ಗಜಲ್
ಗಜಲ್
ಬಂಧ ಸಂಬಂಧ ಗಟ್ಟಿಗೊಳಿಸಲಿ ತುಟಿಯ ಮಂದಹಾಸ
ಅಳಿದರು ಎದೆಯ ಪ್ರೀತಿ ಉಳಿಸಲಿ ತುಟಿಯ ಮಂದಹಾಸ
ಬೆಳಕು ಕಳೆದು ಕತ್ತಲು ಆವರಿಸುವುದು ಪ್ರಕೃತಿ ಸಹಜ
ಮನದ ನಂದಾದೀಪ ಬೆಳಗಿಸಲಿ ತುಟಿಯ ಮಂದಹಾಸ
ಮಳೆ ಮುಗಿದರು ತೊಟ್ಟಿಕ್ಕುತ್ತದೆ ಎಲೆಯ ತುದಿಯಿಂದ ಹನಿ
ಮುಡಿಯ ಮಲ್ಲಿಗೆ ಹೂವು ಅರಳಿಸಲಿ ತುಟಿಯ ಮಂದಹಾಸ
ಅಪ್ಪಳಿಸಿ ದಂಡೆಗೆ ಹಿಂದಿರುಗುವ ಅಲೆಯ ಭಾವವೇನು
ಕಳೆದು ಹೋದ ಸಂಭ್ರಮ ಮರಳಿಸಲಿ ತುಟಿಯ ಮಂದಹಾಸ
ಕಾಲಚಕ್ರ ಉರುಳಿಸಿ ಕಣ್ಣ ಮಿಂಚು ಎಲ್ಲೋ ಕಳೆದಿದೆ
ಕಂಡೂ ಕಾಣದಂತೆ ಕಾಣಿಸಲಿ ತುಟಿಯ ಮಂದಹಾಸ
ಹಾಡುವುದು ಜೀರುಂಡೆ ಮಳೆಗಾಗಿ, ಭವದ ಹಂಗುತೊರೆದು
ಕೊರಳಿಗಂಟಿದ ಹಾಡು ಕೇಳಿಸಲಿ ತುಟಿಯ ಮಂದಹಾಸ
ಜೊತೆಗಿದ್ದು ದೂರವಿರುವುದು ಸುಲಭದ ಮಾತಲ್ಲ ಸಾಕಿ
ಅಗಲಿಕೆಯ ವಿರಹದುರಿ ಆರಿಸಲಿ ತುಟಿಯ ಮಂದಹಾಸ
ಕನವರಿಸಿರುವೆ ಹಗಲಿರುಳು ನಿನ್ನೊಲವಿನ ಧಾರೆಗಾಗಿ
ಸಿರಿ ನನಗಾಗಿ ನಿನ್ನ ಕರುಣಿಸಲಿ ತುಟಿಯ ಮಂದಹಾಸ
ಶ್ರೀದೇವಿ ಕೆರೆಮನೆ
No comments:
Post a Comment