Sirikadalu

Sirikadalu
ಶ್ರೀದೇವಿ ಕೆರೆಮನೆ ಬರೆಹಗಳು

Thursday, 28 July 2022

ಬರಹಗಾರ್ತಿ ಎಂದು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ನಾಚಿಕೆ ಪಡುತ್ತಿದ್ದ ಆನ್ ರಾಡ್‌ಕ್ಲಿಪ್.

 
     

ಬರಹಗಾರ್ತಿ ಎಂದು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ನಾಚಿಕೆ ಪಡುತ್ತಿದ್ದ ಆನ್ ರಾಡ್‌ಕ್ಲಿಪ್.

             ೧೮ನೇ ಶತಮಾನದ ಇಂಗ್ಲೀಷ್ ಗೋಥಿಕ್ ಸಾಹಿತ್ಯದ ಕೆಲವೇ ಕೆಲವು ಪ್ರಮುಖ ಸಾಹಿತಿಗಳಲ್ಲಿ  ಮುಂಚೂಣಿಯಲ್ಲಿರುವ ಕಾದಂಬರಿಕಾರ್ತಿ  ಆನ್ ರಾಡ್‌ಕ್ಲಿಪ್ ೯ ಜುಲೈ ೧೭೬೪ ರಲ್ಲಿ ಲಂಡನ್‌ನಲ್ಲಿ ಜನಿಸಿದರು. ವ್ಯಾಪಾರಿಯಾಗಿದ್ದ ತಂದೆ ವಿಲಿಯಂ ವಾರ್ಡ್ ಹಾಗೂ ತಾಯಿ ಆನ್ ವಾರ್ಡ್‌ರವರ ಒಬ್ಬಳೆ ಮಗಳಾಗಿದ್ದ ಆನ್ ರಾಡ್‌ಕ್ಲಿಪ್  ಬರೆದದ್ದು ೨೦ ಕ್ಕೂ ಹೆಚ್ಚಿನ ಕೃತಿಗಳು. ತನ್ನ ೨೩ನೇ ವಯಸ್ಸಿನಲ್ಲಿ ಅಂದರೆ ೧೭೮೭ರಲ್ಲಿ  ವಿಲಿಯಂ ರಾಡ್‌ಕ್ಲಿಪ್‌ರನ್ನು ವಿವಾಹವಾದ ಆನ್‌ರವರ ವೈಯುಕ್ತಿಕ ಜೀವನದ ಬಗ್ಗೆ ಹೆಚ್ಚಿಗೆ ಏನೂ ತಿಳಿದುಬಂದಿಲ್ಲ.  ೧೭೯೦ ರ ದಶಕದಲ್ಲಿ ಮತ್ತು ೧೯ ನೇ ಶತಮಾನದ ಮೊದಲಾರ್ಧದಲ್ಲಿ ರಾಡ್‌ಕ್ಲಿಫ್ ಅವರ ದೊಡ್ಡ ಜನಪ್ರಿಯತೆಯ ಹೊರತಾಗಿಯೂ, ಅವರ ಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ಸ್ವಲ್ಪವೇ ತಿಳಿದಿದೆ;  ರಾಡ್‌ಕ್ಲಿಫ್‌ನ ಮರಣದ ಸುಮಾರು ೫೦ ವರ್ಷಗಳ ನಂತರ ಕವಿ ಕ್ರಿಸ್ಟಿನಾ ರೊಸೆಟ್ಟಿ ಜೀವನಚರಿತ್ರೆಯನ್ನು ಬರೆಯಲು ಪ್ರಯತ್ನಿಸಿದಾಗ ಯಾವುದೇ ಅಧಿಕೃತ ಮಾಹಿತಿ ಇಲ್ಲದೆ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

 ರಾಡ್‌ಕ್ಲಿಫ್‌ನ ಮರಣದ ಸಮಯದಲ್ಲಿ ಎಡಿನ್‌ಬರ್ಗ್ ರಿವ್ಯೂ ರೆಕಾರ್ಡ್‌ನಲ್ಲಿ "ಲೇಖಕಿಯು ತನ್ನನ್ನು ವೇವರ್ಲಿ ಲೇಖಕರಂತೆ ಅಜ್ಞಾತವಾಗಿ ಇಟ್ಟುಕೊಂಡಿದ್ದಳು; ಶೀರ್ಷಿಕೆ ಪುಟದಲ್ಲಿ ಅವಳ ಹೆಸರನ್ನು ಹೊರತುಪಡಿಸಿ ಬೇರೇನೂ ತಿಳಿದಿರಲಿಲ್ಲ. ಅವಳು ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಅಥವಾ ಬೆರೆಯಲಿಲ್ಲ  ಖಾಸಗಿ ಬದುಕನ್ನು ಹೆಚ್ಚು ಗೌಪ್ಯವಾಗಿಟ್ಟಿದ್ದಳು., ಆದರೆ ತನ್ನ ಒಂಟಿಯಾದ ಸ್ವರಗಳನ್ನು ಹಾಡುವ ಸುಂದರವಾದ ಹಕ್ಕಿಯಂತೆ ತನ್ನನ್ನು ತಾನು ಸಾಮಾಜಿಕ ಜೀವನದಿಂದ ದೂರವಿಟ್ಟುಕೊಂಡಿದ್ದಳು.' ಎಂದು ನಮೂದಿಸಲಾಗಿದೆ. ಹೀಗಾಗಿ ಬಾಲ್ಯ ಯೌವನದ ಕುರಿತು ಹೆಚ್ಚಿಗೆ ಮಾಹಿತಿಗಳು ಲಭ್ಯವಿಲ್ಲದಿದ್ದುದರಿಂದ  ಆರ್ಥಿಕವಾಗಿ ಸದೃಢವಾದ ಕೌಟುಂಬಿಕ ಹಿನ್ನಲೆಯಿಂದ ಬಂದಂತಹ ಇವರ ಶಿಕ್ಷಣ ಮನೆಯಲ್ಲಿಯೇ ನಡೆದಿರಬಹುದು ಎಂದು ಊಹಿಸಲಾಗಿದೆ.

                 ಲಾರ್ಡ್ ಬೈರನ್, ಸಾಮ್ಯುಯೆಲ್ ಟೇಲರ್, ಕೋಲ್ರಿಡ್ಜ್, ಕ್ರಿಸ್ಟೀನಾ ರೋಸೆಟ್ಟಿ ಮುಂತಾದ ಅದ್ಭುತ ಲೇಖಕರ ಅಭಿಮಾನದ ದೇವತೆಯಾಗಿ ಕಂಗೊಳಿಸಿ ಅವರನ್ನು  ಹಿಂಬಾಲಕರನ್ನಾಗಿ ಪಡೆದುಕೊಂಡ ಆನ್ ಸರಿಸುಮಾರು ಒಂದು ತಲೆಮಾರಿನ ಲೇಖಕರನ್ನು ತನ್ನ ಪ್ರಭಾವಲಯದೊಳಗೆ ಸೆಳೆದುಕೊಂಡಂತಹ ಬರವಣಿಗೆಯ ಶಕ್ತಿಯನ್ನು ಹೊಂದಿದ್ದರು. ರೋಮ್ಯಾಂಟಿಸಿಸಂ ಲೇಖಕರಲ್ಲಿ ಇವರ ಪ್ರಭಾವಕ್ಕೆ ಒಳಗಾಗದ ಬರಹಗಾರರು ಇಲ್ಲವೇ ಇಲ್ಲ ಎಂಬಷ್ಟು ವಿರಳ.  
ಅದರಲ್ಲೂ ಗೋಥಿಕ್ ಸಾಹಿತ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ ಬರೆಹಗಾರರಲ್ಲಿ ಇವರು ಅಗ್ರಗಣ್ಯರು. ತನ್ನ ಮರಣದ ನಂತರವೂ ಸುಮಾರು ಇಪ್ಪತ್ತು ವರ್ಷಗಳ ಕಾಲ ತನ್ನ ಮುಂದಿನ ತಲೆಮಾರಿನ ಯುವ ಬರಹಗಾರರನ್ನು ಪ್ರಚೋದಿಸಿದಂತಹ ಬರಹಗಾರ್ತಿ ಇವರು.  ೧೭೯೦ರ ದಶಕದಲ್ಲಿ ಒಡೆದು ಹೋದ ದೊಡ್ಡ ದೊಡ್ಡ ಮಧ್ಯಕಾಲೀನ ಗೋಥಿಕ್ ಶೈಲಿಯ ಕಟ್ಟಡಗಳನ್ನು ತಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡು ಆ ಕಟ್ಟಡಗಳ ಭಗ್ನಾವಶೇಷಗಳನ್ನು ಕಾದಂಬರಿಯಲ್ಲಿ ಭಯ ಹುಟ್ಟಿಸಲು ಪ್ರಚೋದನಾತ್ಮಕವಾಗಿ  ಬಳಸಿ ಬರೆಯುವಂತಹ ಸಾಹಿತ್ಯ ಕೃತಿಗಳನ್ನು ಗೋಥಿಕ್ ಸಾಹಿತ್ಯ ಎಂದು ಕರೆಯಲಾಗುತ್ತದೆ.

       ಕಾದಂಬರಿಗಳಲ್ಲಿನ ಭಯ ಹುಟ್ಟಿಸುವ ಅಂಶಗಳು ಹಾಗೂ ಕುತೂಹಲ ಕೆರಳಿಸುವ ಘಟನೆಗಳು ಆನ್ ರಾಡ್‌ಕ್ಲಿಪ್‌ರವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತು. ಅದರಲ್ಲೂ ಗೋಥಿಕ್ ಶೈಲಿಯ ಈ ಕಾದಂಬರಿಗಳಲ್ಲಿ ಬರುವ ರೋಚಕ ವಿವರಣೆಗಳು ಆ ಕಾಲದ ಓದುಗರನ್ನು ಖುರ್ಚಿಯ ತುದಿಯಲ್ಲಿ ಕುಳಿತು ಓದುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದವು. ಭಯ ಹುಟ್ಟಿಸುವ ಸಂವೇದನೆಗಳ ಜೊತೆ ಜೊತೆಗೆ ಬರುವ ಪ್ರಣಯ ಪ್ರಸಂಗಗಳು ಕಾದಂಬರಿಯನ್ನು ಒಮ್ಮೆ ಓದಲು ಕೈಗೆತ್ತಿಕೊಂಡರೆ ಕೆಳಗೆ ಇಡದಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದವು

      ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಇಂಗ್ಲೆಂಡಿನಿಂದ ಹೊರಗೆ ಅಂದರೆ ಹಾಲೆಂಡ್ ಹಾಗೂ ಜರ್ಮನಿಗೆ ಪ್ರವಾಸ ಹೋಗಿದ್ದ ಆನ್ ರಾಡ್‌ಕ್ಲಿಪ್ ಕಾದಂಬರಿಗಳಲ್ಲಿ ಬರುವ ಸ್ಥಳ ವಿವರಣೆ ಮಾತ್ರ ಅತ್ಯದ್ಭುತವಾದದ್ದು. ತನ್ನ ಸಹವರ್ತಿಗಳಿಂದ ಪ್ರಯಾಣದ ವಿವರಣೆಗಳನ್ನು ಕೇಳಿ ತಿಳಿದುಕೊಂಡು ಅದನ್ನು ತಮ್ಮ ಕಾದಂಬರಿಗಳಲ್ಲಿ ಅಚ್ಚುಕಟ್ಟಾಗಿ ಬರೆಯುತ್ತಿದ್ದರು.
            ಸಂಗೀತ ಮತ್ತು ಕಲೆಯ ಬಗ್ಗೆ ಜ್ಞಾನವನ್ನು ಹೊಂದಿದ್ದ ಆನ್ನಿ ರಾಡ್‌ಕ್ಲಿಪ್ ಕೃತಿಗಳು  ಪೂರ್ವ-ರೊಮ್ಯಾಂಟಿಕ್ ಇಂಗ್ಲಿಷ್ ಕವಿಗಳ ಸಾಹಿತ್ಯದೊಂದಿಗೆ ಮತ್ತು ಷೇಕ್ಸ್ಪಿಯರ್‌ನ ನಾಟಕಗಳು ಮತ್ತು ಕವಿತೆಗಳೊಂದಿಗೆ ಬಹಳಷ್ಟು ಹೋಲಿಕೆಯಿದೆ.

  ಅವರ ಆರಂಭಿಕ ಬೆಳವಣಿಗೆಯ ಮೇಲೆ ಗಮನಾರ್ಹ ಪ್ರಭಾವ ಬೀರಿದ ವ್ಯಕ್ತಿ, ಥಾಮಸ್ ಬೆಂಟ್ಲಿ, ಅನೇಕ ವಿಷಯಗಳ ಕುರಿತು ಆಸಕ್ತಿ ಹೊಂದಿದ ವ್ಯಕ್ತಿ. ರಾಡ್‌ಕ್ಲಿಫ್‌ನ ಚಿಕ್ಕಮ್ಮ, ಹನ್ನಾ ಓಟ್ಸ್‌ರ ಗಂಡ. ಬೆಂಟ್ಲಿ ತನ್ನ ಸಾಹಿತ್ಯ ಮತ್ತು ವೈಜ್ಞಾನಿಕ ಜಗತ್ತಿನ ಅನೇಕ ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದರು. ಆ ಸಮಯದಲ್ಲಿ ಇನ್ನೂ ಚಿಕ್ಕವರಾಗಿದ್ದ, ರಾಡ್‌ಕ್ಲಿಫ್‌ರನ್ನು ಉತ್ತೇಜಿಸುತ್ತ ಅವರ ಬರವಣಿಗೆಯನ್ನು  ಪ್ರೋತ್ಸಾಹಿಸಿದರು. ಆದರೂ ಅವರ ಕಾದಂಬರಿಗಳು ಪೂರ್ಣಪ್ರಮಾಣದಲ್ಲಿ ಪ್ರಗತಿ ಕಂಡಿದ್ದು ಮದುವೆಯಾದ ನಂತರವೇ.

ಅವರ ಮೊದಲ ಕಾದಂಬರಿ, 'ದ ಕ್ಯಾಸಲ್ಸ್ ಆಫ್ ಅಥ್ಲಿನ್ ಮತ್ತು ಡನ್‌ಬೇನ್' ಅವರ ಮದುವೆಯಾದ ಎರಡು ವರ್ಷಗಳ ನಂತರ ಪ್ರಕಟಗೊಂಡಿತು. 
 ಒಂದು ವರ್ಷದೊಳಗೆ, 'ಎ ಸಿಸಿಲಿಯನ್ ರೊಮ್ಯಾನ್ಸ್' ಮತ್ತು ಒಂದು ವರ್ಷದ ನಂತರ 'ದಿ ರೊಮ್ಯಾನ್ಸ್ ಆಫ್ ದಿ ಫಾರೆಸ್ಟ್' ಅನ್ನು ಪ್ರಕಟಿಸಿದರು. ಆದರೆ  ಈ ಮೊದಲ ಮೂರು ಕಾದಂಬರಿಗಳು ಅವರ ಹೆಸರಿಲ್ಲದೆ ಅನಾಮಧೇಯವಾಗಿ ಪ್ರಕಟವಾದವು. 

       ಆದರೆ 'ದಿ ರೊಮ್ಯಾನ್ಸ್ ಆಫ್ ದಿ ಫಾರೆಸ್ಟ್' ಕೃತಿಯ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿದಾಗ ರಾಡ್‌ಕ್ಲಿಫ್ ತನ್ನ ಹೆಸರನ್ನು ಶೀರ್ಷಿಕೆ ಪುಟದಲ್ಲಿ ನಮೂದಿಸಿ ಸಾಹಿತ್ಯ ಲೋಕಕ್ಕೆ ತನ್ನನ್ನ ಅನಾವರಣಗೊಳಿಸಿ ಕೊಂಡರು.  ೧೭೯೪ ರಲ್ಲಿ ಪ್ರಕಟವಾದ ಅವರ ನಾಲ್ಕನೇ ಕಾದಂಬರಿ, 'ದಿ ಮಿಸ್ಟರೀಸ್ ಆಫ್ ಉಡಾಲ್ಫೋ' ಬ್ರಿಟನ್‌ನಲ್ಲಿ ಮಾತ್ರವಲ್ಲದೆ ಇಡೀ ಯುರೋಪಿನಾದ್ಯಂತ ಅವಳನ್ನು ಪರಿಚಯಿಸಿ ಅಪಾರ ಕೀರ್ತಿ ತಂದುಕೊಟ್ಟಿತು.  ಆ ಸಮಯದಲ್ಲಿ ಅವರು ಅತ್ಯಂತ ಜನಪ್ರಿಯ ಬರಹಗಾರರೆನಿಸಿಕೊಂಡಿದ್ದರು.

           ಈ ಕಾದಂಬರಿಯು ಅನಾಥ ಎಮಿಲಿ ಸೇಂಟ್ ಆಬರ್ಟ್ ಹೇಗೆ ರಕ್ಷಕರಿಂದ ಕ್ರೌರ್ಯಕ್ಕೆ ಒಳಗಾಗುತ್ತಾಳೆ, ಅವಳ ಅದೃಷ್ಟವನ್ನು ಕಳೆದುಕೊಳ್ಳುವ ಬೆದರಿಕೆಯನ್ನು ಒಡ್ಡಲಾಗುತ್ತದೆ, ಬೇಧಿಸಲಾಗದ ಕೋಟೆಗಳಲ್ಲಿ ಬಂಧಿತಳಾಗಿದ್ದರೂ ಅಂತಿಮವಾಗಿ ಬಿಡುಗಡೆಗೊಂಡು ತನ್ನ ಪ್ರೇಮಿಯೊಂದಿಗೆ ಒಂದಾಗುವ ನಡುವಣ ಅವಧಿಯಲ್ಲಿ  ವಿಚಿತ್ರವಾದ ಮತ್ತು ಭಯಾನಕ ಘಟನೆಗಳು ಉಡಾಲ್ಫೋದ ಒಂಟಿ ಕೋಟೆಯ ಗೀಳುಹಿಡಿದ ವಾತಾವರಣದಲ್ಲಿ ನಡೆಯುವುದನ್ನು ಚಿತ್ರಿಸುತ್ತದೆ.

          ಅದೇ ವರ್ಷ, ಆನ್ನಿ ರಾಡ್‌ಕ್ಲಿಫ್ ತನ್ನ ಪತಿಯೊಂದಿಗೆ ಹಾಲೆಂಡ್ ಮತ್ತು ಜರ್ಮನಿಯ ಮೂಲಕ ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರವಾಸಕ್ಕೆ ಹೊರಟರಾದರೂ ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗಲು ಅವರಿಂದ ಸಾಧ್ಯವಾಗಲಿಲ್ಲ. ಗಡಿ ಪೋಸ್ಟ್‌ನಲ್ಲಿರುವ ಗ್ಯಾರಿಸನ್‌ನ ಆಸ್ಟ್ರಿಯನ್ ಕಮಾಂಡರ್ ಆನ್ನಿಯವರನ್ನು ಬ್ರಿಟೀಷ್ ಎಂದು ಒಪ್ಪಿಕೊಳ್ಳದಿರುವುದರಿಂದ ಸ್ವಿಡ್ಜರ್ ಲ್ಯಾಂಡ್ ಒಳಗೆ ಪ್ರವೇಶವನ್ನು ನಿರಾಕರಿಸಲಾಯಿತು. ಆದಾಗಿಯೂ ಈ ಪ್ರವಾಸ ಅವರ ಬರವಣಿಗೆಯ ಮೇಲೆ ಅಪಾರ ಪರಿಣಾಮವನ್ನುಂಟುಮಾಡಿತು. ರಾಟರ್‌ಡ್ಯಾಮ್, ಡೆಲ್ಫ್ಟ್ ಮತ್ತು ಹಾಲೆಂಡ್‌ನ ಇತರ ಪ್ರಮುಖ ಪಟ್ಟಣಗಳಿಗೆ ಭೇಟಿ ನೀಡಿ ಅಲ್ಲಿನ ಡಚ್ ರ ಶುಚಿತ್ವದಿಂದ  ಪ್ರಭಾವಿತರಾದರು.  ಆದರೆ ಜರ್ಮನಿಯ ವಿಭಿನ್ನ ಚಿತ್ರಣ ಅವರ ಮನಸ್ಸನ್ನು ಘಾಸಿಗೊಳಿಸಿತು. ಭಿಕ್ಷೆ ಬೇಡಲು ಬರಿಗಾಲಿನಿಂದ ಓಡುವ ಮಕ್ಕಳು, ಕೃಷಿ ಮಾಡದೆ ಪಾಳು ಬಿದ್ದ ಭೂಮಿ, ಪ್ರಯಾಣಿಸುತ್ತಿದ್ದಾಗ ಆಗಾಗ ಎದುರಾಗುತ್ತಿದ್ದ ಗಾಯಗೊಂಡ ಸೈನಿಕರು, ಹತಾಶ ಫ್ರೆಂಚ್ ಯುದ್ಧಕೈದಿಗಳ ಗುಂಪುಗಳು ಅವರನ್ನು ವಿಚಲಿತಗೊಳಿಸಿತು.  
          ಪ್ರಯಾಣದ ಉದ್ದಕ್ಕೂ ಜರ್ನಲ್‌ನಲ್ಲಿ ಸಾಕಷ್ಟು ಟಿಪ್ಪಣಿಗಳನ್ನು ಮಾಡಿಕೊಂಡಿದ್ದ ಅವರು ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ 'ಎ ಜರ್ನಿ ಮೇಡ್ ಇನ್ ದಿ ಸಮ್ಮರ್ ಆಫ್ ೧೭೯೪'ನ್ನು ಅದರ ಮರುವರ್ಷ ಪ್ರಕಟಿಸಿದರು.  
  ಇದಾದ ಎರಡು ವರ್ಷಗಳ ನಂತರ ಅವರ ಸಾಹಿತ್ಯಿಕ ಜೀವನದ ಅತಿ ಮುಖ್ಯವಾದ ಕಾದಂಬರಿಯಾದ 'ದಿ ಇಟಾಲಿಯನ್'  ಪ್ರಕಟವಾಯಿತು.
        ಈ ಕಾದಂಬರಿಯ ಸಂಭಾಷಣೆ ಮತ್ತು ಕಥಾವಸ್ತುವಿನ ರಚನೆಯು ಅದ್ಭುತವಾಗಿದೆ.ಇದರ ಖಳನಾಯಕ, ಷೆಡೋನಿ, ಬೃಹತ್ ಮೈಕಟ್ಟು ಹೊಂದಿದ ಪಾಪಿಷ್ಟ. ಮಾನಸಿಕ ಒಳನೋಟದಿಂದ ರಚಿಸಲಾದ ಈ ಕಾದಂಬರಿ ಭಯಾನಕ ಅನುಭವಗಳನ್ನು ನೀಡುತ್ತದೆ.
     ಮುಂದಿನ ಎಂಟು ವರ್ಷಗಳಲ್ಲಿ ಆರು ಪುಸ್ತಕಗಳನ್ನು ಪ್ರಕಟಿಸಿದ ಆನ್ನಿ ಆನ್ನಿ ರಾಡ್‌ಕ್ಲಿಪ್ ೩೩ ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಪುಸ್ತಕ ಪ್ರಕಟಣೆಯನ್ನು ನಿಲ್ಲಿಸಿದರು.                  
             ೧೮೧೬ ರಲ್ಲಿ ಸ್ಲಿಮ್ ಕವನಗಳನ್ನು ಬರೆದರು. ಕೊನೆಯ ಕಾದಂಬರಿ 'ಗ್ಯಾಸ್ಟನ್ ಡಿ ಬ್ಲಾಂಡೆವಿಲ್ಲೆ' ಅವರ ಮರಣದ ನಂತರ ಮೂರು ವರ್ಷಗಳವರೆಗೂ ಪ್ರಕಟವಾಗಲಿಲ್ಲ.  

ಅವರು ಪುಸ್ತಕ ಪ್ರಕಟಣೆಯನ್ನು ಏಕೆ ನಿಲ್ಲಿಸಿದರು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ.  'ಇಟಾಲಿಯನ್ ಬಗ್ಗೆ ಪ್ರತಿಕೂಲ ಕಾಮೆಂಟ್‌ಗಳಿಂದ ಅಸಮಾಧಾನಗೊಂಡಿರಬಹುದು ಎಂಬುದು ಒಂದು ಊಹೆಯಾದರೂ ಟೀಕೆಗಳಿಗೆ ಹೆಚ್ಚು ಸಂವೇದನಾಶೀಲರಾಗಿದ್ದರೆಂಬುಂದು ಸತ್ಯವಾದ ವಿಷಯ. ಬ್ಲೂಸ್ಟಾಕಿಂಗ್ ಎಲಿಜಬೆತ್ ಕಾರ್ಟರ್ ಬರೆದ ಪತ್ರದಲ್ಲಿ ಅವರ ಬಗ್ಗೆ ಮುಗ್ಧವಾಗಿ ಬರೆದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು, ಜೋನ್ನಾ ಬೈಲ್ಲಿಯ ಅತ್ಯಂತ ಯಶಸ್ವಿ 'ಪ್ಲೇಸ್ ಆನ್ ದಿ ಪ್ಯಾಶನ್ಸ್'ನಲ್ಲಿ ತನ್ನ ಕುರಿತಾದ ತಪ್ಪಾದ ಆರೋಪಗಳಿಗೆ ತುಂಬಾ ಅಸಮಾಧಾನಗೊಂಡಿದ್ದನ್ನು ಗಮನಿಸಿದರೆ ಈ ಹೇಳಿಕೆ ನಿಜವಿರಬಹುದು ಎನ್ನಿಸುತ್ತದೆ.  ಕೆಲವು ವಿಮರ್ಶಕರು 'ಇಟಾಲಿಯನ್' ಅನ್ನು 'ದ ಮಿಸ್ಟರೀಸ್ ಆಫ್ ಉಡಾಲ್ಫೋ'ಗೆ ಹೋಲಿಸಿ ಋಉಣಾತ್ಮಕವಾಗಿ ಬರೆದಿದ್ದರೂ ಅದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಇದಲ್ಲದೆ ಇವರ ಕಾದಂಬರಿಗಳ ಅಪಾರ ಜನಪ್ರೀಯತೆಯಿಂದಾಗಿ ಹಲವಾರು ಲೇಖಕರು ಅವರನ್ನು ಅನುಕರಿಸಲು ಪ್ರಯತ್ನಿಸಿ ಕೀಳು ದರ್ಜೆಯ ಸಾಹಿತ್ಯವನ್ನು ರಚಿಸುತ್ತಿದ್ದುದೂ ಅವರ ಬೇಸರಕ್ಕೆ ಕಾರಣವಾಗಿತ್ತು. ಬಹುಮುಖ್ಯವಾಗಿ ಅವರ ಸಂಸಾರದ ಆರ್ಥಿಕ ಸ್ಥಿತಿ ಸುಧಾರಿಸಿ ಇವರ ಕಾದಂಬರಿಗಳಿಂದ ಬರುವ ಹಣದ ಮೇಲೆ ಅವಲಂಭಿತವಾಗಿರಬೇಕಾಗಿರಲಿಲ್ಲ. ಮಕ್ಕಳೂ ಇಲ್ಲದ್ದರಿಂದ ಭವಿಷ್ಯಕ್ಕಾಗಿ ಹಣ ಕೂಡಿಡುವ ಅನಿವಾರ್‍ಯತೆ ಇರಲಿಲ್ಲ. ಹೀಗಾಗಿ ತನ್ನ ಬರವಣಿಗೆಗಳನ್ನು ಪ್ರಕಾಶಕರಿಗೆ ನೀಡುವುದನ್ನು ನಿಲ್ಲಿಸಿರಬಹುದು.

        ಆ ಕಾಲದ ಇತರ ಮಹಿಳಾ ಬರಹಗಾರರಿಗಿಂತ ಭಿನ್ನವಾಗಿ ರಾಡ್‌ಕ್ಲಿಫ್ ಯಶಸ್ಸು ಕಂಡರು. ತನ್ನ ಬರವಣಿಗೆ ಹಾಗು ಹೆಣ್ಣು ಎಂಬ ಕಾರಣಕ್ಕೆ ತೋರುವ ತಿರಸ್ಕಾರ ಎಲ್ಲವನ್ನೂ ಸಮನ್ವಯಗೊಳಿಸಿದ ಆನಿ ರಾಡ್‌ಕ್ಲಿಪ್‌ಗೆ ಗಂಡನ ಅಪಾರ ಬೆಂಬಲವಿತ್ತು. ೧೭೯೦ ರ ದಶಕದಲ್ಲಿ ಮಹಿಳೆಯರು ಹಿಂದಿಗಿಂತಲೂ ಸಾಹಿತಿಗಳೆಂದು ಸಮಾಜದಿಂದ ಅಂಗೀಕರಿಸಲ್ಪಟ್ಟಿದ್ದರೂ, ಅವರ ಕೃತಿಗಳನ್ನು, ವಿಶೇಷವಾಗಿ ಕಾಲ್ಪನಿಕ ಬರಹಗಳನ್ನು ಪುರುಷ ವಿಮರ್ಶಕರು ಕಾಮದ ದೃಷ್ಟಿಯಿಂದ ನೋಡುತ್ತ ಅವಹೇಳನದಿಂದ ಪರಿಗಣಿಸುವುದು ನಿಂತಿರಲಿಲ್ಲ.  ಮಹಿಳೆಯರು ಬರೆದು ಹಣ ಮಾಡುವುದನ್ನು ಕೀಳು ಎಂದು ಪರಿಗಣಿಸಲ್ಪಟ್ಟಿದ್ದರಿಂದ ಆಕೆಯ ಪತಿ ತನ್ನ ಒತ್ತಾಸೆಯಿಂದಲೆ ಅವರು ಬರೆಯುತ್ತಿರುವುದು ಎಂಬ ಹೇಳಿಕೆ ನೀಡಿದ್ದರು. ಹೀಗಾಗಿ ತನ್ನನ್ನು ಲೇಖಕಿ ಎಂದು ಕರೆಯುವುದನ್ನು ಆನ್ನಿ ಒಪ್ಪುತ್ತಿರಲಿಲ್ಲ.
   ವಿಶೇಷವೆಂದರೆ ಆನ್ನಿ ರಾಡ್‌ಕ್ಲಿಪ್‌ರನ್ನು ಎಲ್ಲಿಯೂ ಮಿಸೆಸ್ ರಾಡ್‌ಕ್ಲಿಪ್ ಎಂದು ಸಂಬೋಧಿಸುತ್ತಿರಲಿಲ್ಲ. ಹಾಗೆ ಸಂಬೋಧಿಸುವುದನ್ನು ಅವರು ಇಷ್ಟ ಪಡುತ್ತಿರಲಿಲ್ಲ. ಆದರೆ ಅವರ ಪತಿ ವಿಲಿಯಂರನ್ನು ಕೆಲವೆಡೆ ಮಿಸ್ಟರ್ ರಾಡ್‌ಕ್ಲಿಪ್ ಎಂದು ಉಲ್ಲೇಖಿಸಲಾಗಿದೆ. ಸ್ತ್ರೀವಾದವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಾಣದಿದ್ದರೂ ತನ್ನ ಅಸ್ಮಿತೆಯ ಕುರಿತಾದ ಸ್ಪಷ್ಟ ಚಿತ್ರಣ ಇವರಗಿದ್ದುದನ್ನು ಒಪ್ಪಿಕೊಳ್ಳಲೇ ಬೇಕು
      ಮದುವೆಯ ಆರಂಭಿಕ ದಿನಗಳಲ್ಲಿ ರಾಡ್‌ಕ್ಲಿಫ್‌ನ ಗಳಿಕೆಯು ಅತ್ಯಲ್ಪವಾಗಿರಲಿಲ್ಲ, ಇದು ಕುಟುಂಬದ ಆರ್ಥಿಕತೆಗೆ ಒಳ್ಳೆಯ ಕೊಡುಗೆಯನ್ನು ನೀಡುತ್ತಿತ್ತು.  'ದಿ ಮಿಸ್ಟರೀಸ್ ಆಫ್ ಉಡಾಲ್ಫೋ'ಗೆ ೫೦೦ ಪೌಂಡ್ ಮತ್ತು 'ಇಟಾಲಿಯನ್'ಗಾಗಿ ೬೦೦ ಫೌಂಡ್ ಅನ್ನು ಪಡೆದಿದ್ದರೆಂದು ಹೇಳಲಾಗುತ್ತಿದು ಅದು ಆ ಕಾಲದ ಅತಿ ಹೆಚ್ಚಿನ ಮೊತ್ತವಾಗಿತ್ತು.  (೨೦ ವರ್ಷಗಳ ನಂತರ ನಾರ್ತಂಗರ್ ಅಬ್ಬೆಗಾಗಿ ಜೇನ್ ಆಸ್ಟೆನ್ ಕೇವಲ ಹತ್ತು ಗಿನಿಗಳನ್ನು ಪಡೆದಿದ್ದರು.)        
             ೧೭೯೭ ರ ಬೇಸಿಗೆಯಲ್ಲಿ, ರಾಡ್‌ಕ್ಲಿಫ್ ಚಿಕ್ಕಮ್ಮ ಎಲಿಜಬೆತ್ ಮರಣಹೊಂದಿದ ನಂತರ ಅವರ ಆಸ್ತಿ ಆನ್ನಿಯವರ ಪಾಲಾಯಿತು.  ಒಂದು ವರ್ಷದ ನಂತರ ತಂದೆಯ ಮರಣದಿಂದಾಗಿ ಸ್ವಂತ ಊರಾದ ಲೀಸೆಸ್ಟರ್‌ನ ಹೊರಗಿರುವ ಜಮೀನು ಇವರ ಹೆಸರಿಗೆ ಬಂದಿತು. ೧೮೦೦ರಲ್ಲಿ ತಾಯಿಯ ಮರಣದ ನಂತರ ಗಣನೀಯ ಆಸ್ತಿ ಇವರಿಗೆ ದೊರಕಿತು.
          ತನ್ನ ಉಳಿದ ಜೀವಿತಾವಧಿಯಲ್ಲಿ ರಾಡ್‌ಕ್ಲಿಫ್ ಕವನ ಬರೆಯುವುದನ್ನು ಮುಂದುವರೆಸಿದರು. ಐತಿಹಾಸಿಕ ಪ್ರಣಯ  ಕೃತಿ 'ಗ್ಯಾಸ್ಟನ್ ಡಿ ಬ್ಲಾಂಡೆವಿಲ್ಲೆ' ಬರೆದರು, ಇದು ಅವರ ಕೆಲವು ಕವಿತೆಗಳು ಮತ್ತು ೧೮೨೬ ರಲ್ಲಿ ಅವರ ನಿಯತಕಾಲಿಕಗಳ ಬರವಣಿಗೆಗಳೊಂದಿಗೆ ಪ್ರಕಟಿಸಲ್ಪಟ್ಟಿತು
    ಕಾದಂಬರಿಗಳಿಗಾಗಿ ಕಲ್ಪನೆ ಮಿತಿಮೀರಿದ ಕಾರಣದಿಂದ ದಿಗ್ಭ್ರಮೆಗೊಂಡ ಮನಸ್ಥಿತಿಯಿಂದ ಬಳಲಿದ್ದ ಕುರಿತೂ ಊಹಾಪೋಹಗಳಿವೆ. ಡರ್ಬಿಶೈರ್‌ನ ಹ್ಯಾಡನ್ ಹಾಲ್‌ನಲ್ಲಿ ತಪ್ಪು ತಿಳುವಳಿಕೆಯಿಂದ ಬಂಧಿಸಲ್ಪಟ್ಟಿದ್ದಳೆಂಬ ಕಥೆಗಳೂ ಇವೆ. ಈ ಎಲ್ಲದರ ಕಾರಣಗಳಿಂದಾಗಿ ಅವರ ಕೊನೆಯ ಜೀವನ ಸಂತೋಷದಿಂದ ಕೂಡಿರಲಿಲ್ಲ. ಹಲವಾರು ವರ್ಷಗಳವರೆಗೆ, ಆಸ್ತಮಾದಿಂದ ಹಾಗೂ ಪದೇಪದೇ ಕಾಣಿಸಿಕೊಂಡ ಎದೆಯ ಸೋಂಕಿನಿಂದ ಬಳಲುತ್ತಿದ್ದರು.  
         ೧೮೨೨ ರ ಶರತ್ಕಾಲದಲ್ಲಿ, ರಾಡ್‌ಕ್ಲಿಫ್ ಮತ್ತು ಅವಳ ಪತಿ ಸಮುದ್ರದ ಗಾಳಿಯು ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಪರಿಹಾರ ನೀಡುತ್ತದೆ ಎಂಬ ಭರವಸೆಯಲ್ಲಿ ರಾಮ್ಸ್‌ಗೇಟ್‌ನ ರೆಸಾರ್ಟ್‌ನಲ್ಲಿ ಉಳಿದುಕೊಂಡರು.ಆದರೆ  ೯ ಜನವರಿ, ೧೮೨೩ರಂದು ಅವರ ಉಸಿರಾಟದ ತೊಂದರೆ ಹೆಚ್ಚಾಯಿತು. ತಿಂಗಳ ನಂತರ ೭ ಫೆಬ್ರುವರಿ ೧೮೨೩ರಂದು ನಿದ್ರೆಯಲ್ಲಿ ಶಾಂತಿವಾಗಿ ಮರಣಹೊಂದಿದರು.  ಲಂಡನ್ ಹ್ಯಾನೋವರ್ ಸ್ಕ್ವೇರ್‌ನ ಸೇಂಟ್ ಜಾರ್ಜ್ ಚರ್ಚ್‌ಗೆ ಸೇರಿದ ಬೇಸ್‌ವಾಟರ್ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.    

             ರಾಡ್‌ಕ್ಲಿಫ್‌ನ ಕಾದಂಬರಿಗಳು ೧೯ನೇ ಶತಮಾನದವರೆಗೂ ಹೆಚ್ಚು ಜನಪ್ರಿಯವಾಗಿದ್ದವು.  ಹಲವಾರು ಕಾದಂಬರಿಗಳು ನಾಟಕಕ್ಕೆ ಅಳವಡಿಸಲ್ಪಟ್ಟವು.  ಮತ್ತು ಬ್ರಿಟಿಷ್ ಲೈಬ್ರರಿ ಕ್ಯಾಟಲಾಗ್‌ನಲ್ಲಿ ಉಲ್ಲೇಖಿಸಲಾದ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್ ಮತ್ತು ಇಟಾಲಿಯನ್ ಆವೃತ್ತಿಗಳು ಯುರೋಪಿನಾದ್ಯಂತ ಈ ಪುಸ್ತಕಗಳು ಓದಲ್ಪಟ್ಟಿವೆ ಎಂಬುದಕ್ಕೆ ಸಾಕ್ಷಿಯಾಗಿವೆ.  'ದಿ ಮಿಸ್ಟರೀಸ್ ಆಫ್ ಉಡಾಲ್ಫೊ'ದಂತಹ ಅತ್ಯಂತ ಯಶಸ್ವಿ ಕಾದಂಬರಿಗಳು ಹಲವಾರು ಆವೃತ್ತಿಗಳಲ್ಲಿ ಪ್ರಕಟಗೊಂಡವು ಮತ್ತು ಆಕೆಯ ಜೀವಿತಾವಧಿಯಲ್ಲಿ ಪ್ರಕಟವಾದ ಎಲ್ಲವನ್ನೂ ಇತ್ತೀಚಿನ ವರ್ಷಗಳಲ್ಲಿ ಮರುಮುದ್ರಿಸಲಾಗಿದೆ.  
       ರಾಡ್‌ಕ್ಲಿಫ್ ಒಂದು ಶತಮಾನದ ಕೊನೆಯಲ್ಲಿ ಬರೆಯುತ್ತಿದ್ದರು, ಈ ಸಮಯದಲ್ಲಿ ಮಹಿಳಾ ಬರಹಗಾರರು ಹಾಗೂ ಓದುಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎಲ್ಲಾ ಮಹಿಳಾ ಬರಹಗಾರರಲ್ಲಿ, ರಾಡ್‌ಕ್ಲಿಫ್ ಬಹುಶಃ ಹೆಚ್ಚು ಜನಪ್ರಿಯರಾಗಿದ್ದರು.  ಇ.ಬಿ.  ಮರ್ರಿ 'ತನ್ನ ಹಿಂದಿನ ಯಾವುದೇ ಕಾದಂಬರಿಕಾರ-ಪುರುಷ ಅಥವಾ ಮಹಿಳೆ-ಇದುವರೆಗೆ ಅನುಭವಿಸದ ಜನಪ್ರಿಯತೆಯನ್ನು ಇವರು ಅನುಭವಿಸಿದ್ದಾರೆ.' ಎಂದು ಎಂದು ಸೂಚಿಸುತ್ತದೆ.  ಗೋಥಿಕ್ ಸಾಹಿತ್ಯ ಪ್ರಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ ಇವರನ್ನು ನಂತರದ ಪ್ರಸಿದ್ಧ ಬರಹಗಾರರು-ವಾಲ್ಟರ್ ಸ್ಕಾಟ್, ಜೇನ್ ಆಸ್ಟೆನ್ ಮತ್ತು, ನಂತರ ಚಾರ್ಲ್ಸ್ ಡಿಕನ್ಸ್ ಮತ್ತು ಬ್ರಾಂಟೆ ಸಹೋದರಿಯರು ತಮ್ಮ ಪತ್ರಗಳು ಮತ್ತು ಕಾದಂಬರಿಗಳಲ್ಲಿ ಕಂಡುಬರುವ ಇವರ ಕೃತಿಗಳ ಕುರಿತಾದ ಅನೇಕ ಪ್ರಸ್ತಾಪಗಳಲ್ಲಿ ನೆನಪಿಸಿಕೊಂಡು ತಮ್ಮ ಋಣಭಾರವನ್ನು ಒಪ್ಪಿಸಿದ್ದಾರೆ. 
lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220729_4_6


Thursday, 21 July 2022

೧೨ ಐರಿಶ್ ಇತಿಹಾಸದಲ್ಲಿ ಸ್ಥಾನ ಪಡೆದ ನಾಟಕಕಾರ್ತಿ- ಅಗಸ್ಟಾ ಗ್ರೇಗರಿ



೧೨ ಐರಿಶ್ ಇತಿಹಾಸದಲ್ಲಿ ಸ್ಥಾನ ಪಡೆದ ನಾಟಕಕಾರ್ತಿ- ಅಗಸ್ಟಾ ಗ್ರೇಗರಿ


                 ಐರಿಶ್ ನಾಟಕಕಾರ್ತಿ, ಜಾನಪದ ತಜ್ಞೆ ಮತ್ತು ರಂಗಭೂಮಿ ನಿರ್ವಾಹಕಿಯಾಗಿದ್ದ ಇಸಾಬೆಲ್ಲಾ ಆಗಸ್ಟಾ ಗ್ರೆಗೊರಿ ಆಂಗ್ಲೋ-ಐರಿಶ್ ಕುಟುಂಬದ ಪರ್ಸ್ಸೆಯ ಕಿರಿಯ ಮಗಳಾಗಿ, ಗಾಲ್ವೇ ಕೌಂಟಿಯ ರಾಕ್ಸ್ಬರೋದಲ್ಲಿ ೧೫ ಮಾರ್ಚ ೧೮೫೨ರಂದು ಜನಿಸಿದರು. ತಂದೆ ಡಡ್ಲೆ ಪರ್ಸೆ, ತಾಯಿ ಫ್ರಾನ್ಸಿಸ್ ಬ್ಯಾರಿ, ವಿಸ್ಕೌಂಟ್ ಗ್ವಿಲಾಮೋರ್ಗೆ ಸಂಬಂಧಿಸಿದವಳು. ಅವರ ಕುಟುಂಬದ ಮನೆ, ರಾಕ್ಸ್ಬರೋದಲ್ಲಿ ೬,೦೦೦-ಎಕರೆಯ (೨೪ ಕಿಮೀ) ಎಸ್ಟೇಟ್ ಆಗಿದ್ದು ಸುಮಾರು ಇನ್ನೂರು ವರ್ಷಗಳ ಇತಿಹಾಸ ಹೊಂದಿತ್ತು. ಇದು ಗೋರ್ಟ್ ಮತ್ತು ಲೌರಿಯಾದ ನಡುವೆ ಇದ್ದು ಐರಿಶ್ ಅಂತರ್ಯುದ್ಧದ ಸಮಯದಲ್ಲಿ ಅದರ ಮುಖ್ಯ ಮನೆ ಸುಟ್ಟುಹೋದ ಬಗ್ಗೆ ದಾಖಲೆಗಳಿವೆ. ಇಂಗ್ಲೀಷ್ ಮೂಲದ ಪರ್ಸೆ ಮನೆತನ ಪ್ರಾಟೆಸ್ಟಂಟ್ ಭೂಮಾಲಿಕತ್ವ ಹೊಂದಿದ ಕುಟುಂಬವಾಗಿತ್ತು. ಹತ್ತೊಂಬತ್ತನೆಯ ಶತಮಾನದ ಅಂತ್ಯದವರೆಗೂ ಗ್ವಾಲೆಯ ಸ್ಥಳಿಯ ಆಡಳಿತದ ಮೇಲೆ ಹಿಡಿತ ಹೊಂದಿದ್ದ ಈ ಕುಟುಂಬವು ಐರಿಶ್ ರಾಜ್ಯಾಡಳಿತದಲ್ಲೂ ಪ್ರಮುಖ ಪಾತ್ರ ವಹಿಸುತ್ತಿತ್ತು. ತಾಯಿಯ ಅಜ್ಜಿಯಂದಿರು ಐರಿಶ್ ಹಾಗೂ ನಾರ್ಮನ್ ಮೂಲದ ಬ್ಯಾರಿ ಮತ್ತು ಓಗ್ರಾಡಿಸ್‌ನ ಪ್ರತಿಷ್ಟಿತ ಕುಟುಂಬದವರು. ಹಿಂದೆ ರಾಜ್ಯಾಡಳಿತವು ಕಾಥೋಲಿಕ್‌ರ ಮೇಲೆ ವಿಧಿಸಿದ್ದ ದಂಡನೆ, ಕರ ಹಾಗೂ ಇನ್ನಿತರ ಹೊರೆಗಳಿಂದ ತಪ್ಪಿಸಿಕೊಳ್ಳಲು ಪ್ರೊಟೆಸ್ಟಂಟ್ ಆಗಿ ಮತಾಂತರಗೊಂಡವರು. ಅಗಸ್ಟಾರವರ ತಂದೆ ಡಡ್ಲೆಗೆ ಮೊದಲ ಪತ್ನಿಯಲ್ಲಿ ಮೂರು ಮಕ್ಕಳೂ ಹಾಗೂ ಎರಡನೆ ಪತ್ನಿ ಪ್ರಾನ್ಸಿಸ್ ಬ್ಯಾರಿಯಲ್ಲಿ ಹದಿಮೂರು ಮಕ್ಕಳಿದ್ದರು. ಮನೆಯಲ್ಲಿಯೇ ಶಿಕ್ಷಣ ಪಡೆದ ಅಗಸ್ಟಾರವರ ಮೇಲೆ ಸ್ಥಳೀಯ ಇತಿಹಾಸ ಮತ್ತು ದಂತಕಥೆಗಳ ಕಣಜದಂತಿದ್ದ ಕುಟುಂಬದ ನರ್ಸ್ ಹಾಗೂ ಸೇವಕಿಯಾಗಿದ್ದ ಮೇರಿ ಶೆರಿಡನ್ ಪ್ರಭಾವ ಅಪಾರವಾಗಿತ್ತು. ಇದಲ್ಲದೆ ಸ್ಥಳಿಯ  ಕ್ಯಾಥೋಲಿಕ್‌ರ ಹಾಗೂ ಐರಿಶ್ ಮಾತನಾಡುವವರ ಸಂಪರ್ಕವೂ ಹೆಚ್ಚಾಗಿದ್ದುದು  ಅಗಸ್ಟಾರವರ ಭವಿಷ್ಯದ ಬರವಣಿಗೆಯ ಜೀವನದ ಮೇಲೆ ಪ್ರಭಾವ ಬೀರಿತು. ಬ್ರಿಟಿಷ್ ಆಳ್ವಿಕೆಯೊಂದಿಗೆ ನಿಕಟ ಸಂಪರ್ಕದಲ್ಲಿರುವ ವರ್ಗದ ಅವರು ಅದರ ವಿರುದ್ಧ ತಿರುಗಿಬಿದ್ದರು.  ಸಾಂಸ್ಕೃತಿಕ ರಾಷ್ಟ್ರೀಯತೆಯ ಈ ಪರಿವರ್ತನೆಗೆ ಅವರ ಬರಹಗಳು ಸಾಕ್ಷಿಯಾಗಿದೆ, ಅವರ ಜೀವಿತಾವಧಿಯಲ್ಲಿ ಐರ್ಲೆಂಡ್‌ನಲ್ಲಿ ಸಂಭವಿಸಿದ ಅನೇಕ ರಾಜಕೀಯ ಹೋರಾಟಗಳನ್ನು ಇವರು ತಮ್ಮ ಬರವಣಿಗೆಯಲ್ಲಿ ನಮೂದಿಸಿದ್ದನ್ನು ಕಾಣಬಹುದು.

            ಸುಮಾರು ನಲವತ್ತು ನಾಟಕಗಳನ್ನು ಬರೆದ ಅಗಸ್ಟಾ ರೈತರ ಪರವಾದ ರಚನೆಗಳನ್ನು ಮತ್ತು ಐರಿಶ್ ಜನಪದ ಕಥೆಗಳನ್ನು ಲಘು ಹಾಸ್ಯದೊಂದಿಗೆ ಹೇಳಿದ್ದಾರೆ.  ಐರಿಶ್ ಸಾಹಿತ್ಯ ಪುನರುಜ್ಜೀವನದ ಕೆಲಸಕ್ಕಾಗಿ ಇಂದಿಗೂ ನೆನಪಿಸಿಕೊಳ್ಳಲಾಗುವ ಇವರು ವಿಲಿಯಂ ಬಟ್ಲರ್. ಯೀಟ್ಸ್ ಮತ್ತು ಎಡ್ವರ್ಡ್ ಮಾರ್ಟಿನ್ ಅವರೊಂದಿಗೆ ಐರಿಶ್ ಲಿಟರರಿ ಥಿಯೇಟರ್ ಮತ್ತು ಅಬ್ಬೆ ಥಿಯೇಟರ್ ಸ್ಥಾಪಿಸಿ ಎರಡೂ ಕಂಪನಿಗಳಿಗೆ ಹಲವಾರು ಕಿರು ಕೃತಿಗಳನ್ನು ಬರೆದರು. ಐರಿಶ್ ಪುರಾಣದಿಂದ ತೆಗೆದುಕೊಳ್ಳಲಾದ ಅನೇಕ ಕಥೆಗಳನ್ನು ತಮ್ಮ ನಾಟಕ ಹಾಗೂ ಇತರ ಕಥೆಗಳಲ್ಲಿ ರೂಪಕದಂತೆ ಬಳಸಿಕೊಂಡ ಇವರ ಬರವಣಿಗೆಯ ತಾಕತ್ತು ಬಹುದೊಡ್ಡದು.
        ಗೋರ್ಟ್ ಬಳಿಯ ಕೂಲ್ ಪಾರ್ಕ್‌ನಲ್ಲಿ ಎಸ್ಟೇಟ್ ಹೊಂದಿರುವ ಸರ್ ವಿಲಿಯಂ ಹೆನ್ರಿ ಗ್ರೆಗೊರಿ ಎಂಬ ತನಗಿಂತ ೩೫ ವರ್ಷ ಹಿರಿಯರಾಗಿದ್ದ ವಿಧುರನನ್ನು ೪ ಮಾರ್ಚ್ ೧೮೮೦ ರಂದು ಡಬ್ಲಿನ್‌ನ ಸೇಂಟ್ ಮಥಿಯಾಸ್ ಚರ್ಚ್‌ನಲ್ಲಿ ವಿವಾಹವಾದರು. ಸಾಹಿತ್ಯಿಕ ಮತ್ತು ಕಲಾತ್ಮಕ ಆಸಕ್ತಿಗಳನ್ನು ಹೊಂದಿರುವ ಸುಶಿಕ್ಷಿತ ವ್ಯಕ್ತಿಯಾಗಿದ್ದ ಮತ್ತು ಕೂಲ್ ಪಾರ್ಕ್‌ನಲ್ಲಿರುವ ಮನೆಯಲ್ಲಿ ದೊಡ್ಡ ಗ್ರಂಥಾಲಯ ಮತ್ತು ಅಪಾರವಾದ ಕಲಾ ಸಂಗ್ರಹವನ್ನು ಹೊಂದಿದ್ದ ಸರ್ ವಿಲಿಯಂ ಅವರು ಸಿಲೋನ್ (ಈಗಿನ ಶ್ರೀಲಂಕಾ) ಗವರ್ನರ್ ಹುದ್ದೆಯಿಂದ ನಿವೃತ್ತರಾಗಿದ್ದರು. ಈ ಹಿಂದೆ ಕೌಂಟಿ ಗಾಲ್ವೇಗೆ ಸಂಸತ್ ಸದಸ್ಯರಾಗಿ ಹಲವಾರು ಬಾರಿ ಸೇವೆ ಸಲ್ಲಿಸಿದ್ದರು.  ಅವರ ಲಂಡನ್‌ನಲ್ಲಿರುವ ಮನೆಯಲ್ಲಿ ರಾಬರ್ಟ್ ಬ್ರೌನಿಂಗ್, ಲಾರ್ಡ್ ಟೆನ್ನಿಸನ್, ಜಾನ್ ಎವೆರೆಟ್ ಮಿಲೈಸ್ ಮತ್ತು ಹೆನ್ರಿ ಜೇಮ್ಸ್ ಸೇರಿದಂತೆ ಆ ಕಾಲದ ಅನೇಕ ಪ್ರಮುಖ ಸಾಹಿತ್ಯ ಮತ್ತು ಕಲಾತ್ಮಕ ವ್ಯಕ್ತಿಗಳು ಪ್ರತಿವಾರ ಸೇರುತ್ತಿದ್ದರು. ಅವರ ಒಬ್ಬನೆ ಮಗ ೧೮೮೧ರಲ್ಲಿ ಜನಿಸಿದ ರಾಬರ್ಟ್ ಗ್ರೆಗೊರಿ ಮೊದಲ ವಿಶ್ವಯುದ್ಧದಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿರುವಾಗ ನಿಧನರಾದರು. ಈ ಘಟನೆಯು ಡಬ್ಲ್ಯೂ. ಬಿ. ಯೀಟ್ಸ್ ಅವರಿಂದ "ಆನ್ ಐರಿಶ್ ಏರ್ಮ್ಯಾನ್ ಫಾರ್ಸೀಸ್ ಹಿಸ್ ಡೆತ್", "ಇನ್ ಮೆಮೋರಿ ಆಫ್ ಮೇಜರ್ ರಾಬರ್ಟ್ ಗ್ರೆಗೊರಿ"  ಮತ್ತು 'ಶೇಫರ್ಡ್ ಆಂಡ್ ಗೋಥರ್ಡ್' ಎಂಬ ಕವನಗಳನ್ನು ಬರೆಯಲು ಸ್ಪೂರ್ತಿ ನೀಡಿತು.      

              ಗ್ರೆಗೊರಿಸ್ ದಂಪತಿಗಳು ಸಿಲೋನ್, ಭಾರತ, ಸ್ಪೇನ್, ಇಟಲಿ ಮತ್ತು ಈಜಿಪ್ತ ಮುಂತಾದ ಕಡೆ ಪ್ರವಾಸ ಕೈಗೊಂಡಿದ್ದರು.  ೧೮೮೨-೮೩ರಲ್ಲಿ ಈಜಿಪ್ತ್ ಪ್ರವಾಸದಲ್ಲಿದ್ದಾಗ ಇಂಗ್ಲಿಷ್ ಕವಿ ವಿಲ್ಫ್ರಿಡ್ ಸ್ಕ್ಯಾವೆನ್ ಬ್ಲಂಟ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು. ಈ ಕುರಿತು ಲೇಡಿ ಗ್ರೆಗೊರಿ ತಪ್ಪಿತಸ್ಥ ಭಾವನೆಯನ್ನೂ ಹೊಂದಿದ್ದರು. ಈ ಸಮಯದಲ್ಲಿ 'ಎ ವುಮನ್ಸ್ ಸಾನೆಟ್ಸ್' ಎಂಬ ಹನ್ನೆರಡು ಪ್ರೇಮ ಕವನಗಳ ಸರಣಿಯನ್ನು ಬರೆದು ಬ್ಲಂಟ್‌ರವರಿಗೆ ಅರ್ಪಿಸಿದರು. ನಂತರ ೧೮೯೨ರಲ್ಲಿ ಬ್ಲಂಟ್‌ರವರು ಅಗಸ್ಟಾ ಗ್ರೆಗರಿಯವರ ಒಪ್ಪಿಗೆ ಪಡೆದು ಆ ಕವನಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ತನ್ನ ಹೆಸರಿನಲ್ಲಿ ವಿಲಿಯಂ ಮೋರಿಸ್‌ನವರ ಕೆಲ್ಮ್‌ಸ್ಕಾಟ್‌ನ ಆವೃತ್ತಿಗಳಲ್ಲಿ ಪ್ರಕಟಿಸಿದರು. ಆದರೆ ಅಚ್ಚರಿಯ ವಿಷಯವೆಂದರೆ ಆ ಸಮಯದಲ್ಲಿ ಬ್ಲಂಟ್‌ರವರ ಪ್ರೇಯಸಿಯಾಗಿದ್ದ ಮೋರಿಸ್‌ರವರ ಪತ್ನಿ ಜೇನ್ 'ಅತ್ಯಂತ ಸುಂದರವಾದ ಹಾಗೂ ಸರಾಗವಾಗಿ ಓದಿಸಿಕೊಂಡು ಹೋಗುವ ಯಾವುದೇ ಹಿಂಜರಿಕೆಯಿಲ್ಲದೆ ಬರೆದಂತಹ ಕವಿತೆಗಳು' ಎಂದು ಹೊಗಳಿದರು. ಬ್ಲಂಟ್ ಹಾಗೂ ಅಗಸ್ಟಾ ಗ್ರೆಗೋರಿ ೧೯೨೨ರಲ್ಲಿ ಬ್ಲಂಟ್ ಸಾಯುವವರೆಗೂ ಸ್ನೇಹಿತರಾಗಿಯೇ ಉಳಿದುಕೊಂಡಿದ್ದರು.

         ಅವರ ನಿಜವಾದ ಹೆಸರಿನಲ್ಲಿ ಪ್ರಕಟಗೊಂಡ ಮೊದಲ ಕೃತಿ ಅರಬಿ ಅಂಡ್ ಹಿಸ್ ಹೌಸ್ಹೋಲ್ಡ್ (೧೮೮೨). ಮೂಲತಃ ಇದೊಂದು ಖೇಡಿವ್‌ನ ದಬ್ಬಾಳಿಕೆಯ ಆಡಳಿತ ಮತ್ತು ಈಜಿಪ್ಟ್‌ನ ಮೇಲೆ ಯುರೋಪಿಯನ್ ಪ್ರಾಬಲ್ಯದ ವಿರುದ್ಧ ಈಜಿಪ್ಟ್ ರಾಷ್ಟ್ರೀಯತಾವಾದಿ ಹಮ್ಮಿಕೊಂಡ ಉರಾಬಿ ದಂಗೆ ಎಂದು ಕರೆಯಲ್ಪಡುವ ಚಳುವಳಿಯ ನಾಯಕ ಅಹ್ಮದ್ ಒರಾಬಿ ಪಾಷಾ ಅವರನ್ನು ಬೆಂಬಲಿಸಲು ೧೮೭೯ರಲ್ಲಿ 'ದಿ ಟೈಮ್ಸ್'ಗೆ ಬರೆದ ಕರಪತ್ರ. ನಂತರ ಅವರು ಈ ಕಿರುಪುಸ್ತಕದ ಬಗ್ಗೆ 'ತನ್ನೊಳಗೆ ಯಾವುದೋ ರಾಜಕೀಯ ಆಕ್ರೋಶ ಅಥವಾ ಶಕ್ತಿ ಹುಟ್ಟಿತ್ತಾದರೂ ಅದು ತನ್ನ ಹಾದಿಯನ್ನು ಚಲಾಯಿಸಿರಬಹುದು ಅಥವಾ ತನ್ನಷ್ಟಕ್ಕೆ ತಾನೇ ಸವೆದು ಹೋಗಿರಬಹುದು' ಎಂದು ಹೇಳುತ್ತಾರೆ.  ಏಕೆಂದರೆ ೧೮೯೩ ರಲ್ಲಿ ಅವರು 'ಎ ಫ್ಯಾಂಟಮ್ಸ್ ಪಿಲ್ಗ್ರಿಮೇಜ್' ಅಥವಾ 'ಹೋಮ್ ರೂಯಿನ್' ಅನ್ನು ಪ್ರಕಟಿಸಿದರು. ವಾಸ್ತವದಲ್ಲಿ ಇದೊಂದು ವಿಲಿಯಂ ಇವಾರ್ಟ್ ಗ್ಲಾಡ್‌ಸ್ಟೋನ್‌ರವರ ಪ್ರಸ್ತಾವಿತ ಎರಡನೇ ಹೋಮ್ ರೂಲ್ ಆಕ್ಟ್ ವಿರುದ್ಧ ರಾಷ್ಟ್ರೀಯತಾವಾದಿ-ವಿರೋಧಿ ಕರಪತ್ರವಾಗಿರುವುದನ್ನು ಗಮನಿಸಬೇಕು.

    ಮದುವೆಯ ನಂತರವೂ ಗದ್ಯ ಬರೆಯುವುದನ್ನು ಮುಂದುವರೆಸಿದ ಅವರು ೧೮೮೩ರ ಚಳಿಗಾಲದಲ್ಲಿ, ಅವರ ಪತಿ ಸಿಲೋನ್ನಲ್ಲಿದ್ದಾಗ, ತಮ್ಮ ಬಾಲ್ಯದ ಮನೆಯ ನೆನಪುಗಳ ಸರಣಿಯನ್ನು 'ಆನ್ ಎಮಿಗ್ರಂಟ್ಸ್ ನೋಟ್ಬುಕ್' ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸುವ ಉದ್ದೇಶದಿಂದ ಬರವಣಿಗೆಯನ್ನು ಮುಂದುವರೆಸಿದರಾದರೂ ಈ ಯೋಜನೆಯನ್ನು ನಂತರ ಕೈಬಿಟ್ಟರು. ೧೮೮೭ರಲ್ಲಿ 'ಓವರ್ ದಿ ರಿವರ್' ಎಂಬ ಕರಪತ್ರಗಳ ಸರಣಿಯನ್ನು ಬರೆದು, ದಕ್ಷಿಣ ಲಂಡನ್‌ನ ಸೌತ್‌ವಾರ್ಕ್‌ನಲ್ಲಿರುವ ಸೇಂಟ್ ಸ್ಟೀಫನ್ಸ್ ಪ್ಯಾರಿಷ್‌ಗೆ ಹಣಕ್ಕಾಗಿ ಮನವಿ ಮಾಡಿದರು.  ಅವರು ೧೮೯೦-೧೮೯೧ರಲ್ಲಿ ಹಲವಾರು ಸಣ್ಣ ಕಥೆಗಳನ್ನು ಬರೆದಿದ್ದರೂ ಇವು ಪ್ರಕಟವಾಗಲಿಲ್ಲ.  ಈ ಅವಧಿಯ ಅವರು ಬರೆದ ಹಲವಾರು ಅಪ್ರಕಟಿತ ಕವಿತೆಗಳೂ ಇವೆ.
            ಮಾರ್ಚ್ ೧೮೯೨ ರಲ್ಲಿ ಸರ್ ವಿಲಿಯಂ ಗ್ರೆಗೊರಿ ನಿಧನರಾದಾಗ, ಲೇಡಿ ಗ್ರೆಗೊರಿ ಶೋಕದಲ್ಲಿ ಮುಳುಗಿ ಕೂಲ್ ಪಾರ್ಕ್‌ಗೆ ಮರಳಿದರು. ಅಲ್ಲಿ ತನ್ನ ಗಂಡನ ಆತ್ಮಕಥೆಯನ್ನು ಸಂಪಾದಿಸಿ ೧೮೯೪ರಲ್ಲಿ ಪ್ರಕಟಿಸಿದರು. "ನಾನು ಮದುವೆಯಾಗದಿದ್ದರೆ, ತೀಕ್ಷ್ಣವಾಗಿ ಸಂಭಾಷಿಸುವ ವಾಕ್ಯಗಳ ಸಂಪತ್ತನ್ನು ನಾನು ಕಲಿಯಬೇಕಿರಲ್ಲ; ನಾನು ವಿಧವೆಯಾಗದಿದ್ದರೆ ಮನಸ್ಸಿಲ್ಲಿ  ನಿರ್ಲಿಪ್ತತೆಯನ್ನು ಕಂಡುಕೊಳ್ಳಬೇಕಾಗಿರಲಿಲ್ಲ.  ಪಾತ್ರದ ಒಳನೋಟಕ್ಕೆ ಅಗತ್ಯವಿರುವ ವರಾಮವನ್ನು ನೀಡಬಹುದಿತ್ತು. ಬೇಕನ್ ಹೇಳುವಂತೆ ಅದನ್ನು ವ್ಯಕ್ತಪಡಿಸಲು ಮತ್ತು ಅರ್ಥೈಸಿಕೊಳ್ಳಲು ಒಂಟಿತನವು ನನ್ನನ್ನು ಶ್ರೀಮಂತಗೊಳಿಸಿದೆ' ಎನ್ನುವ ಮಾತುಗಳ ಅವರ ಮನದಾಳವನ್ನು ತೆರೆದಿಡುತ್ತವೆ.
        ೧೮೯೩ರಲ್ಲಿ ಅರಾನ್ ದ್ವೀಪಗಳಲ್ಲಿನ ಇನಿಶೀರ್‌ಗೆ ಮಾಡಿದ ಪ್ರವಾಸವು ಲೇಡಿ ಗ್ರೆಗೊರಿಯವರನ್ನು ಐರಿಷ್ ಭಾಷೆಯಲ್ಲಿ ಮತ್ತು ಅವರು ವಾಸಿಸುತ್ತಿದ್ದ ಪ್ರದೇಶದ ಜಾನಪದದಲ್ಲಿ ಆಸಕ್ತಿಯನ್ನು ಪುನರ್‌ಎಚ್ಚರಿಸಿತು. ಕೂಲ್‌ನಲ್ಲಿರುವ ಶಾಲೆಯಲ್ಲಿ ಐರಿಶ್ ಪಾಠಗಳನ್ನು ಕಲಿಸುವ ವ್ಯವಸ್ಥೆ ಮಾಡಿದರು. ತನ್ನ ಮನೆಯ ಸುತ್ತಲಿನ ಪ್ರದೇಶದಿಂದ, ವಿಶೇಷವಾಗಿ ಗಾರ್ಟ್ ವರ್ಕ್ ಹೌಸ್‌ನ ನಿವಾಸಿಗಳಿಂದ ಕಥೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಅವಳು ನೇಮಿಸಿಕೊಂಡ ಬೋಧಕರಲ್ಲಿ ಒಬ್ಬರಾದ ನಾರ್ಮಾ ಬೋರ್ತ್ವಿಕ್‌ರವರು ಕೂಲ್‌ಗೆ ಹಲವಾರು ಬಾರಿ ಭೇಟಿ ನೀಡುತ್ತಿದ್ದರು. ಇದರಿಂದಾಗಿ 'ಎ ಬುಕ್ ಆಫ್ ಸೇಂಟ್ಸ್ ಅಂಡ್ ವಂಡರ್ಸ್' (೧೯೦೬), 'ದಿ ಕಿಲ್ಟಾರ್ಟನ್ ಹಿಸ್ಟರಿ ಬುಕ್' (೧೯೦೯) ಮತ್ತು 'ದಿ ಕಿಲ್ಟಾರ್ಟನ್ ವಂಡರ್ ಬುಕ್' (೧೯೧೦) ಸೇರಿದಂತೆ ಹಲವಾರು ಜಾನಪದ ವಸ್ತುಗಳ ಸಂಪುಟಗಳ ಪ್ರಕಟಣೆ ಸಾಧ್ಯವಾಯಿತು. ಐರಿಶ್ ಪುರಾಣಗಳ "ಕಿಲ್ಟಾರ್ಟನೀಸ್" ಆವೃತ್ತಿಗಳ ಹಲವಾರು ಸಂಗ್ರಹಗಳನ್ನು ರಚಿಸಿದರು. ಅದರಲ್ಲಿ 'ಕುಚುಲೇನ್ ಆಫ್ ಮುಯಿರ್ತೆಮ್ನೆ (೧೯೦೨) ಮತ್ತು ಗಾಡ್ಸ್ ಅಂಡ್ ಫೈಟಿಂಗ್ ಮೆನ್ (೧೯೦೩).  ("ಕಿಲ್ಟಾರ್ಟನೀಸ್" ಎಂಬುದು ಕಿಲ್ಟಾರ್ಟ್‌ನ್‌ನಲ್ಲಿ ಮಾತನಾಡುವ ಉಪಭಾಷೆಯನ್ನು ಆಧರಿಸಿ ಇಂಗ್ಲೀಷ್‌ಗೆ ಗೇಲಿಕ್ ಸಿಂಟ್ಯಾಕ್ಸ್‌ನೊಂದಿಗೆ ಲೇಡಿ ಗ್ರೆಗೊರಿ ನೀಡಿದ ಶಬ್ಧ. 'ಕುಚುಲೇನ್ ಆಫ್ ಮುಯಿರ್ತೆಮ್ನೆ'ಗೆ ಬರೆದ ಮುನ್ನುಡಿಯಲ್ಲಿ ಯೀಟ್ಸ್‌ರವರು "ಈ ಪುಸ್ತಕವು ನನ್ನ ಕಾಲದಲ್ಲಿ ಐರ್ಲೆಂಡ್‌ನಿಂದ ಹೊರಬಂದ ಅತ್ಯುತ್ತಮ ಪುಸ್ತಕ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.  

   ೧೮೯೪ರ ಅಂತ್ಯದ ವೇಳೆಗೆ ತನ್ನ ಪತಿಯ ಆತ್ಮಚರಿತ್ರೆಯ ಸಂಪಾದನೆಗೆ ಬಂದ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡ ಲೇಡಿ ಗ್ರೆಗೊರಿ ತನ್ನ ಗಮನವನ್ನು ಮತ್ತೊಂದು ಸಂಪಾದಕೀಯ ಯೋಜನೆಯತ್ತ ತಿರುಗಿಸಿದರು. ಸರ್ ವಿಲಿಯಂ ಗ್ರೆಗೊರಿಯವರ ಅಜ್ಜನ ಪತ್ರವ್ಯವಹಾರದಿಂದ ಮಿಸ್ಟರ್ ಗ್ರೆಗೊರಿಸ್ ಲೆಟರ್-ಬಾಕ್ಸ್ ೧೮೧೩-೩೦ (೧೮೯೮) ಎಂದು ಪ್ರಕಟಿಸಲು ನಿರ್ಧರಿಸಿದರು.  ಇದು ಆ ಅವಧಿಯ ಐರಿಶ್ ಇತಿಹಾಸವನ್ನು ಸಂಶೋಧಿಸುವಂತೆ ಮಾಡಿತು.  ಈ ಕೆಲಸದಿಂದಾದ ಒಂದು ಪರಿಣಾಮವೇನೆಂದರೆ ಇದು ಅವರ ರಾಜಕೀಯ ಮನಸ್ಥತಿಯಲ್ಲಿ ಬದಲಾವಣೆಯನ್ನು ತಂದಿತು. ಹಿಂದಿನ ಹೋಮ್ ರೂಲ್‌ನಲ್ಲಿನ "ಮೃದು" ಯೂನಿಯನಿಸಂನಿಂದ ಐರಿಶ್ ರಾಷ್ಟ್ರೀಯತೆ ಮತ್ತು ರಿಪಬ್ಲಿಕನಿಸಂನ ಕುರಿತು ಖಚಿತವಾದ ಬೆಂಬಲಕ್ಕೆ ಕಾರಣವಾಯಿತು. ಮತ್ತು ನಂತರ ಇದನ್ನು 'ಇಂಗ್ಲೆಂಡ್‌ನ ಕುರಿತಾದ ಇಷ್ಟವಿಲ್ಲದಿರುವಿಕೆ ಮತ್ತು ಅಪನಂಬಿಕೆ" ಎಂದು ವಿವರಿಸಿದರು.

        ಎಡ್ವರ್ಡ್ ಮಾರ್ಟಿನ್‌ರವರು ಲೇಡಿ ಗ್ರೆಗೊರಿಯವರ ನೆರೆಯವರಾಗಿದ್ದರು. ೧೮೯೬ ರಲ್ಲಿ ಅವರ ಮನೆ ತುಲ್ಲಿರಾ ಕ್ಯಾಸಲ್‌ಗೆ ಭೇಟಿ ನೀಡಿದಾಗ ಅಲ್ಲಿ ಡಬ್ಲ್ಯೂ.ಬಿ.ಯೀಟ್ಸ್‌ರನ್ನು ಮೊದಲ ಸಲ ಭೇಟಿಯಾದರು.  ನಂತರದ ಮುಂದಿನ ಒಂದು ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿಈ ಮೂವರ ನಡುವಿನ ಚರ್ಚೆಗಳು ೧೮೯೯ ರಲ್ಲಿ ಐರಿಶ್ ಲಿಟರರಿ ಥಿಯೇಟರ್ ಸ್ಥಾಪನೆಗೆ ಕಾರಣವಾಯಿತು. ಲೇಡಿ ಗ್ರೆಗೊರಿ ಅದಕ್ಕಾಗಿ ನಿಧಿಸಂಗ್ರಹವನ್ನು ಕೈಗೊಂಡರು, ಇದರ ಮೊದಲ ಕಾರ್ಯಕ್ರಮವು ಮಾರ್ಟಿನ್ ಅವರ 'ದಿ ಹೀದರ್ ಫೀಲ್ಡ್' ಮತ್ತು ಯೀಟ್ಸ್‌ರವರ 'ದಿ ಕೌಂಟೆಸ್ ಕ್ಯಾಥ್ಲೀನ್' ಅನ್ನು ಒಳಗೊಂಡಿತ್ತು.
        ಐರಿಶ್ ಲಿಟರರಿ ಥಿಯೇಟರ್ ಪ್ರಾಜೆಕ್ಟ್ ೧೯೦೧ ರವರೆಗೆ ಮುಂದುವರೆಯಿತು, ನಂತರ ಹಣದ ಕೊರತೆಯಿಂದಾಗಿ ಅದು ನಿಂತುಹೋಯಿತು.  ೧೯೦೪ರಲ್ಲಿ ಲೇಡಿ ಗ್ರೆಗೊರಿ, ಮಾರ್ಟಿನ್, ಯೀಟ್ಸ್, ಜಾನ್ ಮಿಲ್ಲಿಂಗ್ಟನ್ ಸೈಂಗ್,  ಆನ್ನಿ ಹಾರ್ನಿಮನ್, ವಿಲಿಯಂ ಮತ್ತು ಫ್ರಾಂಕ್ ಫೇ ಒಟ್ಟಾಗಿ ಐರಿಶ್ ನ್ಯಾಷನಲ್ ಥಿಯೇಟರ್ ಸೊಸೈಟಿಯನ್ನು ರಚಿಸಿದರು. ಇದರ ಮೊದಲ ಪ್ರದರ್ಶನಗಳು ಮೋಲ್ಸ್ವರ್ತ್ ಹಾಲ್ ಎಂಬ ಕಟ್ಟಡದಲ್ಲಿ ನಡೆದವು.  ಲೋವರ್ ಅಬ್ಬೆ ಸ್ಟ್ರೀಟ್‌ಲ್ಲಿರುವ ಹೈಬರ್ನಿಯನ್ ಥಿಯೇಟರ್ ಆಫ್ ವೆರೈಟೀಸ್ ಮತ್ತು ಮಾರ್ಲ್ಬರೋ ಸ್ಟ್ರೀಟ್‌ಲ್ಲಿರುವ ಪಕ್ಕದ ಕಟ್ಟಡವು ಲಭ್ಯವಾದಾಗ, ಹಾರ್ನಿಮನ್ ಮತ್ತು ವಿಲಿಯಂ ಫೇ ಅವರು ಸಮಾಜದ ಅಗತ್ಯತೆಗಳನ್ನು ಪೂರೈಸಲು ಆ ಕಟ್ಟಡವನ್ನು ಖರೀದಿಸಿ ನಾಟಕಗಳ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಲು ಒಪ್ಪಿಕೊಂಡರು.

     ೧೧ ಮೇ ೧೯೦೪ ರಂದು, ಕಟ್ಟಡದ ಬಳಕೆಯ ಹಾರ್ನಿಮನ್ ಪ್ರಸ್ತಾಪವನ್ನು ಸಮಾಜವು ಔಪಚಾರಿಕವಾಗಿ ಒಪ್ಪಿಕೊಂಡಿತು. ಹಾರ್ನಿಮನ್ ಐರ್ಲೆಂಡ್‌ನಲ್ಲಿ ನೆಲೆಸಿರಲಿಲ್ಲವಾದ್ದರಿಂದ, ಅಗತ್ಯವಿರುವ ರಾಯಲ್ ಲೆಟರ್ಸ್ ಪೇಟೆಂಟ್‌ನ್ನು ಲೇಡಿ ಗ್ರೆಗೊರಿ ಹೆಸರಿನಲ್ಲಿ ನೀಡಲಾಯಿತು. ಅವರದೇ ನಾಟಕಗಳಲ್ಲಿ ಒಂದಾದ 'ಸ್ಪ್ರೆಡಿಂಗ್ ದ ನ್ಯೂಸ್'ಅನ್ನು ೨೭ ಡಿಸೆಂಬರ್ ೧೯೦೪ ರ ರಾತ್ರಿ ಪ್ರದರ್ಶಿಸಲಾಯಿತು.  ೧೯೦೭ರ ಜನವರಿಯಲ್ಲಿ ಸೈಂಗೆಯವರ 'ದ ಪ್ಲೇಬಾಯ್ ಆಫ್ ದಿ ವೆಸ್ಟರ್ನ್‌ವರ್ಲ್ಡ್' ಪ್ರದರ್ಶನಗೊಂಡಾಗ ರೈತರ ಕುರಿತಾಗಿ ಇರುವ ಹಾಸ್ಯವನ್ನು ವಿರೋಧಿಸಿ ಪ್ರೇಕ್ಷಕರು ದಂಗೆಯೆದ್ದರು. ಇದರಿಂದಾಗಿ ಉಳಿದ ಪ್ರದರ್ಶನಗಳನ್ನು ಡಂಬ್ಶೋನಲ್ಲಿ ಪ್ರದರ್ಶಿಸಲಾಯಿತು.  ಲೇಡಿ ಗ್ರೆಗೊರಿ ಯೀಟ್ಸ್ ಮಾಡಿದಂತೆ ನಾಟಕದ ಬಗ್ಗೆ ಹೆಚ್ಚು ಯೋಚಿಸಲಿಲ್ಲ, ಆದರೆ ಸೈಂಗೆಯವರನ್ನು ತಾತ್ವಿಕವಾಗಿ ಬೆಂಬಲಿಸಿದರು.  ಗಲಭೆಗಳ ಬಗ್ಗೆ ಯೀಟ್ಸ್‌ಗೆ ಬರೆದ ಪತ್ರದಲ್ಲಿ "ಇದು ಹಲ್ಲುಜ್ಜುವ ಬ್ರಷ್ ಅನ್ನು ಬಳಸುವವರು ಮತ್ತು ಬಳಸದವರ ನಡುವಿನ ಹಳೆಯ ಯುದ್ಧವಾಗಿದೆ."ಎಂದು ಹೇಳಿ ತಮ್ಮ ದೃಷ್ಟಿಕೋನವನ್ನು ತೋರಿದ್ದಾರೆ.

           ಲೇಡಿ ಗ್ರೆಗೊರಿ ಅವರು ೧೯೨೮ ರಲ್ಲಿ ಅನಾರೋಗ್ಯದಿಂದ ನಿವೃತ್ತರಾಗುವವರೆಗೂ ರಂಗಭೂಮಿಯ ಸಕ್ರಿಯ ನಿರ್ದೇಶಕರಾಗಿದ್ದರು. ಈ ಸಮಯದಲ್ಲಿ ಅವರು ೧೯ ಕ್ಕೂ ಹೆಚ್ಚು ನಾಟಕಗಳನ್ನು ಬರೆದರು, ಮುಖ್ಯವಾಗಿ ಅಬ್ಬೆಯಲ್ಲಿ ಪ್ರದರ್ಶಿಸುವುದಕ್ಕೆಂದೇ ಹಲವಾರು ನಾಟಕಗಳನ್ನು ಬರೆದರು.  ಇವುಗಳಲ್ಲಿ ಹೆಚ್ಚಿನವುಗಳನ್ನು ಕೂಲ್ ಪಾರ್ಕ್‌ನ ಸುತ್ತ ಮಾತನಾಡುವ ಹೈಬರ್ನೋ-ಇಂಗ್ಲಿಷ್ ಉಪಭಾಷೆಯಲ್ಲಿ ಬರೆಯಲಾಗಿದೆ, ಇದು ಕಿಲ್ಟಾರ್ಟನ್‌ನ ಹತ್ತಿರದ ಹಳ್ಳಿಯಿಂದ ಕಿಲ್ಟಾರ್ಟಾನೀಸ್ ಎಂದು ವ್ಯಾಪಕವಾಗಿ ಪ್ರಸಿದ್ಧವಾಯಿತು.  ಅವರ ನಾಟಕಗಳು ಅಬ್ಬೆಯಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡರೂ ಅವರ ಜನಪ್ರಿಯತೆಯು ಕುಸಿಯಿತು.  ಐರಿಶ್ ಬರಹಗಾರ ಆಲಿವರ್ ಸೇಂಟ್ ಜಾನ್ ಗೊಗಾರ್ಟಿ  "ಅವಳ ನಾಟಕಗಳ ನಿರಂತರ ಪ್ರಸ್ತುತಿಯು ಅಬ್ಬೆಯನ್ನು ಬಹುತೇಕ ಹಾಳುಮಾಡಿತು".ಎಂದು ವ್ಯಾಖ್ಯಾನಿಸಿದ್ದಾರೆ.  
 
        ಅವರು ಅಬ್ಬೆ ಮಂಡಳಿಯಿಂದ ನಿವೃತ್ತರಾದಾಗ ಗಾಲ್ವೆಯಲ್ಲಿ ವಾಸಿಸತೊಡಗಿದರು.  ಕೂಲ್ ಪಾರ್ಕ್‌ನಲ್ಲಿರುವ ಮನೆ ಮತ್ತು ಡೆಮೆಸ್ನೆಯನ್ನು ೧೯೨೭ ರಲ್ಲಿ ಐರಿಶ್ ಫಾರೆಸ್ಟ್ರಿ ಕಮಿಷನ್‌ಗೆ ಮಾರಾಟ ಮಾಡಲಾಗಿತ್ತು. ಅವರ ಗಾಲ್ವೇ ಮನೆಯು ಐರಿಶ್ ಸಾಹಿತ್ಯ ಪುನರುಜ್ಜೀವನಕ್ಕೆ ಸಂಬಂಧಿಸಿದ ಬರಹಗಾರರಿಗೆ ದೀರ್ಘಕಾಲ ಕೇಂದ್ರಬಿಂದುವಾಗಿತ್ತು ಮತ್ತು ಇದು ಅವರ ನಿವೃತ್ತಿಯ ನಂತರವೂ ಮುಂದುವರೆಯಿತು.  ಮನೆಯ ಮೈದಾನದಲ್ಲಿದ್ದ ಮರದ ಮೇಲೆ, ಸೈಂಗ್, ಯೀಟ್ಸ್ ಮತ್ತು ಅವರ ಕಲಾವಿದ ಸಹೋದರ ಜಾಕ್, ಜಾರ್ಜ್ ಮೂರ್, ಸೀಯಾನ್ ಒ'ಕೇಸಿ, ಜಾರ್ಜ್ ಬರ್ನಾರ್ಡ್ ಶಾ, ಕ್ಯಾಥರೀನ್ ಟೈನಾನ್ ಮತ್ತು ವಯಲೆಟ್ ಮಾರ್ಟಿನ್ ಅವರ ಕೆತ್ತಿದ ಮೊದಲಕ್ಷರಗಳನ್ನು ಕಾಣಬಹುದು.  ಯೀಟ್ಸ್ ಮನೆ ಮತ್ತು ಮೈದಾನದ ಬಗ್ಗೆ ಇವರು  'ದಿ ವೈಲ್ಡ್ ಸ್ವಾನ್ಸ್ ಅಟ್ ಕೂಲ್', 'ಐ ವಾಕ್ಡ್ ಅಮಾಂಗ್‌ತಹೆ ಸೆವೆನ್ ವುಡ್ಸ್ ಆಫ್ ಕೂಲ್', 'ಇನ್ ದಿ ಸೆವೆನ್ ವುಡ್ಸ್', 'ಕೂಲ್ ಪಾರ್ಕ್, ೧೯೨೯' ಮತ್ತು 'ಕೂಲ್  ಪಾರ್ಕ್ ಮತ್ತು ಬ್ಯಾಲಿಲೀ, ೧೯೩೧' ಎಂಬ ಐದು ಕವನಗಳನ್ನು ಬರೆದಿದ್ದಾರೆ.
           ೧೯೩೨ ರಲ್ಲಿ 'ಶ್ರೇಷ್ಠ ಐರಿಶ್ ಮಹಿಳೆ' ಎಂದು ಹೊಗಳಿಸಿಕೊಂಡ ಲೇಡಿ ಗ್ರೆಗೋರಿ  ಸ್ತನ ಕ್ಯಾನ್ಸರ್‌ನಿಂದ ೮೦ನೆ ವಯಸ್ಸಿನಲ್ಲಿ ತಮ್ಮ ಮನೆಯಲ್ಲಿ ನಿಧನರಾದರು. ಅವರ ಮರಣದ ಮೂರು ತಿಂಗಳ ನಂತರ ಕೂಲ್ ಪಾರ್ಕ್‌ನ ಎಲ್ಲ ವಸ್ತುಗಳನ್ನು ಹರಾಜು ಮಾಡಲಾಯಿತು ಮತ್ತು ೧೯೪೧ರಲ್ಲಿ ಮನೆಯನ್ನು ಕೆಡವಲಾಯಿತು.
       ಮರಣದ ನಂತರವೂ ಅವರ ನಾಟಕಗಳು ಆಗಾಗ್ಗೆ ಪ್ರದರ್ಶನಗೊಂಡಿವೆ. ಅವರ ರೈತ ಹಾಸ್ಯಗಳು ಮತ್ತು ಜಾನಪದವನ್ನು ಆಧರಿಸಿದ ಕಲ್ಪನೆಗಳು ಮತ್ತು ಅಬ್ಬೆ ಥಿಯೇಟರ್‌ಗಾಗಿ ಅವರ ಕೆಲಸಗಳು ೧೯ ನೇ ಶತಮಾನದ ಉತ್ತರಾರ್ಧದಲ್ಲಿ ಐರಿಶ್ ಸಾಹಿತ್ಯಿಕ ಪುನರುಜ್ಜೀವನದಲ್ಲಿ ಗಣನೀಯ ಪಾತ್ರವನ್ನು ವಹಿಸಿದವು ಎಂಬುದು ಬಹುಮುಖ್ಯವಾದುದು. ಅವರ ಡೈರಿ ಹಾಗೂ ಜರ್ನಲ್‌ನ ಬರಹಗಳು ೨೦ನೇ ಶತಮಾನದ ಮೊದಲ ಮೂರು ದಶಕಗಳಲ್ಲಿ ಐರಿಶ್ ಸಾಹಿತ್ಯಿಕ ಇತಿಹಾಸದ ಬಗ್ಗೆ ಶ್ರೀಮಂತ ಮಾಹಿತಿಯ ಮೂಲವನ್ನು ಒದಗಿಸುವ ಆಕರಗಳು ಎಂದು ಪರಿಗಣಿಸಲ್ಪಟ್ಟಿದೆ.
          ಅವಳ ಕುಚುಲೇನ್ ಆಫ್ ಮುಯಿರ್ತೆಮ್ನೆ ಅಲ್ಸ್ಟರ್ ಸೈಕಲ್ ಕಥೆಗಳಾದ ಡೀಡ್ರೆ, ಕುಚುಲೇನ್, ಮತ್ತು ಟೈನ್ ಬೋ ಕುಯಿಲ್ಂಜ್ ಕಥೆಗಳ ಉತ್ತಮ ಪುನರಾವರ್ತನೆ ಎಂದು ಈಗಲೂ ಪರಿಗಣಿಸಲಾಗಿದೆ.  ಥಾಮಸ್ ಕಿನ್ಸೆಲ್ಲಾ  'ಲೇಡಿ ಗ್ರೆಗೋರಿಯ ಕ್ಯುಚುಲೇಲ್ ಆಫ್ ಮುಯಿರ್ತೆಮ್ನೆ, ಕೇವಲ ಒಂದು ಪ್ಯಾರಾಫ್ರೇಸ್, ಅಲ್ಸ್ಟರ್ ಕಥೆಗಳ ಅತ್ಯುತ್ತಮ ಕಲ್ಪನೆಯನ್ನು ನೀಡಿತು ಎಂಬ ದೃಢವಿಶ್ವಾಸವನ್ನು ನಾನು ಹೊಂದಿದ್ದೇನೆ' ಎಂದಿದ್ದಾರೆ.  ಆದಾಗ್ಯೂ ಅವರ  ಆವೃತ್ತಿಯಲ್ಲಿನ ಕಥೆಯ ಕೆಲವು ಅಂಶಗಳನ್ನು ಬಿಟ್ಟುಬಿಟ್ಟಿದೆ.  ವಿಕ್ಟೋರಿಯನ್ ಕುರಿತಾದ ವಿರೋಧಿ ಸಂವೇದನೆಗಳನ್ನು ಹೇಳುವುದರಿಂದ ರಾಜತ್ವವನ್ನು ವಿರೋಧಿಸಿದ ಅಪರಾಧ ಮಾಡುವುದನ್ನು ತಪ್ಪಿಸಲು ಹೀಗೆ ಮಾಡಿರಬಹುದೆಂದು ಊಹಿಸಲಾಗಿದೆ, ಇವರ ಕೃತಿಗಳು ಐರಿಶ್‌ಗಾಗಿ ಗೌರವಯುತ ಪುರಾಣವನ್ನು ಪ್ರಸ್ತುತಪಡಿಸುವ ಪ್ರಯತ್ನವೆಂಬುದನ್ನು ಅಲ್ಲಗಳೆಯುವಂತಿಲ್ಲ. ವಿಮರ್ಶಕರು ಅವರ ಕೃತಿಗಳಲ್ಲಿನ ಬೌಡ್ಲರೈಸೇಷನ್‌ಗಳನ್ನು ಹೆಚ್ಚು ಆಕ್ರಮಣಕಾರಿಯಾಗಿ ಎಂದು ಪರಿಗಣಿಸುತ್ತಾರೆ. ಲೈಂಗಿಕತೆಯ ಮುಕ್ತ ಅಭಿವ್ಯಕ್ತಿ ಎಂದೂ ಹೇಳಿದ್ದಾರೆ. ಸ್ಟ್ಯಾಂಡಿಶ್ ಒ'ಗ್ರಾಡಿಯಲ್ಲಿ ತನ್ನ ಸಮಕಾಲೀನ ಪುರುಷರಿಗಿಂತ ಮುಕ್ತವಾಗಿ ಮಾತನಾಡಿದ್ದನ್ನು ಕಾಣಬಹುದು.
           ನವೆಂಬರ್ ೨೦೨೦ಕ್ಕಿಂತ ಮೊದಲು ಡಬ್ಲಿನ್‌ನ  ಟ್ರಿನಿಟಿ ಕಾಲೇಜ್ ಲೈಬ್ರರಿಯ ನಲವತ್ತು ಬಸ್ಟ್‌ಗಳು ಈ ಹಿಂದೆ ಪುರುಷರನ್ನು ಮಾತ್ರ ಪ್ರತಿನಿಧಿಸುತ್ತಿದ್ದವು. ಇದೀಗ ನಾಲ್ಕು ಹೆಚ್ಚುವರಿ ಮಹಿಳೆಯರ ಬಸ್ಟ್‌ಗಳನ್ನು ನಿಯೋಜಿಸುತ್ತಿದೆ. ಅವುಗಳಲ್ಲಿ ಒಂದು 'ಬುದ್ಧಿವಂತ ವ್ಯಕ್ತಿಯಂತೆ ಯೋಚಿಸುವುದು, ಆದರೆ ಸಾಮಾನ್ಯ ಜನರಂತೆ ತನ್ನನ್ನು ತಾನು ವ್ಯಕ್ತಪಡಿಸುವುದು.' ಎನ್ನುವ ಅರಿಸ್ಟಾಟಲ್‌ನ ಮಾತನ್ನು ಧ್ಯೇಯವಾಕ್ಯದಂತೆ ಪಾಲಿಸಿದ ಲೇಡಿ ಗ್ರೆಗೊರಿ ಅವರ ಬಸ್ಟ್ ಎಂದು ಘೋಷಿಸಿರುವುದು ಹೆಮ್ಮೆಯ ವಿಷಯ.  
lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220722_4_4




 

Wednesday, 13 July 2022

ಎಲಿಜಬೆತ್ ಗ್ಯಾಸ್ಕೆಲ್





ಎಲಿಜಬೆತ್ ಗ್ಯಾಸ್ಕೆಲ್

  ೨೯ಸೆಪ್ಟೆಂಬರ್ ೧೮೧೦ರಂದು ಲಂಡನ್‌ನ  ಚೆಲ್ಸಿಯಾದ ಲಿಂಡ್ಸೆರೋನಲ್ಲಿ ಜನಿಸಿದ ಎಲಿಜಬೆತ್ ಗ್ಯಾಸ್ಕೆಲ್ ವಿಕ್ಟೋರಿಯನ್ ಅವಧಿಯ ಜನಪ್ರಿಯ ಮತ್ತು ವಿಮರ್ಶಾತ್ಮಕವಾಗಿ ಅತ್ಯಂತ ಮೆಚ್ಚುಗೆ ಪಡೆದ ಇಂಗ್ಲಿಷ್ ಬರಹಗಾರ್ತಿ.  ಆರು ಕಾದಂಬರಿಗಳು, ಷಾರ್ಲೆಟ್ ಬ್ರಾಂಟೆ ಅವರ ಅಧಿಕೃತ ಜೀವನಚರಿತ್ರೆ, ಹಲವಾರು ಕಾದಂಬರಿಯಂತಹ ಫಿಕ್ಷನ್‌ಗಳು, ಸುಮಾರು ಮೂವತ್ತು ಸಣ್ಣ ಕಥೆಗಳು ಮತ್ತು ಹಲವಾರು ರೇಖಾಚಿತ್ರಗಳನ್ನು ಬರೆದ ಇವರು ಶ್ರೀಮತಿ ಗ್ಯಾಸ್ಕೆಲ್, ಲಿಲಿ, ಕಾಟನ್ ಮ್ಯಾಥರ್ ಮಿಲ್ಸ್ ಮುಂತಾದ ಹೆಸರುಗಳಿಂದಲೂ ಗುರುತಿಸಲ್ಪಟ್ಟಿದ್ದರು.  
         ತಂದೆ  ಬರ್ವಿಕ್ ಅಪಾನ್ ಟ್ವೀಡ್‌ನ ಯುನಿಟೇರಿಯನ್ ಹಾಗೂ ಲಂಕಾಶೈರ್‌ನ ಫೇಲ್‌ವರ್ತ್‌ನಲ್ಲಿ ಮಂತ್ರಿ, ರೈತ, ಬರಹಗಾರ, ಶಿಕ್ಷಕ, ಖಜಾನೆಯ ದಾಖಲೆಗಳ ಸುವ್ಯವಸ್ಥಿತವಾಗಿ ಜೋಡಿಸುವವರಾಗಿದ್ದ ವಿಲಿಯಂ ಸ್ಟೀವನ್ಸನ್. ತಾಯಿ ಲಂಕಾಶೈರ್ ಹಾಗೂ ಚೆಶೈರ್‌ನ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಎಲಿಜಬೆತ್ ಹಾಲೆಂಡ್. ಎಂಟು ಜನ ಮಕ್ಕಳಲ್ಲಿ ಬದುಕುಳಿದ ಇಬ್ಬರು ಎಲಿಜಬೆತ್ ಹಾಗೂ ಸಹೋದರ ಜಾನ್. ಕೊನೆಯ ಮಗಳು ಹುಟ್ಟಿದ ಹದಿಮೂರು ತಿಂಗಳಲ್ಲೇ ತೀರಿಕೊಂಡಾಗ ಆಘಾತಗೊಂಡ ತಾಯಿ ತಂದೆಯಿಂದ ದೂರವಾಗಿದ್ದಳು. ನಂತರ ಅವಳ ಹೆರಿಗೆ ಮಾಡಿದ್ದ ವೈದ್ಯೆ ಕ್ಯಾಥರಿನ್ ಥಾಮ್ಸನ್ ಅವರನ್ನು ೧೮೧೪ರಲ್ಲಿ ಅವಳಿಗೆ ನಾಲ್ಕು ವರ್ಷಗಳಾಗಿದ್ದಾಗ ತಂದೆ ಮರುಮದುವೆಯಾದರು. ಆಸಕ್ತಿದಾಯಕ ವಿಷಯವೆಂದರೆ ಇವರ ತಂದೆ ವಿಲಿಯಂ ಹಾಗೂ ಸಹೋದರ ಜಾನ್ ಇಬ್ಬರಿಗೂ ಭಾರತಕ್ಕೆ ತೆರಳಿ ಅಧಿಕಾರಿಯಾಗುವ ಅಥವಾ ವ್ಯಾಪಾರಿಯಾಗಿ ಲಾಭಗಳಿಸುವ ಬಹುದೊಡ್ಡ ಆಸೆಯಿತ್ತು. ತಂದೆ ಭಾರತದ ಗವರ್ನರ್ ಜನರಲ್ ಆಗಬೇಕಿದ್ದ ಅರ್ಲ್ ಆಫ್ ಲಾಡರ್‌ಡೇಲ್‌ಗೆ ಕಾರ್‍ಯದರ್ಶಿಯಾಗಿ ನೇಮಕಗೊಂಡಿದ್ದರೂ ಅವಕಾಶ ಸಿಕ್ಕಲಿಲ್ಲ. ನೌಕಾಪಡೆಯಲ್ಲಿ ಕೆಲಸ ಮಾಡಲು ಬಯಸಿದ್ದ ಸಹೋದರನಿಗೆ ಸೈನ್ಯ ಸೇರಲು ಆಗದೆ ಈಸ್ಟ್ ಇಂಡಿಯಾ ಕಂಪನಿಯ ಮರ್ಚಂಟ್ ನೇವಿ ವಿಭಾಗ ಸೇರಿದ. ೧೮೨೭ರಲ್ಲಿ ಭಾರತದ ದಂಡಯಾತ್ರೆಗೆ ಹೊರಟಿದ್ದ ಹಡಗಿನಲ್ಲಿದ್ದವನು ನಿಗೂಢವಾಗಿ ಕಣ್ಮರೆಯಾಗಿದ್ದ. ತನಗಿಂತ ಹದಿಮೂರು ವರ್ಷ ದೊಡ್ಡವನಾಗಿದ್ದ ಅಣ್ಣನಿಗೆ ಪತ್ರ ಬರೆಯುತ್ತಿದ್ದ ಎಲಿಜಬೆತ್‌ಳ ಬರವಣಿಗೆಗಾಗಿ ಜರ್ನಲ್ ಇಟ್ಟುಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದ ಆತನ ನಿಗೂಡ ಕಣ್ಮರೆಯನ್ನು ತನ್ನ ಹಲವಾರು ಕಥೆ ಕಾದಂಬರಿಗಳಲ್ಲಿ ಕಳೆದುಹೋದ ಅಥವಾ ಸತ್ತ ಎಂದು ತಿಳಿದುಕೊಂಡ ಪಾತ್ರ ಪುನಃ ಮರಳಿ ಬಂದದ್ದನ್ನು ರೂಪಕವಾಗಿ ಬಳಸಿ ಸಮಾಧಾನಗೊಂಡಿದ್ದನ್ನು ಕಾಣಬಹುದು. ಸಹೋದರನ ಮರಣದ ನಂತರ ಪಾರ್ಶ್ವವಾಯುವಿಗೆ ಒಳಗಾಗಿದ್ದ ತಂದೆಯನ್ನು ಸಮಾಧಾನಪಡಿಸಲು ಹೋಗಿದ್ದ ಎಲಿಜಬೆತ್ ನಂತರ ಇಪ್ಪತ್ತೈದು ವರ್ಷಗಳ ಕಾಲ ತಂದೆ ಹಾಗೂ ಮಲತಾಯಿಯನ್ನು ಭೇಟಿಮಾಡಲಿಲ್ಲ. ಕೌಟುಂಬಿಕ ಹಾಗೂ ತಂದೆ-ತಾಯಿ ಜೊತೆಗಿಲ್ಲದ ನೋವು ಅವರ ಬರವಣಿಗೆಯನ್ನಷ್ಟೇ ಅಲ್ಲದೆ ಮುಂದಿನ ಜೀವನವನ್ನೂ ಬದಲಾಯಿಸಿತು.  

      ಬಾಲ್ಯದಲ್ಲಿ ಚೆಷೈರ್‌ನ ನಟ್ಸ್‌ಫೋರ್ಡ್‌ನಲ್ಲಿ ತಾಯಿಯ ತಂಗಿ ಹನ್ನಾ ಹಾಲೆಂಡ್ ಲಂಬ್ ಜೊತೆ ವಾಸಿಸಬೇಕಾಯಿತು. ಚಿಕ್ಕಮ್ಮನನ್ನು ತಾಯಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಎಲಿಜಬೆತ್ ಅದನ್ನು ಕೆಲವೆಡೆ ಹೇಳಿಕೊಂಡಿದ್ದಾರೆ.  ತಾಯಿಯ ಹಾಲೆಂಡ್ ಕುಟುಂಬದ ಜೊತೆ ಬಾಲ್ಯ, ನಂತರ ಬೋರ್ಡಿಂಗ್ ಶಾಲೆಯಲ್ಲಿ ಐದು ವರ್ಷಗಳನ್ನು ಕಳೆದು ೩೦ಅಗಸ್ಟ್೧೮೩೨ರಂದು ೨೨ನೇ ವಯಸ್ಸಿನಲ್ಲಿ ಯುನಿಟೇರಿಯನ್‌ನಲ್ಲಿ ಮಂತ್ರಿಯಾಗಿದ್ದ ವಿಲಿಯಂ ಗ್ಯಾಸ್ಕೆಲ್‌ರನ್ನು  ನಟ್ಸ್‌ಫೋರ್ಡ್‌ನಲ್ಲಿ ಮದುವೆಯಾಗಿ ಮ್ಯಾಂಚೆಸ್ಟರ್‌ನಲ್ಲಿ ನೆಲೆಸುವವರೆಗೂ ಲಂಡನ್, ನ್ಯೂಕ್ಯಾಸಲ್, ಎಡಿನ್‌ಬರ್ಗ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ತನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರನ್ನು ಭೇಟಿ ಮಾಡಿದರು. ಈ ಮದುವೆಯು ಮುಂದಿನ ಮೂವತ್ಮೂರು ವರ್ಷಗಳ ಕಾಲ ತಾಯಿಯಿಲ್ಲದ ಯುವತಿಗೆ ತನ್ನದೆ ಆದ ಕುಟುಂಬ, ಪರರ ಸೇವೆಯಲ್ಲಿನ ಸಾರ್ಥಕ್ಯಭಾವ ಹಾಗೂ ಬರವಣಿಗೆ ಮುಂತಾದ ತುಂಬ ಇಷ್ಟಪಡುವ ಉಡುಗೊರೆಯನ್ನು ನೀಡಿತು. ಮದುವೆಯ ಆರಂಭಿಕ ವರ್ಷಗಳಲ್ಲಿ ಮ್ಯಾಂಚೆಸ್ಟರ್‌ನ ಕಾರ್ಮಿಕ ವರ್ಗದ ಜೊತೆ ಕೈಗಾರಿಕೆ, ಶೈಕ್ಷಣಿಕ ಯೋಜನೆಗಳಲ್ಲಿ ಪತಿಯೊಂದಿಗೆ ಕೆಲಸ ಮಾಡಿದರು. ಅವರಿಗೆ ಆರು ಮಕ್ಕಳು. ೧೮೩೩ರಲ್ಲಿ ಮೊದಲ ಮಗಳು ತೀರಿಕೊಂಡಳು. ನಂತರ ೧೮೩೫ರಲ್ಲಿ ಮಗಳು ಮರಿಯಾನ್ನೆಯ ಬೆಳವಣಿಗೆಯನ್ನು ದಾಖಲಿಸಲು ಡೈರಿ ಬರೆಯತೊಡಗಿದರು. ನಂತರ ಮರಿಯಾನ್ನೆ ಹಾಗೂ ಅವಳ ತಂಗಿ ಮೆಟಾ ಇಬ್ಬರ ಬಾಲ್ಯದ ಆಟಪಾಠ, ಅವರ ಸಂಬಂಧಗಳ ಕುರಿತು, ತಾಯಿಯಾಗಿ ತಾನು ಮಾಡಬೇಕಾದ ಕರ್ತವ್ಯ, ಮೌಲ್ಯಗಳು, ನಂಬಿಕೆ ಹಾಗೂ ಇತರ ವಿಷಯಗಳ ಕುರಿತು ಡೈರಿಯಲ್ಲಿ ಬರೆಯತೊಡಗಿದರು. ೧೮೩೬ರಲ್ಲಿ ಗಂಡನೊಂದಿಗೆ ಸೇರಿ ಕವಿತೆಗಳನ್ನು ಬರೆದರಾದರೂ ಅವರು ಸ್ವತಂತ್ರವಾಗಿ ಪ್ರಕಟಿಸಿದ ಕೃತಿ 'ಎ ಲೇಡಿ'. ೧೮೪೦ರಲ್ಲಿ 'ದಿ ರೂರಲ್ ಲೈಫ್ ಆಫ್ ಇಂಗ್ಲೆಂಡ್' ಪ್ರಕಟವಾಯಿತು. ನಂತರ 'ನೋಟ್ಸ್ ಆನ್ ಚೆಷೈರ್ ಕಸ್ಟಮ್ಸ್' ಎರಡನೆ ಸಂಪುಟವಾಗಿ ಪ್ರಕಟವಾಯಿತು.
   ಮದುವೆಯಾದ ಹೊಸತರಲ್ಲಿ ತನ್ನ ಗಂಡನ ಜೊತೆ ಭಾನುವಾರದ ರಜಾ ದಿನಗಳಲ್ಲಿ ಶಾಲೆಗಳನ್ನು ಮತ್ತು ಸಂಜೆ ತರಗತಿಗಳನ್ನು ನಡೆಸುತ್ತಿದ್ದರು.  ಮೆಕ್ಯಾನಿಕ್ಸ್ ಇನ್ಸ್ಟಿಟ್ಯೂಟ್ ಫಾರ್ ವರ್ಕಿಂಗ್-ಕ್ಲಾಸ್ ಮೆನ್‌ನ ಸಂಜೆ ಶಾಲೆಯಲ್ಲಿ ವಿಲಿಯಂ ನೀಡಿದ ಉಪನ್ಯಾಸಗಳ ಸರಣಿಗಾಗಿ ವರ್ಡ್ಸ್‌ವರ್ತ್, ಬೈರಾನ್, ಕ್ರ್ಯಾಬ್, ಡ್ರೈಡನ್ ಮತ್ತು ಪೋಪ್ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಎಲಿಜಬೆತ್  ಮ್ಯಾಂಚೆಸ್ಟರ್‌ನಲ್ಲಿ ತನ್ನ ಜೀವನದುದ್ದಕ್ಕೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.  ಜೈಲುಗಳಿಗೆ ಮತ್ತು ಕಾರ್ಖಾನೆಗಳಿಗೆ ಭೇಟಿ ನೀಡುತ್ತಿದ್ದರು.  ವಿದೇಶದ ಮೋಹಕ್ಕೆ ಒಳಗಾಗಿ ಮೋಸಹೋದ ಯುವತಿಯರಿಗೆ ಸಹಾಯ ಮಾಡುವುದು, ತನ್ನ ಮನೆಯಲ್ಲಿ ಬಡವರಿಗೆ ತರಗತಿಗಳನ್ನು ನಡೆಸುವುದು ಅವರ ಹವ್ಯಾಸವಾಗಿತ್ತು.  ಕೋರಲ್ ಲ್ಯಾನ್ಸ್‌ಬರಿ ವರದಿಯಲ್ಲಿ, "ಅವಳ ಪಾಲಿಗೆ ಕೊಳೆಗೇರಿಗಳು ದೂರದಿಂದ ಕಾಣುವ ವಿಚಿತ್ರ ಮತ್ತು ಅನ್ಯಲೋಕವಾಗಿರಲಿಲ್ಲ. ಬದಲಾಗಿ ಬಡತನವನ್ನು ನೋಡುವ ಮತ್ತು ಅನುಭವಿಸುವ ನಿರಾಶಾದಾಯಕ ದರಿದ್ರತೆಯ ಪರಿಚಿತ ಸ್ಥಳಗಳಾಗಿದ್ದವು." ಎಂದು ಹೇಳಲಾಗಿದೆ.
       ಎರಡನೆಯ ಮಗಳು ಮೆಟೊ ಜನಿಸಿದ ಸಂದರ್ಭದಲ್ಲಿ ಅವಳ ಚಿಕ್ಕಮ್ಮ ಅನಾರೋಗ್ಯದಿಂದ ತೀರಿಕೊಂಡರು. ಹೀಗಾಗಿ ಖಿನ್ನತೆಗೊಳಗಾದ ಎಲಿಜಬೆತ್ ಗ್ಯಾಸ್ಕೆಲ್ ಬರವಣಿಗೆಯಲ್ಲಿ ಸಾಂತ್ವನ ಮತ್ತು ಸಮಾಧಾನವನ್ನು ಕಂಡುಕೊಂಡರಲ್ಲದೆ ವಿಲಿಯಂನ ಸಂಶೋಧನೆಗೆ ಸಹಾಯ ಮಾಡುತ್ತ "ದ ಪೊಯೆಟ್ಸ್ ಅಂಡ್ ಪೊಯೆಟ್ರಿ ಆಫ್ ಹಂಬಲ್ ಲೈಫ್" ಕುರಿತು ಉಪನ್ಯಾಸಗಳ ಸರಣಿಯನ್ನು ಬರೆದರು.
     ೧೮೪೧ರಲ್ಲಿ ಕೈಗೊಂಡ ಬೆಲ್ಜಿಯಂ ಹಾಗೂ ಜರ್ಮನಿಯ ಪ್ರವಾಸ ಇವರ ಸಣ್ಣಕಥೆಗಳ ಬರವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿತು. ಮೂರನೇ ಮಗಳು ಫ್ಲಾರೆನ್ಸ್ ಎಲಿಜಬೆತ್ ಗ್ಯಾಸ್ಕೆಲ್ ೧೮೪೨ ರಲ್ಲಿ ಜನಿಸಿದ ಎರಡು ವರ್ಷಗಳ ನಂತರ ಅಂದರೆ ೧೮೪೪ರಲ್ಲಿ ಅವರ ಮೊದಲ ಮಗ ವಿಲಿಯಂನ ಜನನವಾಯಿತಾದರೂ ಹತ್ತುತಿಂಗಳ ನಂತರ ಸ್ಕಾರ್ಲೆಟ್ ಜ್ವರದಿಂದ ಸಾವಿಗೀಡಾದ. ಅವರ ಆಘಾತವನ್ನು ಕಂಡ ಪತಿ ಅವರು  ತನ್ನ ಚಿಕ್ಕಮ್ಮ ಲುಂಬ್‌ನ ಮರಣದ ನಂತರ ಅವಳು ಅನುಭವಿಸಿದಂತಹ ಖಿನ್ನತೆಗೆ ಹೆದರಿ ಬರವಣಿಗೆ ಮಾತ್ರ ಅವಳನ್ನು ಸಮಾಧಾನ ನೀಡುವ ಸಾಮರ್ಥ್ಯವನ್ನು ಹೊಂದಿದೆಯೆಂದು ಅರಿತು ದೊಡ್ಡದೊಡ್ಡ ಪುಸ್ತಕವನ್ನು ಬರೆಯಲು ಸೂಚಿಸಿದನು. ಆದ್ದರಿಂದ, ೧೮೪೫ರಲ್ಲಿ ಅವರು ಮೇರಿ ಬಾರ್ಟನ್ ಅನ್ನು ಬರೆಯಲು ಪ್ರಾರಂಭಿಸಿದರು, ಅದು ಎಲಿಜಬೆತ್ ಗ್ಯಾಸ್ಕೆಲ್‌ರನ್ನು ಆಂಗ್ಲ ಸಾಹಿತ್ಯಿಕ ವಲಯದಲ್ಲಿ ಪ್ರಸಿದ್ಧಿಪಡೆಯುವಂತೆ ಮಾಡಿತು.
ಮೇರಿ ಬಾರ್ಟನ್: ಎ ಟೇಲ್ ಆಫ್ ಮ್ಯಾಂಚೆಸ್ಟರ್ ಲೈಫ್, ಇದನ್ನು ಎಲಿಜಬೆತ್ ಅವರು ಕಾದಂಬರಿ ಎನ್ನುವುದಕ್ಕಿಂತ ಹೆಚ್ಚಾಗಿ "ದುರಂತ ಕವಿತೆ"ಯೆಂದು ವಿವರಿಸಿದರು. ಅವರ ವೈಯಕ್ತಿಕ ದುಃಖ ಮತ್ತು ಮ್ಯಾಂಚೆಸ್ಟರ್‌ನ ದುಡಿಯುವ ಬಡವರ ದುಃಖಗಳ ಬಗ್ಗೆ ಅನುಭವಿಸಿದ ಸಹಾನುಭೂತಿ ಎರಡರಿಂದಲೂ ವಿಷಯವನ್ನು ಆಯ್ದುಕೊಂಡು ಬರೆದ ಕಾದಂಬರಿಯಾಗಿದೆ. ಇದು ತೀವ್ರವಾದ ಹಸಿವು ಮತ್ತು ಚಾರ್ಟಿಸ್ಟ್ ಮತ್ತು ಟ್ರೇಡ್‌ಯೂನಿಯನ್ ಚಳುವಳಿಗಳ ಕುರಿತು ಹೇಳುತ್ತದೆ. ಬೆಂಜಮಿನ್ ಡಿಸ್ರೇಲಿ, ಥಾಮಸ್ ಕಾರ್ಲೈಲ್, ಚಾರ್ಲ್ಸ್ ಕಿಂಗ್ಸ್ಲಿ, ಷಾರ್ಲೊಟ್ ಬ್ರಾಂಟೆ, ಚಾರ್ಲ್ಸ್ ಡಿಕನ್ಸ್, ಮತ್ತು ಮ್ಯಾಥ್ಯೂ ಅರ್ನಾಲ್ಡ್ ಅವರ ಬರಹಗಳಲ್ಲಿ ಕಂಡುಬರುವಂತೆ ಯಜಮಾನರು ಮತ್ತು ಸಾಮಾನ್ಯರ, ಶ್ರೀಮಂತರು ಮತ್ತು ಬಡವರ ಪ್ರತ್ಯೇಕ ಪ್ರಪಂಚದ ಕುರಿತು ಹೇಳಲಾಗಿದೆ.  ಈ ಕಾದಂಬರಿಯು ವಿವಾದವನ್ನು ಹುಟ್ಟುಹಾಕಿತು. ಏಕೆಂದರೆ ಈ ಕಾದಂಬರಿಯ ನಾಯಕ ಜಾನ್ ಬಾರ್ಟನ್ ಹಸಿವು, ಅನ್ಯಾಯಕ್ಕೆ ಒಳಗಾಗಿ ಹತಾಶೆಯಿಂದ ಕಾರ್ಖಾನೆಯ ಮಾಲೀಕನ ಮಗನನ್ನು ಕೊಲ್ಲುತ್ತಾನೆ. ಈ ಚಿತ್ರಣ ಪ್ರಭುತ್ವವನ್ನು ಕೆರಳಿಸಿತು. ೧೮೪೮ರಲ್ಲಿ ಅನಾಮಧೇಯವಾಗಿ ಪ್ರಕಟವಾದ ಈ ಕಾದಂಬರಿಯು ಅದರ ವಿಷಯದ ಸಮಯೋಚಿತತೆಯಿಂದಾಗಿ ಮಾತ್ರವಲ್ಲದೆ ಅದರ ಕಥೆಯ ಶಕ್ತಿ, ಅದರ ಪಾತ್ರಗಳು ಮತ್ತು ನಗರ ಜೀವನದ ಎದ್ದುಕಾಣುವ ಪ್ರಚೋದನೆಯಿಂದಾಗಿ ಉತ್ತಮ ಯಶಸ್ಸನ್ನು ಕಂಡಿತು. ಆದರೆ ಬಹಳ ಬೇಗ ಕಾದಂಬರಿಕಾರ್ತಿ ಯಾರೆಂಬುದು ಎಲ್ಲರಿಗೂ ತಿಳಿಯಿತಲ್ಲದೆ ೧೮೪೯ರಲ್ಲಿ ಲಂಡನ್‌ಗೆ ಭೇಟಿ ನೀಡಿದಾಗ, ಸಾಹಿತ್ಯಿಕ ಸಂಸ್ಥೆಯು ಅವರನ್ನು ಪ್ರಸಿದ್ಧ ವ್ಯಕ್ತಿ ಎಂದು ಪರಿಗಣಿಸಿತು. ಥಾಮಸ್ ಕಾರ್ಲೈಲ್, ಸ್ಯಾಮ್ಯುಯೆಲ್ ರೋಜರ್ಸ್ ಮತ್ತು ಚಾರ್ಲ್ಸ್ ಡಿಕನ್ಸ್ ಅವರಂತಹ ಬರಹಗಾರರನ್ನು ಭೇಟಿಯಾಗುವ ಅವಕಾಶ ನೀಡಿತು.

 ೧೮೪೭ರಲ್ಲಿ  ಕಾಟನ್ ಮ್ಯಾಥರ್‌ಮಿಲ್ಸ್ ಎಂಬ ಗುಪ್ತಹೆಸರಿನಿಂದ ಬರೆದ 'ಲಿಬ್ಬೆ ಮಾರ್ಷಸ್ ತ್ರೀ ಎರಾಸ್' ಕಥೆ ಹೋವಿಟ್ಸ್ ಜರ್ನಲ್‌ನಲ್ಲಿ ಪ್ರಕಟವಾಯಿತು. 'ದಿ ಸೆಕ್ಸ್ಟನ್ಸ್ ಹೀರೋ' ಕಥೆಯನ್ನು ಪ್ರಕಟಿಸುವಾಗಲೂ ಇದೇ ಗುಪ್ತ ಹೆಸರಿನಿಂದ ಬರೆದಿದ್ದರು. 
ಆದರೆ 'ಕ್ರಿಸ್‌ಮಸ್ ಸ್ಟಾರ್ಮ್ಸ ಆಂಡ್ ಸನ್‌ಶೈನ್' ಕಥೆಯ ನಂತರ ತನ್ನ ಗುಪ್ತನಾಮವನ್ನು ಬಿಟ್ಟುಬಿಟ್ಟರು.

            ೧೮೫೦ರಲ್ಲಿ ಡಿಕನ್ಸ್‌ಗೆ ಪತ್ರ ಬರೆದು ವೈಶ್ಯಾವಾಟಿಕೆ ಮಾಡುತ್ತಿರುವ ಆರೋಪದ ಹಿನ್ನಲೆಯಲ್ಲಿ ಜೈಲಿನಲ್ಲಿರುವ ಪ್ಲಾಸಿ ಎಂಬ ಯುವತಿಗೆ ಸಹಾಯ ಮಾಡಬೇಕೆಂದು ಕೇಳಿದರು. ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಅವಕಾಶವಿಲ್ಲದ ಯುವತಿಯರಿಗೆ ಸಹಾಯ ಮಾಡಲು ಡಿಕನ್ಸ್ ಆಸಕ್ತಿ ಹೊಂದಿದ್ದಾರೆಂದು ತಿಳಿದು ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದರು. ಈ ಯುವತಿಯ ಕಥೆಯು ೧೮೫೩ರಲ್ಲಿ ಪ್ರಕಟವಾದ ರೂತ್ ಎಂಬ ಕಾದಂಬರಿ ಬರೆಯಲು ಪ್ರೇರೇಪಿಸಿತು, ಇದು ವಿಕ್ಟೋರಿಯನ್ ಯುಗದ "ಪತನಗೊಂಡ ಮಹಿಳೆ"ಯ ದುಃಸ್ಥಿತಿಗಾಗಿ ಲೇಖಕರು ಸೃಷ್ಟಿಸುವ ಸಹಾನುಭೂತಿಯಿಂದಾಗಿ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿತು. ಮ್ಯಾಂಚೆಸ್ಟರ್‌ನ  ನೆರೆಹೊರೆಯವರೂ ಸಹ ಅವರ ಈ ದೃಷ್ಟಿಕೋನವನ್ನು ಒಪ್ಪಿಕೊಳ್ಳಲಿಲ್ಲ.  ಆದಾಗ್ಯೂ ಸಾಹಿತ್ಯಿಕ ಮತ್ತು ಧಾರ್ಮಿಕ ಮುಖಂಡರು ಸಾಮಾಜಿಕ ಸಮಸ್ಯೆಯ ಆಯ್ಕೆ ಮತ್ತು ಪರಿಹಾರದಲ್ಲಿ ಗ್ಯಾಸ್ಕೆಲ್ ತೋರಿದ ಧೈರ್ಯವನ್ನು ಶ್ಲಾಘಿಸುವ ಮೂಲಕ ಸಾಮಾಜಿಕ ಸಹಾನುಭೂತಿಯ ಅಲೆಯನ್ನು ಅವರ ಪರವಾಗಿ ತಿರುಗಿಸಿದರು.
೧೮೫೦ರಲ್ಲಿ, ಡಿಕನ್ಸ್ ತನ್ನ ಹೊಸ ಸಾಪ್ತಾಹಿಕ, ಹೌಸ್‌ಹೋಲ್ಡ್ ವರ್ಡ್ಸ್‌ಗೆ ಬರವಣಿಗೆ ನೀಡುವಂತೆ ಗ್ಯಾಸ್ಕೆಲ್‌ಗೆ ಆಹ್ವಾನ ನೀಡಿದ್ದರು. ಆಹ್ವಾನವನ್ನು ಒಪ್ಪಿಕೊಂಡ ಎಲಿಜಬೆತ್ ಮ್ಯಾಂಚೆಸ್ಟರ್ ಜೀವನವನ್ನು ಆಧರಿಸಿದ "ಲಿಜ್ಜೀಲೀ" ಕಳುಹಿಸಿದರು. ನಿಯಮಿತವಾಗಲ್ಲದಿದ್ದರೂ ೧೮೫೧ರಿಂದ ೧೮೫೩ರವರೆಗೆ ಕಳುಹಿಸಿದ ರೇಖಾಚಿತ್ರಗಳ ಸರಣಿಯಿಂದ ಓದುಗರು ಪ್ರಭಾವಿತರಾದರು. ಅದು ಅವರ ಅತ್ಯಂತ ಪ್ರೀತಿಯ ಪುಸ್ತಕ 'ಕ್ರಾನ್‌ಫೋರ್ಡ್'.


 ಕ್ರ್ಯಾನ್‌ಫೋರ್ಡ್ ಕಾದಂಬರಿಯು ಮೇರಿ ಬಾರ್ಟನ್ ಮತ್ತು ರೂತ್‌ಗಿಂತ ಸಂಪೂರ್ಣವಾಗಿ ವಿಭಿನ್ನವಾದ ಟಿಪ್ಪಣಿಯನ್ನು ಹೊಂದಿದೆ. ಮೊದಲಿನ ಕಾದಂಬರಿಗಳಂತೆ ನಗರದ ಸಾಮಾಜಿಕ ಸಮಸ್ಯೆಗಳ ಬದಲು ಕ್ರ್ಯಾನ್‌ಫೋರ್ಡ್ ಗ್ರಾಮೀಣ ಭಾಗದ ನಿಧಾನಗತಿಯ ಜೀವನಶೈಲಿಯನ್ನು ಹೊಂದಿದೆ.  ಮೇರಿ ಬಾರ್ಟನ್‌ನ ದುರಂತ ಮತ್ತು ರುತ್‌ನ ಪಾಥೋಸ್ ಹಾಸ್ಯ ಮತ್ತು ಸೌಮ್ಯವಾದ ವಿಡಂಬನೆ ಇದರಲ್ಲಿಲ್ಲ. ಹಳ್ಳಿಯನ್ನು ಆಳುವ ವಿಲಕ್ಷಣ ವಯಸ್ಸಾದ ಮಹಿಳೆಯರು  ಅವರ ಸದೃಢ ಆರ್ಥಿಕತೆ ಮತ್ತು ಸೌಹಾರ್ದಯುತ ಸಾಮಾಜಿಕ ಜೀವನದ ಕುರಿತು ಈ ಕಾದಂಬರಿ ಹೇಳುತ್ತದೆ. 
ಹೌಸ್‌ಹೋಲ್ಡ್ ವರ್ಡ್ಸ್‌ನಲ್ಲಿ ಕ್ರ್ಯಾನ್‌ಫೋರ್ಡ್‌ನ  ಯಶಸ್ಸಿನ ಕಾರಣದಿಂದ ಡಿಕನ್ಸ್ ಮತ್ತೊಂದು ಕೃತಿ ಬರೆಯಲು ಹೇಳಿದಾಗ ಸ್ವಲ್ಪ ಹಿಂಜರಿಕೆಯೊಂದಿಗೆ ಧಾರಾವಾಹಿಯನ್ನು ಬರೆಯಲು ಒಪ್ಪಿಕೊಂಡರು. 
ನಾರ್ತ್ ಆಂಡ್ ಸೌತ್ ಎಂಬ ಈ ಕಾದಂಬರಿಯಲ್ಲಿ ಮೇರಿ ಬಾರ್ಟನ್‌ನ "ಮಾಸ್ಟರ್ಸ್ ಮತ್ತು ಮೆನ್" ಥೀಮ್‌ಗೆ ಗ್ಯಾಸ್ಕೆಲ್ ಹಿಂತಿರುಗುತ್ತಾರೆ, ನಾರ್ತ್ ಆಂಡ್ ಸೌತ್ ಕಂತುಗಳನ್ನು ಬರೆಯುವಾಗ ಅವರು ಅನುಭವಿಸಿದ ಒತ್ತಡದಿಂದಾಗಿ ೧೮೫೫ರವರೆಗೆ ಮತ್ತೊಂದು ಪ್ರಮುಖ ಬರವಣಿಗೆಯ  ಉತ್ಸಾಹತೋರಲಿಲ್ಲ.  


 ಅಕಾಲಿಕ ಗರ್ಭಧಾರಣೆಯ ತೊಡಕುಗಳ ಪರಿಣಾಮದಿಂದ ಷಾರ್ಲೊಟ್ ಬ್ರಾಂಟೆಯ ತೀರಿಕೊಂಡಾಗ ಆಘಾತಕ್ಕೊಳಗಾಗಿದ್ದ  ಎಲಿಜಬೆತ್ ಗ್ಯಾಸ್ಕೆಲ್ 'ಲೈಫ್ ಆಫ್ ಷಾರ್ಲೆಟ್ ಬ್ರಾಂಟೆ' ಬರೆದರು. ಲ್ಯಾನ್ಸ್‌ಬರಿಯ ಪ್ರಕಾರ, ಇದು "ಹತ್ತೊಂಬತ್ತನೇ ಶತಮಾನದ ಅತ್ಯುತ್ತಮ ಜೀವನಚರಿತ್ರೆ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅತ್ಯುತ್ತಮವಾದ ಜೀವನಚರಿತ್ರೆ ಎಂದು ಗುರುತಿಸಲ್ಪಟ್ಟಿದೆ." ೧೮೫೭ರಲ್ಲಿ ಇದು ಪ್ರಕಟವಾಯಿತು.

   ನೆಪೋಲಿಯನ್‌ನ ಯುದ್ಧಗಳ ಸಮಯದಲ್ಲಿ ಯಾರ್ಕ್‌ಷೈರ್ ಮೀನುಗಾರಿಕಾ ಹಳ್ಳಿಯಲ್ಲಿ ಇಂಗ್ಲೆಂಡಿನ ಕರಾವಳಿಯ ಹಳ್ಳಿಗಳಿಂದ ಜನರನ್ನು ಅಪಹರಿಸಿ ಸೇವೆಗೆ ಒಳಪಡಿಸಿದ್ದನ್ನು 'ಸಿಲ್ವಿಯಾಸ್ ಲವರ್ಸ್' ಎಂಬ ಐತಿಹಾಸಿಕ ಕಾದಂಬರಿಯಲ್ಲಿ ಹೇಳಿದ್ದಾರೆ.  ನೌಕಾಪಡೆಯಲ್ಲಿ. ತನ್ನ ಪ್ರೀತಿಯನ್ನು ಪ್ರತಿಸ್ಪರ್ಧಿಯೊಂದಿಗೆ ಮದುವೆಯಾದುದನ್ನು ಕಂಡುಕೊಳ್ಳಲು ವರ್ಷಗಳ ನಂತರ ಕಣ್ಮರೆಯಾಗುವ ಹಾರ್ಪೂನರ್ ಈ ಕಥೆಯಲ್ಲಿ ಗ್ಯಾಸ್ಕೆಲ್ ಯಾರ್ಕ್‌ಷೈರ್ ಕರಾವಳಿಯ ದುರಂತ ಕಥಾವಸ್ತುವನ್ನು ಹೇಳುತ್ತಾರೆ.


೧೮೬೪ರಿಂದ ೧೮೬೬ರವರೆಗೆ ಕಾರ್ನ್‌ಹಿಲ್ ಮ್ಯಾಗಜೀನ್‌ನಲ್ಲಿ ಪ್ರಕಟವಾದ 'ಕಸಿನ್ ಫಿಲ್ಲಿಸ್' ಮತ್ತು 'ಅನ್‌ಫಿನಿಷ್ ವೈವ್ಸ್ ಆಂಡ್ ಡಾಟರ್ಸ್' ಗ್ಯಾಸ್ಕೆಲ್ ಅವರ ಶ್ರೇಷ್ಠ ಸಾಧನೆ ಎಂದು ಹೆಚ್ಚಿನ ವಿಮರ್ಶಕರು ಒಪ್ಪುತ್ತಾರೆ.  
ಈ ಎರಡೂ ಕೃತಿಗಳು ಅವರ ಬಾಲ್ಯದ ಹಳ್ಳಿಯ ನೆನಪುಗಳಿಗೆ ಹಿಂತಿರುಗುತ್ತವೆ. 'ಕಸಿನ್ ಫಿಲ್ಲಿಸ್' ಒಂದು ಸಿದ್ದಾಂತಬದ್ಧ ಕಾದಂಬರಿ, ಸಮಯ ಮತ್ತು ಸಂಪ್ರದಾಯದಲ್ಲಿ ಬೇರೂರಿರುವ ಕೃಷಿಯ ಜೀವನ ವಿಧಾನದ ನಡುವಿನ ಪರಿವರ್ತನೆಯ ಕ್ಷಣದಲ್ಲಿ ಯುವತಿ ಮತ್ತು ಕುಟುಂಬವನದ್ಧಿದು ವಿವರಿಸುತ್ತದೆ. ಹೊಸ ಜಗತ್ತಿನಲ್ಲಿ ತನ್ನ ಅದೃಷ್ಟವನ್ನು ಹುಡುಕುವ ಯುವ ರೈಲ್ರೋಡ್ ಇಂಜಿನಿಯರ್ ತನ್ನ ಹಳೆಯ-ಪ್ರಪಂಚದ ಹಳ್ಳಿಯಲ್ಲಿ ಬಿಟ್ಟುಹೋದ ಫಿಲ್ಲಿಸ್ ಕಥೆಯ ಮೂಲಕ ದುರಂತ ಮತ್ತು ನಾಸ್ಟಾಲ್ಜಿಯಾ ಎರಡರಲ್ಲೂ ಒಂದು ಸೂಕ್ಷ್ಮ ಮನಸ್ಥಿತಿಯನ್ನು ಸೃಷ್ಟಿಸಿದೆ.
     ವೈವ್ಸ್ ಅಂಡ್ ಡಾಟರ್ಸ್, ಗ್ಯಾಸ್ಕೆಲ್ ಅವರ ಜೀವನದ ಕಾದಂಬರಿ, ಮಾಲಿ ಗಿಬ್ಸನ್ ಅವರ ತಾಯಿಯಿಲ್ಲದ ಬಾಲ್ಯದ  ಕಥೆಯಲ್ಲಿ ಗ್ಯಾಸ್ಕೆಲ್ ಅವರ ಸಂಪೂರ್ಣ ಅನುಭವಗಳು ಮತ್ತು ಕುಟುಂಬ ಸಂಬಂಧಗಳ ಸ್ವರೂಪದ ಪ್ರತಿಬಿಂಬಗಳನ್ನು ಪ್ರತಿಬಿಂಬಿಸುತ್ತದೆ, ಅವಳ ಪ್ರೀತಿಯ ತಂದೆ ನಿಷ್ಪ್ರಯೋಜಕ ಮರುಮದುವೆ, ಮಲತಾಯಿಯೊಂದಿಗಿನಸರಿಯಿರದ ಸಂಬಂಧ, ವೈಯಕ್ತಿಕ ಮೌಲ್ಯ, ಪ್ರೀತಿ ಮತ್ತು ಸಹಿಷ್ಣುತೆಯ ಮೌಲ್ಯವನ್ನು ಹೇಳುತ್ತದೆ. ಕಥಾವಸ್ತುವು ಗ್ಯಾಸ್ಕೆಲ್ ಅವರ ಪ್ರೌಢ ಪ್ರತಿಭೆಯನ್ನು ಜಗತ್ತಿಗೆ ತೆರೆದಿಟ್ಟಿದೆ.
 ೧೮೬೫ರಲ್ಲಿ ನಿಧನರಾದ ಎಲಿಜಬೆತ್ ಗ್ಯಾಸ್ಕೆಲ್ ತನ್ನ ಹೆಣ್ಣುಮಕ್ಕಳು ಬೆಳೆದು ಸಂತೋಷವಾಗಿರುವುದನ್ನು ಕಂಡರು. ಯುರೋಪಿನಾದ್ಯಂತ ಪ್ರಯಾಣಿಸುತ್ತ ತಾನು ಪ್ರೀತಿಸಿದ ಮತ್ತು ಮೆಚ್ಚಿದ ಜನರೊಂದಿಗೆ ನಿರಂತರ ಸ್ನೇಹವನ್ನು ಹೊಂದಿದ್ದರು. ಮ್ಯಾಂಚೆಸ್ಟರ್‌ನ ದುಡಿಯುವ ಜನರಿಂದ ಅಪಾರವಾಗಿ ಪ್ರೀತಿಸಲ್ಪಟ್ಟರು. ೧೯ನೇ ಶತಮಾನವನ್ನು ಇಂಗ್ಲಿಷ್ ಕಾದಂಬರಿಯ ಮಹಾನ್ ಅವಧಿಯನ್ನಾಗಿ ಮಾಡುವಲ್ಲಿ ಚಾರ್ಲ್ ಡಿಕನ್ಸ್, ಜಾರ್ಜ್‌ಎಲಿಯಟ್ ಮತ್ತು ಷಾರ್ಲೆಟ್ ಬ್ರಾಂಟೆ ಅವರ ವಿಶಿಷ್ಟ ಗುಂಪಿಗೆ ಸೇರಿದ ಲೇಖಕಿ ಎಂದು ಗೌರವಿಸಲ್ಪಟ್ಟರು.
ಕುಟುಂಬ ಸಂಬಂಧಗಳು ಎಲಿಜಬೆತ್ ಗ್ಯಾಸ್ಕೆಲ್ ಅವರ ಬರವಣಿಗೆಯ ಕೇಂದ್ರವಾಗಿದೆ;  ಕುಟುಂಬ ಸಂಬಂಧಗಳ ಸಂಕೀರ್ಣ ಮತ್ತು ಸೂಕ್ಷ್ಮ ಸ್ವಭಾವದ ಬಗ್ಗೆ ಗ್ಯಾಸ್ಕೆಲ್‌ರವರ ಕಾಳಜಿ ಅಥವಾ ಕೊರತೆಯನ್ನು ಅವರ ಸ್ವಂತ ಬಾಲ್ಯದಲ್ಲಿ ಗುರುತಿಸಬಹುದು. ಷಾರ್ಲೆಟ್ ಬ್ರಾಂಟೆ ಅಥವಾ ಜಾರ್ಜ್ ಎಲಿಯಟ್ (ಮೇರಿ ಆನ್ನೆ ಇವಾನ್ಸ್ )ಯಂತೆ ಗ್ಯಾಸ್ಕೆಲ್ ಜೀವನೋಪಾಯಕ್ಕಾಗಿ ಬರವಣಿಗೆಯ ಮೇಲೆ ಅವಲಭಿತರಾಗಿರಲಿಲ್ಲ. ಅವರಲ್ಲಿ ವೃತ್ತಿಪರತೆಯ ಪ್ರಜ್ಞೆಯಿತ್ತು.  ತಾಯಿಯ ಪ್ರೀತಿಯ ಕೊರತೆಯಿಂದ ಬಾಲ್ಯದಲ್ಲಿ ಅನುಭವಿಸಿದ ತನ್ನ ಜೀವನವನ್ನು ನೆನಪಿಸಿಕೊಳ್ಳುತ್ತಿದ್ದ ಅವರು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಿದ ನಂತರವೇ ತನ್ನ ಬರವಣಿಗೆಯನ್ನು ಕೈಗೆತ್ತಿಕೊಂಡರು.  ಆಂಗಸ್ ಈಸನ್ ಪ್ರಕಾರ, ಅವರ ಕೊನೆಯ ಮಗು ಜೂಲಿಯಾ ಬ್ರಾಡ್‌ಫೋರ್ಡ್ ಗ್ಯಾಸ್ಕೆಲ್ ೧೮೪೬ರಲ್ಲಿ ಜನಿಸಿದ ನಂತರ, ಎಲಿಜಬೆತ್ ಸಂಜೆಯ ಸಮಯದಲ್ಲಿ, ಎಲ್ಲಾ ಮನೆಯ-ಕುಟುಂಬದ ಕರ್ತವ್ಯಗಳನ್ನು ಮಾಡಿ ಮುಗಿಸಿದ ನಂತರ ಅಥವಾ ರಜಾದಿನಗಳಲ್ಲಿ ಅಥವಾ ಕುಟುಂಬದ ಅನುಪಸ್ಥಿತಿಯಲ್ಲಿ ಹೀಗೆ ಅವಕಾಶ ಸಿಕ್ಕಾಗಲೆಲ್ಲಾ ಬರೆದರು.
ತನಗೆ ತಿಳಿಯದ ಕೈಗಾರಿಕೆಗಳ ಬಗ್ಗೆ ಬರೆದು ಪ್ರಸಿದ್ಧಿ ಹೊಂದಲು ಬಯಸುತ್ತಿರುವ ಲೇಖಕಿ ಎಂದು ಆಗಿನ ವಿಮರ್ಶಕರ ಕಟುಪದಗಳ ಜೊತೆಗೆ ಕಾರ್ಮಿಕರನ್ನು ಓಲೈಸುವ ಮತ್ತು ಹೆಣ್ಣುಮಕ್ಕಳನ್ನು ವೈಭವಿಕರಿಸುವ ಬರಹಗಾರ್ತಿ ಎಂಬ ಆಪಾದನೆಗೂ ಒಳಗಾಗಬೇಕಾಯಿತು.ಆದರೆ ನಂತರದ ವರ್ಷಗಳಲ್ಲಿ ಬಡವರ ಕುರಿತಾದ ನೈಜ ಕಾಳಜಿಯನ್ನು ಬಿಂಬಿಸುವ ಇವರ ಕಾದಂಬರಿಗಳು ವಿಮರ್ಶಕರಷ್ಟೇ ಅಲ್ಲದೆ ದೊಡ್ಡ ಪ್ರಮಾಣದ ಓದುಗರ ಮೆಚ್ಚುಗೆಯನ್ನು ಗಳಿಸಲು ಯಶಸ್ವಿಯಾಯಿತಲ್ಲದೆ ಹಲವಾರು ಕೃತಿಗಳು ಬಿಬಿಸಿಯಲ್ಲಿ ಪ್ರಸಾರಗೊಂಡು ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿದವು..
ಎಲಿಜಬೆತ್ ಗಾಸ್ಕೆಲ್ ಕೃತಿಗಳು-

Novels

Mary Barton (1848)
Cranford (1851–53)
Ruth (1853)
North and South (1854–55)
My Lady Ludlow (1858)
A Dark Night's Work (1863)
Sylvia's Lovers (1863)
Wives and Daughters: An Everyday Story (1864–66)

Novellas and collections

The Moorland Cottage (1850)
Mr. Harrison's Confessions (1851)
The Old Nurse's Story (1852)
Lizzie Leigh (1855)
Round the Sofa (1859)
Lois the Witch (1859; 1861)
Cousin Phillis (1864)
The Grey Woman and Other Tales (1865)

Short stories

"Libbie Marsh's Three Eras" (1847)
"The Sexton's Hero" (1847)
"Christmas Storms and Sunshine" (1848)
"Hand and Heart" (1849)
"Martha Preston" (1850)
"The Well of Pen-Morfa" (1850)
"The Heart of John Middleton" (1850)
"Disappearances" (1851)
"Bessy's Troubles at Home" (1852)
"The Old Nurse's Story" (1852)
"Cumberland Sheep-Shearers" (1853)
"Morton Hall" (1853)
"Traits and Stories of the Huguenots" (1853)
"My French Master" (1853)
"The Squire's Story" (1853)
"Company Manners" (1854)
"Half a Life-time Ago" (1855)
"The Poor Clare" (1856)
"The Doom of the Griffiths" (1858)
"An Incident at Niagara Falls" (1858)
"The Sin of a Father" (1858), later republished as "Right at Last"
"The Manchester Marriage" (1858)[35]
"The Haunted House" (1859)[36]
"The Ghost in the Garden Room" (1859), later "The Crooked Branch"
"The Half Brothers" (1859)
"Curious If True" (1860)
"The Grey Woman" (1861)
"Six weeks at Heppenheim" (1862)[37]
"The Cage at Cranford" (1863)[37]
"How the First Floor Went to Crowley Castle" (1863), republished as "Crowley Castle"[37]
"A Parson's Holiday" (1865)


Non-fiction

"Notes on Cheshire Customs" (1840)
An Accursed Race (1855)
The Life of Charlotte Brontë (1857)
"French Life" (1864)
"A Column of Gossip from Paris" (1865)


Poetry

Sketches Among the Poor (with William Gaskell; 1837)
Temperance Rhymes (1839)

Thursday, 7 July 2022

ಸಾವಿರ ಬಣ್ಣಗಳ ವಿಸ್ಮಯ

ಸಾವಿರ ಬಣ್ಣಗಳ ವಿಸ್ಮಯ 

ನಿನ್ನ ನಗು ಚಂದ ಎನ್ನುತ್ತಾನೆ 
ಬಿರಿದ ತುಟಿಗಳ ಗಮನಿಸುತ್ತ 
ನಿನ್ನ ಹಲ್ಲೂ ಕೂಡ ಎಂದು 
ಕೇಳಿಯೂ ಕೇಳಿಸದಂತೆ 

ನಕ್ಕಾಗಲೆಲ್ಲ ಆತ 
ತಪ್ಪದೆ ಹೇಳುವ ಮಾತಿದು 
ಸರಿಯಾಗಿ ಕೇಳದ ಅರ್ಧ ಗೊಣಗುಟ್ಟುವ 
ಇನ್ನರ್ಧ ಕ್ಷೀಣ ದನಿಯಲ್ಲಿ 
ಅಥವಾ ಮಾತು ತುಟಿ ಮೀರದಂತೆ 
ಒಳಗೊಳಗೆ ಬೊಬ್ಬಿರಿದು 
ಕೇಳಿಸಿದರೆ ಇಡಿ ಜಗತ್ತು 
ನೋಡಬೇಕಿತ್ತು ತಿರುತಿರುಗಿ ಎನ್ನುವ ಹಾಗೆ 

ಕೇಳಬೇಡಿ ನನ್ನನ್ನು 
ಮನದೊಳಗೆ ಆಡಿದ ಮಾತು 
ಕೇಳಿಸಿದ್ದಾದರೂ ಹೇಗೆ 
ಎಂಬ ಮೂರ್ಖ ಪ್ರಶ್ನೆ 

ಕಣ್ಣಾಲಿಗಳ ಅಗಲಿಸಿ 
ಕಂಡೂ ಕಾಣದಂತೆ ತುಟಿಯರಳಿಸಿ 
ಎದೆಯ ಮೇಲಿಟ್ಟು ಅಂಗೈ 
ಮನಸ ಸಮಾಧಾನಿಸುವಂತೆ 
ನವಿರಾಗಿ ತನ್ನನ್ನೆ ತಾನು ನೇವರಿಸಿಕೊಳ್ಳುತ್ತ 
ಮರುಕ್ಷಣವೆ ಕಣ್ಣೊಳಗೆ 
ಇಣುಕಿಣುಕಿ ಮರೆಯಾಗುವ ನಾಚಿಕೆ
ಕಂಡಾಗಲೆಲ್ಲ ಆತ ಹೇಳಿದ್ದೇನೆಂಬುದು 
ಹೇಳದೆಯೂ ಅರ್ಥವಾಗಿಬಿಡುತ್ತದೆ. 

ಆದರೂ ಸೋಗು ಹಾಕುತ್ತೇನೆ 
ಏನೂ ಅರಿವಾಗದಂತೆ 
ಓರೆಗಣ್ಣಲ್ಲಿ ನಸುನಾಚುವ ಮುಖವನ್ನೇ
ನೋಡುತ್ತೇನೆ ಕದ್ದೂ ಕದ್ದು 

ಕೆಲವೊಮ್ಮೆ ಎಲ್ಲ ಹಳವಂಡಗಳ ಮೀರಿ 
ತುಟಿಯೆರಡಾಗಿ ಧ್ವನಿ ಹೊರಬಂದು 
ನನ್ನವರೆಗೂ ತಲುಪಿದಾಗ 
ನಟಿಸುತ್ತೇನೆ ಕೋಪಿಸಿದಂತೆ  ಮೊದಮೊದಲು 
ಕಾಣಲಿಲ್ಲವೆ ತುಟಿಯ ಕೆಳಗಿನ ಮಚ್ಚೆ 
ಚಂದವಿಲ್ಲವೆ ಅದು? 
ರೇಗುತ್ತೇನೆ ಕಣ್ಣು ಅರಳಿಸಿ 
ಕಟ್ಟೆ ಮೀರಿ ಪ್ರವಾಹವಾಗುವ 
ನಗುವನ್ನು ತಡೆಯಲೆತ್ನಿಸುತ್ತ 

ಸುಮ್ಮನೆ ನೇವರಿಸಬೇಕೆಂದು 
ಅರಿವಾಗದೆ ಮೇಲೆದ್ದ ಕೈಯ್ಯನ್ನು 
ಬಲವಂತವಾಗಿ ಕಟ್ಟಿ ಹಾಕಿದ್ದು 
ಅರಿಯಲಾರದಷ್ಟು ದಡ್ಡಿಯೇನಲ್ಲ ಬಿಡು 
ಚಂದ ಎಂದರೇನು ಬಂತು
ಲೋಕದ ಗಮನವನ್ನೆಲ್ಲ
ತನ್ನತ್ತ ಸೆಳೆವ ಹಾಲು ಬಿಳುಪಲ್ಲದ  
ನಸುಗಂದು ಕೆನ್ನೆಯ ಮೇಲೆ 
ಸೆಳೆವ ಕಡುಗಪ್ಪು ಮಚ್ಚೆಯ
ಕಂಡಾಗಲೆಲ್ಲ ತುಟಿಯೂರಬೇಕೆನ್ನಿಸುವ 
ಬಯಕೆಯ ಹೇಳುವುದು ಹೇಗೆ 
ಹೇಳದೆ ಮನದಾಳದಲಿ ಹುಗಿದು 
ಗೋರಿಕಟ್ಟಿದ ಕ್ಷಣಗಳ 
ಮರೆಯುವುದಾದರೂ ಹೇಗೆ
ಎಂದೆಲ್ಲ ಮತ್ತೆ ನೀ ಕನವರಿಸುವುದು
ಅರ್ಥ ಮಾಡಿಕೊಳ್ಳಬಹುದು 
ನಿನ್ನ ಕಣ್ಣ ಕದಲಿಕೆಯಿಂದಲೆ  

ಈಗ ನಾನೇ ಸುಮ್ಮನಾಗುತ್ತೇನೆ 
ಅತಿ ಸರ್ವತ್ರ ವರ್ಜ್ಯತೆ ಎಂಬುದನ್ನು 
ಕಂಠಪಾಠ ಹಾಕಿಸಿ 
ಎಲ್ಲವನ್ನೂ ನಿಗ್ರಹಿಸಿಸುವುದನ್ನು 
ಹೇಳಿಕೊಡಲಾಗಿದೆ ಬ್ರೂಣದಿಂದಲೆ 

ಮಾತಿಗೀಗ ಯಾವ ಕೆಲಸವೂ ಇಲ್ಲ 
ಮೌನದೊಳಗೆ ಸಾವಿರ ಚಿಟ್ಟೆಗಳ ಚಿತ್ತಾರ 
ಅರಳಿ ಕಾಮನಬಿಲ್ಲಾಗುವ 
ವಿಸ್ಮಯಕೆ ಪದಗಳ ಹಂಗಿಲ್ಲ 
(ಇಲ್ಲಿನ ಫೋಟೋಗಳು ನಟಿ, ಗೆಳತಿ ಅಕ್ಷತಾ ಪಾಂಡವಪುರ ಅವರದ್ದು)

Wednesday, 6 July 2022

ಹಲವು ವಿಶಿಷ್ಟಗಳ ಸಮ್ಮಿಳಿತ ಫ್ರಾನ್ಸಿಸ್ ಬರ್ನಿ


ಹಲವು ವಿಶಿಷ್ಟಗಳ ಸಮ್ಮಿಳಿತ ಫ್ರಾನ್ಸಿಸ್ ಬರ್ನಿ

 ೧೩ ಜೂನ್ ೧೭೫೨ ರಂದು ನಾರ್ಫೋಕ್‌ನಗರದ ಕಿಂಗ್ಸ್‌ನ ಲಿನ್ ಎಂಬಲ್ಲಿ ಬ್ರಿಟೀಷ್ ಸಂಗೀತದ ಇತಿಹಾಸಕಾರನಾಗಿದ್ಸ ಚಾರ್ಲ್ಸ್ ಬರ್ನಿ (೧೭೨೬-೧೮೧೪) ಮತ್ತು ಅವನ ಮೊದಲ ಪತ್ನಿ  ಡುಬಾಯಿಸ್ ಎನ್ನುವ ಫ್ರೆಂಚ್ ನಿರಾಶ್ರಿತರ ಮಗಳಾಗಿದ್ದ ಎಸ್ತರ್ ಸ್ಲೀಪ್ (೧೭೨೫-೧೭೬೨) ಎನ್ನುವವರ ಆರು ಮಕ್ಕಳಲ್ಲಿ ಮೂರನೆಯ ಮಗಳಾಗಿ ಜನಿಸಿದ ಫ್ರಾನ್ಸಿಸ್ ಬರ್ನಿ ತನ್ನ ಬಾಲ್ಯದಿಂದಲೇ ಅಂದರೆ ವರ್ಣಮಾಲೆಯನ್ನು ಕಲಿಯುವಷ್ಟು ಚಿಕ್ಕ ವಯಸ್ಸಿನಲ್ಲೇ ಓಡ್ಸ್, ನಾಟಕಗಳು, ಹಾಡುಗಳು, ಪ್ರಹಸನಗಳು ಮತ್ತು ಕವಿತೆಗಳನ್ನು ರಚಿಸುವಲ್ಲಿ ಆಸಕ್ತಿ ಹೊಂದಿದ್ದರು. ಆದರೆ ಕೆಲವು ವಿದ್ವಾಂಸರು ಹೇಳುವಂತೆ ಆಕೆ ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದರು. ಆದರೂ ಅದನ್ನು ಮೀರುವ ಪ್ರಯತ್ನವಾಗಿ ಫ್ರಾನ್ಸಿಸ್ ಬರ್ನಿ ಬರವಣಿಗೆಯನ್ನು ಪ್ರಾರಂಭಿಸಿದರು ಎನ್ನಲಾಗುತ್ತದೆ. ೧೭೬೭ರಲ್ಲಿ ಅವರ ತಂದೆ ಕಿಂಗ್ಸ್ ಲಿನ್ ವೈನ್‌ನ ಶ್ರೀಮಂತ ವ್ಯಾಪಾರಿಯ ವಿಧವೆ ಪತ್ನಿ ಎಲಿಜಬೆತ್ ಅಲೆನ್ ಅವರನ್ನು ಮದುವೆಯಾಗಲು ಮನೆ ಬಿಟ್ಟು ಓಡಿಹೋಗಿದ್ದರು. ಬಾಲ್ಯವು ವಿಕ್ಷಿಪ್ತತೆಯಿಂದ ಕೂಡಿದ್ದರೂ ಎರಡೂ ಕುಟುಂಬಗಳು ಒಂದಾದ ನಂತರ ಪರಿಸ್ಥಿತಿ ತಿಳಿಗೊಂಡಿತು. ಮನೆಯಲ್ಲಿ ಫ್ಯಾನ್ಸಿ ಎಂದು ಕರೆಯಿಸಿಕೊಳ್ಳುತ್ತಿದ್ದ ಫ್ರಾನ್ಸಿಸ್ ಬರ್ನಿ ಹುಡುಗಿಯರು ಬರೆಯುವುದು ಸರಿಯಲ್ಲ ಎಂದು ವಾದಿಸುತ್ತಿದ್ದ ಅವಳ ಚಿಕ್ಕಮ್ಮನ ಮಾತು ನಂಬಿ ತನ್ನ ೧೫ನೇ ವಯಸ್ಸಿನಲ್ಲಿ ತಾನು ಆವರೆಗೆ ಬರೆದದ್ದೆಲ್ಲವನ್ನೂ ಸುಟ್ಟು ಹಾಕುವ ಅನಿವಾರ್‍ಯತೆಗೆ ಸಿಲುಕಬೇಕಾಯಿತು. ಆದರೆ ಫ್ರಾನ್ಸಿಸ್ ಬರ್ನಿಗೆ ತನ್ನ ಬರೆಯುವ ಉತ್ಸಾಹ ಹಾಗೂ ಒಳ ತುಡಿತವನ್ನು ತಡೆಯಲಾಗಲಿಲ್ಲ. ಪುನಃ ೧೬ ನೇ ವಯಸ್ಸಿನಲ್ಲಿ ಬರೆಯಲು ಪ್ರಾರಂಭಿಸಿದ ಅವರು ಒಂದು ಡೈರಿಯ ರೂಪದಲ್ಲಿ ತನ್ನ ವೈಯಕ್ತಿಕ ವಿವರ ಹಾಗೂ ಮೂರನೆ ಜಾರ್ಜ್‌ನ ಆರಂಭಿಕ ಆಳ್ವಿಕೆಯಿಂದ ವಿಕ್ಟೋರಿಯನ್ ಯುಗದ ಉದಯದವರೆಗಿನ ಸಾರ್ವಜನಿಕ ಘಟನೆಗಳನ್ನು ಬರೆಯಲಾರಂಭಿಸಿದರು.


  ಫ್ರಾನ್ಸಿಸ್ ಬರ್ನಿ ತಮ್ಮ ಡೈರಿಯ ಮೊದಮೊದಲ ಭಾಗಗಳಲ್ಲಿ ತನ್ನ ತಂದೆಯ ಮೂಲಕ ಪರಿಚಯಗೊಂಡ ಡೇವಿಡ್ ಗ್ಯಾರಿಕ್, ಸರ್ ಜೋಶುವಾ ರೆನಾಲ್ಡ್ಸ್, ಜೇಮ್ಸ್ ಬೋಸ್ವೆಲ್, ಮತ್ತು ಸ್ಯಾಮ್ಯುಯೆಲ್ ಜಾನ್ಸನ್ ಮುಂತಾದ ಗಣ್ಯರ ಜೊತೆ ಕಳೆದಂತಹ ಅದ್ಭುತ ಸಮಯಗಳ ಕುರಿತು ಬರೆದಿದ್ದಾರೆ. ಫ್ರಾನ್ಸಿಸ್ ಇಪ್ಪತ್ತಾರು ವರ್ಷದವರಿದ್ದಾಗ ಅವರ ಮೊದಲ ಕಾದಂಬರಿ ಎವೆಲಿನಾ (೧೭೭೮) ಅವರ ಹೆಸರನ್ನು ಗೌಪ್ಯವಾಗಿರಿಸಿ ಪ್ರಕಟವಾಯಿತು. ಅವರ ಸಮುದಾಯದ ಹುಡುಗಿಯರು ಕಾದಂಬರಿಯನ್ನು ಓದುವುದು ಹಾಗೂ ಬರೆಯುವುದು ನಿಷಿದ್ಧವಾಗಿತ್ತು. ಹೀಗಾಗಿ ಈ ಕಾದಂಬರಿಯನ್ನು ಪ್ರಾನ್ಸಿಸ್ ಬರ್ನಿಯವರ ಕೈ ಬರಹದಲ್ಲಿ ಬರೆಯದೆ ರಹಸ್ಯವಾಗಿ ಬೇರೆಯವರ ಕೈಯ್ಯಲ್ಲಿ ಬರೆಸಲಾಗಿತ್ತು. ಏಕೆಂದರೆ ಅವರ ತಂದೆಯ ಬರವಣಿಗೆಯನ್ನು ಇವರೇ ಬರೆಯುತ್ತಿದ್ದುದರಿಂದ ಅವರ ಅಕ್ಷರಗಳು ಪ್ರಕಾಶಕರಿಗೆ ಪರಿಚಿತವಾಗಿತ್ತು. ಕೇವಲ ತನ್ನ ಸಹೋದರಿಯರಿಗೆ ಹಾಗೂ ಚಿಕ್ಕಮ್ಮನಿಗೆ ಮಾತ್ರ ನಿಜ ವಿಷಯ ತಿಳಿಸಿದ್ದ ಫ್ರಾನ್ಸಿಸ್ ಬರ್ನಿ ನಂತರ ತನ್ನ ತಂದೆಗೆ ಅಂಜುತ್ತ ತಿಳಿಸಿದ್ದಳು. ಎವೆಲಿನಾ ಕಾದಂಬರಿಯಿಂದ ಫ್ರಾನ್ಸಿಸ್ ಬರ್ನಿ ಇಂಗ್ಲಿಷ್‌ನಲ್ಲಿ ಹೊಸದೊಂದು ದಾರಿಯನ್ನೇ ಸೃಷ್ಟಿಸಿದಂತಾಗಿತ್ತು. ಇದರಲ್ಲಿ ಸಮಾಜದಲ್ಲಿನ ಮಹಿಳೆಯರನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸಂದರ್ಭಗಳಿಗೆ ತಕ್ಕಂತೆ ಚಿತ್ರಿಸಲಾಗಿದೆ. ಈ ಕಾದಂಬರಿಯ ವಿಶಿಷ್ಟ ನಿರೂಪಣೆ ಹಾಗೂ ವಿಡಂಬನಾತ್ಮಕ ಹಾಸ್ಯದಿಂದಾಗಿ ತಕ್ಷಣ ಜನಪ್ರೀಯತೆ ಗಳಿಸಿತು.  ಅವರ ಕಾಮಿಡಿ ಆಫ್ ಮ್ಯಾನರ್ಸ್ ಪ್ರಕಾರವು ಜೇನ್ ಆಸ್ಟೆನ್, ಮಾರಿಯಾ ಎಡ್ಜ್ವರ್ತ್ ಮತ್ತು ೧೯ ನೇ ಶತಮಾನದ ಇತರ ಬರಹಗಾರರಿಗೆ ಹೊಸದೊಂದು ಮಾರ್ಗವನ್ನು ತೋರಿಸಿತು. ಎವೆಲಿನಾ ಅವರ ಸಾಮಾಜಿಕ ವಿಡಂಬನೆ, ವಿಷಯ ವಸ್ತುವಿನಲ್ಲಿರುವ ನೈಜತೆ ಮತ್ತು ಬುದ್ಧಿವಂತಿಕೆಯು ಅದನ್ನು ಅದ್ಭುತ ಜನಪ್ರಿಯತೆ ಪಡೆಯಲು ಸಹಾಯಕವಾಯಿತು. ಮತ್ತು ಈ ಜನಪ್ರೀಯತೆಯಿಂದಾಗಿ ಎಲ್ಲೆಡೆ ಬರಹಗಾರ ಎಂದು  ಭಾವಿಸಲಾದ ಚಾರ್ಲ್ಸ್ ಬರ್ನಿ ಅವರ ಮಗಳಾದ ಫ್ರಾನ್ಸಿಸ್ ಬರ್ನಿಯವರ ಗುರುತನ್ನು ಊಹಿಸಲು ಲಂಡನ್ ಸಮಾಜಕ್ಕೆ ಕಾರಣವಾಯಿತು. 

 ಫ್ರಾನ್ಸಿಸ್‌ರನ್ನು ಸಾಹಿತ್ಯಿಕ ಮತ್ತು ಲಂಡನ್ನಿನ ಉನ್ನತ ಸಮಾಜವು ಲೇಖಕಿ ಎಂದು ಒಪ್ಪಿಕೊಂಡಿತಲ್ಲದೆ ಕಾದಂಬರಿಗಳನ್ನು ಬರೆಯುವ ಮೊದಲ ಮಹಿಳೆ ಎಂದು ಗೌರವಿಸಿತು.  ೧೭೮೨ ರಲ್ಲಿ ಪ್ರಕಟವಾದ ಆಕೆಯ ಎರಡನೇ ಕಾದಂಬರಿ 'ಸಿಸಿಲಿಯಾ' ಅವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿತು.
ಫ್ರಾನ್ಸಿಸ್‌ರವರ ಮೊದಲ ಹಾಸ್ಯ ನಾಟಕ 'ದಿ ವಿಟ್ಲಿಂಗ್ಸ್' ನ್ನು ರಿಚರ್ಡ್ ಶೆರಿಡನ್ ರಂಗಕ್ಕೆ ಅಳವಡಿಸಿ ನಿರ್ಮಿಸಲು ಒಪ್ಪಿಕೊಂಡಿದ್ದರೂ ಸಹ, ಆಕೆಯ ತಂದೆ ಮತ್ತು ಕುಟುಂಬದ ಆಪ್ತಸ್ನೇಹಿತ ಸ್ಯಾಮ್ಯುಯೆಲ್ ಕ್ರಿಸ್ಪ್ ಅದನ್ನು ಒಪ್ಪಿಕೊಳ್ಳಲಿಲ್ಲ. ಕಾದಂಬರಿಯ ಬರವಣಿಗೆಯು ಮಹಿಳೆಯರಿಗೆ ಸ್ವಲ್ಪಮಟ್ಟಿಗಾದರೂ ಗೌರವಾನ್ವಿತವೆಂದು ಪರಿಗಣಿಸಲ್ಪಟ್ಟಿದ್ದರೂ ರಂಗಭೂಮಿಗಾಗಿ ಬರೆಯುವುದು ಡಾ ಚಾರ್ಲ್ಸ್ ಬರ್ನಿ ಅವರ ಮಗಳ ಗೌರವಕ್ಕೆ ಚ್ಯುತಿ ತರುವಂತಹುದ್ದು ಎಂಬುದು ಅವರ ಅನಿಸಿಕೆಯಾಗಿತ್ತು. ಹೀಗಾಗಿ ಫ್ರಾನ್ಸಿಸ್ ಬರ್ನಿ ತನ್ನ ಜೀವಿತಾವಧಿಯಲ್ಲಿ ತಮ್ಮ ಒಂದೇ ಒಂದು ದುರಂತ ನಾಟಕವಾದ ಎಡ್ವಿ ಮತ್ತು ಎಲ್ಗಿವಾ ಎಂಬ ನಾಟಕದ ಪ್ರದರ್ಶನವನ್ನು ಕಾಣಲು ಸಾಧ್ಯವಾಯಿತು. ಆದರೆ ಅವರ ಉಳಿದ ನಾಟಕಗಳು ಪ್ರದರ್ಶನಗೊಳ್ಳಲು ೨೦ನೇ ಶತಮಾನದ ಅಂತ್ಯದವರೆಗೆ ಕಾಯಬೇಕಾಗಿದ್ದು ಮಾತ್ರ ಬೇಸರದ ಸಂಗತಿ. ನಂತರ ಅವುಗಳ ಬಗ್ಗೆ ವಿಮರ್ಶೆಗಳು ಕೂಡ ಪ್ರಕಟವಾದವು.  ಅವರ ಎರಡು ನಾಟಕಗಳನ್ನು ಹೊರತುಪಡಿಸಿ ಉಳಿದೆಲ್ಲವೂ ೧೯೯೫ರಲ್ಲಿ ಮೊದಲ ಸಲ ಪ್ರಕಟವಾದವು.

೧೭೭೫ರಲ್ಲಿ ಥಾಮಸ್ ಬಾರ್ಲೋ ಎಂಬ ವ್ಯಕ್ತಿಯೊಂದಿಗಿನ ಮದುವೆಯ ಪ್ರಸ್ತಾಪವನ್ನು ತಳ್ಳಿ ಹಾಕಿದರೂ ಅದು ಅವರ ಜರ್ನಲ್ ಆಂಡ್ ಲೆಟರ್‍ಸ್‌ನಲ್ಲಿ ತಮಾಷೆಯ ಭಾಗವಾಗಿ ಕಾಣಿಸಿಕೊಂಡಿದೆ. ಸಾಮ್ಯುಯೆಲ್ ಕ್ರಿಸ್ಪ್, ಡಾ. ಜಾನ್ಸನ್ ಹಾಗೂ ಜಾರ್ಜ ಓವನ್ ಎಂಬ ಪಾದ್ರಿ ಮುಂತಾದವರೊಂದಿಗಿನ ಪ್ರಣಯವಿದ್ದರೂ ಅದು ವೈವಾಹಿಕ ಸಂಬಂಧವಾಗಿ ಮುಂದುವರೆಯಲಿಲ್ಲ.
   ೧೭೮೬ರಿಂದ ೧೭೯೧ರವರೆಗಿನ ಐದು ವರ್ಷಗಳ ಕಾಲ ಮೂರನೆ ಜಾರ್ಜ್‌ರ ರಾಣಿ ಶಾರ್ಲೆಟ್‌ರ ಕೀಪರ್ ಆಫ್ ದಿ ರೋಬ್ಸ್ ಕೆಲಸಕ್ಕೆ ಸೇರಿಕೊಂಡಿದ್ದ ಫ್ರಾನ್ಸಿಸ್ ಬರ್ನಿಯವರ ಕಾದಂಬರಿ ಬರವಣಿಗೆಯು ಬಹುತೇಕ ನಿಂತು ಹೋಗುವಂತಾಗಿತ್ತಲ್ಲದೆ ಅತಿಯಾದ ಕೆಲಸದ ಒತ್ತಡದಿಂದ ಅನಾರೋಗ್ಯಕ್ಕೂ ತುತ್ತಾದರು. ಈ ಸಮಯದಲ್ಲಿ ಅವಳ ಡೈರಿಯಲ್ಲಿ ಮೂರನೆ ಜಾರ್ಜ್ ಎದುರಿಸುತ್ತಿರುವ ಬಿಕ್ಕಟ್ಟು ಸೇರಿದಂತೆ ರಾಜಮನೆತನದ ಅಂತರಂಗ ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬರೆದಿರುವುದನ್ನು ಕಾಣಬಹುದು. ಸರಿಸುಮಾರು ಇದೇ ಸಮಯಕ್ಕೆ ಹಲವಾರು ದುರಂತ ನಾಟಕಗಳನ್ನು ಬರೆಯಲು ಪ್ರಾರಂಭಿಸಿದರು. ಆದರೆ ನ್ಯಾಯಾಲಯದ ಒತ್ತಡದ ಜೀವನದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ೧೭೯೧ ರಲ್ಲಿ ರಾಣಿ ಶಾರ್ಲೆಟ್ ವಿಶೇಷ ಅನುಮತಿ ನೀಡಿ ಫ್ರಾನ್ಸಿಸ್ ಬರ್ನಿಯವರನ್ನು ಆ ಸ್ಥಾನದಿಂದ ಬಿಡುಗಡೆ ಗೊಳಿಸಿದರು.

ನ್ಯಾಯಾಲಯದ ಜೀವನದಿಂದ ಬಿಡುಗಡೆಯಾದ ನಂತರ, ಫ್ರಾನ್ಸಿಸ್ ಬರ್ನಿಯವರ ಆರೋಗ್ಯ ಸುಧಾರಿಸಿತು. ೧೭೮೯ರಲ್ಲಿ ಫ್ರೆಂಚ್ ಕ್ರಾಂತಿ ಪ್ರಾರಂಭವಾಯಿತು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಸಹಾನುಭೂತಿ ಹೊಂದಿದ್ದ ಇಂಗ್ಲೆಂಡಿನ ಅನೇಕ ಸಾಹಿತಿಗಳಲ್ಲಿ ಇವರೂ ಒಬ್ಬರಾಗಿದ್ದರು. ನಾರ್ಬರಿ ಪಾರ್ಕ್‌ನಲ್ಲಿ ಕೆಲವು ಕುಟುಂಬ ಸ್ನೇಹಿತರನ್ನು ಮತ್ತು ಅವಳ ಸಹೋದರಿ ಸುಸಾನ್‌ಳನ್ನು ಭೇಟಿ ಮಾಡಲುಹೋದಾಗ ಅಕ್ಟೋಬರ್ ೧೭೯೨ ರಲ್ಲಿ ಫ್ರೆಂಚ್‌ನಿಂದ ಹೊರದೂಡಲ್ಪಟ್ಟ ಒಂದು ವಲಸಿಗರ ಗುಂಪು ಹತ್ತಿರದ ಜುನಿಪರ್ ಹಾಲ್‌ನಲ್ಲಿ ವಾಸವಾಗಿದ್ದರು. ಅಲ್ಲಿದ್ದ ಫ್ರಾನ್ಸ್‌ನ ದೇಶಭ್ರಷ್ಟ ಸೈನಿಕನಾಗಿದ್ದ ಅಲೆಕ್ಸಾಂಡ್ರೆ-ಜೀನ್-ಬ್ಯಾಪ್ಟಿಸ್ಟ್ ಪಿಯೋಚಾರ್ಡ್ ಡಿ'ಅರ್ಬ್ಲೇ (೧೭೫೪-೧೮೧೮)ಯವರನ್ನು ಮೊದಲ ಭೇಟಿಯಲ್ಲಿಯೇ ಅವರ ವ್ಯಕ್ತಿತ್ವ ನಡತೆಯಿಂದಾಗಿ ಮೆಚ್ಚಿಕೊಂಡರು. ಆದರೆ ಡಿ'ಅರ್ಬ್ಲೇ ಅವರ ಉದಾರವಾದ ರಾಜಕೀಯ ಅಭಿಪ್ರಾಯ ಹಾಗೂ ದೇಶಭ್ರಷ್ಟರಾಗಿದ್ದರ ಕುರಿತು ಚಿಕ್ಕದೊಂದು ಸಂಶಯ ಫ್ರಾನ್ಸಿಸ್ ಬರ್ನಿಯವರಲ್ಲಿತ್ತು.  ಆದರೆ ಜುಲೈ ೨೮, ೧೭೯೩ ರಂದು ಮಿಕ್ಲೆಹ್ಯಾಮ್‌ನಲ್ಲಿರುವ ಸೇಂಟ್ ಮೈಕೆಲ್ಸ್ ಚರ್ಚ್‌ನಲ್ಲಿ ಸ್ನೇಹಿತರು ಮತ್ತು ಕುಟುಂಬದ ಕೆಲವೇ ಸದಸ್ಯರ ಎದುರಲ್ಲಿ ವಿವಾಹವಾದರು.  ಎರಡು ದಿನಗಳ ನಂತರ ರೋಮನ್ ಕ್ಯಾಥೋಲಿಕ್‌ರಾಗಿದ್ದ ಡಿ'ಅರ್ಬ್ಲೇಗಾಗಿ ಲಂಡನ್‌ನಿನ ಲಿಂಕನ್ಸ್ ಇನ್ ಫೀಲ್ಡ್‌ನಲ್ಲಿರುವ ಸಾರ್ಡಿನಿಯನ್ ಚಾಪೆಲ್‌ನಲ್ಲಿ ಮತ್ತೊಮ್ಮೆ ವಿವಾಹವಾಗಬೇಕಾಯಿತು.ಇಬ್ಬರ ಹೊಂದಾಣಿಕೆಯ ಜೀವನ ಅತ್ಯಂತ ಸಂತೋಷದಾಯಕವಾಗಿತ್ತು. ಇಬ್ಬರೂ ತಮ್ಮ ಜೀವನದುದ್ದಕ್ಕೂ ಅಪಾರವಾದ ಪ್ರೀತಿಯಿಂದ ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡುತ್ತ ಬದುಕಿದರು. ಅವರಿಬ್ಬರಿಗೂ ಅಲೆಕ್ಸಾಂಡರ್ ಚಾರ್ಲ್ಸ್ ಲೂಯಿಸ್ ಪಿಚರ್ಡ್ ಡಿ ಅರ್ಬ್ಲೇ (ಡಿಸೆಂಬರ್ ೧೮, ೧೭೯೪) ಎಂಬ ಮಗನಿದ್ದನು.
               ಮದುವೆಯ ನಂತರ, ಫ್ರಾನ್ಸಿಸ್ ತನ್ನ ಬರವಣಿಗೆಯ ವೃತ್ತಿಜೀವನವನ್ನು ಪುನರಾರಂಭಿಸಿದರು. ಮಗನ ಹುಟ್ಟುವುದಕ್ಕೆ ಮುಂಚೆಯೇ ಕ್ಯಾಮಿಲ್ಲಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.  ಅವರ ಪತಿ ಅಲ್ಲಿಯೇ ಬರಹಗಳನ್ನು ಪ್ರತಿ ಮಾಡಿಬರೆದುಕೊಡುವ ಕಾರ್ಯನಿರ್ವಹಿಸುತ್ತಿದ್ದರು. ಪತ್ರಿಕೆಯ ಅಂತಿಮ ಪ್ರತಿಯನ್ನು ಸಿದ್ಧ ಮಾಡಿಕೊಡುವ ಜವಾಬ್ಧಾರಿಯುತ ಕೆಲಸ ಅವರ ಕೈಯ್ಯಲ್ಲಿತ್ತು. ೧೭೯೬ರಲ್ಲಿ ಕ್ಯಾಮಿಲ್ಲಾವನ್ನು ಸಬ್ಸ್ಕ್ರಿಪ್ಶನ್ ಮೂಲಕ ಪ್ರಕಟಿಸಲಾಯಿತು. ೩೬ಪುಟದ ಚಂದಾ ಪಟ್ಟಿಯು ೧೮ ನೇ ಶತಮಾನದ ಉತ್ತರಾರ್ಧದ ಇಂಗ್ಲಿಷ್ ಸಮಾಜದ ಯಾರು ಪತ್ರಿಕೆಗಳನ್ನು ಓದುತ್ತಾರೆಂಬ ಚಿತ್ರಣವನ್ನು ನೀಡುತ್ತಿತ್ತು.  ಚಂದಾದಾರರಲ್ಲಿ ಮಿಸ್ ಜೆ. ಆಸ್ಟೆನ್, ಸ್ಟೀವೆಂಟನ್ ಕೂಡ ಇದ್ದರು.  ಈ ಸಾಹಿತ್ಯಿಕ ಕೆಲಸದಿಂದ ಬಂದ ಲಾಭದಿಂದ ಡಿ'ಆರ್ಬ್ಲೇಸ್ ತಮ್ಮ ಸ್ವಂತ ಮನೆಯನ್ನು ನಿರ್ಮಿಸಿಕೊಂಡರು. ಅದನ್ನು ಅವರು "ಕ್ಯಾಮಿಲ್ಲಾ ಕಾಟೇಜ್" ಎಂದು ಕರೆದರು.

        ೧೮೦೧ರಲ್ಲಿ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಕಳೆದುಹೋದ ಆಸ್ತಿಯನ್ನು ಮರುಪಡೆಯುವ ಆಸೆಯಿಂದ ಹಾಗೂ ನೆಪೋಲಿಯನ್ ಬೋನಾಪಾರ್ಟೆಯ ಸೈನ್ಯದಲ್ಲಿ ಕೆಲಸಕ್ಕೆ ಸೇರಲೆಂದು ಡಿ'ಅರ್ಬ್ಲೆ ತನ್ನ ಕುಟುಂಬವನ್ನು ಫ್ರಾನ್ಸ್‌ಗೆ ಸ್ಥಳಾಂತರಿಸಿದರು, ಆದರೆ ಆ ಸಮಯದಲ್ಲಿ ನಡೆಯುತ್ತಿದ್ದ ಇಂಗ್ಲೆಂಡ್ ಹಾಗೂ ಫ್ರಾನ್ಸಸ ಯುದ್ಧದಿಂದಾಗಿ ಹತ್ತು ವರ್ಷಗಳ ಕಾಲ ದೇಶಭ್ರಷ್ಟರಾಗಿರಬೇಕಾಯಿತು. ಅವರ ಕುಟುಂಬವು ಫ್ರಾನ್ಸ್‌ನಲ್ಲಿದ್ದಾಗಲೇ ಅಮಿಯನ್ಸ್ ಶಾಂತಿಯು ಕೊನೆಗೊಂಡಿತು.  ೧೮೧೦ರಲ್ಲಿ ಫ್ರಾನ್ಸಿಸ್ ತನ್ನ ಸ್ತನದ ಕ್ಯಾನ್ಸರ್‌ನ ಶಸ್ತ್ರಚಿಕಿತ್ಸೆಯನ್ನು ಅರಿವಳಿಕೆ ಇಲ್ಲದೆಯೇ ಕ್ರಾನಿಕಲ್ ಮಾಡುವ ಮೂಲಕ ವೈದ್ಯಕೀಯ ಇತಿಹಾಸವನ್ನು ನಿರ್ಮಿಸಿದಳು. ಕುಟುಂಬವು ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ ೧೮೧೪ರಲ್ಲಿ  ತನ್ನ ಕೊನೆಯ ನಾಲ್ಕನೇ ಕಾದಂಬರಿ ದಿ ವಾಂಡರರ್ ಅನ್ನು ಬರೆದರು. ಅದರ ಮಾರನೆಯ ವರ್ಷ ನೆಪೋಲಿಯನ್ ವಿರುದ್ಧ ಫ್ರೆಂಚ್ ರಾಯಲಿಸ್ಟ್‌ಗಳೊಂದಿಗೆ ಹೋರಾಡುತ್ತಿದ್ದ ತನ್ನ ಗಂಡನ ಜೊತೆಯೇ ಉಳಿದುಕೊಂಡರು. ನೆಪೋಲಿಯನ್ ವಾಟರ್ಲೂ ಕದನದಲ್ಲಿ ಗೆದ್ದಿದ್ದಾನೆ ಎಂಬ ವದಂತಿಗಳು ಹರಡಿದಾಗಲೂ ಬ್ರಸೆಲ್‌ನಿಂದ ಪಲಾಯನ ಮಾಡಲು ನಿರಾಕರಿಸಿದರು. ವಾರಗಟ್ಟಲೆ ಯುದ್ಧಭೂಮಿಯಿಂದ ಹೊರಹೋಗಲು ಸಾಧ್ಯವಿಲ್ಲದ ಇಂಗ್ಲಿಷ್ ಗಾಯಾಳುಗಳಿಗೆ ನರ್ಸ್ ಆಗಿ ಸಹಾಯ ಮಾಡಲು ಉಳಿದುಕೊಂಡರು.

          ೧೮೧೪ರಲ್ಲಿ ಅವರ ತಂದೆ ಮರಣ ಹೊಂದಿದರು. ನಂತರ ೧೮೧೮ರಲ್ಲಿ ಪತಿಯ ಮರಣದ ನಂತರ, ಫ್ರಾನ್ಸಿಸ್ ಬರ್ನಿ ಡಿ'ಅರ್ಬ್ಲೇ ಯಾವುದೇ ಕಾದಂಬರಿಯನ್ನು ಬರೆಯಲಿಲ್ಲ. ೧೮೩೨ರಲ್ಲಿ ಪ್ರಕಟವಾದ ಮೆಮೊಯಿರ್ಸ್ ಆಫ್ ಡಾಕ್ಟರ್ ಬರ್ನಿ, ಮತ್ತು ೧೮೪೦ ರಲ್ಲಿ ಅವರ ಮರಣದ ನಂತರ ಡೈರಿ ಆಂಡ್ ಲೆಟರ್ಸ್ ಆಫ್ ಮೇಡಮ್ ಡಿ ಆರ್ಬ್ಲೇ ಪ್ರಕಟವಾಯಿತು. 


 ೬ ಜನವರಿ ೧೮೪೦ರಂದು, ಎಂಬತ್ತೇಳನೇ ವಯಸ್ಸಿನಲ್ಲಿ, ಫ್ರಾನ್ಸಿಸ್ ಬರ್ನಿ, ಮೇಡಮ್ ಡಿ ಆರ್ಬ್ಲೇ, ಲಂಡನ್‌ನಲ್ಲಿ ನಿಧನರಾದರು. ಅವರ ಪತಿ ಮತ್ತು ಮಗನೊಂದಿಗೆ ಸೇಂಟ್ ಸ್ವಿಥಿನ್ಸ್, ವಾಲ್ಕಾಟ್, ಬಾತ್‌ನಲ್ಲಿ ಸಮಾಧಿ ಮಾಡಲಾಗಿದೆ.


     ೧೭೭೮ರಲ್ಲಿ ಎವಿಲಿಯಾ ೧೭೮೨ರಲ್ಲಿ ಸಿಸಿಲಿಯಾ, ೧೭೯೬ರಲ್ಲಿ ಕ್ಯಾಮಿಲ್ಲಾ ಮತ್ತು ೧೮೧೪ರಲ್ಲಿ ದಿ ವಾಂಡರರ್ ಹೀಗೆ ನಾಲ್ಕು ಕಾದಂಬರಿಗಳನ್ನು ಪ್ರಕಟಿಸಿದ ಇವರ ಬರವಣಿಗೆಯ ಶೈಲಿ ವಿಶಿಷ್ಟವಾದದ್ದು. ಇಂಗ್ಲೆಂಡಿನ ರಾಯಲ್ ಪ್ಯಾಮಿಲಿಯನ್ನು ಹತ್ತಿರದಿಂದ ಕಂಡಿದ್ದರಿಂದ ಇವರ ಕಾದಂಬರಿಗಳಲ್ಲಿ ಶ್ರೀಮಂತ ಕುಟುಂಬದ ಒಳತೋಟಿಗಳು, ಅವರ ಆಡಂಬರಗಳು, ಢಾಂಬಿಕ ಜೀವನ, ಮೇಲ್ವರ್ಗದ ಸ್ತ್ರೀಯರ ವೈಯಕ್ತಿಕ ಸಂಕಟಗಳು ಹಾಗು ದಾರುಣ ಸ್ಥಿತಿಗಳು ಅನಾವರಣಗೊಂಡಿವೆ.  ೧೯ನೇ ಶತಮಾನದ ಅಂತ್ಯ ಹಾಗೂ ೨೦ನೇ ಶತಮಾನದ ಆರಂಭದಲ್ಲಿ ಅವರ ಡೈರಿ ಆಂಡ್ ಲೆಟರ್ಸ್ ಆಫ್ ಮೇಡಂ ಡಿ ಆರ್ಬ್ಲೇಯ ಹಲವಾರು ಆವೃತ್ತಿಗಳು ಪ್ರಕಟವಾದವು. ೧೭೯೧ ರಿಂದ ೧೮೪೦ ರವರೆಗಿರುವ ಡಾ. ಹೆಮ್ಲೋ ಅವರ ೧೨-ಸಂಪುಟಗಳ ಜರ್ನಲ್ಸ್ ಆಂಡ್ ಲೆಟರ್ಸ್ ಆಫ್ ಫ್ಯಾನಿ ಬರ್ನಿ (ಮೇಡಮ್ ಡಿ'ಅರ್ಬ್ಲೇ)ಯ ಇಪ್ಪತೈದು ಸಂಪುಟಗಳು ಪ್ರಕಟಗೊಂಡು ಸಮಕಾಲೀನ ಇತಿಹಾಸಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದೆ.  ಫ್ರಾನ್ಸಿಸ್ ಬರ್ನಿಯವರ ಉಳಿದ ಜರ್ನಲ್‌ಗಳು ಪ್ರಸ್ತುತ ಎರಡು ಸರಣಿಗಳಲ್ಲಿ ಪ್ರಕಟಿಸಲಾಗಿದೆ. ಮೊದಲ ಆವೃತ್ತಿ ಜರ್ನಲ್ಸ್ ಆಂಡ್ ಲೆಟರ್ಸ್ ಆಫ್ ಫ್ಯಾನಿ ಬರ್ನಿ(೧೭೬೮-೧೭೮೩) ಲಾರ್ಸ್ ಟ್ರಾಯ್ಡ್‌ನ ಸಂಪಾದಕತ್ವದಲ್ಲಿ ಮತ್ತು ಕೋರ್ಟ್ ಜರ್ನಲ್ಸ್ ಆಂಡ್ ಲೆಟರ್ಸ್ (೧೭೮೬-೧೭೯೧) ಪೀಟರ್ ಸಬೋರ್ನ್ ಸಂಪಾದಕತ್ವದಲ್ಲಿ ಪ್ರಕಟಗೊಂಡಿದೆ. ಇವರ ಜರ್ನಲ್‌ನಲ್ಲಿ ಭಾರತದಲ್ಲಿ ವಾರನ್ ಹೇಸ್ಟಿಂಗ್ಸ್‌ನ ದುರ್ನಡತೆಗಾಗಿ ನಡೆದ ವಿಚಾರಣೆ ಸೇರಿದಂತೆ ಅನೇಕ ಪ್ರಮುಖವಾದ ರಾಜಕೀಯ ಘಟನೆಗಳ ಅಧಿಕೃತ ಉಲ್ಲೇಖವಿದೆ. ಫ್ರಾನ್ಸಿಸ್ ಬರ್ನಿಯವರ ಕಾದಂಬರಿಗಳು ಮತ್ತು ನಾಟಕಗಳು ವಿಮರ್ಶಾತ್ಮಕ ಮೆಚ್ಚುಗೆಯುನ್ನು ಪಡೆದಿವೆ. ಇದು ೧೮ನೇ ಶತಮಾನದ ಮಹಿಳಾ ಬರಹಗಾರರಲ್ಲಿ ಹೊಸ ಆಸಕ್ತಿಯನ್ನು ಹುಟ್ಟುಹಾಕಿತು. ಯುದ್ಧ, ಬರವಣಿಗೆ ಹಾಗೂ ಇಂಗ್ಲೆಂಡ್‌ನ ರಾಜ ಮನೆತನದ ನಿಕಟ ಒಡನಾಟದೊಂದಿಗಿದ್ದರೂ ನೆಪೋಲಿಯನ್ ಜೊತೆ ಕೆಲಸ ಮಾಡಿದ ಪತಿ ಈ ಎಲ್ಲವನ್ನು ನಿಭಾಯಿಸುತ್ತ, ಮಹಿಳೆಯರ ಸ್ಥಿತಿಗತಿಗಳನ್ನು ಜಗತ್ತಿಗೆ ತೆರೆದಿಡುತ್ತ, ಅರವಳಿಕೆ ಇಲ್ಲದೆ ಶಸ್ತ್ರಚಿಕೆತ್ಸೆಯನ್ನೂ ಮಾಡಿಸಿಕೊಂಡ ವಿಶಿಷ್ಟ ಮಹಿಳೆಯಾಗಿ ನಮ್ಮೆದುರಿಗಿದ್ದಾರೆ.


lokadhwani - https://lokadhwani.com/ArticlePage/APpage.php?edn=Main&articleid=LOKWNI_MAI_20220708_4_6

ಶ್ರೀದೇವಿ ಕೆರೆಮನೆ