Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Tuesday 3 March 2020

ಪುಸ್ತಕ ವಿಮರ್ಶೆ- ಉರಿವ ಬನದ ಕೋಗಿಲೆ

ಉರಿವ ಬನದಲ್ಲಿದ್ದರೂ ಹಾಡು ಕಳೆದುಕೊಳ್ಳದ ಕೋಗಿಲೆಗಳು.

ಯುದ್ಧ ಎನ್ನುವುದು ಕೇವಲ ಸದ್ದಲ್ಲ ಅದು ಮೌನ. ಮನುಷ್ಯತ್ವದ ಮೌನ ಎನ್ನುತ್ತಲೇ ತೆರೆದುಕೊಳ್ಳುವ ಈ ಪುಸ್ತಕ ಕೇವಲ ರಣರಂಗದಲ್ಲಿ  ಶಸ್ತ್ರಾಸ್ತ್ರಗಳಿಂದ ನಡೆಯುವ ಯುದ್ಧದ ಬಗ್ಗೆ ಮಾತನಾಡುವುದಿಲ್ಲ. ಅದು ತನ್ನ ಅಸ್ತಿತ್ವಕ್ಕಾಗಿ ಹೆಣ್ಣು ನಡೆಸುತ್ತಿರುವ ಯುದ್ದದ ಬಗ್ಗೆ ಹೇಳುತ್ತದೆ, ಹುಡುಗಿಯೊಬ್ಬಳು ಶಿಕ್ಷಣ ಪಡೆಯಲು ನಡೆಸಿದ ಯುದ್ಧದ ಬಗ್ಗೆ ಮಾತನಾಡುತ್ತದೆ, ಹನ್ನೊಂದರ ಕಿಶೋರಿಯೊಬ್ಬಳು ನಡೆಸಬೇಕಾದ  ಯೋನಿಸುನ್ನತಿಯನ್ನು ವಿರೋಧಿಸಬೇಕಾದ ಯುದ್ಧದ ಬಗ್ಗೆ ಅಳುತ್ತದೆ.  ಬಾಲ್ಯ ಕಳೆದು ಹರೆಯದ ಹೊಸ್ತಿಲಿನಲ್ಲಿ ಇನ್ನೂ ಕಾಲಿಡದ  ನವತರುಣಿಯೊಬ್ಬಳು ಹದಿಮೂರು ವರ್ಷ ವಯಸ್ಸಾಗುತ್ತಲೇ ಅಪ್ಪನ ಸ್ನೇಹಿತನ ಜೊತೆ ಮದುವೆ ಆಗಬೇಕಾದುದರ ವಿರುದ್ಧ ನಡೆಸುವ ಯುದ್ಧದ ಬಗ್ಗೆ ಹೇಳುತ್ತದೆ. ಇಷ್ಟೆಲ್ಲ ಯುದ್ಧದ ಜೊತೆಗೇ ಆ ಮಹಿಳೆಯರು ದೇಶ ದೇಶಗಳ ನಡುವೆ, ಧರ್ಮ ಧರ್ಮಗಳ ನಡುವೆ, ಕೊನೆಗೆ ಜನಾಂಗ ಜನಾಂಗಗಳ ನಡುವೆ ಮಾಡುವ ಯುದ್ಧ ಹಾಗು ಅಂತಹ ಯುದ್ಧಗಳಲ್ಲಿ ಕೇವಲ ಹೊರಗಿನ ಶತ್ರುಗಳೇ ಅಲ್ಲದೇ ಮನೆಯೊಳಗಿನ, ಮನದೊಳಗಿನ ವೈರಿಗಳ ಜೊತೆ ನಡೆಸಬೇಕಾದ ಯುದ್ಧವಂತೂ ಹೃದಯ ಹಿಂಡುತ್ತದೆ. ಮುದುಕಿಯಾದರೂ ಗೆದ್ದ ಸೈನ್ಯದ ಸೈನಿಕರ ದೇಹವನ್ನು ತಣಿಸಬೇಕಾದ ಹೆಣ್ಣಿಗೆ ಪ್ರತಿದಿನದ ಬದುಕೂ ಯುದ್ಧವೇ.ಬೆಲೊರಷ್ಯನ್ ಕವಿ ಅನಾಟೊಲಿ ವೆರ್ಟ್ಯೂನ್ಸ್ಕಿ ತನ್ನ ರಿಕ್ವಿಯಂ ನಲ್ಲಿ  "ಸತ್ತ ಯೋಧರನ್ನು ಹೂಳಿರುವ ಬಯಲಿನ ಹತ್ತಿರ ಮಕ್ಕಳ ಕೂಗು ಕೇಳುತ್ತದೆಯಂತೆ. ಪ್ರತಿ ಗೋರಿಯಿಂದಲೂ ಹುಟ್ಟದಿರುವ ಮಕ್ಕಳ ಆಕ್ರಂದನ ಕೇಳುತ್ತದೆಯಂತೆ." ಎಂದು ಹೇಳುತ್ತಾನೆ. ಯುದ್ಧ ಬಾಧಿಸುವುದು ಸೈನಿಕರನ್ನು, ಗಂಡಸರನ್ನು ಎಂದು ನಾವು ತಿಳಿದಿರುತ್ತೇವೆ. ಆದರೆ ಯುದ್ಧದ ನಿಜವಾದ ಸಂತ್ರಸ್ತರು ಮಕ್ಕಳು ಮತ್ತು ಮಹಿಳೆಯರು. ಅನಾದಿ ಕಾಲದಿಂದಲೂ ಯುದ್ಧ ಯಾರು ಮಾಡಿದರೇನು? ಯಾರು ಗೆದ್ದರೇನು? ಯಾರು ಸೋತು ಶರಣಾದರೇನು? ಯುದ್ಧದ ನೋವಿನ ಫಲವನ್ನು ಅನುಭವಿಸುವವರು ಮಾತ್ರ ಹೆಣ್ಣುಗಳೇ ಹಾಗು ಮಕ್ಕಳು  ಎಂಬ ಸತ್ಯವನ್ನು ಮತ್ತೆ ಮತ್ತೆ ಕಣ್ಣೆದುರಿಗೆ ತಂದು ನಿಲ್ಲಿಸುವ ಪುಸ್ತಕ ಇದು.  ಶೀರ್ಷಿಕೆಯಂತೆ ಉರಿವ ಬನದ ಕೋಗಿಲೆಗಳಾಗಿರುವ ಹೆಣ್ಣುಗಳ, ಹೆಣ್ಣು ಮಕ್ಕಳ  ಕಥೆಯಿದು. 

ಇಡೀ ಪುಸ್ತಕದಲ್ಲಿ ಹದಿನೈದು ಲೇಖನಗಳಿದ್ದು ಅದನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ಹದಿಮೂರು ವರ್ಷದೊಳಗಿನ ಹುಡುಗಿಯರು ಶಾಲೆ ಬೇಕು ಎಂದು ಹಾತೊರೆಯುವುದನ್ನು, ಹದಿಮೂರು ವರ್ಷವಾದರೆ ಎಲ್ಲಿ ಅಪ್ಪನ ಗೆಳೆಯನನ್ನು ಮದುವೆ ಆಗಬೇಕಾಗಿತ್ತದೋ ಎಂದು ಅಂಜುತ್ತ ತನಗೆ ಬೇಕೆನಿಸಿದಾಗ ಮದುವೆ ಆಗ್ತೀನಿ ಎನದನುವ ಮುಗ್ಧ ಮಗುವನ್ನು, ಹುಡುಗಿಯರು ಮಾಡುವ ಸಾಹಸ ಎಂದರೆ ಯಾವುದೇ ಅಡೆತಡೆ ಇಲ್ಲದೇ ಓದುವುದು ಎಂಬ ಪರಿಸ್ಥಿತಿಯನ್ನು, ತನ್ನ ಡೈರಿಯ ಕಥೆ ಹೇಳುವ ಹುಡುಗಿ 
ಇದ್ದರೆ ಎರಡನೇ ಭಾಗದಲ್ಲಿ ಯುದ್ಧದಿಂದ ಮಕ್ಕಳು ಹಾಗೂ ಮಹಿಳೆಯರು ಅನುಭವಿಸುವ ನೋವು, ಆತಂಕಗಳನ್ನು ಚಿತ್ರಿಸುತ್ತದೆ.ಮೂರನೆಯ ಭಾಗವು ನಾಲ್ಕು ಬರೆಹಗಾರ್ತಿಯರ ಆಲೋಚನೆಗಳಿಗೆ ಮೀಸಲಾದ ಐದು ಬರೆಹಗಳಿವೆ. ಹೆಚ್ಚು ಉನ್ನತ ಸ್ಥಾನಕ್ಕೆ ಹೋದಷ್ಟು ಸ್ತ್ರೀಯರ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ ಎನ್ನುವ ಕಿನ್ಯಾದನೋಬೆಲ್ ಪ್ರಶಸ್ತಿ ವಿಜೇತೆ ಲೇಖಕಿ ದಿ. ವಂಗಾರಿ ಮಾಥೈ ಹೇಳಿದಂತೆ ಹೆಣ್ಣು ನೆಲಪಾತಳಿಯಲ್ಲೇ ಇರುವ ಕಥೆಗಳನ್ನು ಇವು ಹೇಳುತ್ತವೆ. ನೋಬೆಲ್ ಪ್ರಶಸ್ತಿ ಪಡೆಯುವಾಗ ಕಿನ್ಯಾದ ವಂಗಾರಿ ಮಾಥೈ ಹೇಳಿದ ಮಾತುಗಳು ಮನುಕುಲದ ಕಟ್ಟ ಕಡೆಯ ಪ್ರಶ್ನೆಯಾಗಿ ಕಾಡಿದರೆ ೨೦೧೫ ರ ನೋಬೆಲ್ ಪ್ರಶಸ್ತಿ ಪಡೆದ ಸ್ವೆಟ್ಲಾನ್ ಅಲೆಕ್ಸಿವಿಚ್‌ರವರ ನೋಬೆಲ್ ಸ್ವೀಕಾರದ ಭಾಷಣ ರಷ್ಯಾದ ಚಾರ್ನೋಬಿಲ್‌ನಲ್ಲಿ ನಡೆದ ಅಣು ವಿಕಿರಣ ದುರಂತದ ಕಥೆಗಳನ್ನು ಹಾಗೂ ಇನ್ನಿತರ ನೋವಿನ ಕಥೆಗಳನ್ನು ಸವಿಸ್ಥಾರವಾಗಿ ಹೇಳುತ್ತದೆ. ಇಡೀ ರಷ್ಯಾದ ದುರಂತಮಯ ಬದುಕನ್ನು ಹೆಣ್ಣಿನ ಕಥೆಯೊಂದಿಗೇ ಕಟ್ಟಿ ಕೊಡುತ್ತದೆ.

             ಬೈಲರೂಸಿಯನ್ನ ತಂದೆಗೆ ಹಾಗೂ ಉಕ್ರೇನಿಯನ್ ತಾಯಿಗೆ ಹುಟ್ಟಿದ ಸ್ವೆಟ್ಲನ ಅಲೆಕ್ಸಿವಿಚ್ ಎನ್ನುವ ಹುಡುಗಿ ಯುದ್ಧದ ಭೀಕರತೆಯ ಬಗ್ಗೆ ಬರೆದದ್ದು ಓದಿ ಕಣ್ಣೀರು ಬರದಿದ್ದರೆ ಹೇಳಿ, ರಾತ್ರಿ ರೈಲಿನಲ್ಲಿ ಹೊರಟಿದ್ದವರ ಮೇಲೆ ದಾಳಿಯಾಗಿತ್ತು. ಅದೆಲ್ಲಿಂದಲೋ ತೂರಿ ಬಂದ ಗುಂಡೊಂದು ಇವಳ ಪಕ್ಕ ನಿಂತಿದ್ದ ಹೆಂಗಸಿನ ಎದೆ ಸೀಳಿತ್ತು. ಅವಳು ಕೆಳಗೆ ಬೀಳಲೂ ಆಗದಷ್ಟು ರೈಲು ಕಿಕ್ಕಿರಿದು ತುಂಬಿತ್ತು. ಅವಳ ಮೈಯಿಂದ ಚಿಮ್ಮಿದ ರಕ್ತ ಇವಳನ್ನು ಒದ್ದೆಯಾಗಿಸಿತ್ತು. ಜಿಗುಟಾದ, ಅಂಟಂಟಾದ ರಕ್ತದ ವಾಸನೆಗೆ ವಾಕರಿಕೆ ಬರುವಂತಾದಾಗಲೇ ಅವಳ ಅಮ್ಮ "ವಾಲ್ಯಾ ಸತ್ತು ಹೋದೆಯಾ?"  ಎಂದು ಚೀರಿದ್ದಳು. ಅದೆಂತಹ ತಲ್ಲಣ ಹುಟ್ಟಿಸಿರಬಹುದು ಹೇಳಿ. ಇಡೀ ಹಳ್ಳಿಗೆ ಹಳ್ಳಿಯ ಮಕ್ಕಳೇ ಅಪ್ಪನನ್ನು ಕಳೆದುಕೊಂಡಿದ್ದರಿಂದ ಅಪ್ಪ ಬೇಕು ಎಂದು ಎಲ್ಲರೂ ಬಯಸುವ ಆ ದಯನೀಯ ಸ್ಥಿತಿಯ ಕುರಿತು ಆಕೆ ಬರೆಯುವುದನ್ನು ಓದಿದರೆ ಕಣ್ಣು ಹನಿಗೂಡುತ್ತದೆ. 

ಜೈನಾಬ್ ಸಾಲ್ಟಿ ಎಂಬ ಹುಡುಗಿ ರಾತ್ರಿ ಹೊರಗಿಣುಕಿದರೆ ಪಕ್ಕದ ಮನೆ ಕ್ಷಿಪಣಿಗೆ ಆಹುತಿಯಾಗಿತ್ತು. ಮಾರನೆಯ ದಿನ ಪಕ್ಕದ ಮನೆಯಲ್ಲಿ ಬದುಕುಳಿದ ತಾಯಿಯೊಬ್ಬಳು ಹಿಂದಿನ ದಿನ ಸತ್ತು ಹೋದ ತನ್ನ ಮಗನ ಕ್ಲಾಸಿಗೆ ಹೋಗಿ ಅವನ ಸಹಪಾಠಿಗಳ ಬಳಿ ತನ್ನ ಮಗನ ಫೋಟೋ ಇದ್ದರೆ ಕೊಡಿ ಎಂದು ಅಂಗಲಾಚುವುದನ್ನು ನೋಡಿ ಸದ್ಯ ನನ್ನ ಮನೆಯಲ್ಲವಲ್ಲ ಎಂದು ದೇವರನ್ನು ಪ್ರಾರ್ಥಿಸಿದ ಆ ಕ್ಷಣದ ಅಪರಾಧಿ ಪ್ರಜ್ಙೆ  ಮುವತ್ತು ವರ್ಷಗಳ ನಂತರವೂ ಕಾಡುತ್ತಿರುವುದನ್ನು ಆಕೆ ನೆನಪಿಸಿಕೊಳ್ಳುವಾಗ ಯುದ್ಧ ಬೇಕಾದುದು ಯಾರಿಗೆ  ಎಂಬುದನ್ನು ನಾವು ಪ್ರಾಮಾಣಿಕವಾಗಿ ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ಹೀಗಾಗಿಯೇ ಇರಾಕಿನ ಜೈನಾಬ್ ಸಾಲ್ವಿ ರವಾಂಡದಲ್ಲಿ ನೂರು ದಿನಗಳಲ್ಲಿ ಅರ್ಧ ಮಿಲಿಯನ್ ಹೆಂಗಸರು ಅತ್ಯಾಚಾರಕ್ಕೊಳಗಾಗಿದ್ದನ್ನು ಉಲ್ಲೇಖಿಸುತ್ತಾರೆ.

ಶಾಂತಿ ಎಂದರೆ ಏನೆಂದು ಕೇಳಿದ ಪ್ರಶ್ನೆಗೆ " ನನ್ನ ಕಾಲಿನ  ಉಗುರುಗಳು ಮತ್ತೆ ಬೆಳೆಯುತ್ತಿರುವುದೇ ಶಾಂತಿ." ಎಂದು ಸುಮಾರು ಇಪ್ಪತ್ತು ವರ್ಷಗಳ ಕಾಲ ದೀರ್ಘ ಯುದ್ಧದ ಭೀಕರತೆಯನ್ನಕಂಡು, ಸೈನಿಕರ ದೈಹಿಕ ಹಸಿವೆಗೆ ಆಹಾರವಾಗಿ, ಅವರ ಹೊಟ್ಟೆ ಹಸಿವೆಗೆ ಆಹಾರ ನೀಡಿದ ಮಹಿಳೆಯೊಬ್ಬಳು ಉತ್ತರಿಸುತ್ತಾಳೆ 

ಇದೆಲ್ಲವೂ ಅದೆಷ್ಟೋ ದಶಕಗಳ ಹಿಂದಿನ ಕಥೆ ಎಂದು ಪುಟ ತಿರುಗಿಸ ಬೇಕಿಲ್ಲ.  ಕೇವಲ ನಾಲ್ಕೈದು ವರ್ಷಗಳ ಹಿಂದೆ ಅಂದರೆ ೨೦೧೫ ರಲ್ಲಿ ನಡೆದ ಯುದ್ಧದಲ್ಲಿ  ಉತ್ತರ ಇರಾಕ್ ಸಿರಿಯಾದ ಸಿಂಜಾರ್ ಮೇಲೆ ದಾಳಿ ನಡೆಸಿ ಅಲ್ಲಿನ ಹುಡುಗಿಯರನ್ನು ಲೈಂಗಿಕ  ಗುಲಾಮರು ಎನ್ನುವ ಹೆಸರಿನಲ್ಲಿ ಎತ್ತಿಕೊಂಡು ಬಂದು ಕೂಡಿಟ್ಟಿತ್ತು. ಹಾಗೆ ಒಂದು ಕಡೆ ಸಬಯ (ಲೈಂಗಿಕ ಆಳು) ಆಗಬೇಕಾದ ಅನಿವಾರ್ಯತೆಯಲ್ಲಿ ನ್ಯಾಯಾಧೀಶನೊಬ್ಬನೊಡನೆ ಹೋದ  ನಾದಿಯಾ ಮುರಾದ ತನಗೂ ರವಾಂಡಾದ ಯುದ್ದಾಪರಾಧದ ಸಂತ್ರಸ್ಥೆಯರಾದ ಮಹಿಳೆಯರಿಗೂ ಯಾವ ವ್ಯತ್ಯಾಸವೂ ಇಲ್ಲ ಎನ್ನುತ್ತಾಳೆ. ಐಸಿಸ್ ಉಗ್ರರ ಲೈಂಗಿಕ ಹಪಾಹಪಿತನ ಹಾಗೂ ಅಲ್ಲಿನ ಯಾಜಿದಿ ಅಲ್ಪಸಂಖ್ಯಾತರ ಮೇಲೆ ನಡೆದ ಆಕ್ರಮಣ ಮತ್ತು ಅತ್ಯಾಚಾರಗಳನ್ನು ಗಳಿಗೆ ಗಳಿಗೆಗೂ ಅನುಭವಿಸುತ್ತ  ಹೇಳುವ ನಾದಿಯಾಗೆ ಇಂತಹ ಕಥೆಯಿರುವ ಜಗತ್ತಿನ ಕಟ್ಟಕಡೆಯ ಸಬಯಾ ತಾನಾಗಬೇಕು ಎಂಬ ಆಸೆಯಿದೆ. 

                    "ಜಗತ್ತಿನೆಲ್ಲ ಕೆಡಕುಗಳಾಚೆ, ತಪ್ಪಾಗಳಾಚೆ ಅಲ್ಲೊಂದು ಬಯಲಿದೆ. ನಿನ್ನನ್ನು ನಾನಲ್ಲಿ ಸೇರುತ್ತೇನೆ. ಸಾತ್ಮ ಆ ಬಯಲಿನ ಹುಲ್ಲ ಮೇಲೊರಗಿದಾಗ  ಜಗತ್ತು ಅದರ ಬಗ್ಗೆ ಮಾತನಾಡುತ್ತದೆ. , ಬವಾಷೆ 'ನು' ಇವೆಲ್ಲವೂ ಅಲ್ಲಿ ಅರ್ಥಹೀನ"
...ರೂಮಿ ಹೇಳಿದ ಮಾತಿಗೆ "ಪ್ರಪಂಚದ ಯುದ್ಧ ಶಾಂತಿಯಾಚೆಗೆ ಅಲ್ಲೊಂದು ಬಯಲಿದೆ. ಅಲ್ಲಿ ಗಂಡು ಹೆಣ್ಣುಗಳು ಭೇಟಿಯಾಗುತ್ತಿದ್ದಾರೆ. ಆ ಬಯಲನ್ನು ಇನ್ನಷ್ಟು ವಿಶಾಲವಾಗಿಸೋಣ. ಎಲ್ಲರೂ ಅಲ್ಲಿ ಸೇರೋಣ" ಎನ್ನುವ  ಜೈನಾಬ್ ಸಾಲ್ಬಿಯ ಮಾತುಗಳಿಗೆ ನನ್ನ ಪೂರ್ಣ ಬೆಂಬಲವಿದೆ.
              ಶ್ರೀದೇವಿ ಕೆರೆಮನೆ

2 comments:

  1. ಪೂರ್ತಿಯಾಗಿ ಓದಿದೆ. ಎಂದಿನಂತೆ ತಮ್ಮ ಪುಸ್ತಕ ವಿಶ್ಲೇಷಣೆ ಓದುಗರ ಮನಸೊರೆಗೊಳ್ಳುವಂತಿದೆ. ನಮ್ಮ ಸಮಕಾಲೀನರ ಪೈಕಿ ತಮ್ಮಂತಹ ಓದುತ್ತ, ಬರೆಯುತ್ತ, ಚೆಂದದ ಬದುಕು ನಡೆಸುತ್ತ ನಡೆಯುತ್ತಿರುವವರು ಬೆರಳೆಣಿಕೆಯಷ್ಟು ಮಾತ್ರವೇ ಇದ್ದಾರೆ.

    ReplyDelete
  2. ಪುಸ್ತಕ ವಿಮರ್ಶೆ- ಉರಿವ ಬನದ ಕೋಗಿಲೆ. Kannalli neru barasiitu. Vishleshane rumba channagide.
    Pustakavannu oduttene.

    ReplyDelete