Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Sunday, 1 August 2021

ತಲೆ ತಗ್ಗಿಸುವ ಆಟದೊಳಗೆ

ಒಂಟಿ ಹೆಣ್ಣು ಸಿಕ್ಕರೆ ಶೌರ್ಯ ತೋರುವ ಗುಂಪುಗಳು ಗಂಡುಕುನ್ನಿಗಳಿಗಿಂತ ಭಿನ್ನವಲ್ಲ

ಬೇರೆಯವರು ಮಾಡಿದ ಕೆಲಸ ನೋಡಿ ನಾವು ಮುಜುಗರದಿಂದ ತಲೆ ತಗ್ಗಿಸುವ ಪರಿಸ್ಥಿತಿ ಬರಬಹುದು. ಪರರ ಮಾನಗೆಟ್ಟ ಕೆಲಸದಿಂದ ನಾವು ತಲೆ ತಗ್ಗಿಸಬೇಕಾದ ಹಲವು ಪ್ರಸಂಗಗಳನ್ನು ಹೇಗೆ ಎದುರಿಸಬೇಕಾಗುತ್ತದೆ ಎಂಬುದನ್ನು ಲಕ್ಷ್ಮಿ ದೊಡ್ಮನಿಯವರು " ಅರಳು ಮಲ್ಲಿಗೆ" ಸಂಕಲನದ ಗಜಲ್ ವೊಂದರಲ್ಲಿ ದಿಟ್ಟವಾಗಿ  ಹೇಗೆ ಓದುಗರ ಮುಂದಿಟ್ಟಿದ್ದಾರೆ ಎಂಬುದನ್ನುಲೇಖಕಿ ಶ್ರೀದೇವಿ ಕೆರೆಮನೆ  Newsroom9 ನ “ತೀರದ ಧ್ಯಾನ” ಅಂಕಣದಲ್ಲಿ ವಿವರಿಸಿದ್ದಾರೆ
https://newsroom9.com/harassment-on-women-government-protection-accused/

ತಲೆತಗ್ಗಿಸುವ ಆಟದೊಳಗೆ  

ತಲೆ ತಗ್ಗಿಸುವುದು ಎಂದರೆ ಅವಮಾನವಾಗುವುದು ಎಂದರ್ಥ. ಹಾಗಾದರೆ ಅವಮಾನ ಏಕಾಗುತ್ತದೆ? ನಮ್ಮದೇನಾದರೂ ತಪ್ಪಿದ್ದರೆ ಅದು ತಿದ್ದಿಕೊಳ್ಳುವ ವಿಷಯವೇ ಹೊರತು ತಲೆ ತಗ್ಗಿಸುವ ವಿಷಯವಲ್ಲ. ಆದರೆ ನಾವು ತಲೆ ತಗ್ಗಿಸುವುದು ಯಾವಾಗ ಎಂದರೆ ನಾವು ಮಾಡಿದ ಕೆಲಸ ನಮಗೇ ಸಹ್ಯವಾಗದಿರುವಾಗ ಕೆಲವೊಮ್ಮೆ ನಾವು ಮಾಡಿದ ಕೆಲಸಕ್ಕೆ ತಲೆ ತಗ್ಗಿಸುವ ಮಾತು ಅಂತಿರಲಿ, ಬೇರೆಯವರು ಮಾಡಿದ ಕೆಲಸ ನೋಡಿಯೂ ಮುಜುಗರದಿಂದ ತಲೆ ತಗ್ಗಿಸುವ ಪರಿಸ್ಥಿತಿ ಬರಬಹುದು.  ಪರರ ಮಾನಗೆಟ್ಟ ಕೆಲಸದಿಂದ ನಾವು ತಲೆ ತಗ್ಗಿಸುವಂತಾಗುವ ಹಲವಾರು ಪ್ರಸಂಗಗಳನ್ನು ನಾವು ಕಾಣಬಹುದು. 

ಮನುಜರು ಪಶುಗಳಂತೆ ಆಡುವುದ ಕಂಡು ತಲೆ ತಗ್ಗಿಸಿದ್ದೇನೆ 
ಮೋಹ ಬಲೆಯಲಿ ಹೊರಳಾಡುವುದ ಕಂಡು ತಲೆ ತಗ್ಗಿಸಿದ್ದೇನೆ 

ಮನುಷ್ಯರು ಮನುಷ್ಯರಂತೆ ನಡೆದುಕೊಳ್ಳಬೇಕು. ಮಾನವೀಯತೆ ಎಂಬ ಪದ ಬಳಕೆಗೆ ಬಂದಿರುವುದೇ ಮನುಷ್ಯನ ಒಳ್ಳೆಯ ಗುಣಗಳಿಂದ ಅಂತ ನಂಬಿಕೊಂಡಿದ್ದೇವೆ. ಇಲ್ಲವೆಂದಾದರೆ ನಾಯಿಯತೆ, ಹುಲಿಯತೆ ಎಂದು ಪ್ರಾಣಿಗಳ ಹೆಸರಿನಿಂದ ಕರೆಯಬಹುದಾಗಿತ್ತೇನೋ. ಆದರೆ ಈ ಮನುಷ್ಯ ಈಗ ಅದನ್ನೆಲ್ಲ ಮರೆತು ಪ್ರಾಣಿಗಳಿಗಿಂತ ಕೀಳಾದ ವರ್ತನೆ ತೋರುತ್ತಿರುವಾಗ ತಲೆ ತಗ್ಗಿಸದೇ ಇರಲು ಹೇಗೆ ಸಾಧ್ಯ? 
    ಜೀವನದಲ್ಲಿ ಮೋಹವನ್ನು ಬಿಡಲು ಸಾಧ್ಯವಿಲ್ಲ. ಆದರೆ ಆ ಮೋಹದ ಕಾರಣದಿಂದಾಗಿ ತಲೆ ತಗ್ಗಿಸುವಂತಾದರೆ ಅದರ ಅವಮಾನದ ಭಾರ ಬಲು ಹೆಚ್ಚು. ಮೋಹ ಸಹಜ. ಆದರೆ ಮೋಹವನ್ನೆ ಕೊಚ್ಚೆ ಗುಂಡಿಯನ್ನಾಗಿಸಿಕೊಂಡು ಹಂದಿಯಂತೆ ಹೊರಳಾಡಿದರೆ ಹೆಮ್ಮೆ ಪಡಲು ಸಾಧ್ಯವೇ? 

ಉದರದೊಳಗಿನ ಮಾಂಸದ ಮುದ್ದೆಯ ಅಂಗ ಲಿಂಗ ಪರೀಕ್ಷಿಸಿ 
ಹೆಣ್ಣುಕೂಸಿನ ಉಸಿರು ನಿಲ್ಲಿಸುವುದು ಕಂಡು ತಲೆ ತಗ್ಗಿಸಿದ್ದೇನೆ   
ಹೆಣ್ಣೆಂದರೆ ಹೊರೆ ಎಂಬಂತಾಗಿದೆ ಇತ್ತೀಚಿನ ದಶಕಗಳಲ್ಲಿ ಹೆಣ್ಣು ಹುಟ್ಟಿದರೆ ಮನೆಗೆ ಕಳಶ ಎಂಬ ಮಾತು ಮರೆತು ಹೆಣ್ಣೆಂದರೆ ಕಂಕುಳಲ್ಲಿನ ಹುಣ್ಣು ಎಂದು ಪರಿಗಣಿಸಿ ಅದಾವುದೋ ಕಾಲವಾಯಿತು. ಕಂಕುಳಲ್ಲಿ ಹುಣ್ಣಾದರೆ ಕೈ ಮಡಚುವಂತಿಲ್ಲ, ಕ್ಷಣಮಾತ್ರಕೂ ಆರಾಮದಿಂದಿರುವಂತಿಲ್ಲ. ಹೆಣ್ಣೆಂದರೆ ಹಾಗೇ ಎಂದು ಭಾವಿಸಲು ಹಲವಾರು ಕಾರಣಗಳಿವೆ. ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ನಮ್ಮನ್ನು ಈ ಭಾವ ತಳೆಯಲು ಕಾರಣವಾಗಿದೆ. ಹೀಗಾಗಿ ಗರ್ಭದೊಳಗೇ ಭ್ರೂಣವನ್ನು ಪರೀಕ್ಷಿಸಿ ಬ್ರೂಣವನ್ನೆ ತೆಗೆಸಿಬಿಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಹಾಗೆ ನೋಡಿದರೆ ಇದೊಂದು ಲಾಭದಾಯಜ ದಂತೆಯಾಗಿ ಪರಿಣಮಿಸಿದೆ. ಕಾನೂನಿನ ದೃಷ್ಟಿಯಿಂದ ಬ್ರೂಣ ಹತ್ಯೆ ಅಪರಾಧ. ಆದರೆ ಕಾನೂನಿನ ಒಳಗಿರುವ ಸಣ್ಣ ತೂತಿನಲ್ಲೂ ಹೆಗ್ಗಣ ಒಳಸೇರಬಹುದು. ಅನಾರೋಗ್ಯದ ನೆಪ, ಬ್ರೂಣ ಸರಿಯಾಗಿ ಬೆಳೆದಿರದ ನೆಪ ಹೇಳಿ ಬ್ರೂಣ ಹತ್ಯೆ ಮಾಡುವುದನ್ನು ಕಂಡು ಪ್ರಜ್ಞಾವಂತರಾದವರು ತಲೆ ತಗ್ಗಿಸಲೇ ಬೇಕು


ಗುಂಪು ಕಟ್ಟಿಕೊಂಡಿರುವ ನಾಯಿಗಳು ಅಬಲೆಯ ಬಲಿಪಡೆದವು 
ಕಾಮ ಅಟ್ಟಹಾಸಕೆ ಬಲಿಯಾಗುವುದು ಕಂಡು ತಲೆ ತಗ್ಗಿಸಿದ್ದೇನೆ 

ಹೆಣ್ಣು ನಾಯಿಯನ್ನು ಕಂಡರೆ ಗಂಡುಕುನ್ನಿಗಳು ಹಿಂಡುಹಿಂಡಾಗಿ ಹಿಂಬಾಲಿಸುತ್ತವೆ. ಒಟ್ಟಾಗಿ ಹೆಣ್ಣು ನಾಯಿಯ ಮೇಲೆ ಎರಗುತ್ತವೆ. ಹಾಗಂತ ಮನುಷ್ಯರ ನಡವಳಿಕೆ ಇದಕ್ಕಿಂತ ಭಿನ್ನವಾಗಿಲ್ಲ.  ಒಂಟಿ ಹೆಣ್ಣು ಸಿಕ್ಕರೆ ತಮ್ಮ ಶೌರ್ಯದ ಪ್ರದರ್ಶನ ಮಾಡುವ ಈ ಗುಂಪುಗಳು ಗಂಡುಕುನ್ನಿಗಳಿಗಿಂತ ಭಿನ್ನವೇನಲ್ಲ. ಅತ್ಯಾಚಾರವೆಸಗಿ, ಅಷ್ಟರಿಂದಲೂ ತೃಪ್ತಿ ಸಿಗದೇ ವಿಕೃತವಾಗಿ ವರ್ತಿಸಿ, ಕೊಲೆಗೈಯ್ಯು ಇವರು ಕ್ರೂರ ಕಾಡು ಪ್ರಾಣಿಗಳಿಗಿಂತ ಹೇಯ. 

   ಕಾಮ ಎನ್ನುವುದು ಪ್ರಕೃತಿ ಸಹಜ. ಪರಸ್ಪರ ಒಪ್ಪಿಗೆಯ ಮೇರೆಗೆ ನಡೆದರೆ ಅದು ಅಲೌಕಿಕ. ಆದರೆ ಬಲವಂತವಾಗಿ ಅಟ್ಟಹಾಸಗೈದರೆ ಮಾತ್ರ ಬೀಭತ್ಸ. ಅಂತರ ಘೋರ ಅತ್ಯಾಚಾರ, ನಂತರದ ಹಲ್ಲೆ ಹಾಗೂ ಕೊಲೆಗಳನ್ನು ಕಂಡು ತಲೆತಗ್ಗಿಸದೇ ಹೋದರೆ ನಮ್ಮನ್ನು ನಾವು ಮಾನವಂತರು ಎಂದುಕೊಳ್ಳಲು ಸಾಧ್ಯವೇ? 


ಅನ್ಯಾಯ ತಡೆಯದ ವ್ಯವಸ್ಥೆ ಅತ್ಯಾಚಾರ ನಿಲ್ಲಿಸಲಾಗದ  ಕೈಗಳು  
ದಂಡಿಸಲು ಅಸಮರ್ಥ ಕಾನೂನುಗಳ ಕಂಡು ತಲೆ ತಗ್ಗಿಸಿದ್ದೇನೆ 

ಇಂದಿನ ಸಮಾಜ ಕೊಳೆತು ನಾರುತ್ತಿದೆ. ವಾರದ ಸಂತೆಯ ನಂತರ ನಾರುವ ರಸ್ತೆಯಂತೆ. ಯಾವ ಸರಕಾರ ಬಂದರೂ ಅಷ್ಟೇ. ಹೆಣ್ಣಿನ ಮೇಲೆ ದೌರ್ಜನ್ಯ ನಿಲ್ಲುವುದಿಲ್ಲ. ಅಸಹಾಯಕರನ್ನು ಶೋಷಿಸುವುದು ತಪ್ಪುವುದಿಲ್ಲ. ವ್ಯವಸ್ಥೆಯೇ ಹಾಗಿದೆ. ಅನ್ಯಾಯವನ್ನು ತಡೆಯುವ ಮನಸುಳ್ಳ ಕೈಗಳಿಗೆ ಕೋಳ ಹಾಕಲಾಗಿದೆ. ಅದು ಪೋಲಿಸರದ್ದಾದರೂ ಅಷ್ಟೇ, ವಕೀಲರದ್ದಾದರೂ ಅಷ್ಟೇ. ಆಳುವ ವರ್ಗವೇ ಅನ್ಯಾಯಕ್ಕೆ ಬೆಂಬಲವಾಗಿ ನಿಂತು ರಕ್ಷಿಸುತ್ತದೆ. ಅನ್ಯಾಯ ಎಸಗುವವರಿಗೆ  ಶಿಕ್ಷೆ ವಿಧಿಸದ  ಕಾನೂನನ್ನು ಕಂಡು ಎಲ್ಲರೂ ತಲೆ ತಗ್ಗಿಸಬೇಕಿದೆ.


ಹೆಣ್ಣು ರಾತ್ರಿ ನಿರ್ಭಯವಾಗಿ ಹೊರಬೀಳುವುದು ಇಲ್ಲಿ ಸಾಧ್ಯವೇ 
ಹಗಲಿನಲೂ ಕೂಸು ಹೆದರುತಿರುವುದು ಕಂಡು ತಲೆ ತಗ್ಗಿಸಿದ್ದೇನೆ 

ಹೆಣ್ಣೊಬ್ಬಳು ಮಧ್ಯರಾತ್ರಿ ನಿರ್ಭಯಳಾಗಿ ಓಡಾಡುವಂತಾದರೆ ಆ ದಿನ ನಮಗೆ ನಿಜವಾದ ಸ್ವಾತಂತ್ರ್ಯ ಲಭಿಸಿದಂತೆ ಎಂದು ಗಾಂಧೀಜಿಯವರು ಹೇಳಿದ್ದರು. ಆದರೆ ಸ್ವಾತಂತ್ರ್ಯ ಸಿಕ್ಕಿ ಅರ್ಧ ಶತಮಾನ ಕಳೆದು ಮುಕ್ಕಾಲು ಶತಮಾನದ ಹತ್ತಿರ ಇರುವಾಗಲೂ ಹೆಣ್ಣೊಬ್ಬಳು ರಾತ್ರಿಯ ಹೊತ್ತು ಬಿಡಿ, ಹಗಲಿನಲ್ಲಿಯೂ ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. 

ರಾತ್ರಿ ಕೆಟ್ಟ ಕನಸು ಬೀಳುವುದು ಸಹಜ. ಆದರೆ ಅದು ವಾಸ್ತವವಲ್ಲ. ಕನಸು ತಿಳಿದೆದ್ದ ಮೇಲೆ ಮತ್ತೆ ಆ ಕನಸು ಮರೆವಾಗುತ್ತದೆ. ಆದರೆ ಹಗಲಿನಲ್ಲಿ ನಿದ್ದೆಯಿಲ್ಲದೆ ಎಚ್ಚರದಿಂದ ಇರುವಾಗಲೂ ಹೆಣ್ಣು ಕೂಸೊಂದು ಬೆಚ್ಚಿ ಬೀಳುವ ಅನಾಗರಿಕ ಸಮಾಜವನ್ನು ನಿರ್ಮಿಸಿ ಬಿಟ್ಟಿದ್ದೇವೆ. ಇಂತಹ ಅಸಹ್ಯ ಸಮಾಜದ ನಿರ್ಮಾಣದಲ್ಲಿ ನಮ್ಮ ಪಾತ್ರವೆಷ್ಟು? ಯೋಚಿಸಿದರೆ ನಾವು ಖಂಡಿತಾ ತಲೆ ತಗ್ಗಿಸಲೇ ಬೇಕು. 


ಶ್ರೇಷ್ಠ ಸಂಸ್ಕೃತಿಯ ವಾರಸುದಾರದೆಂದು  ಬೀಗಿದರೇನು ಮಲ್ಲಿಗೆ 
ಸನ್ಯಾಸಿಗಳೂ ಭೋಗ ಬಯಸುವುಸುದು ಕಂಡು ತಲೆ ತಗ್ಗಿಸಿದ್ದೇನೆ 

ಮನುಷ್ಯ ಶ್ರೇಷ್ಠ ಎಂದುಕೊಳ್ಳುತ್ತೇವೆ. ಮಾನವ ಜನ್ಮದಷ್ಟು ದೊಡ್ಡದು ಯಾವುದೂ ಇಲ್ಲ ಎನ್ನುತ್ತೇವೆ.  ಆದರೆ ಎಲ್ಲ ಮಾನವರೂ ಶ್ರೇಷ್ಠರೇ? ಖಂಡಿತಾ ಇಲ್ಲ. ಮನುಷ್ಯರಲ್ಲಿಯೇ ಕೆಲವರನ್ನು ನಿಕೃಷ್ಟವಾಗಿ ಕಾಣುತ್ತೇವೆ. ಕೆಲವರನ್ನು ಮುಟ್ಟಿಸಿಕೊಳ್ಳಲೂ ಹಿಂಜರೆಯುತ್ತೇವೆ. ಆದರೆ ಕೆಲವರು ಜಾತಿ ಧರ್ಮದ ಹೆಸರು ಹೇಳಿ ನಮ್ಮ ಶ್ರೇಷ್ಠತೆಗೆ ಸಾಕ್ಷಿ ಒದಗಿಸಿಕೊಳ್ಳುತ್ತಾರೆ. ತಾವು ಯಾವುದೋ ಶ್ರೇಷ್ಠ ಮನೆತನದ ವಂಶಜರು ಎಂದುಕೊಳ್ಳುವ ನಾವು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುತ್ತೇವೆ. 
  ಇಂತಹ ಶ್ರೇಷ್ಠತೆಯ ಮುಂದುವರಿಕೆಗಾಗಿ ಮಠ ಕಟ್ಟಿಕೊಂಡಿದ್ದೇವೆ. ಇನ್ನೂ ಬಯಕೆ ತೀರದವರನ್ನು ತಂದು ಮಠಾಧೀಶರನ್ನಾಗಿಸಿದ್ದೇವೆ. ಜಗದ್ಗುರು ಎಂದು ದೀರ್ಘದಂಡ ನಮಸ್ಕಾರ ಮಾಡುತ್ತೇವೆ. ಆದರೆ ಆ ಸರ್ವತ್ಯಾಗಿಗಳಾದ ಸ್ವಾಮಿಗಳು ವೈಭೋಗದ ಜೀವನಕ್ಕಾಗಿ ಹಾತೊರೆಯುತ್ತಾರೆ.‌ ಪರಿತ್ಯಾಗಿಗಳ ಓಡಾಟಕ್ಕೆ ದುಬಾರಿ ಬೆಲೆಯ ಕಾರೇ ಬೇಕು, ಪಲ್ಲಕಿ ಬೇಕು. ವೈಭವದ ಹೊಟೇಲ್ ರೂಂ ಬೇಕು. ರಾಜಕೀಯ ಅಧಿಕಾರ ಬೇಕು. ಹೇಳುವುದು ಎಲ್ಲ ಸುಖವನ್ನೂ ತ್ಯಜಿಸಿದ ಸ್ಥಿತಿಪ್ರಜ್ಞರು. ಆದರೆ ರಾಜಕೀಶ ಸಮಾವೇಶಗಳಲ್ಲಿ ಭಾಗವಹಿಸಿ ಅವರೆಸೆಯುವ ಭಿಕ್ಷೆಗೆ ಕೈ ಚಾಚುವುದನ್ನು ಕಂಡರೆ ತಲೆ ತಗ್ಗಿಸದೇ ಇರಲು ಹೇಗೆ ಸಾಧ್ಯ? 
 ಲಕ್ಷ್ಮಿ ದೊಡ್ಮನಿಯವರ ಅರಳು ಮಲ್ಲಿಗೆ ಸಂಕಲನದ ಗಜಲ್ ಇದು.  ಕಂಡು ತಲೆ ತಗ್ಗಿಸಿದ್ದೇನೆ ಎನ್ನುವುದು ರಧೀಪ್  ದು ಎಂಬುವುದು ರವೀಶ. ಮಲ್ಲಿಗೆ ಎಂಬುದು ಲಕ್ಷ್ಮಿಯವರ ತಖಲ್ಲೂಸ್
ಮಹಾರಾಷ್ಟ್ರದ ಅಕ್ಕಲಕೋಟೆಯ ಲಕ್ಷ್ಮಿಯವರದ್ದು ಕನ್ನಡ ಮನಸ್ಸು. ಕನ್ನಡ ಮನೆ ಮಾತು. ಕನ್ನಡದಲ್ಲಿ ಕಾವ್ಯರಚನೆ ಮಾಡುತ್ತ ತಮ್ಮ ಮೂಲವಾದಾ ಕರ್ನಾಟಕದೊಂದಿಗೆ ಮಾನಸಿಕವಾಗಿ ಬೆಸೆದುಕೊಂಡಿದ್ದಾರೆ. 
  ಈ ಗಜಲ್ ಸಾಮಾಜಿಕ ವಿಡಂಬನೆಗೆ ಉತ್ತಮ ಉದಾಹರಣೆಯಾಗಿ ನಮ್ಮೆದುರಿಗಿದೆ. ವಿಷಾದ ಭಾವ ದಟ್ಟವಾಗಿ ಆವರಿಸಿದಂತೆ ಕಂಡರೂ ಹೇಳಬೇಕಾದುದನ್ನು ಹೇಳುವ ದಿಟ್ಟತೆ ಇದೆ. ಪ್ರಸ್ತುತ ಸನ್ನಿವೇಶಕ್ಕೆ ಅತ್ಯುತ್ತಮವಾಗಿ ತಾಳೆಯಾಗುವ ಗಜಲ್ ಇದು
https://newsroom9.com/harassment-on-women-government-protection-accused/

Saturday, 17 July 2021

ಜೀವನಪೂರ್ತಿ ಜೊತೆಗೆ ಹೆಜ್ಜೆಯಿಡುವ ಹುಸಿ ಭರವಸೆಯ ಮರೆತು





ಗೋರಿ ಮೇಲಿನ ಹೂ ಗಜಲ್ ಸಂಕಲನದಲ್ಲಿ ಅಭಿಷೇಕ್ ಬಳೆ ಅವರು ಬದುಕಿನ ಬವಣೆಯನ್ನು ಕಡಿಮೆ ಮಾಡದ ಈ ಬಣ್ಣದ ಮಾತುಗಳಿಗೆ ಮರುಳಾಗದ ತನ್ನ ಜನರ ನೋವು ನಲಿವುಗಳನ್ನು  ಬಿಚ್ಚಿಟ್ಟ ಬಗೆಯನ್ನು ಶ್ರೀ ದೇವಿ ಕೆರೆಮನೆ  Newsroom9 ನಲ್ಲಿ  ತಮ್ಮ “ತೀರದ ಧ್ಯಾನ” ಅಂಕಣ


https://newsroom9.com/poor-labourers-life-and-politicians-negligence/

ಜೀವನಪೂರ್ತಿ ಜೊತೆಗೆ ಹೆಜ್ಜೆಯಿಡುವ ಹುಸಿ ಭರವಸೆಯ ಮರೆತು

ದುಡಿದು ಬದುಕುವ ಜನರ ಪಾಡು ನಿಜಕ್ಕೂ ಶೋಚನೀಯ. ರೆಟ್ಟೆ ಮುರಿಯುವಷ್ಟು ದುಡಿದರೂ ಎರಡು ಹೊತ್ತಿನ  ಹೊಟ್ಟೆ ತುಂಬುವುದಿಲ್ಲ. ಮಕ್ಕಳಿಗೆ ಮೈ ತುಂಬ ಬಟ್ಟೆ ಇಲ್ಲ. ವಿದ್ಯೆಯ ಸವಲತ್ತುಗಳಿಲ್ಲ. ಚಂದದ ಬದುಕಿಲ್ಲ. 

ಶ್ರಮಿಕ ವರ್ಗ ಸುಖ ಜೀವನದ ಕನಸು ಕಾಣುತ್ತಲೇ ಇದೆ ಶತಮಾನಗಳಿಂದಲೂ. ಆದರೆ ಇಂದಿಗೂ ಆ ಕನಸು ಮರಿಚಿಕೆಯಾಗಿಯೇ ಉಳಿದಿದೆ. ಬೆಳಿಗ್ಗೆ ಎದ್ದರೆ ಇಂದಿನ ಮೂರು ಹೊತ್ತಿನ ಊಟಕ್ಕೇನು ಎಂದು ಯೋಚಿಸುವುದೇ  ಆಗುತ್ತದೆಯೇ ಹೊರತು ಮುಂದಿನ ಭವಿಷ್ಯ ಏನು ಎಂದು ಯೋಚಿಸುವಷ್ಟು ಶಕ್ತಿ, ವ್ಯವಧಾನ ಇರುವುದಿಲ್ಲ. ಅಂತಹ ನನ್ನ ಜನಗಳ ಕುರಿತಾದ ಗಜಲ್ ಇಲ್ಲಿದೆ 

ಚಿಮಣಿಯ ಬೆಳಕಿನಲ್ಲಿ ಅದೆಷ್ಟು ಕತ್ತಲ ರಾತ್ರಿಗಳ ಕಳೆದರು ನನ್ನ ಜನ 
ಭರವಸೆಯು ಬೆಳಕಾಗಿ ಬರುವುದೆಂದು ದಿನವ ದೂಡಿದರು ನನ್ನ ಜನ
ಹಳ್ಳಿಗಳಲ್ಲಿ ಇರುವ ಬಡವರ ಮನೆಗೆ ಇಂದಿಗೂ ವಿದ್ಯುಶ್ಚಕ್ತಿ ಇಲ್ಲ. ಚಿಮಣಿ ಎಣ್ಣೆಯ ಹೊಗೆ ಕಾರುವ ರಾತ್ರಿ ಅವರ ಬದುಕಿನಲ್ಲಿ ಅದೆಷ್ಟೋ. ಚಿಮಣಿಯ ಬೆಳಕು ಎನ್ನುವುದು ಅದೆಷ್ಟು ಅರ್ಥಗಳನ್ನು ಧ್ವನಿಸುತ್ತದೆ ಎಂಬುದನ್ನು ಗಮನಿಸಬೇಕು.  ಚಿಮಣಿ ದೀಪ ಎನ್ನುವುದು ಕವಿದ ಕಾರಿರುಳನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆಯೇ ಹೊರತು, ಕತ್ತಲನ್ನು ಓಡಿಸಿ ಸಂಪೂರ್ಣ ಬೆಳಕನ್ನು ನೀಡುವುದಿಲ್ಲ.  ಅದೊಂದು ಹುಸಿ ಭರವಸೆಯ ಪ್ರತೀಕವೂ ಹೌದು. ಕತ್ತಲೆಯಲ್ಲಿದ್ದವರಿಗೆ ಬೆಳಕಿನಲ್ಲಿರುವ ಭ್ರಮೆಯನ್ನು ನೀಡುತ್ತದೆ. ಆದರೆ ಸುತ್ತಲೂ ಕಗ್ಗತ್ತಲೆ ತಾಂಡವವಾಡುತ್ತಿರುತ್ತದೆ. ಚಿಮಣಿಯ ಬೆಳಕು ತಾತ್ಕಾಲಿಕ ಪರಿಹಾರದ ಸಂಕೇತ. ಆ ಹೊತ್ತಿಗೆ ಅವಶ್ಯಕವಿರುವ ಬೆಳಕು ಸಿಗುತ್ತದೆ. ಆದರೆ ಸೀಮೆ ಎಣ್ಣೆ ತೀರಿದ ನಂತರ ದೀಪ ಕಮಟು ವಾಸನೆ ಬೀರಿ ಆರಿಹೋಗುತ್ತದೆ. ಮುಂದೆ ಮತ್ತೆ ಕತ್ತಲೆಯೇ ಗತಿ. ಹೀಗೆ ಬಡವರ ಬದುಕು ಚಿಮಣಿ ದೀಪವೇ. ಆ ಹೊತ್ತಿಗೆ ಒಂದಿಷ್ಟು ಬೆಳಕು. ನಂತರ ಮತ್ತದೆ ದಾರಿ ಕಾಣದ ಜೀವನ. 
   ಆದರೂ ಚಿಮಣಿ ದೀಪ ಭರವಸೆಯೂ ಹೌದು. ಕತ್ತಲಲ್ಲಿ ಕುಳಿತವನಿಗೆ ಮಿಂಚುಹುಳದ ಬೆಳಕು ಮಾರ್ಗದರ್ಶನ ಮಾಡಬಹುದಾದರೆ ಚಿಮಣಿ ನಿಜಕ್ಕೂ ದಾರಿ ತೋರುವ ಉಜ್ವಲತೆಯೆನಿಸುತ್ತದೆ. ಹೀಗೆ ಆಶಾದಾಯಕ ಮತ್ತು ತಾತ್ಕಾಲಿಕ ಹೀಗೆ ಎರಡೂ ಆಗಿ ತೋರುವ ಚಿಮಣಿಯಬೆಳಕಿನಲ್ಲಿ ನನ್ನ ಜನ ಜೀವನ ಸಾಗಿಸುತ್ತಾರೆ ಎಂದು ಗಜಲಕಾರ ಹೇಳಿದ್ದಾರೆ.  ಅಂತಹ ಚಿಮಣಿ ಭರವಸೆಯ ಬೆಳಕು ನೀಡುವುದೆಂದು ಕಾಯುವ ತನ್ನ ಜನ ಕಾಯುತ್ತಿರುವುದನ್ನು ತೀರಾ ವಿಚಾರದಿಂದ ಗಜಲಕಾರ ಹೇಳುತ್ತಾರೆ. 


ಕೇಳಿ ಬಿಡುತ್ತಿದ್ದರು ಐದು ವರ್ಷದ ಊಸರವಳ್ಳಿ ಆಶ್ವಾಸನೆಗಳ ಇವರು 
ಯಾವುದಕ್ಕೂ ಸೊಪ್ಪು ಹಾಕದೆ ಎಂದಿನ ಬದುಕ ಬದುಕಿದರು ನನ್ನ ಜನ

ರಾಜಕಾರಣಿಗಳು ಊಸರವಳ್ಳಿಗಳು.‌ಮತದಾನಕ್ಕೆ ಮೊದಲು ಕೈ ಮುಗಿದು, ಅಣ್ಣ ಅಕ್ಕ ಎಂದು ಬಣ್ಣದ ಮಾತಾಡಿ ಸೋಗು ಹಾಕುವ ಇವರೇ ಚುನಾವಣೆಯಲ್ಲಿ ಆರಿಸಿ ಬಂದ ನಂತರ ಒಮ್ಮೆಯೂ ತಿರುಗಿ ನೋಡುವುದಿಲ್ಲ. ಮತ್ತೆ ಅವರ ಮುಖ ದರ್ಶನವಾಗಬೇಕೆಂದರೆ ಐದು ವರ್ಷಗಳ ಕಾಲ ಕಾಯಬೇಕು.  ಚುನಾವಣೆಗೂ ಮುನ್ನ ನೀಡುವ ಹತ್ತಾರು ಆಶ್ವಾಸನೆಗಳು ಈಡೇರದ ಗಾಳಿ ಮಾತುಗಳು ಎಂದು ಗೊತ್ತಿದ್ದರೂ ನನ್ನ ಜನ ಅದನ್ನು ನಂಬಿ ಹಾಕಿದರು. ಆದರೆ ಆ ಗೋಸುಂಬೆಗಳು ತಮ್ಮ ನಿಜವಾದ ರೂಪ ತೋರಿ ಈ ಜನರನ್ನು ಮರೆತರು. ಇರಲಿ, ಮರೆತರೇನು? ಅದ್ಯಾವುದಕ್ಕೂ ನನ್ನ ಜನ ಹೆದರಲಾರರು. ತಮ್ಮ ಬದುಕಿನ‌ ನಿರಂತರತೆ ಹಾಳಾಗದಂತೆ ಕಾಪಿಟ್ಟುಕೊಂಡರು. ಈ ಗೋಮುಖ ವ್ಯಾಘ್ರರ ಮುಖಕ್ಕೆ ಹೊಡೆದಂತೆ ಬದುಕಿದರು

ಬಣ್ಣ ಹಚ್ಚದ ನಾಲಿಗೆಯಿಂದ ಬಣ್ಣ ಬಣ್ಣದ ತರೇಹವಾರಿ ಮಾತುಗಳು 
ಮಾತುಗಳಿಗಷ್ಟೆ ಬಣ್ಣ ನಮ್ಮ ಬವಣೆಯ ಬದುಕಿಗಲ್ಲ ಎಂದರು ನನ್ನ ಜನ

ಮುಖಕ್ಕೆ ಬಣ್ಣ ಹಚ್ಚಿ ರೂಪ ಬದಲಾಯಿಸುವುದು ಉಳ್ಳವರ ಸಹಜ ಗುಣ. ಆದರೆ ನನ್ನವರಿಗೆ ಯಾವ ಕೃತ್ರಿಮತೆಯ ಅರಿವೂ ಇಲ್ಲ‌. ಅಂತಹ ಮುಖಕ್ಕೆ ಬಣ್ಣ ತೊಟ್ಟವರು, ಬಣ್ಣ ಹಚ್ಚಲಾಗದ ನಾಲಿಗೆಯಿಂದ ಬಣ್ಣ ಬಣ್ಣದ ಮಾತನಾಡುತ್ತಾರೆ. ಮಾತಿನಲ್ಲೇ ಅರಮನೆ ಕಟ್ಟಿ ಆಕಾಶ ತೋರುತ್ತಾರೆ. ಮಾತಿನ ಸಾಮ್ರಾಜ್ಯದಲ್ಲಿ  ಸ್ವರ್ಗ ಕಾಣಿಸುತ್ತಾರೆ. ಆದರೆ ನನ್ನ ಜನಗಳಿಗೆ ಈ ಬಣ್ಣದ ಮಾತುಗಳ ಅರಿವಿದೆ. ಬದುಕಿನ ಬವಣೆಯನ್ನು ಕಡಿಮೆ ಮಾಡದ ಈ ಬಣ್ಣದ ಮಾತುಗಳಿಗೆ ಮರುಳಾಗುವುದಿಲ್ಲ ನನ್ನ ಜನ ಎಂದು ಗಜಲಕಾರ ಹೆಮ್ಮೆ ಪಡುತ್ತಾರೆ


ಯಾರೇ ಬಂದು ಹೋದರು ಬದುಕು ಬದಲಾಗಲಿಲ್ಲ ಹೊಸದಾಗಿ 
ಮತ್ತೆ ಹರಿದ ಬದುಕಿಗೆ ಅದೇ ಹಳೆಯ ಕಿತ್ತೊದ ತೇಪೆಯ ಹಾಕಿದರು ನನ್ನ ಜನ


ಬದುಕಿನ ಪಯಣದಲ್ಲಿ ಅದೆಷ್ಟೋ ಜನ ಜೊತೆಯಾಗುತ್ತಾರೆ. ಅದೆಷ್ಟೋ ಜನ ಜೊತೆಗೂಡಲಾಗದೇ ಕಳಚಿಕೊಳ್ಳುತ್ತಾರೆ. ಜೀವನಪರ್ಯಂತ ಜೊತೆಗಿರುತ್ತೇನೆಂದು ಮಾತುಕೊಟ್ಟವರೂ ಎಷ್ಟೋ ಸಲ ಕುಂಟು ನೆಪ ಹೂಡಿ ದೂರವಾಗುತ್ತಾರೆ. ಆದರೆ ಯಾರು ಬರಲಿ, ಯಾರು ದೂರವಾಗಲಿ ಬದುಕು ಬದಲಾಗುವುದಿಲ್ಲ. ತನ್ನ ಪಾಡಿಗೆ ತಾನು ಸಾಗುತ್ತಲೇ ಇರುತ್ತದೆ. ಯಾರು ಬಂದರೂ ಬದುಕು ಹೊಸದಾಗುವುದಿಲ್ಲ. ಯಾರು ದೂರವಾದರೂ ಮತ್ತೆ ಜೀವನ ಹೊಸದಾಗಿ ಪ್ರಾರಂಭವಾಗುವುದಿಲ್ಲ. ಆದರೆ ತನ್ನ ಜನ ಹರಿದು ಹೋದ ಬದುಕಿಗೆ ತೇಪೆ ಹಾಕಿ ಮತ್ತೆ ಅದೇ ಜೀವನೋತ್ಸಾಹದಿಂದ ಬದುಕಲು ತೊಡಗುತ್ತಾರೆ. 

ಬೆಳಗುತ್ತಿವೆ ಇನ್ನು ಗುಡಿಸಲಲ್ಲಿ ದೀಪ ಹಚ್ಚಿಟ್ಟ ರಾತ್ರಿಗಳು 
ಹೊಸ ಹಗಲಿಗೆ ಮತ್ತೊಂದು ಹೊಸ ಹಣತೆಗೆ ಬತ್ತಿ ತಿಕ್ಕಲು ಅಣಿಯಾದರು ನನ್ನ ಜನ


ಗುಡಿಸಲುಗಳಲ್ಲಿ ರಾತ್ರಿ ಹಚ್ಚಿಟ್ಟ ದೀಪ ಇನ್ನೂ ಬೆಳಕುನೀಡುತ್ತಿದೆ. ಇಡೀ ರಾತ್ರಿ ತನ್ನಕೈಲಾದಷ್ಟು ಬೆಳಕು ನೀಡಿದ ದೀಪ ಹಗಲಲ್ಲೂ ತನ್ನ ಕರ್ತವ್ಯ ಮರೆತಿಲ್ಲ ಮತ್ತೊಂದು ಹೊಸ ಹಗಲು ಬಂದಿದೆ. ಹೊಸ ಹಣತೆಗೆ ಮತ್ತೆ ಬತ್ತಿ ಮಾಡಿಟ್ಟು ಇರುಳನ್ನು ಬೆಳಗಿಸಿ ಬದುಕನ್ನುಹಸಲು ಮಾಡಿಕೊಳ್ಳಲು ತನ್ನ ಜನ ಹಿಂಜರಿಯುವುದಿಲ್ಲ ಎಂದು ಗಜಲಕಾರ ಹೆಮ್ಮೆ ಪಡುತ್ತಾರೆ. 

ಗೋರಿ ಮೇಲಿನ ಹೂ  ಸಂಕಲನದಲ್ಲಿ ಅಭಿಷೇಕ್ ಬಳೆ   ಈ ಶೇರ್ ಗಳ‌ಮೂಲಕ ತನ್ನ ಜನರ ನೋವು ನಲಿವುಗಳನ್ನು ಬಿಚ್ಚಿಟ್ಟಿದ್ದಾರೆ. ಯಾವುದಕ್ಕೂ ಅಂಜದೇ ಬದುಕು ಸಾಗಿಸುವ ತನ್ನ ಜನಗಳ   ಮಾನಸಿಕ ಸ್ಥೈರ್ಯದ ಬಗ್ಗೆ ಅವರಿಗೆ ಅಪಾರವಾದ ಹೆಮ್ಮೆ. ಅಂತೆಯೇ ಅವರ ಬವಣೆಯ ಬದುಕಿನ ಕುರಿತು ಕರುಣೆಯೂ. 
ಇಲ್ಲಿ ನನ್ನ ಜನ ಎನ್ನುವುದು ರದೀಪ. ರು ಎಂಬುದು ರವೀಶ. ತನ್ನ ಜನರ ಕುರಿತಾದ ಈ ಮಾತುಗಳು ಎದೆ ತಟ್ಟುತ್ತವೆ. 

ಶ್ರೀದೇವಿ ಕೆರೆಮನೆ

Tuesday, 22 June 2021

ಉಸಿರುಗಟ್ಟುವ ಕೋಶದ ರಚನೆಯಲ್ಲಿ



ಉಸಿರುಗಟ್ಟುವ ಕೋಶದ ರಚನೆಯಲ್ಲಿ 

ಇವಳು ಹತ್ತಿರ ಸರಿದಾಗಲೆಲ್ಲ
ತನ್ನದೇ ಲೋಕದಲ್ಲಿ ಮುಳುಗಿರುವ 
ಆತ ತೋರುತ್ತಾನೆ  ನಿರ್ಲಕ್ಷ 
ಇವಳು  ಮತ್ತೆ ಅಂತರ ಕಾಯ್ದುಕೊಳ್ಳುತ್ತಾಳೆ 
ಆತನಿಗೇನೋ ಹೇಳಿಕೊಳ್ಳುವುದಿದೆ 
ಆ ದಿನ ಆತ ತೋರಿದ ನಿರ್ಲಕ್ಷಕ್ಕೆ
ಪ್ರತಿಕಾರ ತೋರಲೆಂದು 
ಮಾತಿಗೆ ಮೌನ ಲೇಪಿಸುತ್ತಾಳೆ 
ಈತ ಹತಾಶನಾಗುತ್ತಾನೆ 

ಒಮ್ಮೆ ಸಾಕಾಗಿ ಪ್ರೀತಿಸುತ್ತೇನೆಂದು 
ಕಳಿಸಿದರೆ ಮೆಸೆಜು
ಯಾರದ್ದೋ ಕೈಗೆ ಸಿಕ್ಕಿ ಅನಾಹುತವಾಯಿತೆಂದಿದ್ದು
ಅತ್ಯದ್ಭುತ ರಂಗಭೂಮಿ ಪ್ರದರ್ಶನದ
ಅಭಿನಯ ಚಾತುರ್ಯ 
ಎಂದುಕೊಂಡ ಅವಳು 
ಮರುದಿನವೇ ಅನಾರೋಗ್ಯ ಅಂದವನಿಗೆ 
ಒಂದು ಕಾಳಜಿಯ ಮಾತೂ ಆಡದೆ 
ತಿರುವಿದಳು ಬಿಮ್ಮಿಸಿ ಮುಖ ಸುಮ್ಮನೆ  

ಅದೆಷ್ಟು ದಿನವಾಗಿದೆ ಮನಬಿಚ್ಚಿ ಮಾತಾಡಿ 
 ಸಹನೆಯಿಂದ ಆಲಿಸಿಯೂ ಅಷ್ಟೇ ದಿನವಾಗಿದೆ  
ಒಮ್ಮೆ ಎಲ್ಲವನ್ನೂ ತೆರೆದಿಟ್ಟು  
ನಿರುಮ್ಮಳವಾಗುವ ಬಯಕೆಯಿದೆ
ಇಬ್ಬರ ಮನದೊಳಗೂ 
ಆದರೂ ಒಳಗಿನ ಅಹಂ 
ಬಿಡುತ್ತಿಲ್ಲ ಮನಬಿಚ್ಚಿ ನಿಸೂರಾಗಲು 

ಇವನು ಅವನನ್ನು 
ಅವನು ಇವಳನ್ನು ಸದಾ ಬೇಟೆಗಣ್ಣಿಂದ
 ಹಿಂಬಾಲಿಸಿಸುತ್ತಿರುವುದರ ಅರಿವು 
ಇದೆ ಇಬ್ಬರಿಗೂ 
ತಪ್ಪುವುದಿಲ್ಲ ದಿನಂಪ್ರತಿ
ನೋಡಿಯೂ ನೋಡದ ಸೋಗು ಹಾಕುವುದು 

ಈಗೀಗ, 
ಕೋಪಿಸಿಕೊಂಡಿದ್ದು ಅರಿವಾಗಲೆಂದು 
ಮಾತಿಗೆ ಮೌನದ ಬೀಗ ಹಾಕಿದ್ದು 
ಖಾಯಂ ಆಗಿ ಉಳಿದು ಹೋಗಿದೆ 
ಅವಳ ಮಾತು ಇವನಿಗೆ 
ಇವನ ಮಾತು ಅವಳಿಗೆ 
ಕೇವಲ ಮಾತುಗಳಷ್ಟೇ ಆಗಿ 
ಕೆಲವೊಮ್ಮೆ ನಾಟಕದ ತಾಲೀಮು ಎನಿಸಿ
ಕೇಳುವ ವ್ಯವಧಾನವೂ ಇಲ್ಲದಂತೆ  
ತಟಸ್ಥವಾಗಿವೆ ಭಾವನೆಗಳು

ಆದರೂ ಹೇಳುವ ಮನಸಾಗುತ್ತದೆ ಒಮ್ಮೊಮ್ಮೆ  
ಹೊಸದಾಗಿ ಪ್ರೇಮಿಸೋಣವೆಂದು 
ನಾಲಿಗೆಯ ತುದಿಗೆ ಬಂದ ಮಾತುಗಳು 
ಮತ್ತೆ ಅಡಗುತ್ತವೆ 
ಶ್ರೇಷ್ಠತೆಯ ವ್ಯಸನದ ಗೂಡೊಳಗೆ 
ಅವರಿಗವರೇ ರಚಿಸಿಕೊಂಡ ಕೋಶ 
ಉಸಿರುಗಟ್ಟಿಸುತ್ತಿದೆ ನಿಧಾನವಾಗಿ 


 

Sunday, 13 June 2021

ಇದ್ದುದನ್ನು ಇದ್ದಂತೆ ಹೇಳುವ ಧೈರ್ಯ ಹೆಣ್ಣಿಗೆ ಯಾವಾಗ ಬರುತ್ತದೆ?


ಹೊಟ್ಟೆಯೊಳಗಿನ ಸಾವಿರ ಮಾತುಗಳನ್ನು ಹೊರಗೆ ಆಡಿ ತೋರಿಸುವಂತಿಲ್ಲ ಹೆಣ್ಣು


ಹೆಣ್ಣಿಗೆ ಇದ್ದುದನ್ನು ಇದ್ದಂತೆ ಹೇಳುವ ಧೈರ್ಯ ಮಾತ್ರ ಬಂದಿಲ್ಲ. ಎಲ್ಲೋ ಕೆಲವೊಮ್ಮೆ ಹೆಣ್ಣು ದನಿ ಎತ್ತಿದ್ದನ್ನು ನೋಡಬಹುದು. ವ್ಯಂಗ್ಯ ಚಿತ್ರಗಳಲ್ಲಿ ಗಂಡಿನ ಜುಟ್ಟು ಹಿಡಿದ ಹೆಂಡತಿಯನ್ನು ಕಾಣಬಹುದೇ ಹೊರತು ವಾಸ್ತವದಲ್ಲಿ ಸನ್ನಿವೇಶ ವ್ಯತಿರಿಕ್ತವಾಗಿಯೇ ಇದೆ ಎನ್ನುವ ವಿದ್ಯಾವತಿ ಅಂಕಲಗಿಯವರ ಗಜಲ್ ನ ವಿಶ್ಲೇಷಣೆಯನ್ನು  ಶ್ರೀದೇವಿ ಕೆರೆಮನೆಯವರು   Newsroom9 ನಲ್ಲಿ “ತೀರದ ಧ್ಯಾನ” ಅಂಕಣದಲ್ಲಿ ನಿಮ್ಮ ಮುಂದಿಟ್ಟಿದ್ದಾರೆ. 

https://newsroom9.com/men-dominated-society-and-woman-lifes-pain/




ಶತಶತಮಾನಗಳೇ ಕಳೆದು ಹೋಗಿವೆ. ಇಪ್ಪತ್ತೊಂದನೇ ಶತಮಾನದ ಮಧ್ಯ ಭಾಗದಲ್ಲಿದ್ದೇವೆ. ಜಗತ್ತು ನಿಬ್ಬೆರಗಾಗುವ ಸಾಧನೆ ಮಾಡಿದೆ. ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದೆ. ಅದರಲ್ಲಿ ಹೆಣ್ಣಿನ ಪಾಲು ಕಡಿಮೆಯೇನಲ್ಲ. ಕೆಲವೊಮ್ಮೆ ಗಂಡಿಗಿಂತ ಹೆಚ್ಚೇ ಇದೆ. ಆದರೂ ಈ ಕ್ಷಣಕ್ಕೂ ಹೆಣ್ಣಿಗೆ ಇದ್ದುದನ್ನು ಇದ್ದಂತೆ ಹೇಳುವ ಧೈರ್ಯ ಮಾತ್ರ ಬಂದಿಲ್ಲ. ಎಲ್ಲೋ ಕೆಲವೊಮ್ಮೆ ಹೆಣ್ಣು ದನಿ ಎತ್ತಿದ್ದನ್ನು ನೋಡಬಹುದು. ವ್ಯಂಗ್ಯ ಚಿತ್ರಗಳಲ್ಲಿ ಗಂಡಿನ ಜುಟ್ಟು ಹಿಡಿದ ಹೆಂಡತಿಯನ್ನು ಕಾಣಬಹುದೇ ಹೊರತೂ ವಾಸ್ತವದಲ್ಲಿ ಸನ್ನಿವೇಶ ವ್ಯತಿರಿಕ್ತವಾಗಿಯೇ ಇದೆ. ಎಲ್ಲೋ ಕೆಲವು ಅಧಿಕಾರದಲ್ಲಿರುವ ಅಥವಾ ಉನ್ನತ ಹುದ್ದೆಯಲ್ಲಿರುವ ಮಹಿಳೆಯರು ತಾವು ಅಂದುಕೊಂಡಿದ್ದನ್ನು ಹೇಳಬಹುದೇ ಹೊರತೂ ಮಧ್ಯಮ ವರ್ಗದ ಮಹಿಳೆಯರಿಗೆ ಯಾವ ಕಾಲಕ್ಕೂ ಅದು ಸಾಧ್ಯವಿಲ್ಲದ ಮಾತು. ಕೆಲವೊಮ್ಮೆ ಅಂತಹ ಉನ್ನತ ಹುದ್ದೆಯಲ್ಲಿರುವ, ದೊಡ್ಡ ಅಧಿಕಾರಿಯಾಗಿರುವ ಮಹಿಳೆಯೂ ಕೂಡ ಕೆಲವೊಮ್ಮೆ ಮನೆಯಲ್ಲಿ ಅಸಹಾಯಕಳಾಗಬೇಕಾದುದನ್ನು ನೋಡಿದ್ದೇವೆ. 

    ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದ ಮಹಿಳೆಯರ ಸ್ಥಿತಿಯನ್ನು ಕೇಳುವುದೇ ಬೇಡ. ಮನೆಯೊಳಗಿನ ಒದ್ದಾಟ ಹೇಳುವಂತಿಲ್ಲ.  ತನ್ನದೇ ಆದ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಬಹುತೇಕ ಯಾವ  ಭಾರತೀಯ ಹೆಣ್ಣಿಗೂ ಇದುವರೆಗೂ ದಕ್ಕಿದೆಯೆಂದು ಎದೆ ತಟ್ಟಿ ಹೇಳುವಂತಿಲ್ಲ. ಹೀಗಾಗಿಯೇ ಗಜಲಕಾರ್ತಿ ಬರೆಯುತ್ತಾರೆ

 

ಇದ್ದುದನ್ನು ಇದ್ದಂತೆ ಬರೆಯುವ ಧೈರ್ಯ ನನಗಿಲ್ಲ

ಲಕ್ಷ್ಮಣರೇಖೆಯ ದಾಟಿ ಬರುವ ಧೈರ್ಯ ನನಗಿಲ್ಲ

 

ನಮ್ಮ ಸಾಮಾಜಿಕ ವ್ಯವಸ್ಥೆಯೇ ಹಾಗಿದೆ. ಗಂಡು ಇದ್ದದ್ದನ್ನು ಇದ್ದಂತೆ ಹೇಳಿದರೆ ಅವನು ನೇರಾನೇರ ಮಾತಿನವನು. ತುಂಬಾ ಖಡಕ್ ಎಂದು ಹೊಗಳಿಸಿಕೊಂಡರೆ ಹೆಣ್ಣೊಬ್ಬಳು ಇದ್ದದ್ದನ್ನು ಇದ್ದಂತೆ ಹೇಳಿದರೆ ಆಕೆ ಘಟವಾಣಿ ಎನ್ನಿಸಿಕೊಳ್ಳುತ್ತಾಳೆ. ಬಜಾರಿ ಎಂಬ ಹಣೆಪಟ್ಟಿ ಅಂಟಿಸಲು ಒಂದು ದೊಡ್ಡ ಪಡೆಯೇ ಸಿದ್ಧವಾಗಿ ನಿಂತಿರುತ್ತದೆ. ಅದು ಮನೆಯ ಒಳಗೆ ಹೊರಗೆ ಎಂಬ ಬೇಧವಿಲ್ಲದೆ.  ಈ ಎಲ್ಲಾ ಸಾಮಾಜಿಕ, ಸಾಂಸಾರಿಕ ಕಟ್ಟುಪಾಡುಗಳ ಲಕ್ಷ್ಮಣ ರೇಖೆಯನ್ನು ದಾಟುವುದು ಅಷ್ಟೊಂದು ಸುಲಭದ ಮಾತಲ್ಲ. ಹೇಳಿದ್ದನ್ನು ಕೇಳದ ಸೀತಾ ಮಾತೆ ಲಕ್ಷ್ಮಣ ರೇಖೆಯನ್ನು ದಾಟಿ ಬಂದಿದ್ದಕ್ಕಾಗಿಯೇ ಅಷ್ಟೆಲ್ಲ ಕಷ್ಟ ಅನುಭವಿಸ ಬೇಕಾಯಿತು ಎನ್ನುವ ಸಿದ್ಧ ವಾಕ್ಯವನ್ನು ಎದುರಿಗಿಟ್ಟು ಸಂಪ್ರದಾಯ ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣಿನ ಧೈರ್ಯವನ್ನು ಕುಗ್ಗಿಸುವ ಕೆಲಸ ಇಂದು ನಿನ್ನೆಯದ್ದೇನಲ್ಲ. ಹೆಣ್ಣೆಂದರೆ ಕೇವಲ ನಾಲ್ಕು ಗೋಡೆಯ ನಡುವಣ ಆಡಿಸಿದಂತೆ ಆಡುವ ಗೊಂಬೆ ಮಾತ್ರವಾಗಿಯೇ ಇರಬೇಕು ಎಂಬ ಕಟ್ಟುಪಾಡುಗಳನ್ನು ಹುಟ್ಟುವಾಗಲೇ ಹೆಣ್ಣಿಗೂ ಅರೆದು ಕುಡಿಸಿ, ಗಂಡಿಗೆ ಹಾಗೆ ನೋಡಿಕೊಳ್ಳುವ ಯಜಮಾನಿಕೆಯನ್ನು ಕೊಟ್ಟುಬಿಟ್ಟಿರುತ್ತದೆ ಈ ಸಮಾಜ. ಹೀಗಾಗಿ ಮಾನಸಿಕವಾಗಿಯೇ ಈ ಲಕ್ಷ್ಮಣ ರೇಖೆಯನ್ನು ತನ್ನ ಗಡಿ ಎಂದು ಒಪ್ಪಿಕೊಂಡುಬಿಟ್ಟಿರುವ ಹೆಣ್ಣು ಾ ಮಿತಿಯನ್ನು ಮೀರುವ ಧೈರ್ಯವನ್ನು ತೋರುವುದು ಬಹಳ ಅಪರೂಪ.

 

 

ಗಂಡ ಕೊಡುವ ಹಿಂಸೆಯನು ಹೊರಗೆಡಹುವ ಹಾಗಿಲ್ಲ

ಅವನೆದುರು ನಿಂತು ಹೋರಾಡುವ ಧೈರ್ಯ ನನಗಿಲ್ಲ

ಸಂಸಾರ ಎಂದರೆ ಅದೊಂದು ಯಾರೂ ಹೊರಗಿನವರು ತಿಳಿಯಬಾರದ ಗುಟ್ಟು ಎಂದುಕೊಂಡಿರುವವರೇ ಹೆಚ್ಚು.  ಹೀಗಾಗಿ ಸಾಂಸಾರಿಕ ಹಿಂಸೆಯು ಬಹುತೇಕವಾಗಿ ಬೆಳಕಿಗೆ ಬರುವುದೇ ಇಲ್ಲ. ಗಂಡ ಹೊಡೆದ, ಗಂಡ ಸಿಗರೇಟಿನಿಂದ ಸುಟ್ಟ  ಎಂಬುದೆಲ್ಲವೂ ಸಹಜ ಎಂದೇ ಹೆಣ್ಣು ಸ್ವೀಕರಿಸಬೇಕಾದ ಸ್ಥಿತಿಯನ್ನು ಈ ಸಮಾಜ ಮೊದಲೇ ನಿರ್ಧರಿಸಿ ಬಿಟ್ಟಿದೆ. ಗಂಡ ಬೈಯ್ಯದೇ ಇನ್ನಾರು ಬೈಯ್ಯಲು ಸಾಧ್ಯ ಎನ್ನುವುದನ್ನು ತೀರಾ ಸಹಜ ಎಂಬಂತೆ ಅತ್ಯಂತ ತಿಳುವಳಿಕೆಯುಳ್ಳವರೇ ತಮ್ಮ ಮಾತಿನ ಮಧ್ಯೆ ತಮಗೆ ತಿಳಿಯದಂತೆ ಆಡುತ್ತಿರುವುದನ್ನು ಕಾಣುತ್ತೇವೆ. ಹಾಗಾದರೆ ಹೆಂಡತಿ ಬೈಯ್ದರೆ ಅದನ್ನು ತೀರಾ ಸಹಜ ಎಂದೇಕೆ ನಮ್ಮ ಸಮಾಜ ಒಪ್ಪಿಕೊಳ್ಳುವುದಿಲ್ಲ? ಏಕೆಂದರೆ ಹೆಂಡತಿ ಯಾವಾಗಿದ್ದರೂ ಆಕೆ ಎರಡನೆ ದರ್ಜೆಯ ಪ್ರಜೆ. ಅವಳು ಬೈಯ್ಯಿಸಿಕೊಳ್ಳಲು ಹಾಗು ಹೊಡೆಯಿಸಿಕೊಳ್ಳಲು ಅರ್ಹಳೆ ಹೊರತು ಆಕೆಗೆ ಹಾಗೆ ಮಾಡಲು ಯಾವುದೇ ಅಧಿಕಾರವಿಲ್ಲ. ಗಂಡ ತನಗೆ ಹಿಂಸೆ ಮಾಡುತ್ತಾನೆಂದು ಎಲ್ಲಿಯೂ ಬಾಯಿ ಬಿಟ್ಟು ಹೇಳುವಂತಿಲ್ಲ. ಯಾಕೆಂದರೆ ಸಂಸಾರದ ಗುಟ್ಟು ರಟ್ಟು ಮಾಡಿದರೆ ವ್ಯಾದಿಯನ್ನು ಬಹಿರಂಗಗೊಳಿಸಿಕೊಂಡಂತೆ ಎಂಬುದನ್ನೂ ನಮ್ಮ ಹಿಂದಿನವರು ಗಾದೆ ಮಾತಿನಂತೆ ಬಳಸಿ ಹೆಣ್ಣಿನ ಬಾಯಿಗೆ ಬೀಗ ಹಾಕಿಬಿಟ್ಟಿದ್ದಾರೆ. ಹೀಗಾಗಿ ಹಿಂಸಿಸುವ ಗಂಡನನ್ನು ಎದುರಿಸಿ ನಿಲ್ಲುವ ಧೈರ್ಯವನ್ನು ಯಾವ ಹೆಣ್ಣೂ ತೋರುವುದಿ್ಲ. ಒಂದು ವೇಳೆ ಗಂಡನನನ್ನು ಎದುರಿಸಿ ನಿಂತು ಆತ ದೂರವಾದರೆ ಹೆಣ್ಣನ್ನೇ ಗಂಡ ಬಿಟ್ಟವಳು ಎಂದು ದೂಷಿಸುತ್ತಾರೆಯೇ ಹೊರತು ಗಂಡಸನ್ನು ಹೆಂಡತಿ ಬಿಟ್ಟವನು ಎಂದು ತಮಾಷೆಗೂ ಹೇಳುವುದಿಲ್ಲ. ಗಂಡು ಹೆಂಡತಿಯಿಂದ ದೂರವಾಗಿ ತನ್ನದೇ ಆದ ಮತ್ತೊಮದು ಸಂಸಾರವನ್ನು ಕಟ್ಟಿಕೊಳ್ಳಬಹುದು. ಆದರೆ ಗಂಡನಿಂದ ದೂರವಾದ ಸ್ತ್ರೀಯೊಬ್ಬಳು ಮತ್ತೊಂದು ಸಂಸಾರ ಕಟ್ಟಿಕೊಳ್ಳಬೇಕೆಂದರೆ ಅವಳಿಗೆ ಮೊದಲೇ ಆತನೊಂದಿಗೆ ಸಂಬಂಧವಿತ್ತು ಎಂಬ ಆರೋಪವನ್ನು ಸುಲಭವಾಗಿ ಹೊರೆಸಿ ಅವಳನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ವಿಕೃತಿ ಮೆರೆಯುತ್ತದೆ ಸಮಾಜ.

ಅತ್ತೆ ಮಾವಂದಿರ ನಿಂದನೆ ಹಿಂಸೆಯಾಗುತ್ತದೆ.

ಎಲ್ಲವನು ತೊರೆದು ಹೋಗುವ ಧೈರ್ಯ ನನಗಿಲ್ಲ

ಸಂಸಾರವೆಂದರೆ ಗಂಡನೊಬ್ಬನೇ ಅಲ್ಲ. ಜೊತೆಗೆ ಅತ್ತೆ ಮಾವ ಇರುತ್ತಾರೆ. ಅಚ್ಚರಿಯೆನ್ನಿಸಬಹುದು, ಇಂದಿಗೂ ನಮ್ಮ ಹಳ್ಳಿಗಳಲ್ಲಿ ಅತ್ತೆ ಮಾವಂದಿರ, ನಾದಿನಿ ಮೈದುನರ ಕಾಟ ತಪ್ಪಿಲ್ಲ. ಹೊಸದಾಗಿ ಮದುವೆಯಾಗಿ ಬಂದ ಸೊಸೆಯನ್ನು ಹತ್ತಾರು ಕೆಲಸ ಹೇಳಿ ವಿವಶಗೊಳಿಸುವ ಆ ಮೂಲಕ ಅವಳ ಮಾನಸಿಕ ಸ್ಥೈರ್ಯವನ್ನು  ಕುಗ್ಗಿಸುವ ರೂಢಿ ಇದೆ. ಹತ್ತಾರು ಕೆಲಸಗಳನ್ನು ಏಕಕಾಲದಲ್ಲಿ ನಿಭಾಯಿಸಬೇಕಾದ ಹೊಣೆ ಹೊರೆಸಿ ಅವಳು ಕೆಲಸದಲ್ಲಿ ತಪ್ಪಿದರೆ ನಿಂದಿಸಿ, ದೂಷಿಸಿ, ಅವಳ ತವರು ಮನೆಯನ್ನೂ ಹೀಯಾಳಿಸಿ ಅವಮಾನ ಮಾಡುವ ಪರಿಪಾಟವನ್ನು ಇಂದಿಗೂ ಕಾಣುತ್ತಿದ್ದೇವೆ. ಆದರೆ ಹೀಗಾಗಿದೆ ಎಂದು ಈ ಎಲ್ಲವನ್ನು ತೊರೆದು ಹೋಗುವ ಧೈರ್ಯ ಹೆಣ್ಣಿಗಿದೆಯೇ? ಖಂಡಿತಾ ಇಲ್ಲ. ಏಕೆಂದರೆ ಅವಳು ಗಂಡನ ಮನೆ ಬಿಟ್ಟು ತವರು ಸೇರಿದರೆ ತಮಗೆ ಅವಮಾನ ಎಂದು ಸ್ವತಃ ತಾಯಿಯ ಮನೆಯವರೂ ಯೋಚಿಸುತ್ತಾರೆ. ಹೀಗಾಗಿ ಎಷ್ಟೇ ಕಷ್ಟವಾದರೂ ತರಿ, ತುಟಿ ಬಿಗಿ ಹಿಡಿದು ಗಂಡನ ಮನೆಯನ್ನೇ ನೆಚ್ಚಿ ಬಾಳುವೆ ಮಾಡಬೇಕು ಎಂದು ಸ್ವತಃ ತಾಯಿಯೇ ಮಗಳಿಗೆ ಪಾಠ ಹೇಳಿಕೊಡುತ್ತಾಳೆ. ಹೆಣ್ಣೊಬ್ಬಳು ಹುಟ್ಟಿದರೆ ಸಾಕು, ಹುಟ್ಟುತ್ತಲೇ ಅವಳಿಗೆ ಗಂಡನ ಮನೆಯಲ್ಲಿ ಹೇಗಿರಬೇಕು ಎನ್ನುವ ಪಾಠವನ್ನು ಬೋಧಿಸಲು ಈ ಸಮಾಜ ಸ್ವಂತ ತಾಯಿಯನ್ನೇ ದಾಳವನ್ನಾಗಿ ಬಳಸಿಕೊಂಡಿರುತ್ತದೆ. ಹೀಗಾಗಿ ಯಾವ ಹೆಣ್ಣೂ ತಕ್ಷಣಕ್ಕೆ ಮದುವೆ ಎನ್ನುವ ಬಂಧನವನ್ನು ಕಿತ್ತೆಸೆಯುವ ಧೈರ್ಯ ಮಾಡುವುದಿಲ್ಲ.

 

 

ಎಷ್ಟು ದುಡಿದರೂ ಪ್ರೀತಿಯ ಮಾತನಾಡುವವರಿಲ್ಲ

ಸಂಕಟಗಳಿಂದ ಮುಕ್ತಿ ಪಡೆವ ಧೈರ್ಯ ನನಗಿಲ್ಲ

 

 

 

ಅತ್ತೆ ಮನೆಯೆಂದರೆ ಅದು ಅತ್ತೆ ಮನೆಯೇ. ಅದರಲ್ಲೂ ಮನೆ ತುಂಬ ಜನರಿದ್ದರಂತೂ ಅದೊಂದು ಸಾಕ್ಷಾತ್ ನರಕ. ಅಡುಗೆ ಮಾಡಬೇಕು, ಕಸ ಮುಸುರೆ ಬಳಿಯಬೇಕು, ಮನೆಯನ್ನು ಒರೆಸಿ ಗುಡಿಸಿ ಸ್ವಚ್ಛವಾಗಿಡಬೇಕು, ಮನೆಯವರೆಲ್ಲರ ಬಟ್ಟೆ ತೊಳೆಯಬೇಕು ಈ ಎಲ್ಲ ಮನೆಕೆಲಸದ ಹೊರೆಯ ಜೊತೆ ಮನೆಯವರು ಹೇಳಿದ ಹೆಚ್ಚುವರಿ ಕೆಲಸಗಳನ್ನೂ ನಗುನಗುತ್ತಲೇ ಮಾಡಬೇಕು. ಎಲ್ಲಾದರೂ ಸುಸ್ತು ಸಂಕಟ ಎಂದಳೋ ಆಳಿಗೊಂದು ಕಲ್ಲು ಎಂಬಂತೆ ಮಾತನ್ನೆಸೆದು ಮನಸ್ಸನ್ನು ಗಾಯಗೊಳಿಸಲು ಹಿಂದೆಮುಂದೆ ನೋಡುವುದಿಲ್ಲ.ಎಷ್ಟು ಕೆಲಸ ಮಾಡಿದರೂ ಒಂದೇ ಒಂದು ಪ್ರೀತಿಯ ಮಾತು ಕೇಳುವುದಿಲ್ಲ. ಆದರೂ ಹೆಣ್ಣು ಈ ಎಲ್ಲ ಸಂಕಟಗಳಿಂದ ಮುಕ್ತವಾಗುವ ಧೈರ್ಯ ತೋರುವುದಿಲ್ಲ. ಬದಲಾಗಿ ತನ್ನ ಅದೃಷ್ಟ ಇದು, ತನ್ನ ಹಣೆಬರೆಹವೇ ಚೆನ್ನಾಗಿಲ್ಲ ಎಂದು ಅನುಸರಿಸಿಕೊಂಡು ಹೋಗುತ್ತಾಳೆ.

 

 

ಗಂಡ ಕುಡಿದು ತೂರಾಡಿದರೂ ಕೇಳುವಂತಿಲ್ಲ

ಹೀಗೇಕಾಯಿತೆಂದು ಕೇಳುವ ಧೈರ್ಯ ನನಗಿಲ್ಲ

 

ಗಂಡ ಕುಡಿದರೂ ಸರಿ, ಬಡಿದರೂ ಸರಿ, ಹೆಣ್ಣಾದವಳು ಅವನ ಮರ್ಜಿಯನ್ನು ಅನುಸರಿಸಿಕೊಂಡು ಹೋಗಬೇಕಾದುದು ಪಾತಿವೃತ್ಯದ ಮೊದಲ ಹೆಜ್ಜೆ ಎಂದೇ ಬೋಧಿಸುವ ಈ ಸಮಾಜದಲ್ಲಿ ತೂರಾಡುತ್ತ ಮನೆಗೆ ಬಂದವನಿಗೆ ಯಾಕೆ ಹೀಗೆ ಮಾಡುತ್ತಿ ಎಂದು ಕೇಳಲು ಸಾಧ್ಯವೇ? ಕುಡಿದು ಬಿದ್ದವನನ್ನು ಹುಡುಕುತ್ತ ಚರಂಡಿ, ಮೋರಿ ಹುಡುಕುತ್ತ, ಊರಿನ ಎಲ್ಲಾ ಸರಾಯಿ ಅಂಗಡಿಯ ಬಾಗಿಲನ್ನು ಎಡತಾಕುವ ಹೆಣ್ಣುಗಳನ್ನೂ ನೋಡಿದ್ದೇವೆ. ಆದರೆ ಹಾಗೆ ಹುಡುಕಾಡಿ ಜೋಲಿ ಹೊಡಿಯುವವನನ್ನು ಮನೆಗೆ ಕರೆದುಕೊಂಡು ಹೋಗಿ, ಊಟ ಮಾಡಿಸಿ, ಬೆಚ್ಚಗೆ ಹೊದೆಸಿ ಮಲಗಿಸುವ ಇವರು ಯಾಕೆ ಹೀಗೆ ಮಾಡುತ್ತೀರಿ ಎಂದು ಒಂದು ಮಾತು ಕೇಳಿದರೆ ಸಾಕು ಜಗತ್ಪ್ರಳಯವೇ ಆಗಿ ಬಿಡುತ್ತದೆ. ಅವಳು ಗಂಡನಿಗೆ ಎದುರು ಮಾತನಾಡುವ ಬಜಾರಿ ಎನ್ನಿಸಿಕೊಂಡುಬಿಡುತ್ತಾಳೆ. ಹೀಗಾಗಿ ಕುಡಿದು ಬರುವ ಗಂಡನನ್ನು ಯಾಕೆ ಹೀಗೆ ಮಾಡುತ್ತೀರಿ ಎಂದು ಕೇಳುವ ಧೈರ್ಯವನ್ನೂ ತೋರಿಸಲು ಹೆಣ್ಣು ಅಸಮರ್ಥಳು.

 

 

ಹೊಟ್ಟೆಯೊಳಗಿನ ಮಾತನ್ನು ಉಸಿರೊಡೆಯುವಂತಿಲ್ಲ

ಸೆರಗೊಳಗಿನ ಕಿಚ್ಚನ್ನು ಬಿಚ್ಚುವ ಧೈರ್ಯ  ನನಗಿಲ್ಲ

 

ಸಂಸಾರವೆಂದರೆ ಅದೊಂದು ಬಿಸಿ ತುಪ್ಪದ ಹಾಗೆ ಆಡುವಂತಿಲ್ಲ ಅನುಭವಿಸುವಂತಿಲ್ಲ. ಹೊಟ್ಟೆಯೊಳಗಿನ ಸಾವಿರ ಮಾತುಗಳನ್ನು ಹೊರಗೆ ಆಡಿ ತೋರಿಸುವಂತಿಲ್ಲ. ಆದರೆ ಹಾಗೇ  ಹೊಟ್ಟೆಯೊಳಗಿಟ್ಟುಕೊಂಡು ನರಳುವಂತೆಯೂ ಇಲ್ಲ. ಸಂಸಾರದ ಗುಟ್ಟುಗಳೆಂದರೆ ಸೆರಗೊಳಗಿನ ಕಿಚ್ಚಿದ್ದಂತೆ. ಅದನ್ನು ಬಿಚ್ಚಿ ತೋರಿಸುವ ಧೈರ್ಯವನ್ನು ಯಾವ ಹೆಣ್ಣೂ ಮಾಡುವುದಿಲ್ಲ.

   ಹಿರಿಯ ಲೇಖಕಿ ವಿದ್ಯಾವತಿ ಅಂಕಲಗಿಯವರ ಗಜಲ್ ಇದು. ಧೈರ್ಯ ನನಗಿಲ್ಲ ಎನ್ನುವ ರಧೀಫನ್ನು  ಬಳಸಿಕೊಂಡು ಹೆಣ್ಣಿನ ಸ್ಥೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೆಣ್ಣಿನ ಬದುಕಿನ ವಾಸ್ತವತೆಗೆ ಕನ್ನಡಿ ಹಿಡಿದಿರುವ ಈ ಗಜಲ್ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ಹೆಣ್ಣು ಹಾಗೂ ಗಂಡನ್ನು ಸಂಸಾರದ ಎರಡು ಚಕ್ರಗಳಿದ್ದಂತೆ ಎನ್ನುತ್ತಲೇ ಒಂದು ಚಕ್ರವನ್ನು ದುರ್ಬಲಗೊಳಿಸಿ ಸಂಸಾರದ ಬಂಡಿ ಎಳೆಯಲಿ ಎಂದು ಬಯಸುವ ಪುರುಷಾಹಂಕಾರವನ್ನು ಅನಾವರಣಗೊಳಿಸಿ ಬೆತ್ತಲುಮಾಡಿದ್ದಾರೆ. ಬರೆಯುವ, ಬರುವ, ಹೋರಾಡುವ, ಹೋಗುವ, ಪಡೆವ, ಕೇಳುವ, ಬಿಚ್ಚುವ ಎನ್ನುವ ಕಾಫಿಯಾದಲ್ಲಿ ವ ಎನ್ನುವ ಅಕ್ಷರವನ್ನು ರವೀಶ್ ಆಗಿ ಬಳಸಲಾಗಿದೆ.  ಗಜಲಕಾರ್ತಿ ಇಲ್ಲಿ ತಖಲ್ಲೂಸ್ ನ್ನು ಬಳಸಿಲ್ಲ.

    ಹೆಣ್ಣಿನ ಸ್ಥಿತಿಯನ್ನು ಪ್ರಸ್ತುತ ಪಡಿಸುವ ಗಜಲ್ ಓದುಗರಿಗೆ ಬಹಳ ಸಮಯ ಕಾಡುವುದರಲ್ಲಿ ಅನುಮಾನವಿಲ್ಲ.


Friday, 4 June 2021

ಸಿರಿಕಡಲು - ಬುಕ್ ಬ್ರಹ್ಮ -ಶ್ರೀದೇವಿ ಕೆರೆಮನೆ ಲೇಖನ - ಪುಸ್ತಕ ವಿಮರ್ಶೆ-ಚೆಕ್ ಪೋಸ್ಟ್- ರಾಜು ಗಡ್ಡಿ


ಚೆಕ್ ಪೋಸ್ಟ್   

ಲೇ- ರಾಜು ಗಡ್ಡಿ    

ಬೆಲೆ- 150/-

 ರಾಜುಗಡ್ಡಿಯವರ ಚೆಕ್ ಪೋಸ್ಟ್ ಕುರಿತು ಬುಕ್ ಬ್ರಹ್ಮದ ನನ್ನ  ಸಿರಿಕಡಲು ಸರಣಿ ಬರೆಹದಲ್ಲಿದೆ. ಓದಿ. ಅಭಿಪ್ರಾಯ ತಿಳಿಸಿ


ಅದರ ಲಿಂಕ್ ಇಲ್ಲಿದೆ

https://www.bookbrahma.com/news/checkpost-trucknondige-saguva-balyada-nenapu

             ಕನ್ನಡ ಸಾಹಿತ್ಯದಲ್ಲಿ ಟ್ರಕ್ ದಂಧೆಯ ಬಗ್ಗೆ ನಾನು ಓದಿದ್ದು ತುಂಬಾ ಕಡಿಮೆ. ಕಡಿಮೆ ಏನು ಬಂತು? ನಾನಂತೂ ಓದಿಯೇ ಇರಲಿಲ್ಲ. ಇದೇ ಮೊದಲ ಕಾದಂಬರಿ ಎನ್ನಬಹುದು. ಹಾಗೆ ನೋಡಿದರೆ ಪಾಶ್ಚಾತ್ಯ ಸಾಹಿತ್ಯದಲ್ಲಿ ರಚಿತವಾದಂತಹ ಬಹಳಷ್ಟು ಉದ್ಯೋಗ, ದಂಧೆಯ ಬಗ್ಗೆ ಕನ್ನಡ ಸಾಹಿತ್ಯ ಮುಗುಮ್ಮಾಗಿಯೇ ಉಳಿದು ಬಿಟ್ಟಿದೆ. ಸಾಹತ್ಯ ರಚನೆಗಾಗಯೇ ಅನೇಕ ಪಾಪದ, ವ್ಯಭಿಚಾರದ ಕೆಲಸಗಳನ್ನು ಮಾಡಿ ಸ್ವತಃ ಅನುಭವ ಪಡೆಯುತ್ತಿದ್ದ ಪಾಶ್ಚಾತ್ಯ ಲೇಖಕರಂತಹ ಬರಹಗಾರರು ಕನ್ನಡದಲ್ಲಷ್ಟೇ ಏಕೆ ಭಾರತೀಯ ಸಾಹಿತ್ಯ ಲೋಕದಲ್ಲೇ ಇಲ್ಲ. ಭಾರತೀಯರು ರಾಜ ಮಹಲಿನ ಕೋಶದ ಮೇಲೆ  ಅದರಲ್ಲೂ ಕೂಲಿ ಕಾರ್ಮಿಕರ, ಶ್ರಮಿಕರ ಕೆಲಸಗಳ ಬಗ್ಗೆ ನಾವು ಬಹಳ ಮಡಿವಂತಿಕೆ ತೋರಿಸಿದ್ದೇವೆ. ನನ್ನ ದೃಷ್ಟಿಗೆ ನಿಲುಕಿದ ಮೊಟ್ಟಮೊದಲ ಟ್ರಕ್ ದಂಧೆಯ ಬರವಣಿಗೆ ಇದು.

   ಕೆಲವು ವರ್ಷಗಳ ಹಿಂದೆ ನಾವು ಉತ್ತರ ಕನ್ನಡ ಜಿಲ್ಲೆಯವರು, ಅದರಲ್ಲೂ ಅಂಕೋಲೆಯವರು ಟ್ರಕ್ ನೋಡಿದರೆ ಸಾಕು ಶಾಪ ಹಾಕುತ್ತಿದ್ದೆವು. ಬಳ್ಳಾರಿಯ ಅದಿರನ್ನು ಬೇಲೆಕೇರಿ ಹಾಗೂ ಕಾರವಾರ ಬಂದರಿನಿಂದ ರಪ್ತು ಮಾಡಲಾಗುತ್ತಿತ್ತು. ನಂತರ ಕಾರವಾರ ಬಂದರಿನಲ್ಲಿ ಅದಿರು ವಹಿವಾಟನ್ನು ನಿಲ್ಲಿಸಿ ಕೇವಲ ಬೇಲೆಕೇರಿ ಬಂದರಿನಲ್ಲಿ ಮಾತ್ರ ವ್ಯವಹರಿಸುವಂತಾಯ್ತು. ಆಗಂತೂ ಅಂಕೋಲೆ ಹಾಗೂ ಇಡೀ ಉತ್ತರ ಕನ್ನಡ ಜಿಲ್ಲೆಯ ಧಾರಣ ಶಕ್ತಿಯನ್ನು ಮೀರಿ ಟ್ರಕ್ ಓಡಾಟ ನಡೆಯುತ್ತಿತ್ತು. ಹುಬ್ಬಳ್ಳಿಯಿಂದ ಯಲ್ಲಾಪುರ ಮಾರ್ಗವಾಗಿ ಅರಬೈಲ್ ಘಾಟ ದಾಟಿ ಬರಬೇಕಿದ್ದ ಟ್ರಕ್ ಗಳು ಘಾಟ್ ನಲ್ಲಿ ಅಪಘಾತಕ್ಕೀಡಾಗಿ ಅಂಕೋಲಾ ಹುಬ್ಬಳ್ಳಿ ರಸ್ತೆಯನ್ನೇ ಬಂದು ಮಾಡಿಬಿಡುತ್ತಿದ್ದವು. ಅರ್ಜೆಂಟ್ ಹುಬ್ಬಳ್ಳಿಗೆ ಹೋಗಬೇಕಾದವರು ಒದ್ದಾಡುವಂತಾಗುತ್ತಿತ್ತು. ಈ ಅದಿರು ಟ್ರಕ್ ಓಡಾಟದಿಂದ ಪ್ರಾಣ ಕಳೆದುಕೊಂಡ ಬೈಕ್ ಸವಾರರ ಕಾರು ಸವಾರರ ಲೆಕ್ಕ ಸಾವಿರದ ಗಟಿ ದಾಟಿದೆ. ಟ್ರಕ್ ಎಂದರೆ ಯಮದೂತ ಎಂದೆ ಭಾವಿಸಿ ಭಯಪಡುತ್ತಿದ್ದ ನನಗೆ ಅರಬೈಲ್ ಘಾಟ್ ನ ವಿವರಣೆಯನ್ನೂ ಒಳಗೊಂಡ ಚೆಕ್ ಪೋಸ್ಟ್ ಕಾದಂಬರಿಯ ಓದು ವಿಚಿತ್ರ ಕುತೂಹಲ ಹುಟ್ಟಿಸಿದ್ದು ಸುಳ್ಳಲ್ಲ.



     ಬಹುಶಃ ನಾನಾಗ ಹತ್ತನೆಯ ತರಗತಿ. ಸಂಜೆಯ ಹೊತ್ತು ಒಂದು ಸುತ್ತು ಪಕ್ಕದ ಮನೆಯ ಕ್ಲಾಸ್ ಮೇಟ್ ಭಾರತಿ ಶಾನಭಾಗ್ ಜೊತೆ ವಾಕ್ ಹೋಗುತ್ತಿದ್ದೆ. ಹೈಸ್ಕೂಲಿನ ಮಾತುಗಳು ಬಹಳಷ್ಟು ಇರುತ್ತಿದ್ದವು. ಗೆಳತಿಯರ ಬಗ್ಗೆ, ಅವರ ಪ್ರೇಮದ ಬಗ್ಗೆ, ಕ್ಲಾಸಿನ ಹುಡುಗರ ಬಗ್ಗೆ ತಡೆಯೇ ಇಲ್ಲದೇ ಮಾತನಾಡುತ್ತ ರಸ್ತೆಯ ಮೇಲೆ ಒಂದಿಷ್ಟು ದೂರ ಹೋಗಿ, ರಸ್ತೆ ಪಕ್ಕದ ಸಂಕದ ಮೇಲೆ ಸ್ವಲ್ಪ ಹೊತ್ತು ಕುಳಿತು ಹಿಂದಿರುಗುತ್ತಿದ್ದೆವು. ರಸ್ತೆಯ ಮೇಲೆ ಓಡಾಡುವ ವಾಹನಗಳನ್ನು ಗಮನಿಸುವುದೂ ಒಂದು ರೀತಿಯಲ್ಲಿ ತಮಾಷೆ ಎನ್ನಿಸುತ್ತಿತ್ತು. ಅದರಲ್ಲೂ ಟ್ರಕ್ ಬಂದರೆ ಒಂದು ರೀತಿಯ ಒಳನಡುಕ, ಜೊತೆಗೆ ಚೇಷ್ಟೆ ಮಾಡುವುದರಲ್ಲಿ ಟ್ರಕ್ ಡ್ರೈವರ್ ಗಳು ಎತ್ತಿದ ಕೈಯಾದ್ದರಿಂದ ತಮಾಷೆ ಕೂಡ. ಜೋರಾಗಿ ಹೋಗುವ ಟ್ರಾವೆಲ್ಸ್ ನವರು ಕೂಡ ಕೆಲವೊಮ್ಮೆ ಚೇಷ್ಟೇ ಮಾಡುವುದಿರುತ್ತಿತ್ತು. ಎದುರು ಬರುತ್ತಿರುವ ಟ್ರಕ್ ನ ಒಂದೇ ಬದಿಯ ಲೈಟ್ ಆನ್ ಆಗಿ ಆಫ್ ಆದರೆ ಅದು ಕಣ್ಣು ಹೊಡೆದಂತೆ ಎಂದು ಹೇಳಿಕೊಟ್ಟವಳೂ ಅವಳೇ. ಯಾಕೆಂದರೆ ಅವರದ್ದೊಂದು ಅಂಗಡಿ ಇತ್ತು. ಕಿರಾಣಿ ಸಾಮಾನಿನ ಜೊತೆ ಚಹಾ ಕೂಡ ಕೊಡುತ್ತಿದ್ದರು. ಹೀಗಾಗಿ ಬಹಳಷ್ಟು ವಾಹನಗಳು ಅಲ್ಲಿ ನಿಲ್ಲುತ್ತಿದ್ದುದರಿಂದ ಈ ವಾಹನಗಳ ಬಗ್ಗೆ ಹಾಗೂ ವಾಹನ ಚಾಲಕರ ಬಗ್ಗೆ ಅವಳಿಗೆ ಅದೆಷ್ಟೋ ವಿಷಯಗಳು ಗೊತ್ತಿರುತ್ತಿದ್ದವು. ಶಿಕ್ಷಕರ ಮಗಳಾದ ನನಗೆ ಅದೊಂದು ಅಪರಿಚಿತವಾದ ಹೊಸತೇ ಆದ ಲೋಕ. ಹೀಗಾಗಿ ಟ್ರಕ್ ನವರು ಮತ್ತು ಟ್ರಾವೆಲ್ಸ್ ನವರು ಒಂದು ಬದಿಯ ಲೈಟ್ ಹಾಕಿದರೆ ಬಿದ್ದು ಬಿದ್ದು ನಗುತ್ತಿದ್ದೆವು.

               ಅಂತಹುದ್ದೇ ಒಂದು ದಿನ. ಸಂಕದ ಮೇಲೆ ಕುಳಿತು ಯಾವುದೋ ಮಾತಲ್ಲಿ ಮಗ್ನರಾಗಿದ್ದೆವು. ಒಂದು ಮಿನಿ ಟ್ರಕ್ ನಮ್ಮೆದುರಿಗೆ ಬಂದಿದ್ದು ಸಡನ್ ಆಗಿ ಬ್ರೆಕ್ ಹಾಕಿ ಕ್ರೀಚ್ ಎಂದು ಶಬ್ಧ ಮಾಡುತ್ತ ನಿಂತಿತು. ಡ್ರೈವರ್ ಕಿಟಕಿಯಿಂದ ಮುಖ ಹೊರಹಾಕಿ ಏನೋ ಹೇಳಿದ. ನಾನು ಗಡಗಡ ನಡುಗಲು ಆರಂಭಿಸಿದೆ. ಪಕ್ಕದಲ್ಲಿ ಕುಳಿತ ಗೆಳತಿ ಎಲ್ಲಿ ಎಂದು ನೋಡಿದರೆ ಎಲ್ಲಿಯೂ ಕಾಣುತ್ತಿಲ್ಲ. ಅತ್ತಿತ್ತ ದೃಷ್ಟಿ ಹಾಯಿಸಿದರೆ ನಾವು ನಡೆದು ಬರುವಾಗ ಮುರಿದುಕೊಂಡ ರಸ್ತೆಯ ಪಕ್ಕದ ಗಿಡವೊಂದರ ಟೊಂಗೆಯನ್ನು ಆ ಟ್ರಕ್ ನ ಹಿಂಬದಿಗೆ ಸಿಕ್ಕಿಸುವುದರಲ್ಲಿ ಮಗ್ನಳಾಗಿದ್ದಳು. ಇತ್ತ ಟ್ರಕ್ ಡ್ರೈವರ್ ನ ಪ್ರೇಮಾಲಾಪನೆಗೆ ಸಿಟ್ಟು, ಅತ್ತ ಅವಳ ಕೆಲಸ ನೋಡಿ ನಗು ಎರಡೂ ಏಕಕಾಲದಲ್ಲಿ ಅನುಭವಿಸುತ್ತ ನಾನು ತಲೆತಗ್ಗಿಸಿ ನಿಂತಿದ್ದೆ. ಅಂತೂ ಹೇಳಬೇಕಾದುದನ್ನೆಲ್ಲ ಬಾಯಿಪಾಠ ಹಾಕಿಕೊಂಡಂತೆ ಹೇಳಿ ಕೊನೆಗೆ ‘ಮೆರಾ ಸಪ್ನೊಂಕಿ ರಾಣಿ ತೂ ಆಯೆಗಿ ಕಬ್...’ ಎನ್ನುತ್ತ ಟ್ರಕ್ ಹೊರಟಾಗ ಭಯ ಹಾಗು ನಗುವಿನ ನಡುವಿನ ನಾನು ಅವಳನ್ನು ದರದರನೆ ಎಳೆದುಕೊಂಡು ಮನೆ ಸೇರಿದ್ದೆ. ನಂತರ ಅವಳೆಷ್ಟೇ ಹೇಳಿದರೂ ಕುಮಟಾ ಶಿರಸಿಯ ಆ ರಾಜ್ಯ ಹೆದ್ದಾರಿ ಬಿಟ್ಟು ಕಾಡಿನ ದಾರಿ ಆರಿಸಿಕೊಂಡಿದ್ದೆ. ಇಡೀ ಕಾದಂಬರಿ ಓದುವಾಗ ನನಗೆ ಪದೆ ಪದೆ ನೆನಪಾದ ಘಟನೆ ಇದು.

   ಟ್ರಕ್ ಡ್ರೈವರ್ ಹಾಗೂ ಕ್ಲೀನರ್ ಗಳ ಬಗ್ಗೆ ರಂಜನೀಯವಾದ ಕಥೆಗಳನ್ನಷ್ಟೇ ಕೇಳಿದ್ದ ನನಗೆ ಈ ಕಾದಂಬರಿಯ ಓದು ಹೊಸತೇ ಆದ ಅನುಭವ ನೀಡಿತು. ಪದೇ ಪದೇ ಹಾಳಾಗುವ ಟ್ರಕ್ ಗಳು, ಸೋರುವ ಇಂಜಿನ್ ಗಳು, ಕೈಕೊಡುವ ಬಿಡಿ ಭಾಗಗಳು ಎಲ್ಲವೂ ಒಬ್ಬ ಟ್ರಕ್ ಡ್ರೈವರ್ ನನ್ನ ಯಾವ ಪರಿ ಕಂಗೆಡಿಸಬಹುದು ಎಂಬುದನ್ನು ಸ್ವತಃ ಅನುಭವಿಸಿ ಬರೆದಿದ್ದಾರೆ ರಾಜು ಗಡ್ಡಿ. ಇಲ್ಲಿನ ಕಥೆಯ ಬಹುತೇಕ ಅನುಭವ ಸ್ವತಃ ಅವರದ್ದೇ. ಎಲ್ಲೋ ಕೆಲವಷ್ಟನ್ನು ಕಾಲ್ಪನಿಕವಾಗಿ ಕಾದಂಬರಿಯಾಗಿಸುವ ದೃಷ್ಟಿಯಿಂದ ಸೇರಿಸಿರಬಹುದೇನೋ. ಆದರೆ ಅವರೇ ಹೇಳುವಂತೆ ಇದೊಂದು ಅವರ ಆತ್ಮಕಥೆಯ ತುಣುಕು.  ಈಗ ಕೆ ಇ ಬಿ ಯಲ್ಲಿ ನೌಕರರಾಗಿರುವ ರಾಜು ಆಟೊಮೊಬೈಲ್ ಡಿಪ್ಲೋಮಾ ಮುಗಿಸಿದ್ದರಿಂದ ಟ್ರಕ್ ನಿಭಾಯಿಸಬಲ್ಲೆ ಎಂಬ ಹುಂಬು ಧೈರ್ಯಕ್ಕೆ ಸಿಲುಕಿ ಟ್ರಕ್ ಕೊಂಡು ಸ್ವತಃ ಡ್ರೈವರ್ ನಾಗಿಯೂ ಕೆಲಸ ಮಾಡಿದ ಮೂರ್ನಾಲ್ಕು ವಷಱದ ಅನುಭವಗಳ ಸಾರ ಇಲ್ಲಿದೆ.

     ಆಟೊಮೊಬೈಲ್ ಡಿಪ್ಲೋಮಾ ಓದುವಾಗ ತನ್ನ ಜೊತೆಗೇ ಓದುತ್ತ ಕಡಿಮೆ ಅಂಕ ಗಳಿಸುತ್ತ ಎಲ್ಲದಕ್ಕೂ ಇವರನ್ನೇ ಆಶ್ರಯಿಸುತ್ತಿದ್ದ ಸ್ನೇಹಿತನೊಬ್ಬ ನಂತರ ಆರ್ ಟಿ ಓ ಆದ ನಂತರ ತೋರುವ ದರ್ಪ, ದೌಲತ್ತುಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ತಾನು ಪಡೆದ ಸಹಾಯ ಮರೆತು ಯಾವುದೋ ಡಾಕ್ಯುಮೆಂಟ್ ಹೆಸರು ಹೇಳಿ ಸಾವಿರಗಟ್ಟಲೆ ಲಂಚ ಪಡೆವ ಕುಟಿಲತೆಯನ್ನು ಎತ್ತಿ ಹಿಡಿದಿದ್ದಾರೆ. ಜಾತಿಯ ಆಧಾರದಿಂದ ದೊಡ್ಡ ಹುದ್ದೆಗೇರಿದ ಪ್ರಸ್ತಾಪ ಮುಜುಗರ ಹುಟ್ಟಿಸುತ್ತದೆಯಾದರೂ ಒಳ್ಳೆಯ ಅಂಕ ಪಡೆದೂ ತನ್ನ ಓದಿಗೆ ತಕ್ಕುನಾದ ನೌಕರಿ ಸಿಗದ ಅಸಮಧಾನ ಈ ಸಾಲುಗಳಂತೆಯೇ ಅಲ್ಲಲ್ಲಿ ಇಣುಕಿ ಹಾಕುತ್ತದೆ. ಜಿಲ್ಲೆಯ ಗಡಿಯಲ್ಲಿಯೇ ಕಾದು ಹಣ ಪೀಕುವ ಇನ್ನೊಬ್ಬ ಆರ್ ಟಿ ಓ ಕುರಿತಾದ ಸುದೀರ್ಘ ವಿವರಣೆಯೂ ಇಲ್ಲಿದೆ. ಕಾರ್ ನ್ನು ಸರಿಯಾಗಿ ರಿವರ್ಸ್ ಹಾಕಿ ನಿಲ್ಲಿಸಲು ಬರದ ನನಗೆ ‘ನಿನಗ್ಯಾರು ಲೈಸನ್ಸ್ ಕೊಟ್ಟಿದ್ದು? ನಾನಾದರೆ ಕೊಡ್ತಾ ಇರಲಿಲ್ಲ.’ ಎಂದ ಆರ್ ಟಿ ಓ ಹುದ್ದೆಯಿಂದ ನಿವೃತ್ತರಾದ ನನ್ನ ಕಸಿನ್ ಒಬ್ಬರು ಕೆಲವು ದಿನಗಳ ಹಿಂದೆ ಕಿಚಾಯಿಸಿದ್ದು ನೆನಪಿಗೆ ಬಂತು. ‘ಅದಕ್ಕೇ ಲೈಸೆನ್ಸ್ ಮಾಡಿಸುವಾಗ  ನಿನಗೆ ಫೋನ್ ಮಾಡಿರಲಿಲ್ಲ’ ಎಂದು ನಾನೂ ನಕ್ಕಿದ್ದೆ.

 

   ನಾನು ಹೈಸ್ಕೂಲ್ ನಲ್ಲಿರುವಾಗ ನನ್ನ ಸ್ನೇಹಿತೆಯೊಬ್ಬಳು ದೂರದಿಂದ ಬರುತ್ತಿದ್ದಳು. ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದ್ದರಿಂದ ಆ ರಸ್ತೆಯಲ್ಲಿ ಬರುವ ಯಾವುದಾದರೂ ವಾಹನಗಳಿಗೆ ಕೈ ತೋರಿಸಿ ಶಾಲೆಗೆ ಬರುತ್ತಿದ್ದರು. ಆಗ ಕಾಲ ಇಷ್ಟೊಂದು ಕೆಟ್ಟಿರಲಿಲ್ಲ. ಶಾಲೆಯ ಯುನಿಫಾರ್ಮ್ ನೋಡಿ ಓದುವ ಮಕ್ಕಳು ಎಂದು ಖುಷಿಯಿಂದಲೇ ಹೆಚ್ಚಿನವರು ಶಾಲೆಯ ಬಳಿ ಬಿಟ್ಟು ಹೋಗುತ್ತಿದ್ದರು. ಮಕ್ಕಳ ಕಳ್ಳರು ಇರುತ್ತಾರೆ ಎನ್ನುವ ಅಂಜಿಕೆಯೊಂದು ಬಿಟ್ಟರೆ ಈಗಿನಂತೆ ಹುಡುಗಿಯರು ಯಾರೋ ಅಪರಿಚಿತರ ಜೊತೆ ಬಂದರೆ ಅನಾಹುತವಾಗಬಹುದು ಎಂಬ ಭಯ ಇರಲಿಲ್ಲ. ಒಂದು ದಿನ ನನ್ನ ಗೆಳತಿ ಹೀಗೆ ಒಂದು ಟ್ರಕ್ ಗೆ ಕೈ ಮಾಡಿ ಹತ್ತಿದ್ದಾಳೆ. ಶಿರಸಿ ಕುಮಟಾ ರಸ್ತೆಯಲ್ಲಿ ಒಂದು ಕಾಲದಲ್ಲಿ ಎಲ್ಲ ವಾಹನಗಳೂ ನಿಂತು ಚಹಾ ಕುಡಿದು ಹೋಗುತ್ತಿದ್ದ ಅಂಗಡಿ ಅವಳ ಅಪ್ಪನದ್ದು. ಹೀಗಾಗಿ ಅವಳಿಗೆ ಅಂತಹ ಯಾವ ಭಯವೂ ಇರಲಿಲ್ಲ. ಆದರೆ ಸ್ವಲ್ಪ ದೂರ ಬರುವಷ್ಟರಲ್ಲಿ ಟ್ರಕ್ ಡ್ರೈವರ್ ಅವಳ ಬಳಿ ಮಾತಾಡಿ ಅವಳು ಯಾರ ಮಗಳು ಎಂದು ತಿಳಿದುಕೊಂಡಿದ್ದಾನೆ. ಟ್ರಕ್ ನಿಲ್ಲಿಸಿ ಹಣ ಕೊಡು ಎಂದು ಒಂದೇ ಸಮ ಒತ್ತಾಯಿಸಿದ್ದಾನೆ. ಕಾರಣವೇನೆಂದರೆ ಹಿಂದೊಮ್ಮೆ ಅವಳ ಅಪ್ಪನ ಅಂಗಡಿಯಲ್ಲಿ ಚಹಾ ಕುಡಿದಿದ್ದ ಆತ ನೂರು ರೂಪಾಯಿಯ ಚಿಲ್ಲರೆ ಬಿಟ್ಟು ಹೋಗಿದ್ದನಂತೆ. ಈಗ ಅವಳು ಆ ಹಣ ಕೊಟ್ಟರೆ ಮಾತ್ರ ಶಾಲೆಗೆ ಬಿಡುತ್ತೇನೆ, ಇಲ್ಲವಾದರೆ ಟ್ರಕ್ ಇಲ್ಲಿಯೇ ನಿಲ್ಲಿಸಿಬಿಡುತ್ತೇನೆ ಎಂದು ರೋಪ್ ಹಾಕಿದ್ದಾನೆ. ಬಸ್ ಗೆ ಬಂದರೆ ವರ್ಷ ಪೂರ್ತಿ ಪಾಸ್ ಇರುತ್ತದೆ. ಹೀಗೆ ಬೇರೆ ಯಾವುದೋ ವಾಹನಕ್ಕೆ ಬಂದರೆ ಅಲ್ಲಿಯವರೆಗೆ ಶಾಲೆಯ ಮಕ್ಕಳಿಂದ ಹಣ ತೆಗೆದುಕೊಂಡ ಇತಿಹಾಸವೇ ಇಲ್ಲ. ಹಾಗಿರುವಾಗ ಐದು ರೂಪಾಯಿಗಿಂತ ಹೆಚ್ಚಿನ ಹಣ ಯಾವ ವಿದ್ಯಾರ್ಥಿಯ ಬಳಿಯೂ ಇರುತ್ತಿರಲಿಲ್ಲ. ಹಾಗಿರುವಾಹ ನೂರು ರೂಪಾಯಿನ ಚಿಲ್ಲರೆ ಕೊಡು ಅಂದರೆ ಅವಳಾದರೂ ಹೇಗೆ ಕೊಟ್ಟಾಳು? ಮತ್ತೊಂದು ಸಲ ಻ಂಗಡಿಗೆ ಹೋದಾಗಲೂ ನಿಮ್ಮಪ್ಪ ಹಣದ ನೆನಪು ಮಾಡಲಿಲ್ಲ. ೀಗ ನನಗೆ ನೆನಪಾಗಿದೆ. ಹಣ ಕೊಟ್ಟು ಬಿಡು ಎಂದು ಒರಾತೆ ತೆಗೆದಿದ್ದಾನೆ. ಅಂತೂ ಕಾಡಿ ಬೇಡಿ, ಅಪ್ಪನ ಬಳಿ ಹಣ ಕೊಡಿಸುವ ವಾಗ್ಧಾನ ಮಾಡಿ ಅವಳು ಶಾಲೆಗೆ ಬರುವಷ್ಟರಲ್ಲಿ ಒಂದು ಅವಧಿ ಮುಗಿದೇ ಹೋಗಿತ್ತು. ಆ ಘಟನೆಯನ್ನು ಅವಳು ವಿವರಿಸುವಾಗ ಅವಳ ಕಣ್ಣು ಧ್ವನಿಯಲ್ಲಿದ್ದ ಹೆದರಿಕೆ ನನಗೆ ಎಷ್ಟು ತಾಗಿತ್ತೆಂದರೆ ನಾನೂ ಅಕ್ಷರಶಃ ನಡುಗಿ ಹೋಗಿದ್ದೆ. ಯಾಕೋ ಮೂಡುಬಿದೆರೆಯಲ್ಲಿ ಓದುತ್ತಿದ್ದ ಕರಿಯಪ್ಪ ಆರ್ ಟಿ ಓ ನ ಮಗಳಿಗೆ ಧಮಕಿ ಹಾಕಿದ ಪ್ರಸಂಗ ಓದುವಾಗ ಇದೆಲ್ಲ ನೆನಪಾಗಿ ಮತ್ತೊಮ್ಮೆ ಭಯ ಒತ್ತರಿಸಿ ಬಂತು.


          ಟ್ರಕ್ ನ ವ್ಯವಹಾರ, ರಿಪೇರಿ ಮುಂತಾದುವುಗಳೆಲ್ಲ ಕೆಲವೆಡೆ ಪೇಜುಗಟ್ಟಲೆ ಆಕ್ರಮಿಸಿ ಅಲ್ಲಲ್ಲಿ ಡಾಕ್ಯುಮೆಂಟರಿ ಓದಿದಂತಾಗಿ ನೀರಸ ಎನ್ನಿಸಿದರೂ ಇಡೀ ಕಾದಂಬರಿಯನ್ನು ಓದುವಾಗ ಅದರ ಎಲ್ಲಾ ಪುಟಗಳೂ ರೋಚಕವಾಗಿಯೇ ಇರಬೇಕಿಲ್ಲ ಎಂಬುದನ್ನೂ ಗಮನಿಸಬೇಕಾಗುತ್ತದೆ. ಪ್ರಸಿದ್ದರ ಕಾದಂಬರಿಯ ಮಧ್ಯೆ ಕೂಡ ಬೇಸವೆನಿಸಿ ಪುಟ ತಿರುವುದನ್ನು ಅಲ್ಲಗಳೆಯಲಾಗದು. ಕನ್ನಡ ಕಾದಂಬರಿ ಲೋಕಕ್ಕೆ ಒಂದು ಹೊಸತೇ ಆದ ವಿಷಯವನ್ನು ಎದುರಿಗಿಟ್ಟು ಕುತೂಹಲಕರವಾದ ಓದನ್ನು ಹಾಕಿಕೊಟ್ಟ ಚೆಕ್ ಪೋಸ್ಟ್ ನ್ನು ಖಂಡಿತವಾಗಿಯೂ ಓದಿ ಆನಂದಿಸಬಹುದು. ಪುಸ್ತಕ ಪ್ರಿಯರಿಗೆ, ಹೊಸ ವಿಷಯವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ ನಿರಾಸೆ ಮಾಡದ ಪುಸ್ತಕ ಇದು  ಎಂದು ಧೈರ್ಯವಾಗಿ ಹೇಳಬಹುದು.

ಶ್ರೀದೇವಿ ಕೆರೆಮನೆ

Thursday, 3 June 2021

ಚಹಾದ ನಶೆಯೊಡನೆ- ಕೀಹೋಲ್ ಲೇಖನ


ಚಹಾದ ನಶೆಯೊಡನೆ… 





ಚಹಾ ಬಿಟ್ಟು ಬಿಟ್ಟೆ ಎಂದಾಗಲೇ ಅರ್ಥವಾಗಬೇಕಿತ್ತು ಅವಳಿಗೆ ತನ್ನನ್ನೂ ದೂರ ಮಾಡುವ ಸತ್ಯ.....



https://keahole.in/archives/13065 



ಚಹಾದ ನಶೆಯೊಡನೆ

ಚಹಾ ಅಂದರೆ ಅದೆಷ್ಟು ಇಷ್ಟ ಅವಳಿಗೆ ಅಂದರೆ ಊಟ ಮಾಡಬೇಡ ಒಂದು ಕಪ್ ಚಹಾ ಕೊಡುತ್ತೇನೆ ಎಂದರೆ ಮರುಮಾತಾಡದೇ ಒಪ್ಪಿ ಬಿಡುವಷ್ಟು. ಅದೆಷ್ಟೋ ದಿನಗಳನ್ನು ಅವಳು ಹಾಗೆ ಕಳೆದಿದ್ದಾಳೆ ಕೂಡ. ರಾತ್ರಿ ಊಟದ ಸಮಯಕ್ಕೆ ಬಿಸಿ ಬಿಸಿಯಾದ ಶುಂಠಿ ಚೂರು, ಲಿಂಬೆ ಹುತ್ತು ಬೆರೆಸಿದ ಚಹಾವನ್ನು ಇಷ್ಟಿಷ್ಟೇ ಹೀರುವಾಗ ಸ್ವರ್ಗ ಅನ್ನುವುದು ತನ್ನೊಳಗೇ ಮಿಳಿತವಾಗಿದೆ ಎಂದೆನಿಸುತ್ತಿತ್ತು. 
   ಚುಕ್ಕವಳಿರುವಾಗ ಅಪ್ಪ ಚಹಾ ಕುಡಿಯಲೇ ಕೊಡುತ್ತಿರಲಿಲ್ಲ. ಅದರೊಳಗಿರುವ ಟ್ಯಾನಿನ್ ಮಕ್ಕಳಿಗೆ ನಿಧಾನ ವಿಷದ ಹಾಗೆ ಎಂಬುದು ಅವರ ಬಲವಾದ ನಂಬಿಕೆ. ಚಹಾ ಕುಡಿದರೆ ಮಕ್ಕಳ ಬುದ್ಧಿಮಟ್ಟ ಕುಸಿಯುತ್ತದೆ ಎಂಬ ಕಲ್ಪನೆ ಅವರ ತಲೆಯೊಳಗೆ ಕುಳಿತು ಬಿಟ್ಟಿತ್ತು. ಹೀಗಾಗಿ ಅಪ್ಪ ಅಮ್ಮ ಬೆಳಗಿನ ಚಹಾ ಕುಡಿಯುವಾಗ, ಸಂಜೆ ಚಹಾ ಹೀರುವಾಗ ಇವಳು ಬೋರ್ನವಿಟಾನೋ, ಬೂಸ್ಟೋ ಕುಡಿಯುತ್ತಿದ್ದಳು. 'ಚಹಾ ಕುಡಿದರೆ ಮಕ್ಕಳು ಕಪ್ಪಾಗುತ್ತಾರೆ'  ಅಪ್ಪ ಇವಳೆದುರಿಗೆ ಹೇಳಿ ಹೇಳಿ, ಮೊದಲೇ ಕಪ್ಪಗಿರುವ ತಾನು ಮತ್ತಿಷ್ಟು ಕರಿಯಾದರೆ ಎಂದು ಹೆದರಿ ಚಹಾದ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಎಲ್ಲಾದರೂ ಹೊರಗೆ ಸಂಬಂಧಿಕರ, ನೆಂಟರ ಮನೆಗೆ ಹೋದರೆ ಅಪ್ಪ ಅಮ್ಮ 'ಅವಳು ಚಹಾ ಕುಡಿಯುವುದಿಲ್ಲ.' ಎಂದು ಮೊದಲೇ ಹೇಳಿ ಬಿಡುತ್ತಿದ್ದರು. ಎಲ್ಲೋ ಕೆಲವರು ಜೀರಿಗೆ ಕಷಾಯವನ್ನೋ ಮತ್ತೆ ಕೆಲವರು ಒಂದು ಲೋಟ ಹಾಲನ್ನೋ ತಂದಿಡುತ್ತಿದ್ದರಾದರೂ ಬಹುತೇಕ ಬರೀ ಬಿಸ್ಕೆಟ್ ತಿಂದು ಎದ್ದು ಬರುವಂತಾಗುತ್ತಿತ್ತು. ಆಗೆಲ್ಲ ನಾನೂ ಚಹಾ ಕುಡಿಯಬೇಕು ಎಂಬ ಒಳ ಒತ್ತಡ ಉಂಟಾದರೂ ಅಪ್ಪನ ಬಳಿ ಹೇಳುವುದು ಹೇಗೆ ಎಂದು ಸುಮ್ಮನಾಗುತ್ತಿದ್ದಳು. ಅದಕ್ಕಿಂತ ಹೆಚ್ಚಾಗಿ ಚಹಾದ ಟ್ಯಾನಿನ್ ಮಕ್ಕಳ ಬುದ್ಧಿ ಕಡಿಮೆ ಮಾಡುತ್ತದೆ ಎಂಬ ಅಪ್ಪನ ನಂಬಿಗೆ ಅದು ಹೇಗೋ ಇವಳೊಳಗೂ ಇಳಿದು ಬಿಟ್ಟಿತ್ತು. ಬೋರ್ನವಿಟಾ, ಬೂಸ್ಟ್ ಏನಿಲ್ಲವೆಂದರೂ ಹಾಲು ತಾನು ಮತ್ತಿಷಗಟು ಜಾಣೆಯಾಗಲು ಸಹಾಯ ಮಾಡುತ್ತದೆ ಎಂದು ಇವಳೂ ನಂಬಿ ಬಿಟ್ಟಿದ್ದಳಲ್ಲ? ಗೆಳತಿಯರ ಮನೆಗೇನಾದೂ ಹೋದರೆ 'ನಾನು ಚಹಾ ಕುಡಿಯುವುದಿಲ್ಲ. ಬೂಸ್ಟ್, ಬೋರ್ನವಿಟಾ ಅಷ್ಟೇ' ಎಂದು ತುಸು ಹೆಮ್ಮೆಯಿಂದ ಹೇಳಿಕೊಂಡು ಆ ಮನೆಯ ಹೆಂಗಸರೆಲ್ಲ ಅಚ್ಚರಿಯಿಂದ ಗಮನಿಸುವ ಬಿಲ್ಡಪ್ ತೆಗೆದುಕೊಳ್ಳುವ ಕಿಕ್ ಅವಳಿಗೆ ಖುಷಿ ಕೊಡುತ್ತಿತ್ತಾದರೂ ನಂತರ ಈಗ ಅದನ್ನು ನೆನಪಿಸಿ ಕೊಂಡಾಗಲೆಲ್ಲ 'ಕೋಯಿ ಮಿಲ್ ಗಯಾ' ಸಿನೇಮಾದಲ್ಲಿ ಪ್ರೀತಿ ಜಿಂಟಾಳ ಮನೆಗೆ ಬಂದ ಹೃತಿಕ್ ರೋಷನ್ ಬೋರ್ನವಿಟಾ ಆರೋಗ್ಯಕ್ಕೆ ಒಳ್ಳೆಯದು ಎಂದು ಭಾಷಣ ಬಿಗಿದಂತೆ ಭಾಸವಾಗಿ ನಗು ಉಕ್ಕುತ್ತದೆ. 'ಛೆ, ನಾನೆಷ್ಟು ಬುದ್ಧುವಾಗಿದ್ದೆ. ಇಂತಹ ಹೆಲ್ತ ಡ್ರಿಂಕ್ ಗಳು ಆರೋಗ್ಯ ಬುದ್ಧಿ ಹೆಚ್ಚಿಸುತ್ತದೆ ಎಂದು ನಂಬುವಷ್ಟು' ಎಂದು ತಾನೇ ತನ್ನ ತಲೆಯ ಮೋಲೊಂದು ಮೊಟಕಿಕೊಳ್ಳುತ್ತಾಳೆ. 
    ಅಂತಿಪ್ಪ ನಮ್ಮ ಕಥಾ ನಾಯಕಿ ಅದ್ಯಾವ ಮಾಯಕದಲ್ಲಿ ಚಹಾದ ದಾಸಳಾಗಿ ಬಿಟ್ಟಳೋ ಅರಿವೇ ಆಗಲಿಲ್ಲ. ಎಸ್ ಎಸ್ ಎಲ್ ಸಿ ಕೊನೆಯ ಪರೀಕ್ಷೆ ಅದು. ಸ್ನೇಹಿತೆಯರೆಲ್ಲ ಪರೀಕ್ಷೆ ಮುಗಿಸಿ ಹೊಟೆಲ್ ಗೆ ಹೋಗುವುದು ಎಂದು ಮಾತಾಡಿಕೊಂಡಿದ್ದರು. ಇಷ್ಟದ ಮಸಾಲೆ ದೋಸೆ, ಉತ್ತಪ್ಪ, ಹೋಳಿಗೆ, ಉದ್ದಿನ ಒಡೆ ಏನೇನೋ ತಮಗೆ ಬೇಕಾದ ತಿಂಡಿ ಆರ್ಡರ್ ಮಾಡಿ ತಿಂದಾದ ನಂತರ ಎಲ್ಲರೂ ಚಹಾಕ್ಕೆ ಆರ್ಡರ್ ಮಾಡಿದ್ದಳು. ಇವಳು 'ನನಗೆ ಬೋರ್ನವಿಟಾ ....' ಎಂದಿನಂತೆ ಮಧ್ಯೆ ದನಿ ತೆಗೆದಳು. ಸಪ್ಲೈ ಮಾಡುತ್ತಿದ್ದಾತ ಅವಳನ್ನು ಎಷ್ಟು  ವಿಚಿತ್ರವಾಗಿ ನೋಡಿದನೆಂದರೆ ಮತ್ತದೇ 'ಕೋಯಿ ಮಿಲ್ ಗಯಾ' ಸಿನೆಮಾದ ಜಾದೂವಿನಂತೆ ಅನ್ಯಗ್ರಹ ಜೀವಿ ಎಂಬಂತೆ ನೋಡಿ 'ಇಲ್ಲಿ ಬೋರ್ನವಿಟಾ ಸಿಕ್ಕುವುದಿಲ್ಲ' ಎಂದಿದ್ದ. 'ಏನೇ ನೀನು, ಹತ್ತನೇ ಕ್ಲಾಸ್ ಮುಗಿತು. ಈಗಲಾದ್ರೂ ದೊಡ್ಡವಳಾಗೇ ಮಾರಾಯ್ತಿ. ಇನ್ನೂ ಸಣ್ಣ ಪಾಪು ತರಹ ಹಾಲು ಬೋರ್ನವಿಟಾ ಕುಡಿತಿಯಲ್ಲೆ.' ಗೆಳತಿಯರು ಕಿಸಿಕಿಸಿ ನಕ್ಕಿದ್ದರು. ಸಪ್ಲೈಯರ್ ನ  ನೋಟದ ವಿಚಿತ್ರತೆಗೆ ಮತ್ತು ಗೆಳತಿಯರ ಅವಮಾನಕ್ಕೆ ಅಂದೇ ಚಹಾ ರೂಢಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದಳು. ನಂತರ ಆಗಿದ್ದು ಬೇರೆಯದ್ದೇ ಕಥೆ. ಅವಳುಚಹಾ ಕುಡೀತಾಳೋ ಅಥವಾ ಚಹಾವೇ ಅವಳನ್ನು ಕುಡಿಯುತ್ತಿದೆಯೋ ಎಂದು ಯಾರಾದರೂ ಪ್ರಶ್ನೆ ಮಾಡುವಷ್ಟು ಚಹಾದ ಚಟ ಅಂಟಿಕೊಂಡಿತ್ತು. ಮಧ್ಯರಾತ್ರಿ ಎಬ್ಬಿಸಿ ಚಹಾ ಕೊಟ್ಟರೂ ಕುಡಿದು ಮಲಗುವಷ್ಟು..... 
ಯೌವನ ಕಾಲದಲ್ಲಿ ನಶೆ ಏರಿಸಿದ ಚಹಾದಂತೆ ಥೇಟ್ ಅವನೂ ಇದ್ದ, ನಶೆ ಏರಿಸಲು. ಅದು ಹೇಗೆ ಪರಿಚಯವಾದ ಅದ್ಯಾವಾಗ ಪರಿಚಯವಾದ ಇವಳಿಗೆ ಅರ್ಥವೇ ಆಗಲಿಲ್ಲ. ತಾನು ಹುಟ್ಟಿದಾಗಿನಿಂದ ಇವನು ಜೊತೆಲೇ ಇದ್ದನೇನೋ ಎಂಬ ಅನುಮಾನ.  ಜನ್ಮ ಜನ್ಮಾಂತರಗಳಿಂದಲೂ ನನ್ನೊಂದಿಗೇ ಇದ್ದನಾ ಎನ್ನುವ ಅನುಮಾನ ಅವಳಿಗೆ. 
     ಆದರೆ ಖಂಡಿತಾ ಗೊತ್ತು. ಹತ್ತನೆ ತರಗತಿಯವರೆಗೆ ಅವನನ್ನು ಎಲ್ಲೂ ನೋಡಿದ್ದೇ ಇಲ್ಲ. ಕಾಲೇಜು ದಿನಗಳ ಹೊಸತರಲ್ಲಿ ಜೊತೆಯಾದವನು.  ಗೆಳತಿಯೊಬ್ಬಳ ಕಸಿನ್ ಆತ. ಅವಳ ಜೊತೆ ಆಗಾಗ ಬರುತ್ತ ತಮ್ಮ ಗುಂಪಿಗೆ  ಸೇರಿಕೊಂಡವನು ನಂತರ ತಮ್ಮ ಗುಂಪಿನಲ್ಲಿ ಅವನೂ ಒಬ್ಬ ಎಂಬಂತಾಗಿದ್ದ. ಯಾವ ಕೆಲಸ ಮಾಡುವುದಿದ್ದರೂ ಬಾಲ್ಯದಿಂದಲೂ ತಾವೇ ನಾಲ್ಕು ಜನ ಎಂದುಕೊಳ್ಳುತ್ತಿದ್ದವರು ಈಗ ಎಲ್ಲಾ ಕೆಲಸಕ್ಕೂ ಅವನನ್ನು ಸೇರಿಸಿಕೊಳ್ಳುವಂತಾಗಿತ್ತು. ಮೊದಲು ನಾಲ್ಕೇ ಜನ ತೆಗೆದುಕೊಳ್ಳುವ ನಿರ್ಣಯದಲ್ಲಿ ಈಗ ಅವನದ್ದೇ ಸಿಂಹಪಾಲು. ಮತ್ತೊಂದು ವಿಶೇಷ ಎಂದರೆ ಅವನೂ ಇವಳಂತೆ ಚಹಾ ಪ್ರಿಯ. ಕೆಲವೊಮ್ಮೆ ಸ್ನೇಹಿತೆಯರು ಬೇಡ ಎಂದರೂ ಇವರಿಬ್ಬರೇ ಕಾಲೇಜು ಕ್ಯಾಂಟಿನ್ ನಲ್ಲಿ ಚಹಾ ಕುಡಿದುಬರುವುದಿತ್ತು. ಜೊತೆಗಿಡುವ ಹೆಜ್ಜೆ ಅದ್ಯಾವಾಗ ಸದಾ ಜೊತಡಗಿರಲಿ ಎಂದು ಮನಸ್ಸು ಹಂಬಲಿಸಲಾರಂಭಿಸಿತೋ... ಉಳಿದ ಮೂವರು ಗೆಳತಿಯರೂ ಇವರ ಬೆನ್ನಿಗೆ ನಿಂತರು. 
     'ಯಾಕೋ ಚಹಾ ಪಿತ್ತ ಆಗ್ತಿದೆ. ಚಹಾ ಕುಡಿಯೋದು ಬಿಟ್ಟಿದ್ದೇನೆ.' ಒಂದು ದಿನ ಇವಳು ಚಹ ಕುಡಿಯೋಣ ಎಂದಾಗ ಕಣ್ಣು ತಪ್ಪಿಸಿ ಹೇಳಿದ.  ಬದುಕಿನ ಯಾವ ನಿರ್ಣಯವಾದರೂ ಉಳಿದ ನಾಲ್ವರ ಎದುರಿಗಿಟ್ಟು ಚರ್ಚಿಸಿ ತೀರ್ಮಾನಿಸುವುದು ರೂಢಿ. ಆದರೆ ಏಕಾಏಕಿ ತೀರ್ಮಾನವನ್ನೇ ಹೇಳಿದಾಗ ಇವಳಂತೆ ಉಳಿಸವರಿಗೂ ಅಚ್ಚರಿ. 'ಯಾಕೋ ನನ್ನ ಮೇಲೆ ಕೋಪಾನಾ' ಭುಜ ಹಿಡಿದು ಕೇಳಿದಳು. 'ನಾನು ಹೇಳಿದ್ದು ಚಹ ಕುಡಿಯೋಲ್ಲ ಅಂತ. ನಿನ್ನ ಮೇಲೇಕೆ ಕೋಪ ಎಂದುಕೊಳ್ಳುತ್ತಿ? ' ಅತ ಎದ್ದು ನಡೆದ. 
    ವಾರದಿಂದೀಚೆಗೆ ಆತ ದೂರವಿರುವುದೂ ಅರಿವಾಗಿತ್ತು. 'ಏನಾಗಿದೆಯೋ ನಿಂಗೆ? ನಮ್ಮ ಜೊತೆ ಬರ್ತಾನೇ ಇಲ್ಲ ಈಗ?' ಅವನ ಕಸಿನ್ ಕೇಳಿದಳು. 'ಸದಾ ಹುಡುಗಿಯರ ಜೊತೆ ಇರ್ತಿ ಅಂತ ನನ್ನ ಚುಡಾಯಿಸ್ತಾರೆ. ಅದಕ್ಕೆ.....' ಆಗಲೂ ಆತ ಇವಳ ಮುಖ ನೋಡಲಿಲ್ಲ. ನಿಧಾನವಾಗಿ ಅಂತರ ಹೆಚ್ಚಿತು. 'ಪರೀಕ್ಷೆ ಹತ್ತಿರ ಬಂತು. ಓದಬೇಕಲ್ಲ?' ಆತ ನೀಡಿದ ಕಾರಣ ಸಮಂಜಸವಾಗಿತ್ತು.   'ಪರೀಕ್ಷೆ ನಡಿತಿದೆ. ಈಗ ನಿಮ್ಮ ಜೊತೆ ಇದ್ದರೆ ಓದೋಕಾಗಲ್ಲ.' ಮುಂದಿನ‌ ಕಾರಣದಲ್ಲೂ ಯಾವ ತಪ್ಪೂ ಇಲ್ಲ. 'ರಜೆ ತಾನೆ? ಒಂದಿಷ್ಟು ದಿನ‌ ಮನೆಯವರ ಜೊತೆ ಇರ್ತೀನಿ. ಹೊರಗೆಲ್ಲೂ ಬರೋಲ್ಲ.' ಇದರಲ್ಲೂ ಹುಳುಕು ಹುಡುಕುವಂತಿರಲಿಲ್ಲ. ಆದರೆ ಇವಳಿಗೆ ಮಾತ್ರ ಅದೆಲ್ಲ ದೂರವಾಗಲು ಕಾರಣಗಳು ಎಂಬುದು ಸ್ಪಷ್ಟವಾಗುತ್ತ ಹೋಯಿತು. 
   ಈಗ ಅವಳು ಕೈಯ್ಯಲ್ಲೊಂದು ಕಪ್ ಹಿಡಿದು ಕುಳಿತಿದ್ದಾಳೆ. ಲೇಮನ್ ಗ್ರಾಸ್ ನ ಹದವಾದ ಪರಿಮಳ ಮೂಗರಳಿಸಿದೆ. ಅವನ ನೆನಪು ಎದೆಯೊಳಗಿದೆ. ನೀನು ಮತ್ತು ಚಹಾ ಒಂದೇ ಕಣೆ. ನಶೆ ಏರಿದ್ದೇ ಗೊತ್ತಾಗುವುದಿಲ್ಲ. ಇಬ್ಬರೂ ಎಂದಿಗೂ ಬಿಡಲಾಗದ ನಂಟು. ಆತನ ಮಾತು ಕಿವಿಯೊಳಗೆ ಸಣ್ಣಗೆ ಗುನುಗುತ್ತಿದೆ. ಒಂದುಕ್ಷಣ ಬೆಚ್ಚಿ ಆತ ಬಂದನೇನೋ ಎಂದು ಸುತ್ತ ನೋಡಿ, ತನ್ನ ಭ್ರಮೆಗೆ ತಾನೇ ನಕ್ಕಳು. ಚಹ ಕುಡಿಯುವುದು ನಿಲ್ಲಿಸಿದ್ದೇನೆ ಅಂದಾಗಲೇ ತಾನು ಅರ್ಥ ಮಾಡಿಕೊಳ್ಳಬೇಕಿತ್ತು. ಇದು ದೂರವಾಗುವ ಮಾತೆಂದು ಎಂದುಕೊಳ್ಳುತ್ತಾಳೆ. ಆದರೆ ಅವಳು ಮೊದಲಿಗಿಂತ ಹೆಚ್ಚು ಚಹಾ ಕುಡಿಯುತ್ತಿದ್ದಾಳೆ ಈಗ. 
   ಶ್ರೀದೇವಿ ಕೆರೆಮನೆ




Monday, 1 February 2021

ಗಜಲ್- ಧರಿಸಬೇಡ ಮುಖವಾಡ

ಧರಿಸಬೇಡ ಮುಖವಾಡ

ಕಳೆದು ಹೋಗಿರುವ ನಂಬಿಕೆ ಮತ್ತೆ ಮರಳುವುದಿಲ್ಲ ಧರಿಸಬೇಡ ಮುಖವಾಡ 
ದೂರ ತಳ್ಳಿದ ಮೇಲೆ ಪ್ರೀತಿ ಮತ್ತೆ ಸಿಗುವುದಿಲ್ಲ ಧರಿಸಬೇಡ ಮುಖವಾಡ 

ಮೊದಲೆ ಅರ್ಥೈಸಿಕೊಳ್ಳಬೇಕಿತ್ತು  ಬಳಸಿ ಬಿಸಾಡಿ ಬಿಡುವ ನಿನ್ನ ಗುಣವನ್ನು 
ಉಂಡೆಸೆದ ಕುಡಿ ಬಾಳೆ ಎಲೆಯ ಮತ್ತೆ ಬಳಸುವುದಿಲ್ಲ ಧರಿಸಬೇಡ ಮುಖವಾಡ 

ಕತ್ತಲಾಗಸದಲಿ ನೂರಾರು ಚುಕ್ಕೆಗಳು ಮಿನುಗಿವೆ ನಿನ್ನೆದೆಯಲ್ಲಿರುವಂತೆ 
ಪಂಚಮಿಯ ಮರುದಿನ ಮತ್ತೆ ಹುಣ್ಣಿಮೆಯಾಗುವುದಿಲ್ಲ ಧರಿಸಬೇಡ ಮುಖವಾಡ 

ಒಂದಾದ ಮೇಲೊಂದು ಹೂಜಿಯೆತ್ತಿ ಗಂಟಲಿಗೆ ಶರಾಬು ಸುರಿಯುವ ರೂಢಿ ಬಿಡು  
ಮಜ್ಜಿಗೆ ಕುಡಿದ  ನಂತರ ಮತ್ತೆ ನಶೆಯೇರುವುದಿಲ್ಲ ಧರಿಸಬೇಡ ಮುಖವಾಡ 

ಗೊತ್ತಿದೆ ಎಲ್ಲರಿಗೂ ಕಾಲಡಿಯಲ್ಲಿ ಬಿದ್ದ ಮೊಗ್ಗು ಹೊಸಕಿದ್ದು ನೀನೆ ಎಂದು 
ನೀರೆರೆದರೂ ಬಾಡಿದ ಹೂ ಮತ್ತೆ ಅರಳುವುದಿಲ್ಲ ಧರಿಸಬೇಡ ಮುಖವಾಡ 

ಸನಿಹ ಹಾದು ಹೋದ ನಾಗರಹಾವು ಮಾಮರದ ಚಿಗುರಿಗೆ ವಿಷ ಸುರಿಯಲಾಗದು 
ಕತ್ತು ಮುರಿದು ಕೊಂಡ ಕೋಗಿಲೆ ಮತ್ತೆ ಹಾಡುವುದಿಲ್ಲ ಧರಿಸಬೇಡ ಮುಖವಾಡ 

ತಿಳಿನೀರ ಕೊಳಕೆ ಪಾತಾಳಗರಡಿಯನಿಟ್ಟು  ತಿರುವಿದವರ ಹೆಸರು ಬೇಕಿಲ್ಲ 
ಒಡೆದ ಕನ್ನಡಿಯೊಳಗೆ ಬಿಂಬ ಮತ್ತೆ ಕಾಣುವುದಿಲ್ಲ ಧರಿಸಬೇಡ ಮುಖವಾಡ 

ನೀಲಿಗಟ್ಟಿದೆ ಸಿರಿ, ಕಡಲದಂಡೆಯಲಿ  ಬಲೆಗೆ ಸಿಲುಕದೆಯು ಸತ್ತು ಬಿದ್ದ ಮೀನು 
ದೂರ ತಳ್ಳಿದ ಮನಸ್ಸು ಮತ್ತೆ  ಒಂದಾಗುವುದಿಲ್ಲ ಧರಿಸಬೇಡ ಮುಖವಾಡ