Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Tuesday 3 March 2020

ಸತ್ತ ದೇಹದ ಉಸಿರು

ಸತ್ತ ದೇಹದ ಉಸಿರು

"ನೀನು ತುಂಬ ಗಟ್ಟಿ" 

ಒಂದಿಷ್ಟು ಜಗಳ, 

ವಾದವಿವಾದ ಮುಗಿಸಿದ ನಂತರ 

ಎರಡು ದಿನ ಅಖಂಡ ಮೌನವೃತವನ್ನಾಚರಿಸಿ ಇನ್ನೇನು ದಿನ ಮುಗಿದು 

ಎಲ್ಲರೂ ನಿದ್ದೆಗೆ ಜಾರಿ 

ನಾನು ಮಾತ್ರ ನಿದ್ರಾಹೀನಳಾಗಿ 

ಹೊರಳಾಡುವ ರಾತ್ರಿಯ

ಮೊದಲ ಪ್ರಹರದ ಕೊನೆಯಲ್ಲಿ  ಹೇಳಿದ 

ನಾನು ಮಾತನಾಡಲಿಲ್ಲ

"ನನ್ನ ಬಿಟ್ಟು ನೀನು ಬದುಕಬಲ್ಲೆ ಬಿಡು" 

ಒಂದುವರೆ ನಿಮಿಷದ 

ಚಿಕ್ಕ ಮೌನದ ನಂತರ 

ಮತ್ತೊಮ್ಮೆ ತಣ್ಣನೆಯ ದನಿಯಲ್ಲಿ 

ಕೂರಲಗಿನಂತೆ ಉಸುರಿದ 

ನಾನು ಮಾತಾಡಲಿಲ್ಲ ಆಗಲೂ 

ಯಾವ ಮಾತಿಂದಲೂ 

ಏನೂ  ಪ್ರಯೋಜನವಿಲ್ಲವೆಂಬುದು ವೇದ್ಯವಾಗಿತ್ತು 

ಅರ್ಥ ಕಳೆದುಕೊಂಡ ಪದಗಳು 

ಎದೆಯೊಳಗೆ ಬಿಕ್ಕುತ್ತಿರುವುದನ್ನು 

ಅವನಿಗೆ ತೆರೆದು ತೋರಿಸುವುದಾದರೂ ಹೇಗೆ 

ಹನಿಗೊಂಡಿದ್ದ ಕಣ್ಣಂಚು 

ನೋಡುವ ವ್ಯವಧಾನ ಅವನಿಗಿರಲಿಲ್ಲ 

ಚೆನ್ನಾಗಿ ಗೊತ್ತು  ನನಗೆ 

ಕೆಲವು ದಿನಗಳ ನಂತರ 

ಮತ್ತೊಮ್ಮೆ ಇಂತಹುದೇ ಜಗಳ 

ಮನಸ್ತಾಪದ ಸಮಯದಲ್ಲಿ 

ಆ ದಿನ ಹೇಳಿದ್ದೆನಲ್ಲ 

ನೀನು ತುಂಬ ಗಟ್ಟಿ ಎಂದು ಎನ್ನುತ್ತ 

ಈಗ ಹೇಳಿದ್ದಕ್ಕೆ ಅಧಿಕೃತ ಮುದ್ರೆಯೊತ್ತಿ 

ದೃಢಪಡಿಸಿ ಸೀಲು ಒತ್ತಬಹುದು 

ಎದೆಯೊಳಗೆ ಭಾವನೆಗಳೆಲ್ಲ ಮುದುಡಿ 

ದೇಹ ಸತ್ತು 

ಕೇವಲ ಉಸಿರು ತೇಕುತ್ತಿರುವುದನ್ನು 

ಹೇಗೆ ತೋರಿಸಲಿ 

ಅವನು ಮಾತಾಡದ ಒಂದೊಂದು ಕ್ಷಣವೂ 

ನನ್ನ ಆಯುಷ್ಯದ ಒಂದೊಂದು ವರ್ಷವನ್ನು 

ಕಡಿಮೆ ಮಾಡುತ್ತಿರುವುದನ್ನು ಹೇಗೆ ಪ್ರಮಾಣಿಸಲಿ 

 

ಸತ್ತ ದೇಹದ ಉಸಿರು  ತಾಗಿ 

ಕೊಳೆತ ವಾಸನೆ ಸುತ್ತೆಲ್ಲ ಅಡರಿ

ಮೌನ ಇಂಚಿಂಚಾಗಿ ಕೊಲ್ಲುತ್ತಿರುವಾಗ 

ಜೀವಮಾನದ ಲೆಕ್ಕ ಇಡುವುದಾದರೂ ಯಾರು?

ಶ್ರೀದೇವಿ ಕೆರೆಮನೆ

No comments:

Post a Comment