Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Thursday, 10 November 2022

ಬದುಕಿದ ರೀತಿಯನ್ನೇ ಸಾಹಿತ್ಯವನ್ನಾಗಿಸಿ ಗೆದ್ದ ಜೇನ್ ಬೌಲ್ಸ್



ಜೀವನದ ದ್ವಿಲಿಂಗ ಆಸಕ್ತಿಯನ್ನೇ ಸಾಹಿತ್ಯವನ್ನಾಗಿಸಿ ಗೆದ್ದ ಜೇನ್ ಬೌಲ್ಸ್

ಫೆಬ್ರವರಿ ೨೨, ೧೯೧೭ರಂದು ನ್ಯೂಯಾರ್ಕ್ ನಗರದಲ್ಲಿ ಯಹೂದಿ ಕುಟುಂಬದಲ್ಲಿ ಜನಿಸಿದ  ಜೇನ್ ಅವರ ತಂದೆ ಸಿಡ್ನಿ ಔರ್ ಮತ್ತು ತಾಯಿ ಕ್ಲೇರ್ ಸ್ಟೇಜರ್. ಬಾಲ್ಯವನ್ನು ನ್ಯೂಯಾರ್ಕ್‌ನ ವುಡ್ಮೇರ್ನ್‌ನ ಲಾಂಗ್ ಐಲ್ಯಾಂಡ್‌ನಲ್ಲಿ ಕಳೆದ ಜೇನ್ ಹುಟ್ಟಿನಿಂದಲೇ ಮೊಣಕಾಲಿನಲ್ಲಿ ಸಮಸ್ಯೆಯನ್ನು ಹೊಂದಿದ್ದಳು. ನಂತರ  ಹದಿಹರೆಯದಲ್ಲಿ ಒಮ್ಮೆ ಕುದುರೆಯಿಂದ ಬಿದ್ದಿದ್ದರಿಂದ  ಮೊಣಕಾಲು ಮುರಿದುಹೋಯಿತು.  ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತರ ಅವರಿ ಕ್ಷಯ ಹಾಗೂ ಸಂಧಿವಾತ ಉಂಟಾಯಿತು. ಹೀಗಾಗಿ ಅವರ ತಾಯಿ ಚಿಕಿತ್ಸೆಗಾಗಿ ಸ್ವಿಟ್ಜರ್ಲೆಂಡ್‌ಗೆ ಕರೆದೊಯ್ದರು, ಅಲ್ಲಿ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸಮ ಮುಂದುವರೆಸಿದ ಜೇನ್  ನಂತರ ನ್ಯೂಯಾರ್ಕ್‌ನ ಜೂಲಿಯಾ ರಿಚ್ಮಂಡ್ ಹೈಸ್ಕೂಲ್ ಮತ್ತು ಮ್ಯಾಸಚೂಸೆಟ್ಸ್‌ನ ಗ್ರೀನ್ಫೀಲ್ಡ್‌ನಲ್ಲಿರುವ ಹುಡುಗಿಯರಿಗಾಗಿ ಸ್ಟೋನ್ಲೀಗ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು.

ಬಾಲ್ಯದಿಂದಲೂ ಇದ್ದ ಮೊಣಕಾಲಿನ ತೊಂದರೆ ಹಾಗೂ ಮೊಣಕಾಲಿನ ಮುರಿತದಿಂದಾಗಿ ಜೀವನದಲ್ಲಿ ತೀವ್ರ ಅಭದ್ರತೆಯೊಂದಿಗೆ ಬಳಲಿದ ಜೇನ್ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ನಾಯಿಗಳು, ಶಾರ್ಕ್‌ಗಳು, ಪರ್ವತಗಳು, ಕಾಡುಗಳು ಮತ್ತು ಎಲಿವೇಟರ್ಗಳ ಪಾರವಾದ ಭಯವನ್ನು ಬೆಳೆಸಿಕೊಂಡಿದ್ದ ಜೇನ್ ಜೀವಂತವಾಗಿ ಸುಟ್ಟು ಹೋಗುವ ಭಯವನ್ನು ಹೊಂದಿದ್ದರು. ೧೯೩೦ರ ದಶಕದ ಮಧ್ಯಭಾಗದಲ್ಲಿ ನ್ಯೂಯಾಕ್‌ಗೆ ಮರಳಿದ ನಂತರ ಗ್ರೀನ್ವಿಚ್ ವಿಲೇಜ್‌ಲ್ಲಿರುವ ಬೌದ್ಧಿಕ ಬೊಹೆಮಿಯಾದೆಡೆಗೆ ಆಕರ್ಷಿತರಾದರು.

        ಜೇನ್ ಅಪಾರವಾದ ಶ್ರೀಮಂತ ಜೀವನ ಪ್ರೀತಿಯನ್ನು ಹೊಂದಿದ್ದರು. ೧೯೩೭ರಲ್ಲಿ ಎರಿಕಾ ಮಾನ್‌ರವರು ಜೇನ್‌ರವರಿಗೆ ಸಂಯೋಜಕ ಮತ್ತು ಬರಹಗಾರ ಪಾಲ್ ಬೌಲ್ಸ್ ಅವರನ್ನು ಪರಿಚಯಿಸಿದರು. ೧೯೩೮ರಲ್ಲಿ ಪಾಲ್ ಬೌಲ್ಸ್‌ರವರನ್ನು ವಿವಾಹವಾಗಿ ಜೇನ್ ಔರ್‌ನಿಂದ ಜೇನ್ ಬೌಲ್ಸ್ ಆದರು. ಮಧ್ಯ ಅಮೇರಿಕಾಕ್ಕೆ ಮಧುಚಂದ್ರಕ್ಕೆ ಹೋದರು. ಅವರು ಹೋಗಿದ್ದ ಮಧುಚಂದ್ರದ ಸ್ಥಳವು ಅವರ ಕಾದಂಬರಿ ಟು ಸೀರಿಯಸ್ ಲೇಡೀಸ್ಗೆ ಸ್ಫೂರ್ತಿ ನೀಡಿತು. ಪ್ಯಾರಿಸ್‌ನಲ್ಲಿ ಒಟ್ಟಿಗೆ ಪ್ರಯಾಣಿಸುವಾಗ ಲೆಸ್ಬಿಯನ್ ಬಾರ್‌ಗಳಿಗೆ ಭೇಟಿ ನಿಡುತ್ತಿದ್ದರು. ಮದುವೆಯ ನಂತರ ಸುಮಾರು ಒಂದೂವರೆ ವರ್ಷಗಳ ಕಾಲ  ಅವರಿಬ್ಬರ ವೈವಾಹಿಕ ಜೀವನ ಸುಂದರವಾಗಿತ್ತಲ್ಲದೆ ಉತ್ತಮ ಲೈಂಗಿಕ ಜೀವನ ನಡೆಸಿದರು. ಆರಂಭಿಕ ವರ್ಷಗಳ ನಂತರ, ಜೇನ್ ಮತ್ತು ಪಾಲ್ ಪ್ಲಾಟೋನಿಕ್ ಸಹಚರರಾಗಿದ್ದರು. ಅವರಿಬ್ಬರೂ ದ್ವಿಲಿಂಗಿಗಳಾಗಿದ್ದರು. ಅದರಲ್ಲೂ ಮುಖ್ಯವಾಗಿ ಇಬ್ಬರೂ ತಮ್ಮ ಮದುವೆಯ ಹೊರಗೆ ಲೈಂಗಿಕತೆಯನ್ನು ಪಡೆಯಲು ಆದ್ಯತೆ ನೀಡಿದರು.

 ನಂತರ ಜೇನ್ ಮತ್ತು ಪಾಲ್ ಮೆಕ್ಸಿಕೋಗೆ ಹೋದಾಗ ಅಲ್ಲಿ ಜೇನ್  ಹೆಲ್ವೆಟಿಯಾ ಪರ್ಕಿನ್ಸ್ ಅವರನ್ನು ಭೇಟಿಯಾದರು,  ಅವರಿಬ್ಬರೂ ಲೆಸ್ಬಿಯನ್ ಪ್ರೇಮಿಗಳಾಗಿದ್ದರೆಂದು ಅವರ ಜೀವನ ಚರಿತ್ರೆಕಾರರು ಉಲ್ಲೇಖಿಸಿದ್ದಾರೆ.


    ೧೯೪೩ ರಲ್ಲಿ, ಅವರ ಕಾದಂಬರಿ ಟು ಸೀರಿಯಸ್ ಲೇಡೀಸ್ ಪ್ರಕಟವಾಯಿತು. ಟೂ ಸಿರಿಯಸ್ ಲೇಡಿಸ್ ಕೃತಿಯು ಇಬ್ಬರು ಮಹಿಳೆಯರ ಕುರಿತಾದ ಕೃತಿ. ಒಬ್ಬಳು ಕೆಟ್ಟ ಕೆಲಸ ಮಾಡುವ ಹಾಗೂ ಕ್ರೂರಿಯಾದರೆ ಇನ್ನೊಬ್ಬಳು ಸದ್ಗುಣ ಸಂಪನ್ನೆ. ಜೀವನದಲ್ಲಿ ಕೇವಲ ಎರಡು ಸಲ ಭೇಟಿಯಾಗಿರುವ ಈ ಇಬ್ಬರು ಮಹಿಳೆಯರ ಕಥೆಗಳು ಇಬ್ಬರ ಜೀವನ ಪ್ರತ್ಯೇಕವಾಗಿಯೇ ಮುಂದುವರೆಯುವ ಈ ಸಂಕಲನ ಅದರ ನಿರೂಪಣೆಗಾಗಿ ಹೊಗಳಿಸಿ ಕೊಂಡಿದೆ. ದಿ ಲೋಬ್ಸ್ಟರ್ ಬೌಲ್ ಎಂಬ ರೆಸ್ಟೋರೆಂಟ್ನಲ್ಲಿ ಸಂಭವಿಸುತ್ತದೆ.  ಇಲ್ಲಿ ಲೇಖಕಿ ಆಹಾರವನ್ನು ರೂಪಕ ಚಿತ್ರಣವನ್ನಾಗಿ ಬಳಸಿದ್ದಾರೆ. ಬೌಲ್ಸ್ ತಮ್ಮ ತಾಯಿಯೊಂದಿಗೆ ಹೊಂದಿದ್ದ ಸಂಕೀರ್ಣ ಸಂಬಂಧವು ಈ ಕಥಾವಸ್ತುವಿಗೆ ಸ್ಫೂರ್ತಿಯಾಗಿರಬಹುದು ಎಂದು ಜೀವನಚರಿತ್ರೆಕಾರರು ಅಭಿಪ್ರಾಯ ಪಟ್ಟಿದ್ದಾರೆ.



 ೧೯೪೭ರವರೆಗೆ ಜೇನ್ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದರೆ ಪಾಲ್ ಮೊರಾಕೊದ ಟ್ಯಾಂಜಿಯರ್‌ಗೆ ತೆರಳಿದರು ; ಜೇನ್ ೧೯೪೮ರಲ್ಲಿ ಪೌಲ್‌ರವರನ್ನು ಸೇರಿಕೊಂಡರು. ಮೊರಾಕೊದಲ್ಲಿದ್ದಾಗ, ಜೇನ್ ಚೆರಿಫಾ ಎಂಬ ಮೊರೊಕನ್ ಮಹಿಳೆಯೊಂದಿಗೆ ತೀವ್ರವಾದ ಮತ್ತು ಸಂಕೀರ್ಣವಾದ ಸಂಬಂಧವನ್ನು ಹೊಂದಿದ್ದರು. ಅವರು ಟಾರ್ಚ್ ಗಾಯಕ ಲಿಬ್ಬಿ ಹಾಲ್ಮನ್‌ರೊಂದಿಗೂ ನಿಕಟ ಸಂಬಂಧವನ್ನು ಹೊಂದಿದ್ದರು, ವಿಚಿತ್ರವೆಂದರೆ  ಲಿಬ್ಬಿ ಹಾಲ್ಮನ್ ರವರು ಜೇನ್ ಮತ್ತು ಪಾಲ್ ಇಬ್ಬರ ಕಡೆಗೂ ಆಕರ್ಷಿತರಾಗಿದ್ದರು, ಆದರೆ ಪಾಲ್ ಈ ಸಂಬಂಧದ ಬಗ್ಗೆ ಹೆಚ್ಚೇನೂ ಆಸಕ್ತಿ ಹೊಂದಿರದ ಕಾರಣ ಪ್ರತಿಕ್ರಿಯಿಸಲಿಲ್ಲ.

ಜೇನ್ ಬೌಲ್ಸ್ ೧೯೫೩ರಲ್ಲಿ ಸಮ್ಮರ್ ಹೌಸ್ ನಾಟಕವನ್ನು ಬರೆದರು. ಇದು ಬ್ರಾಡ್ವೇನಲ್ಲಿ ಪ್ರದರ್ಶನಗೊಂಡಿತು. ಟೆನ್ನೆಸ್ಸೀ ವಿಲಿಯಮ್ಸ್ , ಟ್ರೂಮನ್ ಕಾಪೋಟ್ ಮತ್ತು ಜಾನ್ ಆಶ್ಬೆರಿ ಮುಂತಾದ ಬಹಳಷ್ಟು ಖ್ಯಾತನಾಮ ಬರಹಗಾರರು ಇವರ ಸಾಹಿತ್ಯಿಕ ಅಭಿವ್ಯಕ್ತಿಯನ್ನು ತುಂಬು ಮನಸ್ಸಿನಿಂದ ಹೊಗಳಿದರು.
ವಿಲಕ್ಷಣವಾದ ಕಥಾವಸ್ತು ಹೊಂದಿರುವ ಈ ನಾಟಕವು ಅತಿಯಾಗಿ ಆಡುವ ತಾಯಿ ಮತ್ತು ಸೌಮ್ಯ ಮಗಳು ಮತ್ತು ಸೌಮ್ಯವಾದ ತಾಯಿ ಮತ್ತು ಅತಿಯಾಗಿ ವರ್ತಿಸುವ ಮಗಳ ಹೋಲಿಕೆಯಾಗಿದೆ.  ಕಥಾವಸ್ತುವು ಪಾತ್ರದ ಪರಸ್ಪರ ಸಂಭಾಷಣೆಯಿಂದ ಮುಂದುವರೆಯುತ್ತದೆ ಹೊರತು ಕ್ರಿಯೆಯಿಂದಲ್ಲ. ನಾಟಕವು  ಓ ಎಸ್. ಗೆರ್ಟುಡ್ ಈಸ್ಟ್ಮನ್ ಕ್ಯುವಾಸ್ ಅವರ ಸ್ವಗತದೊಂದಿಗೆ ಪ್ರಾರಂಭವಾಗುತ್ತದೆ, ದಕ್ಷಿಣ ಕ್ಯಾಲಿಫೋರ್ನಿಯಾದ ಓರ್ವ ವಿಧವೆ ಶ್ರೀಮಂತ ಮೆಕ್ಸಿಕನ್ ಒಬ್ಬನನ್ನು ಮದುವೆಯಾಗುತ್ತಾಳೆ. ಆತ ಹಾಡು ಮತ್ತು ನೃತ್ಯದ ಒಡನಾಡಿಯಾಗಿದ್ದವನಾದರೂ ಆ ಶ್ರೀಮಂತ ವಿಧವೆಯ ಮಗಳ ಮೇಲೆ ದಬ್ಬಾಳಿಕೆ ನಡೆಸುತ್ತಾನೆ.  ಹೀಗಾಗಿ ವಿಧವೆ ಶ್ರೀಮತಿ ಕಾನ್ಸ್ಟೇಬಲ್ ಮತ್ತು ಅವಳ ದೈಹಿಕ ಅಸಾಮರ್ಥ್ಯ ಮಗಳು ಇಬ್ಬರೂ ಅಸ್ಥಿರ ಭಾವನೆ ಅನುಭವಿಸುವ ಕಥಾನಕವನ್ನು ಇದು ಹೊಂದಿದೆ. ಮಿಸ್ ಕ್ಯುವಾಸ್ ಒಬ್ಬ ಸೂಟರ್ ಅನ್ನು ಹೊಂದಿದ್ದರೂ ಅದು ಅವಳ ತಾಯಿಗೆ ಹೆಚ್ಚು ಕಾಡುತ್ತಿರವಹುದೆಂದು ಅವಳು ಭಾವಿಸುತ್ತಾಳೆ. ಹೀಗಾಗಿ ಇದು ಮೊದಲು ಹೇಳಿದ ಒ ಎಸ್. ಕ್ಯುವಾಸ್ ಮತ್ತು ಅವರ ಹೊಸ ಪತಿ ಮೌನವಾಗಿ ಪತ್ರಿಕೆ ಓದುವುದರ ಮುಖಾಂತರ ಅವರ ಕಾರ್‍ಯವನ್ನು ಮುಚ್ಚಿ ಹಾಕುವಂತೆ ಚಿತ್ರಿಸಲಾಗಿದೆ.


         ಸಮ್ಮರ್ ಹೌಸ್ನಲ್ಲಿ ಅವರ ಏಕೈಕ ಪೂರ್ಣ ಪ್ರಮಾಣದ ಹಾಗೂ ದೀರ್ಘಾವಧಿಯ ನಾಟಕವಾಗಿತ್ತು. ಇದನ್ನು ಮೊದಲು ೧೯೫೧ರಲ್ಲಿ ಪೆನ್ಸಿಲ್ವೇನಿಯಾದ ಮೊಯ್ಲಾನ್‌ನಲ್ಲಿರುವ ಹೆಡ್ಗೆರೋ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗಿತ್ತು. ನಾಟಕವು ಪಾಲ್ ಬೌಲ್ಸ್ ಅವರ ಸಂಗೀತದೊಂದಿಗೆ ೨೯ ಡಿಸೆಂಬರ್ ೧೯೫೩ರಂದು ಬ್ರಾಡ್ವೇ ದಿ ಪ್ಲೇಹೌಸ್ ಥಿಯೇಟರ್‌ನಲ್ಲಿ ಪ್ರದರ್ಶನ ಗೊಂಡಿತು. ಅಲ್ಲಿ ಅದು ಮಿಶ್ರ ವಿಮರ್ಶೆಗಳೊಂದಿಗೆ ಮತ್ತು ಕಡಿಮೆ ಪ್ರೇಕ್ಷಕರೊಂದಿಗೆ ಎರಡು ತಿಂಗಳ ಕಾಲ ನಡೆಯಿತು. ೧೯೬೩ರ ಸುಮಾರಿಗೆ, ನಾಟಕವನ್ನು ಪುನರುಜ್ಜೀವನಗೊಳಿಸಲಾಯಿತು.  ನಾಟಕವು ೧೯೯೩ರಲ್ಲಿ ವಿವಿಯನ್ ಬ್ಯೂಮಾಂಟ್ ಥಿಯೇಟರ್‌ನಲ್ಲಿ ಫಿಲಿಪ್ ಗ್ಲಾಸ್‌ರವರ ಪ್ರಾಸಂಗಿಕ ಸಂಗೀತದೊಂದಿಗೆ ಪುನಃ ಪ್ರದರ್ಶನ ಕಂಡಿತು. ಈ ಪುನರುಜ್ಜೀವನವು ನಾಟಕದ ಅತ್ಯುತ್ತಮ ನಿರ್ದೇಶಕ, ರಂಗಸಜ್ಜಿಕೆ ಮತ್ತು ಪೋಷಕ ನಟಿಗಾಗಿ ೧೯೯೪ ರ ಡ್ರಾಮಾ ಡೆಸ್ಕ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಪಡೆಯಿತು.

ಒಟ್ಟೂ ಏಳು ಕಥಾ ಸಂಕಲನ ಪ್ರಕಟಿಸಿರುವ ಜೇನ್ ಬರಹಗಳಿಗೆ ಅವರ ಜೀವನವೇ ಸ್ಪೂರ್ತಿ. ಅವರ ಕಲೆಕ್ಟೆಡ್ ವರ್ಕ್ಸ್ ಅನ್ನು 1966ರಲ್ಲಿ ಪ್ರಕಟಿಸಲಾಯಿತು. ಅವರ ಮರಣದ ನಂತರ ಅದನ್ನು ವಿಸ್ತರಿಸಿ ಮೈ ಸಿಸ್ಟರ್ಸ್ ಹ್ಯಾಂಡ್ ಇನ್ ಮೈನ್ (1978) ಎಂದು ಪ್ರಕಟಿಸಲಾಯಿತು.

 ತೀವ್ರ ಮದ್ಯವ್ಯಸನಿಯಾಗಿದ್ದ ಬೌಲ್ಸ್, ೧೯೫೭ರಲ್ಲಿ ತಮ್ಮ ೪೦ನೇ ವಯಸ್ಸಿನಲ್ಲಿ ಪಾರ್ಶ್ವವಾಯುವಿಗೆ ಒಳಗಾದರು. ಪಾರ್ಶ್ವವಾಯು ಅವರ ದೃಷ್ಟಿ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿತು, ಆದರೆ ಅವರು ತಮ್ಮ ಆರೋಗ್ಯ ಸಮಸ್ಯೆಗಳನ್ನು ತಳ್ಳಿಹಾಕಿ ಬರೆಯುವುದನ್ನು ಮುಂದುವರೆಸಿದರು. ಇಂಗ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಕಾಯಿಲೆಗೆ ವಿವಿಧ ಚಿಕಿತ್ಸೆಗಳನ್ನು ಪಡೆದುಕೊಂಡರಾದರೂ ಇದರ ಹೊರತಾಗಿಯೂ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು,ನಂತರ ಕೊನೆಯಲ್ಲಿ ಅವರನ್ನು ಸ್ಪೇನ್‌ನ ಮಲಗಾದಲ್ಲಿನ ಚಿಕಿತ್ಸಾಲಯಕ್ಕೆ ಸೇರಿಸಲಾಯಿತು. ಅಲ್ಲಿ ಅವರು ೧೯೭೩ರಲ್ಲಿ ತಮ್ಮ ೫೬ನೇ ವಯಸ್ಸಿನಲ್ಲಿ ನಿಧನರಾದರು.

   ಪಾಲ್ ಬೌಲ್ಸ್‌ರವರ ಅರೆ-ಆತ್ಮಚರಿತ್ರೆ ಆಧರಿಸಿದ ಕಾದಂಬರಿ ದಿ ಶೆಲ್ಟರಿಂಗ್ ಸ್ಕೈನಲ್ಲಿ , ಪೋರ್ಟ್ ಮತ್ತು ಕಿಟ್ ಮೊರೆಸ್ಬಿ ಪಾತ್ರಗಳು ಪಾಲ್ ಬೌಲ್ಸ್ ಮತ್ತು ಅವರ ಹೆಂಡತಿ ಜೇನ್ ಬೌಲ್ಸ್‌ರವರನ್ನು ಆಧರಿಸಿವೆ. ಕಾದಂಬರಿಯು ಚಲನಚಿತ್ರವಾದಾಗ ಜೇನ್ ಪಾತ್ರವನ್ನು ಡೆಬ್ರಾ ವಿಂಗರ್ ಕಿಟ್ ನಿರ್ವಹಿಸಿದರು.
ಸಾಂಸಾರಿಕ ಜೀವನದಲ್ಲಿದ್ದೂ ಗಂಡ ಹೆಂಡತಿ ಇಬ್ಬರೂ ದ್ವಿಲಿಂಗಿಗಳಾಗಿ ಹೊರಗಿನವರೊಂದಿಗೆ ಸಂಬಂಧ ಬೆಳೆಸಲು ಉತ್ಸುಕರಾಗಿದ್ದಾಗಿಯೂ ತಮ್ಮ ವೈವಾಹಿಕ ಸಂಬಂಧವನ್ನು ಕೊನೆಯವರೆಗೂ ಕಾಪಾಡಿಕೊಂಡ ವಿಲಕ್ಷಣ ಸಾಹಿತ್ಯಿಕ ದಂಪತಿಗಳಾಗಿ ಇವರಿಬ್ಬರೂ ಸದಾ ಸಾಹಿತ್ಯ ಪ್ರೇಮಿಗಳಲ್ಲಿ ನೆನಪಿನಲ್ಲಿ ಉಳಿಯುತ್ತಾರೆ. ತಮ್ಮದೇ ವೈಯಕ್ತಿಕ ಜೀವನದ ಅನುಭವಗಳನ್ನು ಕಾದಂಬರಿ ನಾಟಕಗಳ ಮುಖಾಂತರ ಓದುಗರಿಗೆ ಕಟ್ಟಿಕೊಟ್ಟು ದಟ್ಟವಾದ ಅನುಭವವನ್ನು ಉಣಬಡಿಸಿದ ಖ್ಯಾತಿ ಜೇನ್ ಹೆಸರಿಗಿದೆ.


https://lokadhwani.com/ArticlePage/APpage.php?edn=Main&articleid=LOKWNI_MAI_20221111_4_6

Friday, 7 October 2022

ಸ್ಪಾನಿಷ್‌ನ ಜನಪ್ರಿಯ ಬರೆಹಗಾರ್ತಿ ಇಸಾಬೆಲ್ ಏಂಜೆಲಿಕಾ ಅಲೆಂಡೆ ಲೊನಾ


ಸ್ಪಾನಿಷ್‌ನ ಜನಪ್ರಿಯ ಬರೆಹಗಾರ್ತಿ ಇಸಾಬೆಲ್ ಏಂಜೆಲಿಕಾ ಅಲೆಂಡೆ ಲೊನಾ

ಪೆರುವಿನ ಲಿಮಾದಲ್ಲಿ ೨ ಆಗಸ್ಟ್ ೧೯೪೨ರಂದು ೧೯೭೦ ರಿಂದ ೧೯೭೩ ರವರೆಗೆ ಚಿಲಿಯ ಅಧ್ಯಕ್ಷ ಸಾಲ್ವಡಾರ್ ಅಲೆಂಡೆ ಅವರ ಮೊದಲ ಸೋದರಸಂಬಂಧಿಯಾಗಿದ್ದ ಮತ್ತು ಆ ಸಮಯದಲ್ಲಿ ಚಿಲಿಯಲ್ಲಿ ಎರಡನೇ ಕಾರ್ಯದರ್ಶಿಯಾಗಿದ್ದ ಟೋಮಸ್ ಅಲೆಂಡೆ ಹಾಗೂ "ಡೊನಾ ಪಂಚಿತಾ" (ಪೋರ್ಚುಗೀಸ್ ಮೂಲದ ಅಗಸ್ಟಿನ್ ಲೊನಾ ಕ್ಯುವಾಸ್ ಮತ್ತು ಇಸಾಬೆಲ್ ಬ್ಯಾರೋಸ್ ಮೊರೆರಾ ಅವರ ಮಗಳು) ಎಂದು ಕರೆಯಲ್ಪಡುವ ಫ್ರಾನ್ಸಿಸ್ಕಾ ಲೊನಾ ಬ್ಯಾರೋಸ್ ಅವರ ಮಗಳಾಗಿ  ಜನಿಸಿದ ಇಸಾಬೆಲ್ ಏಂಜೆಲಿಕಾ ಅಲೆಂಡೆ ಲೊನಾ ಅಮೇರಿಕನ್ ಸ್ಪ್ಯಾನಿಷ್‌ನ ಚಿಲಿಯ "ಜಗತ್ತಿನ ಅತ್ಯಂತ ವ್ಯಾಪಕವಾಗಿ ಓದುವ ಸ್ಪ್ಯಾನಿಷ್ ಭಾಷೆಯ ಬರಹಗಾರ್ತಿ'.

೧೯೪೫ ರಲ್ಲಿ, ಟೋಮಸ್ ಅವರನ್ನು ತೊರೆದ ಇಸಾಬೆಲ್ ಅವರ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಚಿಲಿಯ ಸ್ಯಾಂಟಿಯಾಗೊಕ್ಕೆ ಸ್ಥಳಾಂತರಗೊಂಡರು. ೧೯೫೩ರವರೆಗೆ ಚಿಲಿಯಲ್ಲಿ ವಾಸಿಸುತ್ತಿದ್ದ ಅಲೆಂಡೆ ಅವರ ತಾಯಿ ೧೯೫೩ ರಲ್ಲಿ ರಾಮನ್ ಹುಯ್ಡೋಬ್ರೊ ಅವರನ್ನು ವಿವಾಹವಾದರು. ಹುಯ್ಡೋಬ್ರೊ ಬೊಲಿವಿಯಾ ಮತ್ತು ಬೈರುತ್‌ಗೆ ನೇಮಕಗೊಂಡ ರಾಜತಾಂತ್ರಿಕರಾಗಿದ್ದರು. ಬೊಲಿವಿಯಾದಲ್ಲಿ, ಅಲೆಂಡೆ ಅಮೆರಿಕಾದ ಖಾಸಗಿ ಶಾಲೆಯಲ್ಲಿ ಮತ್ತು ಲೆಬನಾನ್‌ನ ಬೈರುತ್‌ನಲ್ಲಿ ಖಾಸಗಿ ಇಂಗ್ಲಿಷ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಕುಟುಂಬವು ೧೯೫೮ ರಲ್ಲಿ ಚಿಲಿಗೆ ಮರಳಿತು. ತನ್ನ ಯೌವನದ ದಿನಗಳಲ್ಲಿ ಓದುವುದು ಅಲೆಂಡೆಯವರಿಗೆ ಬಹಳ ಇಷ್ಟವಾದ ಹವ್ಯಾಸವಾಗಿತ್ತು. ಅದರಲ್ಲೂ ವಿಶೇಷವಾಗಿ ವಿಲಿಯಂ ಷೇಕ್ಸ್ಪಿಯರ್ನ ಕೃತಿಗಳನ್ನು ಓದುವುದೆಂದರೆ ಜಗತ್ತನ್ನೇ ಮರೆತು ಬಿಡುತ್ತಿದ್ದರು. ೧೯೭೦ರಲ್ಲಿ ಹುಯಿಡೋಬ್ರೊರವರನ್ನು ಸಾಲ್ವಡಾರ್ ಅಲೆಂಡೆ ಅರ್ಜೆಂಟೈನಾದ ರಾಯಭಾರಿಯಾಗಿ ನೇಮಿಸಿದರು.

       ಚಿಲಿಯಲ್ಲಿ ವಾಸಿಸುತ್ತಿರುವಾಗ, ಅಲೆಂಡೆ ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದರು. ೧೯೬೨ ರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಮಿಗುಯೆಲ್ ಫ್ರಿಯಾಸ್ ಅವರನ್ನು  ವಿವಾಹವಾದ ಅವರಿಗೆ ಇಬ್ಬರು ಮಕ್ಕಳಿದ್ದರು. ಒಬ್ಬ ಮಗ ಮತ್ತು ಮಗಳು. ಅವರ ಮಗಳು ಪೌಲಾ ೧೯೬೩ ರಲ್ಲಿ ಜನಿಸಿದರು; ಅವರು ೧೯೯೨ರಲ್ಲಿ ನಿಧನರಾದರು. ೧೯೬೬ರಲ್ಲಿ, ಅಲೆಂಡೆ ಮತ್ತೆ ಚಿಲಿಗೆ ಮರಳಿದರು, ಅಲ್ಲಿ ಅವರ ಮಗ ನಿಕೋಲಸ್ ಅದೇ ವರ್ಷ ಜನಿಸಿದರು.


ವರದಿಯ ಪ್ರಕಾರ "ಅಲೆಂಡೆ ಆಂಗ್ಲೋಫೈಲ್ ಕುಟುಂಬಕ್ಕೆ ವಿವಾಹವಾಗಿದ್ದರಿಂದ ಒಂದು ರೀತಿಯ ದ್ವಿಮುಖ ಜೀವನ ನಡೆಸಬೇಕಾಗಿತ್ತು. ಮನೆಯಲ್ಲಿ ವಿಧೇಯ ಹೆಂಡತಿ ಮತ್ತು ಇಬ್ಬರ ತಾಯಿಯಾಗಿ ಹಾಗೂ ಸಾರ್ವಜನಿಕವಾಗಿ ಬಾರ್ಬರಾ ಕಾರ್ಟ್‌ಲ್ಯಾಂಡ್ ಅನ್ನು ಭಾಷಾಂತರಿಸುವ ಅನುವಾದಕಿಯಾಗಿ ನಂತರ ಪ್ರಸಿದ್ಧ ಟಿವಿಯ ನಿರೂಪಕಿಯಾಗಿ, ಸ್ತ್ರೀವಾದಿ ಪತ್ರಿಕೆಯಲ್ಲಿ ನಾಟಕಕಾರ್ತಿ ಮತ್ತು ಪತ್ರಕರ್ತಳಾಗಿ ಕಾರ್‍ಯ ನಿರ್ವಹಿಸಿದರು.

೧೯೫೯ರಿಂದ ೧೯೬೫ರವರೆಗೆ, ಅಲೆಂಡೆ ಯುನೈಟೆಡ್ ನೇಷನ್ಸ್ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್‌ನೊಂದಿಗೆ ಸ್ಯಾಂಟಿಯಾಗೊದಲ್ಲಿ, ನಂತರ ಬ್ರಸೆಲ್ಸ್‌ನಲ್ಲಿ ಮತ್ತು ಯುರೋಪಿನ ಇತರೆಡೆ ಕೆಲಸ ಮಾಡಿದರು. ಚಿಲಿಯಲ್ಲಿ ಕೆಲ ಸಮಯ ಇಂಗ್ಲಿಷ್‌ನಿಂದ ಸ್ಪ್ಯಾನಿಷ್‌ಗೆ ಪ್ರಣಯ ಕಾದಂಬರಿಗಳನ್ನು ಅನುವಾದಿಸುವ ಕೆಲಸವನ್ನೂ ಮಾಡಿದರು. ಆದಾಗ್ಯೂ, ನಾಯಕಿಯರ ಸಂಭಾಷಣೆಗೆ ಅನಧಿಕೃತ ಬದಲಾವಣೆಗಳನ್ನು ಮಾಡಿದ ಕಾರಣಕ್ಕಾಗಿ ಅವರನ್ನು ವಜಾಗೊಳಿಸಲಾಯಿತು. ಆದರೂ ನಾಯಕಿಯರು ಹೆಚ್ಚು ಬುದ್ಧಿವಂತರಾಗಿ ಧ್ವನಿಸುವಂತೆ ಮಾಡಲು, ಜೊತೆಗೆ ಹೆಚ್ಚು ಸ್ವತಂತ್ರ ವ್ಯಕ್ತಿತ್ವದವರಾಗಿ ಕಾಣಿಸಿಕೊಂಡು ಜಗತ್ತಿನಲ್ಲಿ ಒಳ್ಳೆಯದನ್ನು ಮಾಡಲು ಸಿಂಡ್ರೆಲಾದ ಅಂತ್ಯವನ್ನು ಬದಲಾಯಿಸಿದರು.


೧೯೭೩ ರಲ್ಲಿ, ಜನರಲ್ ಆಗಸ್ಟೊ ಪಿನೋಚೆಟ್ ನೇತೃತ್ವದ ದಂಗೆಯಲ್ಲಿ ಸಾಲ್ವಡಾರ್ ಅಲೆಂಡೆಯವರನ್ನು ಪದಚ್ಯುತಗೊಳಿಸಲಾಯಿತು.  ತಮ್ಮ ತಾಯಿ ಮತ್ತು ಮಲತಂದೆ ಹತ್ಯೆಯಾಗುವವರೆಗೂ ವಾಂಟೆಡ್ ಲಿಸ್ಟ್‌ನಿಂದ ಸ್ವಲ್ಪಮಟ್ಟಿಗೆ ತಪ್ಪಿಸಿಕೊಂಡು ಉಳಿದವರನ್ನೂ ಬಚಾವು ಮಾಡುತ್ತಿದ್ದ ಅಲೆಂಡೆ ನಂತರ ತಾವೇ ಸ್ವತಃ ವಾಂಟೆಂಡ್ ಲಿಸ್ಟ್‌ಗೆ ಸೇರಿದರು. ಅದೇ ಸಮಯದಲ್ಲಿ ಬರುತ್ತಿದ್ದ ಸಾವಿನ ಬೆದರಿಕೆಗಳಿಂದ ಅಂಜಿ ವೆನೆಜುವೆಲಾಕ್ಕೆ ಓಡಿಹೋದರು. ಅಲ್ಲಿ ೧೩ ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಸಮಯದಲ್ಲಿ ಅಲೆಂಡೆ ತಮ್ಮ ಚೊಚ್ಚಲ ಕಾದಂಬರಿ ದಿ ಹೌಸ್ ಆಫ್ ದಿ ಸ್ಪಿರಿಟ್ಸ್ ಅನ್ನು ಬರೆದರು(೧೯೮೨) ಚಿಲಿಯಿಂದ ವಲಸೆ ಹೋಗಿದ್ದು ತಮ್ಮನ್ನು ಗಂಭೀರ ಬರಹಗಾರರನ್ನಾಗಿ ಮಾಡಿದೆ ಎಂದು ಅಲೆಂಡೆ ಹೇಳಿಕೊಂಡಿದ್ದಾರೆ. "ಚಿಲಿಯಲ್ಲಿ ಉಳಿದುಕೊಂಡಿದ್ದರೆ ಬರಹಗಾರಳಾಗುವುದು ನನಗೆ ಸಾಧ್ಯವಾಗುತ್ತೆಂದು ನನಗೆ ಅನ್ನಿಸುವುದಿಲ್ಲ. ಮನೆಕೆಲಸಗಳಲ್ಲಿ, ಕುಟುಂಬದಲ್ಲಿ, ಜನರು ನಿರೀಕ್ಷಿಸುವ ರೀತಿಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೆ. ಪಿತೃಪ್ರಭುತ್ವದ ಕುಟುಂಬದ ಹೆಣ್ಣಾಗಿರುವುದರಿಂದ  "ವಿಮೋಚನೆಗೊಂಡ" ವ್ಯಕ್ತಿಯಾಗಬೇಕೆಂದು ನಿರೀಕ್ಷಿಸಿರಲಿಲ್ಲ.' ಎಂದು ಅಲೆಂಡೆ ನಂಬಿದ್ದರು. ದಬ್ಬಾಳಿಕೆ ಮತ್ತು ವಿಮೋಚನೆಯ ಇತಿಹಾಸವು ವಿಷಯಾಧಾರಿತವಾಗಿ ಅವರ ಹೆಚ್ಚಿನ ಕಾದಂಬರಿಗಳಲ್ಲಿ ಕಂಡುಬರುತ್ತದೆ, ಅಲ್ಲಿ ಮಹಿಳೆಯರು ಪಿತೃಪ್ರಭುತ್ವದ ನಾಯಕರ ಆದರ್ಶಗಳನ್ನು ಪ್ರಶ್ನಿಸುತ್ತಾರೆ. ವೆನೆಜುವೆಲಾದಲ್ಲಿ ಅವರು ಪ್ರಮುಖ ರಾಷ್ಟ್ರೀಯ ಪತ್ರಿಕೆಯಾದ ಎಲ್ ನ್ಯಾಶನಲ್‌ಗೆ ಅಂಕಣಕಾರರಾಗಿದ್ದರು. ೧೯೭೮ರಲ್ಲಿ, ಅವರು ಮಿಗುಯೆಲ್ ಫ್ರಿಯಾಸ್‌ನಿಂದ ತಾತ್ಕಾಲಿಕವಾಗಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ನಂತರ ಎರಡು ತಿಂಗಳ ಕಾಲ ಸ್ಪೇನ್‌ನಲ್ಲಿ ಉಳಿದು ನಂತರ ಪುನಃ ತಮ್ಮ ವೈವಾಹಿಕ ಜೀವನಕ್ಕೆ ಮರಳಿದಳು.

ಆದರೆ ೧೯೮೭ರಲ್ಲಿ ತಮ್ಮ ಪತಿ ಮಿಗುಯೆಲ್ ಫ್ರಿಯಾಸ್‌ರಿಗೆ ವಿಚ್ಛೇದನ ನೀಡಿದರು. ೧೯೮೮ರಲ್ಲಿ ಪುಸ್ತಕ ಪ್ರವಾಸದಲ್ಲಿ ಕ್ಯಾಲಿಫೋರ್ನಿಯಾಗೆ ಭೇಟಿ ನೀಡಿದಾಗ ಕ್ಯಾಲಿಫೋರ್ನಿಯಾದ ವಕೀಲ ಮತ್ತು ಕಾದಂಬರಿಕಾರ ವಿಲಿಯಂ ಸಿ. "ವಿಲ್ಲೀ" ಗಾರ್ಡನ್‌ರವರನ್ನು ಭೇಟಿಯಾದರು. ಅವರಿಬ್ಬರೂ ಜುಲೈ ೧೯೮೮ರಲ್ಲಿ ವಿವಾಹವಾದರು. ೧೯೯೪ರಲ್ಲಿ ಅವರಿಗೆ ಗೇಬ್ರಿಯೆಲಾ ಮಿಸ್ಟ್ರಲ್ ಆರ್ಡರ್ ಆಫ್ ಮೆರಿಟ್ ನೀಡಲಾಯಿತು, ಈ ಗೌರವವನ್ನು ಪಡೆದ ಮೊದಲ ಮಹಿಳೆ ಎಂಬ ಖ್ಯಾತಿ ಇವರದ್ದು.

         ಕ್ಯಾಲಿಫೋರ್ನಿಯಾದ ಸ್ಯಾನ್ ರಾಫೆಲ್‌ನಲ್ಲಿ ವಾಸಿಸುತ್ತಿರುವ ಅಲೆಂಡೆಯವರ ಕುಟುಂಬದ ಹೆಚ್ಚಿನವರು ಹತ್ತಿರದಲ್ಲೇ ವಾಸಿಸುತ್ತಿದ್ದಾರೆ, ಅವರ ಮಗ, ಅವನ ಎರಡನೇ ಹೆಂಡತಿ ಮತ್ತು  ಮೊಮ್ಮಕ್ಕಳೊಂದಿಗೆ ಬೆಟ್ಟದ ಕೆಳಗೆ ವಾಸಿಸುತ್ತಿರುವ ಅಲೆಂಡೆ ತಮ್ಮ ಎರಡನೆ ಪತಿ ಗಾರ್ಡನ್‌ರಿಂದ ಏಪ್ರಿಲ್ ೨೦೧೫ರಲ್ಲಿ ಬೇರೆಯಾಗಿದ್ದಾರೆ.

೨೦೦೬ ರಲ್ಲಿ ಇಟಲಿಯ ಟುರಿನ್‌ನಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಎಂಟು ಧ್ವಜಧಾರಿಗಳಲ್ಲಿ ಒಬ್ಬರಾಗಿರುವ ಅಲೆಂಡೆ ೨೦೦೭ರಲ್ಲಿ ಟಾಕ್ ಟೇಲ್ಸ್ ಆಫ್ ಪ್ಯಾಶನ್ ಅನ್ನು ಪ್ರಸ್ತುತಪಡಿಸಿದ್ದಲ್ಲದೆ ೨೦೦೮ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊದ ಸ್ಟೇಟ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರ್ ಆಫ್ ಹ್ಯೂಮನ್ ಲೆಟರ್ಸ್ ಅನ್ನು "ಸಾಹಿತ್ಯ ಕಲಾವಿದರಾಗಿ ಮತ್ತು ಮಾನವತಾವಾದಿಯಾಗಿ ವಿಶಿಷ್ಟ ಕೊಡುಗೆಗಳಿಗಾಗಿ" ಪಡೆದಿದ್ದಾರೆ. ೨೦೧೪ರಲ್ಲಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲೆಟರ್ಸ್ ಗೌರವ ಪದವಿಯನ್ನು ಪಡೆದಿದ್ದಾರೆ.

೨೦೧೯ರಲ್ಲಿ ಅವರು ನ್ಯೂಯಾರ್ಕ್‌ನ ವಕೀಲ ರೋಜರ್ ಕುಕ್ರಾಸ್ ಅವರನ್ನು ವಿವಾಹವಾದ ಅಲೆಂಡೆ ಅವರ ಕೆಲವು ಸಮಕಾಲೀನ ಬರಹಗಾರರಂತೆ ಬಹಿರಂಗವಾಗಿ ರಾಜಕೀಯವಲ್ಲದಿದ್ದರೂ ಡೊನಾಲ್ಡ್ ಟ್ರಂಪ್ ಮತ್ತು ೨೦೧೬ರಲ್ಲಿ ಅವರ ಚುನಾವಣೆಯ ನಂತರ ಅವರ ನೀತಿಗಳಿಗೆ ತಿರಸ್ಕಾರವನ್ನು ವ್ಯಕ್ತಪಡಿಸಿದರು. ೨೦೨೦ರ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಡೆಮೋಕ್ರಾಟ್‌ನ ಜೋ ಬಿಡೆನ್ ಅವರನ್ನು ಅನುಮೋದಿಸಿದರು. ಆದರೂ ಅವರು ಸದಾ ತಮ್ಮ ತಂದೆಯ ಸೋದರಸಂಬಂಧಿ ಸಾಲ್ವಡಾರ್ ಅಲೆಂಡೆಯವರ ಆಡಳಿತವನ್ನು ಸಮರ್ಥಿಸಿಕೊಂಡಿದ್ದಾರೆ.

೯ ಡಿಸೆಂಬರ್ ೧೯೯೬ರಂದು ಪೋರ್ಫೈರಿಯಾ ಕಾಯಿಲೆಯಿಂದಾಗಿ ಆಸ್ಪತ್ರೆ ಸೇರಿದ ನಂತರ ಕೋಮಾ ತಲುಪಿ ೧೯೯೨ರಲ್ಲಿ ನಿಧನರಾದಾಗ ೨೯ ವರ್ಷ ವಯಸ್ಸಿನವರಾಗಿದ್ದ ಮಗಳು ಪೌಲಾ ಫ್ರಿಯಾಸ್ ಅಲೆಂಡೆ ಅವರ ಗೌರವಾರ್ಥವಾಗಿ ಇಸಾಬೆಲ್ ಅಲೆಂಡೆ ಫೌಂಡೇಶನ್ ಅನ್ನು ಪ್ರಾರಂಭಿಸಿದರು. ಪ್ರತಿಷ್ಠಾನವು "ಮಹಿಳೆಯರು ಮತ್ತು ಮಕ್ಕಳ ಮೂಲಭೂತ ಹಕ್ಕುಗಳನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಕಾರ್ಯಕ್ರಮಗಳನ್ನು ಬೆಂಬಲಿಸಲು ಹುಟ್ಟಿಕೊಂಡ ಸಂಸ್ಥೆಯಾಗಿದೆ.

೧೯೬೭ರಿಂದ ಅಲೆಂಡೆ ಅವರು ಪೌಲಾ ನಿಯತಕಾಲಿಕೆಗೆ ಹಾಗೂ  ಮಕ್ಕಳ ನಿಯತಕಾಲಿಕವಾದ ಮಂಪಾಟೊಗೆ ೧೯೬೯ರಿಂದ ೧೯೭೪ರವರೆಗೆ ಸಂಪಾದಕೀಯ ಸಿಬ್ಬಂದಿಯಲ್ಲಿದ್ದು ನಂತರ ಸಂಪಾದಕರಾದರು. "ಲಾ ಅಬುಯೆಲಾ ಪಂಚಿತಾ" ಮತ್ತು "ಲೌಚಾಸ್ ವೈ ಲೌಚೋನ್ಸ್" ಎಂಬ ಎರಡು ಮಕ್ಕಳ ಕಥೆಗಳನ್ನು ಪ್ರಕಟಿಸಿದರು, ಜೊತೆಗೆ ಸಿವಿಲಿಸ್ ಎ ಸು ಟ್ರೋಗ್ಲೋಡಿಟಾ ಎಂಬ ಲೇಖನಗಳ ಸಂಗ್ರಹವನ್ನು ಪ್ರಕಟಿಸಿದರು. ೧೯೭೦ರಿಂದ ೧೯೭೪ರವರೆಗೆ ಚಾನೆಲ್ ೭ ಮತ್ತು ೧೩ ಗಾಗಿ ಚಿಲಿಯ ದೂರದರ್ಶನ ಕಾರ್‍ಯಕ್ರಮಗಳ ನಿರ್ಮಾಣದಲ್ಲಿ ಕೆಲಸ ಮಾಡಿದರು. ಪತ್ರಕರ್ತೆಯಾಗಿ, ಅವರು ಒಮ್ಮೆ ಕವಿ ಪಾಬ್ಲೋ ನೆರುಡಾ ಅವರೊಂದಿಗೆ ಸಂದರ್ಶನವನ್ನು ಬಯಸಿದರು . ನೆರುಡಾ ಸಂದರ್ಶನಕ್ಕೆ ಒಪ್ಪಿಕೊಂಡರು.    ಪತ್ರಕರ್ತರಾಗಿರುವುದಕ್ಕಿಂತ ತುಂಬಾ ಕಲ್ಪನೆಯನ್ನು ಹೊಂದಿರುವುದರಿಂದಕಾದಂಬರಿಕಾರರಾಗಬೇಕೆಂದು ಹೇಳಿದರು. ಅವರ ವಿಡಂಬನಾತ್ಮಕ ಅಂಕಣಗಳನ್ನು ಪುಸ್ತಕ ರೂಪದಲ್ಲಿ ಸಂಕಲಿಸಲು ಸಲಹೆ ನೀಡಿದರು. ಇದು ಅವರ ಮೊದಲ ಪ್ರಕಟಿತ ಪುಸ್ತಕವಾಯಿತು. ೧೯೭೩ ರಲ್ಲಿ , ದಂಗೆಯಿಂದಾಗಿ ದೇಶದಿಂದ ಪಲಾಯನ ಮಾಡುವ ಕೆಲವು ತಿಂಗಳುಗಳ ಮೊದಲು ಅಲೆಂಡೆಯವರ ಎಲ್ ಎಂಬಾಜಡೋರ್ ನಾಟಕವನ್ನು ಸ್ಯಾಂಟಿಯಾಗೊದಲ್ಲಿ ಆಡಲಾಯಿತು.

ವೆನೆಜುವೆಲಾದಲ್ಲಿರುವ ಸಮಯದಲ್ಲಿ ೧೯೭೬ರಿಂದ ೧೯೮೩ರವರೆಗೆ ಕ್ಯಾರಕಾಸ್‌ನಲ್ಲಿ ಎಲ್ ನ್ಯಾಶನಲ್‌ಗೆ ಸ್ವತಂತ್ರ ಪತ್ರಕರ್ತರಾಗಿದ್ದರು ಮತ್ತು ೧೯೭೯ರಿಂದ ೧೯೮೩ರವರೆಗೆ ಕ್ಯಾರಕಾಸ್‌ನ ಮಾರೊಕೊ ಶಾಲೆಯ ನಿರ್ವಾಹಕರಾಗಿದ್ದರು .

೧೯೮೧ ರಲ್ಲಿ, ಕ್ಯಾರಕಾಸ್‌ನಲ್ಲಿದ್ದಾಗ, ಅಲೆಂಡೆ ತಮ್ಮ ೯೯ ವರ್ಷದ ಅಜ್ಜ ಮರಣದ ಸಮೀಪದಲ್ಲಿದ್ದಾರೆ ಎಂಬ ಫೋನ್ ಕರೆಯನ್ನು ಸ್ವೀಕರಿಸಿದ ನಂತರ ಅವನಿಗೆ ಪತ್ರ ಬರೆಯಲು ಬಯಸಿ ಆ ಮೂಲಕ "ಅವನನ್ನು ಕನಿಷ್ಠ ಆತ್ಮದಲ್ಲಿ ಜೀವಂತವಾಗಿಡಲು" ಆಶಿಸಿದರು. ಪತ್ರವು ದಿ ಹೌಸ್ ಆಫ್ ದಿ ಸ್ಪಿರಿಟ್ಸ್ (೧೯೮೨) ಎಂಬ ಪುಸ್ತಕವಾಯಿತು. 


ಈ ಪುಸ್ತಕವು ಪಿನೋಚೆಟ್ ಸರ್ವಾಧಿಕಾರದ ಭೂತಗಳನ್ನು ಹೊರಹಾಕುವ ಉದ್ದೇಶವನ್ನು ಹೊಂದಿತ್ತು. ಈ ಪುಸ್ತಕವನ್ನು ಹಲವಾರು ಲ್ಯಾಟಿನ್ ಅಮೇರಿಕನ್ ಪ್ರಕಾಶಕರು ತಿರಸ್ಕರಿಸಿದರು, ಆದರೆ ಅಂತಿಮವಾಗಿ ಬ್ಯೂನಸ್ ಐರಿಸ್‌ನಲ್ಲಿ ಪ್ರಕಟಿಸಲಾಯಿತು. ಪುಸ್ತಕವು ಶೀಘ್ರದಲ್ಲೇ ಸ್ಪ್ಯಾನಿಷ್‌ನಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಆವೃತ್ತಿಗಳಲ್ಲಿ ಪ್ರಕಟಗೊಂಡಿತು. ಹಲವಾರು ಭಾಷೆಗಳಿಗೆ ಅನುವಾದಿಸಲಾಯಿತು. ಮ್ಯಾಜಿಕಲ್ ರಿಯಲಿಸಂ ಎಂದು ಕರೆಯಲ್ಪಡುವ ಶೈಲಿಯಲ್ಲಿ ಲೇಖಕರಾಗಿ ಅಲೆಂಡೆಯವರನ್ನು ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ಗೆ ಹೋಲಿಸಲಾಗಿದೆ .

ಅಲೆಂಡೆಯವರನ್ನು ಮಾಂತ್ರಿಕ ವಾಸ್ತವಿಕತೆಯ ಅಭ್ಯಾಸಿ ಎಂದು ಉಲ್ಲೇಖಿಸಲಾಗಿದ್ದರೂ, ಅವರ ಕೃತಿಗಳು ಬೂಮ್ ನಂತರದ ಸಾಹಿತ್ಯದ ಅಂಶಗಳನ್ನು ಸಹ ಪ್ರದರ್ಶಿಸುತ್ತವೆ. ಅಲೆಂಡೆ ತುಂಬಾ ಕಟ್ಟುನಿಟ್ಟಾದ ಬರವಣಿಗೆಯ ದಿನಚರಿಯನ್ನು ಸಹ ಹೊಂದಿದ್ದಾರೆ. ಅವರು ಕಂಪ್ಯೂಟರ್‌ನಲ್ಲಿ ಬರೆಯುತ್ತಾರೆ. ಸೋಮವಾರದಿಂದ ಶನಿವಾರದವರೆಗೆ ೦೯:೦೦ ರಿಂದ ೧೯:೦೦ ರವರೆಗೆ ಕೆಲಸ ಮಾಡುತ್ತಾರೆ "ನಾನು ಯಾವಾಗಲೂ ಜನವರಿ ೮ರಂದು ಪ್ರಾರಂಭಿಸುತ್ತೇನೆ" ಎಂದು ಅಲೆಂಡೆ ಹೇಳಿದ್ದಾರೆ.
    

    ಅಲೆಂಡೆಯವರ ಪುಸ್ತಕ ಪೌಲಾ (೧೯೯೫) ಸ್ಯಾಂಟಿಯಾಗೊದಲ್ಲಿನ ಅವರ ಬಾಲ್ಯದ ನೆನಪು ಮತ್ತು ಅವರು ದೇಶಭ್ರಷ್ಟರಾಗಿ ಕಳೆದ ವರ್ಷಗಳ ಕುರಿತಾಗಿ ಇದೆ. ತಮ್ಮ ಮಗಳಿಗೆ ಬರೆದ ಕಳವಳದ ಪತ್ರ ಇದಾಗಿದೆ. ೧೯೯೧ರಲ್ಲಿ ಪೌಲಾಳ ಔಷಧಿಯಲ್ಲಿನ ದೋಷವು ಮಿದುಳಿಗೆ ತೀವ್ರವಾದ ಹಾನಿಯನ್ನುಂಟುಮಾಡಿತು. ಅವಳನ್ನು ನಿರಂತರ ನಿಸ್ಸಹಾಯಕ ಸ್ಥಿತಿಯಲ್ಲಿಟ್ಟಿತು. ಆಸ್ಪತ್ರೆಯಲ್ಲಿ ನಡೆದ ಈ ಅಪಘಾತವು ಮಿದುಳಿಗೆ ಹಾನಿಯನ್ನುಂಟುಮಾಡಿದೆ ಎಂದು ತಿಳಿಯುವ ಮೊದಲು ಅಲೆಂಡೆ ಪೌಲಾ ಅವರ ಹಾಸಿಗೆಯ ಪಕ್ಕದಲ್ಲಿ ತಿಂಗಳುಗಳನ್ನು ಕಳೆದರು. ಅಲೆಂಡೆ ಪೌಲಾ ಅವರನ್ನು ಕ್ಯಾಲಿಫೋರ್ನಿಯಾದ ಆಸ್ಪತ್ರೆಗೆ ಸ್ಥಳಾಂತರಿಸಿದರು, ಅಲ್ಲಿ ಅವರು ೬ ಡಿಸೆಂಬರ್ ೧೯೯೨ ರಂದು ನಿಧನರಾದರು. ಆ ಸಮಯದಲ್ಲಿ ಪೌಲಾರವರಿಗೆ ಬರೆದ ಪತ್ರಗಳಿವು.

ಅಲೆಂಡೆಯವರ ಕಾದಂಬರಿಗಳನ್ನು ೪೦ ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು ಸುಮಾರು ೭೪ ಮಿಲಿಯನ್ ಪ್ರತಿಗಳು ಮಾರಾಟವಾಗಿವೆ. ಅವರು ೨೦೦೮ರಲ್ಲಿ ಬರೆದ ಪುಸ್ತಕ, ದಿ ಸಮ್ ಆಫ್ ಅವರ್ ಡೇಸ್ , ಒಂದು ಸ್ಮರಣ ಸಂಚಿಕೆಯಾಗಿದೆ.

 ಇದನ್ನು ತಮ್ಮ ಕುಟುಂಬದೊಂದಿಗೆ ಕಳೆದ ಸಮಯ ಹಾಗೂ ತಮ್ಮ ಜೀವನದ ಮೇಲೆ ಕೇಂದ್ರೀಕರಿಸಿ ಬರೆದಿದ್ದಾರೆ. ಇದರಲ್ಲಿ ಅವರ ಬೆಳೆದ ಮಗ ನಿಕೋಲಸ್ ಇದ್ದಾರೆ, ಎರಡನೇ ಪತಿ, ವಿಲಿಯಂ ಗಾರ್ಡನ್; ಮತ್ತು ಹಲವಾರು ಮೊಮ್ಮಕ್ಕಳ ಕುರಿತಾಗಿ ಪ್ರಸ್ತಾಪಿಸಿದ್ದಾರೆ. ನ್ಯೂ ಓರ್ಲಿಯನ್ಸ್, ಐಲ್ಯಾಂಡ್ ಬಿನೀತ್ ದಿ ಸೀ , ೨೦೧೦ ರಲ್ಲಿ ಪ್ರಕಟವಾದ ಒಂದು ಕಾದಂಬರಿ . ೨೦೧೧ ರಲ್ಲಿ ಎಲ್ ಕ್ಯುಡೆರ್ನೊ ಡಿ ಮಾಯಾ ( ಮಾಯಾಸ್ ನೋಟ್‌ಬುಕ್) ಪ್ರಕಟಿಸಿದರು.




ಲ್ಯಾಟಿನೋ ಲೀಡರ್ಸ್ ಮ್ಯಾಗಜೀನ್ ಅವರನ್ನು "ಸಾಹಿತ್ಯದ ದಂತಕಥೆ" ಎಂದು ೨೦೦೭ರ ಲೇಖನದಲ್ಲಿ ಕರೆದಿದೆ. ವಿಶ್ವದ ಮೂರನೇ ಅತ್ಯಂತ ಪ್ರಭಾವಶಾಲಿ ಲ್ಯಾಟಿನೋ ನಾಯಕಿ ಎಂದು ಹೆಸರಿಸಿದೆ.

ಅದೇ ಸಮಯಕ್ಕೆ ಅವರ ಕೆಲಸವು ಕೆಲವು ನಕಾರಾತ್ಮಕ ಟೀಕೆಗಳನ್ನೂ ಹೊಂದಿವೆ. ಎಂಟ್ರೆ ಪ್ಯಾರೆಂಟೆಸಿಸ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ , ರಾಬರ್ಟೊ ಬೊಲಾನೊರವರು ಅಲೆಂಡೆ ಅವರ ಸಾಹಿತ್ಯವನ್ನು ರಕ್ತಹೀನತೆ ಎಂದು ಕರೆದಿದ್ದಾರೆ. ಅದನ್ನು "ಮರಣಶಯ್ಯೆಯಲ್ಲಿರುವ ವ್ಯಕ್ತಿ" ಗೆ ಹೋಲಿಸಿದ್ದಾರೆ. ಅವರನ್ನು "ಬರವಣಿಗೆ ಯಂತ್ರವಲ್ಲ, ಬರಹಗಾರ ಮಾಡಬೇಕು ಎಂದು ಹೀಗಳೆದಿದ್ದಾರೆ. ಸಾಹಿತ್ಯ ವಿಮರ್ಶಕ ಹೆರಾಲ್ಡ್ ಬ್ಲೂಮ್ , ಅಲೆಂಡೆ ಕೇವಲ "ನಿರ್ಧರಿತ ಅವಧಿಯನ್ನು ಪ್ರತಿಬಿಂಬಿಸುತ್ತಾರೆ ಮತ್ತು ನಂತರ ಎಲ್ಲರೂ ಅವಳನ್ನು ಮರೆತುಬಿಡುತ್ತಾರೆ" ಎಂದು ಹೇಳಿದ್ದಾರೆ. ಕಾದಂಬರಿಕಾರ ಗೊಂಜಾಲೊ ಕಾಂಟ್ರೆರಾಸ್ "ಅವಳು ಒಂದು ಗಂಭೀರವಾದ ತಪ್ಪನ್ನು ಮಾಡುತ್ತಾಳೆ, ವಾಣಿಜ್ಯ ಯಶಸ್ಸನ್ನು ಸಾಹಿತ್ಯಿಕ ಗುಣಮಟ್ಟದೊಂದಿಗೆ ಗೊಂದಲಗೊಳಿಸುತ್ತಾಳೆ" ಎಂದು ಆಪಾದಿಸಿದ್ದಾರೆ.

ಆದರೆ ಅಲೆಂಡೆಯವರು ಎಲ್ ಕ್ಲಾರಿನ್‌ಗೆ ಚಿಲಿಯಲ್ಲಿ ಯಾವಾಗಲೂ ಉತ್ತಮ ವಿಮರ್ಶೆಗಳನ್ನು ಬರೆದಿಲ್ಲ ಎಂದು ಹೇಳಿದ್ದಾರಲ್ಲದೆ ಚಿಲಿಯ ಬುದ್ಧಿಜೀವಿಗಳು ಅವಳನ್ನು "ಹೇಸುತ್ತಾರೆ" ಎಂದು ಹೇಳಿ ಈ ಮೌಲ್ಯಮಾಪನಗಳನ್ನು ಒಪ್ಪುವುದಿಲ್ಲವೆಂದು ತಿರಸ್ಕರಿಸಿದ್ದಾರೆ.

'ನೀವು ಬಹಳಷ್ಟು ಪುಸ್ತಕಗಳನ್ನು ಮಾರಾಟ ಮಾಡುವಾಗ ನೀವು ಗಂಭೀರ ಬರಹಗಾರರಲ್ಲ ಎಂದು ಭಾವಿಸುವುದು ಓದುಗರಿಗೆ ಮಾಡುವ ದೊಡ್ಡ ಅವಮಾನವಾಗಿದೆ. ಇಂತಹ ಮಾತುಗಳನ್ನು ಹೇಳಲು ಪ್ರಯತ್ನಿಸಿದಾಗ ನನಗೆ ಸ್ವಲ್ಪ ಕೋಪ ಬರುತ್ತದೆ. ಲ್ಯಾಟಿನ್ ಅಮೇರಿಕನ್ ಅಧ್ಯಯನಗಳ ಪ್ರಾಧ್ಯಾಪಕರೊಬ್ಬರು ನನ್ನ ಕೊನೆಯ ಪುಸ್ತಕದ ವಿಮರ್ಶೆಯನ್ನು ಅಮೆರಿಕನ್ ಪತ್ರಿಕೆಯಲ್ಲಿ ಬರೆದಿದ್ದಾರೆ ಮತ್ತು ನಾನು ಬಹಳಷ್ಟು ಪುಸ್ತಕಗಳನ್ನು ಮಾರಾಟ ಮಾಡಿದ್ದೇನೆ ಎಂಬ ಏಕೈಕ ಕಾರಣಕ್ಕಾಗಿ ಅವರು ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ಮಾಡಿದ್ದಾರೆ ಅದು ಅಕ್ಷಮ್ಯ.' ಎಂದು ಅಲೆಂಡೆ ವಾದಿಸುತ್ತಾರೆ.

ಆದಾಗ್ಯೂ "ಲ್ಯಾಟಿನ್ ಅಮೇರಿಕನ್ ಮತ್ತು ವಿಶ್ವ ಸಾಹಿತ್ಯದ ಮೇಲೆ ಅಲೆಂಡೆಯ ಪ್ರಭಾವವನ್ನು ಅತಿಯಾಗಿ ಅಂದಾಜು ಮಾಡಲಾಗುವುದಿಲ್ಲ" ಎಂದು ಹೇಳಲಾಗಿದೆ. ಲಾಸ್ ಏಂಜಲೀಸ್ ಟೈಮ್ಸ್ ಅಲೆಂಡೆಯವರನ್ನು "ಪ್ರತಿಭೆ" ಎಂದು ಕರೆದಿದೆ. ಅವರು "ವಿಶ್ವದ ಸೌಂದರ್ಯಕ್ಕೆ ಕೊಡುಗೆ ನೀಡಿದ" ಬರಹಗಾರರಿಗೆ ನೀಡಲಾಗುವ ಡೊರೊಥಿ ಮತ್ತು ಲಿಲಿಯನ್ ಗಿಶ್ ಪ್ರಶಸ್ತಿಯನ್ನು ಒಳಗೊಂಡಂತೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20221007_4_6

Monday, 26 September 2022

ಮಹಿಳಾ ವಿರೋಧಿ ಇಂಗ್ಲಿಷ್ ಕಾನೂನನ್ನು ವ್ಯಂಗ್ಯವಾಡಿದ ಕಾದಂಬರಿಕಾರ್ತಿ ಆನ್ನಿ ಬ್ರಾಂಟೆ


ಮೊದಲ ಸ್ತ್ರೀವಾದಿ ಕಾದಂಬರಿಕಾರ್ತಿಯರಲ್ಲಿ ಒಬ್ಬರಾದ ಅನ್ನಿ ಬ್ರಾಂಟೆ

      ಯಾರ್ಕ್‌ಷೈರ್‌ನ ಹಾರ್ಟ್ಸ್‌ಹೆಡ್‌ನಲ್ಲಿರುವ ಸೇಂಟ್ ಪೀಟರ್ಸ್ ಚರ್ಚ್‌ನ ವಿಕಾರ್ ಆಗಿದ್ದ, ಬ್ರಾಡ್‌ಫೋರ್ಡ್ ಬಳಿಯ ವುಡ್‌ಹೌಸ್ ಗ್ರೋವ್ ಸ್ಕೂಲ್‌ನಲ್ಲಿ ಕ್ಲಾಸಿಕ್ಸ್‌ನಲ್ಲಿ ಪರೀಕ್ಷಕರಾಗಿ ನೇಮಕಗೊಂಡು ನಂತರ ಚರ್ಚ್ ಆಫ್ ಇಂಗ್ಲೆಂಡ್‌ನಲ್ಲಿ ಬಡ ಐರಿಶ್ ಪಾದ್ರಿಯಾಗಿದ್ದ ಪ್ಯಾಟ್ರಿಕ್ ಬ್ರಾಂಟೆ ಮತ್ತು ಬೆಳ್ಳಿಯ ಅಕ್ಕಸಾಲಿಗನಾಗಿದ್ದು ಕಿರಾಣಿ ಮತ್ತು ಚಹಾ ವ್ಯಾಪಾರಿ ಥಾಮಸ್ ಬ್ರಾನ್‌ವೆಲ್ ಅವರ ಮಗಳಾಗಿದ್ದ ಮರಿಯಾ ಬ್ರಾನ್‌ವೆಲ್‌ರ ಆರು ಜನ ಮಕ್ಕಳಲ್ಲಿ ಕೊನೆಯವರಾಗಿ ಆನ್ನಿ ಬ್ರಾಂಟೆ ೧೭ ಜನವರಿ ೧೮೨೦ರಂದು ಬ್ರಾಡ್‌ಫೋರ್ಡ್‌ನ ಹೊರವಲಯದಲ್ಲಿ ಜನಿಸಿದರು. ಆ ಸಮಯದಲ್ಲಿ ಅವರ ತಂದೆ ಪ್ಯಾಟ್ರಿಕ್ ಅಲ್ಲಿ ಕ್ಯುರೇಟ್ ಆಗಿದ್ದರು. ೨೫ ಮಾರ್ಚ್ ೧೮೨೦ರಂದು ಆನ್ನಿಯವರಿಗೆ ಅಲ್ಲಿಯೇ ಬ್ಯಾಪ್ಟೈಜ್ (ದೀಕ್ಷಾಸ್ನಾನ) ಮಾಡಲಾಯಿತು. ಏಪ್ರಿಲ್ ೧೮೨೦ರಲ್ಲಿ ಇವರ ಕುಟುಂಬವು ಐದು ಕೋಣೆಗಳ ಹಾವರ್ತ್ ಪಾರ್ಸನೇಜ್‌ಗೆ ಸ್ಥಳಾಂತರಗೊಂಡಿತು.
    ಇವರ ಹಿರಿಯಕ್ಕ ಮಾರಿಯಾ (೧೮೧೪-೧೮೨೫) ಎರಡನೆಯ ಅಕ್ಕ ಎಲಿಜಬೆತ್ (೧೮೧೫-೧೮೨೫), ಮೂರನೆಯ ಅಕ್ಕ ಷಾರ್ಲೆಟ್ (೧೮೧೬-೧೮೫೫), ಅಣ್ಣ ಪ್ಯಾಟ್ರಿಕ್ ಬ್ರಾನ್‌ವೆಲ್ (೧೮೧೭-೧೮೪೮), ನಾಲ್ಕನೆಯ ಅಕ್ಕ ಹಾಗೂ ಆನ್ನಿಯವರೊಂದಿಗೆ ಹೆಚ್ಚಿನ ಭಾವನಾತ್ಮಕ ನಂಟನ್ನು ಹೊಂದಿದ್ದು ಅವರ ಜೊತೆ ಕವನ ಹಾಗೂ ಕಾದಂಬರಿಯ ಬರವಣಿಗೆಯನ್ನು ಹಂಚಿಕೊಂಡು ಅವಳಿಗಳೆಂದೇ ಗುರುತಿಸಿಕೊಂಡ ಎಮಿಲಿ (೧೮೧೮-೧೮೪೮) ಇವರ ಕುಟುಂಬವಾಗಿತ್ತು.
ಅನ್ನಿ ಕೇವಲ ಒಂದು ವರ್ಷದವಳಿದ್ದಾಗ ಅವರ ತಾಯಿ ಮಾರಿಯಾ ಗರ್ಭಾಶಯದ ಕ್ಯಾನ್ಸರ್‌ನಿಂದಾಗಿ ೧೫ ಸೆಪ್ಟೆಂಬರ್ ೧೮೨೧ರಂದು ನಿಧನರಾದರು. ತಂದೆ ಪ್ಯಾಟ್ರಿಕ್ ಮರುಮದುವೆಯಾಗಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಮಾರಿಯಾರವರ ಸಹೋದರಿ ಎಲಿಜಬೆತ್ ಬ್ರಾನ್‌ವೆಲ್ (೧೭೭೬-೧೮೪೨) ತನ್ನ ಅಕ್ಕನ ಮಕ್ಕಳನ್ನು ನೋಡಿಕೊಳ್ಳುವುದು ತನ್ನ ಕರ್ತವ್ಯ ಎಂಬಂತೆ ಇವರನ್ನು ನೋಡಿಕೊಂಡರು. ಹಿರಿ ಅಕ್ಕಂದಿರು ಚಿಕ್ಕಮ್ಮನೊಂದಿಗೆ ಅನ್ಯೋನ್ಯತೆ ಸಾಧಿಸದಿದ್ದರೂ ಹಸುಗೂಸಾಗಿದ್ದ ಆನ್ನಿ ಚಿಕ್ಕಮ್ಮನೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಚಿಕ್ಕಮ್ಮನಿಗೆ ಕೂಡ ಪುಟ್ಟ ಮಗುವಾಗಿದ್ದ ಆನ್ನಿ ಎಂದರೆ ಅತ್ಯಂತ ಪ್ರೀತಿಯಾಗಿತ್ತು. ಅನ್ನಿಯ ವ್ಯಕ್ತಿತ್ವ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ಅವರ ಚಿಕ್ಕಮ್ಮನ ಪ್ರಭಾವ ಹೆಚ್ಚಿದೆ.

೧೮೨೪ರ ಬೇಸಿಗೆಯಲ್ಲಿ ತಂದೆ ಅವರ ಅಕ್ಕಂದಿರಾದ ಮರಿಯಾ, ಎಲಿಜಬೆತ್, ಷಾರ್ಲೆಟ್ ಮತ್ತು ಎಮಿಲಿಯನ್ನು ವೆಸ್ಟ್ ಯಾರ್ಕ್‌ಷೈರ್‌ನ ಕ್ರಾಫ್ಟನ್‌ನಲ್ಲಿರುವ ಕ್ರಾಫ್ಟನ್ ಹಾಲ್‌ಗೆ ನಂತರ ಲಂಕಾಷೈರ್‌ನ ಕೋವನ್ ಬ್ರಿಡ್ಜ್‌ನಲ್ಲಿರುವ ಪಾದ್ರಿ ಡಾಟರ್ಸ್ ಸ್ಕೂಲ್‌ಗೆ ಕಳುಹಿಸಿದರು. ಆದರೆ ಅಲ್ಲಿ ಮಾರಿಯಾ ಮತ್ತು ಎಲಿಜಬೆತ್ ಟೈಫಾಯಿಡ್‌ನಿಂದಾಗಿ ಮರಣಹೊಂದಿದರು. ಹೀಗಾಗಿ  ಷಾರ್ಲೆಟ್ ಮತ್ತು ಎಮಿಲಿಯನ್ನು ತಕ್ಷಣ ಮನೆಗೆ ಕರೆತರಲಾಯಿತು.ಈ ಅನಿರೀಕ್ಷಿತ ಸಾವುಗಳು ಕುಟುಂವನ್ನು ತುಂಬಾ ಯಾತನೆಗೊಳಿಸಿದವು. ಮುಂದಿನ ಐದು ವರ್ಷಗಳ ಕಾಲ ಮಕ್ಕಳಿಗೆ ಮನೆಯಲ್ಲಿಯೇ ಶಿಕ್ಷಣ ಕೊಡಿಸಲಾಯಿತು. ಮಕ್ಕಳು ಪಾರ್ಸನೇಜ್‌ನ ಹೊರಗಿನ ಇತರರೊಂದಿಗೆ ಬೆರೆಯಲು ಸ್ವಲ್ಪ ಪ್ರಯತ್ನ ಮಾಡಿದರಾದರೂ ತಾವೇ ಒಬ್ಬರನ್ನೊಬ್ಬರು ತುಂಬಾ ಅವಲಂಬಿಸಿದ್ದರು. ಹಾವರ್ತ್‌ನ ಸುತ್ತಲಿನ ಮಂಕಾದ ಮೂರ್‌ಗಳು ಅವರ ಆಟದ ಮೈದಾನವಾಯಿತು.
ತಮ್ಮ ಜೀವನದ ಬಹುಭಾಗವನ್ನು ಯಾರ್ಕ್‌ಷೈರ್ ಮೂರ್ಸ್‌ನಲ್ಲಿರುವ ಹಾವರ್ತ್‌ನ ಪ್ಯಾರಿಷ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಇವರು ೧೮೩೬ ಮತ್ತು ೧೮೩೭ರ ನಡುವೆ ಮಿರ್‌ಫೀಲ್ಡ್‌ನಲ್ಲಿದ್ದ ಬೋರ್ಡಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು.

ಚಿಕ್ಕವರಿರುವಾಗ ಅನ್ನಿಯವರಿಗೆ ಸಂಗೀತ ಮತ್ತು ರೇಖಾಚಿತ್ರಗಳನ್ನು ಬಿಡಿಸುವುದು ಇಷ್ಟವಾಗಿತ್ತು. ಅವರ ಚಿಕ್ಕಮ್ಮ ಹುಡುಗಿಯರಿಗೆ ಮನೆಯನ್ನು ಹೇಗೆ ನಡೆಸಬೇಕೆಂದು ಕಲಿಸಲು ಪ್ರಯತ್ನಿಸಿದರು, ಆದರೆ ಆ ಹುಡುಗಿಯರು ಸಾಹಿತ್ಯದ ಕಡೆಗೆ ಹೆಚ್ಚು ಒಲವು ತೋರಿದರು. ತಮ್ಮ ತಂದೆಯ ಸುಸಜ್ಜಿತ ಗ್ರಂಥಾಲಯದಿಂದ ಬೈಬಲ್, ಹೋಮರ್, ವರ್ಜಿಲ್, ಶೇಕ್ಸ್‌ಪಿಯರ್, ಮಿಲ್ಟನ್, ಬೈರಾನ್, ಸ್ಕಾಟ್ ಮುಂತಾದವರ ಕೃತಿಗಳನ್ನು ಓದಿದರು. ಈ ಓದು ಅವರ ಕಲ್ಪನೆಗಳನ್ನು ಹೆಚ್ಚಿಸಿತು. ಅದೇ ಸಮಯದಲ್ಲಿ ಅವರ ತಂದೆ ಸಹೋದರ ಬ್ರಾನ್‌ವೆಲ್‌ಗೆ ಜೂನ್ ೧೮೨೬ರಲ್ಲಿ ಆಟಿಕೆ ಸೈನಿಕರ ಗೊಂಬೆಗಳನು ಉಡುಗೊರೆಯಾಗಿ ನೀಡಿದರು. ಈ ಗೊಂಬೆಗಳ ಬಗೆಗಿನ ಕಲ್ಪನೆಗಳಿಂದ ಸೃಜನಶೀಲತೆ ಹೆಚ್ಚಾಯಿತು. ಅವರು ಸೈನಿಕರಿಗೆ ಹೆಸರುಗಳನ್ನು ನೀಡಿದರು. ಇದು ಅವರ ಕಾಲ್ಪನಿಕ ಪ್ರಪಂಚದ ಸೃಷ್ಟಿಗೆ ಕಾರಣವಾಯಿತು.  
೧೮೩೧ ರ ಸುಮಾರಿಗೆ ಅನ್ನಿಯವರಿಗೆ ಹನ್ನೊಂದು ವರ್ಷವಾಗಿದ್ದಾಗ, ಅವರು ಮತ್ತು ಎಮಿಲಿ ಇಬ್ಬರೂ ಷಾರ್ಲೆಟ್ ಮತ್ತು ಬ್ರಾನ್‌ವೆಲ್‌ನಿಂದ ಬೇರ್ಪಟ್ಟು ತಮ್ಮದೇ ಆದ ಕಾಲ್ಪನಿಕ ಪ್ರಪಂಚದ 'ಗೊಂಡಾಲ್" ಅನ್ನು ರಚಿಸಿದರು. ಅದೇ ಸಮಯದಲ್ಲಿ ಷಾರ್ಲೆಟ್ ರೋ ಹೆಡ್ ಶಾಲೆಗೆ ಸೇರಿದ್ದರಿಂದ ಆನ್ನಿ ಎಮಿಲಿಯವರ ಜೊತೆ ಹೆಚ್ಚು ಆಪ್ತವಾದರು. ನಂತರ ತಮ್ಮ ಹದಿನೈದನೆ ವಯಸ್ಸಿಗೆ ರೋ ಹೆಡ್ ಸ್ಕೂಲ್‌ನಲ್ಲಿ ಅಕ್ಕ ಷಾರ್ಲೆಟ್‌ರವರ ವಿದ್ಯಾರ್ಥಿಯಾಗಿ ಸೇರಿಕೊಂಡರಾದರೂ ಎಮಿಲಿಯವರೊಂದಿಗೆ ಇರುವ ಆತ್ಮೀಯತೆ ಷಾರ್ಲೆಟ್‌ರೊಂದಿಗೆ ಬರಲಿಲ್ಲ. ಅಲ್ಲದೆ ಅನಾರೋಗ್ಯದ ನಿಮಿತ್ತ ಬಹುಬೇಗ ಮನೆಗೆ ವಾಪಸ್ಸಾಗಬೇಕಾಯಿತು.

ಶಾಲೆಯನ್ನು ಬಿಟ್ಟ ನಂತರ ಅನೇಕ ಕಡೆ ಕೆಲಸ ಮಾಡಿದರು ಕೆಲವು ಮನೆಗಳಲ್ಲಿ ಮಕ್ಕಳ ಮೇಲ್ವಿಚಾರಕಿಯಾಗಿ ಕೆಲಸ ಮಾಡಬೇಕಾಯಿತು. ಅವರ ತಂದೆಗೆ ಯಾವುದೇ ಖಾಸಗಿ ಆದಾಯ ಇರಲಿಲ್ಲ. ತಂದೆಯ ಮರಣದ ನಂತರ ಏಪ್ರಿಲ್ ೧೮೩೯ರಲ್ಲಿ ಮಿರ್‌ಫೀಲ್ಡ್ ಬಳಿಯ ಬ್ಲೇಕ್‌ಹಾಲ್‌ನಲ್ಲಿ ಇಂಗ್‌ಹ್ಯಾಮ್ ಕುಟುಂಬಕ್ಕೆ ಮೇಲ್ವಿಚಾರಕರಾಗಿ ಅನ್ನಿ ಕೆಲಸ ಪ್ರಾರಂಭಿಸಿದರು. ಅವರ ಉಸ್ತುವಾರಿಯಲ್ಲಿರುವ ಮಕ್ಕಳು ಹಾಳಾಗಿದ್ದರು ಮತ್ತು ಅವಿಧೇಯರಾಗಿದ್ದರು. ಅನ್ನಿಯವರಿಗೆ ಮಕ್ಕಳನ್ನು ನಿಯಂತ್ರಿಸಲು ಬಹಳ ಕಷ್ಟವಾಯಿತು ಮತ್ತು ಅವರನ್ನು ಶಿಕ್ಷಿಸಲು ಆಕೆಗೆ ಅವಕಾಶವಿರಲಿಲ್ಲ, ಮಕ್ಕಳ ವರ್ತನೆಯ ಬಗ್ಗೆ ದೂರು ನೀಡಿದಾಗಲೂ ಅವರಿಗೆ ಯಾವುದೇ ಬೆಂಬಲ ಸಿಗಲಿಲ್ಲ ಮತ್ತು ಇವರನ್ನೇ ಅಸಮರ್ಥ ಎಂದು ಟೀಕಿಸಲಾಯಿತು. ಇಂಗ್‌ಹ್ಯಾಮ್‌ಗಳು ತಮ್ಮ ಮಕ್ಕಳ ಪ್ರಗತಿಯಿಂದ ಅತೃಪ್ತರಾಗಿದ್ದರು ಮತ್ತು ಅನ್ನಿಯನ್ನು ವಜಾಗೊಳಿಸಿದರು. ೧೮೩೯ರಲ್ಲಿ ಕ್ರಿಸ್ಮಸ್ ಸಮಯದಲ್ಲಿ ಮನೆಗೆ ಮರಳಿದ ಆನ್ನಿ ತಮ್ಮ ಗೊಂಡಾಲ್  ಬರವಣಿಗೆಯನ್ನು ಗುಟ್ಟಾಗಿ ಮುಂದುವರೆಸಿದರು. ಬ್ಲೇಕ್ ಹಾಲ್‌ನಲ್ಲಿ ಅನ್ನಿಯವರು ತುಂಬಾ ಕಷ್ಟದಲ್ಲಿ ಸಮಯ ಕಳೆದದ್ದನ್ನು ತಮ್ಮ ಕಾದಂಬರಿ ಆಗ್ನೆಸ್ ಗ್ರೇನಲ್ಲಿ ವಿವರವಾಗಿ ಚಿತ್ರಿಸಿದ್ದಾರೆ.


ಅನ್ನಿ ಹಾವರ್ತ್‌ಗೆ ಹಿಂದಿರುಗಿದಾಗ ತಮ್ಮ ತಂದೆಯ ಹೊಸ ಕ್ಯುರೇಟ್ ವಿಲಿಯಂ ವೇಟ್‌ಮ್ಯಾನ್ (೧೮೧೪-೧೮೪೨) ರನ್ನು ಭೇಟಿಯಾದರು. ೨೫ ವರ್ಷದ ವಿಲಿಯಂ ವೇಟ್‌ಮ್ಯಾನ್ ಡರ್ಹಾಮ್ ವಿಶ್ವವಿದ್ಯಾಲಯದಿಂದ ದೇವತಾಶಾಸ್ತ್ರದಲ್ಲಿ ಎರಡು ವರ್ಷ ಓದಿ ಬೋಧನೆಗೆ ಪರವಾನಗಿಯನ್ನು ಪಡೆದಿದ್ದರು. ಅವರೊಂದಿಗೆ ಅನ್ನಿಯ ಪರಿಚಯವು ಹಲವಾರು ಕವನಗಳನ್ನು ಬರೆಯುವುದಕ್ಕೆ ಸ್ಪುರ್ತಿಯಾಯಿತು. ಆದರೆ ಅವರಿಬ್ಬರ ನಡುವೆ ಪ್ರೇಮವಿತ್ತೆಂಬುದು ಎಲ್ಲಿಯೂ ನಿಖರವಾಗಿ ದಾಖಲಾಗಿಲ್ಲವಾದರೂ  
ಆಗ್ನೆಸ್‌ನಲ್ಲಿ ಗ್ರೇ ಕಥಾ ನಾಯಕಿ ಆಗ್ನೆಸ್‌ಗೆ ಕ್ಯುರೇಟ್‌ನಲ್ಲಿರುವ ಆಸಕ್ತಿಯನ್ನು ಗಮನಿಸಿ ವಿಮರ್ಷಕರು ಅದು ಪ್ರೇಮವಿರಬಹುದು ಎಂದು ಊಹಿಸಿದ್ದಾರೆ. ಆಗ್ನೆಸ್ ಗ್ರೇನಲ್ಲಿ ಬರುವ ಕ್ಯುರೆಟ್ ಕೂಡ ವೆಟ್‌ಮ್ಯಾನ್‌ನಂತೆ ಹಾಸ್ಯ ಪ್ರವೃತ್ತಿಯ, ದಯೆಯುಳ್ಳ ಮನುಷ್ಯನಾಗಿದ್ದುದು ಇದನ್ನು ಪುಷ್ಠಿಕರಿಸುತ್ತದೆಯಾದರೂ ಅಧಿಕೃತ ದಾಖಲೆಗಳಿಲ್ಲ. ಆದರೂ  ಅದೇ ವರ್ಷ ವೇಟ್‌ಮ್ಯಾನ್ ಕಾಲರಾದಿಂದ ನಿಧನರಾದಾಗ ಅನ್ನಿ ತಮ್ಮ ಕವನದಲ್ಲಿ ಅವರ ಸಾವಿಗಾಗಿ ದುಃಖವನ್ನು ವ್ಯಕ್ತಪಡಿಸಿ 'ಪ್ರಿಯ, ನಾನು ನಿನಗಾಗಿ ದುಃಖಿಸುವುದಿಲ್ಲ.' ಎಂದು ಬರೆದಿದ್ದಾರೆ.
೧೮೪೦ರಿಂದ ೧೮೪೫ರವರೆಗೆ ಅನ್ನಿ ಯಾರ್ಕ್ ಬಳಿಯ ಆರಾಮದಾಯಕವಾದ ಹಳ್ಳಿಗಾಡಿನ ಮನೆಯಾದ ಥಾರ್ಪ್‌ಗ್ರೀನ್ ಹಾಲ್‌ನಲ್ಲಿ ಕೆಲಸ ಮಾಡಿದರು. ಇಲ್ಲಿ ಅವರು ರೆವರೆಂಡ್ ಎಡ್ಮಂಡ್ ರಾಬಿನ್ಸನ್ ಮತ್ತು ಅವರ ಪತ್ನಿ ಲಿಡಿಯಾ ಹಾಗೂ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆಗ್ನೆಸ್ ಗ್ರೇನಲ್ಲಿ ಈ ಮನೆಯು ಹಾರ್ಟನ್ ಲಾಡ್ಜ್ ಆಗಿ ಕಾಣಿಸಿಕೊಂಡಿದೆ.
೧೮೪೨ ರಲ್ಲಿ ಥಾರ್ಪ್‌ಗ್ರೀನ್‌ನಲ್ಲಿರುವ ಲಾಂಗ್ ಪ್ಲಾಂಟೇಶನ್‌ನಲ್ಲಿ ಅನ್ನಿ ತಮ್ಮ ಮೂರು ಪದ್ಯಗಳ ಲೈನ್ಸ್ ಕಂಪೋಸ್ಡ್ ಇನ್ ಎ ವುಡ್ ಆನ್ ಎ ವಿಂಡಿ ಡೇ ಅನ್ನು ಬರೆದರು. ಇದನ್ನು ೧೮೪೬ ರಲ್ಲಿ ಆಕ್ಟನ್ ಬೆಲ್ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು.

೧೮೪೫ರಲ್ಲಿ ಎಲ್ಲರೂ ಮನೆಯಲ್ಲಿರುವಾಗ ಷಾರ್ಲೆಟ್ ಅನ್ನಿಯವರಿಗೆ ಮಾತ್ರ ತೋರಿಸಿದ್ದ ಎಮಿಲಿಯವರ 'ಗೊಂಡಾಲ್' ಕವಿತೆಗಳನ್ನು ನೋಡಿದರು. ಅವುಗಳನ್ನು ಪ್ರಕಟಿಸಬೇಕು ಎಂದು ಶಾರ್ಲೆಟ್ ಹೇಳಿದರು. ಅನ್ನಿ ತಾವು ಬರೆದಿದ್ದ ಗೊಂಡಾಲ್  ಕವಿತೆಗಳನ್ನು ಷಾರ್ಲೆಟ್‌ಗೆ ತೋರಿಸಿದರು. ಷಾರ್ಲೆಟ್ "ಈ ಪದ್ಯಗಳು ಸಹ ತಮ್ಮದೇ ಆದ ಒಂದು ಸಿಹಿಯಾದ ಪ್ರಾಮಾಣಿಕವಾದ ಪಾಥೋಸ್ ಅನ್ನು ಹೊಂದಿವೆ.' ಎಂದು ಭಾವಿಸಿದರು. ಅಂತಿಮವಾಗಿ ಮೂವರೂ ಸಹೋದರಿಯರು ಒಂದು ಒಪ್ಪಂದಕ್ಕೆ ಬಂದರು. ತಾವು ಏನು ಮಾಡುತ್ತಿದ್ದೇವೆಂದು ಯಾರಿಗೂ ಹೇಳಲಿಲ್ಲ. ಚಿಕ್ಕಮ್ಮ ಎಲಿಜಬೆತ್ ಬ್ರಾನ್‌ವೆಲ್ ಕೂಡಿಟ್ಟಿದ್ದ ಹಣದಿಂದ ಕವನಗಳ ಸಂಗ್ರಹವನ್ನು ಪ್ರಕಟಿಸಲು ಪಾವತಿಸಿದರು, ಅನ್ನಿ ಹಾಗೂ ಎಮಿಲಿಯವರ ತಲಾ ಇಪ್ಪತ್ತೊಂದು  ಕವನಗಳು ಹಾಗೂ ಮತ್ತು ಷಾರ್ಲೆಟ್‌ರವರ ಹತ್ತೊಂಬತ್ತು ಕವಿತೆಗಳನ್ನು ಸೇರಿಸಿ ಕ್ಯೂರರ್ ಬೆಲ್ಲಿ, ಎಲ್ಲಿಸ್ ಬೆಲ್ಲಿ ಹಾಗೂ ಆಕ್ಷನ್ ಬೆಲ್ಲಿ ಎಂದು ಪುರುಷರ ಹೆಸರಿನಲ್ಲಿ ಪ್ರಕಟಿಸಿದರು.

ಜುಲೈ ೧೮೪೬ರ ಹೊತ್ತಿಗೆ ಮೂವರೂ ಸಹೋದರಿಯರ ಮೊದಲ ಕಾದಂಬರಿಯ ಹಸ್ತಪ್ರತಿಗಳನ್ನು ಒಳಗೊಂಡಿರುವ ಪ್ಯಾಕೇಜ್‌ಗಳು ಲಂಡನ್ ಪ್ರಕಾಶಕರನ್ನೆಲ್ಲ ಸುತ್ತು ಹಾಕುತ್ತಿತ್ತು. ಷಾರ್ಲೆಟ್ ಬರೆದ ಪ್ರೊಫೆಸರ್, ಎಮಿಲಿ ಬರೆದ ವುಥರಿಂಗ್ ಹೈಟ್ಸ್ ಮತ್ತು ಅನ್ನಿ ಬರೆದ ಆಗ್ನೆಸ್ ಗ್ರೇ ಕಾದಂಬರಿಗಳು ಕೆಲವು ಪ್ರಕಾಶಕರಿಂದ  ನಿರಾಕರಣೆಗೆ ಒಳಗಾದ ನಂತರ ವೂಥರಿಂಗ್ ಹೈಟ್ಸ್ ಮತ್ತು ಆಗ್ನೆಸ್ ಗ್ರೇ ಗಳನ್ನು ಪ್ರಕಾಶಕರಾದ ಥಾಮಸ್ ಕೌಟ್ಲೆ ನ್ಯೂಬಿ ಪ್ರಕಟಿಸಲು ಒಪ್ಪಿಕೊಂಡರು. ಷಾರ್ಲೆಟ್ ಬರೆದ ಫ್ರೊಫೆಸರ್‌ನ್ನು ತಿರಸ್ಕರಿಸಲಾಯಿತು. ಹೀಗಾಗಿ ಷಾರ್ಲೆಟ್ ತಮ್ಮ ಎರಡನೇ ಕಾದಂಬರಿಯಾದ ಜೇನ್ ಐರ್ ಅನ್ನು ಬರೆದು ಪೂರ್ಣಗೊಳಿಸುವ ಮುಂಚೆಯೇ  ಆ ಕಾದಂಬರಿಯನ್ನು  ಸ್ಮಿತ್, ಎಲ್ಡರ್  ಒಪ್ಪಿಕೊಂಡರು. ಇದು ಸಹೋದರಿಯರ ಕಾದಂಬರಿಗಳಲ್ಲಿ ಮೊದಲ ಪ್ರಕಟಿತವಾದ ಕಾದಂಬರಿ. ಇದು ಅದ್ಭುತ ಯಶಸ್ಸನ್ನು ಕಂಡಿತು. ಈತನ್ಮಧ್ಯೆ, ಅನ್ನಿ ಮತ್ತು ಎಮಿಲಿಯವರ ಕಾದಂಬರಿಗಳನ್ನು ಪ್ರಕಟಿಸಲು ಪ್ರಕಾಶನ ವೆಚ್ಚವಾದ ಐವತ್ತು ಪೌಂಡ್‌ಗಳನ್ನು ಪಾವತಿಸಬೇಕೆಂಬ ನಿರ್ಬಂಧವಿತ್ತು. ಅವರ ಪ್ರಕಾಶಕರು ಜೇನ್ ಐರ್ ಅವರ ಯಶಸ್ಸಿನಿಂದ ಪ್ರೇರಿತರಾಗಿ ಮೊದಲು ವೂಥರಿಂಗ್ ಹೈಟ್ಸ್ ಅನ್ನು ಪ್ರಕಟಿಸಿದರು. ನಂತರ ಆಗ್ನೆಸ್ ಗ್ರೇ ಡಿಸೆಂಬರ್ ೧೮೪೭ ಪ್ರಕಟಗೊಂಡು ಒಟ್ಟಿಗೆ ಮಾರಾಟವಾಯಿತು. ಆದರೆ ಆಗ್ನೆಸ್ ಗ್ರೇಗಿಂತ ಎಮಿಲಿಯವರ ವುದರಿಂಗ್ ಹೈಟ್ಸ್ ಹೆಚ್ಚು ನಾಟಕೀಯತೆಯಿಂದ ಕೂಡಿರುವುದರಿಂದ ಬಹಳ ಬೇಗ ಜನಪ್ರಿಯಗೊಂಡಿತು.

ಅವರ ಎರಡನೇ ಕಾದಂಬರಿ, 'ದಿ ಟೆನೆಂಟ್ ಆಫ್ ವೈಲ್ಡ್‌ಫೆಲ್ ಹಾಲ್' ೧೮೪೮ರಲ್ಲಿ ಪ್ರಕಟವಾಯಿತು. 'ದಿ ಟೆನಂಟ್ ಆಫ್ ವೈಲ್ಡ್‌ಫೆಲ್ ಹಾಲ್' ಮೊದಲ ಸ್ತ್ರೀವಾದಿ ಕಾದಂಬರಿಗಳಲ್ಲಿ ಒಂದಾಗಿದೆ ಎಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ.
ಕಾದಂಬರಿಯು ಸಾಮಾಜಿಕ ಮತ್ತು ಕಾನೂನು ರಚನೆಗಳನ್ನು ಬಹಳ ತೀವ್ರವಾಗಿ ಪ್ರಶ್ನಿಸಿದೆ.
ಈ ಕಾದಂಬರಿಯ ನಾಯಕಿ ಹೆಲೆನ್ ತನ್ನ ಮಗನನ್ನು ಗಂಡನ ಪ್ರಭಾವದಿಂದ ರಕ್ಷಿಸಲು ಅವನನ್ನು ತೊರೆದು ಜೀವಿಸಲು ನಿರ್ಧರಿಸುತ್ತಾಳೆ.  ತನ್ನ ಮತ್ತು ತನ್ನ ಮಗನ ಬದುಕಿಗಾಗಿ ಚಿತ್ರ ಬಿಡಿಸಿ ಮಾರಾಟ ಮಾಡುವ ಮೂಲಕ ಹಣಗಳಿಸುತ್ತ,  ಸಾಮಾಜಿಕ ಸಂಪ್ರದಾಯಗಳನ್ನು ವಿವಾಹಿತ ಮಹಿಳೆ ತನ್ನ ಪತಿಯಿಂದ ಸ್ವತಂತ್ರವಾಗಿ ಯಾವುದೇ ಕಾನೂನು ಅಸ್ತಿತ್ವವನ್ನು ಹೊಂದಿಲ್ಲ ಮತ್ತು ಆಸ್ತಿಯನ್ನು ಹೊಂದಲು ಅಥವಾ ವಿಚ್ಛೇದನಕ್ಕಾಗಿ ಮೊಕದ್ದಮೆ ಹೂಡಲು ಅಥವಾ ತನ್ನ ಮಕ್ಕಳ ಪಾಲನೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ಇಂಗ್ಲೀಷ್ ಕಾನೂನನ್ನು ಉಲ್ಲಂಘಿಸುವ ವಿಷಯ ಇದರೊಳಗಿದೆ. (ನಂತರ ವಿವಾಹಿತ ಮಹಿಳೆಯರ ಆಸ್ತಿ ಕಾಯಿದೆಯನ್ನು ೧೮೭೦ರಲ್ಲಿ ಅಂಗೀಕರಿಸಲಾಯಿತು.) ಹೆಲೆನ್‌ಳ ಪತಿ ಅವಳನ್ನು ಮರಳಿ ಪಡೆಯುವ ಮತ್ತು ಮಗನನ್ನು ಅಪಹರಣ ಮಾಡಿದ ಆರೋಪ ಹೊರಿಸುವ ಹಕ್ಕನ್ನು ಹೊಂದಿದ್ದನು. ಅವಳು ಗಳಿಸುವ ಆದಾಯವು ಕಾನೂನುಬದ್ಧವಾಗಿ ಅವನದ್ದೇ ಆದ ಕಾರಣ ತನ್ನ ಸ್ವಂತ ಆದಾಯದ ಮೇಲೆ ಬದುಕುವ ಮೂಲಕ ಅವಳು ತನ್ನ ಗಂಡನ ಆಸ್ತಿಯನ್ನು ಕದಿಯುತ್ತಿದ್ದಳೆಂಬ ಆರೋಪವನ್ನು ಅವಳ ಮೇಲೆ ಹೊರೆಸಲಾಗಿತ್ತು.


ಇಂತಹ ವಿಷಯವನ್ನಿಟ್ಟುಕೊಂಡು ಬರೆದವರು ಮಹಿಳೆಯಾದ್ದರಿಂದ ಅದು ಇಂಗ್ಲೆಂಡಿನಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿತು. ಲೇಖಕರು ಮಹಿಳೆ ಅಥವಾ ಪುರುಷ ಎನ್ನುವುದರ ಬದಲು ಅವರ ಬರವಣಿಗೆಯ ಗ್ರಹಿಕೆಯ ಸೂಕ್ತತೆಯ ಬಗ್ಗೆ  ವಿಮರ್ಶಿಸುವುದು ಒಳ್ಳೆಯದು ಎಂದು ಅನ್ನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರಲ್ಲದೆ ಒಂದು ಪುಸ್ತಕವು ಒಳ್ಳೆಯದಾಗಿದ್ದರೆ, ಲೇಖಕರ ಲಿಂಗವು ಯಾವುದೇ ಆಗಿರಬಹುದು ಎಂದು ಒತ್ತಿ ಹೇಳಿದರು. ಕಾದಂಬರಿಗಳನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಓದುವ ಅಥವಾ ಬರೆಯುವ ಅವಕಾಶವಿರಬೇಕು ಎಂದು ಪ್ರತಿಪಾದಿಸಿದರು. ಒಬ್ಬ ಮಹಿಳೆಗೆ ಸಾಮಾಜಿಕವಾಗಿ ಅವಮಾನಕರ ಎನ್ನಿಸಿಕೊಂಡ ಯಾವುದಾದರೂ ವಿಷಯವನ್ನು ಬರೆಯಲು ಪುರುಷನ ಅನುಮತಿ ಏಕೆಬೇಕು ಅಥವಾ ಮಹಿಳೆಯನ್ನು ಬರೆಯುವುದಕ್ಕಾಗಿ ಏಕೆ ಖಂಡಿಸಬೇಕು ಎಂಬುದನ್ನು ಗ್ರಹಿಸಲು ನಾನು ಸೋತಿದ್ದೇನೆ. ಮನುಷ್ಯನಿಗೆ ಸರಿಯಾದ ಮತ್ತು ಆಗುವ ಯಾವುದಾದರೂ ಕೆಲಸ ಮಾಡಲು ಇನ್ನೊಬ್ಬರ ಅನುಮತಿ ಪಡೆಯುವ ಅವಶ್ಯಕತೆಯಿಲ್ಲ ಎನ್ನುವುದು ಅವರ ವಾದವಾಗಿತ್ತು.


 ಆನ್ನಿ ಸಹೋದರ ವಿಲಿಯಂ ಬ್ರಾನ್‌ವೆಲ್‌ರವರ ನಿರಂತರ ಕುಡಿತವು ಅವರ ಆರೋಗ್ಯವನ್ನು ಹದಗೆಡಿಸಿತು. ೨೪ಸೆಪ್ಟೆಂಬರ್ ೧೮೪೮ರಂದು ಕುಡಿತದಿಂದಾಗಿ ಅವರಿಗಿದ್ದ ಕ್ಷಯರೋಗಕ್ಕೆ ಔಷಧಿ ನಾಟದೆ ತಮ್ಮ ಮೂವತ್ತೊಂದನೆಯ ವಯಸ್ಸಿನಲ್ಲಿ ನಿಧನರಾದರು. ಅವರ ಹಠಾತ್ ಮರಣವು ಕುಟುಂಬವನ್ನು ಆಘಾತಗೊಳಿಸಿತು.
೧೮೪೮ ರ ಚಳಿಗಾಲದಲ್ಲಿ ಇಡೀ ಕುಟುಂಬವು ಕೆಮ್ಮು ಮತ್ತು ಶೀತಗಳಿಂದ ಬಳಲುತ್ತಿತ್ತು. ಈ ಸಂದರ್ಬದಲ್ಲಿ ಎಮಿಲಿಯವರು ತುಂಬಾ ಅನಾರೋಗ್ಯಕ್ಕೆ ಒಳಗಾದರು. ಎರಡು ತಿಂಗಳ ಕಾಲ ಹದಗೆಟ್ಟ ಆರೋಗ್ಯದಿಂದ ನರಳಿದ ಎಮಿಲಿ ಡಿಸೆಂಬರ್ ೧೯ರ ಬೆಳಿಗ್ಗೆ ತನಗೆ ವೈದ್ಯಕೀಯ ಸಹಾಯವನ್ನು ಬೇಡವೆಂದು ಹೇಳಿ ತಿರಸ್ಕರಿಸಿದರು. ತುಂಬಾ ದುರ್ಬಲಳಾಗಿದ್ದ ಅವರು ೩೦ನೇ ವಯಸ್ಸಿನಲ್ಲಿ ನಿಧನರಾದರು.
ಎಮಿಲಿಯ ಮರಣವು ಅನ್ನಿಯವರನ್ನು ಆಳವಾಗಿ ಪ್ರಭಾವಿಸಿತು. ಈ ದುಃಖವು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳುಮಾಡಿತು. ಅದೇ ವರ್ಷ ಕ್ರಿಸ್ಮಸ್ ಸಮಯದಲ್ಲಿ ಅನ್ನಿಯವರಿಗೆ ಇನ್ಫ್ಲುಯೆನ್ಸ್ ಕಾಣಿಸಿಕೊಂಡು ರೋಗ ಲಕ್ಷಣಗಳು ತೀವ್ರಗೊಂಡವು. ವೈದ್ಯರು ಜನವರಿಯ ಸಮಯದಲ್ಲಿ ಚೇತರಿಸಿಕೊಳ್ಳುತ್ತಿರುವ ಬಗ್ಗೆ  ಸ್ವಲ್ಪ ಭರವಸೆ ನೀಡಿದರು. ಆದಾಗ್ಯೂ, ಎಲೆನ್ ನುಸ್ಸಿಗೆ ಬರೆದ ಪತ್ರದಲ್ಲಿ ತಮ್ಮ ಹತಾಶೆ ಹಾಗೂ ಮಹತ್ವಾಕಾಂಕ್ಷೆಗಳನ್ನು ವ್ಯಕ್ತಪಡಿಸಿದ್ದನ್ನು ಕಾಣಬಹುದು.

ನನಗೆ ಸಾವಿನ ಭಯವಿಲ್ಲ: ಇದು ಅನಿವಾರ್ಯವೆಂದು ನಾನು ಭಾವಿಸಿದರೆ, ನಾನು ಸದ್ದಿಲ್ಲದೆ ನಿರೀಕ್ಷೆಗೆ ರಾಜೀನಾಮೆ ನೀಡಬಹುದೆಂದು ನಾನು ಭಾವಿಸುತ್ತೇನೆ. ಆದರೆ ನಾನು ಏನಾದರೂ ಒಳ್ಳೆಯದನ್ನು ಮಾಡಲು ಹಂಬಲಿಸುವುದರಿಂದ ದೇವರನ್ನು ಮೆಚ್ಚಿಸಬೇಕೆಂದು ನಾನು ಬಯಸುತ್ತೇನೆ. ನಾನು ಜಗತ್ತನ್ನು ಬಿಡುವ ಮೊದಲು ಭವಿಷ್ಯದ ಅಭ್ಯಾಸಕ್ಕಾಗಿ ನನ್ನ ತಲೆಯಲ್ಲಿ ಅನೇಕ ಯೋಜನೆಗಳಿವೆ. ಆದರೆ ಇನ್ನೂ ಅವೆಲ್ಲವೂ ಏನೂ ಆಗದಂತೆ ನಾನು ಸಾಯಲು ಇಷ್ಟಪಡುವುದಿಲ್ಲ. ಆದರೆ ದೇವರ ಚಿತ್ತ ನೆರವೇರುತ್ತದೆ. ಎಂದು ಬರೆದಿದ್ದಾರೆ.
ಅನ್ನಿಯವರ ಆರೋಗ್ಯ ಫೆಬ್ರವರಿಯಲ್ಲಿ ಸ್ವಲ್ಪ ಉತ್ತಮವಾಗಿದ್ದರಿಂದ ಸ್ಥಳ ಬದಲಾವಣೆ ಮತ್ತು ತಾಜಾ ಸಮುದ್ರದ ಗಾಳಿಯು ತಮಗೆ ಪ್ರಯೋಜನಕಾರಿಯಾಗಬಹುದೇ ಎಂದು ನೋಡಲು ಸ್ಕಾರ್ಬರೋಗೆ ಭೇಟಿ ನೀಡಲು ನಿರ್ಧರಿಸಿದರು. ಆರಂಭದಲ್ಲಿ ಷಾರ್ಲೆಟ್ ಈ ಪ್ರಯಾಣ ಆನ್ನಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದೆಂದು ವಿರೋಧಿಸಿದರು. ಆದರೆ ವೈದ್ಯರ ಅನುಮೋದನೆ ಮತ್ತು ಅನ್ನಿಯ ಭರವಸೆಯ ನಂತರ ಅದು ತನ್ನ ಕೊನೆಯ ಭರವಸೆ ಎಂದು ತನ್ನ ಮನಸ್ಸನ್ನು ಬದಲಾಯಿಸಿದರು.

೨೪ ಮೇ ೧೮೪೯ರಂದು ಅನ್ನಿ ಹಾಗೂ ಷಾರ್ಲೆಟ್ ಇಬ್ಬರೂ ಮತ್ತು ಎಲ್ಲೆನ್ ನಸ್ಸಿಯೊಂದಿಗೆ ಸ್ಕಾರ್ಬರೋಗೆ ಹೊರಟರು . ಅವರು ಮಾರ್ಗದಲ್ಲಿ ಯಾರ್ಕ್‌ನಲ್ಲಿ ಹಗಲು-ರಾತ್ರಿ ಕಳೆದರು. ಇಲ್ಲಿ ಅವರು ಅನ್ನಿಯನ್ನು ಗಾಲಿಕುರ್ಚಿಯಲ್ಲಿ ಓಡಾಡಿಸಬೇಕಾಯಿತು. ಆದರೂ ಆನ್ನಿಯವರ ಇಚ್ಛೆಯ ಮೇರೆಗೆ ಶಾಪಿಂಗ್ ಮಾಡಿ ನಂತರ ಯಾರ್ಕ್ ಮಿನ್‌ಸ್ಟರ್‌ಗೆ ಭೇಟಿ ನೀಡಿದರು ಸಮಯದಲ್ಲಿ ಸ್ವತಃ ಅನ್ನಿಯವರಿಗೆ ತಮಗೆ ಸ್ವಲ್ಪ ಶಕ್ತಿ ಉಳಿದಿದೆ ಎಂಬುದು ಸ್ಪಷ್ಟವಾಯಿತು. ಹೀಗಾಗಿ ಭಾನುವಾರ ಮೇ ೨೭ರಂದು ಅನ್ನಿ ಷಾರ್ಲೆಟ್‌ಗೆ ಸ್ಕಾರ್‌ಬರೋದಲ್ಲಿ ಉಳಿಯುವ ಬದಲು ಮನೆಗೆ ಹಿಂದಿರುಗುವುದು ಮತ್ತು ಅಲ್ಲಿಯೇ ಸಾಯುವುದು ಸುಲಭವೇ ಎಂದು ಕೇಳಿದರು. ಮರುದಿನವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು ಸಾವು ಹತ್ತಿರವಾಗಿದೆ ಎಂದು ಹೇಳಿದರು. ಅನ್ನಿ ಆತಂಕ ಪಡದೆ ಈ ವಿಷಯವನ್ನು  ಸ್ವೀಕರಿಸಿದರು. ಎಲ್ಲೆನ್ ಮತ್ತು ಷಾರ್ಲೆಟ್‌ಗೆ ತಮ್ಮ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸಿದರು. ಮತ್ತು ಷಾರ್ಲೆಟ್‌ಗೆ "ಧೈರ್ಯದಿಂದಿರಿ" ಎಂದು ಪಿಸುಗುಟ್ಟಿದರು. ೨೮ ಮೇ ೧೮೪೯ರಂದು ಸೋಮವಾರ ಮಧ್ಯಾಹ್ನ ಎರಡು ಗಂಟೆಗೆ ೨೯ನೇ ವಯಸ್ಸಿನಲ್ಲಿ ನಿಧನರಾದರು.


        ಬಹುಶಃ ಅನ್ನಿಯವರ ಮರಣದ ನಂತರ ಅವರ ಸಹೋದರಿ ಷಾರ್ಲೊಟ್ ತಾವು ಮೂವರೂ ಬರೆದ ಸಂಕಲನದ ಮೊದಲ ಆವೃತ್ತಿಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಆಗ್ನೆಸ್ ಗ್ರೇಯನ್ನು ಪುನಃ ಸಂಪಾದಿಸಿದರು. ವೈಲ್ಡ್‌ಫೆಲ್ ಹಾಲ್ ಕಾದಂಬರಿಯನ್ನು ಸಂರಕ್ಷಿಸುವುದು ಅಪೇಕ್ಷಣೀಯವಾಗಿ ನನಗೆ ತೋರುತ್ತಿಲ್ಲ. ಆ ಕೃತಿಯಲ್ಲಿನ ವಿಷಯದ ಆಯ್ಕೆಯು ತಪ್ಪಾಗಿದೆ, ಇದು ಸೌಮ್ಯ, ನಿವೃತ್ತ ಅನನುಭವಿ ಬರಹಗಾರನ ಪಾತ್ರ, ಅಭಿರುಚಿ ಮತ್ತು ಆಲೋಚನೆಗಳೊಂದಿಗೆ ತುಂಬಾ ಕಡಿಮೆ ವೃತ್ತಿಪರತೆಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟ ಷಾರ್ಲೆಟ್ ಅದನ್ನು ಮರುಪ್ರಕಟಣೆ ಮಾಡಲಿಲ್ಲ. ಅನ್ನಿ ತಮ್ಮ ಸಹೋದರಿಯರಂತೆ ಪ್ರಸಿದ್ಧಿಯಾಗದಿರಲು ಇದೂ ಒಂದು ಕಾರಣ. ಅದೇನೇ ಇದ್ದರೂ, ಅನ್ನಿಯವರ ಎರಡೂ ಕಾದಂಬರಿಗಳನ್ನು ಇಂಗ್ಲಿಷ್ ಸಾಹಿತ್ಯದ ಶ್ರೇಷ್ಠ ಕೃತಿಗಳೆಂದು ಪರಿಗಣಿಸಲಾಗಿದೆ. ವಿಮರ್ಶಕರು ಕೂಡ  ಅನ್ನಿಯವರ ಈ ಕಾದಂಬರಿಯ ಬಗ್ಗೆ ಕಡಿಮೆ ಗಮನ ಹರಿಸಿದರು ಮತ್ತು ಕೆಲವರು ಅವರನ್ನು "ಪ್ರತಿಭೆಯಿಲ್ಲದ ಬ್ರಾಂಟೆ" ಎಂದು ತಳ್ಳಿಹಾಕಿದರು.

ಆದರೆ ೨೦ ನೇ ಶತಮಾನದ ಮಧ್ಯಭಾಗದಿಂದ ಅವರ ಜೀವನ ಮತ್ತು ಕೃತಿಗಳಿಗೆ ಉತ್ತಮ ಗಮನ ನೀಡಲಾಗಿದೆ. ವಿನಿಫ್ರೆಡ್ ಗೆರಿನ್ (೧೯೫೯) ಮತ್ತು ಎಲಿಜಬೆತ್ ಲ್ಯಾಂಗ್‌ಲ್ಯಾಂಡ್ (೧೯೮೯) ಮತ್ತು ಎಡ್ವರ್ಡ್ ಚಿಥಮ್ (೧೯೯೧) ಅವರ ಜೀವನಚರಿತ್ರೆಗಳು , ಹಾಗೆಯೇ ಜೂಲಿಯೆಟ್ ಬಾರ್ಕರ್ ಅವರ ಗುಂಪು ಜೀವನಚರಿತ್ರೆ, ದಿ ಬ್ರಾಂಟೆಸ್ (೧೯೯೪; ಪರಿಷ್ಕೃತ ಆವೃತ್ತಿ ೨೦೦೦), ಮತ್ತು ಇಂಗಾ-ಸ್ಟಿನಾ ಇವ್‌ಬ್ಯಾಂಕ್‌ನಂತಹ ವಿಮರ್ಶಕರಲ್ಲದೆ ಥಾರ್ಮಹ್ಲೆನ್, ಲಾರಾ ಸಿ ಬೆರ್ರಿ, ಜಾನ್ ಬಿ ಗಾರ್ಡನ್, ಮೇರಿ ಸಮ್ಮರ್ಸ್ ಮತ್ತು ಜೂಲಿಯೆಟ್ ಮೆಕ್‌ಮಾಸ್ಟರ್ ಅವರು ಆನ್ನೆ ಬ್ರಾಂಟೆಯವರನ್ನು ಪ್ರಮುಖ ಸಾಹಿತ್ಯಿಕ ವ್ಯಕ್ತಿಯಾಗಿ ಸ್ವೀಕರಿಸಲು ಕಾರಣರಾಗಿದ್ದಾರೆ. ೨೦೧೩ ರಲ್ಲಿ ಬ್ರೊಂಟೆ ಸೊಸೈಟಿಯ ಸ್ಯಾಲಿ ಮೆಕ್‌ಡೊನಾಲ್ಡ್ ಅವರು ಕೆಲವು ರೀತಿಯಲ್ಲಿ ಅನ್ನಿಯನ್ನು ಸಹೋದರಿಯರಲ್ಲಿ ಅತ್ಯಂತ ಆಮೂಲಾಗ್ರವಾಗಿ ನೋಡಲಾಗುತ್ತದೆ, ಮಹಿಳೆಯರ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಮತ್ತು ಮದ್ಯಪಾನವು ಕುಟುಂಬವನ್ನು ಹೇಗೆ ಕಿತ್ತುಹಾಕಬಹುದು ಎಂಬಂತಹ ಕಠಿಣ ವಿಷಯಗಳ ಬಗ್ಗೆ ಬರೆಯುತ್ತಾರೆ. ಎಂದು ಹೊಗಳಿದ್ದಾರೆ. ೨೦೧೬ರಲ್ಲಿ ಲೂಸಿ ಮಂಗನ್ ಬಿಬಿಸಿಯ ಬೀಯಿಂಗ್ ದಿ ಬ್ರಾಂಟೆಸ್‌ನಲ್ಲಿ ಅನ್ನೆ ಬ್ರಾಂಟೆಯನ್ನು ಆ ಶತಮಾನದ ಚಾಂಪಿಯನ್ ಎಂದರಲ್ಲದೆ  "ಈಗ ಅವರನ್ನು ಅಭ್ಯಸಿಸುವ ಸಮಯ ಬಂದಿದೆ" ಎಂದು ಘೋಷಿಸಿ ಆನ್ನಿಯವರ ಸಾಹಿತ್ಯದ ಮಹತ್ವವನ್ನು ತೆರೆದಿಟ್ಟಿದ್ದಾರೆ. 

Wednesday, 14 September 2022

ಸ್ತ್ರೀವಾದಿ ವಿಮರ್ಶೆಗೆ ಮುನ್ನುಡಿ ಬರೆದ ಷಾರ್ಲೆಟ್ ಲೆನಾಕ್ಸ್



ಸ್ತ್ರೀವಾದಿ ವಿಮರ್ಶೆಗೆ ಮುನ್ನುಡಿ ಬರೆದ ಷಾರ್ಲೆಟ್ ಲೆನಾಕ್ಸ್


 ಬ್ರಿಟಿಷ್ ಸೈನ್ಯದಲ್ಲಿ ಸ್ಕಾಟಿಷ್ ಕ್ಯಾಪ್ಟನ್ ಆಗಿದ್ದ ಲ್ಹೌಸಿಯ ಜೇಮ್ಸ್ ರಾಮ್ಸೆ ಮತ್ತು ಕ್ಯಾಥರೀನ್, ನೀ ಟಿಸ್ಡಾಲ್‌ರವರ ಮಗಳಾಗಿ ೧೭೩೦ರಂದು ಜಿಬ್ರಾಲ್ಟರ್‌ನಲ್ಲಿ ಜನಿಸಿದ  ಬಾರ್ಬರಾ ಷಾರ್ಲೆಟ್ ನೀ ರಾಮ್ಸೆ ಒಬ್ಬ ಸ್ಕಾಟಿಷ್ ಕಾದಂಬರಿಕಾರ್ತಿ, ನಾಟಕಕಾರ್ತಿ ಮತ್ತು ಕವಿಯತ್ರಿ ಮತ್ತು ಮುಖ್ಯವಾಗಿ ನಟಿ. ಆದರೆ ಇಂದು ಅವರು ಸಾಹಿತ್ಯ ಲೋಕದಲ್ಲಿ ನೆನಪಿರುವುದು ದಿ ಫೀಮೇಲ್ ಕ್ವಿಕ್ಸೋಟ್ ಲೇಖಕಿ ಎಂಬ ಕಾರಣಕ್ಕಾಗಿ ಹಾಗೂ ಮತ್ತು ಸ್ಯಾಮ್ಯುಯೆಲ್ ಜಾನ್ಸನ್ , ಜೋಶುವಾ ರೆನಾಲ್ಡ್ಸ್ ಮತ್ತು ಸ್ಯಾಮ್ಯುಯೆಲ್ ರಿಚರ್ಡ್ಸನ್ ಅವರೊಂದಿಗಿನ ಒಡನಾಟಕ್ಕಾಗಿ .
ಬಾರ್ಬರಾ ಷಾರ್ಲೆಟ್ ನೀ ರಾಮ್ಸೆಯವರ ಬಾಲ್ಯ ಜೀವನದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಳಿಲ್ಲ. ಅವರ ಕುಟುಂಬ ೧೭೩೮ರಲ್ಲಿ ನ್ಯೂಯಾರ್ಕನ ಅಲ್ಬನಿಗೆ ಸ್ಥಳಾಂತರಗೊಳ್ಳುವ ಮೊದಲು ಲೆಪ್ಟಿನೆಂಟ್ ಗೌರ್ನರ್ ಆಗಿದ್ದ ತಮ್ಮ ತಂದೆಯ ಜೊತೆಗೆ ಇಂಗ್ಲೆಂಡ್‌ನಲ್ಲಿ ವಾಸವಾಗಿದ್ದಿರಬಹುದು ಎಂದು ತಿಳಿಯಲಾಗಿದೆ. ೧೭೪೨ರ ಸುಮಾರಿಗೆ ಅವರ ತಂದೆ ನಿಧನರಾದ ನಂತರವೂ  ಕೆಲಕಾಲ ಷಾರ್ಲೆಟ್ ಮತ್ತು ಅವರ ತಾಯಿ ನ್ಯೂಯಾರ್ಕನಲ್ಲಿಯೇ ವಾಸವಾಗಿದ್ದರು. ಹದಿಮೂರನೆ ವಯಸ್ಸಿಗೆ ಅವರನ್ನು ಚಿಕ್ಕಮ್ಮ ಮೇರಿ ಲಕಿಂಗ್‌ನೊಂದಿಗೆ ವಾಸಿಸಲು ಇಂಗ್ಲೆಂಡ್‌ಗೆ ಕಳಿಸಲಾಯಿತು. ಆದರೆ ಮಗನ ಸಾವಿನಿಂದಾಗಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಚಿಕ್ಕಮ್ಮನೊಡನೆ ಬಹಳ ಕಾಲ ವಾಸಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಷಾರ್ಲೆಟ್ ಕವಿ ಅನ್ನಿ ಫಿಂಚ್‌ನ ಸೋದರ ಸಂಬಂಧಿಯಾಗಿದ್ದ ಕೌಂಟೆಸ್ ಆಫ್ ವಿಂಚಿಲ್ಸಿಯ ಲೇಡಿ ಇಸಾಬೆಲ್ಲಾ ಫಿಂಚ್‌ರವರ ಜೊತೆಗೆ ಕೌಂಟೆಸ್ ಲಂಡನ್‌ನ ಫ್ಯಾಶನ್ ಹೃದಯ ಭಾಗದಲ್ಲಿರುವ ಬರ್ಕ್ಲಿ ಸ್ಕ್ವೇರ್‌ನಲ್ಲಿ ಭವ್ಯವಾದ, ಹೊಸದಾಗಿ ನಿರ್ಮಿಸಲಾದ ಟೌನ್‌ಹೌಸ್‌ನಲ್ಲಿ ಇರಬೇಕಾಯಿತು. ಷಾರ್ಲೆಟ್‌ರ ಬರಹಗಳನ್ನು ಮೊಟ್ಟಮೊದಲು ಗಮನಿಸಿ ಪ್ರೋತ್ಸಾಹಿಸಿದ್ದು ಇವರು. ಲೇಡಿ ಮೇರಿ ವರ್ಟ್ಲಿ ಮೊಂಟಾಗು ಹೊರೇಸ್ ವಾಲ್ಪೋಲ್ ಮುಂತಾದವರ ಸಂಪರ್ಕಕ್ಕೆ ಬರಲು ಇದು ಸಹಾಯಕವಾಯಿತು. ಈ ಕಾರಣಕ್ಕಾಗಿಯೇ ಷಾರ್ಲೆಟ್ ೧೭೪೭ರಲ್ಲಿ ಪ್ರಕಟವಾದ ತಮ್ಮ ಮೊದಲ ಕವನ ಸಂಕಲನ ಪೊಯಮ್ಸ್ ಆನ್ ನ್ನು ಲೇಡಿ ಇಸಾಬೆಲ್ಲಾರವರಿಗೆ ಅರ್ಪಿಸಿದ್ದಾರೆ.
              ಲೇಡಿ ಇಸಾಬೆಲ್ಲಾ ಆಸ್ಥಾನದಲ್ಲಿ ಇದ್ದುದರಿಂದ ತಾವೂ ಕೂಡ ಆಸ್ಥಾನದಲ್ಲಿ ಕೆಲಸ ಪಡೆಯಲು ಷಾರ್ಲೆಟ್ ತಯಾರಿ ನಡೆಸುತ್ತಿದ್ದರು. ಆದರೆ ಅಲೆಕ್ಸಾಂಡರ್ ಲೆನಾಕ್ಸ್‌ರೊಂದಿಗಿನ ಮದುವೆಯಾಗಿದ್ದರಿಂದ ಅವರ ಆ ಆಸೆಯನ್ನು ಕೈ ಬಿಡಬೇಕಾಯಿತು. ಮುಂದಿನ ಜೀವನಕ್ಕಾಗಿ ಹಣ ಸಂಪಾದನೆ ಮಾಡಬೇಕಾದ್ದರಿಂದ ಸ್ಟೇಜ್ ಮೇಲೆ ನಟನೆಯನ್ನು ಮಾಡುವ ಉದ್ಯೋಗವನ್ನು ಆಯ್ದುಕೊಂಡ ಷಾರ್ಲೆಟ್ ಜೀವನ ನಿರ್ವಹಣೆಗಾಗಿ ಹಲವಾರು ಕೆಲಸಗಳನ್ನು ಮಾಡಿದರು. ೧೭೭೩ ರಿಂದ ೧೭೮೨ ರವರೆಗೆ ಅವರ ಗಂಡ ಕಸ್ಟಮ್ಸ್ ಕಛೇರಿಯಲ್ಲಿ ಉದ್ಯೋಗಿಯಾಗಿದ್ದರು. ಆದರೆ ಇದೂ ಕೂಡ ಡ್ಯೂಕ್ ಆಫ್ ನ್ಯೂಕ್ಯಾಸಲ್‌ರ ಪತ್ನಿಯಿಂದ ಪ್ರತಿಫಲವಾಗಿ ಪಡೆದ ಪ್ರಯೋಜನವಾಗಿದೆ ಎಂದು ವರದಿಯಾಗಿದೆ. ೧೭೬೮ರಲ್ಲಿ ತಾನು ಅರ್ಲ್ ಆಫ್ ಲೆನಾಕ್ಸ್‌ನ ಉತ್ತರಾಧಿಕಾರಿ ಎಂದು ಹೇಳಿಕೊಂಡರಾದರೂ ಹೌಸ್ ಆಫ್ ಲಾರ್ಡ್ಸ್ ಅವರ ಹಕ್ಕುಗಳನ್ನು ಬಾಸ್ಟರ್ಡಿ ಅಥವಾ ಅವರ "ದುರದೃಷ್ಟಕರ ಜನನ"ದ ಆಧಾರದ ಮೇಲೆ ತಿರಸ್ಕರಿಸಿತು,

೧೭೪೬ ರಲ್ಲಿ ೧೭ ನೇ ವಯಸ್ಸಿನಲ್ಲಿ, ಲೆನಾಕ್ಸ್ ತಮ್ಮ ಗಮನವನ್ನು ನಟನೆಯತ್ತ ತಿರುಗಿಸಿದರು. ಡ್ರುರಿ ಲೇನ್‌ನಲ್ಲಿ ರಾಜಕೀಯ ಮತ್ತು ಲಿಂಗದ ಸಾಮಾಜಿಕ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗ ವಿಭಿನ್ನ ಜನಪ್ರಿಯತೆಯ "ಸಿವಿಲಿಯನ್' ನಾಟಕಗಳ ಸರಣಿಯಲ್ಲಿ ಪ್ರದರ್ಶನ ನೀಡಿದರಾದರೂ  ಮೊದಲ ಕವನ ಸಂಕಲನದ ಪ್ರಕಟಣೆಯ ನಂತರ ನಟನೆಯ ಬದಲಾಗಿ ಬರವಣಿಗೆಯ ಕಡೆಗೆ ಗಮನವನ್ನು ತಿರುಗಿಸಿದರು, ಆದರೂ ೧೭೪೮ರಲ್ಲಿ ಮತ್ತೊಮ್ಮೆ ರಿಚ್‌ಮಂಡ್‌ನಲ್ಲಿ ಪ್ರದರ್ಶನದಲ್ಲಿ ಕಾಣಿಸಿಕೊಂಡರು. ೧೭೫೦ರಲ್ಲಿ ದಿ ಮೌರ್ನಿಂಗ್ ಬ್ರೈಡ್ ನಿರ್ಮಾಣದಲ್ಲಿ ಹೇಮಾರ್ಕೆಟ್ ಥಿಯೇಟರ್‌ನಲ್ಲಿ ಅತ್ಯಂತ ಲಾಭಗಳಿಸಿದ ಒಂದು ನಾಟಕ ಪ್ರದರ್ಶನದಲ್ಲಿ ನಟಿಸಿದರು.  ನಂತರದ ವರ್ಷದಲ್ಲಿ, ಅವರು ತಮ್ಮ ಅತ್ಯಂತ ಯಶಸ್ವಿ ಕವಿತೆ "ದಿ ಆರ್ಟ್ ಆಫ್ ಕೊಕ್ವೆಟ್ರಿ" ಯನ್ನು ಜೆಂಟಲ್‌ಮ್ಯಾನ್ಸ್ ಮ್ಯಾಗಜೀನ್‌ನಲ್ಲಿ ಪ್ರಕಟಿಸಿದರು .ಆ ಸಮಯದಲ್ಲಿ ಭೇಟಿಯಾದ ಸ್ಯಾಮ್ಯುಯೆಲ್ ಜಾನ್ಸನ್ ಷಾರ್ಲೆಟ್‌ರವರ ಬರವಣಿಗೆಗಳನ್ನು  ಗಂಭೀರವಾಗಿ ಪರಿಗಣಿಸಿದರು.


    ಅವರ ಮೊದಲ ಕಾದಂಬರಿ, 'ದಿ ಲೈಫ್ ಆಫ್ ಹ್ಯಾರಿಯಟ್ ಸ್ಟುವರ್ಟ್' ಬರೆದಾಗ, ಜಾನ್ಸನ್ ಲೆನಾಕ್ಸ್‌ರವರಿಗೆ ಲಾರೆಲ್ ಮಾಲೆ ಮತ್ತು ಬೇ ಎಲೆಯನ್ನು ಹೊಂದಿರುವ ಆಪಲ್ ಪೈನೊಂದಿಗೆ ಅದ್ದೂರಿ ಪಾರ್ಟಿಯನ್ನು ನೀಡಿದರು. ಅನಾಮಧೇಯವಾಗಿ ಬರೆಯುವ ಬದಲು ಬರವಣಿಗೆಯನ್ನು ವೃತ್ತಿಪರಗೊಳಿಸಬೇಕೆಂದು ಜಾನ್ಸನ್ ಸಲಹೆ ನೀಡಿದರು. ತಮ್ಮ ಇತರ ಮಹಿಳಾ ಸಾಹಿತ್ಯಿಕ ಸ್ನೇಹಿತರಾದ ಎಲಿಜಬೆತ್ ಕಾರ್ಟರ್ , ಹನ್ನಾ ಮೋರ್ ಮತ್ತು ಫ್ರಾನ್ಸಿಸ್ ಬರ್ನಿ ಅವರಿಗಿಂತ ಷಾರ್ಲೆಟ್ ಲೆನಾಕ್ಸ್ ಶ್ರೇಷ್ಠ ಎಂದು ಭಾವಿಸಿದರು. ಲಂಡನ್ ಸಾಹಿತ್ಯಿಕ ರಂಗದಲ್ಲಿ ಪ್ರಮುಖ ಸದಸ್ಯರಿಗೆ ಲೆನಾಕ್ಸ್‌ರನ್ನು ಪರಿಚಯಿಸಿದರು. ಆದಾಗ್ಯೂ ಜಾನ್ಸನ್‌ರವರ ಸುತ್ತ ಇರುವ ಮಹಿಲಾ ಬರಹಗಾರರು ಲೆನಾಕ್ಸ್‌ರನ್ನು ಇಷ್ಟಪಡಲಿಲ್ಲ. ಬ್ಲೂಸ್ಟಾಕಿಂಗ್ ಸೊಸೈಟಿಯ ಸದಸ್ಯರಾದ ಹೆಸ್ಟರ್ ಥ್ರೇಲ್ , ಎಲಿಜಬೆತ್ ಕಾರ್ಟರ್ ಮತ್ತು ಲೇಡಿ ಮೇರಿ ವರ್ಟ್ಲೆ ಮೊಂಟಾಗು ಮುಂತಾದವರು ಷಾರ್ಲೆಟ್ ಮನೆಯನ್ನು ಸ್ತವ್ಯಸ್ತವಾಗಿ ಇಟ್ಟುಕೊಳ್ಳುವ ಗುಣಕ್ಕಾಗಿ, ತೋರಿಕೆಯ ಹಾಗೂ ಅಹಿತಕರ ವ್ಯಕ್ತಿತ್ವಕ್ಕಾಗಿ ಮತ್ತು ಅವರ ಕೆಟ್ಟ ಸ್ವಭಾವಕ್ಕಾಗಿ ಅವರನ್ನು ದೂಷಿಸಿದರು.

ಸಾಮ್ಯುಯೆಲ್ ರಿಚರ್ಡ್‌ಸನ್ ಹಾಗೂ ಸಾಮ್ಯುಯೆಲ್ ಜಾನ್ಸನ್ ಇಬ್ಬರಿಂದಲೂ ಪ್ರಶಂಸಿಸಿ ವಿಮರ್ಶಿಸಲ್ಪಟ್ಟ ಅವರ ಎರಡನೆ ಕಾದಂಬರಿ ಫಿಮೇಲ್ ಕ್ವಿಕ್ಸೋಟ್ ಅಥವಾ ದಿ ಅಡ್ವೆಂಚರ್ಸ್ ಆಫ್ ಅರಬೆಲ್ಲ ಕೂಡ ಅನಾಮಧೇಯವಾಗಿ ಪ್ರಕಟಗೊಂಡಿತು. ಹೆನ್ರಿ  ಫೀಲ್ಡಿಂ ತಮ್ಮ ಕೋವೆಂಟ್ ಗಾರ್ಡನ್ ಪತ್ರಿಕೆಯಲ್ಲಿ ಇದನ್ನು ಹೊಗಳಿ ಲೇಖನ ಬರೆದರು. ೧೭೮೩, ೧೭೯೯ ಹಾಗೂ ೧೮೦೧ರಲ್ಲಿ ಶ್ರೇಷ್ಠ ಕಾದಂಬರಿಗಳ ಸರಣಿಗಳಲ್ಲಿ ಇದು ಮರುಮುದ್ರಣಗೊಂಡು ಅಪಾರ ಜನಪ್ರಿಯತೆಯನ್ನು ಪಡೆಯಿತು. ೧೮೦೮ರಲ್ಲಿ ಸ್ಪಾನಿಷ್ ಭಾಷೆಗೆ ಅನುವಾದಗೊಂಡಿತು.
ಈ ಕಾದಂಬರಿಯು ಲೆನಾಕ್ಸ್‌ರವರ ಮರಣದ ನಂತರ ತಾಂತ್ರಿಕವಾಗಿ ವರ ಹೆಸರಿನಿಂದ ಗುರುತಿಸಲ್ಪಟ್ಟಿತಾದರೂ ಈ ಮೊದಲೇ ಅನಾಮಧೇಯತೆಯು ಬಹಿರಂಗ ರಹಸ್ಯವಾಗಿತ್ತು, ಅವರ ಇತರ ಕೃತಿಗಳನ್ನು " ದಿ ಫೀಮೇಲ್ ಕ್ವಿಕ್ಸೋಟ್‌ನ ಲೇಖಕರ ಕೃತಿ" ಎಂದು ಪ್ರಚಾರ ಮಾಡುತ್ತಿದ್ದರು ಆದರೆ ದಿ ಫೀಮೇಲ್ ಕ್ವಿಕ್ಸೋಟ್‌ನ ಯಾವುದೇ ಪ್ರಕಟಿತ ಆವೃತ್ತಿಯು ಅವರ ಜೀವಿತಾವಧಿಯಲ್ಲಿ ಅವರ ಹೆಸರನ್ನು ಹೊಂದಿರಲಿಲ್ಲ. ಸ್ಪ್ಯಾನಿಷ್ ಆವೃತ್ತಿಯ ಅನುವಾದಕ ಎಲ್ಟಿ-ಕೋಲ್. ಡಾನ್ ಬರ್ನಾರ್ಡೊ ಮರಿಯಾ ಡಿ ಕಾಲ್ಜಾಡಾರವರು ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಹೊಂದಿಲ್ಲದಿದ್ದರೂ ಈಗಾಗಲೇ ಫ್ರೆಂಚ್ ಭಾಷೆಗೆ ಅನುವಾದಗೊಂಡಿರುವ ಪ್ರತಿಯನ್ನು ನೋಡಿ ಅನುವಾದಿಸಿದ್ದರೂ  "ಇಂಗ್ಲಿಷ್‌ನಲ್ಲಿ ಅಜ್ಞಾತ ಲೇಖಕರಿಂದ ಮತ್ತು ಸ್ಪ್ಯಾನಿಷ್‌ನಲ್ಲಿ ಡಿ. ಬರ್ನಾರ್ಡೊ ಬರೆದಿದ್ದಾರೆ" ಎಂದು ಹೇಳುವ ಮೂಲಕ ಕಾದಂಬರಿಯನ್ನು  ತಮ್ಮ ಸ್ವಾಧೀನಪಡಿಸಿಕೊಂಡರು,

        ಅರಬೆಲ್ಲಾ (ಅರಬೆಲ್ಲಾ ಎಂಬುದು ರಿಚರ್ಡ್‌ಸನ್‌ನ ಕ್ಲಾರಿಸ್ಸಾ ರವರು ೧೭೪೮ರಲ್ಲಿ ಪಗರಕಟಿಸಿದ ಕಾದಂಬರಿಯ ನಾಯಕಿ ಪಾತ್ರದ ಅಕ್ಕನ ಹೆಸರು ) ಒಂದು ಆದರ್ಶಪ್ರಾಯ, ವಿದ್ಯಾವಂತ ಮತ್ತು ಸುಸಂಸ್ಕೃತ ಮಹಿಳೆ. ಬಹುಶಃ ಇದು ಲೆನಾಕ್ಸ್‌ರವರ ಸ್ವಂತ ಆದರ್ಶವಾದದದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ.

    ಜೋಸೆಫ್ ಬರೆಟ್ಟಿ ಅವರು ಲೆನಾಕ್ಸ್‌ರವರಿಗೆ ಇಟಾಲಿಯನ್ ಭಾಷೆಯನ್ನು ಕಲಿಸಿದರು, ಮತ್ತು ೧೮ ನೇ ಶತಮಾನದ ಮಧ್ಯಭಾಗದಲ್ಲಿ ಗ್ರೀಕ್ ದುರಂತದ ಅತ್ಯಂತ ಪ್ರಭಾವಶಾಲಿ ಫ್ರೆಂಚ್ ಅಧ್ಯಯನವಾದ ದಿ ಗ್ರೀಕ್ ಥಿಯೇಟರ್ ಆಫ್ ಫಾದರ್ ಬ್ರೂಮೊಯ್‌ನ್ನು ಭಾಷಾಂತರಿಸಿದರು. ಇದಕ್ಕಾಗಿ ಹಲವಾರು ಜನರು ಸಹಾಯ ಮಾಡಿದರು . ೧೭೫೫ರಲ್ಲಿ ಅವರು ಡ್ಯೂಕ್ ಆಫ್ ಸುಲ್ಲಿ ಎಂಬ ಮ್ಯಾಕ್ಸಿಮಿಲಿಯನ್ ಡಿ ಬೆಥೂನ್ ಅವರ ಆತ್ಮಚರಿತ್ರೆಗಳನ್ನು ಅನುವಾದಿಸಿದರು . ಹಲವಾರು ಭಾಷೆಗಳನ್ನು ಕಲಿಯುತ್ತಿದ್ದ ಷಾರ್ಲೆಟ್ ಲೆನಾಕ್ಸ್ ವಿಲಿಯಂ ಶೇಕ್ಸ್‌ಪಿಯರ್‌ನ ನಾಟಕಗಳ ಮೂಲಗಳಲ್ಲಿ ಆಸಕ್ತಿ ವಹಿಸಿ ತುಲನಾತ್ಮಕ ಅಧ್ಯಯನವನ್ನು ಮಾಡಿದರು . ೧೭೫೩ರಲ್ಲಿ, 'ಶೇಕ್ಸ್‌ಫಿಯರ್ ಇಲ್ಲಸ್ಟ್ರೇಟೆಡ್'ನ ಮೊದಲ ಎರಡು ಸಂಪುಟಗಳನ್ನು ಪ್ರಕಟಿಸಿದರು. ಪುಸ್ತಕವು ಷೇಕ್ಸ್‌ಪಿಯರ್‌ನ ಕಥಾವಸ್ತುವಿನ ಹೊಂದಾಣಿಕೆಗಳು ಮತ್ತು ಅವನ ನೈತಿಕತೆಯ ಕೊರತೆಗಾಗಿ ತರಾಟೆಗೆ ತೆಗೆದುಕೊಳ್ಳುತ್ತದೆ.
 ಷೇಕ್ಸ್ಪಿಯರ್‌ರವರ ನಾಟಕಗಳು  ಸ್ತ್ರೀ ಪಾತ್ರಗಳನ್ನು ಅನೈತಿಕವಾಗಿ ಕಾಣುತ್ತಿವೆಯಲ್ಲದೆ ತುಂಬ ಕ್ರೂರವಾಗಿ ಚಿತ್ರಿಸಿವೆ ಎಂದು ಟೀಕಿಸಿದರು.  "ಹಳೆಯ ಪ್ರಣಯಗಳು ಅವರಿಗೆ ನೀಡಿದ ಶಕ್ತಿ ಮತ್ತು ನೈತಿಕ ಸ್ವಾತಂತ್ರ್ಯವನ್ನು  ದುರುಪಯೋಗ ಪಡಿಸಿಕೊಂಡಂತೆ ಚಿತ್ರಿಸಲಾಗಿದೆ" ಎಂದು ಬರೆದರು.

ಸ್ಯಾಮ್ಯುಯೆಲ್ ಜಾನ್ಸನ್ ಈ ಕೃತಿಗೆ ವಿಶ್ಲೇಷಣೆಯನ್ನು ಬರೆದರು, ಆದರೆ ಡೇವಿಡ್ ಗ್ಯಾರಿಕ್ ಮತ್ತು ಇತರರು ಶೇಕ್ಸ್‌ಫಿಯರ್‌ನಂತಹ ಶ್ರೇಷ್ಠ ಮತ್ತು ಅತ್ಯುತ್ತಮ ಲೇಖಕನನ್ನು  ಹಾಗೆ ತೆಗಳಿದ್ದಕ್ಕಾಗಿ ಟೀಕಿಸಿದರು. ಜಾನ್ಸನ್‌ರವರ ಪ್ರೋತ್ಸಾಹವು ಅವರ ಖ್ಯಾತಿಯನ್ನು ರಕ್ಷಿಸಿದರೂ, ಸಾಹಿತ್ಯ ಪ್ರಪಂಚವು ೧೭೫೮ರಲ್ಲಿ ಪ್ರಕಟವಾದ ಅವರ ಮೂರನೇ ಕಾದಂಬರಿಯಾದ ಹೆನ್ರಿಯೆಟ್ಟಾ ಮೇಲೆ ಸೇಡು ತೀರಿಸಿಕೊಂಡಿತು. ಹೆನ್ರಿಯೆಟ್ಟಾ ಆಧಾರಿತ ದಿ ಸಿಸ್ಟರ್ ಎಂಬ ನಾಟಕದ ಪ್ರದರ್ಶನದ ಸಮಯದಲ್ಲಿ ಹಲವಾರು ಪ್ರೇಕ್ಷಕರ ಗುಂಪುಗಳು ನಾಟಕವನ್ನು ಪ್ರದರ್ಶನಗೊಳ್ಳುವ ಮೊದಲ ರಾತ್ರಿಯಲ್ಲಿಯೇ ವೇದಿಕೆಯಿಂದ ಹೊರಹಾಕಲು ಸಂಘಟಿತರಾದರು, ಆದರೂ ಈ ಕಾದಂಬರಿ ಹಲವಾರು ಆವೃತ್ತಿಗಳಲ್ಲಿ ಮುದ್ರಣಗೊಂಡು ಮಾರಾಟದಲ್ಲಿ ಯಶಸು ಕಂಡಿತು. ಆದರೂ ಅದು ಷಾರ್ಲೆಟ್‌ರವರಿಗೆ ಹಣವನ್ನು ತಂದುಕೊಡಲಿಲ್ಲ. 

೧೭೬೦ರಿಂದ ೧೭೬೧ರವರೆಗೆ ಅವರು ದಿ ಲೇಡಿಸ್ ಮ್ಯೂಸಿಯಂ ನಿಯತಕಾಲಿಕೆಗೆ ಬರೆದರು, ಅದು ಅಂತಿಮವಾಗಿ ೧೭೬೨ರಲ್ಲಿ ಸೋಫಿಯಾವನ್ನು ಸೋಫಿಯಾ ಕಾದಂಬರಿಯಾಗಿ ಪ್ರಕಟವಾಯಿತು. ೧೭೭೫ರಲ್ಲಿ ಡೆವಿಡ್ ಗ್ಯಾರಿಕ್ ಅವರ ಓಲ್ಡ್ ಸಿಟಿ ಮ್ಯಾನರ್‍ಸ್ ನಾಟಕವನ್ನು ಡ್ಯೂರೆ ಲೇನ್‌ನಲ್ಲಿರುವ ರಾಯಲ್ ಥಿಯೇಟರ್‌ನಲ್ಲಿ ಪ್ರದರ್ಶಿಸಿದರು. ಆ ಸಮಯದಲ್ಲಿ ಪ್ರಣಯದ ಕಾದಂಬರಿಗಳಲ್ಲಿ ಸಾರ್ವಜನಿಕರ ಆಸಕ್ತಿಯು ಕ್ಷೀಣಿಸುತ್ತಿರುವಂತೆ ತೋರದರೂ ಅವರ ಕೊನೆಯ ಕಾದಂಬರಿಯಾದ ಯುಫೆಮಿಯಾ ೧೭೯೦ರಲ್ಲಿ  ಪ್ರಕಟವಾಯಿತು. ಯುಫೆಮಿಯಾ ಅಮೇರಿಕನ್ ಕ್ರಾಂತಿಯ ಮೊದಲು ನ್ಯೂಯಾರ್ಕ್‌ನಲ್ಲಿ ರೂಪಿಸಿಕೊಂಡ ಒಂದು ಎಪಿಸ್ಟೋಲರಿ ಕಾದಂಬರಿ.


ಲೆನಾಕ್ಸ್‌ರವರ ವೈವಾಹಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ. ತಮ್ಮ ಗಂಡನಿಂದ ಹಲವಾರು ವರ್ಷಗಳ ಕಾಲ ದೂರವಾಗಿದ್ದ ಕುರಿತು ಮಾಹಿತಿಗಳಿವೆ. ೧೭೯೩ರಲ್ಲಿ ಪರಸ್ಪರ ದೂರವಾಗುವ ಮುನ್ನ ಅವರಿಗೆ ಬಾಲ್ಯದಲ್ಲಿಯೇ ತೀರಿಕೊಂಡ ಹ್ಯಾರಿಯಟ್ ಹೋಲ್ಸ್ ಲೆನಾಕ್ಸ್ (೧೭೬೫-೧೮೦೨/೪) ಮತ್ತು ಜಾರ್ಜ್ ಲೆವಿಸ್ ಲೆನಾಕ್ಸ್ (ಜನನ ೧೭೭೧) ಎನ್ನು ಇಬ್ಬರು ಮಕ್ಕಳಿದ್ದರು. ಪತಿಯಿಂದ ಬೇರ್ಪಟ್ಟ ನಂತರ ಷಾರ್ಲೆಟ್ ತನ್ನ ಜೀವನದುದ್ದಕ್ಕೂ ಸಾಹಿತ್ಯದಿಂದ ಬಂದ ಹಣವನ್ನು ಅವಲಂಬಿಸಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ೪ ಜನವರಿ ೧೮೦೪ರಂದು ಲಂಡನ್‌ನಲ್ಲಿ ನಿಧನರಾದರು ಮತ್ತು ಕೋವೆಂಟ್ ಗಾರ್ಡನ್‌ನ ಬ್ರಾಡ್ ಕೋರ್ಟ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು .

೧೯ ನೇ ಶತಮಾನದ ಅವಧಿಯಲ್ಲಿ ಫಿಮೇಲ್ ಕ್ವಿಕ್ಸೋಟ್ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿತು. ೨೦ ನೇ ಶತಮಾನದಲ್ಲಿ, ಸ್ತ್ರೀವಾದಿ ವಿದ್ವಾಂಸರಾದ ಜಾನೆಟ್ ಟಾಡ್ , ಜೇನ್ ಸ್ಪೆನ್ಸರ್ ಮತ್ತು ನ್ಯಾನ್ಸಿ ಆರ್ಮ್‌ಸ್ಟ್ರಾಂಗ್ ಮುಂತಾದವರು ಲೆನಾಕ್ಸ್‌ರವರ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಶ್ಲಾಘಿಸಿದ್ದಾರೆ. ಶೇಕ್ಸ್‌ಫಿಯರ್ ಕೃತಿಗಳ ತುಲನಾತ್ಮಕ ಅಧ್ಯಯನವನ್ನು ಸ್ತ್ರೀವಾದಿ ವಿಮರ್ಶೆಗಳ ಆದಿ ಎಂದು ಗುರುತಿಸಿದ್ದಾರೆ.

ಅವರ ಜೀವನ ಮತ್ತು ಸಾಹಿತ್ಯದ ಪರಿಚಯವನ್ನು ಫ್ರಾನ್ಸಿಸ್ ಬೂತ್‌ರವರು 'ಕಿಲ್ಲಿಂಗ್ ದಿ ಏಂಜೆಲ್: ಅರ್ಲಿ ಟ್ರಾನ್ಸ್‌ಗ್ರೆಸಿವ್ ಬ್ರಿಟಿಷ್ ವುಮನ್ ರೈಟಸ್ ಎಂಬದು ಬರೆದು ಜಗತ್ತಿಗೆ ಪರಿಚಯಿಸಿದರು.


 ಅವರ ಪ್ರಮುಖ ನಾಟಕಗಳು ಫಿಲಾಂಡರ್ (೧೭೫೮), ದಿ ಸಿಸ್ಟರ್ (೧೭೬೯), ಮತ್ತು ಓಲ್ಡ್ ಸಿಟಿ ಮ್ಯಾನರ್ಸ್ (೧೭೭೫). ಹಾಗೂ ನಾಲ್ಕು ಕಾದಂಬರಿಗಳು ಹೆನ್ರಿಯೆಟ್ಟಾ, ೧೭೫೮ (ಈ ಕಾದಂಬರಿಯನ್ನು ಆಧರಿಸಿ ದಿ ಸಿಸ್ಟರ್ ಎಂಬ ರಂಗ ನಾಟಕವನ್ನೂ ಬರೆದರು) ಸೋಫಿಯಾ ೧೭೬೨, ಎಲಿಜಾ ೧೭೬೬ ಮತ್ತು ಯುಫೆಮಿಯಾ ೧೭೯೦, ಆದರೆ ೧೭೬೧ ಮತ್ತು ೧೭೬೨ ರ ಸಮಯದಲ್ಲಿ ಅವರ ಮುಖ್ಯ ಸಾಹಿತ್ಯದ ಔಟ್‌ಪುಟ್‌ನ ಸಂಪಾದಕರಾಗಿ ಮತ್ತು ದಿ ಲೇಡಿಸ್ ಮ್ಯೂಸಿಯಂ ನಿಯತಕಾಲಿಕೆಗಾಗಿ ಬರೆದ ದಿ ಟ್ರಿಫ್ಲರ್ ಇವರ ಮುಖ್ಯ ಕೃತಿಗಳು.


ಬದುಕಿನಲ್ಲಿ ವಿಧಿಯ ಆಟವನ್ನು ಎದುರಿಸಿದ ಮಹಿಳೆ ಇವರು. ಕೋರ್ಟಿಯರ ಆಗಲು ಬಯಸಿ, ನಟಿಯಾಗಲು ಇಚ್ಛಿಸಿ ಯಾವುದೂ ಸಾಧ್ಯವಾಗದೆ ಬರಹಗಾರರಾಗಿ ಯಶಸ್ಸನ್ನು ಗಳಿಸಿದ ಇವರ ಜೀವನದ ಹೋರಾಟವೂ ಅಧ್ಯಯನ ಯೋಗ್ಯವಾಗಿದೆ.

lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220916_4_7



Thursday, 25 August 2022

ವೈಯಕ್ತಿಕ ಸಂಬಂಧಗಳ ಜೊತೆ ಸಾಹಿತ್ಯಿಕ ಬದುಕನ್ನು ಜತನದಿಂದ ನಿಭಾಯಿಸಿದ ಮೊದಲ ವೈಜ್ಞಾನಿಕ ಕಾದಂಬರಿಕಾರ್ತಿ ಮೇರಿ ಶೆಲ್ಲಿ


ವೈಯಕ್ತಿಕ ಸಂಬಂಧಗಳ ಜೊತೆ ಸಾಹಿತ್ಯಿಕ ಬದುಕನ್ನು ಜತನದಿಂದ ನಿಭಾಯಿಸಿದ ಮೊದಲ ವೈಜ್ಞಾನಿಕ ಕಾದಂಬರಿಕಾರ್ತಿ ಮೇರಿ ಶೆಲ್ಲಿ



       ರಾಜಕೀಯ ತತ್ವಜ್ಞಾನಿ  ವಿಲಿಯಂ ಗಾಡ್ವಿನ್ ಮತ್ತು  ದಾರ್ಶನಿಕ ಹಾಗೂ ಸ್ತ್ರೀವಾದಿ ಕಾರ್ಯಕರ್ತೆಯಾಗಿದ್ದ ಮೇರಿ ವೋಲ್‌ಸ್ಟೋನ್‌ಕ್ರಾಪ್ಟ್ ಅವರ ಮಗಳಾಗಿ ೩೦ ಆಗಸ್ಟ್ ೧೭೯೭ರಂದು ಲಂಡನ್‌ನ್ನಿನ ಸೋಮರ್ಸ್ ಟೌನ್‌ನಲ್ಲಿ ಜನಿಸಿದ ಮೇರಿ ಶೆಲ್ಲಿ ವೈಜ್ಞಾನಿಕ ಕಾದಂಬರಿಯನ್ನು ಮೊಟ್ಟಮೊದಲ ಬಾರಿಗೆ ಬರೆಯಲು ಪ್ರಾರಂಭಿಸಿದ ಕೀರ್ತಿಗೆ ಭಾಜನರಾದವರು. ಇವರ ಗೋಥಿಕ್ ಕಾದಂಬರಿ ಫ್ರಾಂಕೆನ್ಸ್‌ಸ್ಟೈನ್  ಅಥವಾ, ದಿ ಮಾಡರ್ನ್ ಪ್ರಮೀಥಿಯಸ್ (೧೮೧೮)  ಆರಂಭಿಕ ವೈಜ್ಞಾನಿಕ ಕಾದಂಬರಿ ಎಂದು ಸಾಹಿತ್ಯಲೋಕದಲ್ಲಿ ಪರಿಗಣಿತವಾಗಿದೆ.

ಶೆಲ್ಲಿಯ ತಾಯಿ ಅವರಿಗೆ ಜನ್ಮ ನೀಡಿದ ಹದಿನೈದು ದಿನಗಳೊಳಗೆ ಹೆರಿಗೆಯ ನಂತರ ಬರುವ ಜ್ವರದಿಂದಾಗಿ ನಿಧನರಾದರು. ತಾಯಿ ಮೇರಿ ವೋಲ್‌ಸ್ಟೋನ್‌ಕ್ರಾಪ್ಟ್‌ರವರಿಗೆ ಈಗಾಗಲೆ ಗಿಲ್ಬರ್ಟ್ ಇಮ್ಲೆಯವರಿಂದ ಜನಿಸಿದ ಫ್ಯಾನ್ಸಿ ಇಮ್ಲೆ ಎಂಬ ಮಗಳಿದ್ದಳು. ಆದರೆ ತಂದೆ ವಿಲಿಯಂ ಗಾಡ್ವಿನ್‌ರಿಗೆ ಮೇರಿ ಮೊದಲ ಮಗಳು. ತಾಯಿಯ ಅಕಾಲಿಕ ಮರಣದಿಂದಾಗಿ ಅವರ ತಂದೆ ವಿಲಿಯಂ ಗಾಡ್ವಿನ್ ಪತ್ನಿಯ ಹಿರಿಯ ಮಗಳು ಫ್ಯಾನ್ಸಿ ಇಮ್ಲೆಯನ್ನೂ ಮೇರಿಯವರ ಜೊತೆ ಸಾಕಬೇಕಿತ್ತು. ಹೀಗಾಗಿ ಮೇರಿಯವರಿಗೆ ದೊರಕಿದ್ದು ಬಹುತೇಕ ಅನೌಪಚಾರಿಕ ಶಿಕ್ಷಣ. ವೋಲ್‌ಸ್ಟೋನ್‌ಕ್ರಾಪ್ಟ್ ಮರಣದ ಒಂದು ವರ್ಷದ ನಂತರ ವಿಲಿಯಂ ಗಾಡ್ವಿನ್ ತನ್ನ 'ಮೆಮೋಯಿರ್ಸ್ ಆಫ್ ದಿ ಆಥರ್ ಆಫ್ ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್' ಅನ್ನು ಪ್ರಕಟಿಸಿದರು.(೧೭೯೮), ಪತ್ನಿಯ ಕುರಿತಾಗಿ ಅತೀವ ಪ್ರೀತಿ, ಗೌರವ ಹೊಂದಿದ್ದ ವಿಲಿಯಂ ಗಾಡ್ವಿನ್ ಪ್ರಾಮಾಣಿಕವಾಗಿ ಮತ್ತು ಸಹಾನುಭೂತಿಯಿಂದ ಈ ಪುಸ್ತಕವನ್ನು ಪ್ರಕಟಿಸಿದರಾದರೂ ಮೆಮೊಯಿರ್ಸ್ ವೋಲ್‌ಸ್ಟೋನ್‌ಕ್ರಾಪ್ಟ್‌ರವರ ವಿವಾಹೇತರ ಸಂಬಂಧಗಳನ್ನು ಹಾಗೂ ನ್ಯಾಯಸಮ್ಮತವಲ್ಲದ ಮಗುವನ್ನು ಹೊಂದಿರುವ ವಿಷಯವನ್ನು ಬಹಿರಂಗಪಡಿಸಿದ್ದಕ್ಕಾಗಿ ವೋಲ್‌ಸ್ಟೋನ್‌ಕ್ರಾಪ್ಟ್ ಪಾಲಿಗೆ ಹಿತಶತ್ರುವಾಗಬೇಕಾಯಿತು. ತಂದೆಯ ಅಚಾತುರ್ಯದಿಂದಾಗಿ ತಾಯಿ ನೈಪಥ್ಯಕ್ಕೆ ತಳ್ಳಲ್ಪಟ್ಟಿದ್ದರ ಕುರಿತು ವಿಷಾದವಿದ್ದರೂ ಮೇರಿ ಗಾಡ್ವಿನ್ ತಾಯಿಯ ಆತ್ಮಚರಿತ್ರೆಯನ್ನು ಮತ್ತು ಅವರ ತಾಯಿಯ ಪುಸ್ತಕಗಳನ್ನು ಓದಿದರಲ್ಲದೆ ಅವರ ತಾಯಿಯ ಸ್ತ್ರೀವಾದಿ ಧೋರಣೆಯನ್ನು  ಪಾಲಿಸುತ್ತ ಬೆಳೆದರು. ಅಲ್ಲದೆ ಇವರ ತಂದೆ ತನ್ನದೇ ಆದ ಅರಾಜಕತಾವಾದಿ ರಾಜಕೀಯ ಸಿದ್ಧಾಂತಗಳಿಗೆ ಬದ್ಧವಾಗಿರಲು ಅವರನ್ನು ಪ್ರೋತ್ಸಾಹಿಸಿದರು. ಅವರು ನಾಲ್ಕು ವರ್ಷದವರಿದ್ದಾಗ ಮೇರಿಯ ತಂದೆ ನೆರೆಯವರಾದ ಮೇರಿ ಜೇನ್ ಕ್ಲೇರ್ಮಾಂಟ್ ಅವರನ್ನು ವಿವಾಹವಾದರು. ಆದರೆ ಮೇರಿಯವರಿಗೆ ಅವರೊಂದಿಗೆ ಹೊಂದಿಕೊಳ್ಳುವುದು ಬಹಳ ಕಷ್ಟವಾಗಿತ್ತು.
       ಮೇರಿ ಗಾಡ್ವಿನ್ ಸ್ವಲ್ಪ ಮಟ್ಟಿಗೆ ಔಪಚಾರಿಕ ಶಿಕ್ಷಣವನ್ನು ಪಡೆದಿದ್ದರೂ, ಅವರ ತಂದೆ ಅವರಿಗೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಕಲಿಸಿದರು. ಅವರು ಆಗಾಗ್ಗೆ ಮಕ್ಕಳನ್ನು ಶೈಕ್ಷಣಿಕ ಪ್ರವಾಸಗಳಿಗೆ ಮತ್ತು ತಮ್ಮ ಗ್ರಂಥಾಲಯಕ್ಕೆ ಕರೆದೊಯ್ಯುತ್ತಿದ್ದುದಲ್ಲದೆ ಅವರನ್ನು ಭೇಟಿ ಮಾಡಿದ ಅನೇಕ ಬುದ್ಧಿಜೀವಿಗಳಾದ  ರೊಮ್ಯಾಂಟಿಕ್ ಕವಿ ಸ್ಯಾಮ್ಯುಯೆಲ್ ಟೇಲರ್ ಕೋಲ್ರಿಡ್ಜ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಮಾಜಿ ಉಪಾಧ್ಯಕ್ಷ ಆರನ್ ಬರ್ ಮುಂತಾದ ಬುದ್ಧಿಜೀವಿಗಳನ್ನು  ಪರಿಚಯಿಸಿದರು.  ತಮ್ಮ ಪತ್ನಿ ವೋಲ್‌ಸ್ಟೋನ್‌ಕ್ರಾಪ್ಟ್ 'ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್' (೧೭೯೨) ಕೃತಿಗಳಲ್ಲಿ ವಿವರಿಸಿರುವ ತತ್ವಶಾಸ್ತ್ರದ ಪ್ರಕಾರ ತಾನು ಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲ ಎಂಬುದು ಗಾಡ್ವಿನ್‌ರವರಿಗೆ ಸಣ್ಣ ಬೇಸರವನ್ನು ಹುಟ್ಟಿಸಿತ್ತು. ಆದರೆ ಮೇರಿ ಗಾಡ್ವಿನ್ ಆ ಕಾಲದ ಹುಡುಗಿಯರಿಗೆ ಸಾಧ್ಯವಿಲ್ಲದ ಒಂದು ಅತ್ಯುತ್ತಮ ಅವಕಾಶವನ್ನು ಪಡೆದಿದ್ದರು. ೧೮೧೧ರಲ್ಲಿ ಆರು ತಿಂಗಳು ರಾಮ್ಸ್‌ಗೇಟ್‌ನಲ್ಲಿರುವ ಬೋರ್ಡಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡುವುದು ಸಾಮಾನ್ಯ ವಿಷಯವಾಗಿರಲಿಲ್ಲ.

ಮೇರಿ ಶೆಲ್ಲಿ  ಬಾಲ್ಯದಲ್ಲಿಯೆ ಬರೆಯಲು ಪ್ರಾರಂಭಿಸಿದರು. ಅವಳ ನೆಚ್ಚಿನ ಕೆಲಸವೆಂದರೆ ಕಥೆಗಳನ್ನು ಬರೆಯುವುದು. ದುರದೃಷ್ಟವಶಾತ್ ಅವರ ಎಲ್ಲಾ ಬರಹಗಳು ಪರ್ಸಿಯೊಂದಿಗೆ ಓಡಿಹೋದಾಗ ಕಳೆದುಹೋದವು. ಹೀಗಾಗಿ ಉಳಿದಿರುವ ಯಾವುದೇ ಹಸ್ತಪ್ರತಿಗಳು ಯಾವಾಗ ಬರೆದದ್ದೆಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಅವರ ಮೊದಲ ಪ್ರಕಟಿತ ಕೃತಿಯು ಮೌನ್ಸೀರ್ ನೊಂಗ್ಟಾಂಗ್ಪಾ ಅವರು ಹತ್ತೂವರೆ ವರ್ಷದವಳಿದ್ದಾಗ ಗಾಡ್ವಿನ್ನ ಜುವೆನೈಲ್ ಲೈಬ್ರರಿಗಾಗಿ ಬರೆದ ಕಾಮಿಕ್ ಪದ್ಯಗಳು ಎಂದು ಭಾವಿಸಲಾಗಿದೆ.
      ೧೫ನೇ ವಯಸ್ಸಿನಲ್ಲಿ 'ಧೈರ್ಯಶಾಲಿ, ಶಕ್ತಿಯುತ ಮತ್ತು ಕ್ರಿಯಾಶೀಲ ಮನಸ್ಸಿನ ಹುಡುಗಿ. ಅವಳ ಜ್ಞಾನದ ಬಯಕೆ ಅದ್ಭುತವಾಗಿದೆ ಮತ್ತು ಕೈಗೊಳ್ಳುವ ಎಲ್ಲದರಲ್ಲೂ ಅವಳ ಪರಿಶ್ರಮ ಎದ್ದು ಕಾಣುತ್ತದೆ.' ಎಂದು ತಂದೆಯಿಂದ ಹೊಗಳಿಸಿಕೊಂಡಿದ್ದರು.

ಜೂನ್ ೧೮೧೨ರಲ್ಲಿ ಅವರ ತಂದೆ ಅವರನ್ನು  ಸ್ಕಾಟ್ಲೆಂಡ್‌ನ ಡುಂಡೀ ಬಳಿಯ ತೀವ್ರಗಾಮಿ ವಿಲಿಯಂ ಬ್ಯಾಕ್ಸ್‌ಟರ್ ಕುಟುಂಬದೊಂದಿಗೆ ಇರಲು ಕಳುಹಿಸಿದರು. ಅವರ ತಂದೆ  "ಅವಳನ್ನು ಒಬ್ಬ ದಾರ್ಶನಿಕನಂತೆ, ಸಿನಿಕನಂತೆ ಬೆಳೆಸಬೇಕೆಂದು ನಾನು ಉತ್ಸುಕನಾಗಿದ್ದೇನೆ" ಎಂದು ಬ್ಯಾಕ್ಸ್‌ಟರ್‌ಗೆ ಬರೆದ ಪತ್ರದಲ್ಲಿ  ಹೇಳಿದ್ದಾರೆ. ಮೇರಿ ಗಾಡ್ವಿನ್ ಬ್ಯಾಕ್ಸ್‌ಟರ್ ಮನೆಯ ವಿಶಾಲವಾದ ಪರಿಸರದಲ್ಲಿ ಅವರ ನಾಲ್ಕು ಹೆಣ್ಣುಮಕ್ಕಳ ಒಡನಾಟದಲ್ಲಿ ಖುಷಿಯಾಗಿದ್ದರು. ಹಾಗೂ ತನ್ನ ಸಾಹಿತ್ಯ ರಚನೆಗೆ ಬೇಕಾದ ಮೂಲದೃವ್ಯ ದೊರಕಿದ್ದು ಅಲ್ಲಿಯೇ ಎಂದು ಕೆಲವೆಡೆ ಮೇರಿ ಶೆಲ್ಲಿ ಹೇಳಿಕೊಂಡಿದ್ದಾರೆ.  

           ೧೮೧೪ರಲ್ಲಿ ಮೇರಿ ತನ್ನ ತಂದೆಯ ರಾಜಕೀಯ ಅನುಯಾಯಿಗಳಲ್ಲಿ ಒಬ್ಬರಾದ ಪರ್ಸಿ ಬೈಶೆ ಶೆಲ್ಲಿಯನ್ನು ಪ್ರೀತಿಸಲಾರಂಭಿಸಿದರು. ಆದರೆ ಪಿ ಬಿ ಶೆಲ್ಲಿಯವರಿಗೆ ಆಗಲೇ ಮದುವೆಯಾಗಿತ್ತು. ಮಲಸಹೋದರಿ ಕ್ಲೇರ್ ಕ್ಲೇರ್ಮಾಂಟ್ ಜೊತೆಗೂಡಿ ಪರ್ಸಿ ಶೆಲ್ಲಿಯೊಂದಿಗೆ ಮೇರಿ ಫ್ರಾನ್ಸ್‌ಗೆ ಓಡಿ ಹೋದರು. ಅಲ್ಲಿಂದ ಯುರೋಪಿನಾದ್ಯಂತ ಪ್ರಯಾಣ ಬೆಳೆಸಿದರು. ವೈಚಿತ್ರ್ಯವೆಂದರೆ ಈ ಪಯಣದ ಸಂದರ್ಭದಲ್ಲಿ ಶೆಲ್ಲಿ ಮತ್ತು ಕ್ಲೇರ್ಮಾಂಟ್ ಬಹುತೇಕ ಪ್ರೇಮಿಗಳಾಗಿ ಬಿಟ್ಟಿದ್ದರು. ಇದು ಮೇರಿ ಗಾಡ್ವಿನ್‌ರಲ್ಲಿ  ಅಸೂಯೆಯನ್ನುಂಟುಮಾಡಿತು. ಶೆಲ್ಲಿಯ ಈ ನಡವಳಿಕೆ ಒಂದು ಹಂತದಲ್ಲಿ ಮೇರಿ ಗಾಡ್ವಿನ್‌ರನ್ನು ತೀವ್ರ ಅಸಮಾಧಾನಗೊಳಿಸಿದರು, ಫ್ರಾನ್ಸ್‌ನ ಹಳ್ಳಿಗಳಲ್ಲಿ ನಡೆದಾಡುವಾಗ ಇಬ್ಬರೂ ಬೆತ್ತಲೆಯಾಗಿ ಸ್ಟ್ರೀಮ್‌ಗೆ ಧುಮುಕುವಂತೆ ಮೇರಿ ಅವರಿಬ್ಬರಿಗೂವಸಲಹೆ ನೀಡುವಷ್ಟು ಆ ಸಂಬಂಧದಿಂದ ರೋಸಿಹೋಗಿದ್ದರು.  ಏಕೆಂದರೆ ಅವರಿಬ್ಬರೂ  ತತ್ವಗಳನ್ನು, ನಂಬಿಕೆಗಳನ್ನು ಮುರಿದು ಹಾಕಿದ್ದರು.  ಆದರೆ ಅದೆ ಸಮಯದಲ್ಲಿ ಮೇರಿ ಪರ್ಸಿ ಶೆಲ್ಲಿಯ ಸ್ನೇಹಿತನಾಗಿದ್ದ  ಬ್ಯಾರಿಸ್ಟರ್  ಥಾಮಸ್ ಜೇಫರ್ ಸನ್ ಹಾಗ್‌ರನ್ನು ಭೇಟಿಯಾದರು. ಶಾಂತ ಹಾಗೂ ಸಮಾಧಾನದ ಸ್ವಭಾವದ ಹಾಗ್‌ನ ಭೇಟಿಗಳಿಂದ ಅವರು ತಮ್ಮ ನೋವನ್ನು ಮರೆತರು. ತಮ್ಮ ತಪ್ಪನ್ನು ಮರೆಮಾಚಲು ಮೇರಿ ಗಾಡ್ವಿನ್ ಮತ್ತು ಹಾಗ್ ಪ್ರೇಮಿಗಳಾಗಬೇಕೆಂದು ಪರ್ಸಿ ಶೆಲ್ಲಿ ಬಯಸಿದ್ದರು. ಮೇರಿ ಈ ಕಲ್ಪನೆಯನ್ನು ತಳ್ಳಿಹಾಕಲಿಲ್ಲ. ತಾತ್ವಿಕವಾಗಿ ಅವರು ಪ್ರೀತಿಯನ್ನು ನಂಬಿದ್ದರು. ಆದಾಗ್ಯೂ ನಿಜವಾದ ಆಚರಣೆಯಲ್ಲಿ ಅವರು ಪರ್ಸಿ ಶೆಲ್ಲಿಯನ್ನು ಮಾತ್ರ ಪ್ರೀತಿಸುತ್ತಿದ್ದರು. ಹೀಗಾಗಿ ಹಾಗ್‌ನೊಂದಿಗಿನ ಸಂಬಂಧ ಫ್ಲರ್ಟಿಂಗ್ ಮಾಡುವುದಕ್ಕಿಂತ ಹೆಚ್ಚು ಮುಂದುವರಿಯಲಿಲ್ಲ.
(ಥಾಮಸ್ ಜಾಫರ್ ಸನ್ ಹಾಗ್ ಮತ್ತು ಅವನ ಪುಸ್ತಕ)

      ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ ಮೇರಿ ಪರ್ಸಿಯ ಮಗುವಿಗೆ ಗರ್ಭಿಣಿಯಾದರು. ಮುಂದಿನ ಎರಡು ವರ್ಷಗಳಲ್ಲಿ ಮೇರಿ ಮತ್ತು ಪರ್ಸಿ ಶೆಲ್ಲಿ ಬಹಿಷ್ಕಾರ, ನಿರಂತರ ಸಾಲ ಮತ್ತು ಅಕಾಲಿಕವಾಗಿ ಜನಿಸಿದ ಮಗಳ ಮರಣವನ್ನು ಎದುರಿಸಬೇಕಾಯಿತು. ಮೇ ೧೮೧೬ರಲ್ಲಿ, ಮೇರಿ ಗಾಡ್ವಿನ್, ಪರ್ಸಿ ಶೆಲ್ಲಿ, ಅವರ ಮಗ ಮತ್ತು ಕ್ಲೇರ್ ಕ್ಲೇರ್ಮಾಂಟ್ ಅವರೊಂದಿಗೆ ಜಿನೀವಾಕ್ಕೆ ಪ್ರಯಾಣಿಸಿದರು. ಅವರು ಬೇಸಿಗೆಯನ್ನು ಕವಿ ಲಾರ್ಡ್ ಬೈರನ್ ಅವರೊಂದಿಗೆ ಕಳೆಯಲು ಯೋಜಿಸಿದರು. ಈ ಸಮಯದಲ್ಲಿ ಬೈರನ್ ರವರು ಕ್ಲೇರ್ ಅವರೊಂದಿಗೆ ಸಂಬಂಧ ಹೊಂದಿದ್ದುದು ಮೇರಿ ಗಾಡ್ವಿನ್‌ರ ಸಮಾಧಾನಕ್ಕೆ ಕಾರಣವಾಗಿತ್ತು.

ಅದೇ ಸಮಯದಲ್ಲಿ  ಮೇರಿ ಗಾಡ್ವಿನ್ ರವರ ಮಲ-ಸಹೋದರಿ ಅಂದರೆ ತಾಯಿ ಮೇರಿ ವೋಲ್ ಸ್ಟೋನ್ ಕ್ರಾಪ್ಟ್  ಮತ್ತು ಇಮ್ಲೆಯ ಮಗಳಾದ ಫ್ಯಾನಿ ಇಮ್ಲೆ ಮೇರಿಗೆ ಎರಡು ಪತ್ರಗಳನ್ನು ಬರೆದು ತನ್ನ ಅಸಂಬದ್ಧ ಜೀವನದ ಕುರಿತು ತಿಳಿಸಿದಳು. ಅಕ್ಟೋಬರ್ 9 ರಂದು ಬ್ರಿಸ್ಟಲ್‌ನಿಂದ ತಲುಪಿದ ಆ "ಆತಂಕಕಾರಿ ಪತ್ರ"ವನ್ನು ಕಂಡು  ಪರ್ಸಿ ಶೆಲ್ಲಿ ಅವಳನ್ನು ಹುಡುಕಲು ಓಡಿಹೋದರೂ ಅದು ಯಶಸ್ವಿಯಾಗಲಿಲ್ಲ. ಅಕ್ಟೋಬರ್ 10 ರ ಬೆಳಿಗ್ಗೆ ಫ್ಯಾನಿ ಇಮ್ಲೇ ಸ್ವಾನ್ಸೀ ಇನ್‌ನ ಕೋಣೆಯಲ್ಲಿ ಆತ್ಮಹತ್ಯೆ ಟಿಪ್ಪಣಿ ಬರೆದು ಲೌಡನಮ್ ಬಾಟಲಿಯೊಂದಿಗೆ ಶವವಾಗಿ ಪತ್ತೆಯಾದಳು. ಅದೇ ವರ್ಷ ಡಿಸೆಂಬರ್ 10 ರಂದು ಪರ್ಸಿ ಶೆಲ್ಲಿಯವರ ಪತ್ನಿ ಹ್ಯಾರಿಯೆಟ್ ಲಂಡನ್ ನ ಹೈಡ್ ಪಾರ್ಕ್ ನಲ್ಲಿರುವ  ಸರ್ಪೆಂಟೈನ್ ಎಂಬ ಸರೋವರದಲ್ಲಿ ಮುಳುಗಿಹೋದರು. ಈ ಎರಡೂ ಆತ್ಮಹತ್ಯೆಗಳು ಮುಚ್ಚಿಹೋಗಿವೆ. ಹ್ಯಾರಿಯೆಟ್‌ ಕುಟುಂಬವು ಪರ್ಸಿ ಶೆಲ್ಲಿಯನ್ನು ಅಪರಾಧಿ ಎಂದು ನಿರೂಪಿಸಲು ಪ್ರಯತ್ನಿಸಿತಾದರೂ ಅದು ಸಫಲವಾಗಲಿಲ್ಲ.ಹ್ಯಾರಿಯೆಟ್ ನಿಂದ ಜನಿಸಿದ ತನ್ನ ಇಬ್ಬರು ಮಕ್ಕಳನ್ನು ಪಾಲನೆ ಮಾಡಲು ಮದುವೆಯಾಗುವ ಮೂಲಕ ಪ್ರಕರಣವನ್ನು ಸುಧಾರಿಸಲು ಅವರ ವಕೀಲರು ಸಲಹೆ ನೀಡಿದರು; ಆದ್ದರಿಂದ ಪರ್ಸಿ ಶೆಲ್ಲಿ  ಗರ್ಭಿಣಿಯಾಗಿದ್ದ ಮೇರಿ ಗಾಡ್ವಿನ್ ರನ್ನು  30 ಡಿಸೆಂಬರ್ 1816ರಂದು  ಲಂಡನ್ ನ್ನಿನ   ಬ್ರೆಡ್ ಸ್ಟ್ರೀಟ್ ನಲ್ಲಿರುವ ಸೇಂಟ್ ಮಿಲ್ಡ್ರೆಡ್ಸ್ ಚರ್ಚ್ ನಲ್ಲಿ ವಿವಾಹವಾಗಿ ಮೇರಿ ಗಾಡ್ವಿನ್ ಮೇರಿ ಶೆಲ್ಲಿಯಾದರು.
                 1816ರಲ್ಲಿ ಶೆಲ್ಲಿ ದಂಪತಿಗಳು ಮತ್ತು ಮೇರಿಯ ಮಲಸಹೋದರಿ ಜೊತೆಗೂಡಿ ಲಾರ್ಡ್ ಬೈರಾನ್ ಮತ್ತು ಜಾನ್ ವಿಲಿಯಂ ಪೊಲಿಡೋರಿ ಅವರೊಂದಿಗೆ ಸ್ವಿಟ್ಜರ್ಲೆಂಡ್‌ನ ಜಿನೀವಾ ಬಳಿ ಬೇಸಿಗೆಯನ್ನು ಕಳೆದರು.    ಅಲ್ಲಿ ಬೈರನ್, ಜಾನ್ ವಿಲಿಯಂ ಪೊಲಿಡೋರಿ, ಪರ್ಸಿ ಹಾಗೂ ಮೇರಿ ಒಂದೊಂದು ದೆವ್ವದ ಅಥವಾ ಅತಿಮಾನುಷ ಕಥೆಗಳನ್ನು ಬರೆಯಲು ನಿರ್ಧರಿಸಿದರು. ಉಳಿದವರು ಬರೆಯಲು ತೊಡಗಿದರೂ ಮೇರಿ ಕಥೆಯನ್ನು ಬರೆಯಲು ಪ್ರಾರಂಭಿಸದಿದ್ದುದರಿಂದ ಪ್ರತಿ ದಿನದ ಬೆಳಿಗ್ಗೆ ಅವರನ್ನು ಕಥೆ ಬರೆದಾಗಿಲ್ಲವೆಂಬಂತೆ ಛೇಡಿಸಿದ್ದರಿಂದ ಹೊಸದಾದ ವಿಷಯವೊಂದನ್ನು ಮೇರಿ ಯೋಚಿಸಿದರು. ಸಣ್ಣ ಕಥೆ ಎಂದು ಬರೆಯಲು ಆರಂಭಿಸಿದ ವಸ್ತುವಿನ ವಿಸ್ತಾರತೆಯನ್ನು ಕಂಡು ಪರ್ಸಿ ಅದನ್ನು ಕಾದಂಬರಿ ಮಾಡುವಂತೆ ಸೂಚಿಸಿದರು.‌ ಹೀಗೆ ಮೇರಿ  ಶೆಲ್ಲಿ ತನ್ನ ಮೊದಲ ಕಾದಂಬರಿ ಫ್ರಾಂಕೆನ್ ಸ್ಟೈನ್‌ಗೆ ರೂಪರೇಷೆಯನ್ನು ಕಲ್ಪಿಸಿಕೊಂಡರು. 

ಶೆಲ್ಲಿ ದಂಪತಿಗಳು ೧೮೧೮ರಲ್ಲಿ ಬ್ರಿಟನ್ನಿಂದ ಇಟಲಿಗೆ ತೆರಳಿದರು. ೧೮೧೮ರಲ್ಲಿ ಹಾಗೂ ೧೮೧೯ರಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೆಯ ಮಕ್ಕಳನ್ನು ಕಳೆದುಕೊಂಡ ಮೇರಿ ಶೆಲ್ಲಿ ಈ ಆಘಾತದಿಂದ ಚೇತರಿಸಿಕೊಳ್ಳಲು ಬಹಳಷ್ಟು ಸಮಯವನ್ನು ತೆಗೆದುಕೊಂಡರು. ಆದಾಗ್ಯೂ ಈ ಮಕ್ಕಳ ಮರಣದ ನೋವನ್ನು ಅವರು ಕೊನೆಯವರೆಗೂ ಅನುಭವಿಸಿದರು. ಮಕ್ಕಳ ಮರಣದಿಂದ ಉಂಟಾದ ಖಿನ್ನತೆಯಿಂದ ಪರ್ಸಿ ಶೆಲ್ಲಿಯಿಂದ ಕೆಲಕಾಲ ದೂರ ಇರಲು ನಿರ್ಧರಿಸಿದ ಮೇರಿಯ ಕುರಿತು ಪರ್ಸಿ ಶೆಲ್ಲಿ ತಮ್ಮ ನೋಟ್‌ಬುಕ್‌ನಲ್ಲಿ ಬರೆದುಕೊಂಡ ವಿರಹದ ಸಾಲುಗಳು ಅತ್ಯಾಕರ್ಷಕವಾಗಿವೆ.
ನನ್ನ ಪ್ರೀತಿಯ ಮೇರಿ,
ನೀನು
ಈ ಮಂಕುಕವಿದ ಜಗತ್ತಿನಲ್ಲಿ
ಏಕಾಂಗಿಯಾಗಿ ನನ್ನನ್ನು ಬಿಟ್ಟು ಯಾಕೆ ಹೋದೆ?
ನಿನ್ನ ರೂಪವು ನಿಜವಾಗಿಯೂ ಇಲ್ಲಿದೆ
ನನ್ನ ಎದೆಯೊಳಗೆ ಮನೋಹರವಾಗಿ ಉಳಿದುಕೊಂಡಿದೆ
ಆದರೆ ನೀನು ನನ್ನನ್ನು ಬಿಟ್ಟು ಓಡಿಹೋದೆ,
ದುಃಖದ  ಅಸ್ಪಷ್ಟವಾದ ವಾಸಸ್ಥಾನಕ್ಕೆ
ದಾರಿ ಮಾಡಿಕೊಡುವ ಮಂಕುಕವಿದ ಹಾದಿಯಲ್ಲಿ ಹೋಗಿರುವೆ.
ನಾನು ನಿನ್ನನ್ನು ಹಿಂಬಾಲಿಸಲು ಅಶಕ್ತ
ನೀನು ನನ್ನವಳಾಗಿ ಹಿಂತಿರುಗಿ ಬಾ
ಎಂದು ವಿರಹ ತುಂಬಿ ಬರೆದುಕೊಂಡಿರುವುದನ್ನು ಕಾಣುತ್ತೇವೆ.
ನಂತರ ಹಿಂದಿರುಗಿದ ಮೇರಿ ೧೮೧೯ರಲ್ಲಿಯೇ ತಮ್ಮ ನಾಲ್ಕನೆಯ ಆದರೆ ಏಕೈಕ ಬದುಕುಳಿದ ಮಗು ಪರ್ಸಿ ಫ್ಲಾರೆನ್ಸ್ ಶೆಲ್ಲಿಗೆ ಜನ್ಮ ನೀಡಿದರು.
      ರಾಜಕೀಯ ಅರಾಜಕತೆಯಿಂದಾಗಿ ಶೆಲ್ಲಿ ದಂಪತಿಗಳು ಹಾಗೂ ಲಾರ್ಡ ಬೈರನ್ ಇಟಲಿಗೆ ಪಲಾಯನಗೈದರು. ಇಟಲಿಯು ಈ ಬರಹಗಾರರಿಗೆ ಅತ್ಯಗತ್ಯವಾಗಿದ್ದ ರಾಜಕೀಯ ಸ್ವಾತಂತ್ರ್ಯವನ್ನು ನೀಡಿತು. ಇಲ್ಲಿಯೇ ತಮ್ಮ ಹಲವಾರು ಕಾದಂಬರಿಗಳನ್ನು ಬರೆದರು. 

ಮಟಿಲ್ಡಾ, ಐತಿಹಾಸಿಕ ಕಾದಂಬರಿ ವಾಲ್ಪೆರ್ಗಾ ಮತ್ತು ನಾಟಕಗಳಾದ ಪ್ರೊಸರ್ಪೈನ್ ಮತ್ತು ಮಿಡಾಸ್ ಬರೆದರು. 

ತನ್ನ ತಂದೆಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ವಾಲ್ಬೆರ್ಗಾ ಕಾದಂಬರಿ ಬರೆದು ತಂದೆಗೆ ಸಹಾಯ ಮಾಡಿದರು. ಆದರೆ ಪರ್ಸಿ ಶೆಲ್ಲಿ ಇದಕ್ಕಿಂತ ಹೆಚ್ಚು ಸಹಾಯ ಮಾಡಲು ನಿರಾಕರಿಸಿದಾಗ ಅಸಹಾಯಕತೆಯಿಂದ ಪುನಃ ಖಿನ್ನತೆಗೆ ಜಾರಿದರು. 


ಆದರೆ ಈ ಸಮಯದಲ್ಲಿ ಪರ್ಸಿ ಶೆಲ್ಲಿಗೆ ಸೋಫಿಯಾ ಸ್ಟೇಸಿ, ಎಮಿಲಿಯಾ ವಿವಿಯಾನಿ ಮತ್ತು ಜೇನ್ ವಿಲಿಯಮ್ಸ್ ಅವರಂತಹ ಅನೇಕ ಮಹಿಳೆಯರೊಂದಿಗೆ ಸಂಬಂಧವಿತ್ತು. ಅದನ್ನು ನಿಭಾಯಿಸಿ ಪರ್ಸಿಯನ್ನು ತನ್ನವನನ್ನಾಗಿಯೇ ಉಳಿಸಿಕೊಳ್ಳಲು ಮೇರಿ ಹರಸಾಹಸ ಪಡಬೇಕಾಗಿತ್ತು. ಇದು ಅವರನ್ನು ಇನ್ನಷ್ಟು ಘಾಸಿಗೊಳಿಸಿ ಮತ್ತಷ್ಟು ಖಿನ್ನತೆಗೆ ದೂಡಿತು. ಈ ಸಮಯದಲ್ಲಿ ಮೇರಿ ಶೆಲ್ಲಿ ಪದೆ ಪದೇ ಅನಾರೋಗ್ಯದಿಂದ ನರಳಲಾರಂಭಿಸಿದರು.

ಗಂಡನ ಈ ರೀತಿಯ ಹೊರ ಸಂಬಂಧಗಳಿಂದ ರೋಸಿಹೋದ ಮೇರಿಶೆಲ್ಲಿ ತಮ್ಮ ವಲಯದ ಪುರುಷರು ಮತ್ತು ಮಹಿಳೆಯರೊಡನೆ ತಮ್ಮದೇ ಆದ ಭಾವನಾತ್ಮಕ ಸಂಬಂಧಗಳನ್ನು ರೂಪಿಸಿಕೊಂಡರು. ಅದರಲ್ಲೂ ವಿಶೇಷವಾಗಿ ಗ್ರೀಕ್ ಕ್ರಾಂತಿಕಾರಿ ರಾಜಕುಮಾರ ಅಲೆಕ್ಸಾಂಡ್ರೊಸ್ ಮಾವ್ರೊಕೊರ್ಡಾಟೋಸ್, ಜೇನ್ ಮತ್ತು ಎಡ್ವರ್ಡ್ ವಿಲಿಯಮ್ಸ್ ಮುಂತಾದವರ ಜೊತೆ ಸ್ನೇಹಕ್ಕಿಂತ ಮಿಗಿಲಾದ ಭಾವವಿತ್ತು.  ಅದನ್ನು ಪ್ರೇಮ ಎಂದು ಮೇರಿ ಸ್ವತಃ ಒಪ್ಪಿಕೊಂಡಿದ್ದಾಗಿಯೂ ಮೇರಿಯ ಮನಸ್ಸಿನಲ್ಲಿ ಕೊನೆಯವರೆಗೂ ಉಳಿದುಕೊಂಡಿದ್ದು ಕೇವಲ ಪರ್ಸಿ ಶೆಲ್ಲಿ ಮಾತ್ರ ಎಂಬುದನ್ನೂ ಅವರು ಹೇಳಿದ್ದಾರೆ.

                         (ಪರ್ಸಿ ಬೈಶೆ ಶೆಲ್ಲಿ)
    ನಂತರ ನೇಪಲ್ಸ್‌ನ ದಕ್ಷಿಣ ಭಾಗಕ್ಕೆ ಪ್ರಯಾಣ ಬೆಳೆಸಿದ ಶೆಲ್ಲಿ ದಂಪತಿಗಳು ಅಲ್ಲಿ ಶೆಲ್ಲಿ ವಜಾಗೊಳಿಸಿದ ಮಾಜಿ ಸೇವಕರಾದ ಪಾವೊಲೊ ಮತ್ತು ಎಲಿಸ್ ಫೊಗಿಯವರಿಂದ ಬೆದರಿಕೆಗಳನ್ನೆದುರಿಸಬೇಕಾಯಿತು.  ೨೭ ಫೆಬ್ರವರಿ ೧೮೧೯ ರಂದು ನೇಪಲ್ಸ್‌ನಲ್ಲಿ, ಪರ್ಸಿ ಶೆಲ್ಲಿಯು ಎಲೆನಾ ಅಡಿಲೇಡ್ ಶೆಲ್ಲಿ ಎಂಬ ಎರಡು ತಿಂಗಳ ಹೆಣ್ಣು ಮಗುವನ್ನು ಮೇರಿ ಶೆಲ್ಲಿಯಿಂದ ತನ್ನ ಮಗುವಾಗಿ ನೋಂದಾಯಿಸಿಕೊಂಡಿದ್ದಾನೆ ಎಂದು ಈ ಜೋಡಿಯು  ಬಹಿರಂಗಪಡಿಸಿತು. ಶೆಲ್ಲಿಯ ಮಲಸಹೋದರಿ ಕ್ಲೇರ್ ಕ್ಲೇರ್ಮಾಂಟ್ ಮಗುವಿನ ತಾಯಿ ಎಂದು ಫೋಗ್ಗಿಸ್ ಹೇಳಿದರೂ ಇವರ ಜೀವನಚರಿತ್ರೆಕಾರರು ಈ ಘಟನೆಗಳ ಕುರಿತು ವಿವಿಧ ವ್ಯಾಖ್ಯಾನಗಳನ್ನು ನೀಡಿದ್ದಾರೆ: ಪರ್ಸಿ ಶೆಲ್ಲಿ ಸ್ಥಳೀಯ ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿರಬಹುದು. ಅಥವಾ ಆ ಮಗು ಎಲಿಸ್, ಕ್ಲೇರ್ ಅಥವಾ ಅಪರಿಚಿತ ಮಹಿಳೆಯಿಂದ ಪಡೆದ  ಅವನದ್ದೇ ಮಗುವಾಗಿರಬಹುದು ಎಂದು ನಮೂದಿಸಿದ್ದಾರೆ. ಆದರೆ ದತ್ತು ತೆಗೆದುಕೊಂಡ ಆ ಮಗು, ಎಲೆನಾ ಅಡಿಲೇಡ್ ಶೆಲ್ಲಿ ೯ ಜೂನ್ ೧೮೨೦ ರಂದು ನೇಪಲ್ಸ್‌ನಲ್ಲಿ ಮರಣ ಹೊಂದಿತು.
ನೇಪಲ್ಸ್ ಅನ್ನು ತೊರೆದ ನಂತರ ಶೆಲ್ಲಿ ದಂಪತಿಗಳು ರೋಮ್ ನಗರದಲ್ಲಿ ನೆಲೆಸಿದರು,  ರೋಮ್‌ನಲ್ಲಿ ಮೇರಿ ಶೆಲ್ಲಿ ತಮ್ಮ ಅಪೂರ್ಣವಾದ ಕಾದಂಬರಿ ವ್ಯಾಲೆರಿಯಸ್, ದಿ ರೀನಿಮೇಟೆಡ್ ರೋಮನ್ ಬರೆಯಲು ಪ್ರಾರಂಭಿಸಿದರು. ಈ ಕಾದಂಬರಿಯಲ್ಲಿ ನಾಯಕ ರೋಮ್‌ನ ಅವನತಿ ಮತ್ತು ಕ್ಯಾಥೋಲಿಕ್ ಧರ್ಮದ ಕುತಂತ್ರಗಳನ್ನು ಹಾಗೂ ಮೂಢನಂಬಿಕೆಗಳನ್ನು ವಿರೋಧಿಸುತ್ತಾನೆ. ಆದರೆ ಆ ಸಮಯದಲ್ಲಿ ಅವರ ಮಗ ವಿಲಿಯಂ ಮಲೇರಿಯಾದಿಂದ ಮರಣಹೊಂದುತ್ತಾರೆ. ಹೀಗಾಗಿ ಮೇರಿ ಕಾದಂಬರಿಯ ಬರವಣಿಗೆಯನ್ನು ನಿಲ್ಲಿಸಿದರು. 'ನನ್ನ ಗಂಡನ ಆರೋಗ್ಯವನ್ನು ಸುಧಾರಿಸಲು ಇಟಲಿಗೆ ಬಂದಿದ್ದೇನೆ. ಬದಲಿಗೆ ಇಟಾಲಿಯನ್ ಹವಾಮಾನವು ತನ್ನ ಇಬ್ಬರು ಮಕ್ಕಳನ್ನು ಕೊಂದಿದೆ' ಎಂದು ಕಟುವಾಗಿ ಪ್ರತಿಕ್ರಿಯಿಸಿದರು. 

ತಮ್ಮ ದುಃಖವನ್ನು ಮರೆಯಲು 'ದಿ ಫೀಲ್ಡ್ಸ್ ಆಫ್ ಫ್ಯಾನ್ಸಿ' ಎಂಬ ಕಾದಂಬರಿಯನ್ನು ಬರೆದರು. ಮುಂದೆ ಅದಕ್ಕೆ ಮಟಿಲ್ಡಾ ಎಂದು ಮರುನಾಮಕರಣ ಮಾಡಲಾಯಿತು. 
ಇದರಲ್ಲಿ ಒಬ್ಬ ಯುವತಿಯ ಸೌಂದರ್ಯವು ಅವಳ ತಂದೆಯಲ್ಲಿ ಕಾಮಪೂರಿತವಾದ ಪ್ರೀತಿಯನ್ನು ಪ್ರೇರೇಪಿಸಿ ಮಗಳೊಂದಿಗೆ ಅನುಚಿತವಾಗಿ ವ್ಯವಹರಿಸುವ ಕಥಾವಸ್ತುವಿದೆ. ತಂದೆ ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮಗಳು, "ತಾನು ಸ್ಫೂರ್ತಿ ಪಡೆದ ಅಸ್ವಾಭಾವಿಕ ಪ್ರೀತಿಯ" ಬಗ್ಗೆ ಕೊರಗುತ್ತಾ ತನ್ನ ಉಳಿದ ಜೀವನವನ್ನು ಹತಾಶೆಯಿಂದ ಕಳೆಯುತ್ತಾಳೆ. ಆ ಯುವತಿ ಮಟಿಲ್ಡಾ ತನ್ನ ತಂದೆಯ ಭಾವನೆಗಳನ್ನು ಪ್ರೋತ್ಸಾಹಿಸಲು ಏನನ್ನೂ ಮಾಡದಿದ್ದರೂ ಅವರ ಮರಣಾನಂತರದ ಜೀವನದಲ್ಲಿ ಶಿಕ್ಷಿಸಲ್ಪಟ್ಟಂತೆ ಚಿತ್ರಿಸಲಾಗಿದೆ. ಕಾದಂಬರಿಯು ಪಿತೃಪ್ರಧಾನ ಸಮಾಜದ ಸ್ತ್ರೀಯ ತಲ್ಲಣಗಳನ್ನು ಬಿಂಬಿಸುತ್ತದೆ.




೧೮೨೨ರ ಬೇಸಿಗೆಯಲ್ಲಿ ಪುನಃ ಗರ್ಭಿಣಿಯಾದ ಮೇರಿ ಪರ್ಸಿ, ಕ್ಲೇರ್, ಎಡ್ವರ್ಡ್ ಮತ್ತು ಜೇನ್ ವಿಲಿಯಮ್ಸ್ ಅವರೊಂದಿಗೆ ಲೆರಿಸಿ ಕೊಲ್ಲಿಯಲ್ಲಿರುವ ಸ್ಯಾನ್ ಟೆರೆಂಜೊ ಎಂಬ ಕುಗ್ರಾಮದ ಬಳಿ ಸಮುದ್ರದ ಅಂಚಿನಲ್ಲಿರುವ ಪ್ರತ್ಯೇಕವಾದ ವಿಲ್ಲಾ ಮ್ಯಾಗ್ನಿಗೆ ತೆರಳಿದರು.  ಇಕ್ಕಟ್ಟಾದ ಮತ್ತು ಜನಸಂಪರ್ಕದಿಂದ ದೂರವಿರುವ ವಿಲ್ಲಾ ಮ್ಯಾಗ್ನಿಯನ್ನು ಬಂದೀಖಾನೆ ಎಂದು ಪರಿಗಣಿಸಿದ ಮೇರಿ ಸದಾ ಅತೃಪ್ತರಾಗಿದ್ದು ವಿಚಲಿತಳಾಗಿದ್ದಂತೆ ಕಾಣಿತ್ತಿದ್ದರು. ಜೂನ್ ೧೬ರಂದು ಗರ್ಭಪಾತವಾಗಿ ತುಂಬಾ ರಕ್ತವನ್ನು ಕಳೆದುಕೊಳ್ಳಬೇಕಾಯಿತು. ಬಹುತೇಕ ಸತ್ತು ಹೋದಮತಿದ್ದ ಅವರನ್ನು ಪರ್ಸಿ ಶೆಲ್ಲಿ  ವೈದ್ಯರಿಗಾಗಿ ಕಾಯುವಾಗ ರಕ್ತಸ್ರಾವವನ್ನು ತಡೆಯಲು ಅವರನ್ನು ಮಂಜುಗಡ್ಡೆಯ ಸ್ನಾನದ ಬುಟ್ಟಿಯಲ್ಲಿ ಕೂರಿಸಿದನು. ನಂತರ ವೈದ್ಯರ ಸತತ ಪ್ರಯತ್ನದಿಂದ ಪುನರ್ಜನ್ಮ ಪಡೆದ ಮೇರಿ ಆ ಸಮಯದಲ್ಲಿ ತೀರಾ ಖಿನ್ನತೆಗೆ ಒಳಗಾಗಿದ್ದರು.  ಆ ಬೇಸಿಗೆಯಲ್ಲಿ ದಂಪತಿಗಳ ಸಂಬಂಧ ಹದಗೆಟ್ಟಿತ್ತು. ಖಿನ್ನತೆಗೆ ಒಳಗಾದ ಮತ್ತು ದುರ್ಬಲಗೊಂಡ ಹೆಂಡತಿಯೊಂದಿಗೆ ಹೆಚ್ಚು ಸಮಯ ಕಲೆಯಬೇಕಾಗಿದ್ದ ಪರ್ಸಿ ಶೆಲ್ಲಿ ಅದರ ಬದಲು ಜೇನ್ ವಿಲಿಯಮ್ಸ್ ಜೊತೆ ಸಮಯ ಕಳೆಯ ತೊಡಗಿದರು ಸ್ಯಾನ್ ಟೆರೆಂಜೊದಲ್ಲಿರುವಾಗ ಪರ್ಸಿ ಶೆಲ್ಲಿ ಬರೆದ ಹೆಚ್ಚಿನ ಕವನಗಳು ಮೇರಿಯ ಬದಲಾಗಿ ಜೇನ್ ಅನ್ನು ಒಳಗೊಂಡಿವೆ.
.              (ಜೇನ್ ವಿಲಿಯಮ್ಸ್)    

೧ ಜುಲೈ ೧೮೨೨ರಂದು, ಪರ್ಸಿ ಶೆಲ್ಲಿ, ಎಡ್ವರ್ಡ್ ಎಲ್ಲೆರ್ಕರ್ ವಿಲಿಯಮ್ಸ್ ಮತ್ತು ಕ್ಯಾಪ್ಟನ್ ಡೇನಿಯಲ್ ರಾಬರ್ಟ್ಸ್  ಮುಂತಾದವರೊಂದಿಗೆ ಪರ್ಸಿ ಶೆಲ್ಲಿ, ಲಾರ್ಡ್ ಬೈರಾನ್ ಮತ್ತು ಲೀ ಹಂಟ್ ಮುಂತಾದವರು ಡೇನಿಯಲ್ ರಾಬರ್ಟ್ಸ್ ಮತ್ತು ಎಡ್ವರ್ಡ್ ಟ್ರೆಲಾನಿ ವಿನ್ಯಾಸಗೊಳಿಸಿದ ದೋಣಿಯಲ್ಲಿ ದಕ್ಷಿಣಕ್ಕೆ ಲಿವೊರ್ನೊಗೆ ಸಮುದ್ರಯಾನ ಮಾಡಿದರು.  
.                  (ಎಡ್ವರ್ಡ್ ವಿಲಿಯಮ್ಸ್)

ಅಲ್ಲಿ ಪರ್ಸಿ ಶೆಲ್ಲಿ, ಬೈರಾನ್ ಮತ್ತು ಲೀ ಹಂಟ್ ಅವರೊಂದಿಗೆ ದಿ ಲಿಬರಲ್ ಎಂಬ ಮೂಲಭೂತ ನಿಯತಕಾಲಿಕವನ್ನು ಪ್ರಾರಂಭಿಸುವ ಕುರಿತು ಚರ್ಚೆ ನಡೆಸಿದರು.  ಜುಲೈ ೮ರಂದು, ತಮ್ಮ ಹದಿನೆಂಟು ವರ್ಷದ ದೋಣಿ ಹುಡುಗ ಚಾರ್ಲ್ಸ್ ವಿವಿಯನ್ ಅವರೊಂದಿಗೆ ಲೆರಿಸಿಗೆ ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸಿದರು. ಆದರ  ಅವರು ತಮ್ಮ ಗಮ್ಯಸ್ಥಾನವನ್ನು ತಲುಪಲೇ ಇಲ್ಲ. ಮೇರಿ ಶೆಲ್ಲಿ ಮತ್ತು ಜೇನ್ ವಿಲಿಯಮ್ಸ್ ತಮ್ಮ ಗಂಡಂದಿರು ಇನ್ನೂ ಜೀವಂತವಾಗಿದ್ದಾರೆ ಎಂಬ ಭರವಸೆಯಿಂದ ಲಿವೊರ್ನೊಗೆ ನಂತರ ಪಿಸಾಗೆ ಹತಾಶವಾಗಿ ಧಾವಿಸಿದರು.  ಮೂರು ದೇಹಗಳು ವಿಯಾರೆಗಿಯೊ ಬಳಿಯ ಕರಾವಳಿಯಲ್ಲಿ, ಲಿವೊರ್ನೊ ಮತ್ತು ಲೆರಿಸಿ ನಡುವಿನ ಮಧ್ಯದಲ್ಲಿ ಕೊಚ್ಚಿಹೋದವು. ಚಂಡಮಾರುತ ನಡೆದ ಹತ್ತು ದಿನಗಳ ನಂತರ,  ಟ್ರೆಲಾನಿ, ಬೈರಾನ್ ಮತ್ತು ಹಂಟ್ ಪರ್ಸಿ ಶೆಲ್ಲಿಯ ಶವವನ್ನು ವಿಯಾರೆಗ್ಗಿಯೊ ಸಮುದ್ರತೀರದಲ್ಲಿ ಸುಟ್ಟುಹಾಕಲಾಯಿತು.
.                (ಲಾರ್ಡ್ ಬೈರನ್)
ತನ್ನ ಗಂಡನ ಮರಣದ ನಂತರ, ಮೇರಿ ಶೆಲ್ಲಿ ಜಿನೋವಾದಲ್ಲಿ ಲೇ ಹಂಟ್‌ನ ಅವನ ಕುಟುಂಬದೊಂದಿಗೆ ಒಂದು ವರ್ಷ ವಾಸಿಸಿದರು. ಬರವಣಿಗೆಯ ಮೂಲಕವೇ ತನ್ನ ಮಗನಿಗಾಗಿ ಬದುಕಲು ನಿರ್ಧರಿಸಿದರು. ಆದರೆ ಆರ್ಥಿಕ ಪರಿಸ್ಥಿತಿಯು ಅನಿಶ್ಚಿತವಾಗಿತ್ತು. ೨೩ ಜುಲೈ ೧೮೨೩ರಂದು ಜಿನೋವಾವನ್ನು ಬಿಟ್ಟು ಇಂಗ್ಲೆಂಡ್‌ಗೆ ತೆರಳಿದರು. ಅವರ ಮಾವ ಪರ್ಸಿ ಶೆಲ್ಲಿಯ ತಂದೆಯಿಂದ ಸ್ವಲ್ಪ ಮುಂಗಡ ಹಣವನ್ನು ಪಡೆಯುವವರೆಗೆ ತನ್ನ ತಂದೆ ಮತ್ತು ಮಲತಾಯಿಯೊಂದಿಗೆ ಸ್ಟ್ರಾಂಡ್‌ನಲ್ಲಿಯೇ ವಾಸಿಸುತ್ತಿದ್ದರು. ಪರ್ಸಿ ಶೆಲ್ಲಿಯ ತಂದೆ ಸರ್ ತಿಮೋತಿ ಶೆಲ್ಲಿ ತಮ್ಮ ಮೊಮ್ಮಗ ಪರ್ಸಿ ಫ್ಲಾರೆನ್ಸ್‌ಗೆ ಬೆಂಬಲ ನೀಡಲು ಒಪ್ಪಿಗೆ ನೀಡಿದ್ದರೂ, ತಾನು ನೇಮಿಸಿದ ಪಾಲಕನಿಗೆ ಹಸ್ತಾಂತರಿಸಿದರೆ ಮಾತ್ರ ಹಣ ಕೊಡುವುದಾಗಿ ನಿರ್ಬಂಧ ಹೇರಿದಾಗ ಮೇರಿ ಶೆಲ್ಲಿ ಈ ಕಲ್ಪನೆಯನ್ನು ತಕ್ಷಣವೇ ತಿರಸ್ಕರಿಸಿದರು. ಆದರೆ ನ್ಯಾಯಾಲಯದ ಮುಖಾಂತರ ಸರ್ ತಿಮೋತಿಯಿಂದ ಸೀಮಿತ ವಾರ್ಷಿಕ ಭತ್ಯೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು, ಆದರೆ ಅರ ದಿನಗಳ ಅಂತ್ಯದವರೆಗೆ ಮೇರಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಲು ನಿರಾಕರಿಸಿ ವಕೀಲರ ಮೂಲಕ ಮಾತ್ರ ಮೇರಿಯೊಂದಿಗೆ ವ್ಯವಹರಿಸಿದರಲ್ಲದೆ ಯಾವುದೇ ಕಾರಣಕ್ಕೂ ಪರ್ಸಿ ಶೆಲ್ಲಿಯ ಜೀವನ ಚರಿತ್ರೆ ಬರೆದು ಅವನ ಸಂಬಂಧಗಳ ಬಗ್ಗೆ ಹೇಳದಿರುವಂತೆ ದಿಗ್ಭಂಧನ ವಿಧಿಸಿ ಹಾಗೇನಾದರೂ ಚರಿತ್ರೆಯನ್ನು ಪ್ರಕಟಿಸಿದರೆ ಭತ್ಯೆಯನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದರು.


 ಮೇರಿ ಶೆಲ್ಲಿ ತನ್ನ ಇತರ ಸಾಹಿತ್ಯಿಕ ಪ್ರಯತ್ನಗಳ ನಡುವೆ ತನ್ನ ಪತಿಯ ಕವಿತೆಗಳನ್ನು ಸಂಪಾದಿಸುವುದರಲ್ಲಿ ನಿರತರಾಗಿದ್ದರು. ೧೮೨೬ರಲ್ಲಿ, ಪರ್ಸಿ ಫ್ಲಾರೆನ್ಸ್ ತನ್ನ ಮಲಸಹೋದರ ಚಾರ್ಲ್ಸ್ ಶೆಲ್ಲಿಯ ಮರಣದ ನಂತರ ಶೆಲ್ಲಿ ಎಸ್ಟೇಟ್‌ನ ಕಾನೂನುಬದ್ಧ ಉತ್ತರಾಧಿಕಾರಿಯಾದ ನಂತರ ಸರ್ ತಿಮೋತಿ ಮೇರಿಯ ಭತ್ಯೆಯನ್ನು ವರ್ಷಕ್ಕೆ ೧೦೦ರಿಂದ ೨೫೦ಕ್ಕೆ ಏರಿಸಿದರೂ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಮಾವ ಸರ್ ತಿಮೋತಿ ಹಾಗೂ ಅಪ್ಪ ವಿಲಿಯಂ ಗಾಡ್ವಿನ್ ಪರ್ಸಿ ಬೈಸ್ಶೆ ಶೆಲ್ಲಿ ಅವರೊಂದಿಗಿನ ಸಂಬಂಧವನ್ನು ಇನ್ನೂ ಒಪ್ಪದಿದ್ದುದರಿಂದ ಬಹಿಷ್ಕಾರ ಹಾಗೆಯೇ ಮುಂದುವರೆದಿತ್ತು.

೧೮೨೪ರ ಬೇಸಿಗೆಯಲ್ಲಿ, ಮೇರಿ ಶೆಲ್ಲಿ ಉತ್ತರ ಲಂಡನ್‌ನ ಕೆಂಟಿಶ್ ಟೌನ್‌ಗೆ ಜೇನ್ ವಿಲಿಯಮ್ಸ್ ಬಳಿಗೆ ತೆರಳಿದರು. ಆಕೆಯ ಜೀವನಚರಿತ್ರೆಕಾರ ಮುರಿಯಲ್ ಸ್ಪಾರ್ಕ್ ಹೇಳುವಂತೆ ಜೇನ್ ಅವರೊಂದಿಗೆ "ಸ್ವಲ್ಪ ಪ್ರೀತಿಯಲ್ಲಿ" ಇದ್ದರಾದರೂ ಪತ್ನಿಯಾಗಿ ಮೇರಿಯ ಅಸಮರ್ಪಕತೆಯಿಂದಾಗಿ ಪರ್ಸಿಯು ಮೇರಿಗಿಂತ ತನಗೆ ಆದ್ಯತೆ ನೀಡಿದ್ದಾನೆ ಎಂದು ಜೇನ್ ನಂತರ ಗಾಸಿಪ್ ಮಾಡುವ ಮೂಲಕ ಮೇರಿಯನ್ನು ಭ್ರಮನಿರಸನಗೊಳಿಸಿದಳು. ಆದರೆ ಕೊನೆಗೆ ಜೇನ್ ಮೇರಿಯ ಸ್ನೇಹಿತನಾಗಿದ್ದ ಥಾಮಸ್ ಜೆಫರ್ ಸನ್ ಹಾಗ್ ನನ್ನು ಮದುವೆಯಾದಳು. ಈ ಸಮಯದಲ್ಲಿ ಮೇರಿ ಶೆಲ್ಲಿ ತನ್ನ ಕಾದಂಬರಿ 'ದಿ ಲಾಸ್ಟ್ ಮ್ಯಾನ್' (೧೮೨೬)ನ ಬರವಣಿಗೆಯಲ್ಲಿ ತೊಡಗಿದ್ದರು.

 ಬೈರಾನ್ ಮತ್ತು ಪರ್ಸಿ ಶೆಲ್ಲಿಯ ಆತ್ಮಚರಿತ್ರೆಗಳನ್ನು ಬರೆಯುವ ಸ್ನೇಹಿತರ ಸರಣಿಗೆ ಸಹಾಯ ಮಾಡಿ ತನ್ನ ಪತಿಯನ್ನು ಅಮರಗೊಳಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದರು. ಸುಮಾರು ಆ ಸಮಯದಲ್ಲೇ ಅಮೇರಿಕನ್ ನಟ ಜಾನ್ ಹೋವರ್ಡ್ ಪೇನ್ ಮತ್ತು ಅಮೇರಿಕನ್ ಬರಹಗಾರ ವಾಷಿಂಗ್ಟನ್ ಇರ್ವಿಂಗ್ ಅವರನ್ನು ಭೇಟಿಯಾದರು. ಪೇನ್ ಮೇರಿಯವರನ್ನು ಪ್ರೀತಿಸಲು ಪ್ರಾರಂಭಿಸಿದರು. ೧೮೨೬ರಲ್ಲಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಾಗ ಒಬ್ಬ ಪ್ರತಿಭಾವಂತನನ್ನು ಮದುವೆಯಾದ ನಂತರ ಇನ್ನೊಬ್ಬ ಪ್ರತಿಭಾವಂತನನ್ನು ಮಾತ್ರ ಮದುವೆಯಾಗಬಹುದು ಎಂದು ನಿರಾಕರಿಸಿದರು.  ಪೇನ್ ಮೊದಲು ನಿರಾಕರಣೆಯನ್ನು ಒಪ್ಪಿಕೊಂಡರು ಸಹ ತನ್ನ ಸ್ನೇಹಿತ ಇರ್ವಿಂಗ್‌ರನ್ನು  ತನ್ನ ಸಲುವಾಗಿ ತನ್ನ ಪ್ರೇಮವನ್ನು ಪ್ರಸ್ತಾಪಿಸುವಂತೆ ಮೇರಿಯವರ ಬಳಿ ಕಳುಹಿಸಿದರು. ಮೇರಿ ಶೆಲ್ಲಿಯವರಿಗೆ ಪೇನ್‌ರವರ ಈ ಯೋಜನೆಯ ಬಗ್ಗೆ ತಿಳಿದಿತ್ತು, ಮತ್ತು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಅವರ ಜೀವನಚರಿತ್ರೆಕಾರರು ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ಗಂಡನ ಕೃತಿಗಳನ್ನು ಪ್ರಕಟಿಸಲು ಹೆಚ್ಚು ಆಸಕ್ತಿ ತೋರಿದ್ದ ಮೇರಿ ಶೆಲ್ಲಿಯವರ ಕೃತಿ ಫ್ರಾಂಕೆನ್‌ಸ್ಟೈನ್ ಮಹತ್ವದ ಕಾದಂಬರಿ ಎಂದು ಹೆಸರುವಾಸಿಯಾಗಿದೆ.

 ಮೊದಲು ಅನಾಮಧೇಯವಾಗಿ ಪ್ರಕಟವಾಗಿದ್ದ ಈ ಕೃತಿಯನ್ನು ಪಿ. ಬಿ ಶೆಲ್ಲಿಯ ಮುನ್ನುಡಿಯಿದ್ದರೂ ಅದನ್ನು ಅವನೇ ಬರೆದಿರಬಹುದೆಂದು ಹೆಚ್ಚಿನವರು ತಿಳಿದಿದ್ದರು. ಯಾಕೆಂದರೆ ಅದನ್ನು ಪರ್ಸಿ ಶೆಲ್ಲಿಯ ಗುರುವಾದ ವಿಲಿಯಂಗಾಡ್ವಿನ್‌ಗೆ ಅರ್ಪಿಸಲಾಗಿತ್ತು. ಕೊನೆಗೆ ಮೇರಿ ಕೂಡ ಗಾಡ್ವಿನ್ ಪುತ್ರಿ ಎಂಬ ಅಂಶ ಬೆಳಕಿಗೆ ಬಂತು.


       ಇದೊಂದು ಗೋಥಿಕ್ ಶೈಲಿಯ ಕಾದಂಬರಿ. ಲುಯಿಗಿ ಗಾಲ್ವಾನಿಯವರ ಪ್ರಯೋಗಗಳಿಂದ ಪ್ರಭಾವಿತವಾಗಿ ಬರೆದಿರುವಂತಹದ್ದು. ಡಾಕ್ಟರ್ ವಿಕ್ಟರ್ ಪ್ರಾಂಕೆನ್‌ಸ್ಟೈನ್ ಎಂಬ  ವಿಜ್ಞಾನಿಯೊಬ್ಬರು ಸಂಪ್ರದಾಯಕವಾಗಿ ಪ್ರಯೋಗಾಲಯದಲ್ಲಿ ಕೃತಕವಾಗಿ ನಿರ್ಮಿಸಿದ ಮನುಷ್ಯ ಸೃಷ್ಟಿಸುವ ಭೀಕರ ಅವಾಂತರಗಳನ್ನು ಹೇಳುವ ಈ ಕಾದಂಬರಿ ಅನೇಕ ನಾಟಕೀಯ ಮತ್ತು ಚಲನಚಿತ್ರಗಳಿಗೆ ಸ್ಫೂರ್ತಿ ನೀಡಿದೆ. ಅಮೇರಿಕನ್ ದೈತ್ಯ ಮಾನವರನ್ನು ಸೃಷ್ಟಿಸುವ ಚಲನಚಿತ್ರಗಳು ಈ ಕಾದಂಬರಿಯಿಂದ ಪ್ರೇರಣೆಗೊಂಡಿವೆ. ಇತ್ತೀಚೆಗೆ ಮೇರಿ ಶೆಲ್ಲಿಯವರ ಸಾಧನೆಗಳ ಬಗ್ಗೆ ಹೆಚ್ಚು ಸಮಗ್ರವಾಗಿ ಅಧ್ಯಯನ ನಡೆಸಲಾಗುತ್ತಿದ್ದು ಸ್ಕಾಲರ್ ಶಿಪ್ ಕೂಡ ಲಭ್ಯವಾಗುತ್ತಿದೆ.  ವಿದ್ವಾಂಸರು ಅವರ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ, ವಿಶೇಷವಾಗಿ ಅವರ ಐತಿಹಾಸಿಕ ಕಾದಂಬರಿಗಳಾದ ವಾಲ್ಪೆರ್ಗಾ (೧೮೨೩) ಮತ್ತು ದಿ ಫಾರ್ಚೂನ್ಸ್ ಆಫ್ ಪರ್ಕಿನ್ ವಾರ್ಬೆಕ್ (೧೮೩೦) ಮುಂತಾದ ಅವರ ಹೆಚ್ಚು ಪ್ರಸಿದ್ಧಿ ಹೊಂದಿದ ಕಾದಂಬರಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಲಾಗುತ್ತಿದೆ.

             ಅಪೋಕ್ಯಾಲಿಪ್ಸ್ ಕಾದಂಬರಿ  'ದಿ ಲಾಸ್ಟ್ ಮ್ಯಾನ್' (೧೮೨೬) ಪ್ಲೇಗ್‌ನಿಂದ ಮಾನವ ಜನಾಂಗ ವಿನಾಶದ ಅಂಚಿಗೆ ಬಂದು ನಿಲ್ಲುವ ವಿಷಯವನ್ನು ಇಟ್ಟುಕೊಂಡು ಬರೆಯಲಾದ ಕಾದಂಬರಿ. ಇದು ಅವರ ಅತ್ಯುತ್ತಮ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. 

ಮತ್ತು ಅವರ ಕೊನೆಯ ಎರಡು ಕಾದಂಬರಿಗಳಾದ 'ಲೋಡೋರ್' (೧೮೩೫) ಮತ್ತು 'ಫಾಕ್ನರ್' (೧೮೩೭) ಕೂಡ ಹೆಚ್ಚು ಜನರನ್ನು ಆಕರ್ಷಿಸಿವೆ.

 ಜರ್ಮನಿ ಮತ್ತು ಇಟಲಿಯಲ್ಲಿ ಪ್ರಯಾಣದ ಕುರಿತಾದ ಪುಸ್ತಕ ರಾಂಬಲ್ಸ್‌ನಂತಹ ಅವರ ಪ್ರಸಿದ್ಧಿ ಪಡೆಯದ ಕೃತಿಗಳ ಅಧ್ಯಯನ ಕೂಡ ಮಾಡಲಾಗುತ್ತಿದೆ. ಡಿಯೋನೈಸಿಯಸ್ ಲಾರ್ಡನರ್ ಅವರ ಕ್ಯಾಬಿನೆಟ್ ಸೈಕ್ಲೋಪೀಡಿಯಾ (೧೮೨೯-೧೮೪೬)ಗಾಗಿ ಒಟ್ಟಾಗಿಸಿದ ಜೀವನಚರಿತ್ರೆಯ ಲೇಖನಗಳಲ್ಲಿ ಶೆಲ್ಲಿ ತನ್ನ ಜೀವನದುದ್ದಕ್ಕೂ ರಾಜಕೀಯ ತೀವ್ರಗಾಮಿಯಾಗಿ ಉಳಿದುಕೊಂಡಿರುವ ದೃಷ್ಟಿಕೋನವನ್ನು ತಿಳಿಸುತ್ತದೆ. ಶೆಲ್ಲಿಯವರ ಕೃತಿಗಳು ಕುಟುಂಬದಲ್ಲಿ ಮಹಿಳೆಯರಿಗೆ ದೊರಕಬಹುದಾದ ಸಹಕಾರ ಮತ್ತು ಸಹಾನುಭೂತಿಯ ಕುರಿತಾಗಿದ್ದು ಅವು ನಾಗರಿಕ ಸಮಾಜವನ್ನು ಸುಧಾರಿಸುವ ಮಾರ್ಗಗಳಾಗಿವೆ ಎಂದು ವಿಮರ್ಶಕರು ಅರ್ಥೈಸುತ್ತಾರೆ. ಈ ದೃಷ್ಟಿಕೋನವು ಅವರ ತಂದೆ ವಿಲಿಯಂ ಗಾಡ್ವಿನ್‌ರ ರಾಜಕೀಯ ಸಿದ್ಧಾಂತಗಳಿಂದ ಪ್ರತಿಪಾದಿಸಲ್ಪಟ್ಟಿದ್ದೇ ಹೊರತು ಪತಿ ಪರ್ಸಿ ಶೆಲ್ಲಿಯವರ  ರೋಮ್ಯಾಂಟಿಸಿಸಮ್ ಸಾಹಿತ್ಯದ ಪ್ರಭಾವವಾಗಿರಲಿಲ್ಲ ಎಂಬುದನ್ನು ಗುರುತಿಸಲಾಗಿದೆ.

ಅವರು ಇಟಾಲಿಯನ್, ಸ್ಪ್ಯಾನಿಷ್, ಪೋರ್ಚುಗೀಸ್ ಮತ್ತು ಫ್ರೆಂಚ್ ಲೇಖಕರ ಐದು ಸಂಪುಟಗಳನ್ನು ಲಾರ್ಡ್ನರ್ ಕ್ಯಾಬಿನೆಟ್ ಸೈಕ್ಲೋಪೀಡಿಯಾಕ್ಕೆ ಕೊಡುಗೆ ನೀಡಿದರು. ಮಹಿಳಾ ನಿಯತಕಾಲಿಕೆಗಳಿಗೆ ಕಥೆಗಳನ್ನು ಬರೆದಿದ್ದಾರೆ. ೧೮೩೬ರಲ್ಲಿ ಅವರ ತಂದೆಯವರು ಎಂಬತ್ತನೆ ವಯಸ್ಸಿನಲ್ಲಿ ಮರಣ ಹೊಂದಿದ ನಂತರ ಅವರು ತಮ್ಮ ಇಚ್ಛೆಯಲ್ಲಿ ವಿನಂತಿಸಿದಂತೆ ಅವರ ಪತ್ರಗಳ ಪ್ರಕಟಣೆಗಾಗಿ ಜೋಡಿಸಲು ಪ್ರಾರಂಭಿಸಿದರು; ಆದರೆ ಎರಡು ವರ್ಷಗಳ ಕೆಲಸದ ನಂತರ, ಅವರು ಈ ಯೋಜನೆಯನ್ನು ಕೈಬಿಟ್ಟರು. ಈ ಅವಧಿಯಲ್ಲೂ ತಮ್ಮ ಪತಿ ಪರ್ಸಿ ಶೆಲ್ಲಿಯವರ ಕಾವ್ಯವನ್ನು ಜೋಡಿಸಿ ಪ್ರಕಟಿಸುವ ಕೆಲಸವನ್ನೂ ಮಾಡುತ್ತಿದ್ದರು. ೧೮೩೭ ರ ಹೊತ್ತಿಗೆ, ಪರ್ಸಿಯ ಕೃತಿಗಳು ಪ್ರಸಿದ್ಧವಾದವು ಮತ್ತು ಹೆಚ್ಚು ಮೆಚ್ಚುಗೆ ಪಡೆದವು. ೧೮೩೮ರ ಬೇಸಿಗೆಯಲ್ಲಿ ಟೆನ್ನಿಸನ್‌ನ ಪ್ರಕಾಶಕ ಮತ್ತು ಚಾರ್ಲ್ಸ್ ಲ್ಯಾಂಬ್‌ರವರ ಅಳಿಯ ಎಡ್ವರ್ಡ್ ಮೊಕ್ಸನ್, ಪರ್ಸಿ ಶೆಲ್ಲಿಯವರ ಸಂಗ್ರಹಿಸಿದ ಕೃತಿಗಳನ್ನು ಪ್ರಕಟಿಸಲು ಪ್ರಸ್ತಾಪಿಸಿದರು. ಅವರ ಪೊಯೆಟಿಕಲ್ ವರ್ಕ್ಸ್‌ನ್ನು ಸಂಪಾದಿಸಲು ಮೇರಿಗೆ ೫೦೦ ಡಾಲರ್‌ನ್ನು ೧೮೩೮ರಲ್ಲಿ ಪಾವತಿಸಲಾಯಿತು. ಆಗಲೂ ಕೂಡ ಪರ್ಸಿ ಶೆಲ್ಲಿಯವರ ತಂದೆ  ಸರ್ ತಿಮೋತಿ ಅವರು ಪರ್ಸಿಯವರ ಕವನ ಸಂಕಲನಗಳ ಜೊತೆ ಜೀವನ ಚರಿತ್ರೆಯನ್ನು ಸೇರಿಸಬಾರದು ಎಂದು ಒತ್ತಾಯಿಸಿದರು. ಆದರೆ ಮೇರಿ ಪರ್ಸಿಯ ಜೀವನದ ಕಥೆಯನ್ನು ಹೇಳಲು ಒಂದು ಮಾರ್ಗವನ್ನು ಕಂಡುಕೊಂಡರು. ಕವಿತೆಗಳ ಬಗ್ಗೆ ವ್ಯಾಪಕವಾದ ಜೀವನಚರಿತ್ರೆಯ ಟಿಪ್ಪಣಿಗಳನ್ನು ಸೇರಿಸಿದರು.

ಶೆಲ್ಲಿ ಯಾವಾಗಲೂ ತನ್ನ ತಾಯಿಯ ಸ್ತ್ರೀವಾದಿ ತತ್ವಗಳನ್ನು ಕಾರ್‍ಯರೂಪಕ್ಕೆ ತರುವ ಮಾಡುತ್ತಿದ್ದರು. ಸಮಾಜವು ಒಪ್ಪದ ಮಹಿಳೆಯರಿಗೆ ಸಹಾಯ ಮಾಡುವುದು ಅವರಿಗೆ ಬಹಳ ಇಷ್ಟವಾದ ಕೆಲಸವಾಗಿತ್ತು.  ಉದಾಹರಣೆಗೆ ಮೇರಿ  ಒಂಟಿ ತಾಯಿ ಮತ್ತು ಸಲಿಂಗಕಾಮಿಯಾಗಿ ಕಾನೂನುಬಾಹಿರವಾದ  ಕೆಲಸ ಮಾಡುತ್ತಿದ್ದ ಡಯಾನಾ ಡಾಡ್‌ಗೆ  ಆರ್ಥಿಕ ಸಹಾಯವನ್ನು ನೀಡಿದರು. ವ್ಯಭಿಚಾರದ ಆರೋಪದ ಮೇಲೆ ಪತಿಯಿಂದ ನಿರಾಕರಿಸಲ್ಪಟ್ಟ ಮಹಿಳೆ ಜಾರ್ಜಿಯಾನಾ ಪೌಲ್ಗೆ ಸಹಾಯ ಮಾಡಿದರು. ಆದರೆ ತನ್ನ ಡೈರಿಯಲ್ಲಿ ತನ್ನ ಸಹಾಯದ ಬಗ್ಗೆ: "ನಾನು ಹೆಗ್ಗಳಿಕೆಗೆ ಒಳಗಾಗುವುದಿಲ್ಲ-ನಾನು ಗಟ್ಟಿಯಾಗಿ ಹೇಳುವುದಿಲ್ಲ-ಇಗೋ ನನ್ನ ಔದಾರ್ಯ ಮತ್ತು ಮನಸ್ಸಿನ ಶ್ರೇಷ್ಠತೆ-ಸತ್ಯವಾಗಿದೆ. ಇದು ಸರಳವಾದ ನ್ಯಾಯವಾಗಿದೆ-ಹಾಗಾಗಿ ನಾನು ಲೌಕಿಕವಾಗಿದ್ದಕ್ಕಾಗಿ ನನ್ನನ್ನು ಇನ್ನೂ ನಿಂದಿಸಲಾಗುತ್ತಿದೆ". ಎಂದು ಬರೆದುಕೊಂಡಿದ್ದಾರೆ.
        ಮೇರಿ ಶೆಲ್ಲಿ ತನ್ನೊಡನೆ ಸಂಭವಿಸಬಹುದಾದ  ಪ್ರಣಯವನ್ನು ಎಚ್ಚರಿಕೆಯಿಂದ ನಿಭಾಯಿಸುವುದನ್ನು ಕಲಿತುಕೊಂಡಿದ್ದರು. ೧೮೨೮ರಲ್ಲಿ ಫ್ರೆಂಚ್ ಬರಹಗಾರ ಪ್ರಾಸ್ಪರ್ ಮೆರಿಮಿಯನ್ನು ಭೇಟಿಯಾದರು. ಒಂದಿಷ್ಟುಕಾಲ ಅವರೊಂದಿಗೆ ಸಂಬಂಧವನ್ನಿಟ್ಟುಕೊಂಡ ಕುರಿತುಅವರದ್ದೇ ಒಂದು ಪತ್ರ ದಾಖಲೆಯಾಗಿ ಉಳಿದುಕೊಂಡಿದೆ. ಇಟಲಿಯ ತನ್ನ ಹಳೆಯ ಸ್ನೇಹಿತ ಎಡ್ವರ್ಡ್ ಟ್ರೆಲಾನಿ ಇಂಗ್ಲೆಂಡ್‌ಗೆ ಹಿಂದಿರುಗಿದಾಗ ಸಂತೋಷದಿಂದ ಅವನ ಜೊತೆ ಪತ್ರ ವ್ಯವಹಾರ ಮಾಡಿದರು. ಆದರೆ ಎಡ್ವರ್ಡ್ ಟ್ರೆಲಾನಿ ಪರ್ಸಿ ಶೆಲ್ಲಿ ಅವರ ಉದ್ದೇಶಿತ ಜೀವನಚರಿತ್ರೆಯೊಂದಿಗೆ ಸಹಕರಿಸಲು ಅವರು ನಿರಾಕರಿಸಿದ ನಂತರ ಅವರಿಬ್ಬರ ಸ್ನೇಹ ಬದಲಾಯಿತು. ತನ್ನ ಜೀವನದಲ್ಲಿ ಯಾರೆ ಬಂದರೂ ಪರ್ಸಿ ಶೆಲ್ಲಿ ಮಾತ್ರ ಬಹು ಮುಖ್ಯ ಎಂದು ಅವರು ಪರಿಗಣಿಸಿದ್ದಕ್ಕೆ ದ್ಯೋತಕ ಇದು. ೧೮೩೦ರ ದಶಕದ ಆರಂಭದಿಂದ ೧೮೪೦ರ ದಶಕದ ಆರಂಭದವರೆಗೆ ಅವರು ನಿಯತಕಾಲಿಕಗಳಲ್ಲಿ ಬರೆz ಉಲ್ಲೇಖಗಳ ಆಧಾರದ ಮೇಲೆ ರಾಜಕಾರಣಿ ಆಬ್ರೆ ಬ್ಯೂಕ್ಲರ್ಕ್ ಬಗ್ಗೆ ಪ್ರೇಮದ ಭಾವನೆಗಳನ್ನು ಹೊಂದಿದ್ದರು ಎಂದು ಅವರ ಜೀವನಚರಿತ್ರೆಕಾರರು ನಮೂದಿಸಿದ್ದಾರೆ. ಆದರೆ ಎಡ್ವರ್ಡ್ ಟ್ರೆಲಾನಿ ಎರಡು ಬಾರಿ ಬೇರೆ ಬೇರೆ ಯುವತಿಯರನ್ನು ಮದುವೆಯಾಗುವ ಮೂಲಕ ಮೇರಿ ಶೆಲ್ಲಿಯವರನ್ನು ನಿರಾಶೆಗೊಳಿಸಿರಬಹುದು ಎನ್ನಲಾಗಿದೆ.
.          (ಪರ್ಸಿ ಫ್ಲಾರೆನ್ಸ್)
     ಏನೇ ಆದರೂ ಮೇರಿ ಶೆಲ್ಲಿಯವರ ಮೊದಲ ಕಾಳಜಿ ಪರ್ಸಿ ಫ್ಲಾರೆನ್ಸ್ ಅವರ ಉನ್ನತಿಯಾಗಿತ್ತು. ಆದರೆ ಅವನು ತನ್ನ ಹೆತ್ತವರ ಯಾವುದೇ ಪ್ರಸಿದ್ಧ ಲಕ್ಷಣವನ್ನು ತೋರಿಸಲಿಲ್ಲ. ತಾಯಿಯ ಕುರಿತು ಅಪಾರ ಪ್ರೀತಿ ಹೊಂದಿದ್ದ ಆತ ೧೮೪೧ರಲ್ಲಿ ವಿಶ್ವವಿದ್ಯಾನಿಲಯವನ್ನು ತೊರೆದ ನಂತರ ತಾಯಿಯೊಂದಿಗೆ ವಾಸಿಸತೊಡಗಿದನು. ೧೮೪೦ ಮತ್ತು ೧೮೪೨ರಲ್ಲಿ ತಾಯಿ ಮತ್ತು ಮಗ ಜರ್ಮನಿ, ಇಟಲಿ ಮುಂತಾದ ದೇಶಗಳಿಗೆ ಪ್ರವಾಸವನ್ನು ಪ್ರಾರಂಭಿಸಿದರು. ೧೮೪೪ರಲ್ಲಿ, ಸರ್ ತಿಮೋತಿ ಶೆಲ್ಲಿ ತೊಂಬತ್ತನೇ ವಯಸ್ಸಿನಲ್ಲಿ ಮೇರಿ ಹೇಳಿದಂತೆ "ಕಾಂಡದಿಂದ ಅತಿಯಾಗಿ ಅರಳಿದ ಹೂವಿನಂತೆ ಬಿದ್ದು" ನಿಧನರಾದರು, ಮೊದಲ ಬಾರಿಗೆ ಮೇರಿ ಮತ್ತು ಅವರ ಮಗ ಆರ್ಥಿಕವಾಗಿ ಸ್ವತಂತ್ರರಾಗಿದ್ದರು. ಎಸ್ಟೇಟ್ ಅವರು ನಿರೀಕ್ಷಿಸಿದಷ್ಟು ಮೌಲ್ಯಯುತವಾಗಿಲ್ಲ ಎಂಬುದು ಸರ್ ತಿಮೋತಿಯವರ ನಿಧನದ ನಂತರ ತಿಳಿದು ಬಂದಿತು.

೧೮೪೦ ರ ದಶಕದ ಮಧ್ಯಭಾಗದಲ್ಲಿ, ಮೇರಿ ಶೆಲ್ಲಿ ಮೂರು ಪ್ರತ್ಯೇಕ ಬ್ಲ್ಯಾಕ್‌ಮೇಲರ್‌ಗಳನ್ನು ಎದುರಿಸಬೇಕಾಯಿತು.  ೧೮೪೫ರಲ್ಲಿ, ಪ್ಯಾರಿಸ್ನಲ್ಲಿ ಭೇಟಿಯಾದ ಗಟ್ಟೆಸ್ಚಿ ಎಂಬ ಇಟಾಲಿಯನ್ ರಾಜಕೀಯವಾಗಿ ಗಡಿಪಾರಾಗಿದ್ದ ವ್ಯಕ್ತಿಯೋರ್ವ ಅವಳು ಬರೆದ ಪತ್ರಗಳನ್ನು ಪ್ರಕಟಿಸುವುದಾಗಿ ಬೆದರಿಕೆ ಹಾಕಿದನು.ಮೇರಿಯ ಮಗನ ಸ್ನೇಹಿತರೊಬ್ಬರು ಪೊಲೀಸ್ ಮುಖ್ಯಸ್ಥರಿಗೆ ಲಂಚ ನೀಡಿ ಗಟ್ಟೆಸ್ಚಿಯ ಪತ್ರಗಳನ್ನು ವಶಪಡಿಸಿಕೊಂಡರು, ಪತ್ರಗಳನ್ನು ನಂತರ ನಾಶಪಡಿಸಲಾಯಿತು. ಸ್ವಲ್ಪ ಸಮಯದ ನಂತರ ಜಿ. ಬೈರನ್ ಎಂದು ತನ್ನನ್ನು ತಾನು ಕರೆದುಕೊಳ್ಳುವ, ದಿವಂಗತ ಲಾರ್ಡ್ ಬೈರನ್ ಅವರ ನ್ಯಾಯಸಮ್ಮತವಲ್ಲದ ಮಗನಂತೆ ನಟಿಸುವ ವ್ಯಕ್ತಿಯಿಂದ ತಾನು ಮತ್ತು ಪರ್ಸಿ ಬೈಸ್ಶೆ ಶೆಲ್ಲಿ ಬರೆದ ಕೆಲವು ಪತ್ರಗಳನ್ನು ಖರೀದಿಸಿದರು.  ೧೮೪೫ರಲ್ಲಿ, ಪರ್ಸಿ ಬೈಸ್ಶೆ ಶೆಲ್ಲಿಯ ಸೋದರಸಂಬಂಧಿ ಥಾಮಸ್ ಮೆಡ್ವಿನ್ಪರ್ಸಿ ಎಂಬಾತನು ಪರ್ಸಿ ಶೆಲ್ಲಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಜೀವನಚರಿತ್ರೆಯನ್ನು ಬರೆದಿದ್ದೇನೆ ಎಂದು ಹೇಳಿಕೊಂಡು ಮೇರಿಯವರನ್ನು ಸಂಪರ್ಕಿಸಿದನು. ೨೫೦ ಡಾಲರ್ ನೀಡಿದರೆ ಅದನ್ನು ಪ್ರಕಟಿಸುವುದಿಲ್ಲವೆಂದು ಹೇಳಿದಾಗ ಮೇರಿ ಶೆಲ್ಲಿ ಹಣ ಕೊಡಲು ನಿರಾಕರಿಸಿದರು.

೧೮೪೮ರಲ್ಲಿ ಅವರ ಮಗ ಪರ್ಸಿ ಫ್ಲಾರೆನ್ಸ್, ಜೇನ್ ಗಿಬ್ಸನ್ ಸೇಂಟ್ ಜಾನ್ ಅವರನ್ನು ವಿವಾಹವಾದರು. ಮದುವೆಯ ನಂತರದ ಜೀವನ  ಸಂತೋಷಕರವಾಗಿತ್ತು. ಮೇರಿ ಶೆಲ್ಲಿ ಮತ್ತು ಜೇನ್ ಪರಸ್ಪರ ಇಷ್ಟಪಟ್ಟರು. ಮೇರಿ ತನ್ನ ಮಗ ಮತ್ತು ಸೊಸೆಯೊಂದಿಗೆ ಫೀಲ್ಡ್ ಪ್ಲೇಸ್, ಸಸೆಕ್ಸ್‌ಗಳಲ್ಲಿ ಓಡಾಡಿ ಕೊನೆಗೆ ಶೆಲ್ಲಿಯ ಪೂರ್ವಜರ ಮನೆ ಮತ್ತು ಲಂಡನ್‌ನ ಚೆಸ್ಟರ್ ಸ್ಕ್ವೇರ್ನ್‌ನಲ್ಲಿ ವಾಸಿಸಲಾರಂಭಿಸಿದರು. ವಿದೇಶ ಪ್ರವಾಸಗಳಲ್ಲಿ ಮಗ-ಸೊಸೆಯೊಂದಿಗೆ ಜೊತೆಯಾದ ಮೇರಿ ಶೆಲ್ಲಿಯ ಕೊನೆಯ ವರ್ಷಗಳು ಅನಾರೋಗ್ಯಕರವಾಗಿದ್ದವು. ೧೮೩೯ರಿಂದ ತಲೆನೋವು ಮತ್ತು ದೇಹದ ಬೇರೆಬೇರೆ ಭಾಗಗಳಲ್ಲಿ ಪಾರ್ಶ್ವವಾಯುವಿನಿಂದ ನರಳಲಾರಂಭಿಸಿದರು. ೧ ಫೆಬ್ರವರಿ ೧೮೫೧ ರಂದು, ಚೆಸ್ಟರ್ ಸ್ಕ್ವೇರ್ನ್‌ನಲ್ಲಿ ವೈದ್ಯರು ಬ್ರೈನ್ ಟ್ಯೂಮರ್ ಎಂದು ಶಂಕಿಸಿದರು. ತನ್ನ ಐವತ್ತಮೂರನೇ ವಯಸ್ಸಿನಲ್ಲಿ ನಿಧನರಾದ ಮೇರಿ ಶೆಲ್ಲಿ ತನ್ನ ತಾಯಿ ಮತ್ತು ತಂದೆಯೊಂದಿಗೆ ಸಮಾಧಿ ಮಾಡಲು ಕೇಳಿಕೊಂಡಿದ್ದಾರೆ ಎಂದು ಸೊಸೆ ಜೇನ್ ಶೆಲ್ಲಿ ಹೇಳಿದರಾದರೂ  ಪರ್ಸಿ ಮತ್ತು ಜೇನ್, ಸೇಂಟ್ ಪ್ಯಾನ್ಕ್ರಾಸ್‌ನಲ್ಲಿರುವ ಸ್ಮಶಾನವನ್ನು "ಭಯಾನಕ" ಎಂದು ನಿರ್ಣಯಿಸಿ ಬೋರ್ನ್ಮೌತ್‌ನ ಸೇಂಟ್ ಪೀಟರ್ಸ್ ಚರ್ಚ್‌ನ ಬೋಸ್ಕೊಂಬ್‌ನಲ್ಲಿರುವ ಅವರ ಹೊಸ ಮನೆಯ ಬಳಿ ಹೂಳಲು ನಿರ್ಧರಿಸಿದರು. ಮೇರಿ ಶೆಲ್ಲಿಯವರ ಮರಣದ ಮೊದಲ ವಾರ್ಷಿಕೋತ್ಸವದಂದು ಅವರ ಬಾಕ್ಸ್-ಡೆಸ್ಕ್ ಅನ್ನು ತೆರೆದಾಗ ಒಳಗೆ ತಮ್ಮ ತೀರಿಹೋದ ಮಕ್ಕಳ ಕೂದಲು, ಪರ್ಸಿ ಬೈಶೆ ಶೆಲ್ಲಿಯೊಂದಿಗೆ ಹಂಚಿಕೊಂಡ ಒಂದು ನೋಟ್ ಬುಕ್ ಮತ್ತು ಗಂಡನ ಪದ್ಯದ ಒಂದು ಪುಟ, ಗಂಡನ ಚಿತಾಭಸ್ಮವನ್ನು ಪ್ರೀತಿಯಿಂದ ಹೊಂದಿರುವ ರೇಷ್ಮೆ ಬಟ್ಟೆಯಿಂದ ಸುತ್ತಿಟ್ಟು ಬೀಗ ಹಾಕಿದ್ದು ಕಾಣಿಸಿತು.  

"ನನ್ನ ಪತಿ ಮೊದಲಿನಿಂದಲೂ, ನಾನು ನನ್ನ ಪೋಷಕರಿಗೆ ಅರ್ಹಳೆಂದು ಸಾಬೀತುಪಡಿಸಬೇಕು ಮತ್ತು ನನ್ನನ್ನು ಖ್ಯಾತಿಯ ಪುಟಕ್ಕೆ ಸೇರಿಸಬೇಕು ಎಂದು ಬಹಳ ಆಸಕ್ತಿ ಹೊಂದಿದ್ದರು. ಸಾಹಿತ್ಯಿಕ ಖ್ಯಾತಿಯನ್ನು ಪಡೆಯಲು ನನ್ನನ್ನು  ಪ್ರಚೋದಿಸುತ್ತಿದ್ದರು." ಎಂದು ಮೇರಿ ಪರ್ಸಿ ಶೆಲ್ಲಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

         ತಾಯಿ ವೋಲ್‌ಸ್ಟೋನ್‌ಕ್ರಾಪ್ಟ್‌ರಂತೆಯೇ ವೈಯಕ್ತಿಕ ಜೀವನದಲ್ಲಿಯೂ ಹಲವಾರು ಪ್ರಯೋಗಗಳನ್ನು ಮಾಡಿದ ಮೇರಿ ಶೆಲ್ಲಿ ಅವುಗಳನ್ನು ಜಾಗರೂಕತೆಯಿಂದ ನಿಭಾಯಿಸಿದರು. ಆದರೆ ಅವರು ನಿಜವಾಗಿ ಪ್ರೇಮಿಸಿದ್ದು ಮಾತ್ರ ಪರ್ಸಿ ಶೆಲ್ಲಿಯವರನ್ನು. ಹೀಗಾಗಿ ಅವರ ವಿವಾಹೇತರ ಪ್ರಯೋಗಗಳು ಅಂತಹ ಪ್ರಾಮುಖ್ಯತೆ ಪಡೆಯಲಿಲ್ಲ.  ಆದರೆ ವೈಜ್ಞಾನಿಕ ಕಾದಂಬರಿಗಳಿಗೆ ಅವರು ಹಾಕಿಕೊಟ್ಟ ಬುನಾದಿ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. 
lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220826_4_7