂದು ಬರೆದಿದ್ದಾರೆ.
೧೮೪೦ರಿಂದ ೧೮೪೫ರವರೆಗೆ ಅನ್ನಿ ಯಾರ್ಕ್ ಬಳಿಯ ಆರಾಮದಾಯಕವಾದ ಹಳ್ಳಿಗಾಡಿನ ಮನೆಯಾದ ಥಾರ್ಪ್‌ಗ್ರೀನ್ ಹಾಲ್‌ನಲ್ಲಿ ಕೆಲಸ ಮಾಡಿದರು. ಇಲ್ಲಿ ಅವರು ರೆವರೆಂಡ್ ಎಡ್ಮಂಡ್ ರಾಬಿನ್ಸನ್ ಮತ್ತು ಅವರ ಪತ್ನಿ ಲಿಡಿಯಾ ಹಾಗೂ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆಗ್ನೆಸ್ ಗ್ರೇನಲ್ಲಿ ಈ ಮನೆಯು ಹಾರ್ಟನ್ ಲಾಡ್ಜ್ ಆಗಿ ಕಾಣಿಸಿಕೊಂಡಿದೆ.
೧೮೪೨ ರಲ್ಲಿ ಥಾರ್ಪ್‌ಗ್ರೀನ್‌ನಲ್ಲಿರುವ ಲಾಂಗ್ ಪ್ಲಾಂಟೇಶನ್‌ನಲ್ಲಿ ಅನ್ನಿ ತಮ್ಮ ಮೂರು ಪದ್ಯಗಳ ಲೈನ್ಸ್ ಕಂಪೋಸ್ಡ್ ಇನ್ ಎ ವುಡ್ ಆನ್ ಎ ವಿಂಡಿ ಡೇ ಅನ್ನು ಬರೆದರು. ಇದನ್ನು ೧೮೪೬ ರಲ್ಲಿ ಆಕ್ಟನ್ ಬೆಲ್ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು.

೧೮೪೫ರಲ್ಲಿ ಎಲ್ಲರೂ ಮನೆಯಲ್ಲಿರುವಾಗ ಷಾರ್ಲೆಟ್ ಅನ್ನಿಯವರಿಗೆ ಮಾತ್ರ ತೋರಿಸಿದ್ದ ಎಮಿಲಿಯವರ 'ಗೊಂಡಾಲ್' ಕವಿತೆಗಳನ್ನು ನೋಡಿದರು. ಅವುಗಳನ್ನು ಪ್ರಕಟಿಸಬೇಕು ಎಂದು ಶಾರ್ಲೆಟ್ ಹೇಳಿದರು. ಅನ್ನಿ ತಾವು ಬರೆದಿದ್ದ ಗೊಂಡಾಲ್  ಕವಿತೆಗಳನ್ನು ಷಾರ್ಲೆಟ್‌ಗೆ ತೋರಿಸಿದರು. ಷಾರ್ಲೆಟ್ "ಈ ಪದ್ಯಗಳು ಸಹ ತಮ್ಮದೇ ಆದ ಒಂದು ಸಿಹಿಯಾದ ಪ್ರಾಮಾಣಿಕವಾದ ಪಾಥೋಸ್ ಅನ್ನು ಹೊಂದಿವೆ.' ಎಂದು ಭಾವಿಸಿದರು. ಅಂತಿಮವಾಗಿ ಮೂವರೂ ಸಹೋದರಿಯರು ಒಂದು ಒಪ್ಪಂದಕ್ಕೆ ಬಂದರು. ತಾವು ಏನು ಮಾಡುತ್ತಿದ್ದೇವೆಂದು ಯಾರಿಗೂ ಹೇಳಲಿಲ್ಲ. ಚಿಕ್ಕಮ್ಮ ಎಲಿಜಬೆತ್ ಬ್ರಾನ್‌ವೆಲ್ ಕೂಡಿಟ್ಟಿದ್ದ ಹಣದಿಂದ ಕವನಗಳ ಸಂಗ್ರಹವನ್ನು ಪ್ರಕಟಿಸಲು ಪಾವತಿಸಿದರು, ಅನ್ನಿ ಹಾಗೂ ಎಮಿಲಿಯವರ ತಲಾ ಇಪ್ಪತ್ತೊಂದು  ಕವನಗಳು ಹಾಗೂ ಮತ್ತು ಷಾರ್ಲೆಟ್‌ರವರ ಹತ್ತೊಂಬತ್ತು ಕವಿತೆಗಳನ್ನು ಸೇರಿಸಿ ಕ್ಯೂರರ್ ಬೆಲ್ಲಿ, ಎಲ್ಲಿಸ್ ಬೆಲ್ಲಿ ಹಾಗೂ ಆಕ್ಷನ್ ಬೆಲ್ಲಿ ಎಂದು ಪುರುಷರ ಹೆಸರಿನಲ್ಲಿ ಪ್ರಕಟಿಸಿದರು.

ಜುಲೈ ೧೮೪೬ರ ಹೊತ್ತಿಗೆ ಮೂವರೂ ಸಹೋದರಿಯರ ಮೊದಲ ಕಾದಂಬರಿಯ ಹಸ್ತಪ್ರತಿಗಳನ್ನು ಒಳಗೊಂಡಿರುವ ಪ್ಯಾಕೇಜ್‌ಗಳು ಲಂಡನ್ ಪ್ರಕಾಶಕರನ್ನೆಲ್ಲ ಸುತ್ತು ಹಾಕುತ್ತಿತ್ತು. ಷಾರ್ಲೆಟ್ ಬರೆದ ಪ್ರೊಫೆಸರ್, ಎಮಿಲಿ ಬರೆದ ವುಥರಿಂಗ್ ಹೈಟ್ಸ್ ಮತ್ತು ಅನ್ನಿ ಬರೆದ ಆಗ್ನೆಸ್ ಗ್ರೇ ಕಾದಂಬರಿಗಳು ಕೆಲವು ಪ್ರಕಾಶಕರಿಂದ  ನಿರಾಕರಣೆಗೆ ಒಳಗಾದ ನಂತರ ವೂಥರಿಂಗ್ ಹೈಟ್ಸ್ ಮತ್ತು ಆಗ್ನೆಸ್ ಗ್ರೇ ಗಳನ್ನು ಪ್ರಕಾಶಕರಾದ ಥಾಮಸ್ ಕೌಟ್ಲೆ ನ್ಯೂಬಿ ಪ್ರಕಟಿಸಲು ಒಪ್ಪಿಕೊಂಡರು. ಷಾರ್ಲೆಟ್ ಬರೆದ ಫ್ರೊಫೆಸರ್‌ನ್ನು ತಿರಸ್ಕರಿಸಲಾಯಿತು. ಹೀಗಾಗಿ ಷಾರ್ಲೆಟ್ ತಮ್ಮ ಎರಡನೇ ಕಾದಂಬರಿಯಾದ ಜೇನ್ ಐರ್ ಅನ್ನು ಬರೆದು ಪೂರ್ಣಗೊಳಿಸುವ ಮುಂಚೆಯೇ  ಆ ಕಾದಂಬರಿಯನ್ನು  ಸ್ಮಿತ್, ಎಲ್ಡರ್  ಒಪ್ಪಿಕೊಂಡರು. ಇದು ಸಹೋದರಿಯರ ಕಾದಂಬರಿಗಳಲ್ಲಿ ಮೊದಲ ಪ್ರಕಟಿತವಾದ ಕಾದಂಬರಿ. ಇದು ಅದ್ಭುತ ಯಶಸ್ಸನ್ನು ಕಂಡಿತು. ಈತನ್ಮಧ್ಯೆ, ಅನ್ನಿ ಮತ್ತು ಎಮಿಲಿಯವರ ಕಾದಂಬರಿಗಳನ್ನು ಪ್ರಕಟಿಸಲು ಪ್ರಕಾಶನ ವೆಚ್ಚವಾದ ಐವತ್ತು ಪೌಂಡ್‌ಗಳನ್ನು ಪಾವತಿಸಬೇಕೆಂಬ ನಿರ್ಬಂಧವಿತ್ತು. ಅವರ ಪ್ರಕಾಶಕರು ಜೇನ್ ಐರ್ ಅವರ ಯಶಸ್ಸಿನಿಂದ ಪ್ರೇರಿತರಾಗಿ ಮೊದಲು ವೂಥರಿಂಗ್ ಹೈಟ್ಸ್ ಅನ್ನು ಪ್ರಕಟಿಸಿದರು. ನಂತರ ಆಗ್ನೆಸ್ ಗ್ರೇ ಡಿಸೆಂಬರ್ ೧೮೪೭ ಪ್ರಕಟಗೊಂಡು ಒಟ್ಟಿಗೆ ಮಾರಾಟವಾಯಿತು. ಆದರೆ ಆಗ್ನೆಸ್ ಗ್ರೇಗಿಂತ ಎಮಿಲಿಯವರ ವುದರಿಂಗ್ ಹೈಟ್ಸ್ ಹೆಚ್ಚು ನಾಟಕೀಯತೆಯಿಂದ ಕೂಡಿರುವುದರಿಂದ ಬಹಳ ಬೇಗ ಜನಪ್ರಿಯಗೊಂಡಿತು.

ಅವರ ಎರಡನೇ ಕಾದಂಬರಿ, 'ದಿ ಟೆನೆಂಟ್ ಆಫ್ ವೈಲ್ಡ್‌ಫೆಲ್ ಹಾಲ್' ೧೮೪೮ರಲ್ಲಿ ಪ್ರಕಟವಾಯಿತು. 'ದಿ ಟೆನಂಟ್ ಆಫ್ ವೈಲ್ಡ್‌ಫೆಲ್ ಹಾಲ್' ಮೊದಲ ಸ್ತ್ರೀವಾದಿ ಕಾದಂಬರಿಗಳಲ್ಲಿ ಒಂದಾಗಿದೆ ಎಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ.
ಕಾದಂಬರಿಯು ಸಾಮಾಜಿಕ ಮತ್ತು ಕಾನೂನು ರಚನೆಗಳನ್ನು ಬಹಳ ತೀವ್ರವಾಗಿ ಪ್ರಶ್ನಿಸಿದೆ.
ಈ ಕಾದಂಬರಿಯ ನಾಯಕಿ ಹೆಲೆನ್ ತನ್ನ ಮಗನನ್ನು ಗಂಡನ ಪ್ರಭಾವದಿಂದ ರಕ್ಷಿಸಲು ಅವನನ್ನು ತೊರೆದು ಜೀವಿಸಲು ನಿರ್ಧರಿಸುತ್ತಾಳೆ.  ತನ್ನ ಮತ್ತು ತನ್ನ ಮಗನ ಬದುಕಿಗಾಗಿ ಚಿತ್ರ ಬಿಡಿಸಿ ಮಾರಾಟ ಮಾಡುವ ಮೂಲಕ ಹಣಗಳಿಸುತ್ತ,  ಸಾಮಾಜಿಕ ಸಂಪ್ರದಾಯಗಳನ್ನು ವಿವಾಹಿತ ಮಹಿಳೆ ತನ್ನ ಪತಿಯಿಂದ ಸ್ವತಂತ್ರವಾಗಿ ಯಾವುದೇ ಕಾನೂನು ಅಸ್ತಿತ್ವವನ್ನು ಹೊಂದಿಲ್ಲ ಮತ್ತು ಆಸ್ತಿಯನ್ನು ಹೊಂದಲು ಅಥವಾ ವಿಚ್ಛೇದನಕ್ಕಾಗಿ ಮೊಕದ್ದಮೆ ಹೂಡಲು ಅಥವಾ ತನ್ನ ಮಕ್ಕಳ ಪಾಲನೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ಇಂಗ್ಲೀಷ್ ಕಾನೂನನ್ನು ಉಲ್ಲಂಘಿಸುವ ವಿಷಯ ಇದರೊಳಗಿದೆ. (ನಂತರ ವಿವಾಹಿತ ಮಹಿಳೆಯರ ಆಸ್ತಿ ಕಾಯಿದೆಯನ್ನು ೧೮೭೦ರಲ್ಲಿ ಅಂಗೀಕರಿಸಲಾಯಿತು.) ಹೆಲೆನ್‌ಳ ಪತಿ ಅವಳನ್ನು ಮರಳಿ ಪಡೆಯುವ ಮತ್ತು ಮಗನನ್ನು ಅಪಹರಣ ಮಾಡಿದ ಆರೋಪ ಹೊರಿಸುವ ಹಕ್ಕನ್ನು ಹೊಂದಿದ್ದನು. ಅವಳು ಗಳಿಸುವ ಆದಾಯವು ಕಾನೂನುಬದ್ಧವಾಗಿ ಅವನದ್ದೇ ಆದ ಕಾರಣ ತನ್ನ ಸ್ವಂತ ಆದಾಯದ ಮೇಲೆ ಬದುಕುವ ಮೂಲಕ ಅವಳು ತನ್ನ ಗಂಡನ ಆಸ್ತಿಯನ್ನು ಕದಿಯುತ್ತಿದ್ದಳೆಂಬ ಆರೋಪವನ್ನು ಅವಳ ಮೇಲೆ ಹೊರೆಸಲಾಗಿತ್ತು.


ಇಂತಹ ವಿಷಯವನ್ನಿಟ್ಟುಕೊಂಡು ಬರೆದವರು ಮಹಿಳೆಯಾದ್ದರಿಂದ ಅದು ಇಂಗ್ಲೆಂಡಿನಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿತು. ಲೇಖಕರು ಮಹಿಳೆ ಅಥವಾ ಪುರುಷ ಎನ್ನುವುದರ ಬದಲು ಅವರ ಬರವಣಿಗೆಯ ಗ್ರಹಿಕೆಯ ಸೂಕ್ತತೆಯ ಬಗ್ಗೆ  ವಿಮರ್ಶಿಸುವುದು ಒಳ್ಳೆಯದು ಎಂದು ಅನ್ನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರಲ್ಲದೆ ಒಂದು ಪುಸ್ತಕವು ಒಳ್ಳೆಯದಾಗಿದ್ದರೆ, ಲೇಖಕರ ಲಿಂಗವು ಯಾವುದೇ ಆಗಿರಬಹುದು ಎಂದು ಒತ್ತಿ ಹೇಳಿದರು. ಕಾದಂಬರಿಗಳನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಓದುವ ಅಥವಾ ಬರೆಯುವ ಅವಕಾಶವಿರಬೇಕು ಎಂದು ಪ್ರತಿಪಾದಿಸಿದರು. ಒಬ್ಬ ಮಹಿಳೆಗೆ ಸಾಮಾಜಿಕವಾಗಿ ಅವಮಾನಕರ ಎನ್ನಿಸಿಕೊಂಡ ಯಾವುದಾದರೂ ವಿಷಯವನ್ನು ಬರೆಯಲು ಪುರುಷನ ಅನುಮತಿ ಏಕೆಬೇಕು ಅಥವಾ ಮಹಿಳೆಯನ್ನು ಬರೆಯುವುದಕ್ಕಾಗಿ ಏಕೆ ಖಂಡಿಸಬೇಕು ಎಂಬುದನ್ನು ಗ್ರಹಿಸಲು ನಾನು ಸೋತಿದ್ದೇನೆ. ಮನುಷ್ಯನಿಗೆ ಸರಿಯಾದ ಮತ್ತು ಆಗುವ ಯಾವುದಾದರೂ ಕೆಲಸ ಮಾಡಲು ಇನ್ನೊಬ್ಬರ ಅನುಮತಿ ಪಡೆಯುವ ಅವಶ್ಯಕತೆಯಿಲ್ಲ ಎನ್ನುವುದು ಅವರ ವಾದವಾಗಿತ್ತು.


 ಆನ್ನಿ ಸಹೋದರ ವಿಲಿಯಂ ಬ್ರಾನ್‌ವೆಲ್‌ರವರ ನಿರಂತರ ಕುಡಿತವು ಅವರ ಆರೋಗ್ಯವನ್ನು ಹದಗೆಡಿಸಿತು. ೨೪ಸೆಪ್ಟೆಂಬರ್ ೧೮೪೮ರಂದು ಕುಡಿತದಿಂದಾಗಿ ಅವರಿಗಿದ್ದ ಕ್ಷಯರೋಗಕ್ಕೆ ಔಷಧಿ ನಾಟದೆ ತಮ್ಮ ಮೂವತ್ತೊಂದನೆಯ ವಯಸ್ಸಿನಲ್ಲಿ ನಿಧನರಾದರು. ಅವರ ಹಠಾತ್ ಮರಣವು ಕುಟುಂಬವನ್ನು ಆಘಾತಗೊಳಿಸಿತು.
೧೮೪೮ ರ ಚಳಿಗಾಲದಲ್ಲಿ ಇಡೀ ಕುಟುಂಬವು ಕೆಮ್ಮು ಮತ್ತು ಶೀತಗಳಿಂದ ಬಳಲುತ್ತಿತ್ತು. ಈ ಸಂದರ್ಬದಲ್ಲಿ ಎಮಿಲಿಯವರು ತುಂಬಾ ಅನಾರೋಗ್ಯಕ್ಕೆ ಒಳಗಾದರು. ಎರಡು ತಿಂಗಳ ಕಾಲ ಹದಗೆಟ್ಟ ಆರೋಗ್ಯದಿಂದ ನರಳಿದ ಎಮಿಲಿ ಡಿಸೆಂಬರ್ ೧೯ರ ಬೆಳಿಗ್ಗೆ ತನಗೆ ವೈದ್ಯಕೀಯ ಸಹಾಯವನ್ನು ಬೇಡವೆಂದು ಹೇಳಿ ತಿರಸ್ಕರಿಸಿದರು. ತುಂಬಾ ದುರ್ಬಲಳಾಗಿದ್ದ ಅವರು ೩೦ನೇ ವಯಸ್ಸಿನಲ್ಲಿ ನಿಧನರಾದರು.
ಎಮಿಲಿಯ ಮರಣವು ಅನ್ನಿಯವರನ್ನು ಆಳವಾಗಿ ಪ್ರಭಾವಿಸಿತು. ಈ ದುಃಖವು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳುಮಾಡಿತು. ಅದೇ ವರ್ಷ ಕ್ರಿಸ್ಮಸ್ ಸಮಯದಲ್ಲಿ ಅನ್ನಿಯವರಿಗೆ ಇನ್ಫ್ಲುಯೆನ್ಸ್ ಕಾಣಿಸಿಕೊಂಡು ರೋಗ ಲಕ್ಷಣಗಳು ತೀವ್ರಗೊಂಡವು. ವೈದ್ಯರು ಜನವರಿಯ ಸಮಯದಲ್ಲಿ ಚೇತರಿಸಿಕೊಳ್ಳುತ್ತಿರುವ ಬಗ್ಗೆ  ಸ್ವಲ್ಪ ಭರವಸೆ ನೀಡಿದರು. ಆದಾಗ್ಯೂ, ಎಲೆನ್ ನುಸ್ಸಿಗೆ ಬರೆದ ಪತ್ರದಲ್ಲಿ ತಮ್ಮ ಹತಾಶೆ ಹಾಗೂ ಮಹತ್ವಾಕಾಂಕ್ಷೆಗಳನ್ನು ವ್ಯಕ್ತಪಡಿಸಿದ್ದನ್ನು ಕಾಣಬಹುದು.

ನನಗೆ ಸಾವಿನ ಭಯವಿಲ್ಲ: ಇದು ಅನಿವಾರ್ಯವೆಂದು ನಾನು ಭಾವಿಸಿದರೆ, ನಾನು ಸದ್ದಿಲ್ಲದೆ ನಿರೀಕ್ಷೆಗೆ ರಾಜೀನಾಮೆ ನೀಡಬಹುದೆಂದು ನಾನು ಭಾವಿಸುತ್ತೇನೆ. ಆದರೆ ನಾನು ಏನಾದರೂ ಒಳ್ಳೆಯದನ್ನು ಮಾಡಲು ಹಂಬಲಿಸುವುದರಿಂದ ದೇವರನ್ನು ಮೆಚ್ಚಿಸಬೇಕೆಂದು ನಾನು ಬಯಸುತ್ತೇನೆ. ನಾನು ಜಗತ್ತನ್ನು ಬಿಡುವ ಮೊದಲು ಭವಿಷ್ಯದ ಅಭ್ಯಾಸಕ್ಕಾಗಿ ನನ್ನ ತಲೆಯಲ್ಲಿ ಅನೇಕ ಯೋಜನೆಗಳಿವೆ. ಆದರೆ ಇನ್ನೂ ಅವೆಲ್ಲವೂ ಏನೂ ಆಗದಂತೆ ನಾನು ಸಾಯಲು ಇಷ್ಟಪಡುವುದಿಲ್ಲ. ಆದರೆ ದೇವರ ಚಿತ್ತ ನೆರವೇರುತ್ತದೆ. ಎಂದು ಬರೆದಿದ್ದಾರೆ.
ಅನ್ನಿಯವರ ಆರೋಗ್ಯ ಫೆಬ್ರವರಿಯಲ್ಲಿ ಸ್ವಲ್ಪ ಉತ್ತಮವಾಗಿದ್ದರಿಂದ ಸ್ಥಳ ಬದಲಾವಣೆ ಮತ್ತು ತಾಜಾ ಸಮುದ್ರದ ಗಾಳಿಯು ತಮಗೆ ಪ್ರಯೋಜನಕಾರಿಯಾಗಬಹುದೇ ಎಂದು ನೋಡಲು ಸ್ಕಾರ್ಬರೋಗೆ ಭೇಟಿ ನೀಡಲು ನಿರ್ಧರಿಸಿದರು. ಆರಂಭದಲ್ಲಿ ಷಾರ್ಲೆಟ್ ಈ ಪ್ರಯಾಣ ಆನ್ನಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದೆಂದು ವಿರೋಧಿಸಿದರು. ಆದರೆ ವೈದ್ಯರ ಅನುಮೋದನೆ ಮತ್ತು ಅನ್ನಿಯ ಭರವಸೆಯ ನಂತರ ಅದು ತನ್ನ ಕೊನೆಯ ಭರವಸೆ ಎಂದು ತನ್ನ ಮನಸ್ಸನ್ನು ಬದಲಾಯಿಸಿದರು.

೨೪ ಮೇ ೧೮೪೯ರಂದು ಅನ್ನಿ ಹಾಗೂ ಷಾರ್ಲೆಟ್ ಇಬ್ಬರೂ ಮತ್ತು ಎಲ್ಲೆನ್ ನಸ್ಸಿಯೊಂದಿಗೆ ಸ್ಕಾರ್ಬರೋಗೆ ಹೊರಟರು . ಅವರು ಮಾರ್ಗದಲ್ಲಿ ಯಾರ್ಕ್‌ನಲ್ಲಿ ಹಗಲು-ರಾತ್ರಿ ಕಳೆದರು. ಇಲ್ಲಿ ಅವರು ಅನ್ನಿಯನ್ನು ಗಾಲಿಕುರ್ಚಿಯಲ್ಲಿ ಓಡಾಡಿಸಬೇಕಾಯಿತು. ಆದರೂ ಆನ್ನಿಯವರ ಇಚ್ಛೆಯ ಮೇರೆಗೆ ಶಾಪಿಂಗ್ ಮಾಡಿ ನಂತರ ಯಾರ್ಕ್ ಮಿನ್‌ಸ್ಟರ್‌ಗೆ ಭೇಟಿ ನೀಡಿದರು ಸಮಯದಲ್ಲಿ ಸ್ವತಃ ಅನ್ನಿಯವರಿಗೆ ತಮಗೆ ಸ್ವಲ್ಪ ಶಕ್ತಿ ಉಳಿದಿದೆ ಎಂಬುದು ಸ್ಪಷ್ಟವಾಯಿತು. ಹೀಗಾಗಿ ಭಾನುವಾರ ಮೇ ೨೭ರಂದು ಅನ್ನಿ ಷಾರ್ಲೆಟ್‌ಗೆ ಸ್ಕಾರ್‌ಬರೋದಲ್ಲಿ ಉಳಿಯುವ ಬದಲು ಮನೆಗೆ ಹಿಂದಿರುಗುವುದು ಮತ್ತು ಅಲ್ಲಿಯೇ ಸಾಯುವುದು ಸುಲಭವೇ ಎಂದು ಕೇಳಿದರು. ಮರುದಿನವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು ಸಾವು ಹತ್ತಿರವಾಗಿದೆ ಎಂದು ಹೇಳಿದರು. ಅನ್ನಿ ಆತಂಕ ಪಡದೆ ಈ ವಿಷಯವನ್ನು  ಸ್ವೀಕರಿಸಿದರು. ಎಲ್ಲೆನ್ ಮತ್ತು ಷಾರ್ಲೆಟ್‌ಗೆ ತಮ್ಮ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸಿದರು. ಮತ್ತು ಷಾರ್ಲೆಟ್‌ಗೆ "ಧೈರ್ಯದಿಂದಿರಿ" ಎಂದು ಪಿಸುಗುಟ್ಟಿದರು. ೨೮ ಮೇ ೧೮೪೯ರಂದು ಸೋಮವಾರ ಮಧ್ಯಾಹ್ನ ಎರಡು ಗಂಟೆಗೆ ೨೯ನೇ ವಯಸ್ಸಿನಲ್ಲಿ ನಿಧನರಾದರು.


        ಬಹುಶಃ ಅನ್ನಿಯವರ ಮರಣದ ನಂತರ ಅವರ ಸಹೋದರಿ ಷಾರ್ಲೊಟ್ ತಾವು ಮೂವರೂ ಬರೆದ ಸಂಕಲನದ ಮೊದಲ ಆವೃತ್ತಿಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಆಗ್ನೆಸ್ ಗ್ರೇಯನ್ನು ಪುನಃ ಸಂಪಾದಿಸಿದರು. ವೈಲ್ಡ್‌ಫೆಲ್ ಹಾಲ್ ಕಾದಂಬರಿಯನ್ನು ಸಂರಕ್ಷಿಸುವುದು ಅಪೇಕ್ಷಣೀಯವಾಗಿ ನನಗೆ ತೋರುತ್ತಿಲ್ಲ. ಆ ಕೃತಿಯಲ್ಲಿನ ವಿಷಯದ ಆಯ್ಕೆಯು ತಪ್ಪಾಗಿದೆ, ಇದು ಸೌಮ್ಯ, ನಿವೃತ್ತ ಅನನುಭವಿ ಬರಹಗಾರನ ಪಾತ್ರ, ಅಭಿರುಚಿ ಮತ್ತು ಆಲೋಚನೆಗಳೊಂದಿಗೆ ತುಂಬಾ ಕಡಿಮೆ ವೃತ್ತಿಪರತೆಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟ ಷಾರ್ಲೆಟ್ ಅದನ್ನು ಮರುಪ್ರಕಟಣೆ ಮಾಡಲಿಲ್ಲ. ಅನ್ನಿ ತಮ್ಮ ಸಹೋದರಿಯರಂತೆ ಪ್ರಸಿದ್ಧಿಯಾಗದಿರಲು ಇದೂ ಒಂದು ಕಾರಣ. ಅದೇನೇ ಇದ್ದರೂ, ಅನ್ನಿಯವರ ಎರಡೂ ಕಾದಂಬರಿಗಳನ್ನು ಇಂಗ್ಲಿಷ್ ಸಾಹಿತ್ಯದ ಶ್ರೇಷ್ಠ ಕೃತಿಗಳೆಂದು ಪರಿಗಣಿಸಲಾಗಿದೆ. ವಿಮರ್ಶಕರು ಕೂಡ  ಅನ್ನಿಯವರ ಈ ಕಾದಂಬರಿಯ ಬಗ್ಗೆ ಕಡಿಮೆ ಗಮನ ಹರಿಸಿದರು ಮತ್ತು ಕೆಲವರು ಅವರನ್ನು "ಪ್ರತಿಭೆಯಿಲ್ಲದ ಬ್ರಾಂಟೆ" ಎಂದು ತಳ್ಳಿಹಾಕಿದರು.

ಆದರೆ ೨೦ ನೇ ಶತಮಾನದ ಮಧ್ಯಭಾಗದಿಂದ ಅವರ ಜೀವನ ಮತ್ತು ಕೃತಿಗಳಿಗೆ ಉತ್ತಮ ಗಮನ ನೀಡಲಾಗಿದೆ. ವಿನಿಫ್ರೆಡ್ ಗೆರಿನ್ (೧೯೫೯) ಮತ್ತು ಎಲಿಜಬೆತ್ ಲ್ಯಾಂಗ್‌ಲ್ಯಾಂಡ್ (೧೯೮೯) ಮತ್ತು ಎಡ್ವರ್ಡ್ ಚಿಥಮ್ (೧೯೯೧) ಅವರ ಜೀವನಚರಿತ್ರೆಗಳು , ಹಾಗೆಯೇ ಜೂಲಿಯೆಟ್ ಬಾರ್ಕರ್ ಅವರ ಗುಂಪು ಜೀವನಚರಿತ್ರೆ, ದಿ ಬ್ರಾಂಟೆಸ್ (೧೯೯೪; ಪರಿಷ್ಕೃತ ಆವೃತ್ತಿ ೨೦೦೦), ಮತ್ತು ಇಂಗಾ-ಸ್ಟಿನಾ ಇವ್‌ಬ್ಯಾಂಕ್‌ನಂತಹ ವಿಮರ್ಶಕರಲ್ಲದೆ ಥಾರ್ಮಹ್ಲೆನ್, ಲಾರಾ ಸಿ ಬೆರ್ರಿ, ಜಾನ್ ಬಿ ಗಾರ್ಡನ್, ಮೇರಿ ಸಮ್ಮರ್ಸ್ ಮತ್ತು ಜೂಲಿಯೆಟ್ ಮೆಕ್‌ಮಾಸ್ಟರ್ ಅವರು ಆನ್ನೆ ಬ್ರಾಂಟೆಯವರನ್ನು ಪ್ರಮುಖ ಸಾಹಿತ್ಯಿಕ ವ್ಯಕ್ತಿಯಾಗಿ ಸ್ವೀಕರಿಸಲು ಕಾರಣರಾಗಿದ್ದಾರೆ. ೨೦೧೩ ರಲ್ಲಿ ಬ್ರೊಂಟೆ ಸೊಸೈಟಿಯ ಸ್ಯಾಲಿ ಮೆಕ್‌ಡೊನಾಲ್ಡ್ ಅವರು ಕೆಲವು ರೀತಿಯಲ್ಲಿ ಅನ್ನಿಯನ್ನು ಸಹೋದರಿಯರಲ್ಲಿ ಅತ್ಯಂತ ಆಮೂಲಾಗ್ರವಾಗಿ ನೋಡಲಾಗುತ್ತದೆ, ಮಹಿಳೆಯರ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಮತ್ತು ಮದ್ಯಪಾನವು ಕುಟುಂಬವನ್ನು ಹೇಗೆ ಕಿತ್ತುಹಾಕಬಹುದು ಎಂಬಂತಹ ಕಠಿಣ ವಿಷಯಗಳ ಬಗ್ಗೆ ಬರೆಯುತ್ತಾರೆ. ಎಂದು ಹೊಗಳಿದ್ದಾರೆ. ೨೦೧೬ರಲ್ಲಿ ಲೂಸಿ ಮಂಗನ್ ಬಿಬಿಸಿಯ ಬೀಯಿಂಗ್ ದಿ ಬ್ರಾಂಟೆಸ್‌ನಲ್ಲಿ ಅನ್ನೆ ಬ್ರಾಂಟೆಯನ್ನು ಆ ಶತಮಾನದ ಚಾಂಪಿಯನ್ ಎಂದರಲ್ಲದೆ  "ಈಗ ಅವರನ್ನು ಅಭ್ಯಸಿಸುವ ಸಮಯ ಬಂದಿದೆ" ಎಂದು ಘೋಷಿಸಿ ಆನ್ನಿಯವರ ಸಾಹಿತ್ಯದ ಮಹತ್ವವನ್ನು ತೆರೆದಿಟ್ಟಿದ್ದಾರೆ. 

No comments:

Post a Comment